21 March 2013

ತುಳುಗಾದೆ-೪೯


"ಊರುಗೊರಿ ಪೆರ್ಗಡೆ, ಪುಂಡುಗೊಂಜಿ ದಿಡೆಂಬರ್"


{ ಊರಿನ ಪಟೇಲಿಕೆ ಹಾಗೂ ಶ್ಯಾನುಭೋಗಿಕೆಯ ದರ್ಬಾರು ಜಾರಿಯಲ್ಲಿದ್ದ ದಿನಗಳಲ್ಲಿ ಈ ಗಾದೆ ಚಾಲ್ತಿಗೆ ಬಂದಿರಬಹುದು. ಹಗಡೆಯೆಂದರೆ ಆತ ಊರಿನ ಅಧಿಕಾರಿ ಹಾಗೂ ಕಂದಾಯ ಪ್ರಮುಖನಾಗಿರುತ್ತಾನೆ. ಅವನ ಅಧಿಕಾರ ವ್ಯಾಪ್ತಿಯಲ್ಲಿ ಗ್ರಾಮ, ಮಾಗಣೆ, ಊರು ಇವು ಹಿಂದೆಲ್ಲ ತುಳುನಾಡಿನಲ್ಲಿ ಇರುತ್ತಿತ್ತು. ತುಳುನಾಡಷ್ಟೆ ಅಲ್ಲದೆ ನೆರೆಯ ಮಲೆನಾಡು ಹಾಗೂ ಕರುನಾಡ ಕರಾವಳಿ ಜಿಲ್ಲೆ ಉತ್ತರ ಕನ್ನಡದಲ್ಲೂ ಹೆಗ್ಗಡಿಕೆ ಪದ್ಧತಿ ಚಲಾವಣೆಯಲ್ಲಿತ್ತು. ಬ್ರಾಹ್ಮಣ, ಜೈನ, ಬಂಟ, ಗೌಡ, ಕ್ಷತ್ರಿಯ, ಕೊಂಕಣಿ, ನಾಮಧಾರಿ ಹಾಗೂ ಅಪರೂಪಕ್ಕಲ್ಲಲ್ಲಿ ಕ್ಯಾಥೋಲಿಕ್ ಕ್ರೈಸ್ತರಲ್ಲೂ ಶತಮಾನಗಳ ಹಿಂದೆ ಮತಪರಿವರ್ತಿತರಾಗಿದ್ದರೂ ತಮ್ಮ ಕುಲನಾಮವನ್ನ ಹಾಗೆಯೆ ಉಳಿಸಿಕೊಂಡ ಹೆಗ್ಡೆ, ಹೆಗ್ಗಡೆ, ಹೆಗಡೆ ಹೀಗೆ ಹತ್ತಿರ ಹತ್ತಿರ ಎಪ್ಪತೆರಡು ವಿಭಿನ್ನ ಬಗೆಯ ಹೆಗಡೆಗಳನ್ನ ತ್ರಿವಳಿ ಕರಾವಳಿ ಜಿಲ್ಲೆಗಳ ಸಹಿತ ನೆರೆಯನಾಲ್ಕು ಮಲೆನಾಡಿನ ಜಿಲ್ಲೆಗಳಲ್ಲೂ ಕಾಣಬಹುದು. ಹೆಗಡೆ ಆಯಾ ಊರಿನ ನ್ಯಾಯಾಧಿಕಾರಿಯಾಗಿಯೂ ಇರುತ್ತಿದ್ದ. ಊರಿನ ಹತ್ತು ಸಮಸ್ತರ ಜೊತೆ ಸಮಾಲೋಚಿಸಿ ತನ್ನ ಮನೆಯಂಗಳದಲ್ಲಿ ನೆರೆಯುತ್ತಿದ್ದ ಪಂಚಾಯ್ತಿಗಳಲ್ಲಿ ತನ್ನ ವ್ಯಾಪ್ತಿಯ ಜನರ ದೂರು ದುಮ್ಮಾನಗಳನ್ನ ಆಲಿಸಿ ನ್ಯಾಯ ನೀಡುವ ಕರ್ತವ್ಯ ಪಾಲಿಸುತ್ತಿದ್ದ.


ಪ್ರಗ್ ದ್ರಾವಿಡ ಮೂಲದ ತುಳು ಹಾಗೂ ಕನ್ನಡದಲ್ಲಿ ಪೆರ್ಗಡೆಯಾಗಿದ್ದ ಪದವಿಯ ತತ್ಸಮಾರ್ಥವೆ ಇಂದಿನ ಹೆಗ್ಗಡೆ. ಇಂದು ಪಾಳೆಪಟ್ಟುಗಳು ನಿರ್ನಾಮವಾಗಿ, ರಾಜಾಳ್ವಿಕೆ ಹೆಸರಿಲ್ಲದಂತೆ ಆಗಿದ್ದರೂ ಸಹ ಹೆಗಡೆರ ದರ್ಬಾರು ನಾಮಾವಷೇಶವಾಗಿದೆಯೆ ಹೊರತು ಅವರ ಜಮೀನ್ದಾರಿ ಗತ್ತು-ಗೈರತ್ತಲ್ಲ. ಸಾಮಾನ್ಯವಾಗಿ ಹೆಗಡೆಗಳಾದವರು ನಿರ್ಗತಿಕರಲ್ಲ. ಅವರಿಗೆ ಜಮೀನ್ದಾರಿಕೆಯ ಹಿನ್ನೆಲೆ ವಂಶಪಾರಂಪರ್ಯವಾಗಿ ಬಂದಿರುತ್ತದೆ. ಹೀಗಾಗಿ ಅದರ ಪಳೆಯುಳಿಕೆಯಾಗಿ ಇಂದಿಗೂ ಊರೊಟ್ಟಿನ ಕೆಲಸಗಳಲ್ಲಿ, ಕಂಬಳ-ಕೋಲ-ತಂಬಿಲ-ನೇಮ-ನಡಾವಳಿಗಳಲ್ಲಿ ಊರಿನ ಗ್ರಾಮಾಧಿಕಾರದ ಗುತ್ತುಗಳ ಹೆಗಡೆಯರಿಗೆ ಅಗ್ರಸ್ಥಾನ ಮೀಸಲಾಗಿರುತ್ತದೆ. ಉತ್ತರಕನ್ನಡ ಜಿಲ್ಲೆ ಹಾಗೂ ಮಲೆನಾಡಿನಲ್ಲಿ ಇಂದಿಗೆ ಸಾಂಸ್ಕೃತಿಕವಾಗಿ ಹೆಗಡೆಗಳ ಮಹತ್ವ ಗೌಣವಾಗುತ್ತಾ ಬಂದಿದ್ದರೂ ತುಳುನಾಡಿನಲ್ಲಿ ಮಾತ್ರ ಇಂದಿಗೂ ಅವರಿಗೆ ಪಟ್ಟದ ಹೊಣೆ ಹೊರಿಸುವ ಆಚರಣೆಯ ಪಳಯುಳಿಕೆಗಳಾದ "ಗಡಿ ಪತ್ತಾವುನು" ಅಂದರೆ ಗಡಿ ಹಿಡಿಸುವುದು ಅರ್ಥಾತ್ ಅಧಿಕಾರದ ಉಂಗುರ-ಕಪ್ಪ ತೊಡಿಸಿ, ಅದರ ದ್ಯೋತಕವಾದ ಓಂಟಿಯನ್ನ ಕಿವಿಗೆ ಹಾಕಿ ಪಟ್ಟದ ಕತ್ತಿಯನ್ನ ಕೈಗೆ ಕೊಟ್ಟು ಇಲ್ಲದ ಅಧಿಕಾರದ ನಾಮಕಾವಸ್ತೆ ವರ್ಗಾವಣೆ ಮಾಡುವ ಆಚರಣೆಗಳು ರೂಢಿಯಲ್ಲಿವೆ. ಹೀಗೆ ಗಡಿ ಹಿಡಿದ ಹೆಗಡೆ ಮುಂದೆ ನೇಮ-ನಿಷ್ಠನಾಗಿದ್ದು. ಬ್ರಾಹ್ಮಣನಲ್ಲದಿದ್ದ ಪಕ್ಷದಲ್ಲಿ ತನ್ನ ಬಾಯಿ ಚಪಲವನ್ನ ನಿಯಂತ್ರಿಸಿಕೊಂಡು ಮಾಂಸಾಹಾರವನ್ನ ಶಾಶ್ವತವಾಗಿ ವರ್ಜಿಸಿ ಗುತ್ತಿನ, ಮನೆಯ, ಊರಿನ ದೇವರ-ದೈವದ ಪ್ರಾತಿನಿಧಿತ್ವವನ್ನ ವಹಿಸಿಕೊಳ್ಲಬೇಕಾಗುತ್ತದೆ. ಊರಿನ ಸಾಂಸ್ಕೃತಿಕ ರಾಯಭಾರಿಯಾಗುವ ಆತ ತನ್ನ ಗಾಂಭೀರ್ಯವನ್ನ ಉಳಿಸಿಕೊಳ್ಲಲು ಸದಾ ಹೆಣಗಬೇಕಾಗುತ್ತದೆ. ಅವನನ್ನ ಆಗ ಜನ ದೇವರ ಪ್ರತಿನಿಧಿಯನ್ನಾಗಿ ಭಾವಿಸಿ ಅತಿ ಗೌರವದಿಂದ ನಡಿಸಿಕೊಳ್ಳುತ್ತಾರೆ ಹಾಗೂ ಆತನ ಮಾತಿಗೆ ಮೊದಲ ಮನ್ನಣೆ ನೀಡುತ್ತಾರೆ.


ಆದರೆ ಹಿಂದೆಲ್ಲ ಈ ಅಧಿಕಾರದ ಧಾರಾಳ ದುರುಪಯೋಗವೂ ಆಗಿದೆ. ಊರೆ ನನ್ನದು ಎಂದು ಕೊಂಡ ಕೆಲವು ಅಧಿಕಾರೋನ್ಮತ್ತ ಹೆಗಡೆಗಳು ಕಂಡಕಂಡವರ ಬೇಲಿ ಹಾರಿ ಅವರ ಹೆಂಗಸರನ್ನ ಕೆಡೆಸಿ ತಮ್ಮ ಮುಖಕ್ಕೆ ತಾವೆ ಮಸಿ ಬಳಿದುಕೊಂಡಿದ್ದಾರೆ. ಸಮಾಜದ ಅನೇಕ ಕೆಳವರ್ಗದ ಹಂಗಸರನ್ನ ಒತ್ತಯಪೂರ್ವಕವಾಗಿ ಉಪಪತ್ನಿಯರನ್ನಾಗಿ ಇಟ್ಟುಕೊಂಡು ಆ ಜಾತಿಯ ಜನರ ಒಡಲ ಸಂಕಟಕ್ಕೆ ಕಾರಣವಾಗಿದ್ದಾರೆ. ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಬಡವರ-ಗೇಣಿದಾರರ ಮೇಲೆ ಮನಸೋ ಇಚ್ಛೆ ದೌರ್ಜನ್ಯ ನಡೆಸಿ ಜಮೀನ್ದಾರಿಕೆಯ ಸೊಕ್ಕಿನಲ್ಲಿ ಮೆರೆದಾಡಿ ಮತ್ತೆ ಮೂಲೆ ಸೇರಿದ್ದಾರೆ. ಅಂತಹ ದುರುಳರನ್ನ ಎದುರಿಗೆ ಬೈದು ಆಕ್ರೋಶ ವ್ಯಕ್ತ ಪಡಿಸಲಾಗದ ಅನೇಕ ಸಂತ್ರಸ್ತ ಬಡವರು ತಮ್ಮ ನೋವನ್ನ ಅಸಹಾಯಕ ಸಿಟ್ಟನ್ನ ಈ ಗಾದೆಯ ಮೂಲಕ ಊರಿನ ದೇವರಿಗೆ ಹರಕೆಗೆ ಬಿಟ್ಟ ಕೋಣಕ್ಕೋ, ಹೋರಿಗೋ ಇಂತಹ ಪುಂಡ ಹೆಗಡೆಗಳನ್ನ ಹೋಲಿಸಿ ಗೇಲಿ ಮಾಡುತ್ತ ತಮ್ಮ ಸುಪ್ತ ಸಂಕಟವನ್ನ ಹೊರಹಾಕಿ ನಿರುಮ್ಮಳವಾಗಿದ್ದರೆ ಅನ್ನಿಸುತ್ತದೆ. ದೇವರಿಗೆ ಹರಕೆಗೆ ಬಿಟ್ಟ ಹೋರಿ ಕಂಡವರ ಬೇಲಿ ಹಾರಿ ಸಿಕ್ಕಸಿಕ್ಕಲೆಲ್ಲ ಭಿಢೆಯಿಲ್ಲದೆ ಮೇಯ್ದು ಕೊಬ್ಬಿರುತ್ತದೆ. ಸಾಮಾನ್ಯವಾಗಿ ದೇವರ ಸ್ವತ್ತದು ಎಂದು ಭಾವಿಸಿದ ಆಸ್ತಿಕರು ತಮಗೆ ಅದರ ಪುಂಡಾಟಿಕೆಯಿಂದ ಹಾನಿಯಾದರೂ, ಪದೆಪದೆ ಕಟ್ಟಿದ ಬೇಲಿ ಮುರಿದುಹೋಗಿ ತಾವು ತಮ್ಮ ಹಿತ್ತಲ ಕಷ್ಟಪಟ್ಟು ಬೆಳೆಸಿದ ಹಸಿರುವಾಣಿ ಹಾಳಾದರೂ ಅವಡುಗಚ್ಚಿ ಸಹಿಸಿಕೊಳ್ಳುತ್ತಾರೆಯೆ ಹೊರತು ಆ ಪುಂಡ ಹೋರಿಗೆ ಹೊಡೆದು ಬುದ್ಧಿ ಕಲಿಸುವ ಧೈರ್ಯ ಮಾಡುವುದಿಲ್ಲ. ಅದನ್ನೆ ಸೂಚ್ಯವಾಗಿ ಇಲ್ಲಿ ಹೆಗಡೆಯರಿಗೆ ಹೋಲಿಸಲಾಗಿದೆ. ಇದೇನೆ ಇದ್ದರೂ ಅಂತಹ ದುಷ್ಟರ ಸಂಖ್ಯೆ ತೀರ ವಿರಳ. ಸಾಮಾನ್ಯವಾಗಿ ಅಧಿಕಾರ ದಂಡ ಹಿಡಿದ ದಂಡಾಧಿಕಾರಿಯಾದ ಹೆಗಡೆಗಳು ನ್ಯಾಯನಿಷ್ಠುರರಾಗಿರುವುದೆ ಹೆಚ್ಚು. ಇವತ್ತಿನ ದಿನಮಾನದಲ್ಲಂತೂ ಯಾವುದೆ ಸರಕಾರಿ ಕೃಪಾಶಿರ್ವಾದವನ್ನು ಹೆಗಡೆಗಳು ಬಯಸರು, ಸರ್ವತಂತ್ರ ಸ್ವತಂತ್ರ ವ್ಯಕ್ತಿತ್ವದ ನಡುವಳಿಕೆಯಿರುವ ಇವರು ಸರಕಾರಿ ದರ್ಪಕ್ಕಂತೂ ಮೂರುಕಾಸಿನ ಬೆಲೆ ಕೊಡರು. ರಾಜಕೀಯ ಒತ್ತಡಕ್ಕಂತೂ ಎಂದೂ ಮಣಿಯರು. ದರ್ಪದ ನಡುವಳಿಕೆಗಳಿಗೆ ಯಾವತ್ತಿಗೂ ಇವರಿಂದ ಕವಡೆ ಕಾಸಿನ ಕಿಮ್ಮತ್ತು ದಕ್ಕದು. ಪ್ರಸಕ್ತ ಕಾಲಮಾನದ ಉದಾಹರಣೆಗಳನ್ನೆ ತೆಗೆದುಕೊಳ್ಳುವುದಾದರೆ ದೇಶದ ಮೊತ್ತ ಮೊದಲ ಕಾಂಗ್ರೆಸ್ಸೇತರ ಕೇಂದ್ರ ಸರಕಾರದ ಕಾಲದಲ್ಲಿ ಲೋಕಸಭೆಯ ಅಧ್ಯಕ್ಷರಾಗಿದ್ದ ಜಸ್ಟಿಸ್ ಕೆ ಸದಾನಂದ ಹೆಗ್ಡೆ, ಅದೆಂದೋ ಪದ್ಮವಿಭೂಷಣರಾಗ ಬಹುದಾಗಿದ್ದರೂ ಡೊಗ್ಗು ಸಲಾಮು ಹೊಡೆಯದ ಕಾರಣ ಇನ್ನೂ ಪದ್ಮಶ್ರಿಯಾಗಿಯೆ ಉಳಿದಿರುವ ಯಕ್ಷ ದಿಗ್ಗಜ ಚಿಟ್ಟಾಣಿ ರಾಮಚಂದ್ರ ಹೆಗಡೆ, ದೂರು ನೂರಿದ್ದರೂ ಧರ್ಮಸ್ಥಳವನ್ನ ಶಿಕ್ಷಣ ಹಾಗೂ ಧಾರ್ಮಿಕ ಸಾಮ್ರಾಜ್ಯವಾಗಿ ಕಟ್ಟಿ ಬೆಳೆಸುತ್ತಿರುವ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ, ಸಾಕಷ್ಟು ಅಪಪ್ರಚಾರಕ್ಕೆ ಒಳಗಾದ ಕಾಬೆಟ್ಟು ಏಳಾಡುಗುತ್ತಿನ ದಾನಿ ಶಿವಪ್ಪ ಹೆಗಡೆ, ನರಿಬುದ್ಧಿಯ ರಾಜಕಾರಣಿಯೆಂದೆ ಹೆಸರಾದ ಆದರೆ ಕರ್ನಾಟಕ ಕಂಡ ದಕ್ಷ ಮುಖ್ಯಮಂತ್ರಿಯಾಗಿದ್ದ ಚತುರ ರಾಜಕಾರಣಿ ರಾಮಕೃಷ್ಣ ಹೆಗಡೆ,  ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ತಂದು ಕೊಟ್ಟರೂ ಪಟ್ಟ-ಪದವಿಗೆ ಯಾವತ್ತೂ ಲಾಬಿ ಮಾಡದೆ ಎಲೆಮರೆಯಲ್ಲೆ ಕಾಲ ಹಾಕುವ ನಾಗೇಶ ಹೆಗಡೆ, ಲೋಕಾಯುಕ್ತರಾಗಿ ಭ್ರಷ್ಟಾಚಾರಿ ಅಧಿಕಾರಸ್ಥರನ್ನ ಮುಲಾಜಿಲ್ಲದೆ ಬಲಿ ಹಾಕಿದ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಏಕಪಕ್ಷೀಯತೆಗೆ ಮಣಿಯದ ನಿಶ್ಪಕ್ಷಪಾತ ಸಂಶೋಧನೆಯಲ್ಲಿ ನಿರತರಾದ ಶ್ರೀಮತಿ ಇಂದಿರಾ ಹೆಗ್ಡೆ, ವೈಚಾರಿಕ ಭಿನ್ನಭಿಪ್ರಾಯಕ್ಕೆ ಎಡೆ ಕೊಟ್ಟು ಸರಕಾರಿ ಅವಕೃಪೆಗೆ ಪಾತ್ರರಾದರೂ ಜನಪರ ನಡುವಳಿಕೆಯಲ್ಲಿ ಸದಾ ಎತ್ತಿದ ಕೈಯಾದ ಕಲ್ಕುಳಿ ವಿಠಲ ಹೆಗ್ಡೆ, ಮಣಿಪಾಲದ ವಿಶ್ವವಿದ್ಯಾಲಯವನ್ನ ಆರಂಭಿಕ ಉಪಕುಲಪತಿಯಾಗಿ ಕಟ್ಟಿ ಬೆಳೆಸಿದ ಡಾ ಬಿ ಎಂ ಹೆಗ್ಡೆ ಮುಂತಾದ ಮಹನೀಯರನ್ನ ಇಲ್ಲಿ ಪಟ್ಟಿ ಮಾಡಬಹುದು. ಆದರೆ ದುರುಳರು ಇವರಲ್ಲೂ ಇದ್ದರು ಹಾಗೂ ಅವರು ಇಲ್ಲಿಯೂ ನೊಂದವರ ಮೇಲೆ ಅನ್ಯಾಯಗಳನ್ನ ಎಸಗಿದರು ಅನ್ನುವುದಕ್ಕೆ ಈ ಗಾದೆ ಕನ್ನಡಿ ಹಿಡಿಯುತ್ತದೆ.)


( ಊರುಗೊರಿ ಪೆರ್ಗಡೆ, ಪುಂಡುಗೊಂಜಿ ದಿಡೆಂಬರ್ = ಊರಿಗೊಬ್ಬ ಹೆಗ್ಗಡೆ, ಪುಂಡಾಟಿಕೆಗೊಂದು  ದೇವರ ಹೋರಿ.)

No comments: