09 March 2013

ತುಳುಗಾದೆ-೩೯







"ಎನ್ನ ಕೋಕಯಿಡ್ ಪತ್ತುನಾತೆ ಕೊಡಪ್ವೊಡು"


{ ನಮ್ಮ ಮಿತಿಯ ಅರಿವನ್ನ ಸಾಧ್ಯವಾದಷ್ಟು ಶೀಘ್ರ ನಾವು ಮಾಡಿಕೊಂಡಷ್ಟು ನಮ್ಮ ಶ್ರೇಯೋಭಿವೃದ್ಧಿಗೆ ಅನುಕೂಲ. ಇದು ಪ್ರಾಯದ ಮಿತಿ, ಆರ್ಥಿಕ ಮಿತಿ, ಸಾಮಾಜಿಕ ಮಿತಿ ಹಾಗೂ ಬೌದ್ಧಿಕ ಮಿತಿ ಎಲ್ಲದಕ್ಕೂ ಸರಿ ಸಮವಾಗಿ ಅನ್ವಯಿಸುತ್ತದೆ. ಇನ್ನೊಬ್ಬರು ನಮ್ಮನ್ನ ತುಚ್ಛೀಕರಿಸಿ ನೋಡುವ ಮೊದಲೆ ನಾವು ಅದಕ್ಕೆ ಅವಕಾಶ ಕೊಡದಂತೆ ಗಂಭೀರವಾಗಿ ನಮ್ಮ ಶಕ್ತ್ಯಾನುಸಾರ  ಮಾತ್ರ ಸ್ವಂತಿಕೆಯನ್ನ ಪ್ರದರ್ಶಿಸ ಹೊರಟರೆ ಖಂಡಿತ ಮೆಚ್ಚುಗೆಯನ್ನ ಸಂಪಾದಿಸಬಹುದು. ನಮ್ಮ ಮಿತಿಯನ್ನ ಮೀರಿ ಮಾಡುವ ಅಧಿಕ ಪ್ರಸಂಗಗಳು ಇನ್ನಿತರ ಮುಂದೆ ನಮ್ಮ ವ್ಯಕ್ತಿತ್ವವನ್ನ ಹಾಸ್ಯಾಸ್ಪದವಾಗಿಸುವುದು ನಿಸ್ಸಂಶಯ.


ತನ್ನ ಕೊಕ್ಕಿನಲ್ಲಿ ಹಿಡಿಸುವಷ್ಟಕ್ಕೇನೆ ತೃಪ್ತಿ ಪಡದ ಚಿಕ್ಕ ಹಕ್ಕಿಯೋ, ಹಕ್ಕಿ ಮರಿಯೋ ಸಿಕ್ಕಿದ್ದೆ ಸದಾವಕಾಶವೆನ್ನುವ ದುರಾಸೆಗೆ ಬಿದ್ದು ತನ್ನ ತೂಕ, ಹೊತ್ತು ಹಾರುವ ಸಾಮರ್ಥ್ಯವನ್ನ ನಿರ್ಲಕ್ಷಿಸಿ ಹೆಚ್ಚಿನ ಹೊರೆಯ ಕೊಳ್ಳೆಯನ್ನ ಕೊಕ್ಕಿನಲ್ಲಿ ಮನಸೋ ಇಚ್ಛೆ ಕುಕ್ಕಿ ಕಚ್ಚಿಕೊಂಡು ಹಾರಲು ತೊಡಗಿತಂತೆ. ಅದರ ದುರಾದೃಷ್ಟಕ್ಕೆ ಹಾರುವುದು ಅತಿಕಷ್ಟವಾಗಿ ಜೋಲಿ ಹೊಡೆದು ಆಯತಪ್ಪಿ ಎತ್ತರದಿಂದ ನೆಲಕ್ಕೆ ಅಪ್ಪಳಿಸುವಂತಾಯಿತು. ಬೀಳುವಾಗ ಕೊಂಚ ಯಾಮಾರಿದ್ದರೂ ತನ್ನಿಂದ ಗಾತ್ರದಲ್ಲಿ ದೊಡ್ಡವಾಗಿದ್ದ ಹಿಂಸ್ರ ಪಕ್ಷಿಗಳಿಗೆ ಸುಲಭದ ತುತ್ತಾಗಿ ಬೇಟೆಗೆ ಬಲಿಯಾಗುವ ಸಂಭವ ಇದ್ದೇ ಇತ್ತು. ಕೊಂಚ ವಿವೇಕವನ್ನ ಉಪಯೋಗಿಸಿದ್ದರೆ ಅದು ತನಗಾಗುವಷ್ಟು ಉಣಿಸನ್ನ ಯಶಸ್ವಿಯಾಗಿ ಹೊತ್ತು ಗೂಡನ್ನ ಮುಟ್ಟಬಹುದಿತ್ತು.

ಎಳೆಯ ಮಕ್ಕಳು ತಮ್ಮ ಪ್ರಾಯದ ಮಿತಿ ಮೀರಿ ದೊಡ್ಡ ದೊಡ್ಡ ಮಾತುಗಳನ್ನ ಆಡುವಾಗ, ಗಂಜಿಗೆ ಗತಿಯಿಲ್ಲದವನೊಬ್ಬ ಕೋಟೆ ಕಟ್ಟುವ ಗುತ್ತಿಗೆ ಹಿಡಿವ ಹಾರಾಟ ನಡೆಸುವಾಗ, ತನ್ನ ಗಡಿಯನ್ನ ಮೀರಿ ಅಬ್ಬರಿಸುವ ಪಾಳೆಗಾರರ ಪೊಗರನ್ನ ಕಾಣುವ ಅವಕಾಶ ಸಿಕ್ಕಾಗ ಈ ಬಗೆಯ ಎಚ್ಚರಿಸುವ ಗಾದೆಯನ್ನ ಹಿರಿಯರು ಹುಟ್ಟು ಹಾಕಿರಲಿಕ್ಕೂ ಸಾಕು. ತುಂಬ ಅಧಿಕ ಪ್ರಸಂಗ ಮಾತನಾಡುವ ಮಗುವನ್ನ ಹಿರಿಯರು "ಕೋಕಯ್ ಮಾತಾಡಬೇಡ!" ಅಂತ ಗದರುವುದು ತುಳುನಾಡಿನಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಬೈಗುಳ. ತೀರ ಇದನ್ನ ನೂರಕ್ಕೆ ನೂರರಷ್ಟು ಬೆಂಬಲಿಸದಿದ್ದರೂ ಸಹ "ಹಾಸಿಗೆಯಿದ್ದಷ್ಟೆ ಕಾಲು ಚಾಚು" ಎನ್ನುವ ಕನ್ನಡದ ಗಾದೆಯನ್ನ ಈ ಸಾಲಿಗೆ ಸೇರಿಸ ಬಹುದು.}



( ಎನ್ನ ಕೋಕಯಿಡ್ ಪತ್ತುನಾತೆ ಕೊಡಪ್ವೊಡು = ತನ್ನ ಕೊಕ್ಕಿನಲ್ಲಿ ಹಿಡಿಯುವಷ್ಟನ್ನೆ ಕುಕ್ಕಬೇಕು.)


No comments: