28 February 2013

ತುಳುಗಾದೆ-೩೦

 "ಅರಿ ಬಾರ್ ಇತ್ತುನೌಲು ಎಲಿ ಪೆರ್ಗುಡೆಲ್ ಕಮ್ಮಿಯೋ?" { ಇದು ಹಣ ಹಾಗು ಅಂತಸ್ತಿಗೆ ಮುತ್ತುವ ಅವಕಾಶವಾದಿ ಮನಸುಗಳನ್ನ ಹೀಯ್ಯಾಳಿಸುವುದಕ್ಕೆ ಹುಟ್ಟಿಕೊಂಡ ಗಾದೆ. ಯಾರಾದರೂ ಹಣ ಚಲ್ಲಲು ತಯಾರಾದರೆಂದರೆ ಸಾಕು ಅವರ ಸುತ್ತ ಅರ್ಜೆಂತ್ ಅಭಿಮಾನಿಗಳ ಹಿಂಬಾಲಕರ ಪಡೆಯೆ ಸಿದ್ಧವಾಗುತ್ತದೆ. ಬೆಲ್ಲಕ್ಕೆ ಇರುವೆ ಮುತ್ತುವಂತೆ ಮುತ್ತುವ ಇವರೆಲ್ಲರ ಧ್ಯೇಯ ಹುಚ್ಚುಮುಂಡೆ ಮದುವೆಯಲ್ಲಿ ತಾವೂ ಗಂಟು ಕಳ್ಳರಾಗುವುದರ ಕಡೆಯೆ ಇರುತ್ತದೆ ಅನ್ನುವುದು ವಾಸ್ತವ. ಗಂಟು ಕರಗಿದೊಡನೆ ತಾವು ಹೊತ್ತು ಮೆರೆಸುತ್ತಿದ್ದ ಒಡೆಯನ ಋಣವನ್ನ ಇದ್ದಕ್ಕಿದ್ದಂತೆಯೆ ಹರಿದುಕೊಂಡು ಹೊಸ ರೊಕ್ಕಸ್ಥನ ತಲಾಶಿಗೆ ಹೊರಟು ಗುಂಪಿನಲ್ಲಿ ಗೋವಿಂದರಂತೆ ಗಂಟಲು ಹರಿದುಕೊಂಡು ಜೈಕಾರ ಕೂಗಿ ತಮ್ಮ ಕಿಸೆ ತುಂಬಿಸಿಕೊಳ್ಳುವ ಈ ಹುನ್ನಾರದ ಮಂದಿ ಹಿಂದೆಯೂ ಇದ್ದರು, ಇಂದೂ ಇರುತ್ತಾರೆ, ಮುಂದೆಯೂ ಇದ್ದೇ ಇರುತ್ತಾರೆ. ತುಳುನಾಡಿನಲ್ಲಿ ಅಕ್ಕಿಯನ್ನು ಕಳಸಿಗೆಯ ಲೆಕ್ಖದಲ್ಲಿ ಅಳೆದು ಮುಡಿಕಟ್ಟಿ ಅಟ್ಟದ ಮೇಲೆ ಕೂಡಿಡುವ ಕ್ರಮ ಇದೆ. ಈ "ಮುಡಿ" ನೋಡಲು ದೊಡ್ದ ಗಾತ್ರದ ಕಾಲ್ಚೆಂಡಿನಂತೆ ಕಾಣುವ ಹುಳ್ಳಿನಿಂದ ಕಲಾತ್ಮಕವಾಗಿ ಹೆಣೆದ ಒಂದು ಸುಭದ್ರ ದಾಸ್ತಾನು ಪೊಟ್ಟಣ. ಅದನ್ನ ಕೈಕತ್ತಿಯಂಚಲ್ಲಿ ಬಡಿಬಡಿದು ಕೈಯಲ್ಲೆ ಹೆಣೆದ ಕುಲ್ಲಿನ ಹಗ್ಗಗಳಲ್ಲಿ ಹಾಕಿ ಭದ್ರವಾಗಿ ಕಟ್ಟುವುದೂ ಸಹ ಒಂದು ಕಲೆ. ಹಾಗೆ ಕಟ್ಟಿದ ಮುಡಿಯಿಂದ ಕಾಳು ಅಕ್ಕಿಯೂ ಹೊರ ಬೀಲದು. ಆದರೆ ಅದೆಷ್ಟೆ ಜಾಗ್ರತೆ ವಹಿಸಿದರೂ ಹಾಳು ಮೂಷಿಕರಾಯರ ಕಾಟ ಮಾತ್ರ ರೈತರಿಗೆ ತಪ್ಪದು. ಘಟ್ಟದ ಮೇಲೆ ಅಕ್ಕಿ-ಭತ್ತವನ್ನ ಕೂಡಿಡುವ ರೈತನ ಪಣತ ಅಥವಾ ಅಟ್ಟದ ಮೇಲಿರಿಸಿದ ಇಲಿ ಹೆಗ್ಗಣಗಳಿಗೆ ಸೂಳೆಯ ಮನೆಯಿದ್ದಂತಿದ್ದರೆ ಘಟ್ಟದ ಕೆಳಗೆ ರೈತರ ಮನೆಯ ಅಟ್ಟಕ್ಕೆ ಆ ಪುಕ್ಕಟೆ ಅವಕಾಶ ಲಭ್ಯ!. ಹೊತ್ತಲ್ಲದ ಹೊತ್ತಿನಲ್ಲಿ ಬೆಳೆದ ರೈತನ ಅನುಮತಿಗೂ ಕಾಯದೆ ಪಣತಕ್ಕೆ ತೂತು ಕೊರೆದು ಮನಸಾರೆ ತೃಪ್ತಿಯಾಗುವಷ್ಟು ಮೆದ್ದು ಮತ್ತೆ ಬೇಕಾದಾಗ ಬಂದು ತಿಂದು, ಜೊತೆಗೆ ಸಾಧ್ಯವಾದಷ್ಟನ್ನ ಗಂಟು ಕಟ್ಟಿಕೊಂಡು ಹೋಗುವ ಗುಣ ಅವುಗಳದ್ದು. ಹಾಗೆಯೆ ಈ ಸಂತೆಯಲ್ಲಿ ಬರುವ ಗಂಟುಕಳ್ಳರ ಗುಣ ಸಹ. ಯಾವುದೆ ಬದ್ಧತೆಯಾಗಲಿ, ಪ್ರಾಮಾಣಿಕ ನಿಷ್ಠೆಯಾಗಲಿ ಇಲ್ಲದಿರುವ ಇವರು ಆ ಕ್ಷಣ ಆಗಬಹುದಾದ ಲಾಭದ ಮೇಲೆ ಮಾತ್ರ ಕಣ್ಣು ಇಟ್ಟಿರುತ್ತರೆ.
 ಯಾವುದೆ ದಢೀರ್ ಉಧ್ಭವ ಮೂರ್ತಿ ಸ್ವಾಮೀಜಿಯೋ, ಇಲ್ಲವೆ ಅರ್ಧರಾತ್ರಿಯಲ್ಲಿ ಹಣ ಹಂಚಿ ಹೆಸರುವಾಸಿಯಾದ ರಾಜಕಾರಣಿಯೋ ಪಡೆವ ಹಿಂಬಾಲಕರ ಗುಣಲಕ್ಷಣಗಳು ಇಂತದ್ದೆ. ಅವರಲ್ಲಿ ಅವಕಾಶವಾದದ ಪರಮಾವಧಿ ಸದಾ ಕಣ್ಣಿಗೆ ರಾಚುವಂತೆ ಗೋಚರಿಸುತ್ತಿರುತ್ತದೆಯೆ ಹೊರತು ಯಾವುದೆ ಆದರ್ಶ ಅಥವಾ ಆತ್ಮ ಸಮರ್ಪಣೆಯ ಧ್ಯೇಯೋದ್ದೇಶಗಳಲ್ಲ. ಅಂತವರ ಬಗ್ಗೆ ಸದಾ ಎಚ್ಚರವಾಗಿರುವುದು ಉತ್ತಮ ಎನ್ನುವ ಪರೋಕ್ಷ ಎಚ್ಚರಿಕೆ ಕೊಡುತ್ತದೆ ಈ ಗಾದೆಯ ವಾಚ್ಯಾರ್ಥ. "ಸಂತೆಯಲ್ಲಿ ಗಂಟುಕಳ್ಳರು" ಎನ್ನುವ ಕನ್ನಡದ ನುಡಿಗಟ್ಟಿನ ಅರ್ಥವೂ ಅದೆ.}


 ( ಅರಿ ಬಾರ್ ಇತ್ತುನೌಲು ಎಲಿ ಪೆರ್ಗುಡೆಲ್ ಕಮ್ಮಿಯೋ? = ಅಕ್ಕಿ ಭತ್ತ ಇರುವಲ್ಲಿ ಇಲಿ ಹೆಗ್ಗಣಗಳು ಕಡಿಮೆಯಾ?.)

27 February 2013

ತುಳುಗಾದೆ-೨೯


  "ಪಿಲಿತ್ತ ಕುಂಞಿ ನಾಕ್ ಆಂಡ ದಾನೆ? ಬೋರಿ ಆಂಡ ದಾನೆ?"


 { ಸಂಬಂಧವಿಲ್ಲದ ವಿಷಯವನ್ನ ಪ್ರಸ್ತಾವಿಸುವಾಗ ಹೇಳಲಾಗುವ ಮಾತಿದು. ಉಪಯೋಗಕ್ಕೆ ಬಾರದ ಸಂಗತಿಗಳು ಪ್ರಪಂಚದಲ್ಲಿ ನಿತ್ಯ ನೂರು ಘಟಿಸುತ್ತವೆ. ಅವೆಲ್ಲವೂ ಧರೆಯ ಮೇಲಿರುವ ಪ್ರತಿಯೊಬ್ಬರಿಗೂ ಅಗತ್ಯವಾದುದೇನೂ ಆಗಿರಲಾರದು. ಯಾವುದೆ ರೀತಿಯಲ್ಲಿ ನಮ್ಮನ್ನ ಪ್ರಭಾವಿಸದ ಪರೋಕ್ಷ ಸಂಗತಿಗಳ ಪ್ರಸ್ತಾಪ ಮನೆಯ ಮಾತುಕಥೆಯಲ್ಲಿ ಎದ್ದಾಗ ಸಾಮಾನ್ಯವಾಗಿ ಮೇಲಿನ ಮಾತನ್ನ ಹೇಳಿ ಅತ್ಯುತ್ಸಾಹದಿಂದ ಆ ಸಂಗತಿಯ ಗಂಟು ಬಿಚ್ಚಲು ರಣೋತ್ಸಾಹದಿಂದ ಹೊರಟವರ ಗಂಟಲನ್ನ ಸಾಮಾನ್ಯವಾಗಿ ಮುಚ್ಚಿಸಲಾಗುತ್ತದೆ.


 ಹುಲಿಯೊಂದು ಕಾಡಿನಲ್ಲಿ ಮರಿಯಿಟ್ಟಿತಂತೆ. ಆ ಮರಿಗಳು ಹೆಣ್ಣಾದರೂ ಸರಿ ಗಂಡಾದರೂ ಸರಿ ನಾಮಾನ್ಯ ರೈತಾಪಿಯ ಪಾಲಿಗೆ ಎರಡೂ ಸಹ ಒಂದೆ! ಹುಲಿಮರಿಗಳು ಹೆಣ್ಣಾದ ಮಾತ್ರಕ್ಕೆ ಅವನ್ನ ತಂದು ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ಹಾಲು ಕರೆಯುವಂತಿಲ್ಲ! ಗಂಡಾದ ಮಾತ್ರಕ್ಕೆ ಹಿಡಿಸಿತಂದು ಬೀಜ ಒಡೆಸಿ ಲಾಳ ಕಟ್ಟಿಸಿ ಗದ್ದೆ ಹೂಡಲು ನೇಗಿಲಿಗೆ ಜೊತೆಯಾಗಿ ಕಟ್ಟುವುದೂ ಸಹ ಅಸಾಧ್ಯ!! ಅದೃಷ್ಟಕ್ಕೆ ಬೆಂಕಿ ಬಿದ್ದರೆ ಮುಂದೊಮ್ಮೆ ಬೆಳೆದು ದೊಡ್ಡವಾದ ಮೇಲೆ ಹಾದಿತಪ್ಪಿ ಬೇಟೆಯನ್ನರಸಿ ಹಸಿವಿನಿಂದ ಕೆಂಗೆಟ್ಟರವು ತನ್ನ ಕರಾವಿನ ಕೊಟ್ಟಿಗೆಗೆ ಧಾಳಿಯಿಟ್ಟರೆ ತಾನೆ ಕೆಡಬೇಕಾದೀತು. ಹುಲಿ ಮರಿಗಳ ಲಿಂಗ ಕಟ್ಟಿಕೊಂಡು ನಮಗೇನೆನ್ನುವ ದುಡಿಯುವ ವರ್ಗದ ನಿಷ್ಠುರ ನುಡಿಯಿದರ ಹಿಂದಿದೆ. ಅಂದಿನ ಅನ್ನ ಅಂದೆ ದುಡಿಯುವ ಅನಿವಾರ್ಯತೆಯುಳ್ಳ ಬಡ ವರ್ಗದ ಮಂದಿಗೆ ಈ ಕೆಲಸಕ್ಕೆ ಬಾರದ ಸಂಗತಿಗಳು ಅನ್ಗತ್ಯವಾಗಿ ಕಾಣುತ್ತವೆ. ಅಲ್ಲೆಲ್ಲೋ ಜಪಾನಿನ ಮೇಲೆ ಅದ್ಯಾವುದೋ ಅಮೇರಿಕ ಅಣುಬಾಂಬ್ ಒಗೆದರೆ ತನಗದರಿಂದೇನು? ಅನ್ನುವ ಲೆಕ್ಕಾಚಾರದ ಬುಡದಿಂದ ಹುಟ್ಟಿದ ಆಲೋಚನೆಯ ಮೊಳಕೆಯಿದು. ಅಂದಹಾಗೆ 'ನಾಕ್' ಎಂದರೆ ತುಳುವಿನಲ್ಲಿ ಹೆಣ್ಣುಕರು ಅಥವಾ ದನ, ಬೋರಿಯೆಂದರೆ ಗಂಡುಕರು ಅಥವಾ ಎತ್ತು.}


 ( ಪಿಲಿತ್ತ ಕುಂಞಿ ನಾಕ್ ಆಂಡ ದಾನೆ? ಬೋರಿ ಆಂಡ ದಾನೆ? = ಹುಲಿಯ ಮರಿ ಹೆಣ್ಗರಾದರೇನು? ಗಂಡ್ಗರಾದರೇನು? )

26 February 2013

ತುಳುಗಾದೆ-೨೮
 "ಬೊಡ್ಚಾಯಿನ ಪೊಣ್ಣನ್ ತೆರೋಟ್ ಒತ್ತಿಯರ್!"

 { ಒಂದು ದೃಷ್ಟಿಯಿಂದ ನೋಡಿದರೆ ಈ ಗಾದೆ ಕನಿಷ್ಠ ಇಂದಿನ ಮಟ್ಟಿಗಂತೂ ಅಪ್ರಸ್ತುತ! "ವೇದ ಸುಳ್ಲಾದರೂ, ತಾನು ಸುಳ್ಳಾಗುವುದಿಲ್ಲ" ಎನ್ನುವುದನ್ನ ಸಾಬೀತು ಮಾಡಲು ಇನ್ನೇನು ಕೆಲವೆ ವರ್ಷಗಳಲ್ಲಿ ಸಾರ್ವತ್ರಿಕವಾಗಿ ಇದು ಎಲ್ಲೆಡೆಯೂ ಚಾಲ್ತಿಗೆ ಬಂದರೆ ಆಶ್ಚರ್ಯವೇನಿಲ್ಲ. ಒಲ್ಲದ ಹೆಣ್ಣು ಆಂದರೆ ಇಷ್ಟವಾಗದ ಹುಡುಗಿಯನ್ನ ತೆರದಲ್ಲಿ ಚೌಕಾಸಿ ಮಾಡಿಕೊಂಡರು ಎಂದರೆ "ವರದಕ್ಷಿಣೆ"ಗೆ ತಮ್ಮನ್ನ ತಾವೆ ಮಾರಿಕೊಳ್ಳುವ ಇಂದಿನ ಹರೆಯದ ಹುಡುಗರಿಗೆ, ಹಣಕ್ಕೆ ಅವರನ್ನ ಹರಾಜು ಹಾಕುವ ಅವರ ಗುರು-ಹಿರಿಯರಿಗೆ ಬಹುಷಃ ಅರ್ಥವೂ ಆಗಲಾರದು.


 ತುಳುನಾಡು ಮಾತೃ ಮೂಲದ ಸಂಪ್ರದಾಯದ ಮುಖ್ಯವಾಹಿನಿಯನ್ನ ಹೊಂದಿರುವಂತದ್ದು. ಇಲ್ಲಿನ ಮೂಲದ ಬ್ರಾಹ್ಮಣರಾದ ಸ್ಥಾನಿಕರು, ಶಿವಳ್ಳಿಯವರು, ಹೊರಗಿನಿಂದ ಬಂದು ನೆಲೆಯಾದ ಹವ್ಯಕರು, ಗೌಡ ಸಾರಸ್ವತರು, ಚಿತ್ಪಾವನರು, ಇವರನ್ನ ಅನುಕರಿಸುವ ಪದ್ಮಶಾಲಿಗಳು ( ಕಮ್ಮಾರರು ), ದೈವಜ್ಞರು ( ಚಿನ್ನದ ಕೆಲಸ ಮಾಡುವವರು ), ಆಚಾರಿಗಳು ( ಬಡಗಿಗಳು.) ಹಾಗೂ ಪ್ರೊಟೆಸ್ಟಂಟ್ ಕ್ರೈಸ್ತರು ಇವರೆಲ್ಲರ ಹೊರತು ಉಳಿದೆಲ್ಲ ಮಂದಿ ಜಾತಿ, ಮತ, ಧರ್ಮಾತೀತರಾಗಿ ಮಾತೃಮೂಲ ಕುಲ ವ್ಯವಸ್ಥೆಯನ್ನ ಅದರ್ ಮೌಖಿಕ ಕಾನೂನನ್ನ ಸಿಷ್ಠೆಯಿಂದ ಅನುಕರಿಸುತ್ತಾರೆ. ಇದರಲ್ಲಿ ಹಿಂದುಗಳಷ್ಟೆ ಅಲ್ಲದೆ ಜೈನರು, ನವಾಯತ ಮುಸಲ್ಮಾನರು, ಬ್ಯಾರಿ ಮುಸಲ್ಮಾನರು ಹಾಗೂ ಕ್ಯಾಥೋಲಿಕ್ ಕ್ರೈಸ್ತರೂ ಸೇರುತ್ತಾರೆ. ಇವರ ಮನೆಯ ಆಡಳಿತಧಿಕಾರಿ ಗಂಡಸೆ ಆಗಿದ್ದರೂ ಆಡಳಿತದ ಮುದ್ರೆ ಹಾಗೂ ಹಕ್ಕು ಹೊಂದಿರುವವರು ಕುಟುಂಬದ ಹೆಂಗಸರು ಮತ್ತವರ ಅಸಂಖ್ಯ ಸಂತಾನ. ಇದನ್ನೆ ಕರುನಾಡಿಗರು "ಅಳಿಯ ಕಟ್ಟು ಸಂತಾನ"ದ ಹಕ್ಕು ಅಂತ ಕರೆದರು. ಈ ವ್ಯವಸ್ಥೆ ಸಶಕ್ತವಾಗಿ ಚಾಲ್ತಿಯಲ್ಲಿದ್ದಾಗ ಮದುವೆಯ ಹಂತದಲ್ಲಿ ಇಂದು ಆಚರಣೆಯಲ್ಲಿರುವ ವರದಕ್ಷಿಣೆಗೆ ತೀರಾ ವಿರುದ್ಧವಾದ "ವಧು ದಕ್ಷಿಣೆ" ಪದ್ಧತಿ ರೂಢಿಯಲ್ಲಿತ್ತು. ತಮ್ಮ ಮಗನಿಗೆ ಮಡದಿಯಾಗಿ ಹೆಣ್ಣನ್ನ ಬಯಸುವ ಗಂಡಿನ ಹೆತ್ತವರು "ತೆರ" ಅಂದರೆ ನಿಶ್ಚಿತ ವಧು ದಕ್ಷಿಣೆಯನ್ನ ಹೆಣ್ಣು ಹೆತ್ತವರಿಗೆ ಸಲ್ಲಿಸಿ ತಮ್ಮ ಹುಡುಗನ ಕನ್ಯಾ ಸೆರೆ(?) ಬಿಡಿಸಿಕೊಳ್ಳುವ ಅನಿವಾರ್ಯತೆಯಿತ್ತು! ಅಂತಹ ಪರಿಸ್ಥಿತಿಯಲ್ಲಿ ಮಳ್ಳೆಗಣ್ಣಾದ, ಉಬ್ಬುಹಲ್ಲಿನ, ಶ್ಯಾಮಲ ವರ್ಣದ ಸ್ವಲ್ಪ ಸುರೂಪಿಯಾಗಿಲ್ಲದ ಹುಡುಗಿಯನ್ನ ಒಪ್ಪಿಕೊಳ್ಳಲು ಮೀನ-ಮೇಷ ಎಣಿಸಿದ ಗಂಡಿನ ಕಡೆಯವರು ಕಡೆಗೆ ಅದನ್ನೆ ಮುಂದು ಮಾಡಿ ಹುಡುಗಿಯ ಮನೆಯವರು ಅಪೇಕ್ಷಿಸಿದ ತೆರದಲ್ಲಿ ಧಾರಾಳ ಚೌಕಾಸಿ ಮಾಡಿದರು ಎನ್ನುತ್ತದೆ ಈ ಗಾದೆಯ ವಾಚ್ಯಾರ್ಥ.


 ಆದರೆ ಕ್ರಮೇಣ ಸಮಾಜದಲ್ಲಿ ಪುರುಷ ಪ್ರಾಧಾನ್ಯತೆ ಹೆಚ್ಚಿ ಹಣ್ಣು ಹೆತ್ತವರು ತಮ್ಮ ಶಕ್ತಿ ಮೀರಿದ ದುಬಾರಿ ವರದಕ್ಷಿಣೆಯನ್ನ ಪೀಕಿಯಾದರೂ ತಮ್ಮ ಬೆಳೆದು ನಿಂತ ಮಗಳನ್ನ ಧಾರೆಯೆರೆವ ಅನಿಷ್ಟದ ಪದ್ಧತಿ ತುಳುನಾಡಿನ "ಜನಿವಾರಧಾರಿ"ಗಳ ಮೇಲ್ಪಂಕ್ತಿಯನ್ನ ಮೀರಿ ಅಬ್ರಾಮ್ಹಣರ ವಲಯದಲ್ಲೂ ಕೃತಕವಾಗಿ ರೂಢಿಯಾಗಿ ರಾಜಾರೋಷವಾಗಿ ಆಚರಣೆಯಾಗುತ್ತಿದೆ. ಆದರೆ ದೇಶದಲ್ಲಿ ಈಗ ತಲೆದೊರುತ್ತಿರುವ ಆತಂಕಕಾರಿ ಪ್ರಮಾಣದ ಲಿಂಗಾನುಪಾತವನ್ನ ಗಮನಿಸಿ ಹೇಳುವುದಾದರೆ ಖಂಡಿತ ಮುಂದೊಮ್ಮೆ ಹೆಣ್ಣು ಹೆತ್ತವರಿಗೆ ಬೇಡಿಕೆ ಹೆಚ್ಚಿ "ತೆರ" ಪದ್ಧತಿ ಮೊದಲಿನಂತೆ ಚಾಲ್ತಿಗೆ ಬಂದರೂ ಅಚ್ಚರಿಯೇನೂ ಇಲ್ಲ.}


 ( ಬೊಡ್ಚಾಯಿನ ಪೊಣ್ಣನ್ ತೆರೋಟ್ ಒತ್ತಿಯರ್! = ಬೇಡವಾದ ಹೆಣ್ಣನ್ನ ವಧುದಕ್ಷಿಣೆಯಲ್ಲಿ ಒತ್ತಿದರು!.)

25 February 2013

ತುಳುಗಾದೆ-೨೭
 "ಒಣಸ್ ಸಟ್ಯಂಡ ಬಜಿ ದಿನ ಸೆಟ್ಯಂಡ್, ಬುಡೆದಿ ಸೆಟ್ಯಳಂಡ ಪೂರ ಜನ್ಮೊ ಸೆಟ್ಯಂಡ್" { ಬಾಳು ಅದೆಷ್ಟೆ ಕಿರಿದಾಗಿ ಮೇಲ್ನೋಟಕ್ಕೆ ಕಂಡರೂ ಸಹ ಅದು ಅನುಭವಿಸುವವರಿಗೆ ಸುದೀರ್ಘ ಪಯಣವಾಗಿರುತ್ತದೆ. ಅರಿತು ಜೊತೆಜೊತೆಗೆ ಬಾಳುವ ಸಂಗಾತಿ ಸಿಗದಿದ್ದ ಪಕ್ಷದಲ್ಲಿ ಬಾಳು ಗೋಳಾಗಿ ಪರಿವರ್ತನೆಯಾಗುವುದು ಸಹಜ. ಇದನ್ನೆ ವಿವೇಕವನ್ನಾಗಿ ಹೇಳುವ ಉಮೇದಿರುವ ಗಾದೆಯಿದು.


 ಊಟ ಕೆಲವೊಮ್ಮೆ ಕಾರಣಾಂತರಗಳಿಂದ ಕೆಡುವುದುಂಟು. ಅಡುಗೆ ಮಾಡುವ ಕೈಯ ಮನಸು ಸಿಟ್ಟಾಗಿದ್ದರೆ ಅಡಿ ಹಿಡಿದೋ, ಸುಟ್ಟು ಹೋಗಿಯೋ ಅಡುಗೆ ಕುಲಗೆಟ್ಟು ಹೋಗಬಹುದು. ಅಲ್ಲದೆ ಅಪರೂಪಕ್ಕೆ ಅಡುಗೆಗೆ ಬಳಸುವ ತರಕಾರಿ ಅಥವಾ ಇನ್ನಿತರ ಸಾಮಗ್ರಿ ಹಾಳಾಗಿದ್ದರೂ ಸಹ ಮಾಡಿದ್ದ ಅಡುಗೆ ರುಚಿಗೆಟ್ಟು, ಶೀಘ್ರ ಹಳಸಿಹೋಗಿ ತಿನ್ನಲಾರದ ಸ್ಥಿತಿಗೆ ಮುಟ್ಟಿ ವ್ಯರ್ಥವಾಗಬಹುದು. ಹಾಗೇನಾದರೂ ಆದರೆ ಹಸಿದು ಬಂದ ಹೊಟ್ಟೆಗೆ ಹೊತ್ತಿಗೆ ಸರಿಯಾಗಿ ಅನ್ನ ಕಾಣಲಾಗದೆ ಆಂದಿನ ದಿನ ಮಾತ್ರ ಮಾನಸಿಕ ಕ್ಲೇಷ ಹೆಚ್ಚಿ ಹಾಳಾದ ಹಾಗೆ. ಮರುದಿನ ಅಂದಾದ ತಪ್ಪನ್ನ ಸುಧಾರಿಸಿಕೊಳ್ಳುವ ಅವಕಾಶ ಸದಾ ಇದ್ದೆ ಇರುತ್ತದೆ. ಆದರೆ ಹೆಂಡತಿ ಅಥವಾ ಬಾಳನ್ನ ಜೊತೆಯಲ್ಲೆ ಕಳೆಯಲು ನಿರ್ಧರಿಸಿದ ಜೀವನ ಸಂಗಾತಿ ಮನಸು ಕೆಡಿಸಿಕೊಂಡು ಮುನಿಸಿನಿಂದ ಸೆಟಗೊಂಡರೆ ಮಾತ್ರ ಇಡಿ ಜನ್ಮವೆ ಹಾಳಾಗುತ್ತದಂತೆ.ಹೊರಗೆ ಸಿಗಲಾರದ ನೆಮ್ಮದಿಯನ್ನ ಎಲ್ಲರೂ ಹುಡುಕುವ ಒಂದೆ ಒಂದು ಸ್ಥಳ ಮನೆ. ಇಲ್ಲಿಯೂ ನಗುಮೊಗದ ಸ್ವಾಗತ ದೊರೆಯದೆ ನೆಮ್ಮದಿ ಮರೀಚಿಕೆಯಾದರೆ ಬಾಳು ಭೂಮಿಯ ಮೇಲೆಯೆ ನರಕವಾಗುವುದು ಶತಃಸಿದ್ಧ. ಹಾಗಾಗದಂತೆ ಹೊಂದಾಣಿಕೆಯಿಂದ ಅನುಸರಿಸಿಕೊಂಡು ಬಾಳಿನ ಕಡಲಿನಲ್ಲಿ ಖುಷಿಯ ಕೈದೋಣಿಯ ಹುಟ್ಟು ಹಾಕಬೇಕೆಂದು ಬುದ್ಧಿ ಹೇಳುತ್ತದೆ ಈ ಗಾದೆಯ ವಾಚ್ಯಾರ್ಥ.)


 ( ಒಣಸ್ ಸಟ್ಯಂಡ ಬಜಿ ದಿನ ಸೆಟ್ಯಂಡ್, ಬುಡೆದಿ ಸೆಟ್ಯಳಂಡ ಪೂರ ಜನ್ಮೊ ಸೆಟ್ಯಂಡ್ = ಊಟ ಕೆಟ್ಟರೆ ಬರಿ ದಿವಸ ಕೆಟ್ಟೀತು, ಹೆಂಡತಿ ಸಿಟ್ಟಲ್ಲಿ ಕೆಟ್ಟರೆ ಪೂರ್ತಿ ಜನ್ಮವೆ ಕೆಟ್ಟೀತು.)

24 February 2013

ತುಳುಗಾದೆ-೨೬

 "ಕೊರ್ತ್ ಪನಡಾ, ಪಂಡ್ತ್ ಕೊರಡಾ"

 { ಇದ್ದು ಇಲ್ಲೆನ ಬೇಡ/,
 ಕೊಟ್ಟು ಕುದಿಯಲು ಬೇಡ//

 ಎನ್ನುತ್ತಾರೆ ಭಕ್ತಿ ಭಂಡಾರಿ ಬಸವಣ್ಣ ತಮ್ಮ ವಚನವೊಂದರಲ್ಲಿ.

ಬದುಕಿನಲ್ಲಿ ನಾವು ನಮ್ಮ ಮಿತಿಯಲ್ಲಿ ದಾನಶೀಲರಾಗಿರಬೇಕಂತೆ. ಬಾಳನ ಎಲ್ಲಾ ದಿನಗಳೂ ಒಂದೆ ಸಮನಾಗಿರುವುದಿಲ್ಲ. ಇಂದು ಕೆಳಗೆ ಹೋದ ವ್ಯಕ್ತಿಯೊಬ್ಬನ ಅದೃಷ್ಟ ಚಕ್ರ ಯಾವತ್ತಾದರೂ ಒಂದು ದಿನ ಮೇಲೇರಿಯೆ ತೀರುತ್ತದೆ. ಇಂದು ಜಗಮಗಿಸುತ್ತಿರುವ ನಕ್ಷತ್ರವೊಂದು ಅನಿಷ್ಠದ ದಿನವೊಂದರಲ್ಲಿ ಧರೆಗೆ ಅಚಾನಕ್ಕಾಗಿ ಉರುಳಿ ಬೀಳಲೂಬಹುದು. ಆಗ ಪರಸ್ಪರ ಅರ್ಥ ಮಾಡಿಕೊಂಡು ಬಳಲಿದವರನ್ನ ತಮ್ಮ ಸರಿ ಸಮನಾಗಿ ಪರಿಗಣಿಸಿ ಅಂತೆಯೆ ನಡೆಸಿಕೊಂಡು ನೊಂದವರಲ್ಲೂ ಆತ್ಮವಿಶ್ವಾಸವನ್ನ ಮೂಡಿಸಬೇಕಾದುದು ಮೇಲೇರಿರುವವರ ಕರ್ತವ್ಯ. ಆದರೆ ಕೆಲವರಿಗೆ ದಾನಶೀಲತೆಯೇನೋ ರೂಢಿಯಾಗಿರುತ್ತದೆ ಆದರೆ ತಮ್ಮ ಔದಾರ್ಯವನ್ನ ಜೊತೆಗೆ ಪಡೆದವರ ದೈನ್ಯವನ್ನ ಎಲ್ಲರಲ್ಲೂ ಹೇಳಿಕೊಂಡು ತಿರುಗುವ ಕೆಟ್ಟಚಟವೂ ಬೆನ್ನಿಗಂಟಿದ ಭೂತದಂತೆ ಜೊತೆಯಾಗಿರುತ್ತದೆ. ಇದು ಕ್ರಿಯೆಯಲ್ಲಿನ ಲೋಪ. ಒಳ್ಳೆಯ ಗುಣವಾದ ದಾನಶೀಲತೆಯ ಸದಾಚಾರವನ್ನೆಲ್ಲ ಅದು ನುಂಗಿ ನೊಣೆದು ಹಾಕುತ್ತದೆ.


ಯಾವಾಗಲೂ ನಮ್ಮ ಔದಾರ್ಯ ಅಗ್ಗದ ಪ್ರಚಾರದ ಸರಕಾಗಬಾರದು. ಸದ್ಗುಣ ಯಾವತ್ತೂ ಹೆಸರು ಗಳಿಕೆಯ ಜಾಹಿರಾತಿನ ವಸ್ತುವಾಗಬಾರದು. ನಮ್ಮನ್ನ ನಮ್ಮ ಸತ್ಕರ್ಮವನ್ನ ಇನ್ನಿತರರು ಗುತಿಸಬೇಕೆ ಹೊರತು ನಾವೆ ಅದರ ವಕ್ತಾರಿಕೆ ವಹಿಸುವ ವಿದೂಷಕರಾಗಬಾರದು. ಅಂತೆಯೆ ಪಡೆದವರ ಕರ್ತವ್ಯಗಳು. ದೀನವಾಗಿರುವ ತಮ್ಮ ಸ್ಥಿತಿ ಸುಧಾರಿಸಿದ ಮೇಲೆ ಕಷ್ಟದಲ್ಲಿ ಕೈಹಿಡಿದ ಉದಾರ ಹಸ್ತವನ್ನ ಮರೆಯ ಕೂಡದು. ಅಗತ್ಯವಿದ್ದಾಗ ಪಡೆದದ್ದು ಅಲ್ಪವೆ ಆಗಿದ್ದರೂ ಮರೆಯದೆ ಅದನ್ನ ಸಾಧ್ಯವಾದಷ್ಟು ಬಡ್ಡಿಯ ಸಹಿತ ನಮ್ರವಾಗಿ ಹಿಂತಿರುಗಿಸಬೇಕು. ಸಂಕಟದ ಹೊತ್ತಲ್ಲಿ ಸಂತಸದ ಬೀಜವನ್ನ ಬಿತ್ತಿದ್ದ ನಿರ್ಮಲ ಮನಸ್ಸಿನ ಔದಾರ್ಯವನ್ನ ಅಷ್ಟೆ ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕು ಎನ್ನುವುದೆ ಈ ಗಾದೆಯ ಆಶಯ.} ( ಕೊರ್ತ್ ಪನಡಾ, ಪಂಡ್ತ್ ಕೊರಡಾ = ಕೊಟ್ಟು ಹೇಳಬೇಡ, ಹೇಳಿ ಕೊಡಬೇಡ.)

23 February 2013

ತುಳುಗಾದೆ-೨೫

 "ಬೆಚ್ಚ ಪರಮಾನ್ನೊಟು ಕೈ ಪೊತ್ತಾಯಿನ ಬಾಲೆ ಬೆಂಞ್'ಲಾ ಉರಿತ್ ಪರಂಡು"


 { ಮಗುವೊಂದಕ್ಕೆ ಸುಡುವ ಬೆಂಕಿ, ಕೊರೆವ ಮಂಜು ಹಾಗೂ ಕೊಚ್ಚಿ ಹೋಗುವ ನೀರಿನ ನಡುವಿನ ವ್ಯತ್ಯಾಸ ತಿಳಿದಿರುವುದಿಲ್ಲ. ಅನುಭವ ಹೀನತೆ ಹಾಗೂ ಮುಗ್ಧತೆ ಅದಕ್ಕೆ ಕಾರಣ. ಅದರ ಪಾಲಿಗೆ ಕೋಮಲ ಕಮಲವೂ, ಹರಿತ ಕತ್ತಿಯೂ ಒಂದೆ. ಆದರೆ ಇದೆಲ್ಲ ಅದರ ಮೂಲ ಗುಣದ ಪರಿಚಯವಾಗುವ ತನಕ ಮಾತ್ರ ಅನ್ನುವುದು ಗಮನಾರ್ಹ. ಒಮ್ಮೆ ಧಗಧಗ ಉರಿವ ಆಕರ್ಷಕ ಬಣ್ಣದ ಬೆಂಕಿ ಆಸೆಯಿಂದ ಮುಟ್ಟಲು ಹೋದಾಗ ಅದರ ಕೈ-ಮೈ ಸುಟ್ಟಿತೆಂದರೆ ಸಾಕು ಮಗು ಹುಷಾರಾಗುತ್ತದೆ. ಆದ ನೋವಿನಿಂದ ಕಲಿತ ಪಾಠ ಅದನ್ನ ಜಾಗರೂಕತೆಯಿಂದ ವರ್ತಿಸುವಂತೆ ಪ್ರೇರೇಪಿಸುತ್ತದೆ.


 ಮಗುವೊಂದು ಅರಿಯದೆ ಬಿಸಿಬಿಸಿ ಪಾಯಸವನ್ನ ಕುಡಿಯಲು ಹೋಗಿ ಬಾಯಿ-ಗಂಟಲು ಸುಟ್ಟುಕೊಂಡು ಬಾಧೆ ಪಟ್ಟುಕೊಂಡಿತಂತೆ. ಅರಿಯದೆ ಆದ ಪ್ರಮಾದವದು. ಆದರೆ ಆ ಒಂದು ಅನುಭವ ಮಗುವನ್ನ ತಾನು ತಿನ್ನುವ ಎಲ್ಲಾ ತಿನಿಸುಗಳನ್ನೂ ಮೊದಲು ಬಾಯಿಂದ ಊದಿ, ಕೈಯಲ್ಲಿ ಅಲುಗಾಡಿಸುತ್ತಾ ಆರಿಸಿ ತಂಪಾಗಿಸಿಯೆ ತಿನ್ನುವ ಅಭ್ಯಾಸಕ್ಕೆ ಪಕ್ಕಾಗಿಸುತ್ತದೆ. ಇದು ಎಷ್ಟು ರೂಢಿಯಾಗುತ್ತದೆಯೆಂದರೆ ತಂಪಾದ ಹೆಪ್ಪುಗಟ್ಟಿದ ಮೊಸರನ್ನ ಕೊಟ್ಟರೂ ಮಗು ಅದೇ ಕ್ರಮದಲ್ಲಿ ಊದಿ-ಅಲುಗಿಸಿ ಆರಿಸಿ ಮೊಸರನ್ನ ಕುಡಿಯುತ್ತದೆ! ಏನು ಮಾಡುತ್ತೀರಿ? ಆದ ಅನುಭವದ ಫಲ!


 ಅಂತೆಯೆ ಕೆಲಸವೊಂದರಲ್ಲಿ ಅನುಭವವಿಲ್ಲದೆ ಧುಮುಕಿ ಕೈ ಸುಟ್ಟುಕೊಂಡ ಮನುಷ್ಯರ ಪಾಡು ಎನ್ನುತ್ತದೆ ಈ ಗಾದೆಯ ವಾಚ್ಯಾರ್ಥ. ಹಾಗಾದವರಲ್ಲಿ ಸಾಹಸ ಪ್ರವೃತ್ತಿ ಸಹಜವಾಗಿ ಕುಂಟಿತವಾಗುತ್ತದೆ. ಸರಳವಾದ ಕೆಲಸವನ್ನೂ ಅವರು ಮಾಡುವಾಗ ಅಂಜಿ ಅಳುಕಿ ಮಂದಡಿಯಿಡುವ ಸ್ಥಿತಿಗೆ ತಲುಪಿರುತ್ತಾರೆ. ಅವರಿಗೆ ಹಗ್ಗವೂ ಹಾವೆನಿಸುವ ಹಾಗಾಗಿರುತ್ತದೆ ಎನ್ನುತ್ತದೆ ಈ ಗಾದೆ. ಬಿಸಿ ಹಾಲಿಗೆ ಹೆದರಿದ ಬೆಕ್ಕು ತಂಪಾದ ಹಾಲನ್ನೂ ಕುಡಿಯಲು ಪ್ರತಿಭಟಿಸಿ ಓಟ ಹೂಡುತ್ತಿದ್ದ ತೆನಾಲಿ ರಾಮಕೃಷ್ಣನ ಕಥೆ ಚಿಕ್ಕಂದಿನಲ್ಲಿ ಕೇಳಿದ್ದು ನೆನಪಾಗುತ್ತಿದೆ.}


 ( ಬೆಚ್ಚ ಪರಮಾನ್ನೊಟು ಕೈ ಪೊತ್ತಾಯಿನ ಬಾಲೆ ಬೆಂಞ್'ಲಾ ಉರಿತ್ ಪರಂಡು = ಬಿಸಿ ಪಾಯಸದಲ್ಲಿ ಕೈ ಸುಟ್ಟುಕೊಂಡ ಮಗು ಮೊಸರನ್ನೂ ಊದಿ ಕುಡಿಯಿತು!.)

22 February 2013

ತುಳುಗಾದೆ-೨೪


"ಏರಿ ತಿಂನ್ತುನಾಯೆ ಮುರು ಮಾರುವೆ, ಬೀಜ ತಿಂನ್ತುನಾಯೆ ಬೋರಿ ಮಾರುವೆ"


 { 'ಏರಿ' ಅನ್ನುವುದು ಒಂದು ಜಾತಿಯ ಮೀನು ಸಮುದ್ರದ ಒಡಲಿಗೆ ಸಿಹಿನೀರ ಒರತೆಯಾದ ನದಿ ಸೇರುವ ಕಡವಿನಲ್ಲಿ ಸಿಗುವ ಈ ತಳಿಯ ಮೀನು ಬಹಳ ರುಚಿಯಂತೆ. ಅದನ್ನೊಮ್ಮೆ ತಿಂದವನ ನಾಲಗೆ ಅದರ ರುಚಿಗೆ ದಾಸಾನುದಾಸನಾಗಿ ಮುಂದೆ ಅದನ್ನ ತಿನ್ನುವ ಅವಕಾಶ ಸಿಗುತ್ತದಂತಾದರೆ ಸಾಲ ಮಾಡಿಯಾದರೂ, ಅದು ಸಿಗದ ಪಕ್ಷದಲ್ಲಿ ತನ್ನ ಕಿವಿಯಲ್ಲಿರುವ ಬಂಗಾರದ ಮುರುವನ್ನಾದರೂ ಮರು ಆಲೋಚಿಸದೆ ಅಡವಿಟ್ಟೋ ಇಲ್ಲವೆ ಮಾರಿಯಾದರೂ ಏರಿಯನ್ನ ಕೊಂಡು ತನ್ನ ನಾಲಗೆ ಚಪಲವನ್ನ ತೀರಿಸಿಕೊಳ್ಳುತ್ತಾನೆ. ಅದರ ರುಚಿಯ ಮೋಡಿ ಅಂತದ್ದು. ತುಳುನಾಡಿನಲ್ಲಿ ಲಿಂಗಬೇಧವಿಲ್ಲದೆ ಎಲ್ಲಾ ಮಕ್ಕಳಿಗೂ ಕಿವಿ ಚುಚ್ಚುವ ಶಾಸ್ತ್ರ ಮಾಡಿ ಹೆಣ್ಣು ಮಕ್ಕಳಿಗೆ ಓಲೆಯನ್ನೂ, ಗಂಡು ಮಕ್ಕಳಿಗೆ ಬಂಗಾರದ ಮುರುವನ್ನೂ ಹಾಕುವ ಸಂಪ್ರದಾಯವಿತ್ತು. ಅದನ್ನ ಮಾರಿಕೊಳ್ಳುವುದು ದಿವಾಳಿತನದ ಲಕ್ಷಣ ಎನ್ನುವ ತುಚ್ಛ ಭಾವನೆ ಇದೆ. ಹೀಗಾಗಿ ನಾಲಗೆ ರುಚಿಗೆ ಸೋತ ಮನುಷ್ಯ ಮುರು ಮಾರಲೂ ಹಿಂಜರಿಯಲಾರ ಎನ್ನುವ ವ್ಯಂಗ್ಯ ಇನ್ನುಳಿದ ಎಲ್ಲಾ ಮಾನವ ಸಹಜ ದೌರ್ಬಲ್ಯಗಳಿಗೂ ಅನ್ವಯಿಸಿ ಹೇಳಬಹುದಾಗಿದೆ.


 ಅಂತೆಯೆ ತುಳುನಾಡಿನ 'ಗೋಂಕು' ಅಂದರೆ ಕರುನಾಡಿನ 'ಗೇರುಹಣ್ಣು'. ಅದರ ಬೀಜ ತುಳುನಾಡಿನ ಶೈಲಿಯ ಕನ್ನಡದಲ್ಲಿ 'ಗೋವೆ ಬೀಜ'ವೆಂದು ಕರೆಸಿಕೊಳ್ಳುತ್ತದೆ. ದಕ್ಷಿಣ ಅಮೇರಿಕೆ ಮೂಲದ ಗೇರುಬೀಜ ಗೋವೆ ಮಾರ್ಗವಾಗಿ ದೇಶಭ್ರಷ್ಟ ಕೊಂಕಣಿಗರ ಮೂಲಕ ತುಳುನಾಡಿಗೆ ಅಲ್ಲಿಂದ ಮುಂದೆ ಕೇರಳಕ್ಕೆ ಪಸರಿಸಿತು. ಹೀಗಾಗಿ ಅದನ್ನ ತುಳುನಾಡಿನ ಕನ್ನಡಿಗರು 'ಗೋವೆ ಬೀಜ'ವೆಂದು ಕರೆದರು. ಅದರ ಬೀಜವನ್ನ ಅಡುಗೆಗೆ ವಿವಿಧ ಪಲ್ಯಗಳ ತಯಾರಿಯಲ್ಲಿ ಹಸಿಯಾಗಿಯೂ, ಸಿಹಿ ಮತ್ತು ಖಾರದ ತಿಂಡಿಗಳಲ್ಲಿ ಒಣಗಿಸಿಯೂ ಬಳಸಲಾಗುತ್ತದೆ. ರುಚಿಯಲ್ಲಿ ಸರಿಸಾಟಿಯಿಲ್ಲದ ಗೋವೆ ಬೀಜವನ್ನ ಹುರಿದು ಉಪ್ಪು-ಖಾರದ ಪುಡಿ ಬೆರೆಸಿ ಮುಕ್ಕುವವರೂ ಇದ್ದಾರೆ. ಬಹುಶಃ ಅದರ ರುಚಿಗೆ ಮಾರು ಹೋಗದವರು ಯಾರೂ ಇರಲಿಕ್ಕಿಲ್ಲ. ಅದರ ರುಚಿಗೆ ದಾಸನಾದವ ತನ್ನ ಎತ್ತನ್ನ ಮಾರಿಯಾದರೂ ಅದನ್ನ ಕೊಂಡೆ ತೀರುತ್ತಾನಂತೆ. ಭಾರತದ ಇನ್ಯಾವುದೆ ಪ್ರದೇಶದಂತೆ ಕೃಷಿಯನ್ನೆ ಉಸಿರಾಗಿರಿಸಿಕೊಂಡಿರುವ ತುಳುನಾಡಿನ ಕೃಷಿಕ ತನ್ನ ಗದ್ದೆ ಹೂಡುವ ಮೂಲಾಧಾರ ಎತ್ತುಗಳನ್ನೋ, ಇಲ್ಲವೆ ಕೋಣಗಳನ್ನೋ ಬಾಯಿ ಚಪಲಕ್ಕಾಗಿ ಮಾರಿ ಹಾಕಿದನೆಂದರೆ ಅವನಿಗೂ, ಅವನ ಮನೆಯವರಿಗೂ ಮುಂದೆ ಮತ್ತೊಂದು ಜೋಡಿ ಎತ್ತನ್ನ ಹೊಂದಿಸುವವರೆಗೆ ವರ್ಷಪೂರ್ತಿ ಬಾಯಿಗೆ ಮಣ್ಣೆ ಗತಿ! ಒಟ್ಟಿನಲ್ಲಿ ಯಾವುದೆ ಚಟಕ್ಕೆ ದಾಸಾನುದಾಸರಾದ ಮಂದಿ ತಮ್ಮ ಚಟ ತೀರಿಕೆಗೆ ಯಾವ ಮಟ್ಟವನ್ನಾದರೂ ಮುಟ್ಟಿಯಾರು ಎಂದು ಛೇಡಿಸಲು ಈ ಮಾತನ್ನ ತುಳುನಾಡಿನಲ್ಲಿ ಬಳಸಲಾಗುತ್ತದೆ.ನನ್ನ ಅನುಭವದಲ್ಲಿ ಹೇಳುವುದಾದರೆ ನಾನು ಇಲ್ಲಿಯವರೆಗೆ ತಿಂದ ರುಚಿಯ ಉತ್ತುಂಗದ ತಿನಿಸು "ಕೇವಿಯರ್". ಮೊದಲ ಬಾರಿಗೆ ಇದನ್ನ ಮೆದ್ದುದರ ರುಚಿಗೆ ಮಾರು ಹೋದವ ಇನ್ನೊಂಚೂರು ಕೇವಿಯರ್ ಕರುಣಿಸುವುದಾದರೆ ನಾನು ಪ್ರಯಾಣಿಸುತ್ತಿದ್ದ ಲುಫ್ತಾನ್ಸಾ ಏರ್'ಲೈನ್ಸ್'ನ ಗಗನಸಖಿಯ ಜೀತ ಮಾಡಲೂ ತಯ್ಯಾರಾಗಿದ್ದೆ!. ಇದಾಗಿ ಎಂಟು ತಿಂಗಳಿಗೆ ಬೆಂಗಳೂರಿನ 'ತಾಜ್ ಬೈ ವಿವಂತಾ' ಹೊಟೆಲಿನಲ್ಲಿ ನಡೆದ್ದಿದ್ದ ಪ್ರತಿಷ್ಠಿತ ಪತ್ರಿಕೆಯೊಂದರ ಸಂತೋಷಕೂಟಕ್ಕೆ ಆಹ್ವಾನಿತನಾಗಿ ಹೋಗಿದ್ದೆ. ಸಿಕ್ಕಿತಲ್ಲ ಅಪರೂಪಕ್ಕೆ ಅಲ್ಲೂ ಈ ಪಾಪಿ(?) ಕೇವಿಯರ್. ಪ್ರಸಾದದಂತೆ ಬಡಿಸಿದ್ದ ಅದನ್ನ್ನ ಒಂದೆ ಒಂದು ಸೌಟಿನಷ್ಟು ಬಡಿಸಿದ್ದರೂ ಸಾಕಿತ್ತು ಅದಕ್ಕೆ ಬದಲಾಗಿ ಅಲ್ಲಿಯೆ ಬಾಂಡಲೆ ತಿಕ್ಕಿಕೊಂಡು ಕಾಲ ಹಾಕಲೂ ನಾನು ಹಿಂಜರಿಯುತ್ತಿರಲಿಲ್ಲ!!! ಅಷ್ಟು ರುಚಿ ಅದರದ್ದು. ಅಂದ ಹಾಗೆ 'ಕೇವಿಯರ್" ಅಂದರೆ 'ಪಕ್ವವಾಗದ ಸಾಲೊಮನ್ ಮೀನಿನ ಸಂಸ್ಕರಿತ ಮೊಟ್ಟೆಗಳು". ಕಾಸ್ಪಿಯನ್ ಸಮುದ್ರದಲ್ಲಿ ಮಾತ್ರ ಸಿಗುವ ಅವು ನೋಡೊದಕ್ಕೆ ಪಪ್ಪಾಯಿ ಬೀಜಗಳ ತರಹ ಕಾಣ್ತದೆ.}


 ( ಏರಿ ತಿಂನ್ತುನಾಯೆ ಮುರು ಮಾರುವೆ, ಬೀಜ ತಿಂನ್ತುನಾಯೆ ಬೋರಿ ಮಾರುವೆ = ಏರಿ ತಿಂದವನು ಕಿವಿಯೊಡವೆ ಮಾರುವ, ಗೇರುಬೀಜ ತಿಂದವನು ಎತ್ತನ್ನೆ ಮಾರುವ.)

21 February 2013

ತುಳುಗಾದೆ-೨೩


 "ಬುಲೆ ಆಪಿ ಕಂಡ ಆವೊಡು, ಬುಡೆದಿ ಕಪ್ಪುದ ಆವೊಡು!"


 { ಗದ್ದೆಗೆ ನೀರಿನ ಆಸರೆ ಬಹು ಮುಖ್ಯ. ತೋಡಿನ ಸಮೀಪವೆ ಇರುವ ಗದ್ದೆಯಲ್ಲಿ ಆರಾಮವಾಗಿ ತುಳುನಾಡಿನಲ್ಲಿ ವರ್ಷಕ್ಕೆ ಮೂರು ಬೆಳೆ ತೆಗೆಯುತ್ತಾರೆ. ವರ್ಷದಾದ್ಯಂತ ಭೂಮಿಯ ಒಡಲನ್ನ ತಂಪಾಗಿಟ್ಟು ಅವಳ ಎದೆಗೆ ಹಸಿರನ್ನ ಒಂದಿಲ್ಲೊಂದು ರೀತಿಯಲ್ಲಿ ಉಡಿಸಿದಂತೆ ಗೋಚರಿಸಿ ಕಾಣುವ ಕಣ್ಣಿಗೆ ತಂಪನ್ನೆರೆವ ಗದ್ದೆ ಮನೆಯ ಕಷ್ಟಕ್ಕೂ ಒದಗಿ ಬರುತ್ತದೆ. ಆಗುವ ಬೆಳೆಯ ಬಹುಪಾಲು ಮನೆಯ ನಿತ್ಯದ ಖರ್ಚಿಗೆ ಸಂದರೂ ಹೆಚ್ಚಿನದ್ದನ್ನ ಹೊರಗಡೆ ಮಾರಿ ಇನ್ನಿತರ ಅಗತ್ಯಗಳನ್ನ ನಿರ್ವಿಘ್ನವಾಗಿ ನೆರವೇರಿಸಿ ಕೊಳ್ಳೋಕೆ ಸಾಧ್ಯವಾಗುವುದು ಬೆಳೆ ಬೆಳೆವ ಗದ್ದೆ ನಮಗಿದ್ದಲ್ಲಿ ಮಾತ್ರ.


 ಅಂತೆಯೆ ಕಪ್ಪು ಮೈಬಣ್ಣದ ಹೆಂಡತಿ ಮನೆಯಲ್ಲಿದ್ದರೆ ತಲೆ ನೋವು ಕಡಿಮೆಯಂತೆ! ಬೆಳ್ಳಗಿನ ಚರ್ಮಕ್ಕೆ ಮನಸೋಲುವ ಕಾಮದ ಕಣ್ಗಳಿಗೆ ಕಪ್ಪಿನ ಕುರಿತು ಅಷ್ಟಾಗಿ ಆಸಕ್ತಿ ಇರಲಾರದು ಎನ್ನುತ್ತದೆ ಈ ಗಾದೆ. ಹೀಗಾಗಿ ಪರಪುರುಷರ ಹಸಿದ ಕಾಮಪಿಪಾಸು ಕಣ್ಣುಗಳ ಸುಳಿನೋಟ ನಮ್ಮ ಮನೆಯ ಮೇಲೆ ಬೀಳುವುದಿಲ್ಲ. ಕಪ್ಪು ಫಲವತ್ತತೆಯ ಸೂಚಕವೂ ಹೌದಂತೆ. ಕರಿಮಣ್ಣಿನ ಗದ್ದೆ ಹೆಚ್ಚು ಬೆಳೆಸ್ನೇಹಿ. ಕೆಂಪು ಮಣ್ಣಿನ ಹೋಲಿಕೆಯಲ್ಲಿ ಕಪ್ಪು ಮಣ್ಣಿನ ಸತ್ವ ಹೆಚ್ಚು. ಇದು ಈ ಗಾದೆಯ ವಾಚ್ಯಾರ್ಥ. 


ನಿಜದ ಅರ್ಥದಲ್ಲಿ ಇದು ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಅಧಿಕ ಮೌಲ್ಯಯುತ ಎನ್ನುವ ವಿವೇಕ ಬೋಧಿಸುವ ಗಾದೆಯಿದು. ಭೂಮಿಯಂತೆ ಹೆಣ್ಣು. ಇದು ಮನೆಯ ಬೆಳಕಾದರೆ ಸಾಕೆ ಹೊರತು ಹೊರಗಿನವರ ಕಣ್ಣು ಕುಕ್ಕುವ ಥಳುಕಾಗಿ ಇರಬೇಕಿಲ್ಲ ಎನ್ನುವ ಸಲಹೆಯನ್ನ ನೀಡುತ್ತದೆ.}


 ( ಬುಲೆ ಆಪಿ ಕಂಡ ಆವೊಡು, ಬುಡೆದಿ ಕಪ್ಪುದ ಆವೊಡು! = ಬೆಳೆ ಆಗುವ ಗದ್ದೆಯಾಗಬೇಕು, ಹೆಂಡತಿ ಕಪ್ಪಿನವಳಾಗಿರಬೇಕು!.)

20 February 2013

ತುಳುಗಾದೆ-೨೨

 "ಕಂಜಿದ ಅಂಬಿ ಕಳೊಕ್ಕು ಸುದ್ದ ಅತ್"


 { ಕಳ ಅಂದರೆ ಅಂಗಳ ಹಾಗೂ ಚಾವಡಿಯ ನೆಲವನ್ನ ಈ ಸಿಮೆಂಟು ಅನ್ನುವ ವಿಚಿತ್ರ ವಸ್ತು ತುಳುನಾಡಿಗೆ ಅಡಿಯಿಡುವ ಮೊದಲು ಶುದ್ಧವಾಗಿರಿಸಲು ಬಳಸುತ್ತಿದ್ದ ಮೂಲವಸ್ತು ದನದ ಸಗಣಿ. ಒಂದು ಬಗೆಯ ಕೀಟನಾಶಕದ ಗುಣವನ್ನ ಹೊಂದಿರುವ ಸಗಣಿಯನ್ನ ಕರಿಯೊಂದಿಗೆ ಬೆರೆಸಿ ಮಣ್ಣಿನಿಂದ ಮಾಡಲಾಗುತ್ತಿದ್ದ ಚಾವಡಿಯ ನೆಲದ ಮೇಲೆ ಸಾರಿಸಿ ಅನಂತರ ಅದರ ಮೇಲೆ ಗೇರು ಸಿಪ್ಪೆಯನ್ನ ಸುಟ್ಟು ತೆಗೆದ ಕಪ್ಪೆಣ್ಣೆಯನ್ನ ಹಚ್ಚಿ ಅದರ ಮೇಲೆ ಹೊಳೆ-ತೋಡುಗಳ ದಂಡೆಯಲ್ಲಿ ಸಿಗುವ ನುಣುಪಿನ ಕಲ್ಲುಗಳಲ್ಲಿ ತಿಕ್ಕಿತಿಕ್ಕಿ ಹೊಳೆಯುವ ನಯವಾದ ಕನ್ನಡಿಯಂತಹ ನೀರು ನಿರೋಧಕ ನೆಲವನ್ನ ಸಿದ್ಧ ಪಡಿಸಲಾಗುತ್ತಿತ್ತು. ಅದೇ ಮಾದರಿಯಲ್ಲಿ ಅಂಗಳದ ನೆಲಕ್ಕೆ ಕರಿ ಕದಡಿದ ಸಗಣಿಯನ್ನ ಸಾರಿಸಲಾಗುತ್ತಿದ್ದುದು ಹೌದಾದರೂ ಅಲ್ಲಿನ ನೆಲವನ್ನ ನಯಗೊಳಿಸುವ ಕ್ರಮವಿರಲಿಲ್ಲ. ಆಗಾಗ ಅಂಗಳದ ಕಳಕ್ಕೆ ಸಗಣಿ ಸಾರಿಸಿ ಶುದ್ಧಗೊಳಿಸುತ್ತಿದ್ದುದು ವಾಡಿಕೆ.


 ವಿಷಯ ಹೀಗಿದ್ದರೂ ಈ ಶುದ್ಧತೆಗೆ ಬೆಳೆದ ದನದ ಸಗಣಿಯೆ ಸೂಕ್ತ, ಹೊರತು ಅದರ ಕರುವಿನದಲ್ಲ! ಮನುಷ್ಯರಂತೆ ಮಲ ಹಾಕುವ ಕರುವಿನ ಸಗಣಿ ಒಳ್ಳೆಯ ಗೊಬ್ಬರವಾಗಬಲ್ಲದೆ ಹೊರತು ಶುದ್ಧತೆಗೆ ಅನರ್ಹ. ಅಂತೆಯೆ ಹಿರಿಯರ ಮಾತಿನ ನಡುವೆ ಬಾಯಿ ಹಾಕುವ ಪ್ರಾಪ್ತ ವಯಸ್ಕರಲ್ಲದ ಕಿರಿಯರ ನುಡಿಗಳಿಗೂ ಇರಬೇಕಾದ ಬೆಲೆ. ಅದರಲ್ಲಿ ಹುಡುಗುತನವಿರುತ್ತದೆಯೆ ಹೊರತು ಗಹನ ಚಿಂತನೆಯಿಲ್ಲದ ಅನುಭವ ಶೂನ್ಯವಾದ ಮಕ್ಕಳ ಮಾತುಗಳು ಯಾವುದೆ ದೂರದರ್ಶಿತ್ವವನ್ನ ಹೊಂದಿರುವುದು ಸಂಶಯ. ಕರುವಿನ ಮಲದಂತೆ ಕಿರಿಯರ ಮಾತು ಕೂಡ ಕಳದ ಶೋಭೆಗೆ ತಕ್ಕದಾದುದಲ್ಲ ಎನ್ನುತ್ತದೆ ಈ ಗಾದೆಯ ವಾಚ್ಯಾರ್ಥ.


 ಒಂದೆ ಪದವಾದ ಕಂಜಿ ಅಂದರೆ ಕರುವನ್ನ ದನದ ಕರುವಿಗೂ, ಜನದ ಕರುಗಳಿಗೂ ಅನ್ವಯಿಸಿ ಚತುರವಾಗಿ ಹೇಳುವ ಈ ಗಾದೆ ವಯಸ್ಸಿಗೆ ಇರಬೇಕಾದ ವಿನಯವನ್ನ ನೆನಪಿಸುತ್ತಲೆ ಮನೆಯ ಕಿರಿಯರೆಡೆಗಿನ ಹಿರಿಯರ ಕಟ್ಟುನಿಟ್ಟಿನ ಶಿಸ್ತಿನ ಬೆಳವಣಿಗೆಯ ಬಗ್ಗೆ ಕಿವಿಮಾತು ಹೇಳುತ್ತದೆ.}


 ( ಕಂಜಿದ ಅಂಬಿ ಕಳೊಕ್ಕು ಸುದ್ದ ಅತ್ = ಕರುವಿನ ಸಗಣಿ ಅಂಗಳಕ್ಕೆ ಶುದ್ಧವಲ್ಲ.)

19 February 2013

ತುಳುಗಾದೆ-೨೧


 "ಸೈತಿನ ಕೋರಿಗ್ ಸೂತ ಪೋಡಿಗೆ ಇದ್ದಿ"


 { ಕಷ್ಟ ಬಾಳಲ್ಲಿ ಎಂದಾದರೊಮ್ಮೆ ಬಂದರೆ ಸಮಸ್ಯೆಯಿಲ್ಲ, ಆದರೆ ಪೂರ್ತಿ ಬಾಳೆ ಸಮಸ್ಯೆಗಳ ಆಗರವಾದರೆ! ಅಂತಹವರಿಗೆ ಯೋಚಿಸಿ ಮುಂದಡಿಯಿಡುವುದು ಮೂರ್ಖತನವೆನ್ನಿಸುವ ಸಿನಿಕತನ ಮನಮಾಡಿರುತ್ತದೆ. ಅವರ ಸಂಕಟದ ಬದುಕಿನಲ್ಲಿ ಕೊಂಚ ನೆಮ್ಮದಿಯಾದರೂ ಸಿಗುತ್ತದೆ ಎನ್ನುವ ಭರವಸೆ ದೊರೆತರೆ ಸಾಕು ಅಂತವರು ಯಾವುದೆ ಸಾಧ್ಯತೆಗಳನ್ನೂ ಅದು ಎಷ್ಟೆ ಕ್ಷುಲ್ಲಕವಾಗಿದ್ದರೂ, ಎಷ್ಟೆ ಅಪಾಯಕಾರಿಯಾಗಿದ್ದರೂ ಒಮ್ಮೆ ಅನುಸರಿಸಿ-ಪ್ರಯೋಗಿಸಿ ನೋಡಲು ಹಿಂಜರಿಯುವುದಿಲ್ಲ. ಉದಾಹರಣೆಗೆ ಆರೋಗ್ಯ ತೀವೃವಾಗಿ ಹದಗೆಟ್ಟ ವ್ಯಕ್ತಿಗಳಿಗೆ ಯಾವುದಾದರೂ ಒಂದು ವೈದ್ಯ ಪದ್ಧತಿಯಿಂದ ಗುಣಕಾಣದೆ ಹೋದರೆ, ಇನ್ಯಾವುದಾದರೂ ಅನ್ಯ ವೈದ್ಯಪದ್ಧತಿಗಳಿಂದಲೋ ಇಲ್ಲವೆ ನಿರ್ದಿಷ್ಟ ವೈದ್ಯರ ಪರಿಣಾಮಕಾರಿ ಚಿಕಿತ್ಸೆಯಿಂದಲೋ ಅದೂ ಇಲ್ಲದಿದ್ದರೆ ಅದೆಲ್ಲೋ ಏಳು ಸಮುದ್ರದಾಚೆ ಸಿಗುವ ರಾಮಬಾಣದಂತಹ ಔಷಧದ ಬಗ್ಗೆ ಯಾರಾದರೂ ಸಲಹೆ ಕೊಟ್ಟರೆ ಖಂಡಿತ ಅದನ್ನವರು ಗಂಭೀರವಾಗಿ ಪರಿಗಣಿಸುತ್ತಾರೆ ಹಾಗೂ ಆ ಚಿಕಿತ್ಸೆ ದೊರೆಯುವ ಜಾಗ ಅದೆಷ್ಟೆ ದೂರವಾಗಿದ್ದರೂ, ಆ ಚಿಕಿತ್ಸೆ ಅದೆಷ್ಟೆ ದುಬಾರಿಯಾಗಿದ್ದರೂ ಒಮ್ಮೆ ಪ್ರಯೋಗಿಸಿ ನೋಡಿಯೆ ಬಿಡಲು ನಿರ್ಧರಿಸಿ ಕಾರ್ಯಪ್ರವರ್ತನಾಗುತ್ತಾನೆ.


ಅಂತೆಯೆ ಬಾಳಿನಲ್ಲಿ ಸೋತು ಹತಾಶರದ ವ್ಯಕ್ತಿಗಳ ಪಾಡು. ಯಾವೊಂದು ರೀತಿಯಲ್ಲೂ ಗೆಲುವು ಕೈಹಿಡಿಯದಾಗ ಹೇಗಾದರೂ, ಎಲ್ಲಾದರೂ ಗೆಲುವಿನ ಸಮೀಪ ಸುಳಿಯುವ ಅವಕಾಶ ಸಿಗುತ್ತದೆ ಎಂದರೆ ಸಾಕು ಆತ ಎಂತಹ ಅಪಾಯವನ್ನೂ ಮೈಮೇಲೆ ಎಳೆದುಕೊಳ್ಳಲು ಸಿದ್ಧನಾಗುತ್ತಾನೆ. ಇದು ಜೀವಿಗೆ ಸಹಜ ಪ್ರಾಕೃತಿಕ ಗುಣ. ಅದನ್ನೆ ಈ ಗಾದೆ ಇನ್ನೊಂದು ಉಪಮೆಯಲ್ಲಿ ಹೇಳುತ್ತದೆ.ತುಳುನಾಡಿನ ಮಾಂಸಹಾರಪ್ರಿಯರ ನೆಚ್ಚಿನ ಖಾದ್ಯ ಕೋಳಿ ಮಾಂಸದಿಂದ ತಯಾರಿಸಿದ್ದು. ಕೋಳಿಯನ್ನ ಕೊಂದು ಮಾಂಸವಾಗಿ ಹದ ಮಾಡುವಾಗ ಎಲ್ಲಕ್ಕೂ ಕೊನೆಯಲ್ಲಿ ಅದರ ಮೈಮೇಲಿರುವ ಕೂದಲುಗಳನ್ನ ಇಲ್ಲವಾಗಿಸಲು ಉರಿವ ಬೆಂಕಿಯ ಜ್ವಾಲೆಗೆ ಆ ಸತ್ತ ಕೋಳಿಯನ್ನ ಒಡ್ಡಿ ಸುಟ್ಟು ಹೆರೆದು ತೆಗೆಯಲಾಗುತ್ತದೆ. ಜೀವಂತವಿರುವಾಗ ಬೆಂಕಿಯನ್ನ ಕಂಡರೆ ಅಂಜುವ ಪ್ರಕೃತಿ ಸಹಜ ಗುಣ ಹೊಂದಿರುವ ಕೋಳಿಗೆ ಸತ್ತ ಮೇಲೆ ಬೆಂಕಿ ಬೆದರಿಕೆಯಲ್ಲ ಎನ್ನುತ್ತದೆ ಈ ಗಾದೆಯ ವಾಚ್ಯಾರ್ಥ. "ನೀರಿಗಿಳಿದವರಿಗೆ ಚಳಿಯೇನು? ಮಳೆಯೇನು?" ಅನ್ನುವ ಕನ್ನಡದ ಗಾದೆಯ ಹಿಂದಿರುವ ಅರ್ಥವೂ ಅದೇನೆ.}


 ( ಸೈತಿನ ಕೋರಿಗ್ ಸೂತ ಪೋಡಿಗೆ ಇದ್ದಿ = ಸತ್ತ ಕೋಳಿಗೆ ಬೆಂಕಿಯ ಹೆದರಿಕೆ ಇಲ್ಲ.)

18 February 2013

ತುಳುಗಾದೆ-೨೦

 "ನೀರ್'ದ ಮಿತ್'ದ ಕೋಪೊಡು ಪೀಂಕನ್ ದೆಕ್ಕುಜಿಡ ನಾದುನೇರೆಗ್?"


 { ಹಟ, ಗಾಳಿಯೊಂದಿಗೆ ಗುದ್ದಾಡುವ ಉತ್ಸಾಹ, ಫಲವಿಲ್ಲದ ದ್ವೇಷಗಳನ್ನ ಸಾಧಿಸುವ ಉಮೇದುಳ್ಳವರನ್ನ ಹಂಗಿಸಲು ಬಳಸುವ ಗಾದೆಯಿದು. ಹೆಚ್ಚಾಗಿ ಹಟದಲ್ಲಿ ರಚ್ಚೆ ಹಿಡಿಯುವ ಬಾಲರಿಗೆ, ರೊಚ್ಚಿನ ಹಟ ಸಾಧಿಸುವ ಬೆಳೆದ ಬಾಲವಿಲ್ಲದವರಿಗೆ ಬೈಯುವಾಗ ಈ ಗಾದೆಯನ್ನ ಹೇಳಲಾಗುತ್ತದೆ. ನೀರಿನ ಮೇಲೆ ಕೋಪಗೊಂಡವರ್ಯಾರೋ ಹೇತ ನಂತರ ಕುಂಡೆಯನ್ನ ತೊಳೆದುಕೊಳ್ಳದೆ ಮೇಲೆದ್ದರಂತೆ! ಆದರೆ ನೀರಿಗೆ ಅದರಿಂದೇನೂ ನಷ್ಟವಾಗಲಿಲ್ಲ. ಹೇಸಿಗೆಯಾಗಿ ನಾತದ್ದು ಕೋಪಗೊಂಡವರ ಕುಂಡೆಯೆ. ಹೀಗಾಗಿ ವ್ಯವಧಾನವಿಲ್ಲದೆ ಹಟ ಸಾಧಿಸಬಾರದು ಎನ್ನುತ್ತದೆ ಈ ಗಾದೆ. ಸಾಮಾನ್ಯವಾಗಿ ಹಿರಿಯರು ಬೈದರೆಂದು ಮಕ್ಕಳು ಊಟ ಬಿಟ್ಟು ಹೆದರಿಸುವುದುಂಟು. ನನ್ನ ಬಾಲ್ಯದಲ್ಲಿ ನಾನು ಈ ಅಸ್ತ್ರವನ್ನ ಮನೆಯಲ್ಲಿ ತಪ್ಪದೆ ಪ್ರಯೋಗಿಸುತ್ತಿದ್ದೆ. ಆದರೆ ಅದೆ ಆಮೇಲಾಮೇಲೆ ನನಗೆ ತಿರುಗು ಬಾಣವಾಯಿತು! ನಾನು ಉಣ್ಣದಿದ್ದರೆ ಅನ್ನಕ್ಕೇನೂ ನಷ್ಟವಾಗುತ್ತಿರಲಿಲ್ಲ. ಹಸಿವಿನಿಂದ ರಾತ್ರಿಯಿಡಿ ನನ್ನ ಹೊಟ್ಟೆಯೆ ಚುರುಗುಡುತ್ತಿತ್ತು. ಸಾಲದ್ದಕ್ಕೆ ಗಾಯದ ಮೇಲೆ ಬರೆಯೆಳೆದಂತೆ ಮನೆಯ ಹಿರಿಯರು ತಾವು ನನ್ನ ಕರೆವ ಶಾಸ್ತ್ರ ಮಾಡಿ ಬರದಿದ್ದಾಗ ತಾವು ಮುಲಾಜಿಲ್ಲದೆ ಉಂಡು ಮಲಗಿ ನನ್ನನ್ನ, ನನ್ನ ಹಟವನ್ನ ಹಾಸ್ಯ ಮಾಡುವಂತೆ ಗೊರಕೆ ಹೊಡೆಯುತ್ತಿದ್ದರು. ಮನೆಯಲ್ಲಿ ಹೆತ್ತವರ ಮೇಲೆ ಸಿಟ್ಟು ಮಾಡಿಕೊಂಡು ಪರೀಕ್ಷೆಗೆ ಸರಿಯಾಗಿ ಓದದೆ ಮರುದಿನ ನಾನೆ ಪರೀಕ್ಷೆ ಎದುರಿಸುವಾಗ ಕಕ್ಕಾಬಿಕ್ಕಿಯಾಗಿ ಪಡಬಾರದ ಪಾಡು ಪಟ್ಟಿದ್ದೂ ಇದೆ! ಹಾಗೆಯೆ ಕ್ಷುಲ್ಲಕ ಕಾರಣಕ್ಕಾಗಿ ಆತ್ಮೀಯರಲ್ಲಿ ಮುನಿಸಿಕೊಂಡು ಮಾತು ಬಿಡುವ ಮಹಾತ್ಮರಿಗೆ ಈ ಮಾತು ಅನ್ವಯಿಸುತ್ತದೆ. ಬಾಳು ಕಿರಿದು, ಅದರಲ್ಲಿ ಜಗಳವಾಡಲು ಹತ್ತುವರ್ಷ, ದ್ವೇಷ ಸಾಧಿಸಲು ಹತ್ತುವರ್ಷ, ಮಾತು ಮುರಿದುಕೊಂಡಿರಲು ಇನ್ನೊಂದು ಹತ್ತುವರ್ಷ ಖಂಡಿತಾ ನಮ್ಮ ಅಲ್ಪಾವಧಿಯ ಅಮೂಲ್ಯ ಬಾಳಿನಲ್ಲಿ ಖಂಡಿತ ಇಲ್ಲ. ಇದನ್ನರಿಯದ ಮೂಢರು ಸುಮ್ಮನೆ ತಮ್ಮ ನೆಮ್ಮದಿಯನ್ನ ಕೆಡಿಸಿಕೊಂಡು ತಮ್ಮ ಮನಸಿನ ನೆಮ್ಮದಿಗೂ ಕೊಳ್ಳಿಯಿಟ್ಟುಕೊಳ್ಳುತ್ತಾರೆ ಎಂದು ಗೇಲಿ ಮಾಡುತ್ತಲೆ ಎಚ್ಚರಿಸುತ್ತದೆ ಈ ಗಾದೆ. "ಬಡವನ ಕೋಪ ದವಡೆಗೆ ಮೂಲ" ಎನ್ನುವ ಕನ್ನಡದ ಗಾದೆಯೂ ಬಹುಷಃ ಹೇಳುವ ತತ್ವ ಇದೇನೆ.}


 ( ನೀರ್'ದ ಮಿತ್'ದ ಕೋಪೊಡು ಪೀಂಕನ್ ದೆಕ್ಕುಜಿಡ ನಾದುನೇರೆಗ್? = ನೀರ ಮೇಲಿನ ಸಿಟ್ಟಿಗೆ ಕುಂಡೆ ತೊಳೆಯದಿದ್ದರೆ ನಾರುವುದ್ಯಾರಿಗೆ?. )

17 February 2013

ತುಳುಗಾದೆ-೧೯


"ಗೋಳಿ ಮರತ್ತಡಿತ್ತ ನಿರೆಳ್'ದ ಲೆಕ್ಖೋ"


 { ಖ್ಯಾತನಾಮರಾಗುವವರ ಹಿಂಬಾಲಕರ, ಸಂತಾನದ, ಒಡಹುಟ್ಟಿದವರ ಸಮಸ್ಯೆಯನ್ನ ವಿವರಿಸುವಾಗ ಈ ಮಾತನ್ನ ಉಧ್ಗರಿಸಲಾಗುತ್ತದೆ. ಗೋಳಿ ಮರವೆಂದರೆ ಆಲದ ಮರವೆಂದರ್ಥ. ಆಲದ ಮರ ತನ್ನ ತಾಯಿ ಬೇರಿನ ಆಸರೆಯಲ್ಲಿ ನೆಲದ ಸಾರವನ್ನ ಹೀರಿಕೊಂಡು ಬೆಳೆಯುವ ಜೊತೆಜೊತೆಗೆ ಅನೇಕ ಬಿಳಲುಗಳೆಂಬ ಉಪ ಕವಲು ಬೇರುಗಳನ್ನ ತನ್ನ ಸುತ್ತಮುತ್ತಲೂ ಹರಡಿಸಿಕೊಂಡು ವಿಶಾಲವಾಗಿ ಹರಡಿಕೊಂಡು ಬೆಳೆಯುತ್ತದೆ.


ಇದರ ನೆರಳು ವ್ಯಾಪ್ತಿಯಲ್ಲಿ ದೊಡ್ಡದಾಗಿ ಕಂಡರೂ ಅದರಿಂದ ಆಗುವ ಉಪಕಾರಕ್ಕಿಂತ ಅಪಕಾರವೆ ಜಾಸ್ತಿ! ಸಾಮಾನ್ಯವಾಗಿ ಗಿಡವೊಂದು ಆರೋಗ್ಯಕರವಾಗಿ ಬೆಳೆದು ನಿಲ್ಲಲು ನೆಲದಾಸರೆಯ ನೀರು ಗೊಬ್ಬರದಷ್ಟೆ ಬಾನಿನಲ್ಲಿ ಸುಡುವ ಭಾಸ್ಕರನ ಬೆಳಕು ಹಾಗೂ ಬಿಸಿಲು ಕೂಡ ಅತ್ಯಗತ್ಯ. ಮಾನವ ಮತ್ತು ಇನ್ನಿತರ ಜೀವಿಗಳಿಗೆ ತಂಪು ನೆರಳಿನಾಸರೆಯಾಗಿ ಭಾಸವಾಗುವ ಬೃಹದಾಲದ ನೆರಳು ಅದೆ ಮರದಡಿ ಬೆಳೆಯುವ ದೊಂಬರಾಟ ನಡೆಸುವ ಇನ್ನಿತರ ಗಿಡಗಂಟಿಗಳ ಪಾಲಿಗೆ ಅಕ್ಷರಶಃ ನರಕ. ತಮ್ಮ ಪಾಲಿಗೆ ಸಿಗಬೇಕಾದ ಸಣ್ಣ ಪಾಲಿಗೂ ಕನ್ನ ಹಾಕುವ ಬೃಹದಾಲದ ವ್ಯಾಪ್ತಿ.


 ಕನಿಷ್ಠ ಬಾನಿನ ಬೆಳಕನ್ನೂ ತಮಗೆ ದಕ್ಕಲು ಬಿಡದ ಆಲದ ವಿಶಾಲ ನೆರಳಿನ ಮುಂದೆ ಇನ್ನಿತರ ಸಸಿಗಳೆಲ್ಲ ಹೋರಾಡಲಾಗದೆ ನೊಂದು ಬಾಡಿ ಮುರುಟುತ್ತವೆ. ಇದು ಅವಿವೇಕಿಗಳ ಪಾಲಿಗೆ ಎಚ್ಚರಿಕೆಯೂ ಹೌದು, ಪ್ರೇರಣೆಯೂ ಹೌದು. ನೀವು ಅದೆಷ್ಟೆ ಖ್ಯಾತ ವ್ಯಕ್ತಿಗಳ ಆಸರೆಯಲ್ಲಿ ಅನಿವಾರ್ಯವಾಗಿಯೋ, ಇಲ್ಲವೆ ಕೈಲಾಗದೆ ಇರುವುದಾದಲ್ಲಿ ನಿಮ್ಮ ಸ್ವಂತ ನೆಲೆಯಲ್ಲಿ ಬೆಳೆಯುವ ಆಸಕ್ತಿ ಹೊಂದಿದ್ದರೆ ಧೈರ್ಯ ಮಾಡಿ ಆ ಖ್ಯಾತರ ನೆರಳಿನಿಂದ ಹೊರಬಂದರಷ್ಟೆ ತಾವೂ ಬೆಳೆಯಲು ಸಾಧ್ಯ ಎನ್ನುತ್ತದೆ ಈ ಗಾದೆಯ ವಾಚ್ಯಾರ್ಥ. "ಆಲದಡಿ ಬೇಲ ಬೆಳೆಯಲಾರದು" ಎನ್ನುವ ಕಣ್ಣಡದ ಗಾದೆಯ ಅರ್ಥವೂ ಇದೆ.}


 ( ಗೋಳಿ ಮರತ್ತಡಿತ್ತ ನಿರೆಳ್'ದ ಲೆಕ್ಖೋ = ಆಲದ ಮರದಡಿಯ ನೆರಳಿನ ಹಾಗೆ.)

16 February 2013

ತುಳುಗಾದೆ-೧೮

 "ಕರಿನ ನೀರ್'ನ ಕಟ್ಟ ಇದ್ದಿ"


 { ಜೀವನ ತುಂಬಾ ಸರಳ ಅದನ್ನ ಸಂಕೀರ್ಣ ಮಾಡಿ ಸೌಹಾರ್ದವನ್ನ ಕೆದಡುವ ಕಾರ್ಯದಲ್ಲಿ ತೊಡಗುವವರಿಗೆ ಎಚ್ಚರಿಕೆ ನೀಡುತ್ತದೆ ಈ ಬೋಧಪೂರ್ಣ ಗಾದೆ. ಹರಿದು ಹೋದ ನೀರಿಗೆ ಅಣೆಕಟ್ಟಿನ ತಡೆ ಹಾಕಲಾಗದು. ಅನಂತರ ಅದು ಕುಡಿಯಲೋ ಇಲ್ಲವೆ ಕೃಷಿಗೋ ಬೇಕೆಂದರೂ ಒದಗಿಬರಲಾಅರದು. ಬರಿದಾದ ತೋಡನ್ನ ನೋಡಿ ಪರಿತಪಿಸಬಹುದಷ್ಟೆ. ಹರಿದು ಹಾಳಾದ ನೀರನ್ನ ಮತ್ತೆ ಹಿಂದೆ ತರುವುದಿರಲಿ, ಹಾಗೆ ಯೋಚಿಸುವುದೂ ಕೂಡ ಮೂರ್ಖತನ ಎನ್ನುತ್ತದೆ ಈ ಗಾದೆಯ ವಾಚ್ಯಾರ್ಥ. 


ಯಾವಾಗಲೂ ಯೋಚಿಸಿ ನುಡಿಯಬೇಕು. ನುಡಿ ಇರಿಯುವಷ್ಟು ಆಳವಾಗಿ ಬಹುಷಃ ಇನ್ಯಾವುದೇ ಹರಿತ ಆಯುಧ ಮನಸನ್ನ ಘಾಸಿಗೊಳಿಸಲಾರದು ಎನ್ನುತ್ತದೆ ಗಾದೆಯ ಸಾರ. ಯಾವುದೆ ಕ್ಷಣದಲ್ಲಿ ಕಳೆದು ಹೋದ ಮೌಲ್ಯವನ್ನ ಮತ್ತೆ ಅದೆ ಮಟ್ಟದಲ್ಲಿ ಗಳಿಸುವ ಅವಕಾಶ ಸಿಗುವುದು ಕಷ್ಟ. ಒಂದು ಕೋನದಿಂದ ವಿಶ್ಲೇಷಿಸುವ ಚಿಂತನೆಗಳು ತಪ್ಪಾಗಿರಲೂಬಹುದು. ಇನ್ನೊಬ್ಬರಿಗೆ ನೋವಿನ ಉಡುಗೊರೆ ಕೊಡುವ ಮುನ್ನ ಒಂದೊಮ್ಮೆ ಅದೆ ಫಲ ಅನಿರೀಕ್ಷಿತವಾಗಿ ನಮಗೆ ಒದಗಿ ಬಂದರೆ ನಮಗಾಗುವ ಸಂಕಟವನ್ನೊಮ್ಮೆ ಕಣ್ಣುಮುಚ್ಚಿ ಕಲ್ಪಿಸಿಕೊಂಡರೆ ನಮ್ಮ ನಡೆ ಹೆಚ್ಚು ಪ್ರಬುದ್ಧವಾಗಿರಬಲ್ಲದು.

"ತಲೆಯಿಂದ ಇಳಿದ ನೀರು ಕಾಲು ಮುಟ್ಟಿಯಾಯಿತು" ಎನ್ನುವ ಮಲಯಾಳಿ ಗಾದೆ, "ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ" ಎನ್ನುವ ಕನ್ನಡದ ಗಾದೆ ಹೇಳುವ ವಿವೇಕವೂ ಇದೇನೆ.}


 ( ಕರಿನ ನೀರ್'ನ ಕಟ್ಟ ಇದ್ದಿ = ಹರಿದ ನೀರಿಗೆ ಕಟ್ಟೆಯಿಲ್ಲ.)

14 February 2013

ತುಳುಗಾದೆ-೧೭


"ಸೋರುನ ಇಲ್ಲಲಾ, ಓರುನ ಇಲ್ಲಲಾ ಒಂಜೆ" { ಸೋರುವ ಮನೆಯಲ್ಲಿ ಬಾಳುವುದು ಕಡು ಕಷ್ಟ, ಅದರಲ್ಲೂ ಮಲಗುವ ಹೊತ್ತಿನಲ್ಲಿ ರಾತ್ರಿಯಿಡಿ ಬಾನಿಗೆ ತೂತು ಬಿದ್ದಂತೆ ಮಳೆ ಹುಯ್ಯುವ ತುಳುನಾಡಿನ ಮಳೆಗಾಲದಲ್ಲಿ ಮನೆಯಲ್ಲಿ ಮಲಗಲೂ ಆಗದೆ, ನೀರು ತೊಟ್ಟಿಕ್ಕಿ ನೆಲದಲ್ಲಿ ಎದ್ದ ಕೆಸರಿನಲ್ಲಿಯೆ ತೂಕಡಿಸುತ್ತಾ ಕಾಲ ಹಾಕಬೇಕಾಗಿ ಬರುವುದು ಇದೆ. ಅದಕ್ಕೆಯೆ ಹಿಂದೆಲ್ಲ ಸಾಂಪ್ರದಾಯಿಕ ಮುಳಿಹುಲ್ಲಿನ ( ಭತ್ತದ ಹುಲ್ಲು ) ಮನೆಗಳೆ ಹೆಚ್ಚಾಗಿದ್ದ ಕಾಲದಲ್ಲಿ ಬೇಸಿಗೆಯಲ್ಲಿ ತಪ್ಪದೆ ಹಳೆಯ ಸೋಗೆ ಬದಲಿಸಿ ಸೂರಿಗೆ ಹಣೆದ ತೆಂಗಿನಗರಿಯ ಮಡಿಲನ್ನ ಮುಚ್ಚಿ ಭದ್ರವಾಗಿ ಹೊಸ ಹುಲ್ಲು ಹೊದೆಸಲಾಗುತ್ತಿತ್ತು. ಎಂತಹ ಕುಂಭದ್ರೋಣ ಮಳೆಗೂ ಹನಿ ನೀರೂ ಮನೆಯೊಳಗೆ ನುಗ್ಗದಂತೆ ಸೂರನ್ನ ತಪ್ಪದೆ ವರ್ಷವೂ ಬದಲಿಸಿ ಮನೆಯ ಭದ್ರತೆ ಕಾಪಾಡಿ ಕೊಳ್ಳಲಾಗುತ್ತಿತ್ತು. ನೆಲವನ್ನೂ ಸಹ ಕೆಮ್ಮಣ್ಣು ಬಳಿದು ಸಗಣಿಗೆ ಕರಿಹಚ್ಚಿ ಸಾರಿಸಿ ಗೇರಿನ ಎಣ್ಣೆಯನ್ನ ಕುಡಿಸಿ ಆಧುನಿಕ ಕಾಲದ ಮಾರ್ಬಲ್'ನಂತೆ ತಿಕ್ಕಿ ನಯಗೊಳಿಸಲಾಗುತ್ತಿತ್ತು. ಒಂದೊಮ್ಮೆ ಆರ್ಥಿಕ ಅಡಚಣೆಯಿಂದಲೋ, ಉಢಾಫೆಯಿಂದಲೋ ಇಲ್ಲಾ ಸೋಮಾರಿತನದಿಂದಲೋ ಈ ವಾಡಿಕೆಯ ದುರಸ್ತಿ ನಡೆಸದಿದ್ದ ಮನೆ ಜೋರು ಮಳೆಗೆ ಸೋರಿ ಕೆಸರಗದ್ದೆಯಂತಾಗುವುದು ಶತಸಿದ್ಧ. ಅಂತೆಯೆ ಸದಾ ಜಗಳ, ಮತ್ಸರದ ಹಗೆಯಂತಿರುವ ಮಂದಿ ಜೊತೆಗೆ ಒಂದೆ ಸೂರಿನಡಿ ಒತ್ತಾಯಕ್ಕೆ ಕಟ್ಟುಬಿದ್ದವರಂತೆ ಬಾಳುವುದೂ ಸಹ ಇಂತಹ ಸೋರುವ ಮನೆಯಲ್ಲಿ ಬಾಳುವಂತಹದ್ದೆ ಕೆಟ್ಟ ಅನುಭವ. ಅಲ್ಲಿ ಮನೆ ಕೆಟ್ಟರೆ ಇಲ್ಲಿ ಮನ ಕೆಡುತ್ತದೆ. ದಾಯಾದಿ ಮತ್ಸರವಿರುವ ಮನೆಯಲ್ಲಿನ ಒಡ ಹುಟ್ಟಿದವರು, ವಿಫಲ ವೈವಾಹಿಕ ಬಂಧನದಲ್ಲಿ ನರಳುವ "ಕೇವಲ ವಿವಾಹಿತರು' ಇಷ್ಟವಿಲ್ಲದೆಯು ಜೊತೆಗೆ ಬಾಳುವ ಗೆಳೆಯರು ಇವರಿಗೆಲ್ಲ ಮೇಲಿನ ಗಾದೆ ಸರಿಯಾಗಿ ಅನ್ವಯಿಸುತ್ತದೆ. ದೂರವಿದ್ದು ನೆಮ್ಮದಿಯಾಗಿರುವುದು ನೋವಿನ ಮಡುವಿಗೆ ತಳ್ಳಿದರೂ ವಿವೇಕಿಯಾದ ಅವರಲ್ಲೊಬ್ಬರು ದಿಟ್ಟ ನಿರ್ಧಾರ ತೆಗೆದುಕೊಂಡು ದೂರಾಗುವುದು ಉತ್ತಮ ಮತ್ತು ಕ್ಷೇಮ ಅನ್ನುತ್ತದೆ ಈ ಗಾದೆ.} ( ಸೋರುನ ಇಲ್, ಓರುನ ಇಲ್ ರಡ್ಡ್'ಲಾ ಒಂಜೆ = ಸೋರುವ ಮನೆಯೂ, ವಟಗುಡುವರಿರುವ ಮನೆ ಎರಡೂ ಒಂದೆ.)

ತುಳುಗಾದೆ-೧೬

"ಕಡಲ್ಡ್ ಏತ್ ನೀರ್ ದಿಂಜುಡಿತ್ತುಂಡಲಾ, ನಮ ಗಿಂಡಿಡ್ ಪತ್ತುನಾತೆ ಕೊಣತು ಬರೋಳಿ!" { ಆಸೆ ಮನುಷ್ಯ ಪ್ರಾಣಿಯ ಸಹಜ ಗುಣ. ಆದರೆ ಅತ್ಯಾಸೆಯ ದುರಾದೃಷ್ಟಕರ ಗುಣ ಕೆಲವರಲ್ಲಿ ಧಾರಾಳವಾಗಿರುವುದೂ ಉಂಟು. ಅಂತಹ ದುರಾತ್ಮರಿಗೆ ವಿವೇಕ ಹೇಳುವ ಪ್ರಯತ್ನ ಮಾಡುತ್ತದೆ ಈ ಗಾದೆ. ಯಾರಿಗೆ, ಯಾವಾಗ, ಎಷ್ಟು ಸಿಕ್ಕಬೇಕು ಅಂತ ಅವರ ಭಾಗ್ಯದಲ್ಲಿ ಬರೆದಿದೆಯೋ ಅದಷ್ಟು ತಪ್ಪದೆ ಅವರ ಕೈ ಸೇರಿಯೇ ಸೇರುತ್ತದೆ ಎನ್ನುವುದು ಸನಾತನ ಆಚರಣೆಗಳನ್ನ ಗಾಢವಾಗಿ ನಂಬುವ ನಮ್ಮ ದೇಶದ ಆರ್ಷೇಯ ನಂಬಿಕೆಗಳಲ್ಲೊಂದು. ಇದು ವಿದ್ಯೆ, ಕೌಟುಂಬಿಕ ಪ್ರೀತಿ, ಯಶಸ್ಸು, ಶಾಂತಿ ಹಾಗು ಸಂಪತ್ತು ಇವೆಲ್ಲದ್ದಕ್ಕೂ ಸರಿಯಾಗಿ ಅನ್ವಯಿಸುತ್ತದೆ. ಮೇಲಿನ ಎಲ್ಲವೂ ಎಂದಿಗೂ ಬತ್ತಲಾಗದ ಕಡಲಿಗೆ ಸಮ. ಅದನ್ನ ನಾವು ಕಣ್ಣರಳಿಸಿ ಕಾಣ ಬಹುದಷ್ಟೆ ಹೊರತು ಇಡಿ ಕಡಲೆ ನನ್ನದಾಗಲಿ ಎನ್ನುವ ದುರಾಸೆ ಪಡಕೂಡದು. ಕದಲಿನ ತೀರಕ್ಕೆ ಹೋದವ ತನ್ನ ಕೈಯಲ್ಲಿರುವ ಚೊಂಬಿನಿಂದ ಅದರಲ್ಲಿ ತುಂಬುವಷ್ಟೆ ನೀರನ್ನ ಮೊಗೆದು ತರಲಾಗುವುದು, ಇಡಿ ಕಡಲನ್ನ ಖಂಡಿತ ಅಲ್ಲ. ಅಂತೆಯೆ ಈ ಎಲ್ಲಾ ಭಾಗ್ಯಗಳೂ ಪ್ರತಿಯೊಬ್ಬರ ಪಾಲಿಗೆ ಅನ್ನುವ ವಾಚ್ಯಾರ್ಥ ಈ ಗಾದೆಯದ್ದು. ಇದರ ಅರಿವಿದ್ದೂ ಅಥವಾ ಅರಿವಿರದೆಯೋ ಕೆಲವು ಕೊರಮರು ದುರಾಸೆಯಿಂದ ಸಿಕ್ಕಿದ್ದನ್ನೆಲ್ಲ ಯೋಗ್ಯತೆ ಮೀರಿ ದೋಚುವ ಹುನ್ನಾರಕ್ಕಿಳಿಯುತ್ತಾರೆ. ಉದಾಹರಣೆಗೆ ನಮ್ಮ ಆಳುವ ಮಂದಿಯನ್ನೆ ತೆಗೆದು ಕೊಳ್ಳಿ. ನಾಡನ್ನ ದೋಚಿದ ಅವರ ಅಕ್ರಮ ಸಂಪತ್ತು ಅವರ ಹತ್ತು ತಲೆಮಾರಿಗೆ ಕೂತು ಉಂಡರೂ ಸಾಕಾಗಿ ಉಳಿಯುವಷ್ಟಾಗಿದ್ದರೂ ಅವರ ದ್ರವ್ಯ ದಾಹಕ್ಕೆ ಮಿತಿಯೆ ಇರುವುದಿಲ್ಲ. ಸತ್ತರೆ ಅವರ ಹೆಣವನ್ನ ಪೂರ್ತಿ ಹಣದ ಕಟ್ಟಿನಲ್ಲಿಯೆ ಸುಟ್ತು ಬೂದಿ ಮಾಡುವಷ್ಟು ಆಗಲೆ ದೋಚಿ ಮುಗಿದಿದ್ದರೂ ಮತ್ತಷ್ಟು ಮೊಗೆದು ಲಪಟಾಯಿಸುವ ಅವರ ಅತಿಯಾಸೆಗೆ ಕೊನೆ ಮೊದಲಿರುವುದಿಲ್ಲ. ಆದರೆ ಕಡೆಗೂ ಆ ಅಕ್ರಮ ಗಳಿಕೆಗಳೆಲ್ಲ ನಾಯಿ ನರಿ ಪಾಲಾಗಿ ಅವರಿಗೆ ತಮ್ಮ ಹಣೆಯಲ್ಲಿ ಬರೆದಿರುವಷ್ಟೆ ದಕ್ಕುವುದು ಖಾತ್ರಿ ಅನ್ನುತ್ತದೆ ಈ ವಿವೇಕಪೂರ್ಣ ಗಾದೆ.} ( ಕಡಲ್ಡ್ ಏತ್ ನೀರ್ ದಿಂಜುಡಿತ್ತುಂಡಲಾ, ನಮ ಗಿಂಡಿಡ್ ಪತ್ತುನಾತೆ ಕೊಣತು ಬರೋಳಿ! = ಸಮುದ್ರದಲ್ಲಿ ಎಷ್ಟು ನೀರು ತುಂಬಿದ್ದರೂ, ನಮ್ಮ ಚೊಂಬಿನಲ್ಲಿ ತುಂಬುವಷ್ಟನ್ನೆ ಕೊಂಡು ಬರಬಹುದು.)

ತುಳುಗಾದೆ-೧೫


"ಯಾನ್ ಉಪ್ಪು ತಿಂತುನಾತ್ ಈ ಉಣ್ಪು ತಿಂತುಜಾ" { ನಾನು ಉಪ್ಪು ತಿಂದಷ್ಟು ನೀನು ಅನ್ನ ತಿಂದಿಲ್ಲ! ಅನ್ನುವುದು ವಯಸ್ಸಾದ ಹಿರಿಯರು ಕಿರಿಯರ ಕೆಲಸಗಳಿಂದ ಬೇಸತ್ತಾಗ, ಅವರ ಉಢಾಫೆಯನ್ನ ಎದುರಿಸುವ ಸಂದರ್ಭ ಬಂದಾಗ ಸಿಟ್ಟಿನಿಂದ ಹೇಳುವ ಮಾತು. ಇದರರ್ಥ ನನ್ನ ಅನುಭವದ ಮುಂದೆ ನೀನು ಪುಟಗೋಸಿಗೆ ಸಮ ಎನ್ನುವ ಆಕ್ರೋಶ ಅಷ್ಟೆ. ಹಿರಿಯರನ್ನ ಗೌರವಿಸುವುದು, ಅವರ ಮಾತಿಗೆ ಶಾಂತವಾಗಿ ಕಿವಿಗೊಟ್ಟು ಒಂದು ವೇಳೆ ಅದು ಸ್ವೀಕಾರಾರ್ಹವಲ್ಲದಿದ್ದಲ್ಲಿ ಮೃದು ಮಾತುಗಳಲ್ಲಿ ಅದನ್ನ ಏಕೆ ಅದು ಸ್ವೀಕಾರಾರ್ಹವಲ್ಲ ಎಂಬುವುದನ್ನ ಹಿರಿಯರಿಗೆ ತೃಪ್ತಿಕರವಾಗಿ ವಿವರಿಸಿ ಅವರನ್ನ ತಮ್ಮ ಯೋಜನೆಗಳತ್ತ ಒಲಿಸಿಕೊಳ್ಲುವುದು ಕಿರಿಯರ ನಮ್ರತೆಯಾಗಬೇಕೆ ಹೊರತು ತಿರಸ್ಕಾರದಿಂದ ಅವರನ್ನ ಪಕ್ಕಕ್ಕೆ ಸರಿಸಿ ಅವರ ಅನುಭವವನ್ನ ಧಿಕ್ಕರಿಸಿ ತಾವು ಕಾಲ ಕಸವಾಗಿದ್ದೇವೆ ಎನ್ನುವ ಭಾವಕ್ಕೆ ಅವರನ್ನ ತಳ್ಳಿ, ನಾವು ಅವರನ್ನ ಅಸಂತೋಷಗೊಳಿಸಬಾರದು ಎನ್ನುವುದು ಈ ಗಾದೆಯ ಒಳಾರ್ಥ. ಒಂದು ರೀತಿಯಲ್ಲಿ ನೋಡಿದರೆ ಇದು ಗಾದೆ ಎನ್ನುವುದಕ್ಕಿಂತ ವ್ಯಂಗ್ಯ ಉಪಮೆ ಎನ್ನಲಡ್ಡಿಯಿಲ್ಲ. "ನಾನು ಹಾಲು ಕುಡಿದಷ್ಟು ನೀನು ನೀರು ಕುಡಿದಿಲ್ಲ" ಎನ್ನುವ ಕನ್ನಡದ ಗಾದೆಯೂ ಸೇರಿದಂತೆ ಬಹುತೇಕ ಭಾರತೀಯ ಭಾಷೆಗಳಲ್ಲಿ ಇದಕ್ಕೆ ಸಮಾನಾರ್ಥ ಸೂಚಿಸುವ ಅನೇಕ ಗಾದೆಗಳಿವೆ.} ( ಯಾನ್ ಉಪ್ಪು ತಿಂತುನಾತ್ ಈ ಉಣ್ಪು ತಿಂತುಜಾ = ನಾನು ಉಪ್ಪು ತಿಂದಷ್ಟು ನೀನು ಅನ್ನ ತಿಂದಿಲ್ಲ.)

ತುಳುಗಾದೆ-೧೪


"ಏಲೆಟ್ ಗುರಿಕಾರ್ಮೆ ತಿಕ್ಯರ ಬಲ್ಲಿ, ಎಲ್ಪೆಟ್ ಪೀ ಸುರುವಾರೆ ಬಲ್ಲಿ" { ಈ ಗಾದೆಯ ಪೂರ್ವಾರ್ಧ ಏಳರ ಎಳೆಪ್ರಾಯದಲ್ಲಿ ಯಾರೂ ಆಧಿಕಾರದ ಚುಕ್ಕಾಣಿ ಹಿಡಿದು ಯಜಮಾನಿಕೆಯನ್ನ ನಿಭಾಯಿಸುವಂತಾಗಬಾರದು. ವಯಸ್ಸಿನ ಎಳಸನ್ನ ಅಧಿಕಾರ ಕೇಂದ್ರದ ಸುತ್ತಮುತ್ತಲಿರುವವರು ಧಾರಾಳ ದುರುಪಯೋಗ ಪಡಿಸಿಕೊಳ್ಳಬಹುದಾದ ಸಕಲ ಸಾಧ್ಯತೆಗಳೂ ಆಗ ಇರುತ್ತವೆ. ಜೊತೆಗೆ ಅನುಭವದ ಲಾಭ ಪಡೆದಿರದ ಎಳಸು ಮನ ಅಧಿಕಾರದ ಹಿಡಿತದ ರುಚಿಕಂಡ ಮೇಲೆ ಅಂಧಾದುಂಧಿ ಅಧಿಕಾರ ಚಲಾಯಿಸಿ ಆಡಳಿತ ಯಂತ್ರವನ್ನೆ ಹಳ್ಳ ಹಿಡಿಸಬಹುದು ಎನ್ನುವ ವಿವೇಕವನ್ನ ಬೋಧಿಸುತ್ತದೆ. ಅಂತೆಯೆ ಎಪ್ಪತರ ಹಿರಿ ವಯಸ್ಸಿನಲ್ಲಿ ದೇಹ ಮುಪ್ಪಾಗುವಾಗ ಶಿಥಿಲವಾಗುತ್ತಾ ಸಾಗುತ್ತದೆ. ಕೆಲವರಲ್ಲಿ ಸೂಕ್ತ ಸ್ಥಳವನ್ನ ಮುಟ್ಟಿ ವಿಸರ್ಜಿಸುವ ತನಕ ಮಲ-ಮೂತ್ರಗಳನ್ನ ಹಿಡಿದಿಟ್ಟುಕೊಳ್ಳುವ ಸ್ನಾಯುಗಳು ದುರ್ಬಲವಾಗಿ ಎಲ್ಲೆಂದರಲ್ಲಿ, ಯಾವಾಗೆಂದರೆ ಆವಾಗ ಮಲ, ಮೂತ್ರಗಳು ಅವರ ಹಿಡಿತ ಹಾಗೂ ಮನದ ನಿರ್ದೇಶನಗಳನ್ನ ಧಿಕ್ಕರಿಸಿ ಕೆಳ ಸುರಿಯುವ ಸಂಭವವಿರುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನ ಇನ್'ಕಾಂಟಿನೆನ್ಸ್ ಎಂದು ಕರೆಯುತ್ತಾರೆ. ಅದಾಗುವ ವ್ಯಕ್ತಿಗೆ ನಾಚಿಕೆ ಹಾಗೂ ಮುಜಗರ ಆಗುವುದು ಸಹಜ. ಅದು ಯಾರ ಬಾಳಲ್ಲೂ ಆಗದಿರಲಿ ಎಂದು ಹಾರೈಸುತ್ತದೆ ಈ ಗಾದೆಯ ಉತ್ತರಾರ್ಧ. ಇದು ಈ ಗಾದೆಯ ವಾಚ್ಯಾರ್ಥ. ಅನುಭವ ಹಾಗೂ ಅಸಹಾಯಕತೆ ಎರಡನ್ನೂ ಒಟ್ಟಾಗಿ ವಿವರಿಸುವ ಅಪರೂಪದ ಗಾದೆಯಿದು. ಸರಳವಾಗಿ ಹೇಳುವುದಾದರೆ ಸರಿಯಾದ ಸಮಯಕ್ಕೆ ಸರಿಯಾದದ್ದು ದಕ್ಕಿದರೆ ಸರಿಯಾಗಿ ಬಾಳಬಹುದು ಎನ್ನುವುದು ಇದರ ತಾತ್ಪರ್ಯ.} ( ಏಲೆಟ್ ಗುರಿಕಾರ್ಮೆ ತಿಕ್ಯರ ಬಲ್ಲಿ, ಎಲ್ಪೆಟ್ ಪೀ ಸುರುವಾರೆ ಬಲ್ಲಿ = ಏಳರಲ್ಲಿ ಯಜಮಾನಿಕೆ ಸಿಕ್ಕ ಬಾರದು. ಎಪ್ಪತ್ತರಲ್ಲಿ ಮಲ ಸುರಿಯುವಂತಾಗ ಬಾರದು.)

ತುಳುಗಾದೆ-೧೩


"ಉಣೋಡು ತಿಣೋಡಂಟ ಎರ್ಮೆ ಕಟ್ಟೊಡು, ಕಂಜಿ ಕೈಕಂಜಿ ಬೋಡಂಟ ಪೆತ್ತ ಕಟ್ಟೊಡು." { ಸುಖ ಸಮೃದ್ಧಿಯ ಬಾಳು ಪ್ರತಿಯೊಬ್ಬ ಜೀವಿಯ ಸುಪ್ತ ಆಸೆ. ಅದರ ಕನಸಿನಲ್ಲಿ ಮುಂದಡಿಯಿಡುವ ಮಂದಿಗೆ ಈ ಗಾದೆ ಸರಿಯಾದ ಯೋಚನೆಯಲ್ಲಿ ದೀರ್ಘಕಾಲೀನ ಯೋಜನೆಯನ್ನ ಹಾಕಿಕೊಂಡು ಸಾಗುವಂತೆ ಸಲಹೆ ನೀಡುತ್ತದೆ ಈ ಗಾದೆ. ಉಂಡು ತಿನ್ನಲು ಬೇಕಾದಷ್ಟು ಬಹುಕಾಲ ಬೇಕಿದ್ದಲ್ಲಿ ಎಮ್ಮೆ ಕಟ್ಟಿ ಸಾಕಬೇಕಂತೆ. ಎಮ್ಮೆ ಹನ್ನೆರಡು ತಿಂಗಳ ದೀರ್ಘ ಅವಧಿಯ ಗರ್ಭ ಹೊತ್ತರೂ ಒಮ್ಮೆ ಗಬ್ಬವಾಗಿ ಕರು ಹಾಕಿದ ನಂತರ ಹೆಚ್ಚಿನ ಕಾಲ ಹಾಲು ಕರೆಯುತ್ತದೆ. ದನಕ್ಕೆ ಹೋಲಿಸಿದರೆ ಮಂದವಾಗಿರುವ ಎಮ್ಮೆಯ ಹಾಲಿಗೆ ಬೆಲೆಯೂ ಹೆಚ್ಚು. ಹೀಗಾಗಿ ಹೆಚ್ಚಿನ ಸಂಪಾದನೆ ಹಾಗೂ ಪೌಷ್ಟಿಕತೆಯತ್ತ ಮನಸಿದ್ದವರಾಗಿದ್ದರೆ ಅಂತವರು ಎಮ್ಮೆ ಕಟ್ಟಿ ಸಾಕುವುದು ಒಳಿತು. ಆದರೆ ಎಮ್ಮೆಯ ಹೋಲಿಕೆಯಲ್ಲಿ ದನ ಕಡಿಮೆ ಖರ್ಚಿನ ನಿರ್ವಹಣೆ ಬಯಸುತ್ತದೆ. ಅದರ ಗಬ್ಬದ ಅವಧಿ ಕೇವಲ ಒಂಬತ್ತೆ ತಿಂಗಳು. ಆದರೆ ದನದ ಸಂತಾನ ಶೀಘ್ರವಾಗಿ ಅಭಿವೃದ್ಧಿ ಹೊಂದುವುದು ಹೌದಾಗಿದ್ದರೂ ಅದರ ಕರಾವಿನ ಅವಧಿ ಕಿರಿದು. ಇದು ಕರಾವಿನ ಮೇಲೆ ಅವಲಂಬಿತವಾಗುವ ಯೋಚನೆಯಲ್ಲಿರುವ ಗೌಳಿಗರಿಗೆ ಸೂಕ್ತವಲ್ಲ. ಬೇಗ ಹಟ್ಟಿ ತುಂಬುವ ದನದ ಸಂತಾನ ರೈತಾಪಿಗಳಿಗೆ ಅತ್ಯಾನುಕೂಲ. ಒಂದು ಕಡೆ ಕೃಷಿ ಚಟುವಟಿಕೆಗಳಿಗೆ ಎತ್ತುಗಳು ಲಭ್ಯವಾಗುತ್ತವೆ. ಜೊತೆಗೆ ಹಟ್ಟಿ ತುಂಬುವ ದನದ ಸಂತಾನ ಗೊಬ್ಬರದ ಸಮಸ್ಯೆಗೆ ಸೂಕ್ತ ಉತ್ತರವಾಗಬಲ್ಲದು. ಹೀಗಾಗಿ ಮಾಡ ಬಯಸುವ ಕೆಲಸದ ಫಲಾಪೇಕ್ಷೆಯ ಖಚಿತ ರೂಪುರೇಷೆಯ ಅನುಸಾರ ಹುಷಾರಾಗಿ ಹೆಜ್ಜೆಯಿಡುವಂತೆ ಈ ಗಾದೆ ತನ್ನ ವಾಚ್ಯಾರ್ಥದಲ್ಲಿ ಪ್ರೇರೇಪಿಸುತ್ತದೆ.} ( ಉಣೋಡು ತಿಣೋಡಂಟ ಎರ್ಮೆ ಕಟ್ಟೊಡು, ಕಂಜಿ ಕೈಕಂಜಿ ಬೋಡಂಟ ಪೆತ್ತ ಕಟ್ಟೊಡು. = ಉಂಡು ತಿನ್ನ ಬೇಕಂತಿದ್ದರೆ ಎಮ್ಮೆ ಕಟ್ಟಬೇಕು, ಕರು ಪಶು ಬೇಕಂತಿದ್ದರೆ ದನ ಕಟ್ಟಬೇಕು.)

ತುಳುಗಾದೆ-೧೨


"ಅರೆತ್ ಮೊರೆತ್ ಕೊರ್ಯರ ಮಾಂತೆರ್ಲಾ ಉಳ್ಳೆರ್, ಪರ್ಯರ ಮಾತ್ರ ಏರ್ಲಾ ಇದ್ಯರ್". { "ಆಟಿ ಅಮಾವಾಸ್ಯೆ" ಅಂದರೆ ಅಗೋಸ್ತು ತಿಂಗಳ ಅಮಾವಾಸ್ಯೆಯ ಕಾಲದಲ್ಲಿ ಪಾಲೆ ಮರದ ಕೆತ್ತೆಯನ್ನ ತೇಯ್ದು ತೆಗೆದ ರಸವನ್ನ ಖಡ್ಡಾಯವಾಗಿ ಸೇವಿಸುವ ಪದ್ದತಿ ತುಳುನಾಡಿನಲ್ಲಿದೆ. ವಿಪರೀತ ಮಳೆ ಹಾಗು ಸೆಖೆ ಎರಡೂ ವಾತಾವರಣವನ್ನ ಸಹಿಸುವ ಅನಿವಾರ್ಯತೆಯಿರುವ ಅಲ್ಲಿನವರಿಗೆ ತಮ್ಮ ಆರೋಗ್ಯವನ್ನ ಕೆಡದಂತೆ ಕಾಪಾಡಿಕೊಳ್ಳಲು ರುಚಿಯಲ್ಲಿ ಕಾರ್ಕೋಟಕ ಕಹಿಯಾಗಿರುವ ಆದರೆ ಆರೋಗ್ಯದ ಹಿತದೃಷ್ಟಿಯಿಂದ ಪರಿಪೂರ್ಣವಾಗಿರುವ ಮುಂಜಾಗ್ರತಾ ಮದ್ದಾದ ಈ ಬಿಳಿಬಣ್ಣದ ಕಷಾಯ ಕುಡಿಯುವ ರೂಢಿ ಅಲ್ಲಿನ ಸಂಸ್ಕೃತಿಯಲ್ಲಿ ಬೆಳೆದು ಬಂದಿರಬಹುದು. ಈ ಕಷಾಯವನ್ನ ಕಂಡವರಿಗೆ ಕುಡಿಸಲು ಎಲ್ಲರೂ ಪೈಪೋಟಿಯ ಮೇಲೆ ಸಿದ್ಧರಿರುತ್ತರಾದರೂ, ಕುಡಿಯಲು ತಮ್ಮ ಸರದಿ ಬಂದಾಗ ಮೆಲ್ಲನೆ ಜಾರಿಕೊಳ್ಳುವ ಪ್ರಯತ್ನಕ್ಕಿಳಿಯುತ್ತಾರೆ! ಅದನ್ನೆ ಉದಾಹರಿಸಿ ಈ ಗಾದೆಯನ್ನ ರೂಪಿಸಿರುವ ಸಾಧ್ಯತೆಯಿದೆ. ಕಹಿಮದ್ದನ್ನ ಅರೆಯಲು ತಯಾರು ಮಾಡಿಕೊಡಲು ಎಲ್ಲರೂ ತಯಾರಾಗಿರುತ್ತಾರೆ ಆದರೆ ಅದನ್ನ ಕುಡಿಯುವ ಸಂದರ್ಭ ಬಂದಾಗ ಮಾತ್ರ ಯಾರೂ ಇರುವುದಿಲ್ಲ ಎನ್ನುವುದು ಈ ಗಾದೆಯ ವಾಚ್ಯಾರ್ಥವಾಗಿದ್ದರೂ ವಾಸ್ತವವಾಗಿ ಸಮಸ್ಯೆಯ ಸುಳಿಗೆ ಸಿಲುಕಿದವರಿಗೆ ತಲೆಗೊಂದು ಸಲಹೆ ಕೊಡುವವರಿಗೆ ಬರವೇನಿಲ್ಲ, ಅದು ಕಾರ್ಯ ಸಾಧುವಲ್ಲದಿದ್ದರೂ ಇಂತಹ ಬಿಟ್ಟಿ ಉಪದೇಶಗಳನ್ನ ಅನುಸರಿಸಿ ಮುಗ್ಧರ್ಯಾರಾದರೂ ಕೈ ಸುಟ್ಟುಕೊಂಡರೆ ಆಗ ಸಲಹೆಯ ಮಹಾಪೂರವನ್ನ ಕೇಳದಿದ್ದರೂ ಕೊಟ್ಟಿದ್ದ ಪುಣ್ಯಾತ್ಮರೆಲ್ಲ ಹೇಳ ಹೆಸರಿಲ್ಲದೆ ಮಂಗ ಮಾಯವಾಗಿರುತ್ತಾರೆ ಎನ್ನುತ್ತದೆ ಈ ವಿವೇಕಪೂರ್ಣ ಗಾದೆ.}

12 February 2013

ಎಂಡಿಎನ್ ನೆನಪಿನಲ್ಲಿ....


ದೇಶವನ್ನ ಕಂಡ ಕಂಡ ಹರಾಮಿಗಳೆಲ್ಲ ತಮ್ಮಪ್ಪನ ಮನೆಯ ಪಿತ್ರಾರ್ಜಿತ ಆಸ್ತಿಯೇನೋ ಎಂಬಂತೆ ಮನಸೋ ಇಚ್ಛೆ ವ್ಯವಸ್ಥಿತವಾಗಿ ಸರಕಾರ ಎನ್ನುವ ಸಂಘಟನೆ ಕಟ್ಟಿಕೊಂಡು ನಿರಂತರವಾಗಿ ಸುಲಿಯುತ್ತಿದ್ದಾರೆ. ನ್ಯಾಷನಲ್ ಲೆವೆಲ್ಲಿನಲ್ಲಿ ದೇಶದ ತಿಜೋರಿ ಕಾಯುವ ಹೊಣೆ ಹೊತ್ತ ಅಡ್ದ ಪಂಚೆಯುಟ್ಟ ಅಡ್ಡ ಕಸುಬಿಯೊಬ್ಬ, ಇಟಾಲಿಯನ್ ಮಾಫಿಯಾ ಡಾನ್ ಒಬ್ಬಳ ಹಿತಾಸಕ್ತಿಯನ್ನ ಕಾಯುತ್ತಾ, ತಾನೂ ಅವಳು ತಿಂದು ಬಿಟ್ಟ ಮೂಳೆಗಳನ್ನ ಚೀಪುತ್ತಾ ದೇಶವನ್ನ ದಿವಾಳಿ ಎಬ್ಬಿಸುತ್ತಿದ್ದಾನೆ. ಈಸ್ಟ್ ಇಂಡಿಯಾ ಕಂಪನಿ ಅನಂತರ ಬ್ರಿಟಿಷ್ ಸರಕಾರ ಹೀಗೆ ತಮಗೆ ಗೊತ್ತಿಲ್ಲದೆ ತಮ್ಮ ಹಿತಾಸಕ್ತಿಗಳು ಕೈಬದಲಾಗುತ್ತಿದ್ದ ದೊಂಬರ ಕತ್ತೆಯಾಗಿದ್ದ ಭಾರತ, ಈಗ ಪೇಟ ಸುತ್ತಿಕೊಂಡ ಮೌನಿ ಮಾನಗೇಡಿ ಹಾಗೂ ಆತನನ್ನ ಆಡಿಸುವ ಬೊಂಬೆಯಾಡಿಸುವ ದೇಶವನ್ನೆ ಖಾಸಗಿ ಜಹಗೀರು ಮಾಡಿಕೊಂಡಿರುವ 'ಗಾದಿ' ಗುತ್ತಿಗೆ ಹಿಡಿದ ಮಂದಿಯ ಕೃಪೆಯಿಂದ ಮತ್ತೆ ಇನ್ಯಾರದೋ ಸೊತ್ತಾಗುತ್ತಿದೆ.ತಮಾಷೆಯೆಂದರೆ ತಾನು ಹೀಗೆ ಮಾರಾಟವಾಗುತ್ತಿರುವ ಸಂಗತಿ ಇನ್ನೂ ಅದರ ಅರಿವಿಗೆ ಬಂದಿಲ್ಲ. ಖಾಸಗಿಕರಣವೆಂಬ ಇವರಮ್ಮನ ಪಿಂಡದ ಚಾಕೊಲೇಟು ಮುಂದೆ ಚಾಚುವ, ತೋರಿಸಿ ಅದಕ್ಕಾಗಿ ಮುಂಚಾಚುವ ಮುಗ್ಧರ ಇಡಿ ಕೈಯನ್ನೆ ಕಡಿಯುವ ಖದೀಮ ಕಟುಕರ ಹುನ್ನಾರವಿದು. ಈಗ "ವಾಲ್'ಮಾರ್ಟ್"ನ ಗುಲ್ಲೆದ್ದಿದೆ. ನನ್ನ ದೃಷ್ಟಿಯಲ್ಲಿ ಅದು ಅತ್ಯಂತ ಕನಿಷ್ಠ ಹಾನಿ.  ನಿತ್ಯದ ಕನಿಷ್ಠ ಅಗತ್ಯಗಳಾದ ನೀವು ಕುಡಿಯುವ ನೀರು, ಬಳಸುವ ವಿದ್ಯುತ್, ನಡೆಯುವ ದಾರಿ ಇವೆಲ್ಲವೂ ಅಮೇರಿಕಾ ದೈತ್ಯರ ವಶವಾಗಿ ಹೋಗಿವೆ. ನಾವು ನೀವು ಉಸಿರಾಡುವ ಗಾಳಿಗೆ ಯಾವಾಗ ಈ ದೊಣೆ ನಾಯಕರು ಕರ ನಿಗದಿ ಮಾಡುತ್ತಾರೊ ಗೊತ್ತಿಲ್ಲ! ಅವರು ಒಮ್ಮೆಲೆ ವಸೂಲಿಯ ಇಕ್ಕಳ ಹಿಡಿದು ಎಲ್ಲರ ಬೀಜ ಒಡೆಯಲು ಬರುವವರೆಗೂ ಯಾರಿಗೂ ಇದು ಅರ್ಥವಾಗದು.


 ಎಲ್ಲಾ ಸಬ್ಸಿಡಿಗಳಿಗೂ ಆಧಾರ್ ಕಾರ್ಡ್ ಖಡ್ಡಾಯ ಮಾಡಿರುವುದು ಅದರ ಮೊದಲ ಹಂತವಷ್ಟೆ, ಮುಂದೈತೆ ತಾಳಿ ಮಾಂಕಾಳಿ ಜಾತ್ರೆ. ಕಳೆದ ಶತಮಾನದ ಅಂತ್ಯದಲ್ಲಿ ಕೆಎಫ್'ಸಿ ಹಾಗೂ ಮ್ಯಾಕ್ ಡೊನಾಲ್ಡ್ ಹೆಸರಿನಲ್ಲಿ ದೇಶ ದೋಚುವುದಕ್ಕೆ ಹೊರಟವರ ಕೊಳ್ಳೆಕೋರರ ಜೋಪಡಿಗಳು ಮೊದಲಿಗೆ ನಮ್ಮಲ್ಲಿ ತಲೆ ಎತ್ತಿದಾಗಲೆ ಪ್ರತಿಭಟನೆ ತೀವೃವಾಗಿದ್ದಿದ್ದರೆ ಬಹುಶಃ ಈ ಹರಾಮಿಗಳಿಗೆ ಇಷ್ಟು ಮುಂದುವರೆಯುವ ಧೈರ್ಯ ಹುಟ್ಟುತ್ತಿರಲಿಲ್ಲ ಅನ್ನಿಸುತ್ತೆ. ಈಗ ತೂಬು ಒಡೆದು ಹೋಗಿದೆ. ದೇಶದ ಕೆರೆಯಲ್ಲಿ ಇನ್ನು ನೀರು ನಿಲ್ಲುವುದು ಕಷ್ಟ.ಹಾಗಂತ ದೇಶಭಕ್ತ ಕ"ಮಲ" ಪಕ್ಷದ ಕೊರಮರೇನೂ "ಸಾದಾ ವತ್ಸಲೆ"ಯಾದ ಅವರ ಮಾತೃಭೂಮಿಯಾಗಿರುವ ಈ ದೇಶಕ್ಕೆ ಕನಕಾಭಿಷೇಕ ಮಾಡಿಸಿರಲಿಲ್ಲ. ಆ ಹುಟ್ಟು ದರೋಡೆಕೋರರು ದೇಶದ ಮೇಲೆ ಸುರಿದದ್ದೂ ಕೂಡ ಇಂತಹ ಅಡವಿನ ನಾತದ ಮಲವನ್ನೆ. ಸಾಲದ್ದಕ್ಕೆ ದೇಶದ ಒಡಲನ್ನೆ ಬಗೆಬಗೆದು ಮಾರಿ ತಮ್ಮ ಕಳ್ಳ ತಿಜೋರಿ ತುಂಬಿಕೊಂಡ ಹರಾಮನ ಸಂತಾನ ಇವರದ್ದು. ಒಟ್ಟಿನಲ್ಲಿ ಇಲ್ಲಿ ಪಕ್ಷ, ಪ್ರದೇಶದ ಪ್ರಶ್ನೆ ಬರುವುದಿಲ್ಲ. "ರಾಜಕಾರಣಿ" ಅನ್ನುವ ವಿಶೇಷ ತಳಿಯ ಗುಳ್ಳೆನರಿಗಳಿವು. ಕಡೆಯ ಕಿರುಮೂಳೆಗಳನ್ನೂ ಕಡಿದು -ಚೀಪಿ ಮುಗಿಯುವ ತನಕ ಈ ಹಸಿವು ಬಾಕ ತೋಳಗಳು ಊಟ ಬಿಟ್ಟು ಏಳುವ ಯಾವುದೆ ಲಕ್ಷಣಗಳಿಲ್ಲ. ಗಮನಿಸಿ ನೋಡಿ ಬೇಕಿದ್ದರೆ ಈ ಅಮೇರಿಕನ್ ದಾಭಾಗಳೆಲ್ಲ ನಮ್ಮ ಎಳೆಯರು ಓದುವ ಶಾಲಾ ಕಾಲೇಜುಗಳ ಆಸುಪಾಸಿನಲ್ಲೆ ಇವೆ! ಮೊದಲಿಗೆ ಎಳೆಯರ ರುಚಿ ಮೊಗ್ಗನ್ನ ಸಾಣೆ ಹಿಡಿದು ಅವರನ್ನ ತಮ್ಮ ರುಚಿಗೆ ದಾಸರನ್ನಾಗಿ ಮಾಡಿಕೊಳ್ಳುವ ಆರಂಭಿಕ ಮೆಟ್ಟಿಲವು. ಇಂತಹ ಕೋಳಿಯಂಗಡಿಯೊಂದಕ್ಕೆ ಇಪ್ಪತ್ತು ವರ್ಷಗಳ ಹಿಂದೆ ಮುಲಾಜಿಲ್ಲದೆ ಕಲ್ಲೆಸೆದು ನಮಗೆಲ್ಲ ಎಚ್ಚರಿಕೆಯ ಸೂಚನೆ ಕೊಟ್ಟಿದ್ದ ಪ್ರೊ, ಎಂ ಡಿ ನಂಜುಂಡಸ್ವಾಮಿ ಈ ಹೊತ್ತಿನಲ್ಲಿ ನೆನಪಾಗುತ್ತಾರೆ. ಅವರಿದ್ದಿದ್ದರೆ ಬೇರೊಂದು ತರದಲ್ಲಿ ಹೊಸತಾಗಿ ಪ್ರತಿಭಟನೆಯನ್ನ ಸಂಘಟಿಸುತ್ತಿದ್ದರೇನೋ! ಅಂದಹಾಗೆ ಇವತ್ತು ಅವರ ಜನ್ಮದಿನ. ಕನಿಷ್ಠ ಇವತ್ತಾದರು ಅವರನ್ನ ನೆನಪಿಸಿಕೊಳ್ಳದಿದ್ದರೆ ಹೇಗೆ? ಮತ್ತೊಬ್ಬ ಎಂಡಿಎನ್ ತುರ್ತಾಗಿ ಈ ದುರ್ಭಾಗ್ಯಕ್ಕೀಡಾಗಿರುವ ದೇಶದ ಮಾನವನ್ನುಳಿಸಲು ಬರಬೇಕಿದೆ.

( ಎಂ ಡಿ ಎನ್ ಸಂದರ್ಶನದ ತುಣುಕಿದು, ಆಸಕ್ತರಿಗಾಗಿ. http://www.youtube.com/watch?v=JpgrFcTrvNU )11 February 2013

ತುಳುಗಾದೆ-೧೧


"ಅಪ್ಪೆಡ್ದ್ ಮಲ್ಲ ಬಂಧು ಇದ್ದಿ, ಉಪ್ಪುಡ್ದ್ ಎಚ್ಚ ರುಚಿ ಇದ್ದಿ" { ಎಲ್ಲಾ ಜೀವ ರಾಶಿಗಳಿಗೂ ಎಲ್ಲರಿಗಿಂತ ಹತ್ತಿರದ ಬಂಧು ತಾಯಿ, ತುಳುವಿನಲ್ಲಿ ತಾಯಿಯನ್ನ "ಅಪ್ಪೆ" ಎಂದು ಸಂಭೋದಿಸಲಾಗುತ್ತದೆ. ತುಳುನಾಡು ಮಾತೃ ಮೂಲದ ಕೌಟುಂಬಿಕ ವ್ಯವಸ್ಥೆ ಹೊಂದಿರುವಂತದ್ದು. ಬ್ರಾಹ್ಮಣ, ಕ್ರೈಸ್ತ ಹಾಗೂ ಬ್ಯಾರಿ ಸಮುದಾಯಗಳ ಹೊರತು ತುಳುನಾಡಿನ ಎಲ್ಲಾ ಕುಲಗಳು ಮಾತೃ ಮೂಲದವು. ಇಲ್ಲಿ ಮನೆಯ ಯಜಮಾನಿ ಹೆಣ್ಣು, ಗಂಡಲ್ಲ. ಆದಿಯಲ್ಲಿ ಮಾನವ ಉಗಮದ ನಾಗರೀಕತೆಗಳೆಲ್ಲ ಈ ಬಗೆಯ ಮಾತೃ ಮೂಲ ವ್ಯವಸ್ಥೆ ಹೊಂದಿದ್ದಕ್ಕೆ ಉತ್ಖನನದ ಖಚಿತ ದಾಖಲೆಗಳಿವೆ. ಆದರೆ ಇತ್ತೀಚೆಗೆ ಕೆಲವು ಜಾತಿ-ಜನಾಂಗದ ಮಂದಿ ಪುರುಷ ಪ್ರಧಾನ ವ್ಯವಸ್ಥೆಯನ್ನ ಅಳವಡಿಸಿ ಕೊಂಡಿವೆ. ಗಂಡಿಗಿಂತ ನೋವನ್ನ ಸಹಿಸುವ ವಿಚಾರದಲ್ಲಿ ಹೆಣ್ಣೆ ಗಟ್ಟಿಗಿತ್ತಿ. ಹೃದಯಾಘಾತದಿಂದ ಪಟ್ಟನೆ ಸಾಯುವ ಗಂಡಸು ಹೆರಿಗೆಯ ಯಮಯಾತನೆಯನ್ನ ಬಯಸಿದರೂ ಕಲ್ಪಿಸಿಕೊಳ್ಳಲಾರ. ಅಂತೆಯೆ ಪ್ರಾಣಿಗಳಲ್ಲೆ ರುಚಿ ಮೊಗ್ಗುಗಳನ್ನ ನಾಲಗೆಯಲ್ಲಿ ಹೊಂದಿದ್ದು, ಪ್ರತ್ಯೇಕಿಸಿ ರುಚಿಯನ್ನ ಆಸ್ವಾದಿಸುವ ವಿಶೇಷ ಶಕ್ತಿ ಆತನಿಗೆ ಪ್ರಾಕೃತಿಕ ವರವಾಗಿ ಒದಗಿ ಬಂದಿದೆ. ಎಲ್ಲಾ ತಿನಿಸುಗಳಲ್ಲೆ ರುಚಿಯ ಮೆರಗನ್ನ ಹೆಚ್ಚಿಸುವ ಉಪ್ಪು ಹೇಗೆ ಶ್ರೇಷ್ಠವೋ ಅಂತೆಯೆ ನೆಂಟರಲ್ಲೆ ತಾಯಿ ಅತ್ಯುತ್ತಮ ಬಂಧು ಎನ್ನುತ್ತದೆ ಈ ಆಪ್ತ ಗಾದೆ. ಕನ್ನಡದಲ್ಲೂ ತತ್ಸಮವಾದ "ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ" ಎನ್ನುವ ಗಾದೆಯಿದೆ.} ಅಪ್ಪೆಡ್ದ್ ಮಲ್ಲ ಬಂಧು ಇದ್ದಿ, ಉಪ್ಪುಡ್ದ್ ಎಚ್ಚ ರುಚಿ ಇದ್ದಿ = ತಾಯಿಗಿಂತ ದೊಡ್ಡ ಬಂಧುವಿಲ್ಲ, ಉಪ್ಪಿಗಿಂತ ಹೆಚ್ಚು ರುಚಿಯಿಲ್ಲ.

ತುಳುಗಾದೆ-೧೦


"ಆನೆ ಸಿರ್ಕಂಡ ಕಡ್ಚಿಲ್ ನೂರಂದ್" ( ದೈತ್ಯ ಪ್ರಾಣಿಯಾದ ಆನೆ ಕಡು ಹಸಿವಿಗೆ ಸಿಕ್ಕು ಹಾಕಿಕೊಂಡು ಪೇತಲವಾದರೂ, ಕರಗಿ ಕಡ್ಡಿಯಾದರೂ ಕರುವನ್ನ ಕಟ್ಟುವ ಕೊಟ್ಟಿಗೆಗೆ ಹೋಗಿ ದೀನವಾಗಿ ಕಾಲ ಹಾಕಲಾರದು. ಒಂದು ವೇಳೆ ಹಾಗೆ ಹೊಕ್ಕಲು ಹೋದರೂ ಸಹ ಅದರ ಅಗಾಧ ಗಾತ್ರ ಅಷ್ಟು ಸಣ್ಣ ಜಾಗದಲ್ಲಿ ಅದನ್ನ ತೂರಲು ಅನುವು ಮಾಡಿಕೊಡುವುದಿಲ್ಲ ಅನ್ನುವುದು ಈ ಗಾದೆಯ ವಾಚ್ಯಾರ್ಥ. ಕಂಜಿ ಎಂದರೆ ತುಳುವಿನಲ್ಲಿ ಕರು ಎಂದರ್ಥ, ಕಂಜಿ ಕಟ್ಟುವ ಇಲ್ ಕಡ್ಚಿಲ್ ಎನ್ನುತ್ತಾರೆ. ವಾಸ್ವವಾಗಿ ಧೀಮಂತಿಕೆ, ಸತ್ಯ ಸಂಧತೆ ಹಾಗೂ ಅಂತಸ್ತನ್ನ ಬಾಳ್ವೆಯಲ್ಲಿ ಕಾಪಾಡಿಕೊಂಡು ಬಂದ ವ್ಯಕ್ತಿಯೊಬ್ಬ ಸೋತ ಕ್ಷಣದಲ್ಲಿ ದೈನ್ಯನಾಗಿ ತನ್ನ ಮೊದಲ ಘನತೆ ಗಾಂಭೀರ್ಯವನ್ನ ಬಿಟ್ಟು ಅವಕಾಶವಾದಿಯಾಗಲಾರ ಅನ್ನುವ ವಿಶ್ಲೇಷಣೆ ಈ ಗಾದೆಯದ್ದು. ಕನ್ನಡದಲ್ಲಿ "ಹಸಿದರೂ ಹುಲಿ ಹುಲ್ಲು ತಿನ್ನದು" ಎನ್ನುವ ಹಾಗೂ ತಮಿಳಿನಲ್ಲಿ "ಪಸಿದಿರಂದಾಲು ಪುಲಿ ಪುಲ್ ವೆಲಿ ಸಾಪಾಡಾದು" ಎಂದು ಹೇಳುವ್ಚ ಇದಕ್ಕೆ ಸಮಾನಾರ್ಥಕ ಗಾದೆಯಿದೆ.) ಆನೆ ಸಿರ್ಕಂಡ ಕಡ್ಚಿಲ್ ನೂರಂದ್ = ಆನೆ ಬಡಕಲಾದರೂ ಕರು ಕೊಟ್ಟಿಗೆಯಲ್ಲಿ ನುಗ್ಗಲಾರದು.

ತುಳುಗಾದೆ=೯


"ಅಡಿ ತೂದು ಕಾರ್ ದೆರ್ಪು" ( ಜೀವನದ ಪ್ರತಿ ಹೊಸ ಹೆಜ್ಜೆಯನ್ನೂ ನೆಲ ನೋಡಿ ಇಡಬೇಕು ಅನ್ನುವ ವಿವೇಕ ಹೇಳುತ್ತದೆ ಈ ಗಾದೆ. ಬದುಕಿನಲ್ಲಿ ಯಾವುದೆ ಕೆಲಸಕ್ಕೆ , ಸಾಹಸಕ್ಕೆ ಕೈ ಹಾಕುವಾಗ ಹುಚ್ಚು ಹುಂಬತನವೊಂದೆ ಇದ್ದರೆ ಸಾಲದು. ಅದಕ್ಕೆ ಕಾಲ ಎಷ್ಟು ಪಕ್ವವಾಗಿದೆ? ಆರ್ಥಿಕವಾಗಿ ನಾನದಕ್ಕೆ ಎಷ್ಟು ಯೋಗ್ಯ? ಅದರಿಂದಾಗುವ ಲಾಭ ನಷ್ಟಗಳಿಗೆ ನಾನೆಷ್ಟು ಬಾಧ್ಯ? ಎನ್ನುವ ಆತ್ಮ ಚಿಂತನೆ ಮಾಡದೆ ಒಡ್ಡೊಡ್ಡಾಗಿ ಮುಂದಡಿಯಿಟ್ಟರೆ ಹಳ್ಳಕ್ಕೆ ಬಿದ್ದರೂ ಅಚ್ಚರಿಯಿಲ್ಲ. ಮುಂದಾಗುವ ನಷ್ಟವನ್ನ ಮುಂದಾಲೋಚನೆಯಿಂದ ಕಡಿಮೆ ಮಾಡಿಕೊಳ್ಳುವ ಈ ವಿವೇಕ ಪೂರ್ಣ ಗಾದೆಗೆ ವಿವೇಚನೆಯನ್ನ ಜೊತೆಗೆ ವಿವೇಕವನ್ನ ಹೇಳುವ ಧ್ವನಿಯಿದೆ.)
ಅಡಿ ತೂದು ಕಾರ್ ದೆರ್ಪು = ನೆಲ ನೋಡಿ ಕಾಲನ್ನೆತ್ತಿಡು.

ತುಳುಗಾದೆ-೮


"ಸೈತಿ ಎರ್ಮೆಗ್ ಐಯ್ಯಲ ಪೇರ್" { ಸತ್ತ ಎಮ್ಮೆಗೆ ಐದು ಬಳ್ಳ ಹಾಲು! ಅನ್ನುತ್ತದೆ ಈ ವ್ಯಂಗ್ಯ ಗಾದೆ. ಬದುಕಿದ್ದಾಗ ಬದುಕಿನುದ್ದ ನೆಟ್ಟಗೆ ನಾಲ್ಕು ಕುಡ್ತೆ ಹಾಲು ಕೊಡದೆ ಗೊಡ್ಡೆಮ್ಮೆ ಸತ್ತಾಗ ಮಾತ್ರ ಅದನ್ನ 'ಅಯ್ಯೋ ನಾಲ್ಕು ಸೇರು ಹಾಲು ಕರೆಯುತ್ತಿದ್ದ ಎಮ್ಮೆ ಸತ್ತು ಹೋಯ್ತಲ್ಲ ದೇವರೆ!" ಅಂತ ಜನ ಗೋಳಾಡುತ್ತಾರೆ. ಒಬ್ಬ ವ್ಯಕ್ತಿ ಬದುಕಿದ್ದಾಗ ನಾಲ್ಕು ಜನರಿಗೆ ಬೇಡದವನಾಗೂ, ಕೆಲವೊಮ್ಮೆ ಲೋಕ ಕಂಟಕನಾಗಿ ವ್ಯರ್ಥ ಬಾಳನ್ನ ಬಾಳಿದವನಾದರೂ ಆತ ಸತ್ತ ಕ್ಷಣ ಅವನನ್ನ ನೆನೆದು ಕಣ್ಣೀರಿಡುವ ಅವಕಾಶವಾದಿಗಳತ್ತ ವ್ಯಂಗ್ಯದ ಕೊರಂಬು ಎಸೆಯುತ್ತದೆ ಈ ಗಾದೆ. ಜನರನ್ನ ಭರ್ತಿ ಯಾಮಾರಿಸಿ, ತನ್ನ ತಿಜೋರಿ ತುಂಬಿ ಕೊಂಡ ಸ್ವ-ಘೋಷಿತ ಸಮಾಜ ಸೇವಕನೋ, ಮಠಾಧಿಪತಿಯೋ ಇಲ್ಲಾ ಒಬ್ಬ ದುಷ್ಟ ರಾಜಕಾರಣಿಯೋ ಬರಬಾರದ ಸಾವನ್ನ ಪಡೆದು ಕಡೆಗೂ ತೊಲಗಿ ಹೋದಾಗ ಅವನ ಸಾವಿನಲ್ಲೂ ಆತ್ಮವಂಚಕ ಮಂದಿ 'ಅವರ ಸಾವು ತುಂಬಲಾರದ ನಷ್ಟ!' ಅಂತ ಗೋಳಿಡುವುದು ಇಂದಿನ ದಿನಮಾನದಲ್ಲಿ ಅತಿ ಸಾಮಾನ್ಯ. ಅಂತಹವರನ್ನ ಗೇಲಿ ಮಾಡುತ್ತದೆ ಈ ಗಾದೆಯ ವಾಚ್ಯಾರ್ಥ.} ಸೈತಿ ಎರ್ಮೆಗ್ ಐಯ್ಯಲ ಪೇರ್ = ಸತ್ತ ಎಮ್ಮೆಗೆ ಐದು ಬಳ್ಳ ಹಾಲು.

ತುಳುಗಾದೆ - ೭


" ಮಲ್ಲ ಪೊದೆನ್ ಮೆಲ್ಲ ಜಾವೊಡು" { ದೊಡ್ಡ ಹೊರೆಯನ್ನ ತಲೆಯ ಮೇಲೆ ಹೊತ್ತವರು ಅದನ್ನ ಅಂಗಳ ಮುಟ್ಟಿಸಿದಾಗ ಕಡು ಜಾಗ್ರತೆಯಿಂದಲೆ ಕೆಳಗಿಳಿಸಬೇಕು ಎನ್ನುತ್ತದೆ ಈ ಗಾದೆ. ಒಂದು ವೇಳೆ ಅವಸರ ಪಟ್ಟು ದಡ್ಡನೆ ಅದನ್ನ ಹೊತ್ತು ಹಾಕಿದರೆ ಹೊರೆಯೂ ಹಾಳಾಗುತ್ತದೆ, ಹೊತ್ತು ತಂದವನ ಹೆಸರೂ ಕೆಡುತ್ತದೆ ಅನ್ನುವುದು ಈ ಗಾದೆಯ ವಾಚ್ಯಾರ್ಥ. ಯಾವುದೆ ಕಡುಕಷ್ಟದ ಕೆಲಸವನ್ನ, ದೊಡ್ಡ ಸಂಗತಿಯನ್ನ ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವಾಗ ಜಾಗ್ರತೆಯಿಂದ ವರ್ತಿಸಬೇಕು. ಅವಸರದಲ್ಲಿ ತೋಚಿದ್ದೇನನ್ನೋ ಮಾಡಿ ಕೈತೊಳೆದುಕೊಳ್ಳುವ ವಿಚಾರ ಮಾಡಿದರೆ ಅಲ್ಲಿಯ ತನಕ ವಹಿಸಿದ ಕಾರ್ಯ ಶ್ರದ್ಧೆಯೂ ಕೆಡುತ್ತದೆ. ಸಾಲದ್ದಕ್ಕೆ ಚನ್ನಾಗಿ ಮುಗಿಸಬಹುದಾಗಿದ್ದ ಕಾರ್ಯವೂ ಜಾಳಾಗಿತ್ತದೆ. ಸಾಲದ್ದಕ್ಕದರ ಫಲಶ್ರುತಿ ನಮಗೆ ತಿರುಗು ಬಾಣವಾದರೂ ಆಶ್ಚರ್ಯವಿಲ್ಲ. ಹೀಗಾಗಿ ಸಾವಧಾನವೆ ಪ್ರಧಾನ ಎನ್ನುತ್ತದೆ ಈ ಅರ್ಥಪೂರ್ಣ ಗಾದೆ.} ಮಲ್ಲ ಪೊದೆನ್ ಮೆಲ್ಲ ಜಾವೊಡು = ದೊಡ್ಡ ಹೊರೆಯನ್ನ ನಿಧಾನವಾಗಿ ಕೆಳಗಿಳಿಸಬೇಕು.

09 February 2013

ತುಳುಗಾದೆ-೬


"ಕಾಳಗ್ ಬತ್ತಿ ಬಡು ಬೊಳ್ಳೆಗುಲಾ ಬರು" { ತುಳುನಾಡಿನಲ್ಲಿ ಗದ್ದೆಯನ್ನ ಹೂಡಲಿಕ್ಕೆ ಕೋಣದ ಜೋಡಿಯನ್ನ ಕಟ್ಟಲಾಗುತ್ತದೆ. ಅದರಲ್ಲಿ ಸಾಮಾನ್ಯವಾಗಿ ಒಂದನ್ನ ಕಾಳ ಅಂದರೆ ಕರಿಯ ಮತ್ತು ಇನ್ನೊಂದನ್ನ ಬೊಳ್ಳ ಅಂದರೆ ಬಿಳಿಯ ಅಂತ ಸಾಮಾನ್ಯವಾಗಿ ಕರೆಯಲಾಗುತ್ತದೆ. ಕೆಲಸದ ಹೊತ್ತಲ್ಲಿ ಕಾಳನಿಗೆ ಬಾರುಕೋಲಿನ ಪೆಟ್ಟು ಬಿದ್ದಾಗ ಬೊಳ್ಳ 'ಅವನಿಗೆ ಹಾಅಗೆಯೆ ಆಗಬೇಕು! ಸರಿಯಾದ ಶಾಸ್ತಿಯಾಯ್ತು" ಅಂತ ಮನಸಿನಲ್ಲೆ ಖುಷಿ ಪಡುತ್ತದಂತೆ, ಆದರೆ ಅದೆ ವೇಳೆಗೆ ಆ ಬೆತ್ತದ ಏಟಿನ ರುಚಿ ನನಗೂ ಬೀಳುತ್ತದೆ ಅನ್ನೋದನ್ನ ಅದು ಮರೆತಿರುತ್ತದೆ! ಇದು ಈ ಗಾದೆಯ ವಾಚ್ಯಾರ್ಥ. ನಿಜವಾಗಿ ಇನ್ನೊಬ್ಬರಿಗೆ ಕಷ್ಟ ಬಂದಾಗ ನೆರೆಯವರಿಗೆ ಸಂಕಟ ಬಂದಾಗ ನಾವು ಅವರಿಗಾದ ನೋವಿಗೆ ಮರುಗಬೇಕಲ್ಲದೆ ವಿಕೃತವಾಗಿ ಒಳಗೊಳಗೆ ಖುಷಿ ಪಡಲೇಬಾರದು. ಅವರಿಗೆ ಬಂದ ಸಂಕಟ ಮುಂದೊಮ್ಮೆ ನಮಗೂ ಒದಗಿ ಬಂದೀತು. ಆಗ ನಮ್ಮ ಸಂಕಟಕೂ ಯಾರಾದರು ನಕ್ಕರೆ ನೋವಿನ ಬಾಧೆ ನಮಗೆ ಹೆಚ್ಚಾಗಬಹುದು ಅನ್ನುವುದನ್ನ ಯಾವಾಗಲೂ ಮರೆಯಬಾರದು ಎನ್ನುವ ಸಾರ ಈ ಗಾದೆಯದು. "ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ" ಎನ್ನುವ ಕನ್ನಡ ಗಾದೆ ಇದಕ್ಕೆ ಸಂವಾದಿಯಾದ್ದದ್ದು.)
( ಕಾಳಗ್ ಬತ್ತಿ ಬಡು ಬೊಳ್ಳೆಗುಲಾ ಬರು = ಕಾಳನಿಗೆ ಬಂದ ಬೆತ್ತ ಬೊಳ್ಳನಿಗೂ ಬಂದೀತು.)

ತುಳುಗಾದೆ-೫


"ಅಡಿತತ್ತುಂಡ ಆನೆಲಾ ಮುಗುರುಂಡು" { ಹೆಜ್ಜೆ ತಪ್ಪಿದರೆ ಆನೆಯೂ ಮಗುಚಿ ಬೀಳುತ್ತದೆ. ಸರಿಯಾದ ಹಾದಿಯಲ್ಲಿ ವಿಚಕ್ಷಣತೆಯನ್ನು ಉಪಯೋಗಿಸಿ ಹೆಜ್ಜೆ ಹಾಕದಿದ್ದರೆ ಎಂತಹ ನಿಸ್ಸೀಮರೂ ಎಡವಿ ಬೀಳುತ್ತಾರೆ. ಕೇವಲ ಹುಚ್ಚು ಹುಮ್ಮಸ್ಸು ಇದ್ದರಷ್ಟೆ ಸಾಲದು, ಸರಿಯಾದ ವಿವೇಚನೆಯೂ ಪ್ರತಿಕಾರ್ಯಕ್ಕೆ ತೊಡಗುವಾಗ ಇರಬೇಕಾದದ್ದು ಅತ್ಯಗತ್ಯ. ಆದ್ದರಿಂದ ಸೂಕ್ತ ಸಮಯ-ಸಲಹೆ-ಅವಕಾಶವನ್ನ ಪರಿಗಣಿಸಿ ವಿವೇಚಿಸಿ ನಿರ್ಧರಿಸಬೇಕು ಎನ್ನುತ್ತದೆ ಈ ಗಾದೆಯ ಸಾರ.) ( ಅಡಿ ತತ್ತುಂಡ ಆನೆಲಾ ಮುಗುರುಂಡು = ಹೆಜ್ಜೆ ತಪ್ಪಿದರೆ ಆನೆಯೂ ಎಡವಿ ಬೀಳುತ್ತದೆ.)

ತುಳುಗಾದೆ-೪


"ಅಜ್ಜೆರೆಗ್ ತೆಮ್ಮಲ್ಯೆಪ್ಯರ ಪಂಡ್ದ್ ಕೊರೊಡೋ" { ಅಜ್ಜನಿಗೆ ಮೊಮ್ಮಕ್ಕಳು ಕೆಮ್ಮುವ ಕಲೆ ಕಲಿಸಬೇಕಾಗಿಲ್ಲ ಎನ್ನುವ ಈ ಗಾದೆ ವಿಧೇಯತೆಯನ್ನು ಪ್ರತಿಪಾದಿಸುತ್ತದೆ. ತನ್ನ ವೃತ್ತಿ ಚಾತುರ್ಯದಲ್ಲಿ ನಿಪುಣರಾದ ಅನುಭವಿಗಳ ಮುಂದೆ ಹೊಸತಾಗಿ ಕಾರ್ಯಕ್ಷೇತ್ರಕ್ಕಿಳಿವ ಎಳೆಯರು ವಾದಕ್ಕಿಳಿಯಬಾರದು ಎನ್ನುವುದು ಈ ಗಾದೆಯ ಸಾರ. ತಮ್ಮ ವಯಸ್ಸು, ಅನುಭವ ಹಾಗೂ ಸಾಮರ್ಥ್ಯದ ಆಳವನ್ನು ಹೊಂದಿರುವ ಹಿರಿಯರ ಮಾರ್ಗದರ್ಶನ ಪಡೆಯಬೇಕೆ ವಿನಃ ಅವರನ್ನ ಹೀಗೆಳೆಯಬಾರದು ಎನ್ನುವುದು ವಾಚ್ಯಾರ್ಥ.} ( ಅಜ್ಜೆರೆಗ್ ತೆಮ್ಮಲ್ಯೆಪ್ಯರ ಪಂಡ್ದ್ ಕೊರೊಡೋ = ಅಜ್ಜನಿಗೆ ಕೆಮ್ಮಲು ಕಲಿಸಬೇಕೊ? )

ತುಳುಗಾದೆ-೩


‎""ಅಂಡೆದ ಬಾಯಿ ಕಟ್ಟೊಲಿ, ದೊಂಡೆದ ಬಾಯಿ ಕಟ್ಟೊಲಿಯೋ?" { ಹಂಡೆಯ ಬಾಯಿ ಅದೆಷ್ಟೇ ದೊಡ್ಡದಿದ್ದರೂ ಸರಿ ಸಾಹಸ ಮಾಡಿಯಾದರೂ ಅದನ್ನ ಕಟ್ಟಿ ಮರೆಮಾಡಬಹುದು. ಆದರೆ ಗಂಟಲನ್ನ ಒತ್ತಿ ಹಿಡಿದು ಆಡುವ ಬಾಯಿಯನ್ನೆಂದೂ ಕಟ್ಟಿಹಾಕಲಾಗದು. ಒಬ್ಬರು ನಮ್ಮ ಕುರಿತು ಬೆನ್ನ ಹಿಂದೆ ನೂರು ತರದಲ್ಲಿ ಅಪಪ್ರಚಾರ ಮಾಡುತ್ತಿರಬಹುದು. ಅದನ್ನ ನಿಲ್ಲಿಸಲು ಅಥವಾ ಆ ಕೆಟ್ಟ ವಿಷದ ನಾಲಗೆ ಹೊರಳುವ ಬಾಯಿಯನ್ನ ಕೊನೆಗೂ ಮುಚ್ಚಿಸುವ ಕಾರ್ಯ ಬಹುತೇಕ ಅಸಾಧ್ಯ ಅನ್ನುವುದು ಈ ಗಾದೆಯ ಒಳಾರ್ಥ. "ಊರ ಬಾಯಿಯನ್ನ ಯಾರೂ ಮುಚ್ಚಿಸಲಾರರು" ಎನ್ನುವ ಕನ್ನಡ ಗಾದೆ ಹಾಗೂ " ಹರಿದ ಬಾಯಿಯ ಹೊಲಿವ ಸೂಜಿ ಇನ್ನೂ ತಯಾರಾಗಿಲ್ಲ" ಎನ್ನುವ ಫ್ರೆಂಚ್ ಗಾದೆ ಅದನ್ನೆ ಧ್ವನಿಸುತ್ತವೆ.} ( ಅಂಡೆದ ಬಾಯಿ ಕಟ್ಟೊಲಿ, ದೊಂಡೆದ ಬಾಯಿ ಕಟ್ಟೊಲಿಯೋ? = ಹಂಡೆಯ ಬಾಯಿ ಕಟ್ಟಬಹುದು, ಗಂಟಲಿನ ಬಾಯಿ ಕಟ್ಟಲಾದೀತ? )

ತುಳುಗಾದೆ ೨"ಅಂಚನೆ ಜರ್ಪುನೆಗ್ ಅರ್ಧ ರೊಟ್ಟಿ ಎಡ್ಡೆ" { ಈ ಗಾದೆಗೆ ಅರ್ಥ ಸ್ವಾರಸ್ಯಕರವಾಗಿದೆ, ರಾತ್ರಿಯಲ್ಲಿ ಹಾಗೆಯೆ ಬರಿ ಹೊಟ್ಟೆ ಹಸಿದು ಮಲಗುವವನಿಗೆ ಅರ್ಧ ರೊಟ್ಟಿಯಾದರೂ ಸಿಕ್ಕರೆ ಅದೇ ಸ್ವರ್ಗ. ಇದು ಪೂರ್ತಿ ಹಸಿವನ್ನ ತಣಿಸಲಾರದು ನಿಜ. ಆದರೆ, ಪೂರ್ತಿ ಉಪವಾಸ ಬೀಳುವುದಕ್ಕಿಂತ ಅರೆಹೊಟ್ಟೆ ತುಂಬಿಸಿ ಕೊಳ್ಳುವುದು ವಾಸಿ. ಒಬ್ಬರಿಂದ ತಕ್ಕಮಟ್ಟಿನ ಸಹಾಯ ಕಷ್ಟದಲ್ಲಿದ್ದಾಗ ನಿರೀಕ್ಷಿಸುವುದು ಇದ್ದದ್ದೆ. ಆಗ ಆ ಬಂಧು ತುಸುವಾದರೂ ನೆರವಾದರೆ ಪೂರ್ತಿ ಕಷ್ಟ ಪರಿಹಾರವಾಗಲಾರದಾದರೂ ಬೀಸುವ ದೊಣ್ಣೆಯಿಂದ ತತ್ಕಾಲಕ್ಕೆ ಖಂಡಿತ ತಪ್ಪಿಸಿ ಕೊಳ್ಳಬಹುದು. ಅಲ್ಲದೆ ಬಯಸಿದಷ್ಟು ಸಿಗದಾಗ ಸಿಕ್ಕಿದ್ದಷ್ಟಕ್ಕೆ ತೃಪ್ತಿ ಕಾಣಬೇಕು ಅನ್ನುವುದು ಇದರ ವಾಸ್ತವದ ತಾತ್ಪರ್ಯ. "ಕುರುಡುಗಣ್ಣಿಗಿಂತ ಮಳ್ಳೆಗಣ್ಣು ವಾಸಿ" ಅನ್ನುವುದು ಇದಕ್ಕೆ ಸಮಾನಾರ್ಥಕವಾದ ಕನ್ನಡ ಗಾದೆ.} (ಅಂಚನೆ ಜರ್ಪುನೆಗ್ ಅರ್ಧ ರೊಟ್ಟಿ ಎಡ್ಡೆ. = ಹಾಗೆಯೆ ಮಲಗುವ ಬದಲು ಅರ್ಧ ರೊಟ್ಟಿ ಒಳ್ಳೆಯದು.)

ತುಳುಗಾದೆ-೧


"ಅಂಗೈ ತೂಯರೆ ಕನ್ನೆಟಿ ದಾಯೆ?" { ಅಂದರೆ ಅಂಗೈ ನೋಡಲು ಕನ್ನಡಿಯ ಸಹಾಯ ಬೇಕಿಲ್ಲ. ಒಬ್ಬ ವ್ಯಕ್ತಿಯ ಯೋಗ್ಯತೆ ತಿಳಿಯಲು, ಒಂದು ವಸ್ತುವಿನ ಮೌಲ್ಯ ಅಳೆಯಲು ಅದನ್ನೊಮ್ಮೆ ನೋಡುವಾಗಲೆ ಅರ್ಧ ಗ್ರಹಿಸಬಹುದು. ಅದರಲ್ಲೂ ಸ್ವಂತದ ವಿಷಯದಲ್ಲಿ ನಮ್ಮಷ್ಟು ಚನ್ನಾಗಿ ನಮ್ಮ ಬಗ್ಗೆ ಇನ್ನೊಬ್ಬರು ಅರಿತಿರುವುದು ಅಸಾಧ್ಯ. ಒಬ್ಬರ ಗುಣಾವಗುಣಗಳನ್ನ ಅಳೆಯಲು ಅವರ ಕೆಲಸ ಕಾರ್ಯಗಳೆ ಸಾಕು ಜಾತಕವಲ್ಲ.} ‎""((( ಅಂಗೈ ತೂಯರೆ ಕನ್ನೆಟಿ ದಾಯೆ? = ಅಂಗೈ ನೋಡಲು ಕನ್ನಡಿ ಏಕೆ?))

08 February 2013

ಸುಳ್ಳೇ ಸುಳ್ಳು, ಎಲ್ಲಾ ಸುಳ್ಳೆ ಸುಳ್ಳು....


ಮೂರು ಮುಕಾಲು ಘಂಟೆ ಬಂಡಲ್ ಕಟ್ಟುತ್ತಾ ಶೆಟ್ಟರ್ ಓಡಿಸಿದ ಹಳಿಯಿಲ್ಲದ ರೈಲು ಕಡೆಗೂ ನಿಲ್ತಲ್ಲಪ್ಪ ರಾಮ ರಾಮ!.... ಇಷ್ಟು ದಭ ದಭೆ ಕೇಳಿಯೂ ಬಡ ಕನ್ನಡಿಗರ ಕಿವಿ ಹೊಟ್ಟಿ ಹೋಗಲಿಲ್ಲವಲ್ಲ ಏನಾಶ್ಚರ್ಯ?!
ಮೂರು ಮುಕ್ಕಾಲು ಘಂಟೆ ನಾಲ್ಕು ವರ್ಷದಿಂದ ಹಾಡಿದ್ದನ್ನೆ ಹಾಡಿ, ಹೊಗಳಿಕೊಂಡರು ತಮ್ಮನ್ನೆ ತಾವು.... ತೆಗೆದಿದ್ದರೂ ನಾಡನ್ನ-ನಾಡಿನ ಮಾನವನ್ನ ಮುಲಾಜಿಲ್ಲದೆ ಲಗಾಡಿ/ ಬಜೆಟ್ ಎಂಬ ಕ"ಮಲ"ದ ಹೂವನ್ನ ಬಡ-ಎಬಡ-ನಡು ಕನ್ನಡದಲ್ಲಿ ಜೊತೆಗೊಂದಿಷ್ಟು ಇಂಗ್ಲಿಸ್.... ನಂಚಿಕೊಂಡು ಒತ್ತಾಯಿಸಿ ಸುರಿದೆ ಬಿಟ್ಟರ್, ನಮ್ಮ ಅಳಿದೂರಿಗೆ ಉಳಿದ ಗೌಡ ಶೆಟ್ಟರ್ ಬೇಡದಿದ್ದರೂ ತೋಯ್ದು ತೊಪ್ಪೆಯಾಗಿ ಕನ್ನಡಿಗರು ಹಗಲ್ಲಲ್ಲೆ ಕೆಟ್ಟರ್,,,, ಅಸಹಾಯಕವಾಗಿ ಕಣ್ ಕಣ್ ಬಿಟ್ಟರ್//