ಪುಸ್ತಕ ಪರಿಚಯ
ಕಾದಂಬರಿ - "ರಸಾತಳ"
ಕಾದಂಬರಿಕಾರರು - ಕೂಡ್ಲು ತಿಮ್ಮಪ್ಪ ಗಟ್ಟಿ.
ಪ್ರಕಟಿತ ವರ್ಷ: ೧೯೯೮
ಕ್ರಯ: ₹೬೦.
ಪ್ರಕಾಶಕರು: ರಾಜಾ ಚೆಂಡೂರು
ನೆಮ್ಮದಿ ಪ್ರಕಾಶನ
೮೮ "ನೆಮ್ಮದಿ"
ಪಟ್ಟಣಗೆರೆ
ರಾಜರಾಜೇಶ್ವರಿ ನಗರ
ಬೆಂಗಳೂರು ೫೬೦೦೩೯
ಮುನ್ನುಡಿ.
"ರಸಾತಳ" ಎಂಬ ಹೆಸರಿನ ಬಗ್ಗೆ ಜಿಜ್ಞಾಸೆ ವ್ಯಕ್ತಪಡಿಸಿದವರಿಗಾಗಿ ಸ್ವಲ್ಪ ವಿವರಣೆಯನ್ನು ಕೊಡಬಯಸುತ್ತೇನೆ.
ಕಾದಂಬರಿ ಬರೆದು ಮುಗಿಸಿದ ಬಳಿಕ ಹೆಸರಿಡಲು ತುಂಬಾ ಯೋಚಿನಬೇಕಾಯಿತು. ಹಲವು ದಿನಗಳ ಬಳಿಕ ಹೊಳೆದ ಹೆಸರು "ರಸಾತಳ". ಇದು ಈ ಕಾದಂಬರಿಗೆ ಅತ್ಯಂತ ಸೂಕ್ತವಾದ ಹೆಸರು ಅನ್ನಿಸಿತು.
ಶ್ರೀಮದ್ಭಾಗವತದಲ್ಲಿ ಏಳು ಅಧೋಲೋಕಗಳ ವರ್ಣನೆ ಬರುತ್ತದೆ. ಬಹಳ ಸಂಕ್ಷಿಪ್ತವಾಗಿ ಹೇಳುವುದಾದರೆ:
'ಅತಳ' - ಇದು ಅಸುರ ಶಿಲ್ಪಿ ಮಯನ ಪುತ್ರ ಬಲನ ವಾಸಸ್ಥಾನ. ಇವನ 'ಮಾಯೆ'ಯನ್ನು ಸೃಷ್ಟಿಸಿದನು.
'ವಿತಳ' - ಇಲ್ಲಿ ಶಿವನು ತಾಟಕೇಶ್ವರ ಎಂಬ ಹೆಸರಿನಲ್ಲಿ ತನ್ನ ಗಣಗಳಿಂದೊಡಗೂಡಿ ಪಾರ್ವತಿಯ ಜೊತೆಯಲ್ಲಿ ವಾಸಿಸುತ್ತಾನೆ.
'ಸುತಳ' - ಇಲ್ಲಿ ವೀರೋಚನ ಪುತ್ರನಾದ ಬಲಿ ಚಕ್ರವರ್ತಿ ವಾಸಿಸುತ್ತಾನೆ. ವಾಮನನಿಂದ ಅಧೋಃಲೋಕಕ್ಕೆ ತಳ್ಳಲ್ಪಟ್ಟ ಬಲಿ ಪುನಃ ಇಂದ್ರ ಪ್ರಾಪ್ತಿಯಾಗುವವರೆಗೆ ಇಲ್ಲಿ ವಾಸಿಸುತ್ತಾನೆ. ಇಲ್ಲಿ ವಿಷ್ಣುವು ಬಲಿಯ ಅರಮನೆಯ ಬಾಗಿಲು ಕಾಯುವವನಾಗಿರುತ್ತಾನೆ. ಈಗಿನ ಇಂದ್ರ ಪದವಿ ಮುಗಿದ ಬಳಿಕ ಬಲಿ ಮುಂದಿನ ಇಂದ್ರನಾಗುತ್ತಾನೆ.
'ತಳಾತಳ' - ಇದು ನಾಗಲೋಕ. ಇಲ್ಲಿ ನಾಗರು ವಾಸಿಸುತ್ತಾರೆ.
'ರಸಾತಳ' - ಫಣಿಗಳೆಂಬ ದೈತ್ಯರು ವಿಷ್ಣುವಿಗೆ ಭಯಪಟ್ಟು ಇಲ್ಲಿ ವಾಸಿಸುತ್ತಾರೆ. ಇವರಿಗೆ ವಾಯುವು ಕೂಡ ಪ್ರವೇಶಿಸದಂತ ಕವಚವಿದೆ. ಬ್ರಹ್ಮದೇವನ ಮುಖದಿಂದ ಜನಿಸಿದ ಕಾಮಧೇನು ಇಲ್ಲಿ ವಾಸ ಮಾಡುತ್ತದೆ. ಇದರ ಹಾಲಿನಿಂದ ಕ್ಷೀರನಿಧಿಯೆಂಬ ಹಾಲಿನ ಮಡು ಇಲ್ಲಿ ತುಂಬಿಕೊಂಡಿರುತ್ತದೆ. ಕಾಮಧೇನುವಿನ ಮಕ್ಕಳಾದ ಸುರೂಪಾˌ ಹಂಸಿಕಾˌ ಸುಭದ್ರಾ ಹಾಗೂ ಸರ್ವಕಾಮದುಘಾ ಎಂಬ ನಾಲ್ಕು ದೇನುಗಳು ಈ ಲೋಕದ ನಾಲ್ಕು ದಿಕ್ಕುಗಳಲ್ಲಿವೆ.
'ಪಾತಾಳ' - ಇದು ನಾಗರಾಜನಾದ ವಾಸುಕಿ ಮತ್ತು ಇತರ ನಾಗಗಳು ವಾಸಿಸುವ ಲೋಕ.
ಇನ್ನು ಈ ಲೋಕಗಳು ಎಲ್ಲಿವೆ ಎನ್ನುವ ಪ್ರಶ್ನೆ ಎಲ್ಲಿಯೂ ಇಲ್ಲ ಎಂದರೆ ತಪ್ಪೇನಾಗಲಾರದು. ಆದರೆ ಒಂದರ್ಥದಲ್ಲಿ ಇವು ಭೂಮಿಯ ಮೇಲೆಯೆ ಇರುವ ಅಧೋಲೋಕಗಳೆಂದೆ ಹೇಳಬಹುದು. ಒಂದು ದೇಶವು ಒಂದು ಕಾಲದಲ್ಲಿ ಅತಳದಂತೆಯೂˌ ಇನ್ನೊಂದು ಕಾಲದಲ್ಲಿ ವಿತಳದಂತೆಯೂˌ ಮತ್ತೊಂದು ಕಾಲದಲ್ಲಿ ಬೇರೆ ಯಾವುದೋ ಒಂದು ಅಧೋಲೋಕದಂತೆಯೂ ಇರಬಹುದು. ಅಥವಾ ಏಕಕಾಲದಲ್ಲಿಯೆ ಒಂದು ದೇಶದ ಬೇರೆ ಬೇರೆ ಭಾಗಗಳಲ್ಲಿ ವಿವಿಧ ಅಧೋಲೋಕಗಳ ಸ್ಥಿತಿಯೂ ಇರಬಹುದು.
ಅಧೋಲೋಕವೆಂದರೆ ನರಕವಲ್ಲ. ನರಕವು ಬೇರೆಯೆ ಒಂದು ಲೋಕ. ಅದೂ ಕೂಡ ಇರುವುದು ಭೂಮಿಯ ಮೇಲೆಯೆ ಎನ್ನಲಡ್ಡಿಯಿಲ್ಲ.
ಪುರಾಣದ ಪ್ರಕಾರ ಮೇಲೆ ಏಳು ಲೋಕಗಳಿವೆ. "ಮೇಲೆ" ಎಂದರೆ ಅಧೋಲೋಕದಿಂದ ಮೇಲೆ ಎಂದರ್ಥ. ಆದ್ದರಿಂದ ಭೂಮಿಯೂ ಮೊತ್ತ ಮೊದಲಿನ ಮೇಲಿನ ಲೋಕ. ಹಾಗೆˌ ಭೂಲೋಕˌ ಭುವರ್ಲೋಕˌ ಸ್ವರ್ಲೋಕˌ ಮಹರ್ಲೋಕˌ ಜನಲೋಕˌ ತಪೋಲೋಕˌ ಸತ್ಯಲೋಕ - ಏಳು ಊರ್ಧ್ವಲೋಕಗಳು.
ಇವು ಕೂಡ ಭೂಮಿಯ ಮೇಲಿರುವ ಲೋಕಗಳೆ ಎಂದು ತಿಳಿದುಕೊಳ್ಳಬೇಕಾಗುತ್ತದೆ.
ರಸಾತಳದ ಪೂರ್ಣ ವರ್ಣನೆಯನ್ನು ಓದಿ ನೋಡಿದರೆˌ ಈ ಕಾದಂಬರಿಗೆ ಈ ಹೆಸರು ಚೆನ್ನಾಗಿ ಹೊಂದಿಕೊಳ್ಳುತ್ತದೆ ಎಂದೆನಿಸುವುದರಲ್ಲಿ ಸಂದೇಹವಿಲ್ಲ. ಬದರಿನಾರಾಯಣ ಒಂದು ಫಣಿಯಂತೆ ಕಾಣಿಸಬಹುದು.
ರಾಮಕಿಂಕರರಿಗೆ ಹೇಗೆ ರಾಮ ಉತ್ತಮನೋˌ ಹಾಗೆಯೆ ರಾವಣಕಿಂಕರನಿಗೆ ರಾವಣನೂ ಉತ್ತಮನೆ.
ಒಂದು ವರ್ಷದ ಹಿಂದೆ ಬರೆದ 'ರಸಾತಳ' ಈಗ ಪುಸ್ತಕದ ರೂಪದಲ್ಲಿ ಬರುತ್ತಿದೆ. ಬದರಿನಾರಾಯಣ ಉದ್ಯೋಗ ತೊರೆಯಬೇಕಾಗಿ ಬಂದಾಗ ಅವನ ಸಂಪತ್ತಿನ ಮೌಲ್ಯ ಮೂರುಕೋಟಿಗಿಂತ ಹೆಚ್ಚಿತ್ತು. ಆಗ ಅದೆ ದೊಡ್ಡ ಮೊತ್ತವೆಂದುಕೊಂಡಿದ್ದೆ. ಈಗ ಬರೆಯುವುದಾಗಿದ್ದರೆ ಮೂವತ್ತು ಕೋಟಿಯೆಂದು ಬರೆಯಬೇಕಾಗಿತ್ತೋ ಏನೋ! ಯಾಕೆಂದರೆ ಮೂರು ಕೋಟಿ ಅಸಾಧ್ಯ ಸಂಪತ್ತು ಎಂದು ನನಗನಿಸಿತ್ತು. ಆದರೆ ಆ ಮೊತ್ತವನ್ನು ಬದರಿನಾರಾಯಣನ ಸಂಪತ್ತಾಗಿ ಕಂಡಾಗ ನನಗಾದಷ್ಟು ಭಯ 'ರಸಾತಳ' ಧಾರವಾಹಿಯ ಕೆಲವು ಓದುಗರಿಗೆ ಆಗಲಿಲ್ಲ ಎಂಬುದು ನನ್ನಲ್ಲಿ ಕೊನೆಯಿಲ್ಲದ ಕುತೂಹಲವಾಗಿ ಉಳಿದಿದೆ.
ಕೃತಜ್ಞತೆ: ಧಾರವಾಹಿಯಾಗಿ ಪ್ರಕಟಿಸಿದ 'ಮಂಗಳ' ವಾರಪತ್ರಿಕೆಗೆˌ ಮುನ್ನುಡಿ ಬರೆಯುವಲ್ಲಿ ಕೆಲವೊಂದು ವಿಷದಿಕರಣ ನೀಡಿದ ಶ್ರೀವಿಷ್ಣುಮೂರ್ತಿ ಭಟ್ಟರಿಗೆˌ ಕಾದಂಬರಿಯ ಹೊಸ ಹೆಸರಿನ ಬಗ್ಗೆ ಕುತೂಹಲ ವ್ಯಕ್ತಪಡಿಸಿˌ ಕೊನೆಯ ಬಗ್ಗೆಯೂ ಕುತೂಹಲ ಉಳಿಸಿಕೊಂಡ ಧಾರವಾಹಿಯ ಓದುಗರಿಗೆ.
ಕೆಟಿ ಗಟ್ಟಿ
ಉಜಿರೆ
೦೮ ೦೫ ೯೮
"ನನ್ನ ಹಾಗೂ ಕೆ ಟಿ ಗಟ್ಟಿಯವರ ನಡುವಿನ ಸಂಬಂಧ ಹಾಗೂ ಅನುಬಂಧವನ್ನ ಒಂದು ನಿರ್ದಿಷ್ಟ ವ್ಯಾಖ್ಯಾನದಲ್ಲಿ ವಿವರಿಸಲರಿಯೆ. ಅವರು ನನಗೆ ಹಿರಿಯ ಮಿತ್ರರೂ - ಮಾರ್ಗದರ್ಶಕರೂ - ಅಭಿಮಾನದ ಲೇಖಕರೂ - ಆತ್ಮೀಯ ಬಂಧುವೂ - ರಕ್ತಸಂಬಂಧ ಮೀರಿದ ಹಿತೈಶಿಯೂ ಆಗಿದ್ದರೂ. ಇದರಿಂದ ಒಂದಕ್ಷರ ಹೆಚ್ಚು ಬರೆದರೆ ಸ್ವತಃ ನನಗೆ ಅದು ಕೃತಕ ಅನ್ನಿಸುತ್ತೆ. ಅವರ ಹಾಗೂ ಯಶೋದಮ್ಮನ ಆರೈಕೆಯಲ್ಲಿ ಅವರು ಉಜಿರೆಯ ವನಶ್ರೀಯಲ್ಲಿದ್ದ ದಿನಗಳಲ್ಲಿ ಹಲವಾರು ಹಗಲು - ರಾತ್ರಿಗಳನ್ನ ಕಳೆದಿದ್ದೇನೆ. ನನಗಾಗಿ ಅವರು ಹಂಡೆಗೆ ಉರಿ ಹಾಕಿ ಮೀಯಲು ಬಿಸಿ ನೀರು ಕಾಯಿಸುತ್ತಿದ್ದುದು - ರುಚಿಕರವಾಗಿ ಹೊತ್ತು ಹೊತ್ತಿಗೆ ತಿಂಡಿ - ಊಟ ಬೇಯಿಸಿ ಹಾಕುತ್ತಿದ್ದುದು ನೆನಪಾಗುವಾಗ ಕಣ್ಣು ಹಾಗೂ ಮನತುಂಬಿ ಬರುತ್ತದೆ. ತೀರ ಖಾಸಗಿ ಅನ್ನುವಂತಾ ಅಥವಾ ವಯಕ್ತಿಕ ಹಾಗೂ ಮುಜುಗರ ಹುಟ್ಟಿಸುವಂತ ಮಾತುಗಳನ್ನೂ ನಿರ್ಭಿಡೆಯಿಂದ ಅವರಿಬ್ಬರಲ್ಲೂ ಕೇಳಿ ಚರ್ಚಿಸುವಷ್ಟು ಸ್ವಾತಂತ್ರ್ಯ ನನಗಿತ್ತು. ಸದ್ಯ ಅವರ ಕೊನೆಯ ಕಾದಂಬರಿ "ಮೋಹ ಚುಂಬಿತ ಮಾಯೆ" ಓದುತ್ತಿದ್ದೇನೆ. ಪುತ್ತೂರು ಕರ್ನಾಟಕ ಸಂಘ ಪ್ರಕಟಿಸಿದ್ದ ಪ್ರೊಫೆಸರ್ ಶ್ರೀಧರರ ಸಂಪಾದಕತ್ವದ ಅವರ ಅಭಿನಂದನಾ ಗ್ರಂಥದಲ್ಲಿ "ವಿಕ್ರಾಂತ ಕರ್ನಾಟಕ"ಕ್ಕಾಗಿ ನಾನು ಹಾಗೂ ನನ್ನ ಆತ್ಮಬಂಧು ರುದ್ರಪ್ರಸಾದ ನಡೆಸಿದ್ದ ಅವರ ಸಂದರ್ಶನವೂ ಸೇರಿದೆ ಅನ್ನೋದೆ ನನಗೆ ನೆಮ್ಮದಿಕೊಡುವ ಅಂಶ. ಆತ್ಮೀಯರೊಬ್ಬರನ್ನ ಕಳೆದುಕೊಂಡ ವೇದನೆಯಲ್ಲಿದ್ದೇನೆ. ಸದ್ಯಕ್ಕೆ ಇಷ್ಟನ್ನೆ ಹೇಳಬಲ್ಲೆ."
- 🙂
'ರಸಾತಳ'
".......ಒಂದು ಗಾಢವಾದ ನಿದ್ರೆಯಿಂದ ಎಚ್ಚೆತ್ತಂತೆ ಅನ್ನಿಸಿತು. ನಿದ್ರೆ ಮಾಡಿದ್ದೆನಾದರೆˌ ಎಷ್ಟು ಹೊತ್ತು ಅಥವಾ ಪ್ರಜ್ಞಾಹೀನ ಸ್ಥಿತಿಯಾಗಿತ್ತೆ? ಹಾಗಿದ್ದರೆ ಎಷ್ಟು ಕಾಲ? ಎಷ್ಟು ಕಾಲದಿಂದ ನಾನು ಹೀಗೆ ಮಲಗಿದಲ್ಲಿಯೆ ಇದ್ದೇನೆ? ಘಂಟೆಗಳೆ - ದಿನಗಳೆ ಅಥವಾ ತಿಂಗಳುಗಳೆ ದಾಟಿ ಹೋಗಿವೆಯೆ? ಈಗ ನೋವು ಅನುಭವಕ್ಕೆ ಬಾರದಿರುವುದರಿಂದ ದೇಹವೆಂಬುದು ಅನುಭವವೇದ್ಯ ಸಂಗತಿಯಾಗಿರಲಿಲ್ಲ. ಕಿಂಚಿತ್ ತೆರೆದ ರೆಪ್ಪೆಯಡಿಯಿಂದ ಬದರಿನಾರಾಯಣನಿಗೆ ತನ್ನ ದೇಹ ಕಾಣಿಸುತ್ತಿತ್ತಾದ್ದರಿಂದ ತಾನು ಸತ್ತಿಲ್ಲ. ತನ್ನ ಜೀವ ದೇಹದೊಳಗೆ ಇದೆ ಎಂಬ ವಿಶ್ವಾಸ ಉಂಟಾಯಿತು. ಆದರೆ ದೇಹ ಹೇಗಿದೆ? ಗಾಯ ಒಣಗಿದೆಯೆ? ಬೆನ್ನಿನಲ್ಲಿ ಹುಣ್ಣಾಗಿರಬಹುದೆ? ದೇಹಕ್ಕೆ ಪೋಷಕಾಂಶಗಳನ್ನು ಹೇಗೆ ಒದಗಿಸುತ್ತಿದ್ದಾರೆ ಯಾವುದೂ ತಿಳಿಯಲಿಲ್ಲ. ಮೂರು ಜನ ಡಾಕ್ಟರುಗಳು ತನ್ನ ಮೇಲೆ ಏನೋ ಪ್ರಯೋಗಕ್ಕೆ ಸಿದ್ಧರಾಗುತ್ತಿದ್ದಾರೆ ಎನ್ನಿಸಿತು.
ಎನೋ ಒಂದು ಔಷಧಿಯನ್ನು ಚುಚ್ಚಿದರು. ಪ್ರಜ್ಞೆಯನ್ನು ಕಳೆಯಲಿಕ್ಕಾಗಿರಬಹುದೆ? ಅಥವಾ ಪ್ರಜ್ಞೆಯನ್ನು ಹೊಡೆದೆಬ್ಬಿಸುವ ಚೋದಕವಾಗಿರಬಹುದೆ?
ಸ್ವಲ್ಪ ಹೊತ್ತಿನಲ್ಲಿ ತಟ್ಟನೆ ಕತ್ತಲಾವರಿಸಿದಂತೆ ತೋರಿತು. ರೆಪ್ಪೆ ತೆರೆದೆ ಇದೆಯೆ? ಮುಚ್ಚಿಕೊಂಡಿದಿಯೆ? ಎಂದು ತಿಳಿಯಲಿಲ್ಲ. ಹೆಚ್ಚಿನಂಶ ತೆರೆದೆ ಇದೆಯೆನ್ನಿಸಿತು. ಹಾಗಿದ್ದರೆ ಕತ್ತಲೆಯೇನು? ಎಲ್ಲಿಂದ ಬಂತು? ಇಷ್ಟು ಹೊತ್ತು ಕಾಣಿಸುತ್ತಿತ್ತು - ಕೇಳಿಸುತ್ತಿತ್ತು! ಈಗ ಶ್ರವಣ ಶಕ್ತಿ ಮಾತ್ರ ಉಳಿದುಕೊಂಡಿದೆ. ದೃಷ್ಟಿ ಶಕ್ತಿಯೂ ಕೊನೆಗೊಂಡಿತೆಂದು ಇದರರ್ಥವೆ? ಇವರ ಪ್ರಯೋಗದಿಂದಾಗಿ ಇನ್ನು ಶ್ರವಣ ಶಕ್ತಿಯೂ ನಷ್ಟವಾದರೆ? ಪಂಚೇಂದ್ರಿಯಗಳ ಕಾರ್ಯಭಾರವೂ ನಿಂತಂತಾಯಿತು. ಆಮೇಲೆ ಜೀವವೆಂಬುದು ಇರುವುದೆಲ್ಲಿ? ಎದೆ ಬಡಿತ ಇರುವವರೆಗೆ - ದೇಹದಲ್ಲಿ ಬಿಸಿ ಇರುವವರೆಗೆ - ಉಸಿರಾಟ ನಡೆಯುವವರೆಗೆ ಜೀವಂತˌ ಆ ಮೂರೂ ಕೊನೆಗೊಂಡಾಗ ಮೃತ. ಆ ಮೆರೂ ಒಂದೊಂದಾಗಿ ಕೊನೆಗೊಳ್ಳುವುದಿಲ್ಲ. ಒಮ್ಮೆಲೆ ಕೊನೆಗೊಳ್ಳುತ್ತವೆ. ಆಗ ನಾನು ಉಳಿಯುತ್ತೇನೆಯೆ.
ಬದರಿನಾರಾಯಣನಿಗೆ ಪುನರ್ಜನ್ಮದಲ್ಲಿ ನಂಬಿಕೆಯಿತ್ತು. ಈ ಸ್ಥಿತಿಯಲ್ಲಿಯೂ - ಈ ಗಾಢಾಂಧಕಾರದಲ್ಲಿಯೂ ಅವನು ಹತಾಶನಾಗಲಿಲ್ಲ. ಹೇಗೋ ನಾನು ಬದುಕಿ ಮರುಳುತ್ತೇನೆ ಎಂಬ ವಿಶ್ವಾಸ ಅದಮ್ಯವಾಗಿತ್ತು.
ಈಗ ಅವನು ಯೋಚಿಸಿದ. ನೋವಿಲ್ಲ - ಯಾವ ಸಂವೇದನೆಯೂ ಇಲ್ಲ. ಜೀವಂತಿಕೆ ಮತ್ತು ಕತ್ತಲೆ. ಡಾಕ್ಟರುಗಳು ಏನೋ ಮಾತನಾಡಿದಾಗ ಮಾತ್ರ ಸ್ವಲ್ಪ ಕಿರಿಕಿರಿ - ಅಸ್ವಸ್ಥತೆ. ಅದು ಸ್ಪಷ್ಟವಾಗುದದರಿಂದ ಒಂದು ರೀತಿಯ ಅಸಹನೆ. ಅವರು ಶಬ್ದಗಳಲ್ಲಿ ಮಾತನಾಡದೆ ಅಕ್ಷರಗಳಲ್ಲಿ ಮಾತನಾಡುತ್ತಿರುವಂತೆ ತೋರಿತು. ತಾಂತ್ರಿಕ ಶಬ್ದದ ಹೃಸ್ವರೂಪವಾದ ಅಕ್ಷರಗಳು.
ಈಗ ನಾನು ಕೂಡ ಇವರಿಗೆ ಒಬ್ಬ ಮನುಷ್ಯನಲ್ಲ. ಒಂದು ಅಕ್ಷರ ಅಥವಾ ಒಂದು ಸಂಖ್ಯೆ ಅನ್ನಿಸಿತು ಬದರಿನಾರಾಯಣನಿಗೆ. ಇವರು ಮಾತಾಡದೆ ಇದ್ದಾಗ ನೆಲಸುವ ನಿಶ್ಯಬ್ಧತೆ ಒಂದು ರೀತಿಯಲ್ಲಿ ಹಿತಕರವಾಗಿತ್ತು. ಜೀವಕ್ಕೆ ತಂಪು ನೀಡುವ ನಿಶ್ಯಬ್ಧತೆ. ಶ್ರವಣ ಶಕ್ತಿಯೂ ಅದೃಶ್ಯವಾದ ಮೇಲೆ ಈ ತಂಪು ಶಾಶ್ವತವಾಗಬಹುದು. ಅದು ತುಂಬಾ ಸುಖಪ್ರದವಾಗಿರಬಹುದು. ನಿಜವಾದ ಶಾಂತಿಯೆಂದರೆ ಅದೆ ಇರಬಹುದು. ಸಾವು ಎಂದರೆ ಅದೆ ಆಗಿರಬಹುದೆ? ಸಾವು ಅಷ್ಟು ಸುಖಕರವಾದ ದಿವ್ಯಾನುಭಾವವಾಗಿರಬಹುದೆ? ಮೋಕ್ಷವೆಂದರೆ ಅದೆ ಏನು?
ಬದರಿನಾರಾಯಣ ಈಗ ಬದುಕನ್ನು ಬಯಸುವಷ್ಟೆ ತೀವೃವಾಗಿ ಮೋಕ್ಷವನ್ನೂ ಬಯಸತೊಡಗಿದ. ಮರಳಿ ಬದುಕಿಗೆ ಬರುವ ಬಯಕೆ ಎಷ್ಟು ತೀವೃವಾಗಿತ್ತೋ - ಪುನರ್ಜನ್ಮದ ಬಯಕೆಯೂ ಅಷ್ಟೆ ತೀವೃವಾಗಿತ್ತು. ಕ್ಷಣದಿಂದ ಕ್ಷಣಕ್ಕೆ ಪುನರ್ಜನ್ಮದ ಬಯಕೆಯೆ ಬಲಗೊಳ್ಳುತ್ತಾ ಹೋಯಿತು. ಬಹುಶಃ ಇದು ಸಾವನ್ನು ಸಮೀಪಿಸುವ ಮುನ್ಸೂಚನೆಯಾಗಿರಬಹುದೆ? ವೇದನೆಯಿಲ್ಲದ ಸ್ಥಿತಿ - ದುಃಖವಿಲ್ಲದ ಸ್ಥಿತಿ - ಜೀವ ಅತ್ಯಂತ ಸಶಕ್ತವಾಗಿರುವ ಸ್ಥಿತಿ.
ಆದರೆ ಆ ಸ್ಥಿತಿಯಲ್ಲಿ ಒಂದು ಅಪಸ್ವರದಂತೆ ಕಾಡುತ್ತಿದ್ದುದು ಡಾಕ್ಟರುಗಳಾಡುತ್ತಿದ್ದ ಮಾತುಗಳು. ಈ ಶ್ರವಣ ಶಕ್ತಿಯೂ ಬೇಗನೆ ಹೊರಟು ಹೋಗಲಿ ಎಂದೂ ಕೂಡ ಅವನಿಗೆ ಅನಿಸದಿರಲಿಲ್ಲ. ಆದರೆ ಕೇವಲ ಅನಿಸಿಕೆ ಮಾತ್ರˌ ಬಯಕೆಯಲ್ಲ. ಯಾಕೆಂದರೆˌ ಇದು ಇಹಲೋಕದೊಂದಿಗೆ ಅವನಿಗಿದ್ದ ಕೊನೆಯ ಕೊಂಡಿಯಾಗಿತ್ತು. ಈ ಕೊಂಡಿ ಕಳಚಿತೆಂದರೆ ಮತ್ತೆ ಬರುವ ಆಸೆಯಿಲ್ಲ.
ಏನೋ ಮಾಡಿˌ ಕತ್ತಲೆಯನ್ನು ಮತ್ತು ಪರಿಪೂರ್ಣ ನಿಶ್ಯಬ್ಧತೆಯನ್ನು ಬಿಟ್ಟು ಎಲ್ಲರೂ ಹೊರಟು ಹೋದರು. ಎಲ್ಲಿಂದಲೋ ಎಂಬಂತೆ ಕೇಳಿಸುತ್ತಿರುವ ಎಲೆಕ್ಟ್ರಾನಿಕ್ ಗಡಿಯಾರದ ಚಕ್ ಚಕ್ ಎಂಬ ದನಿಯಿಂದ ಮಾತ್ರವೆ ತನ್ನ ಶ್ರವಣಶಕ್ತಿ ನಷ್ಟವಾಗಿಲ್ಲ ಎಂದು ಬದರಿನಾರಾಯಣ ಅರ್ಥೈಸಿಕೊಳ್ಳಬೇಕಿತ್ತು.
ಆಪರೇಷನ್ಗಾಗಿ ಆಸ್ಪತ್ರೆ ಸೇರುವ ಹಿಂದಿನ ದಿನ ಸುಪ್ರಿಯಾ ನ್ಯೂಯಾರ್ಕಿನಿಂದ ಮಾತಾಡಿದ್ದಳು. ಬದರಿನಾರಾಯಣನೆ ಫೋನು ಮಾಡಿದ್ದ. "ಇಲ್ಲಿಗೆ ಬಂದು ಐದು ವರ್ಷವಾಗ್ತಾ ಬಂತು. ನಿಮ್ಮನ್ನು ನೋಡಬೇಕು ಅನ್ನುವ ಮನಸಾಗ್ತಿದೆ ಅಂಕಲ್" ಎಂದಿದ್ದಳು. ತನ್ನ ಆಪರೇಷನ್ ಕುರಿತು ಅವನು ಅವಳಿಗೆ ಹೇಳಲಿಲ್ಲ. ಅವನನ್ನು ಹಚ್ಚಿಕೊಂಡವರು ಬೇರೆ ಯಾರೂ ಇರಲಿಲ್ಲ. ಅವನಿಗೆ ಕೂಡಿ ಹಾಗೆ ಅಷ್ಟು ಪ್ರೀತಿಪಾತ್ರ ವ್ಯಕ್ತಿ ಬೇರೆ ಇರಲಿಲ್ಲ.ಅದು ದೇವೇಚ್ಛೆಯಂತೆ ಉಂಟಾದ ಸಂಬಂಧ ಎಂದು ಅವನು ಭಾವಿಸಿದ್ದ. ತನಗೆ ಆಪರೇಷನ್ ಎಂದು ತಿಳಿದರೆ ಸುಪ್ರಿಯಾ ತಟ್ಟನೆ ಬಂದು ಬಿಡಬಹುದೆಂದನಿಸಿತ್ತು. "ನೀನು ಇತ್ತ ಬರುವುದು ಬೇಡˌ ಇಲ್ಲಿ ತೊಂದರೆಯಿದೆ. ನಾನೆ ಒಂದೆರಡು ತಿಂಗಳುಗಳ ನಂತರ ಅಲ್ಲಿಗೆ ಬರ್ತೇನೆ"
"ಏನು ಅಂಕಲ್ ತೊಂದರೆ?"
"ನಿನ್ನ ಅಪ್ಪ ಬಂದಿದಾನೆ"
"ಹೌದೆ?"
"ಹೌದು ಸುಪ್ರಿಯಾˌ ಹೊರ ಬಂದು ಐದು ವರ್ಷವಾಯ್ತಂತೆ. ಒಂದು ಉದ್ದನೆಯ ಕಥೆ ಹೇಳಿದ"
"ಏನು ಕಥೆ"
"ಅದೀಗ ಬೇಡˌ ಅದೇನಿದ್ದರೂ ಅವನಿಗೆ ಮಾತ್ರ ಸಂಬಂಧಪಟ್ಟದ್ದು. ನಿನಗೂ ಅದಕ್ಕೂ ಸಂಬಂಧವಿಲ್ಲ. ನೀನು ಅಲ್ಲೆ ಚೆನ್ನಾಗಿರು. ಅವಕಾಶವಾದಾಗ ನಾನೆ ಅಲ್ಲಿಗೆ ಬರುತ್ತೇನೆ. ನೀನು ಇಲ್ಲಿಗೆ ಬಂದು ನಿನ್ನಪ್ಪನ ಬಾಯಿಗೆ ಬೀಳುವುದು ಬೇಡ. ಅವನು ಯಾವತ್ತೂ ನೀನಿದ್ದಲ್ಲಿಗೆ ಬರಲಾರ."
"ಈಗ ಬದರಿನಾರಾಯಣನಿಗೆ ಅನಿಸಿತು ತಾನು ಜಯಕರನ ದಾರಿ ತಪ್ಪಿಸಿದ್ದು ಹೇಗೆ ಎಂದು ಸುಪ್ರಿಯಾಳಿಗೆ ಹೇಳಬೇಕಾಗಿತ್ತು ಎಂದು.
"ಸುಪ್ರಿಯಾ ಎಲ್ಲಿ?" ಎಂದು ಜಯಕರ ಆ ದಿನ ಕೇಳಿದ್ದಾಗˌ ಅನಿರೀಕ್ಷಿತ ಪ್ರಶ್ನೆಯ ಹೊಡೆತದಿಂದ ತಪ್ಪಿಸಿಕೊಳ್ಳಲು ಒಂದು ಕ್ಷಣ ಬೇಕಾಯಿತು. ಆದರೆ ಅಪೂರ್ವ ಪ್ರಸಂಗಾವಧಾನತೆಯ ಮನುಷ್ಯ ಬದರಿನಾರಾಯಣ.
"ಸುಪ್ರಿಯಾಳನ್ನು ನಾನು ನನ್ನ ಮಗಳಂತೆ ನೋಡಿಕೊಂಡೆ ಜಯಕರ. ಎಂಬಿಬಿಎಸ್ ವರೆಗೆ ಓದಿಸಿದೆ. ಆಮೇಲೆ ಎಂಡಿ ಓದಲು ಅಮೇರಿಕೆಗೆ ಕಳಿಸಿದೆ. ಅವಳು ಎಂಡಿ ಮುಗಿಸಿ ಅಲ್ಲೆ ಮದುವೆ ಮಾಡಿಕೊಂಡಳು. ಹುಡುಗನೂ ನಮ್ಮ ದೇಶದವನೆˌ ಪಂಜಾಬಿನವನು. ಅವನೂ ಡಾಕ್ಟರ್. ಅಲ್ಲಿಂದ ಅವರಿಬ್ಬರೂ ಕೆನಡಾಕ್ಕೆ ಹೋದರು. ಆರು ತಿಂಗಳ ಹಿಂದೆ ಕೆನಡಾದಿಂದ ಪತ್ರ ಬಂತು. ಅದು ಅವಳು ಕೆನಡಾದಿಂದ ಬರೆದಿದ್ದ ಮೊದಲ ಪತ್ರ. ಅದರ ಬಳಿಕ ಅವಳ ಗಂಡನಿಂದ ಒಂದು ಪತ್ರ ಬಂತು. ಅದರಲ್ಲಿ ಒಂದು ಆಕ್ಸಿಡೆಂಟಲ್ಲಿ ಸುಪ್ರಿಯಾ ಮೃತಳಾದಳು ಎಂದಿತ್ತು. ಸುಪ್ರಿಯಾ ಬರೆದ ಮೊದಲ ಪತ್ರದಲ್ಲಿ ಒಂದು ಆಸ್ಪತ್ರೆಯ ವಿಳಾಸವಿತ್ತು. ಅವಳ ಗಂಡನಿಂದ ಬಂದ ಪತ್ರದಲ್ಲಿ ಯಾವುದೆ ವಿಳಾಸವಿರಲಿಲ್ಲ" ಇಷ್ಟು ಕಥೆ ಸಾಕು ಎಂದು ಬದರಿನಾರಾಯಣ ನಿಲ್ಲಿಸಿದ.