28 December 2008

ಮತ್ತೆ ಮತ್ತೆ....

ಹೇಳಲು ಮರೆತ ಮಾತು ಕಡೆಗೂ ಹೇಳಲಾಗದೆ ಹಾಗೆ ಉಳಿಯಬೇಕು/

ಒಮ್ಮೆಯಾದರೂ ಉಸುರಿದ್ದರೆ ಬಯಸಿದ ಉತ್ತರ ಸಿಗುತ್ತಿತ್ತೇನೋ!

ಎಂಬ ವ್ಯಥೆ ಸವಿಯಾತನೆಯಾಗಿ ಮಾರ್ದನಿಸಿ ಉಲಿಯಬೇಕು...ಮತ್ತೆ ಮತ್ತೆ//

ನಿನ್ನೆದೆಯಲ್ಲಿ ಮುಚ್ಚಿದಲಾಗದ ಗುಟ್ಟು ನಾನು,ಯಾವಾಗಲೂ ಮರುಕಳಿಸೋ ಕನವರಿಕೆ ಅಲ್ಲವೇನು?/

ಓಡುವಲ್ಲೆಲ್ಲ ನೋಟ ನೀ ನನ್ನನೇ ಹುಡುಕುವಿಯೆಂದೂ ಗೊತ್ತು

ಏಕೆಂದರೆ ನನ್ನ ಮನದ ತುಮುಲವೂ ಹೀಗೆ ಇದೆ ಈ ಹೊತ್ತು...ಮತ್ತೆ ಮತ್ತೆ//

ಮತ್ತೆ ನೆನಪಾದೆ ನೀನು....

ದೂರದ ಬಾನಲ್ಲಿ ಬೆಳದಿಂಗಳ ಚಲ್ಲಿ,ಆ ಹಾದಿಯ ತುಂಬ ಅರಳುವ ಹೂವಲ್ಲಿ....

ನಿನ್ನಾಸೆಯ ಹೂವಾಗುವ ಮನದಾಸೆಯೂ ಮೂಡಿದೆ/

ಈ ಕಣ್ಣ ಕನಸಲಿ ಕಾಡೋ ಕವಿತೆ

ಎದೆ ತಾಳದೊಂದಿಗೆ ಹಾಡುವೆ ಇನಿತೆ

ಸ್ನೇಹ-ಪ್ರೀತಿಯ ನಡುವಿನ ಗೆರೆ ಸಾಕು ಇನ್ನು ಅಳಿಸುವ ಬಾರೆ...

ಸರಿಸುವ ನಮ್ಮ ನಡುವಿನ ತೆರೆ ಹರಿಸು ಬಾ ನೀನು ಪ್ರೇಮದ ಧಾರೆ//

11 December 2008

ನನಗೂ ನಿನಗೂ ಕಣ್ಣಲ್ಲೇ ಪರಿಚಯ...

ಕಣ್ಣ ಕೊಳದಲಿ ಅರಳಿರುವ ಸಂಭ್ರಮ,
ಮನದ ಬನದಲಿ ಚಿಗುರಿರುವ ವನಸುಮ/
ಮುಳುಗೋ ಬಾಳಲಿ ಕೈ ಆಸರೆ ನಾವೆ ನೀ,
ಬಿರಿದಾ ಭುವಿಯಲಿ ನಿರೀಕ್ಷೆ ಮಳೆಹನಿ//

ಕನಸೋ ನನಸೋ ಇದೆಂಥಾ ಸವಿ ಗೊಂದಲ...ಅದೇನೋ ಆಗಿದೆ ನನಗಂತೂ ಇದು ಮೊದಲ ಸಲ...

ಖಾಲಿ ಬಾನಲಿ ತೇಲಾಡೋ ಮೋಡವ,
ಆಸೆ ಕಣ್ಣಲಿ ನೆಲ ನೋಡೋ ವಿಸ್ಮಯ/
ಕೂಡೋ ಕಳೆದರೂ ಬದಲಾಗದ ಉತ್ತರ,
ಸನಿಹ ಸುಳಿಯದೇ ನೀನಾದೆಯ ಹತ್ತಿರ//

04 December 2008

ಏಯಂ ಆಕಾಶವಾಣಿ...

ಆಗಿನ ಮಧ್ಯಮವರ್ಗದ ಮನೆಗಳಲ್ಲಿ ಇರುತ್ತಿದ್ದ ಏಕೈಕ ಐಶಾರಾಮಿ ವಸ್ತು ರೇಡಿಯೋ! ಆಕಾಲದ ರೇಡಿಯೋಗಳನ್ನು ಬಡಪೆಟ್ಟಿಗೆ ವರ್ಣಿಸುವುದು ಅಸಾಧ್ಯ! ದೊಡ್ಡ ರಟ್ಟಿನ ಪೆಟ್ಟಿಗೆಯಂತಹ ಮರದ ಚೌಕದ ಮೂರು ಮೇಲ್ಮೈ ಸಪಾಟು,ಹಿಂದೆ ಬಲ ಬಿಟ್ಟು ಒತ್ತಿದರೆ ಮಾತ್ರ ಬದಲಾಗುತ್ತಿದ್ದ ಬ್ಯಾಂಡ್ ಸ್ವಿಚ್,ಎದುರಲ್ಲಿ ಸದಾ ಹಲ್ಕಿರಿದಂತ ಟ್ಯೂನರ್ ಪಟ್ಟಿ ಜೊತೆಗೆರಡು ಪಕ್ಕ ದುಂಡನೆಯ ಸ್ವಿಚ್ಗಲೆರಡು.ಇದು ಆಕಾಲದ ರೇಡಿಯೋಗಳ ಸ್ಥೂಲ ಸ್ವರೂಪ.ಕನಿಷ್ಠ ಇಬ್ಬಿಬ್ಬರು ಸೇರಿ ಹೊರಬೇಕಾಗಿದ್ದಂತ ಅವುಗಳಿಗೆ ಬಲೆ ಬಲೆ ಯಂತಿದ್ದ ಏರಿಯಲ್ ಕೂಡ ನಾಯಿಯೊಂದಿಗಿನ ಬಾಲದಂತಿರುತ್ತಿತ್ತು,ಇಂತಹ ಬ್ರಹತ್ ದೇಹಿಯ ನಿರ್ವಹಣೆ ಮಾತ್ರ ಬಲು ನಾಜೂಕು.ನೆಗಡಿ ಕೆಮ್ಮು ಜ್ವರ ಮುಂತಾದ ಮನುಷ್ಯರಿಗೆ ಬರುವ ಎಲ್ಲ ರೋಗಗಳು ತನಗೂ ಬರುತ್ತವೇನೋ ಎಂಬಂತೆ ಆಗಾಗ ಮಳೆ ಹೆಚ್ಚಾದ-ಚಳಿ ಎದ್ದ ದಿನಗಳಲ್ಲೆಲ್ಲ ಅದು ಕಾಯಿಲೆ ಬೀಳುತ್ತಿತ್ತು.ಆಗೆಲ್ಲಾ ಗೊರಗೊರ ಸದ್ದು ಬಿಟ್ಟರೆ ಇನ್ನುಳಿದಂತೆ ಮೌನ! ಅಂತಹ ಸನ್ನಿವೇಶಗಳಲ್ಲಿ ಅದನ್ನು ಬೆಡ್ ಶೀಟ್ನಲ್ಲಿ ಸುತ್ತಿಡುವುದೂ ಇತ್ತು.ಪುಣ್ಯಕ್ಕೆ ಕಷಾಯ ಮಾಡಿ ಕುಡಿಸುವ ಸೇವೆಯೊಂದು ನಡೆಯುತ್ತಿರಲಿಲ್ಲ ಅಷ್ಟೆ.ಹೀಗಾಗಿ ಮನೆಯ ಒಂದು ಜೀವಂತ ಸದಸ್ಯನ ಸ್ಥಾನ-ಮಾನ ಅದಕ್ಕೂ ಇತ್ತು.

"ಏಯಂ ಆಕಾಶವಾಣಿ,ಸಂಪತಿ ವಾರ್ತಾಹ ಶೂಯಂತಾಂ...ಪ್ರವಾಚಕಃ ಬಲದೇವಾನಂದ ಸಾಗರಹ" ಒಂದು ಕಿವಿಯ ಮೇಲೆ ಈ ಅಶರೀರವಾಣಿ ಬೀಳುತ್ತಾ ಎಬ್ಬಿಸುತ್ತಿದ್ದರೆ ಇನ್ನೊಂದು ಕಿವಿಯ ಮೇಲೆ ಏಳಲು ತಡವಾದುದಕ್ಕಿನ ಅಮ್ಮನ ಬೈಗುಳದ ಸುಪ್ರಭಾತ ಬಿತ್ತೆಂದರೆ ಬೆಳಗಾಗಿದೆ ಎಂದೇ ಅರ್ಥ! ಸುಮ್ಮನೆ ಹೊರಳಾಡಿ ಆಲಸ್ಯದಿಂದ ಎಳುವಾಗ"...ಇತಿ ವಾರ್ತಾಹ" ಕಿವಿಗೆ ಬೀಳುತ್ತಿತ್ತು.ಅದೇ ಆಲಸ್ಯಕ್ಕೆ ಮತ್ತಷ್ಟು ಬೈಗುಳದ ಬಹುಮಾನ ಗಿಟ್ಟಿಸುತ್ತಾ ಹಲ್ಲುಜ್ಜಲು ಅದೇ ಸವೆದ ಬ್ರೆಷ್ ಗೆ ಪೇಸ್ಟ್ ಸವರುವಾಗ "ಈಗ ಪ್ರದೇಶ ಸಮಾಚಾರ ಧಾರವಾಡ ಕೇಂದ್ರದ ಸಹಪ್ರಸಾರದಲ್ಲಿ"ಮೂಡಿ ಬರಲು ಅಣಿಯಾಗುತ್ತಿತ್ತು.ಆಗ ಹಲ್ಲುಜ್ಜುವ ನೆಪದಲ್ಲಿ ಬರಗೆಟ್ಟವನಂತೆ ಹಚ್ಚಿದ ಪೇಷ್ಟನ್ನೆಲ್ಲ ತಿಂದ ತಪ್ಪಿಗೆ ಮತ್ತಷ್ಟು ಬೈಗುಳ. ಪ್ರದೇಶ ಸಮಾಚಾರ ಮುಗಿಯುತ್ತಿದ್ದಂತೆ ಮುಖ ತೊಳೆದ ಶಾಸ್ತ್ರ ಮುಗಿಸಿ ಬೈಗುಳದೊಂದಿಗೆ ದಯಪಾಲಿಸಿದ ಚಾ ಕುಡಿದು ಶಾಲೆ ಪುಸ್ತಕ ಹರಡಿಕೊಂಡು ಓದುವ ಕಾಟಾಚಾರದ ವಿಧಿ ಮುಗಿಸುವಾಗ ದೆಹಲಿ ಕೇಂದ್ರದಿಂದ ಕನ್ನಡ ವಾರ್ತೆಗಳೂ ಮುಗಿದು ಚಿತ್ರಗೀತೆಗಳು ಶುರುವಾಗುತ್ತಿದ್ದವು.ಇನ್ನು ಓದುವ ಚಂದ ಇಷ್ಟೇ ಎಂಬ ಅರಿವಿದ್ದ ಅಮ್ಮನ ಕೊರಳಿನ ಕರೆ ತಿಂಡಿ ಮುಕ್ಕಲು ಅಡುಗೆ ಮನೆಗೆ ಬೈಗುಳದ ಹಿಮ್ಮೇಳದ ಜೊತೆಗೆ ಆಹ್ವಾನಿಸುತ್ತಿತ್ತು.ಒಂದೆಡೆ ಚಿತ್ರಗೀತೆಗಳ ಕೇಳುವ ಸುಖ...ಇನ್ನೊಂದೆಡೆ ಕಾಯಿ ಚಟ್ನಿಯೊಂದಿಗೆ ಹಬೆಯಾಡುವ ಇಡ್ಲಿಯ ಅಪ್ಯಾಯಮಾನ ರುಚಿ...ಒಟ್ಟಿನಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ...

02 December 2008

ನೋಡಲು ಮರೆಯದಿರಿ,ಮರೆತು ನಿರಾಶರಾಗದಿರಿ....

ಕಾಲ ಕಳೆದಂತೆ ಬದಲಾವಣೆಯ ಗಾಳಿ ತೀರ್ಥಹಳ್ಳಿಯಲ್ಲೂ ಬೀಸಿತಲ್ಲ,ಫಕೀರನ ಒಂಟೆತ್ತಿನ ಜಾಗಕ್ಕೆ ಆಟೋರಿಕ್ಷಾ ಆಧುನಿಕತೆಯ ಸ್ಪರ್ಶ ನೀಡಿತು.ಸೋಮವಾರ ತೀರ್ಥಹಳ್ಳಿಯಲ್ಲಿ ಸಂತೆ ಹೀಗಾಗಿ ಬೇರೆಡೆಯಲ್ಲಿ ಶುಕ್ರವಾರ ಸಿನೆಮಾಗಳಿಗೆ ಬಿಡುಗಡೆಯ ಭಾಗ್ಯ ಸಿಕ್ಕರೆ ಇಲ್ಲಿ ಮಾತ್ರ ಸೋಮವಾರವೇ ಮುಂಬರುವ ಸಿನೆಮಾಗಳನ್ನು ನೋಡಬಹುದಾಗಿತ್ತು.ಹಾಗಂತ ಹೊಸ ಚಿತ್ರಗಳೇನು ದಾಂಗುಡಿಯಿಟ್ಟು ಬರುತ್ತಿರಲಿಲ್ಲ.ಅಲ್ಲಿಯ ಮಟ್ಟಿಗೆ ಹೊಸತು ಎಂದರೆ ಕೇವಲ ಎರಡು ವರ್ಷದ ಹಿಂದೆ ತೆರೆಕಂಡ ಚಿತ್ರಗಲಷ್ಟೇ.ಟಿವಿ ಲಭ್ಯತೆ ಮರಳುಗಾಡಿನ ಓಯಸಿಸ್ ಆ ದಿನಗಳಲ್ಲಿ, ಮನರಂಜನೆಗೆ ಬರಗೆಟ್ಟವರಂತೆ ಸಿನೆಮಗಳನ್ನೇ ನೆಚ್ಚಿಕೊಂಡಿದ್ದ ತೀರ್ಥಹಳ್ಳಿ ಸುತ್ತ-ಮುತ್ತಲಿನವರಿಗೆ ಈ ಹಳಸಲು ಸರಕೆ ಮ್ರಷ್ಟಾನ್ನವಾಗಿತ್ತು.ಆಟೋ ಬಂದಮೇಲೆ ಪ್ರಚಾರದ ಖದರೇ ಬೇರೆಯಾಯ್ತು.ಹೊಸ ಸಿನೆಮಾ ಬಂದ ಮೊದಲದಿನ ಪೇಟೆಯಲ್ಲಿ ,ಇನ್ನುಳಿದದಿನಗಳಲ್ಲಿ ಮಂಡಗದ್ದೆ,ಕೋಣಂದೂರು,ಮೇಗರವಳ್ಳಿ,ದೇವಂಗಿ ಸಮೀಪದ ಹಳ್ಳಿಗಳಲ್ಲೂ ಫಕೀರನ "ಪ್ರತೀ ದಿನ ಕೇವಲ ಮೂರು ದೇಖಾವೆಗಳು...ನೋಡಲು ಮರೆಯದಿರಿ,ಮರೆತು ನಿರಾಶರಾಗದಿರಿ" ಎಂಬ 'ಅಮ್ರತವಾಣಿ' ಮೊಳಗುವಂತಾಯಿತು.

ಇನ್ನು ಸಂತೆಗೆ ಬಂದ ಜನ ಮರಳಿ ಅವರವರ ಊರಿಗೆ ಮರಳುವ ಮುನ್ನ ಟಿಕೇಟ್ ಇಲ್ಲದ ಇನ್ನೊಂದು ಪುಕ್ಕಟೆ ಮನರಂಜನೆಯೂ ಕಾದಿರುತಿತ್ತು.ಗಾಂಧಿಚೌಕದಲ್ಲಿ ನಿಂತಿರುತ್ತಿದ್ದ ಖಾದರ್ ಸಾಬರ ಮೂರುಮಾರ್ಕಿನ ಬೀಡಿಗಳ ಪ್ರಚಾರದ ವ್ಯಾನ್ ಮೇಲೆ ಮಿರಿಮಿರಿ ಸ್ಕರ್ಟ್-ಟೈಟ್ ಪ್ಯಾಂಟ್ ಹಾಕಿದ್ದ ಹೆಣ್ಣು ವೇಷದ ದಿಲೀಪ ಮತ್ತವನ ಹೀರೋನ ಕಾಂಬಿನೇಶನ್ ನಲ್ಲಿ "ಚಳಿಚಳಿ ತಾಳೆನು ಈಚಳಿಯ" (ನಿಜವಾಗಿಯೂ ಆಗ ಚಳಿ ಇರುತ್ತಿತ್ತು!),"ಪ್ರೀತಿಯೇ ನನ್ನುಸಿರೂ" "ಯಾರ್ ಬಿನ ಚೇನ್ ಕಹಾನ್ ರೆ? " "ಡ್ಯಾನ್ಸ್ ವಿತ್ ಮೀ..ಮೇರಿ ಮೇರಿ ಡಿಸ್ಕೋ" "ಮೇರಿ ಮೇರಿ ಮೇರಿ ಐ ಲವ್ ಯೂ" ಮುಂತಾದ ಡಿಸ್ಕೋ ನಂಬರ್ ಗಳಿಗೆ ಮಾದಕ ನ್ರತ್ಯವಿರುತ್ತಿತ್ತು. ಬಪ್ಪಿ ಲಹರಿಯ ಭಕ್ತರನೇಕರು ಆ ಪೀಳಿಗೆಯ ಯುವಕರಾಗಿದ್ದರಿಂದ ಈ ಬಹಿರಂಗ ಲೈವ್ ಬ್ಯಾಂಡ್(!) ನೋಡಲು ಕಲಾರಸಿಕರ (?) ಹಿಂಡೇ ಅಲ್ಲಿ ನೆರೆದಿರುತ್ತಿದ್ದು ನ್ರತ್ಯದ ನಡುವೆ ಅವನ ಮೋಹಕ ಬೆರಳುಗಳು ಎಸೆಯಿತ್ತಿದ್ದ ಮೂರೆಮೂರು ಬೀಡಿಗಳ ಸ್ಯಾಂಪಲ್ ಬೀಡಿಕಟ್ಟಿಗಾಗಿ ಅಕ್ಷರಶ ಪೈಪೋಟಿ ಏರ್ಪಡುತ್ತಿತ್ತು,ಉನ್ಮತ್ತ ಕಲಾರಸಿಕರನ್ನು ನಿಯಂತ್ರಿಸಲು ಒಬ್ಬ ಲಾಠಿಧಾರಿ ಪೇದೆ ಅಲ್ಲಿ ಹಾಜರಿರುತ್ತಿದ್ದ ಹಾಗು ಸುಂದರಿಯರನ್ನೆಲ್ಲ ಮೀರಿಸುವಂತೆ ಮಿಂಚುತ್ತಿದ್ದ ದಿಲೀಪನ ಮಾದಕ(?!) ದೇಹಸಿರಿಯನ್ನ ಹಸಿದ ಕಣ್ಣುಗಳಿಂದ ನೋಡುವುದರಲ್ಲೇ ಮೈಮರೆಯುತ್ತಿದ್ದ.ಅವನೊಬ್ಬ ಹೆಣ್ಣು ವೇಷದ ಗಂಡು ಎಂಬ ಬಹಿರಂಗ ಸತ್ಯ ಅಲ್ಲಿ ನೆರೆದವರಿಗೆಲ್ಲ ಸ್ಪಷ್ಟವಾಗಿ ಗೊತ್ತಿದ್ದರೂ ಕಲೆಯ (!) ಆಸ್ವಾದನೆಯಲ್ಲಿ ನೆರೆದವರ್ಯಾರೂ ಹಿಂದೆ ಬೀಳುತ್ತಿರಲಿಲ್ಲ.ಕಟ್ಟ ಕಡೆಯ "ಐಯಾಮ್ ಎ ಡಿಸ್ಕೋ ಡ್ಯಾನ್ಸರ್" ಕುಣಿತ ನೋಡದೆ ಜಾಗ ಖಾಲಿ ಮಾಡುತ್ತಲೂ ಇರಲಿಲ್ಲ! ದಿಲೀಪನ ನಶೆ ಹೆಚ್ಚಾದ ಅವನ ಕೆಲವು ಕಟ್ಟಾ ಅಭಿಮಾನಿಗಳು ಅವ ವ್ಯಾನ್ ನಿಂದಿಳಿದು ಚೌಕದ ಕಟ್ಟೆಯ ಮೇಲೆ ಅದೇ ಮೂರು ಮಾರ್ಕಿನ ಬೀಡಿ ಸೇದುತ್ತ ಕುಳಿತಿರುವುದನ್ನು ಆಸೆ ಕಂಗಳಿಂದ ನೋಡುತ್ತಿದ್ದರು!

ಇಂದು ಫಕೀರನೂ ಇಲ್ಲ,ಖಾದರ್ ಸಾಬರೂ ಇಲ್ಲ,ಮೂರು ಮಾರ್ಕಿನ ಬೀದಿಗಳೂ ಇಲ್ಲ ಹಾಗು ವ್ಯಾನ್ ಮೇಲೆ ದಿಲೀಪನ ಮಾದಕ ನ್ರತ್ಯವೂ ಇಲ್ಲ.ಹಳೆಯ ಪುಟಗಳ ಸಾಲಿಗೆ ಇವೆಲ್ಲವೂ ಸೇರಿ ಹೋಗಿವೆ.ತೀರ್ಥಹಳ್ಳಿ ನಿಜಾರ್ಥದಲ್ಲಿ ಎಲ್ಲೋ ಕಳೆದು ಹೋಗಿದೆ.

01 December 2008

ಕನಸೋ ಇದು?

ನಿನ್ನೆದೆಯಲ್ಲಿ ಮುಚ್ಚಿಡಲಾಗದ ಗುಟ್ಟು ನಾನು,

ಎಂದೆಂದೂ ಮರುಕಳಿಸೋ ಕನವರಿಕೆ ಅಲ್ಲವೇನು?/

ಓಡುವಲ್ಲೆಲ್ಲ ನೋಟ ನನ್ನನೆ ಹುಡುಕುವಿಯೆಂದೂ ಗೊತ್ತು,ಏಕೆಂದರೆ ನನ್ನ ಮನದಾಟವೂ ಹಾಗೆ ಇದೆ ಈ ಹೊತ್ತು//

ಅದು ನೀನೆನಾ? ಅಲ್ಲ ನಿನ್ನ ಕಾಂತಿಯ!

ಆ ಅಂದ ನಿಂದೇನ? ಇಲ್ಲ ಬರಿಯ ಹೊಳೆವ ಕಾಮನಬಿಲ್ಲ ಕಂಡ ಭ್ರಾಂತಿಯ!/

ವಸಂತ ಚಿಗುರಿದಾಗಲೂ ನಿನ್ನದೇ ಹೊಳಪು,

ನಡೆದಾಡುವಾಗಲೂ ಕೂಡ ಕನಸಿನ ಅರೆ ಜೊಂಪು//

ಇಬ್ಬನಿ ಧ್ವನಿ...

ಹುಲ್ಲ ಮೇಲೆ ಹನಿದ ಹನಿ ಇಬ್ಬನಿ/

ನಗುವ ರವಿಯ ಮೊಗವ ಕಂಡು ನಾಚಿ ನೀರಾಯಿತು//