25 August 2013

ಬದುಕಿಗೊಂದು ಕೆಲವೆ ಸಾಲಿನ ಕಿರು ಪತ್ರ.



ಹೇಗಿದ್ದೆ? ಹೇಗಾದೆ? ಹೌದು ಹೀಗೇಕಾದೆ? ಉತ್ತರ ಹೊಳೆಯುತ್ತಿಲ್ಲ. ಬಹುಷಃ ಸರಿಯಾದ ಉತ್ತರವೂ ಇದಕ್ಕಿಲ್ಲ. ಸುಮ್ಮನಿದ್ದರೂ ಸರಿದು ಹೋಗುವ ಸಮಯದ ಕಿರು ಹಾದಿಯಂಚಿನಲ್ಲಿ ಎದ್ದು ಬಿದ್ದು ಎಡವಿ ನಡೆಯುತ್ತಲೆ ಮೂರು ದಶಕಗಳು ಮೀರಿ ಹೋಗಿವೆ.

ಬೇಕಾದದ್ದು ಸಿಕ್ಕಿರದಿದ್ದರೂ ಸಿಕ್ಕಿರೋದು ಅಲ್ಪವೇನಲ್ಲ, ಅಷ್ಟು ತಿರಸ್ಕಾರ ಯೋಗ್ಯವೂ ಅಲ್ಲ. ಆದರೂ ಮನ ಸದಾ ಉರಿಯುತ್ತಿರುವ ಅಗ್ನಿಕುಂಡವಾಗಿಯೆ ಉಳಿದಿದೆ. ಒಳಗಿನ ಅಗ್ಗಿಷ್ಟಕೆಯ  ಉರಿ ಆರದಂತೆ ನಿದ್ರೆ ಮರೆತ ರಾತ್ರಿಗಳು ಕಾದಿದ್ದು ಕಾಡುತ್ತವೆ. ಊರೆಲ್ಲ ನಿಶ್ಚಲವಾಗಿ ಸ್ವಪ್ನ ಸಾಗರದಲ್ಲಿ ಮುಳುಗಿರುವಾಗ ನನ್ನೊಳಗಿನ ಒಡಕು ದೋಣಿಯ ಮುರುಕು ತುಂಡೊಂದು ದಡ ಮುಟ್ಟಲು ಕಾತರಿಸುತ್ತಾ ದಿಕ್ಕಿಲ್ಲದಂತೆ ತೇಲುತ್ತದೆ.


ತೀರ ಸೇರದಿದ್ದರೂನು ಕೊನೆವರೆಗೂ ಮಾತಿಲ್ಲದೆ ಮೌನವಾಗಿ ಹೀಗೆಯೆ ನಿಶಾರಾತ್ರಿಗಳಲ್ಲಿ ತೇಲಲೇಬೇಕಿದೆ. ವೇದನೆಯ ತಳವನ್ನೆಂದೂ ಮುಟ್ಟುವಷ್ಟು ಬತ್ತದಂತೆ ಬಾಳ ಕಡಲನ್ನ ಇನ್ನು ಮುಂದೆಯೂ ಕಂಬನಿಯಿಂದಲಾದರೂ ತುಂಬುತ್ತಲೆ ಇರಬೇಕಿದೆ. ಜೀವನ ನಿನ್ನ ಬಗ್ಗೆ ದೂರು ದುಮ್ಮಾನಗಳೇನೂ ಇಲ್ಲ.


ನೀನೊಪ್ಪದಿದ್ದರೂ ನಿನ್ನವ.
-ಹೆಸರೊಂದು ಇರಲೇಬೇಕ?

23 August 2013

ಮದ್ರಾಸ್ "ಕಫೆ ಕಾಲರ......."





( ಕಾಫಿ ಖಚಿತ, ಖಾಯಿಲೆ ಉಚಿತ.)


ಕಂಡದ್ದೆಲ್ಲ ನಿಜವಾಗಿರಬೇಕಿಲ್ಲ ಹಾಗೂ ನಿಜವಾದದ್ದು ತಾನಿದ್ದಂತೆಯೆ ಹೊರಗೆ ಕಂಡು ಕಣ್ಣಿಗೆ ರಾಚಬೇಕಂತಲೂ ಇಲ್ಲ. ನೆನ್ನೆ ತೆರೆ ಕಂಡ ಹಿಂದಿ-ತಮಿಳ್ ಚಿತ್ರ "ಮದ್ರಾಸ್ ಕಫೆ"ಯನ್ನ ನೋಡಿದಾಗ ಅನ್ನಿಸಿದ್ದು ಇಷ್ಟು. ಚಿತ್ರದ ಕಥೆಯಾಗಿ ಆಯ್ದುಕೊಂಡಿರುವ ಕಥೆ ಮೇಲ್ನೋಟಕ್ಕೇನೋ ಅಸಕ್ತಿ ಕೆರಳಿಸುವಂತದ್ದೆ, ಆದರೆ ಅದನ್ನ ಆಯ್ದು ಕೊಂಡವರು ತೆರೆಯ ಮೇಲೆ ಎರಡೂವರೆ ಘಂಟೆಗಳ ಕಾಲ ಅದನ್ನ ಕಟ್ಟಿ ಕೊಡುವ ಪರಿ ಮಾತ್ರ ತೀರಾ ನಿರ್ಲಜ್ಜವಾಗಿ ಚಿತ್ರದ ಹಿಂದಿನ ಅಸಲು ಆಶಯವನ್ನ ಸಂಶಯಕ್ಕೆ ಎಡೆಯಿಲ್ಲದಂತೆ ಬಟಾಬಯಲು ಮಾಡುತ್ತದೆ. ಸಹಜವಾಗಿ ಅದೇ ಕಥೆ ಏಕೆ ಆಯ್ಕೆಯಾಯಿತು? ಅದನ್ನೇ ಆಯ್ದುಕೊಳ್ಳಲು ಯಾರ್ಯಾರು ಉದಾರವಾಗಿ(?) ಒತ್ತಾಸೆಯಾದರು? ಯಾವುದೆ ಸಮಯದಲ್ಲಿ ಮುಂದಿನ ಲೋಕಸಭಾ ಚುನಾವಣೆ ಘೋಷಣೆಯಾಗುವ ಸಂಭವವಿರುವ ( ಬಲ್ಲ ಮೂಲಗಳ ಪ್ರಕಾರ ಬಹುತೇಕ ಬರುವ ನವೆಂಬರಿನಲ್ಲಿ ಚುನಾವಣೆ ಅವಧಿಗೂ ಮೊದಲೇ ಘೋಷಣೆಯಾಗಲಿದೆ.) ಇಂತಹ ಹೊತ್ತಿನಲ್ಲಿಯೆ ಸಿನೆಮಾ ಅದೇಕೆ ತೆರೆ ಕಂಡಿದೆ? ಮುಂತಾದ ಉತ್ತರ ಖಚಿತವಿರುವ ಆದರೆ ಅದು ಗೊತ್ತಿರುವ ಎಲ್ಲರೂ ಅಮಾಯಕರ ಹಾಗೆ ನಟಿಸುವ ಸರಳ ಇಷಾರೆಗಳು ಸಹಜವಾಗಿ ಹೊಳೆಯುತ್ತವೆ


ನೀವು ಇತ್ತೀಚೆಗೆ ರೇಡಿಯೋ ಹಾಗೂ ಟಿವಿಗಳಲ್ಲಿ "ಶಾನ್ ಹಾಗೂ ಸುನಿಧಿ ಚೌಹಾಣ್ ಹಾಡಿರುವ" ಎನ್ನುವ ಉದ್ಘೋಷ ಸಹಿತದ "ಮೈಲೋ ಹಮ್ ಆ ಚುಕೆ.... ಮೈಲೋ ಹಮೆ ಜಾನ ಹೈ" ಎನ್ನುವ ಒಂದು ದಢೀರ್ ಉದ್ಭವ ಮೂರ್ತಿಯಂತಹ ಹಾಡನ್ನ ಕೇಳಿ/ ನೋಡಿ ಇರಬಹುದು. ಯಾವ ಜನಪ್ರಿಯ ಸಿನೆಮದ್ದೂ ಅಲ್ಲದ ಅಥವಾ ಯಾವುದೇ ಹೊಸ ಸಂಗೀತದ ಆಲ್ಬಂನದ್ದೂ ಅಲ್ಲದ ಈ ಒಂಟಿ ಹಾಡಿನ ಬಗ್ಗೆ ನಿಮಗೂ ಗುಮಾನಿ ಹುಟ್ಟಿರಬಹುದು. ಆ ಹಾಡಿನ ಜಾಡು ಇಂತಿದೆ, ಅದನ್ನ ಶ್ರದ್ಧೆಯಿಂದ ಬರೆದ ಕವಿ ಸದ್ಯದ ಯುಪಿಎ ೨ ರ ರಾಜ್ಯಸಭಾ ಸ್ಥಾನವೊಂದರ ಫ್ಲಲಾನುಭವಿ. ಅದಕ್ಕೂ ಮೊದಲು ಒಂದು ಅವಧಿಗೆ ಅವರ ಹಾಲಿ ಪತ್ನಿ ಆ ಸ್ಥಾನವನ್ನ ಅಲಂಕರಿಸಿದ್ದರು. ಅಂದಹಾಗೆ ಇದು ಆ ದಂಪತಿಗಳಿಗೆ ಸಂದಿದ್ದ ನಾಮಕರಣದ ಭಕ್ಷೀಸು. ಅದರ ಋಣ ತೀರಿಕೆಗೆ ಈಗಾಗಲೆ ಮೊನಚು ಕಳೆದು ಕೊಂಡಿರುವ ತಮ್ಮ ಹಳೆಯ ಪೆನ್ನಿಗೆ ಇನ್ನಷ್ಟು ಸಾಣೆ ಹಿಡಿದು ಸದರಿ ಕವಿ ಪುಂಗವರು ಇಂತಹದ್ದೆ ರಾಷ್ಟ್ರ ಪ್ರೇಮ (?!) ಉಕ್ಕಿಸುವ ಇನ್ನೂ ಹಲವಾರು ಗೀತರತ್ನಗಳ ರಚನೆಗೆ ನಿಶ್ಪಾಪಿ ಪದಗಳನ್ನ ನಿರ್ದಯವಾಗಿ ಬೇಟೆಯಾಡುತ್ತಿದ್ದಾರೆ ಅನ್ನುವ ಖಚಿತ ಮಾಹಿತಿಯಿದೆ! "ಜಂಜೀರ್" "ದೀವಾರ್" "ಶೋಲೆ" ತರಹದ ಆಂಗ್ರಿ ಯಂಗ್ ಮ್ಯಾನ್'ಸೃಷ್ಟಿಸುತ್ತಿದ್ದ, ಅತಿ ಸುಮಧುರ ಪ್ರಣಯೋನ್ಮಾದದ ಚಿತ್ರಗೀತೆಗಳನ್ನ ಬರೆಯುತ್ತಿದ್ದ ಪ್ರತಿಭಾವಂತ ಇವರೇನಾ ಅನ್ನುವ ಗುಮಾನಿ ನನ್ನಂತೆ ನಿಮಗೂ ಹುಟ್ಟಿರಬಹುದು.


ಅಂತಹದ್ದೆ ಇನ್ನೊಂದು ಖಡ್ಡಾಯವಾಗಿ ಭಾರತೀಯರೆಲ್ಲರೂ ಮಾಡಿಸಿಕೊಳ್ಳಲೇಬೇಕು ಎನ್ನುವ "ಆಧಾರ" ರಹಿತವಾಗಿ ಅಪಪ್ರಚಾರಗೊಳ್ಳುತ್ತಿರುವ ಕಾರ್ಡ್ ಒಂದರ ಸಂಬಂಧವಾಗಿ ಮಾಧ್ಯಮಗಳಲ್ಲಿ ಕೇಳಲಿಕ್ಕೆ/ ನೋಡಲಿಕ್ಕೆ ಸಿಗುತ್ತಿರುವ ಜಾಹಿರಾತಿನಲ್ಲಿಯೂ ಗಮನಿಸಿಯೇ ಇರುತ್ತೀರಿ. ಅಲ್ಲಿ ಅರ್ಜೆಂಟ್ 'ಚಿಕ್ಕಮ್ಮ'ಳೊಬ್ಬಳು ತನ್ನ ಫ್ಲಾಷ್'ಬ್ಯಾಕಿನಲ್ಲಿ "ಆತ"ನನ್ನ ಕಂಡರೆ, ಅಷ್ಟೆ ಅರ್ಜೆಂಟಾಗಿ 'ಒಹ್ ನಿಮಗೂ ಆ ಪರಮಾತ್ಮನ ಸಾಕ್ಷಾತ್ಕಾರವಾಯ್ತ!' ಎನ್ನುವ ಮುಖಭಾವದಲ್ಲಿ "ಅದು ಇನ್ಯಾರು ಅಲ್ಲ ಚಿಕ್ಕಮ್ಮ! ನಮ್ಮ ಪೂರ್ವ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರು!" ಎನ್ನುವ ವಿವರಣೆಯನ್ನ ಕೊಡುವ ಬ್ಯಾಂಕಿನ ಮೆನೆಜರ್ ಮಹಾಶಯ, ಆ ಪುಣ್ಯಾತ್ಮನ ಸಾಧನೆಯ ಕಥೆಯನ್ನ ಉದ್ದುದ್ದ ಹಾಡಿ ಹೊಗಳುತ್ತಾನೆ. ಎಷ್ಟೆಂದರೂ ಅದು ವಿನೀತ ತೆರಿಗೆದಾರರ ಹಣದಲ್ಲಿ ನಿಷ್ಣಾತ ತೆರಿಗೆಗಳ್ಳರು ನಿರ್ಮಿಸಿ ಪ್ರಚಾರ ಮಾಡುತ್ತಿರುವ ಅತಿ ಅಗ್ಗದ ಜಾಹಿರಾತು ಅಂತ ತಳ್ಳಿ ಹಾಕಬಹುದು. ಆದರೆ ಸಿನೆಮಾ ಪ್ರಪಂಚಕ್ಕೂ ಆ ಜಾಡ್ಯ ಹರಡಿ ಹಡಾಲೇಳಿಸಿರುವುದು ಮಾತ್ರ ಹೇಸಿಗೆ ಹುಟ್ಟಿಸುತ್ತದೆ.



ಮೇಲಿನ ಎರಡು ವರ್ಗದ ಪ್ರಚಾರಾಂದೋಲನದ ಮುಂದುವರೆದ ಅವತರಣಿಕೆಯೆ ಈ "ಮೆದ್ರಾಸ್ ಕಫೆ". ಹೇಳಿಕೊಳ್ಳಲಿಕ್ಕೊಂದು ಕಥೆ ಅಂತಿದೆಯಾದರೂ ಅಸಲಿಗೆ ಅದೇ ಅದರ ಕಥೆಯಲ್ಲ! ದೇಶದ ರಕ್ಷಣೆಯ ಹೊಣೆ ಹೊತ್ತ ಕಮಾಂಡೋ ದರ್ಜೆಯ ಸೈನಿಕನೊಬ್ಬ ಪವಾಡ ಸದೃಶವಾಗಿ ಗುಪ್ತಚರ ಇಲಾಖೆಯ ಉನ್ನತ ಹೊಣೆ ಹೊರುವ ಶಾಕಿಂಗ್ ಕಾಮಿಡಿ ಇಲ್ಲುಂಟು. ಇಂತಹ  rough and tough ಮನುಷ್ಯ, ಅದರಲ್ಲೂ ತಾನು ತನ್ನ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಹೆಂಡತಿ ಇನ್ನಿಲ್ಲವಾದಾಗಲೂ ಕರ್ತವ್ಯದ ಕರೆಗೆ ಓಗೊಟ್ಟ ನಿಜವಾದ ದೇಶ ಸೇವಕ, after all ಒಬ್ಬ ರಾಜಕಾರಣಿ ಸತ್ತ ತಕ್ಷಣ ತೀರಾ ವಿರಾಗಕ್ಕೆ ತುತ್ತಾಗಿ ಇದ್ದ ನೌಕರಿಯಿಂದಲೂ ಸ್ವಯಂ ನಿವೃತ್ತಿ ಪಡೆದು ಹುಚ್ಚನಂತಾಗಿ ನೊಂದು ಬೆಂದು ಮನೆಮಠ ಬಿಟ್ಟು ಫಕೀರನಂತೆ ದೇಶಾಂತರ ಹೋಗುವ high time ತಮಾಷೆಯೂ ಇಲ್ಲುಂಟು. ಸತ್ತವ ಮಾಜಿ ಪ್ರಧಾನಿಯೆ ಅಗಿದ್ದರೂ ಅದರಿಂದ ಜರ್ಜರಿತನಾಗಿ ಗುಪ್ತಾಚರ ಇಲಾಖೆಯ ಮುಖ್ಯಸ್ಥ ರಾಜಿನಾಮೆ ಬಿಸಾಡಿ ಬರುವ ವಾಸ್ತವದ ಹಾಸ್ಯವೂ ಇಲ್ಲುಂಟು. ಮಾಜಿ ಪ್ರಧಾನಿಗಳು ಇನ್ನಿಲ್ಲವಾದ ಸುದ್ದಿ ಟಿವಿಯಲ್ಲಿ ಬರುತ್ತಿದ್ದಾಗಲೆ ಕರ್ತವ್ಯ ಮುಗಿಸಿ ಸುಸ್ತಾಗಿ ಮನೆಗೆ ಬಂದವನನ್ನ ಅವನ ಹೆಂಡತಿ ಉಪಚರಿಸುವುದುದನ್ನ ಬಿಟ್ಟು "ಅವರೆ ಏಕೆ? ಅವ್ರ್ಯಾರಿಗೆ ಅನ್ಯಾಯ ಮಾಡಿದ್ದರು?" ಅಂತ ಕಣ್ಣೀರಿಟ್ಟು ವ್ಯಥೆಯಿಂದ ಕೇಳುವ ದೃಶ್ಯವನ್ನು ನೀವು ಇಲ್ಲಷ್ಟೆ ನೋಡಿ ನಲಿಯಬಹುದು. ಬಹುಷಃ ಆ ಕಾರಣಕ್ಕೆ ರೋಸತ್ತು ಹೆಂಡತಿಗೆ ಸೋಡಾಚೀಟಿ ಕೊಡುವ ಧೈರ್ಯವಿಲ್ಲದ ಆತ ಇದಕ್ಕೆಲ್ಲ ಮೂಲ ಕಾರಣವಾದ ತನ್ನ ಕೆಲಸಕ್ಕೆನೆ ಎಳ್ಳುನೀರು ಬಿಡುವ ಧೃಡ ನಿರ್ಧಾರಕ್ಕೆ ಬಂದಿದ್ದಾನು ಎನ್ನುವ ದಟ್ಟ ಗುಮಾನಿ ನನಗಿದೆ! ಇದಕ್ಕೆಲ್ಲ ಕಳಶವಿಟ್ಟಂತೆ "ರಾ" ಮುಖ್ಯಸ್ಥರಿಂದ ಹಿಡಿದು ಏಜೆಂಟರವರೆಗೆ ಎಲ್ಲರೂ ಜೋಕರ್ಗಳಂತೆ ಬೇಕಬೇಕಾದಲ್ಲಿ ಸ್ವಚ್ಛಂದವಾಗಿ ಅಲೆಯುತ್ತಾರೆ! ನಾನು ಕಂಡ ಶ್ರೀಲಂಕೆಯಲ್ಲಿ ಅದು ಅಷ್ಟು ಸುಲಭ ಸಾಧ್ಯವಲ್ಲ ಅನ್ನುವುದು ನಿಮ್ಮ ಗಮನಕ್ಕೆ. ಒಂದುವೇಳೆ ಅದು ಸಾಧ್ಯವಾದರೂ ಗೂಢಾಚಾರರು ಹಾಗೆಲ್ಲ ಬಯಲಲ್ಲಿ ಕಾಣಿಸಿಕೊಳ್ಳರು ಅನ್ನುವುದು ಸಾಮಾನ್ಯ ಜ್ಞಾನ!


ಕಳೆದ ಎಂಟು ವರ್ಷಗಳಿಂದ ನಾನು ಶ್ರೀಲಂಕೆಯನ್ನ ಎರಡನೆ ಮನೆ ಮಾಡಿಕೊಂಡಿದ್ದೇನೆ. ನನಗೆ ತಿಳಿದಂತೆ ತಮಿಳು ಹುಲಿಗಳ ಹೋರಾಟ ಬರ್ಬರವಾಗಿದ್ದರೂ ಸಹ ಅಲ್ಲಿ ಪ್ರತಿಕಾರದ ಕಿಚ್ಚಿತ್ತೆ ವಿನಃ ಸ್ವಪ್ರೇರಿತ ರೊಚ್ಚಿರಲಿಲ್ಲ. ಒಂದು ದೇಶದಲ್ಲಿ ಅಲ್ಲಿ ಬಾಳಿ ಬದುಕುವ ಎಲ್ಲಾ ವರ್ಗದ ಪ್ರಜೆಗಳೂ ಸಮಾಜಿಕ ಹಾಗೂ ಆರ್ಥಿಕ ಸರಿಸಮಾನತೆಯ ಜೊತೆಗೆ ಅಧಿಕಾರದ ಗದ್ದುಗೆಯನ್ನೂ ಬಯಸುವುದು ತಪ್ಪು ಅಂತ ಯಾರಾದರು ಹೇಳೋದಾದರೆ ನಾನು ತಮಿಳರ ಅಲ್ಲಿನ ಹೋರಾಟ ತಪ್ಪು ಎಂದು ಒಪ್ಪಿಕೊಳ್ಳಲು ತಯಾರು. ಅದೆಲ್ಲಿಂದ ಲೆಕ್ಖ ಹಾಕಿದರೂ ಮೂರುಕೋಟಿ ಜನಸಂಖ್ಯೆ ಮೀರದ ಶ್ರೀಲಂಕದ ಎಪ್ಪತ್ತು ಪ್ರತಿಶತ ಬಹುಸಂಖ್ಯಾತರು ಜಮೀನ್ದಾರಿ ಮನಸ್ಥಿತಿಯ ಸಿಂಹಳಿ ಬಾಷೆ ಮಾತನಾಡುವ ಬೌದ್ಧರು. ಅವರೂ ಸಹ ಅಲ್ಲಿನ ಮೂಲ ನಿವಾಸಿಗಳೇನಲ್ಲ. ಭಾರತದ ಒರಿಸ್ಸದಿಂದ ಎಂಟುನೂರು ವರ್ಷಗಳ ಹಿಂದೆ ಅಲ್ಲಿಗೆ ವಲಸೆ ಹೋದವರು. ಇನ್ನು ಇಪ್ಪತ್ತು ಪ್ರತಿಶತ ತಮಿಳು ಮಾತನಾಡುವ ಹಿಂದೂಗಳಿದ್ದಾರೆ. ನಾಲ್ಕು ಪ್ರತಿಶತ ಮುಸಲ್ಮಾನರು ಹಾಗೂ ಆರು ಪ್ರತಿಶತ ಕ್ರೈಸ್ತರು ಮತ್ತು ಇನ್ನಿತರರು ಇರುವುದು ಹೌದಾದರೂ ಅವರ ಮಾತೃಭಾಷೆಯೂ ತಮಿಳೆ! ಹೀಗಿರುವ ಸುಂದರ ಹಸಿರು ದ್ವೀಪದಲ್ಲಿ ಕಳೆದ ಮೂರೂವರೆ ದಶಕಗಳಿಂದ ಸಮಾನತೆಗಾಗಿ ಸ್ವಾಭಿಮಾನದ ಹೋರಾಟವಾಗಿ ಪ್ರಾರಂಭಗೊಂಡ ತಮಿಳರು ಮತ್ತು ಸಿಂಹಳೀಯರ ನಡುವಿನ ಹೋರಾಟ ರಾಜಕೀಯ ಪರಿಹಾರದ ಆಶಾ ಭಾವನೆ ಕಮರಿದಾಗ ಸಶಸ್ತ್ರ ಹೋರಾಟವಾಗಿ ಪರಿವರ್ತಿತವಾಯಿತು. ಈ ಬಗ್ಗೆ ನಾನು ಕನ್ನಡದ ವಾರ ಪತ್ರಿಕೆಯೊಂದರಲ್ಲಿ ಎರಡು ಕಂತಿನ ಲೇಖನವನ್ನ ೨೦೦೬ರಲ್ಲಿ ಬರೆದಿದ್ದೆ.


ಆದರೆ ಚಿತ್ರದ ನಿರ್ದೇಶಕ ಸೂಜಿತ್ ಸರ್ಕಾರ್ ಈ ವಾಸ್ತವಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಂತಿಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲ ಅನ್ನಿಸುತ್ತದೆ. ಅವರ ಕಾಮಾಲೆ ಕಣ್ಣಿಗೆ ಲಂಕೆಯ ತಮಿಳರೆಲ್ಲ ಕಳ್ಳರು ಹಾಗೂ ಹೊಸಕಿ ಹಾಕಲೇ ಬೇಕಾದ ಕ್ರಿಮಿಗಳಂತೆ ಕಂಡಿದ್ದಾರೆ. ನಮ್ಮ ಮಾಜಿ ಪ್ರಧಾನಿಯವರನ್ನ ಹೊರಗಿನಿಂದ ಬಂದು ಸಲೀಸಾಗಿ ಕೊಂದು ಹೋಗುವುದು ನಮ್ಮ ಭದ್ರತಾ ಸಂಸ್ಥೆಗಳಿಗೆ, ಸಾಮಾನ್ಯ ಭಾರತೀಯನೊಬ್ಬನ ಸ್ವಾಭಿಮಾನಕ್ಕೆ ಮಾಡಲಾದ ಕಪಾಳ ಮೋಕ್ಷವೆ ಅಂತಿಟ್ಟುಕೊಂಡರೂ, ಅದಕ್ಕೆ ಮೂಲ ಕಾಅರಣವಾದ ನಮ್ಮವರು ಅಲ್ಲೆಸಗಿದ ಅನ್ಯಾಯ ಅನಾಚಾರಗಳನ್ನ ಈ ವಿಷಯದ ಗುರಾಣಿಯಡಿ ಅಡಗಿಸಿಡಲು ಸಾಧ್ಯವೆ ಇಲ್ಲ. ಅಲ್ಲದೆ ನಿರ್ದೇಶಕರ ಪಾಲಿಗೆ ಭಾರತೀಯ ಪ್ರಧಾನಿ ರಾಜೀವ್ ಗಾಂಧಿಯ ಹತ್ಯೆಯಷ್ಟು ತೀವೃವಾಗಿ ಹೆಚ್ಚು ಕಡಿಮೆ ಅದೇ ಸಮಯಕ್ಕೆ ನಮ್ಮ ಮಾಜಿ ಪ್ರಧಾನಿಯವರಂತೆಯೆ ಮಾನವ ಬಾಂಬಿಗೆ ಬಲಿಯಾಗಿದ್ದ ಶ್ರೀಲಂಕಾ ಪ್ರಧಾನಿ ರಣಸಿಂಘೆ ಪ್ರೇಮದಾಸರ ಸಾವು ತಟ್ಟಿದಂತಿಲ್ಲ. ಬಹುಶಃ ಅವರ ಕಡೆಯವರ್ಯಾರಾದರೂ ಸೂಕ್ತ 'ಕಪ್ಪ" ಸಲ್ಲಿಸಿದಲ್ಲಿ ಆ ವಿಷಯವನ್ನೆ ಆಧರಿಸಿದ "ಮದ್ರಾಸ್ ಕಫೆ"ಯ ಎರಡನೆ ಭಾಗ ನಿರ್ಮಾಣವಾದೀತೇನೋ!


ಹೀಗಾಗಿ ಚಿತ್ರ ಕೇವಲ ಹಿರಿಯ ರಾಜಕೀಯ ನಾಯಕರೊಬ್ಬರ ಕೊಲೆಯ ಸಂಚು ಹಾಗೂ ಅದನ್ನ ತಪ್ಪಿಸುವಲ್ಲಿ ವಿಫಲನಾದ ನಾಯಕನ ಪಾಪಪ್ರಜ್ಞೆಯ ಸುಳಿ ಮಿಂಚಿನಲ್ಲಿಯೆ ಕರಗಿ ಮರೆಯಾಗುತ್ತದೆ. ಕೊನೆಗೆ ಸತ್ತ ನಾಯಕನ ಭೋಪರಾಕು ಬೇರೆ ಕೇಡು. ಕಾರ್ತಿಕೇಯನ್ ಪಾತ್ರ ಪೇಲವ, ಆತ ಗುಪ್ತಚರ ಇಲಾಖೆ ಮುಖ್ಯಸ್ಥ ಕಡಿಮೆ 'ಚಾ ವಾಲ' ಜಾಸ್ತಿ ಅನ್ನಿಸುವಷ್ಟರ ಮಟ್ಟಿಗೆ ಚಿತ್ರದುದ್ದಕ್ಕೂ ಚಾ ಮಾಡುತ್ತಿರುತ್ತಾನೆ! "ರಾ"ದ ಹುದ್ದೆಯಲ್ಲಿದ್ದೂ ಡಬಲ್ ಏಜೆಂಟ್ ಆಗಿರುವ ಗಟ್ಟಿ ಪಾತ್ರ ನಮ್ಮ ಪ್ರಕಾಶ್ ಬೆಳವಾಡಿಯವರಿಗೆ ಸಿಕ್ಕಿದ್ದರೂ ಅವರ ಅತಿರೇಕದ ನಟನೆ ಪಾತ್ರದ ಗಾಂಭೀರ್ಯವನ್ನೆ ಅಪೋಷನ ತೆಗೆದುಕೊಂಡು ಬಿಟ್ಟಿದೆ!


ಚಿತ್ರದ ದೃಶ್ಯವೊಂದರಲ್ಲಿ ಡಬಲ್ ಏಜೆಂಟ್ ಬಾಲಾನಿಗೆ ಸಂದಾಯವಾದ "ಕಪ್ಪ"ಗಳ ಬ್ಯಾಂಕ್ ವರದಿ ತೆರೆದು ನೋಡಿ "ರಾ" ಮುಖ್ಯಸ್ಥರು ಹೌಹಾರುವುದನ್ನ ತೋರಿಸಲಾಗಿದೆ. ಚಿತ್ರದ ನಿರ್ಮಾಪಕ ದ್ವಯರಾದ ರೋನಿ ಲಾಹಿರಿ ಹಾಗೂ ಜಾನ್ ಅಬ್ರಾಹಂ ಹೊಂದಿರುವ ಬೇನಾಮಿ ಬ್ಯಾಂಕ್ ಖಾತೆಗಳಿಗೆ ಕಿರೀಟವಿಲ್ಲದ ಆನಭಿಷಕ್ತೆ ಮೇಡಂ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲರು ಚಿತ್ರದ ನಿರ್ಮಾಣದ ವೆಚ್ಚಕ್ಕಾಗಿ ಹರಿಸಿದ ಹಣದ ಮೂಲವನ್ನೂ ದಾಖಲೆ ಸಹಿತ ತೋರಿಸಿದ್ದೆ ಹೌದಾದಲ್ಲಿ ಚಿತ್ರ ನೋಡಿ ಭ್ರಮಾಧೀನರಾಗಿ ಹೊರಬರುವ ಅಮಾಯಕ ಪ್ರೇಕ್ಷಕರೂ ಒಮ್ಮೆ ನಿಜವಾಗಿ ಹೌಹಾರಬಹುದೇನೋ!


ನನ್ನ ಊಹೆ ತಪ್ಪಾಗದಿದ್ದಲ್ಲಿ "ರಾಜೀವ್ ಹತ್ಯೆಯ ತುತ್ತೂರಿ" ಊದುವ 'ಮದ್ರಾಸ್ ಕಫೆ" ಮುಂಬರುವ ಲೋಕಸಭೆ ಚುನಾವಣೆ ಘೋಷಣೆಯಾಗುವ ಹೊತ್ತಿಗೆ ಕಿರುತೆರೆಯ ಮೂಲಕ ನಮ್ಮ ನಿಮ್ಮೆಲ್ಲರ ಮನೆಗೂ ಲಗ್ಗೆಯಿಡುತ್ತದೆ. ಕಡೆಗಾದರೂ ಅದಕ್ಕೆ ಹೂಡಿರುವ ಬಂ(ಭಂ)ಡವಾಳ ಮತದ ರೂಪಾಂತರವಾಗಿ ವಸೂಲಾಗಬೇಕಲ್ಲ! ಒಟ್ಟಿನಲ್ಲಿ ನನಗೆ ಚಿತ್ರ ಬಗ್ಗೆ ಇದ್ದ ನಿರೀಕ್ಷೆಗಳು ನೋಡಿದ ನಂತರ ಕರಗಿ ಹೋಗಿವೆ. ಕನ್ನಡದಲ್ಲಿ ಅದೆ ಘಟನೆಯ ಉತ್ತರಾರ್ಧವನ್ನು ಆಧರಿಸಿ ಬಂದಿದ್ದ "ಚಲನಚಿತ್ರ" ಎನ್ನುವ ಮುಸುಗಿನ ಸಾಕ್ಷ್ಯಚಿತ್ರದಂತೆ "ಮೆದ್ರಾಸ್ ಕಫೆ" ಇಲ್ಲ ಅನ್ನುವುದಷ್ಟೆ ಕಟ್ಟ ಕಡೆಗುಳಿದ ಕಳ್ಳ ಸಮಾಧಾನ. ಇಷ್ಟಾಗಿ ಜಾನ್ ಅಬ್ರಾಹಂ ಒಬ್ಬ ಸಿರಿಯನ್ ಕ್ರೈಸ್ತನಾಗಿರುವುದು ಹಾಗೂ ಸದ್ಯ ಸರಕಾರದ ಹೆಸರಿನಲ್ಲಿ ನ್ಯಾಯ ಸಮ್ಮತವಾಗಿಯೆ ದೇಶವನ್ನ ದೋಚುತ್ತಿರುವ ಮಾಫಿಯಾ ಮುಖ್ಯಸ್ಥೆ ಕಂ ಸದರಿ ಚಿತ್ರದ ಬೇನಾಮಿ ನಿರ್ಮಾಪಕಿ ಮೇಡಂ ಡಾನ್ ಕೂಡ ರೋಮನ್ ಕ್ಯಾಥೋಲಿಕ್ ಕ್ರೈಸ್ತೆಯೆ ಆಗಿರುವುದು ಮಾತ್ರ ಕೇವಲ ಕಾಕತಾಳೀಯ?!

21 August 2013

ಮೌನ ಮತ್ತೆ ಮಧುರ ಮಾತಾಗುವಾಗ ಮುಸ್ಸಂಜೆಯ ಜಾವ ಕಳೆದಿತ್ತು.....




ಮೋಡಗಳ ಕಳೆಯಿಲ್ಲದ ಖಾಲಿ ಬಾನು
ಗಾಳಿಯೂ ಆಂತರ್ಮುಖಿಯಾಗಿದೆ ತನ್ನ ಪಾಡಿಗೆ ತಾನು.....
ಮಾಡುವ ಪ್ರತಿ ಕ್ಷೀಣ ಪ್ರಯತ್ನಗಳೂ
ಸೋಲನ್ನೆ ಉಡುಗೊರೆಯಾಗಿಸುವಾಗಲೂ,
ನನ್ನದು ಸ್ವತಃ ನನ್ನಿಂದಲೂ ತಡೆದು ನಿಲ್ಲಿಸಲಾಗದ
ಅವಿರತ ಭಗೀರಥ ಮರುಯತ್ನ/
ಪಂಚಮಿ ಸರಿದು ಷಷ್ಠಿಯೂ ಜಾರಿತು
ಒಂದೊಂದಾಗಿ ತಿಥಿಗಳು ಸರಿಯುತ್ತಿವೆ ಸಹಜವಾಗಿ....
ಕಣ್ಣಿಂದ ಕದಲಿ ಕೆನ್ನೆಯ ಮೆಲುವಾಗಿ ತಾಕಿ
ಇನ್ನಿಲ್ಲವಾಗುವಂತೆ ನೆಲಮುಟ್ಟಲೋಡುವ ಹನಿಗಳ ಸರದಿಯಂತೆ,
ಅರಿಯದ ಪ್ರಾಯದ ಅಬೋಧ ನಸುಗಾಲ ಮಾತ್ರ
ಬಾಳಿನ ಚರಮ ಸುಖದ ಕಿರು ಅವಕಾಶ.//



ಕಣ್ಣಿಲ್ಲದ ನನಗೆ ಹಗಲೂ ಒಂದೆ ಇರುಳೂನು ಒಂದೆ
ಬೆಳಕಿನ ಜೊತೆಯಿಲ್ಲ....
ಬೆಳಕಿರಲೆ ಬೇಕಂದೇನೂ ಇಲ್ಲವಲ್ಲ,
ಆಗೆಲ್ಲ ನೀನಿರಲಿಲ್ಲ ನಿನ್ನ ನಿರೀಕ್ಷೆ ಮಾತ್ರ ಇತ್ತು
ಮಧ್ಯೆ ನೀ ಸುಳಿದು ಕ್ಷಣದಲ್ಲೆ ಮರೆಯಾದೆ....
ಈಗ ಮತ್ತೆ ಹೊರಟಲ್ಲಿಗೆ ಬಂದು ಮುಟ್ಟಿದ್ದೇನೆ
ಮತ್ತೆ ಉಳಿದಿರೋದು ನಿರೀಕ್ಷೆಗಳು ಮಾತ್ರ....
ಕೇವಲ ನಿರೀಕ್ಷೆಗಳು/
ಸರಿಕಂಡ ದಾರಿಯಲ್ಲಿ ಹಾಕಿದ ಹೆಜ್ಜೆ
ಊಹಿಸದ ಉಸುಬಿನಲ್ಲಿ ಮುಳುಗಿಸಿ ಕೊಂದರೂ....
ಉಸಿರುಗಟ್ಟುವ ಆ ಹೊತ್ತಲ್ಲೂ ನಿನ್ನುಸಿರ ಕನವರಿಕೆ,
ಯಂತ್ರದಿಂದ ಹಾಯಿಸಿಕೊಂಡ ತಂಪು ಹವೆ ತನುವ
ಸ್ವಚ್ಛಂದ ಗಾಳಿಯ ತಂಪಿನಂತೆ ಸಹಜವಾಗಿ ಅರಳಿಸಬಲ್ಲದೆ?....
ಮನ ಬೇಡದ ಮರು ಸಾಂಗತ್ಯ ಆಶಿಸಿದಷ್ಟು
ಆಪ್ತತೆಯ ಭಾವವನ್ನ ಮನದೊಳಗೆ ಕೆರಳಿಸಬಲ್ಲದೆ?.//


ಆದರೂ ನಾಲ್ಕಾರು ಸಾಲುಗಳಲ್ಲಿ
ಬಿಡಿಬಿಡಿಯಾಗಿ ಮನದ ಹಳಹಳಿಕೆಗಳನ್ನೆಲ್ಲ....
ನನಗೆ ನಾನೆ ಸುತ್ತಿ ಬಳಸಿ
ನಿತ್ಯ ನಿವೇದಿಸೋದು ಒಟ್ಟು,
ಕಡೆ ತನಕ ಮನದುಂಬಿ ಆಪ್ತವಾಗಿ
ವಿವರಿಸಿದರೂ ಮುಗಿಯಲಾರದಷ್ಟಿದೆ....
ಮನದ ಕಪಾಟಿನಲ್ಲಿ ಬಚ್ಚಿಟ್ಟಿರುವ ನೆನಪಿನ ಸುರುಳಿಗಳ ಕಟ್ಟು/
ಶಾಂತಿಯಿಲ್ಲ ಆದರೂ ಅದರ ತಲಾಷಿದೆ
ನೀನೂ ಇಲ್ಲ ಆದರೆ ನಿನ್ನ ನಿರೀಕ್ಷೆಯಿದೆ.....
ಅನುಗಾಲ,
ಅರೆ ಬಿಸಿಲಿಗೆ ಅಷ್ಟಿಷ್ಟು ಅರಳಿದ
ವಸುಂಧರೆಯ ಮುಖದ ನಾಚಿಕೆಯ ಗುಳಿಯಲ್ಲಿ....
ಮಂಜಿನ ಮಣಿಗಳು ಮಿನುಗುತ್ತಿವೆ.//


ಸೋರುವ ಮನದ ಮಾಳಿಗೆಯಿಂದ
ಸುರಿದ ಹೆಚ್ಚುವರಿ ಹನಿಗಳೆಲ್ಲ....
ಕಣ್ಣಿನ ತೂಬಿನಿಂದ ಸರಾಗವಾಗಿ ಹೊರ ಹರಿಯುತ್ತವೆ,
ಉಸಿರುಗಟ್ಟಿಸುವ ಒತ್ತಾಯದ ಏಕಾಂತದಲ್ಲಿ
ಅರಳುವ ಮೊದಲೆ ಬಾಡಿ ಹೋದ ಮನ ಸುಮಗಳು....
ವಾಸ್ತವದಲ್ಲಿ ಅತ್ತಲಾಗಿರಲಿ ಸ್ವಪ್ನದಲ್ಲಿಯೂ
ಸುಗಂಧ ಹೊಮ್ಮಿಸಲಾರದೆ ಹೋದವು/
ಕಾದಂಬರಿ ಬರೆವ ಹಂಬಲ ಹೊತ್ತವ
ಬರೆಯಲಾಗದೆ ಒಂದೊಳ್ಳೆ ಕಿರುಗತೆ....
ಆರಂಭದಲ್ಲಿಯೆ ಬಳಲಿ ಬೀಳುವ ರೀತಿ ನನ್ನ ವ್ಯಥೆ,
ಕಥೆಯಾದ ನೆನ್ನೆಯಂತೆ
ಕವಿತೆಯಂತಹ ನಾಳೆಯೂ ಎದುರಾಗಲಿದೆ....
ಒಂಟಿತನದ ನಿರಂತರ ನೋವು
ಎಂದೆಂದೆಯೂ ಮುಗಿಯದ ಕಾದಂಬರಿಯಂತೆ ಸಶೇಷವಾಗಿ ಕಾಡಲಿದೆ.//

19 August 2013

ಒಣ ಮಾತುಗಳ ಶುಷ್ಕ ಭಾವಗಳಿಗೆ ಕಿಂಚಿತ್ತೂ ಕರುಣೆಯಿಲ್ಲ....



ಮಾತು ಸತ್ತು ಹೋದಾಗ
ಹುಟ್ಟುವ ಮೌನದ ಗರ್ಭದೊಳಗೆ....
ಅಪಾರ ಕರುಣೆಯ ಕೂಸಿನ ಭ್ರೂಣ ಮಿಡುಕುತ್ತಿದೆ,
ಕನಸು ಮೌನವಾಗಿ ಸೋಕುವಾಗ
ಮುಖದಲ್ಲಿಯೂ ಆರದ ಮಂದಹಾಸದ ಆರ್ದ್ರತೆಯಿರುತ್ತದೆ/
ಹಳೆಯ ಹೊಳೆವ ನೆನಪುಗಳು
ಮುಗ್ಧ ಮಗುವಿನ ಬೆರಗು ಹೊತ್ತ ನಯನಗಳಂತೆ....
ಚಿಮ್ಮುವ ಬೆಳಕಿನ ಒರತೆಗಳವು,
ನಟ್ಟಿರುಳ ಮೌನದುನ್ಮಾದಲ್ಲಿ
ಬೇಡದಿದ್ದರೂ ಬೀಸಿ ಸೋಕುವ....
ಗಾಳಿಯಬ್ಬಿಸುವ ಜರೋಕಾದ ಘಂಟೆಯ ನಾದದಲ್ಲಿ
ನೀನೇಕೋ ನೆನಪಾಗಿ ಕಾಡುತ್ತೀಯ.//


ನಲಿವಿಗೆ ತಂದಿದ್ದು ಸಂಚಕಾರ
ಮುಳ್ಳಿನಂತೆ ನಿತ್ಯ ಎದೆಯ ತಿವಿಯುವ ನೆನಪು
ನಿರಂತರ ಕಾಡುವ ಸಂಚುಕೋರ....
ನಗುವ ಸ್ವಾತಂತ್ರ್ಯವನ್ನು ಕೊಳ್ಳೆ ಹೊಡೆದ
ನೋವು ಬಗಲಲ್ಲೆ ಇರುವಾಗ....
ನಾನಿನ್ನೂ ಆಜೀವ ಬಂಧಿ,
ಬಿರಿದ ಕಣ್ಣುಗಳಲ್ಲಿ ಅಡಗಿರುವ
ಬೆರಗಿನ ಬೆಲೆ ಕಟ್ಟಲು....
ಯಾವ ಕಾಗದದ ದುಡ್ಡಿಗೂ ಸಾಧ್ಯವಿಲ್ಲ/
ಕಪಟವಿಲ್ಲ ಕೇವಲ ಸ್ಪಟಿಕ ಶುದ್ಧ
ಆರಾಧನೆಯ ಭಾವವಿದೆ....
ಎದೆಯ ಬಾವಿಯಾಳದಲ್ಲಿ
ಸುಶುಪ್ತವಾದ ಒಲವ ಲಾವವಿದೆ,
ಮೌನದ ಧ್ಯಾನದಲ್ಲಿ ಮತ್ತೆ ಸುಳಿವ
ನೆನಪುಗಳ ಸಾಂಗತ್ಯ....
ಸತ್ತ ಸ್ವಪ್ನಗಳನ್ನ ಕುಟುಕು ಜೀವ ಕೊಟ್ಟು
ಕಾಪಾಡುತ್ತದೆ ಜೊತೆಗೆ ಕಾಡುತ್ತದೆ!//


ನಾ ನಾನಲ್ಲ ನನ್ನದೇನೂ ನನ್ನಲಿಲ್ಲ
ನೀನಲ್ಲದ್ದು ಏನೂ ಇನ್ನುಳಿದಿಲ್ಲ....
ನಾನು ನಾನಲ್ಲವೇ ಅಲ್ಲ,
ಬೀಸುವ ಗಾಳಿಯ ಅಲೆಯಲ್ಲಿ ಕಿರು ಧೂಳಿನ ಕಣವಾಗಿ
ಹರಿಯುವ ನೀರಿನ ತೆರೆಯಲ್ಲಿ ಕರಗುವ ಕೆಸರಾಗಿ....
ಸುಮ್ಮನೆ ಸಾಗುತ್ತಲಿದ್ದೇನೆ
ವಿಧಿ ಕೈ ಹಿಡಿದು ನಡೆಸಿದೆಡೆ ಇದರಲ್ಲಿ ನನ್ನದೇನೂ ಇಲ್ಲ/
ಅದೆಲ್ಲ ಈಗ ಇತಿಹಾಸ
ಆದರೆ ನೆನಪಾಗಿ ಮನದ ದಂಡೆಯನ್ನ ಸೋಕಿದಾಗಲೆಲ್ಲ....
ಸಂಕಟದಲ್ಲೂ ಮೂಡಿಸುತ್ತದೆ
ತುಟಿಯಂಚಿನಲ್ಲಿ ಮಂದಹಾಸ,
ಕೇವಲ ಕನವರಿಕೆಯೆ ಬದುಕಾದಾಗ
ಕನಸುಗಳೆಲ್ಲ ಕಮರಿದರೂನು ಚಿಂತೆಯಿರದು....
ಹನಿಗಳು ಸ್ವಲ್ಪವೇ ಆಗಿದ್ದರೂ ಇದೂನು ಮಳೆಯೆ
ಮಿಡಿವ ಮನದ ಗಾನ ಅಲ್ಪವೆ ಆಗಿದ್ದರೂ....
ಆದೂನು ಒಲವ ಕಿರು ಕಳೆಯೆ.//


ಎಲ್ಲೋ ನಿಂತು ಕರೆಯುತ್ತೇನೆ
ಮನಸೊಳಗೆ ಮತ್ತೆ ಮತ್ತೆ ಮೊರೆಯುತ್ತೇನೆ....
ಮೌನ ಮಾತಾಗುತ್ತದೆ
ನಾನು ಮಾತ್ರ ಮತ್ತೆ ಮೌನದ ಚಿಪ್ಪಲ್ಲಿ ಹುದುಗುತ್ತೇನೆ,
ಮನದ ಸನಾದಿಯಲ್ಲಿ ನೀನಿಲ್ಲದ ಶೋಕದ
ಅಪಸ್ವರದ ಹೊರತು ಉಳಿದಂತೆ ನಾದವೇನೂ ಶೃತಿ ತಪ್ಪಿಲ್ಲ....
ಆದರೂ ನೀನೂ ಜೊತೆಗಿರಬೇಕಿತ್ತು
ನಾದಕ್ಕೆ ನಿಜವಾದ ಕಳೆ ತುಂಬಿಸಲಿಕ್ಕೆ/
ಬಿಸಿಲು ಬಿದ್ದರೂ ಮಳೆಯೆ ಕವಲಲ್ಲೆ ಇದ್ದರೂ
ನೋವಿದ್ದರೂ ನಲಿವಿದ್ದರೂ....
ನೆಲ ಯಾವುದಾದರೊಂದರಲ್ಲಿ ಸದಾ ತೊಯ್ಯುತ್ತಲೆ ಇರುತ್ತದೆ,
ನೀ ಹೋಗುವ ಮೊದಲು ಎಳೆದ ಗಡಿರೇಖೆಯನ್ನ
ನಾನಿನ್ನೂ ದಾಟಿಲ್ಲ ....
ನನ್ನ ಬಿಸಿಯುಸಿರು ಇನ್ಯಾರಿಗೂ ಇದುವರೆಗೂ ತಾಕಿಲ್ಲ.//

ಬೀಸುವ ನೆನಪಿನ ಗಾಳಿಯಲೆಗಳು ಮನದ ಮಾರ್ದವತೆಯನ್ನ ಮೃದುವಾಗಿ ಸೋಕುತ್ತವೆ......



ನನ್ನವಲ್ಲದ ಸ್ವಪ್ನಗಳಿಗೆ ಹಂಬಲಿಸಿದ್ದು ಸಾವಿರ ಬಾರಿ
ಆದರೂ ತೆರೆದುಕೊಳ್ಳುತ್ತಿಲ್ಲ ಕನಿಷ್ಠ....
ಒಂದೆ ಒಂದು ಭರವಸೆಯ ದಾರಿ,
ಬರೆಯಲಾಗದ ಕವಿತೆಗಳಿಗೆ
ಮರೆಯಲಾಗದ ಹಾಡುಗಳಿಗೆ....
ತೆರೆಯಲಾರದ ಮನ ತೀರ ಶುಷ್ಕ/
ನಿತ್ಯದಂತೆ ನಿನ್ನ ನಿರಂತರ ಜಪದಲ್ಲಿ ಮನ ಲೀನ
ಜೊತೆಗೆ ಕೆಲವು ಗದ್ಗದ ನೆನಪುಗಳು....
ಮತ್ತೊಂದಿಷ್ಟು ಮೌನ,
ಅನುಗಾಲ ಅಷ್ಟಷ್ಟೇ ಸವೆದು ಇನ್ನಿಲ್ಲವಾಗುವ
ಕಾಲದ ಚಕ್ರದ ಗುರುತು....
ಪ್ರತಿ ಮುಖದ ಮೇಲೂ ಅಚ್ಚಳಿಯದೆ
ಹಾಗೆಯೆ ಉಳಿದು ಹೋಗುತ್ತದೆ.//


ಹಾದಿಯಂಚಿನ ಹೂವುಗಳ ತುಟಿಯಂಚಿನಲ್ಲಿ
ಹೆಪ್ಪುಗಟ್ಟಿದ ನಾಚಿಕೆಯ ನಸುನಗುವಿಗೆ....
ನಾಳಿನ ನಲಿವಿನ ನಿರೀಕ್ಷೆಯಿದೆ,
ನೋವ ಜೊತೆಗೆ ಉಕ್ಕುವ ನಲಿವಿನ ಬುಗ್ಗೆಗೆ
ಕಾರಣ ಹುಡುಕೋದು ಕಡು ಕಷ್ಟ....
ಮುಕ್ತ ಮಾತುಗಳ ಆರ್ದ್ರ ನಯನಗಳಿಗೆ
ಖಚಿತ ಭಾಷೆಯ ಹಂಗಿಲ್ಲ/
ಕಲ್ಲಾದರೂ ಹರಿವ ನಿರಂತರ ನೀರ ಧಾರೆಗೆ
ತೋಯ್ದು ಮೆತ್ತಗಾಗಿ ಕರಗೀತು....
ಆದರೆ ಬರಡಾದ ಮನಸ ಬಂಡೆಯಲ್ಲ,
ಅದು ಕೇವಲ ಕ್ಷಣ ಭಂಗುರ ಕನಸು
ನಿರೀಕ್ಷೆಗಳ ರೆಕ್ಕೆ ಫಡಿಫಡಿಸುವ ಹೂಮರಿ ಹಕ್ಕಿ....
ಮತ್ತೆ ನೆಲಕ್ಕೆ ಕಾಲ ಸೋಕಿಸಲೇ ಬೇಕು.//



ಸುಲಭವಾಗಿ ಅಳಿಸಿ ಹಾಕುವ ಮನಸು ಬೇರೆ
ಕಷ್ಟ ಪಟ್ಟರೂ ಮರೆಯ ಮಾಯಾ ಪರದೆ....
ಇಳಿಸಲಾಗದ ಕನಸು ಬೇರೆ
ಎರಡೂ ಒಂದೊಮ್ಮೆ ಒಟ್ಟಾಗಿದ್ದುದೆ ಕಡು ಅಚ್ಚರಿ,
ಮತ್ತದೆ ಏಕಾಂತ ಮುತ್ತಿ ಕಾಡುವ ನಿನ್ನ ನೆನಪು
ಕಣ್ಣು ತೇವ ತೇವ....
ಮನ ತೊಟ್ಟಿಕ್ಕುಸುತಿರೋದು
ಬರಿ ವಿಷಾದದಲ್ಲದ್ದಿದ್ದ ಹನಿ ನೋವ/
ನೀನದೆಂದೋ ಮರೆತ
ನಾನೆಂದೆಂದಿಗೂ ಮರೆಯಲೆ ಆಗದ ಮಾತುಗಳಿಗೆಲ್ಲ....
ವಿಷಾದದ ಚೌಕಟ್ಟು ಹಾಕಿ
ಮೌನದ ಸ್ವರ್ಣ ಲೇಪ ಕೊಡಿಸಿದ್ದೇನೆ,
ಕರಗುವ ಹೊತ್ತಲೂ ಮಂಜಿನ ಕೊನೆ ಹನಿ
ಕರಗಿಸುವ ಕಿರಣದ ಮೋಡಿಗೆ ಸಿಕ್ಕು ಸಾಯುವಾಗಲೂ ಮಿನುಗುತ್ತದೆ....
ಮಿಂಚುತ್ತಲೆ ಕೊನೆಯುಸಿರೆಳೆಯುತ್ತಾ ಮರೆಯಾಗುತ್ತದೆ.//



ಬಿಸಿಲಿಲ್ಲದೆ ಬೆಚ್ಚಗಿರದ ಬೆಳಗು
ಬೆಳದಿಂಗಳನ್ನೂ ಮರೆತ ಕಾರಿರುಳ ಮೆರುಗು....
ಕೇವಲ ಚಿಂತೆಯಿಲ್ಲದ ಮಗು ಮನಸಿನ
ಅರಿವಿಗೆ ಮಾತ್ರ ದಕ್ಕುತ್ತದೆ,
ಕನ್ನಡಿಯಲ್ಲಿ ಕಾಣುವ ಬಿಂಬ ವಾಸ್ತವದಲ್ಲಿ ಅಸಲಲ್ಲದಿದ್ದರೂ
ಮೋಹಕತೆಯ ಕನಸನ್ನ ಮಾತ್ರ....
ತಪ್ಪದೆ ನಿರ್ವಿಕಾರವಾಗಿ ಪ್ರತಿಬಿಂಬಿಸುತ್ತದೆ/
ಮಾಗಲಾರದ ಮಗು ಮೌನಿ ಮನ
ನೋವಲೂ ನಲಿವನ್ನರಸುತ್ತದೆ....
ಸುಡು ಬೆಂಕಿಯಲ್ಲಿ ಬಿರು ಬೆಳಕನ್ನ,
ಸಾಂಗತ್ಯ ತಪ್ಪಿಹೋದ ಮೇಲೆ
ಕೊನೆಯವರೆಗೂ ಒಂಟಿಯಾಗಿಯೆ ಉಳಿಯುತ್ತದಲ್ಲ....
ಸ್ವಚ್ಚಂದವಾಗಿ ಬಾನಾಡಿಯಾಗಿದ್ದ ತೇನೆ
ನಿನ್ನ ಜೊತೆ ತಪ್ಪಿ ಹೋದ ನಾನೂನು ಕೂಡ ಹಾಗೇನೆ.//

09 August 2013

ಕದ್ದು ಕಾಣುವ ಕನಸುಗಳದ್ದು ಕದಲದ ಕಲರವ....



ನಾನು ಯಾರವನೂ ಆಗಲಿಲ್ಲ
ಯಾರೊಬ್ಬರೂ ನನ್ನವರೂ ಆಗಲೇ ಇಲ್ಲವಲ್ಲ....
ಮೌನದ ಲೆಖ್ಖಣಿ ಗೀಚಿದ ಮುರುಕು ಮಾತಾಗಿಯೆ
ಕಳೆಯಿತು ಈ ಬಾಳು.
ಸಂಕಟದ ಗಡಿಯಲ್ಲಿ ಕುಳಿತಾಗಲೂ
ಮನಸು ಅರಳೋದಕ್ಕೆ ಖಚಿತ ಕಾರಣ ಇರಬೇಕಿಲ್ಲ....
ನಟ್ಟಿರುಳು ಕವಿದಿದ್ದರೂ ಕಾಯುವ ಹುಚ್ಚಿರುವ ಮನಸಿಗೆ
ನಿದಿರೆಯ ಸುಳಿಗಾಳಿ ಸೋಕುತ್ತಿಲ್ಲ/
ಪ್ರಲೋಭನೆಗಳಿಗೆ ಸೋಲದಿರಲು
ನಾನೇನು ಸಂತನಲ್ಲ....
ಆದರೂ ಸಂಯಮದ ಗಡಿ ಮೀರದಂತೆ ಎಚ್ಚರಿಸಲು
ನಿನ್ನ ನೆನಪುಗಳು ಜೊತೆಯಲ್ಲಿದ್ದೇ ಇವೆಯಲ್ಲ,
ಬೇಡದ ಕನಸುಗಳೆಲ್ಲ ಎದುರಾಗುವಾಗ ಕ್ಷಣಕ್ಷಣ
ಲೋಲುಪ ಮನಸು ತುಸುಕಾಲ....
ಹಿಡಿತ ಮೀರುವುದಂತೂ ಹೌದು.//


ಏಗಲೆ ಬೇಕಲ್ಲ ಒಲವ ಕೆಂಡವನ್ನ
ಒಡಲಲ್ಲಿ ಕಟ್ಟಿಕೊಂಡಾದ ಮೇಲೆ....
ಸುಡುವ ಅದರ ಕಾವು ಕೊಂಚವೂ ಆರದು
ಸುರಿಯುತ್ತಲೆ ಇದ್ದರೂನು ನಿರಂತರ ಕಂಬನಿಯ ಮಳೆ,
ಹುಟ್ಟಿನಿಂದ ಕಿತ್ತು ತಿನ್ನುತ್ತಿದ್ದ
ಕರಾಳ ಒಂಟಿತನದ ಪ್ರಶ್ನೆಗೆ....
ನಿನ್ನಲ್ಲಾದರೂ ಜವಾಬು ಸಿಕ್ಕೀತು ಅನ್ನುವ ಆಸೆಯಿಂದ
ನಿನ್ನನ್ನೆ ನಿರಂತರ ಆತುಕೊಂಡಿದ್ದೆ....
ನೀನೂ ನಿರುತ್ತರವಾಗಿ
ದೂರವಾಗುವಾಗುವ ಕಲ್ಪನೆಯೆ ನನಗಿರಲಿಲ್ಲ/
ಕಾಡುವ ಚಳಿಯ ಸುಳಿವು
ಗಾಳಿಗೂ ಇರಲಿಲ್ಲ....
ಮಳೆಯ ಕುರುಹನ್ನ
ಬರಡು ಮೋಡಗಳೂ ಹೊತ್ತು ತರಲಿಲ್ಲ,
ಬಿರಿದಿದ್ದು ಬಾಡದೆ ಕಣ್ಣಿನ ಅನುಗಾಲ ನಿರೀಕ್ಷೆ
ಆಪ್ತ ಜೀವವೊಂದರ ಮರು ಆಗಮನದ....
ಕಿರು ನೋಟದ ಆಕ್ಷಾಂಶೆ ಮಾತ್ರ.//


ಕನಸ ಹಾದಿಯೂ ಕತ್ತಲಾವರಿಸಿದಾಗ
ನನಸ ಬಾಳು ಸಹ ಬರಿ ಬೆತ್ತಲೆ....
ಮನಸಿನಾಳದಲ್ಲಿ ನೆನಪಾಗಿ
ಹಚ್ಚೆಯಿಳಿದ ನಂತರ ಮತ್ತಿನ್ನೇನಿಲ್ಲ....
ಮೌನವೂ ಆಪ್ತ ಮಾತಾಗುತ್ತದೆ,
ಕಪೋಲವ ತೋಯಿಸಿ ಕಲೆಯುಳಿಸಿಯೆ ಹೋಗುವ
ಕಣ್ಣ ಕಡೆಯ ಹನಿಗೂ....
ಸಾಧ್ಯವಾದರೆ ನಿನ್ನನೊಮ್ಮೆ
ತನ್ನಲ್ಲಿ ಪ್ರತಿಫಲಿಸುವ ಕಾತರ/
ಸುರಿದ ಮರುಘಳಿಗೆ ಇಂಗಿ ಇಲ್ಲವಾಗುವ
ಹನಿಯೊಂದರಲ್ಲಿ ಅಡಗಿದ್ದುದ್ದು....
ನೆಲದೊಡಲನ್ನ ಆದಷ್ಟು ಬೇಗ
ಬೆರೆಯುವ ಆತುರ ಮಾತ್ರ,
ಇದನ್ನಿಲ್ಲಿ ಬರೆದ ಬೆರಳುಗಳಿಗೂ ಗೊತ್ತಿಲ್ಲದ ಸತ್ಯ ಏನೆಂದರೆ
ಕಣ್ಣಲ್ಲಿ ಹುಟ್ಟಿದ ಕನಸುಗಳೆಲ್ಲ....
ಕಣ್ಣಿನಾಳದಲ್ಲಿಯೆ ಬಿದ್ದು
ಹೇಳ ಹೆಸರಿಲ್ಲದಂತೆ ಜೀವ ಕಳೆದುಕೊಂಡಿವೆ.//


ಸಮಯದ ಪರಿವೆಯಿಲ್ಲದೆ
ಪರಿಪರಿಯಾಗಿ ಮನ ಮೌನದಲ್ಲೂ....
ಕನವರಿಸುವ ಕಾತರಗಳಲ್ಲೆಲ್ಲ
ಈಡೇರದ ಕಾಲಾತೀತ ಕನಸುಗಳ ಛಾಪು ಇದೆ,
ಹೊತ್ತು ಸರಿವ ಸಮಯದಲ್ಲಿ ನಲಿವನ್ನೆ
ಸುಂಕವಾಗಿ ವಸೂಲು ಮಾಡಿದರೆ....
ಬಾಳೆಲ್ಲ ಸುಮಧುರ ಸ್ವಪ್ನವಾಗುತ್ತಿತ್ತು/
ಸುರಿದ ಹನಿಹನಿಗಳ
ಸಾಂಗತ್ಯದಲ್ಲಿ ಸಾಗುವ ಭೂಮಿ....
ಎದೆಯೊಳಗೆ ವ್ಯಕ್ತಪಡಿಸಲಾಗದ ಒಲವು
ನಿರಂತರ ಅಂತರ್ಗಾಮಿ,
ತುಂಬಿದ ಮನದ ಅಣೆಕಟ್ಟೆಯ ಒಡಲಾಳವೆಲ್ಲ
ಕಂಬನಿಯ ಪ್ರವಾಹದ ನೆರೆ....
ಹಾಗಾಗಿಯೆ ಕಣ್ಣ ಕ್ರೆಸ್ಟ್ ಗೇಟುಗಳು
ಆಗಾಗ ತನ್ನಿಂದ ತಾನೆ ತೆರೆದುಕೊಳ್ಳುತ್ತವೆ.//

ಹನಿದ ಹನಿಗಳ ಲೆಕ್ಖವಿಟ್ಟಿಲ್ಲ......



ಅನ್ನಿಸಿದ್ದೆಲ್ಲ ಆಗಿಯೆ ಹೋಗುವ
ಹೊಸ ಲೋಕವೆಲ್ಲಾದರೂ ಹುಟ್ಟಿಕೊಂಡಿದ್ದರೆ....
ಹಾಗೆಯೆ ಅಲ್ಲಿಗೆ ನಿನ್ನ ಕೈ ಹಿಡಿದು ದಾಟಿಕೊಳ್ಳ ಬೇಕನ್ನುವ ಕನಸಿದೆ
ಅಲ್ಲಿ ಅಮರನಾಗಿ ನಿನ್ನ ಕಣ್ಣುಗಳನ್ನೆ ದಿಟ್ಟಿಸುತ್ತಾ
ಅವುಗಳಲ್ಲೆ ಕರಗಿ ಇದ್ದು ಬಿಡುವ ಮನಸಿದೆ,
ತಮ್ಮ ತಮ್ಮ ಸರದಿಗೆ ಸಾಲಾಗಿ
ನಿಂತು ಕಾದಿರುವ ಸಂಕಟಗಳ ಕಂಕುಳಲ್ಲಿ....
ಗತದ ನೆನಪಿನ ಬಡ ಗಂಟುಗಳು ಇಡುಕಿಕೊಂಡಿವೆ/
ಸುದೀರ್ಘ ತಾಳ್ಮೆಯ ಪರಿಧಿಯಲ್ಲಿದ್ದೀನಿ
ಸರಿವ ಕಾಲದ ಪರಿವೆ ತುಸುವೂ ಇಲ್ಲ....
ನಾನು ಬದುಕಿದ್ದೇನೋ ಸತ್ತಿದ್ದೇನೋ ಯಾವನು ಬಲ್ಲ!,
ತುಂಡು ನೆಲದ ಮೇಲೆ ನಿಂತು
ನಿರೀಕ್ಷೆಯಾಕಾಶದ ಕಡೆಗೆ ಕೈಚಾಚಿರುವಾಗ....
ಕಿರು ಕನಸಾದರೂ ಸಾಕಾರಗೊಳ್ಳುವ
ಕೊನೆಯ ಅವಕಾಶವಾದರೂ ಸಿಗಲಿ.//


ಎಲೆಯುದುರಿದ ಮೇಲೂ ಬೋಳುಗಿಡದ ಕೊಂಬೆಯ ಮೇಲೆ
ಕೂತಿರುವ ಒಂಟಿ ಹಕ್ಕಿಯಂತೆ....
ನನ್ನ ಬರಡು ಮನದ ರೆಂಬೆಗೆ
ಅಂಟಿ ಕುಳಿತ ನಿನ್ನ ಕನಸು,
ಮನದ ಹೊರಗೆದ್ದಿರುವ ಆರಲಾರದ ಉರಿ ಸೆಖೆಗೆ
ನನ್ನೆದೆಯಂಗಳದಲ್ಲಿ ಬಿದ್ದ....
ಬೆಂಕಿಯ ಸುಡು ಕಾವೆ ಕಾರಣ/
ಕಾರಿರುಳು ಕಳೆದು ಬೆಚ್ಚನೆ ಹಗಲು ಬಳಿ ಸಾರಿದರೂ
ಭುವಿಯೆದೆಯ ನಡುಕ ನಿಲ್ಲುತ್ತಿಲ್ಲ....
ಗೊತ್ತಿಲ್ಲದ ಗುರಿ ಹೊತ್ತಿಲ್ಲದ ಸ್ವಪ್ನ ನಕ್ಷತ್ರ ಕಳಚಿ ಉದುರುವ ಪರಿ....
ಬಾಳು ಬರಿದಾದ ಬಾನು
ಹಸುರೆಲ್ಲ ಒಣಗಿ ಬೋಳಾದ ಬಟಾಬಯಲು ಕಾನು,
ಮನೆಯ ಮಾಡನ್ನೆ ಮುಟ್ಟಲಾಗದಿದ್ದಾಗ
ಆಕಾಶಕ್ಕೆ ಏಣಿಯಿಡುವ ಕುರುಡು ಹಂಬಲವಾದರೂ ಏಕೆ?....
ಸುಮ್ಮನೆ ಆಗದ ಹೋಗದ
ಮಾತುಗಳನ್ನಾಡಲೇಬೇಕ?.//


ಸಣ್ಣ ಸಣ್ಣ ಕನಸುಗಳೂ ಕರಗಿ
ಕಣ್ಮರೆಯಾಗಿ ಹೋಗುವಾಗ....
ದೊಡ್ಡ ಸ್ವಪ್ನಗಳ ಕನವರಿಕೆಯೂ
ದುಬಾರಿಯೆನ್ನಿಸುತ್ತಿದೆ,
ಸಾಕಾರಗೊಳ್ಳದ ಹಗಲ ಕನಸುಗಳು
ಇರುಳಲ್ಲೂ ಹಿತವಾಗಿ ಕಾಡುತ್ತದಾದರೂ....
ಜೊತೆಗೆ ಕಣ್ತುಂಬಿ ಬರುವುದೇಕೋ ಅರಿವಿಲ್ಲ/
ಕರಗಿ ಕರಗಿ ನೀರಾಗಿ ಹಗುರಾದ ಮನಸಿಗೆ
ಮತ್ತೆ ಮತ್ತೆ ಬೆಂಬಿಡದ ಕನಸುಗಳ....
ಈಡೇರದ ಹೊರೆ ಎಡೆಬಿಡದೆ ಏರುತಲೆ ಇದೆ,
ಮೌನವಾದ ಮನದ ಮನೆಯ ಮೂಲೆಯಲ್ಲಿ
ಬಿಕ್ಕಳಿಕೆಗಳ ಅನುರಣನ ಮಾತ್ರ ನಿಂತೆ ಇಲ್ಲ.//


ಹಿಂದುರುಗಿಯೂ ನೋಡದಂತೆ
ನೀ ಮುನ್ನಡೆದು ಮರೆಯಾದರೂ....
ನನ್ನ ಕಣ್ಣುಗಳಿನ್ನೂ ಸಾಗಿ ಬಂದ ಹಾದಿಯಲ್ಲಿ
ಮಾಸದ ನಿನ್ನ ಹೆಜ್ಜೆಗಳನ್ನೆ ಅರಸುತ್ತಿವೆ,
ಇದೊಂದು ಅವರ್ಚನೀಯ ಆಸೆಯಷ್ಟೆ
ನಿನ್ನ ಮುಖವನ್ನೆ ಅನುಗಾಲ....
ಸ್ಮರಿಸುವ ಪರಿಭಾಷೆಯಷ್ಟೆ/
ಬೇಸರದ ಕಾತರಕೆ ಕಾಯುವ
ಅನಿವಾರ್ಯತೆ ಕಲ್ಪಿಸಿದ ಮಧುರ ಒಲವಿಗೆ
ಅವರ್ಚನೀಯ ಸಿಹಿಯ ಲೇಪವಿದೆ.....
ಕನಸ ಹಾದಿಯುದ್ದ ಕಾವಿದ ಕತ್ತಲೆಯ ನೆರಳು
ಬಾಳ ಜಾತ್ರೆಯಲ್ಲಿ ಜೊತೆಯಾಗಿ ಹೊರಟಿದ್ದರೂ....
ಮನ ಮಗುವಿನ ಕೈ ತಪ್ಪಿದೆ ಒಲವಿನ ಕಿರು ಬೆರಳು,
ಮೋಡ ಮಳೆಯ ಮುತ್ತಾಗಿ
ಹನಿ ಹನಿ ಆಡುವ ಮಾತಾಗಿ....
ಮನದ ಆಳಕ್ಕೆ ಅನುದಿನ ಇಳಿಯುತ್ತಿದೆ.//