21 February 2013

ತುಳುಗಾದೆ-೨೩






 "ಬುಲೆ ಆಪಿ ಕಂಡ ಆವೊಡು, ಬುಡೆದಿ ಕಪ್ಪುದ ಆವೊಡು!"


 { ಗದ್ದೆಗೆ ನೀರಿನ ಆಸರೆ ಬಹು ಮುಖ್ಯ. ತೋಡಿನ ಸಮೀಪವೆ ಇರುವ ಗದ್ದೆಯಲ್ಲಿ ಆರಾಮವಾಗಿ ತುಳುನಾಡಿನಲ್ಲಿ ವರ್ಷಕ್ಕೆ ಮೂರು ಬೆಳೆ ತೆಗೆಯುತ್ತಾರೆ. ವರ್ಷದಾದ್ಯಂತ ಭೂಮಿಯ ಒಡಲನ್ನ ತಂಪಾಗಿಟ್ಟು ಅವಳ ಎದೆಗೆ ಹಸಿರನ್ನ ಒಂದಿಲ್ಲೊಂದು ರೀತಿಯಲ್ಲಿ ಉಡಿಸಿದಂತೆ ಗೋಚರಿಸಿ ಕಾಣುವ ಕಣ್ಣಿಗೆ ತಂಪನ್ನೆರೆವ ಗದ್ದೆ ಮನೆಯ ಕಷ್ಟಕ್ಕೂ ಒದಗಿ ಬರುತ್ತದೆ. ಆಗುವ ಬೆಳೆಯ ಬಹುಪಾಲು ಮನೆಯ ನಿತ್ಯದ ಖರ್ಚಿಗೆ ಸಂದರೂ ಹೆಚ್ಚಿನದ್ದನ್ನ ಹೊರಗಡೆ ಮಾರಿ ಇನ್ನಿತರ ಅಗತ್ಯಗಳನ್ನ ನಿರ್ವಿಘ್ನವಾಗಿ ನೆರವೇರಿಸಿ ಕೊಳ್ಳೋಕೆ ಸಾಧ್ಯವಾಗುವುದು ಬೆಳೆ ಬೆಳೆವ ಗದ್ದೆ ನಮಗಿದ್ದಲ್ಲಿ ಮಾತ್ರ.


 ಅಂತೆಯೆ ಕಪ್ಪು ಮೈಬಣ್ಣದ ಹೆಂಡತಿ ಮನೆಯಲ್ಲಿದ್ದರೆ ತಲೆ ನೋವು ಕಡಿಮೆಯಂತೆ! ಬೆಳ್ಳಗಿನ ಚರ್ಮಕ್ಕೆ ಮನಸೋಲುವ ಕಾಮದ ಕಣ್ಗಳಿಗೆ ಕಪ್ಪಿನ ಕುರಿತು ಅಷ್ಟಾಗಿ ಆಸಕ್ತಿ ಇರಲಾರದು ಎನ್ನುತ್ತದೆ ಈ ಗಾದೆ. ಹೀಗಾಗಿ ಪರಪುರುಷರ ಹಸಿದ ಕಾಮಪಿಪಾಸು ಕಣ್ಣುಗಳ ಸುಳಿನೋಟ ನಮ್ಮ ಮನೆಯ ಮೇಲೆ ಬೀಳುವುದಿಲ್ಲ. ಕಪ್ಪು ಫಲವತ್ತತೆಯ ಸೂಚಕವೂ ಹೌದಂತೆ. ಕರಿಮಣ್ಣಿನ ಗದ್ದೆ ಹೆಚ್ಚು ಬೆಳೆಸ್ನೇಹಿ. ಕೆಂಪು ಮಣ್ಣಿನ ಹೋಲಿಕೆಯಲ್ಲಿ ಕಪ್ಪು ಮಣ್ಣಿನ ಸತ್ವ ಹೆಚ್ಚು. ಇದು ಈ ಗಾದೆಯ ವಾಚ್ಯಾರ್ಥ. 


ನಿಜದ ಅರ್ಥದಲ್ಲಿ ಇದು ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಅಧಿಕ ಮೌಲ್ಯಯುತ ಎನ್ನುವ ವಿವೇಕ ಬೋಧಿಸುವ ಗಾದೆಯಿದು. ಭೂಮಿಯಂತೆ ಹೆಣ್ಣು. ಇದು ಮನೆಯ ಬೆಳಕಾದರೆ ಸಾಕೆ ಹೊರತು ಹೊರಗಿನವರ ಕಣ್ಣು ಕುಕ್ಕುವ ಥಳುಕಾಗಿ ಇರಬೇಕಿಲ್ಲ ಎನ್ನುವ ಸಲಹೆಯನ್ನ ನೀಡುತ್ತದೆ.}


 ( ಬುಲೆ ಆಪಿ ಕಂಡ ಆವೊಡು, ಬುಡೆದಿ ಕಪ್ಪುದ ಆವೊಡು! = ಬೆಳೆ ಆಗುವ ಗದ್ದೆಯಾಗಬೇಕು, ಹೆಂಡತಿ ಕಪ್ಪಿನವಳಾಗಿರಬೇಕು!.)

No comments: