21 March 2013

ತುಳುಗಾದೆ-೫೦








"ಬಪ್ಪನಾಡುಗು ಪೋದು ಡೋಲು ಗುದ್ಯರೆ ಆವೋಲಿ ಈ"


{ ಸಾಮಾನ್ಯವಾಗಿ ವಿದ್ಯಾಭ್ಯಾಸದಲ್ಲಿ ಹಿಂದುಳಿದ ತುಳುನಾಡಿನ ಪುಟ್ಟ ಮಕ್ಕಳನ್ನ ಬೈಯುವಾಗ ಹಿರಿಯರು ಹೇರಳವಾಗಿ ಬಳಸುವ ಬೈಗುಳಗಳಲ್ಲಿ ಪ್ರಮುಖವಾದುದು ಇದು. ನಿರರ್ಥಕ, ನಿಶ್ಪ್ರಯೋಜಕ, ನಿರಂತರ ನಿಧಾನಿಯನ್ನ ಹೀಗೆ ಹೇಳಿ ಅವರಲ್ಲಿ ಅವಮಾನದ ಕಿಚ್ಚು ಹೊತ್ತಿಸುವಂತೆ ಮಾಡುವ ಹುನ್ನಾರ ಈ ಬೈಗುಳದ ಹಿನ್ನೆಲೆಯಲ್ಲಿ ಅವಿತಿದೆ. ಬಪ್ಪನಾಡು ಕೊಚ್ಚಿ-ಮುಂಬೈ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೧೭ರಲ್ಲಿ ಮಂಗಳೂರಿನಿಂದ ಉಡುಪಿಯತ್ತ ಸಾಗುವಾಗ ಸಿಗುತ್ತದೆ. ಮುಲ್ಕಿ ಪೇಟೆಯನ್ನ ದಾಟಿ ಕೆಲವೆ ಫರ್ಲಾಂಗುಗಳ ದೂರ ಕ್ರಮಿಸಿದಲ್ಲಿ ಎಡಕ್ಕೆ ಕಡಲಕೆರೆಯ ದಿಕ್ಕಿಗೆ ತುಳುನಾಡನ್ನ ಸಂದರ್ಶಿಸುವ ಆಸ್ತಿಕ ಭಕ್ತರ ಯಾತ್ರಾಸ್ಥಳಗಳಲ್ಲೊಂದಾದ ಬಪ್ಪನಾಡಿನ "ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ"ವಿದೆ. ಇದರ ಹಿನ್ನೆಲೆ ಕೊಂಚ ರೋಚಕ. ಈ ಗಾದೆ ನೇರವಾಗಿ ಈ ದೇವಸ್ಥಾನದಲ್ಲಿರುವ ಬೃಹದಾಕಾರದ ಡೋಲಿಗೆ ನೇರವಾಗಿ ಸಂಬಂಧಿಸಿದ್ದಾದರೂ ಸ್ವಲ್ಪ ಏಂಟು ಶತಮಾನಗಳಿಗೂ ಮೀರಿ ವಯಸ್ಸಾಗಿರುವ ಹತ್ತಿರ ಹತ್ತಿರ ಇಪ್ಪತ್ತು ತಲೆಮಾರುಗಳನ್ನ ಕಂಡಿರುವ ಈ ದೇವಸ್ಥಾನದ ಹಿನ್ನೆಲೆಯನ್ನ ಅರಿತು ಮುಂದಡಿಯಿಡೋಣ. ಇಲ್ಲಿ ನಿಮ್ನವರ್ಗದ ಮಂದಿಯನ್ನ ತುಚ್ಛೀಕರಿಸುವ ಎರಡು ಘಟನೆಗಳು ಸಂಭವಿಸುತ್ತವೆ.


ನಂದಿನಿ ಹಾಗೂ ಶಾಂಭವಿ ನದಿಗಳು ಜಂಟಿಯಾಗಿ ಕಡಲ ಕರೆಯಾಲಿಸಲು ಧಾವಿಸುವಲ್ಲಿ ನಡುಗುಡ್ಡೆಯಲ್ಲಿರುವ ಬಪ್ಪನಾಡು ಹಿಂದೊಮ್ಮೆ ತೆಂಗಿನ ತೋಟವಾಗಿತ್ತಂತೆ. ದಾರಿಗಾಸುರನೆಂಬ ರಾಕ್ಷಸನನ್ನ ವಧಿಸಿ ಕನ್ಯಾಕುಮಾರಿಯಿಂದ ಕಡಲ ತೀರವಾಗಿಯೆ ಉತ್ತರ ದಿಕ್ಕಿನತ್ತ ಹೊರಟಿದ ಸಪ್ತಮಾತೃಕೆಗಳು ಅಲ್ಲಿ ಮುಟ್ಟುವಾಗ ದಣಿವಾರಿಸಿಕೊಳ್ಳಲಿಕ್ಕೆ ತೋಟದವನಿಂದ ಎಳನೀರನ್ನ ಕೇಳಿದರಂತೆ, ಅವನು ಸಂತೋಷದಿಂದ ಕೆತ್ತಿ ಕೊಟ್ಟದ್ದ ಬೊಂಡದ ನೀರನ್ನ ಅವರಲ್ಲೊಬ್ಬಳಾದ ಭಗವತಿ ಹೀರುವಾಗ ಆತ ಶೂದ್ರನೆಂದು ಅರಿತು ಉಳಿದವರು ಅವ ಕೆತ್ತಿ ಕೊಡುವ ಎಳನೀರನ್ನ ಕುಡಿಯಲೊಪ್ಪದೆ ಮೈಲಿಗೆಯಾದ ಭಗವತಿಯನ್ನ ಅಲ್ಲಿಯೆ ಬಿಟ್ಟು ಮುಂದೆ ಸಾಗಿ ಹೋದರಂತೆ! ಭಗವತಿ ಅಲ್ಲಿಯೆ ಲಿಂಗ ಮತ್ತು ಯೋನಿಯ ರೂಪದಲ್ಲಿ ಸ್ಥಿತಳಾದಳಂತೆ. ಹೀಗಿದ್ದರೂ ಈಗಿರುವ ದೇವಸ್ಥಾನ ಕಟ್ಟಿಸಲ್ಪಟ್ಟದ್ದು ಎಂಟು ಶತಮಾನಗಳ ಹಿಂದೆ ಕೇರಳ ಮೂಲದ ಮುಸಲ್ಮಾನ ಮಾಪಿಳ್ಳೆ ವ್ಯಾಪಾರಿ ಬಪ್ಪ ಬ್ಯಾರಿಯಿಂದ. ಆತನೊಬ್ಬ ವ್ಯಾಪಾರಿಯಾಗಿದ್ದ. ತನ್ನ ವ್ಯಾಪಾರಕ್ಕಾಗಿ ತುಳುನಾಡಿಗೆ ಬಂದಿದ್ದ ಬಪ್ಪಬ್ಯಾರಿ ಅಲ್ಲಿ ತಾನು ಕೊಂಡ ಸಾಮಾನುಗಳನ್ನೆಲ್ಲ ಹಾಯಿ ನೌಕೆಯಲ್ಲಿ ಏರಿಸಿ ಶಾಂಭವಿ ನದಿಯ ಮೂಲಕ ಕಡಲಿಗೆ ಹೊಕ್ಕುವ ಸನ್ನಾಹದಲ್ಲಿದ್ದಾಗ ಆಶ್ಚರ್ಯಕರವಾಗಿ ಏಕಾಏಕಿ ನದಿಯ ನೀರು ರಕ್ತವರ್ಣಕ್ಕೆ ತಿರುಗಿ ಕೆಂಪಾಗಿ ಹರಿಯ ತೊಡಗಿತಂತೆ. ಅದನ್ನ ಕಂಡು ಹೆದರಿದ ಧರ್ಮಿಷ್ಠನಾದ ಬ್ಯಾರಿ ನಮಾಜು ಮಾಡಿ ದೇವರಿಗೆ ಮೊರೆಯಿಟ್ಟು ಅಲ್ಲಿಯೆ ನೌಕೆಯ ಲಂಗರು ಹಾಕಿ ಮರದ ನೆರಳಿನಲ್ಲಿ ನಿದ್ದೆ ಹೋದನಂತೆ. ಅವನ ಕನಸಿನಲ್ಲಿ ಬಂದದ್ದು ಮಾತ್ರ ನಮ್ಮ ಭಗವತಿ! "ನನ್ನ ನಂಬು, ಲೋಕಕ್ಕಿರುವುದು ಒಂದೆ ದೈವ, ಹೆಸರು ಹಲವಷ್ಟೆ! ನನಗೊಂದು ದೇವಸ್ಥಾನ ಕಟ್ಟಿಸಿ ನೆಲೆ ಮಾಡಿಡು. ನಿನ್ನ ರಕ್ಷಣೆಯ ಭಾರ ನನ್ನದು" ಎಂದು ಅಭಯ ನೀಡಿದಳಂತೆ. ಅದಕ್ಕೆ ಬದ್ಧನಾದ ಬ್ಯಾರಿ ಉತ್ತರಕ್ಕೆ ಹೋಗಿ ವ್ಯಾಪಾರ ಮುಗಿಸಿ ಬಂದವ ಮುಲ್ಕಿಯ ಆಳರಸ ದುಗ್ಗಣ್ಣ ಸಾಮಂತನಲ್ಲಿ ಸ್ವಪ್ನದ ವಿಚಾರ ಅರುಹಿ ಸಹಾಯ ಯಾಚಿಸಿದ. ಸಾಮಂತ ದಯಪಾಲಿಸಿದ ಜಾಗದಲ್ಲಿ ಅವನೆ ಕೊಟ್ಟ ಆಳುಗಳಿಂದ ತನ್ನ ಸ್ವಂತ ಖರ್ಚಿನಲ್ಲಿ ದೇವಿಗೊಂದು ಅಂದದ ದೇವಸ್ಥಾನವನ್ನ ಕಟ್ಟಿಸಿದ. ಅಂದಿನಿಂದ ದೇವಿಯ ಆರಾಧಕನಾದ ಆತ ಸನಿಹದಲ್ಲಿಯೆ ಮನೆ ಕಟ್ಟಿಕೊಂಡು ಶಾಶ್ವತವಾಗಿ ಅಲ್ಲಿಯೆ ನೆಲೆ ನಿಂತ. ೈಂದಿಗೂ ಆತನ ಮೂಲ ಮನೆ ಅಲ್ಲಿದ್ದು ಅವನ ವಂಶಜರು ಅಲ್ಲಿ ವಾಸವಾಗಿದ್ದಾರೆ. ದೇವಿಯ ಉತ್ಸವ ಜಾತ್ರೆಗಳ ಸಂದರ್ಭಗಳಲ್ಲಿ ಮೆರವಣಿಗೆ ಆ ಮನೆಯ ಮುಂದೆ ನಿಂತು ಬಪ್ಪ ಬ್ಯಾರಿಯ ವಂಶಜರಿಗೆ ಮೊದಲ ಆದ್ಯತೆಯ ಪ್ರಸಾದ ಬಟವಾಡೆಯಾದ ನಂತರವೆ ಉಳಿದೆಲ್ಲರಿಗೂ ಅದನ್ನ ಹಂಚಲಾಗುತ್ತದೆ! ಅವರೂ ಸಹ ಹೂವು, ಹಣ್ಣು-ಕಾಯಿಯನ್ನ ದೇವಿಗೆ ಅರ್ಪಿಸಿ ತಮ್ಮ ಶ್ರದ್ಧಾ ಭಕ್ತಿಯನ್ನ ಪ್ರಕಟಿಸುತ್ತಾರೆ.


ಈಗ ಗಾದೆಗೆ ಮರಳೋಣ. ಅಲ್ಲಿನ ಪ್ರಮುಖ ಆಕರ್ಷಣೆ ಅಲ್ಲಿರುವ ದೊಡ್ಡ ಗಾತ್ರದ ಡೋಲು ಮಾತ್ರವಲ್ಲದೆ ವರ್ಷಾವಧಿ ಜಾತ್ರೆಯಲ್ಲಿ ಅಲ್ಲಿ ಜಿಲ್ಲೆಯಾದ್ಯಂತದಿಂದ ಡೋಲು ಪರಿಣತ ಕೊರಗರ ಹಿಂಡು ನೆರೆದು ದೇವಿಗೆ ತಮ್ಮ ಡೋಲು ಸೇವೆ ಸಲ್ಲಿಸುತ್ತಿದ್ದುದು ಪದ್ಧತಿ. ತುಳುನಾಡಿನ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಅತ್ಯಂತ ಕೀಳಾಗಿ ಪರಿಗಣಿಸಲ್ಪಡುವ ಕೊರಗರು ಇತ್ತೀಚೆಗೆ ಹಾಗೆ ಡೋಲು ಬಡಿಯಲು ಅಲ್ಲಿಗೆ ಧಾವಿಸುವುದು ತಮ್ಮ ಗೌರವಕ್ಕೆ ಕುಂದೆಂದು ಭಾವಿಸುವುದರಿಂದಲೂ, ಈಗೀಗ ಆಧುನಿಕ ಶಿಕ್ಷಣ ಪದ್ಧತಿ ಅವರಲ್ಲಿ ಮೂಡಿಸಿರುವ ಸಾಮಾಅಜಿಕ ಜಾಗ್ರತಿಯಿಂದಲು ಅವರು ಅಲ್ಲಿಗೆ ಬರುವುದು ಇತ್ತೀಚೆಗೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಅಲ್ಲಿನ ದೇವಸ್ಥಾನದ ಮುಂದಿರುವ ಸರಿ ಸುಮಾರು ಎರಡ್ಮೂರು ಟನ್ ತೂಕದ ಕೊಡಿಮರದ ದಂಬೆಗಲ್ಲು ಅರ್ಥಾತ್ ದೇವಸ್ಥಾನದ ಕಲ್ಲಿನ ದ್ವಜಸ್ಥಂಭವನ್ನ ತುಳುನಾಡಿನ ಎಳೆಯರ ಪಾಲಿನ "ಹೀಮ್ಯಾನ್" ಹೊಟ್ಟೆಬಾಕ "ಅಗೋಳಿ ಮಂಜಣ" ಒಬ್ಬನೆ ನೆರೆಯ ಗ್ರಾಮದಿಂದ ಹೊತ್ತು ತಂದು ಹಾಕಿದ್ದು ಎನ್ನುವ ಪ್ರತೀತಿಯಿದೆ. ಅಲ್ಲಿರುವ ಬೃಹತ್ ಡೋಲನ್ನ ಕಟ್ಟುಮಸ್ತಾದ ಒಬ್ಬರಿಂದ ಬಾರಿಸುವುದು ಅಸಾಧ್ಯ! ಆದರೂ ಏನಕ್ಕೂ ಪ್ರಯೋಜನಕ್ಕೆ ಬಾರದ ನಿರುಪಯೋಗಿಗಳಷ್ಟೆ ಆ ಕೆಲಸಕ್ಕೆ ಯೋಗ್ಯರು ಎನ್ನುವ ನಂಬಿಕೆ ತುಳುವರಲ್ಲಿ ಬೆಳೆದು ಬಂದಿದೆ. ಯಾವುದಕ್ಕೂ ಕೆಲಸಕ್ಕೆ ಬಾರದವನಿಗೆ ಕಟ್ಟಕಡೆಗೆ ಉಳಿಯುವ ಘನಕಾರ್ಯ ಬಪ್ಪನಾಡಿಗೆ ಹೋಗಿ ಡೋಲು ಗುದ್ದುವುದು ಎನ್ನುವುದು ಇದರ ಭಾವ. ಬಹುಷಃ ಆಳದಲ್ಲಿ ಅದನ್ನ ಬಾರಿಸುವವರು ಕೊರಗರಾಗಿರುವುದರಿಂದಲೂ, ಅವರ ದರ್ಜೆ ಅಲ್ಲಿನ ಮಟ್ಟಿಗೆ ನಿಶ್ಕೃಷ್ಟವಾಗಿರುವುದರಿಂದಲೂ ಜಾತಿಯತೆಯನ್ನ ಹೋಲಿಸಿ ಗೇಲಿ ಮಾಡುವ ಗುಣ ಆಳದಲ್ಲಿ ಈ ಗಾದೆ ಹುಟ್ಟಿನ ಹಿಂದಿದೆ ಅನ್ನಿಸುತ್ತದೆ. ಅದೇನೆ ಇದ್ದರೂ ಬಪ್ಪನಾಡಿನ ದೊಡ್ಡ ಡೋಲು ತುಳುವರ ಹೆಮ್ಮೆಯ ಆಸ್ತಿ.}



( ಬಪ್ಪನಾಡುಗು ಪೋದು ಡೋಲು ಗುದ್ಯರೆ ಆವೋಲಿ ಈ = ಬಪ್ಪನಾಡಿಗೆ ಹೋಗಿ ಡೋಲು ಗುದ್ದಲು ಆಗಬಹುದು ನೀನು!.)

No comments: