24 February 2013

ತುಳುಗಾದೆ-೨೬





 "ಕೊರ್ತ್ ಪನಡಾ, ಪಂಡ್ತ್ ಕೊರಡಾ"

 { ಇದ್ದು ಇಲ್ಲೆನ ಬೇಡ/,
 ಕೊಟ್ಟು ಕುದಿಯಲು ಬೇಡ//

 ಎನ್ನುತ್ತಾರೆ ಭಕ್ತಿ ಭಂಡಾರಿ ಬಸವಣ್ಣ ತಮ್ಮ ವಚನವೊಂದರಲ್ಲಿ.

ಬದುಕಿನಲ್ಲಿ ನಾವು ನಮ್ಮ ಮಿತಿಯಲ್ಲಿ ದಾನಶೀಲರಾಗಿರಬೇಕಂತೆ. ಬಾಳನ ಎಲ್ಲಾ ದಿನಗಳೂ ಒಂದೆ ಸಮನಾಗಿರುವುದಿಲ್ಲ. ಇಂದು ಕೆಳಗೆ ಹೋದ ವ್ಯಕ್ತಿಯೊಬ್ಬನ ಅದೃಷ್ಟ ಚಕ್ರ ಯಾವತ್ತಾದರೂ ಒಂದು ದಿನ ಮೇಲೇರಿಯೆ ತೀರುತ್ತದೆ. ಇಂದು ಜಗಮಗಿಸುತ್ತಿರುವ ನಕ್ಷತ್ರವೊಂದು ಅನಿಷ್ಠದ ದಿನವೊಂದರಲ್ಲಿ ಧರೆಗೆ ಅಚಾನಕ್ಕಾಗಿ ಉರುಳಿ ಬೀಳಲೂಬಹುದು. ಆಗ ಪರಸ್ಪರ ಅರ್ಥ ಮಾಡಿಕೊಂಡು ಬಳಲಿದವರನ್ನ ತಮ್ಮ ಸರಿ ಸಮನಾಗಿ ಪರಿಗಣಿಸಿ ಅಂತೆಯೆ ನಡೆಸಿಕೊಂಡು ನೊಂದವರಲ್ಲೂ ಆತ್ಮವಿಶ್ವಾಸವನ್ನ ಮೂಡಿಸಬೇಕಾದುದು ಮೇಲೇರಿರುವವರ ಕರ್ತವ್ಯ. ಆದರೆ ಕೆಲವರಿಗೆ ದಾನಶೀಲತೆಯೇನೋ ರೂಢಿಯಾಗಿರುತ್ತದೆ ಆದರೆ ತಮ್ಮ ಔದಾರ್ಯವನ್ನ ಜೊತೆಗೆ ಪಡೆದವರ ದೈನ್ಯವನ್ನ ಎಲ್ಲರಲ್ಲೂ ಹೇಳಿಕೊಂಡು ತಿರುಗುವ ಕೆಟ್ಟಚಟವೂ ಬೆನ್ನಿಗಂಟಿದ ಭೂತದಂತೆ ಜೊತೆಯಾಗಿರುತ್ತದೆ. ಇದು ಕ್ರಿಯೆಯಲ್ಲಿನ ಲೋಪ. ಒಳ್ಳೆಯ ಗುಣವಾದ ದಾನಶೀಲತೆಯ ಸದಾಚಾರವನ್ನೆಲ್ಲ ಅದು ನುಂಗಿ ನೊಣೆದು ಹಾಕುತ್ತದೆ.


ಯಾವಾಗಲೂ ನಮ್ಮ ಔದಾರ್ಯ ಅಗ್ಗದ ಪ್ರಚಾರದ ಸರಕಾಗಬಾರದು. ಸದ್ಗುಣ ಯಾವತ್ತೂ ಹೆಸರು ಗಳಿಕೆಯ ಜಾಹಿರಾತಿನ ವಸ್ತುವಾಗಬಾರದು. ನಮ್ಮನ್ನ ನಮ್ಮ ಸತ್ಕರ್ಮವನ್ನ ಇನ್ನಿತರರು ಗುತಿಸಬೇಕೆ ಹೊರತು ನಾವೆ ಅದರ ವಕ್ತಾರಿಕೆ ವಹಿಸುವ ವಿದೂಷಕರಾಗಬಾರದು. ಅಂತೆಯೆ ಪಡೆದವರ ಕರ್ತವ್ಯಗಳು. ದೀನವಾಗಿರುವ ತಮ್ಮ ಸ್ಥಿತಿ ಸುಧಾರಿಸಿದ ಮೇಲೆ ಕಷ್ಟದಲ್ಲಿ ಕೈಹಿಡಿದ ಉದಾರ ಹಸ್ತವನ್ನ ಮರೆಯ ಕೂಡದು. ಅಗತ್ಯವಿದ್ದಾಗ ಪಡೆದದ್ದು ಅಲ್ಪವೆ ಆಗಿದ್ದರೂ ಮರೆಯದೆ ಅದನ್ನ ಸಾಧ್ಯವಾದಷ್ಟು ಬಡ್ಡಿಯ ಸಹಿತ ನಮ್ರವಾಗಿ ಹಿಂತಿರುಗಿಸಬೇಕು. ಸಂಕಟದ ಹೊತ್ತಲ್ಲಿ ಸಂತಸದ ಬೀಜವನ್ನ ಬಿತ್ತಿದ್ದ ನಿರ್ಮಲ ಮನಸ್ಸಿನ ಔದಾರ್ಯವನ್ನ ಅಷ್ಟೆ ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕು ಎನ್ನುವುದೆ ಈ ಗಾದೆಯ ಆಶಯ.}



 ( ಕೊರ್ತ್ ಪನಡಾ, ಪಂಡ್ತ್ ಕೊರಡಾ = ಕೊಟ್ಟು ಹೇಳಬೇಡ, ಹೇಳಿ ಕೊಡಬೇಡ.)

No comments: