07 August 2009

ಸಂಜೆಗತ್ತಲು...

ತೇಲಿ ಬಿಟ್ಟ ಹಣತೆ,

ತುಂಗೆ ಒಡಲಲಿ ಹಬ್ಬಿ ಹೊಳೆವ ಹಾಗೆ/

ನನ್ನೆದೆಯ ತೊರೆಯಲಿ ತೇಲಿಬಿಟ್ಟ...ನಿನ್ನೊಲವಿನ ಹಣತೆ,

ಸಾಲು ಸಂಭ್ರಮಕ್ಕೆ ಸಾಕ್ಷಿಯಾಯ್ತು//

ಮುಗುಳ್ನಗುವ ಮುಖದ ಹಿಂದೆ ಮಡುಗಟ್ಟಿರುವ ನೋವೆ,

ನಿನ್ನ ಮೇಲೆ ಸದಾ ಇರಿಸಿ ಪರದೆ/

ಹಾಕಿ ಸಂತಸದ ಮುಸುಕು...ಬಚ್ಚಿಡಲಾಗದೆ?

ಸಂಕಟದಲ್ಲೇ ಅದ್ದಿದ ಅಸಲು ಇರಾದೆ//

ಹುಸಿ ಮಾತುಗಳ ಹಂಗೇಕೆ?

ಮಿಡಿವ ಮನದ ಮೂಲೆಯಲ್ಲೇ ಪ್ರೀತಿ ಇರಲಿ ಬಿಡಿ/

ಹೂವು ಅರಳಿದ ಸಂಭ್ರಮಕೆ ಚಿಟ್ಟೆ ಹೇಳುವುದೇ?

ಅಭಿನಂದನೆಯ ನುಡಿ//

ಕಿರಣ ಭುವಿಯ ಒಡಲಿಗೆ ಇತ್ತು,

ಭ್ರಮರ ಹೂವ ನೆತ್ತಿಗೆ ಸುರಿಸಿದ ಮುತ್ತು/

ಪಡುವಣವ ಮತ್ತಷ್ಟು ನಾಚಿಸಿ...ಕೆಂಪಾಗಿಸಿದೆ//

ಇರುಳೆಲ್ಲ ಹಾಡಿ,

ವಿರಹದ ನೆತ್ತರನೆ...ಎದೆಗೆ ಹೊಕ್ಕ ಮುಳ್ಳಿಗೆ ಉಣಿಸಿ/

ಅರಳಿದ ಕೆಂಗುಲಾಬಿಗೆ ರಂಗು ತುಂಬಿದ ಕೋಗಿಲೆ,

ಬೆಳಕು ಮೂಡುವಾಗ....ಅದೇ ಗಿಡದಡಿ ಬಿದ್ದು ಅಸುನೀಗಿದೆ//

05 August 2009

ಅಕಾಲ ಯವ್ವನ..

ಹೂ ತೋಟದಲ್ಲಿ ಹಾರೊ ಉನ್ಮತ್ತ ದುಂಬಿ.

ತನ್ನ ತುಟಿಯನೆ ಮೊದಲು ಚುಂಬಿಸಲಿ ಎಂಬ ಕಾತರ...ಆಗಷ್ಟೆ ಅರಳಿದ ಸುಮಗಳ ಕಣ್ಣಲ್ಲಿ/

ಲಜ್ಜೆಯ ಪರದೆ ಸರಿಸಿ,

ಮೋಹದ ಬಿಂಬವ ಮೂಡಿಸಿವೆ//