17 March 2013

ತುಳುಗಾದೆ-೪೭





"ನೀರಾಂಡಲ ಅಲೆಗೆ, ಮರ್ಲಾಂಡಲ ಅಪ್ಪೆಗೆ"


{ ಕರುಳಿನ ಬಾಂಧವ್ಯ ಗ್ರಹಿಕೆಗೆ ಮೀರಿದ್ದು. ಹೊತ್ತ ತಾಯಿ ಹೆತ್ತ ನಂತರ ತನ್ನ ಕೂಸನ್ನ ಲಾಲಿಸಿ ಪಾಲಿಸ ಬೇಕಾದದ್ದು ಲೋಕಾರೂಢಿ. ಆದರೆ ಈ ಸುಮಧುರ ಸಂಬಂಧ ಆಕೆಯೊಂದಿಗೆ ಆಕೆ ಹೆತ್ತ ಪ್ರತಿ ಮಕ್ಕಳಿಗೂ ಇರಲೆ ಬೇಕಂದೇನಿಲ್ಲ. ಅದು ಕೇವಲ ತೋರಿಕೆಯ, ವ್ಯಾವಹಾರಿಕ ಹಾಗೂ ಕೃತಕ ಬಾಂಧವ್ಯವಾಗಿರುವ ಸಂಭವಗಳೂ ಇವೆ. ಇದು ಸಂಬಂಧಗಳಲ್ಲಿನ ಸಂಕೀರ್ಣತೆಗಿರುವ ನಿದರ್ಶನ. ಅದೇನೆ ಇದ್ದರೂ, ತಾಯಿ ಮಕ್ಕಳ ನಡುವಿನ ಸಂಬಂಧದ ಸೌಹಾರ್ದತೆ ಅದೆಷ್ಟೆ ಲೆಕ್ಖಾಚಾರದ ಬುನಾದಿಯ ಮೇಲೆ ನಿಂತಿದ್ದರೂ ನೈಸರ್ಗಿಕವಾಗಿ ಏರ್ಪಟ್ಟ ಪರಸ್ಪರರ ಸಂಬಂಧವನ್ನ ಸುಲಭವಾಗಿ ತಿರಸ್ಕರಿಸಲಾಗದು ಎನ್ನುತ್ತದೆ ಈ ಗಾದೆಯ ವಾಚ್ಯಾರ್ಥ.


ಬಡತನ ಹೆಚ್ಚು ಕಡಿಮೆ ಗ್ರಾಮೀಣ ಭಾರತದಾದ್ಯಂತ ಸಾರ್ವತ್ರಿಕವಾಗಿದ್ದ ದಿನಗಳಲ್ಲಿ ಈ ಗಾದೆಗೆ ಜೀವ ಬಂದಿರಬಹುದು ಅನ್ನಿಸುತ್ತದೆ. ಊಟದಲ್ಲಿ ಅದೆಷ್ಟೆ ಮೇಲೋಗರಗಳಿದ್ದರೂ ಮಜ್ಜಿಗೆ ಅದಕ್ಕೊಂದು ವಿಶಿಷ್ಟ ಮೆರಗು ತರುತ್ತದೆ. ಆರೋಗ್ಯದ ಹಿತದೃಷ್ಟಿಯಿಂದಲೂ ಮಜ್ಜಿಗೆ- ಮೊಸರು ಒಳ್ಳೆಯದು. ಆದರೆ ನೆಟ್ಟಗೆ ನಾಲ್ಕು ಹನಿ ಹಾಲಿಗೂ ತತ್ವಾರವಾಗಿದ್ದ ನಮ್ಮಲ್ಲನೇಕರ ಬಾಲ್ಯದಲ್ಲಿ ಮೊಸರು ಅತ್ತಲಾಗಿರಲಿ ಮಜ್ಜಿಗೆಗೆ ಕೂಡ ಅಷ್ಟು ಅನುಕೂಲವಿರುತ್ತಿರಲಿಲ್ಲ. ಮನೆ ತುಂಬ ಮಕ್ಕಳಿರುತ್ತಿದ್ದ ಸಂಸಾರಗಳಲ್ಲಂತೂ ಒಂದಷ್ಟು ನೀರನ್ನ ಇರುತ್ತಿದ್ದ ಚೂರು ಮಜ್ಜಿಗೆಗೆ ಧಾರಾಳವಾಗಿಯೆ ಬೆರೆಸಿ ಎಲ್ಲರಿಗೂ ತಕ್ಕಷ್ಟು ಮಜ್ಜಿಗೆ ಮುಟ್ಟುವಂತೆ ಮಾಡಲಾಗುತ್ತಿತ್ತು. ಇಲ್ಲಿ ಹೀಗೆ ಸಿಗುತ್ತಿದ್ದ ಮಜ್ಜಿಗೆಯ ಗುಣ ಮಟ್ಟಕ್ಕಿಂತಲೂ ಅದನ್ನ ಎಲ್ಲರಿಗೂ ಮುಟ್ಟಿಸುವ ಮನಸಿನ ಪ್ರೀತಿ ತುಂಬಿದ ಕಾಳಜಿಯನ್ನ ಗಮನಿಸಬೇಕಾದುದು ಇಲ್ಲಿ ಮುಖ್ಯ ಎನ್ನುತ್ತದೆ ಈ ಗಾದೆಯ ಪೂರ್ವಾರ್ಧ.


ಹಾಗೆಯೆ ಸರಿಯಿದ್ದರೂ, ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡ ಮರುಳಾಗಿದ್ದರೂ ತಾಯಿ ತಾಯಿಯೆ ಅಂತೆ. ಅದು ಬದಲಿಸಲಾಗದ ನಿತ್ಯ ಸತ್ಯ. ಹುಚ್ಚಿಯೆಂದ ಮಾತ್ರಕ್ಕೆ ಅದನ್ನ ಎಲ್ಲರ ಕಣ್ಣಿನಿಂದ ಮುಚ್ಚಿಟ್ಟು ನಮಗೂ ಆಕೆಗೂ ಏನೊಂದೂ ಸಂಬಂಧವಿಲ್ಲವೆಂದು ಸಾಧಿಸಲಾಗದು. ಇರುವ ಮಿತಿಯಲ್ಲಿಯೆ ಆಕೆಯನ್ನ ಸಾಧ್ಯವಾದಷ್ಟು ಕಕ್ಕುಲಾತಿಯಿಂದ ನೋಡಿಕೊಳ್ಳುವುದೆ ಧರ್ಮ ಎನ್ನುವ ವಿವೇಕ ಬೋಧನೆ ಮಾಡುತ್ತದೆ ಈ ಗಾದೆಯ ಉತ್ತರಾರ್ಧ. ಸಂಬಂಧ ಹಾಗೂ ಅದರ ಸಂಕೀರ್ಣತೆಯನ್ನ ಸೂಕ್ಷ್ಮವಾಗಿ ವಿವರಿಸುವ ಸರಳ ಸುಂದರ ಗಾದೆಯಿದು.}






( ನೀರಾಂಡಲ ಅಲೆಗೆ, ಮರ್ಲಾಂಡಲ ಅಪ್ಪೆಗೆ = ನೀರಾದರೂ ಮಜ್ಜಿಗೆಯಂತೆ, ಹುಚ್ಚಾದರೂ ತಾಯಿಯಂತೆ.)

1 comment:

Anagha Kirana ಅನಘ ಕಿರಣ said...

" 'ಮಳ್ಳಾದ್ರೂ ತಾಯಿ, ತೆಳ್ಳಾದ್ರೂ ಮಜ್ಜಿಗೆ' ಇದು ಹವ್ಯಕರಲ್ಲಿರುವ ಗಾದೆ. ತಾಯಿಯ ಮಹತ್ವ ಅರಿಯದ ಎಷ್ಟೋ ಜನರು ಆಕೆಯ ತಪ್ಪುಗಳನ್ನೇ ಕಂಡುಹಿಡಿದು ಮನೆಯಲ್ಲಿ ಕಾಲುಕಸ ಮಾಡುವ, ಮನೆಯಿಂದ ಹೊರಹಾಕುವ ಮಂದಿ ಈ ಗಾದೆಯನ್ನು ಅರಿತರೆ ಒಳ್ಳೆಯದು." ಎನ್ನುವುದನ್ನ ನೆನಪಿಸಿದ ತಂಗಿ ಶೀಲಾ ಭಟ್'ರಿಗೆ ಕೃತಜ್ಞತೆಗಳು.