22 December 2014

ಭರವಸೆಯೊಂದೆ ಬದುಕು.......




ಕನಸುಗಳ ತೋಟದ ಮಾಲಿ ನಾನು,
ಅರಳಿದ ಹೂಗಳನ್ನ ಕೀಳುವ ಅಧಿಕಾರವಿಲ್ಲ....
ಇನ್ಯಾರ ಕಣ್ಣೂ ಅದರ ಮೇಲೆ ನಾನಿರುವಾಗ ಬೀಳುವಂತಿಲ್ಲ,
ನನಸಿನ ಲೋಕದ ಹಮಾಲಿಯೂ ಆಗಿಲ್ಲವೇನು?/
ಸಂಕಷ್ಟಗಳ ಮೂಟೆಯನ್ನ ನಿತ್ಯ ಹೊತ್ತೇ ಇದ್ದರೂ
ಬಾಗಿದ ಬೆನ್ನಿನಡಿಯಲ್ಲಿಯೆ ಕಿರು ನಗುವುದು ರೂಢಿಯಾಗಿದೆ
ಎಲ್ಲರ ಬದುಕಿನ ನೀತಿಯೂ ಇಷ್ಟೆ.....
ಇದಕ್ಕೆ ಹೊರತಲ್ಲ ನಾನೂನು//


ಈ ಭರವಸೆ ನಾಳಿನ ನಿರೀಕ್ಷೆಗಳಿವೆಲ್ಲ
ನಮಗೆ ನಾವೆ ನಿತ್ಯ ಕೊಟ್ಟುಕೊಳ್ಳುವ ನಿರಂತರ ಜಾಮೀನು,
ಕಹಿ ಮಾತ್ರೆ ಹೌದು ಜೀವನ
ಅದಕ್ಕೆ ತುಸುವಾದರೂ ಸರಿ೮ ಸೇರಿಸಿಕೊಳ್ಳಲೇಬೇಕು ಸಂತಸದ ಹನಿ ಜೇನು/
ಹೋಗಲೇ ಬೇಕು ಪ್ರತಿಯೊಬ್ಬರೂ
ಈ ಜಗವ ಶಾಶ್ವತವಾಗಿ ಒಂದು ದಿನ ತೊರೆದು
ಇದರಲ್ಲಿ ರಿಯಾಯತಿ ಯಾರಿಗಾದರೂ ಇದೆಯೇನು?,
ಇಂದು ಅವನು ನಾಳೆ ನೀನು
ಹಿಂದೆಯೆ ಒಂದಿನ ನಾನು//


ಅಂಗೈ ರೇಖೆಗಳ ನೋಡಿ ಒಬ್ಬರ ಅದೃಷ್ಟ ಅಳಿಯಲಾಗುವುದಿಲ್ಲ
ಕೈಯಿಲ್ಲದ ಹೆಳವರಿಗೂ ಒಳ್ಳೆಯ ಕಾಲ ಒಂದಿದ್ದೇ ಇರುತ್ತದೆ,
ಹಣೆಬರಹವ ನಂಬಿ ಎಂದೂ ವಿಧಿ ಮಣೆ ಹಾಕುವುದಿಲ್ಲ.....
ನೊಂದು ತಲೆಯ ಮೇಲೆ ಕೈಯಿಟ್ಟು ಕೂತವನಿಗೂ
ಸಂತಸದ ಕಾಲವೊಂದನ್ನ ತಪ್ಪದೆ ಹೊತ್ತು ತರುತ್ತದೆ/
ಕೆಲವು ಯೋಜನೆಗಳು ಮನದೊಳಗೆ ಖಚಿತವಿದ್ದರೆ ಸಾಕು
ಸೋತು ಸುಮ್ಮನೆ ಕೂರದೆ ಸಾಧನೆಯ
ಕಿರು ಹಾದಿಯೆಡೆ ಕೆಲವು ಹೆಜ್ಜೆ ಹಾಕಲೇಬೇಕು,
ಅದೃಷ್ಟ ಆಗ ತಗ್ಗಿಬಗ್ಗಿ
ನಮ್ಮ ವಿಳಾಸವನ್ನ ಮರೆಯದೆ ಹುಡುಕಿಕೊಂಡೆ ಬರುತ್ತದೆ//

21 December 2014

ಇದು ನಮಗೂ ಆಗಲೇಬೇಕಿತ್ತು........!




ಮಾತು ಮರೆತ ಮೇಲೆ ಮೌನವನ್ನಾದರೂ
ಗಟ್ಟಿಯಾಗಿ ಅಪ್ಪಿಕೊಳ್ಲಲೇ ಬೇಕಲ್ಲ?
ವರ್ಷಾನುಗಟ್ಟಲೆ ಜೊತೆಯಿದ್ದು ಅಂತರಂಗವನ್ನ
ಅರಿತ ಮೇಲೂ,
ತುಸುವಾದರೂ ನನ್ನ ಮೇಲೆ ನಂಬಿಕೆ ಅದೇಕೆ ಇಲ್ಲ?/
ಸೋತ ಕಾಲುಗಳ ಕಾಲದ ಕುದುರೆಯ
ಬೆತ್ತಲೆ ಬೆನ್ನೇರಿ,
ಮರೀಚಿಕೆಯಂತಹ ಕನಸುಗಳ ಹಾದಿಯದ್ದ
ಕಿರಿದುಗೊಳಿಸಿದ ದೃಷ್ಟಿಯ ಕಣ್ಣೂರಿ....
ಗುರಿ ತಪ್ಪಿ ಹಾಕುತ್ತಿರುವ ಪ್ರತಿ ಹೆಜ್ಜೆಗಳ ಹಿನ್ನೆಲೆಯಲ್ಲೂ
ನಿನ್ನ ನೆನಪುಗಳ ಗುಂಗಿದೆ//



ಗುರುತು ಬೇಡವೆಂದು ದೂರ ಓಡಿದಷ್ಟೂ
ಸಲ್ಲದ ಚಿನ್ಹೆಗಳನ್ನ ತಂದು ಒತ್ತುತ್ತಾರೆ,
ಎಲ್ಲಾ ನಿಶಾನಿಗಳನ್ನ ಎತ್ತಿ ಒಗೆದಿದ್ದರೂ ಸಹ
ಬಲ್ಲಿದರಂತೆ ಜಾತಿಯೊಂದರ ಮೊಹರನ್ನ ಬಂದು ಇತ್ತಿದ್ದಾರೆ....
ಅದೇನೋ ಅಂದರಪ್ಪ ಇದನು ಕಾನೇಶುಮಾರಿ!
ಜಾತಿ ಭೂತವ ಅದೆಂದೋ ಶಾಶ್ವತವಾಗಿ ಊರ ಗಡಿದಾಟಿಸಿ ಬಂದಿದ್ದರೂ ಮತ್ತೆ
ಈ ರೂಪದಲ್ಲಿ ಮನೆಗೆ ಬಂದು ಮರಳಿ ವಕ್ಕರಿಸಿತಲ್ಲ ಮತ್ತದೇ ಮಾರಿ!/
ವಿಶ್ವಮಾನವರಾಗುವುದೆಲ್ಲ ಬರಿ ಚಂದದ ಬೊಗಳೆ
ಬೆಳಗ್ಯೆ ಎದ್ದಲ್ಲಿಂದ ಸಂಜೆ ಬೀಳುವಲ್ಲಿಯವರೆಗೂ......
ಯಾವುದಾದರೊಂದು ಕರಾಳ ರೂಪದಲ್ಲಿ
ನಮ್ಮೆಲ್ಲರ ಕಾಡುತ್ತಲೆ ಇರುತ್ತದೆ ಈ ಜಾತಿಯ ರಗಳೆ,
ನಾಮ ಜುಟ್ಟು ಜನಿವಾರಗಳನ್ನ ಹೊತ್ತಿರಲೇಬೇಕಿಲ್ಲ
ಮನದ ತುಟಿಯಂಚಲ್ಲಿ ಅಲ್ಲಾ ಇಲ್ಲಾ ಏಸುವಿನ ಜಪದ ಮತ್ತಿರಲೇಬೇಕಿಲ್ಲ.....
ಸೈತಾನರು ಕಾಯುತ್ತಲೇ ಇರುತ್ತಾರೆ ಕೊನೆವರೆಗೆ
ತಪ್ಪಿಸಿ ಕೊಳ್ಳೋದು ಕಡು ಕಷ್ಟ ಈ ಜಾತಿಯತೆಯ ಅಂಗಿ ಬಲು ದೊಗಳೆ//




ಮನದ ಕಿಟಕಿಯ ಸದಾ
ತೆರೆದಿದ್ದರೆ ಸಾಕು,
ಇಲ್ಲಸಲ್ಲದ ಆದರ್ಶದ ನುಡಿಗಳ ದೇಶಾವರಿಯ ಧಾಟಿಯಲ್ಲಿ
ಅದ್ಯಾಕೆ ಆಡಿಕೊಂಡಿರಬೇಕು?/
ತೋರಿಕೆಯ ನಿತ್ಯ ಸ್ವತಂತ್ರ್ಯರ ಹಾವಳಿಯೆ ಜಗದಲ್ಲಿ ಬಹಳ
ಮೆಲ್ಲನೆ ನಿಮ್ಮ ಕುಲದ ನೆಲೆಯನರಿವತ್ತ
ಪರಿಚಯವಾಗುತ್ತಲೇ ಇಳಿಬಿಡುತ್ತಾರೆ ಮನಸೊಳಗೊಂದು ಗಾಳ,
ಹಾಗೆ ಕೇಳಿದ ಮಾತ್ರಕ್ಕೆ ತಪ್ಪು ಅವರದ್ದೂ ಅಲ್ಲ
ಹೆಡ್ಡರಂತೆ ಹೆತ್ತವರು ಅಂಟಿಸಿದ ಪಂಗಡ ನಾಮದ ಕಿರೀಟವನ್ನ.....
ಇನ್ನೂ ಹುಸಿ ಹೆಮ್ಮೆಯಿಂದ ಹೊತ್ತೇ ನಾವು ತಿರುಗುತ್ತಿದ್ದೀವಲ್ಲ?!//

ಕನಸು ಮಾತ್ರ ನಮ್ಮದು, ನನಸು ಎಂದೆಂದಿಗೂ ಅಲ್ಲ........!




ತನ್ನ ಕೂಗದ ಕರೆಗೆ ಹಿಂದಿರುಗಿ ನೋಡುವ ತವಕ,
ಎದೆಯಾಳದ ಕೆರೆಯಲ್ಲಿ ಮಾತು ನೂರಡಗಿದ್ದರೂ ಎರಡು
ತುಟಿಗಳು ಮಾತ್ರ ಏನೊಂದನ್ನೂ ಆಡದಂತಾಗಿ ಮೂಕ/
ಬತ್ತಿದ ಕನಸುಗಳೂ ಬತ್ತಲಾರದಂತೆ ಕಣ್ಣ ತುಂಬಿ ಕಾಡುವಾಗ,
ನಿಸ್ಸಂದೇಹವಾಗಿ ಆ ನಿಷ್ಕಲ್ಮಶ ಹೃದಯವನ್ನ
ಅದ್ಯಾರೋ ನಿರ್ದಯವಾಗಿ ಒಡೆದಿದ್ದಾರೆ ಎನ್ನಬಹುದು//



ಕಡಲಿನ ಒತ್ತಡಕ್ಕೆ ಬಸಿರಾಗಿ ಕಟ್ಟುವ ಹನಿ ಹನಿ ಮೋಡಕ್ಕೇನು ಗೊತ್ತು?
ಅದ್ಯಾವ ಚಿಪ್ಪಿನ ಎದೆ ಕವಾಟದಲ್ಲಿ ಬಿದ್ದು ತಾನಾದೇನೆಂದು ಮುತ್ತು?/
ಯಾವ ಕಂಠದ ಆಭರಣವಾಗಿ ಹೊಳೆಯೋದು ಯಾವತ್ತು?,
ಯಾರು ತನ್ನ ಬಯಸಿ ಕೊಂಡಾರೋ! ಯಾರ ಖಜಾನೆಯ ಸೇರಿ
ಪುನಃ ಕತ್ತಲಲ್ಲಿ ಬಂಧಿಯಾಗುವ ಆ ಹೊತ್ತು?//




ಬಾಳ ನಾಳೆ ಎಂದೂ ನಮ್ಮ ಕೈಯಲ್ಲಿರೋಲ್ಲ,
ಸವೆದ ನೆನ್ನೆಗಳೂ ಸಹ ನಮ್ಮ ಕೈಲಿರಲಿಲ್ಲ/
ಹೆಚ್ಚೆಂದರೆ ಏನೋ ಸ್ವಲ್ಪ ಸಹನೀಯವಾಗುವಂತೆ ಭವಿಷ್ಯವ ಯೋಜಿಸಬಹುದಷ್ಟೇ!,
ನಾವಂದುಕೊಂಡದ್ದೇ ಯಾವಾಗಲೂ ನಿಜವಾಗಬೇಕಿಲ್ಲ ಈ ಧಗಾಕೋರ ವಿಧಿಯ
ದರಿದ್ರ ಹಣೆಬರಹ ಎಂದಿಗೂ ಬರಿ ಇಷ್ಟೇ?!//

19 December 2014

ಮೊನ್ನೆ ನಿಜವಾಗಿಯೂ ಅತ್ಯಾಚಾರ ಆಗಿದ್ದು ಕನ್ಯೆ ತೀರ್ಥಹಳ್ಳಿಯ ಮೇಲೆ! ಸರದಿ ಪ್ರಕಾರ ಅದನ್ನ ಮಾಡಿ ಮುಗಿಸಿದ್ದು ಭಾಜಪದ ಭಂಡರು.......


ರಾಜ್ಯದಾದ್ಯಂತ ತೀರ್ಥಹಳ್ಳಿಯನ್ನ ಆಗಬಾರದ ಕಾರಣಕ್ಕೆ ಸುದ್ದಿಯಾಗಿಸಿದ ಭಾಜಪ ಭಂಡರ ತೆವಲಿನ 'ನಂದಿತಾ ಸಾವು' ಪ್ರಕರಣವನ್ನ ಶತಾಯಗತಾಯ ಮುಂದಿನ ವಿಧಾನಸಭಾ ಚುನಾವಣೆಯವರೆಗೂ ಹೇಗಾದರೂ ಸರಿ ಜೀವಂತವಾಗಿಡುವ ಬಿಜೆಪಿ ಸ್ಥಳಿಯ ಮುಖಂಡರೆಂಬ ನಾಲಾಯಕ್ಕರ ಪ್ರಯತ್ನದ ಮುಂದುವರೆದ ಭಾಗವಿದು. ನಂದಿತಾಳ ಸಮಯಸಾಧಕ ಅಪ್ಪ ಕೃಷ್ಣಮೂರ್ತಿಯ ಜೀವನಾಧಾರವಾಗಿದ್ದ ಬಾಳೆಬೈಲಿನ ದಿನಸಿ ಅಂಗಡಿಗೆ ಕಳೆದ 12ನೇ ತಾರೀಕಿನ ಬೆಳಗ್ಯೆ 3 ರ ಸುಮಾರಿಗೆ ಬೆಂಕಿ ಇಡಲಾಗಿದೆ.



ಸಚಿವರೂ ಆಗಿರುವ ಸ್ಥಳಿಯ ಶಾಸಕರು ತಕ್ಷಣ ಕ್ಷೇತ್ರಕ್ಕೆ ಹಿಂದಿರುಗಿ ಬರಲಾಗದ ಇಕ್ಕಟ್ಟಿನ ಸಂದರ್ಭದಲ್ಲಿ ಸಾಧ್ಯವಾದರೆ ಇನ್ನೊಂದು ಸುತ್ತಿನಲ್ಲಿ ಊರನ್ನ ಉದ್ರೇಕಿಸಲು ಬಿಜೆಪಿಯ ಕಳ್ಳ ಭಡವರು ಬೆಳಗಾವಿ ಅಧಿವೇಶನದ ಸಮಯ ಸಾಧಿಸಿ ಅಂಗಡಿ ಸುಟ್ಟಿದ್ದಾರೆ. ಸಿಐಡಿ ವರದಿಯಲ್ಲಿ ತಮ್ಮ ವಿರುದ್ಧವೆ ಹೊರಬಂದ ಸತ್ಯವನ್ನ ಅರಗಿಸಿಕೊಳ್ಳಲಾಗದ ಬಿಜೆಪಿಯವರು ಪ್ರಕರಣವನ್ನ ಜೀವಂತವಾಗಿರಿಸಲು ನಡೆಸಿದ ಕುತಂತ್ರ ಇದು ಎನ್ನುವುದು ಸ್ಥಳಿಯರ ಗುಮಾನಿ.



ಅಲ್ಲದೆ ಮೊನ್ನೆ ಮೊನ್ನೆ ನವೆಂಬರ್ ತಿಂಗಳ ಅಂತ್ಯದಲ್ಲಿ ಪ್ರಕರಣದ ಸಿಬಿಐ ತನಿಖೆಗಾಗಿ ಬಿಜೆಪಿ ನಡೆಸಿದ ಹಾಸ್ಯಾಸ್ಪದ ನಿರಶನಕ್ಕೆ ಬೆರಳೆಣಿಕೆಯಷ್ಟು ಜನರೂ ಬಂದು ಭಾಗವಹಿಸದೆ ಜನ ಬೆಂಬಲ ಇಲ್ಲದ ಆ ಪ್ರಹಸನ "ನ್ಯಾಯ ಸಿಗುವವರೆಗೂ"(?) ಎನ್ನುವ ಘೋಷಣೆಯ ಬ್ಯಾನರನ್ನ ಐದನೆ ದಿನಕ್ಕೆ ಅಬ್ಬೇಪಾರಿಯಂತೆ ಅಲ್ಲಿಯೇ ಬಿಟ್ಟು ಎದ್ದೋಡಿ ಬರುವಂತಾದ ಅದರ ಮುಖಂಡರಿಗೆ ಆದ ಮುಖಭಂಗದ ಅಡ್ಡ ಪರಿಣಾಮ ಇದು ಅಷ್ಟೇ.



ಇಂತಹ ಹೊತ್ತಿನಲ್ಲಿ ಸಾಬರು ಅಪ್ಪಿತಪ್ಪಿಯೂ ಇಂತಹ ದುಸ್ಸಾಹಸಕ್ಕೆ ಕೈ ಹಾಕಲಾರರು ಎನ್ನುವುದು ಮೆದುಳಿದ್ದ ಎಲ್ಲರಿಗೂ ಅರ್ಥವಾಗುವ ಸರಳ ಸತ್ಯ. ಇನ್ನು ಬಿಜೆಪಿಯವರು ಬಾಯಿಪಾಠ ಮಾಡಿಸಿದ ದಿನಕ್ಕೊಂದು ಸುಳ್ಳನ್ನ ಮಾತು ಕಲಿತ ಗಿಳಿಯಂತೆ ಆಡಿ ಆಡಿ ಹೈರಾಣಾಗಿ ಹೋಗಿರುವ ಭಂಡ ಅಪ್ಪ ಕೃಷ್ಣಮೂರ್ತಿಗೆ ಜೀವನಾಧಾರವಾಗಿದ್ದ ಅಂಗಡಿಯನ್ನೆ ಅದೆ ದ್ವೇಷದ ಅಧ್ವಾರ್ಯುಗಳು ಊರೊಟ್ಟಿಗೆ ಹಚ್ಚಿದ ಬೆಂಕಿ ಅಪೋಷನ ತೆಗೆದು ಕೊಂಡಿರುವುದು ವಿಪರ್ಯಾಸ ಹಾಗೂ ವ್ಯಂಗ್ಯ. 'ಕಳ್ಳನ ಹೆಂಡತಿ ಯಾವತ್ತೂ ಮುಂಡೆ' ಅನ್ನುವ ಗಾದೆಗೆ ಅತ್ಯುತ್ತಮ ಉದಾಹರಣೆ ಇದು.




ಬದುಕಿದ್ದಾಗ ನಿಜವಾಗಿಯೂ ಆಗಿರದಿದ್ದ ಮಾನಭಂಗ ಹಾಗೂ ಅತ್ಯಾಚಾರವನ್ನ ಸತ್ತ ನಂತರ ನಂದಿತಾಳ ಮೇಲೆ ಬಿಜೆಪಿಯ ಆರಗ ಜ್ಞಾನೇಂದ್ರ, ಸಂದೇಶ ಜವಳಿ, ಸಂಸದೆ ಶೋಭಕ್ಕ ಎಂಬ ಚಿಲ್ಲರೆ ಬುದ್ಧಿಯ ಹೆಂಗಸು, ಸಂಸದೆಯ ಅಪ್ಪ(?) ಎಂದು ಹೇಳಿಕೊಂಡು ತಿರುಗುವ ಬೂಸಿಯ. ನಂದಿತಾಳ ಚಿಕ್ಕಪ್ಪ ಭಜರಂಗದಳದ ಸಂತೋಷನೆನ್ನುವ ಹಡಬೆ, ಬಾಳೆಬೈಲು ರಾಘವೇಂದ್ರನೆನ್ನುವ ಬಚ್ಚಾಲಿ ಹಾಗೂ ಸ್ವತಃ ನಂದಿತಾಳ ಅಪ್ಪ ನಿರಂತರವಾಗಿ ಮಾಧ್ಯಮಗಳಲ್ಲಿ ಸರದಿಯಂತೆ ಮಾಡಿ ಮುಗಿಸಿದ್ದರು.



ಈಗ ಇದನ್ನ ಮಾಡಿಸಿದ ಪುಣ್ಯಾತ್ಮನೆ ಇಂದು ಮುಂಜಾನೆ ಪತ್ರಿಕಾಗೋಷ್ಠಿ ಕರೆದು ಪೊಲೀಸರ ನಿಷ್ಕ್ರಿಯತೆಯ ಬಗ್ಗೆ ಕೆರೆದೇ ಕೆರೆದ. ಆದರೆ ಇಂತಹ ಮಗುವನ್ನ ತಾನೆ ಚಿವುಟಿ, ತಾನೆ ತೊಟ್ಟಿಲು ತೂಗುವ ಮೊಸಳೆ ಕಣ್ಣೀರಿನ ಮಂದಿಯ ಆಟಾಟೋಪಗಳನ್ನ ಅರವತ್ತರ ದಶಕದಲ್ಲಿಯೆ ವಜ್ರಮುನಿಯ ನಟನೆಯಲ್ಲಿ ತೆರೆಯ ಮೇಲೆಯೇ ನೋಡಿ ನೋಡಿ ಬೇಸತ್ತಿರುವ ತೀರ್ಥಹಳ್ಳಿಯ ಮಂದಿ ಇಂದಿನ ಹಗಲುವೇಷವನ್ನ ನೋಡಿ ಕ್ಯಾಕರಿಸಿದರೆ ಹೊರತು ಕ್ಯಾರೆ? ಎನ್ನಲಿಲ್ಲ. ಒಂದೊಮ್ಮೆ ಪೊಲೀಸರು ಸರಿಯಾಗಿ ಸಕ್ರಿಯರಾದದ್ದು ಹೌದೇ ಆದರೆ, ಎಲ್ಲಕ್ಕೂ ಮೊದಲು ಈ ಗಡವನನ್ನೆ ಮುಕಳಿ ಮೇಲೆ ಒದ್ದು ಗೂಂಡಾ ಕಾಯಿದೆಯ ಮೇಲೆ ಒಳಗೆ ತಳ್ಳಿಯಾರು ಎನ್ನುವ ಭೀತಿಯೂ ಸ್ವತಃ ಆತನಿಗಿದ್ದೇ ಇದೆ ಹಾಗೂ ಆ ಒಳ ಭೀತಿಯೆ ಈಗ ಇಂತಹ ದುಷ್ಕೃತ್ಯವನ್ನ ಆತನಿಂದ ಆಗ ಮಾಡಿಸಿದೆ. ಹೀಗಾದರೂ ಸಾಬರ ಮೇಲೆ ಮತ್ತೊಂದು ಗೂಬೆ ಕೂರಿಸುವ ಬಿಜೆಪಿಯ ಹುಟ್ಟು ಗೂಬೆಗಳನ್ನ ಮೊದಲು ಒದ್ದು ಮುಲಾಜಿಲ್ಲದೆ ಒಳಗೆ ಹಾಕದಿದ್ದರೆ ಮುಂದಿನ ಚುನಾವಣೆಯವರೆಗೂ ಹೀಗೆ ದಿನಕ್ಕೊಬ್ಬರ ಮನೆಯನ್ನ ಸುಟ್ಟಾರಿವರು.




ಎಂದೂ ನೇರವಾಗದ ಅದರ ಬಾಲ......




ವೇಷ ಬದಲಾದರೆ ಜಾತಿ ಬದಲಾದೀತೆ?
ಮೂರು ನಾಮ ಎಳೆದು ಅವರನ್ನ ನೀನು ಮತ್ತೆ ಹಿಂದಿರುಗಿದೆ ಅಂದರು/
ಭಾಷೆ ಬದಲಾದರೆ ಅಮಿಷದ ದೋಷ ಕಳೆದೀತೆ?
ಒಟ್ಟೆ ಒಟ್ಟೆ ಬಟ್ಟೆ ಟೋಪಿಯ ಮಂಡೆಗೆ ಹಾಕಿ
ಇನ್ನು ನೀನು ಪರಮ ಸತ್ಯ ನಂಬಿದವ ವಿಶ್ವಾಸಿ ಅಂತ ತಲೆ ಮೇಲೆ ಕೈ ಎಳೆದು ಬಂದರು//



ಬೀದಿಗೊಂದು ಜಾತಿ ಸಂಘ ಹಾದಿಗೊಬ್ಬ ಜಗದ್ಗುರು,
ತಾಗುವ ಕೊಳಚೆಯಲ್ಲ ಕಾಣಬಾರದೂ ಅಂತ ಕಾವಿಯನ್ನ ಇವರೆಲ್ಲ ಹಾಕಿ ಕೊಂಡೌರು/
ನೆಟ್ಟಗೆ ನಾಲ್ಕಕ್ಷರ ಕಲಿಯದವ ಇಂದು ಸ್ವರ್ಗ ನರಕದ ಕಥೆಗಳ ಹೇಳಿ ಸುಲಭವಾಗಿ ಹೊಟ್ಟೆ ಹೊರೆಯುತ್ತಾನೆ,
ನಾಲ್ಕು ಮನೆಯ ಅನ್ನವನ್ನ ನಿತ್ಯ ಕಂಠ ಮಟ್ಟ ತಿಂದು ತೇಗಿ .........
ಮೈಕು ಸಿಕ್ಕೊಡನೆ ಮೀಸೆ ಇಲ್ಲದ ತನ್ನ ಮುಖದ ಉದ್ದ ಗಡ್ಡವನ್ನೇ ನೇವರಿಸುತ್ತಾ ದ್ವೇಷವನ್ನೇ ದೊಡ್ಡ ದೊಂಡೆಯಲ್ಲಿ ಮೊರೆಯುತ್ತಾನೆ//




ಧರ್ಮದ ಹೆಸರಲ್ಲಿ ನಮ್ಮನಮ್ಮ ನಡುವೆಯೇ ತಂದಿಟ್ಟು ತಮ್ಮ ಮನೆಗೆ ಅಕ್ಕಿ ಹೊಂಚುವ ವಂಚಕರಿವರು ಹುಷಾರು,
ಕಾವಿ ಮಾತ್ರವಲ್ಲ ಉದ್ದಾನುದ್ದ ಕೊಕ್ಕರೆ ಬಿಳಿ ನಿಲುವಂಗಿಯನ್ನೂ ಹಾಕಿಕೊಂಡ ಆ ಪರಮಾತ್ಮನ ಪುಕ್ಸಟ್ಟೆ ಏಜೆಂಟರು/
ಇವರ ಜೊತೆ ದುಡಿದು ತಿನ್ನುವ ನಮ್ಮಂತವರಿಗೆಂತ ಇದೆ ಹೇಳಿ ಕರಾರು?,
ಇಂತವರ ದೊಂಬರಾಟಗಳನ್ನ ನೋಡಿ ಮನಸಾರ ನಕ್ಕು ಹಗುರಾಗೋಣ....
ನಡೆಯಲಿ ಇನ್ನಷ್ಟು ದಿನ ಇಂತಹ ಅಲ್ಪರ ಕಾರುಬಾರು//




ಅದ್ಯಾರೋ ಪತ್ರಿಕೆಗಳ ಜಾಹಿರಾ....ಥೂಗಳಲ್ಲಿ ಅದೆಂಥದ್ದನ್ನೋ ಅನುಭವಿಸಿದರಂತೆ,
ಇಲ್ಲಿನ ತಾರತಮ್ಯವ ಪ್ರತಿಭಟಿಸಿ ಅದೆಲ್ಲೋ ಹೋಗಿ ಸಾಮೂಹಿಕವಾಗಿ ತಲೆ ಬೋಳಿಸಿಕೊಂಡು ಸಂಘಕ್ಕೆ ಶರಣಾದರಂತೆ/
ಸರಕಾರಿ ಸವಲತ್ತಿನ ವಿಚಾರ ಬಂದಾಗ ಮಾತ್ರ ಇವರಿಗೆಲ್ಲ ತಾವು ದಲಿತರೋ? ಇಲ್ಲಾ ಹೊಸ ಕಡೆ ಹೋಗಿ ಬಲಿತರೋ? ಅನ್ನೋದು ತಕ್ಷಣ ನೆನಪಾಗುತ್ತೆ....
ಒಟ್ಟಿನಲ್ಲಿ ನಮ್ಮ ಸುತ್ತಮುತ್ತಲೆಲ್ಲ ಇಂತಹ ಸಮಯಸಾಧಕ ಎಡಬಿಡಂಗಿಗಳದ್ದೇ ಸಂತೆ//

ಮನ ಆಶಾಢಭೂತಿ........




ಬಾಡದ ಹೂಗಳೆಲ್ಲ ಚಿಟ್ಟೆ ಕಂಡ ಕನಸುಗಳಾಗಿ,
ಮೂಡದ ನಿರೀಕ್ಷೆ ಸೂರ್ಯರೆಲ್ಲ ಬಾನ ಮನದ ನವಿರು ಮುನಿಸುಗಳಾಗಿ.....
ಇಳೆಯ ತಬ್ಬಿದ ಇಬ್ಬನಿಯಂತಿವೆ/
ಜಾರುವ ತಾರೆಗಳೆಲ್ಲ ಭುವಿಯೆದೆಯ ಹಿತವಾಗಿ ತಾಗಿ,
ಕಟ್ಟಿದ ಮೋಡಗಳೂ ಸಹ ಮುಂದೊಮ್ಮೆ ಮಾಗಿ......
ಬರಡು ನೆಲದಲ್ಲೂ ನಿರೀಕ್ಷೆ ಹಸಿರ ಮತ್ತೆ ಹುಟ್ಟಿಸುವಂತಿವೆ//



ಕಲ್ಲಾಗಿ ಕಾದವಳು ಹಣ್ಣ ಹೊತ್ತು ದಾರಿ ನೋಡಿದವಳು ಕಡೆಗೂ ಅವನ ಕಂಡರು,
ಬಂದೆಯಾ ರಾಮನೆಂದರು/
ಯಮುನೆ ದಡದಲ್ಲಿ ಕಾದು ಕೂತವಳು ಕಾಲ ಮರೆತು ಸಭೆಯಲ್ಲಿ ಬೆತ್ತಳಾದವಳು,
ಇಬ್ಬರೂ ಕಡೆಯವರೆಗೂ ಕಾಯುತ್ತಲೇ ಇದ್ದರು.....
ಅವನು ಕಡೆಗೂ ಬರಲೇ ಇಲ್ಲ ಬಂದು ಅವರ ನಿರೀಕ್ಷೆಯಂತೆ ಕೂಡಲೇ ಇಲ್ಲ//



ಬಿಟ್ಟು ಬಂದ ಕಾಡ ನೆನೆದು ಇರುವ ನಾಡಿನಲ್ಲಿ ನಲುಗಿದಂತೆ ನಟಿಸುವೆ.....
ನಾನು ಮಾತ್ರ ಇಲ್ಲಿ ಎಲ್ಲಾ ಖುಷಿಗಳ ಸೂರೆ ಹೊಡೆಯುತ್ತಾ,
ಅದೆಲ್ಲೋ ಕಾನನದಂಚಿನ ಪ್ರಗತಿಯನ್ನ ನಖಶಿಖಾಂತ ದೊಡ್ಡ ದೊಂಡೆಯಲ್ಲಿ ಪ್ರತಿಭಟಿಸುವೆ/
ನನ್ನ ಹೋರಾಟದ ಹಾರಾಟಗಳೆಲ್ಲಾ ವಾಸ್ತವದಲ್ಲಿ ಬರಿ ತೋರಿಕೆ.....
ಇದಕ್ಕೆಲ್ಲ ಮೂಲ ಸದಾ ಪ್ರಚಾರಕ್ಕಾಗಿ ಹಪಹಪಿಸುವ ನನ್ನ ಒಳಮನದ ತುರಿಕೆ,
ಸೋತ ಪ್ರಕೃತಿಯೇನೂ ನನ್ನ ಸ್ವಂತವಲ್ಲ
ಹಳ್ಳಿಗಳು ಹಾಳಾದರೆ ಹಾಳಾಗಲಿ ಬಿಡಿ! ನನಗೇನು ಹೇಳಿ?
ಬೆಳೆದರೆ ಬೆಳೆಯಲಿ ಬಿಡಿ ಅಲ್ಲಿ ಕಂಡವರ ಸೂರಿನ ಮೇಲೆ ಎಳೆ ಗರಿಕೆ//

18 December 2014

ಇದುವೇ ಜೀವನ.......

ನೆನಪಿನ ನೋವಲ್ಲಿ ಮನ ತುಂಬಿ ಬಂದಾಗ
ಸುರಿಯೋದೆ ಕಂಬನಿಯು ಹೌದೆ?
ಈಡೇರದ ಆಸೆಗಳೆ ಎಲ್ಲರ
ನಿತ್ಯ ಕನಸಾಗಿ ಕಾಡುತಿರಬೌದೆ/
ಮಾರುಕಟ್ಟೆ ಇಲ್ಲಿಲ್ಲ ನಮ್ಮ ನೋವಿಗೆ
ಹೇಳಿಕೊಳ್ಳಬಾರದು ಯಾರಿಗೂ ಎದೆಯಾಳದ ಬಾಧೆ,
ಸಂಕಟ ಅದೆಷ್ಟೇ ಒಳಗೆ ಹುದುಗಿದ್ದರೂ
ಕಡೆಯವರೆಗೂ ಹಲ್ಲು ಕಚ್ಚಿಕೊಂಡಿರಲಿಲ್ಲವೇ ಹೇಳದೆ ರಾಧೆ?//

ಅನ್ಯರಿಂದ ಚಿಲ್ಲರೆ ನಿರೀಕ್ಷೆಗಳ ಖಂಡಿತಾ ಇಟ್ಟುಕೊಳ್ಳಬೇಡಿ,
ಅತಿಯಾಗಿ ನಂಬುವವರೆಲ್ಲ ಹೋಗುತಾರೆ ಬೇಕಂತಲೇ ಬದುಕ ಕಾಡಿ/
ಇನ್ನೊಬ್ಬರ ಎಲ್ಲಾದರೂ ಆಕಾಶಕ್ಕಿಂತ ಹೆಚ್ಚು ಹಚ್ಚಿಕೊಂಡೀರ ನೋಡಿ,
ಆದೀತು ಅದೊಂತರಾ ನಾವೇ ಕೊಟ್ಟು ನಮಗೇನೆ ಹಾಕಿಸಿಕೊಳ್ಳುವ ಕೈಕೋಳದ ಬೇಡಿ//

ಬದುಕಿದು ಬಿಟ್ಟೂ ಬಿಡದೆ ನಿರಂತರ ನೆರೆಯುವ ಸಂತೆ,
ನೋವು ಮಾತ್ರ ಖಾತ್ರಿ ಇಲ್ಲಿ ಜೊತೆಗೆ ಉಚಿತವಿದೆ ಚಿಂತೆ/
ಅಂಟಿಯೂ ಅಂಟದಂತೆ ಆಗಿ ಹೊಳೆಯಬೇಕು ಕೆಸುವಿನೆಲೆಯ ಮೇಲಿನ ಕಿರು ಹನಿ,
ಯಾವತ್ತೂ ಬತ್ತಿ ಹೋಗಬಾರದೆಂದೂ ಇಲ್ಲಿ ಭರವಸೆಯ ಒಳ ಧ್ವನಿ//

17 December 2014

ಇದು ಎಂದಿಗೂ ಮುಗಿಯದ ದಾಳಿ, ಇದರೊಂದಿಗೇ ಎಲ್ಲರೂ ಹೊಂದಿಕೊಂಡು ಬಾಳಿ........










ಪೇಷಾವರದ ಹೇಷಾರವ ನೆನ್ನೆ ಸಂಜೆ ಮುಗಿದಿದೆಯಂತೆ,
ಅಲ್ಲಿ ಅದಾದ ಮೇಲೆ ಕವಿದದ್ದು ಬರಿ ಮೂಕ ಎಳೆ ಮನಗಳ ನರಳಿಕೆಗಳಂತೆ,
ಒಟ್ಟು ಒಟ್ಟಾದದ್ದು ನೂರಾ ಮೂವತ್ತೆರಡು ಹೆಣಗಳ ಸಂತೆ!
ಆದರೆ ಅವುಗಳನ್ನ ಹೆತ್ತ ಮಾತೃ ಒಡಲಿಗೆ ಮಾತ್ರ
ಅವು ಶವಗಳು ಅಂತ ಅನ್ನಿಸುತ್ತಿಲ್ಲವಂತೆ/
ಹೀಗಂತ ಟಿವಿಯಲ್ಲೊಂದು ಸುದ್ದಿ ಮಾರುವ ಧ್ವನಿ
ಭಾವಪೂರ್ಣವಾಗಿ ಅತ್ಯುತ್ಸಾಹದಿಂದ ಊಳಿಡುತ್ತಿತ್ತು,
ಹಿನ್ನೆಲೆಯಲ್ಲಿ ಅದ್ಯಾವುದೋ ಅಮ್ಮ ಹಿಂದಿರುಗಿ ಬರಲಾಗದ ಶಾಲೆಗೆ ಹೋದ
ತನ್ನ ಎಳೆ ಕಂದನ ಶವವ ಅಪ್ಪಿ ಹಿಡಿದು ಕೊನೆ ಮೊದಲಿಲ್ಲದಂತೆ ಗೋಳಿಡುತ್ತಿತ್ತು//



ಉರಿವ ಮನೆಯಲ್ಲೂ ಗಳ ಹಿರಿಯುತ್ತಾ ಅಂದನೊಬ್ಬ
ನೇರ ಸಂದರ್ಶನದಲ್ಲಿ ಅದ್ಯಾವನೋ ಅಲ್ಲಿನ ಸೇನಾಧಿಕಾರಿ,
ಬೇರೆ ಇನ್ನೇನಲ್ಲ ನೋಡಿ ಇದು ನಿಮ್ಮವರ ಪಿತೂರಿ!/
ಅರ್ರರೆ ನೋವಿನ ಇಂಥಾ ಕ್ಷಣದಲ್ಲೂ ಸುಳ್ಳನ್ನಾಡಿ ಸುಖಿಸುವ
ವಿಕೃತಿ ಮೆರೆಯುವ ಎಂಥಾ ನರ ರಾಕ್ಷಸರೆಲ್ಲಾ ಈ ಭೂಮಿ ಮೇಲೆ ಇರುತ್ತಾರ್ರಿ?
ವೇದನೆಯ ಹೊತ್ತಲ್ಲೂ ದ್ವೇಷದ ಜ್ವಾಲೆಗೆ ಬಿಡದೆ ತುಪ್ಪ ಎರಿತಾರ್ರಿ!,
ಅರೆ ನಮಗೂನು ನಿಮ್ಮ ಅಯೋಗ್ಯತೆಯ ಅಸಲಿಯತ್ತು ಗೊತ್ತೂರಿ
ಆ ಬಿನ ಲಾಡೆನನ ಲಾಡಿ ನಿಮ್ಮ ಸೊಂಟಕ್ಕೆ ಬಿಡಲಾಗದಂತೆ ಬಿಗಿದಿತ್ತಲ್ರಿ?!//



ನಮ್ಮೂರೇನು ಭಾರಿ ಸುರಕ್ಷಿತ ಅಲ್ಲ ಬಿಡಿ,
ಇಲ್ಲೂ ಇದೇ ನೆಪ ಮಾಡಿಕೊಂಡು ಹಚ್ಚೋವ್ರಿದಾರೆ ಪಾಪದವರ ನಡುವೆ ಕಾದಾಟದ ಕಿಡಿ.
ತೀರ್ಥಹಳ್ಳಿಯಿಂದ ನವಡೆಳ್ಳಿಯವರೆಗೂ ಇದಾರೆ ಇಂತಾ ಕ್ರಿಮಿಗಳು
ಮನೆ ಮನ ಒಡೆದು ತಾವೆ ಇಟ್ಟ ಬೆಂಕಿಯಲ್ಲಿ ಚಳಿಕಾಯಿಸಿಕೊಳ್ಳುವ ಮಹಾ ಪರಾಕ್ರಮಿಗಳು/
ತೂತುತೂತು ಟೋಪಿ ಹಾಕಿಕೊಂಡವರೇನು ಅಸಲಲ್ಲ ನೋಡಿ,
ಡಿಸೆಂಬರ್ ಆರನ್ನ ಊರೆ ಮರೆತರೂ ಇವರು ಮಾತ್ರ ಬಿಡದೆ ಹಿಡುಕೊಂಡು ಅಂತಾರೆ
'ಎಲ್ಲಾದರೂ ಉಂಟೆ!' ನೀವ್ಯಾರೂ ಅದನ್ನ ಮರೀಬೇಡಿ!!
ಒಟ್ಟಿನಲ್ಲಿ ಶಾಂತಿ ನೆಮ್ಮದಿ ನಮಗ್ಯಾರಿಗೂ ನಸೀಬಿಲ್ಲ!
ಇಲ್ಲಿ ಪರ ಕೊಲ್ಲಲ್ ನಮ್ಮನ್ನ ನಾವೆ ನಂಬಿದ ಹರನೂ ಬಂದು ಕಾಯಲೊಲ್ಲ?!//

16 December 2014

ದೇವರಿಗಾಗಿ ಸುಮ್ಮನಾಗೋ ಮಾರಾಯ! ದೇವರು ನನಗೂ ಇದ್ದಾನೆ?!




ಬಾನ ಚಪ್ಪರದಡಿಗೆ ನನ್ನದೂ ಒಂದು ನಾಡು.
ಕಂಡವರ ಕೊಲ್ಲುವ ಮನಸತ್ತ ಮಂದಿಯ ದೂರದಿಂದಲೇ ಕಂಡು ಹೌಹಾರುವವರ ಬೀಡು/
ನಮ್ಮದೇನಿದ್ದರೂ ಇಲ್ಲದ ಭೂತವನ್ನ ಕಲ್ಪಿಸಿಕೊಂಡು ನಮ್ಮ ನಮ್ಮ ಮನೆಗೆ ನಾವೇ ಕಿಚ್ಚಿಟ್ಟು ಕಚ್ಚಾಡುವ ಖಯಾಲಿ!
ಈ ಧರ್ಮದ ಅಫೀಮು ನುಂಗಿ ನಶೆಯಲ್ಲಿ ಕಂಡವರ ಮಕ್ಕಳ ಕೊಲ್ಲುವ.....
ನಮ್ಮ ದಯವಿಲ್ಲದ ದಾಯಾದಿಗಳಂತಹ ಹೀನ ಕಸುಬು ನಮಗ್ಯಾಕೆ ಹೇಳಿ?!//



ಧರ್ಮ ನಮ್ಮದೂ ಇದೆ ಅದರ ನಶೆ ಆಗಾಗ ನಮಗೂ ಏರುತ್ತದೆ,
ಆಗ ಮಾತ್ರ ಭಂಡರಂತೆ ಅವರ ಕ್ರಮವನ್ನ ನಾವು ಹೀಯ್ಯಾಳಿಸುತ್ತೇವೆ....
ನಮ್ಮ ಮನೆ ದೇವರನ್ನ ಅವರೂ ಮನಸೋ ಇಚ್ಛೆ ಟೀಕಿಸಿ ದ್ವೇಷದ ವಿಷ ಕಾರುತ್ತಾರೆ/
ಆದರೂ ನಾವು ಶಾಲೆಗೆ ಹೋದ ಮಕ್ಕಳ ಜೀವದ ಮೇಲೆರಗುವುದಿಲ್ಲ,
ಕಣ್ಣಲ್ಲಿ ರಕ್ತ ಬತ್ತಿದ ರಕ್ಕಸರಂತೆ ನೇರ ಆ ಎಳೆಯರ ಕಣ್ಣಿಗೆ ಗುಂಡಿಡುವುದಿಲ್ಲ//



ನಮ್ಮದದೇನಿದ್ದರೂ ಬರಿ ಕೋಳಿ ಜಗಳ,
ಮಸೀದಿಯೊಳಗೆ ಸೂಕರನ ಕೊಳೆತ ಮಾಂಸ ಎಸೀತೀವಿ....
ದೇಗುಲದೊಳಗೆ ಗೋ ಮಾಂಸವ ಕಂಡು ಹಿಂದೆಂದೂ ಇಲ್ಲದಂತೆ ಹೌಹಾರುತ್ತೀವಿ/
ಆಮೇಲೆ ಇದ್ದೇ ಇದೆ ಎಲ್ಲರಿಗೂ ಸದಾವಕಾಶ!
ಮೊಂಡು ಕತ್ತಿ ಕೊಡಲಿಗಳಿಗೆಲ್ಲ ಹೋಗಿ ಊರ ಮೇಯುತ್ತವೆ.....
ಮೈಕುಗಳು ಮೊರೆಯುತ್ತವೆ ಮನೆ ಮನಗಳು ಮುರಿಯುತ್ತವೆ,
ಹೀಗಿದ್ದರೂ ಪಕ್ಕದ ನಾಡಿನವರಷ್ಟು ಕ್ರೂರಿಗಳಲ್ಲ ನಾವು!
ಅಷ್ಟಕ್ಕೂ ಅವರದ್ದು ಶಾಂತಿ ಪ್ರಿಯತೆ ಸಾರುವ ಧರ್ಮ....!!
ಇನ್ನು ನಾವೋ ಹುಟ್ಟು ಶಾಂತಿ ಪ್ರಿಯರು?!//

14 December 2014

ಅರಿಕೆ ಮಾತ್ರವಿದು ಬಿನ್ನಹವಲ್ಲ......



ಬರೆಯದೆ ಹಗುರಾಗುವ ಬಗೆ ನನಗರಿವಿಲ್ಲ,
ಹಾಗಂತ ಬರೆಯುವ ಬಗೆಯನ್ನೂ ನಾನರಿತಿಲ್ಲ/
ಅನ್ನಿಸಿದ್ದನ್ನು ಅಭಿವ್ಯಕ್ತಿಸುವ ಸ್ವಾತಂತ್ರ್ಯ ಕೊಡುವ ಅಕ್ಷರ ಒಂದೇ ನನ್ನ ಅನುಗಾಲದ ಭರವಸೆ,
ಇಲ್ಲ ನನಗೆ ಇನ್ನೊಬ್ಬರು ಇದನ್ನ ಓದಿ ಮೆಚ್ಚಲಿ ಎನ್ನುವ ಚಿಲ್ಲರೆ ಆಸೆ//

ಹಾಡುವ ಹಕ್ಕಿಗೆಲ್ಲಿದೆ ಹಾಡಿನ ಹಂಗು?,
ಕುಣಿವ ನವಿಲಿಗೇನು ಕೆಂಬೂತಕ್ಕೂ ಇರದು ತಾಳದ ಗುಂಗು/
ಅನ್ನಿಸಿದಾಗ ಅಂದು ಬಿಡಬೇಕು ಭಾವನೆಗಳ ಅನಿರ್ದಿಷ್ಟಾವಧಿಗೆ ಮುಂದೂಡುವುದು ಸಲ್ಲ,
ನಾಳೆ ಮತ್ತೆ ಕಾಲ ಸಿಗುವುದೋ ಇಲ್ಲವೋ?
ಯಾವನು ಬಲ್ಲ?//

ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಸೋತ ಮನ ಬರೆದ ನಾಲ್ಕೆ ನಾಲ್ಕು ಸಾಲು,
ಓದಿದ ಎಲ್ಲರೂ ಅದನ್ನ ಕವಿತೆ ಎಂದರು ನನ್ನದೇನಿಲ್ಲ ಈ ಹಿಕಮತ್ತಿನಲ್ಲಿ ಪಾಲು/
ನಾನೊ ನನ್ನೊಳಗೆ ಅಂತರ್ಮುಖಿ,
ಹೊಗಳಿಕೆ ತೆಗಳಿಕೆಗಳೆರಡಕ್ಕೂ ಕಿವುಡ....
ಹೀಗಾಗಿಯೇ ನಿತ್ಯ ಸುಖಿ//

ಈ ನೆನಪುಗಳೆ ಹಾಗೆ.....



ಮೋಡವ ಕೆಣಕಿ ಗಾಳಿ ಬೀಸಿದಾಗ ಮಳೆ,
ಭೂಮಿಯ ಬಾನು ಮೋಹಿಸುವ ಹೊತ್ತು ಎಲ್ಲೆಲ್ಲೂ ನೆಂದ ನೆಲ ಕಳೆಕಳೆ/
ಮೊದಲ ಹನಿ ಅದ್ಯಾವ ಚಿಪ್ಪಿನಲ್ಲಾಯಿತು ಮುತ್ತು?,
ಅದಿಲ್ಲಿ ಮುಗಿಲಿನ ಮನದಾಳದ ಹೊರತು ಇನ್ಯಾರಿಗೆ ತಾನೇ ಗೊತ್ತು!//

ಬೇಟೆಯ ಮೈ ಬಣ್ಣವ ಮೋಹಿಸಲು ನಾ ರಾಮನಲ್ಲ,
ಕಂಡಕಂಡವರ ಬೆನ್ನು ಹತ್ತುವ ಶ್ಯಾಮನಾಗುವುದೂ ಇಲ್ಲ/
ಸಾಕು ಸಿಕ್ಕಿದ್ದ ನಿನ್ನೊಲುಮೆಯ ಕ್ಷಣಿಕ ಸುಖ ನನಗೆ,
ಇದಕ್ಕಿಂತಾ ಇನ್ನೇನು ಬೇಕು ಹೇಳು?.....
ಕಳೆಯೋಕೆ ಈ ಸುಡು ಬಾಳ ಬೇಗೆ//

ಬತ್ತದ ತುಂಗೆಯ ಹಾಗೆ ಭಾವಗಳು ಮನದೊಳಗೆ,
ಇವನ್ನ ಹೇಳಿಕೊಳ್ಳದೆ ಎದೆಯೊಳಗೆ ಒತ್ತಿ ಬಚ್ಚಿಟ್ಟುಕೊಳ್ಳುವುದಾದರೂ ಹೇಗೆ/
ಹಾಗಂತಲೇ ಕವಿತೆಯ ನೆಪದಲ್ಲಿ ಸಾರ್ವಜನಿಕವಾಗಿ ನಿತ್ಯ ಬೆತ್ತಲಾಗುತ್ತೀನಿ,
ಸಾಧ್ಯವಾದಷ್ಟು ಇತರರಿಗೆ ಬೆಳಕ ತೋರಿ ಮತ್ತದೇ ದೀಪದಡಿಯ ನಿರಂತರ ಕತ್ತಲಾಗುತ್ತೀನಿ//