09 July 2013

ದೂರದಿಂದ ತಂಪ ಹೊತ್ತು ತರುವ ಗಾಳಿಗೂ ಗೊತ್ತು ಸೆಖೆಗೆ ನೆಲದ ಮೈ ಬೆವರಿರುವ ಸಂಗತಿ.....

ಮಾಸಲಾಗಿದೆ ನಿಜ ನೀನಿಲ್ಲದೆ
ಸುಂದರವಾಗಿದ್ದ ನನ್ನ ಬದುಕಿನ ಪೇಲವ ಮುಖ....
ಆದರೆ ನೀನು ಗುರುತಿಸಲಾರದಷ್ಟೇನೂ ಬದಲಾಗಿಲ್ಲ ಬಿಡು,
ನಿರಂತರ ನಿನ್ನ ಧ್ಯಾನದ ವ್ಯಸನಕ್ಕೆ ಬಿದ್ದ ಮೇಲೆ
ನಾನು ಸಂತ....
ಎಲ್ಲರಿಗೂ ಗೊತ್ತು ನನ್ನ ಮನಸೊಳಗೆ
ಸದ್ದಿರದೆ ಬಂದು ನಿಂತಿರೋದು ನೀನೆ ಅಂತ/
ಏಕತಾನದ ಬಾಳ ಗಾನಕ್ಕೆ
ಒಲವ ನಾದ ಬೆರೆತರೆ ಮಾತ್ರ...
ಅನುಗಾಲ ಸಂಭ್ರಮದ ಗೀತೆ ಹಾಡಲು ಹಿತ,
ಮೋಡ ಮುಸುಗಿದ ಬಾನಿನಂತೆಯೆ ಮನ
ಒಳಗೆ ದುಗುಡದ ಆತಂಕ ಅದೆಷ್ಟೆ ಇದ್ದರೂ....
ಮೇಲ್ನೋಟಕ್ಕೆ ಮಾತ್ರ ಪರಮ ಮೌನ.//


ತಾವರೆಯನ್ನೆ ಎದೆ ಮೇಲೆ ಹೊದ್ದ ಕಪ್ಪುಕೆರೆಯ
ಮನದಾಳದಲ್ಲಿಯೂ ಸ್ವಚ್ಛ ಪ್ರೀತಿಯ ಬಿಂಬ ಹುದುಗಿದೆ....
ನೋವ ಕೆಸರೆ ಮಡುಗಟ್ಟಿದ ಕೆರೆಯ ಕಣ್ಣಲ್ಲರಳಿದ ಕೆಂದಾವರೆಯ
ಮಂದಹಾಸದಲ್ಲೂ ತುಂಟ ನಗುವಿನ ಸೆಳುಕಿದೆ,
ಸಂಕಟದ ಕವಲು ನನ್ನ ಕನಸಾಗಿರಲಿಲ್ಲ
ಒತ್ತಾಯದಿಂದ ಈ ಹೊರಳು ಹಾದಿಗೆ....
ನನ್ನನ್ನು ದೂಡಲಾಗಿತ್ತು ಅಷ್ಟೆ./
ಗಲಭೆ ಪೀಡಿತ ಪ್ರದೇಶ ಮನದ ಮನೆ
ಒಂಟಿತನದ ಜೊತೆಗೆ....
ನಿರ್ಜೀವ ಸ್ವಪ್ನಗಳ ಸೆಣೆಸಾಟ ಇಲ್ಲಿ ನಿರಂತರ,
ಹಟಾತ್ತನೆ ಮುಗಿದ ಕನಸಿನ ಕೊನೆಯ ಚೂರು
ಆಸೆಯಿಂದ ಅರಳಿದ್ದ ಕಣ್ಣಲ್ಲಿ ಮುಳ್ಳಾಗಿ ಹೊಕ್ಕರೂ ಸಹ....
ಪ್ರಾಣ ಹೋಗುವ ಯಾತನೆಯಲ್ಲೂ
ಮೊದಲ ಪ್ರೀತಿಯ ಮೋಹ ಸವಿ ಸ್ವಪ್ನವಾಗಿ ಕಾಡದಿರೋದಿಲ್ಲ.//



ಹೂವರಳಿದ ಮೇಲೆ ಮೊಗ್ಗಿನ ಮನಸು ನುಚ್ಚುನೂರು
ಆದರೂ ಉಳಿದೇ ಇರುತ್ತದೆ....
ಎಳೆತನದ ಮುಗ್ಧತೆ ಒಳಗೆ ಚೂರೇಚೂರು,
ಕರಗಿ ಕರಗಿ ನೀರಾಗಿ ಮನದ ದುಗುಡವೆಲ್ಲ
ಹರಿದು ಹೋದ ಮೇಲೂ....
ನೋವಿನ ಕೊನೆ ಹನಿ ಮನ ಮರದ ಕೊಂಬೆಯಿಂದ
ಇನ್ನೂ ಎಡೆಬಿಡದೆ ತೊಟ್ಟಿಕ್ಕುತ್ತಿದೆ/
ನೋವಿನ ಹನಿಗಳೆಲ್ಲ ನಯನಗಳಲ್ಲಿ ಮಡುಗಟ್ಟಿ
ಮನಸೊಳಗೆ ಮುದುಡಿದಾಗ ಸ್ವಪ್ನ ಸುಮಗಳ ಬುಟ್ಟಿ....
ಸಂಕಟ ಮಾತ್ರ ಬಾಳಿನುದ್ದ ಗಟ್ಟಿ,
ನಿನಗಿಂದು ಗುರುತಿರಲಿಕ್ಕಿಲ್ಲ
ನನಗೆ ಅದು ಎಂದೂ ಮರೆಯುವ ಹಾಗಿಲ್ಲ...
ನಿನ್ನ ಮೊದಲ ನೋಟದ ಹಚ್ಚೆ ಬಿದ್ದದ್ದು
ನೇರ ನನ್ನ ಹೃದಯಕ್ಕೆ ಅಲ್ಲವ?.//


ಖಾಲಿ ಮನಸು ಕಮರಿದ ಕನಸು
ದುರ್ಭರ ಬಾಳು ನಿತ್ಯ ಒತ್ತಾಯದ ಅತಿಥಿಗಳಾದಾಗ....
ಅಸಹಾಯಕ ಅಭ್ಯಾಗತ ನಾನು ಪಾರಾಗೋದಾದರೂ ಹೇಗೆ?,
ನಾ ಮೋಹಿತ
ನೀನಿಂದು ಬಯಸದಿದ್ದರೂ ನಿನ್ನ ಸುತ್ತಮುತ್ತ ವ್ಯಾಪಿತ....
ನಿನ್ನಲ್ಲಿ ಲೀನವಾಗುವ ಕನಸಿನಲ್ಲಿಯೆ ಭಾಸ ನನಗೆ ಹಿತ/
ಸಾವಿನ ಹೆದರಿಕೆಯಿಲ್ಲ
ಕೊನೆ ಹಾದಿಯ ಪಥದಲ್ಲೂ ಮನ ಹಿಮ್ಮೆಟ್ಟಿಲ್ಲ....
ಅದು ಸುಡುವ ಬೆಂಕಿಯೆ ಆಗಿದ್ದರೂ ಪರವಾಗಿಲ್ಲ
ಸತ್ಯದ ಬೆಳಕಿನ ಹಾದಿಯೆಡೆಗೇನೆ ಹೆಜ್ಜೆ ಹಾಕುವ ಹಟ ನನ್ನದು,
ಕನಸಿನ ಹಾದಿಯಲ್ಲಿ ನಿರ್ಭೀತ ವಲಸೆ ನನ್ನದು
ನಿರೀಕ್ಷೆಗಳಿವೆ...
ಅವನ್ನೆಲ್ಲ ಸಾಕಾರಗೊಳಿಸುವ ಹೊಣೆ
ಮಾತ್ರ ನಿನ್ನದು ಕೇವಲ ನಿನ್ನದು.//

No comments: