17 February 2013

ತುಳುಗಾದೆ-೧೯


"ಗೋಳಿ ಮರತ್ತಡಿತ್ತ ನಿರೆಳ್'ದ ಲೆಕ್ಖೋ"


 { ಖ್ಯಾತನಾಮರಾಗುವವರ ಹಿಂಬಾಲಕರ, ಸಂತಾನದ, ಒಡಹುಟ್ಟಿದವರ ಸಮಸ್ಯೆಯನ್ನ ವಿವರಿಸುವಾಗ ಈ ಮಾತನ್ನ ಉಧ್ಗರಿಸಲಾಗುತ್ತದೆ. ಗೋಳಿ ಮರವೆಂದರೆ ಆಲದ ಮರವೆಂದರ್ಥ. ಆಲದ ಮರ ತನ್ನ ತಾಯಿ ಬೇರಿನ ಆಸರೆಯಲ್ಲಿ ನೆಲದ ಸಾರವನ್ನ ಹೀರಿಕೊಂಡು ಬೆಳೆಯುವ ಜೊತೆಜೊತೆಗೆ ಅನೇಕ ಬಿಳಲುಗಳೆಂಬ ಉಪ ಕವಲು ಬೇರುಗಳನ್ನ ತನ್ನ ಸುತ್ತಮುತ್ತಲೂ ಹರಡಿಸಿಕೊಂಡು ವಿಶಾಲವಾಗಿ ಹರಡಿಕೊಂಡು ಬೆಳೆಯುತ್ತದೆ.


ಇದರ ನೆರಳು ವ್ಯಾಪ್ತಿಯಲ್ಲಿ ದೊಡ್ಡದಾಗಿ ಕಂಡರೂ ಅದರಿಂದ ಆಗುವ ಉಪಕಾರಕ್ಕಿಂತ ಅಪಕಾರವೆ ಜಾಸ್ತಿ! ಸಾಮಾನ್ಯವಾಗಿ ಗಿಡವೊಂದು ಆರೋಗ್ಯಕರವಾಗಿ ಬೆಳೆದು ನಿಲ್ಲಲು ನೆಲದಾಸರೆಯ ನೀರು ಗೊಬ್ಬರದಷ್ಟೆ ಬಾನಿನಲ್ಲಿ ಸುಡುವ ಭಾಸ್ಕರನ ಬೆಳಕು ಹಾಗೂ ಬಿಸಿಲು ಕೂಡ ಅತ್ಯಗತ್ಯ. ಮಾನವ ಮತ್ತು ಇನ್ನಿತರ ಜೀವಿಗಳಿಗೆ ತಂಪು ನೆರಳಿನಾಸರೆಯಾಗಿ ಭಾಸವಾಗುವ ಬೃಹದಾಲದ ನೆರಳು ಅದೆ ಮರದಡಿ ಬೆಳೆಯುವ ದೊಂಬರಾಟ ನಡೆಸುವ ಇನ್ನಿತರ ಗಿಡಗಂಟಿಗಳ ಪಾಲಿಗೆ ಅಕ್ಷರಶಃ ನರಕ. ತಮ್ಮ ಪಾಲಿಗೆ ಸಿಗಬೇಕಾದ ಸಣ್ಣ ಪಾಲಿಗೂ ಕನ್ನ ಹಾಕುವ ಬೃಹದಾಲದ ವ್ಯಾಪ್ತಿ.


 ಕನಿಷ್ಠ ಬಾನಿನ ಬೆಳಕನ್ನೂ ತಮಗೆ ದಕ್ಕಲು ಬಿಡದ ಆಲದ ವಿಶಾಲ ನೆರಳಿನ ಮುಂದೆ ಇನ್ನಿತರ ಸಸಿಗಳೆಲ್ಲ ಹೋರಾಡಲಾಗದೆ ನೊಂದು ಬಾಡಿ ಮುರುಟುತ್ತವೆ. ಇದು ಅವಿವೇಕಿಗಳ ಪಾಲಿಗೆ ಎಚ್ಚರಿಕೆಯೂ ಹೌದು, ಪ್ರೇರಣೆಯೂ ಹೌದು. ನೀವು ಅದೆಷ್ಟೆ ಖ್ಯಾತ ವ್ಯಕ್ತಿಗಳ ಆಸರೆಯಲ್ಲಿ ಅನಿವಾರ್ಯವಾಗಿಯೋ, ಇಲ್ಲವೆ ಕೈಲಾಗದೆ ಇರುವುದಾದಲ್ಲಿ ನಿಮ್ಮ ಸ್ವಂತ ನೆಲೆಯಲ್ಲಿ ಬೆಳೆಯುವ ಆಸಕ್ತಿ ಹೊಂದಿದ್ದರೆ ಧೈರ್ಯ ಮಾಡಿ ಆ ಖ್ಯಾತರ ನೆರಳಿನಿಂದ ಹೊರಬಂದರಷ್ಟೆ ತಾವೂ ಬೆಳೆಯಲು ಸಾಧ್ಯ ಎನ್ನುತ್ತದೆ ಈ ಗಾದೆಯ ವಾಚ್ಯಾರ್ಥ. "ಆಲದಡಿ ಬೇಲ ಬೆಳೆಯಲಾರದು" ಎನ್ನುವ ಕಣ್ಣಡದ ಗಾದೆಯ ಅರ್ಥವೂ ಇದೆ.}


 ( ಗೋಳಿ ಮರತ್ತಡಿತ್ತ ನಿರೆಳ್'ದ ಲೆಕ್ಖೋ = ಆಲದ ಮರದಡಿಯ ನೆರಳಿನ ಹಾಗೆ.)

No comments: