28 July 2013

ಕನಸಿಗೆ ನೂರು ಕವಲುಗಳಿವೆ....

ಹಿತ ಮೀರಿದ ಮೌನ
ಹಿಡಿತ ತಪ್ಪಿದ ಬಾಳಗಾನ....
ಸುಮಧುರವಾಗಿ ಉಳಿದಿಲ್ಲ
ಸಂಕಟದ ಸೂತಕ ಇನ್ನೂ ಕಳೆದಿಲ್ಲ,
ಇಂದಿನ ಅನುಭವ ನಾಳಿನ ನೆನಪು
ಅದರ ತೋರುಹಾದಿಯ ಬೆಳಕಿದ್ದರೇನೆ
ಬರಲಿರುವ ಬಾಳೆಲ್ಲ ಹೊಳಪು/
ಬಯಸಿದ್ದು ಕೈಗೆಟುಕಲಿಲ್ಲ
ಕೈಗೆಟುಕುವುದು ಮನಸಿಗೆ ಸಮ್ಮತವಿಲ್ಲ....
ನೆನಪಾದರೂ ಇವೆಯಲ್ಲ ಅಲ್ಪತೃಪ್ತನಿಗೆ
ಇದೇ ಸಾಕಷ್ಟಾಯಿತು,
ಚಲಿಸುವ ಕ್ಷಣಗಳ ಚಕ್ರದ ಮೇಲೆ
ಘಳಿಗೆಗಳ ಬಂಡಿ ಉರುಳಿ....
ಬೆಳಕು ಬಿರಿದಾಗ ನಿಶಾಪುಷ್ಪ
ಹಾಗೆಯೆ ಬಾಡಿ ಇನ್ನಿಲ್ಲವಾಯ್ತು.//


ಸಂಜೆಯ ಸಲುಗೆಗೆ ಇರುಳಲ್ಲಿ
ಬಾನಿತ್ತ ಮುತ್ತು ಬೆಳದಿಂಗಳು....
ಮುಂಜಾವಿನಲ್ಲಿ ನೆಲದ ಒಡಲಿಗೆ
ಮುತ್ತಿಡುತಾವೆ ನವಿರು ಕಿರಣದ ಕಣ್ಗಳು,
ಗಾಢ ಭಾವ ಅವ್ಯಕ್ತ
ಮಾತು ಪೇಲವ ಮೌನ ಮಾತ್ರ....
ಸರ್ವ ಜಂಜಡಗಳಿಂದ ಚಿರ ಮುಕ್ತ/
ಕಾಲ ಸವೆಯುತಿದೆ ಗಾಯ ಮಾಯುತ್ತಿಲ್ಲ
ನೀನಿತ್ತಿದ್ದ ಒಲವ ಸಾಲ ಇನ್ನೂ ಬಾಕಿಯುಳಿದೆ....
ಬಡ್ಡಿಯ ಹೊರತು ಬಡವ ನನ್ನಿಂದ
ಇನ್ನೇನನ್ನೂ ಕಟ್ಟಲಾಗುತ್ತಲೆ ಇಲ್ಲ,
ಹಣೆ ಬರಹ ನಿಸ್ಸಂಶಯವಾಗಿ ನನ್ನದೆ ಆಗಿತ್ತು
ಆದರೆ ಅದರ ಕೈ ಬರಹ ಮಾತ್ರ....
ಅನುಗಾಲ ನಿನ್ನದಾಗಿತ್ತು
ಕೇವಲ ನಿನ್ನದೆ ಆಗಿತ್ತು.//


ನಿನ್ನೊಂದಿಗಿನ ನನ್ನೊಲವನ್ನ
ಇನ್ಯಾರೊಂದಿಗೂ ನಾ ಹಂಚಿಕೊಂಡಿಲ್ಲ....
ಎಂದಿಗೂ ಹಂಚಿಕೊಳ್ಳುವುದೂ ಇಲ್ಲ,
ಕತ್ತಲ ಕಣ್ಗಳಲ್ಲಿ ಬೆಳದಿಂಗಳ ಹೊಳಪು
ಬೆಳಕು ಚೆಲ್ಲಿದ ಹಗಲಿನಲ್ಲಲ್ಲ....
ಕಡುಗತ್ತಲ ಇರುಳಿನಲ್ಲೆ ಕನಸಿಗೆ
ಹರಡೋದು ಆಕ್ಷಾಂಶೆಯ ಅಚ್ಚ ಬಿಳುಪು/
ಗಾನದ ಅಲೆಗಳ ಮೇಲೆ ತೇಲುವ
ಮನ ನೌಕೆಗೆ ದಿಕ್ಕಿಲ್ಲ ದೆಸೆಯಿಲ್ಲ....
ತೀರ ಮುಟ್ಟುವ ಹುಮ್ಮಸಿದ್ದರೂ
ದೂರ ದೂರದವರೆಗೆ ದಡವೂ ಕಾಣುತ್ತಿಲ್ಲ,
ಸಡಿಲ ಮಾತುಗಳಿಗಿಂತ
ಬಿಗಿ ಮೌನವೆ ಲೇಸು....
ನೋವು ಹನಿ ತೂಕ ಹೆಚ್ಚಿದ್ದರೂ
ನಿರರ್ಥಕ ನಲಿವಿಗಿಂತ ಆ ತಣ್ಣನೆ ಕ್ರೌರ್ಯವೆ ಕೊಂಚ ಸೊಗಸು.//


ಸಾಗದು ಸರಿಯಾದ ಪಥದಲ್ಲಿ ಮೋಡವೆಂದೂ
ಗಾಳಿಯ ಸಾಂಗತ್ಯದ ಹೊರತು....
ಸಾಗರದ ಗರ್ಭದಿಂದ ಹೊರಟ ನೀರ ಯವ್ವನದ ಪಯಣ
ಮತ್ತೆ ಮುಪ್ಪಾಗಿ ಕಡಲ ಒಡಲನ್ನೆ ಸೇರುವ ಮಧ್ಯೆ....
ಕಾಣುವ ನೆಲವೆಲ್ಲ ಅದರ ಪಾಲಿಗೆ ಹೊಚ್ಚ ಹೊಸದು,
ಸಹಜತೆಯ ನಿಖರ ಭಾವದಲ್ಲಿ
ನಿರಂತರ ಒಲವಿರೋದು ಖಂಡಿತ....
ಕೃತಕ ತೋರಿಕೆಯಲ್ಲೂ ಪ್ರಾಮಾಣಿಕ ಪ್ರೀತಿಯನ್ನರಸೋನು ಮಾತ್ರ
ನನ್ನಂತಹ ವಿರಾಗಿ ಮೋಹಾಂಧ ಪಂಡಿತ/
ಮೋಸದ ಮೋಡವ ನೆಲವೆಂದೂ
ಅಂಧ ಪ್ರೀತಿಯಲ್ಲಿ ನಂಬಬೇಕಿಲ್ಲ....
ಇಂದೇಕೋ ನಂಬಿಸಿ ವಂಚಿಸಿದ ಅದು ಹನಿಯಾಗಿ
ಒಲವ ಧರೆಯೆದೆಯ ಮೇಲೆ ಸುರಿಯಲೆ ಇಲ್ಲ,
ಇರುಳ ನೂಲಿನೆಳೆಯಲ್ಲಿ ಕಟ್ಟಿದ
ಕನಸಿನ ಹೂವುಗಳೆಲ್ಲ ಚದುರಿ ಬೇರೆಯಾಗಿದ್ದರೂ....
ವಾಸ್ತವದ ಕಠೋರತೆ ಅದೇಕೋ
ಜಡ್ಡುಗಟ್ಟಿದ ಮನಸಿಗೆ ಸಮ್ಮತವಾಗುತ್ತಲೆ ಇಲ್ಲ.//

27 July 2013

ನನ್ನ ಅಕಾಶ ಕಳೆದು ಹೋಗಿದೆ, ಯಾರಾದರೂ ಹುಡುಕಿಕೊಡಿ.....


ಮಲೆನಾಡಿನ ಸೆರಗಿನಡಿ, ಕರಾವಳಿಯ ಮೂಲೆಯ ಹಳ್ಳಿಯೊಂದರಲ್ಲಿ ನನ್ನ ಬಾಲ್ಯದ ಬಹು ಸಮಯ ಕಳೆದಿದ್ದರಿಂದ ಈ 'ಮಳೆ' ಅನ್ನುವ ಶಬ್ದವೆ ನನ್ನಲ್ಲಿ ಆಪ್ತತೆಯ ರೋಮಾಂಚನ ಮೂಡಿಸುತ್ತದೆ. ಕೇವಲ ಒಣ ವಿವಾರಣೆಗೆ ನಿಲುಕದ- ಬರಿ ಮಾತಿನಲ್ಲಿ ಹೇಳಿ ಮುಗಿಸಲಾಗದ ಅವ್ಯಕ್ತ ಸಂಭ್ರಮದ ನನ್ನ ಮತ್ತು ಮಳೆಯ ನಡುವಿನ ಅವಿನಾಭವ ಸಂಬಂಧವನ್ನ ಅದೇ ಗಾಢತೆಯೊಂದಿಗೆ ನನ್ನ ಬಯಲುಸೀಮೆಯ ಗೆಳೆಯರಿಗೆ ಮನದಟ್ಟು ಮಾಡಿಕೊಡಲಾರೆ. ಒಂದು ವೇಳೆ ಅಂತಹ ವ್ಯರ್ಥ ಪ್ರಯತ್ನಕ್ಕೆ ನಾನೊಮ್ಮೆ ಇಳಿದರೂ ಸಹ ಮುಂಬೈ, ಬೆಂಗಳೂರಿನಂತಹ ನಗರಗಳ ಕಪ್ಪು ಮಳೆಯನ್ನಷ್ಟೆ ನೋಡಿ ಗೊತ್ತಿರುವ ಅವರಿಗೆ ಪಶ್ಚಿಮಘಟ್ಟದ ಹಸಿರ ಮಧ್ಯದ ಸ್ಪಟಿಕದಂತಹ ಹನಿಗಳ ಆರ್ದ್ರತೆ ಬಹುಷಃ ಅರ್ಥವೂ ಆಗಲಾರದು. ಅದರೆಡಿಗಿನ ನನ್ನ ಮೋಹದ ಅರಿವೂ ಆಗಲಾರದು.


ಕೀಲುಕೊಟ್ಟ ಬೊಂಬೆಗಳಂತೆ ದಿನವಿಡಿ ದುಡಿವ ಅನಿವಾರ್ಯತೆಯಿರುವ ಈ ನಗರ ಜೀವನದಲ್ಲಿ ಆಗೊಮ್ಮೆ ಈಗೊಮ್ಮೆ ಬೀಳುವ ತುಂತುರು ಹನಿಗಳು ನನ್ನೊಳಗಿನ ಸುಶುಪ್ತ ಭಾವನೆಗಳನ್ನ ಬಡಿದೆಬ್ಬಿಸುತ್ತವೆ. ರಚ್ಚೆ ಹಿಡಿದ ಚಂಡಿ ಮಗುವಿನಂತೆ ದಿನವಿಡಿ ಪಿರಿಪಿರಿ ಸುರಿಯುತ್ತಲೆ ಇರುತ್ತಿದ್ದ ಊರ ಮಳೆ ಬೆಳಗ್ಗಿನಿಂದ ಸಂಜೆಯವರೆಗೂ ಕಣ್ಣಾಮುಚ್ಚಾಲೆ ಆಡುತ್ತಲೆ ಇರುತ್ತಿದ್ದು ಅಲ್ಲಿನ ಇನ್ನೆಲ್ಲರಂತೆ ನಾನೂ ಬಡ್ಡುಗಟ್ಟಿ ಅದಕ್ಕೆ ಒಗ್ಗಿ ಹೋಗಿದ್ದೆ. ಕೆಲವೊಮ್ಮೆ "ಶನಿಮಳೆ"ಎಂಬ ತಾತ್ಸಾರ ಹುಟ್ಟುತ್ತಿದ್ದರೂ ಸಹ ಅವೆಲ್ಲ ಆ ಕ್ಷಣದ ಪ್ರತಿಕ್ರಿಯೆಗಳಾಗಿರುತ್ತಿದ್ದು ಮರು ಘಳಿಗೆ ಅದು ಸ್ಮೃತಿ ಪಟಲದಿಂದ ಬಿದ್ದ ಅದೆ ಮಳೆಯ ಹನಿಗಳಿಗೆ ಸಿಕ್ಕು ಅಳಿಸಿ ಹೋಗಿರುತ್ತಿತ್ತು.


ಸುಖಾಸುಮ್ಮನೆ ಆಗಾಗ ಸಿಟ್ಟಿಗೆ ಪ್ರೇರೇಪಿಸುತ್ತಿದ್ದರೂ ಸಹ ಇನ್ನೊಮ್ಮೆ ಪ್ರೀತಿಯುಕ್ಕಿಸುತ್ತಿದ್ದ ಈ "Love And Hate" ಸಂಬಂಧ ಅನೇಕ ಕ್ಷುಲ್ಲಕ ಸಂಗತಿಗಳೊಂದಿಗೆ ತಳುಕು ಹಾಕಿಕೊಂಡಿದ್ದರೂ ಅದರ ಮೌಲ್ಯ ನನ್ನ ಪಾಲಿಗೆ ಬೇರಾವುದೆ ಐಶಾರಾಮಿ ಅಮಿಷಗಳಿಗಿಂತಲೂ ಮಿಗಿಲಾಗಿದೆ. ರಬ್ಬರಿನ ಹವಾಯಿ ಚಪ್ಪಲಿಗಳಿಗಿಂತ ಬೆಲೆಬಾಳುವ ಪಾದರಕ್ಷೆಗಳು ಕೇವಲ ಕನಸಾಗಿದ್ದ, ಕೆಲವೆ ಸ್ಥಿತಿವಂತ ಸಹಪಾಠಿಗಳು ಶಾಲೆಯಲ್ಲಿ ಧರಿಸಿ ಮೆರೆಯುತ್ತಿದ್ದ ಪ್ಲಾಸ್ಟಿಕ್ಕಿನ ಅಥವಾ ಚರ್ಮದ ಹೊಳೆವ ಚಪ್ಪಲಿಗಳನ್ನೆ ಆಸೆ ಕಣ್ಗಳಿಂದ ನಿರುಕಿಸುತ್ತಿದ್ದ ಬಾಲ್ಯದ ಆ ದಿನಗಳ ಮಳೆಯ ವ್ಯಾಖ್ಯೆ ಈಗಿನದ್ದಕ್ಕಿಂತ ತೀರ ಭಿನ್ನವಾಗಿತ್ತು. ವರ್ಷಕ್ಕೆ ಸರಿಸುಮಾರು ಒಂಬತ್ತು ತಿಂಗಳ ಅತಿಥಿಯಾಗಿದ್ದ, ಹತ್ತಿರ ಹತ್ತಿರ ಇನ್ನೂರಿಂಚು ವಾರ್ಷಿಕ ದಾಖಲೆಯಿರುತ್ತಿದ್ದ ಸುರಿವ ಜಡಿಮಳೆಯನ್ನ ಹೀರಿಹೀರಿ ನಮ್ಮೂರ ಗದ್ದೆಗಳೆಲ್ಲ ಕೆರೆಯಂತಾಗಿರುತ್ತಿದ್ದವು. ಒಂದೆರಡು ದಿನ ನೇಗಿಲು ಹೂಡಿ ಬೀಜ ಚಲ್ಲಿದರೆ ಸುಲಭವಾಗಿ ಭರ್ಜರಿ ಬೆಳೆ ತೆಗೆಯ ಬಹುದಾದಷ್ಟು ಫಲವತ್ತಾದ ಕೆಸರು ತುಂಬಿಕೊಂಡಿರುತ್ತಿದ್ದ ನಮ್ಮೂರಿನ ರಾಜರಸ್ತೆಗಳಲ್ಲಿ ರಬ್ಬರಿನ ಹವಾಯಿ ಚಪ್ಪಲಿ ತೊಟ್ಟು ಬೆನ್ನಿಗೆ ಚೀಲವನ್ನೇರಿಸಿ ಹೊರಟವರು ಶಾಲೆ ತಲುಪಿ ನೋಡಿಕೊಂಡರೆ ಹಡಿಗೆ ಕೆಸರು ಬೆನ್ನಿಗೆಲ್ಲ ಸಿಡಿದ್ದಿದ್ದನ್ನ ಕಂಡು ಹಾಳು ಮಳೆಯ ಈ ಮಸಲತ್ತಿನ ಬಗ್ಗೆ ಸಿಕ್ಕಾಪಟ್ಟೆ ಸಿಟ್ಟು ರುಮ್ಮನೆ ತಲೆಗೇರುತ್ತಿತ್ತು.ಇಷ್ಟಕ್ಕೆ ಸೀಮಿತವಾಗಿರುತ್ತಿರಲಿಲ್ಲ ಕಿಡಿಗೇಡಿ ಮಳೆಯ ಇಂತಹ ಥರೇವಾರಿ ಕಿತಾಪತಿ. ನಮ್ಮ ಬೀದಿಯ ಕಪಿ ಸೈನ್ಯದ ಹಾವಳಿಗಳನ್ನೆಲ್ಲ ಕಿಂಚಿತ್ತೂ ಸಹಿಸದ ಹಿರಿಯರೆಲ್ಲ ರಜಾದಿನಗಳಲ್ಲಿ ಎಲ್ಲರನ್ನೂ ನಿರ್ದಾಕ್ಷಿಣ್ಯವಾಗಿ ಮನೆಯಿಂದ ಹೊರಗಟ್ಟಿ ಪದೆಪದೆ ಕೆಸರನ್ನ ಮನೆಯುದ್ದ ಪಸರಿಸದಂತೆ ಸದಾ ಮುಂಬಾಗಿಲನ್ನ ಜಡಿದಿರುತ್ತಿದ್ದರು. ಆದರೆ ಮಿತಿಮೀರಿದ ತಂಟೆಕೋರತನ ತೋರುತ್ತಿದ್ದ ನಾವೆಲ್ಲ ಕಣ್ಣಮುಚ್ಚಾಲೆ ಆಡುವ ನೆಪದಲ್ಲಿ ಯರ್ಯಾರದೋ ಹಿತ್ತಲು, ಇನ್ಯಾರದೋ ಉಪ್ಪರಿಗೆ, ಮತ್ಯಾರದೋ ಅಟ್ಟ, ಮತ್ತಿನ್ಯಾರದೋ ಹಟ್ಟಿಗಳಲ್ಲಿ ಭೂಗತರಾಗಿ ತಲೆ ಮರೆಸಿಕೊಂಡು - ನಮ್ಮನ್ನು ಹಿಡಿದೆ ತೀರುವ ಘನಂದಾರಿ ಉದ್ದೇಶದಿಂದ ಸರ್ಚ್ ವಾರೆಂಟ್ ಇಲ್ಲದೆಯೆ ಎಲ್ಲೆಂದರಲ್ಲಿ ನುಗ್ಗುವ ನಮ್ಮ ಸ್ಕಾಟ್ ಲ್ಯಾಂಡ್ ಯಾರ್ಡ್ ಸ್ನೇಹಿತರ ಲೂಟಿಯಿಂದ ಹಿರಿಯರ ಮುಂಜಾಗ್ರತಾ ಕ್ರಮಗಳೆಲ್ಲ ವಿಫಲವಾಗುತ್ತಿದ್ದಾಗ ಅವರ ಆಕ್ರೋಶಕ್ಕೆ ತುತ್ತಾಗಿ ಅಡಗುತಾಣಗಳ ಕೊರತೆಯಿಂದ ಪರದಾಡುತ್ತಿದ್ದಾಗ ವರದಂತೆ ಒದಗಿ ಬಂದದ್ದು ನಮ್ಮ ಮನೆ ಹತ್ತಿರವೇ ಇದ್ದ ಒಂದು ಮಳೆನೀರು ಹರಿದು ಹೋಗುವ ಚರಂಡಿಯ ಕೊರಕಲು. ಯುಪಟೋರಿಯಂ ಜಿಗ್ಗು ಬೆಳೆದು ಮರೆಯಾಗಿದ್ದ ಆ ಸ್ಥಳ ನಮಗೆಲ್ಲ ಅಂಡರ್ ಗ್ರೌಂಡಾಗಲು ಎಲ್ಲಾ ರೀತಿಯಿಂದ ಪ್ರಶಸ್ತವಾಗಿದ್ದರೂ ಎಡೆಬಿಡದ ಮಳೆಯಲ್ಲಿ ಅಲ್ಲಿ ಕೂರುವುದು ಅಸಾಧ್ಯವಾಗಿ, ಹಾಗೊಂದು ವೇಳೆ ಕಷ್ಟಪಟ್ಟು ಕೂತರೂ ಅಲ್ಲಿನ ಮೂಲ ನಿವಾಸಿಗಳಾದ ಸೊಳ್ಳೆಗಳ ಅಸಹನೆಗೆ ತುತ್ತಾಗ ಬೇಕಾಗಿರುತ್ತದಾದ್ದರಿಂದ ಕೇಡಿ ಮಳೆಗೆ ಸಹಜವಾಗಿಯೆ ಆಗೆಲ್ಲ ನೊಂದ ನಮ್ಮಂತಹ ನಿರಾಶ್ರಿತರ ಶಾಪಗಳು ಸಲ್ಲುತ್ತಿದ್ದವು. ಹೀಗೆ ಸಿಕ್ಕಿ ಹಾಕಿಕೊಂಡು ಔಟಾದ ಸಂದರ್ಭಗಳಲ್ಲೆಲ್ಲ ಮಳೆಗೆ ಮನಸ್ವಿ ಶಾಪ ಹಾಕಿ ಸಿಟ್ಟು ತಣಿಸಿಕೊಂಡರೂ ಮಳೆ ನಿಂತ ಮರುಕ್ಷಣ ಅಲ್ಲಿಯೆ ಅಡಗಿ ಆಟವನ್ನ ಬಿಟ್ಟಲ್ಲಿಂದಲೆ ಮುಂದುವರೆಸುತ್ತಿದ್ದವು!ಮಳೆಯ ನಿತ್ಯದ ಧಾಳಿಗೆ ಸಿಲುಕಿ ಪಾಚಿಯ ಪದರ ಕಟ್ಟಿಕೊಂಡು ಜಾರುತ್ತಿದ್ದ ಮುರಕಲ್ಲಿನ ಅಂಗಳದಲ್ಲಿ ನಡೆಯಲೆಂದೆ ಹಾಸಿದ್ದ ತೆಂಗಿನ ಮಡಿಲ ಮೇಲೆ ನಡೆಯದೆ ಮಂಗಾಟ ಮಾಡಿ ಜಾರಿ ಬಿದ್ದು ಮೈ-ಕೈ ತರುಚಿದಾಗ ತುಟಿಯುಬ್ಬಿಸಿ ಅಳು ಬರಿಸಿಕೊಂಡದ್ದು, ಮಳೆಯ ಅರ್ಭಟ ಏಕಾಏಕಿ ಹೆಚ್ಚಿದಾಗ ಇನ್ನೂ ದಿನದವಧಿ ಉಳಿದಿದ್ದರೂ ನಡುವಿನಲ್ಲೆ ಶಾಲೆಗೆ ದಿನದ ರಜೆ ಘೋಷಿಸಿದ್ದಾಗ "ಹೋ...." ಎಂದು ಸಾಮೂಹಿಕವಾಗಿ ಕಿರುಚಿಕೊಂಡು ಸಂತೋಷದ ಅತಿರೇಕವನ್ನ ಆಂಗಿಕವಾಗಿಯೂ ಪ್ರಕಟಿಸುತ್ತಾ ಮನೆಯತ್ತ ಪೇರಿ ಕೀಳುತ್ತಿದ್ದುದು, ಮರಳಿ ಮನೆಗೆ ನುಗ್ಗಿದಾಗ ಮಳೆಗಾಲದ ಸಂಜೆಗಳಿಗಷ್ಟೆ ಸೀಮಿತವಾಗಿರುತ್ತಿದ್ದ ಸುಟ್ಟ ಹಲಸಿನ ಬೀಜ- ಹಪ್ಪಳ ಕಟಕರಿಸುತ್ತಿದ್ದುದು, ಆಡ್ಡ ಮಳೆಗೆ ಸೂರಿನ ಸಂದಿಗೊಂದಿಗಳಿಂದ ಸುರಿಯುತ್ತಿದ್ದ ನೀರಿನ ಪರಿಮಾಣಕ್ಕನುಗುಣವಾಗಿ ಇಟ್ಟಿರುತ್ತಿದ್ದ ಚೊಂಬು-ಬೋಗುಣಿ-ಪಾತ್ರೆಗಳಿಂದ ನೀರ ಹೊಡೆತಕ್ಕೆ ಮೂಡುತ್ತಿದ್ದ ಏಕನಾದವನ್ನೂ, ಅದರ ಸ್ವರ ಮಾಧುರ್ಯಕ್ಕೆ ಅಂಗಳದ ಮೂಲೆಯಿಂದಲೆ ಲಯಬದ್ಧವಾದ ಪಕ್ಕವಾದ್ಯದ ಸಾಥ್ ನೀಡುತ್ತಿದ್ದ ಗೋಂಕ್ರ ಕಪ್ಪೆಗಳ ಒಟಗುಡುವಿಕೆಯನ್ನ ಅಮರ ಸಂಗೀತ ಪ್ರೇಮಿಯಂತೆ ಆಸ್ವಾದಿಸುತ್ತಾ ಅರೆನಿಮೀಲಿತ ಕಣ್ಣುಗಳಲ್ಲಿ ಹಗಲು ಕನಸು ಕಾಣುವುದರಲ್ಲೆ ಮುಳುಗಿದ್ದಾಗ ಹಿರಿಯರ್ಯಾರಾದರೂ ತಲೆಗೆ ಮೊಟಕಿದಾಗಲೆ ಅನಿವಾರ್ಯವಾಗಿ ವಾಸ್ತವ ಪ್ರಜ್ಞೆಗೆ ಮರಳುತ್ತಿದ್ದುದು. ಇಂದು ಇವೆಲ್ಲ ಯಾವುದೋ ಕ್ರಿಸ್ತಪೂರ್ವದ ಶಿಲಾಯುಗದಲ್ಲಿಯೆ ಕಳೆದು ಹೋದವೇನೋ ಎಂದೆನಿಸಿ ಮನಸಿಗೆ ಪಿಚ್ಚೆನಿಸುತ್ತದೆ.


ಅಂದು ಶಾಲೆಯ ಹಾದಿಯಲ್ಲಿ ಸಿಗುತ್ತಿದ್ದ ಮಳೆನೀರಿನ ತೋಡಿನಲ್ಲಿ ಮುಗುಡು, ಹಿಂಡು ಹಿಂಡಾಗಿ ತೇಲುವ ಗೊದಮೊಟ್ಟೆಗಳನ್ನ ಹಿಡಿಯುವ ಭರದಲ್ಲಿ ಅದೇ ನೀರಿನಲ್ಲಿ ಎದ್ದೂಬಿದ್ದು ಮೈಯೆಲ್ಲ ಕೆಸರಾದರೂ ಅನುಭವಿಸುತ್ತಿದ್ದ ಆ ದಿನಗಳ ಥ್ರಿಲ್ ಇಂದು ಕೊಂಚವೂ ಇಸ್ತ್ರಿ ಕೆಡದ ಹವಾನಿಯಂತ್ರಿತ ಸ್ಟುಡಿಯೋದೊಳಗೆ ಮೈಕ್ರೋಫೋನಿನೊಂದಿಗೆ ನಡೆಸುವ ಸರಸ ಸಲ್ಲಾಪದಲ್ಲಿ ಸಿಗದೆ ಹೋಗಿ ಪರಮ ನಿರಾಶೆಯಾಗುತ್ತದೆ. ಮಳೆನೀರಿಗೆ ನೆನೆನೆನೆದು ಹುಳವಾಗಿ ಬಿಳುಚಿಕೊಂಡ ಕಾಲು ಬೆರಳ ಸಂದಿಗಳು ನೀಡುತ್ತಿದ್ದ ನವಿರು ತುರಿಕೆಯ ಹಿತ ಕಾಲುಚೀಲ ಹಾಗೂ ಶೂನೊಳಗೆ ಹುದುಗಿ ಬೆಚ್ಚಗಿರುವ ಸುಖದ ಪಾದಕ್ಕೆ ಬೇಕೆಂದರೂ ಸಿಗುತ್ತಿಲ್ಲ. ಆದರೂ ಅಪರೂಪಕ್ಕೊಮ್ಮೆ ಎರಡು ಹನಿ ಬಾನಿನೊಡಲಿಂದ ಕೆಳಗೆ ಸುರಿದಾಗ ಕಿಟಕಿಯ ಮುಂದೆ ಆರಾಮವಾಗಿ ಕುಳಿತು ಮಳೆಯನ್ನೆ ನೋಡುತ್ತಾ ಹಬೆಯಾಡುವ ಚಹದ ಕಪ್ಪನ್ನು ಸಶಬ್ದವಾಗಿ ಗುಟುಕರಿಸುವಾಗ ಹಳೆಯ ನೆನಪುಗಳಲ್ಲಿ ಮನ ಲೀನವಾಗಿ ಪ್ರಫುಲ್ಲವಾಗುತ್ತದೆ.


ಮನೆಯ ತೆರೆದ ಜಗುಲಿಯ ಅಂಚಿನಲ್ಲಿ ಕಂಭವನ್ನ ಬಳಸಿ ನಿಂತು ಮಾಡಿನಿಂದ ಸುರಿಯುತ್ತಿದ್ದ ಮುಗಿಲ ಸ್ವೇದಬಿಂದುಗಳಿಗೆ ಅಂಗೈ ಒಡ್ದುತ್ತಿದ್ದಾಗಲಿನ ಅವರ್ಚನೀಯ ಸುಖದ ಸವಿ ಇಂದು ಇಲ್ಲದಿದ್ದರೂ "ಕುರುಡುಗಣ್ಣಿಗಿಂತ ಮಳ್ಳೆಗಣ್ಣು ಲೇಸು" ಎನ್ನುವ ಅಲ್ಪತೃಪ್ತಿಗೆ ಒಗ್ಗಿ ಹೋಗಿದೆ ಮನಸು. ಹಸಿರ ಹಚ್ಚಡದ ನೆಲ, ಮೋಡದಿಂದ ತುಂಬಿದ ಆಕಾಶ ಇವನ್ನಷ್ಟೆ ನೋಡಿ ಗೊತ್ತಿದ್ದ ನನಗೆ ಆ ದಿನಗಳಲ್ಲಿ ಆನುಭವಕ್ಕೆ ಸಿಗುತ್ತಿದ್ದ ಹೊಸತನ ಈಗ ಮಹಡಿ ಮೇಲಿನ ಜರೋಕದಿಂದ ಕಾಣಸಿಗುವ ಶುಭ್ರ ಬಾನಿನಲ್ಲಿ ಕಸದಂತೆ ಅಲ್ಲಲ್ಲಿ ತೇಲುವ ಅಲ್ಪಸ್ವಲ್ಪ ಮೋಡಗಳನ್ನ ಆಸೆಬುರುಕನಂತೆ ಕಣ್ತುಂಬಿಸಿಕೊಳ್ಳುವಾಗ ಅರಿವಿಗೆ ಬರುತ್ತಿಲ್ಲ. ನನ್ನ ವಾಸದ ಸ್ಥಳದ ಪಕ್ಕದಲ್ಲಿಯೆ ಪೆಡಂಭೂತದಂತೆ ತಲೆಯೆತ್ತುತ್ತಿರುವ ಬಹು ಮಹಡಿ ಕಟ್ಟಡದ ದೆಸೆಯಿಂದ ನನ್ನ ಈ ತುಣುಕು ಆಕಾಶವೂ ಕಾಣೆಯಾಗಿ ಹೋಗಿ ಇನ್ನೇನು ಈ ಕನಿಷ್ಠ ಸುಖವೂ ಮರೀಚಿಕೆಯಾಗಲಿದೆ. ಮನಸು ಖಾಲಿ ಖಾಲಿ. ನನ್ನ ಬಾನ ನೀಲಿಯೆಲ್ಲೋ ಕರಗಿ ಹೋಗಿದೆ.( ಈ ಲೇಖನ ಬರೆದದ್ದು ೨೦೦೪ರ ಮೊತ್ತಮೊದಲನೆಯ ದಿನದಂದು. ಇದು ಅದೇ ತಿಂಗಳು "ಕನ್ನಡಪ್ರಭ"ದ 'ಸಾಪ್ತಾಹಿಕ ಪ್ರಭ'ದಲ್ಲಿ ಆರಂಭವಾಗಿದ್ದ "ಜಗಲಿ" ಅಂಕಣದಲ್ಲಿ ಪ್ರಕಟವೂ ಆಗಿತ್ತು. ಇನ್ಯಾವುದೋ ಪ್ರಕರಣವೊಂದರ ಬಗ್ಗೆ ಪರಿಚಿತ ಅಂಕಣಕಾರರೊಬ್ಬರ ಜೊತೆ ಮಾತನಾಡುವಾಗ ನೆನಪಾಗಿ ಇಲ್ಲಿ ಏರಿದೆ. ಆಗಿನ ಆರಂಭದ ಬರವಣಿಗೆ ಈಗ ಓದುತ್ತಿದ್ದರೆ ತೀರ ಜಾಳುಜಾಳು ಎನಿಸುತ್ತಿದೆ.)

25 July 2013

ವಿಜಯದ ಸಿಹಿ ನೆನಪಿನಲ್ಲಿ ಶೋಕದ ಸೂತಕವೂ ಇದೆ.....

ಕಾರ್ಗಿಲ್‍‍ನಲ್ಲಿ ಜೀವ ತೆತ್ತು ದೇಶದ ಮಾನ ಕಾಯ್ದ ವೀರ ಯೋಧರ ಸ್ಮರಣೆಯ "ವಿಜಯ ದಿವಸ" ಇವತ್ತು. ದೇಶಕ್ಕಾಗಿ ತ್ಯಾಗ ಮಾಡಿದ ಅವರ ಆತ್ಮಗಳಿಗೆ ನಮ್ಮ ನಮ್ರ ನೆನಹುಗಳು ಸಲ್ಲುತ್ತವೆ.


ರೋಡೆ ಇಲ್ಲ!, ಇಳಿ ಅಂದ್ರೆ ರಾಧಿಕ ಇಳಿಯೋದಾದ್ರೂ ಎಲ್ಲಿಗಣ್ಣಾ?!ಕೆರೆಗಳ ಊರಾಗಿದ್ದ ಬೆಂಗಳೂರಿಗೆ ಮತ್ತೆ ಆಳುವ ಮಂದಿಯ ಕೃಪೆಯಿಂದ ಹಳೆಯ ಕಳೆ ಬಂದೈತೆ. ಬಿದ್ದ ಹನಿ ಮಳೆಗೂ ಊರೆಲ್ಲ ಕೆರೆಗಳೆ ಲಕಲಕಿಸುತ್ತೈತೆ. ಕಾರಿನಡಿಗೆ ನಾಯಿ ಕುನ್ನಿ ಬಂದರೆ ಅಯ್ಯೋ ಅನಿಸೋದತ್ಲಾಗಿರಲಿ ಇಲ್ಲಿ ಹಡಗಿನಂತ ಕಾರೊಳಗೆ ಕೂತವನದ್ದೂ ರೋಡಿಗಿಳಿದ ಕೂಡ್ಲೆ ನಾಯಿ ಪಾಡಾಗ್ತೈತಣ್ಣೋ. ಇನ್ನು ಸುಡುಗಾಡು ಬೈಕು ಬಿಡೋರಂತೂ ಆಳುವವರನ್ನ ನಿತ್ಯ "ಮಾತೃಭಾಷೆ"ಯಿಂದಲೆ ಸಿಕ್ಕಸಿಕ್ಕ ಸಿಗ್ನಲ್ನಲ್ಲಿ ಬೈದು ಮುಂದೆ ಸಿಗುವ ಗುಂಡಿಯನ್ನ ಹಾರಕ್ಕೆ ತಮ್ಮ ತಮ್ಮ ಗುಂಡಿಗೆಯನ್ನ ಗಟ್ಟಿ ಮಾಡ್ಕೊಳ್ಳದು ಕಾಣಕ್ ಸಿಗ್ತೈತೆ.


ಇಧಾನಸೌಧದಲ್ಲಿ ರಣ್ಣ, ರಪ್ಪ, ರಯ್ಯ ಯಾರು ಬಂದು ಕುಂತ್ರೂ ನಾವು ನೀವು ದಿನನಿತ್ಯ ಗುಂಡಿಯಿಂದ ಗುಂಡಿಗೆ ಹಾರೋ ತಾಪತ್ರಯ ತಪ್ತೈತೇನಣ್ಣೋ? ಅವ್ರುಗೇನು ಬೇರೆ ಕೇಮೆ ಹೇಳಿ, ಬೇಕಾದಾಗ ಬೇಕಾದ್ ಕಡೆ ಒಂಟೋಗಕ್ಕೆ ಇನ್ನೂ ತನ್ನ ಇಮಾನದ ಡ್ರೈವರ್-ಕ್ಲೀನರ್ ಗಳಿಗೆಲ್ಲ ಸಂಬ್ಳಾ ಕೊಡಕಾಯ್ದೆ ಇದ್ರೂ ಅದೇ ಇಮಾನದ ಚಂದುಳ್ಳಿ ವೇಟರ್ ಗಳ ಜ್ಯೊತೆ ಗೋವಾ ಟ್ರಿಪ್ಪಾಕ್ಕೊಂಡು, ಅವ್ರ ಸೊಂಟ ಸವರ್ ಕೊಂಡ್ ಹೊಸವರ್ಸದ ಒಸಾ ಒಸಾ ಕ್ಯಾಲೆಂಡರ್ ಪೊಟೋ ಹೊಡ್ಸಾದ್ರಲ್ಲೆ ಸ್ಯಾನೆ ಬಿಜಿಯಾಗಿರೋ ಮಲ್ಯ ಸಾಹೆಬ್ರ ಕಂಪಿಣಿ ಬಿಟ್ಟಿರೋ ಎಲಿಕಾಪ್ಟರ್ ಐಯ್ತೆ. ಅಂಗೂ ರಸ್ತೆ ಮ್ಯಾಲೆೋಗ್ಲೇ ಬೇಕಾಯ್ತದೆ ಅನ್ನೋ ದರಿದ್ರ ಬಂದ್ರೆ ಅದ್ಯಾರೋ ಬೀದರ್ ಕಡೆಯ ಕಳ್ಳನನ್ನ "ಮಕ್ಕಳ ಪಕ್ಸ"ದ ಪಕ್ಕ ಬದ್ಮಾಸ್ ಸಾಸ್ಕಾ "ನೈಸಾ"ಗಿ ಕಾಸಿನ "ಏಣಿ" ಮೇಲೆ ನಿಂತೆ ಮಾಡಿಸ್ ಕೊಟ್ಟಿರೋ ಸಿಮೆಂಟ್ ರೋಡಯ್ತೆ. ಇಂಗಾಗಿ ಈ "ತೆನೆ ಒತ್ತ ರೈತ ಮಹಿಳೆ"ಯ ಪಕ್ಸ ಇರ್ಲಿ, ನೀರೆಲ್ಲ ಸೀದೋಗಿರೋ "ಗರಟದ ಪಕ್ಸ"ದವ್ರೆ ಬರ್ಲಿ, ಎಲ್ರೂ "ರೋಡ್ ಮಾಡ್ಕೊಡ್ರಣ್ಣೋ" ಅಂದೇಟಿಗೆ ರಸ್ತೆ ಮೇಲೆ ನಡೆಯೊ ನಮ್ಮ ನಿಂಮ್ಮಂತವ್ರ ಕಿವಿಗೆ ತಂದ್ ಮಡ್ಗಾದು "ಕಮಲ"ದ ಊವನ್ನೆಯ. ಗೆದ್ ಮೇಲೆ ಕೊಡಾದು ತಮ್ಮ ಎಡ "ಕೈ"ನೇಯ. ಎಲೆಕ್ಸನ್ ಆದ್ ಮ್ಯಾಕೆ ತಮ್ಮ ಭವ್ಯ ಭವಿಸ್ಯಕ್ಕೆ ಚೂರೆ ಚೂರು ಉಳಿತಾಯ ಮಾಡ್ಕಳಾದ್ರಲ್ಲಿ ಅವ್ರೆಲ್ಲ ಸ್ಯಾನೆ ಬಿಜಿ ಆಗವ್ರೆ.


ಇನ್ನು "ಕೈ" ಪಾರ್ಟಿ ಸರ್ಕಾರದ ನಮ್ ಸಿದ್ರಾಮಣ್ಣನೋ. ಈಗ ಮಾಡಿರೋ ರೂಪಾಯಿಗೊಂದ್ ಕೇಜಿ ಅಕ್ಕಿಯ "ಅನ್ನಭಾಗ್ಯ" ಕೊಟ್ಟು ತಿಂಗ್ಳಾ ತಿಂಗ್ಳಾ ಅಕ್ಕಿ ತಗೊಳಕ್ಕೆ ಹೋಗವ್ರಿಗೆ ಸ್ಯಾನೆ ಚಿಲ್ರೆ ಪ್ರಾಬ್ಲಂ ಆಗಿ ತಲೆ ಕೆಟ್ ಹೋಗಿ, "ಈ ಕೇಮೆನೆ ಬ್ಯಾಡ ಕಣ್ಲಾ ಬುಡತ್ಲಾಗೆ" ಅಂತ ಈಗ ರೇಸನ್ ಕಾರ್ಡ್ ಜೊತೆಗೆ ತಮ್ ತಮ್ಮ ಕ್ರೆಡಿಟ್ ಕಾರ್ಡುನ್ನೂ ಹೊತ್ಕಂಡೆ ಸೊಸೈಟಿಗೆ ಓಗೋ ಅಂಗ್ ಮಾಡೈತೆ. ಇದೂ ಸಾಲ್ದು ಅಮ್ತಾ ಆಲು ಕರ್ದು ಸೊಸೈಟಿಗೆ ಆಕೋವ್ರಿಗೆ ನಾಕ್ ನಾಕ್ ರೂಪಾಯಿ ಪ್ರೋತ್ಸಾಹ ಧನ ಕೊಟ್ಟು, ಆ ಆಸೆಗೆ ಅವ್ರು- ಅದೇ ನಂ ಅಳ್ಳಿ ರೈತ್ರು ಎರ್ರಾಬಿರ್ರಿ ದನಿನ್ ಕೆಚ್ಲು ಇಂಡಿ ಇಪ್ಪೆ ಮಾಡಿ ತಂದ್ ಸೊಸೈಟಿಲಿ ಸುರ್ಯೋ ಆಲನ್ನ ಊರ್ ತುಂಬ ಮಕ್ಳಿಗೆ ಪುಕ್ಸಟ್ಟೆ ಕುಡ್ಸೋ "ಆಲು ಭಾಗ್ಯ" ಮಾಡೆ ಬುಡ್ತೀನಿ ಅಮ್ತಾ ಟೊಂಕ ಕಟ್ಕಂಡು ನಿಂತಯ್ತೆ. ಅಂಗೆ ಅದೆ ಮಕ್ಳ ಅಲ್ಕಾ ಅಪ್ಪಂದ್ರುಗೆ ಒಂದು "ಅಲ್ಕೋ ಆಲು ಭಾಗ್ಯ"ನೂ ಮಾಡಿಸಿಕೊಟ್ರೆ ಈಯಪ್ಪನ್ ಗಂಟೇನಾದ್ರೂ ಸವೀತೈತಾ ಅಂತ!


ಅದೆಲ್ಲ ಆಳಾಗಿ ಓಗ್ಲಿ ಒಂದೀಟು ಕೇಂದ್ರ ಸರ್ಕಾರನಾರೂ ಕಣ್ ಬಿಟ್ ನೋಡ್ತೈತಾ ಅಂತ ತಿಥಿ ಮನೆ ಮುಂದೆ ಬರಗೆಟ್ಟು ಕೂತ ಕಾಗೆ ತರ ಬಾಯ್ ಬಾಯ್ ಬುಟ್ಕೊಂಡು ಕಾದ್ರೆ ಆ ಒಟ್ಟೆ ತುಂಬಿದ್ ಜನ್ಗೊಳು ದಿನಕೊಂದೀಟು ರೇಟ್ ಜಾಸ್ತಿ ಮಾಡಿ ಇದೇ "ಪೆಟ್ರೋಲು ಭಾಗ್ಯ" ಕಣ್ರಯ್ಯ ಅಂತ ನಮ್ಮೆಲ್ರ ಕಿವಿ ಮೇಲೆ ನಿತ್ಯ ಒಸಾ ಒಸಾ ಊ ಇಡ್ತವ್ರೆ. ಇತ್ಲಾಗೆ ರೋಡೂ ಇಲ್ಲ- ಅತ್ಲಾಗೆ ಇರೋಬರೋ ಕಾಸೆಲ್ಲ ಪೆಟ್ರೋಲಿಗೆ ಖರ್ಚಾಗಿ ವಾರಕ್ಕೊಂದಪ ಬಾಡೂ ಇಲ್ಲ. ನಮುಗ್ ಬಂದ ದುರ್ಗತಿ ಯಾರ್ಗೂ ಬರ್ಬಾರ್ದಪ್ಪ ಸಿವ್ನೇ. ಯಣ್ಣೋ ಸಿದ್ರಾಮಣ್ಣೊ "ಹುಂಡಿ" ಹಂಚಾದು ಆಮ್ಯಾಕೆ, ಮೊದ್ಲು "ಗುಂಡಿ" ಮುಚ್ಸಿ ಪುಣ್ಯಾ ಕಟ್ಕೊಳ್ಳಣ್ಣೊ.

24 July 2013

ಸಿದ್ಧರಾಮನ "ಹುಂಡಿ"ಗೊಂದು ಮನವಿ.....
'ಅಮೇರಿಕಾಗೆ ಅದ್ಯಾರನ್ನೋ "ಬರಾಕ್" ಬುಡಬ್ಯಾಡಿ' ಅಂತ ಅದುನ್ನೇನೋ ಜಾಗತಿಕ ಸಮಸ್ಯೆ ಅನ್ನೋ ಹಂಗೆ ಕಂಠ ಹರಕೊಂಡು ಕಿರುಚುತ್ತಾ ಅಂಗಿ ಹರಕೊಂಡು ಓಬಮ್ಮನ ಪೋಜು ಕೊಡುತ್ತಿರುವ ರಾಜಕಾರಣಿಗಳಿಗೆ ನಮ್ಮ ರಸ್ತೆಗಳಿಗೆ ಅಮರಿಕೊಂಡಿರೋ ಖಾಯಿಲೆ ಕಾಣಿಸೋದು ಯಾವಾಗ?
"ನನ್ನ ಕಾರಿನ ಚಕ್ರದಡಿಗೆ ನಾಯಿ ಕುನ್ನಿ ಬಂದ್ರೆ ಬೇಜಾರಾಗ್ದಿರ್ತದಾ?" ಅನ್ನುವ ಶ್ವಾನಪ್ರೇಮಿ ಮ್ಯಾಡಿ ಬಟ್ ನಾಟ್ ಇಂದ್ರಾ ಉರುಫ್ "ನರಿ"ಇಂದ್ರ ಇಂತಾ ರಸ್ತೆಲೆಲ್ಲಾದರೂ ಕಾರಲ್ಲಿ ಓಡ್ಯಾಡಿದ ದಾಖಲೆಗಳಿವೆಯ?

ಕಂಡ ಕಂಡವರಿಗೆ "ಕೈ" ಕೊಡುವ ಕೆಟ್ಟದಾದ ಹಳೆಯ ಚಾಳಿಯಿರುವ ಪಕ್ಸದವರ ಸರಕಾರದಲ್ಲಿ, ಪಿತೃಪಕ್ಷದ ಕಾಗೆಗಳಂತೆ ಮೇಯ್ದು ಕೊಬ್ಬಿ ಸೊಕ್ಕಿರುವ ಕೆಸರಿನ ಹೂ ಪಕ್ಸದ ಪುರಪಿತೃಗಳ ದರ್ಬಾರು ಕಾಣುತ್ತಿರೋ ಟೋಪನ್ ಕಿಸ್ನಣ್ಣನ "ಸಿಂಗಾಪುರ"ದಲ್ಲಿ ಇಲ್ಲದಿರೋ ರೋಡಿಗೆ ರೋಡು ಟ್ಯಾಕ್ಸು ಕಟ್ಟಿ ಕಟ್ಟಿ ಹೈರಾಣಾಗೋ ಕರ್ಮಕ್ಕೆ ಕೊನೆಯಾವಾಗಣ್ಣ?

"ಅನ್ನಭಾಗ್ಯ" ಕರುಣಿಸಿದ್ದಕ್ಕೆ ಸ್ಯಾನೆ ತ್ಯಾಂಕ್ಸ್ ಕಣಣ್ಣೋ, ರುಪಾಯ್ಗೆ ಸೇರು ಸಿಕ್ಕ ಅಕ್ಕಿಲಿ ಮಾಡಿ ತಿಂದ ಅನ್ನ ಅರುಗೊ ಮೊದಲೆ ಬೇಧಿಯಾಗಿ ಓಯ್ತದೆ ಇಂಥಾ ಓಂಪುರಿ ಕೆನ್ನೆ ತರಾ ಇರೋ ರಸ್ತೆಗಳ ಮ್ಯಾಲೆ ಒಂದ್ಸಲ ಓಡ್ಯಾಡಿದ್ರೆ. ಬ್ಯಾಗ ಇನ್ನದ್ರೂ "ರಸ್ತೆ ಭಾಗ್ಯ"ನೂ ಕರುಣಿಸಿ ಪುಣ್ಯ ಕಟ್ಕಳ್ಳಪ್ಪ ಅಣ್ಣಾ ಸಿದ್ರಾಮಣ್ನ...


ಸಗಣಿ ಸಾರಿಸಿದ ಹಂಗೆ ಟಾರು ಬಳಿದು ಸ"ಗಣಿ"ಯ ರುಚಿಕಂಡ ಆಳುವ ಖದೀಮರು ನಿತ್ಯ ನಮ್ಮೂರಿನ ರಾಜರಸ್ತೆಗಳ  ಮುಂಡಾಮೋಚುತ್ತಿದ್ದರೂ ಯಾರೂ ಕೇಳೋರೆ ಇಲ್ಲವಾಯ್ತಲ್ಲೋ ಸಿವನೆ.

21 July 2013

ಕೆಲವು ಭಾವಗಳು ಮಾತಿಗಿಂತ ಮೌನಗಳಲ್ಲೆ ಅತ್ಯಾಪ್ತ....

ಹೇಳಲಾಗದ ಹಲವು ಪಿಸುಮಾತುಗಳು
ಎದೆಯಾಳದ ಮೌನದಲ್ಲಿ ಹಾಗೆಯೆ ಉಳಿದು ಹೋಗಿ....
ಹಿಡಿತ ಮೀರಿದ ಕಂಬನಿಯ
ಅವ್ಯಕ್ತ ಧಾರೆಗಳಾಗಿ ಆಗಾಗ ಕಾಡುತ್ತವೆ,
ಕಣ್ಣ ಖಜಾನೆಗೆ ಬಿದ್ದ
ತುಂಬಲಾಗದ ತೂತಿನಿಂದ ಹೊರ ಸುರಿದದ್ದು....
ಕೇವಲ ನೋವಿನ ಹನಿಗಳ ಸಿರಿ ಸಂಪತ್ತು/
ಸದಾ ನೆನಪುಗಳ ಕಿರುಬೆರಳ ಆಸರೆಯಲ್ಲಿ
ಅಪರಿಚಿತ ಹಾದಿಯುದ್ದ ಹೆಜ್ಜೆ ಹಾಕುವಾಗ....
ನೀನೂ ಸಹ ಅಪ್ರತ್ಯಕ್ಷವಾಗಿ ಜೊತೆಯಾಗಿರುವಾಗ
ನನಗೆ ಅಂತ ಆತಂಕವೇನಿಲ್ಲ,
ಮತ್ತೆ ಹೊರಟಲ್ಲಿಗೆ
ಮರಳಿ ಬರುವ ಹಾದಿಯಂಚಿನಲ್ಲಿ....
ಕೈ ಬೀಸುತ್ತ ಹಾಗೆಯೆ ಹೋಗುವಾಗಿನಂತೆ
ನೀ ನಿಂತಿರಲಿ ಅನ್ನುವ ಮನದ ದುರಾಸೆಗೆ ಮದ್ದಿಲ್ಲ.//


ದಿನದ ತುಂಬಿದ ತೊರೆ
ನಿತ್ಯ ನೋವಿನ ನೆರೆ ಹೊತ್ತೆ ಸೊಕ್ಕಿ ಹರಿಯುವಾಗ....
ಹುಟ್ಟಿದ ಹೊಸ ಹಗಲಿನ ಹೆಗಲಿನ ಮೇಲೂ
ನಾಳೆಯ ದಡವನ್ನ ಮುಟ್ಟಿಸುವ ಘನ ಹೊಣೆಯಿದೆ,
ಜೋರು ಮಳೆಯ ಹಿನ್ನೆಲೆ ಸಂಗೀತದ ಜೊತೆಗೆ
ಸ್ವಪ್ನಗಳ ಸಾದೃಶ್ಯವಿಲ್ಲದಿರುತ್ತಿದ್ದರೆ
ಕಳೆದಿರುಳು ಇಷ್ಟೊಂದು ಆಪ್ತವಾಗುತ್ತಿರಲಿಲ್ಲ/
ಕಾರಣವಿಲ್ಲದೆ ಹುಟ್ಟುವ ಕನಸಿನ ಚುಂಗು ಹಿಡಿದು
ಆಶಾವಾದ ಹೊತ್ತು ಸಾಗುವ ಮನಸಿಗೆ....
ನಿರೀಕ್ಷೆಯ ಹೋಗಿ ಮುಟ್ಟುವ ಗುರಿಯಿದೆ,
ಕೂಡಿಟ್ಟ ಕನಸುಗಳನ್ನೆಲ್ಲ ಮುಕ್ತವಾಗಿಸಿ
ಮನ ಬಂಧನದಿಂದಾಚೆಗೆ ಒಂದೊಂದಾಗಿ ಹಾರಿ ಬಿಟ್ಟಾಗ....
ಅರಳೆಯ ಪುಂಜದಂತೆ ಅವು ಸ್ವಚ್ಛಂದವಾಗಿ ತೇಲುವುದನ್ನ
ಕಾಣುವುದೆ ಒಂದು ವಿಮುಕ್ತ ಸುಖ.//


ಮೌನವನ್ನೆ ಹೊದ್ದ ಭೂಮಿಯ ಮೇಲೆ
ವಾಚಾಳಿ ಮೋಡದ ಕೀಟಲೆಯ ದಾಳಿ....
ಸುರಿಯುತ್ತಿರೋ ಪ್ರತಿ ಹನಿ ಮಳೆ,
ಗಾಳಿಗಿಂತ ನೀರಿನ ತೂಕ ಜಾಸ್ತಿ
ಆದರೂ ಒಲವಲ್ಲಿ ಹೃದಯ ಹಗುರಾಗಿ ತೇಲುವಂತಾದಾಗ....
ಮೋಡದೊಳಗಿನ ಘನ ಹನಿಗಳೂ
ಆಗಿ ಹೋಗುತಾವೆ ಮರುತನೆದೆಯ ಆಸ್ತಿ/
ಕಾತರದ ಕರೆಗಾಗಿ ಆತರಿಸುವ
ಮನದ ಮೂಲೆಯಲ್ಲಿ....
ಮೌನದ ಸಾಮ್ರಾಜ್ಯ ಚಿರವಾಗಿ ಮನೆ ಮಾಡಿದೆ,
ಮೋಹಕ ಸ್ವಪ್ನಗಳಿಗೆ ರಹದಾರಿಯಾಗುವ
ಕತ್ತಲ ದಾರಿಯ ಹೊರಳಲ್ಲಿ....
ಅನಾಥ ಕನಸೊಂದು
ಯಾರೋ ಆಪ್ತರ ಹಾದಿಯನ್ನೆ ಹಗಲಿರುಳೂ ಕಾಯುತ್ತಿದೆ.//


ಗಾಳಿಗೆ ತೊನರಿ ಕಟ್ಟಕಡೆಯ ಹನಿಯನ್ನುದುರಿಸಿ
ಚಿಂತಾಮುಕ್ತವಾದ ಹಸಿರೆಲೆಯ ಹೃದಯಕ್ಕೆ....
ಆ ನೀರಹನಿಯ ತಂಪು ತುಸು ದಾಟಿದೆ,
ಕವನದ ಕಚ್ಚಾ ಸಾಲುಗಳಲ್ಲಿ
ಕಳೆದು ಹೋಗುವ ಮಧುರಭಾವಗಳಿಗೆ ಮನ ಮಿಡಿದಾಗಲೆಲ್ಲ....
ಒಂಥರಾ ಮಳೆಯಲ್ಲಿ ಬೆತ್ತಲೆ ತೋಯ್ದಂತ ಆಹ್ಲಾದ ಉಕ್ಕುತ್ತದೆ/
ನೋವಿನ ಹನಿಗಳೆಲ್ಲ
ನಯನಗಳಲ್ಲಿ ಮಡುಗಟ್ಟಿ....
ಮನಸೊಳಗೆ ಮುದುಡಿದಾಗ ಸ್ವಪ್ನ ಸುಮಗಳ ಬುಟ್ಟಿ
ಸಂಕಟ ಮಾತ್ರ ಬಾಳಿನುದ್ದ ಗಟ್ಟಿ,
ಕರಗಿ ಕರಗಿ ನೀರಾಗಿ ಮನದ ದುಗುಡವೆಲ್ಲ
ಹರಿದು ಹೋದ ಮೇಲೂ....
ನೋವಿನ ಕೊನೆ ಹನಿ ಮನ ಮರದ ಕೊಂಬೆಯಿಂದ
ಇನ್ನೂ ಎಡೆಬಿಡದೆ ತೊಟ್ಟಿಕ್ಕುತ್ತಿದೆ.//

19 July 2013

ಮನದ ಮೌನದಾಲಾಪ.....

ಎಡೆಬಿಡದೆ ಆಗಿನಿಂದ ಹನಿಯುತ್ತಿರುವ
ಮಳೆಯ ದನಿಯಲ್ಲಿ ವಿವರಿಸಲಾಗದ ಇಂಪಿದೆ....
ನೆಲವ ಮುದ್ದಿಸುವಂತೆ ಸುರಿಯುತ್ತಿರುವ
ಅದರ ಹನಿಹನಿಯಲ್ಲೂ ಬಚ್ಚಿಟ್ಟ ನಿರ್ವಾಜ್ಯ ಒಲವಿನ ತಂಪಿದೆ,
ಕರಗಿದ ಕಪ್ಪು ಮೋಡಗಳು
ಸುರಿಸಿದ್ದು ಸಂಕಟದ ಹನಿಗಳನ್ನೋ....
ಇಲ್ಲಾ ಅವು ಸಂತಸದ್ದೋ?
ಅನ್ನುವ ನಸು ಗೊಂದಲ ತುಸು ಜಾರಿಯಲ್ಲಿದೆ/
ಹೀಗೆ ನಾ ಕೂತು ಮನದ ಆಲಾಪಗಳನ್ನೆಲ್ಲ
ನನ್ನ ಪಾಡಿಗೆ ನಾನೆ....
ಯಾರ ಅನುಮತಿಗೂ ಕಾಯದೆ ಹಾಡುತ್ತಿರುತ್ತೇನೆ,
ನೀನೂ ಯಾರಿಲ್ಲದ ಸಂಜೆಗಳ ಒಂಟಿತನದಲ್ಲಿ
ಇವನ್ನ ಎದೆತುಂಬಿಕೊಳ್ಳುತ್ತಿರು.....
ಹೀಗೆ ಸಮಯ ಸುಮ್ಮನೆ ಸರಿದು ಹೋಗಲಿ.//


ನೆನಪಿನ ನಾವೆಯೇರಿ ಕುಳಿತ ಮೇಲೆ
ನೆಮ್ಮದಿಯ ತೀರವನ್ನ ಹೋಗಿ ಸೇರಿಯೇ ತೀರುವ....
ಖಚಿತ ಆಶಾವಾದ ಖಂಡಿತ ಇರೋದಿಲ್ಲ,
ಒಳಗಿನ ಗುಟ್ಟು ಬಿಟ್ಟು ಕೊಡದೆ
ಅತಿ ಸಹಜವಾಗಿ ಕೊನೆಯ ಕ್ಷಣದವರೆಗೂ....
ನೀನಿತ್ತಿದ್ದ ಒಂದಾಗಿ ನಡೆವ ಅತ್ಯದ್ಭುತ ನಟನೆಗೆ
ನಿನ್ನ ಹೊರತು ಈ ಇಡೀ ಜಗತ್ತಿನಲ್ಲಿ ಇನ್ಯಾರೂ ಸರಿಸಾಟಿಯಾಗಲಾರರು/
ಅದರ ಹನಿ ಅರಿವಿಲ್ಲದೆ ಮೂಕ ಪಶುವಿನಂತೆ
ಅನುಗಾಲ ನಿನ್ನ ನಾ ನಂಬಿದ್ದೆ....
ಈಗಲೂ ಆ ಜೊಳ್ಳು ನಂಬಿಕೆಯ ಆಸರೆಯಲ್ಲಿಯೆ
ಬಾಳು ಇನ್ನೂ ಸವೆಯುತ್ತಿದೆ,
ಕಾಗದದ ದೋಣಿಗಾದರೂ ಕೆಲಕಾಲ
ಒಲವ ಪ್ರವಾಹದಲ್ಲಿ ತೇಲುವ ಭಾಗ್ಯವಿರುತ್ತದೆ....
ಆದರೆ ಪಾಪಿ ನನ್ನದು ಅದಕ್ಕಿಂತ ತುಸು ಕಡಿಮೆ.//


ಮತ್ತರಳಿದ ಬೆಳಕಿನ ಸುಮದ ಸಂಭ್ರಮದಲ್ಲಿ
ಅದೇಕೋ ಬಯಸಿದರೂ ಭಾಗಿಯಾಗಲಾಗುತ್ತಿಲ್ಲ....
ಒಳಗಿನ ಕಾಡುವ ಸಂಕಟವೆ
ಅದಕ್ಕೆ ನೇರ ಕಾರಣ ಅಲ್ಲವಾ?,
ಅಗ್ಗದ ಅಮಿಷಗಳಿಗೆ ಬಲಿಯಾಗದಿರಲು
ಮೌನಿ ಮನಕ್ಕೆ ತನ್ನದೆ ಆದ....
ಖಾಸಾ ಕಾರಣಗಳಿವೆ/
ಕರಗಿದ ಕನಸಿನ ಕುದುರೆಯ ಬೆನ್ನೇರಿ
ಕಣ್ಣೀರಾಗುವ ಮಾಸದ ಮೌನಕ್ಕೆ....
ಸುಮ್ಮನೆ ಸರಿದ ಕಾಲದ
ಯಾವುದೇ ಪರಿವೆಯಿಲ್ಲ,
ತೊಳೆದು ಹೋದ ಕಾಡಿಗೆಯ ಕಪ್ಪು ಕಲೆಗಳು ಮಾತ್ರ
ಸ್ವಪ್ನಗಳ ಸಾವಿನ ಕುರುಹಾಗಿ....
ಕೆನ್ನೆಯ ಮೇಲೆ
ಹಾಗೆಯೆ ಉಳಿದುಕೊಂಡಿವೆ.//


ಪ್ರತಿಬಿಂಬದ ಮೂಲ ಸೆಲೆಯೇ ಮಂಕಾಗಿರುವಾಗ
ಬಾಳು ಒಂದು ಬರ್ಬರ ಕಥೆಯಷ್ಟೆ ಮತ್ತಿನ್ನೇನಿಲ್ಲ....
ಪ್ರಮಾಣಿಸಿ ನೋಡಿ ಬೇಕಾದರೆ
ಪ್ರಾಮಾಣಿಕ ಸ್ಪಂದನಕ್ಕೆ ಸಂಕಟ ಎಂದಿಗೂ ತಪ್ಪದು,
ನಿರೀಕ್ಷೆಗಳು ಅಲ್ಪವಾಗಿದ್ದಾಗಲೆ
ಅದರ ಅಸಲು ಹಕ್ಕುದಾರರಿಗೆ....
ಅದೆಂದೂ ದಕ್ಕದು/
ಕದಡಿದ ಮೌನ ಸರೋವರದಲ್ಲೆದ್ದದ್ದು
ಕೇವಲ ಈಡೇರದ ಮನಸಿನ ಆಸೆಗಳ ರಾಡಿ.....
ತಂತಿ ಹರಿದ ವೀಣೆಗೆ ಮತ್ತದನ್ನ ಸುರಿದು
ನಾದ ಹೊಮ್ಮಿಸಬಹುದು....
ತಂತಿಯೇ ಇಲ್ಲದಂತಾಗ ಮಾತ್ರ
ಕಡೆಯವರೆಗೂ ಮಿಡಿಯುವ ಭಾಗ್ಯವಿಲ್ಲ.//

15 July 2013

ನೋವ ನಡುಗಡಲಲ್ಲಿ ತೂತು ನಾವೆಯ ಲಂಗರು....

ಕನಸ ಹಾದಿಯುದ್ದ ಜೊತೆಯಿಲ್ಲದ ಒಂಟಿತನದ ಕತ್ತಲೆ
ಭಾವ ವಿಕಾರಕ್ಕೆಡೆಯಿಲ್ಲದಿದ್ದರೂ....
ಮರುಳ ಮನ ಜೀವನ ಪೂರ್ತಿ ಬರಿ ಬೆತ್ತಲೆ,
ಗೋರಿ ರಾಶಿ ಹಾಕಿದ ಸ್ವಪ್ನಗಳಲ್ಲೆಲ್ಲ
ಹಳೆಯ ಹೊಂಗಸಿನ ಕುರುಹು....
ಸೋತ ಸಂಕಟದಲ್ಲೂ ಮನದ್ದು
ಮಾಸದ ಸಂತಸದ ನಿರಂತರ ಸೋಗು/
ಕೆಲವಾದರೂ ಸಾರಿ ಮೌನಕ್ಕೆ
ನೆನಪ ಮಾತುಗಳು ಸೋಕಿರಲೇಬೇಕು....
ಅದರೆದೆಯೊಳಗೂ ಸವಿ ಸ್ವಪ್ನಗಳ ಅಲೆ
ಹಾದು ತಾಕಿರಲೇಬೇಕು,
ಗಾಳಿಗೆ ಮೋಡವಿತ್ತ ಸ್ವಚ್ಛಂದ ಸಲುಗೆ
ಹಾಕಿದೆ ನೆಲದೆದೆಯ ಒಡಕಿನ ಸಾಲಿನುದ್ದ....
ಹನಿ ಹನಿಗಳ ತಂಪನೆ ಒಲವಿನ ಬೆಸುಗೆ.//


ಗಲಿಬಿಲಿಯ ಸರಹೊತ್ತಿನಲ್ಲಿ ಸುರಿಮಳೆಯೆ
ಸರಿಯಾದ ಸಾಂತ್ವಾನ.....
ಮೂಕವಾದ ನನ್ನ ಮನಸ
ಗಾನವಾಗಿ ಹೊಮ್ಮಿದ ನೀನು,
ನನ್ನೊಳಗಿನ ಮೌನದೊಳಗೂ
ಮಾತಾಗಿಯೆ ಇರುವುದು ನಿಜವಲ್ಲವೇನು?/
ನೆನ್ನೆಯ ನೆನಪಿನ ನಡುವಲ್ಲಿ
ನಾಳೆಯ ಕನಸೆ ಇಂದಿನ ಬಾಳು....
ಮಳೆಯ ತೆರೆಯಾಚೆ ಹುದುಗಿದೆ
ಸಂತಸಗಳ ಗುಚ್ಛ ಹೊತ್ತ ಬಾನು,
ಸಹವಾಸ ದೋಷ ಒಲವ ಹಿಮಮಣಿಯ ಸ್ಪರ್ಶ
ನೆನಪುಗಳೊಂದು ನಿರಂತರ ಬಿಟ್ಟಿಲಾಗದ ಗೀಳು.//


ಬೀಸಿ ನಿರಾಕರಣೆಯ ಕಲ್ಲೊಗೆದರೂ
ಒಡೆಯದ ಗಾಜು ಮಾನಗೆಟ್ಟ ಭಂಡ ಮನ....
ಅದಕ್ಕೆ ಮತ್ತೆ ಮತ್ತೆ
ಹಳೆಯ ಪ್ರೀತಿಯ ಹಂಬಲದ್ದೆ ಅನುದಿನದ ಧ್ಯಾನ,
ನೋವಿನ ತರಂಗಗಳು
ಸಂಕಟದ ಕಡಲ ಅಲೆಯಲೆಯಲ್ಲೂ ಇವೆ....
ಪಾಪಿ ಮನಕ್ಕೆ ಹಳೆಯ ನೆನಪುಗಳನ್ನ
ಕೆರೆದುಕೊಳ್ಳುವ ಕೊನೆಗಾಣದ ಅನುಗಾಲದ ನವೆ/
ನೆಲೆಗಾಣದೆ ನಡುಗಡಲಲ್ಲಿ ಕೆಟ್ಟು ನಿಂತ
ತಳ ತೂತುಬಿದ್ದ ಹಾಯಿದೋಣಿ ಮನ....
ಮತ್ತೆ ಒಲವಿನ ಸುರಕ್ಷಿತ ದಡ ಮುಟ್ಟಿಸಬಲ್ಲ
ನಿನ್ನ ನೆನಪಿನ ತಂಗಾಳಿ ಈಗಲಾದರೂ ಬೀಸಬಾರದ?,
ಸುಲಭ ಗಣಿತದಲ್ಲಿ ಕೂಡಲಾಗದ
ಕ್ಲಿಷ್ಟ ಲೆಕ್ಖದಲ್ಲಿ ಕಳೆಯಲಾಗದ....
ಅನುಬಂಧವ ನಿರ್ಮಲ ಪ್ರೀತಿಯೆನ್ನಲಡ್ಡಿಯಿಲ್ಲ.//


ಹೂ ಅರಳಿದ ಮೇಲೆ ಪರಾಗದ ಸ್ಪರ್ಶ
ಖಂಡಿತ ಖಾತ್ರಿ....
ಚಿತ್ತಾರದ ಚಿಟ್ಟೆಯೆ ಕಾಡ ಬೇಕಂತೇನಿಲ್ಲ
ನಿರ್ಭಾಗ್ಯ ಪತಂಗ ಸೋಕಿದರೂ ಸಾಕು ಈ ರಾತ್ರಿ,
ಕಾಲ ಸರಿವ ವೇಗದ ಎದುರು
ಬದುಕಿನ ಬಾಕಿ ದೊಂಬರಾಟಗಳೆಲ್ಲ ಬರೀ ಗೌಣ/
ನಿನ್ನ ಕನಸಿನ ಚೂರುಗಳೆಲ್ಲಾದರೂ ಬಿದ್ದಿರೋದು
ಕಸವ ಸೇರಿ ಹೋಗೀತು ಅಂತ....
ನಾನಿನ್ನೂ ಮನದ ಒಳಮನೆಯನ್ನ
ನೀ ಬಿಟ್ಟು ಹೋದ ಮೇಲೆ ತುಸುವೂ ಗುಡಿಸಿಯೇ ಇಲ್ಲ,
ಕೊಳವಾದ ಕಣ್ಣ ಕೆರೆಯೆದೆಯ ನಿರಾಸೆಯ ಕೆಸರಲ್ಲೂ
ಕನಸ ಕೆಂದಾವರೆ ಮತ್ತರಳೀತು....
ಮತ್ತೆ ಮೌನದ ಸುಖ
ಮಾತಿನ ಮಹಲಿನಲ್ಲಿ ಅನುಮತಿ ಕೋರಿ ಮರಳೀತು.//

09 July 2013

ಏಕಾಂತ ಕೋಟೆಗೆ ಕನ್ನ ಕೊರೆದ ನೆನಪುಗಳ ಜೊತೆಗೆ ಕಂಬನಿ ಝರಿಯ ನಿನಾದವಿದೆ....

ನಲಿವಿನ ನೌಕೆ ಅನಿರೀಕ್ಷಿತವಾಗಿ ನಡುಗಡಲಲ್ಲಿ
ಮುಳುಗಿದ್ದಕ್ಕೆ ಖಂಡಿತವಾಗಿಯೂ ಎಂದಿಗೂ ಬೇಸರವಿಲ್ಲ,
ಆದರೆ ನೀನೆ ಖುದ್ದು ಮುಂದೆ ನಿಂತು ಅದನ್ನ ಮುಳುಗಿಸಿದೆ....
ಅಲ್ಲದೆ ಅದು ಮುಳುಗುವ ಚಂದವನ್ನ ಮೂರನೆಯವರೊಂದಿಗೆ ನೋಡಿ ಆಸ್ವಾದಿಸಿದೆ
ಅನ್ನುವ ಸಂಕಟ ಮಾತ್ರ ಒಡಲ ಉರಿಸಿ ನಿರಂತರ ನನ್ನ ಕೊಲ್ಲುತ್ತಿದೆ,
ಅದೆಷ್ಟೆ ಶ್ರುತಿ ಮಾಡಿದರೂ ಸಂತಸದ ಸಾಲುಗಳಿಗೆ
ಬಾಳ ರಾಗ ಹೊಂದುತ್ತಿಲ್ಲ....
ಉದ್ದಕ್ಕೂ ಸಾಂಗತ್ಯ ನೀಡುತ್ತಾ ಜೊತೆಯಾಗಿರೋದು
ಕೇವಲ ಸಂಕಟದ ತಾಳ/
ಅಂತರದ ಸಂಬಂಧದಲ್ಲಿ ಗಾಢತೆ ಕನಸು
ಆಪ್ತ ಭಾವವಿಲ್ಲದಲ್ಲಿ ಮೆರೆಯೋದು
ಕೇವಲ ಮುನಿಸು....
ರಾಗದ ಅನುಗಾಲದ ಸಂಗಾತಿ ತಾಳ
ಅದರ ಸಾಂಗತ್ಯದ ಹೊರತು
ಗಾನ ಒಂದು ಯಾತನೆಯ ಯಾನ,
ಕಡಿದು ನಾನು ಕಟ್ಟಿ ಕಟ್ಟೆ ಹಾಕಿದ್ದು ಅಷ್ಟರಲ್ಲೆ ಇದೆ
ಮೂರು ದಶಕ ಸುಮ್ಮನೆ ಸವೆದೆ ಹೋದವಲ್ಲ ಅನ್ನುವ ವಾಸ್ತವ ನೆನಪಾದಾಗಲೆಲ್ಲ....
ವ್ಯಥೆ ಆವರಿಸಿ ಕಾಡಿದರೂ ನಿರ್ಲಿಪ್ತನಾಗಿ
ಅದನ್ನ ನಿರ್ಲಕ್ಷ್ಯಿಸುವುದು ಭಂಡ ಮನಕ್ಕೆ ಅಭ್ಯಾಸವಾಗಿ ಹೋಗಿದೆ.//


ಕಳ್ಳ ಕನಸು-ಮಳ್ಳ ಮನಸು
ಮೌನ ಒಳಗೆಷ್ಟಿದೆಯೋ....
ಅದರ ಮಾರ್ದವ ಅನುರಣನ
ಹೊರಗೆ ಅಷ್ಟೆ ಇದೆ,
ಉದಾಸೀನದ ಒದ್ದೆ ಕೋಳಿ ಮನಕ್ಕೆ
ಇಂದ್ಯಾಕೋ ತೀರದ ಮೈಗಳ್ಳತನ ಆವರಿಸಿದೆ....
ಜೊತೆಗಿಷ್ಟು ನಿನ್ನ ನೆನಪು!
ತೂಕಡಿಸುವವನಿಗೆ ಸರಿಯಾದ ಹಾಸಿಗೆ ಸಿಕ್ಕಿದೆ?!/
ಜೀವಂತವಿರೋದೊಂದು ಭ್ರಮೆ
ಬಾಳ್ವೆಯೊಂದು ಗುಮಾನಿ....
ನಾಳೆಗಳಲ್ಲಿ ನಿರೀಕ್ಷೆಗಳು ಮಾತ್ರ ಜೀವಂತ,
ಮನ ಮೊಗ್ಗಿನ ಅಂತರಾಳದಲ್ಲಿ
ನಿರೀಕ್ಷೆಯ ಸೌಗಂಧ ಲೇಪಿಸಲಾಗಿದೆ....
ಚಿರ ಸೂತಕದ ಮೌನ ಬಾಳಿನಲ್ಲಿ
ನೆಲೆಯಾದ ಮೇಲೆ ಸಂತಸದ ಗಾಳಿಗೆ ಅಲ್ಲೇನು ಕೆಲಸ?.//ಸಾಗುವ ಹಾದಿ ಇನ್ನೂ ಸುದೂರ
ಮನ ಮಾತ್ರ ಬಹು ಭಾರ....
ಸಂಕಟದ ಸರಕನ್ನ ಒಲ್ಲದಿದ್ದರೂ ಹೊರಲೇಬೇಕು ನಿರ್ವಾಹವಿಲ್ಲ
ಜೊತೆಗೆ ನಿನ್ನ ಹನಿ ಕನಸುಗಳ ಚೂರುಗಳಿರಲಿ ನನಗಷ್ಟೆ ಸಾಕು,
ಕನಸಲ್ಲಿ ಒಂದಾಗಿಯೆ ಹೊಕ್ಕು
ಅದರಿಂದ ಹೊರ ಬರುವ ಹಾದಿಯನ್ನ ಮಾತ್ರ....
ಮೊದ ಮೊದಲು ಮಾತ್ರ ನಾ ಮರೆತಂತೆ ನಟಿಸಿದ್ದು ನಿಜ/
ಆತ್ಮದ ನೆರಳಿನಲ್ಲಿ ತೋಯ್ದ
ಮನಸಿನ ಮೇಲೆ ನೆನಪಿನ ಇಬ್ಬನಿ ಕವಿದಿದೆ....
ಗತಿ ಮರೆಯದ ಮನದ ಸ್ವರ
ಮೌನದೊಳಗೆ ಮತ್ತೆ ಮತ್ತೆ ಮಾರ್ದನಿಸುತ್ತಿದೆ,
ಮನದೊಳಗಿನ ಬೆಚ್ಚನೆ ಭಾವನೆಗಳು ಎಂದೆಂದೂ ಮಾರಾಟದ ಸರಕಲ್ಲ
ಆದ್ದರಿಂದಲೆ ನನ್ನೆಲ್ಲ ಭಾವದಲೆಗಳು....
ನಿನ್ನ ತೋಯಿಸಲಷ್ಟೆ ಮೀಸಲು.//


ಆತ್ಮಸಾಕ್ಷಿಯ ಅನುಸಾರ
ಅನುರಣನಗೊಳ್ಳುವ ಒಲವ ಮಾರ್ದನಿಗಳಿಗೆ.....
ಮನ ಶಾಶ್ವತ ಮಾರು ಹೋಗಿರೋದು ಸತ್ಯ,
ಕತ್ತಲ ಕಾನಲ್ಲಿ ಮಿಂಚುವ ಹುಳುವಿನ ಬಾಲದ ಬೆಳಕಿನಂತಹ
ನನ್ನೊಲವಿಗೆ ನಿನ್ನ ಬಾಳ ಬೆಳಗಲಾಗದ ಮೇಲೆ....
ಬೆಲೆಯಾದರೂ ಏನು?/
ಏರಿಳಿತದ ಬಾಳಿಗೆ ಸಂಕಟದ ಸುಂಕ ಕಟ್ಟುವ
ಅಸಹಾಯಕ ಮನ ಸೋತು ಸವೆಯುತ್ತಿದೆ....
ಖಾಲಿ ಮನದ ತುಂಬ ಆವರಿಸಿರುವ
ಮೌನದ ಅನುರಣದಲ್ಲಿ ನಿರಾಸ ಸ್ವಪ್ನಗಳೆಲ್ಲ ಲೀನ,
ಒಲವಲ್ಲಿ ಎಡವಿ ಬಿದ್ದ ಅಮಾಯಕ ಮಗು ಮನ
ಒಲಿದ ಜೀವ ಆದ ಮಾಯದ ಗಾಯವನ್ನೊಮ್ಮೆ....
ನವಿರಾಗಿ ಸವರಿದರಷ್ಟೆ ಸಾಕು
ಇನ್ನೆಲ್ಲಾ ಅದರ ಪಾಲಿಗೆ ಗೌಣ.//

ತೀಡುವ ಗಾಳಿಯ ಕಚಗುಳಿಗೆ ಮನಸೋತ ಹೂಗಳು ನಾಚಿ ಕೆಂಪಾಗಿವೆ....

ಇರುಳಿನ ನಿಶ್ಚಿಂತ ನಿದಿರೆಯಿಲ್ಲ
ಹಗಲಿನ ಹೆಗಲ ಆಸರೆಯಿಲ್ಲ....
ಮನ ಕಾಲಾತೀತ
ಮೌನ ಮಾತ್ರ ಅತ್ಯಾಪ್ತ,
ಹನಿಹನಿ ಕೂಡಿಸಿ ಕುಸಿದು ಕೂತಿದ್ದೇನೆ
ಬಹುಶಃ ಹಾದಿ ತಪ್ಪಿಯಾದರೂ ನೀ ಮರಳಿ ಇಲ್ಲಿ ಬಂದರೆ....
ನಾನಿಲ್ಲದಿದ್ದರೂ ತಣ್ಣಗೆ ದಣಿವಾರಿಸಿಕೊಳ್ಳಲಿಕ್ಕೆ
ನನ್ನ ಕಣ್ಣೀರ ಕೊಳವಾದರೂ ಇಲ್ಲಿರುತ್ತೆ/
ಮೇಲ್ನೋಟಕ್ಕೆ ಸರಿ ಕಂಡದ್ದು ನೈತಿಕವಾಗಿಯೂ ತಪ್ಪಾಗಿ ಕಾಣುತ್ತಿಲ್ಲ
ಆದರೆ ಲೌಕಿಕ ಬಾಳಲ್ಲಿ ನೇರ ನಡೆಗೆ ತೂತು ಕಾಸಿನ ಕಿಮ್ಮತ್ತಿಲ್ಲ....
ಸಂತಸದ ಹಾದಿ ಬಲು ಕಿರಿದು
ಸಂಕಟದ ಹೆದ್ದಾರಿ ಯಾವಾಗಲೂ ಹಿರಿದು,
ಬಾಳಲ್ಲಿ ನೋವಿನ ಘಂಟೆ ನಾದ ಅಸಹನೀಯವಾದಂತೆಲ್ಲ
ನಾಳೆಯ ಕನಸು ಬರಿ ಬರಿದು.//


ಮೊದಲು ಮಂಜೂರಾಗಿದ್ದ ನಿನ್ನ ಒಲವ ಪರವಾನಗಿ
ಮತ್ತೆ ನವೀಕರಣವಾಗಲಿಲ್ಲ....
ನನ್ನ ಕಣ್ನಲ್ಲಿಯೆ ನನ್ನ ಧೀಮಂತಿಕೆ
ಕುಸಿಯದಂತೆ ತಡೆಯಲು ನನ್ನಿಂದಾಗಲೆಯಿಲ್ಲ,
ಸಾವಿನ ಕದ ಮತ್ತೆ ಮೌನವಾಗಿ ತಟ್ಟಲಾ?
ಹೇಳು....
ಇನ್ನೊಮ್ಮೆ ನಿನ್ನ ಒಲವಾಗಿಯೆ ನಾ ಹುಟ್ಟಲಾ?/
ಕೇವಲ ಕಸಿವಿಸಿಯಲ್ಲ
ನೋವಿದೆ....
ಸಂಕಟದ ಸೆಲೆಯಿದೆ,
ಪೊಳ್ಳು ಮಾತಿಗಿಂತ ಮೌನವನ್ನಷ್ಟೆ
ಅಪ್ಪಿಕೊಳ್ಳುವ ತೀರ್ಮಾನಕ್ಕೆ ಅದಕ್ಕೆ ನಾನು ಕಟ್ಟುಬಿದ್ದೆ.//


ಒಳ್ಳೆತನದ ಮನಸಿಗೆ ನಾಟುವ
ನೋವಿನಂಬು ಭಾವದೆಲೆಯನ್ನ ಛಿದ್ರಗೊಳಿಸಿದ ಮೇಲೆ....
ನೊಂದ ಮನದಿಂದ ಹೊರ ಚಲ್ಲುವ
ಕಂಬನಿ ನೆಲಮುಟ್ಟಿದರೆ,
ನೋಯಿಸಿದ ಕುಹಕಿಗಳ ಬಾಳು
ಶಾಪಕ್ಕೆ ತುತ್ತಾಗದೆ ಇದ್ದೀತ?/
ಗೊಂದಲ ನನಗೆ ನೆನ್ನಿನಿರುಳು ಸುರಿದದ್ದು ಜಡಿಮಳೆಯೋ?
ಇಲ್ಲಾ....
ನಿನ್ನ ನೆನಪಲ್ಲಿ ನನ್ನ ಕಣ್ಣುಗಳಲ್ಲಿ
ತೊಟ್ಟಿಕ್ಕುತ್ತಿದ್ದ ಹನಿಗಳ ಛಾಯೆಯೊ?,
ಸರಳ ಲೆಕ್ಖಗಳೆಲ್ಲ ಕ್ಲಿಷ್ಟ ಕಬ್ಬಿಣದ ಕಡಲೆಗಳಾಗುವ ಹೊತ್ತಲ್ಲಿ
ತಪ್ಪು ನನ್ನದೆ ಇರಬಹುದ? ಎನ್ನುವ ಪ್ರಶ್ನೆ....
ಸುಮ್ಮನಾದರೂ ಮನದಲ್ಲಿ ಏಳುತ್ತವೆ.//


ಸಮಯದ ಗಡಿ ಮೀರಿ
ಎಲ್ಲಾ ಸಂಯಮದ ಮಕರಂದ ಹೀರಿ....
ನಿರೀಕ್ಷೆಯ ದುಂಬಿ ಮರಳಿ ಮತ್ತರಳೋ
ಪರವಶ ಸುಮಕ್ಕೆ ಕಾಯುವಂತಿದ್ದರೆ ಅದೆ ಅಸಲು ಪ್ರೀತಿ,
ಗಾಳಿಗೆ ಓಲಾಡಿ ನಾದ ಹೊಮ್ಮಿಸುವ
ಘಂಟೆಯ ಸ್ವಚ್ಛಂದತೆ ಬೆರುಗು ಹುಟ್ಟಿಸುತ್ತದೆ....
ಜೊತೆಗೊಂಚೂರು ಮತ್ಸರವನ್ನೂ ಸಹ/
ತುಮುಲ ಮನದೊಳಗೆ ಅದೇನೆ ಇದ್ದರೂ
ಸಂತಸದ ಸೋಗು ಹಾಕಿಕೊಳ್ಳುವುದರಲ್ಲಿ ನಿಸ್ಸೀಮನಾಗಿ ಹೋಗಿದ್ದೇನೆ....
ತನ್ಮಯನಾಗಿ ಎದೆಯ ಪ್ರತಿಯೊಂದು ಮಿಡಿತಗಳಿಗೂ ಕಿವಿಯಾಗಿ ಕುಳಿತಿದ್ದೇನೆ
ಒಂದಾದರೂ ನಿನ್ನ ನೆನಯದೆ ಧವಢವಿಸಿದ್ದರೆ ಕೇಳು!,
ಆದರೂ ನೀನೆ ನನ್ನ ಕೊನೆಗಾಣದ ಪಯಣದ....
ಅಂತಿಮ ನಿಲ್ದಾಣ
ನಿನ್ನ ಸೇರಿ ಇಲ್ಲವಾಗುವುದಷ್ಟೆ....
ನನ್ನೊಳಗಿನ ಅತಿಕ್ಷೀಣ ಪಣ.//

ದೂರದಿಂದ ತಂಪ ಹೊತ್ತು ತರುವ ಗಾಳಿಗೂ ಗೊತ್ತು ಸೆಖೆಗೆ ನೆಲದ ಮೈ ಬೆವರಿರುವ ಸಂಗತಿ.....

ಮಾಸಲಾಗಿದೆ ನಿಜ ನೀನಿಲ್ಲದೆ
ಸುಂದರವಾಗಿದ್ದ ನನ್ನ ಬದುಕಿನ ಪೇಲವ ಮುಖ....
ಆದರೆ ನೀನು ಗುರುತಿಸಲಾರದಷ್ಟೇನೂ ಬದಲಾಗಿಲ್ಲ ಬಿಡು,
ನಿರಂತರ ನಿನ್ನ ಧ್ಯಾನದ ವ್ಯಸನಕ್ಕೆ ಬಿದ್ದ ಮೇಲೆ
ನಾನು ಸಂತ....
ಎಲ್ಲರಿಗೂ ಗೊತ್ತು ನನ್ನ ಮನಸೊಳಗೆ
ಸದ್ದಿರದೆ ಬಂದು ನಿಂತಿರೋದು ನೀನೆ ಅಂತ/
ಏಕತಾನದ ಬಾಳ ಗಾನಕ್ಕೆ
ಒಲವ ನಾದ ಬೆರೆತರೆ ಮಾತ್ರ...
ಅನುಗಾಲ ಸಂಭ್ರಮದ ಗೀತೆ ಹಾಡಲು ಹಿತ,
ಮೋಡ ಮುಸುಗಿದ ಬಾನಿನಂತೆಯೆ ಮನ
ಒಳಗೆ ದುಗುಡದ ಆತಂಕ ಅದೆಷ್ಟೆ ಇದ್ದರೂ....
ಮೇಲ್ನೋಟಕ್ಕೆ ಮಾತ್ರ ಪರಮ ಮೌನ.//


ತಾವರೆಯನ್ನೆ ಎದೆ ಮೇಲೆ ಹೊದ್ದ ಕಪ್ಪುಕೆರೆಯ
ಮನದಾಳದಲ್ಲಿಯೂ ಸ್ವಚ್ಛ ಪ್ರೀತಿಯ ಬಿಂಬ ಹುದುಗಿದೆ....
ನೋವ ಕೆಸರೆ ಮಡುಗಟ್ಟಿದ ಕೆರೆಯ ಕಣ್ಣಲ್ಲರಳಿದ ಕೆಂದಾವರೆಯ
ಮಂದಹಾಸದಲ್ಲೂ ತುಂಟ ನಗುವಿನ ಸೆಳುಕಿದೆ,
ಸಂಕಟದ ಕವಲು ನನ್ನ ಕನಸಾಗಿರಲಿಲ್ಲ
ಒತ್ತಾಯದಿಂದ ಈ ಹೊರಳು ಹಾದಿಗೆ....
ನನ್ನನ್ನು ದೂಡಲಾಗಿತ್ತು ಅಷ್ಟೆ./
ಗಲಭೆ ಪೀಡಿತ ಪ್ರದೇಶ ಮನದ ಮನೆ
ಒಂಟಿತನದ ಜೊತೆಗೆ....
ನಿರ್ಜೀವ ಸ್ವಪ್ನಗಳ ಸೆಣೆಸಾಟ ಇಲ್ಲಿ ನಿರಂತರ,
ಹಟಾತ್ತನೆ ಮುಗಿದ ಕನಸಿನ ಕೊನೆಯ ಚೂರು
ಆಸೆಯಿಂದ ಅರಳಿದ್ದ ಕಣ್ಣಲ್ಲಿ ಮುಳ್ಳಾಗಿ ಹೊಕ್ಕರೂ ಸಹ....
ಪ್ರಾಣ ಹೋಗುವ ಯಾತನೆಯಲ್ಲೂ
ಮೊದಲ ಪ್ರೀತಿಯ ಮೋಹ ಸವಿ ಸ್ವಪ್ನವಾಗಿ ಕಾಡದಿರೋದಿಲ್ಲ.//ಹೂವರಳಿದ ಮೇಲೆ ಮೊಗ್ಗಿನ ಮನಸು ನುಚ್ಚುನೂರು
ಆದರೂ ಉಳಿದೇ ಇರುತ್ತದೆ....
ಎಳೆತನದ ಮುಗ್ಧತೆ ಒಳಗೆ ಚೂರೇಚೂರು,
ಕರಗಿ ಕರಗಿ ನೀರಾಗಿ ಮನದ ದುಗುಡವೆಲ್ಲ
ಹರಿದು ಹೋದ ಮೇಲೂ....
ನೋವಿನ ಕೊನೆ ಹನಿ ಮನ ಮರದ ಕೊಂಬೆಯಿಂದ
ಇನ್ನೂ ಎಡೆಬಿಡದೆ ತೊಟ್ಟಿಕ್ಕುತ್ತಿದೆ/
ನೋವಿನ ಹನಿಗಳೆಲ್ಲ ನಯನಗಳಲ್ಲಿ ಮಡುಗಟ್ಟಿ
ಮನಸೊಳಗೆ ಮುದುಡಿದಾಗ ಸ್ವಪ್ನ ಸುಮಗಳ ಬುಟ್ಟಿ....
ಸಂಕಟ ಮಾತ್ರ ಬಾಳಿನುದ್ದ ಗಟ್ಟಿ,
ನಿನಗಿಂದು ಗುರುತಿರಲಿಕ್ಕಿಲ್ಲ
ನನಗೆ ಅದು ಎಂದೂ ಮರೆಯುವ ಹಾಗಿಲ್ಲ...
ನಿನ್ನ ಮೊದಲ ನೋಟದ ಹಚ್ಚೆ ಬಿದ್ದದ್ದು
ನೇರ ನನ್ನ ಹೃದಯಕ್ಕೆ ಅಲ್ಲವ?.//


ಖಾಲಿ ಮನಸು ಕಮರಿದ ಕನಸು
ದುರ್ಭರ ಬಾಳು ನಿತ್ಯ ಒತ್ತಾಯದ ಅತಿಥಿಗಳಾದಾಗ....
ಅಸಹಾಯಕ ಅಭ್ಯಾಗತ ನಾನು ಪಾರಾಗೋದಾದರೂ ಹೇಗೆ?,
ನಾ ಮೋಹಿತ
ನೀನಿಂದು ಬಯಸದಿದ್ದರೂ ನಿನ್ನ ಸುತ್ತಮುತ್ತ ವ್ಯಾಪಿತ....
ನಿನ್ನಲ್ಲಿ ಲೀನವಾಗುವ ಕನಸಿನಲ್ಲಿಯೆ ಭಾಸ ನನಗೆ ಹಿತ/
ಸಾವಿನ ಹೆದರಿಕೆಯಿಲ್ಲ
ಕೊನೆ ಹಾದಿಯ ಪಥದಲ್ಲೂ ಮನ ಹಿಮ್ಮೆಟ್ಟಿಲ್ಲ....
ಅದು ಸುಡುವ ಬೆಂಕಿಯೆ ಆಗಿದ್ದರೂ ಪರವಾಗಿಲ್ಲ
ಸತ್ಯದ ಬೆಳಕಿನ ಹಾದಿಯೆಡೆಗೇನೆ ಹೆಜ್ಜೆ ಹಾಕುವ ಹಟ ನನ್ನದು,
ಕನಸಿನ ಹಾದಿಯಲ್ಲಿ ನಿರ್ಭೀತ ವಲಸೆ ನನ್ನದು
ನಿರೀಕ್ಷೆಗಳಿವೆ...
ಅವನ್ನೆಲ್ಲ ಸಾಕಾರಗೊಳಿಸುವ ಹೊಣೆ
ಮಾತ್ರ ನಿನ್ನದು ಕೇವಲ ನಿನ್ನದು.//

ಮುಂಗಾರಿನ ತಹತಹಿಕೆಯಲ್ಲಿ ಆಷಾಢ ವಿರಹದ ಆತಂಕವೂ ಮಡುಗಟ್ಟಿದೆ.....

ಬಾಳ ಮಡುವಿನಲ್ಲಿ ಸುಳಿಯಿರುವ ಬಗ್ಗೆ
ಮೊದಲೆ ಖಚಿತ ಸುಳಿವಿದ್ದಿದ್ದರೆ.....
ಅದರಲ್ಲಿ ಈಜುವ ಧೈರ್ಯವನ್ನೆ
ಬಹುಶಃ ನಾನು ಮಾಡುತ್ತಿರಲಿಲ್ಲವೇನೊ,
ಕನಸುಗಳೆಲ್ಲ
ಕನಸುಗಳಾಗಿಯೆ ಉಳಿದು ಹೋದ ವಿಷಾದಕ್ಕೆ....
ಕಂಬನಿಯ ಕೊನೆ ಹನಿಯೊಂದೆ ಅತ್ಯಾಪ್ತ ಮಿತ್ರ/
ಎಂದೆಂದೂ ಮುಗಿಯದ ದಾರಿಯಂಚಿನಲ್ಲಿ
ನೀನೆ ಅನಾಥವಾಗಿ ಬಿಟ್ಟು ನಡೆದ ನಿನ್ನೆಲ್ಲ ಕನಸುಗಳ ಬಗ್ಗೆ.....
ನೀನೆಂದಿಗೂ ತೃಣ ಮಾತ್ರವೂ ಚಿಂತಿಸಲೆಬೇಡ,
ಅವೆಲ್ಲ ನನ್ನ ಮನದಾಳದಲ್ಲಿ
ಸದಾಕಾಲ ಬೆಚ್ಛಗಿರಲಿವೆ.//


ನೆಲಕೆ ಸುರಿವ ಹನಿ ಹನಿಯ ಎದೆಯಾಳದಲ್ಲಿ
ಬಾನ ತೊರೆದ ವಿರಹದ ನೋವಿನ ಪಸೆ.....
ಗಾಢವಾಗಿ ಹುದುಗಿದ್ದು ಇನ್ನೂ ಆರಿಲ್ಲ,
ಸಣ್ಣಗೆ ಹನಿವ ಮಳೆಯ ಗುಂಗಿನಲ್ಲಿ
ಲೀನವಾಗಿರುವ ಮನಕ್ಕೆ....
ಮೌನದ ಪರದೆ ಹೊದಿಸಲಾಗಿದೆ/
ಇನ್ಯಾರಿಗೆ ಹೇಗೋ ಒಲವ ಭಾವ ಗೊತ್ತಿಲ್ಲ
ನನ್ನ ಪಾಲಿಗೆ ನೆನ್ನೆ ಇಂದು ನಾಳೆ....
ಕೇವಲ ನೀನು ಮಾತ್ರ,
ನೀನೆಂದೆಂದಿಗೂ ಕಾಲಿಡದ
ನನ್ನ ಮನದೊಳಮನೆಯ ತಲೆ ಬಾಗಿಲಿಗೆ ಇಟ್ಟ ರಂಗೋಲಿಯನ್ನ....
ನಿನ್ನ ಪಾದದ ಅಚ್ಛೆ ಒರೆಸಲಿ ಅಂತಲೆ ಕಾದಿರುವ
ನನ್ನದು ವಾಸಿಯಾಗದ ಹುಚ್ಚಲ್ಲವ?.//


ಅದೇನೆ ಇದ್ದರೂ ನಿನ್ನ ನೆನಪ ನೋವಿನಲ್ಲೂ
ಹಿತದ ಗರಿ ತೀಡುತ್ತದೆ....
ನನ್ನೆದೆಯ ಮೌನವನ್ನದು ನೇವರಿಸಿ
ಸಂಕಟ ಕೊಟ್ಟಾದರೂ ಕಾಡುತ್ತದೆ,
ಮರೆಯದೆ ಪ್ರತಿಕ್ಷಣ ನಿನ್ನ ನೆನೆಯುವ ನಾನು
ಮೂಢನೋ ಇಲ್ಲಾ ಕೈ ಸಿಗದ ಮಾಯಾಮೃಗದ ಬೆನ್ನು ಹತ್ತಿದ....
ಮರುಳ ಬೇಡನೋ?
ಗೊಂದಲ ಜಾರಿಯಲ್ಲಿದೆ/
ಕಡಲತಡಿಯ ಮೌನದಲ್ಲಿ
ಬೀಸುವ ಗಾಳಿಯದ್ದೆ ದರ್ಬಾರು....
ಅಲ್ಲಿ ದೂರದಲ್ಲಿ ನಡುಗಡಲಲ್ಲಿ ಮಿನುಗುವಂತೆ ಕಾಣುತ್ತಿರೋದು ಯಾರು?
ನೀನೇನ? ಇಲ್ಲಾ ನಿನ್ನ ನೆನಪ ಹೊಳಪೇನ?,
ಇಂದಿನ ಗಾಢ ಮೌನದಲ್ಲಿ ಶಾಶ್ವತವಾಗಿ ಕರಗಿ ಹೋಗುವ ಮುನ್ನ
ನಿನ್ನ ಮಾತಿನ ಅಲೆಗಳಲ್ಲಿ....
ನಾನು ತೇಲಿಯೂ ಹೋಗಿದ್ದೆ.//


ಮೊದಲ ಮಳೆಹನಿಯ ತಂಪು
ಕಡು ಮಾಡಿನಿಂದ ಲಯಬದ್ಧವಾಗಿ ಸುರಿವ....
ಹನಿಗಳೆದೆಯಲ್ಲಡಗಿರುವ ಇಂಪು,
ಕೇವಲ ಇವುಗಳಷ್ಟೆ ನನ್ನ ನಿತ್ಯದ
ಮಿಡುಕಾಟದ ಸಂಗಾತಿಗಳು/
ಹೊರಗೆ ಪಿರಿಪಿರಿ ಮಳೆ
ಒಳಗೆ ನಿನ್ನ ನೆನಪ ಇರಚಲು...
ಒಟ್ಟಿನಲ್ಲಿ ನಾನಂತೂ ಒದ್ದೆಮುದ್ದೆ,
ಮುಗಿಲ ಪ್ರತಿಹನಿಗೂ ನೆಲದೆಡೆಗೆ
ತೀರದ ಮೋಹ....
ನನಗೆ ನಿನ್ನೆಡೆಗೆ ಇರುವ ಹಾಗೆ.//

08 July 2013

ಸಂತಸದ ಮಳೆ ಹನಿಗಳ ಹಿಂದೆ ಸಂಕಟದ ಸಿಡಿಲಿನ ಧ್ವನಿಯಿದೆ.

ಕಲೆಗಟ್ಟಿ ಅಲ್ಲೆ ಉಳಿದು ಹೋದ
ಕಣ್ಣೀರ ಬಿಂದುಗಳ ಹಳೆ ಗುರುತುಗಳಷ್ಟೆ ಹಚ್ಚ ಹಳೆಯದು....
ನನ್ನೊಲವೂ ಸಹ,
ರಾಧೆಗೆ ಕೃಷ್ಣನ ಮೇಲಿದ್ದ ತುಡಿತ
ಕೃಷ್ಣನಿಗೆ ಅರ್ಜುನನ ಮೇಲೆ ಮೊಳೆತಿದ್ದ ಸೆಳೆತ....
ಅರ್ಜುನನ ಮೇಲೆ ಕೃಷ್ಣೆ ತೋರುತ್ತಿದ್ದ ಮಿಡಿತ
ಇದೆ ಅಲ್ಲವ ಒಲವನ ಎಳೆ ಗರಿಕೆಯ ಗರಿ?/
ಕಣ್ಣ ಹನಿಗಳ ಕಡುಕಪ್ಪು ಕಡಲಿನಲ್ಲಿ
ಮೌನ ಮನದ ಕಾಗದ ದೋಣಿ ಯಾನ.....
ಬದುಕು ಇಷ್ಟೇನೆ ಅಲ್ಲವ?,
ಮೇಲೆ ಮುಸುಗಿದ ಮೋಡ
ತುಸು ನನ್ನೊಳಗೂ ಆವರಿಸಿಯೆ ಇದೆ....
ಕಂಡವರು ಅದನ್ನ ದುಗುಡ ಎನ್ನುತ್ತಾರಷ್ಟೆ.//


ತುಸುವಾದರೂ ಮಾಸಲಾಗದ ತಾರೆಗಳ
ಕಣ್ಗಳಲ್ಲೆಲ್ಲ ಹೊಳೆಯುತ್ತಿರೋದು....
ನಿತ್ಯ ನೂತನ ಕನಸುಗಳ ಜಾತ್ರೆ,
ಇರುಳ ದಾರಿಯಲ್ಲಿ ಚಂದ್ರಮನ ಲಾಂದ್ರ
ಕುರುಡು ಕನಸುಗಳಿಗೆಲ್ಲ ಆರ್ದ್ರ ಮನದ ದಾರಿಯನ್ನ....
ಸರಿಯಾಗಿ ತೋರುತ್ತಿವೆ/
ತಾನು ಸುರಿದ ಪ್ರತಿಹನಿ ಪ್ರೀತಿಯ ಲೆಕ್ಖ
ಬಡ ಬಾನಿಗೂ ಇಲ್ಲ....
ಪಡೆದ ಒಲವ ಧಾರೆಯ ಬಗ್ಗೆ ಅರಿವು ಸಿರಿ ಭುವಿಗೂ ಇಲ್ಲ
ಬದುಕು ಪ್ರತಿಫಲವನ್ನ ಎಂದಿಗೂ ಬಯಸದ ನಿಷ್ಕಾಮ ಮಳೆಯಾಗಿಯಷ್ಟೆ ಉಳಿದಿದೆ,
ನೂರು ಮುಳ್ಳುಗಳು ಮತ್ತೆ ಮತ್ತೆ ಚುಚ್ಚಿ ಕಾಡುತ್ತಿದ್ದರೂ
ನೆನಪಿನ ಬಳ್ಳಿಯಲ್ಲಿ ಅರಳಿದ ಹೂನಗೆಯೊಂದು....
ಆರದ ನೋವನೆಲ್ಲ ಮರೆಸುತಿದೆ.//ಮೂಡಲ ಶುಭ್ರತೆಯಲ್ಲಿ ಮೂಡಿದ ಕಲೆ ರವಿ
ನಿತ್ಯ ಹತ್ತಿಸುವ ನಾಲ್ದೆಸೆಗೂ ಕೆಂಪು ಚಿತ್ತಾರದ ಸವಿ....
ಮೆಲ್ಲಗೆ ಮೂಡಲ ಕಣ್ಣು ತೆರೆದು ಮುಗಿಲನ್ನ ಮುತ್ತಿಟ್ಟಾಗ
ಕದ್ದು ಅದ ಕಂಡ ಇಬ್ಬನಿಯ ಮಣಿ ಮೂಡಿದ್ದಲ್ಲೆ ನಾಚಿ ನೀರಾಯ್ತು,
ಸದ್ದಿರದ ಇರುಳ ಹಿಂದೆ
ಮಾರ್ದವ ಮುಂಜಾನೆಯ ನೆರಳು....
ಬೆಳಕಿನ ಬೆನ್ನನ್ನ ಸೋಕುತ್ತಲೆ
ಸಂಜೆಯನ್ನಾವರಿಸೋದು ಕತ್ತಲ ಕುರುಳು/
ಗುರುತಿರದ ದೂರದ ಬಾನ ಚುಕ್ಕಿಯ ಕಣ್ಗಳಲ್ಲಿ
ಇರುಳನೆಲ್ಲ ತಬ್ಬಿ ಆವರಿಸಿಕೊಳ್ಳುವ ಆಸೆಯ ಹೊಳಪಿದೆ....
ಸಣ್ಣಗೆ ಹೊರಗೆ ಹನಿ
ಎದೆಯೊಳಗೆ ನಿನ್ನ ಪಿಸುದನಿ,
ಸಾಗುವ ಉಗಿಬಂಡಿಯಲ್ಲೂ ಸಾಲುಸಾಲು
ಸ್ವಪ್ನಗಳ ಬೋಗಿಗಳದ್ದೆ ಜಗ್ಗಾಟ.//


ಇನ್ನೊಂದು ಮನಸು ಬೀಸಿದ
ಹೊಸ ಕನಸಿನ ಬಲೆ ಹಿತವಾಗಿಯೇನೋ ಇತ್ತು....
ಆದರೂ ನಿನ್ನ ನೆನಪು ಮುಂದುವರೆಯದಂತೆ
ನನ್ನ ಕೈಜಗ್ಗಿ ತಡೆಯುತ್ತಿತ್ತು!,
ಗೆರೆ ದಾಟದಂತೆ ನಾ ಹಿಡಿದಿಟ್ಟ
ಮನದ ಕುದುರೆ ಕಡಿವಾಣ ಕಳಚುವ ತವಕಕ್ಕೆ ಈಡಾದಾಗಲೆಲ್ಲ....
ಮತ್ತೆ ನೀನು ನೆನಪಾಗಿ ಬಚಾಯಿಸುತ್ತೀಯ/
ಇದಕ್ಕಾಗಿ ನಿನ್ನ ನಾ ದೂಷಿಸಲಾರೆ
ಆದರೆ ನಿನ್ನ ನೆನಪು ಭದ್ರವಾಗಿರುವ ತನಕ....
ಎದೆ ಚಿಪ್ಪೊಳಗೆ ಇನ್ನೊಂದು ಹನಿ
ಅಲ್ಲಿ ಮುತ್ತಾಗಲಿಕ್ಕೆ ಎಡೆಕೊಡಲಾರೆ,
ಕನಸಿನ ಕುದುರೆಯ ಬೆತ್ತಲೆ ಬೆನ್ನೇರಿ ಹೊರಟ
ಮನಸ ಮೆರವಣಿಗೆ....
ಆಸೆಯೋ-ನಿರಾಸೆಯೋ
ಯಾವುದಾದರೊಂದು ನಿಲ್ದಾಣ ತಲುಪಿ ನಿಲ್ಲಲೇಬೇಕು.//

ಕಮರಿದ ಕನಸಿನ ಬೀದಿಯಲ್ಲಿ ಬೆಳಕಿಲ್ಲ.... ಬರಿ ಕತ್ತಲೆ.

ನೀರಿಲ್ಲದಿದ್ದರೂ ಜೊತೆ ತೇಲುವ ಮೀನಾಗಿ ನೀನಿಲ್ಲದಿದ್ದರೂ
ಬತ್ತಿದ ಜಲರಾಶಿಯಲ್ಲಿ ನೆಲದ ಮೇಲ್ಮೈ ಕಾಣುತ್ತಿದ್ದರೂ.....
ಬಾಳ ನೌಕೆ ನೋವಿನ ಕಡಲಿನಲ್ಲಿ ಹೇಗಾದರೂ ಸರಿ ಸಾಗಲೆಬೇಕಲ್ಲ?
ತೇಲಿಕೊಂಡೋ....
ಇಲ್ಲಾ ತೆವಳಿಕೊಂಡೋ
ಬೇಡದಿದ್ದರೂ ದಡವೊಂದ ಮುಟ್ಟಲೆಬೇಕಲ್ಲ?,
ಹಗಲಿನಲ್ಲಿ ಭಾವಗಳನ್ನ ಹತ್ತಿಕ್ಕಿದ ಸಂಯಮ
ಇರುಳಿನ ಕಡುಗತ್ತಲಲ್ಲಿ ಕರಗಿ ಕರಗಿ....
ಯಾರಿಗೂ ಕಾಣದಂತೆ ನೀರಾಗುವಾಗ
ನಾನು ನಿರಂತರ ನಿರುಪಾಯ/
ಸಂತಸದ ತಲಾಷಿನಲ್ಲಿ ಹೊರಟವ
ಸಂಕಟದ ಸಂಕ ದಾಟಬೇಕಾಗಿ ಬಂದರೂ ಸಹ....
ಮನಸ ಮೂಲೆಯಲ್ಲಿ ಅಶಾವಾದದ ಕಿರು ಸೊಡರಿನ್ನೂ
ಆರದಂತೆ ಉರಿಯುತ್ತಲೆ ಇದೆ,
ಇರುಳ ಮೌನದಾವರಣದೊಳಗೆ
ದುರುಳ ಸ್ವಪ್ನಗಳ ಸಲುಗೆ....
ಸಲುಗೆಯಲ್ಲ ಇದು
ನವಿರು ಭಾವಗಳ ಸುಲಿಗೆ.//


ಕಳ್ಳ ಹೆಜ್ಜೆಗಳ ಮಳ್ಳ ಕನಸುಗಳಿಗೆ
ಇರುಳೇನು? ಹಗಲೇನು?
ಮನ ಬಂದಾಗ ಸ್ವಚ್ಛಂದವಾಗಿ....
ಮನಸಿನ ಛಿದ್ರ ಕೋಟೆಗೆ
ಏಕಾಏಕಿ ದಾಳಿಯಿಡುತ್ತವೆ,
ಚಳಿಯ ಗುಂಗಿಗೆ ಹಬೆಯಾಡುವ ಚಹಾ
ಹುಟ್ಟಿಸುವ ಬೆಚ್ಚನೆ ಮುದದಂತೆ ನೀನು....
ನಿನ್ನ ನೆನಪು
ನನ್ನ ಮುದುಡಿದ ಮನಸಿಗೆ/
ಸಹಜ ಬದುಕಿನ ಸಂತಸದ ನಿರೀಕ್ಷೆಗಳೆಲ್ಲ
ಅವಸರದ ಅನಿರೀಕ್ಷಿತ ಸಂಕಟಗಳ ಪ್ರವಾಹಗಳಲ್ಲಿ ಕೊಚ್ಚಿ ಹೋದವು....
ಸೋತ ಹೆಜ್ಜೆಗಳಿಗೆ ಮತ್ತೆ
ಸ್ವಪ್ನದ ಹೊರಳು ಹಾದಿಯಲ್ಲಿ
ಕಷ್ಟದ ದಾರಿ ಸವೆಸುವ ಉಮೇದು ಖಂಡಿತ ಉಳಿದಿಲ್ಲ,
ಒಂಟಿ ಬಾಳು ಗೋಳಿನ ಹಾದಿ ನಿಜ
ಆದರೆ ನಿನ್ನ ನೆನಪಿನ ಕಿರುಬೆರಳ ಆಸರೆ ಇದ್ದೇ ಇದೆಯಲ್ಲ.//ಮತ್ತರಳಲು ತವಕಿಸುವ ಕನಸ ಮೊಗ್ಗು
ಸ್ವಪ್ನ ಸುಮವಾಗುವ ಮುನ್ನ.....
ಮುರುಟಿ ಬಾಡದಿರದಂತೆ ಕಾಯುವ ಪ್ರಾಮಾಣಿಕತೆ
ದುರುಳ ವಿಧಿಗೆ ಎಂದೆಂದಿಗೂ ಇರಲಾರದೇನೋ,
ಅಲ್ಪಸ್ವಲ್ಪ ನೆಮ್ಮದಿಗಾಗಿ
ನಿರಂತರ ಮಿಡಿಯುವ ಮೌನಿ ಮನ....
ಒಂದರ್ಥದಲ್ಲಿ ನಿಶ್ಪಾಪಿ ಪಾಪ/
ಬಿಡಿಸಲಾಗದ ಕಗ್ಗಂಟಾದ ಬದುಕಿನ ತೆಳು ಎಳೆಗಳಿಗೆ
ಮತ್ತೆ ನವಿರಾದ ಕನಸ ಚಾದರ ಹೊಲೆಯುವ ಭಾಗ್ಯವಿಲ್ಲ.....
ಕನಸಿನ ತೆರೆಯಾಚಿನ ಅವಾಸ್ತವಗಳಿಗೆಲ್ಲ
ಖಚಿತ ರೂಪ ಕೊಡುವ ಹುಮ್ಮಸ್ಸು ಹನಿಹನಿಗಳಾಗಿ,
ನಿತ್ಯ ಕರಗುತಿದ್ದರೂ
ಮನಸು ನಿರಂತರ ಆಶಾವಾದಿ.//


ಹರಿವಿನ ಪಾತ್ರವಿದ್ದ ಮಾತ್ರಕ್ಕೆ ಸಾಲದು
ಅಲ್ಲಿ ನೀರಿನ ಧಾರೆಯೂ ಇರಬೇಕು....
ಬರಡು ಬಾಳೂ ಒಂಥರಾ ಹಾಗೇನೆ
ಅದರದೂ ಸ್ಥಿತಿ ಒಲವ ಧಾರೆ ಇಲ್ಲದೆ ಬತ್ತಿ ಹೋದ ನದಿಯ ಪಾಡೇನೆ,
ಕಾಯುವ ನೋಯುವ ಅಭ್ಯಾಸ
ಒಮ್ಮೆಯಾದ ನಂತರ....
ಸಾಯುವವರೆಗೂ ಸಾವಿರ ಸಂಕಟ ಎದುರಾದರೂ ಮುದುಡಿದ ಮನ
ಸಹನೆಯ ಚರಮ ಸೀಮೆಯನ್ನ ಮುಟ್ಟಿ ಜಡ್ಡುಗಟ್ಟಿ ಹೋಗಿರುತ್ತದೆ/
ಕಣ್ಣ ಆಳದಲ್ಲಡಗಿದ ನೋವುಗಳ ಪ್ರತ್ಯಕ್ಷ ರೂಪ ಹನಿ
ಅದರೆದೆಯಾಳದಲ್ಲೂ ಹುದುಗಿರೋದು....
ಕೇವಲ ಕಡು ಸಂಕಟದ ದನಿ,
ಹಸಿರು ಹುಟ್ಟದ ಬಟಾಬಯಲಾದ ಮನದ ಬರಡಿನಲ್ಲಿ
ಅದು ಹೇಗೋ ಉಳಿದೇ ಇರುವ ನಿರೀಕ್ಷೆಯ ಗರಿಕೆ....
ನನ್ನ ದುರಾಸೆಯನ್ನೆ ಅನುಗಾಲ ಅಣಗಿಸುತ್ತಿದೆ.//

07 July 2013

ಹೂವ ಗಂಧವ ದೋಚಿದ ಗಾಳಿಯ ಕನಸಿಗೆ ಸಂತಸದ ಪರಿಮಳ ದಾಟಿದೆ.

ಸಾಕಾದ ಪಯಣದ ಕೊನೆ ನಿಲ್ದಾಣ
ನಿನ್ನೆದೆಯ ಒಂದು ಮೂಲೆಯೆ ಆಗಿರಲಿ....
ಅನ್ನೋದು ನನ್ನೊಳಗಿನ ಸಣ್ಣ ತಹತಹಿಕೆ,
ಕಳೆದ ನೆನ್ನೆಯ ಬಗ್ಗೆ ಕಳವಳ ಉಳಿದಿಲ್ಲ
ನಾಳಿನ ನಿರೀಕ್ಷೆಗಳಿಗೂ ಕುಟುಕು ಜೀವ ಕೊಡುವ ಹುಮ್ಮಸ್ಸಿಲ್ಲ....
ಮರಗಟ್ಟಿ ಹೋಗಿರುವ ಮನಕ್ಕೆ
ಸಂತಸ ಹಾಗೂ ಸಂಕಟದ ನಡುವಿನ ವ್ಯತ್ಯಾಸವೆ ಅರಿವಾಗುತ್ತಿಲ್ಲ/
ಮನದೊಳಿಗಿನ ತಂತುಗಳೆಲ್ಲ ಕಡಿದು ಹೋಗಿದ್ದರೂ
ಕನಸ ಮರಕತ ವೀಣೆ.....
ಮತ್ತೆ ಮತ್ತೆ ನೋವಿನ ಗುಂಗನ್ನ ಮಿಡಿಯುವುದು
ಊಹೆಯನ್ನೂ ಮೀರಿದ ವಿಸ್ಮಯ ಮಾತ್ರ,
ಮುಗಿಲಿಂಚಿನಿಂದ ತೇಲಿ ಬರುವ ಗಾಳಿಯ ಆಲಾಪಕ್ಕೆ
ತಾಳ ಮಿಡಿಯುವ ಅಂಗಳದಲ್ಲಿ ತೂಗು ಬಿಟ್ಟಿರುವ ಘಂಟೆಗಳಿಂದ.....
ಹೊಮ್ಮುತ್ತಿರೋದು ಒಲವಿನ ಮಧುರ ಸುನಾದ ಮಾತ್ರ.//ಹೆಜ್ಜೆ ತಪ್ಪದೆ ಮೌನವಾಗಿ
ನಿನ್ನೆದೆಯ ಮನೆಯವರೆಗೆ ತಲುಪುವ ನಾನು....
ತಲೆ ಬಾಗಿಲನ್ನ ಮೆಲುವಾಗಿಯಾದರೂ
ತಟ್ಟುವ ಧೈರ್ಯ ಸಾಲದೆ ನಿತ್ಯವೂ ಮಾತಿಲ್ಲದೆ ಹಿಂದಿರುಗುತ್ತೇನೆ,
ನಗುವ ನೂರು ಹೂಗಳ ಹಿಂದೆ
ಸಾವಿರ ಮೊಗ್ಗುಗಳ ಕನಸುಗಳು ಕರಗಿದ ಕಥೆಗಳಿವೆ/
ಮತ್ತದೆ ಮೌನ ರಾಗ
ನೊಂದ ಎದೆಯ ನಿರಂತರ ಏಕತಾಳ....
ಭಿಕಾರಿ ಮನಕ್ಕೆ ನೆನಪಿನ ನಾಲ್ಕು ಸಾಲುಗಳಷ್ಟೆ
ಅಗಣಿತ ಸಿರಿ ಸಂಪತ್ತು,
ಮುಗಿದ ಮಾತಿನ ಕೊನೆಯಲ್ಲೂ ಮತ್ತದೇನೋ ಉಳಿದಂತೆ
ನೀನು....
ಸನಿಹವಿರದೆಯೂ ಗಾಳಿಯಲ್ಲಿಯೇ ತೇಲಿ ನನ್ನೊಳಗಿನ ಮೌನದ ಮೊಗ್ಗಿಗೆ
ಪರಾಗಸ್ಪರ್ಶ ಮಾಡುವ ಪುಷ್ಪದ ರೇಣುವಂತೆ ಅಲ್ಲವೇನು?.//ಮೌನದ ಬೆನ್ನೇರಿದ ಮಾತಿನ ವದಂತಿಗಳು
ಪೂರ್ತಿ ಸುಳ್ಳೂ ಅಲ್ಲವಲ್ಲ?.....
ಕಾವಲಿದೆ ಕದಲದ ಸ್ವಪ್ನಗಳು
ಅದಕ್ಕೇನೆ ಬಿಕ್ಕುವಾಗಲೂ ಮನಸು ಮೌನವನ್ನ,
ಅನಿವಾರ್ಯವಾಗಿ ನಟಿಸಿ ಕದ್ದು ಕಣ್ಣೊರಸಿಕೊಳ್ಳುತ್ತವೆ/
ಇರುಳ ಹಾದಿ ಹುಟ್ಟುವಲ್ಲಿ
ಹಗಲ ಹಲವು ತಲ್ಲಣಗಳು ತುಸು ಮಿಡುಕುತ್ತಿವೆ....
ನಿರೀಕ್ಷೆಯ ಚಿಪ್ಪಿನಲ್ಲಿ ಬಿದ್ದು
ಕಾದು ಕೂತ ಹನಿ ಮುತ್ತಗದಿದ್ದರೇನಂತೆ,
ಮುತ್ತಿನ ಕನಸಾದರೂ ಕೆಲಕಾಲ ಬಿದ್ದಿತ್ತಲ್ಲ ಅದಕ್ಕಷ್ಟೆ ಸಾಕು
ಬಾಳಿನ ಕಿರು ಸಂತೋಷಗಳು ಅಡಗಿರೋದೆ ಅಲ್ಪತೃಪ್ತಿಯಲ್ಲಿ.//


ಪ್ರತಿ ಮಾತಿಗೂ ಒಂದು ಗಹನ ಅರ್ಥ
ಇರಲೆಬೇಕಂತೇನಿಲ್ಲ....
ಪ್ರತಿಯೊಂದು ಮೌನವೂ ಆಳದಲ್ಲಿ
ಅರ್ಥ ಹೀನವೂ ಆಗಿರೋದಿಲ್ಲ,
ಕಂಬನಿ ಪ್ರವಾಹವೂ ಬರಿದಾಗಿ ಮೌನವಾದ ಜಲಪಾತದಿಂದೀಚೆಗೆ
ಏನೊಂದೂ ಧುಮುಕುತ್ತಿಲ್ಲ....
ಆಸೆಯಿರಲಿ ನಿರಾಸೆಯ ಸುಳಿವೂ ಅಲ್ಲಿಲ್ಲ/
ಆವರಿಸಿ ನನ್ನ ಕಾಡು
ನೇವರಿಸಿ ಹೀಗೆ ನಿತ್ಯ ಜೊತೆಗೂಡು....
ನೆನಪಿನಲ್ಲಾದರೂ ಸರಿ
ನಿನ್ನ ಹಾಜರಿ ನಿರಂತರವಾಗಿರಲಿ,
ಭಾವದ ಲೇಖನಿಗೆ ಕಂಬನಿಯೆ ಮಸಿ
ಅದರಲ್ಲಿ ಬರೆದ ಬಾಳ ಸಂಕಟದ ಸಾಲುಗಳೆಲ್ಲ
ಮುಚ್ಚುಮರೆಯಿಲ್ಲದೆ ಹಸಿಹಸಿ.//

ಮೌನದ ತೂಕ ಯಾವತ್ತೂ ಮಾತಿಗಿಂತ ಮಿಗಿಲು.

ಬತ್ತಲೆ ಪಾದಗಳಲ್ಲಿ-ಕತ್ತಲೆ ಹಾದಿಯಲ್ಲಿ
ಅಂಡಲೆಯುವ ನಾನು ಎಂದಾದರೂ....
ನೀನಿರುವಲ್ಲಿ ಹೋಗಿ ಮುಟ್ಟುತೀನ?
ನಿನ್ನೆದೆ ಮನೆಯ ತಲೆ ಬಾಗಿಲ ಕದವನ್ನ
ಕಾತರದ ಕೈಗಳಿಂದ ತಟ್ಟುತ್ತೀನ?,
ಗುರಿ ತಪ್ಪಿರಲಿಲ್ಲ
ನನ್ನ ನೆನಪುಗಳಲ್ಲಿದ್ದ ಹಾದಿಯ ಗುರುತು ಕೂಡ ಅಷ್ಟಾಗಿ ತಪ್ಪಾಗಿರಲಿಲ್ಲ....
ಆದರೂ ನಿನ್ನೆದೆಯ ಗಮ್ಯವನ್ನ ಕಡೆಗೂ ನನಗೆ ಸೇರಲಾಗಲೆ ಇಲ್ಲ/
ಕಪ್ಪು ಕಣ್ಣಿನ ಕೊಳದಲ್ಲಿ ಉಕ್ಕಿದ ಹನಿಯ ಸೆಲೆಗಳೆಲ್ಲ
ಸಂತಸದ್ದೆ ಆಗಿರಲಿ ಅನ್ನೋದು ಸುಂದರ ಕನಸು.....
ಆದರದರಲ್ಲಿ ಬಹುಪಾಲು
ಸಂಕಟದ್ದೆ ಆಗಿರೋದು ಮಾತ್ರ ವಾಸ್ತವದ ವ್ಯಂಗ್ಯ ನನಸು//


ಮೌನದ ಚಿಪ್ಪಿನಲ್ಲಿ ಅನಿವಾರ್ಯವಾಗಿ ಸಿಲುಕಿ
ನಲುಗುವ ಮಾತುಗಳೆಲ್ಲ ಮುತ್ತಾಗುತಾವೆ....
ನಿನ್ನ ನೆನಪಿನ ತಂಗಾಳಿ ಹೊತ್ತು ತರುವ
ಇಂತಹ ಸುಮಧುರ ಗೀತೆಗಳ ಸಾಂಗತ್ಯವೂ ಇಲ್ಲದಿದ್ದಿದ್ದರೆ
ಈಗಲೆ ಅರೆಜೀವವಾಗಿರುವ ನಾನು ಅದೆಂದೋ ಇಲ್ಲವಾಗಿರುತ್ತಿದ್ದೆ,
ಮತ್ತಿರದ ಹೊತ್ತಲೂ ತೇಲುವ ವಿಸ್ಮಯಕ್ಕೆ
ಒಲವ ನಶೆ ಎನ್ನಬಹುದು/
ಮೋಡದಲ್ಲಿ ತಲೆ ಮರೆಸಿಕೊಂಡಿದ್ದ ಬಾನಿನೊಡೆಯನನ್ನ
ಮತ್ತೆ ನೋಡುವಾಗ ಆಗುವ ಅವ್ಯಕ್ತ ಆನಂದದಂತೆಯೆ....
ದುಗುಡದ ಮೋಡ ಮುಸುಗಿದ
ಮನದ ಬಾನಲಿ ನಿನ್ನ ನೆನಪ ಪಾತ್ರ,
ಕರೆದು ಕರೆದು ಸಾಕಾಗಿ ಮೌನವಾದ ಹೊತ್ತಲೂ
ನಿನ್ನ ನೆನಪಿನಾ ಪರಿಮಳವೆ ಆವರಿಸಿ....
ಕಾಡುತಿದೆ ನನ್ನ ಸುತ್ತಲೂ//


ತೇಲುವ ಮೋಡದ ಅಂತರಾಳದೊಳಗೆ
ಬೆಚ್ಚಗೆ ಹುದುಗಿದ ಹನಿಯೆದೆಯಲ್ಲೋ....
ನೆಲದೆಡೆಗೆ ಸ್ನೇಹವ ಮೀರಿದ ಸೆಳೆತವಿದೆ,
ಮನಸಿನ ಮೂಲೆಯಲ್ಲಿ ಮಿಡುಕಾಡುತ್ತಿರುವ
ಕನಸಿನ ಕಳವಳಕ್ಕೆ....
ನನಸಿನಲ್ಲಿ ನೆಮ್ಮದಿ ಸಿಗುವ ಸಂಶಯ
ನಿಜದಲ್ಲೂ ಸಾಬೀತಾಗುತ್ತಿದೆ/
ಶಾಂತ ಸಾಗರದ ಒಡಲೊಳಗೂ
ಅಶಾಂತಿಯ ಅಲೆಗಳು ಸುಪ್ತವಾಗಿ ಆಗಾಗ ಏಳುತ್ತಿರುತ್ತವೆ....
ಯಾಕೆ ಇವೆಲ್ಲ ರಗಳೆ?
ಹನಿ ಪಾಷಣವನ್ನ ಅಂದೆ ನೀ ಕೊಟ್ಟಿದ್ದರೂ ಸಾಕಿತ್ತು,
ಇರುತ್ತಿರಲಿಲ್ಲ ಪರೋಕ್ಷವಾಗಿಯೂ
ನನ್ನ ಈ ನಿರಂತರ ಕಿರುಕುಳ ನಿನಗೀ ವೇಳೆ.//


ಹದವರಿತು ಬಿದ್ದರೆ ಪ್ರತಿಯೊಂದು ಮಳೆಹನಿಗಳೂ
ನೆಲದೊಡಲಲ್ಲಿ ಹುದುಗಿದ ಕನಸಿನ ಬೀಜಗಳನ್ನ....
ಮತ್ತೆ ಮೊಳಕೆಯೊಡೆಸಬಲ್ಲವು,
ಅನಗತ್ಯ ಸೊಕ್ಕಿ ಸುರಿದರೆ ಮಾತ್ರ
ಮಧುರಭಾವಗಳೆಲ್ಲ ಮುಲಾಜಿಲ್ಲದೆ....
ಕೊಚ್ಚಿ ಹೋಗೋದು ಮಾತ್ರ ಖಾತ್ರಿ/
ಗಾಬರಿಯ ಚಿನ್ಹೆ ಮುಖದ ಮೇಲಿಲ್ಲ ನಿಜ
ಆದರೆ ಮನದೊಳಗಿನ ಅನುಕ್ಷಣದ ಆತಂಕದ ಗಾಬರಿಯನ್ನ....
ನಿನ್ನ ಹೊರತು ಇನ್ಯಾರ ಎದುರೂ ಸಹ
ನಾನು ವ್ಯಕ್ತ ಪಡಿಸಲಾರೆ,
ಕಣ್ಣು ಕನವರಿಸುವ ಕನಸುಗಳೆಲ್ಲ ಸಾಕಾರವಾಗುವಂತಿದ್ದರೆ
ಬದುಕಿನ ಪ್ರತಿ ಪುಟಗಳೂ....
ಮುತ್ತಿನ ಮಣಿಗಳಂತಹ ಅಕ್ಷರಗಳಿಂದಲೆ ಬರೆದಿರಲಾಗುತ್ತಿತ್ತು.//

ಸಂಕಟ ಸದಾ ಒಂಟಿ, ಸಂತಸಕ್ಕಷ್ಟೆ ಇರೋದು ನೂರು ನೆಂಟರು.....

ಇರುಳು ಸರಿಯದ ದುಗುಡದ ಚಾಪೆಯ ಮೇಲೆ
ನಿಜೀವ ಕನಸು ತೂಕಡಿಸುತ್ತಿದೆ....
ಮನ ಮೌನದಲ್ಲಿ ನೋವಿನಾಲಾಪವ ಮಂದ್ರದಲ್ಲಿಯೆ ಹೊರಡಿಸುತ್ತಿದೆ,
ಅನುಕ್ಷಣ ಕರಗಿ ನೀರಾದರೂ ಸಹ
ನೆನಪುಗಳ ನಿತ್ಯ ಸಾಂಗತ್ಯ....
ಮೌನಿ ಮನದ ಒಳಗೊಳಗೆ ಅವ್ಯಕ್ತ ಆಹ್ಲಾದವನ್ನೆ ಹೊತ್ತು ತರುತ್ತವೆ/
ಸ್ವಪ್ನದಲ್ಲಿಯೂ ನೀ ಕಳೆದು ಹೋಗುವ ಹೆದರಿಕೆಯ ಹಿನ್ನೆಲೆಯಲ್ಲಿ
ನಿದಿರೆ ಮರೆತ ಕಣ್ಣುಗಳು ನಿಶೆಯಿಡೀ.....
ತೂಕಡಿಸದೆ ನೆನಪ ನಶೆಯಲ್ಲಿ ತೇಲುತ್ತಿರುತ್ತದೆ,
ಕೆಲವೊಮ್ಮೆ ಕಾಡುವ ಈಡೇರದ ಕನಸುಗಳ ಜಾಡಿನಲ್ಲಿ
ಸತ್ತರೂ ಸರಿ ಮತ್ತೊಮ್ಮೆ ಸಾಗುವ ಅದಮ್ಯ ಹಂಬಲ....
ಎದೆಯೊಳಗಿನ್ನೂ ಅಡಗಿಯೆ ಇದೆ//


ಮನಸೋಲೋದೆಂದೂ ನಿಶ್ಚಿತವಲ್ಲ-ಯೋಜಿತವಲ್ಲ
ಅದಕ್ಕೆ ಬಹುಷಃ ಧಾರಾಳ ತಪ್ಪುಗಳು....
ಒಲವ ದಾರಿಯಲ್ಲಿ ಹಾಗೆಯೆ ಸಾಗುವಾಗ ಆಗಿಯೇ ತೀರುತ್ತವಲ್ಲ,
ಗಾಳಿಯ ನಿರ್ದಯ ನಿರಂತರ ದಾಳಿಗೆ ಸಿಲುಕಿ
ನಲುಗಿ ನೆಗ್ಗಾದರೂ ನಗುತಲೆ ಇರುವ ಹಳೆಯ ಸುಮದೆದೆಯೊಳಗೆ....
ತುಂಬಿರೋದು ಮಾತ್ರ ಮಂದ್ರ ಮಾರುತ
ಹಿಂದೊಮ್ಮೆ ಸೋಕಿದ್ದ ಮೋಹಕ ನೆನಪು ಮಾತ್ರ/
ಸಲುಗೆಯ ಪರಿಮಿತಿಯೆ ವಿರಹ
ಅತಿಯಾಗಿದ್ದಾಗಲೆ ಅಲ್ಲವ....
ಅದನ್ನ ಕರೆಯೋದು ಒಲವ ನವಿರು ಭಾವ?,
ಕಳುವಾದ ಕನಸಿನ ಬೆನ್ನು ಹತ್ತಿದ ಮನಸಿಗೆ
ನಿರಾಸೆ ಸದಾ ಕಟ್ಟಿಟ್ಟಿರೋದು ಅಭಾಸಕಾರಿ ವಾಸ್ತವ.//


ಮೌನದ ಚಾದರ ಹೊದ್ದು ಹೊರಬಿದ್ದ ಮನಕ್ಕೆ
ಮಾತಿನ ಝಡಿಮಳೆಯಲ್ಲಿ ತೋಯುವ ಅನಿವಾರ್ಯತೆಯಿಲ್ಲ.....
ಹೃದಯ ಹೊಕ್ಕು ಹೊರಬಂದ ನನ್ನ ಪ್ರತಿ ನೆತ್ತರ ಕಣಗಳೂ
ಸಹ ನಿನ್ನ ಹೆಸರ ಹಚ್ಚೆಯನ್ನ ಹೊತ್ತಿವೆ,
ಒಡಲಾಳದ ಒಲವಿನ ಮೂಕಭಾವಗಳಿಗೆ
ಮಾತಿನ ಒರತೆಯ ದಾರಿ ಕಾಣಿಸಿದ....
ನಿನ್ನ ಕನಸುಗಳಿಗೆ ನಾನು ಋಣಿ./
ಬೂದು ಮೋಡಗಳ ಒಡಲಲ್ಲಿ
ಸ್ಪಟಿಕ ಶುದ್ಧ ಮಳೆ ಹನಿಗಳು ಖಂಡಿತಾ ಇವೆ....
ನನ್ನೆದೆಯ ಚಿಪ್ಪಲ್ಲಿ ನಿನ್ನೆಡೆಗೆ ಸುರಿವ
ಒಲವ ಮುತ್ತುಗಳು ಹುದುಗಿರುವ ಹಾಗೆ,
ಕಣ್ಣ ಅಂಚಿನ ಕೊನೆಯಲ್ಲಿ
ಅವಿತು ಕುಳಿತ ಕಂಬನಿಯ ಕಿರು ಹನಿಗೂ....
ಅದ್ಯಾರದೋ ವಿರಹದ ವೇದನೆ.//


ನಂಬಿಕೆಯ ಬುನಾದಿಯೆ ಕುಸಿದು ಬೀಳುವಾಗಲೂ
ಆಳದಲ್ಲೊಂದು ಆಶಾವಾದ ಕುಟುಕು ಜೀವವನ್ನ ಹಿಡಿದೆ ಇರುತ್ತದೆ.....
ನೋವ ನೆಲೆಯಲ್ಲಿಯೂ ಭರವಸೆಯ ಎಳೆಗಳಿವೆ
ಕ್ಷಣ ಭಂಗುರ ಮಾತಿಗಿಂತ ಮೌನದ ಲೇಪವೆ ಬಾಳಿನ ಕುರೂಪಕ್ಕೆ ಭೂಷಣ,
ನೆನಪ ಜೊತೆಯಿರದ ಏಕಾಂತ
ಸ್ಮೃತಿ ಸೆಲೆ ಬತ್ತಿ ಹೋದ ಲೋಕಾಂತ.....
ಎರಡೂ ಬರಿ ಬರಡು/
ಇಳಿಸಂಜೆಯ ಆವರಣಕ್ಕೆ
ಕನಸಿನ ಗಗನನೌಕೆ ಮೆಲ್ಲಗೆ ಇಳಿದು ಬರುತಿದೆ....
ತುಂಟ ತಾವರೆ ಕಣ್ಗಳಿಗೆ
ಸೋಕಲಿ ಸವಿನಿದಿರೆ ಅರೆಘಳಿಗೆ,
ಮುಂಜಾವು ಸುಂದರವಾಗೋದು
ಕಾರಿರುಳು ಸವಿ ಗುಂಗಾಗಿ ಕಾಡೋದು....
ನಿನ್ನ ನೆನಪುಕ್ಕುವಾಗ ಮಾತ್ರ.//

ಮೋಡದ ದುಗುಡ ಹೊತ್ತ ಬಾನ ಮನದ ಒಳಗೆ ಮೌನ ಮರ್ಮರವಿದೆ.....
ಸಣ್ಣ ಸಣ್ಣ ಕನಸುಗಳ ಬಣ್ಣ
ಅನಿರೀಕ್ಷಿತ ದುಗುಡದ ಮೋಡಗಳ ಮುಸಲಧಾರೆಗೆ.....
ತೊಳೆದು ಹೋಗುವಾಗ ಅಸಹಾಯಕವಾಗಿ ಮನ ಕಂಪಿಸುತ್ತದೆ,
ಬಿಸಿಲ ಕೋಲಿನಲ್ಲಿ ನೆಲದೆದೆಯ ಸೋಕಿದ ಬಾನಿನೊಡೆಯನಿಗೆ
ಸಿಕ್ಕಿದ್ದು ನವಿರಾದ ಹುಸಿ ರೋಮಾಂಚನ ಮಾತ್ರ/
ಕತ್ತಲ ಕಡಲೊಳಗೆ ಬೆಳಕ ಸಾವಿರ ಮುತ್ತುಗಳಿವೆ
ಮನ ಮಾಸಿದ್ದರೂ ನಿರೀಕ್ಷೆ ಮಿನುಗಿಸುವ ಕೋಟಿ ಹೊಳೆವ ನತ್ತುಗಳಿವೆ.....
ಕವಿಯಾದ ಕರ್ಮಕ್ಕೆ ಬರೆಯುತ್ತೇನೆ
ಮೌನದ ರಾಗಕ್ಕೆ ಅನಿವಾರ್ಯ ಕಿವಿಯಾಗುತ್ತೇನೆ,
ಹಾಗೆಯೆ ಸಾಗುವ ಹಾದಿಯಲ್ಲಿ ಒಂಟಿತನ ಕಾಡುವ ಕ್ಷಣಗಳೆಲ್ಲ
ಕಣ್ಣ ಹನಿಗಳು ಸಾಂಗತ್ಯದ ಸಾಮಿಪ್ಯ ನೀಡುತ್ತವೆ.//


ಮರೆತ ಹಾದಿಯಲ್ಲಿ ಹೊರಳಿ ಹೆಜ್ಜೆಯಿಡುವಾಗ
ಹಳೆಯ ಮುಳ್ಳುಗಳು ಮತ್ತೆ ಮತ್ತೆ ಯಾತನಾಮಯವಾಗಿ ಚುಚ್ಚಿ ಕಾಡುತ್ತವೆ......
ದೂರ ತೀರದ ಕನಸಿನ ನೌಕೆಗೆ
ನಡುಗಡಲಲ್ಲೆ ತಳ ತೂತು ಬಿದ್ದ ಸಂಕಟ,
ನನಸಿನ ಆಸೆ ಕ್ಷೀಣವಾಗುತ್ತಿದ್ದರೂ ಸಹ
ಕನಸಿನ ಕೈಹುಟ್ಟು ಇನ್ನೂ ಸಕ್ರಿಯವಾಗಿರೋದಂತೂ ದಿಟ/
ಸುರಿವ ಹನಿ ಹನಿಯಲ್ಲೂ ಒಲವ ಸೋನೆ
ನನ್ನ ಪ್ರತಿ ಕನವರಿಕೆಯಲ್ಲೂ ನೀನೆ ಬರಿ ನೀನೆ....
ಮೌನ ಮನದ ಕತ್ತಲಿಗೆ ಬಿದ್ದ ಭೀಕರ ಬೆಂಕಿಗೆ
ಸಂಭ್ರಮದ ದೊಂದಿ ಬಲಿಯಾದದ್ದು,
ಒಲವ ದೀಪ ಆರುವ ಮೊದಲು ಸಿಡಿಸಿದ
ನಿರಾಕರಣೆಯ ಅನಿರೀಕ್ಷಿತ ಸೊಡರಿನಿಂದಲೆ.//


ಬಾಳ ಬಡ ಗುಡಿಸಲು ಉರಿದು
ಬೂದಿಯಾಗಿ ಇನ್ನಿಲ್ಲವಾಗಿದ್ದು.....
ಅದರೊಳಗೆ ಬೆಳಕ ನಿರೀಕ್ಷೆಯಲ್ಲಿ ಹಚ್ಚಿರಿಸಿದ್ದ
ಪ್ರೇಮದ ಮಣ್ಣ ಹಣತೆಯ ಕಿರು ಕಿಡಿಯಿಂದಲೆ,
ಆಸೆಯ ತೀರ ಸುದೂರ ಬಲು ದೂರ
ನಾವೆಯ ಹುಟ್ಟು ನೆಲ ಮುಟ್ಟದು....
ಒಡಕು ದೋಣಿಯೆಂದೂ ನಿರೀಕ್ಷೆಯ ದಡ ಸೇರಿ
ಅಲ್ಲೆಂದೂ ಸಂತಸದ ಗೂಡು ಕಟ್ಟದು/
ಹಸುರಿನ ಕನಸು ಬಿದ್ದರೂ ಸಾಕು
ಕೋಗಿಲೆಯ ಕಂಠ ತನ್ನಷ್ಟಕ್ಕೆ ತಾನೆ ಇಂಪಾಗುತ್ತದೆ....
ನಿನ್ನ ನೆನಪು ಸುಳಿದರೂ ಸಾಕು ನನ್ನ ಮೌನ ಮಾರ್ದವವಾಗಿ
ಸುಡು ಸೆಖೆಯಲ್ಲೂ ಮನ ತಂಪಾಗುತ್ತದೆ,
ಗಾಳಿಯಲ್ಲಿ ಹಾರಿಬಿಟ್ಟ ಕನಸಿನ ಹೂಮರಿಗಳಿಗೆಲ್ಲ
ರೆಕ್ಕೆ ಬಲಿತು ಸತತ ಹಾರಾಟದಿಂದ ಹೈರಾಣಾದರೂ ಸಹ....
ಅವಕ್ಕಿನ್ನೂ ನಿನ್ನ ಹೆಗಲ ರೆಂಬೆಯ ಗುರಿಯನ್ನ ಇನ್ನೂ ಮುಟ್ಟಲಾಗಿಯೆ ಇಲ್ಲ!//


ನಾದದ ಅಂತರಾಳ ಹೊಕ್ಕ ತಾಳದ ಮೈತುಂಬ
ಗಾನದ ಗಂಧ ಆವರಿಸಿ ಘಮಘಮಿಸುತ್ತಿದೆ....
ಗಾಳಿಗೂ ಎಡೆಯಿರದಷ್ಟು ಹತ್ತಿರದಲ್ಲಿ ಅಂಟಿಕೊಂಡ
ಒಲವ ಜೀವ ಅದೆಷ್ಟೆ ದೂರವಿದ್ದರೂ
ವಾಸ್ತವದಲ್ಲಿ ಇನ್ನಷ್ಟು ಹತ್ತಿರವಾಗಿರೋದು ವಿಸ್ಮಯ,
ಕರೆದು ಕರೆದು ಸಾಕಾಗಿ ಹೂತು ಹೋದ
ಕಂಠದ ಆಳದಲ್ಲಿ ಹಳೆಯ ಸ್ವರಗಳದೆ ಮಾರ್ದನಿ/
ಕುಡಿಯೊಡೆದ ಕನಸಿನ ಮೊಗ್ಗುಗಳೆಲ್ಲ
ಸಾಕಾರ ಸುಮಗಳಾಗಿ ಅರಳುವಂತಾಗಿದ್ದಾರೆ....
ಬದುಕು ಖಂಡಿತ ಕಿಲುಬು ಬಂಗಾರಕ್ಕಿಂತ ಅತ್ಯಮೂಲ್ಯವಾಗುತ್ತಿತ್ತು,
ಕರಗಿ ನೀರಾದರೂ ಸಹ
ನೆನಪುಗಳ ನಿತ್ಯ ಸಾಂಗತ್ಯ.....
ಮೌನಿ ಮನದ ಒಳಗೊಳಗೆ
ಅವ್ಯಕ್ತ ಆಹ್ಲಾದವನ್ನೆ ಹೊತ್ತು ತರುತ್ತವೆ//