31 July 2020

ಮರುಕ ಹುಟ್ಟಿಸುವ ಮಲೆನಾಡಿನ ಮರುಳ ಮರಳ ಕಥೆ.

ಈ ವರ್ಷ ಮಲೆನಾಡಿನಲ್ಲಾಗಲಿ ಕರಾವಳಿಯಲ್ಲಾಗಲಿ ವಾಡಿಕೆ ಮಳೆಯಲ್ಲಿ ಶೇಕಡಾ ಮೂವತ್ತು ಅಂದರೆ ಮೂರರಲ್ಲೊಂದು ಭಾಗದಷ್ಟೂ ಮಳೆ ಹನಿದಿರದಿದ್ದರೂ ತುಂಗಾˌ ಭದ್ರಾˌ ಸೀತೆˌ ವಾರಾಹಿˌ ಕಾವೇರಿ ಹಾಗೂ ನೇತ್ರಾವತಿಯಲ್ಲಿ ಭರಪೂರ ನೀರು ಹರಿದು ಹೋಗಿದ್ದು ಅಣೆಕಟ್ಟೆಗಳೆಲ್ಲ ತಮ್ಮ ಗರಿಷ್ಠ ಮಟ್ಟಕ್ಕೆ ತಲುಪಿ ಕೆಲವೆಡೆ ಕ್ರೆಸ್ಟ್ ಗೇಟ್ ತೆಗೆದು ನೀರು ಹೊರ ಬಿಟ್ಟ ಪವಾಡಗಳೂ ನಡೆದು ಹೋಗಾಗಿದೆ!🤨

ಅದ್ಹೆಂಗೆ ಹೀಗಾಗಿದೆ? ಅನ್ನುವ ಪ್ರಶ್ನೆ ನಿಮಗಿದ್ದರೆˌ ಕ್ಷಮಿಸಿ ನಿಮ್ಮಷ್ಟು ಬೋಳುಬೆಪ್ಪರೋ ಅಥವಾ ಜಾಣಕುರುಡರೋ ಮತ್ತೊಬ್ಬರಿರಲಿಕ್ಕಿಲ್ಲ. ಅಲ್ರಿ ಮನಸೋ ಇಚ್ಛೆ ಇರೋ ಬರೋ ಹೊಳೆಗಳಂಚಿಂದ ಅಪರಾ ತಪರಾ ಮರಳು ದೋಚಿದರೆ ಇನ್ನೆಂತ ಆಗ್ತದೆ ಮತ್ತೆ?😬

ಮನುಷ್ಯನ ಮಿತಿ ಮೀರಿದ ದುರಾಸೆ ಹಾಗೂ ಧನ ದಾಹಕ್ಕೆ ಬಲಿಯಾದದ್ದು ಸಮೃದ್ಧ ಮರಳ ದಂಡೆ ಹೊಂದಿದ್ದ ಹೊಳೆಗಳಂಚಿನ ಹೊಯಿಗೆ ದಿಬ್ಬಗಳು. ಮೊದಲೆಲ್ಲ ಗಂಧ ಕಳ್ಳಸಾಗಣಿಕೆ ಮಾಡಿ ಊರು ಮನೆಯಲ್ಲಿ ಸಂಭಾವಿತರಂತೆ ಸೋಗು ಹಾಕಿಕೊಂಡು ಬದುಕುತ್ತಿದ್ದ ಬಸ್ಟ್ಯಾಂಡ್ ಮೂರು ಮಾರ್ಕಿನ ಬೀಡಿ - ಹಾಫ್ ಕ್ವಾಟ್ರು ರಮ್ಮಿನ ಗಿರಾಕಿಗಳೆಲ್ಲ ಈಗ ಸುಲಭವಾಗಿ ದೋಚಲು ಸಾಧ್ಯವಿರುವ ಮರಳನ್ನ ದೋಚಿ ಬೆಂಗಳೂರಿಗೆ ಸ್ಮಂಗ್ಲಿಂಗ್ ಮಾಡಿಕೊಂಡು ದುಂಡಗಾಗ್ತಿವೆ. ದಯವಿಟ್ಟು ಇನ್ಯಾರೂ ಮಲೆನಾಡಿಗರು ಮುಗ್ಧರು ಹಳ್ಳಿಗರು ವಿಶಾಲ ಹೃದಯದವರು ಅಂತೆಲ್ಲ ಬೊಗಳೆ ಹೊಡೆದು ತೇಪೆ ಹಾಕಬೇಡಿ. ಯಾವಾಗ ಹೋಂ ಸ್ಟೇಯಂತ ಆತಿಥ್ಯವನ್ನೆ ಹಣ ಗಬರುವ ಮಾರ್ಗವಾಗಿಸುವತ್ತ ಮಲೆನಾಡಿಗ ಹೊರಳಿದರೋ ಅವತ್ತೆ ಅವರ ಮುಗ್ಧತೆಯಲ್ಲಿ ಮಲೆ ಹತ್ತಿ ಹೋಗ್ಯಾಗಿದೆ.🤧

ಉದಾಹರಣೆಗೆ ತೀರ್ಥಹಳ್ಳಿಯಿಂದ ಶಿವಮೊಗ್ಗದ ತನಕ ಹರಿವ ತುಂಗಾ ತಟವನ್ನೆ ತಗೊಳ್ಳಿˌ ಹೆಚ್ಚಂದ್ರೆ ಎಪ್ಪತ್ತು ಕಿಲೋಮೀಟರ್ ಹರಿವಿನ ಪಾತ್ರವಿರೋ ಅಲ್ಲೀಗ ಹದಿನಾಲ್ಕು ಲೀಗಲ್ ಹಾಗೂ ಅದರ ದುಪ್ಪಟ್ಟು ಅಕ್ರಮ ಮರಳು ಕ್ವಾರಿಗಳು ತಲೆಯೆತ್ತಿ ಲೂಟಿ ನಿರಂತರವಾಗಿದೆ. ಅಧಿಕಾರಿ ವರ್ಗ ಹಾಗೂ ರಾಜಕಾರಣಿಗಳ ದುಷ್ಟಕೂಟದ ಮಿಲಾಖತ್ ಇರೋ ಈ ದಂಧೆ ಕೋಟ್ಯಾಂತರ ರೂಪಾಯಿ ವಾಹಿವಾಟಿನದಾಗಿದ್ದುˌ ಹತ್ತು ಹನ್ನೆರಡು ಸಾವಿರಕ್ಕೆ ಸ್ಥಳಿಯವಾಗಿ ತೆಗೆಯಲಾಗುವ ಲೋಡು ಮರಳಿಗೆ ಬೆಂಗಳೂರಲ್ಲಿ ಅದರ ಎಂಟು ಪಟ್ಟು ಬೆಲೆ ಕಟ್ಟಲಾಗ್ತಿದೆ ಅಂದ್ರೆ ಕೊಳ್ಳೆ ಹೊಡೆಯಲಾಗುತ್ತಿರೋ ಮರಳಿನ ಹಾಗೂ ಹಡಬೆ ದುಡ್ಡಿನ ಪ್ರಮಾಣ ಊಹಿಸಿ ಒಂದು ಕ್ಷಣ.😉

ಇದಕ್ಕೆ ಆಳುವ ಅಧಿಕಾರಿ ಹಾಗೂ ರಾಜಕೀಯ ನಾಲಾಯಕರನ್ನ ದೂರಿ ಪ್ರಯೋಜನವಿಲ್ಲ. ಊರಿನ ದೇವಸ್ಥಾನˌ ಜಾತ್ರೆˌ ಕ್ರಿಕೆಟ್ ಪಂದ್ಯಾವಳಿˌ ಮಾರಿ ಜಾತ್ರೆˌ ಯುವಕ ಸಂಘದ ಕ್ರೀಡಾಕೂಟˌ ಗಣಪತಿ ಕೂರ್ಸದುˌ ಕಬಡಿ ಪಂದ್ಯಾವಳಿ ಮುಂತಾದ ತರತರದ ಹೆಸರಿನ ಚಂದಾ ಪುಸ್ತಕಗಳಿಗೆ ಕಣ್ಣುಮುಚ್ಚಿ ಸಾವಿರಾರು ರೂಪಾಯಿಯ ಮೂಳೆ ಎಸೆದು ಸ್ಥಳಿಯ ಆಶಾಢಭೂತಿ ಯುವಕರನ್ನ ಬುಕ್ ಮಾಡಿಕೊಂಡಿರೋ ಅವರ ತಪ್ಪೇನಿದೆ ಇದರಲ್ಲಿ? ಅವರ ಎಂಜಲು ದುಡ್ಡಿಗೆ ಸ್ಥಳಿಯರೆ ತಮ್ಮನ್ನ ತಾವು ಮಾರಿಕೊಳ್ಳಕ್ಕೆ ತಯಾರಾಗಿರೋವಾಗ? ಜೊತೆಗೆ ಇವಕ್ಕೂ ಅಷ್ಟಿಷ್ಟು ಪುಗ್ಸಟ್ಟೆ ಮರಳು ದೋಚಲು ಮುಕ್ತ ಅವಕಾಶ ಬೇರೆ ಇರ್ತದಲ್ಲ. ಕೋಟಿ ಕೊಳ್ಳೆ ಹೊಡೆಯುವವರಿಗೆ ಸಾವಿರಾರು ರೂಪಾಯಿಯ ಚಂದಾ ಕೊಡೋದೇನೂ ದೊಡ್ ವಿಷ್ಯ ಅಲ್ಲ ಬಿಡಿ.🤪

ಹೀಗಾಗೆˌ ಅಂತರ್ಜಲ ವೃದ್ಧಿಸುವ ನೈಸರ್ಗಿಕ ಫಿಲ್ಟರ್ ಆಗಿದ್ದˌ ಮೀನುˌ ಆಮೆˌ ಮೊಸಳೆ ಹಾಗೂ ಹಾವುಗಳ ಹೆರಿಗೆ ಮನೆಯಾಗಿದ್ದ ಮರಳ ದಂಡೆಗಳು ರಾತ್ರೋರಾತ್ರಿ ಮಾಯವಾಗ್ತಿವೆ. ಹೀಗಾಗಿ ಇಂಗಲಾರದ ಅಲ್ಪ ಮಳೆಯ ನೀರೂ ಸಹ ಇಕ್ಕೆಲ ದಡಗಳ ಮೆಕ್ಕಲು ಮಣ್ಣನ್ನ ಕೊರೆಯುತ್ತಾ ಅಣೆಕಟ್ಟುಗಳ ಕೆಸರಿನ ಸಿಲ್ಟು ಹೆಚ್ಚಿಸ್ತಾ ತುಂಬಿದ ಹಾಗೆ ಕಾಣೋ ಅಣೆಕಟ್ಟೆಗಳಿಂದ ತುಂಬಿ ತುಳುಕಿ ಸಮುದ್ರಮುಖಿಯಾಗ್ತಿವೆ. ನಿಧಾನವಾಗಿ ಮಲೆನಾಡು ಬರಿದಾಗಿ ಬಯಲು ಸೀಮೆಯಾಗ್ತಿದೆ.😖

ಮೊದಲು ನೂರಿನ್ನೂರು ಅಡಿಗೆ ನೀರು ಸಿಗ್ತಿದ್ದ ಹೊಳೆ ಬದಿ ಬಾವಿಗಳಲ್ಲೂ ಈಗ ಸಾವಿರ ಅಡಿ ಕೊರೆದರೆ ಮಾತ್ರ ನೀರು ಅನ್ನೋ ದುರಾವಸ್ಥೆಗೆ ಬಂದಾಗಿದೆ. ಹಣದ ದುರಾಸೆ ಮಲೆನಾಡಿಗರ ಮನಸು ಕೆಡಿಸಿದೆ. ನಿಸರ್ಗದ ಸ್ಥಿರತೆ ಯಾರಿಗೂ ಬೇಕಾಗೆ ಇಲ್ಲ ಅನ್ನೋ ಹಂಗಾಗಿದೆ.😎

13 July 2020

ಸುಗಂಧ.....

ಸುಗಂಧ....

ಅಳಿಸಿ ಹೋಗದ ಬಣ್ಣದ ಶಾಯಿಯಲ್ಲಿ ಬರೆದ ಅಕ್ಷರಗಳೆಲ್ಲ
ಅರಿವಿಗೆ ಸಹ ಬಾರದಂತೆ ಮಾಸಿ ಹೋದ ಹಾಗೆˌ
ಆಗಿದ್ದರೂ ಇದು ಮೌನದ ಹಾಯಿದೋಣಿಯ ಮೇಲಿನ ಏಕಾಂಗಿ ಪಯಣ
ತೆಪ್ಪದ ಮೂಲೆಯಲ್ಲಿ ಹೋದವಳಂದಿರಿಸಿದ ನೆನಪಿನ ಹಲಸು ಅಂಟಿಸುವ ಸೌಗಂಧದ ಮೇಣದ ಕಥೆಯೆ ಹೀಗೆ./
ದಟ್ಟ ಅನುಭವದ ಬಾಳೂ ಸಹ ಕೆಲವೊಮ್ಮೆ ದಟ್ಟದರಿದ್ರವನ್ನಿಸುತ ಹೋಗಿˌ
ನೆನ್ನೆಯ ನೆನಪುಗಳ ಕೂಸನ್ನ ಮಲಗಿಸಿದ ತೊಟ್ಟಿಲ ಜೋಲಿಯನ್ನೆ ಅಪ್ಯಾಯಮಾನವಾಗಿ ಇಂದಿನ ಕೈಗಳು ಸಹ ತೂಗಿ ತೂಗಿ.//

ನೀರ ಮೇಲೆ ಅವಳ ಹೆಜ್ಜೆ
ಉಳಿಸದೆ ಹೋದ ಗುರುತುಗಳೆಲ್ಲ ಮನಸಲಿ ಗಾಢವಾಗಿ ಉಳಿದು ಭಾವಲೋಕ ತುಂಬಾ ವಜ್ಜೆˌ
ನೀಲಿ ಜಲದ ಮೇಲೆ ತೇಲಿ ಕನಸುಗಳೆಲ್ಲ ಕರಗಿದಂತೆ
ಕಲ್ಲಾಗಿ ಕ್ಷಣ ನಾನು ನಾವಿಬ್ಬರೂ ಅಂದು ಕೂಡಿದ್ದ ಸ್ಥಳದಲ್ಲೆ ಮೌನವಾಗಿ ನಿಂತೆ./
ಹರಿವ ನದಿಯ ಜಲದ ಕನ್ನಡಿ
ಪ್ರತಿಬಿಂಬಿಸಿತೆ ಸೋತ ಮನದೊಳಗೆ ಮೂಡಿದ ಶೋಕದ ಮುನ್ನುಡಿˌ
ಕಣ್ಣ ಭಿತ್ತಿಯ ಮೇಲೆ ತೂಗಿದ ಕನಸುಗಳ ಬಿಂಬ
ನೋವನೆ ಬಡಿದೆಬ್ಬಿಸಿದ್ದು ಸುಳ್ಳಲ್ಲ ವಿಷಾದದೆದೆಯ ತುಂಬಾ.//

ಹುಣ್ಣಿಮೆ ಹುಟ್ಟಿಸುತ್ತಿದ್ದ ಖುಷಿಗಳೆಲ್ಲ ಈಗ ಕನಸು
ಕಾರ್ಗತ್ತಲ ಅಮಾವಾಸ್ಯೆ ನಿತ್ಯಸತ್ಯ ನನಸುˌ
ವಯಸ್ಸು ಮೀರಿ ಪ್ರೌಢವಾದ ಮಗು ಮನ
ಏಕಾಂತದಲ್ಲಿ ದೈನ್ಯತೆ ಉಕ್ಕಿಬಂದಾಗ ಅನಾಥ ಭಾವದಲ್ಲಿ ಆಗುತ್ತಿರುತ್ತದೆ ವಿಪರೀತ ದೀನ./
ಮಹಲ ಕೊಳದಲ್ಲಿ ನಳನಳಿಸಿ ತೇಲುವ ಕಮಲದ ಪತ್ರೆಯ ಮೇಲಷ್ಟೇ ಅಲ್ಲ
ಗುಡಿಸಲ ಹಿತ್ತಲ ನಿಶ್ಪಾಪಿ ಕೆಸುವಿನ ಎಲೆಯ ಮೇಲೂ ಮಳೆಯ ಹನಿ ನಿಂತಾಗ ಹೊಳೆವ ಮುತ್ತಾಗುತ್ತದೆˌ
ಹೊರ ಸಿರಿಯ ಹೊತ್ತವರ ಹೆಗಲ ಮೇಲೆ ತಲೆ ಆನಿಸಿ ಕಳೆವ ಕ್ಷಣಗಳಷ್ಟೆ ಅಲ್ಲವಲ್ಲ
ಮಾನಸ ಶ್ರೀಮಂತಿಕೆಯ ಮಡಿಲನ್ನ ನೆಮ್ಮದಿಯ ತಲೆದಿಂಬಾಗಿಸಿ ಮಾಡುವ ನಿದ್ದೆಯಲ್ಲೂ ಸಹ ನಿರಾಳತೆಯ ಸ್ಪಪ್ನ ಹೊಳೆವ ನತ್ತಾಗುತ್ತದೆ.//

- 😇

ಕಳ್ಳ ಖದೀಮರಿದ್ದಾರೆ ಎಚ್ಚರ.

ಪಶ್ಟಿಮಘಟ್ಟದ ಸೆರಗು ಕರಾವಳಿ ಹಾಗೂ ನೆರಿಗೆ ಮಲೆನಾಡಿನ ಪ್ರಾಕೃತಿಕ ಸಿರಿಯನ್ನ ದರೋಡೆ ಮಾಡಿರುವ ಕುಕೃತ್ಯಕ್ಕೆ ವಿವಿಧ ಸ್ತರಗಳ ಸರಕಾರಗಳನ್ನ ದೂರುವುದು ಹಾಗೂ ಅದರ ಕುರಿತು ಆಗಿರುವ - ಆಗುತ್ತಿರುವ - ಮುಂದಾಗಲಿರುವ ದೌರ್ಜನ್ಯಗಳನ್ನ ಪಟ್ಟಿ ಮಾಡಿಕೊಂಡು ಆಳುವ ಅಧಮರನ್ನ ಬೈದಾಡುವುದು ತಪ್ಪೇನಲ್ಲ.

ಹಾಗಂತˌ ಒಮ್ಮೆ ಎದೆ ಮುಟ್ಟಿಕೊಂಡು ನಮ್ಮ ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಬಾಕಿ ಇನ್ಯಾರಿಗಲ್ಲದಿದ್ದರೂ ನಿಮಗಷ್ಟೆ ಕೇಳಿಸುವಂತೆ ನೀವು ನೀವೆ ನಿಮ್ಮ ನಿಮಗೆ ಒಂದುಕ್ಷಣ ನಿಜವಾದ ಪ್ರಾಮಾಣಿಕತೆಯಿಂದ ಹೇಳಿ.

ಅರ್ಧ ಎಕರೆ ಅಡಿಕೆ ತೋಟದಂಚಿಗೆ ಆರೆಕರೆ ಕಾಡಿಗೆ ಬೇಲಿ ಸುತ್ತಿ ಅಲ್ಲೂ ಸಸಿ ನೆಟ್ಟು ತೋಟ ವಿಸ್ತರಿಸಿದˌ ಕಾಲೆಕರೆ ಕಾಫಿ ಎಸ್ಟೇಟಿನ ಪಕ್ಕದ ಕೆಲವಾರು ಎಕರೆ ಕಾಡನ್ನ ಕಬಳಿಸಿ ಅಲ್ಲೂ ಕಾಫಿ - ಏಲಕ್ಕಿ ಹಾಕಿ ತಮ್ಮ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಂಡˌ ಮೂರೆಕರೆ ಗದ್ದೆಯ ಸುತ್ತಮುತ್ತಲ ನೂರೆಕರೆ ಕಾನು ಗುಡ್ಡಕ್ಕೆ ಲಗ್ಗೆಯಿಟ್ಟು ಅದನ್ನೂ ತನ್ನ ಬೇಲಿಯೊಳಗೆ ಎಳೆದುಕೊಂಡ ಮಲೆನಾಡು - ಕರಾವಳಿಯ "ಮುಗ್ಧ"(?) ರೈತಾಪಿ ಬೆಳೆಗಾರರ ತಪ್ಪೇನಿಲ್ವ?!


ವಸಾಹತುಶಾಹಿ ಮನಸ್ಥಿತಿˌ ವ್ಯಕ್ತಿ ಪೂಜಕ ವ್ಯಕ್ತಿತ್ವ ಹಾಗೂ ಗುಲಾಮಗಿರಿಗೆ ಸುಶುಪ್ತ ಸಮ್ಮತಿ ನಮ್ಮ "ಭಾರತೀಯ ತಳಿ"ಯ ಹೋಮೋಸೇಪಿಯನ್ ವರ್ಗದ ಪ್ರಮುಖ ಹಾಗೂ ಅನುವಂಶೀಯ ಸಮಸ್ಯೆ.

ಹೀಗಾಗಿಯೆˌ ಆಗುವ ನ್ಯಾಯ - ಅನ್ಯಾಯಗಳನ್ನ ಈ ಮಾನದಂಡಗಳನುಸಾರವೆ ಅಳೆದು ನಮ್ಮ ಮೇಲೆ ನಾವು ನಾವೆ ಹೇರಿಕೊಳ್ಳುತ್ತಿರುತ್ತೇವೆ. ಅದರ ಅಡ್ಡˌ ನೇರˌ ಬಳಸು ಹೀಗೆ ಥರಾವರಿ ಪರಿಣಾಮಗಳಿಂದ ಬಯಸಿ ಬಯಸಿ ಎನ್ನುವಂತೆ ನಿರಂತರ ನರಳುತ್ತಲೂ ಇರುತ್ತೇವೆ. ಈ ಸ್ವಯಂ ಬಂಧನದ ಸ್ವ ಲಿಖಿತ ಲಕ್ಷ್ಮಣ ರೇಖೆಗಳನ್ನ ದಾಟದೆ ಜನ್ಮಜನ್ಮಾಂತರಕ್ಕೂ ನಮಗೆ ಮುಕ್ತಿ ಮರೀಚಿಕೆ.

ಬಿಳಿಯರು ಸಾಹೇಬರುಗಳೆಲ್ಲ ಭಾರತ ತೊರೆದರು ನಿಜ. ಆದರೆˌ ಈ ನಕಲಿ ತಳಿಯ ಕರಿಯ ಸಾಹೇಬರುಗಳೆಲ್ಲ ಸೇರಿ ದೇಶ ದೋಚುವಲ್ಲಿ ತೋರುತ್ತಿರುವ ಅಟ್ಟಹಾಸದ ಮುಂದೆ ಹೋಲಿಸಿದರೆ ಪಾಪˌ ೧೯೦ವರ್ಷಗಳ ಕಾಲ ಯುರೋಪಿಯನ್ನರು ಇಲ್ಲಿ ಆಡಿದ್ದ ಆಟ ತೃಣಕ್ಕೂ ಸಮನಲ್ಲ!


ವಿವೇಕದ ನುಡಿ. ಯಾವಾಗ ಒಬ್ಬ ದುರುಳ ಹಾಗೂ ಧೂರ್ತ ಆಡಳಿತಗಾರ ತನ್ನ ಪ್ರಜೆಗಳ ಅಭಿವೃದ್ಧಿ ಸಾಧಿಸುವುದಲ್ಲಿ ವಿಫಲನಾಗುತ್ತಾನೋˌ ಆಗಾಗ ಅಂತಹ ಅಧಮ ಅಧಿಕಾರಸ್ಥ ದೇಶದ ಐತಿಹಾಸಿಕ ಉನ್ನತಿಯ ಹರುಕು ಬಾವುಟವನ್ನ ಎತ್ತೆತ್ತಿ ಬೀಸುತ್ತಾ ಜನರ ಗಮನವನ್ನ "ಬೋಳು ಮಂಡೆ ಮುಂಡೆಯ ಹಳೆ ತುರುಬಿನತ್ತ" ಸೆಳೆದುˌ ತನ್ನ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಾನೆ. ಸಾಲದ್ದಕ್ಕೆˌ ಧರ್ಮ - ಜಾತಿ - ಭಾಷೆ ಹಾಗೂ ಪ್ರಾದೇಶಿಕತೆಯ ಈಟಿ ಭರ್ಜಿ ಖಡ್ಗ ಹಾಗೂ ಗದೆಗಳನ್ನ ತನ್ನ ಮೂರ್ಖ ಪ್ರಜೆಗಳ ಕೈಗಳಿಗೆ ತಲುಪಿಸಿ ಪರಸ್ಪರ ಕಚ್ಚಾಡುತ್ತಾ ಅದರಲ್ಲೆ ಮಗ್ನರಾಗಿರಲು ಮೇಲಿಂದ ಮೇಲೆ ಮಾತಿನ ಪ್ರಚೋದನೆ ಕೊಟ್ಟು ಬಹಿರಂಗವಾಗಿ ಪರಸ್ಪರರ ಮೇಲೆ ಛೂ ಬಿಟ್ಟುˌ ಅವರ ಜಗಳದ ಲಾಭ ಪಡೆದು ಪ್ರಾಕೃತಿಕ ಸಿರಿಯನ್ನ ಕಾನೂನುಬದ್ಧವಾಗಿಯೆ ಸೂರೆ ಮಾಡುತ್ತಾ ದರೋಡೆ ಮಾಡುವವರಿಗೆ ಅನುಕೂಲ ಮಾಡಿಕೊಡುವಂತೆ ಕಾಯಿದೆಗಳನ್ನ ತಿದ್ದಿಸುತ್ತಾ ಇಡಿ ದೇಶವನ್ನˌ ಅದರ ಸಮಸ್ತ ಜನಸಂಖ್ಯೆಯ ಸಮೇತ ಹಾಳು ಗುಂಡಿಗೆ ನೂಕಲು ಹವಣಿಸುತ್ತಲೆ ಇರುತ್ತಾನೆ.

ಟರ್ಕಿ ಚೀನಾ ಮಾತ್ರವಲ್ಲ ಇವತ್ತಿನ ದಿನಮಾನಗಳಲ್ಲಿ ಭಾರತದಲ್ಲೂ ಇದನ್ನೆ ಮಾಡ್ತಾ ಇದ್ದಾರೆ. ಅವರನ್ನ ಹಾಡಿ ಹೊಗಳಿ ಸುಳ್ಳು ಪಳ್ಳು ಕಥೆಗಳನ್ನ ಕಟ್ಟಿ ನಿರಂತರ ಬಹುಪರಾಕ್ ಹಾಕುತ್ತಾ ಅವರ ವೈಫಲ್ಯದ ತೂತುಗಳಿಗೆ ತೇಪೆ ಹಾಕಲು ಅವರವರ ಆಸ್ಥಾನ ಭಟ್ಟಂಗಿಗಳಂತೂ ಸದಾ ಸಿದ್ಧವಾಗಿ ಇದ್ದೆ ಇರ್ತಾರೆ.

06 September 2016

ಗಣಪತಿ ಬಪ್ಪದೆ ಹೋಗಯ್ಯ, ಈಗ ಆದ ಅನಾಹುತವೇ ನಮಗೆ ಸಾಕಯ್ಯಾ........

ಪಾಪ, ಉದಾತ್ತ ಮನಸ್ಸಿನ ಮಹಾನುಭಾವರಾಗಿದ್ದ ಅಮರ ಹೋರಾಟಗಾರ ಬಾಲಗಂಗಾಧರ ತಿಲಕರ ಆಶಯವೇ ಅಸಲಿಗೆ ಬೇರೆ ಇತ್ತೇನೋ! ಆದರೆ ಈಗಿನ ಬಹುತೇಕ ಹುಟ್ಟಾ 'ಚಂದಾ'ಮಾಮಂದಿರಾದ ಭಂಡಮುಂಡೆಗಂಡರು ಅದನ್ನ ಸಂಪೂರ್ಣ ಹಳ್ಳ ಹಿಡಿಸಿ ಬಿಟ್ಟು, "ಗಣಪತಿ ಹಬ್ಬ"ವನ್ನ ಸಾರ್ವಜನಿಕವಾಗಿ ಆಚರಿಸೋದು ಎಂದರೆ ಸಾರ್ವತ್ರಿಕವಾಗಿ ಗಲಭೆ ಮಾಡೋದು ಹಾಗೂ ಮಾಡಿಸೋದು ಅಂತಲೇ ತೀರ್ಮಾನಿಸಿಬಿಟ್ಟ ಹಾಗಿದೆ. ಈತನಕ 'ಗಣಪತಿ'ಯ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯ ವಿಷಯ ಹಿಂದೂ ಹಾಗೂ ಮುಸಲ್ಮಾನರ ನಡುವಿನ ಕೋಮು ಗಲಭೆಗೆ ಮಾತ್ರ ಸೀಮಿತವಾಗಿತ್ತು. ಆದರೆ ಇದೀಗ ಜಾತಿ ಹಾಗೂ ಸ್ಪರ್ಶ್ಯತೆ - ಅಸ್ಪರ್ಶ್ಯತೆಗೂ ಅದನ್ನ ಯಶಸ್ವಿಯಾಗಿ ನಾಚಿಕೆ ಬಿಟ್ಟು ತಳುಕಿಸಲಾಗಿದೆ.

ಬರುಬರುತ್ತಾ, ಈ ಸಾರ್ವಜನಿಕ ಆಚರಣೆಯ 'ಗಣಪತಿ ಹಬ್ಬ' ಸಹ 'ಕಾಂಗ್ರೆಸ್ ಸಂಸ್ಥೆ'ಯಂತೆ ಆಗಿಹೋಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತಿದ್ದಂತೆ ಈ ಸಾರ್ವಜನಿಕ ಗಣಪತಿ ಉತ್ಸವದಂತೆ ಆ ಕಾಂಗ್ರೆಸ್ ಕೂಡಾ ಅಪ್ರಸ್ತುತವಾಗಿ ಹೋಗಿಯಾಗಿದೆ. ಅವೆರಡರ ಸ್ಥಾಪನೆಯ ಉದ್ದೇಶವೂ ಸ್ವಾತಂತ್ರ್ಯ ಸಾಧನೆಯ ಮೂಲಕ ತೀರಿದ ಮೇಲೆ ಅವೆರಡನ್ನೂ ಮುಚ್ಚಿಕೊಂಡು ವಿಸರ್ಜಿಸೋದು ಬಿಟ್ಟು ನಮ್ಮ ಜನ ಇಲ್ಲಸಲ್ಲದ ಜಾತಿ - ಕೋಮುಗಳ ಪುಕಾರು ಹಬ್ಬಿಸಿಕೊಂಡು ಇವೆರಡು ಸ್ಥಾಪಿತ ಹಿತಾಸಕ್ತಿಗಳನ್ನೂ ಪ್ರಬಲವಾಗಿ ಪೋಷಿಸಿಕೊಂಡು ಎಂತೆಂತದೋ ಚಿತಾವಣೆ ಮಾಡಲು ಜೀವಂತವಾಗಿಟ್ಟುಕೊಂಡೇ ಬರುತ್ತಿದ್ದಾರೆ. ನನ್ನ ಅನುಭದ ಮಟ್ಟಿಗಂತೂ ಹಿಂದೂ ಮುಸ್ಲಿಮ್ ನಡುವಿನ ಅಸಹನೆಗೆ ಇನ್ನಷ್ಟು ಸೀಮೆ ಎಣ್ಣೆ ಸುರಿದು ಫಕ್ಕನೆ ಬೆಂಕಿ ಹಚ್ಚಲಿಕ್ಕೆ ಸಾರ್ವಜನಿಕ ಗಣಪತಿ ಉತ್ಸವಗಳಷ್ಟು ಪ್ರಶಸ್ತವಾದ ಅವಕಾಶ ಸದ್ಯಕ್ಕೆ ಮತ್ತೊಂದು ಇರಲಿಕ್ಕಿಲ್ಲ.

ನಿಮ್ಮೆಲ್ಲರಿಗೆ ಶಿವಮೊಗ್ಗದ ಶ್ರೀರಾಮಣ್ಣ ಶ್ರೇಷ್ಠಿ ಪಾರ್ಕಿನ ಗಣಪತಿ ಉತ್ಸವದ ಭಯಾನಕ ಚರಿತ್ರೆ ನೆನಪಿರಬಹುದು. ಮಹಾವೀರ ಸರ್ಕಲ್ಲಿನಲ್ಲಿ ಹಿಂದೊಮ್ಮೆ ಆತನ ವಿಸರ್ಜನಾ ಮೆರವಣಿಗೆಯ ಕಾಲದಲ್ಲಿ ನಡೆದ ಮಾರಾಮಾರಿಯಲ್ಲಿ ಶಿವಮೂರ್ತಿ ಎಂಬ ಯುವಕನಿಗೆ ಯಾರೋ ಚೂರಿ ಹಾಕಿ, ಮೆರವಣಿಗೆಯ ಹುಮ್ಮಸ್ಸಿನಲ್ಲಿದ್ದ ಗಣಪತಿ ನಡು ನಡುಬೀದಿಯಲ್ಲಿಯೇ ಅನಾಥನಾಗಿ ಉಳಿದು. ಬೇಡ ಕಥೆ! ಈಗ ಅದರ ಪಕ್ಕದ ಸರ್ಕಲ್ಲಿಗೆ ಅದೇ ಸತ್ತ ಶಿವಮೂರ್ತಿಯ ಹೆಸರನ್ನಿಟ್ಟು ಆ ಗಲಭೆಯ ನೆನಪನ್ನ ಸದಾಕಾಲಕ್ಕೂ ಜೀವಂತವಾಗಿರಿಸಲಾಗಿದೆ?!

ಇವತ್ತಿಗೂ ಪ್ರತಿವರ್ಷ ರಾಮಣ್ಣ ಸೆಟ್ಟರ ಈ ಜನರ ದುಡ್ಡಿನ ದೊಡ್ದ ಗಾತ್ರದ ಗಣಪ ಹಾಗೂ ಹಿಂದೂ ಮಹಾಸಭಾ ಗಣಪತಿಯ ಹೊಳೆ ಸೇರಲು ಸಾಗುವ ಹಾದಿಯಲ್ಲಿ ಸಿಗುವ ಅಮೀರ್ ಅಹಮದ್ ಸರ್ಕಲ್ಲಿನ ಬಳಿ ಬರುತ್ತಿದ್ದಂತೆ, ಸದಾ ಸಜ್ಜಾಗಿಯೇ ಬರುವ 'ಕೆಲವರು' ಪಕ್ಕದಲ್ಲಿರುವ ಮಸೀದಿಗೆ ಸಂಪ್ರದಾಯದಂತೆ ಒಂದಷ್ಟು ಕಲ್ಲನ್ನ ಮುಲಾಜಿಲ್ಲದೆ ಎಸೆದು ಮುಂದೆ ಹೋಗುತ್ತಾರೆ! ಇನ್ನೇನು ಮುಳುಗಿ ಮರೆಯಾಗಲಿರುವ ಗಣಪತಿಗೆ ಜಯಕಾರ ಕೂಗಲಾದರೂ ಈ ಗಡವರು ಮರೆತಾರು, ಆದರೆ ಮಸೀದಿಗೆ ಕಲ್ಲೆಸೆಯುವುದನ್ನ ಮಾತ್ರ ಯಾವತ್ತಿಗೂ ಮರೆಯರು. ಆಮೇಲೆ ಕರೆದು ಕೇಳಿದರೆ, "ಮಸೀದಿಯಿಂದಲೇ ಕಲ್ಲುಗಳು ಬಂದು ಮೆರವಣಿಗೆಯ ಮೇಲೆ ಬಿದ್ದವು!" ಅನ್ನುವ ಅನುಗಾಲದ ಅದೇ ಹಸೀ ಸುಳ್ಳೊಂದನ್ನ ಕೇಳಿದವರ ಮುಖಕ್ಕೆ ಎಸೆದು ಮಿಣ್ಣಗೆ ಮರೆಯಾಗಿ ಹೋಗುವುದರಲ್ಲಿ, ಈ ಸೆಟ್ಟರ ಗಣಪಣ್ಣನ ಕಳ್ಳ ಭಕ್ತ ಕೋತಿಗಳು ಬಲು ನಿಸ್ಸೀಮರು.

ಹಿರಿಯ ಗೆಳೆಯರೊಬ್ಬರ ಮಧ್ಯ ಕರ್ನಾಟಕದ ಹುಟ್ಟೂರೊಂದರಲ್ಲಿ ಈ ಸಾರಿ ಜಾತಿ ಜಗಳ ತೆಗೆದು ಗಣಪತಿ ಕೂರಿಸಲು ಅನುಮತಿ ಸಿಗದೆ ಹೋಗುವಂತಾಯಿತಂತೆ. ಲಿಂಗಾಯತರು ಹಾಗೂ ಗೊಲ್ಲರು ಸಲ್ಲದ ಸಂಪ್ರದಾಯದ ಜಾತಿ ಜಗಳ ತೆಗೆದು ಗಣಪಣ್ಣನಿಗೆ ಸಾರ್ವಜನಿಕ ಬೈಠಕ್ ಜಸ್ಟ್‍ಮಿಸ್ ಮಾಡಿಸಿಬಿಟ್ಟರಂತೆ!. ಇದನ್ನ ಕೇಳಿದಾಗ ಮೇಲಿನದೆಲ್ಲಾ ನೆನಪಿಗೆ ಬಂತು. ಒಟ್ಟಿನಲ್ಲಿ ಊರೊಗ್ಗಟ್ಟಿಗೆ ಕಾರಣವಾಗಬೇಕಿದ್ದ ಉತ್ಸವವೊಂದು ಊರೊಟ್ಟಿನ ಒಡುಕಿಗೆ ನೇರ ಕಾರಣವಾಗುತ್ತಿರೋದು ಮಾತ್ರ ನಾಚಿಗೆಗೇಡು.

ಕಾಲ ಕಳೆದ ಹಾಗೆ ತಂತ್ರಜ್ಞಾನ, ಸವಲತ್ತು ಹಾಗೂ ಸಂವಹನ ಕೇವಲ ವಿಶ್ವವನ್ನಷ್ಟೆ ಕುಗ್ರಾಮವನ್ನಾಗಿಸುತ್ತಿಲ್ಲ. ಜನರೂ ಸಹ ಮಾನಸಿಕವಾಗಿ ದಿನದಿಂದ ದಿನಕ್ಕೆ ಕುಬ್ಜರಾಗುತ್ತಾ ತಮ್ಮ 'ಸಣ್ಣತನಗಳಿಂದ' ಮರಳಿ ಶಿಲಾಯುಗದ ಹಾದಿಗೆ ಹೊರಳುತ್ತಿದ್ದಾರೆ ಅನ್ನಿಸುತಿದೆ.

11 December 2015

ವಲಿ - ೩೮
ಅಲ್ ತೈಫ್ ಕೋಟೆಯ ಮೇಲೆ ಸತತವಾಗಿ ಲಗ್ಗೆ ಇಟ್ಟರೂ ಸಹ ಅವರನ್ನ ಅಲುಗಾಡಿಸಲಾಗದೆ ಮಹಮದನ ಪಡೆ ಮೆಕ್ಕಾ ಯಾತ್ರೆ ಮುಗಿಸಿ ಮದೀನಾವನ್ನು ಬಂದು ಮುಟ್ಟಿ ಆಗಲೆ ಹತ್ತು ತಿಂಗಳು ಕಳೆದಿತ್ತು. ಆ ಅತೃಪ್ತಿ ಆತನ ಒಳಮನಸಿನಲ್ಲಿ ಆಗಾಗ ಮುಳ್ಳಿನಂತೆ ಚುಚ್ಚುತ್ತಲೆ ಉಳಿದಿತ್ತು. 'ನರಿಯನ್ನು ನರಿಯ ಬಿಲದಲ್ಲಿಯೆ ಇರಲು ಬಿಟ್ಟರೆ ಅದು ಯಾರಿಗೂ ತೊಂದರೆ ಕೊಡಲಾರದು!' ಅನ್ನುವ ಯುದ್ಧನೀತಿಯ ವಿವೇಕವನ್ನು ಮಹಮದ್ ಒಲ್ಲದ ಮನಸ್ಸಿನಿಂದಲೆ ಆಗ ಅಂಗೀಕರಿಸಿ ತುಸು ಕಾಲ ಸುಮ್ಮನಾಗಲು ಒಪ್ಪಿದ್ದ. ಆದರೆ ಆತ ಅವರನ್ನು ಸುಮ್ಮನೆ ಇರಗೊಟ್ಟಿದ್ದರೂ ಸಹ ಅಲ್ ತೈಫಿನ ಸುತ್ತಮುತ್ತಲಿನ ಆತನ ಮತಾವಲಂಭಿ ಮುಸಲ್ಮಾನರು ಆ ನೀತಿಯನ್ನ ಪಾಲಿಸಿರಲಿಲ್ಲ. ಹವಾಜಿನರಂತೂ ಅನಗತ್ಯವಾಗಿ ಅವಕಾಶ ಸಿಕ್ಕಾಗಲೆಲ್ಲ ಅಲ್ ತೈಫಿನವರನ್ನ ಕಾಡಿಸಿ ಪೀಡಿಸಿ ವಿಕೃತ ಆನಂದ ಅನುಭವಿಸುತ್ತಿದ್ದರು. ಅವರ ತೋಟ, ಜಮೀನು ಹಾಗೂ ಇನ್ನಿತರ ಆಸ್ತಿ ಪಾಸ್ತಿಗಳನ್ನ ಬೇಕಂತಲೆ ಹಾಳುಗೆಡವಿ ಉಪದ್ರ ನೀಡುತ್ತಿದ್ದರು.


ಈ ಮಧ್ಯೆ ಎಮನ್ ದೇಶಕ್ಕೆ ಯುದ್ಧ ತಂತ್ರಗಳ ಕಲಿಕೆಗಾಗಿ ಹೋಗಿದ್ದ ಅಲ್ ತೈಫಿನ ಮುಖಂಡರಲೊಬ್ಬನಾಗಿದ್ದ ಓರ್ವಾ ಇಬ್ನ್ ಮಸೂದ್ ಎಂಬಾತ ಅಲ್ಲಿಂದ ತನ್ನ ಮನೆಗೆ ಮರಳುವ ದಾರಿಯಲ್ಲಿ ಮದೀನಕ್ಕೆ ಭೇಟಿ ಕೊಟ್ಟು ಅಲ್ಲಿ ಮಹಮದನನ್ನು ಮುಖತಃ ಭೇಟಿಯಾದ. ಅಲ್ ಹೊಬೈಡಿಯಾದಲ್ಲಿ ಆತ ಈಗಾಗಲೆ ಮುಸಲ್ಮಾನರ ಸಂಪರ್ಕಕ್ಕೆ ಬಂದಿದ್ದ. ಅಲ್ಲಿ ಆತ ಅವರ ಮತಾಚರಣೆಯ ಶಿಸ್ತು, ಧಾರ್ಮಿಕ ನಡುವಳಿಕೆ ಹಾಗೂ ಆಚರಣೆಗಳಿಂದ ಪ್ರಭಾವಿತನೂ ಆಗಿದ್ದ. ಹೀಗಾಗಿ ಮಹಮದನನ್ನು ಭೇಟಿಯಾದ ಆತ ಇಸ್ಲಾಮಿಗೆ ಮತಾಂತರಿತನಾದ. ತಾನು ಅನಂತರ ಅಲ್ ತೈಫಿಗೆ ಹಿಂದಿರುಗಿ ಅಲ್ಲಿನವರನ್ನ ಇಸ್ಲಾಮಿನತ್ತ ಒಲಿಸಿ ಮತಾಂತರ ಮಾಡುವ ಪ್ರಯತ್ನಕ್ಕಿಳಿಯುತ್ತೇನೆ ಎಂದು ತನ್ನ ಮನದಾಸೆಯನ್ನ ಅರುಹಿದ.ಮಹಮದನಿಗೆ ಅಲ್ ತೈಫ್ ಜನರ ಅನಾಗರೀಕ ನಡುವಳಿಕೆಯ ಸ್ಪಷ್ಟ ಪರಿಚಯವಿತ್ತು. ಆವರು ಯಾವುದೆ ಕಾರಣಕ್ಕೂ ಅವರು ಮತಾಂತರವಾಗಲಿಕ್ಕೆ ಒಪ್ಪದೆ ಅಜ್ಞಾನದಿಂದ ಅವನ ಮೇಲೆ ಎಗರಿ ಬೀಳಬಹುದು ಎಂದು ತರ್ಕಿಸಿ ಮಸೂದನಿಗೆ ಮರಳಿ ಮನೆಗೆ ಹೋಗದಂತೆ ಸೂಚಿಸಿದ. ಆದರೆ ತನ್ನವರ ಮೇಲೆ ಅಪಾರವಾದ ಭರವಸೆಯನ್ನು ಇರಿಸಿಕೊಂಡಿದ್ದ ಮಸೂದ್ ಮಾತ್ರ ಇದರಿಂದ ವಿಚಲಿತನಾಗದೆ ಅಲ್ ತೈಫಿನತ್ತ ಪಾದ ಬೆಳೆಸಿದ. ಮನೆಯನ್ನ ಮುಟ್ಟಿದವನೆ ತನ್ನ ಬಂಧು ಬಾಂಧವರಲ್ಲಿ ಆತ ತಾನು ಇಸ್ಲಾಮಿನ ಅನುಯಾಯಿಯಾಗಿ ಬದಲಾದ ವಿಷಯವನ್ನ ಹೇಳಿಕೊಂಡ. ಅವರೆಲ್ಲರೂ ಸಹ ತನ್ನನ್ನು ಅನುಸರಿಸಬೇಕೆಂದು ಆತ ಕರೆ ನೀಡಿದ. ಈ ಘೋಷಣೆಯ ನಂತರ ಬಂಧುಗಳೆಲ್ಲಾ ಚದುರಿ ತಮ್ಮ ತಮ್ಮ ಮನೆಯನ್ನ ಸೇರಿಕೊಂಡರು. ಅವರೆಲ್ಲಾ ತಮ್ಮ ತಮ್ಮೊಳಗೆ ಆಪ್ತ ಸಮಾಲೋಚನೆ ನಡೆಸಿಕೊಂಡರು.ಮರು ಬೆಳಗ್ಯೆ ಉತ್ಸಾಹದಿಂದ ತನ್ನ ಮನೆಯ ಛಾವಣಿಯನ್ನೇರಿದ ಮಸೂದ್ ಅಲ್ಲಾಹೋ ಅಕ್ಬರ್ ಎಂದು ಪ್ರಾರ್ಥನೆಯ ಕರೆಕೊಟ್ಟು ಅವರೆಲ್ಲರನ್ನ ಪ್ರಾರ್ಥನೆಗೆ ಆಹ್ವಾನಿಸಲು ಯತ್ನಿಸುತ್ತಿರುವಾಗ ಎಲ್ಲಾ ದಿಕ್ಕುಗಳಿಂದ ಬಿರು ಬಾಣಗಳ ಪ್ರತಿಕ್ರಿಯೆ ಅವನಿಗೆ ಸಿಕ್ಕಿತು! ಹೀಗೆ ಸಿಕ್ಕ ಪ್ರತ್ಯುತ್ತರದಿಂದ ಘಾಸಿಯಾದ ಆತ ನೆತ್ತರು ಸುರಿಸುತ್ತಾ ನೆಲಕ್ಕುರುಳಿ ಅಸು ನೀಗಿದ. ಆತನ ಮಿತ್ರರು ಪ್ರಾಥಮಿಕ ಉಪಚಾರ ಮಾಡಿದ್ದೂ ಸಹ ಉಪಯೋಗಕ್ಕೆ ಬರಲಿಲ್ಲ. ಆದರೆ ಸಾಯುವ ಮುನ್ನ ಆತ ಹೊನೈನ್'ನ ಯುದ್ಧದಲ್ಲಿ ಮಡಿದ ಮುಸಲ್ಮಾನರ ಗೋರಿಗಳ ಪಕ್ಕದಲ್ಲಿ ತನ್ನನ್ನೂ ಸಹ ಹೂಳಬೇಕೆಂದು ಕೋರಿಕೊಂಡ. ಈ ಸುದ್ದಿ ಮಹಮದನ ಕಿವಿಗೆ ಬೀಳುತ್ತಲೆ ಆತ ಕ್ಷುದ್ರನಾದ, ಮಸೂದನನ್ನು ಆತ ಹುತಾತ್ಮನೆಂದು ಕೊಂಡಾಡಿದ.


ಮಸೂದನ ಬಲಿದಾನ ಮಹಮದನನ್ನು ಅಲ್ ತೈಫರ ಮೇಲೆ ಇನ್ನಷ್ಟು ಕಠಿಣನಾಗಿ ವರ್ತಿಸುವಂತೆ ಮಾಡಿತು. ಅಲ್ ತೈಫರೂ ಸಹ ಇದನ್ನೆಲ್ಲಾ ಪರಿಗಣನೆಗೆ ಆರಂಭದಲ್ಲಿ ತೆಗೆದುಕೊಳ್ಳದಿದ್ದರೂ ಸಹ ಮುಸಲ್ಮಾನರ ನಿರಂತರ ಪೀಡೆ ಅವರನ್ನ ಕಂಗಾಲು ಮಾಡತೊಡಗಿತು. ಬೇರೆ ಉಪಾಯ ಕಾಣದೆ ಅವರು ಒಂದು ಸಂಧಾನ ಸೂತ್ರಕ್ಕೆ ಒಳಪಡುವ ಉದ್ದೇಶದಿಂದ ತಮ್ಮ ಪ್ರಮುಖ ಆರು ಮುಖಂಡರ ನೇತೃತ್ವದಲ್ಲಿ ಪ್ರತ್ಯೇಕ ಇಪ್ಪತ್ತು ಪ್ರತಿನಿಧಿಗಳ ಸಂಧಾನದ ಸಮಾಲೋಚಕ ತಂಡವನ್ನು ಮಹಮದನ ಬಳಿ ಕಳುಹಿಸಿಕೊಟ್ಟರು. ಮಹಮದ್ ಅವರನ್ನ ಆದರದಿಂದಲೆ ಬರ ಮಾಡಿಕೊಂಡು ತನ್ನ ಮಸೀದಿಯ ಪಕ್ಕದಲ್ಲಿಯೆ ಅವರಿಗೆ ಬಿಡಾರ ಕಲ್ಪಿಸಿ ಉಳಿಯುವ ವ್ಯವಸ್ಥೆ ಮಾಡಿದ.ದಿನವಿಡಿ ಅವರೆಲ್ಲರಿಗೆ ತನ್ನ ಧರ್ಮೋಪದೇಶ ನೀಡಿದ. ಪ್ರಮುಖವಾಗಿ ಅದರಲ್ಲಿ ಮೂರ್ತಿ ಪೂಜೆಗೆ ನಿಷೇಧವಿತ್ತು. ಆದರೆ ಅಲ್ ತೈಫ್ ಜನರು ಯಾವುದೆ ಕಾರಣಕ್ಕೂ ಈ ಹಿಂದಿನ ತಮ್ಮ ದೇವತೆಯನ್ನ ಬಿಟ್ಟುಕೊಡಲು ರಾಜಿಯಾಗಲಿಲ್ಲ. ತಮ್ಮ ಆರಾಧನೆಯ ಶಕ್ತಿ ದೇವತೆ ಸನಾತನರ ಕಾಳಿಯನ್ನ ಹೋಲುವ ಅಲ್ ಲಾಟಳ ವಿಗ್ರಹವನ್ನ ನಾಶ ಪಡಿಸಲಿಕ್ಕೆ ಸುತರಂ ಒಪ್ಪಲಿಲ್ಲ. ಇಸ್ಲಾಮನ್ನ ಸ್ವೀಕರಿಸಿದರೂ ಸಹ ಅಲ್ ಲಾಟಳನ್ನ ಒಡೆದು ವಿಛಿದ್ರ ಗೊಳಿಸುವುದು ಅಸಾಧ್ಯ ಎಂದವರು ಸ್ಪಷ್ಟ ಪಡಿಸಿದರು. ಇದರಿಂದ ವಿಚಲಿತನಾದ ಮಹಮದ್ ತನಗೆ ವಿಗ್ರಹಾರಾಧನೆಯ ಬಗೆಗಿರುವ ಅಸಹನೆ, ಅಪನಂಬಿಕೆ ಹಾಗೂ ಅಸಮಾಧಾನವನ್ನು ಅವರಿಗೆ ಮನದಟ್ಟು ಮಾಡಿಕೊಡಲು ಹೆಣಗಿದ. ಏಕ ದೈವದ ಆರಾಧನೆಗೆ ಒತ್ತು ಕೊಡುವ ಇಸ್ಲಾಮಿನಲ್ಲಿ ಮೂರ್ತಿ ಪೂಜೆಯನ್ನ ಪ್ರೋತ್ಸಾಹಿಸಲಾಗದು ಎಂದಾತ ನುಡಿದ.
ತಾನು ಸಾರುವ ತತ್ವಗಳು ವಿಗ್ರಹಾರಾಧನೆಗೆ ಪೂರಕವಾಗಿಲ್ಲ ಎಂದಾತ ಅವರೆಲ್ಲರಿಗೆ ತಿಳಿಯ ಪಡಿಸಿದ. ಇಸ್ಲಾಮ್ ಹಾಗೂ ವಿಗ್ರಹಾರಾಧನೆ ಒಟ್ಟೊಟ್ಟಿಗೆ ಸಾಗಲಾರದು ಎಂದೂ ಸಹ ಆತ ಹೇಳಿಕೆ ನೀಡಿದ. ಕಾಲಾನುಕ್ರಮದಲ್ಲಿ ಅದನ್ನ ಪರಗಣಿಸುವ ಹಾಗೂ ವಿಗ್ರಹ ನಾಶಕ್ಕೆ ಸೂಕ್ತ ಸಮಯಾವಕಾಶ ಕೋರುವ ಅವರ ಮನವಿಗಳನ್ನೆಲ್ಲಾ ಆತ ತಿರಸ್ಕಾರ ಸೂಚಿಸಿ ಈ ಕೂಡಲೆ ಅದನ್ನ ಒಡೆದು ಹಾಕಲೇಬೇಕೆಂದು ಪಟ್ಟು ಹಿಡಿದ.


ಆ ಕಾರ್ಯ ಮುಗಿದ ನಂತರ ಇಸ್ಲಾಮಿಗೆ ಒಳಪಟ್ಟ ಎಲ್ಲರೂ ನಿತ್ಯ ಅಲ್ಲಾನನ್ನು ಪ್ರಾರ್ಥಿಸಬೇಕು. ಪ್ರಾರ್ಥನೆಯ ಆಚರಣೆ ಇಲ್ಲದ ಇಸ್ಲಾಮಿಗೆ ಬೆಲೆ ಇಲ್ಲ ಎಂದಾತ ನುಡಿದ. ವಿಧಿ ಇಲ್ಲದೆ ನೆಮ್ಮದಿಗೆ ಕಾದಿದ್ದ ಅಲ್ ತೈಫಿನ ಮಂದಿ ಸಹ ಇದಕ್ಕೆ ಅನಿವಾರ್ಯವಾಗಿ ಸಮ್ಮತಿ ಸೂಚಿಸಿದರು. ಆದರೆ ಅವರೂ ಕೂಡ ಒಂದು ನಿಬಂಧನೆಯನ್ನ ಒಡ್ದಿದರು. ಅಲ್ ತೈಫ್ ಕಾಡಿನ ಪರಿಸರದಲ್ಲಿನ ಮೃಗಗಳನ್ನ ಮುಂದೆ ಬೇಟೆಯಾಡುವಂತಿಲ್ಲ ಎಂದವರು ಮನವಿ ಮಾಡಿಕೊಂಡದ್ದಕ್ಕೆ ಮಹಮದ್ ಸಮ್ಮತಿಸಿದ. ಆ ಬಗ್ಗೆ ಒಂದು ಸಾರ್ವಜನಿಕ ಶಾಸನ ಪತ್ರವನ್ನಾತ ಹೊರಡಿಸಿದ. ಅದರಲ್ಲಿ ಅಲ್ ತೈಫ್ ಕಾಡನ್ನ ಸುರಕ್ಷಿತಾರಣ್ಯವೆಂದು ಘೋಷಿಸಿ ಯಾರಾದರೂ ಅಲ್ಲಿನ ಮೃಗ ಖಗ ಹಾಗೂ ವೃಕ್ಷಗಳನ್ನ ನಾಶ ಪಡಿಸಿದ್ದು ಕಂಡು ಬಂದರೆ ಅಂತವರನ್ನ ಮುಲಾಜಿಲ್ಲದೆ ಹಿಡಿದು ಹಿಂಸಿಸಿ ಅವರ ಬಟ್ಟೆ ಕಳಚಿ ಬಿಡಲಾಗುವುದು ಎಂದೆನ್ನಲಾಗಿತ್ತು. ಅದಕ್ಕೂ ಮೀರಿ ಮತ್ತೆಯೂ ಮುಂದುವರೆದರೆ ಅಂತವರನ್ನ ಮಹಮದನ ಮುಂದೆ ಹಿಡಿದೆಳೆತಂದು ಆತ ಸೂಚಿಸುವ ಶಿಕ್ಷೆಗಳಿಗೆ ಒಳಪಡಿಸಲಾಗುವುದು ಎಂದು ಎಚ್ಚರಿಸಲಾಗಿತ್ತು ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ ಕೃತಿ 'ಲೈಫ್ ಆಫ್ ಮಹಮದ್'ನ ಪುಟ ಸಂಖ್ಯೆ ೪೫೧ರಲ್ಲಿ.ಅಬು ಸಫ್ಯಾನ್ ಹಾಗೂ ಅಲ್ ಮೊಘಿರಾರನ್ನು ಪ್ರತ್ಯೇಕವಾಗಿ ಅಲ್ ಲಾಟಳ ವಿಗ್ರಹವನ್ನ ಹಾಳುಗೆಡವಲೆಂದೆ ಅವರೊಂದಿಗೆ ಕಳುಹಿಸಿಕೊಡಲಾಯಿತು. ಗುಡಿಯಲ್ಲಿ ಪ್ರಾರ್ಥಿಸುತ್ತಿದ್ದವರ ಹತಾಶ ರಕ್ಷಣಾ ಪ್ರಯತ್ನ ಹಾಗೂ ಕಡು ವಿರೋಧವನ್ನ ಬರ್ಬರವಾಗಿ ಹತ್ತಿಕ್ಕಿ ಅವರಿಬ್ಬರೂ ಮಚ್ಚು, ಗುದ್ದಲಿ ಹಿಡಿದು ಅಲ್ಲಿನ ಮೂರ್ತಿಯನ್ನ ಬುಡಸಹಿತ ಛಿದ್ರಗೊಳಿಸಿ ಒಡೆದು ಹಾಕಿದರು. ಈ ಗುಡಿಯ ನಾಶದೊಂದಿಗೆ ಮಹಮದನ ವಿರುದ್ಧ ಸೆಣೆಸುತ್ತಿದ್ದ ಅ ಕೊನೆಯ ಸಂಸ್ಥಾನ ಅಲ್ ತೈಫ್ ಕೂಡಾ ತನ್ನ ಸ್ವಾತಂತ್ರ್ಯವನ್ನ ಕಳೆದುಕೊಂಡು ಮಹಮದನ ಕಪಿಮುಷ್ಠಿಯಲ್ಲಿ ಚಿರಬಂಧಿಯಾಯಿತು.


ಕ್ರಿಸ್ತ ಶಕ ೬೩೧ರಲ್ಲಿ ವಾರ್ಷಿಕ ಮೆಕ್ಕಾ ಯಾತ್ರೆಗೆ ತಾನು ತೆರಳದೆ ಮಾವ ಅಬು ಬಕರನ್ನು ಮೂರು ಸಾವಿರ ಯಾತ್ರಿಕರೊಂದಿಗೆ ಮಹಮದ್ ಕಳುಹಿಸಿಕೊಟ್ಟ. ಅದಕ್ಕಾತ ಕೊಟ್ಟ ಕಾರಣ ಕುತೂಹಲಕರವಾಗಿತ್ತು. ಈಗಲೂ ಅಲ್ಲಿ ವಿಧರ್ಮೀಯರು ಬಂದು ಹರಕೆ ತೀರಿಸುತ್ತಿದ್ದಾರೆ. ಯಾವತ್ತು ಕೇವಲ ಮುಸಲ್ಮಾನರು ಮಾತ್ರ ಅಲ್ಲಿಗೆ ಬರುವಂತಾಗಿ ಉಳಿದವರನ್ನೆಲ್ಲಾ ದೂರ ತಳ್ಳಲಾಗುತ್ತದೆಯೋ ಅಂದು ತಾನು ಆ ಸ್ಥಳದ ಪಾವಿತ್ರ್ಯವನ್ನು ಒಪ್ಪಿಕೊಳ್ಳುತ್ತೇನೆ ಎಂದಾತ ಹೇಳಿಕೊಂಡ. ಅದರ ಸಂಬಂಧ ಅಲಿಯ ಕೈಗೆ ಒಂದು ಆಜ್ಞಾಪತ್ರವನ್ನ ದಾಟಿಸಿ ಅದನ್ನ ಯಾತ್ರೆಯ ಮಧ್ಯದಲ್ಲಿದ್ದ ಮಾವ ಅಬು ಬಕರನಿಗೆ ಮುಟ್ಟಿಸುವಂತೆ ಹೆಳಿದ. ಆ ಬಿಡುಗಡೆ ಪತ್ರ ಆತನಿಗೆ ಸಿಕ್ಕಿದ ಖುರ್ಹಾನಿನ ಸುರಾ ೯/೧೨೯ರ ಸಾರಾಂಶವಾಗಿದೆ. ಆಸಕ್ತರು ಸುರಾ ಸಂಖ್ಯೆ ೫/೨೮ - ೯/೧ನ್ನು ಸಹ ಈ ನಿಟ್ಟಿನಲ್ಲಿ ಗಮನಿಸಬಹುದು.


ಅದರನುಸಾರ ವಿಧರ್ಮೀಯರ ಮೇಲಿನ ಯಾವುದೆ ರಕ್ಷಣೆಯ ಹೊಣೆಗಾರಿಕೆಯಿಂದ ಆತನನ್ನು ಹಾಗೂ ಆತನ ಸ್ವ ಘೋಷಿತ ಪ್ರವಾದಿತ್ವವನ್ನು ಮುಕ್ತ ಮಾಡಲಾಗಿತ್ತು! ಅಂದರೆ ಸರಳ ಮಾತುಗಳಲ್ಲಿ ಮುಸಲ್ಮಾನನಾದವನು ಮೆಕ್ಕಾದಲ್ಲಿ ಮುಸಲ್ಮಾನನಲ್ಲದವನ ಕೊಲೆಯನ್ನ ಮಾಡಲು ಪರೋಕ್ಷವಾಗಿ ಮಹಮದ್ ಕುಮ್ಮಕ್ಕಿನ ಕರೆಕೊಟ್ಟಿದ್ದ. ಯಾತ್ರೆಯ ದಿನದಂದು ವಿಧರ್ಮೀಯರು ಪಶ್ಚಾತಾಪ ಪಟ್ಟರೆ ಅವರಿಗೆ ಒಳಿತಾಗುತ್ತದೆ. ಇಲ್ಲದೆ ಹೋದರೆ ಅವರಿಗೆಲ್ಲಾ ಘೋರ ಶಿಕ್ಷೆ ಕಾದಿದೆ. ಅಂತವರನ್ನೆಲ್ಲ ಮುಂದಿನ ನಾಲ್ಕು ತಿಂಗಳು ಸಮಯಾವಕಾಶ ನೀಡಿ ಹಾಗೆಯೆ ಬಿಡಲಾಗುವುದು. ಅಷ್ಟರೊಳಗೆ ಅವರು ಇಸ್ಲಾಮನ್ನು ಒಪ್ಪಿಕೊಂಡು ಮುಸಲ್ಮಾನರಾಗಬೇಕು.ಅನಂತರವೂ ಅವರು ಅವಿಶ್ವಾಸಿಗಳಾಗಿಯೆ ಉಳಿದರೆ ಅವರ ವಿರುದ್ಧ ಹೋರಾಡಿ ಅಂತಹ ಅಧರ್ಮಿಗಳನ್ನ ಸೆರೆ ಹಿಡಿಯಲಾಗುವುದು. ಆ ಮೇಲೆ ಕಪ್ಪ ಪಡೆದು ಬಿಡುಗಡೆ ಮಾಡುವುದೋ, ಇಲ್ಲವೆ ಕೊಂದು ಕೊನೆಗಾಣಿಸುವುದೋ ಎಂಬುದನ್ನ ಸಂದರ್ಭಾನುಸಾರ ನಿರ್ಧರಿಸಲಾಗುತ್ತದೆ. ಅಲ್ಲದೆ ವಿಧರ್ಮೀಯರು ಸ್ವಚ್ಛರಲ್ಲದ ಕಾರಣ ಅವರು ಮೆಕ್ಕಾವನ್ನು ಪ್ರವೇಶಿಸಿ ಅಲ್ಲಿನ ಪರಿಸರವನ್ನ ಕಲುಷಿತಗೊಳಿಸುವಂತಿಲ್ಲ ಎಂದಾತ ಸಾರಿದ. ಈ ಅಸಂಬದ್ಧ ಹೇಳಿಕೆ ಮುಸಲ್ಮಾನರನ್ನೂ ಸಹ ಇನ್ನಿತರರಿಗಿಂತ ಅತಿ ಅತಿ ಕೊಳಕರೆಂದೆ ತೀರ್ಮಾನಿಸಿರುವ ಇನ್ನಿತರ ಬುಡಕಟ್ಟಿನವರ ವಿನೋದದ ನಡುವೆ ಹಾಸ್ಯಾಸ್ಪದ ಪ್ರಹಸನವಾಗಿ ಚಾಲ್ತಿಗೂ ಬಂದಿತು.ಅಲಿ ಇದನ್ನ ಮೀನಾದಲ್ಲಿ ಯಾತ್ರೆಯ ಅಂತಿಮದಿನ ಸೈತಾನನಿಗೆ ಕಲ್ಲೆಸೆಯುವ ಸ್ಥಳದಲ್ಲಿ ನೆರೆದಿದ್ದ ಯಾತ್ರಿಕರನ್ನ ಉದ್ದೇಶಿಸಿ ದೊಡ್ದ ಗಂಟಲಿನಲ್ಲಿ ಓದಿ ಹೇಳಿದ. ಹಾಗೆ ಆತ ಉದುರಿಸಿದ ಅಣಿಮುತ್ತುಗಳನ್ನ ಶಾಂತವಾಗಿ ಆಲೈಸಿದ ಯಾತ್ರಿಕರು ಅದನ್ನ ತಮ್ಮ ತಮ್ಮ ಊರುಗಳಿಗೆ ಹಿಂದಿರುಗಿದ ನಂತ ಅರೇಬಿಯಾದ ಉದ್ದಗಲಕ್ಕೂ ಪಸರಿಸಿದರು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೬೦ರಲ್ಲಿ.ಇದರ ಫಲಿತಾಂಶ ಮುಂದೆ ನಿರೀಕ್ಷೆಯಂತೆಯೆ ಹಿಂಸಾತ್ಮಕವಾಗಿದ್ದಿತು. ಎಲ್ಲೆಲ್ಲಿ ಆ ತನಕ ಇಸ್ಲಾಮನ್ನ ವಿರೋಧಿಸಲಾಗುತ್ತಿತ್ತೋ ಅಲ್ಲಿಗೆಲ್ಲಾ ಮಹಮದನ ಮತೋನ್ಮತ್ತ ಮುಸಲ್ಮಾನರ ರಕ್ಕಸ ಪಡೆ ನುಗ್ಗಿ ಅವರನ್ನೆಲ್ಲಾ ಸದೆ ಬಡಿಯಿತು. ಅಂತಹ ಸಂಸ್ಥಾನಗಳ ವಿರುದ್ಧ ಕೇವಲ ಧಾರ್ಮಿಕ ಕಾರಣಕ್ಕೆ ಕ್ರೂರವಾದ ಯುದ್ಧಾಚರಣೆಯನ್ನ ನಡೆಸಿ ಹಿಂಸೆಯ ಉತ್ತುಂಗದಲ್ಲಿ ವಿರೋಧಿಸಿ ತಮ್ಮ ಮಾತೃಧರ್ಮ ಉಳಿಸಿಕೊಳ್ಳಲು ಹೆಣಗಾಡಿದ ನಿಶ್ಪಾಪಿಗಳನ್ನ ಮಣಿಸಲಾಯಿತು. ಈ ಮೂಲಕ ಅರೇಬಿಯಾದ ಪ್ರತಿಯೊಂದು ಕ್ಷೇತ್ರ, ಸಂಸ್ಥಾನ ಹಾಗೂ ಪ್ರಾಂತ್ಯದಲ್ಲಿ ಇಸ್ಲಾಮ್ ಒತ್ತಾಯಪೂರ್ವಕವಾಗಿ ಲಗ್ಗೆ ಇಟ್ಟು ಪಸರಿಸಿತು ಹಾಗೂ ಬಲವಾಗಿ ಆರಂಭದ ದಿನಗಳಲ್ಲಿಯೆ ಬೇರೂರಿ ಮರಳುಗಾಡಿನ ಜಾಲಿಯಂತೆ ವಿಫುಲವಾಗಿ ಚಿಗುರಿ ಬೆಳೆದು ನಿಂತಿತು.( ಇನ್ನೂ ಇದೆ.)

28 November 2015

ವಲಿ - ೩೭
ಈಗ ಅರೇಬಿಯಾದ ಧಾರ್ಮಿಕ ನಾಯಕತ್ವದ ಜೊತೆಗೆ ಸೈನಿಕ ಬಲದ ಮುಖ್ಯಸ್ಥನಾಗಿಯೂ ಮಹಮದ್ ಹೊರ ಹೊಮ್ಮಿದ್ದ. ಆತನ ಪ್ರಬಲ ವಿರೋಧಿಗಳಾಗಿದ್ದ ಖುರೈಷಿಗಳೂ ಸಹ ಈಗ ಅವನ ಅಡಿಯಾಳುಗಳಾಗಿ ಆತನ ಪಾಳಯದ ಬೆಂಬಲಕ್ಕೆ ಬಂದ ಕಾರಣದಿಂದ ಆತನಿಗೆ ಎದುರಾಗಿ ವಾದಿಸುವ ಅಥವಾ ಹೋರಾಡುವ ಸ್ಥೈರ್ಯವುಳ್ಳ ಯಾರೊಬ್ಬರೂ ಸಹ ಆರನೆ ಶತಮಾನದ ಅರೇಬಿಯಾ ಪ್ರಸ್ಥಭೂಮಿಯಲ್ಲಿ ಇರಲೆ ಇಲ್ಲ. ಸಹಜವಾಗಿ ಆತನ ಪ್ರತಿಷ್ಠೆ ಮರುಭೂಮಿಯಾಚೆಗೂ ಹರಡಿ ಮದೀನಾದಲ್ಲಿ ಅನೇಕ ಹೊರ ರಾಜ್ಯಗಳ ರಾಯಭಾರ ಕಛೇರಿಗಳೂ ಸಹ ಆರಂಭಗೊಂಡವು. ಹಾಗೆ ರಾಯಭಾರ ಹೊತ್ತು ಬಂದವರನ್ನ ಮಹಮದ್ ಯಥೋಚಿತವಾಗಿ ಸತ್ಕರಿಸಿದ. ಸ್ವದೇಶಕ್ಕೆ ಅವರು ಹಿಂದಿರುಗುವಾಗ ಅವರ ಅಂತಸ್ತಿಗೆ ತಕ್ಕಂತಹ ಉಡುಗೊರೆಗಳೊಂದಿಗೆ ಬೀಳ್ಕೊಟ್ಟ. ಅರೇಬಿಯಾದ ಶರಣಾಗತ ಬುಡಕಟ್ಟುಗಳಲ್ಲಿ ಅನೇಕ ಗುಂಪುಗಳಿಗೆ ಆಂತರಿಕ ಸ್ವಾತಂತ್ರ್ಯವನ್ನೂ ಸಹ ನೀಡಿದ. ಅವರಿಂದ ಕಾಲಾಕಾಲಕ್ಕೆ ಕಪ್ಪಕಾಣಿಕೆಗಳನ್ನ ನಿಯಮಿತವಾಗಿ ಒಪ್ಪಿಸಿಕೊಳ್ಳುತ್ತಾ ಗೌರವದಿಂದಲೆ ಆ ಜನಾಂಗಗಳನ್ನೂ ಸಹ ನಡೆಸಿಕೊಂಡ.


ಕ್ರಿಸ್ತಶಕ ಆರುನೂರಾ ಮೂವತ್ತರ ಅಕ್ಟೋಬರ್ ತಿಂಗಳಿನಲ್ಲಿ ತನ್ನ ಸಾಮ್ರಾಜ್ಯಶಾಹಿತ್ವವನ್ನ ಇನ್ನಷ್ಟು ಹಿಗ್ಗಿಸಲು ಆತ ಒಂದು ಪ್ರಬಲ ದಂಡನ್ನ ಸಿರಿಯಾದ ಗಡಿ ಪ್ರದೇಶಕ್ಕೆ ಕೊಂಡೊಯ್ಯಲು ನಿರ್ಧರಿಸಿದ. ಅಲ್ಲಿ ಕೆಲವು ಬುಡಕಟ್ಟುಗಳು ಹೆಚ್ಚು ಪ್ರಬಲವಾಗಿದ್ದುದರಿಂದ ಅವರನ್ನು ಹತ್ತಿಕ್ಕುವ ಉದ್ದೇಶ ಈ ದಂಡಿನ ಧಾಳಿಯ ಹಿಂದಿತ್ತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೪೦ರಲ್ಲಿ. ಆ ಪ್ರದೇಶಗಳೆಲ್ಲಾ ರೋಮನ್ ಸಾಮ್ರಾಜ್ಯದ ಅವಿಭಾಜ್ಯ ಅಂಗಗಳಾಗಿದ್ದು ತನ್ನ ಗಡಿ ಮೇರೆಯ ಎಲ್ಲಾ ನಾಯಕರಿಗೂ ಮಹಮದನ ದಂಡಯಾತ್ರೆಯ ಬಾತ್ಮಿ ತಿಳಿದ ರೋಮನ್ ಚಕ್ರವರ್ತಿ ಎಚ್ಚರಿಕೆಯ ಸಂದೇಶ ರವಾನಿಸಿದ. ಸೂಕ್ತ ರಕ್ಷಣಾ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲು ಅದರಲ್ಲಿ ಸೂಚಿಸಲಾಗಿತ್ತು. ಮಹಮದ್ ಕೂಡಾ ಈ ಬಾರಿ ಅದ್ವಿತೀಯವಾದ ಸಂಖ್ಯೆಯಲ್ಲಿಯೆ ಸೈನ್ಯವನ್ನು ಜಮಾಯಿಸಲು ನಿರ್ಧರಿಸಿದ್ದ. ಹೀಗಾಗಿ ಪಡೆಯಲ್ಲಿ ಯೋಧರಾಗಿ ಶಾಮೀಲಾಗಲು ತನ್ನ ಎಲ್ಲಾ ಹಿತೈಶಿಗಳಿಗೆ, ಕುಲ ಬಾಂಧವರಿಗೆ, ಬೆಂಬಲಿತ ಬುಡಕಟ್ಟುಗಳ ಮುಖಂಡರಿಗೆ ಹಾಗೂ ತನ್ನ ಅಧೀನದಲ್ಲಿದ್ದ ಎಲ್ಲಾ ಪ್ರದೇಶಗಳ ಮುಖಂಡರುಗಳಿಗೆ ಮಹಮದ್ ಆಜ್ಞಾಪಿಸಿದ.


ಎಲ್ಲಾ ಕಡೆಗಳಿಂದ ಸೂಕ್ತ ಪ್ರತಿಸ್ಪಂದನೆ ಬಂದರೂ ಸಹ ಮದೀನಾದ ಪ್ರಜೆಗಳಿಂದ ಹಾಗೂ ಬೆದಾವಿನರಿಂದ ಮಾತ್ರ ನಿರಾಶಾದಾಯಕ ಪ್ರತ್ಯುತ್ತರ ಬಂದಿತು. ಅವರಿಬ್ಬರೂ ಅವನ ಯುದ್ಧೋತ್ಸಾಹದ ಕರೆಗೆ ಕೂಡಲೆ ಪ್ರತಿಸ್ಪಂದಿಸಲಿಲ್ಲ. ಸಿರಿಯಾದ ಗಡಿ ಮದೀನಾದಿಂದ ಬಹು ದೂರವಿದ್ದು ಬಿಸಿಲಝಳವನ್ನು ಸಹಿಸಲು ಅವರಲ್ಲಿ ಯಾರೂ ತಯ್ಯಾರಿಲ್ಲದಿದ್ದುದೆ ಇದಕ್ಕೆ ಪ್ರಮುಖ ಕಾರಣವಾಗಿತ್ತು. ಮಹಮದನಿಗೆ ಇದರಿಂದ ಮುಖಭಂಗವಾದರೂ ಆತ ಮದೀನಾದ ಪ್ರಜೆಗಳ ಮೇಲೆ ನಿರಾಶೆಯನ್ನ ವ್ಯಕ್ತ ಪಡಿಸುವ ಸ್ಥಿತಿಯಲ್ಲಿರಲಿಲ್ಲ. ಎಷ್ಟೆಂದರೂ ಅವರು ತನಗೂ, ತನ್ನ ಆರಂಭಿಕ ಅನುಚರರಿಗೂ ಕಷ್ಟಕಾಲದಲ್ಲಿ ಅನ್ನ ಬಟ್ಟೆ ಕೊಟ್ಟ ಉದಾರಿ ಆಶ್ರಯದಾತರಾಗಿದ್ದರು. ಆದರೆ ಬೆದಾವಿನರ ಬಗ್ಗೆ ಮಾತ್ರ ಅಂತಹ ಯಾವುದೆ ಮುಲಾಜನ್ನ ಆತ ಇಟ್ಟುಕೊಳ್ಳಲಿಲ್ಲ. ಮಹಮದನ ಇನ್ನಿತರ ಅನುಯಾಯಿಗಳು ಉತ್ಸಾಹದಿಂದಲೆ ಮಹಮದನ ಈ ದಂಡಯಾತ್ರೆಗೆ ಬೆಂಬಲ ಸೂಚಿಸಿ ತನು ಮನ ಧನದಿಂದ ಅತನ ಕರೆಗೆ ಸ್ಪಂದಿಸಿದರು.ಮದೀನಾ ನಗರದ ಹೊರ ಭಾಗದಲ್ಲಿ ಸೈನ್ಯವನ್ನು ಜಮಾಯಿಸಲಾಯಿತು. ಮಹಮದನ ಮಾವ ಅಬು ಬಕರನನ್ನು ದಂಡಿನ ಪ್ರಾರ್ಥನಾ ವಿಧಿಗಳನ್ನ ನಿರ್ವಹಿಸಲು ನೇಮಿಸಲಾಯಿತು. ಮಹಮದನ ಅಳಿಯ ಅಲಿಯನ್ನು ಮದೀನಾದಲ್ಲಿಯೆ ಉಳಿಸಿ ಕುಟುಂಬದ ರಕ್ಷಣೆಯ ಹೊಣೆಯನ್ನ ಅವನ ಹೆಗಲಿಗೆ ಹೊರೆಸಲಾಯಿತು. ಜಮಾಯಿಸಿದ್ದ ಸೈನ್ಯದ ಅಂದಾಜು ಸಂಖ್ಯೆ ಮೂವತ್ತು ಸಾವಿರಕ್ಕೂ ಅಧಿಕವಿದ್ದು ಅರೇಬಿಯಾದ ಇತಿಹಾಸದಲ್ಲಿಯೆ ಅಷ್ಟು ಅಪಾರ ಪ್ರಮಾಣದ ಸೈನ್ಯ ಎಂದೂ ನೆರೆದಿರಲಿಲ್ಲ ಅನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೪೩ರಲ್ಲಿ. ಈ ಬಲಿಷ್ಠ ದಂಡು ಶಸ್ತ್ರ ಸನ್ನದವಾಗಿ ಸಿರಿಯಾದತ್ತ ಹೊರಟಿತು. ದಾರಿ ಮಧ್ಯೆ ಅಲ್ ಹಿಜ್ರ್ ಕಣಿವೆಯಲ್ಲಿ ಅದು ತಂಗಿತು. ಅಲ್ಲಿ ನೀರಿನ ಬಾವಿಗಳಿಗೆ ಕೊರತೆ ಇಲ್ಲದಿದ್ದರೂ ಆ ತನಕ ಶತ್ರು ಪಾಳಯದ ವಶದಲ್ಲಿದ್ದ ಅಲ್ಲಿನ ಬಾವಿಗಳ ನೀರಿಗೆ ವಿಷ ಬೆರೆಸಿರಬಹುದು ಎನ್ನುವ ಊಹಾಪೋಹದ ಗಾಳಿಸುದ್ದಿ ಭಯಂಕರವಾಗಿ ಹರಡಿ ಅವರ್ಯಾರೂ ಆ ನೀರನ್ನು ಉಪಯೋಗಿಸುವ ಗೋಜಿಗೆ ಹೋಗದೆ ಅತಿ ಸಂಕಷ್ಟಕ್ಕೆ ಒಳಗಾದರು. ಆದರೆ ಅದೃಷ್ಟವಾಶಾತ್ ಆ ರಾತ್ರಿ ಉತ್ತಮ ಮಳೆಯಾಗಿ ಅವರೆಲ್ಲರ ನೀರಿನ ಅವಶ್ಯಕತೆ ಪೂರೈಸಿತು. ಮಹಮದನ ಪ್ರಾರ್ಥನೆಗೆ ಓಗೊಟ್ತಟ್ಟ ದೈವ ಕೃಪೆ ತೋರಿ ಮಳೆ ಬರಿಸಿದ್ದರಿಂದಲೆ ಈ ಚಮತ್ಕಾರವಾಯಿತು ಅನ್ನುವ ನಂಬಿಕೆ ಸೈನ್ಯದಲ್ಲಿ ಆಗ ಹುಟ್ಟಿತು.ಅಲ್ಲಿಂದ ಮುಂದೆ ಸಾಗಿದ ದಂಡು ತೆಬೂಕ್ ಎನ್ನುವ ಇನ್ನೊಂದು ಭಾಗದಲ್ಲಿ ಬೀಡು ಬಿಟ್ಟಿತು. ಅಲ್ಲಿ ವೃಕ್ಷ ಸಂಪತ್ತು ಹಾಗೂ ಜಲ ಮೂಲದ ಆಸರೆಗಳು ಅಪಾರವಾಗಿದ್ದು ಅವರಿಗೆ ಅಲ್ಲಿನ ವಾತಾವರಣ ನೆಮ್ಮದಿ ತಂದಿತು. ಸೈನ್ಯ ಬೀಡು ಬಿಡಲು ಅದು ಪ್ರಶಸ್ತ ಸ್ಥಳವಾಗಿತ್ತು. ತನ್ನ ಬೇಹು ಪಡೆ ರೋಮನ್ ಚಕ್ರವರ್ತಿಯ ಪ್ರತ್ಯರ್ಥದ ಸುದ್ದಿ ಸುಳ್ಳು ಅದೆಲ್ಲಾ ಊಹಾಪೋಹ ಎನ್ನುವ ಖಚಿತ ಮಾಹಿತಿಯನ್ನ ತಂದು ಮುಟ್ಟಿಸಿದಾಗ ಮಹಮದ್ ನೆಮ್ಮದಿಯ ನಿಟ್ಟುಸಿರು ಬಿಟ್ಟ. ಹತ್ತಿರದಲ್ಲೆ ಇದ್ದ ಅಲ್ ದೂಮಾ ಪ್ರದೇಶದ ಮೇಲೆ ಆರಂಭಿಕ ಧಾಳಿಯನ್ನ ಸಂಘಟಿಸಲಾಯಿತು. ಖಲೀದ್ ಯಶಸ್ವಿಯಾಗಿ ತನ್ನ ಪಡೆಯೊಂದಿಗೆ ಆ ಪ್ರಬಲ ಸಂಸ್ಥಾನವನ್ನು ಮಣಿಸಿ ಮರಳಿ ಬಂದ. ಸುತ್ತಲಿನ ಯಹೂದಿ ಹಾಗೂ ಕ್ರೈಸ್ತ ಸಂಸ್ಥಾನಗಳಲ್ಲಿ ಹಲವರನ್ನು ಸಾಮಂತರನ್ನಾಗಿಸಿ ಅಪಾರ ಕಪ್ಪ ಕಾಣಿಕೆಗಳನ್ನು ಅವರಿಂದ ಪಡೆದು ಅದೆ ವರ್ಷದ ದಿಸೆಂಬರ್ ತಿಂಗಳಿನಲ್ಲಿ ಮಹಮದನ ಪಡೆ ಹೆಚ್ಚು ಹಾನಿಗೊಳಗಾಗದೆಯೆ ಮರಳಿ ಮದೀನವನ್ನು ಮುಟ್ಟಿತು.ಈ ದಂಡಯಾತ್ರೆ ಮಹಮದನ ನೇತೃತ್ವದಲ್ಲಿ ಕೈಗೊಂಡ ಕಟ್ಟಕಡೆಯ ಯುದ್ಧ ಕಾರ್ಯಾಚರಣೆಯಾಗಿತ್ತು. ಅನಂತರ ಯಾವುದೆ ರಣರಂಗಕ್ಕೂ ಸ್ವತಃ ಮಹಮದ್ ಸೈನ್ಯವನ್ನು ಮುನ್ನಡೆಸಲಿಲ್ಲ. ದಣಿದು ಮುದಿಯಾಗಿದ್ದ ದೈಹಿಕ ಕಾರಣಗಳು ಹಾಗೂ ಮಾಗುತ್ತಿದ್ದ ಪ್ರಾಯ ಅವನಿಗೆ ಅಂತಹ ದುಸ್ಸಾಹಸಗಳನ್ನು ಕೈಗೊಳ್ಳಲು ಪೂರಕವಾಗಿಟ್ಟಿರಲಿಲ್ಲ.  ಈ ಕೊನೆಯ ದಂಡಯಾತ್ರೆಯ ಹಿನ್ನೆಲೆಯಲ್ಲಿ ಒಂದು ಗಮನೀಯ ಘಟನೆ ಘಟಿಸಿತ್ತು. ವಾಡಿಕೆಯಂತೆ ತನ್ನ ಹಿಂಬಾಲಕ ಬುಡಕಟ್ಟುಗಳಿಗೆಲ್ಲಾ ಮಹಮದ್ ಯುದ್ಧದಲ್ಲಿ ಭಾಗವಹಿಸುವಂತೆ ಕರೆ ಕೊಟ್ಟಿದ್ದನಷ್ಟೆ. ಹಾಗೆ ಆಹ್ವಾನ ಪಡೆದವರಲ್ಲಿ ಪ್ರಬಲನಾದ ಅಲ್ ಝೆಡ್ ಬಿನ್ಖೈಸ್ ಸಹ ಒಬ್ಬನಾಗಿದ್ದ. ಆದರೆ ಆತ ಆ ಕರೆಯನ್ನ ಸರಾಸಗಟಾಗಿ ನಿರಾಕರಿಸಿದ್ದ.ಆತ ಅದಕ್ಕಾಗಿ ತನ್ನ ಕಚ್ಚೆ ಹರುಕತನ ಹಾಗೂ ಸ್ತ್ರೀ ಲೋಲುಪತೆಯ ಕಾರಣವನ್ನೆ ಭಿಡೆಯಿಲ್ಲದೆ ನೀಡಿದ್ದ ಸಹ! ತಬೂಕ್ ಪ್ರಾಂತ್ಯದ ಮೇಲೆ ಧಾಳಿ ಕೈಗೊಳ್ಳುವ ಅಸಲು ವಿಚಾರವನ್ನ ಮುಚ್ಚಿಟ್ಟು ಮಹಮದ್ ಕೇವಲ ಬೆಜಂಟೈನ್ ನಿಯಂತ್ರಣದ ಸ್ಥಳಗಳಿಗೆ ಮಾತ್ರ ಧಾಳಿ ಸಂಘಟಿಸುವ ವಿಚಾರ ತಿಳಿಸಿ ಮೋಸ ಮಾಡಿದ್ದಾನೆ ಎಂದು ಆತ ಖಾಸಗಿಯಾಗಿ ಆರೋಪಿಸಿದ. ಅದೆಲ್ಲಾ ತನ್ನ ಹುಡುಗಿಯರ ಹುಚ್ಚನ್ನ ಅರಿತು ಮಾಡಿದ ಕುತಂತ್ರ! ಗ್ರೀಕ್ ಪ್ರದೇಶದ ಹೆಂಗಸರು ಸಹಜ ಸುಂದರಿಯರು, ಅವರ ಆಕರ್ಷಣೆಗೆ ಜೊಲ್ಲು ಸುರಿಸಿಕೊಂಡು ನಾನು ಆ ರಣ ಕಣಕ್ಕೆ ಇಳಿಯಲಿ ಎನ್ನುವ ಉದ್ದೇಶದಿಂದ ಮಹಮದ್ ತನಗೆ ಆಸೆ ಹುಟ್ಟಿಸಲು ಈ ಕಥೆ ಹೆಣೆದಿದ್ದಾನೆ ಎಂದು ಆತ ಯುದ್ಧಕ್ಕೆ ತೆರಳಲು ನಿರಾಕರಿಸಿದ. ಅಂತಃಪುರವೆ ತನಗೆ ಯುದ್ಧ ಭೂಮಿಯಿಂದ ಹಿತ ಎಂದಾತ ಮಾರೋಲೆ ಕಳಿಸಿದ! ಇದರ ಕುರುಹಾಗಿ ಖುರ್ಹಾನಿನ ಸುರಾ ಸಂಖ್ಯೆ ೯/೪೯ನ್ನ ಆಸಕ್ತರು ಗಮನಿಸಬಹುದು.


ಮಹಮದ್ ಕೈಗೊಂಡಿದ್ದ ಈ ತಬೂಕ್ ದ್ಮ್ಡಯಾತ್ರೆಯ ಅವಧಿ ಅರೇಬಿಯ್ತಾ ಪ್ರಸ್ಥಭೂಮಿಯಲ್ಲಿ ಕಡು ಬೇಸಗೆಯ ಕಾಲವಾಗಿತ್ತು. ಈ ಸುಡು ಬಿಸಿಲಿನಲ್ಲಿ ಸದುದ್ದೇಶಕ್ಕಗಿಯೆ ಆಗಿದ್ದರೂ ಸಹ ತೆರೆದ ಬಯಲಿನಲ್ಲಿ ಕಾದಾಡುವುದೆಂದರೆ ಯಾರಿಗೂ ಅಸಹನೀಯವೆ ಆಗಿತ್ತು. ಮದೀನಾದ ಮುಸಲ್ಮಾನೇತರ ಅವಿಶ್ವಾಸಿಗಳಿಗೂ ಈ ಕಾರಣದಿಂದಲೆ ಅದರಲ್ಲಿ ಕಿಂಚಿತ್ ಆಸಕ್ತಿಯೂ ಹುಟ್ಟಿರಲಿಲ್ಲ. ಹೀಗಾಗಿ ಅವರೂ ಸಹ ಈ ಆಹ್ವಾನವನ್ನು ಸರಾಸಗಟಾಗಿ ನಿರಾಕರಿಸಿದ್ದರು. ಅದನ್ನೂ ಸಹ ಖುರ್ಹಾನಿನ ಸುರಾ ಸಂಖ್ಯೆ ೯/೮೧ರಲ್ಲಿ ಆಸಕ್ತರು ಗಮನಿಸಬಹುದು.


ಹತ್ತು ಹದಿನೈದು ದಿನಗಳನ್ನ ತಬೂಕಿನಲ್ಲಿ ಕಳೆದು ಮರಳಿ ಮದೀನಾದ ಹಾದಿ ಹಿಡಿದಿದ್ದಾಗ ಅವನ ಸಾಗುವಿಕೆಯ ಸುಳಿವು ಹಿಡಿದ ಸ್ಥಳಿಯ ಅದ್ ದಿರಾರ್ ಬುಡಕಟ್ಟಿನ ಮಂದಿ ಅವನನ್ನು ಭೇಟಿ ಮಾಡಿ, ತಾವು ನೂತನವಾಗಿ ನಿರ್ಮಿಸಿದ ಮಸೀದಿಗೆ ಭೇಟಿ ನೀಡುವಂತೆ ವಿನಂತಿಯ ಆಹ್ವಾನ ಕೊಟ್ಟರು. ಅಸ್ವಸ್ಥರು ಹಾಗೂ ಬಡವರಿಗಾಗಿ ನಿರ್ಮಿಸಿಲಾಗಿದ ಅಲ್ಲಿ ಮಹಮದ್ ತಂಗಿ ಪ್ರಾರ್ಥನೆಯ ವಿಧಿಗಳನ್ನ ನಿರ್ವಹಿಸಲಿ ಅನ್ನುವ ಮನೋಭಿಲಾಶೆ ಅವರೆಲ್ಲರಿಗೂ ಇತ್ತು. ಆದರೆ ದೈವವಾಣಿಯ ಪ್ರಕಾರ ಮಹಮದ್ ಆ ಮಸೀದಿ ಅವಿಶ್ವಾಸಿಗಳ ನಿರ್ಮಾಣವಾಗಿದೆ ಎಂದು ಸಾರಿ ಆ ಆಹ್ವಾನವನ್ನು ತಿರಸ್ಕರಿಸಿದ. ಸಾಲದ್ದಕ್ಕೆ ಅದನ್ನು ಕೆಡವಲು ಅಲ್ಲಾಹನು ಸಂದೇಶ ರವಾನಿಸಿದ್ದಾನೆ ಎಂದಾತ ತಿಳಿಸಿ ಅವರೆಲ್ಲರನ್ನೂ ಕಂಗಾಲುಗೊಳಿಸಿಬಿಟ್ಟ! ಈ ದೈವ ಸಂದೇಶದ ಆದೇಶದಂತೆ ಆತನ ಸೈನಿಕರು ಆ ಹೊಚ್ಚಹೊಸ ಇಡಿ ಮಸೀದಿಯನ್ನೆ ಸುಟ್ಟು ಭಸ್ಮ ಮಾಡಿ ಅದರ ಕುರುಹುಗಳನ್ನೆಲ್ಲಾ ಇನ್ನಿಲ್ಲವಾಗಿಸಿಬಿಟ್ಟರು! ಅದನ್ನೆ ಮುಸಲ್ಮಾನ ಪ್ರಪಂಚ ಇಂದು 'ಕೇಡಿನ ಮಸೀದಿ' ಅಥವಾ 'ಮಸ್ಝಿದ್ ಎ ದೀದಾರ್' ಎಂದು ಗುರುತಿಸುತ್ತದೆ.


ದೂಮಾದಲ್ಲಿನ ಕ್ರೈಸ್ತ ರಾಜ ಒಕೈಧೀರ್ ಹಾಗೂ ಅವನ ಸಹೋದರರನ್ನು ಸೆರೆ ಹಿಡಿಸಿ ಖಾಲಿದ್ ಅವರ ಖಜಾನೆಯ ದೋಚಿದ ಅಪಾರ ಸಂಪತ್ತಿನೊಂದಿಗೆ ಮದೀನಕ್ಕೆ ನಡೆಸಿಕೊಂಡು ಬಂದಿದ್ದ. ಅಲ್ಲಿ ಮಹಮದ್ ಅವರನ್ನ ಇಸ್ಲಾಮಿಗೆ ಮತಾಂತರ ಮಾಡಿ ಅವರಿಬ್ಬರ ಜೀವವನ್ನ ಉಳಿಸಿದ. ಇದೆ ಸಮಯದಲ್ಲಿ ಮದೀನಾದಲ್ಲಿ ತನ್ನನ್ನ ಧಿಕ್ಕರಿಸಿ ನಡೆದಿದ್ದ ಅವಿಶ್ವಾಸಿಗಳ ಬಗ್ಗೆ ಮಹಮದನ ಮನಸ್ಸಿನಲ್ಲಿ ಸುಶುಪ್ತವಾಗಿದ್ದ ಸಿಟ್ಟು ದೈವವಾಣಿಯ ರೂಪದಲ್ಲಿ ಹೊರ ಹೊಮ್ಮಿ ಬಂತು! ಅವರ ಆಶಾಢಭೂತಿ ನಡುವಳಿಕೆಗಳನ್ನ, ಉದಾಸೀನತೆಯ ಉತ್ತುಂಗವನ್ನ ಹಾಗೂ ಮಹಮದನ ದಂಡಯಾತ್ರೆಯ ಬಗ್ಗೆ ಅವರು ಪ್ರಕಟ ಪಡಿಸಿದ ನಿರುತ್ಸಾಹವನ್ನ ದೈವವಾಣಿಯ ಮೂಲಕ ಖುರ್ಹಾನಿನ ಸುರಾ ಸಂಖ್ಯೆ ೯/೩೮, ೫/೪೧,೪೨,೮೨ ಹಾಗೂ ೮೫ರಲ್ಲಿ ಮಹಮದ್ ಕಟುವಾಗಿ ಖಂಡಿಸಿದ.ಇನ್ನು ಮರುಭೂಮಿಯ ಬೆದಾವಿನರ ಅವಿಧೇಯತೆಯ ಬಗೆಗಂತೂ ಎಲ್ಲೆ ಮೀರಿದ ಹತಾಶೆಯ ಸಿಟ್ಟನ್ನ ಮಹಮದ್ ಹೊರಹಾಕಿದ. ಅವರನ್ನ ಚಂಚಲಚಿತ್ತ, ಹಟಮಾರಿ, ಅಜ್ಞಾನಿ ಹಾಗೂ ಅವಿಶ್ವಾಸಿಗಳೆಂದು ನೇರವಾಗಿ ತನ್ನ ಸುರಾಗಳಲ್ಲಿ ದೈವದ ಮಾತಿನ ಮೊಹರಿನೊಂದಿಗೆ ಆತ ಬೈದ. ಅವರ ಅಂತ್ಯ ನರಕದ ಸುಡು ಜ್ವಾಲೆಯಾಗಿದೆ ಎಂದು ಶಾಪವಿತ್ತ. ಅವರನ್ನು ಹೇಯಕರವಾದ ಜನಾಂಗದವರು ಕೊಳಕರು ಹಾಗೂ ಅವಲಕ್ಷಣದ ಅಧಮರು ಎಂದೆಲ್ಲಾ ನಿಂದಿಸಿದ ಸುರಾ ಸಂಖ್ಯೆ ೯/೯೦-೯೧ನ್ನು ಆತ ದೇವರ ಹೆಸರಿನಲ್ಲಿ ತಾನೆ ಸೃಷ್ಟಿಸಿ ಪಡೆದುಕೊಂಡ! ಈ ಸಿಟ್ಟಿನ ಉರಿ ಅಷ್ಟಕ್ಕೆ ಶಮನವಾಗದೆ ಅವರು ತಮ್ಮ ಉಪಯೋಗಕ್ಕೆಂತು ಕೋಬಾ ನಗರದಲ್ಲಿ ನಿರ್ಮಿಸಿಕೊಂಡಿದ್ದ ಮಸೀದಿಯನ್ನ ಕಾರಣವೆ ಇಲ್ಲದೆ ಕೆಡವಿಸುವ ಮಟ್ಟಿಗೆ ಜ್ವಲಿಸಿ ಅರ್ಭಟಿಸಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೩೭ರಲ್ಲಿ. ಮಹಮದನ ಅಸಂತೋಷ ಒಂದೊಮ್ಮೆ ಅವಿಶ್ವಾಸಿಗಳೆಂದು ಆತನಿಂದ ಕರೆಸಿಕೊಂಡು ಆಶಾಢಭೂತಿಗಳೆಂದು ಜರಿಸಿಕೊಂಡವರ ಮೇಲೆ ಹರಿದರೆ ಅದರ ಪರಿಣಾಮ ಏನಾಗಬಹುದು ಅನ್ನುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿತ್ತು.ಮದೀನಾದ ಗಣ್ಯ ಹಾಗೂ ಮಹಮದನ ಕಪಟದ ಪ್ರಬಲ ಟೀಕಾಕಾರನೂ ಆಗಿದ್ದ ಅಬ್ದುಲ್ಲಾ ಇಬ್ನ್ ಒಬೈ'ನ ಮರಣ ಈ ತಬೂಕ್ ಯಾತ್ರೆಯಿಂದ ಮಹಮದ್ ಹಿಂದಿರುಗಿದ ಎರಡು ತಿಂಗಳ ಅನಂತರ ಆಯಿತು. ಅನೇಕ ಸಂದರ್ಭಗಳಲ್ಲಿ ಯಹೂದಿಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ಅಬ್ದುಲ್ಲಾ ಇಬ್ನ್ ಒಬೈ ಅವರ ಪರವಾಗಿ ಮಹಮದನ ಗೂಂಡಾಗಿರಿಯನ್ನ ವಿರೋಧಿಸಿ ವಾದಿಸಿದ್ದ. ಅವರ ವಿನಾಶ ಹಾಗೂ ಸಾಮೂಹಿಕ ಕೊಲೆಯನ್ನ ತಪ್ಪಿಸಿದ್ದು ಮಹಮದನಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಅದೇನೆ ಅಸಂತೋಷ ಮನದೊಳಗೆ ಮನೆ ಮಾಡಿದ್ದರೂ ಸಹ ಮೇಲ್ನೋಟಕ್ಕೆ ಆತನೊಂದಿಗೆ ಸಭ್ಯವಾಗಿ ಸೌಹಾರ್ದತೆಯೊಂದಿಗೆ ಮಹಮದ್ ವ್ಯವಹರಿಸುತ್ತಿದ್ದ. ಇದಕ್ಕೆ ಕಾರಣ ಅತಿ ಸರಳವಾಗಿತ್ತು. ಅಬ್ದುಲ್ಲಾ ಇಬ್ನ್ ಒಬೈ ಕೂಡಾ ಅಪಾರ ಬೆಂಬಲಿಗರನ್ನ ಮದೀನಾ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಂದಿದ್ದು ಅವರೆಲ್ಲಾ ಅವನನ್ನು ಅಪಾರವಾಗಿ ಗೌರವಿಸುತ್ತಿದ್ದರು ಹಾಗೂ ಯಾವುದೆ ಕಾರಣಕ್ಕೂ ಅಂತಹ ಪ್ರಬಲನೊಬ್ಬನನ್ನ ತನ್ನ ಸ್ಥಳಿಯ ವಿರೋಧಿಯನ್ನಾಗಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಮಹಮದನೂ ಆಗ ಇರಲಿಲ್ಲ. ಹೀಗಾಗಿ ಅತಿ ಚಾಣಾಕ್ಷತೆಯಿಂದ ಆತನೊಂದಿಗೆ ಒಂದು ಅನುಬಂಧದ ಜಾಲವನ್ನ ಹೆಣೆದು ಅದು ಎಂದಿಗೂ ಕಡಿದು ಬೀಳದಂತೆ ಮಹಮದ್ ಮುಂಜಾಗ್ರತೆ ವಹಿಸಿದ್ದ.ಆದರೆ ಈಗ ಅವನ ನೈಸರ್ಗಿಕ ಅಂತ್ಯವೂ ಆಗಿ ಹೋಗಿ ಆಂತರಿಕ ವಲಯದಲ್ಲಿ ಮಹಮದನ ಪಾಲಿನ ವಿರೋಧಿಗಳೆಲ್ಲಾ ಸರಾಸಗಟಾಗಿ ನಿರ್ನಾಮವಾಗಿ ಹೋಗಿದ್ದರು. ಆತನ ಧರ್ಮ ವಿಸ್ತರಣೆಯ ಹೆಸರಿನ ತೋಳ್ಬಲ ಪ್ರದರ್ಶನಕ್ಕೆ ಈಗ ಇನ್ಯಾವ ಅಡ್ಡಿ ಆತಂಕಗಳೂ ಉಳಿದಿರಲಿಲ್ಲ. ಇಸ್ಲಾಮಿನ ಹಾದಿ ಈಗ ಸುಗಮವಾಗಿತ್ತು. ಮಹಮದ್ ಮದೀನಾದ ಸರ್ವಾಧಿಕಾರಿಯಾದದ್ದು ಹೀಗೆ. ಅಲ್ಲಿಂದ ಹೊರಟ ಆತನ ಕೀರ್ತಿಯ ಕಹಳೆ ಅರೇಬಿಯಾದ ದಕ್ಷಿಣದ ತುದಿಯಿಂದ ಹಿಡಿದು ಸಿರಿಯಾದ ಗಡಿ ಭಾಗದವರೆಗೂ ಅನುರಣಿಸಿತು. ಈ ಕಾರಣದಿಂದ ಇಸ್ಲಾಮಿನ ಅನುಯಾಯಿಗಳಿಗಂತೂ ಇನ್ನು ಧರ್ಮ ಸಂಸ್ಥಾಪನೆಗೆ ಆಯುಧಗಳ ಅಗತ್ಯ ಅಷ್ಟಾಗಿ ಕಂಡು ಬಾರದೆ ಅವರೆಲ್ಲಾ ಅವನ್ನ ಮಾರಲು ಸಿದ್ಧರಾದರು! ಆದರೆ ಇದರಿಂದ ವಿಚಲಿತನಾದ ಮಹಮದ್ ಹಾಗೆಲ್ಲಾ ಹುಚ್ಚಾಟಕ್ಕಿಳಿಯಬಾರದಾಗಿ ಅವರೆಲ್ಲರನ್ನೂ ನಿರ್ಬಂಧಿಸಿದ. ಕ್ರೈಸ್ತ ವಿರೋಧಿಗಳಲ್ಲಿ ಕೊಟ್ಟ ಕೊನೆಯವನು ಜೀವಂತವಾಗಿರುವವರೆಗೂ ತನ್ನ ಯಾವೊಬ್ಬ ಅನುಯಾಯಿಯೂ ಸಹ ಧರ್ಮ ಸಂಗ್ರಾಮವನ್ನ ನಿಲ್ಲಿಸಬೇಕಾಗಿಲ್ಲ!' ಎನ್ನುವ ಜೆಹಾದಿನ ಕರೆಯನ್ನಾತ ನೀಡಿದ. ಹೀಗಾಗಿ ಸತತವಾಗಿ ಯುದ್ಧ ಸನ್ನದರಾಗಿಯೆ ಉಳಿಯಬೇಕೆಂಬ ಆಜ್ಞೆ ಆತನಿಂದ ಹೊರಟಿತು.ಆದರೆ ಎಲ್ಲಾ ತನ್ನ ಅನುಯಾಯಿಗಳೂ ಸಹ ರಣರಂಗದಲ್ಲಿ ಕಾರ್ಯಾಚರಿಸುವುದು ಖಡ್ಡಾಯವಲ್ಲ ಎಂತಲೂ ಆತ ಇದೆ ಸಂದರ್ಭದಲ್ಲಿ ತಿಳಿಸಿದ. ಕೆಲವು ಅಕ್ಷರಸ್ಥರೂ ಆದ ತನ್ನ ಬುದ್ಧಿವಂತ ಅನುಯಾಯಿಗಳು ಧಾರ್ಮಿಕ ವ್ಯಾಸಾಂಗದಲ್ಲಿ ತೊಡಗಿ ತನ್ನ ಉಪದೇಶಾಮೃತವನ್ನ ಸತತವಾಗಿ ಅಧ್ಯಯನ ಮಾಡುತ್ತಾ ಮನನ ಮಾಡಿಕೊಳ್ಳಬೇಕೆಂದು ಆತ ಆದೇಶಿದ. ಅವರ ಧರ್ಮ ಬೋಧನೆಯ ಅತ್ಯುತ್ತಮ ಅಂಶಗಳನ್ನ ಇನ್ನಿತರ ಶ್ರೀಸಾಮಾನ್ಯರ ಮನದಲ್ಲೂ ಅಗಾಗ ಬಿತ್ತುತ್ತಾ, ಧರ್ಮವನ್ನ ಉಳಿಸಿ ಬೆಳೆಸುವ ಹೊಣೆಗಾರಿಕೆ ಅಂತಹ ಜ್ಞಾನ ಜಿಜ್ಞಾಸುಗಳದ್ದಾಗಿರುತ್ತದೆ ಎಂದಾತ ವಿವರಿಸಿದ. ಖುರ್ಹಾನಿನ ಸುರಾ ಸಂಖ್ಯೆ ೯/ ೧೨೩ರಲ್ಲಿ ಈ ಹಿತೋಪದೇಶವನ್ನು ಆಸಕ್ತರು ಗಮನಿಸಬಹುದು.( ಇನ್ನೂ ಇದೆ.)

27 November 2015

ವಲಿ - ೩೬

ಮೊದಲೆ ಸ್ಪಷ್ಟ ಪಡಿಸಿದ್ದಂತೆ ಮೆಕ್ಕಾ ಒಂದು ಸರ್ವಧರ್ಮ ಕೇಂದ್ರವಾಗಿತ್ತು. ಧಾರ್ಮಿಕವಾಗಿ ಅದು ಇಂದು ಮುಸಲ್ಮಾನರ ಏಕಸಾಮ್ಯಕ್ಕೆ ಒಳಪಟ್ಟಿದೆ ಅನ್ನುವ ಕ್ಷುಲ್ಲಕ ಕಾರಣಕ್ಕೆ ಯಾರಾದರೂ ಅದನ್ನ ಹೀಗಳೆದು ಮಾತನಾಡುವುದು ಅಕ್ಷಮ್ಯ. ಯಾರಿಗೆ ಗೊತ್ತು? ಇರುಳು ಹರಿದು ಮತ್ತೆ ಬೆಳಕಾಗುವಂತೆ ಮರಳಿ ಅಲ್ಲಿ ಸರ್ವಧರ್ಮೀಯರೂ ಪ್ರವೇಶಿಸುವ ಕಾಲವೂ ಸನ್ನಿಹಿತವಾಗುತ್ತಿರಬಹುದು. ಅಲ್ಲಿ ಮುಸಲ್ಮಾನೇತರರಿಗೆ ಖಡ್ಡಾಯವಾಗಿ ಪ್ರವೇಶ ನಿಷೇಧಿಸಿರುವ ಇಸ್ಲಾಮಿನ ಗೂಂಡಾಗಿರಿಗೂ ಒಂದು ಕೊನೆ ದಿನ ಮುಂದೆ ಇದ್ದಿರಬಹುದು. ಈಗ ವಿಷಯಕ್ಕೆ ಬರೋಣ. ಪವಿತ್ರ ನಗರಿಯಾಗಿ ಹೊರ ಹೊಮ್ಮಿದ್ದ ಮೆಕ್ಕಾದ ಕಾಬಾ ಗುಡಿಯ ಮೇಲಿನ ಅಧಿಪತ್ಯವನ್ನ ವಂಶಪಾರಂಪರ್ಯವಾಗಿ ಸೌರಮಾನ ಪಂಚಾಂಗ ಹಾಗೂ ದಿನಮಾನಗಳ ಅನುಸಾರ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವ ಜವಾಬ್ದಾರಿಯೊಂದಿಗೆ ಖುರೈಷಿ ಕುಲಸ್ಥರು ಪಡೆದಿದ್ದರು. ಈಗ ಅವೆಲ್ಲವೂ ಬಲಾತ್ಕಾರವಾಗಿ ಮಹಮದನ ವಶಕ್ಕೆ ಹೋಗಿದ್ದವು. ಅವನು ಇಚ್ಛಿಸಿದವರಿಗೆ ಅಲ್ಲಿನ ಜವಾಬ್ದಾರಿಗಳನ್ನ ಹೊರಿಸಲು ಸ್ವತಂತ್ರ್ಯನಾಗಿದ್ದನು. ಅದನ್ನ ಪ್ರಶ್ನಿಸುವ ಎದೆಗಾರಿಕೆ ಅಲ್ಲಿನ ಇನ್ಯಾರಿಗೂ ಉಳಿದಿರಲಿಲ್ಲ.ಹಾಗಂತ ಆತ ಅಲ್ಲಿನ ಯಾವುದೆ ಪ್ರಾಚೀನ ಧಾರ್ಮಿಕ ವಿಧಿ ವಿಧಾನಗಳನ್ನಾಗಲಿ - ಕಾಯ್ದೆ ಕಟ್ಟಳೆಗಳನ್ನಾಗಲಿ ಎಂದೂ ಬದಲಿಸುವ ಗೋಜಿಗೆ ಹೋಗಲಿಲ್ಲ. ವಿಗ್ರಹಾರಾಧನೆ ಇದ್ದ ಇಸ್ಲಾಂ ಪೂರ್ವದ ಆಚರಣೆಗಳನ್ನೆ ವಿಧಿವತ್ತಾಗಿ ಮುಂದೆಯೂ ಆಚರಿಸಲು ಆತ ಅನುವು ಮಾಡಿಕೊಟ್ಟಿದ್ದ. ಅವನ್ನೆ ಅಷ್ಟಿಷ್ಟು ತಿದ್ದಿ ತೀಡಿ ತನ್ನ ಇಸ್ಲಾಮಿನಲ್ಲಿಯೂ ಅಳವಡಿಸಿಕೊಳ್ಳುವ ಜಾಣ್ಮೆಯನ್ನಾತ ಮೆರೆದ. ಹಿಂದಿನಿಂದಲೂ ಸುತ್ತಮುತ್ತಲಿನ ಬುಡಕಟ್ಟಿನವರು ನಂಬಿ ಆಚರಿಸಿಕೊಂಡು ಬರುತ್ತಿದ್ದ ಯಾವುದೆ ಆರಾಧನೆ ಹಾಗೂ ಹರಕೆಯ ವಿಧಿವಿಧಾನಗಳಿಗೂ ಹೀಗಾಗಿ ಯಾವುದೆ ಚ್ಯುತಿ ಬರಲಿಲ್ಲ. ಹಿಂದಿನ ಧಾರ್ಮಿಕ ರೀತಿನೀತಿಗಳನ್ನ ತ್ಯಜಿಸದೆ, ಅಲ್ಲಿನ ಯಾವುದೆ ನಂಬಿಕೆಯ ಆಚರಣೆಗಳಿಗೆ ಅಡ್ಡಿ ಪಡಿಸದೆ ಆತ ಭಾವನೆಗಳಿಗೆ ಧಕ್ಕೆ ಮಾಡದೆ ತನ್ನ ನೂತನ ಧರ್ಮದಲ್ಲೂ ಅವನ್ನೆಲ್ಲಾ ಅಳವಡಿಸಿದ್ದು ಅವನ ನೂತನ ಹಿಂಬಾಲಕರಿಗೆಲ್ಲಾ ಸರ್ವಸಮ್ಮತವಾಗಿತ್ತು. ಇದರ ಪರಿಣಾಮವಾಗಿಯೆ ಅರೆಬಿಯಾ ಪ್ರಸ್ಥಭೂಮಿಯಲ್ಲಿ ಇಸ್ಲಾಮ್ ಬಲವಾಗಿ ಬೇರೂರಿತು.


ಇಸ್ಲಾಮಿನ ಸ್ಥಾಪನೆಯೊಂದಿಗೆ ಅದನ್ನ ಒಪ್ಪಿ ಅಪ್ಪಿ ನಡೆದವರೆಲ್ಲಾ ಏಕ ದೈವತ್ವ ಹಾಗೂ ಮಹಮದನ ಪ್ರವಾದಿತ್ವವನ್ನು ಸ್ವೀಕರಿಸಿ ಮುನ್ನಡೆದರೂ ಸಹ ಅವರು ಆತನ ಧರ್ಮೇತರ ಜಾತ್ಯತೀತ ಅಧಿಪತ್ಯಕ್ಕೂ ಸಹ ತಲೆಬಾಗಲೆ ಬೇಕಾಯಿತು. ಧರ್ಮಪಾಲನೆಯ ಜೊತೆಗೆ ಧಾರ್ಮಿಕ ಕಾಣಿಕೆಯನ್ನೂ ಸಹ ಒಪ್ಪಿಸುವ ಕ್ರಮ ಕಟ್ಟುನಿಟ್ಟಿನಿಂದ ಜಾರಿಗೆ ಬಂತು. ಅದು ಕಪ್ಪದ ರೂಪದಲ್ಲಿರದೆ ಪ್ರತ್ಯೇಕವಾಗಿ ವರ್ಷಕ್ಕೊಂದಾವರ್ತಿ ತಮ್ಮ ದುಡಿಮೆಯ ಒಟ್ಟು ಪಾಲಿನ ನಿಗದಿತ ಪರಿಮಾಣವನ್ನು ಧಾರ್ಮಿಕ ದೇಣಿಗೆಯಾಗಿ ನೀಡುವ ಹೊಸ ಕ್ರಮವಾಗಿತ್ತು. ಆದರೆ ವಿಧರ್ಮೀಯರಾದ ಯಹೂದಿ, ಕ್ರೈಸ್ತ ಹಾಗೂ ಇನ್ನಿತರ ಮೂರ್ತಿಪೂಜಕ ಬುಡಕಟ್ಟಿನವರು ಮಾತ್ರ ಈಗ ಒತ್ತಾಯದ ತಲೆಗಂದಾಯವಾಗಿ ಕಟ್ಟುನಿಟ್ಟಿನ ಕಪ್ಪ ಒಪ್ಪಿಸಲೇ ಬೇಕಾಗಿ ಬಂತು.

ಮಹಮದ್ ಮೆಕ್ಕಾದ ನೂತನ ಅಧಿಪತಿಯಾದ ನಂತರ ಈ ಎಲ್ಲಾ ಕಂದಾಯಗಳನ್ನ ಕಾಲಕಾಲಕ್ಕೆ ಕಟ್ಟುನಿಟ್ಟಾಗಿ ಸಂಗ್ರಹಿಸಲು ಅಧಿಕಾರಿಗಳನ್ನ ಅತನ್ನ ಪರವಾಗಿ ನೇಮಿಸಿದ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೨೧ರಲ್ಲಿ. ಅದರಲ್ಲಿ ಆ ಅಧಿಕಾರಗಳ ವಿವರವಾದ ಪಟ್ಟಿಯನ್ನೆ ಮುಬಾರಖಿ ನೀಡಿದ್ದು ಆಸಕ್ತರು ಗಮನಿಸಬಹುದು. ಈ ಕಂದಾಯಗಳಿಗೆ ಮಹಮದನ ಅನುಯಾಯಿಗಳಿದ್ದ ಪ್ರದೇಶಗಳಲ್ಲಿ ಔಚಿತ್ಯಪೂರ್ಣವಾದ ಸ್ವಾಗತ ದೊರೆತು ಸ್ವ ಇಚ್ಛೆಯಿಂದಲೆ ಕಂದಾಯ ಸಲ್ಲಿಸುವ ಪರಿಪಾಠ ಆರಂಭವಾಯಿತು. ಆದರೆ ಎಲ್ಲಾ ಕಡೆಯಲ್ಲಿಯೂ ಇದೆ ಪರಿಯಲ್ಲಿ ಅಧಿಕಾರಿಗಳು ಹೃತ್ಪೂರ್ವತೆಯನ್ನ ಕಾಣಲಾಗಲಿಲ್ಲ. ಪ್ರತಿರೋಧಗಳನ್ನೂ ಸಹ ಆಲ್ಲಿ ಅವರು ಕಾಣಬೇಕಾಗಿ ಬಂತು. ಬೆನ್ ತಮೀಮ್ ಬುಡಕಟ್ಟಿನವರೂ ಹೀಗೆ ಸೆಡ್ಡು ಹೊಡೆದವರಲ್ಲಿ ಒಬ್ಬರಾಗಿದ್ದರು. ಕಂದಾಯ ಸಂಗ್ರಹಕ್ಕೆ ಅಧಿಕಾರಗಳು ಬಂದಿದ್ದಾಗ ಬಂಡೆದ್ದ ಬುಡಕಟ್ಟಿನವರು ಅವರನ್ನ ಮುಲಾಜಿಲ್ಲದೆ ಒದ್ದು ಓಡಿಸಿದರು.

ಸುದ್ದಿ ಮಹಮದನಿಗೆ ಬಂದು ಮುಟ್ಟಿದಾಗ ತನ್ನ ವಿರುದ್ಧ ಬಂಡೆದ್ದ ಅವರಿಗೆ ಬುದ್ಧಿ ಕಲಿಸಲು ಆತ ಒಂದು ದಂಡನ್ನ ಕಳುಹಿಸಿದ. ಒಯ್ಯಾನ್ ಎಂಬ ಆತನ ನೆಚ್ಚಿನ ಬಂಟನ ನೇತೃತ್ವದಲ್ಲಿ ನಡೆದ ಈ ಧಾಳಿ ಯಶಸ್ವಿಯಾಗಿ ಆತ ಅಲ್ಲಿ ಆಗ ಇದ್ದ ಗಂಡಸರು, ಹೆಂಗಸರು, ಮಕ್ಕಳು ಮುದುಕರು ಹಾಗೂ ಜಾನುವಾರುಗಳೆನ್ನದೆ ಎಲ್ಲರನ್ನೂ ಸೆರೆ ಹಿಡಿದು ಮಹಮದನ ಬಳಿ ಕರೆತಂದ. ಇವರನ್ನೆಲ್ಲ ಸೆರೆಯಲ್ಲಿಡಲಾಗಿತ್ತು. ಅವರ ಪರವಾಗಿ ಬಿಡುಗಡೆಗಾಗಿ ಪ್ರಾರ್ಥಿಸಲು ಅಳಿದುಳಿದ ಬೆನ್ ತಮೀಮ್ ಬುಡಕಟ್ಟಿನ ಕೆಲವರು ನಿಯೋಗ ತಂದರು. ಅವರು ಈ ಹಿಂದೆ ಮಹಮದನ ಪರವಾಗಿ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದವರೆ ಆಗಿದ್ದು ಆತನಿಂದ ಶೌರ್ಯಕ್ಕೆ ಶಾಭಾಷಗಿರಿಯನ್ನೂ ಸಹ ಪಡೆದಿದ್ದರು. ಅದನ್ನೆಲ್ಲಾ ಆತನಿಗೆ ವಿವರವಾಗಿ ನೆನಪಿಸಿಕೊಡಲು ಅವರು ನಿರ್ಧರಿಸಿದರು. ಬೆದಾವಿನರಲ್ಲಿ ಒಂದು ಉಪ ಬುಡಕಟ್ಟಾಗಿದ್ದ ಬೆನ್ ತಮೀಮರು ಸ್ವಭಾವತಃ ಒರಟರಾಗಿದ್ದರು.ಅವರ ಸಂಸ್ಕೃತಿ, ಭಾಷೆ ಹಾಗೂ ನಡೆನುಡಿ ತೀರಾ ಕಚ್ಚಾವಾಗಿದ್ದು ಅವರೆಲ್ಲಾ ಮಹಮದನ ಮನೆಯ ಮುಂದೆ ನಿಂತು 'ಏ ಮಹಮದ್! ಹೊರಗೆ ಬಾ. ನಮ್ಮ ಬಳಿಗೆ ಬಾ' ಎಂದು ಬೊಬ್ಬಿಡಲು ಆರಂಭಿಸಿದರು. ಮಹಮದ್ ಈಗೀಗ ಅರೇಬಿಯಾದಲ್ಲಿಯೆ ಒಬ್ಬ ಗಣ್ಯವ್ಯಕ್ತಿಯಾಗಿ ಗುರುತಿಸಪಡುತ್ತಿದ್ದ. ಅವನನ್ನು ಕೇವಲ ಒಬ್ಬ ಸಾಮಾನ್ಯ ದಾರಿಹೋಕನಂತೆ ಹೀಗೆ ಅಸಭ್ಯವಾಗಿ ಕೂಗಿ ಕರೆಯುವುದು ಅವನಿಗೆ ಅಸಹನೀಯವೆನ್ನಿಸಿತು. ಅವನು ಸಿಟ್ಟಿನಿಂದಲೆ ಹೊರಬಂದ. ಮಧ್ಯಾಹ್ನದ ಪ್ರಾರ್ಥನೆಯ ಹೊತ್ತು ಸಮೀಪವಾಗಿದ್ದರಿಂದ ಆತ ನಮಾಝ್ ಮುಗಿಸಿ ಬಂದು ಮಸೀದಿಯ ಪಡಸಾಲೆ ಪಕ್ಕದ ಕೋಣೆಯಲ್ಲಿ ಬೆನ್ ತಮೀಮ್ ಪ್ರತಿನಿಧಿಗಳ ಅಹವಾಲನ್ನ ಆಲಿಸಿದ. ಅವರು ವಿಚಿತ್ರವಾದ ಸವಾಲೊಂದನ್ನ ಅವನ ಮುಂದೊಡ್ಡಿದರು. ಮದೀನಾ ನಗರದಲ್ಲಿಯೆ ವಾಕ್ ಸಾಮರ್ಥ್ಯವಿರುವ ಯಾರಾದರೂ ತಮ್ಮ ಕವಿತ್ವದ ಪ್ರತಿಭಾ ಪ್ರದರ್ಶನ ಮಾಡಬಹುದಂತಲೂ, ಅವರು ಆತನನ್ನ ಕವಿತ್ವದಲ್ಲಿ ಸೋಲಿಸಿದರೆ ತಮ್ಮವರನ್ನ ಬಿಡಬೇಕಂತಲೂ ಅವರು ಪಂಥಾಹ್ವಾನ ಕೊಟ್ಟರು. ಮಹಮದ್ ಈಗ ಇಕ್ಕಟ್ಟಿನಲ್ಲಿ ಸಿಕ್ಕಿ ಬಿದ್ದ. ಈ ನೂತನ ಮೇಲಾಟದ ವಿಧಾನ ಅವನ ಪಾಲಿಗಂತೂ ಹೊಸತೆ ಆಗಿತ್ತು. ಆದರೆ ತನ್ನ ಮುಖ ಉಳಿಸಿಕೊಳ್ಳಲು ಕಡೆಗೂ ಆತ ಈ ವಿಲಕ್ಷಣ ಸ್ಪರ್ಧೆಗೆ ಸಮ್ಮತಿಸಿದ.


ಬೆನ್ ತಮೀಮ್ ಪಾಳಯದಿಂದ ಹಲವಾರು ಕವಿ ಪುಂಗವರು ತಮ್ಮಾ ಕವಿತಾ ಸಾಮರ್ಥ್ಯವನ್ನ ತೋರಿಸಿದರು. ಅವರಿಗೆ ಪೈಪೋಟಿಯಾಗಿ ಮದೀನಾದ ವಿದ್ವನ್ಮಣಿಗಳು ಹಾಗೂ ಕವಿ ಸರ್ವೋತ್ತಮರೂ ಸಹ ತಮ್ಮೆಲ್ಲಾ ಪ್ರತಿಭೆಗಳನ್ನ ಮೆರೆದರು. ಮಹಮದನ ಆಪ್ತ ಹಾಗೂ ಆತನ ಸೂಳೆ ಮೇರಿಯ ಮೂಲಕ ಶಡ್ಡಕನಾಗುತ್ತಿದ್ದ ಕವಿ ಹಸನ್ ಭಾವಪೂರ್ಣವಾಗಿ ಉತ್ತಮವಾದ ಕವಿತೆಯನ್ನ ತನ್ಮಯತೆಯಿಂದ ಪಠಿಸಿದಾಗ ನೆರೆದಿದ್ದವರೆಲ್ಲಾ ಆನಂದಾಶ್ಚರ್ಯಗಳಿಂದ ಹರ್ಷೋದ್ಗಾರ ಮಾಡಿದರು. ವಿರೋಧಿ ಬೆನ್ ತಮೀಮರೂ ಅದನ್ನ ಉತ್ಕೃಷ್ಟ ರಚನೆ ಎಂದು ಒಪ್ಪಿಕೊಂಡು ತಲೆದೂಗಿದರು. ಅವರ ಈ ಪ್ರತಿಕ್ರಿಯೆಯಿಂದ ಸಂತುಷ್ಟನಾದ ಮಹಮದ್ ಮೊತ್ತಮೊದಲ ಬಾರಿಗೆ ಮನಃಪೂರ್ವಕವಾಗಿ ಎಲ್ಲಾ ಬಂಧಿತ ಜನ ದನ ಜಾನುವಾರುಗಳನ್ನ ಬಿಡುಗಡೆಗೊಳಿಸಿದ. ಅವರ ಪ್ರತಿಭೆಗೆ ಮೆಚ್ಚಿ ಉದಾರವಾಗಿ ಕೈತುಂಬ ಕೊಡುಗೆಗಳನ್ನೂ ಸಹ ದಯಪಾಲಿಸಿ ಊರಿಗೆ ಕಳುಹಿಸಿಕೊಟ್ಟ. ಇದರಿಂದ ಒರಟ ಬೆನ್ ತಮೀಮರೂ ಆನಂದಿತರಾಗಿ ಅವರಲ್ಲಿ ಇಸ್ಲಾಮ್ ಸ್ವೀಕರಿಸದೆ ತಟಸ್ಥರಾಗಿದ್ದವರೂ ಸಹ ಈಗ ಮತಾಂತರವಾಗಿ ಮುಸಲ್ಮಾನರಾದರು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೨೨೬ರಲ್ಲಿ.ಕ್ಷಮಿಸಿ ಬೀಳ್ಕೊಟ್ಟರೂ ಸಹ ಅವರ ಅಸಭ್ಯ ಭಾಷಾ ಪ್ರಯೋಗ ಹಾಗೂ ಅನಾಗರಿಕ ವರ್ತನೆಗಳನ್ನ ಮಹಮದ್ ಮರೆಯಲಿಲ್ಲ. ದೈವವಾಣಿಯನ್ನ ಪಡೇದುಕೊಂಡು ಒಂದು ಸುರಾದ ಮೂಲಕ ತನ್ನ ಅಂತಸ್ತಿನ ಬಗ್ಗೆ, ತನ್ನನ್ನ ಭೇಟಿ ಮಾಡಲು ಬರುವ ಅತಿಥಿಗಳು ಗಮನ ಕೊಡಬೇಕಾದ ಸಭ್ಯತೆಯ ಬಗ್ಗೆ ಹಾಗೂ ಅವರ ನಡೆನುಡಿಗಳ ಅಪೇಕ್ಷಣೀಯತೆಯ ಬಗ್ಗೆ ಕೆಲವು ಟೀಕೆ ಟಿಪ್ಪಣಿಗಳನ್ನ ಮಾಡಿದನು. ಸುರಾ ಸಂಖ್ಯೆ ೩೩/೫೩ರಲ್ಲಿ ಇದನ್ನ ಆಸಕ್ತರು ಗಮನಿಸಬಹುದು. ಇದೆ ಸಮಯದಲ್ಲಿ ಆತ ಕಪ್ಪ ವಸೂಲಿಯ ಕಾರಣಕ್ಕೆ ಅನೇಕ ದಂಡಯಾತ್ರೆಗಳನ್ನೂ ಸಹ ಕೈಗೊಂಡ. ಇದರ ಜೊತೆಗೆ ಆತ ಕೆಲವು ವಿರೋಧಿಗಳನ್ನ ಮಣಿಸುವ ಉದ್ದೇಶವನ್ನೂ ಸಹ ಇಟ್ಟುಕೊಂಡು ಮುನ್ನಡೆದಿದ್ದ. ಜೆಡ್ಡಾದ ಮೇಲೆ ಆತ ನಡೆಸಿದ್ದ ಅಂತಹ ಒಂದು ದಂಡಯಾತ್ರೆ ಇಲ್ಲಿ ಅತಿಮುಖ್ಯವಾಗುತ್ತದೆ. ಅಬಿಸೀನಿಯಾದವರ ಜೊತೆಜೊತೆಗೆ ಜೆಡ್ಡಾದ ಜನತೆ ಕೂಡಾ ಆರಂಭದಲ್ಲಿ ಪ್ರತಿರೋಧಿಸಿ ಸೆಡ್ಡು ಹೊಡೆದು ನಿಂತಿದ್ದರು. ಅವರನ್ನ ಮಣಿಸಲು ಮಹಮದ್ ಒಂದು ದೊಡ್ಡ ಪಡೆಯನ್ನೆ ಅಲ್ಲಿಗೆ ಕಳುಹಿಸಿದ್ದ.


ಅದೆ ಹೊತ್ತಿನಲ್ಲಿ ತನ್ನ ಅಳಿಯ ಅಲಿಯನ್ನು ಸಹ ಬೆನ್ ಥೈ ಬುಡಕಟ್ಟಿನವರ ಮೇಲೆ ಛೂ ಬಿಟ್ಟ. ಅವರು ವಿಗ್ರಹಾರಾಧಕರಾಗಿದ್ದು ಒಂದು ಬೃಹತ್ ಗುಡಿ ಕಟ್ಟಿಕೊಂಡು ಅಲ್ಲಿ ತಮ್ಮ ದೇವರ ಪೂಜೆ ಪುನಸ್ಕಾರವನ್ನ ಶ್ರದ್ಧಾಭಕ್ತಿಯಿಂದ ಮುಂದುವರೆಸಿದ್ದರು. ಅಲಿ ತನ್ನ ಪಡೆಯೊಂದಿಗೆ ಅಲ್ಲಿಗೆ ಧಾಳಿ ಇಟ್ಟು ಬೆನ್ ಥೈ ಬುಡಕಟ್ಟಿನವರನ್ನು ಸೋಲಿಸಿ ಅವರ ಸಕಲ ಸಂಪತ್ತನ್ನೂ ದೋಚಿ ತಂದ. ಹಲವಾರು ಸ್ತ್ರೀ ಪುರುಷರು ಅಲಿಗೆ ಗುಲಾಮರಾಗಿ ಸೆರೆ ಸಿಕ್ಕಿದರು. ಇತಿಹಾಸ ಪ್ರಸಿದ್ಧ ಹಾಥಿಮ್ ತಾಯ್ ಪುತ್ರಿಯೂ ಈ ಸೆರೆಯಾಳುಗಳಲ್ಲಿ ಒಬ್ಬಳಾಗಿದ್ದಳು. ಅವಳ ಅಣ್ಣ ಆದಿ ಎಂಬಾತ ಅಲಿಯ ಪಡೆ ಅಲ್ಲಿಗೆ ನುಗ್ಗುವ ಸೂಚನೆ ದೊರೆತ ಕೂಡಲೆ ಸಿರಿಯಾದತ್ತ ಪಲಾಯನಗೈದಿದ್ದ.


ಹಾಥಿಮ್ ತಾಯ್'ನ ಪುತ್ರಿ ತನ್ನ ತಂದೆಯ ಪ್ರಾಮುಖ್ಯತೆಯನ್ನ ವಿವರಿಸಿ ಅಳುತ್ತಾ ಮಹಮದನ ಕೃಪೆಗಾಗಿ ಯಾಚಿಸಿದಳು. ಮಹಮದ್ ಕನಿಕರಗೊಂಡು ಸೂಕ್ತ ಗೌರವಾದರಗಳೊಂದಿಗೆ ಅವಳನ್ನ ಬಿಡುಗಡೆ ಮಾಡಿದ. ಅವಳಿಗೆ ಸೂಕ್ತ ಸಮ್ಮಾನ ಒದಗಿಸಿ ಉಡುಗೊರೆಗಳೊಂದಿಗೆ ಹಿಂದಕ್ಕೆ ಕಳುಹಿಸಿಕೊಟ್ತ. ಮನೆಮುಟ್ಟಿದ ಅವಳು ತನ್ನ ಅಣ್ಣನನ್ನು ಅರಸುತ್ತಾ ಸಿರಿಯಾದತ್ತ ತೆರಳಿದಳು. ಅಲ್ಲಿ ಕಾಣ ಸಿಕ್ಕ ಆದಿಯನ್ನ ಮನ ಒಲಿಸಿ ಮಹಮದನ ಬಳಿಗೆ ಕರೆ ತಂದಳು. ಮಹಮದ್ ಅವನನ್ನು ಮನ್ನಿಸಿ ಇಸ್ಲಾಮಿಗೆ ಸೇರಿಸಿಕೊಂಡ. ಮುಂದೆ ಮಹಮದನ ಪರವಾಗಿ ಆದಿ ಅನೇಕ ದಂಡಯಾತ್ರೆಗಳಲ್ಲಿ ಹೋರಾಡಿ ಪ್ರಸಿದ್ಧನೂ ಆದ. ಅವನ ಬುಡಕಟ್ಟಿನ ನೇತೃತ್ವವನ್ನ ಅವನಿಗೆ ಪಟ್ಟ ಕಟ್ಟಲಾಯಿತು. ಅಲ್ಲಿಗೆ ಇನ್ನೊಂದು ಪ್ರದೇಶ ಇಸ್ಲಾಮಿನ ತೆಕ್ಕೆಗೆ ಬಂತು.


ಇದೆ ಹೊತ್ತಿನಲ್ಲಿ ಮೆಕ್ಕಾದ ಕವಿಗಳಲ್ಲಿ ಒಬ್ಬನಾಗಿದ್ದ ಕಾಬ್'ನ ಕಥೆಯ ದೃಷ್ಟಾಂತವನ್ನು ಇತಿಹಾಸದ ಪುಟಗಳಲ್ಲಿ ನೀಡಲಾಗಿದೆ. ಅವನ ಸಹೋದರ ಮಹಮದನ ಇಸ್ಲಾಮಿಗೆ ಮತಾಂತರವಾಗಿದ್ದ. ಅದನ್ನ ಸಹಿಸದ ಕಾಬ್ ತನ್ನ ಅಣ್ಣನ ವಿರೋಧವಾಗಿಯೆ ಅಸಮಾಧಾನದಿಂದ ತನ್ನ ವಿರೋಧ ಹಾಗೂ ಶಂಕೆಯನ್ನ ತೋರ್ಪಡಿಸುತ್ತಾ ಕವನಗಳನ್ನ ರಚಿಸಿ ಸಿಟ್ಟು ತೋಡಿಕೊಂಡಿದ್ದ. ಈ ವಿಷಯ ಮಹಮದನ ಗಮನಕ್ಕೆ ಬರುತ್ತಲೂ ಆತನ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುವ ಇಂಗಿತವನ್ನು ವ್ಯಕ್ತಪಡಿಸಿದ. ಇದರಿಂದ ಬೆದರಿದ ಕಾಬ್'ನ ಅಣ್ಣ ತಮ್ಮನತ್ತ ದೌಡಾಯಿಸಿ ಒಂದೋ ಇಲ್ಲಿಂದ ಓಡಿ ಪಾರಾಗು ಇಲ್ಲವೆ ಮಹಮದನ ಇಸ್ಲಾಮ್ ಸ್ವೀಕರಿಸಿ ಅವನ ಅನುಯಾಯಿಯಾಗಿ ತಲೆ ಉಳಿಸಿಕೋ ಎಂದು ಪರಿಪರಿಯಾಗಿ ಅವನನ್ನು ಓಲೈಸಿ ದಾರಿಗೆ ತರಲು ಯತ್ನಿಸಿದ. ಆರಂಭದಲ್ಲಿ ಕಾಬ ಅಣ್ಣನ ಮಾತನ್ನು ಕಾಬ್ ಸರಾಸಗಟಾಗಿ ಧಿಕ್ಕರಿಸಿದರೂ ಸಹ ಅನಂತರದ ಕೆಲವು ಕಹಿ ಘಟನೆಗಳ ಹಿನ್ನೆಲೆಯಲ್ಲಿ ಕಂಗಾಲಾಗಿ ಮಹಮದನನ್ನೆ ಖುದ್ದಾಗಿ ಕಂಡು ಈ ಸಂಕಟಗಳಿಂದ ಪಾರಾಗಲು ಮದೀನಾದತ್ತ ಹೊರಡುವುದು ಅನಿವಾರ್ಯವಾಯಿತು.


ಮಹಮದನ ಮಸೀದಿಯ ದ್ವಾರದಲ್ಲಿ ನಿಂತು ಗಟ್ಟಿ ಧ್ವನಿಯಲ್ಲಿ ಮಹಮದನ ಕಿವಿಗೆ ಬೀಳುವ ಹಾಗೆ "ಜುಹೈರ್'ನ ಕಾಬ್ ಎಂಬುವವ ನಿಮ್ಮ ಬಳಿ ಬಂದು ತಮ್ಮ ವಿಶ್ವಾಸ ಹಾಗೂ ಕ್ಷಮಾಪಣೆ ಬೇಡಲು ತಯ್ಯಾರಾಗಿದ್ದಾನೆ! ನಾನು ಅವನನ್ನು ಕರೆ ತಂದರೆ ಕ್ಷಮಿಸುವಿರೇನು?" ಎಂದು ಭಿನ್ನವಿಸಿದ. ಮಹಮದ್ ಅದನ್ನು ಸಮ್ಮತಿಸಿ ಅಸ್ತು ಎಂದ ಕೂಡಲೆ ಆತ ಇನ್ಯಾರು ಅಲ್ಲ ನಾನೆ ಎಂದು ಕಾಬ್ ಸ್ಪಷ್ಟ ಪಡಿಸಿದ! ತನ್ನ ಕೃತಜ್ಞತೆಯ ದ್ಯೋತಕವಾಗಿ ಒಂದು ಆಶು ಕವಿತೆಯನ್ನ ಸ್ಥಳದಲ್ಲಿಯೆ ರಚಿಸಿ ಹಾಡಿದ. ಅದೆ ಮುಂದೆ ಇತಿಹಾಸದ ಪುಟಗಳಲ್ಲಿ 'ಕ್ವಾಸಿದ್ಧತ್ ಅಲ್ ಬುರ್ದ್' ಅಥವಾ 'ಪೊಯಮ್ ಆಫ್ ಮ್ಯಾಂಟ್ಲ್" ( poem of mantle) ಎಂದೆ ಪ್ರಸಿದ್ಧವಾಗಿದೆ.


ಆ ಹೊಗಳು ಪದಗಳೆ ತುಂಬಿದ್ದ ಕವಿತೆಯ ಸಾಲೊಂದು ಸಾರುವಂತೆ 'ಹೌದು, ಪ್ರವಾದಿ ದೇವರ ಆಯುಧಶಾಲೆಯಲ್ಲಿನ ಒಂದು ಬಿಚ್ಚುಗತ್ತಿ! ವಿಶ್ವಕ್ಕೆ ಬೆಳಕು ನೀಡುವ ದೀಪ?!' ಎಂದು ಭಟ್ಟಂಗಿಯಾಗಿ ಹಾಡಿದ್ದಾನೆ ಕಾಬ್. ತನ್ನ ವೈಭವ, ಕೀರ್ತಿ ಹಾಗೂ ಉದಾರತೆಯನ್ನು ಸಾರುವ ಮಹೋನ್ನತ ಮುಖಸ್ತುತಿಗಳೆ ತುಂಬಿದ್ದ ರಚನೆಯ ಆ ಕವಿತೆಯನ್ನ ಕೇಳಿ ಮಹಮದ್ ಸಹಜವಾಗಿ ಉಬ್ಬಿ ಆನಂದ ತುಂದಿಲನಾದ. ಉಕ್ಕಿ ಹರಿದ ಖುಷಿಯಲ್ಲಿ ಆತ ಎದ್ದು ನಿಂತು ತಾನು ಧರಿಸಿದ್ದ ಮೇಲಂಗಿಯನ್ನೆ ತೆಗೆದು ಕಾಬನ ಮೈ ಮೇಲೆ ಗೌರವಪೂರ್ವಕವಾಗಿ ಹೊದೆಸುತ್ತಾ ಆತನನ್ನು ಕ್ಷಮಿಸಿ ತನ್ನ ಸಂತೋಷವನ್ನು ಪ್ರಕಟ ಪಡಿಸಿದ. ಈ ಮೇಲಂಗಿಯನ್ನ ಕೊಡುಗೆಯಾಗಿ ಗಿಟ್ಟಿಸಿದ್ದ ಕವಿತೆಯಾಗಿರುವ ಕಾರಣದಿಂದಲೆ ಮುಂದೆ ಈ ಕವಿತೆ 'ಮೇಲಂಗಿಯ ಕವಿತೆ' ಎಂದು ಪ್ರಸಿದ್ಧಿ ಪಡೆಯಿತು. ಕ್ರಮೇಣ ಕಾಲಾನುಕ್ರಮದಲ್ಲಿ ಈ ಮೇಲಂಗಿ ಕಾಬನ ವಂಶಸ್ಥ್ರಿಂದ ಖಲೀಫರ ಖಜಾನೆ ಹೋಗಿ ಸೇರಿತು. ಅದರ ಒಂದು ತುಣುಕು ಇಂದಿಗೂ ತುರ್ಕಿಯ ಇಸ್ತಾಂಬುಲ್ಲಿನಲ್ಲಿದೆ.( ಇನ್ನೂ ಇದೆ.)