10 March 2022

ಪುಸ್ತಕ ಪರಿಚಯ - ೨೪ಕೃತಿ: ಚನ್ನಭೈರಾದೇವಿ
ಲೇಖಕರು: ಗಜಾನನ ಶರ್ಮ.
ಬಗೆ: ಕಾದಂಬರಿ.
ಕ್ರಯ: ₹೩೯೫.
ಪ್ರಕಾಶಕರು: ಅಂಕಿತ ಪುಸ್ತಕˌ 
ಗಾಂಧಿ ಬಜಾರು.
ಬೆಂಗಳೂರು ೫೬೦೦೪೦


ಸಾಮಾನ್ಯವಾಗಿˌ ಇತಿಹಾಸ ಅಂತ ನಾವು ಭ್ರಮಿಸಿಕೊಂಡು ನಮ್ಮ ಪಠ್ಯ ಪುಸ್ತಕಗಳಲ್ಲಿ ಓದಿದ್ದು ಹಾಗೂ ಓದುತ್ತಿರೋದು ಬಹುತೇಕ "ಗೆದ್ದವರ" ಕಥೆಯೆ ಆಗಿರುತ್ತದೆ. ಒಂದು ಕಡೆˌ ಅಂದು ಅವರ ಹೊಗಳುಭಟರು ಹಾಡಿ ಹೊಗಳಿ ಬರೆದಿದ್ದ ಅಂತಹ ಆಳರಸರ ಸಹಸ್ರ ನಾಮಾವಳಿಗಳನ್ನೆ ಇತಿಹಾಸ ಅಂದುಕೊಂಡು ಓದುವ ಹಣೆಬರಹ ನಮ್ಮದಾಗಿದ್ದರುತ್ತದೆ. ಉದಾಹರಣೆಗೆ ರಾಮಾಯಣˌ ಮಹಾಭಾರತˌ ಬಾಬರನಾಮˌ ಐನ್ - ಎ - ಅಕ್ಬರಿˌ ತಝ್ಕ್ - ಎ - ಜಹಂಗಿರಿˌ ಫತ್ವಾ - ಎ - ಆಲಂಗಿರಿˌ ಇನ್ನೊಂದು ಕಡೆ ಆರ್ ಎಸ್ ಎಸ್ ಹಾಗೂ ಅದರ ಸಕಲೆಂಟು ಬಾಲಂಗೋಚಿಗಳುˌ ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಗಳು ಹಾಗೂ ಎಡ ಪಂಥೀಯ ವಿಚಾರ ಧಾರೆಗಳ ಪ್ರವರ್ತಕರು ಅವರವರ ಭಾವಕ್ಕೆ - ಅವರವರ ಭಕುತಿಗೆ ತಕ್ಕಂತೆ ಸಮಗ್ರ ವಿಮರ್ಶೆಗೆ ಒಳಪಡಿಸದೆ ಇಂದಿನ ರಾಜಕೀಯ ಮಾನದಂಡಗಳಿಗೆ ಅನುಸಾರವಾಗಿರುವ ಯಾವುದಾದರೂ ಒಂದು ನಿರ್ದಿಷ್ಟ ವ್ಯಕ್ತಿಗಳನ್ನ ಅಥವಾ ರಾಜವಂಶಗಳನ್ನ ಅವರಿಗೆ ಹೊಂದದ ಬಿರುದು ಬಾವಳಿಗಳನ್ನ ದಯಪಾಲಿಸಿ ಅವರ ವಂಧಿ ಮಾಗಧರಂತೆ ವಿಪರೀತ ಹಾಡಿ ಹೊಗಳಿ ಓದುಗರ ಹಾದಿ ತಪ್ಪಿಸುತ್ತವೆ. ಉದಾಹರಣೆಗೆˌ "ಶವ"ಜಿ ಖ್ಯಾತಿಯ ಶಿವಾಜಿ ( ತನ್ನ ಹುಟ್ಟೂರಾದ ಬೆಂಗಳೂರಿನ ಬಗ್ಗೆ ಶಿವಾಜಿಗೆ ಮೃದುಭಾವ ಇತ್ತು ಅನ್ನುವುದರ ಹೊರತು ಇನ್ನೂಳಿದಂತೆ ಆತ ಕರ್ಣಾಟಕದ ಪಾಲಿಗೆ ದರೋಡೆಗಿಳಿದಿದ್ದ ದಾಳಿಕೋರನೆ. ಮುಸಲ್ಮಾನ ಸರದಾರರನ್ನ ಹೊಂದಿದ್ದುˌ ಮುಸಲ್ಮಾನ ಹೆಂಡತಿಯರನ್ನ ಕಟ್ಟಿಕೊಂಡಿದ್ದ ಅವನನ್ನ "ಹಿಂದೂ ಹೃದಯ ಸಾಮ್ರಾಟ"ನೆಂದು ವೈಭವಿಕರಿಸುವ ಸಂಚು ಸಂಘ ಪರಿವಾರದಿಂದ ರಾಜಕೀಯ ಕಾರಣಗಳಿಗಾಗಿ ನಿರಂತರವಾಗಿ ನಡೆದಿದೆ.) ಹಾಗೂ "ಮೈಸೂರು ಹುಲಿ" ಅಂತ ಒಂದು ವರ್ಗದವರು ಹಾಡಿ ಹೊಗಳುವ ಟಿಪ್ಪು ಸುಲ್ತಾನ. 


ಕನ್ನಡ ನಾಡಿನ ಮೇಲೆ ಯಾವುದೆ ಅನ್ಯ ನಾಡಿನ ದಾಳಿಕೋರನಂತೆ ದೋಚಲು ನುಗ್ಗಿ ಅತ್ಯಾಚಾರ ಎಸಗಿದˌ ಕನ್ನಡತಿ ರಾಣಿಯೊಬ್ಬಳಿಂದ ಅಪಮಾನಕರವಾಗಿ ಪರಾಜಿತನಾಗಿ ತನ್ನ ಮಾನ ಪ್ರಾಣ ಉಳಿಸಿಕೊಂಡಿದ್ದˌ ಶಿವಾಜಿಯಂತವರು ಈ ಅತಿ ವಿಜೃಂಭಿತ ಇತಿಹಾಸ್ಯಕೋರರ ದೆಸೆಯಿಂದ ಮಹಾನ್ ನಾಯಕನಂತೆ ಬಿಂಬಿತನಾಗಿˌ ಆ ನಾಲಾಯಕನನ್ನ ಸೋಲಿಸಿದ್ದ ಹಾಗೂ ನಂತರ ಮೊಘಲರ ದಂಡಿಗೆ ಹೆದರಿ ದಿಕ್ಕೆಟ್ಟು ಅಂಡಲೆಯುತ್ತಿದ್ದ ಅವನ ಮಗನಿಗೆ ಅಭಯ ಆಶ್ರಯ ರಕ್ಷಣೆ ಕೊಟ್ಟಿದ್ದ ಕನ್ನಡತಿ ಆಳರಸಿಯರು ಈ ತಿರುಚಿದ ಇತಿಹಾಸ್ಯಕೋರರ ಉದ್ದೇಶಪೂರ್ವಕ ಮರವಿನ ದೆಸೆಯಿಂದ ಇತಿಹಾಸದ ಪುಟಗಳ ಮರೆಗೆ ಸರಿದು ಸಂಪೂರ್ಣ ಸತ್ಯ ಇತಿಹಾಸವೆ ಹಳಿತಪ್ಪಿ ಅಯೋಗ್ಯ ಅಮಾನುಷರೆಲ್ಲ ತಮಗೆ ಸಲ್ಲದ ಹೆಮ್ಮೆಯ ಹೊಗಳಿಕೆಯಾಭರಣ ಧರಿಸಿ ನಮ್ಮ ಮುಂದಿನ ಜನಾಂಗದ ಕಣ್ಮಣಿಗಳಾಗುತ್ತಿದ್ದಾರೆ. ಇಂತಹದ್ದೆ ಮತ್ತೊಂದು ಪ್ರಸಿದ್ಧ ಉದಾಹರಣೆ ಟಿಪ್ಪು ಸುಲ್ತಾನ. ಇಂತವರ ಅಸಲಿ ವ್ಯಕ್ತಿತ್ವದ ಪರಾಮರ್ಶೆ ಹೀಗಾಗಿಯೆ ಆಗದೆ ಬರಿ ಅಂತೆ ಕಂತೆಗಳ ಸಂತೆಯೆ ಇತಿಹಾಸವೆಂದು ಭ್ರಮಿಸಿ ಮುಂದಿನ ಜನಾಂಗಗಳು ಓದುತ್ತವೆˌ ಹಾದಿ ತಪ್ಪುತ್ತವೆ. ಅಂತಹ ನಿರಾಶದಾಯಕ ವಾತಾವರಣದಲ್ಲಿ ಅಲ್ಲೊಂದು ಇಲ್ಲೊಂದು ಇತಿಹಾಸಕ್ಕೆ ಅಪಚಾರವೆಸಗದೆˌ ಹಲವಾರು ಅಕರಗಳನ್ನ ಪರಾಂಬರಿಸಿ ಸತ್ಯಕ್ಕೆ ಸನಿಹವಾದ ಇತಿಹಾಸವನ್ನ ಸುಲಲಿತ ಶೈಲಿಯಲ್ಲಿ ಅಂದರೆ ಕಥನ ಪ್ರಕಾರದಲ್ಲಿ ದಾಖಲಿಸಿರುವವರು ಬಹಳ ಕಡಿಮೆ. ಅಂತಹದ್ದರಲ್ಲಿ ಗಮನಿಸಬಹುದಾದ ಇತ್ತೀಚೆಗೆ ಪ್ರಕಟವಾದ ಪ್ರಮುಖ ಕೃತಿ ಗಜಾನನ ಶರ್ಮರ "ಚನ್ನಭೈರಾದೇವಿ."


ಹಾಗೆ ನೋಡಿದರೆˌ ದಕ್ಷಿಣ ಭಾರತದಾದ್ಯಂತ ಆಳರಸಿಯರ ಆಳ್ವಿಕೆಯ ಸಾಹಸದ ದಂತಕಥೆಗಳೆ ಇವೆ. ಅದರಲ್ಲೂ ಇಂದಿನ ಕರ್ಣಾಟಕದ ಉದಾಹರಣೆಯನ್ನೆ ತೆಗೆದುಕೊಂಡರೂನು ಬೆಳವಡಿ ಮಲ್ಲಮ್ಮˌ, ಕಿತ್ತೂರಿನ ಚೆನ್ನಮ್ಮˌ ಕೆಳದಿಯ ವೀರಮ್ಮˌ ಚೆನ್ನಮ್ಮˌ ಉಳ್ಳಾಳದ ಅಬ್ಬಕ್ಕಂದಿರುˌ ಗೇರುಸೊಪ್ಪೆಯ ಚನ್ನಾದೇವಿˌ ಚನ್ನಭೈರಾದೇವಿ ಹೀಗೆ ಪಟ್ಟಕ್ಕೇರಿ ಆಡಳಿತ ಹಾಗೂ ಸಮರಾಂಗಣದಲ್ಲಿ ಪ್ರಬುದ್ಧತೆ ಮೆರೆದ ಧೈರ್ಯಶಾಲಿ ರಾಣಿಯರ ಸರಣಿಯನ್ನೆ ಕಾಣಬಹುದು. ಆದರೆ ವ್ಯಾಪಾರಿ ಉದ್ದೇಶದಿಂದ ಬಂದು ಅನಂತರ ಭಾರತದ ಬಹು ಭಾಗವನ್ನೆ ಕಬಳಿಸಿ ಆಳಿದ್ದ ಯುರೋಪಿಯನ್ನರ ಹೊರತು ಅಂತಹ ವೀರವನಿತೆಯರ ಸವಿವರವಾದ ವ್ಯಕ್ತಿ ಚಿತ್ರಣವನ್ನ ಕಟ್ಟಿಕೊಡುವಲ್ಲಿ ಸ್ಥಳಿಯರು ಬಹುಪಾಲು ಸೋತಿರುವುದಂತೂ ಸತ್ಯ. ಇಂತಹ ಇತಿಹಾಸದ ಪುಟಗಳ ಮರೆಯಲ್ಲಡಗಿರುವ ಅರಸಿಯರ ಶೌರ್ಯ ಸಾಹಸ ಧೈರ್ಯವಷ್ಟೆ ಅಲ್ಲದೆ ಸಿರಿ ಸಂಪತ್ತು ಸಹ ಖಂಡಿತವಾಗಿ ಅವರನ್ನ ನಿರ್ಲ್ಯಕ್ಷ್ಯಿಸುವಂತಹದ್ದಲ್ಲ. ಹಾಗಿದ್ದೂ ಅವರ ಬಗ್ಗೆ ಸ್ಥಳಿಯರ ಜ್ಞಾನವನ್ನೆ ಹೆಚ್ಚಿಸಲೂ ಸಹ ಆಗದೆˌ ತಮಗೆ ಸಂಬಂಧವೆ ಇದ್ದಿರದˌ ಅದಕ್ಕೂ ಹೆಚ್ಚಾಗಿ ಹಾವಳಿಯಿಟ್ಟು ನಮ್ಮ ಹಿರಿಯರನ್ನೆ ಹಿಂಸಿಸಿ ಅವರ ಮೇಲೆ ಅತ್ಯಾಚಾರವೆಸಗಿದ್ದ ಶಿವಾಜಿಯಂತಹ ಅನ್ಯ ನಾಡಿನ ದಾಳಿಕೋರರೆ ನಮ್ಮ ಆದರ್ಶವಾಗುತ್ತಿರುವ ದುಸ್ಥಿತಿಗೆ ನಮ್ಮನ್ನ ತಂದಿಟ್ಟ ಇತಿಹಾಸ್ಯಕೋರರ ನಡುವೆ ವಿಭಿನ್ನವಾಗಿ ನಿಲ್ಲುವ ಬೆರಳೆಣಿಕೆಯಷ್ಟು ಕೃತಿಗಳಲ್ಲಿ ಇದೂ ಒಂದು. 

ಶೈಲಿ ಕಥನವಾಗಿದ್ದರೂˌ ಅದರಲ್ಲಿ ಮನರಂಜಕ ದೃಷ್ಟಿಯಿಂದ ಕಥಾ ಹಂದರ ಹೆಣೆಯಲಾಗಿದ್ದರೂˌ ಸಂಪೂರ್ಣ ಕೃತಿಗೆ ಇತಿಹಾಸದಲ್ಲಿ ಅಡಕವಾದ ಸವಿವರವಾದ ಸಂಶೋಧನಾ ಕೃತಿಗಳ ಹಿನ್ನೆಲೆಯಿದೆ. ದೇಶೀಯ ಹಾಗೂ ವಿದೇಶೀಯ ಇತಿಹಾಸಕಾರರ ಸಮಗ್ರ ವಿಶ್ಲೇಷಣೆಯನ್ನ ಆಧರಿಸಿ ಗಜಾನನ ಶರ್ಮರು "ಚನ್ನಭೈರಾದೇವಿ"ಯನ್ನ ನಮ್ಮ ನಿಮ್ಮ ಮುಂದೆ ಒಂದು ಉತ್ಕೃಷ್ಟ ಕೃತಿಯನ್ನಾಗಿ ಕಟೆದು ನಿಲ್ಲಿಸಿದ್ದಾರೆ. ಮರೆತ ಮಹನೀಯರ ಪಟ್ಟಿಯಲ್ಲಿರುವ ಈ ವೀರವನಿತೆ "ಕಾಳುಮೆಣಸಿನ ರಾಣಿ" ಚನ್ನಭೈರಾದೇವಿಯ ಬಗ್ಗೆ ಅರಿತುಕೊಳ್ಳಲು ಆಸಕ್ತಿಯಿರುವವರಿಗೆಲ್ಲರಿಗೂ ಈ ಕೃತಿ ಒಂದು ಉತ್ತಮ ದೀವೆಗೆ.


ಲೇಖಕನ ಮಾತು


ರಾಣಿ ಚೆನ್ನಭೈರಾದೇವಿ- ಇದು ಚಿಕ್ಕಂದಿನಲ್ಲಿ ಮೊಟ್ಟಮೊದಲು ನಾನು ಕೇಳಿದ ರಾಣಿಯೊಬ್ಬಳ ಹೆಸರು. ಅದಕ್ಕೂ ಮೊದಲು ಕತೆಗಳಲ್ಲಿ ರಾಣಿಯರ ಹೆಸರು ಕೇಳಿದ್ದಿರಬಹುದಾದರೂ ನಮ್ಮ ನೆಲವನ್ನು ಆಳಿದ ರಾಣಿಯೆಂದು ನಮ್ಮ ಹಿರಿಯರಿಂದ   ಕೇಳಿದ ಮೊದಲ ಚಾರಿತ್ರಿಕ ಹೆಸರು - ರಾಣಿ ಚೆನ್ನಭೈರಾದೇವಿ.
ಶರಾವತಿ ಕಣಿವೆಯ ತಲಕಳಲೆ ಹಿನ್ನೀರಿನ ನಮ್ಮೂರು ಹುಕ್ಕಲಿನ ನಮ್ಮ ಮನೆಯ ಹಿಂದೆ ಹತ್ತೆಂಟು ಮೈಲುಗಳುದ್ದ ಹಬ್ಬಿರುವ ದಟ್ಟಡವಿಯ ಹೆಸರು 'ಹೆದ್ದಾರಿ ಕಾನು'.  ಚಿಕ್ಕಂದಿನಲ್ಲಿ ನಾವು, ಕೂಡು ಕುಟುಂಬದ ಮಕ್ಕಳು, ಅಪ್ಪ ಚಿಕ್ಕಪ್ಪಂದಿರ ಜೊತೆ ಕಾಡಿಗೆ ಹೋದಾಗಲೆಲ್ಲ, ಅವರು ಕಾಡಿನ ನಡುವೆ ಹಾದು ಹೋಗಿದ್ದ ಹಳೆಯ ಹೆದ್ದಾರಿಯ ಕುರುಹನ್ನು ತೋರಿಸಿ, 'ಇದು ನಾನ್ನೂರು ವರ್ಷಗಳ ಹಿಂದೆ ರಾಣಿ ಚೆನ್ನಭೈರಾದೇವಿಯ ಕಾಲದಲ್ಲಿ ಮೆಣಸುಗಾರಿನಿಂದ ಗೇರುಸೊಪ್ಪೆಗೆ ಹೋಗಲು ನಿರ್ಮಿಸಿದ್ದ ಹೆದ್ದಾರಿ. ಅದಕ್ಕೇ ಈ ಕಾನು 'ಹೆದ್ದಾರಿ ಕಾನು'. ಹಿಂದೆ ಅವಳ ಕಾಲದಲ್ಲಿ ಈ ಹೆದ್ದಾರಿಯಲ್ಲಿ ಸಾಲು ಸಾಲು ಹೇರೆತ್ತು ಕತ್ತೆ ಕುದುರೆಗಳ ಜೊತೆಗೆ ನೂರಾರು ಗಾಡಿಗಳು ಹಸಿಮೆಣಸಿನಕಾಳು ಹೊತ್ತು ಹೋಗುತ್ತಿದ್ದವಂತೆ. ಘಟ್ಟದ ಹಾದಿಯಲ್ಲಿ ಬರುತ್ತಿದ್ದ ಗಾಡಿಗಳು ಈ ಕಾಡಿನ ಪಕ್ಕದ 'ಗಾಡಿಗುಡ್ಡ'ದ ತಪ್ಪಲಿನ 'ಗಾಡಿಹೊಳೆ'ಯಲ್ಲಿ ಎತ್ತುಗಳಿಗೆ ನೀರು ಕುಡಿಯಲು ನಿಲ್ಲಿಸುತ್ತಿದ್ದರಂತೆ. ತಾಳಗುಪ್ಪದ ಸಮೀಪ ಮೆಣಸಿನ ಗಾಡಿಗಳು ಶರಾವತಿ ನದಿ ದಾಟುತ್ತಿದ್ದ ಸ್ಥಳ, 'ಮೆಣಸುಗಾರು', ವಟ್ಟಕ್ಕಿ ಹತ್ತಿರ ಗಾಡಿಗಳಿಂದ ಸುಂಕ ವಸೂಲು ಮಾಡುತ್ತಿದ್ದ ಸ್ಥಳ ಸುಂಕದ ಮನೆ' ಎಂದೆಲ್ಲ ಹೇಳುತ್ತಿದ್ದರು.

ಚೆನ್ನಭೈರಾದೇವಿ ಐವತ್ತು ವರ್ಷಗಳಿಗೂ ಹೆಚ್ಚು ಕಾಲ ರಾಜ್ಯವಾಳಿದ್ದು, ಕರಾವಳಿ ಮಾತ್ರವಲ್ಲದೆ ಘಟ್ಟದ ಮೇಲಿನ ಭಾರಂಗಿ, ಮರಬಿಡಿ, ಕರೂರು, ಹನ್ನಾರ, ಸೌಳನಾಡುಗಳಷ್ಟೇ ಅಲ್ಲದೆ ಇಕ್ಕೇರಿಯಿಂದ ಕೂಗಳತೆ ದೂರದಲ್ಲಿದ್ದ ಆವಿನಹಳ್ಳಿ ಕೂಡ ಅವಳ ವ್ಯಾಪ್ತಿಗೆ ಒಳಪಟ್ಟಿದ್ದು, ಯುದ್ಧದಲ್ಲಿ ಅವಳು ಪರಂಗಿಗಳನ್ನೇ ಸೋಲಿಸಿದ್ದು, ಸಮುದ್ರಾಚೆಯ ದೇಶಗಳಿಗೆ ಕಾಳುಮೆಣಸು,  ಅಡಿಕೆ, ಗಂಧ, ದಾಲ್ಚಿನ್ನಿ‌, ಶುಂಠಿ ನಿರ್ಯಾತ ಮಾಡಿ ಅದಕ್ಕೆಲ್ಲ ಬೆಲೆ ತಂದುಕೊಟ್ಟಿದ್ದು, ಮಣಗಟ್ಟಲೆ ಬೆಳ್ಳಿ ಬಂಗಾರ ಗಳಿಸಿ ನೆಲದಡಿಯಲ್ಲಿ ಹುಗಿಸಿಟ್ಟಿದ್ದು,  ಸಂಪತ್ತನ್ನು ಹುಗಿದಿಟ್ಟ ಕಾರಣದಿಂದಲೇ  ಹಲವು ಊರುಗಳಿಗೆ ಕೊಪ್ಪರಿಗೆ, ಹೊನ್ನೇಮಕ್ಕಿ, ಮುತ್ತಳ್ಳಿ, ಸಿರಿಮನೆ, ಗಿಂಡಿಮನೆ, ಬಂಗಾರಮಕ್ಕಿ, ಬೆಳ್ಳಿಮಕ್ಕಿ, ಅಂತೆಲ್ಲ ಹೆಸರು ಬಂದಿದ್ದು ಅಂತ ಹೇಳುತ್ತಿದ್ದರು. ನಮ್ಮೂರು ಪಕ್ಕದ ಬಿದರೂರಿನಲ್ಲಿ ಶ್ರೀವರ್ಧಮಾನ ಬಸದಿ ಪುರೋಹಿತರಾಗಿದ್ದ ಸಿದ್ಧಾರ್ಥ ಇಂದ್ರರು "ಬಿದರೂರು ಅಂದ್ರೆ ವೇಣುಪುರ. ಇಲ್ಲಿರುವ ಕೋಟೆ ಸಾಳುವ ವಂಶದವರು ಕಟ್ಟಿದ್ದು, ಕೆಲವು ಕಾಲ ಅವರ ಒಂದು ಕವಲು ಇಲ್ಲಿಂದಲೂ ಆಳ್ವಿಕೆ ನಡೆಸಿತ್ತು. ರಾಣಿ ಚೆನ್ನಭೈರಾದೇವಿ ಇಲ್ಲಿನ ನಮ್ಮ ವರ್ಧಮಾನ ಬಸದಿ, ಯೋಗಾನರಸಿಂಹಸ್ವಾಮಿ ದೇವಾಲಯವನ್ನೆಲ್ಲ ಜೀರ್ಣೋದ್ಧಾರ ಮಾಡಿಸಿ ದಾನದತ್ತಿ ಕೊಟ್ಟಿದ್ದಳು. ಮುಂದೆ ಇಕ್ಕೇರಿಯ ನಾಯಕ ಆಕೆಯನ್ನು ಸೋಲಿಸಿ ಗೇರುಸೊಪ್ಪೆಯ ಅರಮನೆಗೆ ಬೆಂಕಿಯಿಡಿಸಿದಾಗ ಹೊತ್ತಿ ಉರಿದ ಗಂಧ ಚಂದನಗಳ ಪರಿಮಳ ನಮ್ಮೂರಿಗೂ ಹಬ್ಬಿತ್ತು' ಎಂದು ಹೇಳುತ್ತಿದ್ದರು.


'ತಲಕಳಲೆ ಹಳ್ಳದ ಮೂಲ ಹೆಸರು ಮೂರ್ಕೋಡಿ ಹಳ್ಳ. ಅದ್ರಲ್ಲಿ ರಾಣಿ ಅರಿಶಿನೆಣ್ಣೆ ಮಜ್ಜನ ಮಾಡಿದರೆ ಮುಂದೆ ಅದು ಶರಾವತಿಗೆ ಸೇರಿ ಗೇರುಸೊಪ್ಪೆಯವರೆಗೂ ಅರಿಶಿನ ಬಣ್ಣದ ನೀರು ಹರೀತ್ತಿತ್ತು, ರಾಣಿಗೆ ತಲಕಳಲೆ ಹಳ್ಳದ 'ಕಣೇಕಾರು ಮಡು' ಇಷ್ಟದ ತಾಣ. ಹಳ್ಳಿಯ ಹೆಂಗಸಿನಂತೆ ಎರಡಾಳೆತ್ತರದ ಬಂಡೆಯಿಂದ ಹಾರಿ, ತೋಳು ಬೀಸಿ ಒಗೆದು ಮನಸೋ-ಇಚ್ಚೆ ಅವಳು ಈಜುತ್ತಿದ್ದಾಗ ದೂರದಲ್ಲಿ ಕಣೆ ಹಿಡಿದ ಕಣೇಕಾರರು ಕಾದಿರುತ್ತಿದ್ದರು. ಅದಕ್ಕಾಗಿಯೇ ಅದು 'ಕಣೇಕಾರು ಮಡು'. ಏಕಾಂಗಿಯಾಗಿ ಆಕೆ ಬಲಿಷ್ಟ ಕಾಡುಕೋಣದ ಕೋಡು ಹಿಡಿದು ಬಗ್ಗಿಸಿ ಪಳಗಿಸಿದ ಸ್ಥಳ 'ಕೋಣನಮಕ್ಕಿ'. ಅವಳಿಗೆ ಅಂಜಿ ಪರಂಗಿ ಕಪ್ತಾನ ಓಡಿಹೋದ ಬೆಟ್ಟ, 'ಹೇಡಿಗುಡ್ಡ'. ರಾತ್ರಿಯುದ್ಧದಲ್ಲಿ ಅವಳು ಕೆಳದಿಯವರನ್ನು ಸೋಲ್ಸಿದ್ದು 'ಕತ್ಲೇಕಾನು', ಅವಳು ಘಟ್ಟದ ಮೇಲೆ ವಸ್ತುಗಳ ವಿನಿಮಯ ಮಾಡುತ್ತಿದ್ದ ಸಂತೇಕಟ್ಟೆ ಜೋಗದ ಹತ್ತಿರದ 'ಹಿರೇಹೆನ್ನಿ'. ಅವಳ ಕಾಲದಲ್ಲಿ ಗೇರುಸೊಪ್ಪೆ ಇಡೀ ದಕ್ಷಿಣ ಭಾರತದಲ್ಲೇ ಶ್ರೀಮಂತವಾಗಿತ್ತು. ಜೋಗಕ್ಕೆ 'ಗೇರುಸೊಪ್ಪೆ ಜಲಪಾತ' ಅಂತ ಹೆಸರು ಬಂದಿದ್ದೇ ಅವಳಿಂದ' ಎಂಬ ನಮ್ಮ ಹಿರಿಯರ ಕತೆಗಳು ನಮ್ಮನ್ನು ಪುಳಕಿತಗೊಳಿಸುತ್ತಿದ್ದವು.ಕಾಡಿನಲ್ಲಿ ಹೋಗುತ್ತಿದ್ದಾಗ ಕಾನುಕೋಳಿ, "ಕೊಕ್ ಕೊಕ್ ಕೊಕ್ ಕೊಕ್" ಅಂತ ಕೂಗಿದರೆ, ಅದು "ಮೆಣ್ಸ್ ಮಾರಿ ಗಂಟ್ ಕಟ್" ಅಂತ ಕೂಗುತ್ತಿದೆಯೆಂದು ಹೇಳುತ್ತ,  ತಾವು ಸಂಗ್ರಹಿಸುತ್ತಿದ್ದ ಕಾನು ಕಾಳುಮೆಣಸಿಗೆ, ದಾಲ್ಚಿನ್ನಿಗೆ  ಬೆಲೆ ತಂದುಕೊಟ್ಟ ಅವಳನ್ನು ನಮ್ಮ ಆಳುಮಕ್ಕಳೂ  ಸ್ಮರಿಸುತ್ತಿದ್ದರು. ನಮ್ಮೂರಿಗೆ ತಟ್ಟಿಬುಟ್ಟಿಗಳನ್ನು ಹೊತ್ತು ತರುತ್ತಿದ್ದ ಗೊಂಡರೂ ಅವಳನ್ನು 'ಅವ್ವರಸಿ' ಎಂದು ಕರೆದು ಪೂಜ್ಯಭಾವದಿಂದ ಶ್ಲಾಘಿಸುತ್ತಿದ್ದರು. 'ಹಿಂದೆ ಬರೀ ಕಾನಿನಲ್ಲಿ ಬೆಳೆಯುತ್ತಿದ್ದ ಮೆಣಸಿನಕಾಳನ್ನು ತೋಟದಲ್ಲಿ ಬೆಳೆಯಲು ಪ್ರೋತ್ಸಾಹ ನೀಡಿದ್ದೇ ಆಕೆ. ಪರಂಗಿಗಳು ಸುಟ್ಟುರುಹಿದ್ದ  ಹೊನ್ನಾವರ, ಭಟ್ಕಳ ಪಟ್ಟಣಗಳನ್ನು ಮತ್ತೆ ಕಟ್ಟಿನಿಲ್ಲಿಸಿದ್ದೇ ಅವಳು, ಸಮುದ್ರ ವ್ಯಾಪಾರಕ್ಕೆ ಕುಮಟೆಯಲ್ಲಿ ನೌಕಾಪಡೆ ಕೂಡ ಕಟ್ಟಿದ್ದ ಆಕೆಯಿಂದಲೇ ನಮ್ಮ ಇಡುಗುಂಜಿ, ಗೋಕರ್ಣಗಳೆಲ್ಲ ಪರಂಗಿಗಳ ದಾಳಿಗೆ ತುತ್ತಾಗದೆ ಉಳಿದದ್ದು'' ಅಂತ ಇಡುಗುಂಜಿಯಿಂದ ಸಂಭಾವನೆಗೆ ಬರುತ್ತಿದ್ದ ಸಭಾಹಿತರು ಹೇಳುತ್ತಿದ್ದರು. 'ಕಾನೂರು ಹಾಡುವಳ್ಳಿ, ಗೇರುಸೊಪ್ಪೆಗಳಲ್ಲಿ ಚದುರಿ ಬಿದ್ದ ಗತ ಇತಿಹಾಸದ ಅವಶೇಷಗಳು, ಮುರಿದು ಬಿದ್ದ ಶಿಲ್ಪಗಳು, ಮಗುಚಿ ಬಿದ್ದ ಮಾನಸ್ತಂಭಗಳು, ಜೀರ್ಣಗೊಂಡ ದೇಗುಲ ಬಸದಿಗಳು, ಭಿನ್ನಗೊಂಡ ಪ್ರತಿಮೆಗಳು, ಉರುಳಿ ಬಿದ್ದ ಅರಮನೆಗಳ ಮೋಟುಗೋಡೆಗಳು, ಕುಸಿದುಬಿದ್ದ ಕೋಟೆ ಕೊತ್ತಲಗಳು ಅವಳ ಕಾಲದ ಗತವೈಭವಗಳನ್ನು ಅಣುಕಿಸುತ್ತಿವೆ' ಎಂದು ವಟ್ಟಕ್ಕಿ ಪದ್ಮರಾಜ ಗೌಡರು ಕಣ್ಣೊದ್ದೆ ಮಾಡಿಕೊಂಡು ಹೇಳುತ್ತಿದ್ದರು. ಶರಾವತಿ ಯೋಜನೆಗಾಗಿ ಲಿಂಗನಮಕ್ಕಿ, ತಲಕಳಲೆಗಳಲ್ಲಿ ತಳಪಾಯಗಳಿಗಾಗಿ ಗುಂಡಿ ತೋಡುತ್ತಿದ್ದಾಗ, ರಸ್ತೆಗೆಂದು ಅಗೆಯುತ್ತಿದ್ದಾಗ 'ಗುತ್ತಿಗೆದಾರರಿಗೆ ನಿಧಿ ಸಿಕ್ಕಿತಂತೆ, ಅದು ಗೇರುಸೊಪ್ಪೆ ರಾಣಿ ಕಾಲದ್ದಂತೆ' ಎಂಬ ಸುದ್ದಿಗಳು ನಾವು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಸಾಮಾನ್ಯವಾಗಿತ್ತು. ನಮ್ಮೂರ ಸುತ್ತಮುತ್ತಲಿನ ವಟ್ಟಕ್ಕಿ, ಬಿದರೂರು, ಮರಬಿಡಿ, ಹೆನ್ನಿ, ಕಣೇಕಾರು, ಸುಂಕದಮನೆ, ಬಂಕನಬಳ್ಳು, ಹೇಡಿಗುಡ್ಡ, ಕಾನೂರು, ಹಾಡಗೇರಿ ಮುಂತಾದ ಊರುಗಳ ಐತಿಹಾಸಿಕ ಮಹತ್ವ ನಮ್ಮ ಸಂಭ್ರಮಕ್ಕೆ ಕಾರಣವಾಗಿದ್ದವು. ಬಾಲ್ಯದುದ್ದಕ್ಕೂ ನಮ್ಮ ಮನಸ್ಸನ್ನು ವ್ಯಾಪಿಸಿದ್ದ ರಾಜ್ಯವೆಂದರೆ ಅದು ಗೇರುಸೊಪ್ಪೆ;  ರಾಣಿಯೆಂದರೆ ಅದು ಚೆನ್ನಭೈರಾದೇವಿ. 
ಮುಂದೆ ವಿದ್ಯಾಭ್ಯಾಸದ ಕಾಲದಲ್ಲಿ ನಮ್ಮ ಪಠ್ಯಪುಸ್ತಕಗಳಲ್ಲಿ ಹಲವು ರಾಣಿಯರ ಚರಿತ್ರೆಗಳಿದ್ದರೂ ಗೇರುಸೊಪ್ಪೆಯ ರಾಣಿಯ ಹೆಸರು ಕೂಡ ಉಲ್ಲೇಖವಾಗಿರದಿದ್ದುದು ನಮ್ಮ ನಿರಾಶೆಗೆ ಕಾರಣವಾಗಿತ್ತು. ಹಿರಿಯರ ಕತೆಗಳಿಂದ ಪುಳುಕಿತರಾಗಿದ್ದ ನಮ್ಮ ಪಾಲಿಗೆ ಚೆನ್ನಭೈರಾದೇವಿ, ಕಿತ್ತೂರು ಚೆನ್ನಮ್ಮ, ಕೆಳದಿ ಚೆನ್ನಮ್ಮ, ಝಾನ್ಸಿ ಲಕ್ಷ್ಮೀಬಾಯಿ, ರಾಣಿ ಅಬ್ಬಕ್ಕ ಮುಂತಾದ  ಧೀರವನಿತೆಯರಿಗೆ ಸರಿಸಮನಾದವಳು ಅಥವಾ ಅವರಿಗಿಂತ ಮಿಗಿಲಾದವಳು. ಹಾಗಿದ್ದೂ ನಮ್ಮ ಪಠ್ಯಪುಸ್ತಕಗಳಲ್ಲೇಕೆ ಅವಳ ಉಲ್ಲೇಖವಿಲ್ಲ, ನಮ್ಮ ಹಿರಿಯರು ಹೇಳಿದ್ದು, ನಾವು ಬಾಲ್ಯದಲ್ಲಿ ಕೇಳಿದ್ದು ಕೇವಲ ಉತ್ಪ್ರೇಕ್ಷೆಯೇ ಎಂದೆಲ್ಲ ನೊಂದುಕೊಳ್ಳುವಂತಾಗಿತ್ತು. ಮುಂದೆ ನಾವೆಲ್ಲರೂ ವಿದ್ಯಾಭ್ಯಾಸ, ನೌಕರಿ, ಸಂಸಾರ, ಮನೆ, ಮಕ್ಕಳು, ಮುಂತಾಗಿ ಜಂಜಡಗಳಲ್ಲಿ ಮುಳುಗಿದರೂ ಮನಸ್ಸಿನಾಳದಲ್ಲಿ ಮಾತ್ರ ಬಾಲ್ಯದಲ್ಲಿ ಅಚ್ಚೊತ್ತಿದ್ದ ರಾಣಿಯ ಚಿತ್ರ ತುಸುವೂ ಮಸುಕಾಗದೆ ಬೆಚ್ಚಗೆ ಕುಳಿತಿತ್ತು.


ಅವಕಾಶ ಸಿಕ್ಕಾಗಲೆಲ್ಲ ರಾಣಿಯ ಕುರಿತು ತಿಳಿದುಕೊಳ್ಳಲು,  ಹಂಪನಾ, ಕಮಲಾ ಹಂಪನಾ, ಸೂರ್ಯನಾಥ ಕಾಮತ್, ಭಟ್ ಸೂರಿ, ಬಿ ಎಸ್ ಶಾಸ್ತ್ರಿ, ರಘುನಾಥ್ ಭಟ್, ವಸಂತ ಮಾಧವ…... ಹೀಗೆ ಹಲವು ವಿದ್ವಾಂಸರ ಕೃತಿಗಳಿಗೆ ಎಡತಾಕುತ್ತಿದ್ದೆವು. ಅವುಗಳಲ್ಲಿ ದೊರೆತ ಮಾಹಿತಿಗಳಿಂದ, ನಮ್ಮ ಹಿರಿಯರು ಹೇಳುತ್ತಿದ್ದಂತೆ ಆಕೆಯೊಬ್ಬ ಧೀರ, ಧೀಮಂತ,  ದಿಟ್ಟ ರಾಣಿಯೆಂಬ ಚಾರಿತ್ರಿಕ ಸತ್ಯ ಮನದಟ್ಟಾಗುತ್ತಿತ್ತು. ಅಂತಹ ಒಬ್ಬ ಅಪ್ರತಿಮ ವೀರವನಿತೆಯ ಕುರಿತು ನಮ್ಮ ಇತಿಹಾಸ ಈ ಮಟ್ಟದ ಅವಜ್ಞೆ ತೋರಲು ಕಾರಣವೇನೆಂಬುದು ಮಾತ್ರ ಅರ್ಥವಾಗಿರಲಿಲ್ಲ. 


ಅವಳೊಬ್ಬ ಹೆಣ್ಣು, ಅದರಲ್ಲೂ ಕಾನುಮೂಲೆಯ ಹಳ್ಳಿಯ ಒಬ್ಬ ಹೆಣ್ಣು ಮಗಳು ಎಂಬುದು ಕಾರಣವಿದ್ದೀತೇ? ತನ್ನ ಪಾಡಿಗೆ ತಾನು ಶಾಂತಿ, ಸಹನೆ ಮತ್ತು ಅಹಿಂಸೆಯಿಂದ ಬಾಳುತ್ತಿರುವ, ಒಂದು ಕಾಲದಲ್ಲಿ ಪ್ರಬಲರಾಗಿದ್ದೂ ಕ್ರಮೇಣ ರಾಜಕೀಯ ಹಿನ್ನೆಡೆಯಿಂದ ದುರ್ಬಲರಾದ ಅಲ್ಪಸಂಖ್ಯಾತರಾದ ಸಾತ್ವಿಕ ಜೈನ ಸಮುದಾಯದ ಕುಡಿಯೆಂಬುದು ಕಾರಣವಿದ್ದೀತೇ? ಸಮಾಜಕ್ಕೆ ತಾವೆಷ್ಟೇ ಕೊಡುಗೆ ನೀಡಿದರೂ ಅದನ್ನು ಕೊಚ್ಚಿಕೊಳ್ಳದ ಉತ್ತರಕನ್ನಡ ಜಿಲ್ಲೆಯವರ ಸಹಜ ಸಂಕೋಚ ಸ್ವಭಾವ ಕಾರಣವಿದ್ದೀತೇ? ಕೇವಲ ಕೊಡುವುದಷ್ಟೇ ಗೊತ್ತಿರುವ, ಪಡೆಯುವುದನ್ನೇ ತಿಳಿಯದ ಶರಾವತೀ ಕಣಿವೆಯ ಹೆಣ್ಣೆಂಬುದು ಕಾರಣವಿದ್ದೀತೇ? ಇವಳು ನಮ್ಮವಳೆಂದು ಗಟ್ಟಿಧ್ವನಿಯಲ್ಲಿ ಗರ್ಜಿಸುವ ಜಾತಿಮತ ಪಕ್ಷಪಂಗಡಗಳ ಬೆಂಬಲವಾಗಲೀ, ಪ್ರಭಾವೀ ಪ್ರಾದೇಶಿಕ ಮುಖಂಡರ ಆರ್ಭಟವಾಗಲೀ ಅವಳ ಹಿಂದೆ ಇಲ್ಲದಿದ್ದುದು ಕಾರಣವಿದ್ದೀತೇ ಎಂದೆಲ್ಲ ಅನ್ನಿಸುತ್ತಿತ್ತು. ಚೆನ್ನಭೈರಾದೇವಿಯನ್ನು ಹಾಡಿಹೊಗಳಲು ಅಥವಾ ಅವಳ ಚರಿತ್ರೆಯನ್ನು ಗಟ್ಟಿಯಾಗಿ ಪ್ರತಿಪಾದಿಸಲು ಅವಳಿಗೆ ಉತ್ತರಾಧಿಕಾರಿಗಳಿರಲಿಲ್ಲ. ಅವಳು ಸಾಳುವ ವಂಶದ ಕೊಟ್ಟಕೊನೆಯ ಅರಸಿಯಾಗಿದ್ದಳು. ಆ ವಂಶದ ಬೇರೆ ಬೇರೆ ಕವಲುಗಳೂ ಬದುಕಿರಲಿಲ್ಲ.  ಅವಳಂತೂ ಗಂಡ, ಮಕ್ಕಳು ಸೋದರರು ಯಾರೂ ಇರದ ತಬ್ಬಲಿ.   ಉತ್ತರಾಧಿಕಾರಿಗಳಿದ್ದಿದ್ದರೆ, ಒಂದು ವೇಳೆ ಪ್ರಭುತ್ವ ಕೈತಪ್ಪಿದರೂ ಸಾಕಷ್ಟು ಪ್ರಭಾವವಂತೂ ಇರುತ್ತಿತ್ತು ಮತ್ತು ರಾಣಿಯ ಚರಿತ್ರೆಗೆ ಬಲಬರುತ್ತಿತ್ತು.  ದುರದೃಷ್ಟವಶಾತ್ ಅಂತವರಾರೂ ಇರಲಿಲ್ಲ. ಜೊತೆಗೆ ಅವಳನ್ನು ಸೋಲಿಸಿದ ಕೆಳದಿ ನಾಯಕರ ಆಳ್ವಿಕೆ ಮುಂದಿನ ಒಂದೆರಡು ಶತಮಾನ ತುಂಬ ಪ್ರಭಾವಶಾಲಿಯಾಗಿತ್ತು. ತಾವು ನಗಿರೆಯನ್ನು ಆಕ್ರಮಿಸಿ ವೃದ್ಧ ರಾಣಿಯನ್ನು ಬಂಧಿಸಿ ಸೆರೆಯಲ್ಲಿಟ್ಟಿದ್ದು, ತಮಗೆ ಸಹಾಯ ಮಾಡಿದ ಗೊಂಡನಾಯಕನನ್ನು  ಕೊಲ್ಲಿಸಿದ್ದು ಮತ್ತು ಸೆರೆಮನೆಯಲ್ಲಿದ್ದಾಗಲೇ ರಾಣಿ ದೇಹತ್ಯಾಗ ಮಾಡಿದ್ದು  ಹೆಚ್ಚು ಪ್ರಸಿದ್ದಿಗೆ ಬರದಂತೆ ಅವರು ಆಕೆಯ ಚರಿತ್ರೆಯನ್ನೇ ಸಾಧ್ಯವಾದಷ್ಟು  ಮಸಕಾಗಿಸುವ ಪ್ರಯತ್ನ  ನಡೆಸಿರಬಹುದೆಂಬ ಸಂಶಯ ರಾಜಕಾರಣದ ಸಂದರ್ಭದಲ್ಲಿ ಅಪ್ರಸ್ತುತವಲ್ಲವೆನ್ನಿಸುತ್ತಿತ್ತು.


 
ಈ ನಡುವೆ,  ತನ್ನ ಬೆಂಗಾವಲು ಪಡೆಯ ಗೊಂಡನಾಯಕನೊಡನೆ ಆಕೆಗೆ ಅನೈತಿಕ ಸಂಬಂಧವಿತ್ತೆಂಬ ಕಾರಣವನ್ನು ಮುಂದೊಡ್ಡಿ ಅವಳನ್ನು ಇತಿಹಾಸದ ಮುಖ್ಯವಾಹಿನಿಯಿಂದ ಬದಿಗಿಟ್ಟ ವಿಷಾದಕರ ಸಂಗತಿ ತಿಳಿದು ಬಂತು. ಅದಕ್ಕೆ ಪೂರಕವಾಗಿ ಒಮ್ಮೆ ಕಾನೂರು ಕೋಟೆಗೆ ಹೋದಾಗ, ಅಲ್ಲಿ ಪ್ರವಾಸಿಗಳಿಗೆ ಕೋಟೆಯ ವಿವರ ತಿಳಿಸಲು ಅರಣ್ಯ ಇಲಾಖೆಯವರು ನೆಟ್ಟ ಫಲಕವೊಂದರಲ್ಲಿ, "ಅವಳು ತನ್ನ ಸೇನಾಪತಿಯ ಜೊತೆಗೆ ಹೊಂದಿದ್ದ ಅನೈತಿಕ ಸಂಬಂಧದ ಕಾರಣದಿಂದ ಅವಳ ರಾಜ್ಯ ಅವನತಿ ಹೊಂದಿತು" ಎಂಬ ವಾಕ್ಯವನ್ನು ಓದಿ, ಅರಣ್ಯ ಇಲಾಖೆಯಂತಹ ಒಂದು ಸರ್ಕಾರಿ ಇಲಾಖೆ ಕೂಡ, ತನಗೆ ಸಂಬಂಧಿಸದ ಐತಿಹಾಸಿಕ ಸಂಗತಿಯೊಂದನ್ನು ಅನಗತ್ಯವಾಗಿ ಅಲ್ಲಿ ಉಲ್ಲೇಖಿಸಿ ರಾಣಿಯ ಕೀರ್ತಿಗೆ ಮಸಿ ಬಳಿಯುವ ಮಟ್ಟಕ್ಕೆ ನಮ್ಮ ಅಸ್ಮಿತೆ ಅವನತಿಗೀಡಾದದ್ದನ್ನು ಕಂಡು ಸಂಕಟವಾಯಿತು. ಈ ಘಟನೆ  ಚೆನ್ನಭೈರಾದೇವಿಯ ಕುರಿತು ಅಧ್ಯಯನ ನಡೆಸಿ ಅದರ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಲು ನನಗೆ ಪ್ರೇರಣೆಯಾಯಿತು. ಹಾಗೊಂದು ಅನೈತಿಕ ಸಂಬಂಧವಿದ್ದಿದ್ದರೆ, ನಮ್ಮ ಹಿರಿಯರು ಪರೋಕ್ಷವಾಗಿಯಾದರೂ ಆ ಕುರಿತು ಹೇಳಬೇಕಿತ್ತು, ಅದು ನಿಜವಾಗಿದ್ದರೆ, ಇಷ್ಟು ಕಾಲದ ನಂತರವೂ ಅವಳ ಬಗ್ಗೆ ಇಷ್ಟೊಂದು ಗೌರವಾದರಗಳು ಜನಸಮೂಹದ ಮನಸ್ಸಿನಾಳದಲ್ಲಿ ಹೆಪ್ಪುಗಟ್ಟುತ್ತಿರಲಿಲ್ಲ ಎನ್ನಿಸಿತು. 
ಅವಳ ಕುರಿತು ಅಧ್ಯಯನ ನಡೆಸುತ್ತ ಹೋದಂತೆ, ಅವಳ ಕಾಲದಲ್ಲಿ ಅಂದರೆ ಹದಿನಾರನೇ ಶತಮಾನದ ಪೋರ್ಚುಗೀಸ್ ಇತಿಹಾಸಕಾರರಾಗಲೀ, ಭಾರತೀಯ ಚರಿತ್ರೆಕಾರರಾಗಲೀ, ಕವಿ, ಶಾಸನಕಾರರಾಗಲೀ ಆಕೆಯ ಅನೈತಿಕ ಸಂಬಂಧದ ಕುರಿತು ಚಕಾರವೆತ್ತಿದ್ದು ಕೂಡ ಕಂಡುಬರಲಿಲ್ಲ. 


ರಾಣಿಗೆ ಹೀಗೊಂದು ಅನೈತಿಕ ಸಂಪರ್ಕವಿತ್ತೆಂದು ಮೊಟ್ಟಮೊದಲು ಉಲ್ಲೇಖಿಸಿದವನು ಕ್ರಿಸ್ತಶಕ 1623ರಲ್ಲಿ ಕೆಳದಿಗೆ ಭೇಟಿಯಿತ್ತ  ಇಟಲಿ ದೇಶದ ಪ್ರವಾಸಿ ಪೀಟ್ರೋ ಡೆಲ್ಲಾವಲ್ಲೆ. ಈ ಡೆಲ್ಲಾವಲ್ಲೆಯ ಉಲ್ಲೇಖದ ಸತ್ಯಾಂಶವನ್ನು ಪತ್ತೆ ಹಚ್ಚಲು ಆತನ ಪತ್ರಗಳನ್ನು ಆಧರಿಸಿ ಪ್ರಕಟಗೊಂಡ "The Travels of Pietro Della Valle In India" ಎಂಬ ಕೃತಿಯನ್ನು ಸಂಗ್ರಹಿಸಿ ಓದಿದೆ. ಆತನ ಕುರಿತು ಇತರರು ಬರೆದ ಕೃತಿಗಳನ್ನೂ ಮಗುಚಿ ಹಾಕಿದೆ. ಅವನ ವ್ಯಕ್ತಿತ್ವ ಮತ್ತು ಕೃತಿ ಎರಡೂ ಹಲವು ಸಂಶಯಗಳನ್ನು ಹುಟ್ಟುಹಾಕಿದವೇ ಹೊರತು ರಾಣಿಯ ಮೇಲಿನ ಆರೋಪಕ್ಕೆ ಸ್ಪಷ್ಟ ಉತ್ತರ ಒದಗಿಸಲಿಲ್ಲ. ಡೆಲ್ಲಾವಲ್ಲೆ ಯಾವುದೇ ಆಧಾರ ಕೊಡದೆ, ಆಕರವನ್ನು ಉಲ್ಲೇಖಿಸದೆ, ಆರೋಪ ಮಾಡಿದ್ದ. ಜೊತೆಗೆ ಆತ ಅದನ್ನು ಬರೆದದ್ದು ಅವಳೊಡನೆ ವೈರ ಸಾಧಿಸುತ್ತಿದ್ದ, ಅಂತ್ಯದಲ್ಲಿ ಅವಳ ಅವನತಿಗೆ ಕಾರಣರಾಗಿದ್ದ ಕೆಳದಿ ನಾಯಕರ ಅತಿಥಿಯಾಗಿ ಕೆಳದಿಯಲ್ಲಿ ಉಳಿದುಕೊಂಡಿದ್ದಾಗ!  ಅದೂ  ಅವಳು ಸ್ವರ್ಗಸ್ಥಳಾದ ಹದಿನೇಳು ವರ್ಷಗಳ ನಂತರ!
         


ದುರದೃಷ್ಟವೆಂದರೆ ಮುಂದೆ, ಆತನ ಉಲ್ಲೇಖವನ್ನೇ ಆಧರಿಸಿ, ನಮ್ಮ ಗೆಜೆಟೀರುಗಳಿಂದ ಹಿಡಿದು ಚರಿತ್ರೆಕಾರರವರೆಗೆ ಹಲವರು ಅವಳ ಸಾಧನೆಗಳನ್ನು ಬದಿಗೊತ್ತಿ ಅವನು ಬರೆದದ್ದೇ ಸತ್ಯವೆಂಬಂತೆ ರಾಣಿಯನ್ನು ಕಳಂಕಿತೆಯಾಗಿ ಚಿತ್ರಿಸಿದರು. ವಿಚಿತ್ರವೆಂದರೆ ನಮ್ಮ ಯಾವೊಬ್ಬ ಇತಿಹಾಸಕಾರನೂ ಆತನ ಉಲ್ಲೇಖಕ್ಕೆ ಆಕರಗಳೇನು, ಅದಕ್ಕೆ ಆಧಾರಗಳೆಲ್ಲಿವೆಯೆಂದು ಪ್ರಶ್ನಿಸಲಿಲ್ಲ. ನಮ್ಮ ಇತಿಹಾಸಕಾರರ  ಕಡುಮೌನ ನನಗೆ ರಾಣಿಯ ಕುರಿತು ನನ್ನದೇ ಕುರುಡು ಅಭಿಮಾನವಾಗಿದ್ದೀತೆಂಬ ತಾತ್ಕಾಲಿಕ ಸಂಶಯ ಮೂಡಿಸಿದ್ದು ಸುಳ್ಳಲ್ಲ. ಹಾಗಿದ್ದೂ ಚೆನ್ನಭೈರಾದೇವಿಯ ಕುರಿತು ನನ್ನೊಳಗೆ ತುಡಿತವೊಂದು ಇದ್ದೇ ಇತ್ತು. 


ಸುಮಾರು ನಾಲ್ಕು ನೂರು ವರ್ಷಗಳಿಗೂ ದೀರ್ಘಕಾಲ, ಇಡೀ ನಮ್ಮ ಶರಾವತಿ ಕಣಿವೆ ಮತ್ತು ಉತ್ತರಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದ ಜನಮಾನಸದಲ್ಲಿ ಅಚ್ಚಳಿಯದ ಅಭಿಮಾನವನ್ನು ಉಳಿಸಿಕೊಂಡ, ಆರಾಧನಾ ಭಾವ ಗಳಿಸಿಕೊಂಡ ಅವಳ ಸಾಧನೆ,  ವಿಕ್ಷಿಪ್ತ ಮನಸ್ಸಿನ ಈ ಪರದೇಶಿ ಹಲುಬಿದಷ್ಟು ಅನೈತಿಕವಾಗಿಯಂತೂ ಇದ್ದಿರಲಿಕ್ಕಿಲ್ಲ. ಅವಳ ನೈಜಚರಿತ್ರೆಯನ್ನು ದಾಖಲಿಸುವಲ್ಲಿ ಎಲ್ಲೋ ಏನೋ ಲೋಪವಾಗಿದೆಯೆನ್ನಿಸಿ ಆಕೆಯನ್ನು ಕುರಿತ ವಿವರಗಳಿಗಾಗಿ ಮತ್ತಷ್ಟು ತಡಕಾಡತೊಡಗಿದೆ.  ಈ ನಡುವೆ ನನ್ನ ಸೊಸೆಯ ತವರೂರು ಗೇರುಸೊಪ್ಪೆಗೆ ಹೋದಾಗ ಆಕೆ ಅಲ್ಲಿ ಚೆನ್ನಭೈರಾದೇವಿಯ  ದೇವಾಲಯವೊಂದನ್ನು ತೋರಿಸಿದಾಗ  ಪರಮಾಶ್ಚರ್ಯವಾಯಿತು. ದೇವಾಲಯ ದುಃಸ್ಥಿತಿಯಲ್ಲಿದ್ದರೂ ಅಲ್ಲಿ 'ಚೆನ್ನಭೈರಾದೇವಿಯ ಸನ್ನಿಧಿ' ಎಂದು ಸ್ಪಷ್ಟವಾಗಿ ಬರೆದಿದ್ದನ್ನು ಮತ್ತು ಅದನ್ನು  ಅಲ್ಲಿಯ ಜನ ಚೆನ್ನಭೈರಾದೇವಿ ದೇಗುಲವೆಂದೆ ಆರಾಧಿಸುತ್ತಿದ್ದುದನ್ನು ಕಂಡು ಕಂಬನಿದುಂಬಿ ಕೈಮುಗಿದು ಬಂದೆ. 


ಹಾಗೆಯೇ ಅಂರ್ಜಾಲದಲ್ಲಿ 'ಅವ್ವರಸಿ' ಎಂಬ ಊರಿನಲ್ಲಿರುವ ಸುಪ್ರಸಿದ್ಧ ಕಾತ್ಯಾಯನಿ ದೇವಿಯನ್ನೂ ಹಿಂದೆ 'ಅವ್ವರಸಿ ದೇವಿ'ಯೆಂದೂ, ಅವ್ವರಸಿ ದೇವಿಯೆಂದರೆ ಚೆನ್ನಭೈರಾದೇವಿಯೆಂದು ಅಲ್ಲಿನ ನಾಡವರು,  ಖಾರ್ವಿಗಳು ಭಾವಿಸಿ ಪೂಜಿಸುತ್ತಿದ್ದರೆಂಬ ಮಾಹಿತಿ ಸಿಕ್ಕಿತು. ನಮ್ಮ  ಜನ ಇಂದಿಗೂ ಅವಳನ್ನು ಹೀಗೆ ಪೂಜಿಸುತ್ತಿದ್ದಾರೆಂದರೆ ಅವಳ ಮೇಲಿನ ಆರೋಪ ಖಂಡಿತ ಸತ್ಯಕ್ಕೆ ದೂರವಾದದ್ದೇ ಇರಬೇಕೆಂದು ಬಲವಾಗಿ ಅನ್ನಿಸತೊಡಗಿತು.  ಹೀಗಾಗಿ  ಊರಿಗೆ ಹೋದಾಗಲೆಲ್ಲ ಹೆನ್ನಿ, ಕಾನೂರು, ಗೇರುಸೊಪ್ಪೆ, ಹಾಡುವಳ್ಳಿಗಳನ್ನು ಅಲೆಯತೊಡಗಿದೆ. ನಮ್ಮ ಪ್ರದೇಶದ ವೃದ್ದರನ್ನು, ಹಾಡಗೇರಿಯ ಸುತ್ತಮುತ್ತಲಿನ ಗೊಂಡರನ್ನು, ಜೈನಸಮಾಜದ ಹಿರಿಯರನ್ನು ಭೇಟಿ ಮಾಡಿ, ರಾಣಿಯ ಕುರಿತು ತಿಳಿಯಲು ಹಾತೊರೆಯತೊಡಗಿದೆ. ಈ ನಡುವೆ  ಅದೃಷ್ಟವಶಾತ್ ಅಮೆರಿಕೆಯ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಭಾಷಾ ವಿದ್ವಾಂಸೆ, ಪ್ರೊಫೆಸರ್ ಹನ್ನಾ ಚಾಪೆಲ್ ವೋಜಿಹೋವ್ಸ್ಕಿ ( Hannah Chapelle Wojciehowski ) ಎನ್ನುವ ಸುಪ್ರಸಿದ್ಧ ವಿದ್ವಾಂಸೆ ಹದಿನಾರನೇ ಶತಮಾನದ ಪೋರ್ಚುಗೀಸ್ ಪ್ರವಾಸಿಗಳು ಬರೆದ ಇತಿಹಾಸ ಕಥನಗಳನ್ನು ಆಧರಿಸಿ, ವಿಭಿನ್ನ ಸಂಸ್ಕೃತಿ ಮತ್ತು ಭಾಷೆಯ ಕಾರಣದಿಂದ ಉಂಟಾಗುವ ಗ್ರಹಿಕೆಯ ವ್ಯತ್ಯಾಸ ಹೇಗೆ ಇತಿಹಾಸವನ್ನು ತಿರುಚಬಲ್ಲದೆಂದು ಭಟ್ಕಳದ ಐತಿಹಾಸಿಕ ಪ್ರಸಂಗವನ್ನು ಆಧರಿಸಿ ಬರೆದಿರುವ ವಿಶ್ಲೇಷಣಾತ್ಮಕ ಪ್ರಬಂಧದಲ್ಲಿ ರಾಣಿ ಚೆನ್ನಭೈರಾದೇವಿಯ ಕುರಿತು ಉಲ್ಲೇಖಿಸಿರುವುದು ಕಂಡುಬಂತು. 1542ರಲ್ಲಿ ಪೋರ್ಚುಗೀಸ್ ಕಪ್ತಾನ ಆಲ್ಫನ್ಸೋ ಡಿಸೋಜಾ ಭಟ್ಕಳದ ಮೇಲೆ ದಾಳಿ ಮಾಡಿ ಆ ಪಟ್ಟಣವನ್ನು ಸುಟ್ಟುಹಾಕಿದ ಘಟನೆಯನ್ನು ಶ್ರೀಮತಿ ವೋಜಿಹೋವ್ಸ್ಕಿ (Wojciehowski),  ಹದಿನಾರನೆಯ ಶತಮಾನದ ನಾಲ್ವರು ಪ್ರಸಿದ್ಧ ಪೋರ್ಚುಗೀಸ್ ಪ್ರವಾಸಿಗಳೂ ಮತ್ತು ಇತಿಹಾಸಕಾರರೂ ಆಗಿದ್ದ, ಫೆರ್ನಾವೋ ಮೆಂಡಿಸ್ ಪಿಂಟೋ, ಲೋಪೆಸ್ ಡ ಕಾಸ್ಟನೇಡ, ಗಾಸ್ಪರ್ ಕೋರಿಯ, ಡಿಓಗೋ ಡೊ ಕೂಟೋ, ಹೇಗೆ ವಿಭಿನ್ನವಾಗಿ ಚಿತ್ರಿಸಿದ್ದಾರೆ ಎಂಬುದನ್ನು ತನ್ನ ಪ್ರಬಂಧದಲ್ಲಿ ಆಧಾರ ಸಹಿತ ವಿವರಿಸಿದ್ದಾಳೆ. 'ಸಾಂಸ್ಕೃತಿಕ ವಿಭಿನ್ನತೆ, ಪೂರ್ವಗ್ರಹ, ಗ್ರಹಿಕೆಗಳ ವ್ಯತ್ಯಾಸ ಮತ್ತು ಭಿನ್ನ ಆಲೋಚನಾ ಕ್ರಮಗಳನ್ನು ಅವಲಂಬಿಸಿ ಇತಿಹಾಸ ವಾಸ್ತವಕ್ಕಿಂತ ಹೇಗೆ ಭಿನ್ನವಾಗಿ, ಅಸಂಗತವಾಗಿ, ವಿಕೃತವಾಗಿ ಚಿತ್ರಣಗೊಳ್ಳುವ ಸಾಧ್ಯತೆಗಳಿರುತ್ತವೆ, ಅದರಲ್ಲೂ ತನಗೆ ಅರಿವಿಲ್ಲದ ಸಂಸ್ಕೃತಿ, ದೇಶ, ಭಾಷೆ, ಪರಂಪರೆಯ ಕುರಿತು ಬರೆಯುವವನಿಗೆ ಉದ್ದೇಶಪೂರ್ವಕ ಪೂರ್ವಗ್ರಹಗಳೂ ಇದ್ದುಬಿಟ್ಟರೆ  ಇತಿಹಾಸದ ಘಟನೆಗಳು ವಾಸ್ತವಕ್ಕೆ ವ್ಯತಿರಿಕ್ತವಾಗಿ ಹೇಗೆ ಚಿತ್ರಣಗೊಳ್ಳುತ್ತದೆ' ಎಂದಾಕೆ ವಿಶ್ಲೇಷಿಸುತ್ತಾಳೆ.
ಆಕೆ, "ಹೊನ್ನಾವರದ ರಾಣಿ ಮತ್ತು ಅವಳ ರಾಯಭಾರಿಗಳು" ( The Queen of Onor and her emmissaries) ಎಂಬ ತನ್ನ ಪ್ರಬಂಧದಲ್ಲಿ ಇತಿಹಾಸಕಾರನ ಭಾಷೆಯನ್ನು ಸೈದ್ಧಾಂತಿಕವಾಗಿ ವಿಶ್ಲೇಷಿಸಿ, ಹೇಗೆ ಕೆಲವರ ಚಾರಿತ್ರಿಕ ಬರಹಗಳು ಕಟ್ಟುಕತೆಗಿಂತ ಕನಿಷ್ಠ ಮಟ್ಟಕ್ಕೆ ಕುಸಿಯಬಲ್ಲುದೆಂಬುದನ್ನು ಮೆಂಡಿಸ್ ಪಿಂಟೋನ ಬರಹವನ್ನು ಉಲ್ಲೇಖಿಸಿ ವಿವರಿಸುತ್ತಾಳೆ. ಕತೆಗಾರನಿಗೂ ಇತಿಹಾಸಕಾರನಿಗೂ, ಕಲ್ಪನೆಗೂ ವಾಸ್ತವಕ್ಕೂ, ಕಟ್ಟುಕತೆಗೂ ಇತಿಹಾಸಕ್ಕೂ ವಾಸ್ತವದಲ್ಲಿ ಇರಬೇಕಾದ ವ್ಯತ್ಯಾಸಗಳನ್ನು  ನಿಖರವಾಗಿ ಗುರುತಿಸುವ ಆಕೆ, ಸತ್ಯವನ್ನು ಕಲ್ಪನೆಗೆ ತಕ್ಕಂತೆ ಬಗ್ಗಿಸಿ ಕಟ್ಟುಕತೆ ಮತ್ತು ಇತಿಹಾಸಗಳ ಅಂತರ ತಗ್ಗಿಸುವವರನ್ನು ಕುಟುಕುತ್ತಾಳೆ. 


ಚಾರಿತ್ರಿಕವಾಗಿ 1542ರ ಘಟನೆ ನಡೆದಾಗ ಭಟ್ಕಳದ ರಾಣಿಯಾಗಿದ್ದವಳು ರಾಣಿ ಚೆನ್ನಭೈರಾದೇವಿಯ ಹಿರಿಯ ಸಹೋದರಿ ರಾಣಿ ಚೆನ್ನಾದೇವಿ. ಹಳೆಯ ಒಪ್ಪಂದಕ್ಕೆ ಒಳಪಟ್ಟು ಅವಳು ತಮಗೆ ಕಪ್ಪವನ್ನು ಕೊಡಲಿಲ್ಲವೆಂದೂ, ಸಮುದ್ರ ವ್ಯಾಪಾರಕ್ಕೆ ತಮ್ಮಿಂದ ಪರವಾನಗಿ ಕಾರ್ಟಜ್ ( Cartaz ) ಪಡೆಯದ ಮಹಮ್ಮದೀಯರ ಹಡಗುಗಳಿಗೆ ಭಟ್ಕಳ ಬಂದರಿನಲ್ಲಿ ಆಶ್ರಯ ಕೊಟ್ಟಿರುವಳೆಂದೂ ಆರೋಪಿಸಿ, ಪೋರ್ಚುಗೀಸ್ ಕಪ್ತಾನ ಆಲ್ಫನ್ಸೋ ಡಿಸೋಜಾ ಭಟ್ಕಳವನ್ನು ಮುತ್ತಿ ವಂಚನೆಯ ಮೂಲಕ ರಾಣಿಯನ್ನು ಸೋಲಿಸಿ, ಇಡೀ ಪಟ್ಟಣವನ್ನು ಸುಟ್ಟುರುಹಿದ ಘಟನೆ 1542ರಲ್ಲಿ ಸಂಭವಿಸಿದ್ದು ಐತಿಹಾಸಿಕ ಸತ್ಯ. ಈ ಘಟನೆಯನ್ನು ಮೇಲ್ಕಂಡ ನಾಲ್ವರೂ ಇತಿಹಾಸಕಾರರು ತಮ್ಮ ಪ್ರವಾಸ ಕಥನದಲ್ಲಿ ವರ್ಣಿಸಿದ್ದಾರೆ. ಆ ನಾಲ್ವರಲ್ಲಿ ಯಾರೊಬ್ಬರಿಗೂ ಕನಿಷ್ಠ ರಾಣಿಯ ಹೆಸರನ್ನು ಉಲ್ಲೇಖಿಸುವ ಸೌಜನ್ಯವಿರದಿದ್ದರೂ ಘಟನೆಯನ್ನು ಸ್ವತಃ ಕಂಡಂತೆ ವರ್ಣಿಸುವುದರಲ್ಲಿ ಮಾತ್ರ ಯಾವುದೇ ಹಿಂಜರಿಕೆಯಿರಲಿಲ್ಲ. ವಿಪರ್ಯಾಸವೆಂದರೆ ಒಬ್ಬನ ವಿವರಣೆ ಇನ್ನೊಬ್ಬನ ವಿವರಣೆಗೆ ಕಿಂಚಿತ್ತೂ ತಾಳೆಯಾಗುವುದಿಲ್ಲ. ಅದರಲ್ಲೂ ಮೊದಲ ಮೂವರು, ಮೇಲಿನ ಘಟನೆ ಭಟ್ಕಳದಲ್ಲಿ ನಡೆದಂತೆ ಚಿತ್ರಿಸಿದ್ದರೆ, ಮೆಂಡಿಸ್ ಪಿಂಟೋ ಇದು ಹೊನ್ನಾವರ (Onor) ಪಟ್ಟಣದಲ್ಲಿ ನಡೆದಂತೆ, ಅದನ್ನು ಹೊನ್ನಾವರದ ರಾಣಿಗೆ ಅನ್ವಯಿಸಿ ವರ್ಣಿಸಿದ್ದಾನೆ. ಪಿಂಟೋ 1552ರಿಂದ ಹೊನ್ನಾವರ ವ್ಯಾಪ್ತಿಯ ಗೇರುಸೊಪ್ಪೆಯ ರಾಣಿಯಾಗಿದ್ದ ಚೆನ್ನಭೈರಾದೇವಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಘಟನೆಯನ್ನು ಆಕೆಗೆ ಆರೋಪಿಸಿ ಚಿತ್ರಿಸಿರಬೇಕೆಂದು ವೋಜಿಹೋವ್ಸ್ಕಿ ತರ್ಕಿಸಿ ರಾಣಿ ಚೆನ್ನಭೈರಾದೇವಿಯ ಕುರಿತು ಹೀಗೆ ಬರೆಯುತ್ತಾಳೆ. 

ವೋಜಿಹೋವ್ಸ್ಕಿಯ ದೃಷ್ಟಿಯಲ್ಲಿ ರಾಣಿ ಚೆನ್ನಭೈರಾದೇವಿ :

'ಇವತ್ತು ನಮಗೆ ತಿಳಿದಿರುವ ಅವಳ ಕತೆ ಕೇವಲ ಸ್ವಲ್ಪವೇ ಆಗಿದ್ದರೂ ವಿವಿಧ ಕಾರಣಗಳಿಗಾಗಿ ನಮಗದು ಮುಖ್ಯವಾಗುತ್ತದೆ. ಅದರಲ್ಲೂ, ವಸಾಹತುಶಾಹಿ ಆಡಳಿತದ ಆರಂಭದಿಂದಲೂ ಯುರೋಪಿಯನ್ ಇತಿಹಾಸಕಾರರು ಪರಾಕ್ರಮ ಮತ್ತು ಗೆಲುವು ಪುರಷರ ಸ್ವತ್ತು ಎಂಬಂತೆ ಚರಿತ್ರೆಯನ್ನು  ಪುರುಷ ಪಕ್ಷಪಾತಿಯಾಗಿ ಚಿತ್ರಿಸುತ್ತ ಬಂದುದಕ್ಕೆ ಪ್ರತಿಯಾಗಿ ಆಕೆಯ ಕತೆ ಅತಿ ಮಹತ್ವದ್ದಾಗಿ ಕಂಡುಬರುತ್ತದೆ. ಚೆನ್ನಭೈರಾದೇವಿಯು ಇಂಗ್ಲೆಂಡಿನ ರಾಣಿ ಮೊದಲನೇ ಎಲೆಜಬೆತ್ತಳ ಸಮಕಾಲೀನಳು ಮತ್ತು ಅನೇಕ ವಿಷಯಗಳಲ್ಲಿ ಅವಳಿಗೆ ಸರಿಮಿಗಿಲಾಗಿದ್ದವಳು. ಚೆನ್ನಭೈರಾದೇವಿಯು ತನಗೆ ಎದುರಾದ ಅನೇಕ ಬಗೆಯ ವೈರುಧ್ಯಗಳನ್ನು ಚಾಣಾಕ್ಷ ಮೈತ್ರಿಗಳ ಮೂಲಕ ದಿಟ್ಟತನದಿಂದ ನಿಭಾಯಿಸುತ್ತ ತನ್ನ ರಾಜಕೀಯ, ಸಾಂಸ್ಕೃತಿಕ, ಮತ್ತು ಆರ್ಥಿಕ ಮೇಲುಗೈಯ್ಯನ್ನು ಬಿಟ್ಟುಕೊಡದೆ ಐವತ್ತು ವರ್ಷಗಳಿಗೂ ಹೆಚ್ಚು ಕಾಲ ತನ್ನ ರಾಜ್ಯವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಸಮರ್ಥವಾಗಿ ಆಳುವಲ್ಲಿ ಯಶಸ್ವಿಯಾಗಿದ್ದಳು'.


Her story—what little we know of it today—is important for a variety of reasons, not least because it counters the masculinist narratives of conquest and dominance penned by European chroniclers from the beginning of the colonial period. Chennabhairadevi was almost an exact contemporary of Queen Elizabeth I of England, and in many ways she was her counterpart. Chennabhairadevi succeeded in holding onto her kingdom for over 50 years, outwitting multiple adversaries through shrewd alliances, and in leveraging a great deal of political, cultural, and economic power.


ಇದು ಯಾರೋ ನಮ್ಮವರು ಚೆನ್ನಭೈರಾದೇವಿಯನ್ನು ಹೊಗಳಿ ಅಟ್ಟಕ್ಕೇರಿಸಲು ಬರೆದದ್ದಲ್ಲ. ಬದಲಿಗೆ, 1984ರಲ್ಲಿ ಅಮೆರಿಕದ ಕನೆಕ್ಟಿಕಟ್ ರಾಜ್ಯದ ಸುಪ್ರಸಿದ್ಧ ಯೇಲ್ ( Yale ) ಯೂನಿವರ್ಸಿಟಿಯಿಂದ ಡಾಕ್ಟರೇಟ್ ಪದವಿ ಪಡೆದು, ಟೆಕ್ಸಾಸ್ ಯೂನಿವರ್ಸಿಟಿಯಲ್ಲಿ ಆಂಗ್ಲಭಾಷಾ ಪ್ರಾಧ್ಯಾಪಕಿಯಾಗಿರುವ ಮತ್ತು ಅಲ್ಲಿನ ದಕ್ಷಿಣ ಏಷಿಯಾ ಇನಸ್ಟಿಟ್ಯೂಟಿನಲ್ಲಿ ತೌಲನಿಕ ಸಾಹಿತ್ಯ ಮುಖ್ಯಸ್ಥೆಯಾಗಿರುವ, ಹಲವು ಮೌಲಿಕ ಕೃತಿಗಳನ್ನು ರಚಿಸುವ ಮೂಲಕ ಜಗತ್ಪ್ರಸಿದ್ಧ ಲೇಖಕಿ ಮತ್ತು ಅತ್ಯುತ್ತಮ ಭಾಷಾ ವಿದ್ವಾಂಸೆಯೆಂದು ಹೆಸರಾಗಿರುವ ವೋಜಿಹೋವ್ಸ್ಕಿ (Wojciehowski) ಬರೆದದ್ದು. ಚರಿತ್ರಕಾರನೊಬ್ಬನ ಪ್ರಜ್ಞಾಪೂರ್ವಕ ಪೂರ್ವಗ್ರಹ ಇತಿಹಾಸವನ್ನು ಅದೆಷ್ಟು ತಿರುಚಿ, ಸತ್ಯಕ್ಕೆ ದೂರವಾಗಿ ಚಿತ್ರಿಸಬಲ್ಲದೆಂಬುದನ್ನು ಹೇಳುತ್ತ ಆಕೆ ಪಿಂಟೋನನ್ನು ಕುರಿತು ಹೀಗೆ ಹೇಳುತ್ತಾಳೆ,
"ಯಾವುದೇ ಅರ್ಥದಲ್ಲಿ ಆತನೊಬ್ಬ ಮುಗ್ಧ ಚರಿತ್ರಕಾರನಾಗಲೀ ಇತಿಹಾಸದ ನಿಷ್ಪಕ್ಷಪಾತಿ ಸಾಕ್ಷಿಯಾಗಲೀ ಅಲ್ಲ.


ಅವನಲ್ಲಿ ಅವನ ದೇಶದ ಇತರರಿಗಿಂತ ಹೆಚ್ಚು ಉದ್ದೇಶಪೂರ್ವಕ ಆಕ್ರಮಣಕಾರಿ ವಸಾಹತುಪ್ರಜ್ಞೆ ಕೆಲಸ ಮಾಡುತ್ತಿತ್ತು. ಅವನು ಪೋರ್ಚುಗೀಸರು ಭಾರತದಲ್ಲಿ ನಡೆಸಿದ ಹಿಂಸೆಯನ್ನು ಮುಚ್ಚಿಡುವ ಮತ್ತು ಹೇಳಬೇಕಾದುದನ್ನು ಹೇಳದೆ ಸುಮ್ಮನಿದ್ದು ತನ್ನವರು ಗೈದ ತಪ್ಪುಗಳನ್ನು ಮರೆಮಾಚುವ, ಅವರ ಪರಮಾಧಿಕಾರವನ್ನು ಎತ್ತಿ ತೋರ್ಪಡಿಸುವ, ಅವರನ್ನು ಸಭ್ಯರಂತೆ, ಕರುಣಾಳುಗಳಂತೆ ಚಿತ್ರಿಸುವ, ಮತ್ತು ತಮ್ಮ ದೇಶವಾಸಿಗಳ ಪುರುಷ ಪಕ್ಷಪಾತಿ ನಿಲುವನ್ನು ಸಮರ್ಥಿಸುವ ದುರುದ್ದೇಶವನ್ನು ಹೊಂದಿದ್ದ" ಎಂದು ಸ್ಪಷ್ಟವಾಗಿ ಹೇಳುತ್ತಾಳೆ. ಇದು ಕೇವಲ ಪಿಂಟೋನಿಗೆ ಮಾತ್ರವಲ್ಲದೆ ಡೆಲ್ಲಾವಲ್ಲೆಯಂತಹ ಅಂದಿನ ಅನೇಕ ಯುರೋಪಿಯನ್ ಇತಿಹಾಸಕಾರರಿಗೆ ಅಕ್ಷರಶಃ ಅನ್ವಯಿಸುವ ಮಾತು.


ಈ ಪ್ರಬಂಧವನ್ನು ಓದಿದ ಮೇಲೆ ಇತಿಹಾಸದ ಹೆಸರಿನಲ್ಲಿ ವಿದೇಶಿ ಪ್ರವಾಸಿಯೊಬ್ಬ ಹೇಳಿದ್ದೆಲ್ಲ ಐತಿಹಾಸಿಕ ಸತ್ಯವೆಂದು ಭಾವಿಸಬೇಕಿಲ್ಲವೆಂಬ ಸತ್ಯ ಮನದಟ್ಟಾಯಿತು. ಜೊತೆಗೇ ಪೀಟ್ರೋ ಡೆಲ್ಲಾವಲ್ಲೆಗೂ ಮೆಂಡಿಸ್ ಪಿಂಟೋಗೂ ಸ್ಪಷ್ಟ ಹೋಲಿಕೆ ಕಂಡು ಬಂತು. ಪೀಟ್ರೋ ಡೆಲ್ಲಾವಲ್ಲೆ ತನ್ನ ಪ್ರಜ್ಞಾಪೂರ್ವಕ ಪೂರ್ವಗ್ರಹದಿಂದ ಚೆನ್ನಭೈರಾದೇವಿಯ ಕುರಿತು ಹೇಳಿದ್ದನ್ನು ಪ್ರೊಫೆಸರ್ ವೋಜಿಹೋವ್ಸ್ಕಿಯ ದೃಷ್ಟಿಕೋನದಿಂದ ಪುನರವಲೋಕಿಸುವ ಅಗತ್ಯವಿದೆಯೆನ್ನಿಸಿತು. ಅದಕ್ಕೂ ಮೊದಲು ಪೀಟ್ರೋ ಡೆಲ್ಲಾವಲ್ಲೆ ಯಾರೆಂಬುದನ್ನು ಗಮನಿಸೋಣ.

ಪೀಟ್ರೋ ಡೆಲ್ಲಾವಲ್ಲೆ (Pietro della Valle) :

1623ರಲ್ಲಿ ಭಾರತಕ್ಕೆ ಪ್ರವಾಸಿಯಾಗಿ ಬಂದ ಪೀಟ್ರೋ ಡೆಲ್ಲಾವಲ್ಲೆ ಇಟಲಿಯ ರೋಮ್ ನಗರದ ಸುಪ್ರಸಿದ್ಧ, ಶ್ರೀಮಂತ, ಸಂಪ್ರದಾಯಸ್ಥ, ಕುಟುಂಬವೊಂದರಲ್ಲಿ 1586ರಲ್ಲಿ ಜನಿಸಿದವನು. ಆತ ಪೋಪರ ಧಾರ್ಮಿಕ ಸಂಪುಟದಲ್ಲಿ ಪ್ರಥಮ ಶ್ರೇಣಿಯ ಗೌರವ ಪಡೆಯುತ್ತಿದ್ದ ಧಾರ್ಮಿಕ ಕುಟುಂಬದ ಕುಡಿ. ಡೆಲ್ಲಾವಲ್ಲೆ ಇಟಲಿಯ ಪ್ರತಿಷ್ಟಿತ ಅಕಾಡೆಮಿ ಆಫ್ ಉಮೋರಿಸ್ಟಿಯಲ್ಲಿ ವಿದ್ಯಾಭ್ಯಾಸ ಮುಗಿಸಿ, 1611ರಲ್ಲಿ ಸ್ಪೇನ್ ದೇಶದ ಸೈನ್ಯ ಸೇರುತ್ತಾನೆ. ಬ್ಯಾತ್ರೀಚ್ ಬೋರಾಚ್ ಎಂಬ ಯುವತಿಯನ್ನು ಪ್ರೀತಿಸಿ ಆಕೆಯ ವಂಚನೆಗೆ ಬಲಿಯಾಗುತ್ತಾನೆ. ಪ್ರೇಮ ವೈಫಲ್ಯದ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಚಿತ್ತಸ್ವಾಸ್ಥ್ಯ ಕಳೆದುಕೊಳ್ಳುತ್ತಾನೆ. ಪ್ರೇಯಸಿಯ ವಂಚನೆಯನ್ನು ಮರೆಯಲು ಊರೂರು ಅಲೆಯುತ್ತ ನೇಪಲ್ಸಿಗೆ ಹೋಗುತ್ತಾನೆ. ತನ್ನ ವೈದ್ಯಮಿತ್ರ ಮ್ಯಾರಿಯೋ ಶ್ಕಿಪಾನೋನ ಸಲಹೆಯಂತೆ ಚಿತ್ತಸ್ವಾಸ್ಥ್ಯವನ್ನು ಕಾಯ್ದುಕೊಳ್ಳಲು ಪೌರಾತ್ಯ ಜಗತ್ತಿನ ಪ್ರವಾಸಕ್ಕಾಗಿ ವೆನಿಸಿನಿಂದ ಕಾನಸ್ಟ್ಯಾಂಟಿನೋಪಲ್ಲಿಗೆ ಪಯಣಿಸುತ್ತಾನೆ. ಅಲ್ಲಿಂದ ಏಷಿಯಾ ಮೈನರ್, ಈಜಿಪ್ತ್, ಮೌಂಟ್ ಸಿನಾಯ್, ಪ್ಯಾಲಸ್ತೀನುಗಳಿಗೆ ಭೇಟಿ ನೀಡಿ ನಂತರ ಬಾಗ್ದಾದಿಗೆ ತೆರಳಿ 1616ರಲ್ಲಿ ಮಾನಿ ಜಿಯೋರಿಡ್ ಎಂಬ ಹದಿನೆಂಟರ ಯುವತಿಯನ್ನು ಮದುವೆಯಾಗುತ್ತಾನೆ. ಮುಂದೆ 1622ರಲ್ಲಿ ದಂಪತಿಗಳು ಪರ್ಶಿಯಾದ ಪ್ರವಾಸದಲ್ಲಿದ್ದಾಗ ಮಾನಿ ಸಾವನ್ನಪ್ಪುತ್ತಾಳೆ. ಈ ದುರಂತದಿಂದ ಆತ ಮತ್ತೆ ಮಾನಸಿಕ ವಿಪ್ಲವಕ್ಕೆ ತುತ್ತಾಗುತ್ತಾನೆ. ತನ್ನ ಮೃತಮಡದಿಯ ದೇಹ ಕೆಡದಂತೆ ಸುಗಂಧವಸ್ತುಗಳನ್ನಿರಿಸಿದ ಶವಪೆಟ್ಟಿಗೆಯಲ್ಲಿಟ್ಟುಕೊಂಡು ತನ್ನ ಪರಿಚಾರಿಕೆ ಮಾರಿಯಾ ಜಿಬಾ ಜೊತೆಗೆ ರೇಶಿಮೆ ವಸ್ತ್ರ ಹೊದೆಸಿದ ಶವಪೆಟ್ಟಿಗೆಯ ಬಗ್ಗೆ ಹಡಗಿನ ಕ್ಯಾಪ್ಟನ್ ಬಳಿ ಸುಳ್ಳು ಹೇಳಿ 1623ರ ಫೆಬ್ರುವರಿ 10ರಂದು ಭಾರತದ ಸೂರತ್ ನಗರಕ್ಕೆ ಬಂದಿಳಿದು, ಕ್ಯಾಂಬೆ ಅಹ್ಮದಾಬಾದನ್ನು ಸುತ್ತಾಡಿ ಗೋವೆಗೆ ಬರುತ್ತಾನೆ. ಅಲ್ಲಿಂದ ಕೆಳದಿಯ ರಾಜಪ್ರತಿನಿಧಿ ವಿಠಲ ಶೆಣೈ ಮತ್ತು ಪೋರ್ಚುಗೀಸ್ ರಾಯಭಾರಿಯೊಂದಿಗೆ 1623ರ ಅಕ್ಟೋಬರ್ ತಿಂಗಳಲ್ಲಿ ಕೆಳದಿಗೆ ಹೊರಡುತ್ತಾನೆ. ಈ ಯಾತ್ರೆಯಲ್ಲಿ ಹೊನ್ನಾವರ ಗೇರುಸೊಪ್ಪೆ, ಕಾನೂರು, ಭಾರಂಗಿ, ತುಮರಿ, ಆವಿನಹಳ್ಳಿಯ ಮೂಲಕ ಇಕ್ಕೇರಿಗೆ ಬಂದು ಅಲ್ಲಿ ಹದಿನೆಂಟು ದಿನವಿದ್ದು ನಂತರ ಮಂಗಳೂರಿಗೆ ಹೋಗಿ ಅಬ್ಬಕ್ಕದೇವಿಯನ್ನು ಭೇಟಿಯಾಗಿ ಕಲ್ಲಿಕೋಟೆಗೆ ಪ್ರಯಾಣ ಬೆಳೆಸುತ್ತಾನೆ. ಮರಳಿ ಗೋವಾಕ್ಕೆ ತೆರಳಿ, ಅಲ್ಲಿಂದ ಮಸ್ಕಟ್, ನೇಪಲ್ಸ್ ಮೂಲಕ 1626ರಲ್ಲಿ ರೋಮ್ ನಗರವನ್ನು ಸೇರಿ ತನ್ನ ಸತಿಯ ಪಾರ್ಥಿವ ಶರೀರವನ್ನು ಆರಾಕೋಯ್ಲಿ ಇಗರ್ಜಿಯಲ್ಲಿ ಮಣ್ಣುಮಾಡುತ್ತಾನೆ. ಅವನಿಗೆ ಪೋಪನ ಧಾರ್ಮಿಕ ಮಂಡಲಿಯಲ್ಲಿ ಗೌರವದ ಹುದ್ದೆ ದೊರೆಯುತ್ತದೆ. ಪ್ರವಾಸದಲ್ಲಿ ತನ್ನ ಸಂಗಾತಿಯಾಗಿದ್ದ ಪರಿಚಾರಿಕೆಯನ್ನು ವಿವಾಹವಾಗಿ, ಹದಿನಾಲ್ಕು ಮಕ್ಕಳನ್ನು ಪಡೆಯುತ್ತಾನೆ. ಮುಂದೆ ಕ್ಷುಲ್ಲಕ ಜಗಳವೊಂದರಲ್ಲಿ ಪೋಪನ ಕಣ್ಣೆದುರೇ ನಿರಪರಾಧಿ ವ್ಯಕ್ತಿಯೊಬ್ಬನನ್ನು ಕತ್ತಿಯಿಂದ ಇರಿದು ಸಾಯಿಸಿ, ಶಿಕ್ಷೆಯ ಭಾಗವಾಗಿ ರೋಮ್ ನಗರವನ್ನು ಬಿಟ್ಟು ನೇಪಲ್ಸ್ ನಗರಕ್ಕೆ ಹೋಗಿ ವಾಸಿಸುತ್ತಾನೆ. ಮರಳಿ ಪೋಪನಿಂದ ಕ್ಷಮಾಧಾನ ಪಡೆದು ರೋಮ್ ನಗರಕ್ಕೆ ಬಂದು 1652ರಲ್ಲಿ ಮರಣಹೊಂದುತ್ತಾನೆ. 
ಚೆನ್ನಭೈರಾದೇವಿಯ ಬದುಕೂ ಸೇರಿದಂತೆ ಅಂದಿನ ಹಲವು ಐತಿಹಾಸಿಕ ಘಟನೆಗಳಿಗೆ ಆಕರ ಗ್ರಂಥವೆಂದು ಪರಿಗಣಿಸಲಾಗುವ ಅವನ ಕೃತಿ, ವಿಕ್ಷಿಪ್ತ ಮನಃಸ್ಥಿತಿಯ ವ್ಯಕ್ತಿಯೊಬ್ಬನ ಅಪಲಾಪದಂತೆ ಮತ್ತು ಪ್ರಜ್ಞಾಪೂರ್ವಕ ಪೂರ್ವಗ್ರಹವನ್ನಿಟ್ಟುಕೊಂಡು ಬರೆದ ವಿಕೃತಿಯಂತೆ ಕಾಣುತ್ತದೆಯೆನ್ನಲು ಕೆಲವು ಉದಾಹರಣೆಗಳನ್ನು ಗಮನಿಸೋಣ. 


1. ಕೆಳದಿಯಿಂದ ನವೆಂಬರ್ 22, 1623 ರಂದು ಗೆಳೆಯನಿಗೆ ಬರೆದ ಪತ್ರದಲ್ಲಿ, ಅವನು ಕೆಳದಿಯ ವೆಂಕಟಪ್ಪ ನಾಯಕನನ್ನು ರಾಜನೆಂದು ಹೇಳಲೊಪ್ಪದೆ ಕೇವಲ ಒಬ್ಬ 'ಪುಡಿಪಾಳೆಯಗಾರ' ಎನ್ನುತ್ತಾನೆ. ಅದಕ್ಕೆ ಆತ ಕೊಡುವ ಕಾರಣ, 'ನಾಯಕನಿಗೆ ರಾಜನಿಗೆ ತಕ್ಕುದಾದ ರಾಜ್ಯ, ರಾಜಸಭೆ ಮತ್ತು ರಾಜಲಕ್ಷಣಗಳಿರಲಿಲ್ಲ ಎಂಬುದು. 


Write you from ikkeri, The Royal city and seat of venkatappa Nayaka ……….. being he hath in effect neither State, Court nor appearance, befitting a true king.ಇದಕ್ಕೂ ಮೊದಲು ಆತ ಹೊನ್ನಾವರದಲ್ಲಿದ್ದಾಗಲೇ, ವೆಂಕಟಪ್ಪ ನಾಯಕನ ಎರಡನೆಯ ಪತ್ನಿ ಭದ್ರಮ್ಮನ ಕುರಿತು ಬರೆಯುತ್ತಾನೆ. ನಾಯಕ, ಮುಸ್ಲಿಂ ಹೆಣ್ಣೊಬ್ಬಳ ಜೊತೆ ವಿವಾಹೇತರ ಸಂಪರ್ಕ ಇರಿಸಿಕೊಂಡಿದ್ದನ್ನು ತಿಳಿದ ಭದ್ರಮ್ಮ, 'ಲಿಂಗವಂತರಲ್ಲೇ ಯಾರನ್ನಾದರೂ ಇಟ್ಟುಕೊಂಡಿದ್ದರೆ ಬೇಸರವಿರಲಿಲ್ಲ, ಮಾಂಸ ತಿನ್ನುವ ಮಹಮ್ಮದೀಯ ಹೆಂಗಸನ್ನು ಇಟ್ಟುಕೊಳ್ಳುವುದನ್ನು ಒಪ್ಪಲಾರೆ' ಎಂದು ನಾಯಕನಿಗೆ ಹೇಳಿ, ಅವನೊಡನೆ ತಂದೆ ಮಗಳ ಸಂಬಂಧದಂತೆ ಇದ್ದಳೆಂದು, ಮಲಗುವ ಕೋಣೆಯ ಕಿಟಕಿಯಿಂದ ಇಣುಕಿ ಅವರ ಸಂವಾದವನ್ನು ಕಣ್ಣಾರೆ ಕಂಡವನಂತೆ, ಅನ್ಯರ ವೈಯಕ್ತಿಕ ಬದುಕಿನ ಪರಿಧಿಯ ಒಳಗೆ ಪ್ರವೇಶಿಸುವ ತನ್ನ ದುಷ್ಟ ಪ್ರವೃತ್ತಿಯನ್ನು ತೋರಿಸಿ, ಭಾರತೀಯರಿಗೆ ಚಾರಿತ್ರ್ಯಕ್ಕಿಂತ ಜಾತಿ, ಧರ್ಮ ದೊಡ್ಡದೆಂಬಂತೆ ಚಿತ್ರಿಸುತ್ತಾನೆ. 


2. ರಾಣಿ ಚೆನ್ನಭೈರಾದೇವಿ ಕುರಿತು ಆತ ಬರೆದದ್ದನ್ನು ನೋಡಿದರೆ ಆತನ ಪೂರ್ವಗ್ರಹ ಮತ್ತು ಮಾನಸಿಕ ವಿಕೃತಿ ಸ್ಪಷ್ಟವಾಗಿ ಅರ್ಥವಾಗುತ್ತದೆ. ಆತ ಭಾರತೀಯ ಪರಂಪರೆ, ಧರ್ಮ, ಸಾಮಾಜಿಕ ಬಹುರೂಪತೆ ಅಥವಾ ಅನನ್ಯತೆಗಳನ್ನು ಬದಿಗಿಟ್ಟು ಇಲ್ಲಿಯ ಜಾತಿಭೇದದಂತಹ ಅನಿಷ್ಟಗಳ ಬಗ್ಗೆ ಮಾತ್ರ ಅಗತ್ಯಕ್ಕಿಂತ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತದೆ. ಅನಗತ್ಯವಾಗಿ ಇಲ್ಲಿನ ಕೆಳವರ್ಗದವರ ಕುರಿತು ಕೀಳು ನುಡಿಗಳನ್ನು ಆಡುತ್ತಾನೆ. ರಾಣಿಯು ಒಬ್ಬ ಅಪರಿಚಿತ ಕ್ಷುದ್ರ ಮನುಷ್ಯನನ್ನು ಪ್ರೀತಿಸಿದ್ದಳೆನ್ನುತ್ತ, ಅವಳು ಆತನ ಪೌರುಷಕ್ಕೆ ತನ್ನನ್ನೂ, ತನ್ನ ರಾಜ್ಯವನ್ನೂ ಅರ್ಪಿಸಿಕೊಂಡಿದ್ದಳೆಂದು ಬರೆಯುತ್ತಾನೆ. ಈ ಕಾರಣಕ್ಕಾಗಿ ಪ್ರಜೆಗಳು ಅವಳನ್ನು ದೂಷಿಸಿದರು ಎನ್ನುತ್ತ, 'ಭಾರತೀಯ ರಾಜ ವನಿತೆಯರು ತಮಗೆ ಇಷ್ಟ ಬಂದ ಒಂದಕ್ಕಿಂತ ಹೆಚ್ಚು ಪುರುಷರನ್ನು ಆಯ್ದುಕೊಳ್ಳುವುದನ್ನು ಸಮಾಜ ಒಪ್ಪುತ್ತಿತ್ತು' ಎಂದು ಬರೆಯುತ್ತಾನೆ! ಜೊತೆಜೊತೆಗೆ 'ದಾಂಪತ್ಯದ ವಿಷಯದಲ್ಲಿ ಭಾರತೀಯರು ಶುದ್ಧತೆಗೆ ಮಹತ್ವ ಕೊಡುವವರು' ಎಂಬ ವಿರೋಧಾಭಾಸದ ಮಾತನ್ನೂ ಆಡುತ್ತಾನೆ. ರಾಣಿ ಇಷ್ಟಪಟ್ಟ ಮನುಷ್ಯ, ಅವನ ರಕ್ತದಷ್ಟೇ ಕೀಳಾಗಿದ್ದು ಅವನು ತನ್ನ ರಕ್ತಕ್ಕೆ ತಕ್ಕುದಾಗಿ ರಾಣಿಗೆ ವಂಚಿಸಿದ' ಎಂದೆಲ್ಲ ಕೆಳಜಾತಿಯನ್ನು ಹಂಗಿಸುತ್ತಾನೆ. ಕೊನೆಗೆ ನಾಯಕನ ಆಕ್ರಮಣದಿಂದ ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದ ರಾಣಿ ಪೋರ್ಚುಗೀಸರಿಗೆ ತನ್ನನ್ನು ಬಿಡಿಸಿದರೆ ತನ್ನ ರಾಜ್ಯವನ್ನು ನಿಮಗೆ ಅರ್ಪಿಸುತ್ತೇನೆ ಎಂದಳೆಂದು ಅಬದ್ಧ ಬರೆಯುತ್ತಾನೆ. ಅವನ ಅಂತರಾಳದಲ್ಲಿ ಭಾರತವೊಂದು ಅಪ್ರಬುದ್ಧ, ಅನಾಗರಿಕ ದೇಶವೆಂಬ ಭಾವ ಆಳವಾಗಿ ಬೇರೂರಿತ್ತು. ಅವನಿಗೆ ಈ ಅದ್ಭುತ ನೆಲ ಮತ್ತು ವಿಶಿಷ್ಟ ಪರಂಪರೆಯ ವಿರಾಡ್ರೂಪವನ್ನು ಕಾಣಲು ಬೇಕಾದ ಕಣ್ಣುಗಳು ಇರಲಿಲ್ಲ. ಆತ ರೋಮನ್ ಕ್ಯಾಥೋಲಿಕ್ ದೃಷ್ಟಿಯಿಂದಷ್ಟೇ ಪೌರಾತ್ಯರ ಬದುಕನ್ನು ನೋಡಲು ಬಂದವನಾಗಿದ್ದ. ಹಾಗಾಗಿ ಆತನಿಗೆ ಇಲ್ಲಿಯ ಹೆಣ್ಣುಮಗಳೊಬ್ಬಳು ಐವತ್ತು ವರ್ಷಗಳಿಗೂ ಮಿಕ್ಕು ಆಡಳಿತ ನಡೆಸಿದ್ದನ್ನು, ಅವಳ ರಾಜ್ಯ ಇಟಲಿಗಿಂತ ಶ್ರೀಮಂತವಾಗಿದ್ದನ್ನು, ಅವಳು ಪೋರ್ಚುಗೀಸರಿಗಿಂತ ಬಲಾಡ್ಯಳೆಂಬುದನ್ನು ಸಹಿಸಿಕೊಳ್ಳಲಾಗಲಿಲ್ಲ. ಅದರಲ್ಲೂ ಶ್ವೇತವರ್ಣದ ರಾಣಿ ಎಲಿಜಬೆತ್ತಳ ಸಮಕಾಲೀನಳಾಗಿ ಅವಳಿಗೆ ಸರಿಮಿಗಿಲಾಗಿ, ಅವಳಿಗಿಂತ ದೀರ್ಘಕಾಲ ಕಪ್ಪುಬಣ್ಣದ ಪಾಗನ್ ಹೆಂಗಸೊಬ್ಬಳು ರಾಜ್ಯವಾಳಿದ್ದನ್ನು ಒಪ್ಪಿಕೊಳ್ಳಲಾಗಲೇ ಇಲ್ಲ. 


' The last Queen of Garsopa fell in Love with a mean Man and a stranger, into whose power she resign'd herself, together with her whole kingdom. In which act, setting aside her choosing a Lover of base blood, upon which account she was blam'd and hated by the Indians (whore most rigorous observers of Nobility and maintainers of the dignity of their ancestors in all points) as to giving herself up as a prey to her lover, she committed no fault against her honor ; for in these Countries 'tis lawful for such Queens to choose to themselves Lovers or Husbands, one or more, according as they please. But this Man who was so favor'd by the Queen of Garsopa, having thoughts as ignoble as his blood, in stead of corresponding with grati-tude to the Queen's courtesie, design'd to rebell against her and take the kingdom from her; which design for a while he executed, having in process of time gain'd the affection of most of her most eminent vassals. The Queen, seeing her self oppress'd by the Traytor, had recourse to the Portugals, offering them her whole State on condition they would free her from imminent ruine……..'


ಆತ ಇಕ್ಕೇರಿಯಲ್ಲಿ ಉಳಿದದ್ದು ಕೇವಲ ಹದಿನೆಂಟು ದಿನ. ಅಷ್ಟರೊಳಗೆ ಸತಿಪದ್ದತಿಯಂತಹ ಹಲವು ಸಾಮಾಜಿಕ ಅನಿಷ್ಟಗಳ ಜೊತೆಗೆ ಆತನಿಗೆ ನಾಯಕನ ವಿವಾಹೇತರ ಸಂಬಂಧ, ಭದ್ರಮ್ಮನ ಅಸಹನೆ, ಚೆನ್ನಭೈರಾದೇವಿಯ ಸಂಬಂಧಗಳ ಕುರಿತೆಲ್ಲ ತಿಳಿಯುತ್ತದೆ! 


ಆತ ಬಂದದ್ದು ಚೆನ್ನಭೈರಾದೇವಿ ಸತ್ತು ಹದಿನೇಳು ವರ್ಷಗಳ ನಂತರ. ಅಷ್ಟು ಕಾಲದ ನಂತರ ಅವನಿಗೆ ತೀರಿ ಹೋದ ಪಕ್ಕದ ರಾಜ್ಯದ ರಾಣಿಯೊಬ್ಬಳ ವೈಯಕ್ತಿಕ ಬದುಕಿನ ಮಾಹಿತಿಗಳು ಅವನಿಗೆ  ಸಿಗಲು ಹೇಗೆ ಸಾಧ್ಯ? ಅದರ ಬಗ್ಗೆ ಅವನಿಗೆ ಯಾರು ವಿವರ ನೀಡಿದ್ದಾರು? ಅದು ಈಗಿನಂತೆ ಬರೆದಿಟ್ಟ ದಾಖಲೆಗಳಿರುವ ಕಾಲವಲ್ಲ. ಇನ್ನು ಯಾರೋ ಹೇಳಿದರೆನ್ನಲು ಭಾಷೆಯ ಸಮಸ್ಯೆ. ದುಭಾಷಿಯ ಮೂಲಕ ಸಂಭಾಷಿಸಿರಬಹುದೆಂದರೂ ಆತ ನಾಯಕನ ಅತಿಥಿಯಾಗಿದ್ದ ಕಾರಣ ಸಾಮಾನ್ಯರು ಹೇಳಲು ಸಾಧ್ಯವೇ? ಅದು ಅವಳ ಆ ರಾಜ್ಯದವಳೂ ಅಲ್ಲ. ಹಾಗಿದ್ದೂ ಚೆನ್ನಭೈರಾದೇವಿಯ ಕುರಿತು ಅವನು ವಿನಾಕಾರಣ ಉಲ್ಲೇಖಿಸಿದ್ದನ್ನು ಗಮನಿಸಿದರೆ, ಅವನಿಗೆ ಹಾಗೆ ಬರೆಯಲು ನಾಯಕನ ಕಡೆಯವರಾರೋ ಸೂಚಿಸಿರಬೇಕು. ತಾವು ಮೋಸದಿಂದ ಸೆರೆಹಿಡಿದು, ತಮ್ಮ ಸೆರೆಮನೆಯಲ್ಲಿ ಪ್ರಾಣ ತ್ಯಜಿಸಿದ ವೃದ್ಧರಾಣಿಯ ಕುರಿತಾಗಲೀ, ತಾವು ರಾಜ್ಯ ಕೊಡುವ ಆಮಿಷ ತೋರಿಸಿ ಲಾಭ ಪಡೆದು, ಕೊನೆಗೆ ಅತ್ಯಂತ ಕ್ರೂರವಾಗಿ ಹತ್ಯೆಗೈದ ಗೊಂಡನ ಕುರಿತಾಗಲೀ ನಾಯಕರ ಕಡೆಯವರು ಸತ್ಯವನ್ನು ಹೇಳಲು ಸಾಧ್ಯವೇ? ತಮ್ಮ ಕೀರ್ತಿ ಮುಕ್ಕಾಗದಂತೆ, ರಾಣಿಯ ಅನೈತಿಕ ಸಂಪರ್ಕದ ಕತೆಕಟ್ಟಿ ಯಾರ ಮೂಲಕವೋ ಹೇಳಿಸಿರಬೇಕು ಇಲ್ಲವೇ ಡೆಲ್ಲಾವಲ್ಲೆ ತನ್ನ ಕಿವಿಗೆ ಬಿದ್ದ ವದಂತಿಯೊಂದನ್ನು ರೋಚಕವಾಗಿ ಚಿತ್ರಿಸಿರಬೇಕು. ಮೊದಲೇ ಪ್ರೇಯಸಿಯ ವಂಚನೆಯಿಂದ ಹತಾಶನಾಗಿ ಮಾನಸಿಕ ಸಮತೋಲನ ಕಳೆದುಕೊಂಡಿದ್ದವ. ಸುಳ್ಳು ಹೇಳಿ ಹೆಂಡತಿಯ ಪಾರ್ಥಿವ ಶರೀರವನ್ನು ಜೊತೆಯಲ್ಲಿಟ್ಟುಕೊಂಡು ಬಂದ ವಿಕ್ಷಿಪ್ತ ವ್ಯಕ್ತಿ. ಅತ್ತ ರೋಮನ್ ಕ್ಯಾಥೋಲಿಕ್ ಧರ್ಮದ ಶ್ರೇಷ್ಠತೆಯ ವ್ಯಸನ, ಇತ್ತ ಪಾಗನ್ನರ ಮೇಲಿನ ಅಸಹನೆ. ಹಾಗಾಗಿ ಅವನ ವಿಕೃತ ಮನಸ್ಸಿಗೆ ನೈತಿಕತೆಗಿಂತ ಅನೈತಿಕತೆಯೇ ರುಚಿ ಎನ್ನಿಸಿದ್ದರಲ್ಲಿ, ರಾಣಿಯ ಗುಣಕ್ಕಿಂತ ಅವಗುಣ ದೊಡ್ಡದಾಗಿ ಕಾಣಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. 

3. ಡೆಲ್ಲಾವಲ್ಲೆ ಅದೆಷ್ಟು ವಿಕ್ಷಿಪ್ತ ಮನಃಸ್ಥಿತಿಯವನು ಮತ್ತು ಧರ್ಮಾಂಧನೆನ್ನಲು ರಾಣಿ ಅಬ್ಬಕ್ಕನ ಭೇಟಿಗೆಂದು ಉಲ್ಲಾಳಕ್ಕೆ ಹೋಗುವಾಗ, ತನ್ನ ( ಬ್ರಾಹ್ಮಣ ) ದುಭಾಷಿಯ ಶ್ರದ್ಧೆಯನ್ನು ಕೆಡಿಸಲು, ಸ್ಥಳೀಯರು ಆರಾಧಿಸುತ್ತಿದ್ದ ಒಂದು ಭೂತದ ವಿಗ್ರಹದ ಮುಖಕ್ಕೆ ಉಗಿದು, ಅದು ತನಗೇನೂ ಮಾಡಲಿಲ್ಲವೆಂದು ಜಂಭ ಕೊಚ್ಚಿಕೊಂಡು, ದುಭಾಷಿಗೆ, 'ನಿಮ್ಮ ನಂಬಿಕೆ ವಿಶ್ವಾಸಗಳು ಅರ್ಥಹೀನ, ನೋಡು ನಿನ್ನ ದೇವರ ಮುಖಕ್ಕೆ ಉಗಿದರೂ ಅವನಿಗೆ ನನ್ನನ್ನೇನೂ ಮಾಡಲಾಗಲಿಲ್ಲ' ಎಂದು ಹೇಳಿ, ಭಾರತೀಯರ ಶ್ರದ್ಧೆ ಮತ್ತು ನಂಬಿಕೆಗಳ ಅವಹೇಳನಗೈಯ್ಯುತ್ತಾನೆ. ಮುಂದೆ ಆತ ರಾಣಿ ಅಬ್ಬಕ್ಕನನ್ನು ವರ್ಣಿಸಿದ್ದು ಹೀಗೆ:
4: 'Her Complexion was as black as that of a natural Ethiopian ; she was corpulent and gross, but not heavy, for she seem'd to walk nimbly enough ; her Age may be about forty years, although the Portugals had describ'd her to me as much older. She was cloth'd, or rather girded at the waist, with a plain piece of thick white Cotton, and bare-foot, …..From the waist upwards the Queen was naked, saving that she had a cloth ty'd round about her Head, and hanging a little down upon her Breast and Shoulders. In brief, her aspect and habit represented rather a dirty Kitchen-wench, or Laundress, than a delicate and noble Queen "

ಅವಳ ಬಣ್ಣ ಮೂಲ ಇತಿಯೋಪಿಯಾ ದೇಶದವರಷ್ಟು ಕಪ್ಪಗಿತ್ತಂತೆ! ಚುರುಕು ನಡೆಯಿದ್ದರೂ ಅವಳು ದಢೂತಿ ಮತ್ತು ಅಸಹ್ಯಕರವಾಗಿದ್ದಳಂತೆ! ಎದೆಯವರೆಗೂ ಇಳಿಬಿಟ್ಟ ತಲೆಗೆ ಸುತ್ತಿದ ವಸ್ತ್ರ ಬಿಟ್ಟರೆ ರಾಣಿ ಅಬ್ಬಕ್ಕ ಸೊಂಟದ ಮೇಲ್ಭಾಗದಲ್ಲಿ ಬೆತ್ತಲಾಗಿದ್ದಳಂತೆ?! ಪೋರ್ಚುಗೀಸರು ಆತನಿಗೆ ಹೇಳಿದ್ದಕ್ಕಿಂತ ಆಕೆ ಚಿಕ್ಕವಯಸ್ಸಿನವಳಾಗಿ ಕಾಣಿಸಿದಳಂತೆ! ಅವಳು ಘನತೆವೆತ್ತ ಸುಸಂಸ್ಕೃತ ರಾಣಿಯಂತೆ ಕಾಣದೆ ಕೊಳಕು ಅಡುಗೆಯವಳಂತೆ ಅಥವಾ ಅಗಸಗಿತ್ತಿಯಂತೆ ಕಾಣುತ್ತಿದ್ದಳಂತೆ!'
ಡೆಲ್ಲಾವಿಲ್ಲೆ ಇಕ್ಕೇರಿ ನಾಯಕನಿಂದ ಹಿಡಿದು ಅಬ್ಬಕ್ಕನವರೆಗೆ ನಮ್ಮವರ ಕುರಿತು ಹೀಗೆಲ್ಲ ಬರೆಯಲು ಮುಖ್ಯ ಕಾರಣವೆಂದರೆ, ವಿದೇಶದಿಂದ ಬರುತ್ತಿದ್ದ ಅವನಂತಹ ಪ್ರವಾಸಿಗಳಿಗೆ ಇಲ್ಲಿಯ ಸಂಗತಿಗಳನ್ನು ರಂಜಕವಾಗಿ, ರೋಚಕವಾಗಿ ಬರೆದು, ಕೃತಿಯನ್ನು ಯುರೋಪಿನಲ್ಲಿ ಜನಪ್ರಿಯಗೊಳಿಸಿ ತಮ್ಮ ಹೆಸರನ್ನು ಅಕ್ಷರ ಲೋಕದಲ್ಲಿ‌ ಅಜರಾಮರಗೊಳಿಸಿಕೊಳ್ಳುವ ಚಾಪಲ್ಯ. ಹಾಗಾಗಿ ಅವರಿಗೆ ಋಜುತ್ವಕ್ಕಿಂತ ರಾಕ್ಷಸಿ ಕೃತ್ಯಗಳು, ಸತ್ಯಕತೆಗಳಿಗಿಂತ ಅನೈತಿಕ ಕಥನಗಳು, ಅಸಮಾನತೆ, ಅಧರ್ಮ, ಅನಿಷ್ಟ, ಅಪಸವ್ಯಗಳಲ್ಲೇ ಆಸಕ್ತಿ. ದುರದೃಷ್ಟವೆಂದರೆ ಇಂತಹ ವಿಕೃತ ಮನಃಸ್ಥಿತಿಯವರು ಬರೆದ ಅಸಂಬದ್ದ ಪ್ರಲಾಪಗಳು ನಮ್ಮ ಚರಿತ್ರೆಯ ಆಕರಗಳಾಗಲು ನಮ್ಮ ಇತಿಹಾಸಕಾರರ ಮೌನ ಕಾರಣ. ಪ್ರಾಯಶಃ ನಮ್ಮ ಹಲವು ಇತಿಹಾಸಕಾರರಿಗೂ ಶರಾವತಿ ಕಣಿವೆಯಂತಹ ಕಗ್ಗಾಡು ಪ್ರದೇಶದಲ್ಲಿ ಚೆನ್ನಭೈರಾದೇವಿಯಂತಹ ಮಹಾರಾಣಿಯೊಬ್ಬಳ ಅಸ್ತಿತ್ವ ನಂಬಲಾಗದ ಅಚ್ಚರಿಯಾಗಿ ಕಾಣಿಸಿರಬೇಕು. 


ಒಬ್ಬ ಅವಿವಾಹಿತ ಜೈನ ಹಳ್ಳಿ ಹೆಂಗಸು ಪರಂಗಿಗಳನ್ನು ಗೆದ್ದಳೇ? ಅನರ್ಘ್ಯ ಸಂಪತ್ತನ್ನು ಗಳಿಸಿದಳೇ? ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದಳೇ? ನಂಬಲಾಗಲಿಲ್ಲ ಅವರಿಗೆ. ಎಲ್ಲಿದೆ ಆಧಾರ? ಎಲ್ಲಿದೆ ಶಾಸನ ಎಂದು ತಡಕಾಡಿದರು. ಆಧಾರಕ್ಕಾಗಿ ತಹತಹಿಸುತ್ತಿದ್ದವರಿಗೆ ಸಿಕ್ಕಿಬಿಟ್ಟಿತು, ಡೆಲ್ಲಾವಲ್ಲೆಯ ವಿಕೃತ ಬರಹ. ತಾವೂ ಅದನ್ನೇ ಆಧರಿಸಿ ಬರೆದಿಳಿಸಿದರು ಪುಟಗಟ್ಟಲೆ. ಅವನು ಬರೆದದ್ದು ಸತ್ಯವೇ? ಅವನಿಗೆಲ್ಲಿತ್ತು ಆಧಾರ? ತನ್ನ ಹೇಳಿಕೆಗೆ ಅವನು ಆಕರಗಳನ್ನು ಉಲ್ಲೇಖಿಸಿರುವನೇ? ವರ್ಷಾರು ತಿಂಗಳು ರಾಜ್ಯದಲ್ಲಿ ಸಂಚರಿಸಿ ಮಾಹಿತಿ ಸಂಗ್ರಹಿಸಿದ್ದನೇ? ಅವಳ ರಾಜ್ಯದ  ಜನರನ್ನು ಸಂಪರ್ಕಿಸಿದ್ದನೇ? ಆಕೆಯನ್ನು ಜನ ಆರಾಧಿಸಲು ಕಾರಣವೇನೆಂದು ಕೇಳಿದನೇ?  ಆ ಕಾಲದ ಕಾವ್ಯ ಶಾಸನ, ಐತಿಹ್ಯಗಳ ಅಧ್ಯಯನ ನಡೆಸಿದ್ದನೇ? ಅಲ್ಲಿಯ ಭಾಷೆ, ಸಂಸ್ಕೃತಿ, ಜೀವನ ಪದ್ದತಿಗಳನ್ನು ಅಭ್ಯಾಸ ಮಾಡಿದ್ದನೇ? ಯಾರೂ ಪ್ರಶ್ನಿಸಲಿಲ್ಲ. ಯಾರೋ ಹೇಳಿದ ಊಹಾಪೋಹಕ್ಕೆ ತನ್ನ ಪೂರ್ವಗ್ರಹ ಬೆರೆಸಿ ರೋಚಕವಾಗಿ ಕಟ್ಟಿದ್ದ ಕತೆಯನ್ನೇ ಕೆಂಪಚರ್ಮ ಕೆಂಚು ಕೂದಲಿಗೆ ಬೆರಗಾಗಿ ಶ್ರದ್ಧೆಯಿಂದ ನಂಬಿದರು. ಕನಿಷ್ಠ ರಾಣಿಯ ಹೆಸರನ್ನು ಉಲ್ಲೇಖಿಸುವಷ್ಟೂ ಸೌಜನ್ಯವಿಲ್ಲದ, ತನ್ನ ಧರ್ಮಶ್ರೇಷ್ಠತೆಯ ವ್ಯಸನದಲ್ಲೇ ಮುಳುಗಿದ್ದ, ಆಗಾಗ ಚಿತ್ತಸ್ವಾಸ್ಥ್ಯ ಕಳೆದುಕೊಳ್ಳುತ್ತಿದ್ದ, ಪೋಪನ ಎದುರೇ ನಿರಪರಾಧೀ ವ್ಯಕ್ತಿಯೊಬ್ಬನನ್ನು ವಿನಾಕಾರಣ ಇರಿದು ಸಾಯಿಸುವಷ್ಟು ದುಡುಕು ಸ್ವಭಾವದ, ಪುರುಷ ಪಕ್ಷಪಾತಿ ಮನಃಸ್ಥಿತಿಯ,  ವಿದೇಶೀ ವ್ಯಕ್ತಿಯ ಬರಹವೇ ನಮ್ಮವರಿಗೆ ಆಕರವಾದದ್ದು ನಮ್ಮ ಚರಿತ್ರೆಯ ದೌರ್ಭಾಗ್ಯ. ಅವನನ್ನು ಬಿಟ್ಟರೆ ಅಥವಾ ಅವನ ಬರಹವನ್ನೇ ಆಧರಿಸಿ ಬರೆದವರ ದಾಖಲೆ ಬಿಟ್ಟರೆ ಎಲ್ಲಿದೆ ಈ ಅಪಸವ್ಯಕ್ಕೆ ಸಾಕ್ಷ್ಯ? ಯಾರೂ ಪ್ರಶ್ನಿಸಲಿಲ್ಲ, ಅಧ್ಯಯನಕ್ಕಿಳಿಯಲೂ ಇಲ್ಲ. ಪರಿಣಾಮವಾಗಿ ವಸ್ತುನಿಷ್ಠ ಚರಿತ್ರೆಗಿಂತ ವಸಾಹತುಶಾಹಿ ಸೈದ್ಧಾಂತಿಕತೆಗೆ ಹೆಚ್ಚು ಒತ್ತು ದೊರೆತು ನಮ್ಮ ಇತಿಹಾಸದ ಮೂಲಸ್ವರೂಪವೇ ವಿರೂಪಗೊಂಡಿತು. ದೇಶೀಯ ಚರಿತ್ರೆಯ ಕುರಿತು ಅನಾದರ, ಅಗೌರವ ಅಸಡ್ಡೆ ಮತ್ತು ಅವಜ್ಞೆ ಹೆಚ್ಚಾಯಿತು.
ಹಾಗೆಂದು ಅವಳನ್ನು ಹೊಗಳಿ ಬರೆದ ವಿದೇಶೀಯರು ಇಲ್ಲವೆಂದಲ್ಲ.  ಚೆನ್ನಭೈರಾದೇವಿ 1569-70ರಲ್ಲಿ ಪೋರ್ಚುಗೀಸರನ್ನು ಕೆಚ್ಚೆದೆಯಿಂದ ಎದುರಿಸಿ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದಳೆಂದು ಪೋರ್ಚುಗೀಸ್ ಇತಿಹಾಸಕಾರ ಫೆರಿಯಾ ಡಿಸೌಜ  ತಿಳಿಸಿದ್ದಾನೆ. ಸೀಜರ್ ಫೆಡ್ರಿಕ್ಕನು ರಕ್ಕಸತಂಗಡಿ ಯುದ್ಧದ ಪರಿಣಾಮವಾಗಿ  ಉತ್ತರ ಕನ್ನಡದ ಕರಾವಳಿಯಲ್ಲಿ ಉಂಟಾದ ರಾಜಕೀಯ ಬದಲಾವಣೆ  ಮತ್ತು ಚೆನ್ನಭೈರಾದೇವಿಯ  ರಾಜ್ಯದ ವಿಸ್ತಾರ ಮತ್ತು ವೈಭವಗಳ ಕುರಿತು ಉಲ್ಲೇಖಿಸಿದ್ದಾನೆ.  ಡೊಂಡು ಅರೆಟೆಮೀನೆಜಿಸನೆಂಬುವವನು  ಮತ್ತು ಡಚ್ ಪ್ರವಾಸಿ ಲಿನ್ಸಕೋಸ್ಟನ್  ಕೂಡ ಚೆನ್ನಭೈರಾದೇವಿಯನ್ನು ಶ್ಲಾಘಿಸಿದ್ದಾರೆ. ಅವರ ಪ್ರಕಾರ  ಹೊನ್ನಾವರ ಮತ್ತು ಭಟ್ಕಳಗಳ ರೇವುಗಳಲ್ಲಿ ಕರಿಮೆಣಸಿನ ವ್ಯವಹಾರದ ವೈಭವ ಎಷ್ಟಿತ್ತೆಂದರೆ ಪೋರ್ಚುಗೀಸರು ಆರು ತಿಂಗಳ ಮೊದಲೇ  ಚೆನ್ನಭೈರಾದೇವಿಗೆ ಮುಂಗಡ ಹಣವನ್ನು ಕೊಟ್ಟು ತಮ್ಮ  ವ್ಯಾಪಾರದ ಕರಾರುಗಳನ್ನು ಖಚಿತಪಡಿಸಿಕೊಳ್ಳುತ್ತಿದ್ದರಂತೆ. 1584ರ ತನ್ನ ವರದಿಯೊಂದರಲ್ಲಿ ದೋ ಆರ್ತೆ ಮಿನೀಜ್ ಹಿಂದೆ ಉತ್ತರ ಕನ್ನಡದ ( ನಗಿರೆ ರಾಜ್ಯದ ) ಭಾಗವಾಗಿದ್ದ ಈಗ ಗೋವೆ ರಾಜ್ಯಕ್ಕೆ ಸೇರಿಹೋಗಿರುವ ಬೈಚಲಿಯಂ, ಕಾನಕೋನ, ಕೆಪೋರಾಮಸಗಳ ಭೂಮಿಯ ವರ್ಗೀಕರಣದ ರೀತಿ ಮತ್ತು ಅವುಗಳ ಆಧಾರದ ಮೇಲೆ ನಡೆದಿದ್ದ ಭತ್ತ ಮತ್ತು ಇತರ ಧಾನ್ಯಗಳ ಬೆಳೆ ಮತ್ತು ಗೇಣಿ ಪದ್ದತಿಯ ವರ್ಣನೆ ಇದೆ. ಆದರೆ ಇವರಲ್ಲಿ ಯಾರೂ  ಚೆನ್ನಭೈರಾದೇವಿಯ ಕುರಿತು ಅನೈತಿಕತೆಯ ಕತೆಯನ್ನು ಕಟ್ಟಲಿಲ್ಲ. ಆದರೆ ನಮ್ಮವರಿಗೆ ಯಾಕೋ ಇವರ ಸಪ್ಪೆ ಉಲ್ಲೇಖಗಳಿಗಿಂತ ಡೆಲ್ಲಾವಲ್ಲೆಯ ರಂಜನೀಯ ಉಲ್ಲೇಖ ಮುಖ್ಯವೆನ್ನಿಸಿತು.
ಇಷ್ಟಕ್ಕೂ ಆಕೆಗೆ ಹೀಗೊಂದು ಸಂಬಂಧವಿರಲೇ ಇಲ್ಲವೆಂದು ವಾದಿಸುವುದು ಖಂಡಿತ ನನ್ನ ಉದ್ದೇಶವಲ್ಲ.‌ ಇದ್ದುದಕ್ಕೆ ಆಧಾರವೆಲ್ಲಿದೆ ಎಂಬುದಷ್ಟೇ ನನ್ನ ಪ್ರಶ್ನೆ. ಒಂದು ವೇಳೆ ಅಂತದ್ದೊಂದು ಸಂಬಂಧಕ್ಕೇ ಆಧಾರವೇ ಇದ್ದರೂ ಆಕೆಯ ಇತರ ಸಾಧನೆಗಳ ಎದುರು ಅದು ಮುಂಚೂಣಿಗೆ ಬರಬೇಕಾದ ವಿಷಯವೇ ಆಗಿರಲಿಲ್ಲ. ಹಾಗೆ ನೋಡಿದರೆ, ನಮ್ಮ ರಾಜಮಹಾರಾಜರು ಎಷ್ಟೊಂದು ಹೆಂಗಸರನ್ನು ಅಂತಃಪುರಕ್ಕೆ ತುಂಬಿಕೊಳ್ಳುತ್ತಿರಲಿಲ್ಲ? ಹೋಗಲಿ, ಅಂತದ್ದೊಂದು ಅನೈತಿಕ ಸಂಬಂಧ ನಿಜವಾಗಿದ್ದರೆ ಅವಳ ಆಡಳಿತದ ವಿರುದ್ದ ರಾಜ್ಯದಲ್ಲಿ ದಂಗೆಗಳಾಗುತ್ತಿರಲಿಲ್ಲವೇ? ಇಂತದ್ದೊಂದು ಹೀನ ಆಪಾದನೆ ಹೊತ್ತಿದ್ದರೆ ಐವತ್ನಾಲ್ಕು ವರ್ಷಗಳಷ್ಟು ದೀರ್ಘಕಾಲ ಪ್ರಜೆಗಳು ಅವಳನ್ನು ಒಪ್ಪಿಕೊಳ್ಳುತ್ತಿದ್ದರೇ? ಶಾಂತಿ ಮತ್ತು ನೆಮ್ಮದಿಯಿಂದ ರಾಜ್ಯಭಾರ ನಡೆಸಲಾಗುತ್ತಿತ್ತೇ? ಯಾರೂ ಪ್ರಶ್ನಿಸಲಿಲ್ಲ.
 'ರಾಣಿಯನ್ನು ಇಕ್ಕೇರಿಯ ಸೆರೆಮನೆಯಲ್ಲಿ ಗೌರವದಿಂದ ನೋಡಿಕೊಳ್ಳಲಾಯಿತು', 'ಅವಳು ಪೋರ್ಚುಗೀಸರಿಗೆ ರಾಜ್ಯವನ್ನು ಸರಂಡರ್ ಮಾಡುತ್ತೇನೆಂದು ಹೇಳಿದಳು' ಎಂದೆಲ್ಲ ಪ್ರತ್ಯಕ್ಷದರ್ಶಿಯಂತೆ ಡೆಲ್ಲಾವಲ್ಲೆ ಹೇಳುವುದಾದರೆ ಅಂದಿನ ಪೋರ್ಚುಗೀಸ್ ಅಥವಾ  ನಮ್ಮ ಇತಿಹಾಸಕಾರರು ಯಾಕೆ ಅದನ್ನು ಉಲ್ಲೇಖಿಸಲಿಲ್ಲ. 'ಕೆಳದಿ ನೃಪವಿಜಯ'ದಲ್ಲಿ ಕೂಡ ಅವಳು ಲಕ್ಷದೇಶದ ರಾಣಿಯೆಂದು ಸೊಕ್ಕಿನಿಂದ ಮೆರೆಯುತ್ತಿದ್ದಳೆಂದು ಹೇಳಲಾಗಿದೆಯೇ ಹೊರತು ಅವಳ ನೈತಿಕತೆಯನ್ನು ಅನುಮಾನಿಸುವ, ರಾಜ್ಯನಿಷ್ಠೆಯನ್ನು ಅವಮಾನಿಸುವ ಒಂದೇ ಒಂದು ಪದವೂ ಇಲ್ಲ.  ಚೆನ್ನಭೈರಾದೇವಿಯ ಬಗ್ಗೆ ಕೆಳದಿ ನೃಪವಿಜಯದ ಉಲ್ಲೇಖಿಸುವ ಕೆಲವು ವಿಷಯಗಳ ಕುರಿತು,  ಇತಿಹಾಸ ತಜ್ಞರಾದ ಡಾ ಕೆ ಜಿ ವಸಂತ ಮಾಧವರು ತಮ್ಮ ಕೃತಿ 'ಕರಾವಳಿ ಕರ್ನಾಟಕದ ರಾಜಕೀಯ ಇತಿಹಾಸ ಅಧ್ಯಯನ ಮತ್ತು ಸಂಶೋಧನೆ' ಎಂಬ  ಕೃತಿಯ ಪುಟ 123ರಲ್ಲಿ ಹೀಗೆ ಹೇಳುತ್ತಾರೆ,


 "ಕೆಳದಿಯ ದೊಡ್ಡ ಸಂಕಣ್ಣ ನಾಯಕ, 'ಘನ ಸಂಗ್ರಾಮದೆ ಭೈರಾದೇವಿಯ ಸೀಮೆಯನುರೆ ಧೂಳೀಪಟಮಂ ವಿರಚಿಸಿದಂ' ಎಂದು ಉಲ್ಲೇಖಿಸಲಾಗಿದೆ. ಈ ವಿಚಾರ ಕೇವಲ ಅತಿಶಯೋಕ್ತಿ ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ದೊಡ್ಡ ಸಂಕಣ್ಣ ನಾಯಕ ಭೈರಾದೇವಿಯ ಸೀಮೆಯನ್ನು ಧೂಳೀಪಟ ಮಾಡಿದ್ದರೆ ಅವನ ನಂತರ ಕೆಳದಿಯ ರಾಜ್ಯವನ್ನು ಆಳಿದ ಚಿಕ್ಕ ಸಂಕಣ್ಣ ನಾಯಕ ಮತ್ತು ಕೆಳದಿ ವೆಂಕಟಪ್ಪ ನಾಯಕರಿಗೆ ಭೈರಾದೇವಿಯೊಡನೆ ಪುನಃ ಘೋರ ಯುದ್ಧ ಮಾಡುವ ಪ್ರಸಂಗ ಬರುತ್ತಿರಲಿಲ್ಲ. ಆದರೆ ಈ ಅರಸರುಗಳು ಭೈರಾದೇವಿಯೊಡನೆ ಯುದ್ಧ ಮಾಡಿದ ವಿಷಯವನ್ನು ಹಲವಾರು ದಾಖಲೆಗಳು ತಿಳಿಸುತ್ತವೆ. ಈ ಸಂದರ್ಭದಲ್ಲಿ ಇ ಎಂ ಆಳ್ವಾರಸರು ವ್ಯಕ್ತಪಡಿಸಿದ ಅಭಿಪ್ರಾಯ ಹೀಗಿದೆ, 'ಇಲ್ಲಿ ಉಲ್ಲೇಖಿಸಿದ ಘನಘೋರ ಸಂಗ್ರಾಮ ಕೆಳದಿ ಅರಸರು ಮತ್ತು ಭೈರಾದೇವಿಯ ನಡುವೆ ನಡೆದ ಸಣ್ಣ ಘರ್ಷಣೆ ಆಗಿರಬೇಕು ಎನ್ನುತ್ತಾರೆ.


ಇಲ್ಲಿ ಗಮನಿಸಬೇಕಾದ ಇನ್ನೊಂದು ಸೂಕ್ಷ್ಮವೆಂದರೆ ಅದೇ ಕೆಳದಿ ನೃಪ ವಿಜಯವು  ಹಿರಿಯ ವೆಂಕಟಪ್ಪ ನಾಯಕನು ಮುಂದೆ ಚೆನ್ನಭೈರಾದೇವಿಯನ್ನು ಕೈಸೆರೆ ಹಿಡಿದ ಬಗ್ಗೆ ಹೀಗೆ ವರ್ಣಿಸುತ್ತದೆ,


"ಮಿರುಪೇಕಲಕ್ಷದೇಶದ 
ದೊರೆಮನ್ನೆಯಳೆನಿಸಿ ರೂಢಿವೆತ್ತತಿಚಲಮಂ
ಮೆರೆದಾ ಭೈರಾದೇವಿಯ 
ಗರುವಿಕೆಯ ಮುರಿದು ಧುರದೆ ಕೈಸೆರೆವಿಡಿದಂ
 ವ||
ಇಂತು ದಳವಾಯಿ ಲಿಂಗಣ್ಣನಾಯಕನಂ ಕಳುಹಿ ಕೈಸೆರೆವಿಡಿದಾವಿನಹಳ್ಳಿ, ಕರವೂರು, ಮೊರಬಿಡಿ, ಸಾಳುನಾಡು, ಭಟ್ಟಕಳ, ಗೇರುಸೊಪ್ಪೆ, ಚಂದಾವರ,ಗೋವರ್ಧನಗಿರಿ, ವಡ್ಡಿ ಮುಂತಾದಾಕೆಯಾಳ್ವ ರಾಜ್ಯ ಪರಿಸ್ತರಣಮಂ ವಶಮಾಡಿಕೊಂಡು ತದೀಯ ವಸ್ತುವಾಹನಾಂಬರಾರ್ಥಾದಿ ಸರ್ವಸ್ವಮಂ ಸ್ವಾಧೀನಂಗೈದನಂತುಮಲ್ಲದೆಯುಂ….."


ಇದರ ಪ್ರಕಾರ ಇಕ್ಕೇರಿಯಿಂದ ಕೂಗಳತೆ ದೂರದಲ್ಲಿದ್ದ ಆವಿನಹಳ್ಳಿ ಕೂಡ ಭೈರಾದೇವಿಯ ಒಡೆತನದಲ್ಲಿತ್ತು. ಅದಲ್ಲದೆ ಶರಾವತಿ ನದಿಯ ಎಡಬಲ ದಂಡೆಯ ಮೊರಬಿಡಿ, ಸೌಳನಾಡು ( ಸಾಳ್ವ ನಾಡು) ಅಂದರೆ ಇವತ್ತಿನ ನಿಟ್ಟೂರು ವರೆಗಿನ ಪ್ರದೇಶ, ಕರೂರು ಭಾರಂಗಿ, ಕಾನೂರು, ಹೊಗೆವಡ್ಡಿ ಅಂದರೆ ಇಂದಿನ ಸಾಗರ ತಾಲೂಕಿನ ಬಹುತೇಕ ಪ್ರದೇಶಗಳು ರಾಣಿಯ ಒಡೆತನದಲ್ಲೇ ಇದ್ದವು. ಈಗಲೂ ಹಿರಿಯರು ಆವಿನಹಳ್ಳಿಯ ಒಂದು ಭಾಗವನ್ನು ಸಾಗರ ಸೀಮೆ, ಇನ್ನೊಂದು ಭಾಗವನ್ನು ನಗರ ಸೀಮೆ ಎಂದು ಕರೆಯುತ್ತಾರೆ. ತಮ್ಮ ನೆರೆಯ ಆವಿನಹಳ್ಳಿಯನ್ನೂ ವಶಪಡಿಸಿಕೊಳ್ಳದಿದ್ದ  ವೆಂಕಟಪ್ಪನ ಪೂರ್ವಜರು ರಾಣಿಯ ಮೇಲೆ ನಡೆಸಿದ ಘನಘೋರ ಸಂಗ್ರಾಮ ಎಂತಹದಿದ್ದೀತು? ಸಹಜವಾಗಿ ರಾಜ್ಯ ವಿಸ್ತರಣಾಕಾಂಕ್ಷಿಗಳಾಗಿದ್ದ ಕೆಳದಿಯವರು ತಾವು ಗೆದ್ದ  ನಾಡನ್ನು ವಶಪಡಿಸಿಕೊಳ್ಳದೇ ಬಿಟ್ಟ ಉದಾಹರಣೆಗಳು ಕಡಿಮೆ. ಹೀಗಿರುವಾಗ  ಗೇರುಸೊಪ್ಪೆಯನ್ನು ಗೆದ್ದೂ  ರಾಜ್ಯವನ್ನು ವಶಪಡಿಸಿಕೊಳ್ಳಲಿಲ್ಲವೆಂಬುದು ಪ್ರಶ್ನಾರ್ಹವಲ್ಲವೇ?
           

ವೋಜಿಹೋವ್ಸ್ಕಿ ಚೆನ್ನಭೈರಾದೇವಿಯನ್ನು ಎಲಿಜಬೆತ್ತಳಿಗೆ ಹೋಲಿಸಿದ್ದೇಕೆ?


ಕ್ರಿಸ್ತಶಕ 1558ರಿಂದ 1603ರವರೆಗೆ ಒಟ್ಟು 45 ವರ್ಷಗಳ ಕಾಲ ಇಂಗ್ಲೆಂಡ್ ಮತ್ತು ಐರ್ಲೆಂಡುಗಳ ಒಡತಿಯಾಗಿದ್ದ ಒಂದನೇ ಎಲಿಜಬೆತ್ ರಾಣಿ ಮತ್ತು ಕ್ರಿಸ್ತಶಕ 1552ರಿಂದ 1606 ರವರೆಗೆ ಒಟ್ಟು 54 ವರ್ಷಗಳ ಕಾಲ ನಗಿರೆ ಮತ್ತು ಹಾಡುವಳ್ಳಿಗಳ ರಾಣಿಯಾಗಿದ್ದ ಚೆನ್ನಭೈರಾದೇವಿ ಸಮಕಾಲೀನರು ಮಾತ್ರವಲ್ಲ ಹಲವು ಸಂಗತಿಗಳಲ್ಲಿ ಸರಿಸಮಾನರು. ಇಬ್ಬರೂ ಸುದೀರ್ಘಕಾಲ ಹಲವು ವೈರುಧ್ಯಗಳ ನಡುವೆ ತಮ್ಮ ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸಿದವರು. ಎಲಿಜಬೆತ್ ಹೌಸ್ ಆಫ್ ಟುಡೊರ್ ವಂಶದ ಕೊನೆಯ ಅರಸಿಯಾದರೆ ಚೆನ್ನಭೈರಾದೇವಿ ಸಾಳುವ ವಂಶದ ಕೊನೆಯ ರಾಣಿ. ಬಾಲ್ಯದಲ್ಲಿ ಇಬ್ಬರೂ ಹಲಬಗೆಯ ವೈರುಧ್ಯಗಳನ್ನು ಕಂಡುಂಡು ಬೆಳೆದವರು. ಮುಂದೆ ಇಬ್ಬರೂ ಪ್ರಜಾನುರಾಗಿಗಳಾಗಿ ರಾಜ್ಯಭಾರ ನಡೆಸಿದವರು. ರಾಣಿ ಎಲಿಜಬೆತ್ 1588ರಲ್ಲಿ ಸ್ಪೇನಿನ ನೌಕಾಬಲವನ್ನು ಸೋಲಿಸಿದರೆ, ರಾಣಿಚೆನ್ನಭೈರಾದೇವಿ 1559ರಲ್ಲಿ ಪೋರ್ಚುಗೀಸರ ನೌಕಾಬಲವನ್ನು ಸೋಲಿಸಿದವಳು. 


ಇಬ್ಬರೂ ಸಹಜವಾಗಿ ಯುದ್ಧಾಕಾಂಕ್ಷಿಗಳಲ್ಲ. ಆದರೆ ಮೇಲೆ ಬಿದ್ದವರನ್ನು ಎದುರಿಸಲು ಹಿಂದೆಗೆದವರಲ್ಲ. ಇಬ್ಬರೂ ಅವಿವಾಹಿತರು. ಇಬ್ಬರ ಮೇಲೂ ಅನೈತಿಕ ಸಂಬಂಧದ ಆರೋಪ ಕೇಳಿ ಬಂದಿತ್ತು.
ಎಲಿಜಬೆತ್ತಳ ಜೊತೆ ಆಕೆಯ ರಾಜಬಂಧು ಎಡ್ವರ್ಡ್ ಸೀಮೋರ್ ಆಕೆಯಿನ್ನೂ ಹದಿನಾಲ್ಕರ ವಯಸ್ಸಿನಲ್ಲಿದ್ದಾಗಲೇ ಅಗತ್ಯಕ್ಕಿಂತ ಹೆಚ್ಚು ಹತ್ತಿರದಿಂದ ಒಡನಾಡುತ್ತ ಅವಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಿದ ಉಲ್ಲೇಖಗಳಿದ್ದರೆ ರಾಣಿ ಚೆನ್ನಭೈರಾದೇವಿಯನ್ನೂ ಆಕೆಯ ಸೋದರಮಾವ ಹಾಗೆ ಕಾಡಿದನೆಂದು ಹೇಳಲಾಗುತ್ತದೆ. ಎಡ್ವರ್ಡ್ ಸೀಮೋರನನ್ನು ಹತ್ತಿರ ಸೇರಿಸಲು ಆಕೆ ಅಂಜುತ್ತಿದ್ದರೆ, ಇವಳೂ ಕೃಷ್ಣದೇವರಸನಿಂದ ತಪ್ಪಿಸಿಕೊಳ್ಳಲು ಹೆಣಗುತ್ತಿದ್ದಳು. ಚೆನ್ನಭೈರಾದೇವಿ ಮತ್ತು ಎಲಿಜಬೆತ್ ಇಬ್ಬರೆದುರೂ ವಿವಾಹವಾಗಲು ಅನೇಕ ಪ್ರಸ್ತಾಪಗಳಿದ್ದವು. ಎಲಿಜಬೆತ್ತಳಿಗೆ ತನ್ನ ಬಾಲ್ಯದ ಗೆಳೆಯ ರಾಬರ್ಟ್ ಡೂಡ್ಲೆ ಜೊತೆಗೆ ದೈಹಿಕ ಸಂಬಂಧವಿತ್ತೆಂಬ ಆಪಾದನೆಯಿದ್ದರೆ ಚೆನ್ನಭೈರಾದೇವಿಗೂ ಬೆಂಗಾವಲಿನವನೊಡನೆ ಅಂತದ್ದೊಂದು ಸಂಪರ್ಕವನ್ನು ಆರೋಪಿಸಿದ್ದಾನೆ ಪ್ರವಾಸಿ ಪೀಟ್ರೋ ಡೆಲ್ಲಾವಲ್ಲೆ.
ಇಂತಹ ಹೋಲಿಕೆಗಳ ನಡುವೆ ಅವರಿಬ್ಬರನ್ನೂ ಅವರ ಸಮಾಜ ಸ್ವೀಕರಿಸಿದ್ದು ಹೇಗೆ? ವಿವಾಹಿತಳಾಗದೆ ಕೊನೆಯವರೆಗೂ ಕನ್ಯೆಯಾಗಿಯೇ ಉಳಿದ ಎಲಿಜಬೆತ್ತಳನ್ನು ಯುರೋಪಿಯನ್ ಸಮಾಜ, ದೈವತ್ವದ ಮಟ್ಟಕ್ಕೇರಿಸಿ, 'The virgin Queen' ಎಂದು ಕೊಂಡಾಡಿ ಅವಳನ್ನು ವರ್ಜಿನ್ ಮೇರಿಯಷ್ಟು ಉನ್ನತ ಸ್ಥಾನದಲ್ಲಿಟ್ಟು ಗೌರವಿಸಿತು. ಪೂಜ್ಯಭಾವದಿಂದ ಆರಾಧಿಸಿತು. ವಾಸ್ತವದಲ್ಲಿ ರಾಬರ್ಟ್ ಡೂಡ್ಲೆಯ ಮಲಗುವ ಕೊಠಡಿಯನ್ನು ತನ್ನ ಶಯ್ಯಾಗಾರದ ಪಕ್ಕದಲ್ಲೇ ವ್ಯವಸ್ಥೆಗೊಳಿಸಿಕೊಂಡಿದ್ದಳು ಮತ್ತು ಅದಾಗಿ ಒಂದು ವರ್ಷಕ್ಕೆ ಆರು ತಿಂಗಳು ಅರಮನೆಯಲ್ಲೇ ಉಳಿಯಬೇಕಾದ ಕಾಯಿಲೆಗೆ ತುತ್ತಾದಳು  ಎಂಬ ಆಪಾದನೆಯ ಜೊತೆಗೆ ಆರ್ಥರ್ ಡೂಡ್ಲೆಯೆಂಬ ಯುವಕ ತಾನು ರಾಬರ್ಟ್ ಡೂಡ್ಲೆ ಮತ್ತು ಎಲಿಜಬೆತ್ತಳ ಮಗನೆಂದು ಹೇಳಿಕೊಂಡ ಘಟನೆ ನಡೆದಿತ್ತಾದರೂ ಯುರೋಪಿಯನ್ ಸಮಾಜ ಅದನ್ನು ನಿರ್ಲಕ್ಷಿಸಿತು. ರಾಣಿಯ ಸಾಧನೆಗೆ ಅದನ್ನು ತಳಕುಹಾಕಿ ಅವಳ ಚರಿತ್ರೆಯನ್ನು ಮಸುಕಾಗಿಸಲಿಲ್ಲ. ಐತಿಹಾಸಿಕವಾಗಿ ಅವಳನ್ನು ಬದಿಗೊತ್ತಲಿಲ್ಲ. ನಮ್ಮ ಸಮಾಜವೂ ರಾಣಿ ಬದುಕಿರುವಷ್ಟು ಕಾಲ ಆಕೆಯನ್ನು ಗೌರವಭಾವದಿಂದಲೇ ನೋಡಿಕೊಂಡಿತ್ತು.  ನಂತರದ ಕಾಲದಲ್ಲೂ  ಸಾಮಾನ್ಯ ಜನರಲ್ಲಿ ರಾಣಿ ಚೆನ್ನಭೈರಾದೇವಿಯ ಕುರಿತು ಪೂಜ್ಯ ಭಾವವಿತ್ತು ಎಂಬುದಕ್ಕೆ ಗೇರುಸೊಪ್ಪೆಯಲ್ಲಿ ಈಗಲೂ ಅಸ್ತಿತ್ವದಲ್ಲಿರುವ ಚೆನ್ನಭೈರಾದೇವಿಯ ದೇವಾಲಯ ಮತ್ತು ಅವರ್ಸಿಯ ಕಾತ್ಯಾಯನಿ ದೇವತೆಯನ್ನು ಇತ್ತೀಚಿನವರೆಗೂ ಅವಳಿಂದ ಉಪಕೃತರಾದ ಸಮುದಾಯಗಳ ಜನ 'ಅವ್ವರಸಿ' ಎಂದು  ಭಕ್ತಿಯಿಂದ ಪೂಜಿಸುತ್ತಿದ್ದುದು ಇದಕ್ಕೆ ನಿದರ್ಶನ. ದೌರ್ಭಾಗ್ಯವೆಂದರೆ ಯುರೋಪಿನಿಂದ ಬಂದ ಡೆಲ್ಲಾವಲ್ಲೆ ಬರೆದ ಅನೈತಿಕ ಸಂಬಂಧದ ಆರೋಪದ ಕಾರಣದಿಂದ ಚೆನ್ನಭೈರಾದೇವಿಯನ್ನು ಚರಿತ್ರೆಯಿಂದ ಹೊರಗಿಡುವ ಪ್ರಯತ್ನ  ಗಣ್ಯ ಸಮಾಜದ ನಡುವೆ ನಡೆದದ್ದು ನಾಡಿನ ದೌರ್ಭಾಗ್ಯ. 
ಇದನ್ನೆಲ್ಲ ಗಮನಿಸಿದಾಗ ಹತ್ತೊಂಬತ್ತನೇ ಶತಮಾನದ ಫ್ರೆಂಚ್ ಇತಿಹಾಸಕಾರ ಅಲೆಕ್ಸಿಸ್ ದೆ ಟೋಕ್ವೆಲ್ಲೇ ಹೇಳುವಂತೆ "History is a gallery of pictures in which there are few originals and many copies." ಎಂಬುದು ಸತ್ಯವೆನ್ನಿಸುತ್ತದೆ. ಚರಿತ್ರೆಯ ಗ್ಯಾಲರಿಯಲ್ಲಿ ಸೇರಿಕೊಂಡ ನಕಲು ಚಿತ್ರಗಳನ್ನು ಕಿತ್ತೆಸೆದು ಅಸಲು ಚಿತ್ರಗಳನ್ನು ಮರುಸ್ಥಾಪಿಸುವ ಕಾರಣಕ್ಕಾಗಿ ಮತ್ತು ಇತಿಹಾಸದ ಘನತೆ, ಗುಣಮಟ್ಟಗಳ ಉಳಿವಿಗಾಗಿ, ಅದರ ಪುನರವಲೋಕನ ಮತ್ತು ಪುನಾರಚನೆ ಅಗತ್ಯವೆಂಬ ತಜ್ಞರ ಮಾತು ಸುಳ್ಳಲ್ಲ. ಜರ್ಮನ್ ಲೇಖಕ ಜೊಹಾನ್ ಗೊಯಟೆ ಇತಿಹಾಸಕಾರರ ಕರ್ತವ್ಯದ ಕುರಿತು, "The historian's duty is to separate the true from false, certain from the uncertain and the doubtful from that which can not be accepted'. ಎಂದು ಹೇಳಿದ್ದು ಕಾರ್ಯರೂಪಕ್ಕೆ ಬರಬೇಕಿದೆ. ಅಸಲಿ ಮತ್ತು ನಕಲಿಗಳ ವಿಂಗಡಣೆಯಾಗಬೇಕಿದೆ.  ಇಲ್ಲದಿದ್ದರೆ ಬಲಾಢ್ಯರು ಬರೆದದ್ದೇ ಚರಿತ್ರೆಯಾಗುತ್ತದೆ.  "Until the lions have their historians, tales of the hunt shall always glorify the hunter." ಸಿಂಹಗಳು ಇತಿಹಾಸ ಬರೆಯಲು ಆರಂಭಿಸುವವರೆಗೂ ಬೇಟೆಯ ಕಥನ ಬೇಟೆಗಾರನನ್ನಷ್ಟೇ ವಿಜೃಂಭಿಸುತ್ತದೆ; ದೇಶೀಯರು ಇತಿಹಾಸ ಬರೆಯಲು ಆರಂಭಿಸುವವರೆಗೂ ವಸಾಹತುಶಾಹಿಗಳ ಹುಸಿ ಕಥನಗಳೇ ವಿಜೃಂಭಿಸುತ್ತವೆ.
   

ಮತ್ತೊಮ್ಮೆ ಹೇಳುತ್ತೇನೆ, ಚೆನ್ನಭೈರಾದೇವಿಯ ಪರಿಶುದ್ಧತೆಯನ್ನು ಪ್ರತಿಪಾದಿಸುವುದು ನನ್ನ ಆಶಯವಲ್ಲ. ಹಾಗೆಯೇ ಯಾರೋ ವಿಕೃತ ಮನಸ್ಸಿನ ವ್ಯಕ್ತಿ ಆಕೆ ಪರಿಶುದ್ಧಳಲ್ಲವೆಂದು ಬರೆದಿಟ್ಟಿದ್ದಾನೆಂದು ಅದಕ್ಕೇ ಸರಿಹೊಂದುವ ಕತೆ ಕಟ್ಟುವುದೂ ನನ್ನ ಉದ್ದೇಶಲ್ಲ. ವಾಸ್ತವದಲ್ಲಿ ಅವಳ ಕುರಿತು ನಮ್ಮ ಇತಿಹಾಸದಲ್ಲಿ ಕೂಡ ಹಲವು ಗೊಂದಲಗಳಿವೆ. ಹಲವು ವಿರೋಧಾಭಾಸಗಳಿವೆ. ಅವಳು ಪಟ್ಟಕ್ಕೇರಿದ ವರ್ಷ, ಅವಳ ಸಾವಿನ ವರ್ಷ, ಅವಳ ಮದುವೆ, ಅವಳ ಕೃಷ್ಣದೇವರಸನ ಸಂಬಂಧ, ಪೋರ್ಚುಗೀಸರೊಂದಿಗಿನ ವ್ಯವಹಾರ, ವಿಜಯನಗರದೊಂದಿಗಿನ ಸಂಬಂಧ, ಬಿಳಗಿ ಕೆಳದಿಯರೊಂದಿಗಿನ ಯುದ್ಧ, ಮುಂತಾದ ಅನೇಕ ವಿಷಯಗಳ ಕುರಿತು ನಿರ್ದಿಷ್ಟ ವಿವರಗಳು ಅಲಭ್ಯ. ಹಾಗಿದ್ದೂ, ಸಹ್ಯಾದ್ರಿ ಶ್ರೇಣಿಯ ನಿಬಿಡ ಕಾನನದ ನಡುವಿನ ಕಾನೂರು, ಹಾಡುವಳ್ಳಿ, ಗೇರುಸೊಪ್ಪೆಗಳಲ್ಲಿ ಚದುರಿಬಿದ್ದ ಗತಕಾಲದ ಅವಶೇಷಗಳು, ಚತುರ್ಮುಖ ಬಸಿದಿಯಂತಹ ಅಪರೂಪದ ನಿರ್ಮಾಣಗಳು, ಬಾಲ್ಯದಲ್ಲಿ ಕೇಳಿದ ಮರೆಯಲಾಗದ ಐತಿಹ್ಯಗಳು ಮತ್ತು ಚರಿತ್ರೆಯ ಪುಟಗಳಲ್ಲಿ ದಾಖಲಾದ ಹಲವು ಐತಿಹಾಸಿಕ ಸಂಗತಿಗಳು, ಅವಳನ್ನು ಒಬ್ಬ ಸಾಧಾರಣ ಹಳ್ಳಿಹುಡುಗಿಯ ಮಟ್ಟದಿಂದ ಮೇಲೆತ್ತಿ ದೇಶವಿದೇಶದೊಂದಿಗೆ ಸಮರ್ಥವಾಗಿ ಸಂವಾದಿಸಿದ, ಒಂದು ಸಂಕೀರ್ಣ ವ್ಯಕ್ತಿತ್ವವನ್ನಾಗಿ ಕಟೆದು ನಿಲ್ಲಿಸಿವೆ. ಚೆನ್ನಭೈರಾದೇವಿಯ ಕಥನ ಕೇವಲ ರಾಣಿಯೊಬ್ಬಳ ಚರಿತ್ರೆಯಾಗದೆ, ಮನುಷ್ಯ ಜೀವನದ ಅದರಲ್ಲೂ ಹೆಣ್ಣಿನ ಬದುಕಿನ ಹಲವು  ಮಗ್ಗುಲುಗಳನ್ನು ಪರಿಚಯಿಸುವ ಕಥನವೆನ್ನಿಸಿದಾಗ ಮೂಡಿಬಂದದ್ದು ಈ ಕಾದಂಬರಿ. ಇದು ಆಕೆಯ ಚರಿತ್ರೆಯೂ ಅಲ್ಲ, ಅವಳ ಬದುಕಿನ ವಾಸ್ತವ ಚಿತ್ರಣವೂ ಅಲ್ಲ. ಇದರಲ್ಲಿ ಹಲವು ಕಲ್ಪಿತ ಪಾತ್ರಗಳಿವೆ, ಕಲ್ಪಿತ ಘಟನೆಗಳಿವೆ. ಸನ್ನಿವೇಶಗಳನ್ನು ಮತ್ತು ಪಾತ್ರಗಳನ್ನು ಆ ಕಾಲ ಮತ್ತು ಪ್ರದೇಶಕ್ಕೆ ಅನ್ವಯವಾಗುವಂತೆ, ಸಾಧ್ಯವಾದಷ್ಟೂ ಚರಿತ್ರೆಗೆ ಹತ್ತಿರವಾಗುವಂತೆ ಹೆಣೆಯಲು ಪ್ರಯತ್ನಿಸಿದ್ದೇನೆ. ಇದು ಸತ್ಯಘಟನೆಗಳ ಚುಕ್ಕಿಗಳನ್ನು ಕಲ್ಪನೆಯ ಗೆರೆಗಳ ಮೂಲಕ ಜೋಡಿಸಿದ ಚುಕ್ಕಿರಂಗೋಲಿ. ಇದಕ್ಕಾಗಿ ಹತ್ತು ಹಲವು ಊರುಗಳನ್ನು ಸುತ್ತಿ, ವ್ಯಕ್ತಿಗಳನ್ನು ಕಂಡು, ಗ್ರಂಥಗಳನ್ನು ಓದಿ, ಕೃತಿಗೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ.  2003ರಲ್ಲಿ ಹೆಗ್ಗೋಡಿನ  ಗೌರವಾನ್ವಿತ ಕೆ ವಿ ಸುಬ್ಬಣ್ಣನವರು ಪ್ರೀತಿಯಿಂದ ಪ್ರಕಟಿಸಿದ, ಕರ್ನಾಟಕದ ನೂರು ವರ್ಷಗಳ ವಿದ್ಯುತ್ ಚರಿತ್ರೆಯ ಕಥನ,  'ಬೆಳಕಾಯಿತು ಕರ್ನಾಟಕ' ಬರೆಯುವಾಗ ಸತತ ಐದು ವರ್ಷಗಳ ಕಾಲ ಆಕರಗಳಿಗಾಗಿ ಅವಿರತ ಶ್ರಮಿಸಿದ್ದೆ. ಅದರ ನಂತರ ಅದಕ್ಕಿಂತಲೂ ಹೆಚ್ಚು  ಶ್ರಮವನ್ನು  ಬೇಡಿದ ಕೃತಿ - ಈ ಕಾದಂಬರಿ. 
  

ಬೆಂಗಳೂರಿನಂತಹ ಮಹಾನಗರವಿನ್ನೂ ಕಣ್ಣುಬಿಡುತ್ತಿದ್ದ ಕಾಲದಲ್ಲೇ ಪಶ್ಚಿಮಘಟ್ಟದ ದಟ್ಟಕಾನನದ ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಬೆಳೆದು ಇಡೀ ಯುರೋಪಿನ ಕಾಳುಮೆಣಸಿನ ವ್ಯವಹಾರವನ್ನು ಮುಷ್ಟಿಯಲ್ಲಿಟ್ಟುಕೊಂಡು, ಪೋರ್ಚುಗೀಸರು ತಮ್ಮ ಸಂಪೂರ್ಣ ಸಾಮರ್ಥ್ಯದೊಂದಿಗೆ ವಿಜೃಂಭಿಸುತ್ತಿದ್ದ ಕಾಲದಲ್ಲೇ ಅವರನ್ನು ಹಿಮ್ಮೆಟ್ಟಿಸಿ, ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಪ್ರಜಾವತ್ಸಲಳಾಗಿ ರಾಜ್ಯಭಾರ ನಡೆಸಿದ ಕನ್ನಡ ನಾಡಿನ ಹೆಮ್ಮೆಯ ಮಹಿಳೆಗೆ ಇದೊಂದು ಪುಟ್ಟ ಅಕ್ಷರ ನಮನ.
      

ಈ ಕಾದಂಬರಿಯ ರಚನೆಯ ಹಿಂದೆ ಹಲವರ ಸಲಹೆ ಸಹಕಾರಗಳ ಋಣಭಾರವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕೃತಿಯ ಕುರಿತು ಅರಿಕೆ ಮಾಡಿಕೊಂಡಾಗ ಪ್ರೀತಿಯಿಂದ ಆಹ್ವಾನಿಸಿ,  ಕೃತಿಯನ್ನು ಸಂಪೂರ್ಣ ಪರಾಂಬರಿಸಿ ಜೈನಧರ್ಮದ ಆಚಾರ, ಆಚರಣೆಗಳ ಕುರಿತು ಕೃತಿಯಲ್ಲಿದ್ದ ತಪ್ಪುಗಳನ್ನು ಪರಿಷ್ಕರಿಸಲು ಸಹಕರಿಸಿ,  ತಮ್ಮ ಅಮೂಲ್ಯ ಸಮಯ ಮತ್ತು ಸಲಹೆಗಳನ್ನು ನೀಡಿದ ಶ್ರೀ ಸ್ವಾದಿ ದಿಗಂಬರ ಜೈನ ಸಂಸ್ಥಾನ ಮಠದ ಶ್ರೀಮದಭಿನವ ಭಟ್ಟಾಕಲಂಕ ಭಟ್ಟಾಚಾರ್ಯ ಶ್ರೀಗಳಿಗೆ ಕೃತಜ್ಞತಾಪೂರ್ವಕ ನಮನಗಳು. ಇದೇ ಮಠದ ಪೂರ್ವ ಪಟ್ಟಾಚಾರ್ಯರೇ ಕಾದಂಬರಿಯಲ್ಲಿ ಬರುವ ಅಕಳಂಕರು ಮತ್ತು 'ಕರ್ನಾಟಕ ಶಬ್ಧಾನುಶಾಸನ' ವ್ಯಾಕರಣ ಗ್ರಂಥ ರಚನಾಕಾರ  ಅಭಿನವ ಭಟ್ಟಾಕಲಂಕರು.  ಚೆನ್ನಭೈರಾದೇವಿಯ ಕಾಲದಲ್ಲಿ ಹಾಡುವಳ್ಳಿಯಲ್ಲಿದ್ದ  ಶ್ರೀಮಠ ಈಗ ಸ್ವಾದಿಯಲ್ಲಿ ಅಸ್ತಿತ್ವದಲ್ಲಿದೆ ಮತ್ತು ಅದೇ ಗುರು ಪರಂಪರೆ ಮುಂದುವರಿದಿದೆಯೆಂಬ ಸಂಗತಿ ನನ್ನನ್ನು ಪುಳಕಗೊಳಿಸಿತು.


- ಗಜಾನನ ಶರ್ಮ, ಹುಕ್ಕಲು.


"ಕೃತಿಯ ಆಯ್ದ ಭಾಗ"


ಗುರುಗಳು ನಾಯಕನಿಗೆ ಸೂಚಿಸಿದರೋ ಅಥವಾ ಅವನ ಮನಸ್ಸು ಪರಿವರ್ತನೆಗೊಳಪಟ್ಟಿತೋ, ಅಂತೂ ಗುರುಗಳ ಭೇಟಿಯ ನಂತರ ಭೈರಾದೇವಿ ಮತ್ತು ಶಬಲೆಯರನ್ನು ಸೆರೆಮನೆಯಿಂದ ಸ್ಥಳಾಂತರಿಸಿ ಇಕ್ಕೇರಿಯ ಕಲ್ಮನೆ ಬೀದಿಯ ಮನೆಯೊಂದರಲ್ಲಿ ಇರಿಸಲಾಯಿತು. ಆ ಮನೆಯಲ್ಲಿ ಅಡುಗೆ ಮಾಡಿಕೊಳ್ಳುವಷ್ಟು ಅಕ್ಕಿ ದಿನಸಿ ಪಾತ್ರ ಪಡಗಗಳನ್ನೂ, ಒಂದಿಷ್ಟು ಮಣೆ, ವಸ್ತ್ರ, ಚಾಪೆ ಹೊದಿಕೆಗಳನ್ನೂ ಇರಿಸಿದ್ದರು. ಬಾವಿಯಿಂದ ನೀರು ಸೇದಿಕೊಂಡು ಸ್ನಾನ ಮಾಡಲು ಅವಕಾಶವಿತ್ತು. ಮೂರು ಪಾಳಿಯಲ್ಲಿ ಒಬ್ಬೊಬ್ಬ  ಯೋಧರು ಕಾವಲು ಕಾಯುತ್ತಿದ್ದರು. 
          


ಶಬಲೆ ಅಂಗಳದಲ್ಲಿದ್ದ ನುಣುಪುಗಲ್ಲೊಂದನ್ನು ತಂದು ಮಣೆಯೊಂದರ ಮೇಲಿಟ್ಟು, ಬೇಲಿಯ ಸಾಲಿನಲ್ಲಿ ಅರಳಿದ್ದ ಕೆಲವು ಹೂಗಳನ್ನು ಕೊಯ್ದು ತಂದಿಟ್ಟಳು. ಭೈರಾದೇವಿ ಸ್ನಾನ ಮಾಡಿ, ಶಿಲೆಗೆ ಹೂಗಳನ್ನು ಅರ್ಪಿಸಿ ಧ್ಯಾನ ಮಾಡಿದಳು. ಉಪವಾಸದ ಪರಿಣಾಮ ಅವಳ ಚೈತನ್ಯ ಕುಸಿಯತೊಡಗಿತ್ತು. ಶಬಲೆ ಅಕ್ಕಿಯ ಗಂಜಿ ಮಾಡಿಕೊಂಡು ಒಬ್ಬಳೇ ಕಣ್ಣೀರಿಡುತ್ತ ಹೆಸರಿಗೊಂದಿಷ್ಟು ಊಟ ಮಾಡಿದಳು.  ಆಕೆಗೆ ಆಗಾಗ ನಗಿರೆಯ ನೆನಪಾಗುತ್ತಿತ್ತು. ತನ್ನ ಕಣ್ಣೆದುರೇ ನಡೆದ ಸತ್ರಾಜಿತನ ಹತ್ಯೆ ನೆನಪಾಗಿ ಕಣ್ಣೀರು ಬರುತ್ತಿತ್ತು. ಮಗ, ಮಗಳು ಮೊಮ್ಮಕ್ಕಳ ನೆನಪಾಗುತ್ತಿತ್ತು. ಪೂಜ್ಯಪಾದರ ಶವವನ್ನು ಮುಂದಿಟ್ಟುಕೊಂಡು ರಾಣಿಯನ್ನು ವಂಚಿಸಿದ ದಳವಾಯಿಯ ಹೀನಕೃತ್ಯ ನೆನಪಾಗಿ ಮೈ ಉರಿಯುತ್ತಿತ್ತು. ಮಹಾರಾಣಿ ಮೊದಲೇ ಅರಮನೆಯಿಂದ ಪರಿಚಾರಕರನ್ನು ಕಳಿಸಿದ್ದನ್ನು ಗಮನಿಸಿದರೆ ಯುದ್ಧಕ್ಕೂ ಮುನ್ನವೇ ಆಕೆ ಶರಣಾಗಲು ನಿರ್ಧರಿಸಿದ್ದಳೇನೋ ಎಂಬ ಅನುಮಾನ ಒಮ್ಮೊಮ್ಮೆ ಅವಳನ್ನು ಕಾಡುತ್ತಿತ್ತು. ಐವತ್ನಾಲ್ಕು ವರ್ಷ ಧೀರೋದಾತ್ತವಾಗಿ ರಾಜ್ಯವಾಳಿದ ವೀರವನಿತೆಗೆ ಎಪ್ಪತ್ನಾಲ್ಕರ ವೃದ್ದಾಪ್ಯದಲ್ಲಿ ಇಂತಹ ದಯನೀಯ ದುಃಸ್ಥಿತಿ ಒದಗಿ ಬರಬಾರದಿತ್ತೆಂದು ಆಕೆಗೆ ದುಃಖ ಉಕ್ಕಿ ಬರುತ್ತಿತ್ತು. 
ಶಬಲೆ ಯೋಚಿಸುತ್ತ ಮಲಗಿದ್ದನ್ನು ಕಂಡ ರಾಣಿ ನಿಧಾನವಾಗಿ ಅವಳ ಬಳಿ ಬಂದು ಕುಳಿತು, ಅವಳ ತಲೆಯನ್ನು ಮಡಿಲಲ್ಲಿಟ್ಟುಕೊಂಡು, ಹಣೆ ನೇವರಿಸಿ, ಕೂದಲಲ್ಲಿ ಬೆರಳಾಡಿಸುತ್ತ, 'ಗೌರಮ್ಮ, ಕೊನೆಗೂ ನಿನಗೆ ಸಣ್ಣಮ್ಮ ಅರ್ಥವಾಗಲೇ ಇಲ್ಲ ಅಲ್ಲವೇ?' ಎಂದಳು. ಶಬಲೆ ಮಲಗಿದಂತೆಯೇ ಅವಳ ಮುಖ ನೋಡಿ, 'ಅದೇಕೆ ಹಾಗೆ ಕೇಳುತ್ತೀರಿ ಸಣ್ಣಮ್ಮ?' ಎಂದಳು. 'ನನಗೆ ಗೊತ್ತಿದೆ, ನಾನು ಅರಮನೆಯ ಪರಿಚಾರಿಕೆಯರನ್ನೆಲ್ಲ ಮೊದಲೇ ಕಳಿಸಿದ ಕುರಿತು ನಿನಗೆ ನನ್ನ ಮೇಲೆ ಮುನಿಸಿದೆ. ಯುದ್ಧಕ್ಕೂ ಮುನ್ನವೇ ಮಾನಸಿಕವಾಗಿ ಸೋಲೊಪ್ಪಿಕೊಂಡೆನೆಂಬ ಬೇಸರವಿದೆ. ಕೊಂಚ ಆಕ್ರೋಶವೂ ಇದೆ. ಆದರೆ ನೀನೇ ಒಮ್ಮೆ ಯೋಚಿಸು. ನಮ್ಮನ್ನು ಗೆದ್ದ ಮೇಲೆ ಪರಿಚಾರಿಕೆಯರನ್ನು, ಸೇವಕರನ್ನು ದಳವಾಯಿ ಸುಮ್ಮನೆ ಬಿಡುತ್ತಿದ್ದನೇನು? ಯೋಧರು ಹೆಂಗಸರನ್ನು ಬಂಧಿಸಿ ಹೊತ್ತೊಯ್ದು ಭೋಗಿಸುತ್ತಿದ್ದರು, ಗಂಡಸರನ್ನು ಹಿಂಸಿಸಿ ಕೊಲ್ಲುತ್ತಿದ್ದರು. ಪಾಪ, ಅವರೆಲ್ಲರೂ ತಮ್ಮದೇ ಸಂಸಾರ, ಮನೆ ಮಕ್ಕಳು ಇರುವ ಜನಸಾಮಾನ್ಯರು. ಬಾಳಿ ಬದುಕಬೇಕಾಗಿರುವ ಅವರೆಲ್ಲರ ಬದುಕು ನಮ್ಮೆರಡು ಮುದಿ ಜೀವಗಳಿಗಾಗಿ ನಾಶವಾಗಕೂಡದು ಎನ್ನಿಸಿತು. ಹಾಗಾಗಿ ಅವರನ್ನೆಲ್ಲ ಬೀಳ್ಕೊಂಡೇ ಯುದ್ಧಕ್ಕೆ ಹೊರಡಲು ನಿರ್ಧರಿಸಿದೆ. ನಾವು ಗೆದ್ದರೆ ಪುನಃ ಕರೆಸಿಕೊಳ್ಳಲು ಅವಕಾಶವಿತ್ತಲ್ಲ' ಎಂದಳು.
ಶಬಲೆ ಮಡಿಲಿನಿಂದ ಮೇಲೆದ್ದು, 'ಸಣ್ಣಮ್ಮ, ನಾನು ಆ ಕುರಿತೇ ಯೋಚಿಸುತ್ತಿದ್ದೇನೆಂದು ನಿಮಗೆ ಹೇಗೆ ತಿಳಿಯಿತು?' ಎಂದು ಆಶ್ಚರ್ಯದಿಂದ ಕೇಳಿದಳು. ರಾಣಿ ಮೆಲ್ಲನೆ ನಕ್ಕು, 'ಹೇಗೋ ತಿಳಿಯಿತು, ಬಿಡು. ನೋಡು, ನಮ್ಮ ಪರಂಪರೆಯಲ್ಲಿ ಯುದ್ಧದಲ್ಲಿ ಹೋರಾಡಿ ಮಡಿದ ವೀರರಿಗೆ  ವೀರಗಲ್ಲುಗಳಿವೆ. ಚಿತೆಯೇರಿ ಮಡಿದ ಸ್ತ್ರೀಯರಿಗೆ ಮಾಸ್ತಿಕಲ್ಲುಗಳಿವೆ.‌ ಕವಿಗಳಿಗೆ ಬಿರುದು ಬಾವಲಿಗಳಿವೆ. ವಿದ್ವಾಂಸರಿಗೆ ಕಡಗ ಕಂಕಣಗಳಿವೆ. ರಾಜರಿಗೆ ಚರಿತ್ರೆ, ಶಾಸನಗಳ ಶ್ಲಾಘನೆಗಳಿವೆ,  ಪುರೋಹಿತರಿಗೆ ದಾನ ದತ್ತಿಗಳಿವೆ. ಮಂತ್ರಿ ಮಹೋದಯರಿಗೆ ಉಂಬಳಿಗಳಿವೆ. ಆದರೆ ರಾಜ್ಯಕ್ಕಾಗಿ, ರಾಜನಿಗಾಗಿ ದುಡಿದ ಸಾಮಾನ್ಯ ಪರಿಚಾರಕರಿಗೇನಿದೆ? ಹಾಗಾಗಿ ಅವರಿಗೆ ಕೈತುಂಬ ವಸ್ತು ವಡವೆ ಕೊಟ್ಟು ಕಳಿಸಿದೆ' ಎಂದಳು.‌


 ಶಬಲೆ ಸುಲಭಕ್ಕೆ ಪಟ್ಟುಬಿಡದೆ, 'ನಿಮ್ಮ ದೃಷ್ಟಿಯಿಂದ ಯೋಚಿಸಿದರೆ ಸರಿಯಿದ್ದೀತು. ಆದರೆ ಚರಿತ್ರೆ ನಿಮ್ಮನ್ನು ಸೋಲುವ ಮುನ್ನವೇ ಶರಣಾದ ಹೆಂಬೇಡಿಯೆನ್ನದೇ? ಎಂದಳು.
'ಗೌರಿ, ನಿಜ ಹೇಳುವುದಾದರೆ ನನಗೆ ಈ ಚರಿತ್ರೆಯಲ್ಲಿ ಆಸಕ್ತಿಯಿಲ್ಲ. ರಕ್ತಸಿಕ್ತ ರಾಕ್ಷಸೀ ಹೋರಾಟಗಳನ್ನು ಅದ್ಭುತವೆಂಬಂತೆ  ವರ್ಣಿಸುವ ಇತಿಹಾಸದ ಅಕ್ಷರಗಳ ಬಣ್ಣ ರಕ್ತಗೆಂಪು. ವಾಸನೆ ನೆತ್ತರು ಕಮಟು. ಯಾಕೆ ಗೊತ್ತೇನು? ಚರಿತ್ರೆಯನ್ನು ಬರೆಯುವುದು ನೆತ್ತರಿನಿಂದ. ಚರಿತ್ರೆ ಜಿಗಣೆಯ ಹಾಗೆ. ನೆತ್ತರು ಉಂಡಷ್ಟೂ ಅದು ಉಬ್ಬುತ್ತದೆ. ತನಗೆ ಹೆಚ್ಚು ನೆತ್ತರು ಕುಡಿಸಿದವನನ್ನು  ಕೊಂಡಾಡಿ, ಅವನ ಕುರಿತು ಹೆಚ್ಚು ಹೆಚ್ಚು ಬರೆಯುತ್ತದೆ. 
ಈಗ ಕೆಳದಿ, ವಿಜಯನಗರ, ಬಿಜಾಪುರದವರನ್ನೇ ನೋಡು. ಚರಿತ್ರೆ ಅವರ ಯುದ್ಧ ಪರಂಪರೆಯ ರಣವೈಭವವನ್ನು ಇನ್ನಿಲ್ಲದಂತೆ ಶ್ಲಾಘಿಸುತ್ತದೆ. ಆದರೆ ಅಂತಹ ಸಾಲು ಸಾಲು ಯುದ್ಧಗಳಲ್ಲಿ ಮಡಿದ ಸಾವಿರ ಸಾವಿರ ತರುಣಯೋಧರ ವಿಧವೆಯರ ಗೋಳು ಆ ಚರಿತ್ರೆಗೆ ಕಾಣಿಸುವುದೇನು? ಗೆದ್ದು ಬೀಗುವ ಸಾಮ್ರಾಜ್ಯಗಳ ರಾಜಬೀದಿಗಳಲ್ಲಿ ಬಳ್ಳದಲ್ಲಿ ಅಳೆದು ಮಾರುವ ಮುತ್ತುರತ್ನಗಳಲ್ಲಿ ಈ ವಿಧವೆಯರ ತಾಳಿ ಓಲೆಗಳ ಪಾಲಿಲ್ಲವೇನು? ಯುದ್ಧಕ್ಕಾಗಿ ಎಷ್ಟೇ ವೆಚ್ಚ ಮಾಡಿದರೂ  ಚಕ್ರವರ್ತಿಗಳು ಶ್ರೀಮಂತರಾಗಿ ಉಳಿಯುವುದೂ  ಸೋತವರನ್ನು ಸುಲಿದು ತಾನೆ? 
'ಹೋರಾಡಿ ಮಡಿದ ಯೋಧರಿಗೆ ವೀರ ಸ್ವರ್ಗ ಎಂದು ಬರೆದ ಚರಿತ್ರೆ ಬದುಕಿರುವ ಅವರ ಪತ್ನಿಯರಿಗೆ ರೌರವ ನರಕವೆಂದು ಬರೆಯಿತೇನು' ಎಂದು ಕೇಳುವಷ್ಟರಲ್ಲಿ ಇದ್ದಕ್ಕಿದ್ದಂತೆ ಉಸಿರು ಸಿಕ್ಕಿದಂತಾಗಿ ಆಕೆ ಒದ್ದಾಡತೊಡಗಿದಳು. ಶಬಲೆಗೆ ಭಯವಾಯಿತು. ಎದ್ದು ರಾಣಿಯನ್ನು ಅಲ್ಲೇ ಅಂಗಾತ ಮಲಗಿಸಿ, ಸೆರಗಿನಿಂದ ಗಾಳಿ ಬೀಸಿದಳು. ಸ್ವಲ್ಪ ಹೊತ್ತು ಕಣ್ಮುಚ್ಚಿ ಮಲಗಿದ್ದ ರಾಣಿ ತುಸು ಸುಧಾರಿಸಿಕೊಂಡು ಎದ್ದು ಕುಳಿತು ಹೇಳತೊಡಗಿದಳು, 
'ಗೌರಿ, ನಿಜ ಹೇಳುವುದಾದರೆ ಈ ನಾಯಕ ನನಗೆ ಒಳ್ಳೆಯದನ್ನೇ ಮಾಡಿದ್ದಾನೆ. ಅನಾಮಿಕಳಾಗಿ, ಅಪರಿಚಿತ ತಾಣದಲ್ಲಿ ಮರಳಿ ಹರಳುಗಟ್ಟದ ಹಾಗೆ ಘನಶೂನ್ಯದಲ್ಲಿ ಕರಗಿ ಹೋಗಬೇಕೆಂಬ ನನ್ನ ಇಚ್ಚೆಗೆ ಇಂಬುಗೊಟ್ಟಿದ್ದಾನೆ.  ಬದುಕೆಂದರೆ ತೆರೆಯೊಂದು ಬಂದರೆ ಹೆಜ್ಜೆಯ ಗುರುತೆಲ್ಲ ತೊಳೆದು ಹೋಗುವ ಮರಳು ತೀರದ ಪಯಣವಾಗಬೇಕು ಎನ್ನುತ್ತಿದ್ದ ಜಿನದತ್ತ. ಸಾಯುವಾಗಲೂ ನನ್ನ ಹೆಸರು, ನನ್ನ ಪೀಳಿಗೆ, ನನ್ನ ಸಿಂಹಾಸನ ಎಂದು ಮನಸ್ಸಿನ ತುಂಬ ನನ್ನನ್ನೇ ತುಂಬಿಕೊಂಡು ಕೊರಗಬೇಕೆ?  ಹಿಂದೊಮ್ಮೆ ವಿಜಯನಗರದಿಂದ ನಗಿರೆಗೆ ಬಂದಿದ್ದರಲ್ಲ ಒಬ್ಬ ದಾಸರು, ಏನವರ ಹೆಸರು, ಪುರಂಧರರು, ಅವರು ಹಾಡುತ್ತಿದ್ದ ಪದ ನೆನಪಾಗುತ್ತಿದೆ.    "ಮುನ್ನ ಶತಕೋಟಿ ರಾಯರುಗಳಾಳಿದ ನೆಲವ ತನ್ನದೆಂದೆನುತ ಶಾಸನವ ಬರೆಸಿ, ಬಿನ್ನಣದ ಮನೆ ಕಟ್ಟಿ ಕೋಟೆ ಕೊತ್ತಲವಿಕ್ಕಿ ಚೆನ್ನಿಗನ ಅಸುವಳಿಯೆ ಹೊರಗೆ ಹಾಕುವರಯ್ಯ, ಯಾರು ಹಿತವರು ನಿನಗೆ?" ಎಷ್ಟು ನಿಜ ನೋಡು, ಹೆತ್ತ ತಾಯಿಯ ಎದುರೇ ಹಸುಗೂಸಿನ ಕತ್ತು ಹಿಸುಕುವಂತೆ ನಮ್ಮ ಕಣ್ಣೆದುರೇ, ನಗಿರೆಯ ಅರಮನೆ ಕೋಟೆ ಕೊತ್ತಲ ಪೇಟೆ ಪಟ್ಟಣಗಳನ್ನೆಲ್ಲ ಕೆಡವಿ ನಾಶಗೈಯಲಾಯಿತು. ಅದುವರೆಗೂ ನಮ್ಮದಾಗಿದ್ದ ನಗಿರೆಯೀಗ ಇನ್ಯಾರದೋ. ಶಬಲೆ, ಹಾಗೆ ನೋಡಿದರೆ ನಮ್ಮ ಸೋಲಿಗೆ ಕಾರಣ ಈ ನಾಯಕನಲ್ಲ. ಕಥಾನಾಯಕ ಬೇರೆ ಇದ್ದಾನೆ. ಇದೆಲ್ಲ  ಅವನ ಕೈವಾಡ. ನಮ್ಮ ಪ್ರಾರಾಬ್ಧಕ್ಕೆ ವೆಂಕಟಪ್ಪ ನಾಯಕನನ್ನು ನಿಂದಿಸಿ ಪ್ರಯೋಜನವೇನು' ಎನ್ನುತ್ತ ನಿಧಾನವಾಗಿ ತನ್ನ ಬಲಗೈಯ್ಯಲ್ಲಿದ್ದ ಕಡಗವನ್ನು ಕಳಚಿದಳು. ಅದು ನಾಗಬ್ಬೆ  ಜಿನದತ್ತನ ನೆನಪಿಗಾಗಿ ಆಕೆಗೆ ಕೊಟ್ಟದ್ದು. ಅದನ್ನು ತೆಗೆದು ಶಬಲೆಗೆ ಕೊಡುತ್ತ, 'ಗೌರಿ, ನಾಗಬ್ಬೆ ಈ ಕಡಗವನ್ನು ಜಿನದತ್ತನ ನೆನಪಿನೊಡನೆ ಹರಸಿ ನನಗೆ ಕೊಟ್ಟಿದ್ದಳು. ಅದನ್ನು ಇದುವರೆಗೂ ಪ್ರೀತಿಯಿಂದ ನನ್ನಲ್ಲೇ ಉಳಿಸಿಕೊಂಡು ಬಂದಿದ್ದೆ. ಇಂದು ಅವರಿಬ್ಬರನ್ನೂ ಸ್ಮರಿಸಿ ನಿನಗೆ ಕೊಡುತ್ತಿದ್ದೇನೆ. ಇದು ನಿನ್ನಲ್ಲಿರಲಿ' ಎಂದು ಬೇಡವೆಂದರೂ ಬಿಡದೆ ಬಲವಂತವಾಗಿ ಆಕೆಯ ಕೈಯ್ಯಲ್ಲಿಟ್ಟಳು. 
ಅಷ್ಟರಲ್ಲಿ ಬಾಗಿಲು ತಟ್ಟಿದ ಸದ್ದಾಗಿ ಶಬಲೆ ಎದ್ದು ಹೊರಗೆ ಹೋಗಿ ನೋಡಿದರೆ ಕಾವಲುಗಾರ ಪಹರೆ ಸಂಗಪ್ಪ ನಿಂತಿದ್ದ. 'ಅವ್ವ, ಬೃಹನ್ಮಠದ ಸ್ವಾಮಿಗಳು ಬರುತ್ತಿದ್ದಾರೆ' ಎಂದ. ಶಬಲೆಗೆ ಆಶ್ಚರ್ಯವೂ ಆನಂದವೂ ಒಟ್ಟಿಗೆ ಆಗಿ, 'ಇಲ್ಲಿಗೆ ಬರುತ್ತಿದ್ದಾರೆಯೇ?' ಎಂದು ಕೇಳಿ, ಅವಸರದಲ್ಲಿ ಒಳಗೆ ಬಂದು ಭೈರಾದೇವಿಯ ಜೊತೆ ಮುಂಬಾಗಿಲಿಗೆ ಬಂದು ನಿಂತಳು. ಅಂಗಳಕ್ಕೆ ಆಗಮಿಸಿದ ಸ್ವಾಮಿಗಳು ಅಲ್ಲೇ ನಿಂತು, ಇಬ್ಬರನ್ನೂ ನೋಡಿ, 'ಭೈರವ್ವ, ಹೇಗಿದ್ದೀಯ ತಾಯಿ? ಶಬಲೆ, ಆರೋಗ್ಯವೇನವ್ವ' ಎಂದು ಮೃದುಸ್ವರದಲ್ಲಿ ಕೇಳಿದರು. ಕೈಮುಗಿದು ನಿಂತ ಭೈರಾದೇವಿಯ ಕಣ್ಣು ಒದ್ದೆಯಾಗಿ ಕಂಬನಿ ಕೆನ್ನೆಗಿಳಿಯಿತು. 'ಗುರುಗಳೇ, ಈ ಮುದಿಜೀವವನ್ನು ನೋಡಲು ಇಲ್ಲಿಯವರೆಗೂ ಪಾದ ಬೆಳೆಸಿದ ತಮ್ಮ ಹಿರಿತನಕ್ಕೆ ಶರಣಾಗಿದ್ದೇನೆ' ಎಂದು ನಿಧಾನವಾಗಿ ಅಂಗಳಕ್ಕಿಳಿದು ಅವರಿಗೆ ಗವಾಸನದಲ್ಲಿ ನಮಸ್ಕರಿಸಿದಳು. ಶಬಲೆಯೂ ನಮಸ್ಕಾರ ಮಾಡಿದಳು. ಗುರುಗಳು ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಶಬಲೆ ಮಣೆಯೊಂದನ್ನು ತಂದಿಟ್ಟಳು. ಗುರುಗಳು ಮಣೆಯ ಮೇಲೆ ಪದ್ಮಾಸನದಲ್ಲಿ ಕುಳಿತರು. ಸ್ವಾಮಿಗಳು ತಮ್ಮ ಜೊತೆಯಲ್ಲಿ ಬಂದಿದ್ದ ಬಿಳಿ ಬಟ್ಟೆಯ ವೃದ್ದರೊಬ್ಬರನ್ನು ಕರೆದು ಭೈರಾದೇವಿಗೆ ಪರಿಚಯಿಸುತ್ತ, 'ಅವ್ವ, ಇವರು ನೇಮಿನಾಥ ಶೆಟ್ಟರು. ನಮ್ಮ ಕೆಳದಿ ಪಾರ್ಶ್ವನಾಥ ಬಸದಿಯ ಪುರೋಹಿತರು. ನಾವಿಂದು ಇವರನ್ನು ಕರೆಸಿ ನಿನ್ನ ಸಲ್ಲೇಖನ ವ್ರತದ ಕುರಿತು ಹೇಳಿದೆವು. ಇವರೊಬ್ಬ ಶ್ರದ್ಧಾವಂತ ಜಿನಪುರೋಹಿತರು. ನಿನ್ನ ವಿಷಯ ಕೇಳಿ ತುಂಬ ಮರುಕಪಟ್ಟರು. ನಿನ್ನ ಸಲ್ಲೇಖನ ವ್ರತದ ಶಾಸ್ತ್ರವಿಧಿಗೆ  ಸಹಾಯವಾಗಲೆಂದು ನಾವೇ ಕರೆತಂದೆವು' ಎಂದರು.‌ ನೇಮಿನಾಥರು ತಮ್ಮ ಕೈಚೀಲದಿಂದ ವರ್ಧಮಾನ ತೀರ್ಥಂಕರರ ವಿಗ್ರಹವೊಂದನ್ನು ತೆಗೆದು ರಾಣಿಗೆ ಕೊಟ್ಟು, 'ನಮಸ್ಕಾರ, ಭೈರಬ್ಬೆ. ಈ ಗಳಿಗೆಯಿಂದ ತಮ್ಮ ಮನಸ್ಸು ಹೃದಯಗಳಲ್ಲಿ ವರ್ಧಮಾನ ಸ್ವಾಮಿಯ ದಿವ್ಯಮೂರ್ತಿ ತುಂಬಿರಲೆಂದು ಈ ಜಿನಮೂರ್ತಿಯನ್ನು ತಂದೆ. ನಾನೇನು ಹೆಚ್ಚು ತಿಳಿದ ವಿದ್ವಾಂಸನಲ್ಲ.‌ ಆದರೂ ಈ ಕ್ಷಣದಿಂದ ಈ ಜೀವ ತಮ್ಮ ಸೇವೆಗೆ ಮುಡಿಪು' ಎಂದು ಕೈಮುಗಿದರು. 


ಶಬಲೆ ರಾಣಿಯ ಕೈಯಿಂದ ಮೂರ್ತಿಯನ್ನು ಪಡೆದು ನೇಮಿನಾಥರನ್ನು ಒಳಗೆ ಕರೆದೊಯ್ದಳು. ನೇಮಿನಾಥರು ಜಿನಮೂರ್ತಿಯನ್ನು ಪೂಜೆಗಿಟ್ಟ ತಾವು ತಂದ ಹೂಗಳಿಂದ ಅರ್ಚಿಸಿ, 'ನಾನು ನಾಳೆ ಬೆಳಿಗ್ಗೆ ಬಂದು ರಾಣಿಗೆ ವ್ರತಮಂತ್ರವನ್ನು ಉಪದೇಶಿಸುತ್ತೇನೆ. ಸೂರ್ಯೋದಯಕ್ಕೆ ಸ್ನಾನ ಮುಗಿಸಿ ಸಿದ್ಧರಾಗಿರಲಿ' ಎಂದರು. ಶಿವಾಚಾರ್ಯ ಶ್ರೀಗಳು ಎದ್ದು ನಿಂತು, 'ಅವ್ವ, ಒಂದು ಬಿನ್ನಹ. ನೀನು ಮಹಾತಾಯಿ. ಪುಣ್ಯವಂತೆ. ನಮ್ಮ ನಾಯಕರ ಮೇಲೆ ಮತ್ತು ಕೆಳದಿಯ ಮೇಲೆ  ನಿನಗೆ ಆಕ್ರೋಶವೇನಾದರೂ ಇದ್ದರೆ ಅದು ಈ ಗಳಿಗೆಯಿಂದಲೇ ಶಮನವಾಗಲಿ. ನಿನ್ನಂತಹ ಶ್ರಾವಕಿಯೊಬ್ಬಳ ಪುಣ್ಯವ್ರತದಿಂದ ಸಂಚಯವಾದ ಸಾತ್ವಿಕ ಶಕ್ತಿ ನಮ್ಮ ಕೆಳದಿ ಸಂಸ್ಥಾನವನ್ನು ಕಾಯಲಿ ಎಂಬುದಷ್ಟೇ ನಮ್ಮ ಕೋರಿಕೆ' ಎಂದು ಹೇಳಿ ಆಶೀರ್ವದಿಸಿದರು. 'ಗುರುಗಳೇ, ರಾಗದ್ವೇಷಗಳಿಂದ ಮುಕ್ತವಾಗಲೆಳಸಿ ಸ್ವತಃ ಮರಣವನ್ನು ಸ್ವಾಗತಿಸುತ್ತಿರುವ ಈ ಜೀವಕ್ಕಿನ್ನು ವೈರಮತ್ಸರಗಳ ಕ್ಲೇಶವಿಲ್ಲ. ಸಕಲ ಜೀವಿಗಳಿಗೂ ಲೇಸು ಬಯಸುವ ತಮ್ಮಂತಹ ಶರಣರ ಶುಭಾಶೀರ್ವಾದಗಳೇ ಶ್ರೀರಕ್ಷೆ' ಎಂದು ಕೈಮುಗಿದಳು. ಗುರುಗಳು ಸಂತೋಷದಿಂದ ಹೊರಟರು. ನೇಮಿನಾಥರು ಅವರ ಜೊತೆಗೂಡಿದರು.
ಮರುದಿನ ನೇಮಿನಾಥರು ಬರುವುದರೊಳಗೆ ಮನೆಯ ಹೊರಗೆ ಸೇರಿದ ಜನಸಂದಣಿ ನೋಡಿ ಶಬಲೆಗೆ ಆಶ್ಚರ್ಯವಾಯಿತು. ಹತ್ತಿರದ ಆವಿನಹಳ್ಳಿ, ಕಲ್ಮನೆ, ಬೇದೂರು, ಇಕ್ಕೇರಿ ಮುಂತಾದ ಹಳ್ಳಿಗಳ ಜನರು ಹೂವು ಹಣ್ಣು ಹಿಡಿದು ಬೆಳಗಾಗುವ ಮುನ್ನವೇ ಬಂದು ನಿಂತಿದ್ದರು. 'ಏನೋ ವಿಶೇಷ ವ್ರತವೊಂದು ನಡೆಯುತ್ತಿದೆ, ಇಕ್ಕೇರಿಯ ಮನೆಯಲ್ಲಿರುವುದು ನಗಿರೆಯ ರಾಣಿ ಚೆನ್ನಭೈರಾದೇವಿ. ಅವರದು ಉಪವಾಸ ವ್ರತಮರಣವಂತೆ' ಎಂಬೆಲ್ಲ ಸುದ್ದಿ ಬಾಯಿಯಿಂದ ಬಾಯಿಗೆ ಹರಡಿ ಜನ ಭಕ್ತಿಯಿಂದ ಬಂದಿದ್ದರು. ನೇಮಿನಾಥರು ಬಂದು ಜಿನಾರ್ಚನೆ ಮಾಡಿ ರಾಣಿಗೆ ಮಂತ್ರೋಪದೇಶಗೈದರು. ಸೇರಿದ್ದ ಜನರೂ ಜಿನಮೂರ್ತಿಗೆ, ರಾಣಿಗೆ ನಮಸ್ಕರಿಸಿ, ಹೂಹಣ್ಣು ಅರ್ಪಿಸಿ, ಕೃತಾರ್ಥ ಭಾವದಲ್ಲಿ ಮರಳಿದರು.
ರಾಣಿ ಣಮೋಕಾರ ಮಂತ್ರವನ್ನು ಉಚ್ಚರಿಸುತ್ತ ಚಾಪೆಯ ಮೇಲೆ ಮಲಗಿದಳು. ಸಚಿವ ಪುಟ್ಟಯ್ಯ, ಜನ ಸಂದಣಿ ಸೇರುತ್ತಿರುವ ವಿಷಯದ ಕುರಿತು ನಾಯಕರೊಡನೆ ಚರ್ಚಿಸಿ ಶಾಂತಿ ಸುವ್ಯವಸ್ಥೆಗೆ ಕ್ರಮ ಕೈಗೊಂಡಿದ್ದರು. ದಿನದಿನಕ್ಕೆ ರಾಣಿಯ ದರ್ಶನ ಪಡೆಯಲು ಬಂದು ಹೋಗುವವರ ಸಂಖ್ಯೆ ಹೆಚ್ಚತೊಡಗಿತು. 'ಸಲ್ಲೇಖನ ಅಂತ ಜೈನರ ಅಪರೂಪದ ವ್ರತವಂತೆ. ಶರೀರವನ್ನು ತ್ಯಜಿಸುವ ಅಂಗುಷ್ಟ ಪ್ರಮಾಣದ ಪ್ರಾಣವನ್ನು ಸ್ವತಃ ದೇವೇಂದ್ರ ಐರಾವತದ ಮೇಲೆ ಕುಳ್ಳಿರಿಸಿ ಒಯ್ಯುವುದು ಕಾಣುವುದಂತೆ. ಇದನ್ನು ನಾವಂತೂ ಕಂಡು ಕೇಳಿಲ್ಲ' ಅಂತೆಲ್ಲ ಸುದ್ದಿ ಹರಡಿ ಜನ ಕಿತ್ತೆದ್ದು ಬರತೊಡಗಿದ್ದರು. ಹತ್ತಿರದ ಆವಿನಹಳ್ಳಿ ಪ್ರಾಂತ್ಯದ ಜನರಿಗಂತೂ ತಮ್ಮ ರಾಣಿಯನ್ನು ನಾಯಕ ವಂಚಿಸಿ ಸೆರೆಹಿಡಿದನೆಂಬ ಕೋಪವಿನ್ನೂ ಆರಿರಲಿಲ್ಲ. ಮೊದಲ ದಿನ ಸುತ್ತಲ ಹಳ್ಳಿಯವರಷ್ಟೇ ಬಂದಿದ್ದರೆ ಎರಡನೆಯ ದಿನ ಕೆಳದಿ, ಮಾಸೂರು, ಸಿರಿವಂತೆ, ಬಂದಗದ್ದೆಯ ಜೊತೆ ದೂರದ ಕರೂರು ಭಾರಂಗಿಗಳಿಂದಲೂ ಜನ ಬಂದರು. ಮೂರನೆಯ ದಿನ ನಗಿರೆ, ಹಾಡುವಳ್ಳಿಗಳ ಜನರೂ ಬರತೊಡಗಿದರು. ಇದ್ದಕ್ಕಿದ್ದಂತೆ ಆದ ಈ ಬದಲಾವಣೆ ಶಬಲೆಗೆ ಕನಸೆಂಬಂತೆ ಕಾಣತೊಡಗಿತ್ತು. ಬರುತ್ತಿದ್ದ ಜನರು ರಾಣಿಗೆ ತೋರುತ್ತಿದ್ದ ಭಕ್ತಿ ಭಾವಗಳನ್ನು ಕಂಡು ಅವಳು ಪುಳಕಿತಳಾಗಿದ್ದಳು. ಸಚಿವ ಪುಟ್ಟಯ್ಯನಿಗೆ ಶಾಂತಿ ಸುವ್ಯವಸ್ಥೆ ಕಾಪಾಡುವುದೇ ದೊಡ್ಡ ತಲೆನೋವಾಗಿತ್ತು. ಶಿವಾಚಾರ್ಯರು ನಾಯಕನಿಗೆ ಮತ್ತೊಮ್ಮೆ ಭೈರಾದೇವಿಯ ವಿಷಯದಲ್ಲಿ ಜವಾಬ್ದಾರಿಯುತವಾಗಿ ವರ್ತಿಸಲು ಸೂಚಿಸಿದರೆಂಬ ಸುದ್ದಿ ಹರಡಿತ್ತು.
ದಿನ ದಿನಕ್ಕೂ ಜನ ಬರುವುದು ಹೆಚ್ಚುತ್ತ ಹೋಗಿತ್ತು. ಮನೆಯ ಜಗುಲಿಯ ಮೇಲೆ ಆವಿನಹಳ್ಳಿ, ಕರೂರು ಭಾರಂಗಿ  ನಗಿರೆ ಹಾಡುವಳ್ಳಿಗಳಿಂದ ಬಂದ ಕೆಲವು ಜಿನ ಪುರೋಹಿತರು, ಶ್ರಾವಕರು ಸಾರ್ವಜನಿಕರು ಉಳಿದುಕೊಳ್ಳತೊಡಗಿದ್ದರು. ಎರಡು ದಿನಗಳಿಂದ ಬೇಡವೆಂದರೂ ಕೇಳದೆ ಜಿನಭಕ್ತರು ಬಂದು ಹಗಲೂ ರಾತ್ರಿ ಭಜನೆ, ಪ್ರಾರ್ಥನೆ, ಮಂತ್ರಪಠಣ ಮಾಡತೊಡಗಿದ್ದರು. ಆಗುವುದೆಲ್ಲ ಆಗಲೆಂದು ಶಬಲೆಯೂ ಸುಮ್ಮನಿದ್ದಳು.‌ ಸಚಿವ ಪುಟ್ಟಯ್ಯ ಇಕ್ಕೇರಿಯ ಅನ್ನಛತ್ರದಲ್ಲಿ ಎಲ್ಲರಿಗೂ ಊಟೋಪಚಾರಕ್ಕೆ ಮಾತ್ರವಲ್ಲದೆ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಿದ್ದರು. ಹಾಗಿದ್ದೂ ಕೆಲವರು ಅಲ್ಲಿಗೆ ತೆರಳದೆ ಇಲ್ಲೇ ಸ್ವತಃ ಅಡುಗೆ ಮಾಡಿಕೊಳ್ಳುತ್ತಿದ್ದರು.


 ಭೈರಾದೇವಿ ಮಲಗಿದ ಕೊಠಡಿಗೆ ಯಾರನ್ನೂ ಬಿಡುತ್ತಿರಲಿಲ್ಲ. ಪಹರೆಯ ಸಂಗಪ್ಪ ಸ್ವತಃ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಿದ್ದ. ಸ್ವಯಂಪ್ರೇರಿತನಾಗಿ ತನ್ನ ಕೆಲವು ಗೆಳೆಯರನ್ನು ಕೂಡಿಸಿಕೊಂಡು ಜನರನ್ನು ನಿಯಂತ್ರಿಸುವ, ಶಿಸ್ತು ಶಾಂತಿ ಮೌನ ಕಾಪಾಡುವ ಹೊಣೆ ಹೊತ್ತಿದ್ದ. ರಾಣಿಯ ಕೊಠಡಿಯ ಹೊರಗೆ ಸ್ವತಃ ಕಾವಲಿದ್ದು ಜನರ ನೂಕು ನುಗ್ಗಲು ತಡೆಯುತ್ತಿದ್ದ. 
ಹನ್ನೆರಡನೆಯ ದಿನದ ಹೊತ್ತಿಗೆ ರಾಣಿ ಪೂರ್ಣ ನಿತ್ರಾಣಳಾದಳು. ಅವಳಿಗೆ ಮಲಗಿದಲ್ಲಿಂದ ಮೇಲೇಳುವುದಿರಲಿ ಕೈಕಾಲು ಆಡಿಸುವುದೂ ಸಾಧ್ಯವಾಗುತ್ತಿರಲಿಲ್ಲ. ಉಸಿರಾಟವೂ ನಿಧಾನವಾಗಿತ್ತು. 


ರಾತ್ರಿ ಬಹುಹೊತ್ತು ರಾಣಿಯ ಬಳಿಯಲ್ಲೇ ಕುಳಿತಿದ್ದ ಶಬಲೆಗೆ ರಾತ್ರಿ ಎಷ್ಟು ಹೊತ್ತಿಗೆ ನಿದ್ದೆ ಬಂದಿತ್ತೋ ಗೊತ್ತಿಲ್ಲ. ಬೆಳಗಿನ ಝಾವ ನೇಮಿನಾಥರು ಬಂದು ಪೂಜೆ ಮಾಡುತ್ತ ಗಂಟೆ ತೂಗಿದಾಗಲೇ ಎಚ್ಚರವಾಗಿದ್ದು. ಕಣ್ಣು ಬಿಟ್ಟು ನಿಶ್ಚೇಷ್ಟಿತಳಾಗಿ ಮಲಗಿದ್ದ ರಾಣಿಯತ್ತ ನೋಡಿ ಗಾಬರಿಯಿಂದ ಹಣೆ ಮುಟ್ಟಿದಳು. ತಣ್ಣಗಿತ್ತು. ಕೈಹಿಡಿದು ನೋಡಿದಳು ನಾಡಿ ಬಡಿತ ತಿಳಿಯಲಿಲ್ಲ. ಆತಂಕದಲ್ಲಿ ನೇಮಿನಾಥರೇ ಎಂದು ಕೂಗಿದಳು. ಅವರು ಬಂದು ನೋಡಿ ಎಲ್ಲವೂ ಮುಗಿಯಿತೆಂಬಂತೆ ತಲೆಯಾಡಿಸಿದರು. ಶಬಲೆ, 'ಸಣ್ಣಮ್ಮಾ' ಎಂದು ಕೂಗುತ್ತ ರಾಣಿಯ ಶವದ ಮೇಲೆ ಬಿದ್ದು ಅಳತೊಡಗಿದಳು. ಹೊರಗಿದ್ದವರಿಗೆಲ್ಲ ವಿಷಯ ತಿಳಿದು ಒಳಗೆ ಬಂದು ನೋಡಿ ದುಃಖದಿಂದ ಕೈಮುಗಿದರು. ಸಂಗಪ್ಪ ನುಗ್ಗುತ್ತಿದ್ದ ಜನಸಂದಣಿಯನ್ನು ಸಾಧ್ಯವಾದಷ್ಟೂ ನಿಯಂತ್ರಿಸಿದ. ನೇಮಿನಾಥರು ಜಿನಮೂರ್ತಿಗೇರಿಸಿದ್ದ ಕೆಲವು ಹೂವು ಮತ್ತು ಮಂತ್ರಾಕ್ಷತೆಯನ್ನು ತಂದು ಶವದ ಮೇಲೆ ಚೆಲ್ಲಿದರು. ಶಬಲೆ ಸಂಗಣ್ಣನನ್ನು ಕರೆದು ವಿಷಯವನ್ನು ಶಿವಾಚಾರ್ಯ ಸ್ವಾಮಿಗಳಿಗೆ ತಲುಪಿಸಲು ಹೇಳಿದಳು. ಪಹರೆಯವರು ಸಚಿವ ಪುಟ್ಟಯ್ಯನವರಿಗೆ ಸುದ್ದಿ ತಲುಪಿಸಿದರು. ನೇಮಿನಾಥರು ಮುಂದೆ ನಿಂತು ಜಿನಪರಂಪರೆಯಂತೆ ಸಂಸ್ಕಾರ ಕಾರ್ಯಕ್ಕೆ ಸಿದ್ಧತೆ ನಡೆಸತೊಡಗಿದರು.  ಸಚಿವ ಪುಟ್ಟಯ್ಯ ಬಂದು ನೇಮಿನಾಥರ ಬಳಿ ಅಗತ್ಯ ವ್ಯವಸ್ಥೆಗಳನ್ನು ಕೇಳಿ ತಿಳಿದುಕೊಂಡರು. ಅಷ್ಟರಲ್ಲಿ ಬೃಹನ್ಮಠದ ಶಿವಾಚಾರ್ಯ ಗುರುಗಳು ಬಂದು ಮೃತಶರೀರದ ದರ್ಶನ ಪಡೆದು ನೇಮಿನಾಥರಿಗೆ ಶಾಸ್ತ್ರದಲ್ಲಿ ಕಿಂಚಿತ್ ಊನವೂ ಆಗದಂತೆ ಶವಸಂಸ್ಕಾರವನ್ನು ಸಂಪನ್ನಗೊಳಿಸಲು ಸೂಚಿಸಿದರು. ಶಬಲೆ ಗುರುಗಳ ಬಳಿ ಬಂದು ಅಳುತ್ತ ಕೈಮುಗಿದು, 'ಗುರುಗಳೇ, ಸಾವಿನಂಚಿನಲ್ಲಿ ರಾಣಿಗೆ ಘನತೆಯಿಂದ ವ್ರತಬದ್ಧಳಾಗಿ ಸಾಯಲು ಅವಕಾಶ ಕಲ್ಪಿಸಿದಿರಿ. ತಮ್ಮ ಪಾದಮೂಲದಲ್ಲಿ ನನ್ನ ಮನದಾಳದ ಇನ್ನೊಂದು ಕೋರಿಕೆಯನ್ನಿಡುವ ತವಕ' ಎಂದು ನಮಸ್ಕರಿಸಿದಳು. ಗುರುಗಳು ಸಮಾಧಾನಚಿತ್ತದಿಂದ, 'ಹೇಳವ್ವ' ಎಂದರು. 'ಗುರುಗಳೇ, ರಾಣಿಗೆ ತನ್ನ ರಾಜ್ಯದ ಮೇಲೆ ಇನ್ನಿಲ್ಲದ ಪ್ರೀತಿಯಿತ್ತು. ನಿಜ, ಈಗ ಅವಳ ರಾಜ್ಯವೆಂಬುದಿಲ್ಲ.  ಆದರೆ ನಿನ್ನೆಮೊನ್ನೆಯವರೆಗೂ ಅವಳದಾಗಿದ್ದ ಮಣ್ಣಿನಲ್ಲಿ ಅವಳ ಶವದಹನಕ್ಕೆ ಅವಕಾಶ ಮಾಡಿಕೊಡಬಹುದೇ? ಖಂಡಿತವಾಗಿ ಇದು ಅವಳ ಬಯಕೆಯಲ್ಲ. ಅವಳು ಇದನ್ನೆಲ್ಲ ಮೀರಿ ಬೆಳೆದಿದ್ದಳು. ಇದು ಅವಳ ಶಿಷ್ಯೆಯ ಆಸೆ' ಎಂದಳು. 'ಅಂದರೆ, ಶವವನ್ನು ನಗಿರೆಗೊಯ್ದು ದಹನಗೈಯ್ಯುವ ಬಯಕೆಯೇ ತಾಯಿ?' ಎಂದರು. 'ಇಲ್ಲ, ಗುರುಗಳೇ. ಇಲ್ಲಿಗೆ ಸಮೀಪದ ಆವಿನಹಳ್ಳಿ ಮೊನ್ನಮೊನ್ನೆಯವರೆಗೂ ಅವಳ ರಾಜ್ಯದ ಭಾಗವೇ ಆಗಿತ್ತಲ್ಲವೇ?. ಹಾಗಾಗಿ ಆ ನೆಲದಲ್ಲಿ ರಾಣಿಯ ಶವದಹನಕ್ಕೆ ವ್ಯವಸ್ಥೆ ಮಾಡಿಸಿಕೊಡಬಹುದೇ' ಎಂದು ಗದ್ಗದಳಾಗಿ ಕೇಳಿದಳು. ಗುರುಗಳು ತುಸುಹೊತ್ತು ಧ್ಯಾನಸ್ಥರಾಗಿ ನಿಂತರು. ಕೊನೆಗೆ ಸಚಿವ ಪುಟ್ಟಯ್ಯನವರನ್ನು ಕರೆದು ವಿಷಯ ತಿಳಿಸಿದರು. ಆತ ನಾಯಕನೊಡನೆ ಚರ್ಚಿಸಿ ಒಪ್ಪಿಗೆಯಿತ್ತ.  ಅದೇ ಸಂದರ್ಭಕ್ಕೆ ಸರಿಯಾಗಿ ವೆಂಕಟಪ್ಪನಾಯಕನ ಧರ್ಮಪತ್ನಿಯರಾದ ವೀರಮ್ಮಾಜಿ ಮತ್ತು ಭದ್ರಮ್ಮಾಜಿಯರಿಬ್ಬರೂ ಬಂದು ಭೈರಾದೇವಿಯ ಅಂತಿಮದರ್ಶನ ಪಡೆದರು. ಅವರು ಬಂದು ಹೋದದ್ದೇ ತಡ, ಇಕ್ಕೇರಿಯ ದಳವಾಯಿಗಳ, ಸಚಿವರ ಕುಟುಂಬವರ್ಗಕ್ಕಿದ್ದ ಹಿಂಜರಿಕೆಯೆಲ್ಲ ತೊಲಗಿ ಬಹುತೇಕರು ಬಂದು ಅಂತಿಮದರ್ಶನ ಪಡೆದರು.  ಕೆಳದಿ, ಬಂದಗದ್ದೆ, ಆವಿನಹಳ್ಳಿ ಮುಂತಾದ ಹಳ್ಳಿಗಳ ಜನ ಗುಂಪು ಗುಂಪಾಗಿ ಬಂದು ಅಂತಿಮದರ್ಶನ ಪಡೆದರು.
ಮಳೆ ಸಂಪೂರ್ಣ ನಿಂತಿತ್ತು. ಸುತ್ತಮುತ್ತಲಿನ ಗ್ರಾಮಸ್ಥರೆಲ್ಲ ಒಟ್ಟಾಗಿ ಸಚಿವ ಪುಟ್ಟಯ್ಯನವರ ಸೂಚನೆಯಂತೆ ಆವಿನಹಳ್ಳಿಯ ಕೆರೆಯ ಪಕ್ಕದಲ್ಲಿ ಹಾದು ಹೋಗುವ ರಸ್ತೆಯ ಪಶ್ಚಿಮಕ್ಕೆ ನೇಮಿನಾಥರು ಸೂಚಿಸಿದ ಅಗಲ, ಆಕಾರಕ್ಕೆ  ತಕ್ಕ ಚಿತೆಯನ್ನು ಸಿದ್ಧಪಡಿಸಿದರು. ಅಂದು ಸಂಜೆ ಸೂರ್ಯಾಸ್ತದ ಹೊತ್ತಿನಲ್ಲಿ ಶವಯಾತ್ರೆ ಆರಂಭವಾಗಿತ್ತು.
ಪರಮಾಶ್ಚರ್ಯವೆಂಬಂತೆ ವೆಂಕಟಪ್ಪ ನಾಯಕ ಸಕಲ ರಾಜ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲು ಆಸ್ಪದ ನೀಡಿದ್ದಲ್ಲದೆ ಸ್ವತಃ ಅಂತಿಮಯಾತ್ರೆಯಲ್ಲಿ ತನ್ನಿಬ್ಬರು ರಾಣಿಯರೊಂದಿಗೆ ಜೊತೆಗಿದ್ದು ಗೌರವ ಸಮರ್ಪಣೆ ಮಾಡಿದ. ಊರೂರುಗಳಿಂದ ಊಹೆಗೂ ಮೀರಿದ ಜನಸಾಗರ ಹರಿದು ಬಂದಿತ್ತು. ಬದುಕಿನುದ್ದಕ್ಕೂ ಭೈರಾದೇವಿಯನ್ನು ನೆರಳಿನಂತೆ ಹಿಂಬಾಲಿಸಿದ್ದ ಶಬಲೆಯೇ ಅಗ್ನಿಸಂಸ್ಕಾರ ಮಾಡುವುದು ಉಚಿತವೆಂದು ತೀರ್ಮಾನಿಸಲಾಗಿತ್ತು.


 ಐವತ್ನಾಲ್ಕು ವರ್ಷಗಳ ಕಾಲ ಹೈವ, ಕೊಂಕಣ ತುಳುನಾಡುಗಳ ಮಹಾಮಂಡಳೇಶ್ವರಿಯಾಗಿ, ಪೋರ್ಚುಗೀಸರು ದಕ್ಷಿಣ ಕೊಂಕಣಕ್ಕಿಳಿಯದಂತೆ ತಡೆಗೋಡೆಯಾಗಿ ನಿಂತು, ಅಕ್ಕಪಕ್ಕದ ಚಿಕ್ಕಪುಟ್ಟ ಸಂಸ್ಥಾನಗಳ ಜೊತೆ ಪ್ರೀತಿ, ಸೌಹಾರ್ದಗಳೊಡನೆ ತಾನೂ ಬದುಕಿ ಅವರನ್ನೂ ಬದುಕಗೊಟ್ಟು, ಜೈನಧರ್ಮದ ಮೇಲ್ಪಂಕ್ತಿಯಲ್ಲಿ ತಾನಾಗಿ ಯಾರ ಮೇಲೂ ಯುದ್ಧ ಘೋಷಿಸದೆ, ದಕ್ಷಿಣಭಾರತದ ಅತ್ಯಂತ ಶ್ರೀಮಂತ ಸಂಸ್ಥಾನದ ಒಡತಿಯೆಂಬ ಹೆಗ್ಗಳಿಕೆ ಪಡೆದು, ಪೋರ್ಚುಗೀಸರಿಂದಲೇ 'ರೈನಾ ದ ಪಿಮೆಂಟಾ' ಎಂದು ಕರೆಸಿಕೊಂಡು, ಅರ್ಧಶತಮಾನಗಳಿಗೂ ಮಿಕ್ಕು ತನ್ನ ಪ್ರಜೆಗಳ ಗೌರಾವಾದರಗಳಿಗೆ ಪಾತ್ರಳಾಗಿ, ಅವರನ್ನು ಮಕ್ಕಳಂತೆ ಮಮತೆಯಿಂದ ಸಲಹಿ ಅವರಿಂದ ಅವ್ವರಸಿ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ, ವೀರವನಿತೆ ಚೆನ್ನಭೈರಾದೇವಿಯ ಪಾರ್ಥಿವ ಶರೀರವೀಗ ಚಿತೆಯ ಮೇಲೆ ವಿರಮಿಸಿತ್ತು. ಅನಾಮಿಕಳಾಗಿ ಸಾಯಬೇಕೆಂದು ಇಚ್ಛಿಸಿದ ವೈರಾಗ್ಯಮೂರ್ತಿಗೆ ವಿದಾಯ ಸಲ್ಲಿಸಲು ಸೇರಿದ್ದ ಅಪಾರ ಜನಸಂದಣಿಯನ್ನು ಕಂಡು ಮೂಕವಿಸ್ಮಿತಳಾಗಿದ್ದ ಶಬಲೆ, ಸಾವು ತನ್ನಿಚ್ಛೆಯಲ್ಲವೆಂಬ ಹಿರಿಯರ ನುಡಿಯನ್ನು ಜ್ಞಾಪಿಸಿಕೊಳ್ಳುತ್ತ, ಜಿನಪುರೋಹಿತರು ಸೂಚಿಸಿದ ಶಾಸ್ತ್ರವಿಧಿಗೆ ಅನುಸಾರವಾಗಿ ಚಿತೆಗೆ ಅಗ್ನಿಸ್ಪರ್ಶ ಮಾಡಿದಳು. ಸಾರ್ಥಕ ಬದುಕನ್ನು ಬದುಕಿ ಕೃತಕೃತ್ಯಳಾದ ಚೆನ್ನಭೈರಾದೇವಿಯೆಂಬ ಪುಣ್ಯಜೀವಿಯ ಪಾರ್ಥಿವ ಶರೀರವನ್ನು ಗಂಧ ಚಂದನ ಅಗರು ಆಜ್ಯಗಳ ಪರಿಮಳದೊಂದಿಗೆ, ಅಗ್ನಿದೇವ ತನ್ನ ಕೆನ್ನಾಲಿಗೆಗಳನ್ನು ಚಾಚಿ ಪಂಚಭೂತಗಳ ಪರವಾಗಿ ಪಚನಗೊಳಿಸಿಕೊಳ್ಳುತ್ತಿದ್ದ. ತಮ್ಮ ಅನುಭವದ ನುಡಿಗಳಿಗೆ ಕಿವಿಗೊಟ್ಟು ತಾನೂ ದೊಡ್ಡವನಾಗಿ, ರಾಣಿಯ ಹಿರಿತನವನ್ನೂ ಗೌರವಿಸಿದ ವೆಂಕಟಪ್ಪನಾಯಕನನ್ನು ಹಿರೇಮಠದ ಶಿವಾಚಾರ್ಯ ಶ್ರೀಗಳು ಹೃದಯ ತುಂಬಿ ಆಶೀರ್ವದಿಸಿದರು. ಸಕಾಲದಲ್ಲಿ ತನ್ನನ್ನು ಎಚ್ಚರಿಸಿದ ಗುರುಗಳಿಗೆ ಭಕ್ತಿ ಪರವಶನಾಗಿ ಕೈಮುಗಿದ ನಾಯಕನ ಕಣ್ಣುಗಳೂ ಒದ್ದೆಯಾಗಿದ್ದವು. ರಾಣಿಯ ಹಿರಿತನದ ಜೊತೆ ನಾಯಕನ ನಿಲುವನ್ನೂ ಕೊಂಡಾಡುತ್ತ ಜನಸಂದಣಿ ಹಿಂದಿರುಗತೊಡಗಿತ್ತು.

 ಬದುಕಿನುದ್ದಕ್ಕೂ ತನ್ನನ್ನು ತಾಯಿಗಿಂತ ಹೆಚ್ಚಾಗಿ ಪ್ರೀತಿಸಿದ ಸಣ್ಣಮ್ಮ ಲೋಕದಿಂದ ಕಣ್ಮರೆಯಾದ ಸತ್ಯವನ್ನು ಅರಗಿಸಿಕೊಳ್ಳಲಾಗದ ವೃದ್ದ ಗೌರಿ, ಕತ್ತಲಾವರಿಸುವವರೆಗೂ ಸ್ಮಶಾನದಲ್ಲೇ ಉಳಿದು, ಸಣ್ಣಮ್ಮ ತನಗೆ ಪ್ರೀತಿಯಿಂದ ಕೊಟ್ಟಿದ್ದ ಜಿನದತ್ತನ ಕಡಗವನ್ನೂ, ತನ್ನ ಬದುಕಿನ ಗುರಿ ಮತ್ತು ಆಸಕ್ತಿಗಳನ್ನೂ ಚಿತೆಗೆ ಅರ್ಪಿಸಿ, ಸಣ್ಣಮ್ಮನಿಲ್ಲದ ತಾನೊಂದು ಉಸಿರಾಡುವ ಶವವೆಂಬ ನೈರಾಶ್ಯ ಭಾವದಲ್ಲಿ ಮರಳಿ ಇಕ್ಕೇರಿಗೆ ಹೋಗುವ ಬದಲು ನಿಧಾನಕ್ಕೆ  ಆವಿನಹಳ್ಳಿ ಊರಿನತ್ತ ನಡೆಯತೊಡಗಿದಳು.

08 March 2022

ಅವನ ಜೊತೆ ಅವಳ ಕಥೆ - ೮

ಅವಳ ಜೊತೆ ಅವನ ಕಥೆ....

ಬರುವ ವಾರ ಬಗ್ಗಿ ಬಂಡಿಗೆ ಸುಲ್ತಾನನನ್ನೆ ಕಟ್ಟಿಕೊಂಡು ಈ ಕ್ಯಾಂಪಿನ ಮನೆಗೆ ಬಂದು ತನಗೆ ಇನ್ನು ಮೂರು ತಿಂಗಳಿಗೆ ಬಳಕೆಗೆ ಬೇಕಾಗುವ ಸಾಮಾನು ಸರಂಜಾಮುಗಳನ್ನ ಅಲ್ಲಿಂದ ಸಾಗಿಸಿಬಿಡಲು ನಿರ್ಧರಿಸಿದ. ಇದರಿಂದ ಆ ಸಾಮಾನುಗಳು ಹಾಳಾಗಿ ಕೊಳೆತು ವ್ಯರ್ಥವಾಗಿ ಮಣ್ಣು ಸೇರೂದೂ ಸಹ ತಪ್ಪುತ್ತದೆˌ ಜೊತೆಗೆ ತನಗೆ ಈ ಭೀಕರ ವಾತಾವರಣದಲ್ಲಿ ಅಪಾಯವನ್ನ ಮೈಮೇಲೆಳೆದುಕೊಳ್ಳುತ್ತಾ ಅಲ್ಲಿಂದ ಇನ್ನೂ ಹದಿನೇಳು ಮೈಲಿ ಪಟ್ಟಣಕ್ಕೆ ಹೋಗಿ ಮತ್ತೆ ಅಷ್ಟೆ ದೂರ ಮರುಪ್ರಯಾಣ ಮಾಡಿಯೂ ಸಹ ಗುಲಗಂಜಿಯಷ್ಟು ಸಾಮಾನು ಸರಂಜಾಮುಗಳನ್ನ ಅಲ್ಲಿಂದ ಪದೆ ಪದೆ ಹೊತ್ತು ತರುವ ಸಂಕಷ್ಟವೂ ತಪ್ಪುತ್ತದೆ. ಇನ್ನು ಬಳಸಿದ ವಸ್ತುಗಳ ಸೂಕ್ತ ಮೌಲ್ಯವನ್ನ ಪರಿಸ್ಥಿತಿಯನ್ನ ಅರುಹಿ ಅನಂತರ ಗುತ್ತಿಗೆದಾರನಿಗೆ ನೇರವಾಗಿ ಪಾವತಿಸಿದರಾಯಿತು. ಬರುವ ವಾರ ಪಟ್ಟಣದಲ್ಲಿ ಕೊಂಡ ಸಾಮಾನುಗಳನ್ನ ಮನೆ ಬಾಗಿಲಿಗೆ ಮುಟ್ಟಿಸಲು ಬರುವ ಗೋಪಿಗೆ ಕಟ್ಟು ಬಿಚ್ಚದೆ ಅವೆಲ್ಲವನ್ನೂ ಹಿಂದೆ ಕೊಂಡೊಯ್ದು ಸ್ವಂತಕ್ಕೆ ಉಪಯೋಗಿಸಲು ಹೇಳಬೇಕು. ಇಲ್ಲಿರುವ ಹೆಚ್ಚುವರಿ ವಸ್ತುಗಳಲ್ಲಿ ಕೆಲವನ್ನು ಅವನ ಕುಟುಂಬದವರ ಬಳಕೆಗೂ ಕಟ್ಟಿ ಕೊಟ್ಟು ಕಳಿಸಬೇಕು ಎಂದು ಮನದೊಳಗೆ ಹಂಚಿಕೆ ಹಾಕಿದ. ಅವರಿಬ್ಬರು ಹಾಗೆ ಕೊಂಡೊಯ್ದರೂ ಸಹ ಇನ್ನಷ್ಟು ಆಹಾರ ಪದಾರ್ಥ ಖಂಡಿತವಾಗಿ ಅಲ್ಲೆ ಉಳಿದು ವ್ಯರ್ಥವಾಗಲಿತ್ತು. ಅಷ್ಟೊಂದು ಅಸಾಧ್ಯ ದಿನಸಿಯ ದಾಸ್ತಾನು ಅಲ್ಲಿತ್ತು.

ಹಾಳಾಗಬಹದಾಗಿದ್ದ ಆಹಾರ ಖಾದ್ಯಗಳನ್ನ ಕೊಂಡು ಬಳಸಿದ ಬಗ್ಗೆ ಹಣ ಪಾವತಿಸಿ ಸಮಜಾಯಷಿ ಕೊಟ್ಟರೆ ಗುತ್ತಿಗೆದಾರನೂ ಸಹ ಗೊಣಗುಟ್ಟಲಾರ. ಅಲ್ಲಿಗೆ ಸ್ವಾಮಿ ಕಾರ್ಯ ಸ್ವಕಾರ್ಯ ಎರಡೂ ಸಾಧಿಸಿದಂತಾಗುತ್ತದೆˌ ಎಂದವನು ಹಂಚಿಕೆ ಹೂಡಿದ. ಸದ್ಯ ಅವನಿಗೆ ಬೇಕಾಗಿದ್ದುದು ಚಹಾ ಕಾಯಿಸಲು ಕೈ ಪಾತ್ರೆˌ ಆದರದು ಅಲ್ಲಿರಲಿಲ್ಲ. ಹೀಗಾಗಿ ಹಸಿಯುತ್ತಿದ್ದ ಹೊಟ್ಟೆಯನ್ನ ತಣಿಸಲು ಚಹಾದ ಜೊತೆಗೆ ತಿನ್ನಲು ನಾಲ್ಕಾರು ಉಪ್ಪು ಬಿಸ್ಕತ್ತುಗಳನ್ನ ನಂಚಿಕೊಳ್ಳಲು ತೆಗೆದುಕೊಂಡು ಮೊದಲಿನಂತೆ ಆ ನೆಲಮಾಳಿಗೆಯ ಬಾಗಿಲನ್ನ ಭದ್ರ ಪಡಿಸಿ ಮೇಲೆ ಬಂದು ಮತ್ತೆರಡು ಕೋಣೆಯನ್ನ ಹುಡುಕಾಡಿದ. ಪುಣ್ಯಕ್ಕೆ ಅಲ್ಲಿ ಕೆಲವು ಪಾತ್ರೆ ಪಗಡಗಳು ಸಿಕ್ಕವು. ಅದರಲ್ಲೊಂದನ್ನ ತಂದವನೆ ಇನ್ನೂ ಹಿಮಪಾತ ನಿಲ್ಲದಿದ್ದ ಹೊರಾವರಣದ ಬಾಗಿಲನ್ನ ಚೂರೆಚೂರು ಸರಿಸಿ ಕೊಂಚವೆ ಹಿಮವನ್ನ ಕೈ ಪಾತ್ರೆಯಲ್ಲಿ ಗೋರಿ ತಂದು ಬೆನ್ನ ಚೀಲದ ಅರೆಯಿಂದ ತೆಗೆದ ಚಹಾಪುಡಿಯನ್ನ ಅದಕ್ಕಿಷ್ಟು ಸುರಿದು ಅಗ್ಗಿಷ್ಟಿಕೆಯ ಉರಿಯ ಮೇಲಿಟ್ಟ. ಪಕ್ಕದಲ್ಲಿಯೆ ಬೆಚ್ಚನೆ ವಾತಾವರಣದ ಆನಂದ ಅನುಭವಿಸುತ್ತಾ ಸುಲ್ತಾನ ಮಂಡಿಯೂರಿ ಕೂತಿದ್ದ.

ಹುಟ್ಟಿದ ದೇಶ ತೊರೆದು ಈ ನವನಾಡಿಗೆ ಹೊಸ ಬದುಕನ್ನ ಅರಸಿ ವಲಸೆ ಹೂಡುವ ಪ್ರವೃತ್ತಿ ತೀರಾ ಹೊಸತೇನಲ್ಲ. ಮೊತ್ತಮೊದಲಿಗೆ ಹಾಗೆ ಈ ನಾಡಿಗೆ ಕಾಲಿಟ್ಟವರ ನಾಲ್ಕನೆಯದೋ ಐದನೆಯದೋ ತಲೆಮಾರು ಪೂರ್ವದಂಚಿನ ತೀರ ಪ್ರದೇಶದುದ್ದ ಈಗ ತಲೆಯೆತ್ತಿ ನಿಂತಿದ್ದವು. ಆದರೆ ಈ ಕಳೆದ ಐದಾರು ವರ್ಷಗಳಿಂದ ಖಂಡಾಂತರದ ದೇಶಗಳಲ್ಲಿ ರಾಜಕೀಯ ಪರಿಸ್ಥಿತಿ ಹದಗೆಟ್ಟು ಹಣಕಾಸಿನ ಜಾಗತಿಕ ಪರಿಸ್ಥಿತಿ ನೆಲಕಚ್ಚಿ ಪರಸ್ಪರ ಯುದ್ಧ ಹೂಡಲು ದೇಶ ದೇಶಗಳ ಚುಕ್ಕಾಣಿ ಹಿಡಿದವರು ಸಂಚು ಹೂಡಲು ಆರಂಭಿಸುತ್ತಿದ್ದಂತೆ ಏಕಾಏಕಿ ಈ ವಲಸೆಯ ಪ್ರಕ್ರಿಯೆ ಹಲವು ಪಟ್ಟು ಹಚ್ಚಿತ್ತು. ಹಗೆˌ ಯುದ್ಧˌ ಹೋರಾಟದ ಕಾರಣ ಕೊನೆಗಾಣದ ಕಷ್ಟ ಕಾರ್ಪಣ್ಯಗಳಿಗೆ ಬಲಿಯಾದ ಸಮಾಜದ ಕೆಳಸ್ತರದ ದುಡಿಯುವ ವರ್ಗದ ಮಂದಿಯ ಕೈಗಳಿಗೆ ಸಾಕಷ್ಟು ಕೆಲಸವೂ ಸಿಗದೆ ಬಡತನದ ರಸಾತಳ ಮುಟ್ಟಿ ಕಂಗಾಲಾದವರು ಹೀಗೆ ಜೀವಮಾನದ ದುಡಿಮೆಯನ್ನೆಲ್ಲ ಪಣಕ್ಕಿಟ್ಟು ಹುಳುಗಳಂತೆ ಸಿಕ್ಕ ಹಡಗುಗಳನ್ನೇರಿ ಹೇಗಾದರೂ ಸರಿ ಬದುಕುವ ಅವಕಾಶವೊಂದು ಸಿಕ್ಕರೆ ಸಾಕು ಎಂಬ ಸದಾಶಯದಲ್ಲಿ ಈ ನೆಲಕ್ಕೆ ಬಂದಿಳಿಯುತ್ತಿದ್ದಾರಂತೆ.

ಅವರಿಗೆಲ್ಲರಿಗೂ ನೆಲೆ ನಿಲ್ಲಲು ಹಾಗೂ ದುಡಿಯಲು ಸಾಕಾಗುವಷ್ಟು ನೆಲ ಪೂರ್ವದಲ್ಲಿಲ್ಲ. ಈಗಾಗಲೆ ಪೂರ್ವ ತೀರದ ಪಟ್ಟಣ ಪ್ರದೇಶಗಳ ಜನ ವಸತಿಗಳು ಜನ ಸಾಂದ್ರತೆಯಿಂದ ಬಿರಿದು ಹೋಗುತ್ತಿವೆ. ಅಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿಯೂ ಕಾಡಿನ ಹೊದಿಕೆಯ ಮೇಲೆ ಅಸಾಧ್ಯ ಒತ್ತಡ ಬಿದ್ದು ಸಾಮಾಜಿಕ ವ್ಯವಸ್ಥೆಯೆ ಏರುಪೇರಾಗುವ ಸ್ಥಿತಿ ಬರಲಿರುವದನ್ನ ಅಂದಾಜಿಸಿದ ಆಳುವ ವರ್ಗ ಈಗ ಅವರೆಲ್ಲರ ಕಣ್ಣುಗಳಿಗೂ ಸಮೃದ್ಧತೆಯ ಕನಸುಗಳನ್ನ ತುಂಬಿ ಸಾಧ್ಯವಾದಷ್ಟು ಪಶ್ಚಿಮದ ನೆಲೆಗಳತ್ತ ಅಟ್ಟುತ್ತಿದೆ.

ಈ ಮೂಲಕ ಒಂದೆ ಕಲ್ಲಿಗೆ ಎರಡು ಹಕ್ಕಿಗಳನ್ನ ಉರುಳಿಸುವ ಜಾಣ್ಮೆ ರಾಜಧಾನಿಯಲ್ಲಿ ಆಳಲು ಕೂತ ರಾಜಕಾರಣಿಗಳದ್ದು. ಒಂದುˌ ಭೂಮಿ ಮಂಜೂರು ಮಾಡಿ ಕಂದಾಯ ವಸೂಲಿ ಮಾಡಿಕೊಂಡು ಅರಾಮವಾಗಿ ತಾವು ಕೂತಿದ್ದರೂ ಸಾಕುˌ ಸ್ಥಳಿಯ ಬುಡಕಟ್ಟಿನವರ ಜೊತೆ ಈ ವಲಸಿಗರೆ ಹೋರಾಡಿ ತಮ್ಮ ಹಕ್ಕುಗಳನ್ನ ಸ್ಥಾಪಿಸಿಕೊಳ್ಳುತ್ತಾರೆ. ಮೂಲದವರನ್ನ ಅಲ್ಲಿಂದ ಒಕ್ಕಲೆಬ್ಬಿಸುವ ಸಂಕಟ ಸರಕಾರಕ್ಕಿರೋದಿಲ್ಲ. ಕೇವಲ ಎರಡೂವರೆ ದಶಕದ ಹಿಂದೆಯಷ್ಟೆ ಎರಡು ವಲಸಿಗ ಜನಾಂಗಗಳ ನಡುವೆ ನಡೆದಿದ್ದ ನಾಗರೀಕ ಯುದ್ಧವನ್ನ ಕೊನೆಗಾಣಿಸಲು ಹೆಣಗಿ ಹೈರಾಣಾಗಿದ್ದ ಸರಕಾರಕ್ಕೆ ಈಗ ಮತ್ತೊಂದು ತಲೆನೋವಿನ ಕಾರ್ಯಾಚರಣೆ ಮಾಡುವ ಹಮ್ಮಸ್ಸೂ ಇರಲಿಲ್ಲˌ ಅದಕ್ಕೆ ಸಾಲುವಷ್ಟು ಸಂಪನ್ಮೂಲಗಳೂ ಅದರ ಬೊಕ್ಕಸದಲ್ಲಿರಲಿಲ್ಲ. ಎರಡನೆಯದಾಗಿˌ ಕಾಡು ಕಡಿದು  ನಾಡು ಕಟ್ಟುವ ವಲಸಿಗ ಮಂದಿ ಪಶ್ಚಿಮದ ಬರಡು ನೆಲವನ್ನೆಲ್ಲ ಫಲವತ್ತಾಗಿಸಿ ದೇಶವನ್ನ ಸಹಜವಾಗಿ ವಿಸ್ತರಿಸುತ್ತಾರೆ. ದೇಶದ ಆದಾಯ ಹೆಚ್ಚಿ ಸಿರಿ ಸಂಪತ್ತು ಶ್ರಮವಿಲ್ಲದೆ ಹೆಚ್ಚುತ್ತಾ ಹೋಗುತ್ತದೆ. ಹೀಗೆ ಹೂಡಿದ ಹಂಚಿಕೆಯ ಫಲವೆ ಈ ಮಹಾವಲಸೆ ಅನ್ನುವುದು ಸ್ವಲ್ಪವಾದರೂ ಆಲೋಚನಾ ಶಕ್ತಿಯಿರುವ ಯಾವ ಮಡ್ಡ ಮಂಡೆಗಾದರೂ ಹೊಳೆದೆ ಹೊಳಿಯುತ್ತಿತ್ತು.

"ದೇಶವೊಂದನ್ನ ಒಂದೆ ರಾತ್ರಿಯಲ್ಲಿ ಕಟ್ಟಲಕ್ಕಾಗುವದಿಲ್ಲ. ಅಪಾರ ಶ್ರಮ ಬೇಡುವ ಅನವರತ ದುಡಿಮೆ ದೇಶವೊಂದು ಸ್ವಾವಲಂಬಿಯಾಗಿ ತನ್ನ ಸುತ್ತಮುತ್ತಲ ನಾಡುಗಳ ನಡುವೆ ಸ್ವಾಭಿಮಾನದಿಂದ ತಲೆಯೆತ್ತಿ ನಿಲ್ಲುವಂತೆ ಮಾಡುತ್ತದೆ. ದೇಶವೊಂದು ಬಲಿಷ್ಠವಾಗಿ ಬೆಳೆದು ನಿಂತು ತನ್ನ ನಾಗರೀಕರಿಗೆ ಇತರರ ಕಣ್ಣಲ್ಲಿ ಹೊಟ್ಟೆಕಿಚ್ಚು ಹುಟ್ಟಿಸುವ ವಿಸ್ಮಯ ಹಾಗೂ ಬೆರಗು ಹೊತ್ತ ಮೆಚ್ಚುಗೆ ಬರಿಸಬೇಕಿದ್ದಲ್ಲಿ ಅದರ ಏಳ್ಗೆಗೆ ವಿವಿಧ ಸ್ತರಗಳಲ್ಲಿ ವೈವಿಧ್ಯಮಯವಾಗಿ ಪಳಗಿದ ಕುಶಲ ಕರ್ಮಿಗಳ ಶ್ರಮವೂ ಸಹ ಉನ್ನತ ಸ್ತರದ ಘನತೆ ಹೊತ್ತ ಕಸುಬು ಮಾಡುವ ವರ್ಗದವರಷ್ಟೆ ಮುಖ್ಯವಾಗುತ್ತದೆ. ನಾಡೊಂದು ಸಶಕ್ತವಾಗಲು ರೈತಾಪಿಗಳಷ್ಟೆ ಕಾರ್ಮಿಕರಿಗೂ ಕಾರ್ಮಿಕರಷ್ಟೆ ನಿರ್ವಾಹಕರಿಗೂ ನಿರ್ವಾಹಕರಷ್ಟೆ ವೈದ್ಯರಿಗೂ ವೈದ್ಯರಷ್ಟೆ ರಾಜಕಾರಣಿಗಳಿಗೂ ರಾಜಕಾರಣಿಗಳಷ್ಟೆ ವ್ಯಾಪಾರಿಗಳಿಗೂ ವ್ಯಾಪಾರಿಗಳಷ್ಟೆ ಕೂಲಿಗಳಿಗೂ ಕೂಲಿಗಳಷ್ಟೆ ವಲಸೆಗಾರರಿಗೂ ಪ್ರಮುಖ ಪಾತ್ರವಿರುತ್ತದೆ" ಅನ್ನುತ್ತಿದ್ದ ಅಪ್ಪನ ದೃಢ ವಿಶ್ವಾಸದ ನುಡಿಗಳು ಆಗಾಗ ಅವನಿಗೆ ನೆನಪಾಗುತ್ತಿದ್ದವು.

ಬಾಲ್ಯದಲ್ಲಿ ಅವನು ಈ ಮಾತುಗಳನ್ನ ಕೇಳಿಕೊಂಡೆ ಬೆಳೆದಿದ್ದ. ದಿನ ಕಳೆದಂತೆ ಹೆಚ್ಚುತ್ತಿರುವ ವಲಸೆ. ಆ ವಲಸೆಗಾರರ ಒತ್ತಡದಿಂದ ತಾವಿರುವ ವಠಾರದ ಸುತ್ತಮತ್ತಲೂ ದಿನ ಕಳೆದಂತೆ ಹೆಚ್ಚುತ್ತಿರುವ ಜನ ದಟ್ಟಣೆ ಅವನ ಅಮ್ಮನಿಗೆ ಕಿರಿಕಿರಿ ಹುಟ್ಟಿಸುತ್ತಿತ್ತು. ಮೊದಲಿನಷ್ಟು ಸೊಗಸಾಗಿಲ್ಲದೆ ನಾಡು ಸೊರಗುತ್ತಿದೆ. ಅದಕ್ಕೆ ಈ ಅಪರಾ ತಪರಾ ದೇಶದ ಒಳ ನುಗ್ಗುತ್ತಿರುವ ವಲಸಿಗರೆ ನೇರ ಕಾರಣ ಎಂದವಳು ಅಸಹನೆಯಿಂದ ಪೇಚಾಡುತ್ತಿದ್ದಳು. ಒಟ್ಟಿನಲ್ಲಿ ಅವಳಿಗೆ ಹೀಗೆ ಹೆಚ್ಚುತ್ತಿರುವ ಜನಸಂಖ್ಯೆ ಹಿತಕಾರಿಯಾಗಿರಲಿಲ್ಲ. ಹಾಗೆಲ್ಲ ಅವಳು ವಲಸೆಗಾರರನ್ನ ಮೊದಲಿಸಿ ಮಾತನಾಡುವ ಸಂದರ್ಭಗಳಲ್ಲಿ ಅಪ್ಪ ಮೇಲಿನ ಮಾತುಗಳನ್ನ ಹೇಳಿˌ ಸೂಕ್ಷ್ಮವಾಗಿ ಮಾತಿನ ನಡುನಡುವೆ ನಾವೂ ವಲಸಿಗರ ಸಂತಾನವೆ ತಾನೇ? ಹೀಗೆ ವಿರೋಧಿಸಲು ನೈತಿಕ ಅಧಿಕಾರ ನಮಗಿಲ್ಲ ಎನ್ನುವುದನ್ನೂ ಅವಳಿಗೆ ನೆನಪಿಸುತ್ತಿದ್ದ.***********

"ಐದು ಬೆರಳು ಸರಿಸಮವಲ್ಲˌ
ಪ್ರಾಪಂಚಿಕರೆಲ್ಲರೂ ಒಂದೆ ತರಹ ಆಲೋಚಿಸಲ್ಲ"

ಈ ಪ್ರಪಂಚವೆ ವಿಚಿತ್ರ. ಇಲ್ಲಿ ಅಸಮಾನತೆಯೆ ಬದುಕಿನ ಮೂಲಮಂತ್ರ. ತಾನು ಮಾಡಿದ್ದು ಸರಿಯೆನ್ನುವ ನಾವು ಅದೆ ಕೃತ್ಯವನ್ನು ತನಗಾಗದವರ್ಯಾರಾದರು ಮಾಡಿದ ತಕ್ಷಣ ಟೀಕಿಸುತ್ತೇವೆ. ಕೈಯೆತ್ತಿ ಕೊಡುವ ಅವಕಾಶವಿದ್ದರೂ ಕೃಪಣತೆ ತೋರಿದವರನ್ನ ಸ್ತುತಿಸುತ್ತೇವೆ. ಕೂಲಿ ಕೆಲಸ ಮಾಡುವ ಶ್ರಮಿಕರನ್ನ ಕೀಳಾಗಿ ಕಾಣುತ್ತೇವೆˌ ವಿದ್ಯಾವಂತ ಜೀತದಾಳುಗಳನ್ನ ಗೌರವಾದರಗಳಿಂದ ನೋಡುತ್ತೇವೆ. ಕಷ್ಟಪಟ್ಟು ಗೇಯ್ದು ಬೆಳೆವ ರೈತನಿಗೆ ಸಲ್ಲದ ಮರ್ಯಾದೆ ಅದೆ ಬೆಳೆಯನ್ನ ಮಧ್ಯವರ್ತಿಯಾಗಿ ಮಾರಿ ದಳ್ಳಾಳಿ ಸಂಪಾದಿಸುವ ವ್ಯಾಪಾರಿಗೆ ಸಲ್ಲುತ್ತದೆ. ತಾವೆ ವಲಸೆ ಬಂದಿದ್ದವರ ಮತ್ತೊಂದು ತಲೆಮಾರಿನ ಅಮ್ಮ ತನ್ನಂತದ್ದೆ ಮತ್ತೊಂದು ಕುಟುಂಬ ನೆಮ್ಮದಿಯ ನಾಳೆಯನ್ನ ಕಟ್ಟಿಕೊಳ್ಳಲು ಬಂದ ತಕ್ಷಣ ಸಿಡುಕಿದಳುˌ ಕೂಡಿಟ್ಟ ದಿನಸಿಯನ್ನ ತಿಂಗಳಾನುಗಟ್ಟಲೆ ಹಾಗೆ ಬಿಟ್ಟರೆ ಹುಳ ಬಂದುˌ ಬೂಷ್ಟು ಹಿಡಿದುˌ ಕಡೆಗೆ ಕೊಳೆತು ಹೋಗುವ ಅದೆಲ್ಲವನ್ನೂ ನೆಲದಲ್ಲಿ ಗುಂಡಿ ತೋಡಿ ಮಣ್ಣುಪಾಲು ಮಾಡಬೇಕಾಗಿ ಬರುತ್ತೆ ಅನ್ನುವ ಅರಿವಿದ್ದರೂ ಆ ರೈಲ್ವೆ ಗುತ್ತಿಗೆದಾರನಿಗೆ ಉಟ್ಟ ಬಟ್ಟೆಯಲ್ಲೆ ಚಳಿಯ ಪ್ರಕೋಪಕ್ಕೆ ಹೆದರಿ ಹಿಂದಿರುಗಿ ಹೊರಟಿದ್ದ ಕಾರ್ಮಿಕರಿಗೆ ಕೈಯೆತ್ತಿ ಹಂಚಿಯಾದರೂ ಅವೆಲ್ಲವನ್ನ ಖಾಲಿ ಮಾಡುವ ಅಂತನಿಸಲಿಲ್ಲ! ಒಟ್ಟಿನಲ್ಲಿ ಸಮಾನತೆ ಒಂದು ಸುಂದರ ಕಲ್ಪನೆಯಷ್ಟೆ. ಎಲ್ಲರೂ ಸರಿಸಮಾನರಾಗಿˌ ತಮ್ಮ ಬಣ್ಣˌ ವೃತ್ತಿ ಹಾಗೂ ಲಿಂಗದ ಹೊರತೂ ಸಹ ಉಳಿದೆಲ್ಲರಿಗೂ ಸಮಾನರಾಗಿ ಗೌರವಾದರ ಗಿಟ್ಟಿಸುವ ದೇಶ ಇಂದಲ್ಲ ನಾಳೆಯಾದರೂ ತಮ್ಮದಾದೀತೆ? ಎಂದವನು ಯೋಚಿಸುತ್ತಿದ್ದ.

ಚಹಾ ಕುದಿಯಲಿಟ್ಟ ಕೈಪಾತ್ರೆಯೊಳಗೆ ನೀರು ಚಹಾ ಸೊಪ್ಪಿನೊಡನೆ ಮರಳುತ್ತಾ ಕುದಿಯುತ್ತಿರುವದನ್ನೆ ತದೇಕ ಚಿತ್ತನಾಗಿ ನೋಡುತ್ತಾ ಇರುವಂತೆ ಅವನ ಮನೋವ್ಯಾಪಾರ ಈ ದಿಕ್ಕಿನಲ್ಲಿ ಸಾಗುತ್ತಿತ್ತು. ಕೊರೆವ ಚಳಿಗೆ ಕುದ್ದ ಚಹಾ ಮತ್ತೆ ಉಪ್ಪು ಬಿಸ್ಕತ್ತುಗಳು ಚೇತೋಹಾರಿ ಅನುಭವ ನೀಡಿದವು. ದೇಹದ ನರನಾಡಿಗಳಲೆಲ್ಲಾ ಒಂಥರಾ ಬೆಚ್ಚನೆ ಭಾವ ಹರಿದಾಡಿದಂತಾಯಿತು. ಸುಲ್ತಾನ ಮಂಡಿಯೂರಿ ಸುಸ್ತನ್ನ ಸುಧಾರಿಸಿಕೊಳ್ಳುತ್ತಿದ್ದ. ಅವನ ಕುತ್ತಿಗೆಯ ಜೋಳಿಗೆಯಲ್ಲಿದ್ದ ಮೇವು ಬಹುತೇಕ ತೀರಿ ಹೋಗಿತ್ತು. ಇಲ್ಲಿ ಅವನಿಗೆ ತಿನ್ನಿಸುವ ಆಹಾರ ಪದಾರ್ಥವೇನೂ ಇರಲಿಲ್ಲ. ಬೆಚ್ಚನೆ ವಾತಾವರಣದ ಹೊರತು ಮತ್ತಿನ್ನೇನೂ ಅವನಿಗೆ ಲಭ್ಯವಿರಲಿಲ್ಲ.

ಹಿಮ ಮಳೆಯ ಪ್ರಕೋಪ ಕೊಂಚ ಕಡಿಮೆಯಾದ ಹಾಗಿತ್ತು. ಒಂದೆ ಸಮನೆ ಏಕತಾನದಂತೆ ಸೂರಿಗೆ ಬಡಿದು ಸದ್ದೆಬ್ಬಿಸುತ್ತಿದ್ದ ಹಿಮದ ಹನಿಗಳ ಸದ್ದು ಕೊಂಚ ಕೊಂಚವಾಗಿ ಕಡಿಮೆಯಾಗುತ್ತಾ ಬಂದು ಕ್ರಮೇಣ ಇಲ್ಲವಾಯಿತು. ಆದರೆ ಗಾಳಿ ಬೀಸುವ ವೇಗವೇನೂ ಸೋತು ನಿಂತಿರಲಿಲ್ಲ. ಅಗ್ಗಿಷ್ಟಿಯ ಚುಮಣಿಯೊಳಗಿಂದಲೂ ಸಹ ಮನೆಯೊಳಗೆ ನುಗ್ಗಲು ಅದು ಹುಯ್ಯಲಿಡುತ್ತಾ ಹವಣಿಸುತ್ತಿತ್ತು. ಒಂದರೆ ಘಳಿಗೆ ಅವನಿಗೆ ಈ ಬೆಚ್ಚನೆ ಆವರಣದಾಚೆ ಕಾಲಿಡುವುದೆ ಬೇಡˌ ಹಾಗೆಯೆ ಕೊಂಚ ಅಗ್ಗಿಷ್ಟಿಕೆಯ ಉರಿ ಹೆಚ್ಚಿಸಿ ಅದರ ಉರಿಗೆ ಬೆಂಕಿ ಕಾಯಿಸಿಕೊಳ್ಳುತ್ತಾ ಹಾಗೆಯೆ ಸುಖವಾಗಿ ಮಲಗಿ ನಿದ್ರಿಸೋಣ ಅನ್ನಿಸಿತು. ಮರುಕ್ಷಣವೆ ತನ್ನ ಸುಖಲೋಲುಪ ಮನಸಿನ ಸೋಮಾರಿ ಆಲೋಚನೆಗೆ ಅವನೆ ನಾಚಿಕೊಂಡ. ಕರ್ತವ್ಯದ  ಕರೆಯನ್ನ ಮೀರುವಂತಿರಲಿಲ್ಲ. ಎಲ್ಲೆಂದರಲ್ಲಿ ಮಲಗಿ ನಿಶ್ಚಿಂತೆಯಿಂದ ಕಾಲ ಹಾಕಲು ಈಗ ನಾನು ಒಂಟಿಯಲ್ಲ. ತನಗೂ ಸಂಸಾರವಿದೆˌ ಸಾಂಸಾರಿಕ ಜವಬ್ದಾರಿಗಳಿವೆ ಅನ್ನುವ ವಾಸ್ತವ ಅವನನ್ನು ಎಚ್ಚರಿಸಿತು. ಅವಳಿಗೆ ಬೇರೆ ಅದೇನೆ ಆದರೂ ಈ ರಾತ್ರಿಯೆ ಮರಳಿ ಬರುತ್ತೇನೆ ಅನ್ನುವ ಭರವಸೆ ಕೊಟ್ಟು ಬಂದಿದ್ದ. ಸಾಲದ್ದಕ್ಕೆˌ ಕುದುರೆ ಕಳ್ಳರ ಅವ್ಯಕ್ತ ಭಯˌ ಎಮ್ಮೆ ತೋಳಗಳ ದಾಳಿಯ ಕಲ್ಪಿತ ಗುಮ್ಮ ಇವೆಲ್ಲವೂ ಅವನ ಮನೆಯೆಡೆಗಿನ ಸೆಳೆತವನ್ನು ಮತ್ತಷ್ಟು ಉದ್ದೀಪಿಸಿದವು. ಆಗಿದ್ದಾಗಲಿ ಹೊರಡೋದೆ ಸರಿ ಎಂದು ನಿರ್ಧರಿಸಿ ಮರು ಆಲೋಚನೆಗೆ ಆಸ್ಪದ ಕೊಡದವನಂತೆ ಕೈ ಪಾತ್ರೆ ತುಂಬ ಹೊರಗಿನ ಹಿಮ ಗೋರಿಕೊಂಡು ತಂದು ಅಗ್ಗಿಷ್ಟಿಕೆಯಿಂದೇಳುತ್ತಿದ್ದ ದೇದೀಪ್ಯಮಾನ ಉರಿಯ ಮೇಲೆ ಸುರಿದು ಅದನ್ನ ನಂದಿಸಿದ.

ಇನ್ನೊಂಚೂರು ಚಳಿ ಕಾಯಿಸುತ್ತಾ ಹಾಗೆ ಕೂತರೆ ಮತ್ತೆ ಜಡ ಆವರಿಸಬಹುದು ಅನ್ನುವ ಹೆದರಿಕೆ ಅವನನ್ನ ಕಾಡಿತ್ತು. ಅಲ್ಲದೆ ಹಾಗೆಲ್ಲ ಅರೆಬರೆ ಬೆಂಕಿ ಉಳಿಸಿ ಹೋಗುವುದು ಅಪಾಯಕಾರಿ. ಒಂದೊಮ್ಮೆ ಚುಮಣಿ ದಾರಿಯಲ್ಲಿ ಒಳ ನುಗ್ಗುವ ಗಾಳಿ ಒಂದೆ ಕಿಡಿಯನ್ನ ನೆಲಕ್ಕೆ ದಾಟಿಸಿದರೂ ಸಾಕು ಇಡಿ ಮನೆಗೆ ಉರಿ ವ್ಯಾಪಿಸಿಕೊಂಡು ಅನಾಹುತವಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿರಲಿಲ್ಲ. ಮಂದರಿಯಡಿ ಮುದುಡಿ ಮಂಡಿ ಹಾಕಿಕೊಂಡು ಕೂತಿದ್ದ ಸುಲ್ತಾನನ ಬೆನ್ನು ಚಪ್ಪರಿಸಿ ಮೇಲೆಬ್ಬಿಸಿದ. ಬಿಗಿದ ಜೀನು ಸರಿಯಾಗಿದೆಯೆ ಎಂದು ಪರಿಕ್ಷಿಸಿ ತನ್ನ ಕೈಗವಸು ತೊಟ್ಟು ಮೂಗುದಾರ ಹಿಡಿದು ಕುದುರೆಯನ್ನ ಹೊರ ನಡೆಸಿಕೊಂಡು ಬಂದ. ಔಷಧೋಪಚಾರದ ಕಾರಣ ಕುದುರೆಯ ಶೀತ ಬಾಧೆ ಕಾಡದೆ ನಿಂತು ಹೋಗಿತ್ತು. ಹತ್ತು ಹದಿನಾಲ್ಕು ಮೈಲಿಯಾಚೆ ಮನೆ. ಇನ್ನೇನು ಮುಟ್ಟಿ ಬಿಟ್ಟೆವು. ಅನಂತರ ಅದೇನೆ ಶೀತ ಇದ್ದರೂ ಅದರಿಂದ ಹಯ ಹೈರಾಣಾಗದಂತೆ ಕಾಪಾಡಿಕೊಳ್ಳುವ ಆತ್ಮವಿಶ್ವಾಸ ಅವನಲ್ಲಿತ್ತು. ಕ್ಯಾಂಪು ಮನೆಯ ಬಾಗಿಲು ಭದ್ರ ಪಡಿಸಿˌ ಒಳಗಿಂದಲೆ ತಂದಿದ್ದ ಹಗ್ಗವೊಂದನ್ನ ಚಿಲಕಕ್ಕೆ ಕಟ್ಟಿ ಬಿಗಿದು ಕುದುರೆಯನ್ನೇರಿದ.

ಹಾಗೆಯೆ ದಿಕ್ಸೂಚಿಯ ಸೂಚನೆ ಅನುಸರಿಸುತ್ತಾ ಮುಂದಕ್ಕೆ ಇಬ್ಬರೂ ಚಲಿಸಿದರು. ಮಳೆಯೇನೋ ನಿಂತಿತ್ತು ಸರಿˌ ಆದರೆ ಚಳಿ ಮಾತ್ರ ಗಾಳಿಯೊಡನೆ ಕೂಡಿ ಕಾಡುತ್ತಲೆ ಇತ್ತು. ಒಂದೆರಡು ಮೈಲಿ ದೂರ ಅವರ ಪಯಣ ಸಾಗಿರಬಹುದುˌ ಆಗಸದಲ್ಲಿ ಮೋಡ ಕ್ರಮೇಣ ಕಾಣೆಯಾಗಿ ಬೆಳದಿಂಗಳ ಬೂದು ಬೆಳಕು ಸೂಸುತ್ತಾ ಚಂದ್ರ ಹೊಳೆಯುವದು ಗೋಚರವಾಗುತ್ತಿತ್ತು. ಆಕಾಶಕ್ಕಂಟಿಸಿದ ಮಂದ ಬೆಳಕಿನ ದೊಂದಿಯ ಹಾಗೆ ಚಂದ್ರ ಸುರಿಯುತ್ತಿದ್ದ ಬೆಳದಿಂಗಳಲ್ಲಿ ಭೂಮಿಯನ್ನ ಆವರಿಸಿದ್ದ ಮಂಜು ಬೆಳ್ಳಗೆ ಹೊಳೆಯತ್ತಿತ್ತು. ಆ ಬೆಳ್ಳನೆ ಮಂಜಿನ ಮೇಲಿಂದ ಒಂದು ಕಪ್ಪು ತೆರೆ ಇವರತ್ತಲೆ ಸಾಗಿ ಬರುತ್ತಿರವಂತೆ ಇವನಿಗೆ ಕಂಡಿತು. ಅದೊಂದು ಭ್ರಮೆಯಾಗಿರಬಹುದೆ? ಎಂದು ಯೋಚಿಸುವ ಹೊತ್ತಿಗೆಲ್ಲ ಆ ಅಲೆ ಮುಖಾಮಖಿಯಾಗಿ ಒಂದೈನೂರು ಗಜದಷ್ಟು ಸನಿಹ ಬಂದಾಗಿತ್ತು.

ಓ ದೇವರೆ ಎಮ್ಮೆತೋಳಗಳ ಹಿಂಡು! ಈಗಿರುವ ಪರಿಸ್ಥಿತಿಯಲ್ಲಿ ಸಮಯಾವಧಾನದಿಂದ ಶಾಂತ ಚಿತ್ತರಾಗಿ ಅವುಗಳನ್ನ ಕೆರಳಿಸದಂತೆ ಮುಂದುವರಿಯದೆ ಬೇರೆ ಉಪಾಯವೆ ಇಲ್ಲ. ಹಿಂತಿರುಗಿ ದೌಡಾಯಿಸಲೂ ಸಹ ಅಸಾಧ್ಯ ಅನ್ನುವ ಪರಿಸ್ಥಿತಿ. ಹಾಗೊಮ್ಮೆ ಹುಚ್ಚು ಸಾಹಸಕ್ಕಿಳಿದರೆ ಅಟ್ಟಿಸಿಕೊಂಡು ಬಂದು ತಮ್ಮಿಬ್ಬರನ್ನೂ ಹರಿದು ಹಂಚಿ ತಿನ್ನಲು ಅವಕ್ಯಾವ ತಡೆ? ಇಂತಹ ಪರಿಸ್ಥಿತಿ ವಿಪರೀತ ಎದುರಾದರೆ ಶಾಂತವಾಗಿ ಅದನ್ನ ಎದುರಿಸಬೇಕು ಅಂತ ಅಪ್ಪ ಹೇಳುತ್ತಿದ್ದ ಮಾತು ನೆನಪಾಯಿತು. ಅಲ್ಲದೆ ಅಂತಹ ಅನುಭವ ಬಾಳಲ್ಲೆ ಮೊದಲ ಬಾರಿ ಆಗುತ್ತಿದೆ. ಹಿಂಡು ತೀರಾ ಹತ್ತಿರಕ್ಕೆ ಬಂತು.

ಗುಂಪಿನ ನಾಯಕಿ ಇಪ್ಪತ್ತೋ ಮೂವತ್ತೋ ಎಮ್ಮೆತೋಳಗಳನ್ನ ಮುನ್ನಡೆಸಿಕೊಂಡು ಶಾಂತವಾಗಿ ಹೋಗುತ್ತಿದೆ. ರಸ್ತೆಯ ಎಡ ಅಂಚಿಗೆ ಇವರಿಬ್ಬರ ಇರುವನ್ನ ಅದು ಗಮನಿಸಿತಾದರೂ ಅಲಕ್ಷ್ಯಿಸಿ ಮುನ್ನಡೆಯಿತು. ಅದರ ಬಾಯಲ್ಲಿನ ರಕ್ತ ಅಂಟಿದ ಕಲೆ ಬೆಳದಿಂಗಳಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಅಂದರೆ ಹತ್ತಿರದಲ್ಲೆ ಎಲ್ಲೋ ಭರ್ಜರಿ ಬೇಟೆಯಾಡಿ ಭೂರಿ ಭೋಜನ ಮುಗಿಸಿವೆ. ಹಸಿದ ಹೊಟ್ಚೆಯಲ್ಲಿಲ್ಲದ ಕಾರಣ ಆಕ್ರಮಣದ ಭಯವಿರಲಿಲ್ಲ. ಹಿಂಡು ಅವರ ಪಕ್ಕದಲ್ಲಿಯೆ ಒಂದೆ ಗುರಿಯಟ್ಟಂತೆ ತಮ್ಮ ನಾಯಕರ ಹಿಂದೆ ಶಿಸ್ತಿನಿಂದ ಸಾಗಿ ಹೋಗುವಾಗ ಅವುಗಳ ಪುಟ್ಟ ವಯಸ್ಕ ಪುಂಡ ತೋಳಗಳನ್ನೆಲ್ಲ ಗುಂಪಿನ ಮಧ್ಯದಲ್ಲಿದ್ದವು. ಹಿರಿಯ ಅನುಭವಿ ಪ್ರಾಯಸ್ಥ ಮಾಗಿದವುಗಳು ಗುಂಪಿನ ಸುತ್ತಲೂ ಸಾಗಿ ಮಂದುವರೆಯುತ್ತಿದ್ದವು. ಅವುಗಳಲ್ಲೂ ಒಂದು ರೀತಿಯ ಶಿಸ್ತಿದೆ!*************


ಎಮ್ಮೆತೋಳಗಳ ಉಸಿರು ಸೋಕುವಷ್ಟು ದೂರದಲ್ಲಿ ಅವುಗಳು ಗುಟುರು ಹಾಕುತ್ತಾ ಸಾಗುತ್ತಿದ್ದಾಗ ಮಿಸುಕಾಡದಂತೆ ಸುಲ್ತಾನನ ಲಗಾಮನ್ನ ಗಟ್ಟಿಯಾಗಿ ಹಿಡಿದುಕೊಂಡಿದ್ದ. ಇವನ ಎದೆ ಬಡಿತ ನಗಾರಿಯಂತಾಗಿ ಸ್ವತಃ ಇವನಿಗೆ ಅದರ ಸದ್ದು ಕೇಳುತ್ತಿತ್ತು. ಅಂತೂ ಗಂಡಾಂತರ ಕಳೆಯಿತು. ಇವರ ವಿರುದ್ಧ ದಿಕ್ಕಿಗೆ ಮತ್ತೊಂದು ಐನೂರು ಗಜ ಆ ಹಿಂಡು ಸಾಗಿ ಹೋದ ಮೇಲೆ ಇವ ಬಿಗಿಯಾಗಿ ಎಳೆದು ಲಗಾಮನ್ನ ಸಡಿಲ ಬಿಟ್ಟ. ಬದುಕಿದೆಯ ಬಡಜೀವವೆ ಅನ್ನುವಂತೆ ಕುದುರೆ ಒಂದೆ ನೆಗೆತಕ್ಕೆ ಚಿಮ್ಮಿ ಮನೆಯ ದಿಕ್ಕಿಗೆ ದೌಡಾಯಿಸುತ್ತಾ ಓಡಿತು. ಆ ರಣಭೀಕರ ಚಳಿಯಲ್ಲಿಯೂ ಸುಲ್ತಾನ ಹೆದರಿ ಬೆವರಿ ತೊಪ್ಪೆಯಾಗಿದ್ದುದು ಅವನ ಅನುಭವಕ್ಕೆ ಬಂತು. ಪರವಾಗಿಲ್ಲ ಅವನಿಗೆ ಒಡೆಯನ ಅಣತಿಗೆ ತಕ್ಕಂತೆ ವರ್ತಿಸುವ ಗುಣ ತನ್ನ ತಂದೆ ತಾಯಿಂದಲೆ ಬಳುವಳಿಯಾಗಿ ಬಂದಿದೆ. ಅವನೇನಾದರೂ ಹೆದರಿಕೆಯಲ್ಲಿ ಕೆನೆದಾಡಿ ಹಾರಿ ರಂಪ ಮಾಡಿದ್ದಿದ್ದರೆ ಎಡವಟ್ಟಾಗುವ ಸಂಭವವಿತ್ತು. ಮೆಚ್ಚುಗೆಯಿಂದ ಅವನು ಸುಲ್ತಾನನ ಕುತ್ತಿಗೆ ಚಪ್ಪರಿಸಿದ.

ಸೋಮ ಸರೋವರಕ್ಕೆ ಇನ್ನೂ ಮೈಲು ದೂರದಲ್ಲಿರವ ಹಾಗೆ ಚಂದ್ರನ ತಂಪು ಬೆಳಕಿನಲ್ಲಿ ಎಡಕ್ಕೆ ಒಂದು ಮುನ್ನೂರು ಗಜ ದೂರದಲ್ಲಿದ್ದ ದಿಬ್ಬದ ಮೇಲೆ ಗಡವ ಎಮ್ಮೆತೋಳವೊಂದು ಒಬ್ಬಂಟಿಯಾಗಿ ತನ್ನ ಹಿಂಗಾಲಗಳ ಮೇಲೆ ಚಂದ್ರನನ್ನ ಒಮ್ಮೆ ಆ ಹಿಂಡು ಸಾಗಿ ಬಂದ ದಾರಿಯನ್ನೊಮ್ಮೆ ಅವಲೋಕಿಸುತ್ತಾ ಶಾಂತವಾಗಿ ಕೂತಿದ್ದು ಕಂಡಿತು. ಬಹುಶಃ ಆ ಪ್ರದೇಶದಲ್ಲೆ ಅಳಿದುಳಿದು ಹೋಗಿರುವ ಕಡೆಯ ಕಂತಿನ ತೋಳಗಳಿವು. ದಿನದಿಂದ ದಿನಕ್ಕೆ ಮಾನವರ ಅತಿಕ್ರಮಣದಿಂದ ಕುಗ್ಗುತ್ತಿರುವ ತಮ್ಮ ನೆಲೆಯನ್ನ ತ್ಯಜಿಸಿ ಶಾಶ್ವತವಾಗಿ ಅವು ಉತ್ತರದಿಂದ ದೂರದ ದಕ್ಷಿಣಕ್ಕೆ ಆ ಹಾಡಿಯ ಮಂದಿಯಂತೆ ಗುಳೆ ಹೋಗುತ್ತಿರಬಹುದು. ಇನ್ನು ಮುಂದೆ ಅವು ಇಲ್ಲಿಂದ ಶಾಶ್ವತವಾಗಿ ಕಣ್ಮರೆಯಾಗಬಹುದು ಅನಿಸಿ ಪೆಚ್ಚಾದನವನು. ತಮ್ಮ ದುರಾದೃಷ್ಟವನ್ನ ನೆನೆದುಕೊಂಡು ಹಿಂದೊಮ್ಮೆ ತಾವು ನೆಲೆಸಿದ್ದ ತಾಣವನ್ನ ಆ ಒಂಟಿತೋಳ ಕಣ್ತುಂಬಿಸಿ ಕೊಳ್ಳುತ್ತಿರುವಂತೆ ಅವನಿಗೆ ಭಾಸವಾಯಿತು. ಅದೂ ಸಹ ಅವನನ್ನ ಕ್ಷಣಕಾಲ ದಿಟ್ಟಿಸಿ ಅನಂತರ ಅಲಕ್ಷ್ಯಿಸಿ ಚಂದ್ರನಿಗೆ ಮುಖ ಮಾಡಿ ಸುದೀರ್ಘವಾಗಿ ಬಾಯೆತ್ತಿ ಊಳಿಟ್ಟಿತು. ಅದೊಂದು ವಿಷಾದದ ಅರ್ತನಾದದಂತೆ ಅದೆ ವೇಗದಲ್ಲಿ ಸಾಗಿ ಹೋಗುತ್ತಿದ್ದ ಅವನ ಕಿವಿಗೆ ಅಲೆಯಲೆಯಾಗಿ ಕೇಳಿಸಿತು.

ಸೋಮ ಸರೋವರ ಮತ್ತಷ್ಟು ಗಡುಸಾಗಿ ತಣ್ಣಗೆ ಮಲಗಿತ್ತು. ಸರೋವರದ ಮೇಲೆ ಸಾಗಿಯೆ ಅವರು ಆಚೆ ದಡ ಮಟ್ಟಿದರು. ಮನೆಗಿನ್ನು ಮೂರೆ ಮೈಲಿ ಅಂತರ! ಬೆಳಗ್ಗಿನಂತೆ ಮತ್ತೆ ಕುದುರೆ ಮಗ್ಗರಿಸದಿರಲಿ ಎಂದು ಹಾರೈಸುತ್ತಲೆ ನಾಗಲೋಟ ಮಂದುವರೆಸಿದ. ಗಮ್ಯ ದೃಗ್ಗೋಚರವಾದದ್ದೆ ನೆಮ್ಮದಿಯ ಸುಳಿಗಾಳಿ ಸೋಕಿದಂತಾಗಿ ಪಟ್ಟ ಪ್ರಯಾಣದ ಕಷ್ಟ ಕಾರ್ಪಣ್ಯಗಳೆಲ್ಲ ಮರೆತು ಹೋಯಿತು. ಮತ್ತೊಂದು ಹಿಮದ ಮಳೆ ಬೀಳುವ ಮೊದಲು ಮನೆಯ ಬೇಲಿಯನ್ನವನು ದಾಟಿಯಾಗಿತ್ತು. ಸುಲ್ತಾನನ ಬೆನ್ನಿಂದ ಹಾರಿ ಕೆಳಗಿಳಿದು ಮನೆಯೆಡೆಗೆ ದಿಟ್ಟಿಸಿದವನಿಗೆ ಲಾಟೀನಿನ ಹಾಗೂ ಅಗ್ಗಿಷ್ಟಿಕೆಯ ಬೆಳಕು ದೂರದಿಂದಲೆ ಮನೆಯೊಳಗೆ ಬೆಳಕಾಗಿರಿಸಿರುವುದು ಕಂಡಿಯ ಗಾಜಿನ ಮೂಲಕ ಮಂದವಾಗಿ ಕಾಣಿಸಿತು. ಹಟ್ಟಿಯ ಬಾಗಿಲು ಸರಿಸಿದಾಗ ಒಂದರೆ ಕ್ಷಣ ಶೀತಗಾಳಿ ಒಳನುಗ್ಗಿ ಒಳಗಿನ ಬೆಚ್ಚನೆ ಹವೆ ಮತ್ತೆ ಚಳಿಯ ತಕ್ಕೆಗೆ ಜಾರಿದ ಕಾರಣ ಒಂದರೆಕ್ಷಣ ಕೊಟ್ಟಿಗೆಯ ಸಹವಾಸಿಗಳು ನವಿರಾಗಿ ನಡುಗಿದವು. ಹೊತ್ತಲ್ಲದ ಹೊತ್ತಿನಲ್ಲಿ ಕೊಟ್ಟಿಗೆಯ ಮುಖದ್ವಾರ ತೆಗೆದದ್ದಕ್ಕೊ ಏನೋ ಕ್ಷಣಕಾಲ ಗಾಬರಿಯಾದ ಜಾನುವಾರುಗಳು ಒಳಗೆ ಬಂದದ್ದು ತಮ್ಮೆಜಮಾನ ಹಾಗೂ ಸುಲ್ತಾನನೆಂದು ಅರಿವಾಗುತ್ತಲೆ ನಿರಾಳವಾದವು. ಅವರಿಬ್ಬರ ಪರಿಚಿತ ಮೈ ಗಂಧ ಅವುಗಳ ಮೂಗಿಗೆ ಆ ಮಂದ ಬೆಳಕಿನಲ್ಲಿ ಕಣ್ಣ ದೃಷ್ಟಿಗಿಂತ ಮೊದಲು ಮುಟ್ಟಿತ್ತು. ಇವನ ಆಗಮನ ಕಂಡು ನೆಮ್ಮದಿಯಿಂದ ಮೆಲುವಾಗಿ ಕೂಗಿದವು. ಅವುಗಳ ಗೊಂತಿಗಳಲ್ಲಿ ಅವಳು ಸಂಜೆ ಸುರಿದಿರಬಹುದಾದ ಮೇವು ಹಲ್ಲು ತುಂಬಿದ್ದವುˌ ಸುಲ್ತಾನನ್ನ ಅವನ ಲಾಯದ ಗೊಂತಿಗೆ ಮುನ್ನಡೆಸಿ ಕಟ್ಟಿ ಚೂರು ಹುಲ್ಲು ನೀರಿಟ್ಟು ಉಪಚರಿಸಿ ಜೀನು ಬಿಚ್ಚಿ ಬ್ರೆಷ್ಷಿನಿಂದ ಕುದುರೆಯ ದಣಿದ ಮೈಯುಜ್ಜಿ ಆರೈಕೆ ಮಾಡಿದ. ಬೆಳಗ್ಯೆ ಎಣ್ಣೆ ಮಾಲೀಸು ಮಾಡಲು ನಿರ್ಧರಿಸಿದವ ಒಂದೊಂದೆ ದನ ಕರು ಎಮ್ಮೆಗಳ ಮುಖಕ್ಕೆ ಮುಖ ತಾಗಿಸಿ ಅವುಗಳ ಗಂಗೆದೊಗಲ ಮೆಲುವಾಗಿ ಕೆರೆದು ನೇವರಿಸಿ ಜಾನುವಾರುಗಳಿಗೆ ಶುಭರಾತ್ರಿ ಹೇಳಿˌ ಗೋಡೆಗೆ ನೇತು ಬಿದ್ದಿದ್ದ ಲಾಟೀನಿನ ಉರಿ ಚೂರು ಕುಗ್ಗಿಸಿ ಕೊಟ್ಟಿಗೆಯಿಂದ ಹೊರ ಬಿದ್ದ. ಆ ಸಂಜೆ ಹಾಲು ಹಿಂಡಲಾಗದು ಅನ್ನುವ ಅರಿವಿದ್ದಿದ್ದರಿಂದಲೆ ಕರುಗಳನ್ನ ಕಟ್ಟಿರಲಿಲ್ಲ. ಈಗ ಕೊಟ್ಟಿಗೆಯಿಂದ ಹೊರಬೀಳುವ ಮುನ್ನ ಅವುಗಳನ್ನ ಗೂಟದ ಹಗ್ಗಕ್ಕೆ ಬಿಗಿಯದಿದ್ದರೆ ಬೆಳಗಿನ ಹಾಲಿಗೆ ಸೊನ್ನೆಯಾಗುವ ಸಂಭವವಿತ್ತು. ಅವುಗಳ ಅಮ್ಮಂದಿರಿಗೆ ಒರಗಿ ಮಲಗಿದ್ದ ಆ ಎಳೆ ಬೊಮ್ಮಟೆಗಳ ನಿದ್ರಾ ಸುಖಕ್ಕೆ ಅಡ್ಡಿಯಾಗದಂತೆ ಮೆಲ್ಲನೆ ಅವುಗಳ ಕುತ್ತಿಗೆ ಎತ್ತಿ ಕುಣಿಕೆಯೊಳಗೆ ಮುಖ ತೂರಿಸಿ ಅವಕ್ಕೆ ಅರಿವಾಗದ ಹಾಗೆ ಅವುಗಳನ್ನ ಕಟ್ಟಿ ಹಾಕಿಯೆ ಅವನು ಹೊರಗೆ ಬಂದಿದ್ದ.

ಹಿಮಮಳೆಯ ಪ್ರಕೋಪ ಮತ್ತೆ ಮರುಕಳಿಸಲಾರಂಭಿಸಿತ್ತು. ಕೊಟ್ಟಿಗೆಯಿಂದ ಮನೆ ಮುಟ್ಟಲು ಕಟ್ಟಿದ್ದ ಹಗ್ಗವಿಲ್ಲದಿದ್ದರೆ ಕಷ್ಟವಿತ್ತು. ಅಲ್ಲಿಂದ ಮನೆಯ ಬಾಗಿಲ ತನಕ ಕಟ್ಟಿದ್ದ ಹಗ್ಗ ಹಿಡಿದು ಬಂದವ ಬಾಗಿಲು ತಟ್ಟಿದ. ಇವನ ದಾರಿಯನ್ನೆ ನಿರೀಕ್ಷಿಸುತ್ತಾ  ಊಟವನ್ನೂ ಮಾಡದೆ ಆರಾಮ ಕುರ್ಚಿಯಲ್ಲಿ ಮಗುವನ್ನ ತಬ್ಬಿ ಮಲಗಿಸಿಕೊಂಡಿದ್ದವಳಿಗೆ ಮೆಲ್ಲನೆ ಹತ್ತಿದ್ದ ಮಂಪರು ಈ ಸದ್ದಿನಿಂದ ಕಳಿಯಿತು. ಶಬರಿಯಂತೆ ಅವನಾಗಮನ ಕಾದಿದ್ದವಳು ಓಡೋಡಿ ಬಂದು ಬಾಗಿಲು ತೆಗೆದಳು. ಸೋತ ಇವನು ಮನೆಗೆ ನುಗ್ಗಿ ಚಳಿಗಾಳಿ ಹಿಂಬಾಲಿಸದಂತೆ ತಲೆ ಬಾಗಿಲು ಜಡಿದ. ಅವನನ್ನ ಚಳಿಗೆ ಬೆಚ್ಚಗಾಗಿಸಲು ಎಮ್ಮೆ ಮಾಂಸದ ಸೂಪು ಕುದಿಸಲು ಅವಳು ಅಡುಗೆ ಮನೆಯತ್ತ ಓಡದಳು. ಇವನು ಹಾಕಿದ್ದ ಬಟ್ಟೆ ಕಳಚಿ ಮುಖ ಕೈ ಕಾಲು ತೊಳೆದುಕೊಳ್ಳಲು ಉದ್ಯುಕ್ತನಾದ. ಕೇಳಿಕೊಳ್ಳಲು ಹೇಳಿಕೊಳ್ಳಲು ಇಬ್ಬರಿಗೂ ಸುಮಾರು ವಿಚಾರಗಳಿದ್ದವು. ಗೋಡೆಗೆ ಜಡಿದಿದ್ದ ಗಡಿಯಾರ ಹನ್ನೆರಡು ಸಲ ಘಂಟೆ ಬಾರಿಸಿ ಸುಮ್ಮನಾಯಿತು. ಅವನು ಕಡೆಗೂ ಮನೆಗೆ ಬಂದು ಮುಟ್ಟಿದ್ದ.

( ನಾನು ಮೂಲತಃ ಲಾರಾ ಇಂಗಲ್ಸ್ ವೈಲ್ಡರ್ರ ಅಭಿಮಾನಿ. ಪುಸ್ತಕ ಪ್ರಕಾಶನˌ ಮೈಸೂರು ಇವರು ಪ್ರಕಟಿಸಿದ್ದ ಅವರು ತಾನು ಚಾರ್ಲ್ಸ್ ಇಂಗಲ್ಸನ ಮಗಳಾಗಿ ಅನಂತರ ಅಲ್ಮಾಂಜೋ ವೈಲ್ಡರನ ಹೆಂಡತಿಯಾಗಿ ಸರಿಯಾಗಿ ಒಂದೂಕಾಲು ಶತಮಾನದ ಹಿಂದಿನ ಅಮೇರಿಕಾದ ಪರಿಸರ - ಬದುಕು ವಿವರಿಸಿ ಬರೆದಿರುವ ಕೇವಲ ಒಂಬತ್ತು ಡೈರಿಗಳ ಕನ್ನಡನುವಾದ ಓದಿ ಸಣ್ಣಂದಿನಂದೆ ಅವರತ್ತ ಆಕರ್ಷಿತನಾಗಿದ್ದೆ. ಮುಂದೆ ಬುದ್ಧಿ ಬೆಳದ ಮೇಲೆ ಕಷ್ಟಪಟ್ಟು ಹುಡುಕಿ ಮೂಲ ಆಂಗ್ಲದಲ್ಲಿಯೆ ಅವರ ಬರಹ ಓದಿದ ನಂತರ ಲಾರಾ ನನ್ನ ಮನಸಿಗೆ ಮತ್ತಷ್ಟು ಆಪ್ತರಾಗಿದ್ದರು.

ಅವರ ಬಾಳು ಸವೆದ ಊರುಗಳನ್ನ ಸ್ವತಃ ಹೋಗಿ ನೋಡುವುದು ಅಂದಿನಿಂದಲೆ ನನ್ನ ಬದುಕಿನ ಆದ್ಯತೆಯಾಗಿತ್ತು. ಅವರ ಬದುಕು ಸಂದ ಜಾಗಗಳನ್ನ ಹೋಗಿ ನೋಡುವ ಅವಕಾಶ ಹತ್ತು ವರ್ಷಗಳ ಹಿಂದೆ ಬಾಳಿನಲ್ಲಿ ಬಂದದ್ದು ನನ್ನ ಸುಕೃತ. ಆ ಪ್ರವಾಸದಲ್ಲಿ ಕಂಡ ಮತ್ತೊಂದು ಸ್ಥಳ ಡೆಟ್ರಾಯಿಟ್ ನಗರ. ಅಲ್ಲಿ ಭೇಟಿಯಾಗಿದ್ದ ಬಿಳಿಯ ಹಿರಿಯರೊಬ್ಬರು ಹೇಳಿದ್ದ ಅವರ ಹಿರಿಯರ ವಲಸೆಯ ಮೆಲುಕನ್ನ ನೆನಪಿಸಿಕೊಂಡು ಈ ಕಥೆಯನ್ನ ಬರೆದಿದ್ದೇನೆ. ನನ್ನ ಅನುಭವಕ್ಕೆ ಬಂದ ಇಂದಿನ ಮಿಚಿಗನ್ ರಾಜ್ಯದ ಅಂದಿನ ದಿನಗಳ ಕಲ್ಪನೆ ಇದರಲ್ಲಿದೆ. ಈ ಮೂಲಕ ನನ್ನ ಐಡಲ್ ಲೇಖಕಿ ಲಾರಾಳ ಶೈಲಿಯಲ್ಲಿ ಬರೆಯುವ ಬಹು ದಿನಗಳ ಮನದಾಸೆಯನ್ನ ಈಡೇರಿಸಿಕೊಂಡಿದ್ದೇನೆ. ಶೈಲಿ ಮಾತ್ರ ಲಾರಾರದ್ದು. ಕಥೆ ನನ್ನದೆ.

ಇಲ್ಲಿ ಮೂಲ ನಿವಾಸಿಗಳು ರೆಡ್ ಇಂಡಿಯನ್ನರುˌ ಸ್ಥಳಿಯ ವಲಸಿಗರ ಭಾಷೆ ಆಂಗ್ಲˌ ಗೋಪಿಯ ಭಾಷೆ ಫ್ರೆಂಚ್ ಅನ್ನುವುದು ನಿಮ್ಮ ಮಾಹಿತಿಗೆ.🙏)https://youtu.be/Gs57exxcs5g


https://youtu.be/jtFQrXIsfps


https://youtu.be/6vVJZiWOHSA


ಅವನ ಜೊತೆ ಅವಳ ಕಥೆ - ೭

ಅವಳ ಜೊತೆ ಅವನ ಕಥೆ.....


ಊರಿನ ಅಂಗಡಿ ಬೀದಿಯ ಮರ್ತಪ್ಪಯ್ಯನ ಅಂಗಡಿಯಿಂದ ಕಳೆದ ಹಂಗಾಮಿಗೆ ಮಾರಿದ್ದ ಚೀಸ್ˌ ಉಪ್ಪು ಬೆರೆಸಿದ ಗಿಣ್ಣು ಗಟ್ಟಿˌ ತುಪ್ಪ ಹಾಗೂ ಬೆಣ್ಣೆಯ ಬಾಬ್ತು ಹತ್ತು ರೂಪಾಯಿ ವಸೂಲಿ ಮಾಡೋದಿತ್ತು. ಈ ಬಾರಿ ತೋಟದ ಮನೆಯಲ್ಲಿ ತಯಾರಾಗಿದ್ದ ಪೂರ್ತಿ ಹೈನೋತ್ಪನ್ನಗಳನ್ನ ಮರ್ತಪ್ಪಯ್ಯನೆ ಕೊಂಡಿದ್ದ. ಇತ್ತೀಚೆಗೆ ಹೊಸ ಊರುಗಳಿಗೂ ತನ್ನ ಸಗಟು ವ್ಯಾಪಾರದ ಉದ್ಯಮ ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದ ಮರ್ತಪ್ಪಯ್ಯ ಹೈನೋತ್ಪನಗಳ ಜೊತೆ ಮೇಪಲ್ ಸಕ್ಕರೆˌ ಜೇನುತುಪ್ಪˌ ಆಲಿವ್ ಎಣ್ಣೆˌ ಸೋಪುಗಳುˌ ಮೇಣದ ಬತ್ತಿಗಳುˌ ದೀಪದ ಬತ್ತಿಗಳುˌ ಲಾವಂಚದ ಬೇರಿನ ಕತ್ತಗಳುˌ ಮನೆಯಲ್ಲೆ ಕ್ರೋಷಾ ಹಾಕಿ ಅವಳು ನೇಯ್ದಿಟ್ಟಿದ್ದ ಉಣ್ಣೆಯ ಕಿವಿಗಾಪು ಸಹಿತವಾದ ಬೆಚ್ಚನೆ ಟೊಪ್ಪಿಗಳುˌ ಕೈಗವಸುಗಳು ಹಾಗೂ ಕಾಲ್ಚೀಲಗಳನ್ನೂ ಇವನಿಂದ ಎರಡು ಮೂರು ಭೇಟಿಗಳಲ್ಲಿ ಪಡೆದಿದ್ದ. ಅವೆಲ್ಲವನ್ನೂ ಅವನು ಪಶ್ಚಿಮದ ದೆಸೆಯಲ್ಲಿ ಹೊಸತಾಗಿ ಆರಂಭವಾದ ಊರುಗಳ ಗ್ರಾಹಕರಿಗೆ ಪೂರೈಸಿ ದಳ್ಳಾಳಿ ದರದಲ್ಲಿಯೆ ನೂರಾರು ರೂಪಾಯಿ ಲಾಭ ಸಂಪಾದನೆ ಮಾಡಿಬಿಟ್ಟಿದ್ದ.

ಆದರೆ ಆರಂಭದಲ್ಲಿ ಪೂರ್ತಿ ಹಣ ಪಾವತಿಸಿ ಸರಕುಗಳನ್ನ ಒಮ್ಮೆಲೆ ಖರೀದಿಸಲು ಬಂಡವಾಳ ಹೂಡುವಷ್ಟು ಕಳೆದ ಸಲ ಅವನ ವ್ಯಾಪಾರ ಚೆನ್ನಾಗೇನೂ ನಡೆದಿರಲಿಲ್ಲ. ಅವನು ಕಳೆದ ಸಾಲಿನಲ್ಲಿ ಇತರ ರೈತರಿಂದ ಖರೀದಿಸಿದ್ದ ಕೆಲವು ತೋಟದುತ್ಪನ್ನಗಳ ಗುಣಮಟ್ಟ ನಿರೀಕ್ಷೆಗೂ ಮೀರಿ ಕಳಪೆಯಾಗಿದ್ದುದೆ ಅದಕ್ಕೆ ಕಾರಣವಾಗಿತ್ತು. ಖರೀದಿದಾರರು ಇವನು ಹೇಳಿದ್ದ ಬೆಲೆ ಪಾವತಿಸಿ ಆ ಮೂರನೆ ದರ್ಜೆಯ ಸರಕನ್ನ ಖರೀದಿಸಲು ಸುತಾರಂ ಒಪ್ಪಿರಲಿಲ್ಲ. ಈಗ ಇಷ್ಟು ದೂರ ಮೈಲುಗಟ್ಟಲೆ ಪಶ್ಚಿಮದ ಊರುಗಳಿಗೆ ಸರಕನ್ನ ಸಾಗಿಸಿಯಾದ ಮೇಲೆ ಹಾಗೆಲ್ಲಾ ಅದನ್ನ ಮರಳಿ ಕೊಂಡೊಯ್ಯುವ ಹಾಗೂ ಇರಲಿಲ್ಲ. ಅವುಗಳಲ್ಲಿ ಕೆಲವು ವಸ್ತುಗಳಂತೂ ತೀರ ವಾರೊಪ್ಪತ್ತಿನಲ್ಲಿ ಬಳಸದಿದ್ದರೆ ಕೆಡುವ ಆಹಾರ ಪದಾರ್ಥಗಳೂ ಆಗಿದ್ದುದು ಅವನ ಸಂಕಟವನ್ನ ಮತ್ತಷ್ಟು ಹೆಚ್ಚಿಸಿತ್ತು.

ಹೀಗಾಗಿ ಹೂಡಿದ ಬಂಡವಾಳಕ್ಕೆ ಚೂರು ಮೋಸವಾದರೂನು ಬಂದಷ್ಟು ಬರಲಿ ನಷ್ಟ ಕಡಿಮೆಯಾಗಲಿ ಅನ್ನುವ ಧೋರಣೆಗೆ ಜೋತು ಬಿದ್ದ ಮರ್ತಪ್ಪಯ್ಯ ದಕ್ಕಿದ ಬೆಲೆಗೆ ಸರಕುಗಳನ್ನ ಮಾರಾಟ ಮಾಡಿ ಸಂಭವನೀಯ ಭಾರಿ ನಷ್ಟಕ್ಕೊಳಗಾಗುವ ಸಂಕಟದಿಂದ ಹೇಗೋ ಪಾರಾಗಿದ್ದ. ಇವನ ತೋಟದ ಮೂಲದ ಸರಕುಗಳ ಹೊರತು ಮಿಕ್ಕೆಲ್ಲರದೂ ಕಳಪೆ ದರ್ಜೆಯ ಉತ್ಪನ್ನಗಳಾಗಿತ್ತು ಅನ್ನುವ ಅಂಶವನ್ನ ಅಂತಹ ಸೋಲಿನ ಸಮಯದಲ್ಲೂ ಮರ್ತಪ್ಪಯ್ಯನ ಹಟ್ಟು ವ್ಯಾಪಾರಿ ಬುದ್ಧಿ ಗುರುತಿಸಿತ್ತು. ಹೀಗಾಗಿ ಈ ಸಾರಿ ಮುಂಗಡವಾಗಿ ಬಾಯಿ ಮಾತಿನ ಒಪ್ಪಂದ ಮಾಡಿಕೊಂಡು ಈ ಇವನ ಎಲ್ಲಾ ತಯಾರಿಕೆಗಳನ್ನೂ  ಸೂಕ್ತ ಬೆಲೆ ಕೊಟ್ಟು ಖರೀದಿಸಲು ಅವನು ತಯ್ಯಾರಾದ. ಮರ್ತಪ್ಪಯ್ಯನ ಕಳೆದ ಹಂಗಾಮಿನ ನಷ್ಟದ ವ್ಯವಹಾರದ ಅರಿವಿದ್ದ ಇವನೂ ಸಹ ಒಂದು ನಂಬಿಕೆಯ ಮೇಲೆ ಕೇವಲ ಕನಿಷ್ಠ ಮುಂಗಡದ ಮೇಲೆ ಊರಿಟ್ಟ ಮಾಂಸ ಮೀನು ಮೊಟ್ಟೆ ಹಾಗೂ ಚರ್ಮದ ಹೊರತು ಬಾಕಿ ಇನ್ನುಳಿದ ತನ್ನ ಸಕಲ ಉತ್ಪನ್ನಗಳನ್ನೂ ಅವನಿಗೆ ವಿಕ್ರಯಿಸಲು ಒಪ್ಪಿಸಿದ್ದ.

ಮಾಂಸದ ಉತ್ಪನ್ನಗಳನ್ನ ಅವನು ಕಳೆದ ಮೂರು ವರ್ಷಗಳಿಂದಲೂ ಕಸಾಯಿ ಕುಬೇರಣ್ಣನಿಗೆ ಮಾರುತ್ತಿದ್ದನಾಗಿˌ ಅದನ್ನ ತಪ್ಪಿಸಿ ಬೇರೆಯವರಿಗೆ ಕೊಡುವಂತೆ ಇರಲಿಲ್ಲ. ಅಲ್ಲದೆ ತನ್ನ ಎಲ್ಲಾ ಮೊಟ್ಟೆಗಳನ್ನ ಒಂದೆ ಬುಟ್ಟಿಯಲ್ಲಿಡೋದು ಅಷ್ಟು ಜಾಣತನವೂ ಆಗಿರೋದಿಲ್ಲವಲ್ಲ. ಧಾನ್ಯˌ ಹಣ್ಣು ಹಾಗೂ ತರಕಾರಿಗಳನ್ನ ಅವನೆಂದೂ ಪಟ್ಟಣಕ್ಕೆ ತಂದು ಮಾರಿದವನಲ್ಲ. ಶೆಟ್ಟರ ಅಂಗಡಿಯ ಸಹೋದರರು ಒಕ್ಕಣೆಯ ಸಮಯ ತೋಟದ ಮನೆಯ ಕಣಕ್ಕೆ ತಾವೆ ನೇರ ಭೇಟಿ ಕೊಟ್ಟು ಹಣ ಪಾವತಿಸಿ ಸಾಗಿಸಿ ಬಿಡುತ್ತಿದ್ದರು. ಹೀಗಾಗಿ ಅವುಗಳನ್ನೂ ಸಹ ಮರ್ತಪ್ಪಯ್ಯನಿಗೆ ಮಾರುವ ಸಂಭವವಿರಲಿಲ್ಲ. ಟೊಮೇಟೋ ಹಾಗೂ ಹಣ್ಣುಗಳನ್ನ ನೇರವಾಗಿ ಕಿತ್ತು ಮಾರುವ ಬದಲು ಅದನ್ನ ಮೊರಬ್ಬˌ ಉಪ್ಪಿನಕಾಯಿ ಮಾಡಿ ಮಾರಿದರೆ ಹೆಚ್ಚು ಬಾಳಿಕೆ ಬರುವ ಕಾರಣ ಲಾಭದಾಯಕ ಎಂದೂˌ ದಯವಿಟ್ಟು ಮುಂದಿನ ಹಂಗಾಮಿನಿಂದ ಅವನ್ನ ತಯಾರಿಸಿ ತನಗೆ ಕೊಡುವಂತೆಯೂˌ ಪಶ್ಚಿಮದಲ್ಲಿ ಅವಕ್ಕೆ ಭಾರಿ ಬೇಡಿಕೆಯಿದೆಯಂತಲೂ ಮರ್ತಪ್ಪಯ್ಯ ವಿನಂತಿಸಿದ್ದ. ಈ ಚಳಿಗಾಲದ ನಂತರ ವಸಂತದಲ್ಲಿ ಅದರ ಶ್ರೀಕಾರವನ್ನೂ ಹಾಡುವ ಉತ್ಸಾಹದಲ್ಲಿ ಅವನಿದ್ದ.

ಈ ಬಾಕಿಯೆಲ್ಲ ಸೇರಿದರೆ ಸುಮಾರು ನೂರಿಪ್ಪತ್ತು ರೂಪಾಯಿ ಬಾಯಿ ಮರ್ತಪ್ಪಯ್ಯನೊಬ್ಬನಿಂದಲೆ ವಸೂಲಿಯಾಗಬೇಕಿದ್ದುದುˌ ಅವನಿಂದ ಇಪ್ಪತ್ತೈದು ರೂಪಾಯಿಯ ಕಂತಾದರೂ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದ. ಇನ್ನುಳಿದಂತೆ ಅವನ ಅಂಗಡಿಯಲ್ಲೆ ಮನೆಗೆ ಅಗತ್ಯವಾದ ಉಣ್ಣೆ ಉಂಡೆˌ ಚಹಾ ಪುಡಿˌ ಬಿಳಿ ಸಕ್ಕರೆˌ ಜೋಳದ ಹಿಟ್ಟುˌ ಅಕ್ಕಿ ಹಿಟ್ಟುˌ ರಾಗಿ ಹಿಟ್ಟುˌ ಚುಮಣಿ ಎಣ್ಣೆˌ ಉಪ್ಪುˌ ಹಲ್ಲುಪುಡಿˌ ಕಾಳು ಮೆಣಸುˌ ಲವಂಗˌ ಏಲಕ್ಕಿˌ ಜಾಯಿಕಾಯಿˌ ಚಕ್ಕೆˌ ಒಣಮೆಣಸು ಹೀಗೆ ಪೂರ್ವದಿಂದ ಅಮದಾಗುವ ವಸ್ತುಗಳನ್ನ ಖರೀದಿಸುವವನಿದ್ದುˌ ಅದರ ದರ ಎರಡರಿಂದ ಎರಡೂವರೆ ರೂಪಾಯಿಗಳಾದರೂ ಆಗಲಿದ್ದವು.

ಜೊತೆಗೆ ಕುಬೇರಣ್ಣ ಕೊಡಬೇಕಿದ್ದ ಹಣ ಹದಿನೈದು ರೂಪಾಯಿಯೂ ಈ ಬಾಬ್ತಿಗೆ ಸೇರಿದರೆ ಒಟ್ಟು ವಸೂಲಾಗುವ ನಲವತ್ತು ರೂಪಾಯಿಗಳಲ್ಲಿ ಮಠದ ವಾರ್ಷಿಕ ವಂತಿಗೆಯ ಬಾಬ್ತು ಎಂಟಾಣೆ ಕೊಟ್ಟುˌ ರಾಜನಿಗೆ ಮೂರು ಕಾಸಿನ ಬೆಂಡು ಬತ್ತಾಸು ಖರೀದಿಸಿˌ ಹನ್ನೆರಡಾಣೆಯ ಬೂಸಾ ಹಿಂಡಿ ಖರೀದಿಸಿ ಅವೆಲ್ಲವನ್ನೂ ಬರುವ ವಾರ ತೋಟಕ್ಕೆ ತಂದು ಕೊಡುವ ಜವಬ್ದಾರಿಯನ್ನು ಗೋಪಿಗೆ ವಹಿಸಿˌ ಬ್ಯಾಂಕಿಗೆ ಮೂವತ್ತು ರೂಪಾಯಿ ಹಣ ಉಳಿತಾಯಕ್ಕೆ ಕಟ್ಟಿ ಗೋಪಿಗೆ ಅಗತ್ಯವಿದ್ದ ಒಂದು ರೂಪಾಯಿ ಕೊಟ್ಟು, ಬಾಕಿ ಎಂಟೂ ಚಿಲ್ಲರೆ ರೂಪಾಯಿಗಳನ್ನ ತುರ್ತು ಅಗತ್ಯಗಳಿಗೆ ಮನೆಗೊಯ್ಯಲು ನಿರ್ಧರಿಸಿದ್ದ.

ಅಂಗಡಿ ಅಂಗಡಿ ಅಲೆದು ಬರಬೇಕಿದ್ದ ಬಾಕಿಗಳೆಲ್ಲವನ್ನೂ ವಸೂಲು ಮಾಡುವಾಗ ಮಧ್ಯಾಹ್ನದ ಎರಡು ಘಂಟೆಯ ಮೇಲಾಗಿತ್ತು. ನೇರ ಬ್ಯಾಂಕಿಗೆ ನಡೆದವನೆ ಮೂವತ್ತು ರೂಪಾಯಿ ಕಟ್ಟಿದ್ದಕ್ಕೆ ಬ್ಯಾಂಕಿನ ಗುಮಾಸ್ತೆ ಠಸ್ಸೆ ಒತ್ತಿಕೊಟ್ಟ ರಸೀದಿಯನ್ನ ಜೇಬಿಗಿಳಿಸಿ ನೇರ ಮನೆಯತ್ತ ಹಜ್ಜೆ ಹಾಕಿದವನಿಗೆ ಆಶ್ಚರ್ಯ ಕಾದಿತ್ತು. ಅವನು ಸೂರಿನ ಸಂದಿನಿಂದ ಸುರಿದ ಹಿಮದ ಕಾರಣ ಮಾಡಿದ ಮರಮತ್ತು ಅಷ್ಟಾಗಿ ಸರಿಯಾಗಿರಲಿಲ್ಲವೆಂದು ಕಾಣುತ್ತದೆˌ ಕಸುಬುದಾರ ಬಡಗಿಯಂತೆ ಗೋಪಿ ಮನೆಗೆ ಹೋಗಿ ಉಳಿ ಕಿಸೋಳಿ ಮೊಳೆ ಸುತ್ತಿಗೆಗಳನ್ನ ತಂದು ಹೆರದು ಕೆರೆದು ಇವನಿಗೆ ಕಂಡಿದ್ದˌ ಹಾಗೂ ಕಾಣದಿದ್ದ ಛಾವಣಿಯ ತೂತುಗಳನ್ನೆಲ್ಲಾ ಚತುರತೆಯಿಂದ ಟಾರು ಕಾಗದ ಹೊಡೆದು ಬಿರುಕುಗಳಿಗೆ ಜೇನು ಮೇಣ ಬೆರೆಸಿದ ಡಾಮಾರಿನ ಅಂಟು ತುಂಬಿ ಕಾಣದಂತೆ ಮರೆಸಿದ್ದ.

ಈ ಇಡಿ ಚಳಿಗಾಲದ ಹಂಗಾಮಿನಲ್ಲಿ ಮನೆಗೆ ಇನ್ಯಾವ ಮರಮತ್ತಿನ ಅವಶ್ಯಕತೆಯೂ ಇರದಂತೆ ಅವನ ಕೆಲಸದ ಜಾಣ್ಮೆ ಎದ್ದು ಕಾಣುತ್ತಿತ್ತು. ಆದರೆ ನೆಲ ಮಹಡಿಯ ಗೋಡೆಗಳ ಸಂದು ಗೊಂದುಗಳಲ್ಲಿ ಹೊಸ ಬಿರುಕು ಮೂಡಿವೆಯೆಂದೂ ಮುಂದಿನ ಒಂದು ವಾರ ಇದನ್ನೆ ಆದ್ಯತೆಯನ್ನಾಗಿಸಿಕೊಂಡು ತಾನು ಅವನ್ನ ಸರಿಪಡಿಸುತ್ತೇನೆಂದೂ ಗೋಪಿ ಹೇಳಿದ ಮಾತು ಕೇಳಿ ಅವನಿಗೆ ನೆಮ್ಮದಿಯೆನಿಸಿತು. ಹೀಗಾದರೂ ಸರಿ ಅವನು ಮರಳಿ ಜಡ ಬಿಟ್ಟು ಕೆಲಸಗಳತ್ತ ಹೊರಳಿಕೊಳ್ಳಲಿˌ ಬಾಬಯ್ಯನ ಜೊತೆಯ ಅವನ ಕೋಳಿ ಜಗಳ ಈ ಮೂಲಕವಾದರೂ ಕಡಿಮೆಯಾಗಲಿ ಎಂದು ಆಶಿಸಿದ ಆತ ಗೊಂಬೆ ತಯಾರಿಕೆಗೆ ಬಂಡವಾಳ ಹೂಡಲು ಗೋಪಿ ಕೇಳಿದ್ದ ರೂಪಾಯಿಗೆ ಮತ್ತೊಂದು ರೂಪಾಯಿ ಸೇರಿಸಿ ಅವನ ಜೇಬಿಗೆ ಹಾಕಿ ಗೋಪಿಯ ಬೆನ್ತಟ್ಟಿದ. ಇವನ ಕಾಳಜಿ ಕಂಡ ಗೋಪಿಗೂ ಕಣ್ತುಂಬಿ ಬಂತು. ಮತ್ತೆ ಚಿಗುರಿ ನುರಿತ ಕೆಲಸಗಾರನಾಗುವ ಕನಸು ಅವನ ನೀಲಿ ಕಣ್ಗಳಲ್ಲೂ ಹೊಳೆದಂತಾಯಿತು.

ಹೊರಗೆ ಮೆಲ್ಲಗೆ ಚಳಿಯ ಪ್ರಕೋಪ ಹೆಚ್ಚುತ್ತಿತ್ತು. ಸುಲ್ತಾನನಿಗೆ ಮೇವು ನೀರು ಮತ್ತೊಮ್ಮೆ ಇರಿಸಿದ ಇಬ್ಬರೂ ಬಾಬಯ್ಯನ ಮನೆ ಕಡೆಗೆ ಹೆಜ್ಜೆ ಹಾಕಿದರು. ಬಿಸಿ ಬಿಸಿ ಊಟ ತಯಾರಾಗಿತ್ತುˌ ಇವನು ಅವಳು ಕಟ್ಟಿಕೊಟ್ಟಿದ್ದ ಬುತ್ತಿಯನ್ನೂ ಜೊತೆಗೆ ಬಿಚ್ಚಿದ.


*********


ಅವಳ ಕೈ ರುಚಿಯೆ ಬೇರೆ ಎನಿಸಿದರೆˌ ಗೋಪಿ ಮನೆಯ ಅಡುಗೆಯ ಸ್ವಾದವೆ ವಿಭಿನ್ನ. ಇಬ್ಬರ ತಲೆಮಾರುಗಳ ಹಿನ್ನೆಲೆ ಪ್ರಾದೇಶಿಕವಾರು ಭಿನ್ನವಾಗಿದ್ದುದೆ ಅದಕ್ಕೆ ನೇರ ಕಾರಣ ಅಂದರೂ ತಪ್ಪಿಲ್ಲ. ಅವರ ಹಿರಿಯರು ವಲಸಿಗರಾಗಿ ಬರುವ ಮೊದಲು ನೆಲೆಸಿದ್ದ ವಿದೇಶದ ವಿಭಿನ್ನ ಪ್ರದೇಶಗಳ ಸೊಗಡು ಅವರ ಪಾಕಶಾಸ್ತ್ರವನ್ನೂ ಸಹಜವಾಗಿ ಪ್ರಭಾವಿಸಿತ್ತು. ಹೀಗಾಗಿ ಒಂದೆ ಬಗೆಯ ಖಾದ್ಯಗಳನ್ನ ಅವರಿಬ್ಬರ ಅಡುಗೆ ಮನೆಗಳಲ್ಲಿ ತಯಾರಿಸಿದ್ದರೂ ಬಳಸುವ ಖಾದ್ಯತೈಲˌ ಮಸಾಲೆ ಹಾಗೂ ಉಪ್ಪು ಹುಳಿ ಖಾರದ ಪ್ರಮಾಣದಲ್ಲಾಗುತ್ತಿದ್ದ ಚೂರುಪಾರು ವ್ಯತ್ಯಾಸದ ಕಾರಣ ಸಹಜವಾಗಿ ರುಚಿ ಬದಲಾಗಿ ಅಡುಗೆಯ ವೈವಿಧ್ಯತೆ ಚಪ್ಪರಿಸಿ ಮೆಲ್ಲುವವರ ರುಚಿಮೊಗ್ಗುಗಳಿಗೆ ಅರಿವಿಗೆ ಖಂಡಿತವಾಗಿ ಬರುತ್ತಿತ್ತು. ಗೋಪಿಯ ಹೆಂಡತಿ ಬುತ್ತಿಯಲ್ಲಿ ಚಳಿಗೆ ಮರಗಟ್ಟಿ ಕಲ್ಲಾಗಿದ್ದ ರೊಟ್ಟಿ ಹಾಗೂ ಇನ್ನಿತರ ಮೇಲೋಗರಗಳನ್ನ ಬಿಸಿ ಮಾಡಿ ತಿನ್ನಲು ಸಹನೀಯವಾಗಿಸಿದಳು.

ಚಳಿಯ ಹೊಡೆತಕ್ಕೆ ಜರ್ಜರಿತರಾಗಿದ್ದ ನಾಲ್ವರೂ ಚೂರು ದೇಹದ ಉಷ್ಣತೆ ಹೆಚ್ಚಿಸಿಕೊಳ್ಳಲು ಕಟು ರುಚಿಯ ದ್ರಾಕ್ಷಾರಸವನ್ನೂ ಊಟದೊಂದಿಗೆ ಸೇವಿಸಿದರು. ಬೆಂದ ಬಾತುˌ ಬೇಕನ್ˌ ರೈ ರೊಟ್ಟಿˌ ಎಮ್ಮೆ ಮಾಂಸದ ಸೂಪು ಹಾಗೂ ಹುರಿದ ಊರಿಟ್ಟ ಮೀನನ್ನ ಒಳಗೊಂಡ ಊಟ ರುಚಿಕರವಾಗಿತ್ತು. ಊಟ ಮುಗಿಸಿದ ಮರುಕ್ಷಣವೆ ಅವನು ಮತ್ತೆ ಮನೆಯತ್ತ ಮುಖ ಮಾಡಿ ಹೊರಡಲೆ ಬೇಕಿತ್ತು. ಸಾಧ್ಯವಾದಷ್ಟು ಬೇಗ ಬೆಳಕಿರುವಾಗಲೆ ಹೊರಟಷ್ಟೂ ಒಳ್ಳೆಯದೆ. ಆಗಲೆ ಸಮಯ ಮೂರೂವರೆಯ ಸಮೀಪವಾಗಿದ್ದು ಚಳಿಗಾಲದ ರಾತ್ರಿ ಸಂಜೆ ಐದರ ಹೊತ್ತಿಗೆಲ್ಲಾ ಇಳಯನ್ನ ಆವರಿಸಿಕೊಳ್ಳಲು ಮಸಲತ್ತು ಮಾಡುತ್ತಿದೆಯೇನೋ ಅನ್ನುವಂತೆ ಉತ್ತರದ ಸುಳಿಗಾಳಿ ಹುಯ್ಯಲಿಡುತ್ತಾ ನಿಧಾನವಾಗಿ ಮತ್ತೆ ಬೀಸಲು ಹವಣಿಸುತ್ತಿತ್ತು.

ಚಳಿಗಾಳಿಯ ಪ್ರಕೋಪ ಪಟ್ಟಣಿಗರನ್ನೂ ಕಾಡಿಸಿ ಕೆಂಗೆಡೆಸದೆ ಇರಲಿಲ್ಲ. ಅವರ ನೆಲೆಗಳು ಸುದೂರದ ತೋಟದ ಮನೆಗಳ ಅವಾಸಗಳಂತೆ ಪರಸ್ಪರ ಮೈಲುಗಟ್ಟಲೆ ದೂರವಿಲ್ಲದೆ ಕೆಲವೆ ಗಜಗಳಷ್ಟು ದೂರ ಮನೆಗಳಿರುವುದರಿಂದ ತೀರಾ ಕಷ್ಟದ ಸಂದರ್ಭಗಳು ಎದುರಾದಲ್ಲಿ ಕಷ್ಟ ನಷ್ಟ ವಿಚಾರಿಸಿ ಧೈರ್ಯ ಹೇಳಲುˌ ಸಹಾಯಕ್ಕೆ ಧಾವಿಸಲು ನೆರೆಕರೆ ಸಮೀಪದಲ್ಲೆ ಇರುತ್ತಿದ್ದರು. ಹೀಗಾಗಿ ಹಳ್ಳಿಗ ರೈತಾಪಿಗಳಂತೆ ವಿಪರೀತ ಸನ್ನಿವೇಶಗಳಲ್ಲಿ ತೀರಾ ಕೆಂಗೆಟ್ಟು ಸಹಾಯ ಹಸ್ತಗಳಿಲ್ಲದೆ ಹತಾಶರಾಗುವ ಪರಿಸ್ಥಿತಿ ಅವರಿಗೆ ಮುಖಾಮುಖಿಯಾಗುವ ಸಂಭವ ಇರುತ್ತಿರಲಿಲ್ಲ ಅಷ್ಟೆ.

ಊಟ ಮುಗಿಸಿ ಚಳಿಗೆ ಮದ್ದಿನಂತೆ ಒಂದು ತಂಬಾಕಿನ ಚುಟ್ಟಾವನ್ನ ಗೋಪಿಯೊಂದಿಗೆ ಹಂಚಿಕೊಂಡು ಅವನು ಸೇದಿ ಮುಗಿಸಿದ. ಮೈ ಮನ ಚೂರು ಹಗುರಾದಂತೆˌ ಗೋಪಿಯ ಜೊತೆ ಪಟ್ಟಣದ ಸುತ್ತಮತ್ತಲಾಗುತ್ತಿರುವ ಹೊಸ ಹೊಸ ಬೆಳವಣಿಗೆಗಳ ವರದಿಯೊಪ್ಪಿಸುತ್ತಿದ್ದ ಗೋಪಿಯ ಮಾತುಗಳನ್ನ ಮೌನವಾಗಿ ಆಲಿಸುತ್ತಾ ಜೊತೆಜೊತೆಗೆ ಹೆಜ್ಜೆ ಹಾಕುತ್ತಾ ಸಾಗಿದ. ಅವನ ಕೆಲವು ವರದಿಗಳು ಇವನಿಗೂ ಹೊಸತಾಗಿದ್ದವು. ಕೆಲವಂತೂ ಅವನಿಗೆ ಸರಿಯಾಗಿ ಅರ್ಥವಾಗದ್ದುˌ ಇವನಿಗೂ ಸರಿಯಾಗಿ ಅರ್ಥ ಮಾಡಿಸುತ್ತಾ ವಿವರಿಸಲು ಗೋಪಿಯೂ ಸಹ ಸೋತಿದ್ದ. ಜೊತೆಗೆ ಸ್ಥಳಿಯ ಭಾಷೆಯನ್ನ ಇನ್ನೂ ಕೂಡ ಸ್ಪಷ್ಟವಾಗಿ ಕಲಿತಿರದ ಅವನ ಸೋಮಾರಿತನ ಗ್ರಹಿಕೆ ಸರಿಯಾಗಿದ್ದರೂ ಮನವರಿಕೆ ಮಾಡಿಸಿಕೊಡಲು ಅವನು ಸೋಲಲು ನೇರ ಕಾರಣವಾಗಿತ್ತು.

ಸುಲ್ತಾನನ ಶೀತದ ಬಾಧೆ ಹಿಡಿತಕ್ಕೆ ಬಂದಿತ್ತು. ಇಬ್ಬರೂ ಸೇರಿ ಮತ್ತೊಂದು ಸುತ್ತು ಗೊಟ್ಟ ಎತ್ತಿ ಅವನ ಬಾಯಿ ಕಳಿಸಿ ಔಷಧವನ್ನ ಸುರಿದರು. ಮದ್ದಿನ ಕಹಿ ಮರೆಸಲು ಚೂರು ಮುದ್ದಿಸಿ ಅವನ ಇಷ್ಟದ ಕ್ಯಾರೆಟ್ ಬೂಸಾ ಓಟ್ಸ್ ಹಾಗೂ ಹುರುಳಿ ಬೆರೆಸಿ ಬೇಯಿಸಿದ ಮಿಶ್ರಣವನ್ನ ಅವನ ಬಾಯಿ ಚೀಲದಲ್ಲಿ ಹಾದಿಯಲ್ಲಿ ಮೆಲ್ಲಲು ಕಟ್ಟಿˌ ಚಳಿಗೆ ಹೊದೆಸಿದ್ದ ದಪ್ಪ ಮಂದರಿ ತೆಗೆದ. ಅಗ್ಗಿಷ್ಟಿಕೆಯ ಉರಿ ಆರಿಸಿ ಬೆನ್ನಿಗೆ ಜೀನು ಏರಿಸಿ ಕಟ್ಟುತ್ತಿದ್ದಂತೆ ಕುದುರೆಗೂ ಮರಳಿ ಮನೆಗೆ ಹೊರಡುವ ಹೊತ್ತಾಗಿದೆ ಅನ್ನುವುದು ಅರಿವಾಗಿ ಬಾಲದ ಕುಚ್ಚನ್ನ ಆಡಿಸುತ್ತಾ ಕೆನೆತದ ಜೊತೆಗೆ ತನಗಾದ ಖುಷಿಯನ್ನ ಅದು ಪ್ರಕಟಿಸಿತು.

ಹಾಡಿಯಲ್ಲಿ ಕಂಡಿದ್ದ ಕಲ್ಲಿದ್ದಲ ಖಜಾನೆಯ ದೆಸೆಯಿಂದ ಪಟ್ಟಣದಲ್ಲಿ ಅವನಿಗೆ ಕಲ್ಲಿದ್ದಲು ಖರೀದಿಸುವ ಅಗತ್ಯ ಅವನಿಗೆ ಬಂದಿರಲಿಲ್ಲ. ಹೀಗಾಗಿ ಬೆನ್ನ ಚೀಲದಲ್ಲಿ ಉಳಿದ ಜಾಗದಲ್ಲಿ ಕೊಂಡ ಅನೇಕ ಸಾಮಾನುಗಳನ್ನ ತುಂಬಲು ಸಾಧ್ಯವಾಯಿತು. ಉಳಿದಂತೆ ಬಿಟ್ಟು ಮುನ್ನಡೆಯುವ ತೀರಾ ಖಾಲಿಯಾಗಿರದ ಸಾಮಾನುಗಳನ್ನ ಗೋಪಿಯೆ ತಂದು ತೋಟದ ಮನೆಗೆ ಮುಟ್ಟಿಸುತ್ತಾನೆˌ ಹೀಗಾಗಿ ಚಿಂತಿಸುವ ಅಗತ್ಯವಿರಲಿಲ್ಲˌ ಕುದುರೆಯ ಮೂಗುದಾರ ಹಿಡಿದು ಮುನ್ನಡೆಸಿದವ ಬೀದಿಗೆ ಬಂದದ್ದೆ ಅದರ ಬೆನ್ನೇರಿ ಕುಳಿತು  ಎಡಗೈಯಲ್ಲಿ ಲಗಾಮು ಎಳೆದು ಹಗೂರ ಸಡಿಲ ಬಿಡುತ್ತಾ ಬಲಗೈಯನ್ನ ಗೋಪಿಯೆಡೆಗೆ ವಿದಾಯದ ಗುರುತಾಗಿ ಬೀಸುತ್ತಾ ಮನೆಯ ದಿಕ್ಕಿನತ್ತ ವೇಗವಾಗಿ ಸುಲ್ತಾನನ್ನ ಓಡಿಸಿಕೊಂಡು ಹಿಮದ ಗಾಳಿ ಕವಿಸಿದ್ದ ತೆರೆಯೊಳಗೆ ಮರೆಯಾಗಿ ಹೋದ.

ಚಳಿ ಹಾಗೂ ಕತ್ತಲು ಪೈಪೋಟಿಯ ಮೇಲೆ ಸುತ್ತಲೂ ಆವರಿಸಲು ಹೊಂಚು ಹಾಕುತ್ತಿರುವಂತಿತ್ತು ವಾತಾವರಣ. ಥಂಡಿಗಾಳಿ ಬೆಳಗ್ಗಿನಂತೆಯೆ ಮೂಳೆ ಕೊರೆಸುವಂತಿದ್ದು ಹಾಕಿಕೊಂಡಿದ್ದ ಬೆಚ್ಚನೆ ಧಿರಿಸನ ಮೇಲೆ ಹೊದ್ದುಕೊಂಡಿದ್ದ ಬೆಚ್ಚನೆ ದಪ್ಪ ಕಂಬಳಿಯನ್ನೂ ತೂರಿ ಒಳ ಹೊಕ್ಕು ಕಾಡಲು ಹವಣಿಸುತ್ತಿತ್ತು. ಸುಲ್ತಾನನ ಓಟ ವೇಗವನ್ನ ಹೆಚ್ಚಿಸಿಕೊಳ್ಳುತ್ತಿದ್ದ ಹಾಗೆ ಚಳಿಗಾಳಿಯೂ ತೆರೆದ ಮುಖ ಹಾಗೂ ಮೂಗಿಗೆ ತಣ್ಣಗೆ ಅಡರುತ್ತಿತ್ತು. ಕುದುರೆ ಒಂದೆ ಲಯದಲ್ಲಿ ಓಡುತ್ತಲಿರುವಾಗ ಅವನ ಮನೋವ್ಯಾಪಾರವೂ ಕೊಂಚ ಬಾಲ್ಯದ ದಿನಗಳತ್ತ ಹಿಮ್ಮುಖ ಓಡಿ ನಿಂತಿತು.

ಗೋಪಿ ಕೊಟ್ಟ ವರದಿಯಂತೆ ಈ ಊರಿಗೆ ಹೊಸ ಹೊಸ ವಲಸೆಗಾರರು ಸದ್ಯದಲ್ಲಿಯೆ ಲಗ್ಗೆ ಇಡಲಿಕ್ಕಿದ್ದಾರಂತೆ. ಅವರ ವಸತಿ ಸೌಕರ್ಯಗಳಿಗೆ ಸೂಕ್ತ ಸ್ಥಳ ಗುರುತಿಸಿ ಅವರಿಗೆ ಮನೆ ಕಟ್ಟಿಕೊಳ್ಳಲು ನಿವೇಶನಗಳನ್ನ ಮಂಜೂರು ಮಾಡತಕ್ಕದ್ದು ಎನ್ನುವ ಆದೇಶ ಮೇಲಿನಿಂದ ರಾಜಧಾನಿಯವರು ಕಳಿಸಿಯಾಗಿದೆಯಂತೆ. ಪಟ್ಟಣದ ಆಡಳಿತದ ಚುಕ್ಕಾಣಿ ಹಿಡಿದ ಶರೀಫನ ಕಛೇರಿಯ ಕಂದಾಯದ ಅಧಿಕಾರಿಗಳು ಈ ನಿಟ್ಟಿನಲ್ಲಿ ಇವನ ತೋಟದತ್ತ ಸಾಗುವ ಹಾದಿಯ ದಿಕ್ಕಿನಲ್ಲಿಯೆ ಹೊಸ ವಿಸ್ತರಣವನ್ನು ಕಲ್ಪಿಸಲು ನಿರ್ಧರಿಸಿ ಸುಮಾರು ನೂರು ಹಕ್ಟೇರ್ ಕಾಡಂಚಿನ ಭೂಮಿಯನ್ನೆ ಬರಲಿರುವ ವಲಸಿಗರಿಗೆ ನಿವೇಶನವಾಗಿ ಹಂಚಲು ಗುರುತಿಸಿದ್ದಾರಂತೆ.

ಇದರರ್ಥ ಇಷ್ಟೆ ಕ್ರಮೇಣ ಈ ಭಾಗ ಜನನಿಬಿಡವಾಗಲಿದೆ. ಅವರ ನಿವೇಶನವಾಗಲು ಹಾಗೂ ಮಂಜೂರಾದ ನಿವೇಶನದಲ್ಲಿ ಕಟ್ಟುವ ಮನೆಯ ಮೋಪಾಗಲು ಈಗ ಯಾರಪ್ಪನ ಅಪ್ಪಣೆಗೂ ಕಾಯದೆ ಬೆಳೆದು ನಿಂತಿರುವ ಅರಣ್ಯದಂಚಿನ ಬೃಹತ್ ಪೈನ್ˌಮೇಪಲ್ ಹಾಗೂ ಓಕ್ ಮರಗಳೆಲ್ಲ ಗರಗಸದ ಹಲ್ಲುಗಳಿಗೆ ಸಿಕ್ಕಿ ಹಾಕಿಕೊಂಡು ಕೊನೆಯುಸಿರೆಳೆಯಲಿವೆ. ತಮ್ಮ ಕಾರ್ಯಚಟುವಟಿಕೆಗಳಿಂದ ಕಾಡನ್ನ ಸಮೃದ್ಧವಾಗಿಸಿ ಅರಣ್ಯದ ಅರಳುವಿಕೆಗೆ ಬೀಜ ಪ್ರಸರಣದ ಪ್ರಮುಖ ಕೊಂಡಿಯಾಗಿ ಈಗ ಅದನ್ನೆ ತಮ್ಮ ಅವಾಸವಾಗಿಸಿಕೊಂಡಿರುವ ವನ್ಯ ಖಗ ಮೃಗಗಳೆಲ್ಲ ತಮ್ಮ ನೈಸರ್ಗಿಕ ನೆಲೆ ಕಳೆದುಕೊಂಡು ನಿರಾಶ್ರಿತರಾಗಿ ಗುಳೆ ಬರುವವವರ ಒತ್ತಡ ಕಿರುಕುಳ ತಾಳಲಾರದೆ ತಾವೆ ಸ್ವತಃ ನಿರಾಶ್ರಿತರಾಗಿ ಸ್ಥಳಾಂತರಗೊಳ್ಳುವ ದುಸ್ಥಿತಿಗೆ ಸದ್ಯದಲ್ಲಿಯೆ ಒಳಗಾಗಲಿಕ್ಕಿವೆ.

ಸರಕಾರದ ಉದ್ದೇಶ ಜನಸಂಖ್ಯೆಯನ್ನ ಹೆಚ್ಚಿಸುವುದೆ ಆಗಿರುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಸಹಜವಾಗಿ ಅದರ ವಲಸೆ ನೀತಿಗಳು ಆ ನವನಾಡಿನತ್ತ ತಾವಿರುವ ನೆಲದಲ್ಲಿ ಬರಕತ್ತಾಗದೆ ಭರವಸೆ ಕಳೆದುಕೊಂಡು ಹೊಸ ಅವಕಾಶಗಳಿಗಾಗಿ ಕಾತರಿಸಿ ಕಾಯುತ್ತಿರುವ ವಲಸಿಗರನ್ನ ಪ್ರೋತ್ಸಾಹಿಸುವಂತೆಯೆ ರೂಪುಗೊಂಡಿವೆ. ಅದರ ಆಸರೆಯಲ್ಲಿ ಹೊಸ ಬದುಕನ್ನ ಕಟ್ಟಿಕೊಳ್ಳಲು ಸಾಗರದ ಅಲೆಗಳಂತೆ ನುಗ್ಗಿ ಬರುತ್ತಿರುವ ಜನ ಪ್ರವಾಹಕ್ಕೆ ಪೂರಕವಾಗಿರುವ ಸರಕಾರಿ ನೀತಿಗಳು ಸ್ಥಳಿಯ ಬುಡಕಟ್ಟಿನವರ ಹಾಗೂ ಸ್ಥಳಿಯ ವನ ಜೊತೆಗೆ ವನ್ಯಮೃಗಗಳಿಗೆ ಮಾರಕವಾಯಿತು.*********


ಹಾದಿ ಸಾಗುವ ಪಯಣದುದ್ದ ಇವನ ಮನಸಿನಲ್ಲಿದ್ದುದು ಒಂದೆ ಗುರಿ. ಆದಷ್ಟು ಬೇಗ ಮನೆಯನ್ನ ಹೋಗಿ ಮುಟ್ಟಬೇಕು. ಪಟ್ಟಣದ ಹೊರ ವಲಯ ದಾಟಿದ ಕೂಡಲೆ ನಾಟಕೀಯವಾಗಿ ಪರಿಸರದ ಭೀಭತ್ಸತೆ ಬಾಯಿ ಕಳೆದು ನಿಂತಿರುವ ಭಾವ ಸಾಕಾರವಾದಂತೆನಿಸಿತು. ಚಳಿಗಾಳಿಯ ಅರ್ಭಟ ಏಕಾಏಕಿ ಏರಿದಂತನಿಸ ಹತ್ತಿತು. 

ಸಹಜವಾಗಿ ಸಂಜೆಯ ನಂತರ ಶೀತ ಮಾರುತಗಳ ಪ್ರಕೋಪ ಹೆಚ್ಚಿ ಹಗಲಲ್ಲಿ ಇಳಿದು ಕೊಂಚ ಹಿಡಿತಕ್ಕೆ ಬರುವುದು ಹೊಸತೇನಲ್ಲ. ಅವನ ಆಲೋಚನಾ ಲಹರಿ ಥಟ್ಟನೆ ಕಡಿದು ಬೀಳುವಂತೆ ಸುಲ್ತಾನನ ಕಾಲು ಇದ್ದಕ್ಕಿದ್ದಂತೆ ಮುಗ್ಗುರಿಸಿತು. ಕೊರಕೊಲೊಂದರಲ್ಲಿ ಅವನ ಮುಂದಿನ ಎಡಗಾಲು ಹೊಕ್ಕು ಕುದುರೆ ಎಡವಿ ಬಿತ್ತು. ವೇಗ ಹಿಡೀತದಲ್ಲಿದ್ದುದರಿಂದ ಕಾಲು ಮೂಳೆಯೇನೂ ಮುರಿದಿರುವ ಸಂಭವವಿರಲಿಲ್ಲ. ಅಂತೆಯೆ ಕುದುರೆಯ ಕುತ್ತಿಗೆಗೆ ಅಪ್ಪಳಿಸಿದ ತನ್ನ ಮುಖಕ್ಕೂ ಅಂತಹ ಹಾನಿಯೇನೂ ಆಗಿರಲಿಲ್ಲ. ಒಂದೊಮ್ಮೆ ಪಟ್ಟಣದಿಂದ ಹೊರಟಿದ್ದ ವೇಗದಲ್ಲೆ ಓಡಿ ಬರುವಾಗ ಎಲ್ಲಾದರೂ ಅಪ್ಪಿತಪ್ಪಿ ಮುಗ್ಗರಿಸಿ ಬಿದ್ದಿದ್ದರೆ ಇಬ್ಬರಿಗೂ ಅತೀವ ನೋವಾಗುವಂತೆ ಸುಲ್ತಾನನ ಕಾಲಿನದ್ದೂˌ ಅವನ ಮೂಗಿನದ್ದೂ ಮೂಳೆ ಮುರಿಯವ ಸಾಧ್ಯತೆಯನ್ನ ತಳ್ಳಿ ಹಾಕುವಂತಿರಲಿಲ್ಲ.

ಸಣ್ಣದರಲ್ಲೆ ಸಂಭವನೀಯ ಭೀಕರ ಅಫಘಾತ ತಪ್ಪಿ ಹೋದದ್ದಕ್ಕೆ ಅವನು ನಿಟ್ಟುಸಿರು ಬಿಡತ್ತಾ ಅಶ್ವವನ್ನ ಮೃದು ಮಾತುಗಳಿಂದ ಹುರಿದುಂಬಿಸಿ ಕುತ್ತಿಗೆ ಬೆನ್ನು ಸವರುತ್ತಾ ಪುಸಲಾಯಿಸಿ ಗುಂಡಿಯಿಂದ ಮೇಲೆಬ್ಬಿಸಿದ. ಕೊಂಚ ದೂರ ಅವರಿಬ್ಬರೂ ಜೊತೆಜೊತೆಯಾಗಿಯೆ ನಡೆದರು. ಹುಯ್ಯಲಿಡುವ ಸುಳಿಗಾಳಿಯ ಪ್ರಕೋಪಕ್ಕೆ ತನ್ನ ಹೆಜ್ಜೆಯ ಸದ್ದು ತನಗೆ ಕೇಳುವುದೆ ಅಸಾಧ್ಯವಾಗಿತ್ತು. ಪಟ್ಟಣದ ಕಡೆಗೆ ವಲಸೆ ಹೆಚ್ಚುವ ಸೂಚನೆ ಕೊಟ್ಟಿದ್ದ ಗೋಪಿ ಹೇಳಿದ್ದ ಇನ್ನೂ ಅನೇಕ ಹೊಸ ಹೊಸ ವಾರ್ತೆಗಳ ಬಗ್ಗೆ ಮನಸೊಳಗೆ ಮಂಥನ ನಡೆಸುತ್ತಾ ಅವನು ಒಂದು ಕೈಯಲ್ಲಿ ಕುದುರೆಯ ಮೂಗುದಾರ ಹಿಡಿದಂತೆಯ ಮುನ್ನಡೆಯುತ್ತಿದ್ದˌ.

ಪೂರ್ವದಿಂದ ಇಲ್ಲಿಗೆ ಸಂಪರ್ಕ ಕ್ರಾಂತಿ ತರಲಿರುವ ರೈಲು ದಾರಿಯ ಸಮಾನಾಂತರವಾಗಿ ಕಂಭ ಹೂಡಿ ತಂತಿ ಎಳೆದು ಅದೇನೂ ತುರ್ತು ಸಮಾಚಾರ ಹರಡುವ ತಂತಿ ಸೇವೆಯನ್ನ ರಾಜಧಾನಿಯಿಂದ ಆಳುವ ಮಂದಿ ಈ ಪಟ್ಟಣಕ್ಕೂ ವಿಸ್ತರಿಸಲಿದ್ದಾರಂತೆ. ಅದರ ಮೂಲಕ ಕ್ಷಣಾರ್ಧದಲ್ಲಿ ದೂರದ ಒಂದು ಪ್ರದೇಶದಿಂದ ಕಳಿಸಿದ ಸುದ್ದಿಯನ್ನ ಇನ್ಯಾವುದೋ ಮೈಲಿಗಟ್ಟಲೆ ಅಂತರದಲ್ಲಿರುವವರು ಕೂಡಲೆ ಪಡೆದು ಓದಬಹುದಂತೆ! ಅಲ್ಲಿಗೆ ಪತ್ರ ಬರೆದು ಅದನ್ನ ಹೊತ್ತು ಕುದುರೆ ಮೇಲೇರಿ ವಾರಗಟ್ಟಲೆ ಊರೂರಿಗೆ ಪಯಣಿಸಿ ಅವುಗಳನ್ನ ತಲುಪಿಸಿ ಬರುವ ಸದ್ಯದ ಸುತ್ತುಬಳಸಿನ ಸೇವೆ ಮರೆಗೆ ಸರಿದ ಹಾಗೆಯೆ! ಅದರಲ್ಲೂ ಈಗಿರುವ ಅಂಚೆ ಸೇವೆ ಕೇವಲ ನಗರ ಪಟ್ಟಣ ಪ್ರದೇಶಗಳಿಗೆ ಸೀಮಿತವಾಗಿವೆ. ಹೊರವಲಯದಲ್ಲಿ ಮೈಲುಗಟ್ಟಲೆ ದೂರದಲ್ಲಿ ನೆಲೆಯಾಗಿರವ ತೋಟದ ಮನೆಯ ರೈತಾಪಿಗಳಿಗೆ ಯಾವ ಅಂಚೆ ಸೇವೆಯೂ ಇರಲಿಲ್ಲ. ಒಂದು ಅಂದಾಜಿನ ಮೇಲೆ ಅವರೆ ಪಟ್ಟಣಗಳಿಗೆ ಬಂದಾಗ ಅಂಚೆ ಕಛೇರಿಯನ್ನ ಎಡತಾಕಿ ತಮ್ಮ ಹೆಸರಿಗೇನಾದರೂ ಪತ್ರ ಬಂದಿದೆಯೆ ಎಂದು ವಿಚಾರಿಸಿ ಪಡೆದುಕೊಳ್ಳಬೇಕಾಗಿತ್ತು.

ಕೆಲವೊಮ್ಮೆ ಹೀಗೆಲ್ಲಾ ಊರೂರಿನ ಸುದ್ದಿ ಮತ್ತೊಂದೂರಿನ ಮತ್ತೊಬ್ಬರಿಗೆ ಹೋಗಿ ಮುಟ್ಟುವಾಗ ಎರಡೆರಡು ಮೂರು ಮೂರು ತಿಂಗಳ ಅವಧಿಯೆ ಕಳೆದು ಹೋಗಿರುತ್ತಿದ್ದವು. ಆ ಪತ್ರದಲ್ಲಿ ಬರೆದ ಸುದ್ದಿಯೂ ಸಹ ಆಗ ಸಹಜವಾಗಿ ಹಳೆಯದಾಗಿರುತ್ತಿತ್ತು. ಹೀಗಿರುವ ಪರಿಸ್ಥಿತಿ ಏಕಾಏಕಿ ಬದಲಾಗೋದೇನು ಸಾಧಾರಣ ವಿಷಯವೆ? ಎಂದಾತ ತರ್ಕಿಸಿದ. ಮಧ್ಯಾಹ್ನ ಬ್ಯಾಂಕಿನ ಕೆಲಸ ಮುಗಿಸಿ ಗೋಪಿಯ ಮನೆಗೆ ಊಟಕ್ಕೆ ಹೋಗುವ ಮೊದಲು ಅವನೂ ಅಂಚೆ ಕಛೇರಿಗೆ ಹೋಗಿದ್ದ. ನಾಲ್ಕು ಪತ್ರಗಳುˌ ಚಂದಾದಾರಿಕೆಯಿದ್ದ ರಾಜಧಾನಿಯಿಂದ ಪ್ರಕಟವಾಗಿದ್ದ ನಿಯತಕಾಲಿಕೆಗಳ ಆರು ಪ್ರತಿಗಳು ಇವನ ಹಾದಿ ಕಾಯುತ್ತಾ ಅಲ್ಲಿನ ತಿಜೋರಿಯಲ್ಲ ಭದ್ರವಾಗಿ ಬಿದ್ದಿದ್ದವು. ಸುಮಾರು ಎರಡು ತಿಂಗಳುಗಳಿಂದ ಅವು ಅವನ ಹಾದಿ ಕಾಯಲು ಅಲ್ಲಿಗೆ ಬಂದು ಮುಟ್ಟಿದ್ದವೇನೋ. ಚಳಿಗಾಲದಲ್ಲಿ ಪಟ್ಟಣದತ್ತ ರೈತಾಪಿಗಳು ತಲೆಯಿಟ್ಟು ಮಲಗುವುದೆ ಅಪರೂಪವಾಗಿರುವಾಗ ಇಂತಹ ನಿರೀಕ್ಷಿತ ನಿಧಾನಗಳೆಲ್ಲ ಆಗುವುದರಲ್ಲಿ ಆಶ್ಚರ್ಯ ಪಡುವಂತದ್ದೇನೂ ಇಲ್ಲ. ಅದರಲ್ಲೂ ಈ ಸಾಲಿನ ಚಳಿಯ ಅಬ್ಬರದ ಸಮಯದಲ್ಲಿ ಇವನಂತೆ ಪಟ್ಟಣದ ಪಯಣ ಮಾಡುವ ಧೈರ್ಯವನ್ನ ಅಳ್ಳೆದೆಯವರೇನೂ ಮಾಡುತ್ತಿರಲಿಲ್ಲ ಅಂತ ಇಟ್ಕೊಳಿ.

ಇದೂ ಸಾಲದು ಅಂತ ಪಟ್ಟಣದಲ್ಲಿ ಒಂದು ರೇಡಿಯೋ ಕಟ್ಟೆಯನ್ನ ಸರಕಾರದ ವತಿಯಿಂದ ಕಟ್ಟಲಿದ್ದಾರಂತೆ! ಸದ್ಯ ರಾಜಧಾನಿಯ ಸಮೀಪದ ನಗರಗಳಲ್ಲಿ ಮಾತ್ರ ಇರುವ ವಿದ್ಯುತ್ ಅನ್ನುವ ಅದ್ಭುತ ಶಕ್ತಿಯನ್ನ ಈ ಪಟ್ಟಣದ ಸಾರ್ವಜನಿಕರ ಬಳಕೆಗೂ ತಂದು ಮುಟ್ಟಿಸಿ ಅದರ ಮೂಲಕವೆ ರೇಡಿಯೋ ಅನ್ನುವ ಹೊಸ ಅನ್ವೇಷಣೆಯನ್ನೂ ಸಾರ್ವಜನಿಕ ಸೇವೆಗೆ ಅರ್ಪಿಸಲು ಆ ರೇಡಿಯೋ ಕಟ್ಟೆಯನ್ನ ನಿರ್ಮಾಣ ಮಾಡೋದಂತೆ! ರಾಜಧಾನಿಯಲ್ಲಿ ಕೂತು ಮಾತನಾಡುವವರ ಮಾತುಗಳು ಗಾಳಿಯ ಅಲೆಗಳ ಮೂಲಕವೆ ತೇಲಿ ಬಂದು ಆ ರೇಡಿಯೋ ಯಂತ್ರದ ಮೂಲಕ ಕೇಳುಗರೆಲ್ಲರಿಗೂ ಕ್ಷಣಾರ್ಧದಲ್ಲಿ ಕೇಳುವ ಅದ್ಭುತಗಳೂ ಇನ್ನೇನು ಘಟಿಸಲಿವೆಯಂತೆ. ಇವೆಲ್ಲವನ್ನೂ ದೂರದೂರಿನಿಂದ ಪ್ರಕಟವಾಗಿ ಅಂಚೆಯಲ್ಲಿ ಬಂದ ವೃತ್ತ ಪತ್ರಿಕೆಯಲ್ಲಿ ಬರೆದಿದ್ದನ್ನ ಓದಿ ಮಠದ ಗುರುಗಳು ತನ್ನ ಶಿಷ್ಯರೊಂದಿಗೆ ಚರ್ಚಿಸುವಾಗ ಅಲ್ಲಿಯೆ ಏನೋ ಕೆಲಸ ಮಾಡುತ್ತಿದ್ದ ಗೋಪಿ ಕೇಳಿಸಿಕೊಂಡಿದ್ದ.

ಬೇಡದೆ ಬರುತ್ತಿರುವ ಅಥವಾ ಸರಕಾರ ತರುತ್ತಿರುವˌ ನೇರವಾಗಿ ಹೇಳಬೇಕೆಂದರೆ ತಂದು ಹೇರುತ್ತಿರುವ ಈ ಬದಲಾವಣೆಯ ಹೊಸಗಾಳಿ ಆಹ್ಲಾದಮಯವೊ? ಇಲ್ಲಾ ಅಪಾಯಕಾರಿಯೋ? ಅನ್ನುವ ನಿಶ್ಕರ್ಷೆಗೆ ಬರಲಾಗದ ಅವನು ಬಂದದ್ದೆಲ್ಲಾ ಬರಲಿ ಗೋವಿಂದನ ದಯವೊಂದಿರಲಿ ಎನ್ನುವ ವೇದಾಂತಕ್ಕೆ ಜೋತು ಬಿದ್ದಿದ್ದ. ಒಂದು ವೇಳೆ ತಾನು ಬಯಸದಿದ್ದರೂ ಸಹ ಆಗುವ ಆಗುತ್ತಿರುವ ಆಗಲಿರುವ ಬದಲಾವಣೆಗಳನ್ನ ತಡೆದು ನಿಲ್ಲಿಸಿಲಾಗಲಿˌ ನಿರ್ದಿಷ್ಟವಾಗಿ ನಿರ್ದೇಶಿಸಲಾಗಲಿ ತನ್ನಿಂದ ಸಾಧ್ಯವಿಲ್ಲ. ಹೀಗಾಗಿ ತನ್ನ ಕೈ ಮೀರಿದ ವಿಷಯಗಳಲ್ಲಿ ಕುತೂಹಲ ಹೊತ್ತು ಭಾಗಿಯಾಗುವುದರ ಹೊರತು ಬೇರೆ ಇನ್ಯಾವ ಆಯ್ಕೆಗಳೂ ಅವನಿಗಿದ್ದಿರಲಿಲ್ಲ. ಬಹುಶಃ ಅಭಿವೃದ್ಧಿಯೆಂದರೆ ಅದೆ ಇರಬಹುದು.

ವಲಸೆಯ ಹೆಚ್ಚಳದ ಕುರಿತು ಸಹ ಅವನ ಅಭಿಪ್ರಾಯ ವಿಭಿನ್ನವಾಗಿತ್ತು. ಗಿಜಗುಡುವ ಜನಜಂಗುಳಿ ಗೊಂದಲˌ ಕಾಯಿಲೆಯ ಸೋಂಕುˌ ಅರಾಜಕತೆˌ ಅಸಮಾನತೆˌ ಕೊಳಕುˌ ಅಪರಾಧ ಚಟುವಟಿಕೆಗಳನ್ನ ಹೆಚ್ಚಿಸುತ್ತವೆ ಅನ್ನುವುದು ಅವನ ಖಚಿತ ಅಭಿಪ್ರಾಯವಾಗಿತ್ತು. ಹೀಗಾಗಿಯೆ ಅನಿವಾರ್ಯ ಸಂದರ್ಭಗಳನ್ನ ಹೊರತು ಪಡಿಸಿ ಪಟ್ಟಣ ವಾಸದ ನಿರ್ಬಂಧಗಳನ್ನ ತಪ್ಪಿಸಿಕೊಳ್ಳಲು ಅವನು ಆದ್ಯತೆ ನೀಡುತ್ತಿದ್ದ. ತೋಟದ ಮನೆಯಲ್ಲಿ ಕೃಷಿ ಚಟುವಟಿಕೆಗಳ ಮಧ್ಯದ ಬಾಳ್ವೆಯಲ್ಲಿ ಸಿಗುತ್ತಿದ್ದ ಮನಃಶಾಂತಿ ಅವನಿಗೆ ಪಟ್ಟಣದ ಗದ್ದಲದ ಗಲಾಟೆಯ ಬದುಕಿನಲ್ಲಿ ಎಂದೂ ಕಂಡು ಬಂದದ್ದಿಲ್ಲ. ಅದಾಗಲೆ ಕನಿಷ್ಠ ಒಂದು ಮೈಲಿಯನ್ನಾದರೂ ನಡೆದು ಕಾಲೂ ದಣಿದಿತ್ತಾಗಿ ಮರಳಿ ಸುಲ್ತಾನನ ಬೆನ್ನೇರಿದ. ಆರಂಭಿಕ ಅಫಘಾತದಿಂದಾಗಿದ್ದ ಅಘಾತದಿಂದ ಚೇತರಿಸಕೊಂಡಿದ್ದ ಕುದುರೆಯೂ ತಕರಾರಿಲ್ಲದೆ ಮುಂದಡಿಯಿಡುತ್ತಾ ಮನೆಯತ್ತ ಓಡ ತೊಡಗಿತು.

ಕೂತು ಕೂತು ಚಳಿಗೆ ಜೋಮು ಹಿಡಿದಿದ್ದ ಮೈ ಮನಸ್ಸಿಗೆ ಈ ನಡಿಗೆ ಸ್ವಲ್ಪ ಚೈತನ್ಯ ತುಂಬಿತ್ತು. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಅನ್ನುವ ಹಾಗೆˌ ಒಂದೈದು ಮೈಲಿ ದೂರ ಚಲಿಸಿದ್ದರೋ ಇಲ್ಲವೋˌ ಮನೆಯಿಂದ ಕೇವಲ ಹನ್ನೆರಡೋ ಹದಿ ಮೂರೋ ಮೈಲು ದೂರದ ಅಂತರ ಉಳಿದಿರುವಂತೆ ಇದ್ದಕ್ಕಿದ್ದಂತೆ ಉತ್ತರದ ದಿಕ್ಕಿನಿಂದ ಒಕ್ಕರಿಸಿ ಬಂದು ಬೀಸಿದ ಕಾರ್ಮೋಡದ ಹಿಮಪಾತದ ಹೊಡೆತವನ್ನ ಮೀರಿ ಮತ್ತಷ್ಟು ಮುಂದುವರೆಯುವುದೆ ಅಸಾಧ್ಯವಾಯಿತು. ಪುಣ್ಯಕ್ಕೆ ಅವರಿಬ್ಬರೂ ಆಗಲೆ ರೈಲು ಹಾದಿಯ ಕಾರ್ಮಿಕರು ನೆಲೆಸಿದ್ದ ಸದ್ಯ ಬೀಗ ಬಿದ್ದಿದ್ದ ಕ್ಯಾಂಪಿನ ಮನೆಗೆ ಹೆಚ್ಚೆಂದರೆ ಸಾವಿರ ಗಜ ದೂರದಲ್ಲಿದ್ದರು.


*********ಮುಳುಗುವವರಿಗೆ ಹುಲ್ಲಿನಾಸರೆ  ಅನ್ನುವಂತೆ ಕೂಡಲೆ ಅದರತ್ತ ಸುಲ್ತಾನನ್ನ ದೌಡಾಯಿಸಿದ ಅವನು ಇನ್ನೇನು ಹಿಮ ಮಳೆಯ ಅರ್ಭಟ ಹೆಚ್ಚಿ ನಡುನಡುವೆ ಸಿಡಿಲು ಹೊಡೆಯುವ ಭಯಂಕರ ವಿದ್ಯಾಮಾನಗಳು ಘಟಿಸುವ ಮುನ್ನವೆ ಆ ಮನೆಯ ಅಂಗಳಕ್ಕೆ ಬಂದು ಮುಟ್ಟಿದ್ದರು. ಯೋಚಿಸಲು ಹಚ್ಚು ಸಮಯವಿರಲಿಲ್ಲ. ಬೆನ್ನಿಗೆ ಕಟ್ಟಿಕೊಂಡಿದ್ದ ಕೈ ಕೊಡಲಿಯಿಂದ ಬೀಗ ಹಾಕಿ ಬಿಗಿದಿದ್ದ ಹಗ್ಗದ ಹುರಿಯನ್ನ ಕಡಿದವನೆ ಕುದುರೆಯನ್ನೂ ಒಳಗೆಳೆದುಕೊಂಡು ಬಾಗಿಲನ್ನ ಮುಚ್ಚಿ ಹಿಮ ಮಳೆಯ ಮಾರಕ ಪ್ರಕೋಪದಿಂದ ಪಾರಾದ.

ಹೊರಗೆ ಹುಯ್ಯಲಿಡುವ ಗಾಳಿಯ ಜೊತೆಜೊತೆಗೆ ಚಚ್ಚಿ ಬಿಸಾಡುವಂತೆ ಹಿಮದ ಮಳೆ ಸುರಿಯುತ್ತಿದ್ದ ರಣ ಭೀಕರ ಸದ್ದು ಕಿವಿಗಪ್ಪಳಿಸುತ್ತಿತ್ತು. ಹೊರಗೆ ಮಳೆˌ ಒಳಗೆ ಗವ್ವೆನ್ನುವ ಭೀಕರ ಕತ್ತಲು. ಅದರಲ್ಲೆ ತಡಕಾಡಿ ಅಗ್ಗಿಷ್ಟಿಕೆಯಿರುವ ಮನೆಯ ಮೂಲೆಯನ್ನ ಹುಡುಕಿದ. ಅವನ ಅದೃಷ್ಟಕ್ಕೆ ಚಕಮಕಿ ಕಲ್ಲುಗಳು ಅಲ್ಲೆ ಬಿದ್ದುಕೊಂಡಿದ್ದವು. ಚೆನ್ನಾಗಿ ಅವನ್ನ ನೆಲಕ್ಕೆ ಉಜ್ಜಾಡಿದವನೆ ಅವುಗಳಿಂದ ಕಿಡಿಯೆಬ್ಬಿಸಿದ. ರೈಲು ಕೂಲಿಗಳ ಕ್ಯಾಂಪಿನಲ್ಲಿ ಕಲ್ಲಿದ್ದಲಿಗೆ ಬರವೆ? ಅಗ್ಗಿಷ್ಟಿಕೆಯ ಒಡಲ ಒಲೆಗೆ ತುಂಬಿದ್ದ ಒಣ ಪುರಳೆಗಳಿಗೆ ಕಲ್ಲು ಗಟ್ಟಿಸಿ ಕಿಡಿ ಹಾರಿಸಿ ಬೆಂಕಿ ಊದಿ ಉರಿಯೆಬ್ಬಿಸಿದವ ಕಲ್ಲಿದ್ದಲನ್ನೂ ಜೊತೆಗೆ ತುಂಬಿದ. ಕ್ರಮೇಣ ಉರಿ ಹೆಚ್ಚಿತು. ಅಗ್ಗಿಷ್ಟಿಕೆಯ ಚಿಮಣಿ ಕೊಳವೆಯಿಂದ ಒಳ ನುಗ್ಗಿ ಬರಲು ಹವಣಿಸುತ್ತಿದ್ದ ಸುಳಿಗಾಳಿಯೂ ಸಹ ಊದು ಕೊಳವೆಯಲ್ಲಿ ಗಾಳಿ ಊದಿದಂತಾಗಿಸಿ ಬೆಂಕಿಯ ಉರಿಯನ್ನ ಹೆಚ್ಚಿಸುವಲ್ಲಿ ಸಹಕರಿಸಿತು. ಅರ್ಧ ತಾಸಿನಲ್ಲಿ ಮನೆಯ ಹಜಾರ ಅಗ್ಗಿಷ್ಟಿಕೆಯ ಉರಿಯಿಂದೆದ್ದ ಬೆಳಕಿನಿಂದ ಬೆಳಗಿ ಹಾಗೂ ಶಾಖದಿಂದ ಬೆಚ್ಚಗಾಗಿ ಹೊರಗಿನ ಚಳಿಯ ಭೀಕರತೆಯ ಹೊತ್ತಿನಲ್ಲಿ ಸ್ವಲ್ಪ ಮಟ್ಟಿಗಾದರೂ ಸುಖಾನುಭವ ನೀಡಲಾರಂಭಿಸಿತು.

ಅಗ್ಗಿಷ್ಟಿಕೆಯ ಹತ್ತಿರವೆ ಕುದುರೆಯನ್ನೂ ನಿಲ್ಲಿಸಿಕೊಂಡು ಅದರ ಬೆನ್ನ ಮೇಲೆ ಹೊದೆಸುವ ಮುನ್ನ ದಪ್ಪನೆ ಮಂದರಿಯನ್ನ ಬೆಂಕಿಯುರಿಯ ಶಾಖಕ್ಕೆ ಹಿಡಿದು ಬೆಚ್ಚಗಾಗಿಸುವಾಗ ಶಾಖದ ಉರಿಗೆ ಚಟಪಟಿಸುತ್ತಾ ನಾಲ್ಕಾರು ರಕ್ತ ಹೀರುವ ಉಣ್ಣೆಗಳು ಬೆಂಕಿಗೆ ಬಿದ್ದವು. ಹಳ್ಳಿಯ ಲಾಯದಲ್ಲಿ ಇದ್ದಿರದ ಈ ಉಣ್ಣೆ ಅದೆಲ್ಲಿ ಇವನ ಬೆನ್ನೇರಿತಪ್ಪ! ಎಂದು ಅಚ್ಚರಿಗೊಳಗಾದ ಆತˌ ಬಹುಶಃ ಹಟ್ಟಿ ಹಟ್ಟಿ ಅಲಿಯುವ ಪಾಪಮ್ಮನೋˌ ಇಲ್ಲವೆ ಗಾಡಿನ ಕಮ್ಮಾರಸಾಲೆಯಲ್ಲೋ ಕುದುರೆಯ ಮೈ ವಾಸನೆ ಢಾಳವಾಗಿದ್ದ ತನ್ನ ಮೇಲು ಹೊದಿಕೆಯನ್ನೇರಿ ಅವು ಅಲ್ಲಿಯ ತನಕ ಪಯಣಿಸಬಹುದೇನೋ ಎಂದು ಊಹಿಸಿದ. ಸರಿಯಾಗಿ ಕೊಡವಿ ಬೆಂಕಿಯಲ್ಲಿ ಉಣ್ಣೆಗಳನ್ನೆಲ್ಲಾ ಕೊಂದುˌ ಕುದುರೆಯ ಮೈಯನ್ನ ಬ್ರೆಷ್ಷಿನಿಂದ ತಿಕ್ಕಿ ಒರೆಸಿ ಮೈಗಂಟಿಕೊಂಡಿರಬಹುದಾದ ಅಳಿದುಳಿದ ಆ ಕ್ರಿಮಿಕೀಟಗಳನ್ನ ತೆಗೆದು ಅನಂತರವಷ್ಟೆ ಬೆಚ್ಚಗಾಗಿದ್ದ ಮಂದರಿಯನ್ನ ಅವನು ಸುಲ್ತಾನನ ಬೆನ್ನಿಗೆ ಹೊದೆಸಿದ. ಅಪ್ಪಿತಪ್ಪಿ ಅವೇನಾದರೂ ಹಳ್ಳಿಮನೆಯ ಲಾಯಕ್ಕೂ ಬಂದಿದ್ದರೆ ಅಲ್ಲಿ ತಮ್ಮ ಸಂತಾನಭಿವೃದ್ಧಿ ಮಾಡಿಕೊಂಡು ಇನ್ನುಳಿದ ಜಾನುವಾರುಗಳ ಬಾಳನ್ನೂ ನರಕವಾಗಿಸುವ ಸಾಧ್ಯತೆಯನ್ನ ಯೋಚಿಸಿಯೆ ಹೌಹಾರಿದನವನು.

ಚಳಿಯ ಹೊಡೆತಕ್ಕೆ ಚಹಾದ ಔಷಧ ಅಗತ್ಯವೆನಿಸಿತು. ಬೆನ್ನ ಚೀಲದಲ್ಲಿ ಚಹಾಪುಡಿಯೇನೋ ಇತ್ತುˌ ಬೆರೆಸಲು ಖರೀದಿಸಿ ತಂದಿರುವ ಬಿಳಿ ಸಕ್ಕರೆಯೂ ಈಗಿತ್ತು. ಆದರೆ ಹಿಮ ಕಾಯಿಸಿ ಕುದಿಸಲು ಕೈ ಪಾತ್ರೆಯೊಂದು ಮಾತ್ರ ಸಮೀಪದಲ್ಲಿ ಕಂಡು ಬರಲಿಲ್ಲ. ಪುರುಳೆಗಳ ಸಣ್ಣ ಸೂಟೆ ಮಾಡಿಕೊಂಡು ಅಲ್ಲೆ ಎಲ್ಲಾದರೂ ಬಿದ್ದಿರುವ ಪಾತ್ರೆ ಪಗಡವನ್ನ ಹುಡುಕುತ್ತಾ ಹೊರಟ. ಅಷ್ಟೊಂದು ಜನರಿದ್ದ ಕಾರ್ಮಿಕರ ಕ್ಯಾಂಪಿನಲ್ಲಿ ಒಂದಾದರೂ ಮಡಿಕೆ ಕುಡಿಕೆ ಇರಲೆಬೇಕಲ್ಲ?

ಮಂದ ಬೆಳಕುˌ ಸರಿಯಾಗಿ ಕಾಣದ ಒಳಾವರಣದ ಕೋಣೆಗಳತ್ತ ಮೆಟ್ಟಿಲನ್ನೇರಿ ಹೋದವನಿಗೆ ನಾಲ್ಕನೆ ಹೆಜ್ಜೆಯಿಡುವಷ್ಟರಲ್ಲೆ ಎಡಕ್ಕೆ ಕೆಳಗಿಳಿದ ಮೆಟ್ಟಿಲ ಸಾಲು ಕಾಣಿಸಿತು. ಬಹುಶಃ ಅಡುಗೆಮನೆಯಿರಬಹದೇನೋ!  ಎಂದು ಅಂದಾಜಿಸುತ್ತಾ ಅಡಿಯಿಟ್ಟವನಿಗೆ ಅದು ದಾಸ್ತಾನು ಕೋಣೆ ಅನ್ನುವುದು ಖಚಿತವಾಯಿತು. ಗೋಡೆಯ ಜಂತಿಗೆ ಹೊಡೆದ ಅರೆಯಲ್ಲಿ ಮೇಣದಬತ್ತಿಗಳ ಕಂಡˌ ಒಂದೆರಡನ್ನ ಹೊತ್ತಿಸಿಕೊಂಡು ಇನ್ನೇನು ಆರಿ ಹೋಗಲಿದ್ದ ಸೂಟೆಯ ಬೆಳಕಿಲ್ಲದೆ ಕತ್ತಲಲ್ಲಿ ಕುರುಡನಂತೆ ತಡಕಾಡುವ ಕರ್ಮಾಂತರದಿಂದ ಪಾರಾದ. ಈಗ ಕೋಣೆಯೊಳಗಿನ ಆವರಣ ಸ್ಪಷ್ಟವಾಗಿ ಗೋಚರಿವಷ್ಟು ಬೆಳಕು ಮೇಣದಬತ್ತಿಯ ಉರಿ ಸೂಸುತ್ತಿತ್ತು. ಯಾವುದಕ್ಕೂ ಇರಲಿ ಎಂದು ಇನ್ನೆರಡು ಮೊಂಬತ್ತಿಗಳನ್ನ ಜೇಬಿಗಿಳಿಸಿಕೊಂಡ.

ದಾಸ್ತಾನು ಕೋಣೆಯ ತುಂಬಾ ಪಿಪಾಯಿಗಳನ್ನ ಜೋಡಿಸಿಡಲಾಗಿತ್ತು. ಸುಮಾರು ಹತ್ತಡಿ ಉದ್ದ ಇಪ್ಪತ್ತಡಿ ಅಗಲದ ನೆಲಮಾಳಿಗೆಯಂತಹ ರಚನೆ ಅದಾಗಿತ್ತು. ನೆಲಕ್ಕೆ ಥಂಡಿ ಏರದಂತೆ ಪೈನ್ ಹಲಗೆ ಹೊದಿಸಿದ್ದರು. ಒಂದೊಂದೆ ಪೀಪಾಯಿಯ ಬಾಯಿ ಸರಿಸಿ ನೋಡಿದರೆˌ ಒಂದರಲ್ಲಿ ಉಪ್ಪುನೀರಿಗೆ ಹಾಕಿಟ್ಟ ಸಿಗಡಿˌ ಇನ್ನೊಂದರಲ್ಲಿ ಉಪ್ಪುನೀರಲ್ಲಿದ್ದ ಸರೋವರದ ಮೀನುˌ ಮತ್ತೊಂದರಲ್ಲಿ ಓಟ್ಸ್ ಹಿಟ್ಟಿನ ದಾಸ್ತಾನುˌ ಮತ್ತೊಂದರಲ್ಲಿ ಖಾದ್ಯ ತೈಲದ ಭಂಡಾರ ಹೀಗೆ ಆಹಾರ ಸಾಮಗ್ರಿಗಳ ಸಂಗ್ರಹ ಕಾಣಿಸಿತು. ಗುತ್ತಿಗೆದಾರ ತನ್ನ ಅಣತಿಯಂತೆ ದುಡಿಯುವ ಕಾರ್ಮಿಕರ ವಸತಿಯೊಳಗೆ ಊಟದ ಏರ್ಪಾಡಿಗೆ ಅವನ್ನೆಲ್ಲ ಅಲ್ಲಿಗೆ ತಂದಿರಿಸದ್ದ. ಪ್ರತಿ ಬಟವಡೆಯ ದಿನ ಅದನ್ನ ರೇಷನ್ ರೂಪದಲ್ಲಿ ಕಾರ್ಮಿಕರಿಗೆ ಕನಿಷ್ಠ ದರಕ್ಕೆ ಮಾರಲಾಗುತ್ತಿತ್ತು. ಕಾರ್ಮಿಕರ ಹೆಂಗಸರು ಪ್ರತ್ಯೇಕವಾಗಿ ಅಡುಗೆ ಮಾಡಿಕೊಳ್ಳುತ್ತಿದ್ದುದರಿಂದ ಅವರ ಸಂಸಾರದ ಗಾತ್ರಕ್ಕನುಗುಣವಾಗಿ ಹಿಟ್ಟುˌ ಎಣ್ಣೆˌ ಬೇಳೆˌ ತರಕಾರಿˌ ಮೀನುˌ ಮಾಂಸˌ ದ್ರಾಕ್ಷಾರಸˌ ಮೆಣಸುˌ ಉಪ್ಪುˌ ಚಹಾಪುಡಿˌ ರಸ್ಕುˌ ಗರಿಗರಿ ಬಿಸ್ಕೇಟು ಮುಂತಾದ ಅಂಗಡಿಯ ತಿಂಡಿಗಳನ್ನೂ ಸಹ ಕೊಂಡುಕೊಂಡು ಮನೆವಾರ್ತೆಯನ್ನ ನಿಭಾಯಿಸುತ್ತಿದ್ದರು. ಆಹಾರ ಸಾಮಗ್ರಿಗಳ ಖರೀದಿಗೆ ದೂರದ ಪೇಟೆಗೆ ಹೋಗುವ ಅನಿವಾರ್ಯತೆ ಕಾರ್ಮಿಕರಿಗೆ ಈ ಮೂಲಕ ತಪ್ಪುತ್ತಿತ್ತಾದರೆˌ ಕೊಡುತ್ತಿದ್ದ ಸಂಬಳದಲ್ಲಿ ಕೆಲ ಕಾಸು ಮರಳಿ ಸುತ್ತಿ ಬಳಸಿ ಬಂದು ಗುತ್ತಿಗೆದಾರನ ಬಕ್ಕಣಕ್ಕೆ ಸೇರುತ್ತಿತ್ತು. ಕೆಲಸದ ನಡುವೆ ಆಹಾರದ ಕೊರತೆಯ ಕಾರಣ ಯಾವೊಬ್ಬ ಕಾರ್ಮಿಕನೂ ದುಡಿಮೆಯಿಂದ ತಪ್ಪಿಸಿಕೊಳ್ಳಕೂಡದು ಅನ್ನುವ ದೂರದೃಷ್ಟಿಯಿಂದ ಗುತ್ತಿಗೆದಾರ ಈ ವ್ಯವಸ್ಥೆ ಕಲ್ಪಿಸಿದ್ದ.

ಇದರ ಹಂಚಿಕೆ ಕೆಲಸಕ್ಕೆ ತನ್ನ ನಿಷ್ಠಾವಂತ ಭಂಟನೊಬ್ಬನನ್ನ ಅವನು ನೇಮಿಸಿಯೂ ಇದ್ದ. ಅವನು ಅನಾಗರಿಕ ಕಾರ್ಮಿಕರ ಒರಟುತನದ ನಡುವಳಿಕೆಯನ್ನ ನಿಭಾಯಿಸಿಕೊಂಡು ಅಚ್ಚುಕಟ್ಟಾಗಿ ತನಗೆ ಯಜಮಾನರು ಒಪ್ಪಿಸಿದ್ದ ಜವಬ್ದಾರಿಯನ್ನ ನಿರ್ವಹಿಸಿಕೊಂಡು ಹೋಗುತ್ತಿದ್ದ. ಈ ಹಂಗಾಮಿನ ಭೀಕರ ಚಳಿಗಾಲದ ಎಚ್ಚರಿಕೆಯನ್ನ ಉಳಿದೆಲ್ಲ ವಲಸೆ ಬಂದವರಂತೆ ಹಗುರವಾಗಿ ಪರಿಗಣಿಸಿದ್ದ ಗುತ್ತಿಗೆದಾರ ಕಾರ್ಮಿಕರೆಲ್ಲ ಚಳಿಗಾಳಿಯ ಸರಣಿಗೆ ಹೆದರಿ ಶೀತ ಪ್ರಕೋಪವನ್ನ ತಾಳಲಾರದೆ ವಸಂತಕ್ಕೆ ಬರುತ್ತೇವೆ ಎಂದು ಹೇಳಿ ಪೇರಿ ಕಿತ್ತು ಪೂರ್ವಕ್ಕೆ ಮರಳಿ ದೌಡಾಯಿಸುವ ಒಂದು ವಾರಕ್ಕೆ ಮೊದಲಷ್ಟೆ ಸುಮಾರು ಎರಡು ತಿಂಗಳಿಗೆ ಸಾಕಾಗುವಷ್ಟು ಸಕಲ ದಿನಸಿ ದಾಸ್ತಾನುಗಳನ್ನೂ ತಂದು ಆ ಕೋಣೆಯನ್ನ ಸರಕಿನಿಂದ ತುಂಬಿ ತುಳುಕಿಸಿದ್ದ. ಈಗ ಏಕಾಏಕಿ ಅದನ್ನ ಬಳಸುವವರೆ ಇಲ್ಲದೆ ಸಕಲ ಸರಕೂ ಸುಮ್ಮನೆ ಕೊಳೆಯುತ್ತಾ ಬಿದ್ದಿತ್ತು. ಆ ಪರಿ -೩೦ರ ಹತ್ತಿರದ ಪ್ರಕಾಂಡ ತಂಪಿನ ವಾತಾವರಣ ಇರದಿದ್ದ ಪಕ್ಷದಲ್ಲಿ ಅದರಲ್ಲಿ ಬಹುತೇಕ ಸಾಮಾನು ಸರಂಜಾಮುಗಳು ಕೆಟ್ಟು ಹೋಗಲಿದ್ದವು. ಇನ್ನೂ ಬಹುತೇಕ ಮೂರು ತಿಂಗಳಾದರೂ ಅದೆ ಪ್ರಕಾರದ ಹಿಮಪಾತವಾಗಲಿದ್ದುˌ ಆ ತನಕ ಅವುಗಳು ಸುರಕ್ಷಿತ ಅಂದುಕೊಳ್ಳಬಹುದಾಗಿತ್ತು ಅಷ್ಟೆ. ಹೇಗೂ ಹಾಳಾಗುವ ಆಹಾರ ಖಾದ್ಯ ಪದಾರ್ಥ. ಯಾರಾದರೂ ಬಳಸಿ ಉಪಯೋಗಿಸಿದರೆ ಗುತ್ತಿಗೆದಾರನಿಗೆ ಅದರಿಂದಾಗುತ್ತಿದ್ದ ನಷ್ಟ ಅಷ್ಟರಲ್ಲೆ ಇತ್ತು. ಹೀಗಾಗಿ ಒಂದೊಂದರದ್ದೆ ಗುಣಮಟ್ಟ ಪರೀಕ್ಷಿಸಿ ತೃಪ್ತನಾದ.
https://youtu.be/w6YeOoQmvCY

https://youtu.be/hnCfBq4M05k

https://youtu.be/KWqWICCBH6k

https://youtu.be/5NaKuyjjhFY