16 December 2014

ದೇವರಿಗಾಗಿ ಸುಮ್ಮನಾಗೋ ಮಾರಾಯ! ದೇವರು ನನಗೂ ಇದ್ದಾನೆ?!




ಬಾನ ಚಪ್ಪರದಡಿಗೆ ನನ್ನದೂ ಒಂದು ನಾಡು.
ಕಂಡವರ ಕೊಲ್ಲುವ ಮನಸತ್ತ ಮಂದಿಯ ದೂರದಿಂದಲೇ ಕಂಡು ಹೌಹಾರುವವರ ಬೀಡು/
ನಮ್ಮದೇನಿದ್ದರೂ ಇಲ್ಲದ ಭೂತವನ್ನ ಕಲ್ಪಿಸಿಕೊಂಡು ನಮ್ಮ ನಮ್ಮ ಮನೆಗೆ ನಾವೇ ಕಿಚ್ಚಿಟ್ಟು ಕಚ್ಚಾಡುವ ಖಯಾಲಿ!
ಈ ಧರ್ಮದ ಅಫೀಮು ನುಂಗಿ ನಶೆಯಲ್ಲಿ ಕಂಡವರ ಮಕ್ಕಳ ಕೊಲ್ಲುವ.....
ನಮ್ಮ ದಯವಿಲ್ಲದ ದಾಯಾದಿಗಳಂತಹ ಹೀನ ಕಸುಬು ನಮಗ್ಯಾಕೆ ಹೇಳಿ?!//



ಧರ್ಮ ನಮ್ಮದೂ ಇದೆ ಅದರ ನಶೆ ಆಗಾಗ ನಮಗೂ ಏರುತ್ತದೆ,
ಆಗ ಮಾತ್ರ ಭಂಡರಂತೆ ಅವರ ಕ್ರಮವನ್ನ ನಾವು ಹೀಯ್ಯಾಳಿಸುತ್ತೇವೆ....
ನಮ್ಮ ಮನೆ ದೇವರನ್ನ ಅವರೂ ಮನಸೋ ಇಚ್ಛೆ ಟೀಕಿಸಿ ದ್ವೇಷದ ವಿಷ ಕಾರುತ್ತಾರೆ/
ಆದರೂ ನಾವು ಶಾಲೆಗೆ ಹೋದ ಮಕ್ಕಳ ಜೀವದ ಮೇಲೆರಗುವುದಿಲ್ಲ,
ಕಣ್ಣಲ್ಲಿ ರಕ್ತ ಬತ್ತಿದ ರಕ್ಕಸರಂತೆ ನೇರ ಆ ಎಳೆಯರ ಕಣ್ಣಿಗೆ ಗುಂಡಿಡುವುದಿಲ್ಲ//



ನಮ್ಮದದೇನಿದ್ದರೂ ಬರಿ ಕೋಳಿ ಜಗಳ,
ಮಸೀದಿಯೊಳಗೆ ಸೂಕರನ ಕೊಳೆತ ಮಾಂಸ ಎಸೀತೀವಿ....
ದೇಗುಲದೊಳಗೆ ಗೋ ಮಾಂಸವ ಕಂಡು ಹಿಂದೆಂದೂ ಇಲ್ಲದಂತೆ ಹೌಹಾರುತ್ತೀವಿ/
ಆಮೇಲೆ ಇದ್ದೇ ಇದೆ ಎಲ್ಲರಿಗೂ ಸದಾವಕಾಶ!
ಮೊಂಡು ಕತ್ತಿ ಕೊಡಲಿಗಳಿಗೆಲ್ಲ ಹೋಗಿ ಊರ ಮೇಯುತ್ತವೆ.....
ಮೈಕುಗಳು ಮೊರೆಯುತ್ತವೆ ಮನೆ ಮನಗಳು ಮುರಿಯುತ್ತವೆ,
ಹೀಗಿದ್ದರೂ ಪಕ್ಕದ ನಾಡಿನವರಷ್ಟು ಕ್ರೂರಿಗಳಲ್ಲ ನಾವು!
ಅಷ್ಟಕ್ಕೂ ಅವರದ್ದು ಶಾಂತಿ ಪ್ರಿಯತೆ ಸಾರುವ ಧರ್ಮ....!!
ಇನ್ನು ನಾವೋ ಹುಟ್ಟು ಶಾಂತಿ ಪ್ರಿಯರು?!//

No comments: