28 December 2008

ಮತ್ತೆ ಮತ್ತೆ....

ಹೇಳಲು ಮರೆತ ಮಾತು ಕಡೆಗೂ ಹೇಳಲಾಗದೆ ಹಾಗೆ ಉಳಿಯಬೇಕು/

ಒಮ್ಮೆಯಾದರೂ ಉಸುರಿದ್ದರೆ ಬಯಸಿದ ಉತ್ತರ ಸಿಗುತ್ತಿತ್ತೇನೋ!

ಎಂಬ ವ್ಯಥೆ ಸವಿಯಾತನೆಯಾಗಿ ಮಾರ್ದನಿಸಿ ಉಲಿಯಬೇಕು...ಮತ್ತೆ ಮತ್ತೆ//

ನಿನ್ನೆದೆಯಲ್ಲಿ ಮುಚ್ಚಿದಲಾಗದ ಗುಟ್ಟು ನಾನು,ಯಾವಾಗಲೂ ಮರುಕಳಿಸೋ ಕನವರಿಕೆ ಅಲ್ಲವೇನು?/

ಓಡುವಲ್ಲೆಲ್ಲ ನೋಟ ನೀ ನನ್ನನೇ ಹುಡುಕುವಿಯೆಂದೂ ಗೊತ್ತು

ಏಕೆಂದರೆ ನನ್ನ ಮನದ ತುಮುಲವೂ ಹೀಗೆ ಇದೆ ಈ ಹೊತ್ತು...ಮತ್ತೆ ಮತ್ತೆ//

ಮತ್ತೆ ನೆನಪಾದೆ ನೀನು....

ದೂರದ ಬಾನಲ್ಲಿ ಬೆಳದಿಂಗಳ ಚಲ್ಲಿ,ಆ ಹಾದಿಯ ತುಂಬ ಅರಳುವ ಹೂವಲ್ಲಿ....

ನಿನ್ನಾಸೆಯ ಹೂವಾಗುವ ಮನದಾಸೆಯೂ ಮೂಡಿದೆ/

ಈ ಕಣ್ಣ ಕನಸಲಿ ಕಾಡೋ ಕವಿತೆ

ಎದೆ ತಾಳದೊಂದಿಗೆ ಹಾಡುವೆ ಇನಿತೆ

ಸ್ನೇಹ-ಪ್ರೀತಿಯ ನಡುವಿನ ಗೆರೆ ಸಾಕು ಇನ್ನು ಅಳಿಸುವ ಬಾರೆ...

ಸರಿಸುವ ನಮ್ಮ ನಡುವಿನ ತೆರೆ ಹರಿಸು ಬಾ ನೀನು ಪ್ರೇಮದ ಧಾರೆ//

11 December 2008

ನನಗೂ ನಿನಗೂ ಕಣ್ಣಲ್ಲೇ ಪರಿಚಯ...

ಕಣ್ಣ ಕೊಳದಲಿ ಅರಳಿರುವ ಸಂಭ್ರಮ,
ಮನದ ಬನದಲಿ ಚಿಗುರಿರುವ ವನಸುಮ/
ಮುಳುಗೋ ಬಾಳಲಿ ಕೈ ಆಸರೆ ನಾವೆ ನೀ,
ಬಿರಿದಾ ಭುವಿಯಲಿ ನಿರೀಕ್ಷೆ ಮಳೆಹನಿ//

ಕನಸೋ ನನಸೋ ಇದೆಂಥಾ ಸವಿ ಗೊಂದಲ...ಅದೇನೋ ಆಗಿದೆ ನನಗಂತೂ ಇದು ಮೊದಲ ಸಲ...

ಖಾಲಿ ಬಾನಲಿ ತೇಲಾಡೋ ಮೋಡವ,
ಆಸೆ ಕಣ್ಣಲಿ ನೆಲ ನೋಡೋ ವಿಸ್ಮಯ/
ಕೂಡೋ ಕಳೆದರೂ ಬದಲಾಗದ ಉತ್ತರ,
ಸನಿಹ ಸುಳಿಯದೇ ನೀನಾದೆಯ ಹತ್ತಿರ//

04 December 2008

ಏಯಂ ಆಕಾಶವಾಣಿ...

ಆಗಿನ ಮಧ್ಯಮವರ್ಗದ ಮನೆಗಳಲ್ಲಿ ಇರುತ್ತಿದ್ದ ಏಕೈಕ ಐಶಾರಾಮಿ ವಸ್ತು ರೇಡಿಯೋ! ಆಕಾಲದ ರೇಡಿಯೋಗಳನ್ನು ಬಡಪೆಟ್ಟಿಗೆ ವರ್ಣಿಸುವುದು ಅಸಾಧ್ಯ! ದೊಡ್ಡ ರಟ್ಟಿನ ಪೆಟ್ಟಿಗೆಯಂತಹ ಮರದ ಚೌಕದ ಮೂರು ಮೇಲ್ಮೈ ಸಪಾಟು,ಹಿಂದೆ ಬಲ ಬಿಟ್ಟು ಒತ್ತಿದರೆ ಮಾತ್ರ ಬದಲಾಗುತ್ತಿದ್ದ ಬ್ಯಾಂಡ್ ಸ್ವಿಚ್,ಎದುರಲ್ಲಿ ಸದಾ ಹಲ್ಕಿರಿದಂತ ಟ್ಯೂನರ್ ಪಟ್ಟಿ ಜೊತೆಗೆರಡು ಪಕ್ಕ ದುಂಡನೆಯ ಸ್ವಿಚ್ಗಲೆರಡು.ಇದು ಆಕಾಲದ ರೇಡಿಯೋಗಳ ಸ್ಥೂಲ ಸ್ವರೂಪ.ಕನಿಷ್ಠ ಇಬ್ಬಿಬ್ಬರು ಸೇರಿ ಹೊರಬೇಕಾಗಿದ್ದಂತ ಅವುಗಳಿಗೆ ಬಲೆ ಬಲೆ ಯಂತಿದ್ದ ಏರಿಯಲ್ ಕೂಡ ನಾಯಿಯೊಂದಿಗಿನ ಬಾಲದಂತಿರುತ್ತಿತ್ತು,ಇಂತಹ ಬ್ರಹತ್ ದೇಹಿಯ ನಿರ್ವಹಣೆ ಮಾತ್ರ ಬಲು ನಾಜೂಕು.ನೆಗಡಿ ಕೆಮ್ಮು ಜ್ವರ ಮುಂತಾದ ಮನುಷ್ಯರಿಗೆ ಬರುವ ಎಲ್ಲ ರೋಗಗಳು ತನಗೂ ಬರುತ್ತವೇನೋ ಎಂಬಂತೆ ಆಗಾಗ ಮಳೆ ಹೆಚ್ಚಾದ-ಚಳಿ ಎದ್ದ ದಿನಗಳಲ್ಲೆಲ್ಲ ಅದು ಕಾಯಿಲೆ ಬೀಳುತ್ತಿತ್ತು.ಆಗೆಲ್ಲಾ ಗೊರಗೊರ ಸದ್ದು ಬಿಟ್ಟರೆ ಇನ್ನುಳಿದಂತೆ ಮೌನ! ಅಂತಹ ಸನ್ನಿವೇಶಗಳಲ್ಲಿ ಅದನ್ನು ಬೆಡ್ ಶೀಟ್ನಲ್ಲಿ ಸುತ್ತಿಡುವುದೂ ಇತ್ತು.ಪುಣ್ಯಕ್ಕೆ ಕಷಾಯ ಮಾಡಿ ಕುಡಿಸುವ ಸೇವೆಯೊಂದು ನಡೆಯುತ್ತಿರಲಿಲ್ಲ ಅಷ್ಟೆ.ಹೀಗಾಗಿ ಮನೆಯ ಒಂದು ಜೀವಂತ ಸದಸ್ಯನ ಸ್ಥಾನ-ಮಾನ ಅದಕ್ಕೂ ಇತ್ತು.

"ಏಯಂ ಆಕಾಶವಾಣಿ,ಸಂಪತಿ ವಾರ್ತಾಹ ಶೂಯಂತಾಂ...ಪ್ರವಾಚಕಃ ಬಲದೇವಾನಂದ ಸಾಗರಹ" ಒಂದು ಕಿವಿಯ ಮೇಲೆ ಈ ಅಶರೀರವಾಣಿ ಬೀಳುತ್ತಾ ಎಬ್ಬಿಸುತ್ತಿದ್ದರೆ ಇನ್ನೊಂದು ಕಿವಿಯ ಮೇಲೆ ಏಳಲು ತಡವಾದುದಕ್ಕಿನ ಅಮ್ಮನ ಬೈಗುಳದ ಸುಪ್ರಭಾತ ಬಿತ್ತೆಂದರೆ ಬೆಳಗಾಗಿದೆ ಎಂದೇ ಅರ್ಥ! ಸುಮ್ಮನೆ ಹೊರಳಾಡಿ ಆಲಸ್ಯದಿಂದ ಎಳುವಾಗ"...ಇತಿ ವಾರ್ತಾಹ" ಕಿವಿಗೆ ಬೀಳುತ್ತಿತ್ತು.ಅದೇ ಆಲಸ್ಯಕ್ಕೆ ಮತ್ತಷ್ಟು ಬೈಗುಳದ ಬಹುಮಾನ ಗಿಟ್ಟಿಸುತ್ತಾ ಹಲ್ಲುಜ್ಜಲು ಅದೇ ಸವೆದ ಬ್ರೆಷ್ ಗೆ ಪೇಸ್ಟ್ ಸವರುವಾಗ "ಈಗ ಪ್ರದೇಶ ಸಮಾಚಾರ ಧಾರವಾಡ ಕೇಂದ್ರದ ಸಹಪ್ರಸಾರದಲ್ಲಿ"ಮೂಡಿ ಬರಲು ಅಣಿಯಾಗುತ್ತಿತ್ತು.ಆಗ ಹಲ್ಲುಜ್ಜುವ ನೆಪದಲ್ಲಿ ಬರಗೆಟ್ಟವನಂತೆ ಹಚ್ಚಿದ ಪೇಷ್ಟನ್ನೆಲ್ಲ ತಿಂದ ತಪ್ಪಿಗೆ ಮತ್ತಷ್ಟು ಬೈಗುಳ. ಪ್ರದೇಶ ಸಮಾಚಾರ ಮುಗಿಯುತ್ತಿದ್ದಂತೆ ಮುಖ ತೊಳೆದ ಶಾಸ್ತ್ರ ಮುಗಿಸಿ ಬೈಗುಳದೊಂದಿಗೆ ದಯಪಾಲಿಸಿದ ಚಾ ಕುಡಿದು ಶಾಲೆ ಪುಸ್ತಕ ಹರಡಿಕೊಂಡು ಓದುವ ಕಾಟಾಚಾರದ ವಿಧಿ ಮುಗಿಸುವಾಗ ದೆಹಲಿ ಕೇಂದ್ರದಿಂದ ಕನ್ನಡ ವಾರ್ತೆಗಳೂ ಮುಗಿದು ಚಿತ್ರಗೀತೆಗಳು ಶುರುವಾಗುತ್ತಿದ್ದವು.ಇನ್ನು ಓದುವ ಚಂದ ಇಷ್ಟೇ ಎಂಬ ಅರಿವಿದ್ದ ಅಮ್ಮನ ಕೊರಳಿನ ಕರೆ ತಿಂಡಿ ಮುಕ್ಕಲು ಅಡುಗೆ ಮನೆಗೆ ಬೈಗುಳದ ಹಿಮ್ಮೇಳದ ಜೊತೆಗೆ ಆಹ್ವಾನಿಸುತ್ತಿತ್ತು.ಒಂದೆಡೆ ಚಿತ್ರಗೀತೆಗಳ ಕೇಳುವ ಸುಖ...ಇನ್ನೊಂದೆಡೆ ಕಾಯಿ ಚಟ್ನಿಯೊಂದಿಗೆ ಹಬೆಯಾಡುವ ಇಡ್ಲಿಯ ಅಪ್ಯಾಯಮಾನ ರುಚಿ...ಒಟ್ಟಿನಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ...

02 December 2008

ನೋಡಲು ಮರೆಯದಿರಿ,ಮರೆತು ನಿರಾಶರಾಗದಿರಿ....

ಕಾಲ ಕಳೆದಂತೆ ಬದಲಾವಣೆಯ ಗಾಳಿ ತೀರ್ಥಹಳ್ಳಿಯಲ್ಲೂ ಬೀಸಿತಲ್ಲ,ಫಕೀರನ ಒಂಟೆತ್ತಿನ ಜಾಗಕ್ಕೆ ಆಟೋರಿಕ್ಷಾ ಆಧುನಿಕತೆಯ ಸ್ಪರ್ಶ ನೀಡಿತು.ಸೋಮವಾರ ತೀರ್ಥಹಳ್ಳಿಯಲ್ಲಿ ಸಂತೆ ಹೀಗಾಗಿ ಬೇರೆಡೆಯಲ್ಲಿ ಶುಕ್ರವಾರ ಸಿನೆಮಾಗಳಿಗೆ ಬಿಡುಗಡೆಯ ಭಾಗ್ಯ ಸಿಕ್ಕರೆ ಇಲ್ಲಿ ಮಾತ್ರ ಸೋಮವಾರವೇ ಮುಂಬರುವ ಸಿನೆಮಾಗಳನ್ನು ನೋಡಬಹುದಾಗಿತ್ತು.ಹಾಗಂತ ಹೊಸ ಚಿತ್ರಗಳೇನು ದಾಂಗುಡಿಯಿಟ್ಟು ಬರುತ್ತಿರಲಿಲ್ಲ.ಅಲ್ಲಿಯ ಮಟ್ಟಿಗೆ ಹೊಸತು ಎಂದರೆ ಕೇವಲ ಎರಡು ವರ್ಷದ ಹಿಂದೆ ತೆರೆಕಂಡ ಚಿತ್ರಗಲಷ್ಟೇ.ಟಿವಿ ಲಭ್ಯತೆ ಮರಳುಗಾಡಿನ ಓಯಸಿಸ್ ಆ ದಿನಗಳಲ್ಲಿ, ಮನರಂಜನೆಗೆ ಬರಗೆಟ್ಟವರಂತೆ ಸಿನೆಮಗಳನ್ನೇ ನೆಚ್ಚಿಕೊಂಡಿದ್ದ ತೀರ್ಥಹಳ್ಳಿ ಸುತ್ತ-ಮುತ್ತಲಿನವರಿಗೆ ಈ ಹಳಸಲು ಸರಕೆ ಮ್ರಷ್ಟಾನ್ನವಾಗಿತ್ತು.ಆಟೋ ಬಂದಮೇಲೆ ಪ್ರಚಾರದ ಖದರೇ ಬೇರೆಯಾಯ್ತು.ಹೊಸ ಸಿನೆಮಾ ಬಂದ ಮೊದಲದಿನ ಪೇಟೆಯಲ್ಲಿ ,ಇನ್ನುಳಿದದಿನಗಳಲ್ಲಿ ಮಂಡಗದ್ದೆ,ಕೋಣಂದೂರು,ಮೇಗರವಳ್ಳಿ,ದೇವಂಗಿ ಸಮೀಪದ ಹಳ್ಳಿಗಳಲ್ಲೂ ಫಕೀರನ "ಪ್ರತೀ ದಿನ ಕೇವಲ ಮೂರು ದೇಖಾವೆಗಳು...ನೋಡಲು ಮರೆಯದಿರಿ,ಮರೆತು ನಿರಾಶರಾಗದಿರಿ" ಎಂಬ 'ಅಮ್ರತವಾಣಿ' ಮೊಳಗುವಂತಾಯಿತು.

ಇನ್ನು ಸಂತೆಗೆ ಬಂದ ಜನ ಮರಳಿ ಅವರವರ ಊರಿಗೆ ಮರಳುವ ಮುನ್ನ ಟಿಕೇಟ್ ಇಲ್ಲದ ಇನ್ನೊಂದು ಪುಕ್ಕಟೆ ಮನರಂಜನೆಯೂ ಕಾದಿರುತಿತ್ತು.ಗಾಂಧಿಚೌಕದಲ್ಲಿ ನಿಂತಿರುತ್ತಿದ್ದ ಖಾದರ್ ಸಾಬರ ಮೂರುಮಾರ್ಕಿನ ಬೀಡಿಗಳ ಪ್ರಚಾರದ ವ್ಯಾನ್ ಮೇಲೆ ಮಿರಿಮಿರಿ ಸ್ಕರ್ಟ್-ಟೈಟ್ ಪ್ಯಾಂಟ್ ಹಾಕಿದ್ದ ಹೆಣ್ಣು ವೇಷದ ದಿಲೀಪ ಮತ್ತವನ ಹೀರೋನ ಕಾಂಬಿನೇಶನ್ ನಲ್ಲಿ "ಚಳಿಚಳಿ ತಾಳೆನು ಈಚಳಿಯ" (ನಿಜವಾಗಿಯೂ ಆಗ ಚಳಿ ಇರುತ್ತಿತ್ತು!),"ಪ್ರೀತಿಯೇ ನನ್ನುಸಿರೂ" "ಯಾರ್ ಬಿನ ಚೇನ್ ಕಹಾನ್ ರೆ? " "ಡ್ಯಾನ್ಸ್ ವಿತ್ ಮೀ..ಮೇರಿ ಮೇರಿ ಡಿಸ್ಕೋ" "ಮೇರಿ ಮೇರಿ ಮೇರಿ ಐ ಲವ್ ಯೂ" ಮುಂತಾದ ಡಿಸ್ಕೋ ನಂಬರ್ ಗಳಿಗೆ ಮಾದಕ ನ್ರತ್ಯವಿರುತ್ತಿತ್ತು. ಬಪ್ಪಿ ಲಹರಿಯ ಭಕ್ತರನೇಕರು ಆ ಪೀಳಿಗೆಯ ಯುವಕರಾಗಿದ್ದರಿಂದ ಈ ಬಹಿರಂಗ ಲೈವ್ ಬ್ಯಾಂಡ್(!) ನೋಡಲು ಕಲಾರಸಿಕರ (?) ಹಿಂಡೇ ಅಲ್ಲಿ ನೆರೆದಿರುತ್ತಿದ್ದು ನ್ರತ್ಯದ ನಡುವೆ ಅವನ ಮೋಹಕ ಬೆರಳುಗಳು ಎಸೆಯಿತ್ತಿದ್ದ ಮೂರೆಮೂರು ಬೀಡಿಗಳ ಸ್ಯಾಂಪಲ್ ಬೀಡಿಕಟ್ಟಿಗಾಗಿ ಅಕ್ಷರಶ ಪೈಪೋಟಿ ಏರ್ಪಡುತ್ತಿತ್ತು,ಉನ್ಮತ್ತ ಕಲಾರಸಿಕರನ್ನು ನಿಯಂತ್ರಿಸಲು ಒಬ್ಬ ಲಾಠಿಧಾರಿ ಪೇದೆ ಅಲ್ಲಿ ಹಾಜರಿರುತ್ತಿದ್ದ ಹಾಗು ಸುಂದರಿಯರನ್ನೆಲ್ಲ ಮೀರಿಸುವಂತೆ ಮಿಂಚುತ್ತಿದ್ದ ದಿಲೀಪನ ಮಾದಕ(?!) ದೇಹಸಿರಿಯನ್ನ ಹಸಿದ ಕಣ್ಣುಗಳಿಂದ ನೋಡುವುದರಲ್ಲೇ ಮೈಮರೆಯುತ್ತಿದ್ದ.ಅವನೊಬ್ಬ ಹೆಣ್ಣು ವೇಷದ ಗಂಡು ಎಂಬ ಬಹಿರಂಗ ಸತ್ಯ ಅಲ್ಲಿ ನೆರೆದವರಿಗೆಲ್ಲ ಸ್ಪಷ್ಟವಾಗಿ ಗೊತ್ತಿದ್ದರೂ ಕಲೆಯ (!) ಆಸ್ವಾದನೆಯಲ್ಲಿ ನೆರೆದವರ್ಯಾರೂ ಹಿಂದೆ ಬೀಳುತ್ತಿರಲಿಲ್ಲ.ಕಟ್ಟ ಕಡೆಯ "ಐಯಾಮ್ ಎ ಡಿಸ್ಕೋ ಡ್ಯಾನ್ಸರ್" ಕುಣಿತ ನೋಡದೆ ಜಾಗ ಖಾಲಿ ಮಾಡುತ್ತಲೂ ಇರಲಿಲ್ಲ! ದಿಲೀಪನ ನಶೆ ಹೆಚ್ಚಾದ ಅವನ ಕೆಲವು ಕಟ್ಟಾ ಅಭಿಮಾನಿಗಳು ಅವ ವ್ಯಾನ್ ನಿಂದಿಳಿದು ಚೌಕದ ಕಟ್ಟೆಯ ಮೇಲೆ ಅದೇ ಮೂರು ಮಾರ್ಕಿನ ಬೀಡಿ ಸೇದುತ್ತ ಕುಳಿತಿರುವುದನ್ನು ಆಸೆ ಕಂಗಳಿಂದ ನೋಡುತ್ತಿದ್ದರು!

ಇಂದು ಫಕೀರನೂ ಇಲ್ಲ,ಖಾದರ್ ಸಾಬರೂ ಇಲ್ಲ,ಮೂರು ಮಾರ್ಕಿನ ಬೀದಿಗಳೂ ಇಲ್ಲ ಹಾಗು ವ್ಯಾನ್ ಮೇಲೆ ದಿಲೀಪನ ಮಾದಕ ನ್ರತ್ಯವೂ ಇಲ್ಲ.ಹಳೆಯ ಪುಟಗಳ ಸಾಲಿಗೆ ಇವೆಲ್ಲವೂ ಸೇರಿ ಹೋಗಿವೆ.ತೀರ್ಥಹಳ್ಳಿ ನಿಜಾರ್ಥದಲ್ಲಿ ಎಲ್ಲೋ ಕಳೆದು ಹೋಗಿದೆ.

01 December 2008

ಕನಸೋ ಇದು?

ನಿನ್ನೆದೆಯಲ್ಲಿ ಮುಚ್ಚಿಡಲಾಗದ ಗುಟ್ಟು ನಾನು,

ಎಂದೆಂದೂ ಮರುಕಳಿಸೋ ಕನವರಿಕೆ ಅಲ್ಲವೇನು?/

ಓಡುವಲ್ಲೆಲ್ಲ ನೋಟ ನನ್ನನೆ ಹುಡುಕುವಿಯೆಂದೂ ಗೊತ್ತು,ಏಕೆಂದರೆ ನನ್ನ ಮನದಾಟವೂ ಹಾಗೆ ಇದೆ ಈ ಹೊತ್ತು//

ಅದು ನೀನೆನಾ? ಅಲ್ಲ ನಿನ್ನ ಕಾಂತಿಯ!

ಆ ಅಂದ ನಿಂದೇನ? ಇಲ್ಲ ಬರಿಯ ಹೊಳೆವ ಕಾಮನಬಿಲ್ಲ ಕಂಡ ಭ್ರಾಂತಿಯ!/

ವಸಂತ ಚಿಗುರಿದಾಗಲೂ ನಿನ್ನದೇ ಹೊಳಪು,

ನಡೆದಾಡುವಾಗಲೂ ಕೂಡ ಕನಸಿನ ಅರೆ ಜೊಂಪು//

ಇಬ್ಬನಿ ಧ್ವನಿ...

ಹುಲ್ಲ ಮೇಲೆ ಹನಿದ ಹನಿ ಇಬ್ಬನಿ/

ನಗುವ ರವಿಯ ಮೊಗವ ಕಂಡು ನಾಚಿ ನೀರಾಯಿತು//

30 November 2008

ನೆನಪು ಚಿರಾಯು....


ನಿನ್ನ ಮತ್ತೆ ನೋಡಲಾರೆನೇನೋ,
ಆದರೆ ಕನಸಲ್ಲಿ ಕಾಣುವೆ ಖಂಡಿತ/
ಜೊತೆಯಾಗಿ ನಾವು ಕಳೆದ ಮಧುರ ಕ್ಷಣಗಳನ್ನು,
ಜೊತೆಯಾಗೆ ನಾವು ಕಳೆಯ ಬಹುದಾಗಿದ್ದ ಮಾರ್ದವ ಕ್ಷಣಗಳನ್ನೂ//

28 November 2008

ನಮೋ ವೆಂಕಟೇಶಾ.......

ಅಳಿದ ಊರಿಗೆ ಉಳಿದವನೆ ಗೌಡ ಅಂತನ್ನಿ ಅಥವಾ ಕರುಡರೂರಿನಲ್ಲಿ ಒಕ್ಕಣ್ಣನೆ ಹೀರೋ ಎಂತಾದರೂ ಅನ್ನಿ ಒಟ್ಟಿನಲ್ಲಿ ತೀರ್ಥಹಳ್ಳಿಯಲ್ಲಿ ವೆಂಕಟೇಶ್ವರ ಚಿತ್ರಮಂದಿರಕ್ಕೆ ಎದುರಾಳಿಗಳಂತೂ ಇರಲೇಇಲ್ಲ,ಇಪ್ಪತ್ತೆರಡು ವರ್ಷಗಳ ಹಿಂದೆ ವಿನಾಯಕ ಟಾಕೀಸು ಹುಟ್ಟುವತನಕ! ಸಗಣಿ ಸಾರಿಸಿದ ನೆಲ-ಸರ್ವರಿಗೂ ಸಮಪಾಲು ಎಂಬಂತೆ ಉದ್ದಾನುದ್ದ ಪಟ್ಟಿ ಹೊಡೆದ ಬೆಂಚುಗಳಿದ್ದ ಜೈಶಂಕರ್...ಸಿಮೆಂಟಿನ ನೆಲ-ಎರಡೆರಡು ವರ್ಗ ಜೋತೆಗೆರಡು ಬಾಲ್ಕನಿಯೆಂಬ ಡಬ್ಬಗಳನ್ನು ಹೊಂದಿದ್ದ ವೆಂಕಟೇಶ್ವರದ ಮುಂದೆ ಮಂಕೋಮಂಕು.

ಚಿತ್ರವೊಂದು ಆರಂಭವಾಗುವ ಮುನ್ನ "ನಮೋ ವೆಂಕಟೇಶ"ದ ಹಿನ್ನೆಲೆಯಲ್ಲಿ ಬೆಳ್ಳಿತೆರೆಯ ಮೇಲಿನ ಪರದೆ ಮೇಲೇರುತ್ತಿತ್ತಾದರೂ ಪರದೆ ತುದಿತಲುಪುತ್ತಲೇ ಆಹಾಡು ಪೂರ್ತಿಯಾಗುವ ಮೊದಲೇ ಬಂದಾಗಿ "ಡಿಸ್ಕೋ ಡ್ಯಾನ್ಸರ್"ನ (ಮಿಥುನ್ ಚಕ್ರವರ್ತಿಯ ಆ ಚಿತ್ರ ಆ ಕಾಲಕ್ಕೆ ಸೂಪರ್ ಹಿಟ್ ಆಗಿದ್ದು ಯುವಕರನ್ನು ಸೆಳೆದಿತ್ತು) ಜಿಮ್ಮಿ ಜಿಮ್ಮಿ ಜಿಮ್ಮಿ ಆಜಾ ಆಜಾ...ನಾಜಿಯ ಹಸನ್ ಧ್ವನಿಯಲ್ಲಿ ತೇಲಿಬರುತ್ತಿದ್ದ ಹಾಗೆ "ಧೂಮಪಾನ ಆರೋಗ್ಯಕ್ಕೆ ಹಾನಿಕರ" "ಬೀಡಿ-ಸಿಗರೇಟು-ಚುಟ್ಟ ವಗೈರೆ ಸೇದುವುದನ್ನು ಖಡ್ಡಾಯವಾಗಿ ನಿಷೇಧಿಸಲಾಗಿದೆ" (ಈ ವಗೈರೆ ಅಂದರೆ ಏನು? ಎಂದು ನಾವೆಲ್ಲ ಆಗ ತಲೆ ಕೆಡೆಸಿಕೊಳ್ಳುತ್ತಿದ್ದೆವು!) ಮುಂತಾದ ಅಣಿಮುತ್ತುಗಳ ಸ್ಲೈಡ್ ಬಂದು.....ಆನಂತರ ಮುಂಬರುವ ಚಿತ್ರಗಳ ಸ್ಲೈಡ್ ಬರುವುದನ್ನೇ ಜಾತಕಪಕ್ಷಿ ಗಳಂತೆ ಕಾತರದಿಂದ ಕಾಯುತ್ತಿದ್ದೆವು.ಆನಂತರ ಬರುತ್ತಿದ್ದುದೇ ನಾವೆಲ್ಲರೂ ಎಷ್ಟು ರೀಲ್ ಎಂದು ನೋಡಿ ಹೇಳಲು ಕಾಯುತ್ತಿದ್ದ ಸೆನ್ಸಾರ್ ಸರ್ಟಿಫಿಕೆಟ್.ಇದೆಲ್ಲ ಆಗುವಾಗಲೇ ಉರಿಯುತ್ತಿದ್ದ ಮೂರು-ಮತ್ತೊಂದು ಲೈಟುಗಳು ಕುಗುರುವವರಂತೆ ಉದಾಸೀನದಿಂದ ಕಣ್ಣು ಮುಚ್ಚುತಿದ್ದವು.ಅಲ್ಲಿಗೆ ನಮ್ಮ ಕಲ್ಪನೆ ಊಹೆ,ಮುಂಬರುವ ಚಿತ್ರಗಳ ನೋಡುವ ಭವಿಷ್ಯದ ಯೋಜನೆಯ ಮನೋವ್ಯಾಪಾರಗಳೆಲ್ಲ ಮುಗಿದು ಕನಸಿನ ಲೋಕಕ್ಕೆ ಜಾರಿಕೊಳ್ಳುತಿದ್ದೆವು.

ಇನ್ನೇನು ಚಿತ್ರದ ರೋಮಾಂಚಕಾರಿ ಸೀನ್ ಬರಬೇಕು ತಟ್ಟನೆ ಕರೆಂಟ್ ಕೈಕೊಟ್ಟು ಬಿಡುತ್ತಿತ್ತು! ಇದು ಯಾವಾಗಲೂ ಹೀಗೆ...ಎಲ್ಲರೂ ಮನಸಿಟ್ಟು ನೋಡುತ್ತಿರುವಾಗಲೇ ರೀಲ್ ಕಟ್ ಆಗೋದೋ ಇಲ್ಲ ಕರೆಂಟ್ ಕೈಕೊಡೋದೋ ಆಗಿ ಟಾಕೀಸ್ ಒಳಗೆ ಕುಳಿತ ಸಭ್ಯ ಪ್ರೇಕ್ಷಕ ಪ್ರಭುಗಳು ಫಕೀರನ ಅಮ್ಮ -ಅಕ್ಕನ್ನನ್ನೂ ಬಿಡದೆ ನಿವಾಳಿಸಿ ಕೂಗೋದು...ಅವ ಓಡಿಹೋಗಿ ಜನರೇಟರ್ ಆನ್ ಮಾಡಿ ಆ ಭೀಕರ ಹಿನ್ನೆಲೆ ಸದ್ದಿನೊಂದಿಗೆ ಮತ್ತೆ ರೀಲೋಡಿಸುವುದು...ಮತ್ತೆ ಅಲ್ಲಿಂದಲೇ ಶುರುವಾಗೋ ಸೀನಿನಲ್ಲಿ ಎಲ್ಲರೂ ತನ್ಮಯರಾಗೋದು..ಇವೆಲ್ಲ ಸಂಪ್ರದಾಯದಂತೆ ನಡೆದುಹೊಗುತಿತ್ತು.ನಿತ್ಯ ನಡೆಯುವ ಈ ಜಂಜಾಟಗಳನ್ನೆಲ್ಲ ಫಕೀರನಾಗಲೀ ಪ್ರೆಕ್ಷಕರಾಗಲೀ ಅಭ್ಯಾಸಬಲದಿಂದ ಎಂಬಂತೆ ತಲೆಕೆಡಿಸಿಕೊಳ್ಳದೆ ಅನುಭವಿಸುತ್ತಿದ್ದರು!

27 November 2008

ಒಮ್ಮೆ ನೋಡಿದರೆ ಮತ್ತೊಮ್ಮೆ..ಮತ್ತೆ ನೋಡಿದರೆ ಮಗದೊಮ್ಮೆ..

ಒಂಟೆತ್ತಿನ ಗಾಡಿಯ ಮೇಲೆ ಎರಡೂ ಪಕ್ಕ ಜೋತು ಬಿದ್ದ ಪೋಸ್ಟರ್ ಗಳ ಸಂದಿಯಲ್ಲಿ ಸಿಕ್ಕಿಸಿದ ಡೈನಮೋ ಚಾಲಿತ ಸ್ಪೀಕರಿನಲ್ಲಿ ಫಕೀರನ ಕೀರಲು ಧ್ವನಿ ಮೂರು ದಿಕ್ಕಿಗೂ ಮಾರ್ದನಿಸಿ ಕಿವಿಯ ಮೇಲೆ ಬಿದ್ದಾಗ ಇಹಪರದ ಅರಿವು ಕ್ಷಣಕಾಲ ಮರೆತು ಹೋಗುತಿತ್ತು."ಒಮ್ಮೆ ನೋಡಿದರೆ ಮತ್ತೊಮ್ಮೆ ...ಮತ್ತೆ ನೋಡಿದರೆ ಮಗದೊಮ್ಮೆ..ಹೀಗೆ ಬಾರಿ ಬಾರಿಗೂ ನೋಡಲೇ ಬೇಕೆನಿಸುವ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಮಹೋನ್ನತ {ಅದೆಷ್ಟೇ ಕಳಪೆ ಸೀ-ಗ್ರೇಡಿನದಾಗಿದ್ದರೂ!} ಕನ್ನಡ ಚಲನಚಿತ್ರ ನಿಮ್ಮ ನೆಚ್ಚಿನ (?!) ವೆಂಕಟೇಶ್ವರ ಚಿತ್ರಮಂದಿರದಲ್ಲಿ........ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ!" ಎಂಬ ಫುಲ್ ಸ್ಟಾಪ್ ಇಲ್ಲದ ಉದ್ಘೋಷ ಕಿವಿಯಂಚಿಗೆ ತಲಪುತ್ತಲೇ ಮನಸ್ಸು ಹೆಂಡ ಕುಡುಕನಿಗೆ ಬಾರ್ ಎದುರಾದಾಗ ಆಗುವಂತೆ ಚಡಪಡಿಸಿ ಹೋಗುತ್ತಿತ್ತು! ಯಾವಾಗ ಎದ್ದು ಆ ಬಂಡಿ ಹಿಂದೆ ಓಡಲಿಲ್ಲ..ಒಂಚೂರೂ ಅರ್ಥವಾಗದಿದ್ದರೂ ಫಕೀರ ಎಸೆಯುತ್ತಿದ್ದ "ಮಹೋನ್ನತ ಕನ್ನಡ ಚಲನಚಿತ್ರ"ದ ಹ್ಯಾಂಡ್ ಬಿಲ್ ಹಿಡಿಯಲಿಲ್ಲ....ಎಂಬ ಉಮೇದು ಹುಚ್ಚಿನಂತೆ ಉಕ್ಕೇರಿ ಬಿಡುತ್ತಿತ್ತು.ನನ್ನಂತೆ ಅವನ ಮೋಹಕ(?) ಸ್ವರ ಮಾಧುರ್ಯಕ್ಕೆ ಮನಸೋತ ನನ್ನದೇ ವಯಸ್ಸಿನ ಇನ್ನಿತರ ಪ್ರತಿಸ್ಪರ್ಧಿಗಳ ಪೈಪೋಟಿಯೂ ತಡವಾದಂತೆಲ್ಲ ಹೆಚ್ಚುವ ಸಹಜ ಸಾಧ್ಯತೆಯೂ ಇರುವುದರಿಂದ ಈ ತಹತಹಿಕೆ-ಆತಂಕ ಸಹಜ.

ಫಕೀರ ನಮ್ಮೂರಿನ ಏಕಾಮೆದ್ವಿತೀಯ ಶ್ರೀವೆಂಕಟೇಶ್ವರ ಚಿತ್ರಮಂದಿರದ ಗೇಟ್ ಕೀಪರ್ ಆಗಿದ್ದವ.ಸಮಯಕ್ಕೆ ತಕ್ಕಂತೆ ಟಿಕೆಟ್ ಮಾರಾಟ,ಸಿನೆಮ ಪ್ರಚಾರ,ಅಗತ್ಯಬಿದ್ದರೆ ಉದ್ದನೆಕೋಲಿನಿಂದ ಪರದೆ ಸರಿಸೋದನ್ನೂ ಮಾಡುತ್ತಾ ಒಟ್ಟಾರೆ ಆಲ್ ಇನ್ ವನ್ ಆಗಿದ್ದ.ಪುಂಗಿಯ ನಾದಕ್ಕೆ ಮನ ಸೋಲುವ ಮಿಡಿನಾಗರಗಳಂತಹ ನನ್ನಂತ ಅನೇಕ ಅಭಿಮಾನಿಗಳೂ ಅವನಿಗಿದ್ದೆವು ಎಂಬುದೂ ಸತ್ಯ.ಅವನ ಗಾಡಿ ಸಿಂಗಾರಗೊಂದು ಬೀದಿಗಿಳಿದರೆ ನಮ್ಮ ನಿರೀಕ್ಷೆ ಗರಿಗೆದರುತ್ತಿತ್ತು.ಅವನ ವಿವರಣೆ ಚಿತ್ರಗಳಲ್ಲಿ ನಟಿಸಿರೋ ನಟರ ಇಮೇಜಿಗೆ ತಕ್ಕಂತೆ ಏರಿಳಿಯುತ್ತ ಬದಲಾಗುತ್ತಿತ್ತು.ಪದ್ಮಭೂಷಣ ಡಾ,ರಾಜಕುಮಾರ್,ಸಾಹಸಸಿಂಹ ವಿಷ್ಣುವರ್ಧನ್,ರೆಬೆಲ್ ಸ್ಟಾರ್ ಅಂಬರೀಶ್,ಪ್ರಣಯರಾಜ ಶ್ರೀನಾಥ್,ಕ್ರೇಜಿಸ್ಟಾರ್ ರವಿಚಂದ್ರನ್,ಮಿನುಗುತಾರೆ ಶ್ರತಿ,ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್,ಕನಸಿನ ರಾಣಿ ಮಾಲಾಶ್ರಿ ಇವರೆಲ್ಲ ನನಗೆ ಮೊದಲಿಗೆ ಪರಿಚಿತರಾಗಿದ್ದು ಅದೇ ಫಕೀರಣ ಕ್ರಪೆಯಿಂದ!

ಅವನೊಂಥರಾ ತೀರ್ಥಹಳ್ಳಿಯ ಕಿಂದರಿಜೋಗಿ.ಹಾಗೆ ನೋಡಿದರೆ ಆಗ ನಮ್ಮೂರಿನಲ್ಲಿ ಇನ್ನೂ ಒಂದು ಟಾಕೀಸು ಎಂಬ ಕಳ್ಳ ಹೆಸರಿನ ಜೈಶಂಕರ್ ಟೆಂಟುಇತ್ತು.ಆದರೆ ಆಕರ್ಷಣೆಯ ಕೇಂದ್ರ ಮಾತ್ರ ಅವತ್ತೂ ವೆಂಕಟೇಶ್ವರನೇ-ಇವತ್ತೂ ಅವನೇ...ಏಕೆಂದರೆ ಮೂಗಿನಲ್ಲಿ ಮಾತನಾಡೋ ಫಕೀರ ಅಲ್ಲಿದ್ದ!

26 November 2008

ಹೀಗಿತ್ತು ನಮ್ಮೂರು...

ನಮ್ಮೂರಿನ ಜನ ಇನ್ಯಾವುದೇ ಭಾರತದ ಹಳ್ಳಿಗಾಡಿನವರಂತೆ ವಿಪರೀತವೆನ್ನುವಷ್ಟು ದೈವಭಕ್ತರು.ಅವರ ಭಕ್ತಿಯ ಬೆಳೆಯಲ್ಲಿ ದೇವರಿಗೆ ಕೊಟ್ಟಷ್ಟೇ ಮಹತ್ವ ಭೂತಕ್ಕೂ ಇತ್ತು,ಈಗಲೂ ಇದೆ.ಘಟ್ಟದ ಮೇಲಿನ ಊರಾಗಿದ್ಧರೂ ತೀರ್ಥಹಳ್ಳಿಯ ಬಹುಸಂಖ್ಯಾತರು ದಕ್ಷಿಣ ಕನ್ನಡ ಮೂಲದವರೇ ಆಗಿರೋದರಿಂದಲೂ ಏನೋ ಭೂತಾರಾಧನೆ ಅಲ್ಲಿ ಸಹಜವಾಗಿ ಬೇರುಬಿಟ್ಟಿತ್ತು.ತೀರ್ಥಹಳ್ಳಿ ಈಗೇನೋ ಬೆಳೆದು ದೊಡ್ಡ ಊರಾಗಿರಬಹುದು ಆದರೆ ಕೇವಲ ಇಪ್ಪತ್ತೇ-ಇಪ್ಪತ್ತು ವರ್ಷಗಳ ಹಿಂದೆ ಹೆಸರಿಗೆ ತಕ್ಕಂತೆ ದೊಡ್ಡದೊಂದು ಹಳ್ಳಿಯಾಗಿಯೇ ಇತ್ತು.

ಹೀಗಾಗಿ ಪ್ರತೀ ಬಡಾವಣೆಗಳಲ್ಲೂ ಭೂತರಾಯಸ್ವಾಮಿಯದ್ದೋ ಇಲ್ಲ ಚೌಡಿಯದ್ದೋ ಬನ ಇದ್ದೆ ಇರುತ್ತಿತ್ತು.ಆಗೆಲ್ಲ ಸಣ್ಣ ಮಕ್ಕಳು ಸಂಜೆ ಕವಿದ ಮೇಲೆ ಹೋಗಲು ಹೆದರುತ್ತಿದ್ದ ಇಂತಹ ಬನಗಳ ಸುತ್ತಮುತ್ತ ಇತ್ತೀಚಿಗೆ ಜೀವಂತ ಭೂತಗಳಂತ ಜನ ಎರಡೋ-ಮೂರೋ ಉಪ್ಪರಿಗೆಯ ಮನೆ ಕಟ್ಟಿಕೊಂಡಿರೋದು ನೋಡಿ ಬೇಜಾರಾಯಿತು.ನಾವೆಲ್ಲ ಚಿಕ್ಕವರಾಗಿದ್ಧಾಗ ಒಂತರಾ ನಿಗೂಡ ಭಯ ಹುಟ್ಟಿಸುವ ತಾಣಗಳೆಲ್ಲ ಇಂದು ಗತ ವೈಭವ ಕಳೆದುಕೊಂಡು ಪಳಯುಳಿಕೆಯಂತೆ ನಿಂತಿವೆ.ಹಿಂದೊಮ್ಮೆ ತಮಗೆ ಹೆದರುತ್ತಿದ್ದ ಹುಲುಮಾನವರಿಗೆ ಇದೀಗ ತಾವೇ ಹೆದರಿ ಸಾಯಬೇಕಾದ ದೈನೇಸಿ ಸ್ಥಿತಿ ಭೂತಗಳಿಗೆ! ಅದಕ್ಕೆ ಇರಬೇಕು ಇಂದಿನ ಮಕ್ಕಳಿಗೆ ನಮಗಿದ್ದಷ್ಟು ಕಲ್ಪನಾ ಸಾಮರ್ಥ್ಯವೂ ಇಲ್ಲ.ನಾವು ಕಂಡ ಚಂದದ ತೀರ್ಥಹಳ್ಳಿಯ ಕಾಣೋ ಭಾಗ್ಯವೂ ಅವರಿಗಿಲ್ಲ.ಒಟ್ಟಿನಲ್ಲಿ ನಾನು ಕಂಡು ಬೆಳೆದಿದ್ದ ಆ ತೀರ್ಥಹಳ್ಳಿ ಎಲ್ಲೋ ಕಳೆದೇಹೋಗಿದೆ.

ಕಣ್ಣು ಮುಚ್ಚಿಕೊಂಡು ತೀರ್ಥಹಳ್ಳಿಯನ್ನು ನೆನಪಿಸಿಕೊಂಡರೆ ಮೊದಲಿಗೆ ನೆನಪಾಗೋದು ವೆಂಕಟೇಶ್ವರ ಟಾಕೀಸು,ಆಮೇಲೆ ಸೋಮವಾರದ ಸಂತೆ,ಅದರ ನಂತರ ರಾಮೇಶ್ವರ ದೇವಸ್ಥಾನ,ಅದಾದ ಮೇಲೆ ನಮ್ಮ ಮನೆ ಕೆಳಗಿದ್ದ ನಾಗರಬನ.ಜೆ ಸೀ ಆಸ್ಪತ್ರೆ.ಕಾರಂತರ ಬಸಸ್ಟ್ಯಾಂಡ್ ಮಯೂರ ಹೋಟೆಲಿನಲ್ಲಿ ಅಜ್ಜ ಕೊಡಿಸುತ್ತಿದ್ದ ಮಸಾಲೆ ದೋಸೆ! ಹೀಗೆ ಇವೆಲ್ಲ ನನ್ನ ಸ್ಮ್ರತಿಯಲ್ಲಿ ಫ್ರೇಮ್ ಹಾಕಿದಂತೆ ಉಳಿದುಬಿಟ್ಟಿವೆ.ಬಹುಶ ನಾನೂ ಅಲ್ಲಿಯೇ ಫ್ರೀಜ್ ಆಗಿದ್ದೇನೆ!

18 November 2008

ಊರು ಬಿಟ್ಟ ಆ ಕ್ಷಣ...

ಹುಟ್ಟಿ ಬೆಳೆದ ಊರನ್ನು..ಸೆಳೆಯುವ ನೆನಪುಗಳನ್ನು ಬಿಟ್ಟು ಮತ್ತೊಂದು ಹೊಸ ಪ್ರಪಂಚಕ್ಕೆ ಕಾಲಿಡುವುದು ಅಪಾರ ಯಾತನೆಯ ಸಂಗತಿ.ಅದರಲ್ಲೂ ಇನ್ನು ಈ ಊರಿನ ಋಣ ಹರಿದಂತೆ ಎನ್ನುವ ಅಗೋಚರ ಭಾವವೊಂದು ಮನದೊಳಗೆ ವೇದನೆಯ ಅಲೆ ಎಬ್ಬಿಸುತಿರುವಾಗಲಂತೂ ಯಾತನೆ ಆಡಲೂ ಅನುಭವಿಸಲೂ ಆಗದಂತಾಗಿ ಮನವ ಹಿಂಡುತ್ತದೆ.ಮೊದಲ ಬಾರಿಗೆ ತೀರ್ಥಹಳ್ಳಿ ತೊರೆದು ಕಾರ್ಕಳದ ಹಾದಿ ಹಿಡಿದಾಗ ನನ್ನೊಳಗೆ ತುಂಬಿದ್ದುದೂ ಅದೇ ಯಾತನೆ.

ನಾನು ಹುಟ್ಟಿ (ಆಗಿನ ಪದ್ದತಿಯಂತೆ ನನ್ನ ಹುಟ್ಟು ಮನೆಯಲ್ಲೇ ಆಗಿತ್ತು) ಬೆಳೆದ ಮನೆ,ಬಾಲ್ಯದಿಂದ ಚಿರಪರಿಚಿತವಾಗಿದ್ದ ನಮ್ಮ ಕೇರಿಯ ಪರಿಸರ.ಮನೆಯ ಹಟ್ಟಿ ತುಂಬಿದ್ದ ಭಾನು,ಲಕ್ಷ್ಮಿ,ಕುರುಡಿ,ಬೂಚ,ತುಂಗೆ,ನೇತ್ರ,ನಂದಿನಿ,ಮತ್ತವರ ಅಸಂಖ್ಯ ಸಂತಾನ...ಚಳಿಯ ದಿನಗಳಲ್ಲಿ ರಾತ್ರೆ ಮನೆಯೊಳಗೆ ಎಳೆಕರುಗಳನ್ನು ಗೋಣಿತಾಟಿನ ಮಲಗಿಸಿ ಕೊಳ್ಳುತ್ತಿದ್ದುದು.ಅದೆಷ್ಟೋಬಾರಿ ಅವುಗಳ ಅಭೋದ ಕಣ್ಣುಗಳಿಗೆ ಮನಸೋತು ಹಟಾಮಾಡಿ ಅವು ಮಲಗುವ ಗೋಣಿಯಲ್ಲೇ ಅವುಗಳ ತಬ್ಬಿಕೊಂಡು ಆ ಸಿನಗುವಾಸನೆಯ ಸವಿಯಲ್ಲೇ ನಿದ್ರೆಗೆ ಜಾರುತ್ತಿದ್ದುದು.ಆದರೆ ಬೆಳಗಾಗೆದ್ದು ನೋಡುವಾಗ ಮಾತ್ರ ಅದುಹೇಗೋ ಅಮ್ಮನ ಕಂಬಳಿಯಿಂದಲೇ ಹೊರಗೆ ಇಣುಕುತ್ತಿದ್ದುದು! ಈಎಲ್ಲ ಸವಿನೆನಪುಗಳ ಬಿಟ್ಟು ಬಲಿಪಶುವಿನಂತೆ ಇನ್ನೆಲ್ಲಿಗೋ ಒತ್ತಾಯಪೂರ್ವಕವಾಗಿ ಹೋಗುವಂತಿತ್ತು ನನ್ನ ಸ್ಥಿತಿ.

ಆದರೆ ಹೋಗದೆ ವಿಧಿಯಿಲ್ಲ ಹೆತ್ತವರ ನಿರ್ಲಕ್ಷ್ಯ,ಸುತ್ತಲಿನವರ ಸಸಾರಗಳ ಸಹಿಸಲಾಗದೆ ಇರುವುದಕ್ಕಾದರೂ ಊರು ಬಿಡಲೇಬೇಕಿತ್ತು.ಅದೇ ನನ್ನ ವಿಧಿ ಹೀಗಾಗಿ ನಾನು ನನ್ನ ನಾಲು ಜೊತೆ ಅಂಗಿ-ಚಡ್ಡಿಗಳ ಜೊತೆ ಬೈರಾಸು ಒಂದೆರಡು ಬಹುಮಾನವಾಗಿ ಬಂದಿದ್ದ ಪುಸ್ತಕಗಳನ್ನು ಜತನವಾಗಿ ಬಟ್ಟೆಯ ಚೀಲದಲ್ಲಿಟ್ಟುಕೊಂಡು,ಕಿತ್ತುಹೋಗಿದ್ದ ಬಾರನ್ನು ಕಳೆದ ವಾರವಷ್ಟೇ ಬದಲಿಸಿದ್ದ ನನ್ನವೇ ಹಳೆಯ ಹವಾಯಿ ಚಪ್ಪಲಿಗಳನ್ನು ಮೆಟ್ಟಿಕೊಂಡು ಅಜ್ಜನ ಬೆನ್ನು ಹಿಡಿದು ಊರು ಬಿಟ್ಟೆ.ದುರಂತವೆಂದರೆ ಎರಡುದಿನ ಹಿಂದಿನ ವರೆಗೂ ನನ್ನ ಈ ಗಡಿಪಾರಿನ ವಿಷಯ ನನಗೆ ಗೊತ್ತೇ ಇರಲಿಲ್ಲ! ಗೊತ್ತಾದ ನಂತರದ ಕಡೆಯ ಎರದುದಿನಗಳು ಮಂಕಾಗಿದ್ದೆ ಹಾಗು ಬೆಳಗ್ಗೆ ಮಲಗಿದ್ದವ ಏಳುವಾಗ ದಿಂಬು ಒದ್ದೆಯಾಗಿರುತಿತ್ತು.

15 November 2008

ಶಾಲೆಯ ಆದಿನಗಳು....

ಶಾಲೆಗೆ ಸೇರಿದ್ದ ಆರಂಭದ ದಿನಗಳಲ್ಲಿ ನನ್ನ ಬುದ್ದಿಮಟ್ಟ ವಿಶೇಷವೆಂದು ಯಾರಿಗೂ ಅನಿಸಿರಲಿಲ್ಲ.ಅದರಲ್ಲಿ ಏನಾದರೂ ವಿಶೇಷವಿದ್ದಿರಬಹುದು ಎಂದು ನನಗೂ ಅನಿಸಿರಲಿಲ್ಲ.ಆದರೆ ಬರುಬರುತ್ತಾ ಓದಿನ ವಿಷಯದಲ್ಲಿ ನನ್ನ ಸಾಮರ್ಥ್ಯ ಇನ್ನುಳಿದವರಿಗಿಂತ ಸ್ವಲ್ಪ ಹೆಚ್ಚೇ ಇರುವುದು ನನಗೆ ಅರಿವಾದಂತೆ ನನ್ನ ಶಿಕ್ಷಕರಿಗೂ ಅರಿವಾಗಿತ್ತು.ಆದರೆ ಪ್ರೋತ್ಸಾಹದ ವಿಷಯದಲ್ಲಿ ಮಾತ್ರ ನಾನು ನಿರಾಶ್ರಿತನಾದೆ.ಕಾರಣಗಳನ್ನು ಉಹಿಸುವ ಧ್ರಾಷ್ತ್ಯಕ್ಕೆ ಇಳಿಯಲಾರೆ,ಆದರೆ ಹಣವಂತರಾಗಿದ್ದ ಅಲ್ಪ ಮಟ್ಟದ ಬುದ್ದಿವಂತರ ನಂತರದ ಸ್ಥಾನ ನನ್ನದಾಗಿತ್ತು ಎಂಬುದಷ್ಟೇ ನನ್ನ ನೋವಿಗೆ ಕಾರಣ.ಈಗ ನನಗಿರುವ ನ್ಯಾಯಪರತೆಯ ಅರಿವಿನ ಪರಿಧಿಯಲ್ಲೇ ಹೇಳುವದಾದರೆ ಅಷ್ಟು ಅಸಡ್ಡೆ ಹಾಗು ಎರಡನೇ ದರ್ಜೆಯ ಆದರಕ್ಕೆ ಖಂಡಿತಾ ನಾನು ಅರ್ಹನಾಗಿರಲಿಲ್ಲ.ಅಲ್ಲದೆ ತಾರತಮ್ಯದ ಮೂಲಕ ಮಕ್ಕಳ ಎಳೆ ಮನಸಸಿನಲ್ಲಿ ಖೇದದ ಬೀಜ ಬಿತ್ತಿ ಆ ವಯಸಿನಲ್ಲಿಯೇ ಅವರನ್ನು ಸಿನಿಕರನ್ನಗಿಸುವ ತಮ್ಮ ನಡುವಳಿಕೆಗಳ ಬಗ್ಗೆ ಶಿಕ್ಷಕರಿಗೂ ಅರಿವಿಲ್ಲದಿರುವುದು ವಿಷಾದದ ಸಂಗತಿ.

ನನ್ನ ಹೆತ್ತಮ್ಮನಿಗೆ ಅದೇನೋ ದುರಾಸೆ,ಮಗ ಒಂದು ಖಾಸಗಿ ಶಾಲೆಯಲ್ಲಿ ಕಲಿತರೆ ಮಾತ್ರ ಉತ್ತಮ ನಾಗರೀಕನಾಗಬಲ್ಲ ಎಂಬ ಗೊಡ್ಡು ಭ್ರಮೆ.ಹೀಗಾಗಿ ಊರಿನಲ್ಲಿದ್ದ ಪ್ರತಿಷ್ಠಿತ ಶಾಲೆಯೊಂದಕ್ಕೆ ಸೇರಿಸಲ್ಪಟ್ಟೆ.ಅವರೇನೋ ಪಿಗ್ಮಿ ಸಂಗ್ರಹ ಮಾಡಿ,ಹೂವಿನಂಗಡಿಗೆ ಹೂ ಕಟ್ಟಿಕೊಟ್ಟು ನಾಲ್ಕಾರು ಕಾಸು ಸಂಪಾದಿಸಿ ಶಾಲೆಗೂ ಕಳಿಸುವ ನಿರ್ಧಾರ ಮಾಡಿದ್ಧರು ನಿಜ ಆದರೆ ವಾಸ್ತವದಲ್ಲಿ ಅವರ ದುಡಿಮೆಯಲ್ಲಿ ಅವರದ್ದೇ ಆದ ಇತರ ಖರ್ಚುಗಳೆಲ್ಲ ಕಳೆದ ನಂತರ ನನ್ನ ಶಾಲೆಯ ಫೀಸಿಗೆ ಸಾಕಷ್ಟು ಹಣ ಉಳಿಯುತ್ತಿರಲಿಲ್ಲ.ಹೀಗಾಗಿ ಪ್ರತಿ ತಿಂಗಳ ಕೊನೆಯಲ್ಲಿ ನನ್ನೊಬ್ಬನ ಹೊರತು ಇನ್ನೆಲ್ಲರೂ ತಮ್ಮ ಫೀಸ್ ಕೊಟ್ಟಿರುತ್ತಿದ್ದು ನಾನೊಬ್ಬ ಮಾತ್ರ ಅಪರಾಧಿ ಪ್ರಜ್ಞೆಯಿಂದ ನರಳುತ್ತಿದ್ದೆ.ಮೇಲಾಗಿ ಡೈರಿಯಲ್ಲಿ ಅಮ್ಮನಿಗೆ ಕರೆ,ಸಕಾಲದಲ್ಲಿ ಹಣ ಸಂದಾಯವಾಗದ ಬಗ್ಗೆ ನನಗೆ ತರಗತಿಯಲ್ಲಿ ಸದಾ ಕರಕರೆ.ಹೀಗಾಗಿ ಶಿಕ್ಷಕರ ದ್ರಷ್ಟಿ ನನ್ನ ಪ್ರತಿಭೆಯನ್ನು ಗುರುತಿಸುವ ಹೊರತು ಅವರಿಗೆ ತಿಳಿಯದಂತೆ ಭರ್ತ್ಸನೆಗಳಿಂದ ಕಮರಿಸುವುದರತ್ತಲೇ ಸಾಗಿತು.ಈ ಎಲ್ಲ ಹಿಂಸೆಯಿಂದ ಮುಕ್ತಿ ದೊರಕಿದ್ದು ನಾನು ಐದನೇ ತರಗತಿಗೆ ಸೇರಲು ಚಿಕ್ಕಮ್ಮನೂರಾದ ಕಾರ್ಕಳಕ್ಕೆ ಕಾಲಿಟ್ಟಾಗ.

ಆದರೆ ಅದೊಂದು ಬೆಂಕಿಯಿಂದ ಬಾಣಲೆಗೆ ಬಿದ್ದ ಅನುಭವದಂತಾಗಿದ್ದು ಮಾತ್ರ ಬೇರೆಯದೇ ಕಥೆ. ನನ್ನ ಅಪ್ಪ ಅಮ್ಮನಲ್ಲಿದ್ದ ಸಮರಸದ ಕೊರತೆಯಿಂದ ಅವರಿಬ್ಬರೂ ಯಾವಾಗಲೂ ಒಂದಾಗಿರುತ್ತಿದ್ದುದು ಕಡಿಮೆ.ಒಂದು ವೇಳೆ ಹಿರಿಯರ ರಾಜಿ-ಕಬೂಲಿಯಿಂದ ಜೊತೆಯಾದರೂ ಆ ಅಂಕ ಆದಷ್ಟು ಬೇಗ ಸರಿದು ಮತ್ತೊಂದು ರಾಜಿಗೆ ವೇದಿಕೆ ಸಿದ್ಧವಾಗುವ ತನಕ ಬೇರೆಯಾಗಿರುತ್ತಿದ್ದರು.ಅಮ್ಮ ತವರಿನಲ್ಲೇ ಬಿಡಾರ ಹೂಡಿರುತ್ತಿದ್ದರಿಂದ ನಾನು ಅಲ್ಲೇ ಉಳಿಯಬೇಕಾಗುತ್ತಿತ್ತು.ಹೀಗಾಗಿ ನನ್ನ ಹೆತ್ತವರ ಬಗ್ಗೆ ಕುಟುಂಬದಲ್ಲಿ ಅಂತಹ ಆದರವೇನೂ ಇರಲಿಲ್ಲ.ದುರದ್ರಸ್ತಕ್ಕೆ ಅದಕ್ಕೆ ಬಲಿಯಾದವರು ಮಾತ್ರ ನಾವು ಮಕ್ಕಳು.ಅದೆಕರಣಕ್ಕೆ ಚಿಕ್ಕಮ್ಮ ಊರಿಗೆ ಕರೆಸಿಕೊಂಡರೂ ಮನೆಯಲ್ಲಿ ಇರಗೊಡದೆ ಹಾಸ್ಟೆಲ್ಳಿಗೆ ಸೇರಿಸಿ ಬಿಟ್ಟರು.ಕೂಗಳತೆಯ ದೂರದಲ್ಲಿದ್ದರೂ ಮನೆಗೆ ಬಾರದಂತ ವಾತಾವರಣ.ಬಹುಷಃ ಆಗಿನಿಂದಲೇ ಒಂಟಿತನಕ್ಕೆ ನಾನು ಹೊರಳಿಕೊಂಡೆ ದೈಹಿಕವಾಗಿಯೂ...ಮಾನಸಿಕವಾಗಿಯೂ.

12 November 2008

ಡಾ ವರ್ಗೀಸ್ ಕುರಿಯನ್ ತಮ್ಮ ಮೊಮ್ಮಗ ಸಿದ್ಧಾರ್ಥನಿಗೆ ಬರೆದ ಆತ್ಮೀಯ ಪತ್ರ.

ನನ್ನ ಪ್ರೀತಿಯ ಸಿದ್ಧಾರ್ಥ,

ನಿನಗೆ ಯಾವಾಗ ನಾನು ಬರೆದದ್ದು? ಜ್ಞಾಪಿಸಿಕೊಳ್ಳುವುದು ಕೂಡ ನನಗೆ ಕಷ್ಟವಾಗುತ್ತಿದೆ! ವೇಗವಾಗಿ ಓಡುತ್ತಿರುವ ಇಂದಿನ ಪ್ರಪಂಚದಲ್ಲಿ ತಕ್ಷಣದ ಸಂಪರ್ಕಕ್ಕೆ ಮೊಬೈಲನ್ನು ನಾವು ಬಳಸುತ್ತೇವೆ. ಫೋನಿನಲ್ಲಿ ಮಾತನಾಡಿದ ತಕ್ಷಣ ಮಿಂಚಿ ಮರೆಯಾಗುವಂತ ಸಂತೋಷವೇನೋ ಸಿಗುವುದು ನಿಜ. ಆದರೆ ಬರವಣಿಗೆಯ ಛಾಪೆ ಬೇರೆ. ಬರವಣಿಗೆ ಅದು ಕೇವಲ ಪತ್ರವೆ ಇರಲಿ, ನಮ್ಮ ಇಂದಿನ ತಾಪತ್ರಯಗಳು ಹಾಗೂ ಇಂದು ನಮ್ಮ ಸುತ್ತಮುತ್ತ ನಡೆಯುತ್ತಿರುವ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಆ ಬಗ್ಗೆ ನಮ್ಮ ಅಭಿಪ್ರಾಯಗಳನ್ನು ಶೇಖರಿಸಿ ವರ್ಷಗಳುರುಳಿದಂತೆ ಓದಿ ಆನಂದಿಸುವ ಆಸ್ತಿಯಾಗುತ್ತದೆ.

ಮುಂದೆ ಬರಲಿರುವ ಅಧ್ಯಾಯಗಳು ಪತ್ರಕ್ಕಿಂತ ಹೆಚ್ಚಿನವು. ನೀನು ಇದನ್ನು ಇಡಿಯಾಗಿ ಓದ ಬಯಸದೆ ಇರಬಹುದು. ಆದರೆ ಹತ್ತಾರು ವರ್ಷ ಕಳೆದ ನಂತರ ಈ ಟಿಪ್ಪಣಿಗಳನ್ನು ಎತ್ತಿಕೊಂಡು ನೀನು ನೋಡಿದಾಗ ನಾನು ಏನು ಮಾಡಿದೆ? ಎಂಬುದರ ಅಂತರಾರ್ಥ ಹಾಗು ನಮ್ಮ ದೇಶದ ರೈತರ ಸೇವೆಗೆ ತೊಡಗಿದುದರ ಕಾರಣ ತಿಳಿಯಬಹುದು. ಇಪ್ಪತ್ತೊಂದನೆಯ ಶತಮಾನಕ್ಕೆ ಪ್ರಪಂಚ ಕಾಲಿಡುವ ಮುನ್ನ ಅಮೂಲ್ಯವಾದ ಆ ದಿನಗಳು ನಿನಗೆ ಆಗ ಗೋಚರಿಸುತ್ತವೆ. ಆವಾಗ ನನ್ನ ನೆನಪುಗಳನ್ನು ನಿನ್ನ ಪೀಳಿಗೆಯ, ಇಲ್ಲವೆ ನಿನಗಿಂತ ಕಿರಿಯರಿಗೋ ನಿನ್ನ ಅಜ್ಜಿ ಅಜ್ಜಂದಿರು ಬಾಳಿದ ಮತ್ತು ತಿಳಿದಿದ್ದ ಪ್ರಪಂಚವನ್ನು ಹಂಚಿಕೊಳ್ಳಬಹುದು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದೊಡನೆ ನಾನು ನನ್ನ ವೃತ್ತಿ ಜೀವನವನ್ನು ಆರಂಭಿಸಿದೆ. ಅಂದಿನ ದಿನಗಳಲ್ಲಿ ನಮ್ಮ ಕನಸಿನ ಭಾರತದ ಜನ ಸಾಮಾನ್ಯರು ತಲೆಯೆತ್ತಿ ಮೆರೆಯುವುದೆ ಅಲ್ಲದೆ, ನಾವು ಈ ದೇಶವನ್ನು ಕಟ್ಟಲು ಯಾವುದೆ ಮಾರ್ಗದಲ್ಲಿ ನಮ್ಮ ಕೊಡುಗೆಗಳನ್ನು ಕೊಡುವುದೆ ಶ್ರೇಷ್ಠ ಕಾರ್ಯವೆಂದು ತಿಳಿದಿದ್ದೆವು. ನಮ್ಮ ಜನ ಪರಸ್ಪರ ಗೌರವ ಮತ್ತು ಸ್ನೇಹ - ಪ್ರೇಮದಿಂದ ಬಾಳುವ ದೇಶ ನಮ್ಮದಾಗಬೇಕು. ಮುಂದುವರೆದ ರಾಷ್ಟ್ರಗಳಲ್ಲಿ ಮೊದಲ ಪಂಕ್ತಿಯಲ್ಲಿ ಪರಿಗಣಿತವಾಗಬೇಕು ಎಂಬ ಆಸೆಯಿತ್ತು. ಒಂದು ರೀತಿಯ ಬಾಳನ್ನು ಆಯ್ಕೆ ಮಾಡಿಕೊಂಡಾಗ ಇನ್ನಿತರ ಆಯ್ಕೆಗಳು ಅದೆಷ್ಟೆ ಆಕರ್ಷಕವಾಗಿದ್ದರೂ ಬದಿಗಿರಿಸುವುದು ಅನಿವಾರ್ಯ ಎಂಬ ಅರಿವಿನ ವಿನೀತ ಭಾವ ನನ್ನಲ್ಲಿ ಮೂಡಿತು. ಈ ಪರಿವರ್ತನೆ ಸಾಧ್ಯವಾದದ್ದು ಐವತ್ತು ವರ್ಷಗಳ ಹಿಂದೆ ತಮ್ಮ ಜೀವನದ ಮೇಲೆ ಹತೋಟಿ ಸಾಧಿಸಿ ಸ್ವಾವಲಂಬಿಗಳಾಗಲು ಯತ್ನಿಸುತ್ತಿದ್ದ ಹೈನುಗಾರ ರೈತರ ಒಂದು ಸಣ್ಣ ಸಹಕಾರಿ ಸಂಘಕ್ಕೆ ಕೆಲಸ ಮಾಡಲು ಒಪ್ಪಿದಾಗ.


ಪ್ರಾಮಾಣಿಕವಾಗಿ ಹೇಳುವದಾದರೆ ನನ್ನ ವೃತ್ತಿ ಬಾಳ್ವೆ ನಮ್ಮ ನಾಡಿನ ರೈತರ ಸೇವೆಗಾಗಿ ಎಂದು ನಾನು ಎಂದೂ ತೀರ್ಮಾನಿಸಿರಲಿಲ್ಲ. ಆದರೆ ಅದು ಹೇಗೊ ಘಟನೆಗಳ ಸರಮಾಲೆ ನನ್ನನ್ನು ಒಂದು ಗೊತ್ತಾದ ಸ್ಥಳಕ್ಕೆ ಸರಿಯಾದ ಸಮಯದಲ್ಲಿ ತಲುಪಿಸಿತು. ಓದಿದ್ದ ಮೆಟಲರ್ಜಿಯ ಬಲದಿಂದ ಯಾವುದಾದರೂ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿ ಅದರ ಸಿಇಓ ಆಗಬಹುದಿತ್ತು, ಇಲ್ಲವೇ ಸೈನ್ಯಕ್ಕೆ ಸೇರಿ ಬಹುಷಃ ಜನರಲ್ ಆಗಿ ನಿವೃತ್ತನಾಗಬಹುದಿತ್ತು. ಆದರೆ ನಾನು ಇವ್ಯಾವುದನ್ನೂ ಆಯ್ಕೆ ಮಾಡಿಕೊಳ್ಳಲಿಲ್ಲ. ಏಕೆಂದರೆ ಆಳದಲ್ಲೆಲ್ಲೋ ನಾನು ಇಲ್ಲಿ ಅಂದರೆ ಗುಜರಾತಿನ ಆನಂದ್'ನಲ್ಲಿ ಒಂದು ಅರ್ಥಪೂರ್ಣ ಕೊಡುಗೆಗಾಗಿ ದುಡಿಯುವುದು ಸಾಧ್ಯ ಎಂಬ ಅರಿವು ನನಗಿತ್ತು. ನಿನ್ನ ಅಜ್ಜಿ ಕೂಡ ಈ ನನ್ನ ಆಯ್ಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಳು. ಆ ದಿನಗಳಲ್ಲಿ ನಾವಿಂದು ಸಾಮಾನ್ಯ ಸೌಲಭ್ಯಗಳೆಂದು ಪರಿಗಣಿಸುವ ಸವಲತ್ತುಗಳೂ ಅಲ್ಲಿ ಅಲಭ್ಯ. ಆದರೂ ಅವಳು ಅಲ್ಲೆ ನನ್ನೊಂದಿಗೆ ವಾಸಿಸಿ, ಅಲ್ಲಿಯೆ ಬದುಕ ಕಟ್ಟುವ ನನ್ನ ಆಯ್ಕೆಯನ್ನು ಮನಸಾರೆ ಬೆಂಬಲಿಸಿದಳು. ನನ್ನ ಬೆಂಗಾವಲಾಗಿ ನಿಂತ ನಿನ್ನ ಅಜ್ಜಿಯ ಆಯ್ಕೆ ನನಗೆ ನೀಡಿದ ಮಾನಸಿಕ ಶಕ್ತಿಯಿಂದಲೇ ಎಲ್ಲ ಮಹತ್ವದ ಹೆಜ್ಜೆಗಳನ್ನು ಹಿಂಜರಿಯದೆ ಮುನ್ನಡೆಸಿತು.

ದೇಶದ ಪ್ರಗತಿಗೆ ಸಂದ ನನ್ನ ದುಡಿಮೆಯನ್ನು ಗುರುತಿಸಿ ಸನ್ಮಾನಿಸಿದಾಗಲೆಲ್ಲ ಅನೇಕ ಜನರ ಸಾಧನೆಗಳಿಗೆ ನನ್ನ ಮೂಲಕ ಸಂದ ಮನ್ನಣೆಯಿದು ಎಂಬುದನ್ನೂ ಒತ್ತಿ ಒತ್ತಿ ಹೇಳುತ್ತೇನೆ ಹಾಗೂ ನನ್ನವೆ ಆದ ಕೆಲವು ಮೂಲ ಮೌಲ್ಯಗಳೂ ಇವಕ್ಕೆ ಕಾರಣ. ನನ್ನ ತಂದೆ ತಾಯಿಗಳ - ಕುಟುಂಬದ ಹಿರಿಯರ, ಆನಂದಿನ ನನ್ನ ಮಾರ್ಗದರ್ಶಕ ತ್ರಿಭುವನದಾಸ್ ಪಟೇಲರಲ್ಲಿ ನಾನು ಕಂಡ ಮೌಲ್ಯಗಳೂ ಇದರ ಹಿಂದಿವೆ. ಒಟ್ಟಾರೆ ಹೇಳ ಬೇಕೆಂದರೆ ಪ್ರಾಮಾಣಿಕತೆ, ತನಗೆ ತಾನು ಪ್ರಾಮಾಣಿಕನಾಗಿರುವುದು. ನೀನೂ ಸದಾ ನಿನಗೆ ಪ್ರಾಮಾಣಿಕನಾಗಿದ್ದರೆ ಇತರರೊಂದಿಗೂ ಹಾಗೆಯೇ ಇರಲು ಕಷ್ಟವಾಗಲಾರದು.


ನಾನು ಅರಿತಂತೆ ಒಂದು ದಿನ ಖಂಡಿತ ನೀನೂ ಜೀವನ ಎಂಬುದೊಂದು ಸುಯೋಗ, ಇದನ್ನು ಹಾಳು ಮಾಡುವುದು ತಪ್ಪು ಎಂಬುದನ್ನೂ ಅರಿಯುವೆ. ಬಾಳು ಎಂಬ ಭಾಗ್ಯದಲ್ಲಿ ನಿನ್ನ ಜವಾಬ್ದಾರಿಯನ್ನು ನೀನು ಒಪ್ಪಿ ಅರಿತುಕೊಳ್ಳಬೇಕು. ನಿನ್ನ ಕೌಶಲ್ಯ ಹಾಗೂ ಸಾಮರ್ಥ್ಯವನ್ನು ಶ್ರೀಸಾಮಾನ್ಯನ ಒಳಿತಿಗಾಗಿ ಯಾವುದಾದರೂ ಒಂದು ರೀತಿಯಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿದಿನ ಈ ಅಗತ್ಯಗಳು ನಿನ್ನ ಮುಂದೆ ಬಂದೆ ಬರುತ್ತವೆ. ಹಾಗೆಯೇ ನೀನು ಸುತ್ತ ದೃಷ್ಟಿ ಹಾಯಿಸಿದರೆ ನಿನಗಾಗಿ ಕಾಯುತ್ತಿರುವ ಅವುಗಳನ್ನು ಕಾಣಬಹುದು. ನಿನ್ನ ಗೆಳೆಯನಿಗೆ ಸಹಾಯ ಬೇಕಿರಬಹುದು, ನಿನ್ನ ಉಪಾಧ್ಯಾಯರಿಗೆ ಸ್ವಯಂ ಸೇವಕ ಬೇಕಾಗಿರಬಹುದು ಅಥವಾ ನೀನು ಜೀವಿಸುತ್ತಿರುವ ಸಮುದಾಯಕ್ಕೆ ನಿನ್ನ ಕೊಡುಗೆಯ ಅಗತ್ಯ ಇರಲೂಬಹುದು. ಜಯದ ಪರಿವೆ ಇಲ್ಲದೆ, ಸೋಲಿನ ಹತಾಶೆಗೂ ಕುಗ್ಗದೆ ನಿನ್ನ ಉಪಯುಕ್ತ ಕೊಡುಗೆಗಳನ್ನೂ ಶ್ರಮವಹಿಸಿ ನೀಡಬಹುದು.


ನಾನು ಕಂಡಂತೆ ಯಾವ ಕ್ಷಣದಲ್ಲೂ ತಪ್ಪಾಗಬಹುದು. ಅನೇಕ ಬಾರಿ ಹಾಗೆಯೇ ಆಗುತ್ತದೆ ಜನರು ಬಾಳುತ್ತಿರುವ ಪರಿಸರ ಹಾಗೂ ಅವರೆಷ್ಟು ಸಂತೋಷವಾಗಿದ್ದರೆ ಎಂಬುದಕ್ಕೆ ತಾಳಮೇಳ ಇರುವುದಿಲ್ಲ. ನಮ್ಮ ಸಂಬಂಧಿ, ಪರಿಚಿತ ಅಥವಾ ಇನ್ಯಾರೋ ರಸ್ತೆಯಲ್ಲಿ ಹೋಗುವವನೊಂದಿಗೆ ಹೋಲಿಸಿಕೊಂಡು ಕುರುಬುತ್ತೇವೆ. ಆದರೆ ನಾವು ಗಮನವಿಟ್ಟು ಹತ್ತಿರದಿಂದ ನೋಡಿದಾಗ ಅವು ಪೂರ್ಣತೆಯ ಪ್ರತಿಬಿಂಬಗಳು ಎಂಬುದರ ಅರಿವಾಗುತ್ತವೆ. ಇಲ್ಲದಿರುವುದರ ಬಗ್ಗೆ ಚಿಂತಿಸದೆ ಇರುವುದರಲ್ಲೆ ನೆಮ್ಮದಿಯಾಗಿರಲು ಇವು ಸಹಕರಿಸುತ್ತವೆ.

೧೯೯೯ರಲ್ಲಿ ನನಗೆ ರಾಷ್ಟ್ರಾಧ್ಯಕ್ಷರು ಪ್ರಶಸ್ತಿ ನೀಡುವ ಭವ್ಯ ಸಮಾರಂಭಕ್ಕೆ ಬಂದದ್ದು ನಿನಗೆ ನೆನಪಿದೆಯೆ? ತುಂಬ ಹೆಮ್ಮೆಯಿಂದ ಪದಕವನ್ನು ಕೊರಳಿಗೆ ಹಾಕಿಕೊಂಡು ಅದನ್ನು ಅಚ್ಚರಿಯಿಂದ ನೋಡಿ ಇದನ್ನು ನಾನು ಇಟ್ಟುಕೊಳ್ಳಲೆ? ಎಂದು ಕೇಳಿದೆ. ಆಗ ನಾನು ಮತ್ತು ನಿನ್ನ ಅಜ್ಜಿ ಹೇಳಿದ್ದು ನೆನಪಿದೆಯೆ? ಈ ಪದಕ ನನ್ನದರಂತೆ ನಿನ್ನದೂ ಕೂಡ, ಆದರೆ ನೀನು ನನ್ನ ಪದಕಗಳನ್ನು ಕೂಡುವುದರಲ್ಲಿ ತೃಪ್ತನಾಗಬಾರದು. ಸವಾಲಿರುವುದು ಮುಂದೆ ನಿನ್ನ ಪರಿಶ್ರಮಕ್ಕೆ ತಕ್ಕ ಪ್ರಶಸ್ತಿಗಳನ್ನು ನೀನೆ ಗಳಿಸುವುದರಲ್ಲಿ.


ಕೊನೆಯದಾಗಿ ಎಲ್ಲವನ್ನೂ,ಎಲ್ಲರನ್ನೂ ಪ್ರೀತಿಸುವ ಶಕ್ತಿ. ಇನ್ನೊಬ್ಬರ ಸಂತಸದಲ್ಲೂ ನಲಿವ ಎದೆಗಾರಿಕೆ ಹಾಗು ಬಾಳಲು ನಮ್ಮೆಲ್ಲರಿಗೂ ಸಾಕಷ್ಟು ಅವಕಾಶವಿದೆ ಎಂಬ ವಿವೇಕ ನಿನ್ನಲ್ಲಿದ್ದರೆ ಬಾಳು ಅರ್ಥಪೂರ್ಣ.

ಸಿದ್ಧಾರ್ಥ, ಈ ಚಿಂತನೆಗಳು ನಿನಗಾಗಿ ಹಾಗು ನಿನ್ನ ತಲೆಮಾರಿನ ನಮ್ಮ ಸುಂದರ ದೇಶದ ಲಕ್ಷಾಂತರ ಮಕ್ಕಳಿಗಾಗಿ. ಇದನ್ನು ಓದಿದ ಮೇಲೆ ನೀವು ಆಯ್ದುಕೊಂಡ ಕ್ಷೇತ್ರದಲ್ಲಿ ಭಯವಿಲ್ಲದೆ ಮುನ್ನುಗ್ಗಿ ದೇಶದ ಬಹುಜನರ, ಮಾನವತೆಯ ಹಿತಕ್ಕಾಗಿ ಸ್ಫೂರ್ತಿ ಸಿಗುವುದೆಂದು ಭಾವಿಸುತ್ತೇನೆ. ಹಾಗೆ ನಿಮಗೆ ಬರುವ ಪ್ರಶಸ್ತಿಗಳೆ ನಿಜವಾದ ಪ್ರಶಸ್ತಿಗಳು ಹಾಗು ಸಾರ್ಥಕ ಬದುಕಿಗೆ ಅವೆ ನಿಜವಾದ ಮನ್ನಣೆಗಳು ಎಂಬುದನ್ನೂ ಮರೆಯದಿರಿ.

ನನ್ನ ನಲುಮೆಯ ಪ್ರೀತಿಯೊಂದಿಗೆ

ನಿನ್ನ ಒಲುಮೆಯ
ದಾದ

11 November 2008

ನೋವಿನ ಅಲೆ...

ಮನಸ ಸರೋವರಕ್ಕೂ

ಮಾನಸ ಸರೋವರಕ್ಕೂ ವ್ಯತ್ಯಾಸವೇನಿಲ್ಲ/

ತುಂಬಿ ಬಂದಾಗ ಎರಡೂ

ಧಾರೆ ಧಾರೆಯಾಗಿ ಧುಮ್ಮಿಕ್ಕಿ ಹರಿಯುತ್ತವೆ//

10 November 2008

ನಿರಾಕರಣೆ ಹೀಗೆ ಇರಲಿ..

ಮಾತು ಮಾತಿಗೂ ಮುನಿಸಿ ಕೊ(ಲ್ಲು)ಳ್ಳುವ ಗೆಳತಿ,

ಇರಲಿ ನನ್ನ ಮೇಲೆ ಚೂರೇ ಚೂರು ಕರುಣೆ/

ಪ್ರೀತಿಗಲ್ಲದಿದ್ದರೂ ದ್ವೇಷಕ್ಕಾದರೂ ಮುನಿಸಿಕೊಳ್ಳುತಿರು ಹೀಗೆ,

ಹಾಗಾದರೂ ಮರೆಯಾಗಲಿ ನಿನ್ನ ನಿರಾಕರಣೆಯ ನೋವು ಬವಣೆ//

09 November 2008

ಆತ್ಮದ ಗೆಳೆಯ....

ನಂಬಿಕೆ!

ಹುಂ,ಇಲ್ಲಿಯವರೆಗಿನ ನನ್ನೆಲ್ಲ ದಿನಗಳೂ ಕಳೆದದ್ದು ಕೇವಲ ನಂಬಿಕೆಯ ಆಧಾರದ ಮೇಲೆ.ಬಾಲ್ಯದಲ್ಲಿ ಚೆನ್ನಾಗಿ ಓದಿ ಮುಂದೆ ಗೆಲ್ಲುತ್ತೇನೆ ಎಂಬ ನಂಬಿಕೆ. ಹಾಸ್ಟೆಲ್ಲಿನಲ್ಲಿ ಅನಿವಾರ್ಯವಾಗಿ ಕೊಳೆಯುವಾಗ ಮುಂದಾದರೂ ಸುಖದ ಕನಸು ಸಾಕಾರವಾಗುತ್ತದೆ ಎಂಬ ನಂಬಿಕೆ. ತೀರ ಒಂಟಿತನ ಕಾಡಿದಾಗ ಯಾರಾದರೂ ಹೃದಯಕ್ಕೆ ಹತ್ತಿರವಾದ ಗೆಳೆಯರು ಸಿಕ್ಕಾರು ಎಂಬ ನಂಬಿಕೆ. ನಿನ್ನನ್ನು ಕಣ್ತುಂಬಿ ಕೊಂಡಾಗ ಎಂದಾದರೊಮ್ಮೆ ನಿನ್ನ ಸಾಂಗತ್ಯ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ. ಹೀಗೆ ನಂಬಿಕೆಯ ನೆಲೆಯಲ್ಲಿಯೇ ಒಂಬತ್ತು ಸಾವಿರ ದಿನಗಳ ಬಾಳ್ವೆ ಕಳೆದೆ ಹೋಗಿದೆ. ಉಳಿದೆಲ್ಲ ನಂಬಿಕೆ ನಿಜವಾದರೂ ನಿನ್ನ ಮನ ಗೆಲ್ಲುವ ನಂಬಿಕೆ ಸುಳ್ಳಾಯ್ತು. ಆದರೂ ನಂಬುವ ಚಟ ಬಿಡಲಾಗುತ್ತಿಲ್ಲ. ಹೀಗಾಗಿ ನನ್ನ ಸಹಿಯಲ್ಲಿ ನೀನು ಸ್ಥಿರವಾಗಿ ಉಳಿದೆ.  ಹೌದು! ನನ್ನ ಹಸ್ತಾಕ್ಷರಗಳ ಅಧಿಕೃತ ರೂಪ ನೀನೆ. ಕಡೆಗೂ ನಿನ್ನನ್ನು ಕೇವಲ ಸಹಿಯಲ್ಲದರೂ ಉಳಿಸಿ ಕೊಂಡ ತೃಪ್ತಿ ನನ್ನದು.


ಹಾಲು ಹಲ್ಲುದುರುವ ಎಳೇ ವಯಸ್ಸಿನಲ್ಲಿ ಅಮ್ಮ ನನ್ನೊಳಗೆ ಬಿತ್ತಿದ್ದ ಒಂದು ನಂಬಿಕೆ ಇಂದು ಬೆಳೆದು ಹೆಮ್ಮರವಾಗಿದೆ. ಮಣ್ಣು ಸಗಣಿ ಉಂಡೆ ಕಟ್ಟಿ ಬಿದ್ದ ಹಲ್ಲನ್ನು ಅದರಲ್ಲಡಗಿಸಿ ಮನೆಯ ಮಾಡ ಮೇಲೆಸೆದು ಬೀಳ್ಕೊಟ್ಟರೆ ಚಿನ್ನದ ಹಲ್ಲು ಮತ್ತೆ ಚಿಗುರುತ್ತಂತೆ!. ಹೀಗಾಗಿ ಎಲ್ಲ ಸವಿ ನೆನಪುಗಳ ಸಿಹಿ ಸಂಭ್ರಮವನ್ನು ಹಾಗೆ ಉಂಡೆಕಟ್ಟಿ ನೆನಪಿನ ಮನೆ ಮಾಳಿಗೆಯ ಮೇಲೆಸೆಯುತ್ತೇನೆ. ಮುಂದಾದರೂ ಹೊಸದಾದ ಚಿನ್ನದ ಬಾಳ್ವೆ ಎದುರಾದೀತು ಎಂಬ ಆಶಯವನ್ನು ಮೊಳಕೆಯಾಗಿಸುತ್ತಾ ಕಾಯುತ್ತಲೇ ಇದ್ದೇನೆ. ಮುಂದೊಮ್ಮೆ ಸಿಗ ಬಹುದಾದ ಬಂಗಾರದ ಬಾಳ್ವೆಗೆ.ಬಾಳ ಬುತ್ತಿ ಹಂಚಿಕೊಳ್ಳಲು ನೀನು ನನಗೆ ಸಿಗದಿದ್ದರೇನು? ಜೀವದ ಗೆಳೆಯ ರುದ್ರಪ್ರಸಾದನ ಜೊತೆ ಸಿಕ್ಕಿದೆ, ನನ್ನ ಒಳ ಬೇಗುದಿಗೆ ಅರ್ಥ ಹುಡುಕುತ್ತಾನವನು. ವಯಸ್ಸಿನಲ್ಲಿ ನನ್ನಿಂದ ಕಿರಿಯ ಸಾಂತ್ವಾನದ ಹೆಗಲಾಗುವುದರಲ್ಲಿ ನನ್ನಿಂದಲೂ ಹಿರಿಯ. ನನ್ನೆಲ್ಲ ರಹಸ್ಯಗಳನ್ನೂ ಬಲ್ಲವ, ನನ್ನದೆಲ್ಲವೂ ಆತ ತಿಳಿಯಲಿ ಎಂದು ನಾನು ಹಾರೈಸುವ ಏಕೈಕ ಜೀವ. ನಿನ್ನ ಹಾಗು ನನ್ನ ನಡುವಿನ ಸಂವೇದನೆಯ ಖಚಿತ ಸುಳಿವು ಇರುವ ಒಂದೇ ಒಂದು ಜೀವ ಅದು. ನೀನು ಸಿಗದ ಕೊರತೆ ಅಷ್ಟಾಗಿ ಕಾಡದೆ ಇರಲು ಅವನೇ ಅವನೊಬ್ಬನೆ ಕಾರಣ. ಅವನಿಗಾಗಿ ಏನನ್ನೇ ಮಾಡಲು ನಾನು ತಯಾರು. ಉಸಿರನ್ನೇ ಕೊಡಬೇಕಾಗಿ ಬಂದರೂ ಮರುಕ್ಷಣ ಯೋಚಿಸುವ ಪ್ರಶ್ನೆಯೇ ಇಲ್ಲ, ಅಷ್ಟು ಗಾಢವಾದ ನಂಬಿಕೆ ಅವನ ಮೇಲೆ ನನಗೆ.



ಸದ್ಯ ಪೂನದಲ್ಲಿದ್ದಾನೆ. ಬೆಂಗಳೂರಿನ ಯು,ವಿ,ಸಿ,ಇ ಯಲ್ಲಿ ಬಿಇ ಮುಗಿಸಿ 'ಐಬಿಎಂ'ನಲ್ಲಿ ಮೂರು ವರ್ಷ ಸಾಫ್ಟ್'ವೇರ್ ತಂತ್ರಜ್ಞ ಆಗಿದ್ದ, ಕಳೆದ ತಿಂಗಳಷ್ಟೇ ಕಂಪನಿ ಬದಲಿಸಿದ್ದಾನೆ. ಕೊಡಗಿನ ಶಿರಂಗಾಲದ ಅವನೆಲ್ಲಿ? ತೀರ್ಥಹಳ್ಳಿಯ ನಾನೆಲ್ಲಿ? ಯಾರೂ ಇಲ್ಲದೆ ಒಂಟಿ ಜೀವವಾಗಿದ್ದ ನನಗೆ ಭರವಸೆಯ ಬೆಳಕಾಗಿ ಗೋಚರಿಸಿದ್ದಾನವ. ಈ ವಿಷಯದಲ್ಲಿ ನಾನು ಅದೃಷ್ಟವಂತ. ಇದೊಂದು ಸಂಗತಿಯಲ್ಲಾದರೂ ನನ್ನ ಮನೋ ಕಾಮನೆ ಕೈಗೂಡಿದ್ದಕ್ಕಾಗಿ ನಾನೆಂದೂ ನಂಬದ ಆ ನನ್ನ ದೇವರಿಗೆ ಜನ್ಮಜನ್ಮಾಂತರದ ಸಾಷ್ಟಾಂಗ ನಮನ ಸಲ್ಲಿಸುತ್ತೇನೆ.

ನನಗೆ ಹಿಡಿಸಿದ ಕೆಲವು ನಿಜಗಳು......

ನಮ್ಮ ದೇಶದ ರೈತರ ಶಕ್ತಿಯನ್ನು ವ್ರತ್ತಿಪರ ನಿರ್ವಹಣೆಯೊಂದಿಗೆ ಕಲೆಹಾಕಿದರೆ ಏನಾಗಬಹುದು? ಅವರು ಏನನ್ನು ತಾನೆ ಸಾಧಿಸುವುದು ಅಸಾಧ್ಯ? ಭಾರತ ಏನನ್ನು ತಾನೆ ಹೊಂದಲಾರದು? ಆದರೆ ಇದನ್ನೆಲ್ಲಾ ಆಗ ಮಾಡುವ ಮುನ್ನ ಬಾರ್ಬರ ವಾರ್ಡ್ ಹೇಳಿದ "ಪಾಲ್ಗೊಂಡ,ಪೂರ್ಣ ಸಹಕಾರದ ನಿಜವಾದ ಅಸ್ತಿಭಾರ ಹಾಕಬೇಕು".ಪಟ್ಟಣ ಮತ್ತು ಹಳ್ಳಿಗಳ ನಡುವೆ,ಕೈಗಾರಿಕೆ ಮತ್ತು ಕ್ರಷಿಗಳ ನಡುವೆ ಇರುವ ದಟ್ಟವಾದ ವ್ಯತ್ಯಾಸವನ್ನು ಸರಿಪಡಿಸಬೇಕಾದರೆ ರೈತರನ್ನು ಸಂಗಟಿಸುವುದು ಅತ್ಯಗತ್ಯವಾಗಿದೆ. ಅದನ್ನೇ ಗಮನದಲ್ಲಿಟ್ಟುಕೊಂಡು "ಆನಂದ್"ನಲ್ಲಿ ನಮ್ಮ ಜನರನ್ನು ತೀರ್ಮಾನ ತೆಗೆದುಕೊಳ್ಳುವ ಕಾರ್ಯವಿಧಾನಗಳಲ್ಲಿ ತೊಡಗಿಸಿಕೊಳ್ಳುವ ವ್ಯವಸ್ಧೆಗಳನ್ನು ರೂಪಿಸುವ ಅಗತ್ಯತೆ ನಮಗೆ ಕಂಡುಬಂತು.ಜನ ಸಾಮಾನ್ಯರ ಮಟ್ಟದಲ್ಲಿ ನಾವು ಪ್ರಜಾಪ್ರಭುತ್ವವನ್ನು ಹೊಂದಿಲ್ಲವಾದರೆ ದೆಲ್ಲಿಯಲ್ಲಿ ಅದು ಇದ್ದು ಏನು ಪ್ರಯೋಜನ ತಮ್ಮತಮ್ಮ ವಿವಾದಗಳನ್ನು ಬಗೆಹರಿಸಿಕೊಳ್ಳುವುದನ್ನು ನಮ್ಮ ಭಾವಿ ನಾಯಕರು ಕಲಿಯುವ ಶಾಲೆ ಹಳ್ಳಿಯ ಸಹಕಾರಿ ಸಂಘಗಳಲ್ಲದೆ ಮತ್ತೆಲ್ಲಿ? ನಿರ್ವಹಣೆ ಮತ್ತು ವ್ಯಾಪಾರ ವಹಿವಾಟು ಗಳ ಸ್ನಾತಕೋತ್ತರ ತರಬೇತಿಯನ್ನು ಚುನಾಯಿತ ಪ್ರತಿನಿಧಿಗಳಿಗೆ ನೀಡುವ ಕಾಲೇಜುಗಳು ತಾಲೂಕು ಅಥವಾ ಜಿಲ್ಲಾ ಯೂನಿಯನ್ಗಳೇ ಅಲ್ಲವೇ?

ದೆಹಲಿಯಲ್ಲಿ ಫ್ಲೈ ಓವರ್ ಗಳನ್ನು ಕಟ್ಟುವುದು ತಪ್ಪಲ್ಲ,ನಮ್ಮ ಹಳ್ಳಿಗಳಿಗೆ ಸಂಪರ್ಕ ರಸ್ತೆಗಳನ್ನು ನಾಡಿನುದ್ದಕ್ಕೂ ನಾವು ನಿರ್ಮಿಸದಿರುವುದು ತಪ್ಪು.ನಮ್ಮ ರಾಜಧಾನಿ ಬಣ್ಣ ಬಣ್ಣದ ಬೆಳಗು ಸೂಸುವ ಕಾರಂಜಿಗಳನ್ನು ಹೊಂದಿರುವುದು ಎಂದೂ ತಪ್ಪಲ್ಲ,ಏನೇ ಆದರೂ ದೆಹಲಿ ಸುಂದರವಾಗಿರಲೇ ಬೇಕು.ಆದರೂ ನಾವು ನಮ್ಮ ಎಲ್ಲ ಹಳ್ಳಿಗಳಿಗೂ ಕುಡಿಯುವ ನೀರಿನ ವ್ಯವಸ್ಧೆ ಮಾಡದಿರುವುದು ಅನ್ಯಾಯ.ಮುಂಬಯಿಯಲ್ಲಿ ಆಧುನಿಕ ಖಾಸಗಿ ಆಸ್ಪತ್ರೆ ಇರುವುದಾಗಲಿ ಇಲ್ಲವೇ ಏಮ್ಸ್ ದೆಹಲಿಯಲ್ಲಿರುವುದಾಗಲಿ ತಪ್ಪೇನೂ ಅಲ್ಲ,ಆದರೆ ಹಳ್ಳಿಯ ಬಡವನ ಆಗತಾನೆ ಜನಿಸಿದ ಮಗುವಿಗೆ ಸಂಭಾವ್ಯ ಕುರುಡು ತಪ್ಪಿಸಲು ಎರಡೇ ಎರಡು ಹನಿ ಔಷಧಿ ವ್ಯವಸ್ಥೆ ಮಾಡದಿರುವುದು ಪರಮ ಘಾತುಕತನ.ಇದ್ದಕ್ಕೆ ಕೇವಲ ಮುತುವರ್ಜಿ ಸಾಕೆ ಸಾಕು,ಹಣದ ಅಗತ್ಯ ತೀರಾ ಕಡಿಮೆ ಆದರೂ ಪಂಚತಾರಾ ಆಸ್ಪತ್ರೆಗಳನ್ನು ಕೋಟ್ಯಾಂತರ ಖರ್ಚು ಮಾಡಿ ಮಹಾನಗರಗಳಲ್ಲಿ ಕಟ್ಟಲು ಮುಂದಾಗುತ್ತೇವೆ.ಹೀಗೆ ಆಗುತ್ತಿರುವುದಾದರೂ ಏಕೆ? ಏಕೆಂದರೆ ನೀತಿ ನಿರೂಪಿಸುವ ಅಧಿಕಾರ ನಮ್ಮ ಗಣ್ಯರ ಕೈಯಲ್ಲಿ ಇದ್ದು ಮತ್ತು ಸ್ವಾಭಾವಿಕವಾಗಿಯೋ ಇಲ್ಲವೇ ಅವರ ಅರಿವಿಗೆ ಬಾರದೆ ನಿರೂಪಿಸುವ ಕಾನೂನುಗಳೆಲ್ಲ ಅವರಿಗೆ ಹಾಗು ನಮ್ಮಂತವರಿಗೆ ಅನುಕೂಲವಾಗುವಂತೆಯೇ ಇರುತ್ತದೆ.ಹೀಗಾಗಿ ನಾಚಿಕೆಯೇ ಇಲ್ಲದೆ ಎಲ್ಲರಿಗೂ ಸೇರಿದ ಸಂಪತ್ತುಗಳನ್ನು ನಾವಷ್ಟೇ ಅನುಭವಿಸುತ್ತಿದ್ದೇವೆ.ದುರಂತವೆಂದರೆ ಇದರ ಅರಿವೇ ನಮಗಿಲ್ಲ!
-ವರ್ಗೀಸ್ ಕುರಿಯನ್ (ಅಮೂಲ್ ಯಶಸ್ಸಿನ ರೂವಾರಿ)

01 November 2008

ಹೇಳಲು ಇದೆ ಕಾರಣ..

ಗೊತ್ತುಗುರಿಯಿಲ್ಲದೆ ಮೂವತ್ತೇ ರೂಪಾಯಿಗೆ ಸಿಗೋ ಪಾಸ್ ಜೇಬಿಗಿಳಿಸಿ ಸಿಕ್ಕಸಿಕ್ಕ ಬಿ ಎಂ ಟಿ ಸಿ ಬಸ್ಸನ್ನೇರಿ ಹೊರಗೆ ಜಡಿಮಳೆ ಚೆಚ್ಚುತ್ತಿರುವಾಗ ಕಾರಣವೆ ಇಲ್ಲದೆ ತಿರುಗಾಡೋ ಹೊಸ ಹವ್ಯಾಸವೊಂದು ಇತ್ತೀಚಿಗೆ ಅಂಟಿಕೊಂಡಿದೆ.ಬೆಂಗಳೂರಿನ ಮಳೆಗೆ ಊರ ಮಳೆಯ ಆರ್ದ್ರತೆ ಇಲ್ಲದಿದ್ದರೂ ಮಳೆ ಮಳೆಯೇತಾನೆ? ಎಂಬ ಹುಸಿ ಸಮಾಧಾನ.ಇಂತಹದ್ದೇ ಒಂದು ಮಳೆಯಲ್ಲೇ ತಾನೆ ನೀನು ಮೊದಲ ಬಾರಿಗೇನನ್ನ ಕಣ್ಣಿಗೆ ಬಿದ್ದದ್ದು? ಮಳೆಯ ಬಗ್ಗೆ ವಿಪರೀತ ಮೋಹಿತನಾಗಿಗಿದ್ದ ನನ್ನ ಇನ್ನಷ್ಟು ಮೋಹದ ಗುಂಗಲ್ಲಿ ತೇಲಿಸಿದ್ದು?


ನಿನ್ನ ಅಸಮ್ಮತಿಯ ಸೂಚನೆ,ಯಾವುದೇ ಕಾರಣದಿಂದಲೂ ಪ್ರತಿಕ್ರಿಯಿಸದ ನಿನ್ನ ಅಸಡ್ಡೆಯಿಂದಲೇ ಸ್ಪಷ್ಟವಾಗಿದೆ.ಆದರೂ ನಿನ್ನೊಂದಿಗೆ ಮನಬಿಚ್ಚಿ ಹರಟುವ ವಾಂಛೆ.ಎಂದೆಂದೂ ಮುಗಿಯಲಾರದ ರಾತ್ರಿಗಳಲ್ಲಿ ಮನಸ್ಸಿಗೆ ತೀರಾ ಹತ್ತಿರವಾದ ಜೀವದೊಂದಿಗೆ ಎದೆಯಾಳದ ನವಿರು ನೋವನ್ನು ನಿರ್ಭಾವುಕವಾಗಿ ತೆರೆದಿಡುವ ರೀತಿಯಷ್ಟೇ ಇದು.ಇದನ್ನು ಕೇಳಲು ನೀನೊಂದು ಕಿವಿಯಾದರಷ್ಟೇ ಸಾಕು.ಹೌದು ...ಪ್ರೇಮದ ನಗುವನ್ನು ನಿನ್ನಿಂದ ನಿರೀಕ್ಷಿಸಿ ಸೋತಿದ್ದೇನೆ.ಹೀಗಾಗಿ ಇನ್ಯಾವುದೇ ಪ್ರತಿಕ್ರಿಯೆಯ ನಿರೀಕ್ಷೆ ಖಂಡಿತ ಇಲ್ಲ.ಕಡೇಪಕ್ಷ ನಿನ್ನ ಕೆಲಸದ ಏಕತಾನತೆಯಾದರೂ ಕಳೆದೀತು ಕೇಳು.

27 October 2008

ಬಲವಂತದಿಂದ ಹುಟ್ಟಲಾರದು ಪ್ರೀತಿ....

ಪ್ರೀತಿಯಲ್ಲಿ ಒತ್ತಾಯ ಸಲ್ಲ,ಒಪ್ಪಿಗೆ ಮಾತ್ರ ಚೆನ್ನ.ಕ್ರಮೇಣ ಕಳೆದೆ ಹೋಗಿರುವ ಬಾಲ್ಯವನ್ನು ನೆನಪಿಸಿಕೊಳ್ಳೋದ್ದಕ್ಕಿಂತ ಹೆಚ್ಚಿನ ಸುಖ ಬಾಳಲ್ಲಿ ಉಳಿದೆ ಇಲ್ಲ.ಊರು ಬಿಟ್ಟು ಊರು ಸೇರಿ ಮತ್ತೊಂದು ಪರಿಚಯವೇ ಇರದ ಜಗತ್ತಿನಲ್ಲಿ ಹೊಸದಾಗಿ ಬೆರೆಯುವ ಅನಿವಾರ್ಯತೆಯ ತಲ್ಲಣ.ಅಲ್ಲಿಗೂ ನನ್ನೊಂದಿಗೆ ಜೊತೆಯಾಗಿ ಬಂದದ್ದು ಮಳೆ ಮಾತ್ರ ಇನ್ನೊಂದು ಶಾಲೆ,ನಗೆಪಾಟಿಲಿಗೆ ಈಡಾಗೋ ನನ್ನ ಹಳ್ಳಿ ಕನ್ನಡ,ಗೊತ್ತಿರುವ ಭಾಷೆಯೇ ಆದರೂ ಬೇರೆಯದೇ ಅನ್ನಿಸೋ ಉಚ್ಛಾರಣೆಯ ಅನುಕರಿಸೋ ಕರ್ಮ.ನನ್ನಂತ ಇಬ್ಬರನ್ನು ತೋರಿಸ ಬಹುದಾಗಿರುತ್ತಿದ್ದ ಯಾವಾಗಲೂ ದೊಡ್ಡ ಅಳಯತೆಯದೆ ಆಗಿರುತಿದ್ದು ರೇಜಿಗೆ ಹುಟ್ಟಿಸುತ್ತಿದ್ದ ಯೂನಿಫಾರ್ಮ್.ಆಗಲೂ ಆಪ್ತವಾಗುತ್ತಿದ್ದ ಕ್ಷಣಗಳು ಯಾವುದೆಂದರೆ ಮತ್ತದೇ ಹಬೆಯಾಡುವ ಚಹಾದ ಬಿಸಿಯನ್ನು ಗುಟುಕು ಗುಟುಕಾಗಿ ಗಂಟಲಲ್ಲಿ ಇಳಿಸುವ ಸುಖದ ಮತ್ತಲಿ ಮುಳುಗಿ ಹನಿವ ಮಳೆಯನ್ನೇ ಮುಗ್ಧನಂತೆ ದಿಟ್ಟಿಸುತ್ತಿದ್ದೆನಲ್ಲ ಅದು ಮಾತ್ರ.

ಇಲ್ಲಿಯೂ ಮಳೆ ಸುರಿಯುತ್ತದೆ ಆದರೆ ಬಾಲ್ಯದ ಸ್ಮ್ರತಿಯಲ್ಲಿ ಉಳಿದಿರುವಂತೆ ಚುಚ್ಚುವುದಿಲ್ಲ. ತೇಪೆ ಹಾಕಿದ ಕೊಡೆ ನಿರ್ದಯಿಯಾಗಿ ಬೀಸೊ ಗಾಳಿಗೆ ಕೋಡಂಗಿಯಂತೆ ಮುಂಬಾಗಿದಾಗ ಕೆಕರುಮೆಕರಾಗಿ ಮೊದಲು ಜಾರೋ ಚಡ್ಡಿಯನ್ನು ಸರಿಮಾಡಿಕೊಳ್ಳಲೋ? ಮುರುಟಿದ ಛತ್ರಿಯನ್ನು ಸಂಭಾಳಿಸಲೋ? ಎಂಬ ಸಂದಿಗ್ಧ ಕಾಡುತಿತ್ತು.ನಿಷ್ಕರುಣೆಯಿಂದ ಸೂಜಿ ಚುಚ್ಚಿದಂತೆ ಒಂದೇ ಸಮ ಮುಖದ ಮೇಲೆ ರಾಚಿ ಮೈಯೆಲ್ಲಾ ತೋಯಿಸಿ ತೊಪ್ಪೆ ಮಾಡುತ್ತಿದ್ದರೂ ಅದೇಕೋ ಮಳೆಯೆಂದರೆ ಮನಸ್ಸಿಗೆ ವಿಚಿತ್ರ ಮೋಹ.

26 October 2008

ಹಳೆಯ ಮಧುರ ಕ್ಷಣಗಳು...

ಹಳೆ ನೆನಪುಗಳು ಮರುಕಳಿಸುವಾಗ ಹಬೆಯಾಡುವ ಚಹಾ ಕಪ್ ಕೈಯಲ್ಲಿ ಹಿಡಿದು ಮಳೆಯನ್ನೇ ನೋಡುತ್ತಾ ಅದರ ಬಿಸಿಯ ಗುಟುಕು ಗುಟುಕಾಗಿ ಅನುಭವಿಸುತ್ತಾ ಕಿಟಕಿಯಂಚಿನಲ್ಲಿ ಕೂರೋದೇ ಹಿತ.ನಿಂತ ಮಳೆಯ ಉಳಿದ ಹನಿ ಮೆಲ್ಲನೆ ಬೀಸೊಗಾಳಿಗೆ ಮರದ ಎಲೆಗಳಿಂದ ಉದುರೋವಾಗ ಅವಕ್ಕೂ ನನ್ನಂತೆ ಚಳಿಗೆ ನಡುಕ ಹುಟ್ಟಿರಬಹುದೇ? ಎಂಬ ಅನುಮಾನ ನನಗೆ.ಮೈತುಂಬ ಹೊದ್ದುಕೊಂಡು ಅಕ್ಷರಶಃ ಕಂಬಳಿ ಮರೆಯಲ್ಲಿ ಭೂಗತನಾದವನು ಜಾರಿದೆ ಹಳೆಯ ಸ್ಮ್ರತಿಗೆ.ಹೌದಲ್ವ? ಹೀಗೆಯೇ ಮಳೆಯ ಸವಾರಿ ಬಂದಾಗಲೆಲ್ಲಾ ಬೆಚ್ಚಗೆ ಹೊದಿಸಿ ಅಮ್ಮ ಚಿಕ್ಕಂದಿನಲ್ಲಿ ನನ್ನ ತಬ್ಬಿ ಮಲಗುತಿದ್ದರಲ್ಲ! ಎಂಬ ಬೆಚ್ಚನೆಯ ನೆನಪು.ಆಗೆಲ್ಲ ಕಂಬಳಿಗಿಂತಲೂ ಹಿತವೆನಿಸಿದ್ದು ಅಮ್ಮನ ಮೈಯ್ಯ ಹಿತವಾದ ಬಿಸಿ ಹಾಗು ಅವರ ಸೀರೆಯ ಆಪ್ತ ವಾಸನೆ.

ಬಾರ್ ಮಾತ್ರ ಬದಲಿಸಿದ ಹಳೆಯ ಹವಾಯಿ ಚಪ್ಪಲಿಯನ್ನು ವರ್ಷ ವರ್ಷವೂ ಬಳಸುತ್ತಿದ್ದುದು.ಮಳೆಗೆ ರಾಡಿಯೆದ್ದು ಕೆಸರಾದ ರಸ್ತೆಗಳಲ್ಲಿ ಅವನ್ನೇ ಮೆಟ್ಟಿ ಶಾಲೆಗೆ ಹೋಗುವಾಗ ಬೆನ್ನಿಗೆಲ್ಲ ಕೆಮ್ಮಣ್ಣ ಕೆಸರ ಚಿತ್ತಾರ ಹರಡುತ್ತಿದ್ದುದು ಎಲ್ಲಾ ನೆನಪಾಗುತ್ತೆ.ಮುಗಿಯದ ನೆನಪುಗಳ ಜಾತ್ರೆ ! ಜೋಕಾಲಿ,ಭರಪೂರ ಆಟಿಕೆ,ಕೊಳಲು,ವಾಚು,ಬಣ್ಣಬಣ್ಣದ ತಿಂಡಿಗಳೇ ತುಂಬಿದ ಎಳ್ಳಮವಾಸ್ಯೆ ಜಾತ್ರೆಯಲ್ಲಿ ಇದ್ದಕ್ಕಿದ್ದಂತೆ ಎಲ್ಲರೂ ಮಾಯವಾಗಿ ನಾನೊಬ್ಬನೇ ಪುಟ್ಟ ಮಗುವಾಗಿ ಉಳಿದಂತಿದೆ ನನ್ನ ಮನಸ್ತಿತಿ.ನೆನಪಿನ ಒಲೆಯ ಮುಂದೆ ಮಾರ್ದವ ಬೆಚ್ಚಗಿನ ಚಳಿ ಕಾಯಿಸೋದೆ ಚೆನ್ನ ಅಲ್ಲವಾ?

19 October 2008

18 October 2008

ಹೀಗೆ ಬದಲಾಯ್ತು....

ಎಲ್ಲಾ ಯಾತ್ರೆಗಳಿಗೂ ಒಂದು ಕಾರ್ಯಸಾಧನೆಯ ಉದ್ದೇಶ ಇರಲೇಬೇಕಂತಿಲ್ಲ ಎನ್ನುವುದು ನನ್ನ ಆಲೋಚನಾ ಬುನಾದಿ.ಹುಟ್ಟು ಅಲೆಮಾರಿಯ ಮನಸಿರುವ ನನ್ನ ಈ ವಾದ ನಿನ್ನೊಂದಿಗಿನ ಪ್ರೇಮ ನಿವೇದನೆಯಲ್ಲೂ ಬದಲಾಗಿಲ್ಲ ಎಂದರೆ ಆಶ್ಚರ್ಯ ಪಡಬೇಕಿಲ್ಲ.ನನ್ನ ಜೀವಮಾನದಲ್ಲಿ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿದ್ದು ಕೇವಲ ಮೂವರನ್ನು.
ಅಮ್ಮ ಮೊದಲನೆಯವರು,,ನನಗೀಗಲೂ ನೆನಪಿದೆ ಹೆತ್ತತಾಯಿಗಿಂತ ಹೆಚ್ಚಾಗಿ ನಾನು ಅಂಟಿಕೊಂಡಿರುತ್ತಿದ್ದುದು ಅಮ್ಮನಿಗೇನೆ,aವರ ಸೀರೆಯ ಹಿತವಾದ ವಾಸನೆ ಇಲ್ಲದಿದ್ದರೆ ನನಗೆ ನಿದ್ದೆ ಬರುತ್ತಿರಲಿಲ್ಲ.ಅನಂತರ ಹೆಚ್ಚು ಹತ್ತಿರವಾದವನು ರುದ್ರಪ್ರಸಾದ್ ಅವನು ನಂಗೆ ಕೇವಲ ಗೆಳೆಯ ಮಾತ್ರನಲ್ಲ ಜೀವದ ಬಂಧು,ಆತ್ಮಸಖ.ನನ್ನ ಬಗ್ಗೆ ನನಗಿಂತ ಹೆಚ್ಚು ಕಳಕಳಿ ಇರುವ ಒಬ್ಬನೇ ಒಬ್ಬ ಅವನು.ಅವನ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ.
ಇನ್ನು ನೀನು ಮನಕೆ ಜೀವಕೆ ಹತ್ತಿರವಾದವಳು.ದೂರವೇ ಇದ್ದರೂ...ಏನನೂ ಹೇಳದಿದ್ದರೂ ನನ್ನೊಳಗೆ ಆವರಿಸಿರುವವಳು.ನನ್ನ ಪಾಲಿಗೆ ನೀನು ಪಾರಿಜಾತ,ದೇವಲೋಕದ ಆ ಸುಮದಂತೆ ಕಾರಣವೆ ಇಲ್ಲದೆ ಕನಸಾಗಿ ಕಾಡುವವಳು.ಅಸಲಿಗೆ ನಾನು ನನ್ನ ಪುರಾಣ ಹೇಳದೆ ನೀನೆ ಅದನ್ನು ಅರಿತುಕೊಂಡರೆ ಚೆನ್ನ.ಆದರೆ ನಿನಗೆ ಹೇಳುವ ನೆಪದಲ್ಲಿ ನಾನು ಹಳೆಯ ನೆನಪಿನ ಹೊಳೆಯಲ್ಲಿ ಈಜುವಂತಾಗಿದೆ...ಕೊರೆತವೆನ್ದೆನಿಸಿದರೂ ಪ್ಲೀಸ್ ಸಹಿಸಿಕೋ!
ಆಗಷ್ಟೆ ನಾನು ಶಾಲೆಗೆ ಸೇರಿ ಒಂದುವರ್ಷ ಕಳೆದಿತ್ತು.ರಾಮಾಯಣದ ಜನಪ್ರಿಯತೆಯ ದಿನಗಳವು.ಅಪ್ಪಿ ತಪ್ಪಿ ಟಿ ವಿ ಇಟ್ಟುಕೊಂಡಿರುವವರ ಮನೆಯಲ್ಲಿ ಜನಜಾತ್ರೆ.ಭಾನುವಾರ ಬಂದರೆ ಊರೆಲ್ಲ ಕರ್ಫ್ಯೂ ಹಾಕಿದಂತೆ ನಿರ್ಜನವಾಗುತ್ತಿದ್ದ ಅಧ್ಭುತ ಕಾಲವದು.ಆಗ ಎಲ್ಲರಂತೆ ನಾನೂ ಅದರ ದಾಸಾನುದಾಸ.ಅಂತಹ ಒಂದು ದಿನದಲ್ಲೇ ನಮ್ಮ ಮನೆಗೊಬ್ಬ ಹೊಸ ಅತಿಥಿ ಬಂದರು.
ದಪ್ಪ ದಪ್ಪ ಮೀಸೆಯ ದೈತ್ಯ ಆಕ್ರತಿಗೆ ಹೆದರಿ ನಾನಂತೂ ಅವರ ಹತ್ತಿರವೂ ಸುಳಿಯಲಿಲ್ಲ.ಯಥಾಪ್ರಕಾರ ಅಮ್ಮನ ಸೇರಗಿನಲ್ಲಿಅದಾಗಿ ಕೊಂಡೆ ಆ ಮನುಷ್ಯನನ್ನ ದಿಟ್ಟಿಸಿ ಮುಖ ಮುಚ್ಚಿಕೊಂಡೆ.ಮನೆಯಲ್ಲಿ ಎಲ್ಲರೂ ಅವರೊಂದಿಗೆ ಸಲುಗೆಯಿಂದಿದ್ದರು,ನನ್ನ ಹೆತ್ತಮ್ಮನ ಮುಖವಂತೂ ವಿಪರೀತ ಅರಳಿತ್ತು! ಎಲ್ಲರೂ ನನ್ನನ್ನು ಅವರ ಬಳಿ ಹೋಗುವಂತೆ ಪುಸಲಾಯಿಸುವವರೇ! ಒಲ್ಲದ ಕುರಿಮರಿಯನ್ನು ಹುಲಿಬೋನಿಗೆ ತಳ್ಳುವಂತೆ ಕಡೆಗೂ ಅವರ ಕೈಗೆ ಬಲಿಪಶುವಾಗಿ ಒಪ್ಪಿಸಲ್ಪಟ್ಟೆ.ಆಗ ಆ ವ್ಯಕ್ತಿ chuchhutidda ತನ್ನ ಮೀಸೆಯಿಂದ ನನ್ನ muddisutta ನನ್ನ kiviyalli usurida maatugalu nanaginnoo nenapive.''ಏಕೆ hedarodu? ನಾನು ನಿನ್ನ pappanalva?!"

17 October 2008

ನೆನಪಿನ ನೆರಳು...

ಮನೆಯ ನಿರ್ವಹಣೆ ಅಮ್ಮ ಹೇಗೆ ಮಾಡುತ್ತಿದ್ದರೋ? ಎಂಬ ವಿಸ್ಮಯ ಈಗಲೂ ಕಾಡುತ್ತದೆ.ಅಜ್ಜ ಡ್ರೈವರ್ ಆಗಿದ್ದರಿಂದ ಸಮೀಪದ ಹಳ್ಳಿಗರ ಪರಿಚಯ ಅವರಿಗಿತ್ತು.ಅವರಲ್ಲಿ ಒಬ್ಬರಾದ ಎಡುವಿನಕೊಪ್ಪದ ಪುಟ್ಟಪ್ಪಗೌಡರ ಒಬ್ಬ ಮಗ ಹಾಗು ಮೂವರು ಸಂಭಂದಿಕರನ್ನು ಶಾಲೆಗೆ ಹೋಗುವ ಸಲುವಾಗಿ ಮನೆಯಲ್ಲಿ ಇಟ್ಟುಕೊಂಡರು.ಆಗ ತುಂಗಾನದಿಗೆ ಅವರೂರಿನಿಂದ ಸೇತುವೆ ಇರದಿದ್ದರಿಂದ ಮಳೆಗಾಲದಲ್ಲಿ ತುಂಗೆ ಉಕ್ಕಿಹರಿದಾಗ ಅವರೂರಿನ ಸಂಪರ್ಕ ತೀರ್ಥಹಳ್ಳಿಯಿಂದ ಕಡಿದು ಹೋಗುತ್ತಿತ್ತು,ಆದ್ದರಿಂದ ಓದುವ ಹುಡುಗರು ಪೇಟೆಯಲ್ಲಿ ಹೀಗೆ ವ್ಯವಸ್ಥೆ ಮಾಡಿಕೊಂಡೋ,ಇಲ್ಲ ಹಾಸ್ಟೆಲ್ಲಿನಲ್ಲಿ ಇದ್ದುಕೊಂಡೋ ಶಾಲೆಗೆ ಹೋಗುವುದು ಅನಿವಾರ್ಯವಾಗಿತ್ತು.ಇವರೊಂದಿಗೆ ಊರಿನ ಅಜ್ಜನ ಮನೆಕಡೆಯ ಇಬ್ಬರು ಟೀಚರ್ಗಳೂ ಆಗ ನಮ್ಮ ಮನೆಯಲ್ಲೇ ಉಳಿದುಕೊಂಡಿದ್ದರು.ಅವರೆಲ್ಲರ ಕಡೆಯಿಂದ ಒಂದಲ್ಲ ಒಂದು ರೀತಿಯ ಪ್ರತಿಫಲ ದೊರೆಯುತ್ತಾ ಇದ್ದಿರಬೇಕು ಎಂಬುದು ನನ್ನ ಊಹೆ.ಇದರೊಂದಿಗೆ ಸಾಕಿದ್ದ ದನಗಳ ಹಾಲಿನ ವ್ಯಾಪಾರ-ಅಮ್ಮ ಇಟ್ಟುಕೊಂಡಿದ್ದ ಹೊಲಿಗೆ ಮಿಶನ್ನಿನಿಂದ ಹುಟ್ಟುತ್ತಿದ್ದ ಪುಡಿಗಾಸು.... ಹೀಗೆ ಉಟ್ಟು ಉಡಲು ಕೊರತೆಇಲ್ಲದಂತೆ ನಮ್ಮೆಲ್ಲರ ಕನಿಷ್ಠ ಅಗತ್ಯಗಳು ಸುಸೂತ್ರವಾಗಿ ಪೂರೈಕೆ ಆಗುತ್ತಿದ್ದವು.
ನಾನು ಬಾಲವಾಡಿಗೆ ಹೋಗಲಾರಂಭಿಸಿದ ನಂತರ ನನ್ನ ಪ್ರಪಂಚವೂ ನಿಧಾನವಾಗಿ ಹಿಗ್ಗಿತು ಅನ್ನಿಸುತ್ತೆ.ಅಲ್ಲಿಂದ ನನ್ನನ್ನು ಭಾರತಿ ಶಿಶುವಿಹಾರಕ್ಕೆ ಸೇರಿಸಲಾಯಿತು.ಅಲ್ಲಿ ಎರಡು ವರ್ಷದ ಓದು.ಅನಂತರ ಸೇವಾಭಾರತಿಯಲ್ಲಿ ಭರ್ತಿಯಾದೆ.ಮನೆ,ಶಾಲೆ,ಶಿಶುವಿಹಾರದಲ್ಲಿದ್ದಾಗ ಕರೆದುಕೊಂಡು ಹೋಗುತ್ತಿದ್ದ ಶಾರದಕ್ಕ...ಅಲ್ಲಿನ ಮೊದಲ ಗೆಳೆಯರು..ಮನೆ ತುಂಬ ಇದ್ದ ಹಲವಾರು ಅಕ್ಕ,ಅನ್ನ,ಮಾವಂದಿರು ಹೀಗೆ ಯಾವಾಗಲೂ ತುಂಬಿದ ಮನೆಯಲ್ಲಿದ್ದು ಅಭ್ಯಾಸವಾಗಿದ್ದ ನನಗೆ ಹೊರಗೂ ಹೆಚ್ಚಿನ ವ್ಯತ್ಯಾಸ ಅನ್ನಿಸುತ್ತಿರಲಿಲ್ಲ.

16 October 2008

ಬಾಲ್ಯ ಬಲು ಮಧುರ...

ಹಾಗೆ ನೋಡಿದರೆ ನಮ್ಮ ಅಜ್ಜನಿಗೆ ಒಟ್ಟು ಆರು ಮಕ್ಕಳು.ನನ್ನ ಹೆತ್ತಮ್ಮ ಮೊದಲನೆಯವಳು,ನನ್ನ ಮೊದಲ ಚಿಕ್ಕಮ್ಮನಿಗೆ ಎರಡೆ-ಎರಡು ವರ್ಷ ವಯಸ್ಸಾಗಿದ್ದಾಗ ಕ್ಷುಲ್ಲಕ ಕಾರಣಕ್ಕಾಗಿ ನನ್ನಜ್ಜಿ ಆತ್ಮಹತ್ಯೆ ಮಾಡಿಕೊಂಡರಂತೆ.ಡ್ರೈವರ್ ಕೆಲಸ ಮಕ್ಕಳ ದೆಖಾರೇಖಿ ಮಾಡಿಕೊಳ್ಳಬೇಕಾದ ಸಂಕಟ ನೋಡಲಾರದೆ ಅಳಿಯನ ಮರು ಮದುವೆಯನ್ನ ತಾವೇ ಖುದ್ಧಾಗಿ ಹೆಣ್ಣು ನೋಡಿ ಅತ್ತೆ-ಮಾವನೆ ಮುಂದೆನಿಂತು ಮಾಡಿಸಿಕೊಟ್ಟರಂತೆ.ಶೀಘ್ರ ಕೋಪಿಯೂ,ಅವಿವೇಕಿಯೂ ಆದ ಮಗಳ ತಪ್ಪು ತಿಳಿದ ವಿವೇಕಿಗಳು ಅವರಿದ್ದಿರಬಹುದೇನೋ!.ಹೀಗೆ ನಮ್ಮ ಮನೆತುಂಬಿ ಬಂದವರೇ ನನ್ನಮ್ಮ.
ಅವರಿಗೂ ಎರಡು ಗಂಡು ಹಾಗು ಎರಡು ಹೆಣ್ಣು ಮಕ್ಕಳಾದವು.ನನ್ನ ಹೆತ್ತಮ್ಮ ಅಹಲ್ಯ,ಚಿಕ್ಕಮ್ಮ ನಾಗರತ್ನ,ಮಾವಂದಿರಾದ ಸುರೇಶ-ಪ್ರಕಾಶ,ಕಿರಿಚಿಕ್ಕಮ್ಮಂದಿರು ಆಶಾ -ಪೂರ್ಣಿಮಾ ಇವರಿಷ್ಟೇ ಇದ್ದ ನಮ್ಮ ಮನೆಗೆ ಕಿರಿಯವನಾಗಿ ನಾನು ಹುಟ್ಟಿದ್ಧು ೨೬ ಆಗೋಸ್ಟ್ ೧೯೮೨ ರಂದು.ಮನೆಗೆ ಮೊದಲ ಮೊಮ್ಮಗ ನಾನಾಗಿದ್ದರಿಂದ ಆ ಕಾಲದ ಸೆಂಟಿಮೆಂಟ್ನಂತೆ ನಾನು ಮನೇಲೆ ಹುಟ್ಟಿದೆ.
ಇಲ್ಲೊಂದು ತಮಾಷೆಯೂ ಇದೆ.ನನ್ನ ಹುಟ್ಟಿನ ಕಾಲಕ್ಕೋ ನಮ್ಮಜ್ಜ ಡ್ಯೂಟಿ ಮೇಲಿದ್ದರು,ಅವರು ಬಂದು ನನ್ನ ಮೊದಲಿಗೆ ನೋಡಿದಾಗ ನಾನು ನಾಲ್ಕು ಧಿನ ದೊಡ್ಡವನಾಗಿದ್ದೆ.ಇವರು ಪುರಸಭೆಗೆ ಜನನ ನೋಂದಣಿ ಮಾಡಿಸೋಕೆ ಹೋದಾಗ ಅಲ್ಲಿನವರು ತಡವಾಗಿ ಬಂದುದಕ್ಕೆ "ಏನ್ರಿ ನಾಲ್ಕ್ ದಿನದಿಂದ ಮಗು ಹುಟ್ ತಲೆ ಇತ್ತ?" ಅಂತ ಸರಿಯಾಗಿ ಬೈದರಂತೆ.ಅವರ ಮಾತಿಗೆ ಬೆಪ್ಪಾಗಿ ನನ್ನ ಜನನ ದಿನವನ್ನ ಅಜ್ಜ ಅದೇ ದಿನಕ್ಕೆ ಅಂದರೆ ೧ನೆ ಸೆಪ್ಟೆಂಬರ್ ಅಂತಲೇ ಬರಿಸಿದ್ದಾರೆ ಹೀಗಾಗಿ ದಾಖಲಾತಿಗಳಲ್ಲಿ ನಾನು ನಾಲ್ಕುದಿನ ತಡವಾಗಿ ಹುಟ್ಟಿದೆ!
ನಾನು ಹುಟ್ಟುವಾಗ ಮೊದಲ ಚಿಕ್ಕಮ್ಮ ಅಲ್ಲೇ ಸಮೀಪದ ಊರಲ್ಲಿ ಟೀಚರ್ ಆಗಿದ್ದರು.ಮಾವಂದಿರು ಕಾಲೇಜ್ನಲ್ಲಿದ್ದರೆ,ಒಬ್ಬ ಚಿಕ್ಕಮ್ಮ ಹೈಸ್ಕೂಲ್ನಲ್ಲೂ ಇನ್ನೊಬ್ಬಳು ನಾಲ್ಕನೇ ಕ್ಲಾಸಿನಲ್ಲೂ ಇದ್ದಳು.ಹೀಗಾಗಿ ನಾನೆಂದರೆ ಎಲ್ಲರಿಗೂ ವಿಪರೀತ ಪ್ರೀತಿ.ಅವರೆಲ್ಲರಿಗೂ ಆಡಲು ಒಂದು ಜೀವಂತ ಬೊಂಬೆ ಸಿಕ್ಕಂತೆ ಆಗಿತ್ತೇನೋ! ಅದೇನೇ ಇದ್ದರೂ ನನ್ನ ಮೊದಲ ಐದು ವರ್ಷಗಳು ಸಂಭ್ರಮದಿಂದಲೇ ಕೂಡಿದ್ದವು.

11 October 2008

ಆರಂಭದ ದಿನಗಳು

ನನಗೆ ನೆನಪಿರುವ ಹಾಗೆ ಬಾಲ್ಯದಲ್ಲೇನೂ ಸುಖ ಸಂತೋಷಕ್ಕೆ ಕೊರತೆಯಿರಲಿಲ್ಲ,ಅಥವಾ ನೋವಿನ ಅರಿವೂ ಇರದ ಎಲ್ಲವೂ ಸುಂದರ ಎನಿಸೊ ಮುಗ್ಧ ಸ್ಥಿತಿಯದು ಎನ್ನೋದು ಹೆಚ್ಚು ಸರಿ.ಆಗಿನಿಂದಲೂ ನಾವು ಅಂದರೆ ನನ್ನಮ್ಮ,ಅಜ್ಜ,ಅಜ್ಜಿ.ಇಬ್ಬರು ಚಿಕ್ಕಮ್ಮಂದಿರು ಹಾಗೆ ಇಬ್ಬರು ಮಾವಂದಿರು ಜೊತೆಯಾಗಿಯೇ ಇದ್ದ ನೆಮ್ಮದಿಗೆನೂ ಕೊರತೆಯಿರದ ಸರಳ ಮಧ್ಯಮವರ್ಗದ ಕುಟುಂಬ ನಮ್ಮದು.ನನ್ನ ಪ್ರಪಂಚವೂ ಅಷ್ಟಕ್ಕೆ ಸೀಮಿತ.ಅದು ಬಿಟ್ಟರೆ ನಾನು ಹೋಗುತ್ತಿದ್ದ ಬಾಲವಾಡಿ,ಅಲ್ಲಿನ ಉದ್ದ ಜಡೆಯ ಟೀಚರ್ ಹಾಗು ತುರುಬಿನ ಟೀಚರ್ ಇವರಿಗೆ ನನ್ನ ಅರಿವಿನ ಪರಿಧಿ ಮುಗಿದಿರುತ್ತಿತ್ತು.ನಿಜವಾಗಿ ನಾನು ಅಂಟಿಕೊಂಡಿರುತ್ತಿದ್ದುದು ನನ್ನಜ್ಜಿಗೆ ಅವರನ್ನೇ ಅಮ್ಮ ಎಂದು ಕರೆಯುತ್ತಿದ್ದೆ,ಈಗಲೂ ಅವರನ್ನೇ ಅಮ್ಮ ಎನ್ನೋದು.

ಮನೆಯಲ್ಲಿ ಆರು ಕರೆಯುವ ದನಗಳಿದ್ದವು ಅಜ್ಜ ಆಗಿನ್ನೂ ಗಜಾನನ ಕಂಪೆನಿಯಲ್ಲಿ ಡ್ರೈವರ್ ಆಗಿದ್ದರು.ನಿತ್ಯ ಉಡುಪಿಯಿಂದ ಶಿವಮೊಗ್ಗದ ರೂಟಲ್ಲಿ ಅವರದ್ದು ಪಾಪ ಗಾಣದೆತ್ತಿನ ದುಡಿತ.ಇತ್ತ ಮನೆಯಲ್ಲಿ ತಿನ್ನೋ ಕೈಗಳು ಹದಿನಾರು,ಅತ್ತ ದುಡಿಮೆ ಆಗುತಿದ್ದುದು ಎರಡೇ ಕೈಗಳಿಗೆ.ಹೀಗಾಗಿ ಅಷ್ಟಿಷ್ಟು ಮನೆ ಕರ್ಚು ಸರಿದೂಗಿಸಲು ಅಮ್ಮ ಮಾಡುತಿದ್ದ ಪ್ರಯತ್ನದ ಫಲವೆ ಹಾಲು ಮಾರಾಟಕ್ಕಾಗಿ ದನ ಸಾಕಣೆ.ಹೀಗೆ ಕರೆದ ಹಾಲನ್ನ ಮನೆ ಮನೆ ಮನೆಗೆ ಕೊಟ್ಟು ಬರೊ ಜವಬ್ದಾರಿ ನನ್ನದು.

09 October 2008

ಮುಗಿಲು ಮುಟ್ಟಿದ ಮೋಡ,ಮುಗಲನೆ ಮುಚ್ಚಿದ ಪರಿ ನೋಡ/ ಮಳೆ ಬಿಲ್ಲಿಗೂ ಹಾಕಿ ಸಂಚಕಾರ,ಸುರಿಯಲಿ ಮಳೆ ಹನಿ ಕಳೆಯೆ ಮನಭಾರ//

06 October 2008

ಈ ಪ್ರೀತಿ ಹುಟ್ಟಲು ಕಾರಣವೇ ಬೇಕಿಲ್ಲ....

ಅಷ್ಟಕ್ಕೂ.. ನಾನು ನಿನ್ನನ್ನೇ ಏಕೆ ಇಷ್ಟಪಟ್ಟೆ? ನೀನು ನನ್ನ ಮನದ ಕೊಳಕ್ಕೆ ಕಲ್ಲೋಗೆದದ್ದಾದರೂ ಹೇಗೆ? ಇದು ಕೇವಲ ಬಾಲಿಶ ಸೆಳೆತ ಅಲ್ಲ ತಾನೆ? ಎನ್ನೋ ಅನುಮಾನ ನನಗೂ ಕೆಲವು ಸಾರಿ ಅನಿಸಿದ್ದಿದೆ.ಆದರೆ ಯಾವಾಗಲೂ ನಿನ್ನ ನನ್ನ ನಡುವೆ ಇದ್ದ ಅಂತರ ನನಗೆ ಇದೆ ಎಂದೆ ಅನಿಸಿಲ್ಲ.ಕಾರಣ ನಾನು ನಿನ್ನನ್ನು ಎಂದೂ ಮರೆಯಲೇ ಇಲ್ಲ.ಕೇವಲ ಆಕರ್ಷಣೆ ಯಾಗಿದ್ದರೆ ಇನ್ಯಾರಾದರೂ ಸೆಳೆಯುತಿದ್ದರೆನೋ? ರೂಪಕ್ಕೆ ಸೋತೆ ಎನ್ನಲು ಕಾರಣವಿಲ್ಲ,ನೀನೇನು ಸೌಂದರ್ಯದ ಪ್ರದರ್ಶನಕ್ಕಿಳಿದವಳಲ್ಲ,ಆದರೂ ನೀನೆ ನನಗಿಷ್ಟ...ಏಕೆಂದರೆ ಈ ಪ್ರೀತಿಗೆ ಕಾರಣ ಬೇಕಿಲ್ಲ.ದ್ವೇಷಿಸೋಕೆ ನೂರು ಕಾರಣಗಳಿರಬಹುದು,ಆದರೆ ಪ್ರೀತಿ ಚಿಗುರೋದೆಯೋಕೆ ಕಾರಣವೆ ಬೇಕಿಲ್ಲ...ಇದು ಪ್ರೀತಿಗಾಗಿ ಮಾತ್ರ ಪ್ರೀತಿ,,,,ನಿರೀಕ್ಷೆಯಿದೆ ಹುಸಿಮಾಡಬೇಡ.ಇಷ್ಟು ಕಾಲ ಒಂದೇ ಒಂದು ಮಾತನಾಡದೆಯೂ ಪ್ರೀತಿಯ ಸೆಳೆತ ಹಾಗೆ ಉಳಿದಿರೋಕೆ ಅದೇ ತಾನೆ ಕಾರಣ..ಕೇವಲ ಪ್ರೀತಿ.

05 October 2008

ನನ್ನ ಮನಸೊಳಗೆ ಇರೋದು ಏನಂದ್ರೆ..

ಈಗ ನಾನಿರೋ ಸ್ಥಿತಿನಲ್ಲಿ ನನ್ ಪ್ರೀತೀನ ಹೇಳ್ಕೊಳ್ಳೋಕೆ ಅಡ್ಡಿಯೇನಿಲ್ಲ.ಸ್ವತಂತ್ರವಾಗಿದ್ಧೀನಿ,ಶ್ರಮದಿಂದ ವಿದ್ಯಾವಂತನಾಗಿದೀನಿ,ತಕ್ಕ ಮಟ್ಟಿಗೆ ದುಡಿಮೆಯೂ ಇದೆ.ನನ್ನನ್ನು ನಂಬಿ ಬಾಳಲು ಬರುವವರಿಗೆ ಕಾಮ್ಫೆರ್ತೆಬ್ಲ್ ಲೈಫ್ ಕೊಡುವ ಶಕ್ತಿಯೂ ಈಗ ನನ್ನಲ್ಲಿದೆ.ನನಗ್ಗೊತ್ತು ''ಇನ್ನೂ ನಾನು ಯಾವ ಉತ್ತರವನ್ನೂ ಹೇಳಿಲ್ಲ...ಆಗ್ಲೇ ಇದನ್ನೆಲ್ಲಾ ನಂಗೆ ಹೇಳ್ತಿದಾನಲ್ಲ" ಅನ್ನೋ ಸಂದೇಹ ನಿನಗೆ ಮೂಡಿದೆ.ಆದ್ರೆ...ಕೇಳು,ನನ್ನ ಪ್ರೀತಿಯಗೆಲುವಿನ ಬಗ್ಗೆ ನನಗಿರೋ ಅತಿಯಾದ ಆತ್ಮವಿಶ್ವಾಸವೆ ಇದಕ್ಕೆಲ್ಲ ಕಾರಣ.ಮುಖ್ಯವಾಗಿ ಮುಂದೆ ಜಾತಿ ಪ್ರಶ್ನೆ ಎದುರಾದರೂ ನನ್ನ ಪ್ರೀತಿಗೆಲ್ಲುತ್ತೆ,ನೀನು ನನ್ನವಳಾಗ್ತೀಯ,ನನ್ನ ಬಾಳ ಜೋತೆಗಾರ್ತಿಯಾಗ್ತೀಯ ಎನ್ನುವ ಅದಮ್ಯ ನಿರೀಕ್ಷೆ...ನನ್ನ ಈ ಕನ್ಫೆಶನ್ ಪ್ರತೀ ದಿನ ನಿನ್ನ ತಲುಪುತ್ತೆ.ಹುತ್ತಿನಿನ್ದೀಚೆಗೆನನಗೆ ತಿಳಿದ ಸಂಗತಿಗಳನ್ನೆಲ್ಲ ನಿನ್ನಲ್ಲಿ ಹೇಳ್ತೀನಿ ಕೇಳು.ಶಾಂತವಾಗಿ ಕೂತುಕೊಂಡು ಕೂಲಾಗಿ ಯೋಚಿಸು.ನೀನು ಯುನಿಕ್ ಇನ್ ಆಲ್ ದ ಆಸ್ಪೆಕ್ತ್ ಅನ್ಕೊಂಡಿದೀನಿ.ಜಸ್ಟ್ ಲಿಸನ್ ಇಟ್ ಎವರಿಡೇ ಎಂಡ್ ಯು ಆರ್ ಫ್ರೀ ಟೂ ಸೆ ಯುವರ್ ಒಪಿನಿಯನ್ ಎಂಡ್ ಕಂಕ್ಲುಶನ್.ನೀನು ಸಿಕ್ಕಿದರೆ ಧನ್ಯ;ಸಿಗದಿದ್ರೆ ಈ ಬಾಳೇ ಶೂನ್ಯ.ಆಗಾಗಿ ಮದುವೆ,ದಾಂಪತ್ಯ ಇವೆಲ್ಲ ಈ ಬಾಳಲ್ಲಿ ಮರೆತ ಮಾತುಗಳು.ಕೇಳು ಮತ್ತು ಹೇಳು.ನಿನ್ನ ಉತ್ತರದ ನಿರೀಕ್ಷೆಯಿದೆ,ಆದರೆ ಈಗಲ್ಲ ನನ್ನ ಮಾತುಗಳೆಲ್ಲ ಮುಗಿದ ನಂತರ.ಇವತ್ತಿಗೆ ಇಷ್ಟೇ ಸಾಕು.ನಾಳೆ ಇನ್ನಷ್ಟು.ಬರಲ?

ಒಂದೇ ಒಂದು ಅವಕಾಶ ಬೇಕು...

ನನಗೆ ನಿನ್ ಪರಿಚಯವಾಗಿ ಹದಿಮೂರು ವರ್ಷ ಕಳೆದೆ ಹೋಗಿದೆ.ಈ ಹದಿ ಮೂರು ವರ್ಷದಲ್ಲಿ ನನ್ ಬಾಳಲ್ಲಿ ಏರು ಪೇರಾದಂತೆ ನಿನ್ ಬಾಳಲ್ಲೂ ಸಾಕಷ್ಟು ಬದಲಾವಣೆ ಆಗಿರಬಹುದು ಎನ್ನೋ ಅರಿವು ನನಗಿದೆ.ನಿನ್ನ ಜಾಡನ್ನೇ ಅನುಸರಿಸುತ್ತ ತೀರ್ಥಹಳ್ಳಿಯಿಂದ ಬೆಂಗಳೂರಿಗೆ ಬಂದ ನಾನು ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದೆ.ಕದ್ದು ಮುಚ್ಚಿ ನಿನ್ನ ಬಗ್ಗೆ ಮಾಹಿತಿಯನ್ನೂ ಕಲೆ ಹಾಕ್ತಿದ್ದೆ.ನಿನ್ನ ಪ್ರೀತಿಯ ಸೆಳೆತವಷ್ಟೇ ಈ ಹುಡುಕಾಟದ ಹಿಂದಿದ್ಧದ್ದು ಅದಕ್ಕೆ ನಿನ್ನ ಕ್ಷಮೆ ನಿರೀಕ್ಷೆಯಿದೆ.ಕ್ಷಮಿಸ್ತೀಯ ಅಲ್ವ? ಈ ಒಂದ್ ಡಿಕೆಡ್ನಲ್ಲಿ ನೀನು ಇನ್ಯಾರ್ನಾದ್ರೂ ಇಷ್ಟಪಟ್ಟಿರಬಹುದು ಅಥವಾ ನಿನ್ನ ತಂದೆ ತಾಯಿ ನಿನ್ನ ಮುಂದಿನ ಬಾಳಿಗೆ ಏನಾದ್ರೂ ಪ್ಲಾನ್ ಮಾಡಿರ ಬಹುದು.ಹಾಗು ಅದು ನಿನಗೂ ಹಿಡಿಸಿರಲೂಬಹುದು,ಅದು ಸಹಜ ಕೂಡ.ತಡವಾಗಿದೆ ಅಂತ ಗೊತ್ತು...ಆಧರೆ ನಾನು ಹೇಳಲು ಮರೆತಿರೋದು ಇನ್ನೂ ಇದೆ.ದಯವಿಟ್ಟು ನನ್ನ ಮಾತುಗಳನ್ನು ಪೂರ್ತಿಯಾಗಿ ಕೇಳು.ಆ ನನ್ನ ಪ್ರೀತಿಯಲ್ಲಿ ಹನಿಯಷ್ಟಾದರೂ ಪ್ರಾಮಾಣಿಕತೆಯಿದ್ದರೆ ನೀನು ನನ್ನನ್ನು ಇಷ್ಟಪಡ್ತೀಯಅನ್ನೋ ಕ್ಷೀಣ ಆಸೆ ನನ್ನದು.ಒಂದೇ ಒಂದು ಅವಕಾಶ ನನಗೆ ನೀನು ಕೊಡ್ತೀಯಲ್ವ?

ಹೇಳೇ ಬಿಡಲಾ?

ಹೌದು.. ಇದೆಲ್ಲ ನಾನು ನಿನಗೇ ಏಕೆ ಹೇಳ್ಬೇಕು? ನೀನು ಏಕೆ ಇದ್ನೆಲ್ಲ ಕೇಳ್ಬೇಕು? ಅಂತ ನಿನಗನ್ನಿಸ್ಬಹುದು.ಉತ್ತರ ಇಷ್ಟೇ..ಏಕೆಂದರೆ ''ಈ ನನ್ನ ಕನಸಿನ ರಾಜಕುಮಾರಿ ಬೇರೆ ಯಾರೂ ಅಲ್ಲ; ಅದು ನೀನೆ" ತೀರಾ ಭಾವುಕವಾಗಿ ಪ್ರೀತೀನ ನಿನ್ ಮುಂದೆ ಹೇಳಿಕೊಳ್ ಬೇಕು ಅಂತ ನನ್ನೊಳಗಿನ ಭಂಡ ಧೈರ್ಯ ನನ್ನ ಪುಸಲಾಯಿಸುತ್ತಿರೋದೇನೋ ನಿಜ.ಆದ್ರೆ ಬದುಕು ಕೇವಲ ಭಾವುಕತೆಯಲ್ಲ.ಇಲ್ಲಿ ವಾಸ್ತವನೂ ಇದೆ.ಆ ವಾಸ್ತವದ ತಳಹದಿಯ ಮೇಲೆ ನಾನು ನನ್ನ ಸ್ವಪ್ನಸೌಧವನ್ನ ಕಟ್ಟಬೇಕು ಅನ್ಕೊಂಡಿದೀನಿ.ಅದಾಗ ಬೇಕಿದ್ದರೆ ನಾನು,ನನ್ನ ಬಗ್ಗೆ,ನನಗೆ ಗೊತ್ತಿರೋ ಎಲ್ಲ ಸತ್ಯಗಳನ್ನೂ ನಿನ್ನ ಮುಂದೆ ಹೇಳಲೇ ಬೇಕು.ಇದರಲ್ಲೇನು ಸುಳ್ಳು-ಮೋಸ ಇರಕೂಡದು.ನಿನ್ನ ದೃಷ್ಟಿಯಲ್ಲಿರುವ ನನ್ನ ಇಮೇಜ್ ಅಥವಾ ವ್ಯಕ್ತಿತ್ವವನ್ನ ಪ್ರಾಮಾಣಿಕವಾದ ನನ್ನ ಕಾನ್ಫೆಶನ್ ಜೊತೆ ಹೋಲಿಸಿ ನೋಡು.ನಿನಗೂ ಈ ಪ್ರೀತಿಯ ಪರಿಶುದ್ದತೆ ಅರಿವಾಗಬಹುದು.ನಾನೂ ನಿನ್ನ ಪ್ರೀತಿಗೆ ಪಾತ್ರವಾಗಬಹುದು.ಕೇಳುತ್ತೀಯಲ್ವ?

ನಿನ್ನ ಕನವರಿಕೆ

ಪ್ರೀತಿ... ಹೌದು ನಾನೂ ಒಬ್ಬಳನ್ನ ಪ್ರೀತಿಸ್ತಿದೀನಿ.ಅದೂ ಕಳೆದ ಹದಿಮೂರು ವರ್ಷಗಳಿಂದ! ತಮಾಷೆ ಅಂದ್ರೆ ಅದನ್ನ ಅವಳಿಗೆ ಹೇಳೇ ಇಲ್ಲ.ಯಾಕ್ ಹೇಳಿಲ್ಲ? ಅಂತ ಯಾರದ್ರೂ ಕೇಳಿದ್ರೆ ಅದೇಕೋ ಹೇಳುವಷ್ಟು ದೈರ್ಯ ನನಗಿರಲಿಲ್ಲ ಅಂತೀನಿ.ಯೂರೋಪಿನಲ್ಲಿ ಹದಿಮೂರು ಅಶುಭ ಸಂಖ್ಯೆಯಂತೆ! ಅದೇ ಸಂಖ್ಯೆಯಷ್ಟು ವರ್ಷ ನನ್ನೊಳಗೆ ಹುದುಗಿದ್ದ ಭಾವಪ್ರಪಂಚನ ಈಗ ದೈರ್ಯ ಮಾಡಿ ಅವಳ ಮುಂದೆ ತೆರೆದಿಡುವ ಮನಸಾಗಿದೆ.ಅವಳು ನಡೆಯುವ ಮುಂದಿನ ಬಾಳ ಹಾದಿಗೆ ಸುಖದ ಬೆಳದಿಂಗಳ ನೆಲಹಾಸನ್ನೆ ಹಾಸುವ ಕನಸಿದೆ....ನಂದು ಒಂದೇ ಮೊರೆ ''ಕೇಳು ನನ್ನ ಈ ಆಲಾಪ;ಕೇಳದೆ ಹೋದರೆ ಇದು ವ್ಯರ್ಥ ಪ್ರಲಾಪವಾಗುವ ಅಪಾಯಾನೂ ಇದೆ", ಕೇಳ್ತೀಯಲ್ವ?

ಪ್ರೇಮ ಪತ್ರ

ವಯಸ್ಸು ಇಪ್ಪತೈದಾಯ್ತು,ಹೊಸತಾಗಿ ಪ್ರೇಮ ಪತ್ರ ಬರೆಯೋ ವಯಸ್ಸೇನು ಅಲ್ಲ.ಈ ವಯಸ್ಸಿನಲ್ಲಿ ಪ್ರೀತಿಯ ಅನ್ವೇಷಣೆ,ಭಾಂದವ್ಯದ ಹುಡುಕಾಟ.ನೋಡುವವರ ಕಣ್ಣಿಗೆ ಅಲ್ಲದಿದ್ದರೂ ನನ್ನ ಕಂಗಳಿಗೆ ಅವಳ ಸೌಂದರ್ಯ ಕಾಣಿಸುತ್ತೆ.ಅದಕ್ಕೆ...ಏಳು ಸಮುದ್ರದಾಚೆ ಇದ್ದರೂ ನನ್ನ ಕನಸಿನ ರಾಜಕುಮಾರಿನ ಹುಡುಕುತ್ತ ಹೊರಟಿದ್ದೇನೆ.ಇದು ನನ್ನ ಸುಂದರ ಸ್ವಪ್ನದ ಕಥೆ..ಕೇಳಿದ್ರೆ ನಿಂಗೂ ಇಷ್ಟವಾಗುತ್ತೆ.ನನ್ನ ಎದೆಯಾಳಧ ಭಾವಗೀತೆ ನಿನಗೂ ಆಪ್ತವಾಗುತ್ತೆ.ಯಾರಿಗ್ ಗೊತ್ತು? ನನ್ನ ಮಾತುಗಳಲ್ಲಿ ಪ್ರಾಮಾಣಿಕತೆ ಧ್ವನಿಸಿದರೆ ನನ್ನ ರಾಜಕುಮಾರಿ ನನ್ನವಳಾಗಬಹುದು.ನೀನೂ ಅವಳಾಗ ಬಹುದು! ಹುಚ್ಚು ಪ್ರೀತಿಯ ಹತ್ತು ಮುಖಗಳನ್ನು ಗುರುತಿಸಿದರೂ ಗುರುತಿಸಬಹುದು.ಕೇಳ್ತೀಯ ಅಲ್ವ?

25 September 2008

ಪಿಯುಸಿ ವಿಮರ್ಶೆ

ಸಿನಿಮಾ ವಿಮರ್ಶೆ ನನ್ನ ಅರೆಕಾಲಿಕ ವೃತ್ತಿ.ಅದೇ ಕಾರಣಕ್ಕೆ ಇವತ್ತೂ ಒಂದು ಸಿನಿಮಾ ಪ್ರೀ ವ್ಯೂ ನೋಡಬೇಕಾಗಿ ಬಂದಿತ್ತು.ಹೆಸರು "ಪಿಯೂಸಿ".ಈಗಿನ ಕನ್ನಡ ಸಿನೆಮಾಗಳ ಹಾವಳಿ ಗೊತ್ತಿರುವವರಿಗೆ ಈ ರೀತಿಯ ಟೈಟಲ್ಗಳ ಹಣೆಬರಹ ಮೊದಲೇ ಗೊತ್ತಿರುತ್ತವೆ ಹಾಗು ಭಯ ಹುಟ್ಟಿಸುತ್ತವೆ.ಇದೂ ಬಹುಶ ಅದೇ ಸಾಲಿಗೊಂದು ಹೊಸ ಸೇರ್ಪಡೆ ಎಂಬ ಅಸಡ್ಡೆಯಿಂದಲೇ ಅಲ್ಲಿಗೆ ಹೋಗಿದ್ದೆ.ಆದರೆ ಚಿತ್ರ ನನ್ನ ನಿರೀಕ್ಷೆಯನ್ನು ಹುಸಿಗೊಳಿಸಿತು.ಒಂದು ನವಿರಾದ ಪ್ರೇಮ ಕಥೆಗೆ ವಾಸ್ತವದ
ಲೇಪ ಹಚ್ಚಿ ಸುಮ್ಮನಾದರೂ ಕಾಡುವಂತೆ ನಿರೂಪಿಸಿ ತೆರೆಗೆ ತಂದ ಆತ್ಮಾವಲೋಕನ ಅದರಲ್ಲಿತ್ತು.

20 September 2008

maretha maathugalu kevala aathmasukhakkagi.illi bareyuva,heluva naveya horathaagi innennoo illa.hidisidhare maardhanisi....ondheradu saalina abhipraayagalidane.