21 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೬೧.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೬೧.👊

ತುಂಬಾ ಹೊತ್ತು ಅತ್ತಿತ್ತ ಹೊರಳಾಡುತ್ತಿದ್ದರೂ ಸಹ ನಿದ್ರೆ ಮತ್ತವನ ಕಣ್ಣುಗಳ ಹತ್ತಿರ ಸುಳಿಯಲಿಲ್ಲ. ವ್ಯಥಾ ಪ್ರಯತ್ನ ನಡೆಸುತ್ತಾ ಮತ್ತೊಂದಷ್ಟು ಹೊತ್ತು ಅವನು ಹಾಸಿಗೆಯಲ್ಲೆ ಸೆಣೆಸಿದ. ಒಂಥರಾ ವ್ಯಥೆಯ ಕಂಪನಗಳು ಅವನ ಕೈ ಕಾಲುಗಳ ನರಗಳಲ್ಲಿ ಏಳಲಾರಂಭಿಸಿತು. ಇದವನ ಹಳೆಯ ವೈಕಲ್ಯಗಳಲ್ಲೊಂದು. ಯಾವುದಾದರೂ ಸ್ಥಳದಲ್ಲಿ ಕೊಂಚ ಸಮಯವಾದರೂ ಇದ್ದು ಅಲ್ಲಿನ ಪರಿಸರದೊಂದಿಗೆ ಅನುಬಂಧದ ಎಳೆ ಬೆಸೆದ ನಂತರ ಆ ಜಾಗವನ್ನು ಬಿಟ್ಟು ಹೊರಡಬೇಕಾದ ಹೊತ್ತೆದುರಾಗುವ ಕ್ಷಣ ಹತ್ತಿರವಾಗುತ್ತಿದ್ದಂತೆ ಇಂತಹ ಕೌತುಕದ ಚೋದಕರಸ ಅವನ ನಾಡಿಗಳಲ್ಲಿ ಹರಿವ ನೆತ್ತರ ಸೇರಿ ಮಿಡಿಯಲಾರಂಭಿಸುತ್ತದೆ. ಹಾಗೆ ತನಗೆ ಮಾತ್ರ ಆಗೋದ? ಅಥವಾ ಎಲ್ಲಾ ನರಮನುಷ್ಯರಿಗೂ ಇದು ಸಾಮಾನ್ಯವ? ಅನ್ನುವ ಗೊಂದಲ ಅವನೊಳಗೆ ಅನುಗಾಲದೊಂದಿಗೂ ಇದೆ.

ಅವನಿಗೆ ನೆನಪಿರುವಂತೆ ಸಣ್ಣ ಪ್ರಾಯದಲ್ಲಿ ಬೇಸಿಗೆ ಹಾಗೂ ದಸರಾ ರಜೆಗೆ ಅವ ಅಮ್ಮ ಅಂತಲೆ ಸಂಬೋಧಿಸುತ್ತಿದ್ದ ಅಜ್ಜಿಯ ಊರಿಗೆ ಅವರ ಜೊತೆ ಹೋಗಿ ಪುನಃ ರಜೆ ಮುಗಿದು ಮನೆಗೆ ಹಿಂದಿರುಗುವ ದಿನ ಹತ್ತಿರವಾಗುತ್ತಿದ್ದಂತೆ ಇಂತಹ ಅನುಭವವಾಗುತ್ತಿತ್ತು ಅನ್ನೋದು ಅವನ ನೆನಪಿನಲ್ಲಿದೆ. ತೀರ ಹೊರಡುವ ದಿನದ ಹಿಂದಿನ ರಾತ್ರಿಯಂತೂ ಇದರ ಪ್ರಭಾವ ಹೆಚ್ಚಿ ಥೇಟ್ ಹೀಗೆಯೆ ರಾತ್ರಿ ಎಚ್ಚರವಾಗಿ ಮತ್ತೆ ನಿದ್ರೆ ಬರದೆ ಪರದಾಡುತ್ತಿದ್ದ. ಮನೆಯಲ್ಲೆಲ್ಲರೂ ಮಲಗಿ ಗೊರಕೆ ಹೊಡೆಯುತ್ತಿದ್ದ ಹೊತ್ತಿಗೆ ಚಾಪೆಯಲ್ಲಿ ಹೊರಳಾಡಿ ನಿದ್ರೆ ಹತ್ತದೆ ಮತ್ತೆದ್ದು ಕೂತೆ ಬೆಳಕು ಹರಿಸುತ್ತಿದ್ದ. ಅಮ್ಮನೋ ಚಿಕ್ಕಮ್ಮನೋ ಚುಮುಚುಮು ಮುಂಜಾನೆ ಎಲ್ಲರಿಗಿಂತಲೂ ಮೊದಲೆದ್ದು ಮನೆ ಕೆಲಸಕ್ಕೆ ತೊಡಗಿದಾಗ ಬಿಡುಗಡೆ ಸಿಕ್ಕಂತೆ ಅನ್ನಿಸಿ ಅವರ ಬೆನ್ನು ಹಿಡಿದೆದ್ದು ಹೋಗುತ್ತಿದ್ದ.

ಹತ್ತರ ಪ್ರಾಯದಲ್ಲಿ ಕಾರ್ಕಳದ ಹಾಸ್ಟೆಲ್ ವಾಸ ಆರಂಭವಾದ ನಂತರವಂತೂ ಇದು ಅತಿಯಾಯಿತು. ಸಾಮಾನ್ಯವಾಗಿ ಮಾರ್ಚ್ ತಿಂಗಳ ಇಪ್ಪತ್ತೈದರ ಹೊತ್ತಿಗೆಲ್ಲ ಪರಿಕ್ಷೆಗಳು ಮುಗಿದು ಎಲ್ಲರೂ ಅವರವರ ಮನೆಗಳಿಗೆ ಹಿಂದಿರುಗಿ ಅವನ ಹಾಗೂ ಸಿಬ್ಬಂದಿಗಳ ಹೊರತು ಇಡಿ ವಿದ್ಯಾರ್ಥಿ ನಿಲಯ ಖಾಲಿ ಹೊಡೆಯುತ್ತಿದ್ದ ಕಾಲ ಅದು. ನಿಯಮಗಳ ಪ್ರಕಾರ ಆ ವರ್ಷದ ಫಲಿತಾಂಶ ಬರುವ ಎಪ್ರಿಲ್ ಹತ್ತರ ತನಕ ಅದನ್ನ ಮುಚ್ಚುವಂತಿರಲಿಲ್ಲವಾಗಿ ಅವನನ್ನ ಮನೆಗೆ ಕರೆದಿಟ್ಟುಕೊಳ್ಳಲು ಇಷ್ಟವಿಲ್ಲದ "ಓದಿಸಲು ಕರೆದುಕೊಂಡು ಹೋಗಿದ್ದ" ಚಿಕ್ಕಪ್ಪ-ಚಿಕ್ಕಮ್ಮ ಅಲ್ಲಿಯವರೆಗೂ ಅಲ್ಲೆ ಇಟ್ಟುಕೊಳ್ಳುವಂತೆ ತಾಕೀತು ಮಾಡಿರುತ್ತಿದ್ದರಿಂದ ಅನಿವಾರ್ಯವಾಗಿ ಮತ್ತೆರಡು ವಾರ ಅಲ್ಲಿರಲೆ ಬೇಕಿದ್ದ ಪರಿಸ್ಥಿತಿಯಲ್ಲಿ ಅವನಿರುತ್ತಿದ್ದ. ಮನಸು ಮಾಡಿದ್ದರೆ ಮನೆಗೆ ಕರೆಸಿಕೊಳ್ಳದಿದ್ದರೂ ಊರಿಗಾದರೂ ಕಳಿಸಿ ಅವನ ಕ್ಲೇಶವನ್ನವರು ಕಡಿಮೆ ಮಾಡಬಹುದಿತ್ತು. ಆದರೆ ಶಿಕ್ಷಕರಾಗಿದ್ದ ಅವರಿಬ್ಬರಿಗೂ ತಮ್ಮ ಮುಂಬಡ್ತಿಯ ಇಲಾಖಾ ಪರಿಕ್ಷೆಗಳು ಶಾಲಾ ರಜಾ ಸಮಯದಲ್ಲೆ ಇರುತ್ತಿದ್ದರಿಂದ ಅವನ ಅವಶ್ಯಕತೆ ರಜೆಯಲ್ಲಿರುತ್ತಿದ್ದು ರಜಾವಧಿಯ ಅರ್ಧ ಅಲ್ಲಿ ಹೋಗಿ ಮನೆ ಕಾಯುವ ಕೆಲಸ ಮಾಡಬೇಕಿತ್ತು. ಅದು ಮುಗಿದ ನಂತರವೆ ಕೆಲದಿನಗಳ ಮಟ್ಟಿಗೆ ಮಾತ್ರ ಊರಿಗೆ ಹೋಗಿ ಬರಲು ಅನುಮತಿ ಸಿಗುತ್ತಿತ್ತು. ಹಾಗೆ ನೋಡಿದರೆ ಪರಿಕ್ಷೆ ಆರಂಭವಾಗುವಾಗಲೆ ಮನೆಗೆ ಹೋಗುವ ದಿನಗಳ ಲೆಕ್ಖವನ್ನ ನೋಟುಬುಕ್ಕಿನ ಕೊನೆಯ ಪುಟದಲ್ಲಿ ಬರೆದಿಟ್ಟು ದಿನಕ್ಕೊಂದು ಸಂಖ್ಯೆಯ ಮೇಲೆ ಪೆನ್ಸಿಲ್ಲಿನ ಗೆರೆ ಎಳೆದು ಆ ಸಂಭ್ರಮದ ದಿನ ಹತ್ತಿರವಾಗುತ್ತಿದ್ದ ಪುಳಕವನ್ನ ಅನುಭವಿಸುತ್ತಿದ್ದ. ಆದರೆ ಅವನ ಅತಿರೇಕದ ಅಂತಃರ್ದ್ವಂದ್ವದ ಪರಿಣಾಮ ಊರ ಹಾದಿ ಹಿಡಿಯುವ ಖುಷಿಯ ಕ್ಷಣಕ್ಕೆ ಇನ್ನೇನು ಒಂದೋ ಎರಡೋ ದಿನ ಮಾತ್ರ ಬಾಕಿ ಇರುವಾಗ ಈ ಕೌತುಕದ ಕಂಪನ ಇದ್ದಕ್ಕಿದ್ದಂತೆ ನರನಾಡಿಗಳಲ್ಲಿ ಎದ್ದು ನಟ್ಟನಡು ಇರುಳಲ್ಲಿ ಇದ್ದಕ್ಕಿದ್ದಂತೆ ಎಚ್ಚರವಾಗಿ ಮತ್ತೆ ಮಲಗಲಾರದೆ ಪರಿತಪಿಸುತ್ತಿದ್ದ. ಭೂತಬಂಗಲೆಯಂತ ಅಷ್ಟು ದೊಡ್ಡ ವಿದ್ಯಾರ್ಥಿ ನಿಲಯದಲ್ಲಿ ಅವನೊಬ್ಬನೆ! ಅವನಿರುತ್ತಿದ್ದ ಕರ್ಮಕ್ಕೆ ತಾವೂ ಇರಲೆಬೇಕಾದ ಕಟ್ಟುಪಾಡಿಗೆ ಕಟ್ಟುಬಿದ್ದಿದ್ದ ಸಿಬ್ಬಂದಿ ತಮ್ಮ ತಮ್ಮ ಕೋಣೆಯಲ್ಲಿ ಮಾರ್ಚ್ ಎಪ್ರಿಲ್ಲಿನ ಸೆಖೆಗೆ ಪಂಖ ಹಾಕಿಕೊಂಡು ಮಲಗಿ ಗೊರಕೆ ಹೊಡೆಯುತ್ತಿದ್ದರು. ಇನ್ನು ನಿದ್ರೆ ಮಾಡಲಾರೆ ಅಂತನಿಸಿದ ಮೇಲೆ ಮೇಲೆದ್ದು ಮೆಲ್ಲನೆ ಬಾಗಿಲು ತೆಗೆದು ವರಾಂಡದ ಮೆಟ್ಟಿಲ ಮೇಲೆ ಮಂಡಿಗಳ ಮೇಲೆ ಮುಖ ಒರಗಿಸಿ ಕೂತು ಸುಮ್ಮನೆ ಬಾನ ಮಿನುಗುತಾರೆಗಳನ್ನೋ ಇಲ್ಲಾˌ ಆ ಹೊತ್ತಿನಲ್ಲಿ ಹೊಳೆಯುವ ಶುಕ್ರಗ್ರಹವನ್ನೋ ಕಾಣುತ್ತಾ ಸರಿಯಾಗಿ ಬೆಳಗಾಗುವವರೆಗೂ ಕೂತಿರುತ್ತಿದ್ದ.

ಮಂಗಳೂರಿನ ಆಶ್ರಮ ಸೇರಿದ ನಂತರವೂ ಇದು ಕಡಿಮೆಯಾಗಲಿಲ್ಲ. ಅಲ್ಲಿ ಮನೆಗೆ ಹೋಗಲು ಬಿಡುತ್ತಿದ್ದುದೆ ಕಡಿಮೆ. ಮಕ್ಕಳನ್ನ ಎರಡೆರಡು ತಂಡ ಮಾಡಿ ಒಂದು ತಿಂಗಳ ದಸರಾ ರಜೆಗೆ ಒಂದೊಂದು ತಂಡವನ್ನ ಎರಡೆರಡು ವಾರ ಮನೆಗೆ ಕಳಿಸಿದರೆˌ ಅದೆ ಎರಡು ತಿಂಗಳ ಬೇಸಿಗೆ ರಜೆಯಲ್ಲಿ ಕೇವಲ ಒಂದೊಂದು ತಿಂಗಳಷ್ಟೆ ಮನೆ ಮುಖ ನೋಡಬಹುದಿತ್ತು. ಈ ಸಲ ಮೊದಲ ತಿಂಗಳು ರಜೆ ಅನುಭವಿಸುವ ತಂಡಕ್ಕೆ ಮರುವರ್ಷ ಎರಡನೆ ತಿಂಗಳು ರಜಾಭಾಗ್ಯ ಲಭ್ಯವಾಗುತ್ತಿತ್ತು. ಅವಾಗಲೂ ತಿಂಗಳ ಹಿಂದೆಯೆ ಉಳಿದ ದಿನಗಳ ಲೆಕ್ಖ ಬರೆದಿಡೋದು - ದಿನಕ್ಕೊಂದರ ಮೇಲೆ ಗೆರೆ ಎಳೆಯೋದು ಎಲ್ಲಾ ಮಾಮೂಲೆ. ಆದರೆ ಹೋಗುವ ದಿನದ ಹಿಂದಿನೆರಡು ಮೂರು ದಿನ ಅರಿಯದ ಕಾರಣಕ್ಕೆ ವಿಪರೀತ ತಳಮಳವಾಗಿ ರಾತ್ರಿಯ ನಿದ್ರೆ ಹಾರಿ ಹೋಗುತ್ತಿತ್ತು.

ಅದಲ್ಲಿಂದ ಹೋಗುವ ಬಿಡುಗಡೆಯ ಖುಷಿಗೋ ಇಲ್ಲಾ ಇದನ್ನೆಲ್ಲಾ ಬಿಟ್ಟು ನಡೆಯಬೇಕಲ್ಲ! ಅನ್ನುವ "ಸ್ಟಾಕ್ ಹೋಂ ಸಿಂಡ್ರೋಮ್" ಲಕ್ಷಣವೋ ಅನ್ನುವ ಅನುಗಾಲದ ಗೊಂದಲ ಅವನಿಗೆ ಇದ್ದೆ ಇದೆ. ಈಗಲೂ ಸಹ ಪ್ರಯಾಣಿಸುವಾಗ ನಿಗದಿತ ಗುರಿ ಹತ್ತಿರವಾದಂತೆಲ್ಲ ಅವನಿಗೆ ಅದೆ ಬಗೆಯ ದೈಹಿಕ ತಳಮಳ ಏಳೋದಿದೆ. ದೂರದೂರಿನಲ್ಲಿ ಬಹುಕಾಲವಿದ್ಧು ಮನೆಗೆ ಮರಳುವ ಹಂತದಲ್ಲೂ ಹಾಗೆ ಆಗಿರೋದಿದೆ. ಅದೇನು ಹಿತಾನುಭಾವವೋ? ಹೆದರಿಕೆಯ ಸೂಚನೆಯೋ! ಒಂದೂ ಅರ್ಥವಾಗದಂತಿದ್ದಾನವನು. ಒಟ್ಟಿನಲ್ಲಿ ಅದೊಂದು ಗೊಂದಲದ ಹುತ್ತವಾಗಿ ಅವನನ್ನ ಆವರಿಸಿಯೆ ಉಳಿದಿದೆ. ಇಂದು ನಡುರಾತ್ರಿ ನಿದ್ರೆ ಜಾರಿದವ ಅದೆ ಮನಸ್ಥಿತಿಯಲ್ಲಿದ್ದ.

*****

ಅಂಧೇರಾ ಪಾಗಲ್ ಹೈಂ
ಕಿತನಾ ಘನೇರಾ ಹೈಂ
ಚುಪತಾ ಹೈಂ ಢಸತಾ ಹೈಂ
ಫಿರ್ ಭೀ ವಹಂ ಮೇರಾ ಹೈಂ.

ಉಸ ಕೀ ಹೀ ಗೋಧೀ ಮೈ
ಸರ್ ರಖ್ ಕೇ ಸೋನಾ ಹೈಂ.
ಉಸ ಕೀ ಹೀ ಬಾಹೋಂ ಮೈ
ಚುಪ್ ಕೇ ಸೇ ರೋನಾ ಹೈಂ.
ಆಂಖೋ ಸೇ ಕಾಜಲ್ ಬನ್
ಬೆಹೆತಾ ಅಂಧೇರಾ ಆಜ್.

ಕೈಫೋನಿನಲ್ಲಿ ಶಂತನು ಮೊಯಿತ್ರನ ಹಾಡುಗಳನ್ನ ಹಾಕಿಕೊಂಡ. ಬಾಕಿ ಉಳಿದ ಹೊತ್ತನ್ನ ಕಳೆಯಲು ಅದೆ ಸೂಕ್ತ ಅನಿಸಿತವನಿಗೆ. ಸ್ವಾನಂದ ಕಿರ್ಕಿರೆ ಅವರೆ ಬರೆದ ಸಾಲುಗಳನ್ನ ಚಿತ್ರಕ್ಕನ ಯುಗಳದಲ್ಲಿ ಗುನುಗುಡುತ್ತಿದ್ದರು.

ನಿಶಾಚರನಂತೆ ನಟ್ಟಿರುಳಿನಲ್ಲೆದ್ದು ಬಾಗಿಲು ತೆಗೆದು ಹೊರಗಿನ ಬಾಲ್ಕನಿಯಲ್ಲಿ ಕುರ್ಚಿ ಹಾಕಿಕೊಂಡು ಕೂತ. ಊರು ನಿಶ್ಯಬ್ಧವಾಗಿತ್ತು. ಬಹುತೇಕ ನಿದ್ರೆಯ ತೆಕ್ಕೆಯಲ್ಲಿ ಊರ ಮಂದಿ ಹುದುಗಿದ್ದರು. ಮೆಲುವಾಗಿ ಬೀಸುತ್ತಿದ್ದ ತಂಗಾಳಿ ತನ್ನೊಂದಿಗೆ ಧೂಳಿನ ಕಣಗಳ ಜೊತೆಜೊತೆಗೆ ಹತ್ತಿರದ ಹೆದ್ದಾರಿಯಲ್ಲಿ ಸಾಗುವ ಭಾರಿ ವಾಹನಗಳದ್ದೋˌ ತುಸು ದೂರದ ರೈಲು ನಿಲ್ದಾಣದಲ್ಲಿ ಗಡಗಡಿಸುತ್ತಾ ಓಡುವ ಅನಾಮಿಕ ಊರಿನ ರೈಲು ಬಂಡಿಗಳದ್ದೋ ಸದ್ದನ್ನೂ ಹೊತ್ತು ತರುತ್ತಿತ್ತು. ಬೆಳ್ಳಿಚುಕ್ಕಿ ಮೂಡಣದಲ್ಲಿ ಢಾಳವಾಗಿ ಹೊಳೆಯುತ್ತಾ ಮಿನುಗುತ್ತಿತ್ತು. ವಾಸ್ತವದಲ್ಲಿ ಅದು ಶುಕ್ರ ಗ್ರಹ. ಗ್ರಹವೊಂದನ್ನ ಅದ್ಯಾಕೆ ನಮ್ಮ ಹಿರಿಯರು ಚುಕ್ಕಿಯೆಂದು ಕರೆದರೋ! ಅವರಿಗೂ ಅದು ಅಷ್ಟು ಗಾಢವಾಗಿ ಇರುಳ ಆಗಸದಲ್ಲಿ ಹೊಳೆಯುವುದನ್ನು ಕಾಣುವಾಗ ತನಗೀಗ ಆಗುವಂತೆ ತಳಮಳದ ಅನುಭವವಾಗುತ್ತಿತ್ತೇನೋ ಅಂದುಕೊಂಡು ನಸು ನಕ್ಕ.

( ಇನ್ನೂ ಇದೆ.)

https://youtu.be/Cq5PR-9mUN4


20 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೬೦.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೬೦.👊


ರಾತ್ರಿಯ ನಾಯರನ ಕ್ಯಾಂಟೀನಿನ ಊಟಕ್ಕೆ ಹೊರಡುವ ಮೊದಲೆ ಮಂಗಳವಾರ ಸಂಜೆಯ ರೈಲಿನಲ್ಲಿ ಹೊರಟು ಮರುದಿನ ಬುಧವಾರ ಬೆಳ್ಳಂಬೆಳಗ್ಯೆ ಬೆಂಗಳೂರಿನಿಂದ ಹೊರಟು ಬರುವ ಐಲ್ಯಾಂಡ್ ಎಕ್ಸಪ್ರೆಸ್ಸಿಗೆ ಪಾಲ್ಘಾಟಿನಲ್ಲಿ ಬದಲಾಯಿಸಿಕೊಳ್ಳಲು ಅನುಕೂಲವಾಗುವಂತೆ ಕನ್ಯಾಕುಮಾರಿಗೆ ಟಿಕೇಟನ್ನ ಮುಂಗಡವಾಗಿ ಕಾಯ್ದಿರಿಸಿದ್ದ. ಇಲ್ಲಿಂದ ಮುಂದೆ ಅಲ್ಲಿಗೆ ಹೋಗಲು ನಿರ್ಧರಿಸಿದ್ದನಾದರೂ ಅಲ್ಲಿ ಅದೆಷ್ಟು ದಿನ ಇರೋದು ಅನ್ನುವ ಬಗ್ಗೆ ಅವನಿಗೇನೆ ಖಚಿತತೆ ಇರಲಿಲ್ಲ. ಕನ್ಯಾಕುಮಾರಿಯ ವಿವೇಕಾನಂದಪುರಂನ ಶಾಶ್ವತ ದತ್ತಿದಾತರಲ್ಲಿ ಅವನೂ ಒಬ್ಬನಾಗಿದ್ದ. ಅದರಿಂದಾಗುತ್ತಿದ್ದ ಅನುಕೂಲವೆಂದರೆ ಬಯಸಿದಾಗ ವರ್ಷಕ್ಕೊಂದಾವರ್ತಿ ಅಲ್ಲಿಗೆ ಹೋಗಿ ಎರಡು ವಾರ ಅಲ್ಲಿನ ಒಂದು ಕೋಣೆಯ ಕಾಟೇಜಿನಲ್ಲಿ ಖರ್ಚಿಲ್ಲದೆ ಇದ್ದು ಬರುವ ಅವಕಾಶ ಅವನಿಗಿತ್ತು. 


ಬಾಳಿನಲ್ಲಿ ಅಸಹಾಯಕತೆ ಕಾಡಿ ವಿಹ್ವಲ ಮನಸ್ಥಿತಿ ವಿಪರೀತ ಕಾಡಿಸಿದ್ದಾಗ ಮೊತ್ತ ಮೊದಲ ಸಲ ಬರಿಗೈಯಲ್ಲಿ ಅಲ್ಲಿಗೆ ಹೋಗಿದ್ದ ನೆನಪಾಗಿ ಮಂದಹಾಸ ಮುಖದಲ್ಲಿ ಮಿನುಗಿತು. ಹೆಚ್ಚಿನ ಓದನ್ನೆ ಗುರಿಯಾಗಿಸಿಕೊಂಡು ರಾಜಧಾನಿಗೆ ಎರಡೂ ಕಾಲು ದಶಕಗಳ ಹಿಂದೆ ಬಂದಿದ್ದವ ಪಿಯುಸಿ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಿದ್ದ ಹಣವಿಲ್ಲದೆ ದಿಕ್ಕೆಟ್ಟ ಪರಿಸ್ಥಿತಿಯಲ್ಲಿ ರೈಲು ನಿಲ್ದಾಣಕ್ಕೆ ಬಂದವನ ಜೇಬಿನಲ್ಲಿ ಅಂದು ಕನ್ಯಾಕುಮಾರಿಯ ಟಿಕೇಟು ಖರೀದಿಸಿದ ಅನಂತರ ಐವತ್ತು ರೂಪಾಯಿ ಮಾತ್ರ ಉಳಿದಿತ್ತು. 


ಹಿಂದಿರುಗಿ ಬರುವ ಯೋಚನೆಯನ್ನೆ ಇಟ್ಠುಕೊಳ್ಳದೆ ಆಗಿದ್ದಾಗಲಿ ಅಂದುಕೊಂಡು ಕೇವಲ ಅಷ್ಟನ್ನೆ ಹಿಡಿದು ಭಂಡಧೈರ್ಯದಿಂದ ಕಂಡಿರದ ಊರಿಗೆ ಹೊರಟಿದ್ದ. ಪರಿವ್ರಾಜಕನಾಗಿ ಕಾಲಯಾಪನೆ ಮಾಡಿ ಮುಂದಿನ ಜೀವನ ಸವೆಸುವ ವೈರಾಗ್ಯ ಹೊತ್ತು ಹೊರಟಿದ್ದ ಅವನನ್ನ ಅಲ್ಲಿ ಮಾಮಾಜಿ ಕೂರಿಸಿಕೊಂಡು ಮಮತೆಯಿಂದ ಅವನ ಇತ್ಯೋಪರಿಗಳನ್ನ ವಿಚಾರಿಸಿ ಧೈರ್ಯ ತುಂಬಿ ತನ್ನದೆ ಕೋಣೆಯಲ್ಲಿರಿಸಿಕೊಂಡು ಉಡಲು ಪಂಚೆ - ತೊಡಲು ಅಂಗಿ ಕೊಡಿಸಿˌ ಕೈಯಲ್ಲಿ ದುಗ್ಗಾಣಿಯಿರದಿದ್ದ ಅವನನ್ನ ಸ್ವಯಂ ಸೇವಕರ ಊಟದ ಮನೆಯಲ್ಲೆ ಉಣ್ಣಲು ವ್ಯವಸ್ಥೆ ಮಾಡಿ ಐದು ದಿನ ಉಳಿಸಿಕೊಂಡುˌ ಬೆಂಗಳೂರಿನ ಮರು ಪಯಣದ ರೈಲು ಬಂಡಿಯ ಟಿಕೇಟು ತೆಗಿಸಿಕೊಟ್ಟು ಖರ್ಚಿಗೆ ನೂರು ರೂಪಾಯಿ ಜೇಬಿನಲ್ಲಿಟ್ಟು ಬೆನ್ನು ತಟ್ಟಿ ಹಿಂದಿರುಗಿ ಕಳಿಸಿದ್ದರು.


ಮರಳಿ ಬಂದಿಳಿದಾಗ ಅವನ ಜೇಬಿನಲ್ಲಿ ಖರ್ಚು ಕಳೆದು ಐವತ್ತು ರೂಪಾಯಿ ಉಳಿದಿತ್ತು. ಈ ಐವತ್ತರ ಸಂಖ್ಯೆಗೂ ಅವನಿಗೂ ಅವಿನಾಭಾವ ಸಂಬಂಧ. ಅವನ ಮೊದಲ ಸಂಪಾದನೆ ಅದೆ ಐವತ್ತು ರೂಪಾಯಿ. ಅಡುಗೆ ಕೆಲಸ ಮಾಡುವಾಗ ಅಲ್ಲಿ ಸಂಪಾದನೆಯಾಗುತ್ತಿದ್ದುದು ಸಹ ಐವತ್ತು ರೂಪಾಯಿ. ಊರು ಬಿಟ್ಟು ಬೆಂಗಳೂರಿನ ಹಾದಿ ಹಿಡಿದಿದ್ದಾಗ ದಾರಿಯ ಖರ್ಚಿಗೆ ಬಾಲ್ಯಮಿತ್ರ ಸುಶ್ರುತ ಕೊಟ್ಟಿದ್ದು ಅವನ ಪಾಕೆಟ್ ಮನಿಯ ಉಳಿಕೆಯ ಐವತ್ತು ರೂಪಾಯಿ. ಕಾಕತಾಳೀಯವಾಗಿ ಐವತ್ತು ಇವನ ಅದೃಷ್ಟ ಬದಲಿಸಿದಾಗಲೆಲ್ಲಾ ಜೇಬಿನಲ್ಲಿದ್ದ ಹಣದ ಮೊತ್ತವಾಗಿತ್ತು. 


ಅಂದು ಮಾಮಾಜಿ ಈ ಅಪರಿಚಿತ ದಿಕ್ಕೆಟ್ಟವನಲ್ಲಿ ತೋರಿದ್ದ ಸಹೃದಯತೆ ಅವನ ಆತ್ಮವಿಶ್ವಾಸ ಸಹಜವಾಗಿ ಹೆಚ್ಚಿಸಿತ್ತು. ಬಾಳಿನ ಕವಲು ದಾರಿಯಲ್ಲಿ ನಿಂತಿದ್ದ ನಿಸ್ಪೃಹತೆಯ ಹೊತ್ತಿನಲ್ಲಿ ಅವನಿಗೆ ಅಂತಹ ಒಂದು ಧೈರ್ಯದ ಮಾತುಗಳ - ಪ್ರೋತ್ಸಾಹದ ನುಡಿಯ ಅವಶ್ಯಕತೆಯಿದ್ದ ಕಾಲ ಅದು. ಮೊದಲ ಸಲ ಅಲ್ಲಿಂದ ಮರಳಿ ಬಂದಿದ್ದವ ಅಲ್ಲಿಲ್ಲಿ ಓಡಾಡಿ ಅವರಿವರಲ್ಲಿ ಕಾಡಿಬೇಡಿ ಕೆಲಸವನ್ನೂ ಹಿಡಿದು ಓದನ್ನೂ ಮುಂದುವರೆಸಿದ. ಖಾಲಿ ಕೈಯಲ್ಲಿ ಅಂದು ಹೋಗಿದ್ದ ಕನ್ಯಾಕುಮಾರಿಯಲ್ಲಿ ಇಂದು ಅವನೂ ಒಬ್ಬ ದತ್ತಿಕೊಟ್ಟ ದಾನಿ! ಅರಿವಿಲ್ಲದಂತೆ ಬಾಳು ಪೂರ್ತಿ ಮುನ್ನೂರರವತ್ತು ಡಿಗ್ರಿ ಕೋನದಲ್ಲಿ ಬದಲಾವಣೆ ಕಂಡಿತ್ತು. ಕೋಣೆಗೆ ಬಂದು ಅರೆಬತ್ತಲಾಗಿ ಅಂಗಾತ ಹಾಸಿಗೆಯ ಮೇಲೆ ಬಿದ್ದುಕೊಂಡ. ನಿದ್ರೆ ಅಂದೇಕೋ ಸತಾಯಿಸದೆ ಬಂದು ಉಪಕರಿಸಿತು. ಕೈಫೋನಿನಲ್ಲಿ ಕಿರ್ಕರೆಯ ಧ್ವನಿ ಉಲಿಯುತ್ತಲೆ ಇತ್ತು. ಇತ್ತೀಚಿನ ಯಾವುದೋ ಟೊವಿನೋ ಥಾಮಸ್ ನಟನೆಯ ಮಲಯಾಳಂ ಸಿನೆಮಾದಲ್ಲಿ ಇದೆ ಹಾಡನ್ನ ನಟಿ ದರ್ಶನಾಳಿಂದ ಮರು ಬಳಸಲು ಹಾಡಿಸಿದ್ದ ನೆನಪಾಯಿತು. ಅದರ ಮಾಧುರ್ಯವನ್ನೆ ಕೇಳುತ್ತಾ ನಿದ್ರೆಗೆ ಜಾರಿದ್ದೆ ಅರಿವಾಗಲಿಲ್ಲ. ದೀಪ ಆರಿಸಲೂ ಮರೆತುಬಿಟ್ಟಿದ್ದ.


"ಬಾಂವರಾ ಮನ್ ದೇಖನೇ
ಚಲಾ ಏಕ್ ಸಪ್ನಾˌ
ಬಾಂವರೀ ಸೀ ಮನ್ ಕೀ ದೇಖೋ 
ಬಾಂವರೀ ಹೈಂ ಬಾತೇಂ./
ಬಾವರೀಂ ಸೀ ದಢ್ಕನೇ ಹೈಂ
ಬಾವರೀಂ ಹೈಂ ಸಾಂಸೇಂ
ಬಾವರೀಂ ಸೀ ಕರವಟೋಂ ಸೇ
ದುನಿಆ ದೂರ್ ಭಾಗೇˌ
ಬಾವರೀಂ ಸೀ ನೈನ್ ಚಾಹೇಂ
ಬಾವರೀಂ ಜ಼ರೋಕೇಂಸೇ
ಬಾವರೀಂ ನಜಾ಼ರೋಂ ಕೋ ಥಕನಾ//."


*****

ಆ ವಿಚಿತ್ರ ಕನಸು ಮರಳಿ ಬಿದ್ದು ಅವನನ್ನ ಕಾಡಿತು. ಆ ಕನಸನ್ನವನು ಕಾಣುತ್ತಿರೋದು ಅದೆ ಮೊದಲ ದಿನವೇನಲ್ಲ. "ಅವನು ಒಬ್ಬಂಟಿಯಾಗಿ ಅದೆಲ್ಲಿಗೋ ನಡುರಾತ್ರಿ ಕತ್ತಲಲ್ಲಿ ಕಾಲೆಳೆದುಕೊಂಡು ಹೋಗುತ್ತಿದ್ದಾನೆ. ಎಲ್ಲಿಗೆಂದೆ ಅರಿಯದೆ ಹೋಗಹೋಗುತ್ತಿದ್ದಂತೆ ಮುಂದೆ ಕಟ್ಟೆಯಿದ್ದ ಬಾವಿಗೆ ಅವನು ಅದು ಹೇಗೋ ಜಾರಿ ಬಿದ್ದು ಹೋದ. ಆಳದಲ್ಲಿದ್ದ ಬಾವಿಯ ನೀರಿನಲ್ಲಿ ತೇಲುತ್ತಾ ಇದ್ದವನ ಕಾಲಿಗೆ ದಪ್ಪದ ಸರಪಳಿ ಕಟ್ಟಿದೆ ಅದರ ಮತ್ತೊಂದು ದೊಡ್ಡ ಕಬ್ಬಿಣದ ಗುಂಡು ಕಟ್ಟಿದ್ದು ನೀರಿನಾಳದಲ್ಲಿತ್ತು. ಅವನ ಆ ಅವಸ್ಥೆ ನೋಡಿ ಉದ್ದುದ್ದ ಗಡ್ಡ ಬಿಟ್ಟಿದ್ದ ಅರ್ಧ ಡಝ಼ನ್ ಮಂದಿ ತಮ್ಮ ಕೈಯನ್ನ ಅವನತ್ತ ಚಾಚುತ್ತಿದ್ದಾರೆ. ಅದು ಹೇಗೋ ಅವನತ್ತ ಚಾಚಿದ ಅವರ ಕೈ ಅವನಿರವಲ್ಲಿಗೂ ಉದ್ದವಾಗುತ್ತಾ ಬೆಳೆದು ಬಂತು! ಆದರೆ ಕಾಲಿಗೆ ಕಟ್ಟಿಕೊಂಡಿದ್ದ ಆ ಭಾರವಾದ ಲೋಹದ ಗುಂಡನ್ನ ತನ್ನಿಂದ ಬೇರ್ಪಡಿಸದೆ ಅವನನ್ನ ಮೇಲೆತ್ತಲು ಅವರಿಗೂ ಸಾಧ್ಯವಿರಲಿಲ್ಲ. ಇವನಿಗೋ ಅದನ್ನ ತನ್ನಿಂದ ದೂರಾಗಿಸಿಕೊಳ್ಳಲು ಚೂರೂ ಮನಸಿರಲಿಲ್ಲ. ಅವರು ಚಾಚಿದ ಕೈಯತ್ತ ಕೃತಜ್ಞತೆಯಿಂದ ನೋಡಿದ ಅವನು ಮರಳಿ ತನ್ನ ಕಾಲಿನ ಸರಪಳಿಗೆ ಅಂಟಿದ್ದ ಗುಂಡನ್ನ ಮೋಹದ ಅಶ್ರುಗಳ ಮಿನುಗಲ್ಲಿ ದಿಟ್ಟಿಸುತ್ತಾ ಅಲ್ಲೆ ಉಳಿದುಬಿಟ್ಟ. ಮೇಲತ್ತಲು ಕೈ ಚಾಚಿದವರು ಇವನ ದ್ವಂದ್ವವನ್ನ ಅರ್ಥ ಮಾಡಿಕೊಂಡವರಂತೆ ಕೈ ಹಿಂದೆಳೆದುಕೊಂಡು ಅಸಹಾಯಕತೆಯನ್ನು ಕಂಡು ಲೊಚಗುಟ್ಟಿ ಮುಂದುವರೆದರು." ಇಲ್ಲವನಿಗೆ ಮತ್ತೆ ಅದೆ ಹಂತದಲ್ಲಿ ಎಚ್ಚರವಾಯಿತು. 


ಇವಿಷ್ಟೂ ಅವನಿಗೆ ಪ್ರತಿಬಾರಿ ಆ ಕನಸು ಬಿದ್ದಾಗಲೂ ಸ್ಪಷ್ಟವಾಗಿ ನೆನಪಿರುತ್ತದೆ. ಬಾವಿಗೆ ಬಿದ್ದ ಗಾಬರಿಗೇನೋ ಸ್ವಪ್ನ ಕಂಡು ಎದ್ದಾಗಲೆಲ್ಲಾ ಮೈ ಬೆವರಿರುತ್ತದೆ. ಆದರೆ ದಾರಿಯಲ್ಲಿ ಹೋಗುತ್ತಿದ್ದ ತಾನ್ಯಾಕೆ ಹೋಗಿ ಹೋಗಿ ಬಾವಿಯಲ್ಲಿ-ಅದೂ ಕಟ್ಟೆಯಿರುವ ಬಾವಿಯಲ್ಲಿ ಅದ್ಹೇಗೆ ಜಾರಿ ಬಿದ್ದೆ ಅನ್ನೋದೆ ಅವನಿಗೆ ಅರಿವಾಗುತ್ತಿರಲಿಲ್ಲ. ಇದ್ದಕ್ಕಿದ್ದಂತೆ ಬಿದ್ದ ತನ್ನ ಕಾಲಿಗೆ ಅಂಟಿರೋ ಆ ಸರಪಳಿ ಯಾವುದು? ಅದರ ಮತ್ತೊಂದು ತುದಿಗೆ ಕಟ್ಟಿರೋ ಲೋಹದ ಗುಂಡದೇನು? ಪ್ರತಿಸಲವೂ ತನ್ನನ್ನ ರಕ್ಷಿಸಲು ಬರುವವರು ಕೇವಲ ಆರೆ ಮಂದಿ ಏಕಿರುತ್ತಾರೋ ಒಂದೂ ಅವನಿಗೆ ಅರ್ಥವಾಗುತ್ತಿರಲಿಲ್ಲ. ಎಂದಿನಂತೆ ಅಂದೂ ಅವನು ಕನಸು ಬಿಟ್ಟೆದ್ದಾಗ ಬೆವರಿದ್ದ. ಆ ಕನಸು ಬಿದ್ದಾಗಲೆಲ್ಲಾ ಮನಸು ಕಸಿವಸಿಗೊಳ್ಳುತ್ತಿತ್ತು. ಕೈಫೋನಿನ ಗಡಿಯಾರದಲ್ಲಿ ಮೂರೂವರೆ ತೋರಿಸುತ್ತಿತ್ತು. ಹೋಗಿ ಉಚ್ಛೆ ಹೊಯ್ದು ಬಂದು ಬೆಳಕನ್ನ ಆರಿಸಿ ಮಂದರಿ ಹೊದ್ದುಕೊಂಡು ಹಾಸಿಗೆಯ ಮೇಲೆ ಬಿದ್ದುಕೊಂಡ.


ಸುಭಾಶನ ಬಗ್ಗೆ ಯೋಚಿಸಿದ. ಸುಭಾಶನಂತಹ ಮುಗ್ಧ ಮಕ್ಕಳು ಇನ್ನೂ ಪ್ರಪಂಚ ಅರಿಯದವುಗಳು. ಸಿಗಬೇಕಾದ ಪ್ರಾಯದಲ್ಲಿ ಗಂಡು ಮಕ್ಕಳಿಗೆ ಅಪ್ಪನದ್ದೋ ಇಲ್ಲಾ ಸಹೋದರ ಮಾವನದ್ದೋ ಮಾರ್ಗದರ್ಶನ ಮಮತೆ ಸಿಗದಿದ್ದರೆ ಸಮಾಜದ ಕಿತ್ತು ತಿನ್ನೋ ದುರುಳ ಕೈಗಳು ಅವುಗಳ ಮುಗ್ಧತೆಯನ್ನ ಹೊಸಕಿ ಹಾಕಿ ಬಿಡಲು ಮುನ್ನುಗ್ಗುತ್ತವೆˌ ಪಾಪ ಅವನ ಮುಂದಿನ ಭವಿಷ್ಯ ಎಂದು ಲೊಚಗುಟ್ಟುತ್ತಲೆ ನಿದ್ರೆಗೆ ಜಾರಿದ.

( ಇನ್ನೂ ಇದೆ.)



https://youtu.be/T0dOuSC6g88

19 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೯.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೯.👊


ಅಂದಿನಿಂದ ಎಲ್ಲರ ಎದುರಿಗಿದ್ದೆ ವೇಷ ಮರೆಸಿಕೊಳ್ಳದೆಯೂ ಸಹ ಇದ್ದೂ ಇಲ್ಲದಂತಿರುವ ಅವನ ಅಜ್ಞಾತವಾಸ ಆರಂಭವಾಯಿತು. ಅವಸರವಸರವಾಗಿ ಕೆಲಸ ಮುಗಿಸಿ ಬಂದವ ಖಾಕಿ ಅಂಗಿ ಚಡ್ಡಿ ಕುಚ್ಚಿನ ಟೊಪ್ಪಿ ಏರಿಸಿ ಅಂದಿನ ಎನ್ ಸಿ ಸಿ ತರಗತಿಗೆ ಓಡಿದ. ಸುಸ್ತಾಗಿದ್ದರೂ ಅದನ್ನಂತೂ ತಪ್ಪಿಸಿಕೊಳ್ಳುವಂತೆಯೆ ಇರಲಿಲ್ಲ. ಕೆಲಸ ಮುಗಿಸಿ ಸದಾ ತಡವಾಗಿಯೆ ಹೋಗುವ ಅವನನ್ನ ರೈಫಲ್ ಹೊತ್ತು ಮೈದಾನಕ್ಕೆ ಮೂರು ಸುತ್ತು ಓಡುವ ಶಿಕ್ಷೆ ವಿಧಿಸುತ್ತಿದ್ದುದು ಮಾಮೂಲು. 


ಇವತ್ತಂತೂ ಇನ್ನೂ ತಡವಾಗಿ ಹೋಗಿದ್ದ ಕಾರಣ ಅವನ ಕಳೆದ ರಾತ್ರಿಯ ನಾಯಿಪಾಡಿನ ಅವಸ್ಥೆ ಅರಿಯದ ಎನ್ ಸಿ ಸಿ ಕ್ಯಾಪ್ಟನ್ ರಾಮಪ್ಪ ಮೊಯ್ಲಿ ಮಾಸ್ಟ್ರು ಅವತ್ತವನನ್ನ ಮೂರರ ಬದಲು ಐದು ಸಾಲು ಸುತ್ತಿಸಿದರು. ಓಡದೆ ವಿಧಿಯಿರಲಿಲ್ಲ. ಓಡಿ ಆಡಿ ವ್ಯಾಯಾಮ ಮಾಡಿ ಅವರ ಆಜ್ಞೆಗಳನ್ನ ಚಾಚೂ ತಪ್ಪದೆ ಪಾಲಿಸಿದರೆ ಕಡೆಗೆ ಸೇನೆಯ ಕಡೆಯಿಂದ ಕೆಡೆಟ್ಟುಗಳಿಗೆ ಕೊಡಲಾಗುತ್ತಿದ್ದ ಉಚಿತ ತಿಂಡಿಯ ಕೂಪನ್ನುಗಳ ಆಸೆ ಹಲ್ಲು ಕಚ್ಚಿಕೊಂಡು ಹೇಳಿದ್ದಷ್ಟನ್ನ ಮಾಡುವಂತೆ ಅವನನ್ನ ಪುಸಲಾಯಿಸುತ್ತಿತ್ತು. ಅದನ್ನೂ ತಪ್ಪಿಸಿಕೊಂಡರೆ ಅಂದಿನ ಬೆಳಗಿನ ತಿಂಡಿಗೆ ಸೊನ್ನೆಯಾಗುವ ಸಂಭವವಿತ್ತು. ರಾತ್ರಿ ಹೊಡೆಸಿಕೊಂಡ ಮೈ ಕೈ ನೋವಿನ್ನೂ ಇಳಿದಿರಲಿಲ್ಲ. ನಜ್ಜುಗುಜ್ಜಾಗಿದ್ದ ಮೈ - ಜರ್ಜರಿತ ಮನಸು ಎರಡನ್ನೂ ಹೊತ್ತು ಅನ್ಯಮಸ್ಕತೆಯಿಂದಲೆ ಅಧ್ಯಾಪಕರ ಕಣ್ಣು ತಪ್ಪಿಸಿ ಅಷ್ಟಿಷ್ಟು ಕುಗುರುತ್ತಾ ಕೂತು ಹೇಗೋ ಆ ದಿನ ಕಳೆದ. 


ಸಂಜೆ ಮೂಡುತ್ತಲೆ ಅಧೀರನಾಗ ತೊಡಗಿದ. ನಿಜವಾದ ಸವಾಲು ಇನ್ನೇನು ಎದುರಾಗಲಿತ್ತು. ಹೌದುˌ ಇನ್ನು ಮುಂದೆ ರಾತ್ರಿ ಮಲಗುವುದೆಲ್ಲಿ? ಅನ್ನುವ ಪ್ರಶ್ನೆಗೆ ಅವನಲ್ಲಿಯೆ ಉತ್ತರವಿರಲಿಲ್ಲ. ಶಾಲೆ ಮುಗಿದ ಮೇಲೆ ಬೇಕರಿ ಲೈನಿನ ಕೆಲಸ ಮುಗಿಸಿ ಅಲ್ಲಿ ಇಲ್ಲಿ ಸುತ್ತಿ ಮನೆಯ ಹತ್ತಿರದ ಗುಡ್ಡದ ಮೇಲಿನ ಕಲ್ಲುಬೆಂಚಿನ ಮೇಲೆ ಬಂದು ಒಬ್ಬಂಟಿಯಾಗಿ ಕೂತ. ಅವನ ದುಸ್ಥಿತಿಗೆ ಅವನಿಗೆ ಮರುಕ ಹುಟ್ಟಿತು. ಆಡುವಂತಿರದ ಅನುಭವಿಸದಿರಲಾರದ ಅಯೋಮಯದ ಪರಿಸ್ಥಿತಿ. ಅಜ್ಜಿಗೆ ಅಂಟಿಕೊಂಡು ಬೆಳೆದಿದ್ದವ ಅವರಲ್ಲೆ ಅಮ್ಮನನ್ನು ಕಾಣುತ್ತಿದ್ಧ. ಊರಲ್ಲಿ ಸಿಕ್ಕ ಆಸ್ತಿಯ ಕಾರಣ ಅವರೂ ಅಲ್ಲಿಗೆ ಹೋಗಿ ನೆಲೆಸಿದ ಮೇಲೆ ಅವನನ್ಯಾರೂ ವಿಚಾರಿಸುವವರೆ ಗತಿಯಿರಲಿಲ್ಲ. ದಂಡಿಸಲು ಮಾತ್ರ ಸದಾ ಮುಂದಿರುತ್ತಿದ್ದ ಕೈಗಳಲ್ಲಿ ಯಾವುವಕ್ಕೂ ಕನಿಷ್ಠ ಒಂದೆ ಒಂದು ಸಲ ಅವನನ್ನ ಮಮತೆಯಿಂದ ಕಂಡು ಅವನ ಮಗು ಮನಸನ್ನೂ ಅರ್ಥ ಮಾಡಿಕೊಂಡು ತಬ್ಬಿ ಸಂತೈಸಲು ಆಸಕ್ತಿಯಿರಲಿಲ್ಲ. ಅವನ ಹೆತ್ತವರಿಗೆ ಲಾಲನೆ ಪಾಲನೆ ಮಾಡಲು ಅವನಿಗಿಂತ ಹತ್ತು ವರ್ಷ ನಂತರ ಹುಟ್ಟಿದ್ದ ಮತ್ತೊಂದು ಮಗುವಿತ್ತು. ಅವನದೊಂತರ ಎಲ್ಲರೂ ಇದ್ದೂ ಅನಾಥನಾಗಿರುವ ಪರಿಸ್ಥಿತಿ. ಅವನ ಅಜ್ಜ ಆ ಊರಿಗೆ ಬಂದು ನೆಲೆಸಿದ ಮೇಲೆ ಸ್ವಾಭಿಮಾನದಿಂದ ದುಡಿದು ಅವರೆ ಸ್ವಯಾರ್ಜಿತವಾಗಿ ಗಳಿಸಿದ ಘನತೆ ಗೌರವ ಅವನ ಒಂದೆ ಒಂದು ತಪ್ಪು ನಡೆಯಿಂದ ಮುಕ್ಕಾಗುವ ಸಂಭವವಿತ್ತು. ಪುಣ್ಯಕ್ಕೆ ಪ್ರಾಯ ಚಿಕ್ಕದಾಗಿದ್ದರೂ ಕೂಡ ಅವನಿಗದರ ಅರಿವಿತ್ತು. 

ಮುಂದಿನ ದಿನಮಾನಗಳಲ್ಲಿ ಅಂತಹದ್ದೆ ಪರಿಸ್ಥಿತಿಯಲ್ಲಿ ಬಾಳಬೇಕಿದ್ದವನಿಗೆ ಹೊಸತಾಗಿ ದಿನಚರಿ ರೂಪಿಸಿಕೊಳ್ಳದೆ ವಿಧಿಯಿರಲಿಲ್ಲ. ಊಟದ ಹೆಸರಿನಲ್ಲಿ ಸಿಕ್ಕಿದ್ದನ್ನ ಹೊಟ್ಟೆಗಷ್ಟು ಹಾಕಿಕೊಂಡು ಬಂದಿದ್ದ. ನೆನ್ನೆ ರಾತ್ರಿಯಷ್ಟೆ ಮೈಮುರಿಯ ತಿಂದಿದ್ದ ಪೆಟ್ಟಿನ ನೋವಿನ್ನೂ ಆರಿರಲಿಲ್ಲ. ಅಂತಹ ವಿಪರೀತ ಪರಿಸ್ಥಿತಿಯಲ್ಲಿ ಓದುವ ಮನಸಾಗಲಿ ಅನುಕೂಲವಾಗಲಿ ಇರಲಿಲ್ಲ. ಸಾಲದ್ದಕ್ಕೆ ದಣಿದಿದ್ದ ದೇಹವನ್ನ ನಿದ್ರೆ ಬೇರೆ ಸೆಳೆಯುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಅಪ್ಪ ಕೆಲಸ ಮುಗಿಸಿ ಮನೆಗೆ ಬರುವ ಮೊದಲು ಎಲ್ಲಾದರೂ ಮಲಗುವ ಅಂದುಕೊಂಡು ಸದ್ದಾಗದಂತೆ ಹಿತ್ತಲ ಬಾಗಿಲಿಂದ ಕತ್ತಲಲ್ಲಿ ಮೆಲ್ಲ ತನ್ನ ಸರಂಜಾಮುಗಳನ್ನಿಟ್ಟಿದ್ದ ಒತ್ತಿನ ಮನೆಯ ಕಟ್ಟಿಗೆ ಕೊಟ್ಟಿಗೆಯಿಂದ ತನ್ನ ಚಾಪೆ ಸುರುಳಿ ಹೊತ್ತು ಮನೆಯಿಂದ ಚೂರು ಮೇಲಿದ್ದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟೆ ತಲುಪಿದ. ಎತ್ತರವಾಗಿದ್ದ ಸ್ಥಳದಲ್ಲಿದ್ದ ಶಾಲೆಯ ಸುತ್ತ ಬೆಳೆದಿದ್ದ ಯುಪಟೋರಿಯಂ ಜಿಗ್ಗಿನ ಮರೆಯಲ್ಲಿ ಅವನಲ್ಲಿರುವುದು ಯಾರಿಗೂ ಗೋಚರಿಸುವ ಸಾಧ್ಯತೆಯಿರಲಿಲ್ಲ. 


ನಿಜವಾದ ಸವಾಲಿದ್ದದ್ದು ನಿತ್ಯ ಅಲ್ಲಿ ಠಿಕಾಣಿ ಹೂಡುತ್ತಿದ್ದ ಬೀದಿನಾಯಿಗಳ ಜೊತೆ ಸೆಣೆಸಿ ತನ್ನ ಸ್ಥಾನ ಭದ್ರ ಪಡಿಸಿಕೊಳ್ಳುವುದರಲ್ಲಿ ಮಾತ್ರ. ಆರಂಭದಲ್ಲಿ ತಮ್ಮ ಸಾಮ್ರಾಜ್ಯದ ಎಲ್ಲೆಯಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದ ಅವನ ಮೇಲೆ ಗುರುಗುಟ್ಟಿ ತಮ್ಮ ತಮ್ಮ ಆಕ್ಷೇಪ ವ್ಯಕ್ತ ಪಡಿಸಿದರೂ ಕೂಡ ನಿತ್ಯ ಕಾಣುತ್ತಿದ್ದ ಅವನ ಮುಖ ಅವುಗಳನ್ನ ಹೆಚ್ಚು ಕೆಂಗೆಡಿಸಲಿಲ್ಲ. ಕಟ್ಟೆಯ ಮೂಲೆಯೊಂದರಲ್ಲಿ ಚಾಪೆ ಹಾಸಿಕೊಂಡು ಮಂದರಿ ಹೊದ್ದು ದಿಂಬಿಗೆ ತಲೆಕೊಟ್ಟಿದ್ದೊಂದೆ ಗೊತ್ತುˌ ಅಂದಿಡಿ ಅಲ್ಲಿಲ್ಲಿ ಅಲೆದು ಬೆವರಿದ್ದ ಮೈ ಮೀಯದೆ ಹುಟ್ಟಿಸುತ್ತಿದ್ದ ರೇಜಿಗೆಯೂ ನಗಣ್ಯವಾಗಿ ನಿದ್ರೆಯ ಜೊಂಪು ಅಟ್ಟಿಸಿಕೊಂಡು ಬಂತು. ಆಗಿದ್ದ ದಣಿವಿಗೆ ಆರಾಮದ ಅವಶ್ಯಕತೆಯಿದ್ದ ಅವನ ದೇಹ ಮನಸ್ಸು ಮಲಗಿ ಸುಧಾರಿಸಿಕೊಳ್ಳತೊಡಗಿತು.


*****

"ಬಾಂವರೀ ಸೀ ಇಸ್ ಜಹಾನ್ ಮೈ
ಬಾಂವರಾ ಏಕ್ ಸಾಥ್ ಹೋˌ
ಇಸ್ ಸಯಾನೀ ಭೀಡ್ ಮೈ
ಬಸ್ ಹಾಥೋಂ ಮೈ ತೇರಾ ಹಾಥ್ ಹೋ./
ಬಾಂವರೀ ಸೀ ಧುನ್ ಹೋ ಕೋಈ
ಬಾಂವರಾ ಏಕ್ ರಾಗ್ ಹೋˌ
ಬಾಂವರೀ ಸೀ ಪೈರ್ ಚಾಹೇಂ
ಬಾಂವರೀ ತರಾನೋಂ ಕೀ
ಬಾಂವರೀ ಸೀ ಬೋಲ್ ಪೇ ಧಿರಕನಾ//"


ಬದುಕೀಗ ಸಂಪೂರ್ಣ ಬದಲಾದ ಕಾಲಘಟ್ಟದಲ್ಲಿತ್ತು. ಇಂದು ಅವನದ್ದೆ ಆದ ಒಂದು ವ್ಯಕ್ತಿತ್ವ ರೂಪಿಸಿಕೊಂಡಿದ್ದ. ತಪ್ಪು ಆಯ್ಕೆಗಳ ಆಗರವಾಗಿದ್ದರೂ ಬದುಕಿಗೀಗ ಒಂದು ಲಯವಿತ್ತು. ಬೆರಳೆಣಿಕೆಯಷ್ಟರವರಾದರೇನು? ಅವನ ಬಗ್ಗೆ ಯೋಚಿಸುವ ಕೆಲವೆ ಕೆಲವರಾದರೂ ಇದ್ದರು. ಬದುಕಿನ ಸೌಂದರ್ಯವೇನು? ಅನ್ನುವ ಸುಖಾನುಭವವನ್ನ ಬಾಳಿನಲ್ಲಿ ಬಂದು ಕಿರು ಅವಧಿಯವರೆಗಾದರೂ ಮರೆಯಲಾಗದ ಜೊತೆ ಕೊಟ್ಟು ತಿಳಿಸಿ ಹೋದ ಮೂವರಿದ್ದರು. ಸುಂದರವೆಂದು ಬೆನ್ನು ತಟ್ಟಿ ಹೇಳಿಕೊಳ್ಳುವಷ್ಟಿಲ್ಲದಿದ್ದರೂನು ಕುರೂಪದ ಕುರುಹೇನೂ ಬದುಕಿನಲ್ಲಿರಲಿಲ್ಲ. ಒಂಟಿತನದ ಶಾಪದ ಹೊರತು.

ಕೋಣೆಗೆ ಮರಳಿದವನಿಗೆ ಮತ್ತೊಂದು ಸಲ ಬೆಚ್ಚನೆ ನೀರಿನಲ್ಲಿ ನೆಂದು ಮೀಯುವ ಸುಖ ಬೇಕೆನಿಸಿತು. ಅಂದಿಗವನದ್ದು ಮೂರನೆ ಸ್ನಾನ ಅದು. ಮಿಂದು ಮೈ ಮನ ಹಗುರಾಗಿಸಿಕೊಂಡವನಿಗೆ ನಾಯರನ ಕ್ಯಾಂಟೀನಿನ ಮೀನು ಸಾರು ಆಮ್ಲೇಟು ಉಪ್ಪಡು ಪಪ್ಪಡ ತೊವ್ವೆಯ ಬಿಸಿಬಿಸಿ ಊಟ ಸ್ವರ್ಗದ ಬಾಗಿಲನ್ನ ತೆರೆದಂತಿತ್ತು. ಉಂಡು ಇನ್ನೊಂದು ದಿನ ಮಾತ್ರ ತಾನಲ್ಲಿ ಇರುವುದಾಗಿಯೂˌ ಮಂಗಳವಾರ ಅಲ್ಲಿಂದ ಹೊರಡುವುದಿದೆಯೆಂದೂ ನಾಯರನಿಗೆ ಮುಂದಾಗಿ ತಿಳಿಸಿದ.

"ಶೇ ಅದಾಣೋ! ಎವಿಡೆಯ? ತರವಾಡುಲೇತ್ತಿಯೋ ಇಲ್ಲಂಗಿಲ್ ನಾಟ್ಟಿಲ್ ವಳಿಯಾಣೋ ಪೋವುನ್ನದು?" ಅಂದ ನಾಯರ. "ಇಲ್ಲಿಯಾˌ ಕನ್ಯಾಕುಮಾರಿ ಪೋಕ್ಕುನ್ನ ಪದ್ಧತಿಯಾ. ಟಿಕೇಟು ಬುಕ್ ಚೇಯ್ದು. ಚೌವಾಳ್ಚಯಿಲೆ ವೈಕುನ್ನೋರಂ ಬಂಡಿಯಾ. ಅದುಕ್ಕೊಂಡು ಮುನ್ಬು ಪರಙಿಟ್ಟುಳ್ಳು. ಒರುಪಕ್ಷ ಅವಿಡೆಲೇತ್ತಿ ನಾಟ್ಟಿಲಾಕ್ಕಿ ಮರುಙುಕ್ಕಾನ್ ಞಾನ್ ಕುರುತ್ತುನ್ನದ. ಒನ್ನುಂ ಅಂತಿಮಮಾಯಿಟ್ಟಿಲ್ಲ ನಾಯರೆ." ಅಂದನವ. ಅವನ ಅಲೆಮಾರಿ ಯಾತ್ರೆಯ ಸುಳಿವಿಲ್ಲದ ನಾಯರನಿಗಿದ್ಯಾಕೋ ಇದು ತಿಕ್ಕಲು ಅನ್ನಿಸಿರಬೇಕುˌ ಮಾರುತ್ತರವಾಗಿ ತನ್ನ ಹುಳುಕು ಹಲ್ಲುಗಳನ್ನ ಹುಳ್ಳಗೆ ಕಿರಿಯುತ್ತಾ "ಶರಿಯ ಪಿನ್ನೆˌ ಅಙನೆ ಆಯಕಟ್ಟೆ." ಅಂದ ನಾಯರ.

ಕೋಣೆಗೆ ಮರಳಿ ಕೈ ಫೋನಿನ ಹಾಡುಗಳ ಸಂಗ್ರಹ ಹಾಕಿದ ಸ್ವಾನಂದ ಕಿರ್ಕರೆಯ ಧ್ವನಿಯಲ್ಲಿ ಅವರದ್ದೆ ಬರವಣಿಗೆಯ ಹಾಡು ಹಿತವಾಗಿ ಮೊಳಗುತ್ತಿತ್ತು. ಈ ಶಂತನು ಮೊಯಿತ್ರ ಮೂಡಿಸುವ ನಾದ ತರಂಗಗಳಲ್ಲೂ ಒಂಥರಾ ಮದನ ಮೋಹನ ಸಾಬರ ಸ್ವರ ಸಂಚಾರದ ಮೋಹಕತೆಯ ಛಾಯೆಯಿದೆ ಅನ್ನಿಸಿತು.

( ಇನ್ನೂ ಇದೆ.)



https://youtu.be/rkV2j4Q37aI

18 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೮.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೮.👊


ಆದ ಹಿಂಸೆಯ ನೋವಿನಿಂದ ನೊಂದು ಸುಧಾರಿಸಿಕೊಳ್ಳೋದನ್ನ ಕಂಡರೂ ಅಲ್ಲಿಗೂ ಬಿಡದೆ ಅಟ್ಟಿಸಿಕೊಂಡು ಬೆನ್ನುಬಿದ್ದ ಅಪ್ಪ ಅನ್ನುವ ರಾಕ್ಷಸ ಕೈಗೆ ಸಿಕ್ಕ ಇಟ್ಟಿಗೆ ಚೂರು-ಕಲ್ಲು ಹೀಗೆ ಸಿಕ್ಕಿದ್ದನ್ನ ಅವನತ್ತ ತೂರಿ ಅಲ್ಲಿಂದಲೂ ಅವನನ್ನ ಓಡಿಸಿದರು. ಅಪ್ಪಿತಪ್ಪಿ ಪುನಃ ಕೈಗವನು ಸಿಕ್ಕಿದ್ದಿದ್ದರೆ ಬಹುಶಃ ಹಾಕಿ ತುಳಿದು ಇನ್ನಿಲ್ಲವಾಗಿಸಿ ಬಿಡುತ್ತಿದ್ದರೋ ಏನೋ! ಅವನ ಹಿಡಿತ ಕೈತಪ್ಪಿದ ಸಿಟ್ಟನ್ನು ಪೂರ್ತಿಯಾಗಿ ಅವನ ಕೋಣೆಯ ಮೇಲೆ ತೀರಿಸಿಕೊಂಡಾಗಲೆ ತಣಿದಿರಬಹುದು ಅವರ ಸಿಟ್ಟು. ರೇಡಿಯೋˌ ವಾಕಮೆನ್ˌ ಕ್ಯಾಸೆಟ್ಟುಗಳುˌ ಜಂಕ್ಸನ್ ಬಾಕ್ಸ್ˌ ಅಡಾಪ್ಟರ್ˌ ಸ್ಪೀಕರ್ ಹೀಗೆ ಅವನ ಪಾಲಿನ ಅವನದ್ದೆ ಸಂಪಾದನೆಯ ಎಲ್ಲಾ ಅಮೂಲ್ಯ ಸ್ವತ್ತುಗಳನ್ನೂ ಬಲವಾಗಿ ಬೀಸಿ ನೆಲಕ್ಕಪ್ಪಳಿಸಿ ಆಗಷ್ಟೆ ಅರಳಲಾರಂಭಿಸಿದ್ದ ಅವನ ಯುವ ಮನಸ್ಸನ್ನೂ ಸೇರಿಸಿ ಅವನ್ನೆಲ್ಲಾ ಛಪ್ಪನ್ನರವತ್ತಾರು ಚೂರಾಗಿಸಿದರು. ಅಲ್ಲಿಗೆ ಅವನ ಆ ಕೋಣೆಯ ಋಣ ಅವತ್ತಿಗೆ ಮುಗಿಯಿತು.

ಆ ರಾತ್ರಿಯಿಡಿ ಸೀತಮ್ಮನ ಮನೆಯ ಓಣಿಯ ಕಲ್ಲುಹಾಸಿನ ಮೇಲೆ ತನ್ನ ಅಸಹಾಯತೆಯಿಂದ ಉಕ್ಕಿದ ದುಃಖಕ್ಕೆ ಬಿಕ್ಕಳಿಸುತ್ತಾ ಚಳಿಗೆ ಮುದುಡುತ್ತಾ ಕೂತಿದ್ದವ ನೋವು ಸುಸ್ತು ಹುಟ್ಟಿಸಿದ ನಿದ್ರೆಗೆ ಅನಿವಾರ್ಯವಾಗಿ ಜಾರಿದಾಗ ಬಹುಶಃ ಬೆಳಗಾಗಿತ್ತು ಅನ್ನಿಸುತ್ತೆ. ಅಂಗಳ ತೊಳೆಯಲು ಬಂದ ಪುಟ್ಟರಾಜಣ್ಣನ ಹೆಂಡತಿ ಪಾರ್ವತಮ್ಮನ ಕಣ್ಣಿಗೆ ಇವನು ಬಿದ್ದ. ಬೀದಿಯ ಉಳಿದೆಲ್ಲರಂತೆ ಇವರ ಮನೆಯಲ್ಲಾಗುತ್ತಿದ್ದ ರಾತ್ರಿಯ ಕಾಳಗವನ್ನ ಕತ್ತಲ ಮೌನದಲ್ಲಿ ಸ್ಪಷ್ಟವಾಗಿ ಅವರೂ ಕೇಳಿಸಿಕೊಂಡಿದ್ದಾರು. ಅವನಪ್ಪನ ಕುಡಿತದ ನಂತರದ ಮೃಗಾವತಾರವನ್ನ ಸ್ಪಷ್ಟವಾಗಿ ಅರಿತಿದ್ದ ಯಾರೊಬ್ಬರೂ ಅಂತಹ ಸಂದರ್ಭದಲ್ಲಿ ಜಗಳವಾಡುತ್ತಿದ್ದರೆ ಬಿಡಿಸಲು ಬರುವ ಧೈರ್ಯ ಮಾಡುತ್ತಿರಲಿಲ್ಲ. ಹಾಗೊಮ್ಮೆ ದೌರ್ಜನ್ಯ ತಡೆಯಲು ರಣಾಂಗಣಕ್ಕೆ ಧುಮುಕುವವರೂ ಅವರ ದುರ್ನಡೆತೆಗೆ ಬಲಿಪಶುವಾಗುವ ಅಪಾಯವಿದ್ದುದರಿಂದ ನೆರೆಕರೆಯ ಯಾರೂ ಹೀಗೆ ಬೇಡದ ಉಸಾಬರಿಗೆ ಇಳಿಯುವ ಸಾಹಸ ಮಾಡುತ್ತಿರಲಿಲ್ಲ. 


ಇವನ ಕರುಣಾಜನಕ ಪರಿಸ್ಥಿತಿ ಕಂಡು ಮರುಕದಿಂದ ಮುದುಡಿ ಮಲಗಿದ್ದ ಅವನ ತಲೆ ಸವರಿದರು. ಅಪ್ಪನೆ ಬಂದು ಮುಟ್ಟಿದರೇನೋ ಎಂಬಂತೆ ಕುಮಟಿ ಬಿದ್ದು ಎಚ್ಚರಾದ. ಎದುರಿಗೆ ಪಾರ್ವತಮ್ಮನ ಮುಖ ಕಂಡು ದೈನ್ಯದಿಂದ ದುಃಖದ ಕೋಡಿ ಹರಿದು ಎದ್ದು ಕೂತು ಮೊಣಕಾಲ ನಡುವೆ ತಲೆ ತಗ್ಗಿಸಿಕೊಂಡು ಶಬ್ದ ಬಾರದಂತೆ ಮುಸುಮುಸು ಅತ್ತ. "ತುಂಬಾ ನೋವಾಗುತ್ತಿದೆಯೇನ?" ಅನ್ನುತ್ತಾ ಕರುಣಾಪೂರಿತ ದೃಷ್ಟಿ ಹರಿಸುತ್ತಾ ಅವರು ಅವನ ತಲೆ ಸವರಿದರು. ಅವನೇನನ್ನೂ ಮಾರುತ್ತರಿಸದಿದ್ದರೂ ಸಹ ಹಾಕಿಕೊಂಡಿದ್ದ ಬಿಳಿ ಬಣ್ಣದ ಅಂಗಿಯ ಮೇಲಿನ ರಕ್ತದ ಕಲೆ ಅವರಿಗೆ ಆಗಿರಬಹುದಾಗಿದ್ದ ಹಲ್ಲೆಯ ಆಳವನ್ನು ಸ್ಪಷ್ಟ ಪಡಿಸಿದವು. ಮರು ಮಾತನಾಡದೆ ಮನೆಗೆ ಹೋದ ಅವರು ಸ್ವಲ್ಪ ಹೊತ್ತಿನ ನಂತರ ಕೂತಲ್ಲೆ ರೋಧಿಸುತ್ತಿದ್ದ ಅವನಿಗೆ ಒಂದು ಲೋಟ ಕಾಫಿ ತಂದು ಕೊಟ್ಟರು. ಹಿಂದೆಯೆ ಅವರ ಮಗಳು ಉಮಕ್ಕ ನೋವಿಗೆ ಸವರಿಕೊಳ್ಳಲು ಮುಲಾಮು ತಂದುಕೊಟ್ಟು ಇವನ ಪರಿಸ್ಥಿತಿ ಕಂಡು ಲೊಚಗುಟ್ಟಿ ಹೋದಳು. ದಿನ ಬೆಳಗಾದರೆ ಸಾಕು ಪತ್ರಿಕೆ ಹಾಗೂ ಹಾಲು ಹಾಕುವ ಕೆಲಸ ಮಾಡುತ್ತಿದ್ದರಿಂದ ಹೀಗೆ ಕಂಡವರ ಓಣಿಯಲ್ಲಿ ಕೂತು ಸೀತೆ ಶೋಕ ಮಾಡಲು ಅವನಿಗೆ ಬಿಡುವಿರಲಿಲ್ಲ. ಮೆಲ್ಲನೆ ಎದ್ದು ಕಳ್ಳ ಹೆಜ್ಜೆ ಹಾಕುತ್ತಾ ಮನೆಯ ಹಿತ್ತಲಿಗೆ ಹೋಗಿ ಮುರಿದು ಬಿದ್ದಿದ್ದ ತನ್ನ ಕೊಟ್ಟಿಗೆ ಕೋಣೆಯನ್ನ ಕಂಡು ಮರುಗುತ್ತಾ ಪುಸ್ತಕˌ ಬಟ್ಟೆಗಳ ಜೊತೆ ಚಾಪೆ ಸುರುಳಿಯನ್ನ ಮಾತ್ರ ಎತ್ತಿಕೊಂಡು ಅವನ್ನೆಲ್ಲಾ ಪಕ್ಕದ ಮನೆಯ ಕಟ್ಟಿಗೆ ಕೊಟ್ಟಿಗೆಯಲ್ಲಿಟ್ಟ. ಅಪ್ಪನ ಗೊರಕೆ ಸ್ಪಷ್ಟವಾಗಿ ಹಿತ್ತಲ ತನಕ ಕೇಳುತ್ತಿತ್ತು. ನೀರಿನ ತೊಟ್ಟಿಯ ಬಳಿ ಮುಖ ಮೈ ಉಜ್ಜಿ ತೊಳೆದುಕೊಂಡ ಚಡ್ಡಿ ಅಂಗಿ ಬದಲಿಸಿ ಅವಸರವಸರವಾಗಿ ಕೆಲಸಕ್ಕೆ ಹೊರಟ. ಆಗಲೆ ಬೆಳಕಾಗುತ್ತಿತ್ತು. ತಡವಾಗಿ ಹೋಗುವಂತಿರಲಿಲ್ಲˌ

*****

ಅವನಿದ್ದ ಮಧ್ಯಮ ವರ್ಗದ ಸಮಾಜದಲ್ಲಿ ಮಕ್ಕಳನ್ನ ಹೆತ್ತವರು ತಪ್ಪೆಸಗಿದಾಗ ತಿದ್ದಲು ದಂಡಿಸೋದೇನೂ ಅಪೂರ್ವ ಸಂಗತಿಯಾಗಿರಲಿಲ್ಲ. ಕಾಲಕಾಲಕ್ಕೆ ತಮ್ಮ ತಮ್ಮ ಮಕ್ಕಳನ್ನ ಹೊಡಿದು ಬಡಿದು ಶಿಕ್ಷಿಸಿ ಅವರ ಅಪರಾಧದ ಅರಿವನ್ನವರಿಗೆ ಮೂಡಿಸಿ ಪ್ರತಿಯೊಬ್ಬರೂ ಸರಿದಾರಿಗೆ ತಂದಿದ್ದವರೆ. ಆದರೆ ಹಾಗಂತ ಯಾರೂ ಈ ಪರಿ ಅಮಾನುಷ ಹಲ್ಲೆಯನ್ನೆಸಗುತ್ತಿರಲಿಲ್ಲ. ಅದಾಗಿ ಸ್ವಲ್ಪ ಕಾಲದ ನಂತರ ಲೋಕದ ಅರಿವು ಅವನ ಮಡ್ಡ ಮಂಡೆಗೂ ಏರಲು ಶುರುವಾದ ಅನಂತರದ ದಿನಗಳಲ್ಲಿ ಬೆಳೆಬೆಳೆಯುತ್ತಾ ಕಾರಣಾಂತರದಿಂದ ಮನೆಯಲ್ಲಿ ಸಿಕ್ಕ ಮಮತೆ ಪ್ರೀತಿ ಹಾಗೂ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡು ಸಮಾಜಘಾತಕ ಕೃತ್ಯಗಳನ್ನˌ ಅದೂ ಕೆಲವೊಮ್ಮೆ ಕೇವಲ "ಥ್ರಿಲ್" ಪಡೆಯುವ ಕೌತುಕದಿಂದ ಎಸಗಿದ ಎಂತೆಂತಾ ಪರಮ ಪಾತಕಿಗಳಾಗಿ ಬದಲಾಗುತ್ತಿದ್ದ ತಮ್ಮ ಮಕ್ಕಳನ್ನೂ ಸಮರ್ಥಿಸಿಕೊಂಡು ಅಂತವರ ಕಿಡಿಗೇಡಿತನವನ್ನೂ ಮನ್ನಿಸಿ ಅವರ ರಕ್ಷಣೆಗಾಗಿ ಧಾವಿಸುತ್ತಿದ್ದ ಹೆತ್ತವರನ್ನ ಕಂಡಾಗ ಅವನಿಗೆ ಅಯೋಮಯವೆನಿಸುತ್ತಿತ್ತು.


ಗುಣ-ನಡತೆಯಲ್ಲಿ ಹಾಗೇನೂ ಇದ್ದಿರದ ತನಗೆ ಸತ್ಯ ಹೇಳುತ್ತಿದ್ದ ಕಾರಣಕ್ಕೆ ಮಾತ್ರ ಚಿತ್ರಹಿಂಸೆ ಕೊಡುತ್ತಿದ್ದ ಹೆತ್ತವರು ಹಾಗೊಮ್ಮೆ ತಾನೇನಾದರೂ ಇಂತಹ ಭೀಕರ ಪಾತಕಿಯಾಗಿ ಬದಲಾಗಿದ್ದರೆ ಬಿಡಿಸುವುದು ಅತ್ಲಾಗಿರಲಿ ಅವರೆ ಬಂದು ಪ್ರಜ್ಞೆ ತಪ್ಪುವವರೆಗೂ ತದುಕಿ ಕಡೆಗೆ ನೇಣಿಗೇರಿಸಿಯೆ ಹೋಗುತ್ತಿದ್ದರೇನೋ ಅನ್ನಿಸುತ್ತಿತ್ತು. ಅವನ ಅನುಭವದ ಪ್ರಪಂಚ ಹೊರಗಿನ ಲೋಕಾರೂಢಿಯ ಜಗತ್ತಿನಿಂದ ಭಿನ್ನವಾದುದರಿಂದ ಅವನಿಗೆ ಹೀಗನಿಸಿರುತ್ತಿದ್ದುದು ಸಹಜ. ಇದನ್ನ ಉಳಿದವರಿಗೆ ಅಷ್ಟೆ ತೀವೃವಾಗಿ ಅರ್ಥ ಮಾಡಿಸಲು ಅವನು ಅಸಮರ್ಥನಾಗಿದ್ದ.


ಅಂತಹ ಶೋಚನೀಯ ಪರಿಸ್ಥಿತಿಯಲ್ಲಿ ಆಗಾಗ ಅನ್ನ ಹಾಕಿ ಸಲುಹಿದ ಬಪಮˌ ಅವರ ಮನೆಯ ಇಕ್ಕೆಲಗಳಲ್ಲಿ ಬಾಡಿಗೆಗಿದ್ದ ಪುಟ್ಟರಾಜಣ್ಣನ ಮಗಳು ಉಮಕ್ಕ ಹಾಗೂ ಶ್ರೀನಿವಾಸರ ಹೆಂಡತಿ ಅಲ್ಪನಾ ಸಹೃದಯತೆ ತೋರದಿದ್ದಿದ್ದರೆ ಯಾರಿಗೂ ಬೇಡದೆ ಹೋಗಿ ಅವನ ಮಾನಸಿಕ ಪರಿಸ್ಥಿತಿ ಪೂರ್ತಿ ಹದಗೆಡುವ ಸಂಭವವಿತ್ತು. ಹತ್ತನೆ ತರಗತಿಯ ಅವನ ವಾರ್ಷಿಕ ಪರಿಕ್ಷೆಗೆ ಹತ್ತಿರ ಹತ್ತಿರ ಎರಡು ತಿಂಗಳ ಅವಧಿ ಮಾತ್ರ ಬಾಕಿಯಿತ್ತು. ಈ ತನ್ನ ಪರಿಪಾಟಲಿಗೆ ತಾನೆ ಸದಾ ಕಾಲ ಮರುಗುತ್ತಾ ಇರಲೂ ಸಹ ಸಾಧ್ಯವಿರಲಿಲ್ಲ. ಏನಾದರೂ ಸರಿ ತಾನು ಓದಲೆ ಬೇಕುˌ ಮುಂದೆ ತನ್ನನ್ನ ಕಾಯುವ ಏಕೈಕ ಆಸರೆ ಈಗ ತಾನು ಕಲಿಯಲಿರುವ ವಿದ್ಯೆ ಮಾತ್ರ ಅನ್ನುವ ಸಂಪೂರ್ಣ ಅರಿವು ಅವನಿಗಿತ್ತು. 


ಸದ್ಯ ಬೆಳಗಾದರೆದ್ದು ಮನೆಮನೆಗೆ ಸ್ಥಳಿಯ ಮತ್ತು ರಾಜ್ಯ ಮಟ್ಟದ ಒಂದೆರಡು ಪತ್ರಿಕೆಗಳನ್ನ ಜೊತೆಗೆ ಹಾಲನ್ನ ಹಾಕುವುದರಿಂದ ಚೂರುಪಾರು ಸಂಪಾದನೆಯಂತೂ ಆಗುತ್ತಿತ್ತು. ಜೊತೆಗೆ ಬುಕ್ಲಾಪುರದ ರಾಮಸ್ವಾಮಿ ಭಟ್ಟರ ತೈನಾತಿಯಾಗಿ ಮದುವೆ-ಮುಂಜಿ-ನಾಮಕರಣ-ವೈದಿಕ-ವೈಕುಂಠ ಸಮಾರಾಧನೆ ಹೀಗೆ ಅವರು ಕರೆದಲ್ಲಿಗೆ ಅಡುಗೆ ಸಹಾಯಕನಾಗಿ ಹೋಗುತ್ತಿದ್ದ. ಅಲ್ಲಿ ಹೋದಾಗಲೆಲ್ಲ ಐವತ್ತು ರೂಪಾಯಿ ಹಣದೊಟ್ಟಿಗೆ ಹೊಟ್ಟೆ ತುಂಬುವಷ್ಟು ಊಟ ದಕ್ಕುತ್ತಿತ್ತು. 


ಪ್ರತಿ ಶನಿವಾರ ಹೋರಂದೂರಿಗೂ ಆದಿತ್ಯವಾರ ಇಂಡಗದ್ದೆಗೂ ಹತ್ತು ಹದಿನೈದು ಮೈಲಿ ಸೈಕಲ್ ತುಳಿದು ರಾಜಾ ಬೇಕರಿಯ ತಿನಿಸುಗಳನ್ನ ದಾರಿಯುದ್ದ ಸಿಗುತ್ತಿದ್ದ ಅಂಗಡಿಗಳಿಗೆ ಮಾರಿ ಒಂದಷ್ಟು ಗಳಿಸುತ್ತಿದ್ದ. ಅವೆಲ್ಲ ಸಂಪಾದನೆ ಸೇರಿದರೂ ಸಹ ಊಟಕ್ಕೆ ಸಾಲುತ್ತಿರಲಿಲ್ಲ. ದರಿದ್ರದ್ದು ಬೆಳೆಯುವ ಪ್ರಾಯದಲ್ಲಿ ಹಸಿವು ಬೇರೆ ಜಾಸ್ತಿ. ಆದರೂ ಅನಿವಾರ್ಯವಾಗಿ ಕಾಲ ಹಾಕಲೆಬೇಕಿತ್ತು. ಅದರ ಮಧ್ಯ ಪರಿಕ್ಷೆಗೂ ಓದಿಕೊಳ್ಳಬೇಕಿತ್ತು. ಬದುಕು ಅಂದುಕೊಂಡಷ್ಟು ಸುಲಭವಾಗಿರಲ್ಲ ಅನ್ನೋ ಜೀವನ ಪಾಠವನ್ನವನು ಕಲಿಯುತ್ತಾ ತನ್ನನ್ನ ತಾನು ಎದುರಾದ ಪರಿಸ್ಥಿತಿಗೆ ಹೊಂದಿಸಿಕೊಳ್ಳಲೆಬೇಕಿತ್ತು.

( ಇನ್ನೂ ಇದೆ.)



https://youtu.be/A-o_l78NnQc

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೭.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೭.👊

ವಾಸ್ತವದಲ್ಲಿ ನಾವಿರಬೇಕಿದ್ದದ್ದು ಇನ್ನೆಲ್ಲೋˌ ಇಲ್ಲಿ ಹೀಗಿರೋದು ಒಂಥರಾ ಭಂಡಬಾಳು. ಹೀಗಾಗಿಯೆ ನಮಗೆ ಕುಟುಂಬದಲ್ಲೂ ಅಷ್ಟು ಮರ್ಯಾದೆ ಸಿಗುತ್ತಿಲ್ಲ ಅನ್ನುವ ಅರಿವು ಮೆಲ್ಲಗೆ ಮನಸೊಳಗೆ ಮೊಳಕೆಯೊಡೆದು ಮೂಡ ತೊಡಗುತ್ತಿದ್ದಂತೆ ಇರುಸು ಮುರುಸಾಗಲು ಆರಂಭಿಸಿದ ಕಾರಣಕ್ಕೆ ನಿಧಾನವಾಗಿ ಅವನ ಹದಿಹರೆಯದ ಮನಸ್ಸು ಹಾಗಿಲ್ಲದೆ ಸ್ವಾಭಿಮಾನ ಬಿಟ್ಟು ಹೀಗೆ ಅಜ್ಜನ ಆಶ್ರಯದಲ್ಲುಳಿದಿರುವ ಅಪ್ಪ - ಅಮ್ಮನ ಮೇಲೆಯೆ ಬಂಡೇಳ ತೊಡಗಿತು. ಅದನ್ನ ಕೇವಲ ಮನಸೊಳಗೆ ಇಟ್ಟುಕೊಂಡು ಬೇಯದೆ ಸಮಯ ಸಂದರ್ಭ ನೋಡಿಕೊಂಡು ಒಂದೆರಡು ಬಾರಿ ತಂದೆ-ತಾಯಿಗೂ ಮರ್ಮಕ್ಕೆ ತಾಗುವಂತೆ ಹೇಳಿಯೂ ಬಿಟ್ಟ. ಅವನ ಅಂತಹ ನೇರ ಮಾತುಗಳನ್ನ ಕೇಳಿ ಅಪ್ರತಿಭರಾದ ಕೈಲಾಗದವ ಮೈ ಪರಚಿಕೊಂಡಂತೆ ಅಪ್ಪ ಅಂದಿನಿಂದ ಸಣ್ಣಪುಟ್ಟ ವಿಷಯಕ್ಕೂ ಸಿಡಿಮಿಡಿಗೊಳ್ಳುತ್ತಾ ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಆಯುಧವನ್ನಾಗಿಸಿಕೊಂಡು ಅವನನ್ನ ಥಳಿಸುವುದನ್ನೆ ಕಾಯಕವನ್ನಾಗಿಸಿಕೊಂಡರೆˌ ಅಮ್ಮ ಸರಿಯಾಗಿ ಅಡುಗೆ ಮಾಡದೆ - ಒಂದೊಮ್ಮೆ ಮಾಡಿದರೂ ಸಹ ಸರಿಯಾಗಿ ಹೊಟ್ಟೆಗೆ ಹಾಕದೆ ತಮ್ಮ ಮೇಲಿನ್ನೂ ಆಶ್ರಿತನಾಗಿದ್ದ ಅವನನ್ನ ಬೆಳೆಯುವ ಪ್ರಾಯದಲ್ಲಿ ದೈಹಿಕವಾಗಿಯೂ-ಮಾನಸಿಕವಾಗಿಯೂ ಹಿಂಸಿಸಲಾರಂಭಿಸಿದರು.

ಹೀಗೆ ಕೂತಲ್ಲಿ ನಿಂತಲ್ಲಿ ತಪ್ಫಿದ್ದರೂ ಇಲ್ಲದಿದ್ದರೂ ನೆಪ ಹುಡುಕಿ ಚಚ್ಚುವ ಹೆತ್ತವರ ದೌರ್ಜನ್ಯ ಮಿತಿಮೀರ ತೊಡಗಿದಾಗ ಅವನ ಮಾನಸಿಕ ಸ್ಥೈರ್ಯ ಕುಗ್ಗತೊಡಗಿತು. ಓದಿನಲ್ಲಿ ಮುಂದಿದ್ದ ಅವನಿಗೆ ಅಘಾತವಾಗುವಂತೆ ಒಂದು ಜನವರಿಯ ರಾತ್ರಿ ಮನೆಯಲ್ಲಿ ದೊಡ್ಡದೊಂದು ಪ್ರಹಸನವೆ ನಡೆದು ಹೋಯಿತು. ಅವನ ಹತ್ತನೆ ತರಗತಿಯ ಅಂತಿಮ ಪರಿಕ್ಷೆಗಳಿಗೆ ನೆಟ್ಟಗೆ ಎರಡು ತಿಂಗಳ ಸಮಯವೂ ಬಾಕಿಯಿರಲಿಲ್ಲ. ಕುಟುಂಬ ಸಣ್ಣದಾದ ಮೇಲೆ ದೊಡ್ಡ ಮನೆಯನ್ನ ಬಾಡಿಗೆಗೆ ಬಿಟ್ಟ ಅವನಜ್ಜ ಮಗಳು-ಅಳಿಯನ ವಾಸಕ್ಕೆ ಹಿಂದೆ ಬಾಡಿಗೆಗೆ ಬಿಡುತ್ತಿದ್ದ ಸಣ್ಣ ಭಾಗವನ್ನ ಬಿಟ್ಟುಕೊಟ್ಚಿದ್ದರು. ತಮ್ಮ ವಾಸಕ್ಕೆ ಒಂದು ಪ್ರತ್ಯೇಕ ಕೋಣೆಯನ್ನ ಮನೆಯ ಮತ್ತೊಂದು ಮೂಲೆಯಲ್ಲಿ ಕಟ್ಟಿಸಿಕೊಂಡು ಆಗಷ್ಟೆ ಹರೆಯಕ್ಕೆ ಕಾಲಿಡುತ್ತಿದ್ದ ಅವನ ಖಾಸಗಿತನವನ್ನ ಪರಿಗಣಿಸಿ ದನಗಳನ್ನೆಲ್ಲ ಮಾರಿ ದಶಕಗಳಾಗಿದ್ದರಿಂದ ಖಾಲಿ ಹೊಡೆಯುತ್ತಿದ್ದ ಮನೆ ಹಿಂಬದಿಯ ಕೊಟ್ಟಿಗೆಯ ಒಂದು ಭಾಗವನ್ನ ಚೆನ್ನಾಗಿ ದಬ್ಬೆಗಳನ್ನ ಏರಿಸಿ ಬಟ್ಟೆಯಿಂದ ಮರೆ ಮಾಡಿ ಕಟ್ಟಿ ಕೋಣೆಯಂತಾಗಿಸಿ ಬಿಟ್ಟುಕೊಟ್ಟಿದ್ದರು. ತನ್ನ ಚಾಪೆ ಸುರುಳಿ-ಪುಸ್ತಕಗಳು-ಬಟ್ಟೆಬರೆ-ಪಾಕೆಟ್ ರೇಡಿಯೋ-ಪಾಕೆಟ್ ವಾಕಮೆನ್-ಅದಕ್ಕೆ ಅವನೆ ತಯಾರಿಸಿದ್ದ ಮಡಿಕೆ ಧ್ವನಿವರ್ಧಕ-ಗ್ರಂಥಾಲಯದ ಎರವಲು ಪುಸ್ತಕಗಳನ್ನ ವರ್ಗಾಯಿಸಿದ ಅವನಲ್ಲಿಗೆ ಖುಷಿಯಿಂದಲೆ ನೆಲೆ ಬದಲಿಸಿದ್ದ. ಮನೆಯ ಒಳಗೆ ಬಾರದೆಯೆ ಪಕ್ಕದ ಓಣಿಯಿಂದ ನೇರ ಹಿತ್ತಲಿಗೆ ಬಂದು ಅಲ್ಲಿಂದ ತನ್ನ ಕೊಟ್ಟಿಗೆ ಕೋಣೆ ಹೊಕ್ಕುವ ಸ್ವಾತಂತ್ರ್ಯ ಅವನಿಗೆ ತಾನೂ ದೊಡ್ಡವನಾದೆ! ಅನ್ನೋ ಆತ್ಮವಿಶ್ವಾಸದ ಭಾವನೆ ಮೂಡಿಸ ತೊಡಗಿದ್ದ ಕಾಲ ಅದು. ರಾತ್ರಿ ಬೆಳಕಿಗೆ ಒಂದು ವಿದ್ಯುತ್ ಬಲ್ಬ್ ಸಹ ಹಾಕಿಕೊಟ್ಟುˌ ಅದರ ಹೋಲ್ಡರಿನ ಮೂಲಕವೆ ಅವನ ಕ್ಯಾಸೆಟ್ ಕೇಳುವ ಖಯಾಲಿಗೂ ವ್ಯವಸ್ಥೆ ಮಾಡಿಕೊಟ್ಟ ಅಜ್ಜ ಅವನಿಗುಪಕರಿಸಿದ್ದರು. ನೆಲ ನಯವಾಗಿದ್ದ ಹಾಸುಗಲ್ಲಿನದಾಗಿದ್ದರಿಂದ ಗುಡಿಸಿ ಒರೆಸಿಟ್ಟುಕೊಳ್ಳುವುದೊಂದು ಸಮಸ್ಯೆಯೆ ಆಗಿರಲಿಲ್ಲ.

ಹಾಗೊಂದು ದಿನ ಅಜ್ಜ ತನ್ನ ಎರಡನೆ ಮಗಳ ಮನೆಗಂತ ಕಾರ್ಕಳಕ್ಕೆ ಹೋಗಿದ್ದಾಗ ಇವನ ಪಾಲಿನ ಶನಿದೆಸೆ ಆರಂಭವಾಯ್ತು. ಆ ರಾತ್ರಿ ಎಂದಿನಂತೆ ರೇಡಿಯೋದಲ್ಲಿ ಟ್ಯೂನು ಮಾಡುವಾಗ ರಾತ್ರಿಯ ತಂಪಿನಲ್ಲಿ ಸ್ಪಷ್ಟವಾಗಿ ಕೇಳಲಾರಂಭಿಸಿದ್ದ ಎರಡನೆ ಬ್ಯಾಂಡಿನ ಬಿಬಿಸಿ ಹಾಕಿಕೊಂಡು ಅರೆಬರೆ ಅರ್ಥವಾಗುತ್ತಿದ್ದ ಯಾರದ್ದೋ ಆಂಗ್ಲ ಸಂದರ್ಶನ ಕೇಳಿಸಿಕೊಳ್ಳುತ್ತಾ ನೆಲದಲ್ಲಿ ಹಾಸಿದ ಚಾಪೆಯ ಮೇಲೆ ಕಾಲುಚಾಚಿ ಕೂತು ಗೋಡೆಗೊರಗಿ ಮಂಡಿ ಮುಚ್ಚುವಂತೆ ಮಂದರಿ ಹೊದ್ದುಕೊಂಡು ಯಾವುದೋ ನೋಟ್ಸನ್ನ ಓದಿಕೊಳ್ಳುತ್ತಾ ಪರಿಕ್ಷೆಯ ತಯಾರಿಯಲ್ಲಿ ತೊಡಗಿದ್ದ. ಆಗ ಕರ್ಕಶವಾಗಿ ಕೇಳಿ ಬಂತು ಆಗಷ್ಟೆ ಕೆಲಸ ಮುಗಿಸಿ ಮನೆಗೆ ಮರಳಿ ಬಂದಿದ್ದ ಅಪ್ಪನ ಬೆದರಿಕೆಯ ಧ್ವನಿ. "ಇನ್ನು ಮುಂದೆ ನಿನಗೆ ಪುಗಸಟ್ಟೆ ಊಟ ಹಾಕಲು ಆಶ್ರಯ ಕೊಡಲು ಸಾಧ್ಯವಿಲ್ಲ! ದುಡಿದು ದಿನಕ್ಕೆ ಐವತ್ತು ರೂಪಾಯಿ ತಂದು ಕೊಡೋದಾದ್ರೆ ಮಾತ್ರ ಇಲ್ಲಿರು" ಅಂತ ಒಂದು ರಾತ್ರಿ ಚೂರು ಅಮಲೇರಿಸಿಕೊಂಡಿದ್ದ ಅಪ್ಪ ತೊದಲುತ್ತಾ ನುಡಿದಾಗ ಮಾತ್ರ ಇವನ ತಾಳ್ಮೆಯ ಕಟ್ಟೆ ಒಡೆದೆ ಹೋಯಿತು.

ತಕ್ಷಣವೆ ಯಾವ ಹಿಂಜರಿಕೆಯೂ ಇಲ್ಲದೆ "ನೀವು ಮತ್ತು ನಿಮ್ಮ ಹೆಂಡತಿ ನನಗೆ ಅನ್ನ ಹಾಕ್ತಿರೋದು ಅಷ್ಟರಲ್ಲೆ ಇದೆ. ಈಗೆಲ್ಲಾ ಮದುವೆ-ಮುಂಜಿಗಳಿಗೆ ಅಡುಗೆ ಸಹಾಯಕನಾಗಿ ಬಡಿಸಲು ಹೋದಾಗಲಷ್ಟೆ ನಾನು ಹೊಟ್ಟೆ ತುಂಬಾ ಉಣ್ಣುತ್ತಿರೋದು ಗೊತ್ತಿರಲಿ. ನನಗೆ ಅಲ್ಲಿ ಸಿಗೋ ಐವತ್ತು ರೂಪಾಯಿ ಸಂಬಳವನ್ನೂ ನಿಮಗೆ ತಂದು ಕೊಡೋದು ನನ್ನ ಇಷ್ಟವಾಗಬೇಕೆ ಹೊರತುˌ ನಿಮ್ಮ ಒತ್ತಾಯವಲ್ಲ. ಖಂಡಿತ ನಯಾಪೈಸೆಯನ್ನೂ ಕೊಡಲ್ಲ. ಅದನ್ನೂ ಕೊಟ್ಟು ನಾನೇನು ಮಣ್ಣು ತಿನ್ನಲ? ದಿನಾ ಯಾವುದಾದರೂ ಸಮಾರಂಭ ಆಗಿ ಕೆಲಸ ಸಿಗಲು ಇದೇನು ಬೊಂಬಾಯಿಯ? ಆಗೊಮ್ಮೆ-ಈಗೊಮ್ಮೆ ಅದೂ ಮದುವೆ ಹಂಗಾಮಿನಲ್ಲಿ ಮಾತ್ರ ಕೆಲಸ ಇರೋದು. ಬಾಕಿ ದಿನಗಳೆಲ್ಲ ನಾನೇನು ಕದ್ದು ತಂದು ಕೊಡಬೇಕ ಐವತ್ ರೂಪಾಯಿ ನಿಮಗೆ?. ಈಗ ನಾನಿನ್ನೂ ಓದುತ್ತಿರೋ ಹುಡುಗ. ನನ್ನನ್ನ ಓದುವ ತನಕ ಬೆಂಬಲಿಸೋದು ನಿಮ್ಮ ಕೃಪೆಯಲ್ಲ ಕರ್ತವ್ಯ ತಿಳ್ಕಳಿ. ಅದು ಬಿಟ್ಟು ನನ್ನಲ್ಲೆ ದುಡ್ಡು ಕೇಳಕ್ಕೆ ನಾಚಿಕೆಯಾಗಬೇಕು ನಿಮ್ಮಿಬ್ಬರಿಗೂ. ಮರಿಬೇಡಿ ನೀವೆ ನಿಮ್ಮ ಮಾವನ ಆಶ್ರಯದಲ್ಲಿ ನಾಚಿಕೆಗೆಟ್ಟು ಪುಗಸಟ್ಟೆ ವಾಸ ಮಾಡ್ತಾ ಇರೋದು. ಹಾಗೆ ನೋಡಿದರೆ ನಾನಿಲ್ಲಿ ಇರೋದು ತಪ್ಪಲ್ಲ ಇದು ನನ್ನಜ್ಜನ ಮನೆ. ನೀವಿಲ್ಲಿರೋದೆ ಅವಮಾನಕರ. ಮೊದ್ಲು ಬೇರೆ ಮನೆ ಮಾಡಿ ನಾವೂ ಅಲ್ಲಿಗೆ ಬರ್ತಿವಿˌ ಆಗಲ್ಲಿ ನಿಮ್ಮ ಕಟ್ಟಳೆಗಳನ್ನ ನನ್ನ ಮೇಲೆ ಹೇರಿ ಆಗ ಒಪ್ಪಿಕೊಳ್ತಿನಿ. ನೀವೆ ನಮ್ಮಲ್ಲಿ ಬಂದಿರೋವಾಗ ಪೊಗರು ತೋರಿಸಬೇಡಿ. ದಿನ ಐವತ್ತು ರೂಪಾಯಿ ಅತಿಥಿಯಾದ ನಿಮಗೆ ಕೊಟ್ಟು ಹಕ್ಕಿನ ಮೊಮ್ಮಗ ನಾನಿಲ್ಲಿರಕ್ಕೆ ನನ್ನಜ್ಜನ ಮನೆಯೇನು ಲಾಡ್ಜ್ ಅಲ್ಲ. ಹಾಗೇನಾದ್ರೂ ಕೊಡಲೆ ಬೇಕಿದ್ರೆ ಅಜ್ಜನಿಗೆ ಇಲ್ಲಿರೋಕೆ ಬಾಡಿಗೆ ತಿಂಗಳ ತಿಂಗಳ ಸರಿಯಾಗಿ ಕೊಡಬೇಕಾಗಿರೋವ್ರು ದುಡಿಯುತ್ತಿರೋ ನೀವಿಬ್ರು ಗೊತ್ತಾಯ್ತ?!" ಅಂತ ಅವನು ಅಪ್ಪನ ವಿರುದ್ಧ ಕೆರಳಿ ನಿಂತು ಕಿರುಚಿದ. 

ಆಗೆಲ್ಲ ಸಿಕ್ಕಸಿಕ್ಕದ್ದನ್ನೆಲ್ಲಾ ಓದಿ ಸಮೃದ್ಧವಾಗುತ್ತಿದ್ದ ಅವನ ಯೋಚನಾ ಲಹರಿ ಇಷ್ಟು ತರ್ಕಬದ್ಧವಾಗಿ ಕಠಿಣ ನುಡಿಗಳನ್ನ ಅವನಿಂದ ಭಿಡೆಯಿಲ್ಲದೆ ಆಡಿಸಿತ್ತು. ಇನ್ನೂ ಹಿರಿಯರ ಹೊಡೆತ ಬಡಿತಗಳಿಂದ ಪಾರಾಗಲಾಗದ ಪ್ರಾಯದಲ್ಲಿದ್ದ ಸಣಕಲ ದೇಹದವನ ನಾಲಗೆ ಮಾತ್ರ ಸ್ಫುಟವಾಗಿತ್ತು. ಪರಿಣಾಮ ಮಾತ್ರ ಸಹಜವಾಗಿ ಭೀಕರವಾಯ್ತು. ಮೊದಲನೆಯದಾಗಿ ತನ್ನಾಜ್ಞೆಯನ್ನ ಧಿಕ್ಕರಿಸಿ ಎದುರುತ್ತರ ಕೊಡುತ್ತಿರೋ ಮಗˌ ಎರಡನೆಯದಾಗಿ ತನ್ನ ಹುಳುಕುಗಳನ್ನ ಸರಿಯಾಗಿ ಗುರುತಿಸಿ ಕೊಟ್ಟ ಅವನ ಮಾತುಗಳಿಂದಾದ ಮರ್ಮಾಘಾತˌ ಕೊನೆಯದಾಗಿ ಆ ಹೊತ್ತಿನಲ್ಲಿ ಹೊಟ್ಟೆಗಿಳಿದಿದ್ದ ದ್ರವರೂಪಿ ಪರಮಾತ್ಮನ ಕುಮ್ಮಕ್ಕು ಇಷ್ಟೂ ಒಂದಾಗಿ ಕೈಗೆ ಸಿಕ್ಕ ಸೌದೆ-ಇಟ್ಟಿಗೆ-ಹೆಂಚು ಹಿಡಿದು ಮುಖ-ಮೂತಿ ನೋಡದೆ ಚಚ್ಚಿ ಹಾಕಿದರು. ಅವರ ಸೈಂಧವ ಹಿಡಿತದಿಂದ ಅದು ಹೇಗೋ ತಪ್ಪಿಸಿಕೊಂಡು ಪಾರಾಗಿ ಜೀವ ಉಳಿಸಿಕೊಂಡು ಬೀದಿಗೆ ಓಡಿದ ಅವನಿಗೆ ಈ ಅನಿರೀಕ್ಷಿತ ದಾಳಿಯಿಂದ ಬೊಬ್ಬೆ ಹೊಡೆಯುವ ಶಕ್ತಿಯೂ ಉಳಿದಿರಲಿಲ್ಲ. ಬಿದ್ದ ಪೆಟ್ಟಿಗೆ ಬಾಯಿಯೊಳಗಾದ ಗಾಯಕ್ಕೋ-ಹೊಟ್ಟೆಗೆ ಒದ್ದ ರಭಸಕ್ಕೆ ಒಳಗಿಂದ ಚಿಮ್ಮಿ ಬಂದದ್ದೋ ಗೊತ್ತಿಲ್ಲ ರಸ್ತೆಗೆ ಎದುರಾಗಿ ಕೂತು ಕೆಮ್ಮಿದವನ ಬಾಯಿಯಿಂದ ರಕ್ತ ಚಿಮ್ಮಿ ಬಂತು. ಅವ ಸೋತಿದ್ದ.

(ಇನ್ನೂ ಇದೆ.)


https://youtu.be/qhBnygVePWs

14 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೪.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೪.👊


ಬೆಳಗ್ಯೆ ಅಂದಿನ ದಿನಪತ್ರಿಕೆಯನ್ನ ತಂದು ಕೊಟ್ಟವರು ಅದೆ ಸಂಜೆ ಅದನ್ನವರು ಮರಳಿ ಒಯ್ಯುವ ಮೊದಲು ಹೋಗಿ ಅದನ್ನ ಸಹ ಓದಿ ಮುಗಿಸುವ ಅಭ್ಯಾಸ ಅವನ ಮೈಗಂಟಿತು. ಆದರೆ "ಕನ್ನಡಪ್ರಭ"ದಷ್ಟು ಬರೆ ಊರ ಸತ್ತವರ ವಿವಿಧ ಗಾತ್ರಗಳ ಚಿತ್ರಗಳೊಡನೆ ಶ್ರದ್ಧಾಂಜಲಿˌ ಬಾಷ್ಪಾಂಜಲಿಗಳ ಜಾಹಿರಾತುಗಳೆ ತುಂಬಿ ತುಳುಕುತ್ತಿದ್ದ ವೈಕುಂಠ ಸಮಾರಾಧನೆಯ ಆಹ್ವಾನ ಪತ್ರಿಕೆಯಂತಿದ್ದ ಸಂಪಾದಕೀಯವೂ ಪ್ರಕಟವಾಗಿರದ "ಉದಯವಾಣಿ" ಅವನಿಗೆ ಒಂಚೂರೂ ರುಚಿಸಲಿಲ್ಲ. ಆದರಿನ್ನೂ ದುಡಿಮೆ ಆರಂಭಿಸಿರದೆ ಸ್ವಂತದ ಸಂಪಾದನೆ ಇಲ್ಲದ ಅವನಿಗೆ ಖರೀದಿಸಿ ಓದುವ ಸಾಮರ್ಥ್ಯವಿನ್ನೂ ಇಲ್ಲದಿದ್ದ ಕಾರಣ ಪಾಲಿಗೆ ಬಂದದ್ದನ್ನೆ ಪಂಚಾಮೃತ ಅಂದುಕೊಂಡು ಎರವಲು ಪತ್ರಿಕೆಗಳನ್ನ ಓದುವ ಅನಿವಾರ್ಯತೆಯಿದ್ದಿತ್ತಲ್ಲ? ಬೇರೆ ಆಯ್ಕೆಯೂ ಇದ್ದಿರಲಿಲ್ಲ.

ಪುಟ್ಟರಾಜಣ್ಣನ ಮನೆಯೊಂತರಾ ಅವನ ಪಾಲಿನ ಗ್ರಂಥಾಲಯ. ಅವರು ತರಿಸುತ್ತಿದ್ದ ದಿನ-ವಾರ-ಮಾಸ ಪತ್ರಿಕೆಗಳುˌ ಗ್ರಂಥಾಲಯದ ಸದಸ್ಯತ್ವ ಬಳಸಿ ಎರವಲು ತರುತ್ತಿದ್ದ ಕಾದಂಬರಿಗಳು ಇವೆಲ್ಲಕ್ಕೂ ಅವರಿಗಿಂತ ಮೊದಲು ಇವನೆ ಓದುಗನಾಗಿರುತ್ತಿದ್ದುದು ಮೂಮೂಲು. ಹೆಚ್ ಜಿ ರಾಧಾದೇವಿˌ ವಿಜಯಶ್ರಿˌ ಹೆಚ್ ಎಸ್ ಪಾರ್ವತಿˌ ಸಾಯಿಸುತೆˌ ಕೌಂಡಿನ್ಯˌ ಬೀಚಿˌ ಸಿ ಎನ್ ಮುಕ್ತಾˌ ಸಾಕೃ ಪ್ರಕಾಶ್ˌ ಶಾರದಾ ಉಳುವಿˌ ನರಸಿಂಹಯ್ಯˌ ರಾಜಾ ಚಂಡೂರು ತರದವರು ಅನುವಾದಿಸಿದ ತೆಲುಗಿನ ಉದ್ದನಪೂಡಿ ಸುಲೋಚನಾರಾಣಿˌ ಯಂಡಮೂರಿ ವೀರೇಂದ್ರನಾಥ ಮುಂತಾದ ಬ್ರಾಂಡಿನ "ಜನಪ್ರಿಯ" ಸಾಹಿತಿಗಳು ಬರೆಬರೆದು ಗುಡ್ಡೆ ಹಾಕಿರುತ್ತಿದ್ದ ಕಾದಂಬರಿಗಳೆ ಹೆಚ್ಚಾಗಿ ಇರುತ್ತಿದ್ದು ಅಪರೂಪಕ್ಕೆ ಅವರು ಸತ್ಯಕಾಮˌ ಭೈರಪ್ಪˌ ಕುವೆಂಪು ರಚನೆಯ ಪುಸ್ತಕಗಳನ್ನೂ ಅವರು ಓದಲು ತರೋದಿತ್ತು. 

ಬಹಳಷ್ಟು ಸಲ ಅವುಗಳಲ್ಲಿ ಬರೆದಿರುವ ಅನೇಕ ಅಂಶಗಳು ನಾಲ್ಕಾಣೆಯಷ್ಟೂ ಸಹ ಅವನಿಗೆ ಅರ್ಥವಾಗುತ್ತಿರದಿದ್ದರೂ ಕೂಡ ಅವನ ಮೆದುಳು ಹೊಕ್ಕಿದ್ದ ಓದುವ ಹುಳ ಸಿಕ್ಕಸಿಕ್ಕದನ್ನೆಲ್ಲಾ ಓದುವ ಗೀಳಿಗೆ ಅವನನ್ನ ಕ್ರಮೇಣ ದಾಸನನ್ನಾಗಿಸುತ್ತಿತ್ತು.

ದಿನ ಬೆಳಗಾದರೆ ಸಾಕು ಪುಟ್ಚರಾಜಣ್ಣನ ಹೆಂಡತಿ ಪಾರ್ವತಮ್ಮ ಚೆನ್ನಾಗಿ ಗುಡಿಸಿ ತೊಳೆದಿರುತ್ತಿದ್ದ ಅವರ ಮನೆಯ ಅಂಗಳದಲ್ಲಿ ಹಾಸಿದ್ದ ಹಾಸುಗಲ್ಲುಗಳ ಮೇಲೆ ಅವರದೆ ಗೇಟಿಗೆ ಪೇಪರು ಹಾಕುವ ಹುಡುಗರು ಸಿಕ್ಕಿಸಿ ಹೋಗಿರುತ್ತಿದ್ದ ತೀರಾ ಕನಿಷ್ಠ ಗುಣಮಟ್ಟದ ಕಾಗದದಲ್ಲಿ ಪ್ರಕಟವಾಗಿರುತ್ತಿದ್ದ ಕನ್ನಡಪ್ರಭ ಹಾಗೂ ಛಲಗಾರಗಳನ್ನ ಚಾಪೆಯಂತೆ ಹಾಸಿಕೊಂಡು ಅವುಗಳ ಮೇಲೆ ಮಲಗಿಕೊಂಡು ಅವುಗಳಲ್ಲಿ ಪ್ರಕಟವಾಗುತ್ತಿದ್ದ ಮೂರು ಮಾರ್ಕಿನ ಬೀಡಿಯ ಜಾಹಿರಾತಿನಿಂದ ಆರಂಭಿಸಿ ನಿತ್ಯ ಭವಿಷ್ಯದಿಂದ ಹಿಡಿದು ಶೇರುಪೇಟೆ ಸಮಾಚಾರ - ಕಡೆಗೆ ಬೆಂಗಳೂರಿನಲ್ಲಿ ಇಂದಿನ ಬಂಗಾರದ ದರದವರೆಗೂ ತನಗೆ ಒಂಚೂರೂ ಉಪಯೋಗವಿಲ್ಲದ ಮಾಹಿತಿಗಳನ್ನೂ ಸೇರಿಸಿ ಒಂದಕ್ಷರವನ್ನೂ ಬಿಡದೆ ಓದುವ ಅವನ ಉದ್ಧಟತನ ಪುಟ್ಟರಾಜಣ್ಣನ ಕುಟುಂಬಕ್ಕೆ ಕಿರಿಕಿರಿ ಹುಟ್ಟಿಸುತ್ತಿದ್ದರೂ ಸಹ ಅಪಾರ ತಾಳ್ಮೆಯಿಂದ ಅವರೆಲ್ಲ ಅವನ ಈ ಗೂಂಡಾಗಿರಿಯನ್ನು ಸಹಿಸಿ ಕ್ಷಮಿಸುತ್ತಿದ್ದರು. 

ಕಲ್ಲು ಹಾಸಿನ ಮೇಲೆ ಆರದೆ ಉಳಿದಿರುತ್ತಿದ್ದ ನೀರು ಹೀರಿ - ಅದರ ಮೇಲೆ ಬಿದ್ದು ಒದ್ದಾಡಿದ ಇವನ ಒತ್ತಡದಿಂದ ಅತ್ತಿತ್ತಲಾಗಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡ ಪತ್ರಿಕೆ ನಿಜವಾಗಿಯೂ ಅದನ್ನ ಕಾಸು ಕೊಟ್ಟು ಖರೀದಿಸಿದವರ ಕೈ ಸೇರುವ ಹೊತ್ತಿಗೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಹರಿದ ಬಾಳೆಲೆಯಂತಾಗಿರುತ್ತಿದ್ದ ನಿಷ್ಪಾಪಿ ಹೆಣ್ಣಿನಂತಾಗಿರುತ್ತಿದ್ದರೂˌ ಅವರವನ ಈ ಅಧಿಕಪ್ರಸಂಗವನ್ನು ಮನ್ನಿಸಿ ಸುಮ್ಮನಿರುತ್ತಿದ್ದರು. ಆಗೆಲ್ಲಾ ಹಾಗೆ ಮಾಡೋದು ತಪ್ಪು ಅನ್ನುವ ಕನಿಷ್ಠ ಪ್ರಜ್ಞೆಯೂ ಇದ್ದಿರದಿದ್ದ ಅವನು ಅದನ್ನ ಹಕ್ಕೆಂಬಂತೆ ಭಾವಿಸಿ ವರ್ಷಗಟ್ಟಲೆ ಅವರೆಲ್ಲರನ್ನೂ ಸತಾಯಿಸಿದ್ದಾನೆ.

ಅವರ ಮನೆಯಲ್ಲಿ ಹೀಗೆ ಮುಂಜಾನೆ ಎದ್ದವನೆ ಕದ್ದು ಪತ್ರಿಕೆ ಓದುವˌ ಹೇಳದೆ ಕೇಳದೆ ಒಳ ನುಗ್ಗಿ ಬಂದು ಕನಿಷ್ಠ ಅನುಮತಿ ಕೇಳುವ ಸೌಜನ್ಯವನ್ನೂ ತೋರದೆ ಮನೆಗೆ ತಂದಿರುತ್ತಿದ್ದ ಪುಸ್ತಕಗಳನ್ನ ತೆಗೆದುಕೊಂಡೊಯ್ಯುವ ಇವನ ಇಂತಹ ದಬ್ಬಾಳಿಕೆಯ ನಡುವಳಿಕೆಗಳು ಹದ್ದುಮೀರಿದಾಗ ಅದನ್ನ ವಿರೋಧಿಸುತ್ತಿದ್ದವಳು ಪುಟ್ಟರಾಜಣ್ಣನ ಮಗಳು ಸಣ್ಣಿ ಅಲಿಯಾಸ್ ಉಮಕ್ಕ ಮಾತ್ರ. ಆದರೆ ಅವಳ ವಿರೋಧವನ್ನೆಲ್ಲ ಲೆಕ್ಕಕ್ಕೇ ಇಟ್ಟಿರದಿದ್ದ ಅವನು ಕಾಲೇಜಿನ ಮೊದಲ ವರ್ಷದಲ್ಲಿದ್ದ ಅವಳ ಪಠ್ಯಪುಸ್ತಕಗಳನ್ನೆ ಅವಳಿಗೆ ಹೇಳದೆ ತೆಗೆದು ಪರಿಶೀಲಿಸುತ್ತಿದ್ದ. 

ಹಾಗೊಂದು ರೇಡು ಹಾಕುತ್ತಿದ್ದಾಗ ಅವನ ಕೈಗೆ ಕೆ ಪಿ ಪೂರ್ಣಚಂದ್ರ ತೇಜಸ್ವಿ ಬರೆದಿದ್ದˌ ಆಗ ಕುವೆಂಪು ವಿಶ್ವವಿದ್ಯಾಲಯದ ಮೊದಲ ವರ್ಷದ ಪದವಿ ತರಗತಿಗೆ ಪಠ್ಯವಾಗಿ ಆಯ್ಕೆಯಾಗಿದ್ದ "ಅಲೆಮಾರಿಯ ಅಂಡಮಾನ್" ಸಿಕ್ಕಿತು. ಆ ಪ್ರವಾಸ ಕಥನವನ್ನು ಓದಿದವನಿಗೆ ಏಕಕಾಲಕ್ಕೆ ಇಷ್ಟು ಕಾಲ ತಾನು ಓದುತ್ತಿದ್ದ ಇತರರ ಒಣ ಸಾಹಿತ್ಯ ಅದೆಷ್ಟು ರಸಹೀನ ಅನ್ನುವುದು ಅರ್ಥವಾಗುವುದರೊಂದಿಗೆ. ಇಷ್ಟು ದಿನ ಈ ಲೇಖಕರನ್ನ ಓದದಿದ್ದದ್ದಕ್ಕೆ ಅಪಾರ ವ್ಯಥೆಯೂ ಆಯಿತು. ಎರಡನೆ ವರ್ಷದ ಪದವಿಯ ಕಾಲದಲ್ಲೂ ಅವಳದ್ದೆ ಪಠ್ಯ ಪುಸ್ತಕದ ಸಾಲಿನಲ್ಲಿದ್ದ ಸಾಗರದ ಸಾಹಿತಿ ನಾರ್ಬರ್ಟ್ ಡಿ'ಸೋಝಾ಼ರ ಕಾದಂಬರಿ "ಕೊಳಗ"ದ ಓದು ಅವನನ್ನ ಬೇರೆಯದ್ದೆ ಒಂದು ಲೋಕದ ಪಯಣವನ್ನ ಮಾಡಿಸಿತು. 


ವಿಜಯೇಂದ್ರಣ್ಣನ ತಮ್ಮ ರಾಧಾಕೃಷ್ಣಯ್ಯನ ಆಪ್ತ ಸ್ನೇಹಿತರಾಗಿದ್ದ ಈ ಡಿ'ಸೋಝ಼ರನ್ನ ಆತ ಬಾಲ್ಯದಿಂದಲೆ ನೋಡಿ ಬಲ್ಲ. ಅವರ ಮೊತ್ತಮೊದಲ ಕಾದಂಬರಿಯನ್ನ ಅವರು "ನನ್ನ ಗೆಳೆಯ ರಾಧಾಕೃಷ್ಣನಿಗೆ" ಅಂತಲೆ ಅರ್ಪಣೆ ಮಾಡಿದ್ದಾರೆ. ಆದರೆ ಅವರ ಸಾಹಿತ್ಯವನ್ನವನು ಓದಿದ್ದು ಮಾತ್ರ ಅದೆ ಮೊದಲು. ಬರವಣಿಗೆಯ ಹೊಸ ಮಜಲುಗಳ ಪರಿಚಯವಾಗುತ್ತಾ ಹೋದಂತೆ ಅದಕ್ಕೂ ಹಿಂದೆ ಓದುತ್ತಿದ್ದ ಲೇಖಕರ ಪುಸ್ತಕಗಳೆಲ್ಲ ತೀರಾ ಸಪ್ಪೆ ಅನ್ನಿಸಿ ಅವುಗಳ ಓದನ್ನ ಕ್ರಮೇಣ ತ್ಯಜಿಸ ತೊಡಗಿದ. 

ಅಲ್ಲದೆ ಗ್ರಂಥಾಲಯಕ್ಕೆ ಹೋದರೆ ಯಾವುದೆ ಪುಸ್ತಕವನ್ನಾದರೂ ಉಚಿತವಾಗಿ ಓದಬಹುದು ಅನ್ನುವ ಪುಟ್ಟರಾಜಣ್ಣನ ಮಾಹಿತಿಯ ಬೆನ್ನು ಹಿಡಿದು ಹೋಗಿ ಅಲ್ಲಿ ಧೂಳು ತುಂಬಿದ್ದ ಅರೆಗಳಲ್ಲಿ ಹುಳ ತಿನ್ನಲು ತಯಾರಾಗಿದ್ದ ಅನೇಕ ಪುಸ್ತಕಗಳ ಮೇಲಿದ್ದ ಧೂಳಿನ ಪರದೆ ಸರಿಸಿ ಅರ್ಥವಾದಷ್ಟು ಓದಲು ಪ್ರಯತ್ನಿಸಿದ. ಆದರೆ ನಿಗದಿ ಪಡಿಸಿದ ಹೊತ್ತಲ್ಲಲ್ಲದೆ ಮನಸೋ ಇಚ್ಛೆ ನುಗ್ಗಲು ಅವಕಾಶವಿರದಿದ್ದ ಗ್ರಂಥಾಲಯ ಅವನಿಗೆ ಒಂಥರಾ ಪುಸ್ತಕಗಳ ಸೆರೆಮನೆ ಅನ್ನಿಸಿ ಕ್ರಮೇಣ ಅಲ್ಲಿಗೆ ಠಳಾಯಿಸುವ ಅಭ್ಯಾಸವನ್ನ ಕಡಿಮೆ ಮಾಡಿದ.

*****

ಬಪಮನ ಸೊಸೆ ಸೀತಮ್ಮ ಅಡುಗೆಯಲ್ಲಿ ಗಟ್ಟಿಗಿತ್ತಿ. ಸಾರಸ್ವತರ ಸಕಲೆಂಟು ಪಾಕಪ್ರಾವೀಣ್ಯತೆ ಇದ್ದವರು. ಆದರೆ ಅವರ ಅಡುಗೆಯಲ್ಲಿ ಬಳಸುವ ವಸ್ತುಗಳ ಕಳಪೆ ಗುಣಮಟ್ಟ ಮಾತ್ರ ಅದರ ರುಚಿ ಕೆಡಿಸಿ ಉಣ್ಣುವವರ ಬಾಯಿರುಚಿ ಕೆಡಿಸಿ ಹೊಟ್ಟೆಯ ಪರಿಸ್ಥಿತಿಯನ್ನ ಹಳ್ಳ ಹಿಡಿಸುತ್ತಿತ್ತು. ಅಡಿಗಡಿಗೆ ಅವರ ಅಂಗಳಕ್ಕೆ ದಾಂಗುಡಿಯಿಡಲು ಪುಸ್ತಕ - ಪತ್ರಿಕೆಗಳನ್ನ ಹೊರತುಪಡಿಸಿ ಅವನಿಗಿದ್ದ ಮತ್ತೊಂದು ಆಕರ್ಷಣೆ ಸೀತಮ್ಮ ನೆಟ್ಟು ಬೆಳೆಸಿದ್ದ ಎರಡು ಅಮಟೆಕಾಯಿ ಮರಗಳು ಹಾಗೂ ಒಂದು ರತ್ನಗಂಧಿ ಗಿಡ. ಹುಳಿಹುಳಿಯಾದ ಅಮಟೆ ದಂಟು ಹಾಗೂ ಕಾಯಿ ತಿನ್ನುವ ಚಪಲವಿದ್ದ ಅವನಿಗೆ ರತ್ನಗಂಧಿಯ ಎಳೆಬೀಜಗಳು ಸಹ ರುಚಿ ಅನ್ನಿಸುತ್ತಿದ್ದವು. ಕಿತ್ತು ತಿಂದ ತಪ್ಪಿಗೆ ಬಹಳಷ್ಟು ಸಲ ಚೊರೆಪಟ್ ಸೀತಮ್ಮನ ಬೈಗುಳಗಳಿಗೆ ಬಲಿಯಾಗಿದ್ದರೂ ಅಭ್ಯಾಸ ಮಾತ್ರ ಬಿಟ್ಟಿರಲಿಲ್ಲ.

ತಾವು ಮಾಡುವ ಸಕಲೆಂಟು ಅಡುಗೆಗಳಿಗೂ ಹುಳಿ ಹಾಕಬೇಕಿದ್ದಲ್ಲಿ ಬಹುಪಾಲು ಅಮಟೆ ಕಾಯಿ ಜಜ್ಜಿ ಹಾಕಿಯೆ ಸುಧಾರಿಸುತ್ತಿದ್ದ ಸೀತಮ್ಮ ಹುಣಸೆ ಹಣ್ಣುˌ ಬಿಂಬುಳಿˌ ದಾರೆ ಪುಳಿˌ ಬಿರ್ಕನ ಹುಳಿ ಇವುಗಳನ್ನ ಹಾಕಬೇಕಿರುತ್ತಿದ್ದ ಖಾದ್ಯಗಳ ರುಚಿ ಕೆಡಿಸುತ್ತಿದ್ದರು.

( ಇನ್ನೂ ಇದೆ.)


https://youtu.be/dGfi4NXsdkk

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೫.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೫.👊


ಅದೆಷ್ಟೆ ನಿಪುಣರಾಗಿದ್ದರೂ ಸಹ ಸೀತಮ್ಮನ ಪಾಕಶಾಸ್ತ್ರ ಪ್ರಾವೀಣ್ಯತೆಯನ್ನ ಅವರ ಕೈಯಡುಗೆ ಉಂಡವರೆಲ್ಲ ತಾತ್ಸಾರದಿಂದ ನೋಡಿ ಅದರ ಮರುದಾಳಿಯಿಂದ ತಪ್ಪಿಸಿಕೊಳ್ಳಲು ಹವಣಿಸುವಂತಾಗಲು ಸ್ವಲ್ಪ ಮಟ್ಟಿಗೆ ಪಟ್ಚಣದ ಗಣಪತಿ ಕಟ್ಟೆಯ ಕಲ್ಲಾರೆ ಗಣಪತಿಯೂ ಕೂಡಾ ಕಾರಣನಾಗಿದ್ದ ಅನ್ನಬಹುದೇನೋ!. ಇಂದು ಪ್ರಸಾದಪುರದ ಅಂಬಾನಿಯ ರಾಷ್ಟ್ರೀಯ ಮೊಹರಿನ ಬಂಗಾರದಂಗಡಿ ಇರುವಲ್ಲೆ ಆ ಕಾಲದಲ್ಲಿ ಸೀತಮ್ಮನ ಮಾವ ಅಂದರೆ ಬಪಮನ ಗಂಡ ಶ್ರೀನಿವಾಸ ಶಣೈಗಳಿಟ್ಟಿದ್ದ ಹೊಟೇಲ್ ಇತ್ತಂತೆ. ಅದರ ಎಡ ಮಗ್ಗಲಿನಲ್ಲಿ ಇದ್ದದ್ದೆ ಈ ಕಲ್ಲಾರೆ ಗಣಪತಿ ಕಟ್ಟೆ. ಬಹುಶಃ ಅದೆ ಕಾರಣದಿಂದಿರಬಹುದುˌ ಅವರ ಕುಟುಂಬವೂ ಸಹ ದೇವರ ಧರ್ಮದರ್ಶಿ ಮಂಡಳಿಯ ಸದಸ್ಯರಲ್ಲೊಬ್ಬರಾಗಿದ್ದರು. 


ಮೊದಲೆಲ್ಲಾ ಅತ್ಯಂತ ಸರಳವಾಗಿದ್ದ ಕೇವಲ ಬಯಲು ಗಣಪತಿ ಕಟ್ಟೆ ಬರುಬರುತ್ತಾ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆ ಮೊದಲಿಗೆ ಪುಟ್ಟ ಗುಡಿಯಾಗಿ ಬದಲಾದದ್ದು ಕ್ರಮೇಣ ದೊಡ್ಡ ದೇವಸ್ಥಾನದ ರೂಪಾಂತರದ ಅವತಾರವೆತ್ತಿದ್ದನ್ನ ಸ್ವತಃ ಅವನೆ ಸಾಕ್ಷಿಯಾಗಿ ಕಂಡಿದ್ದಾನೆ. ಮೊದಲಿಗೆ ತಂತ್ರಿಗಳಿಂದ ಪೂಜಿಸಲ್ಪಡುತ್ತಿದ್ದ ಗಣಪತಿಯನ್ನ ಪೂಜಿಸುವ ಹಕ್ಕು ತಂತ್ರಿಗಳು ತೀರಿ ಹೋದ ಮೇಲೆ ಅವರ ಮಗ ಲಕ್ಷ್ಮೀಶನಿಗೆ ಬಂದಿದೆ. ಈ ಲಕ್ಷ್ಮೀಶ ಇವನ ಶಾಲೆಯ ಹಿರಿಯ ಸಹಪಾಠಿಯಾಗಿದ್ದವ. 


ಧರ್ಮದರ್ಶಿಯಾಗಿದ್ದವರ ಮನೆಗಳಿಗೆ ಅದೆ ಕಾರಣದಿಂದ ಹರಕೆಯ ಹೆಸರಲ್ಲಿ ಸಲ್ಲುತ್ತಿದ್ದ ಅಸಂಖ್ಯ ತೆಂಗಿನಕಾಯಿಗಳನ್ನ ಒಡೆದು ದೇವರಿಗೆ ನೈವೇದ್ಯ ಮಾಡಿಯಾದ ಮೇಲೆ ಹಂಚುವುದಿತ್ತು. ಆದರೆ ಬೆಳಗ್ಯೆ ಒಡೆದು ಅಷ್ಟೇನೂ ಶುಭ್ರವಲ್ಲದ ವಾತಾವರಣದಲ್ಲಿ ರಾಶಿ ಹಾಕಿರಲಾಗುತ್ತಿದ್ದ ಆ ಒಡೆದ ತೆಂಗಿನಕಾಯಿಗಳು ದೇವಸ್ಥಾನ ಊರ ಮಧ್ಯದಲ್ಲಿದ್ದ ಕಾರಣ ಓಡಾಡುವ ವಾಹನಗಳು ಎಬ್ಬಿಸುವ ಧೂಳು ಹಾಗೂ ಉಗುಳುವ ಹೊಗೆ ಇವುಗಳಿಂದೆಲ್ಲಾ ಆವೃತವಾಗಿ ಒಂದು ಮಟ್ಟಿಗೆ ತನ್ನ ಮೂಲ ಸ್ವರೂಪವನ್ನೆ ಕಳೆದುಕೊಂಡು ಜೊತೆಗೆ ವಾತಾವರಣದ ಸೆಕೆಗೂ ಸ್ಪಂದಿಸುತ್ತಾ ಕೆಡಲು ಆರಂಭವಾಗಿರುತ್ತಿತ್ತು. ಅಂತಹ ತೆಂಗಿನಕಾಯಿಗಳ ಮೂಟೆ ಮನೆಗೆ ಬಂದದ್ದೆ ಮರಿಗೆ ನೀರಲ್ಲದನ್ನ ತೊಳೆದು ಹಗಲಲ್ಲಿ ಅವುಗಳನ್ನ ಒಣಗಲೊಂದು ಚಾಪೆಯ ಮೇಲೆ ಅಂಗಳದಲ್ಲಿ ಹರಡುತ್ತಿದ್ದ ಸೀತಮ್ಮ ಬೆಕ್ಕುˌ ಕಾಗೆˌ ಗುಬ್ಬಿ ಅದನ್ನ ಎಗರಿಸಿಕೊಂಡು ಹೋಗದಿರುವಂತೆ ಮಾಡಲು ಒಂದು ನೈಲಾನ್ ಬಲೆಯನ್ನ ಅದರ ಮೇಲೆ ಹಾಕಿ ಬಿಡುತ್ತಿದ್ದರು.


ವರ್ಷಕ್ಕಾರು ತಿಂಗಳು ಮಳೆ ಸುರಿಯುವˌ ಇನ್ನಾರು ತಿಂಗಳಲ್ಲಿ ಮಂಕು ಬಿಸಿಲಿರುವ ಚಳಿಗಾಲದ ಪಾರುಪತ್ಯವಿರುವ ಪ್ರಸಾದಪುರದಂತಹ ಗಿರಿಸೀಮೆಯ ಊರಲ್ಲಿ ಮೊದಲೆ ಅರೆಬರೆ ಕೊಳೆತಿರುತ್ತಿದ್ದ ಆ ಗಣಪತಿಗೆ ಒಡೆದಿರುತ್ತಿದ್ದ ಕಾಯಿಗಳು ಸರಿಯಾಗಿ ಒಣಗೋದು ಅಷ್ಟರಲ್ಲೆ ಇರುತ್ತಿತ್ತು. ಸಹಜವಾಗಿ ಬೂಸ್ಟು ಹಿಡಿದು ಶಿಲೀಂದ್ರ ಬೆಳೆದು ಕಪ್ಪಾಗುತ್ತಿದ್ದ ಆ ಕಾಯಿಗಳನ್ನೆ ತುರಿದು ಹಾಕಿ ವಿವಿಧ ಅಡುಗೆ ಮಾಡುತ್ತಿದ್ದ ಸೀತಮ್ಮ ಒಟ್ಟಿನಲ್ಲಿ ಸ್ವಾದಿಷ್ಟವಾಗಿರಬಹುದಾಗಿದ್ದ ದೂರದ ಸಾಧ್ಯತೆಯಿರುತ್ತಿದ್ದ ತಮ್ಮ ಕೈಯಡುಗೆಯ ರುಚಿಯನ್ನ ತನ್ನ ಕೈಯಾರೆ ತಾನೆ ಕೆಡಿಸಿ ಹಾಳುಗೆಡವುತ್ತಿದ್ದರು. ಅವರ ಮನೆಯವರಿಗೆ ಈ ಭಯಂಕರ ಅಡುಗೆಯನ್ನ ಉಣ್ಣಬೇಕಾದ ದುಸ್ಥಿತಿ ಅನಿವಾರ್ಯವಾಗಿರುತ್ತಿತ್ತು.


ಸ್ವಲ್ಪ ದೊಡ್ಡ ಮನಸ್ಸು ಮಾಡಿ ಈ ಪಿಟ್ಟಾಸಿ ಸೀತಮ್ಮ ಹೀಗೆ ಅಳತೆ ಮೀರಿ ಪುಕ್ಕಟೆಯಾಗಿ ತಮ್ಮ ಮನೆಯನ್ನ ಹುಡುಕಿಕೊಂಡು ಬರುತ್ತಿದ್ದ ಲೋಡುಗಟ್ಟಲೆ ತೆಂಗಿನಕಾಯಿಗಳನ್ನ ಅಕ್ಕಪಕ್ಕದವರೊಂದಿಗೆ ಆದಷ್ಟು ಹಂಚಿ ತಿನ್ನುತ್ತಿದ್ದರೆ ಬಹುಶಃ ತಮ್ಮ ಮನೆಯವರ ಹೊಟ್ಟೆಯನ್ನೂ ಕೆಡಿಸದೆˌ ಚೂರುಪಾರು ನೆರೆಕರೆಯವರ ದಿನಸಿಯ ಖರ್ಚನ್ನೂ ಕಡಿಮೆ ಮಾಡಿದ ಪುಣ್ಯ ಕಟ್ಟಿಕೊಂಡು ಒಂದೆ ಏಟಿಗೆ ಎರಡು ಹಕ್ಕಿಯನ್ನ ಹೊಡೆಯುವ ಜಾಣೆಯಾಗಬಹುದಿತ್ತು. 


ಆದರೆ ಕಡೆಯವರೆಗೂˌ ಇರುವ ಮೂರು ಮಂದಿಗೆ ಅಷ್ಟು ಕಾಯಿ ಬೇಕೆ? ಅನ್ನುವ ವಿವೇಕ ಮೂಡಿಸದ ಅವರ ಜನ್ಮಜಾತ ಜುಗ್ಗ ಸ್ವಭಾವ ಅವರನ್ನ ಔದಾರ್ಯ ತೋರದಂತೆ ತಡೆಯುತ್ತಿತ್ತಷ್ಟೆ ಅಲ್ಲದೆ ಅವರದ್ದೆ ಕೈಯಡುಗೆ ತಿನ್ನುವ ಅನಿವಾರ್ಯತೆಯಿರುತ್ತಿದ್ದ ಅವರ ಮನೆಮಂದಿಯ ನಾಲಗೆಯ ರುಚಿಮೊಗ್ಗುಗಳ ಕತ್ತು ಹಿಸುಕಿ ಕೊಂದು ಜೀರ್ಣಾಂಗಗಳ ಪರಿಸ್ಥಿತಿಯನ್ನ ಚಿಂತಾಜನಕವಾಗಿಸಿತ್ತು. ತೆಂಗಿನ ಹಂಗಿಲ್ಲದ ಸಾರಸ್ವತರ ಟ್ರೇಡ್ ಮಾರ್ಕ್ 'ದಾಳಿ ತೊವ್ವೆ'ಯ ಹೊರತು ಸೀತಮ್ಮನ ಚಾಕಚಾಕ್ಯತೆಯಿಂದ ತಯಾರಾಗುತ್ತಿದ್ದ ಉಳಿದೆಲ್ಲಾ ಕಾಯಿ ಬೇಡುವ ಪಾಕ ವೈವಿಧ್ಯಗಳೂ ಸಹ ಕೊಳೆತˌ ಬೂಷ್ಟು ಹಿಡಿದ ಗಣಪತಿಯ ಹರಕೆಗೆ ಸಂದ ತೆಂಗಿನಕಾಯಿಯ ಕೃಪೆಯಿಂದ ಕಷ್ಟಪಟ್ಟು ನುಂಗುವ ಖಾದ್ಯಗಳಾಗಿ ರೂಪಾಂತರವಾಗುತ್ತಿದ್ದವು.  ಹೀಗಾಗಿಯೆ ಬಪಮ ಸೀತಮ್ಮನ ಕೈಯಡುಗೆಗಿಂತ ಮತ್ತೊಬ್ಬ ಸೊಸೆ ವಿಮಲಮ್ಮನ ಕೈಯಡುಗೆಯನ್ನ ಮೆಚ್ಚುತ್ತಿದ್ದರು.


*****


ಇದಲ್ಲದೆ ಅವರಿದ್ದ ಬೀದಿಯಲ್ಲಿ ಸೀತಮ್ಮನ ಬಗ್ಗೆ ಮತ್ತೊಂದು ವಿಚಿತ್ರ ವದಂತಿ ಹೆಂಗಸರ ವಲಯದಲ್ಲಿ ಹರಡಿತ್ತು. ವಿಜಯೇಂದ್ರಣ್ಣ ಬಸ್ ಬುಕ್ಕಿಂಗ್ ಏಜೆಂಟಾಗಿರುವುದರ ಜೊತೆಜೊತೆಗೆ ಲಾಟರಿ ಏಜೆಂಟರೂ ಆಗಿದ್ದರಲ್ಲ? ಆಗ ಚಾಲ್ತಿಯಲ್ಲಿದ್ದ ಕರ್ನಾಟಕ ರಾಜ್ಯ ಲಾಟರಿಯ ಮೈಸೂರು ಲಕ್ಷ್ಮಿಯಿಂದ ಹಿಡಿದು ಒಂದಂಕಿ ಲಾಟರಿ ಟಿಕೇಟುಗಳವರೆಗೂ ಅವರ ಬಸ್ ನಿಲ್ದಾಣದ ಕೌಂಟರಿನಲ್ಲಿ ಮಾರಾಟ ಮಾಡುತ್ತಿದ್ದರು. ಅವುಗಳಲ್ಲಿ ಕನಿಷ್ಠ ಬೆಲೆಯ ಒಂದಂಕಿ ಲಾಟರಿಯ ವ್ಯಾಪಾರವಾಗದೆ ಅಳಿದುಳಿದ ಕಟ್ಟುಗಳನ್ನ ಸೀತಮ್ಮನ ನೇತೃತ್ವದಲ್ಲಿ ಬೀದಿಯಲ್ಲಿದ್ದ ನೆರೆಕರೆಯ ಇತರ ಹೆಂಗಸರೆಲ್ಲರೂ ಚಂದಾ ಹಾಕಿ ಒಟ್ಟುಗೂಡಿಸಿದ ಹಣದಲ್ಲಿ ಕೊಂಡು ತಮ್ಮೆಲ್ಲರ ಸಾಮೂಹಿಕ ಅದೃಷ್ಟ ಪರೀಕ್ಷೆಗಿಳಿಯುವುದಿತ್ತು. 


ಆಗೆಲ್ಲ ಕರಾವು ಸಾಕುತ್ತಿದ್ದ ಸೀತಮ್ಮ ಹಾಲು ಕರೆಯುವಾಗ ತಪ್ಪಿ ದನ-ಎಮ್ಮೆಯಿಂದ ಒದಿಸಿಕೊಂಡು ಬಿದ್ದರೆ ಅಥವಾ ಒಂದಿಂಚು ಪಾಚಿಗಟ್ಟಿರುತ್ತಿದ್ದ ಕೊಟ್ಟಿಗೆಯ ಕಲ್ಲುಹಾಸಿನ ನೆಲದ ಮೇಲೆ ಕಾಲಿಟ್ಟು ಅವರೇನಾದರೂ ಜಾರಿ ಬಿದ್ದು ಸೊಂಟದ ಕೀಲು ಸಡಿಲವಾಗಿಸಿಕೊಂಡರೆˌ ಕುಡಿಯಲು ಕುದಿಸಿಟ್ಟ ನೀರಿನ ಪಾತ್ರೆ ಕೈ ಪಾತ್ರೆಗೆ ಸುರಿಯವ ಸರ್ಕಸ್ಸಿನಲ್ಲಿ ಪರಮೋಷ ಜಾರಿ ಅವರ ಕಾಲ ಮೇಲೆ ಬಿದ್ದು ಬೊಬ್ಬೆಗಳೆದ್ದರೆˌ ಸ್ನಾನದ ಕೋಣೆಯಲ್ಲಿದ್ದ ವಿದ್ಯುತ್ ಬಾಯ್ಲರಿನ ಸುಡುಸುಡು ಮುಚ್ಚಳ ಮೀಯುವಾಗ ಕೂರಲಿಟ್ಟಿದ್ದ ಮರದ ಕುರ್ಚಿಯ ಮೇಲಿಟ್ಟದನ್ನ ಮರೆತು ಸ್ನಾನಕ್ಕೆ ಹೋದವರೆ ಅದರ ಮೇಲೆ ಏಕಾಏಕಿ ಕೂತು ತನ್ನ ಅಂಡು ಸುಟ್ಟುಕೊಂಡರೆˌ ಅವರ ಕಾಲ ಸಂದಿಯಲ್ಲಿ ಉದ್ದಿನ ಕಾಳಿನಷ್ಟು ದೊಡ್ಡ ಮೊಳಕೆ ಬಂದು ಕೀವು ಕಟ್ಟಿಕೊಂಡು ವಾರವಿಡಿ ವಿಪರೀತ ಕಾಟ ಕೊಡುತ್ತಿದ್ದ ಅಡಿಕೆ ಗಾತ್ರದ ಕುರ ಎದ್ದು ಅವರು ನರಳಾಡುತ್ತಿದ್ದರೆ - ಅಂತಹ ಹೊತ್ತಲ್ಲಿ ಎಲ್ಲಾ ಮಹಿಳಾಮಣಿಗಳು ಅವರ ನೇತೃತ್ವದಲ್ಲಿ ಕೊಂಡ ಟಿಕೇಟುಗಳಿಗೆ ಬಹುಮಾನ ಕಾಕತಾಳೀಯವಾಗಿ ಒಲಿದು ಬರುತ್ತಿತ್ತು! 


ಒಂದೊಮ್ಮೆ ಅಂತದ್ದೇನೂ ಆಗಿರದೆ ಸೀತಮ್ಮ ಫಲಿತಾಂಶ ಬರುವಂದು ಸ್ವಸ್ಥವಾಗಿದ್ದರೆ ಮಾತ್ರ ಅವರೆಲ್ಲರ ಬಂಡವಾಳದ ಆರೋ ಮೂರೋ ಕಾಸು ಮುಳುಗಿ ಹೋಗುತ್ತಿತ್ತು. ಹೀಗಾಗಿ ಅವರ ಈ ಲಾಟರಿ ಬಳಗದ ಷೇರುದಾರರೆಲ್ಲಾ ಬಹುಮಾನದ ಫಲಿತಾಂಶ ಬರಬೇಕಿರುತ್ತಿದ್ದ ದಿನ ಇನ್ಯಾವುದೆ ಬೇರೆ ದುರುದ್ದೇಶವಿಲ್ಲದೆ ಸೀತಮ್ಮನ ಥರೇವಾರಿ ಅನಾರೋಗ್ಯಕ್ಕಾಗಿ ಒಳಗೊಳಗೆ ಮನಸಾರೆ ಹಾರೈಸಿ ಬೇಡಿಕೊಳ್ಳುತ್ತಲೆ ದೇವರಿಗೆ ದೀಪ ಹಚ್ಚುತ್ತಿದ್ದರು! ಅವರಿಗೆಲ್ಲ ಅಷ್ಟು ಖಚಿತ ಭರವಸೆ ಆ ಭಯಂಕರ ಶಕುನದ ಬಗ್ಗೆ?!


ಒಟ್ಟಿನಲ್ಲಿ ಇಂತಹ ಹಲವಾರು ಅನಿರೀಕ್ಷತ ಎಡವಟ್ಟುಗಳ ಏಕಮಾತ್ರ ವಿಳಾಸವಾಗಿದ್ದ ಸೀತಮ್ಮ ಅತ್ತೆ-ಗಂಡ-ಮಕ್ಕಳು-ನೆರೆಕರೆಯ ಅವನಂತಹ ಕಪಿಗಳು ಎಲ್ಲರ ಮೇಲೂ ನಿರಂತರ ಪಿರಿಪಿರಿ ಮಾಡಿಕೊಂಡು ಆ ಬೀದಿಯ ಜೀವಂತಿಕೆಯ ಅವಿಭಾಜ್ಯ ಅಂಗಗಳಲ್ಲೊಬ್ಬರಾಗಿ ಹೇಗೋ ತಮ್ಮ ಗೃಹಿಣಿ ಜೀವನವನ್ನ ಮುನ್ನಡೆಸುತ್ತಿದ್ದರು.


( ಇನ್ನೂ ಇದೆ.)



https://youtu.be/0A_WVakkM90

12 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೩.👊಼

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೩.👊


ಪ್ರತಿಬಾರಿಯೂ ಅಂತಹ ವಿಷಮ ಸಂದರ್ಭಗಳು ಎದುರಾದಾಗಲೆಲ್ಲಾ ಅವನಿಂದ ಇಷ್ಟು ನೇರ ನುಡಿ ನಡೆ ನಿರೀಕ್ಷಿಸಿರದ ಅಂತಹ  ಅನ್ಯಾಯಕೋರರು ಒಂದರೆ ಕ್ಷಣ ಅವನ ನೋಟ ಎದುರಿಸಲಾಗದೆ ತಲೆ ತಗ್ಗಿಸುತ್ತಿದ್ದರು. ಬಹಳ ಸಲ ಹಾಗೆ ತಲೆ ತಗ್ಗುತ್ತಿದ್ದುದು ಅವರೊಳಗೆ ಹುಟ್ಟುವ ಪಶ್ಚಾತಾಪದಿಂದಾಗಿರದೆ ಕೇವಲ ಆ ಕ್ಷಣಕ್ಕಾಗುತ್ತಿದ್ದ ಅಪಮಾನದಿಂದ ಮಾತ್ರ ಅನ್ನುವ ಅರಿವು ಅವನಿಗೂ ಇದೆ. ಅಂತಹ ಭಂಡರಿಂದ ಸುಧಾರಣೆಯನ್ನು ನಿರೀಕ್ಷಿಸುವುದೆ ಮೂರ್ಖತನ. ಬದಲಿಗೆ ಅಂತಹ ದುರಾತ್ಮರು ಮತ್ತಷ್ಟು ದ್ವೇಷ ಸಾಧಿಸುತ್ತಾ ಮುಂದಿಂದ ಮಾತನಾಡುವ ನೈತಿಕತೆ ಕಳೆದುಕೊಂಡುˌ ಕಂಡವರ ಮುಂದೆಲ್ಲಾ ಅವನನ್ನ ಬೆನ್ನ ಹಿಂದಿನಿಂದ ಬಾಯಿಗೆ ಬಂದಂತೆ ಆಡಿಕೊಂಡು ಇಲ್ಲಸಲ್ಲದ ವದಂತಿಯನ್ನ ಅವನ ಬಗ್ಗೆ ಹಬ್ಬಿಸಿ ತಮಗಾದ ಅವಮಾನಕ್ಕೆ ಪ್ರತಿಕಾರ ತೀರಿಸಿಕೊಂಡ ವಿಕೃತಿಯಲ್ಲಿ ಬೀಗುತ್ತಿದ್ದುದೂ ಇದೆ.

ತಾವು ಬೇರೆಯವರಿಗೆ ಅಂದ ಮಾತುಗಳನ್ನ ಇನ್ಯಾರಾದರೂ ತಮಗೆ ತಿರುಗಿ ಅಂದಾಗ ಮಾತ್ರ ಉರಿದು ಬೀಳುವ ಅಂತಹ ಅವಿವೇಕಿಗಳಿಗೆˌ ಈ ನುಡಿಗಳು ನಮ್ಮನ್ನ ನೋಯಿಸುವುದು ನಿಜವಾದರೆˌ ತಮ್ಮಿಂದ ಅನಿಸಿಕೊಂಡವರಿಗೆಷ್ಟು ವೇದನೆಯಾಗಿರಲಿಕ್ಕಿಲ್ಲ ಅನ್ನುವ ಅಂದಾಜಾಗದಿರುವುದು ಮಾತ್ರ ವಿಪರ್ಯಾಸ. ಆ ವಿಷಯದಲ್ಲಿ ಅಂತಹ ನೀಚ ಮನಸ್ಥಿತಿಯ ದುರುಳರು ಪರಮ ಆಶಾಡಭೂತಿಗಳೂ ಆಗಿರೋದನ್ನ ಅವನು ಕಂಡಿದ್ದಾನೆ.

ಕೆಲವೊಮ್ಮೆ ಅತಿ ವೇಗವಾಗಿ ಬೇಗ ಊರೆಲ್ಲ ಸುತ್ತುವ ಅಂತಹ ವದಂತಿಗಳು ನೂರೆಂಟು ಕಿವಿ ಬಾಯಿಗಳನ್ನೆಲ್ಲಾ ದಾಟಿ ಸುಸ್ತಾಗಿ ಕಡೆಗೆ ಸುಧಾರಿಸಿಕೊಳ್ಳಲು ಇವನ ಎದುರಿಗೆ ಬಂದು ಕುಕ್ಕರಗಾಲಲ್ಲಿ ಕೂರುವುದೂ ಇತ್ತು. ಮೊದಮೊದಲು ತನ್ನ ಬಗ್ಗೆ ಹಬ್ಬುವ ಅಂತಹ ಅಂಡೆಪಿರ್ಕಿ ವದಂತಿ ಮೂಲ ಕೆದಕಿˌ ಅದ್ಯಾವ ವಿಕಾರಿಗಳ ಮಂಡೆಯಿಂದ ಹುಟ್ಟಿದ ವಿಕೃತಿ ಅನ್ನೋದನ್ನ ಖಚಿತ ಪಡಿಸಿಕೊಳ್ಳುವ ಉಮೇದು ಉಳಿಸಿಕೊಂಡಿರುತ್ತಿದ್ದ ಅವನು ಈ ನಡುವೆ ಅದರಲ್ಲೂ ಆಸಕ್ತಿ ಕಳೆದುಕೊಂಡಿದ್ದಾನೆ. ಅಂತಹ ಮಾನವ ರೂಪದಲ್ಲಿರುವ ವಿಷಜಂತುಗಳ ಕೊಳೆತ ಮನಸ್ಥಿತಿಗೆ ಮದ್ದಿರೋದಿಲ್ಲ. ಹೀಗಾಗಿ ಹೇಳೋದನ್ನ ಹೇಳಿಯಾದ ಮೇಲೆ ಅದೇನಾದರೂ ಮಾಡಿಕೊಂಡು ಸಾಯಲಿ ಬಿಡು ಅಂದುಕೊಂಡು ನಿರ್ಲಕ್ಷ್ಯಿಸುತ್ತಿದ್ದ.

ತಮ್ಮ ನೀಚ ನಡತೆಯನ್ನ ಮರೆಯದೆ ಬಹುಕಾಲದ ನಂತರ ಅವನೆಸೆಯುವ ಮಾತಿನ ಕೊರಂಬುಗಳಿಂದ ಚುಚ್ಚಿಸಿಕೊಂಡ ಅನಂತರ ಅವರಲ್ಲಿ ಅನೇಕರು ಇರುಸುಮುರುಸಾಗಿ ಅವನ ಸಂಪರ್ಕವನ್ನೆ ಕಡಿದುಕೊಳ್ಳೋದೂ ಸಹ ಇತ್ತು. ಆದರೆ ಹೇಳುವುದನ್ನ ಒಂದು ಸಲ ಹೇಳಿ ಮುಗಿಸಿದ ನಂತರ ಅವನ ಮನದಲ್ಲಿ ಯಾವ ಹುಳಿಯೂ ಅವರ ಬಗ್ಗೆ ಉಳಿದಿರುತ್ತಿರಲಿಲ್ಲ. ಆ ಘಟನೆಯ ನಂತರ ಅವನವರ ಜೊತೆಗೆ ಸಹಜವಾಗಿಯೆ ವರ್ತಿಸುತ್ತಿದ್ದ. ಹಾಗೆಲ್ಲಾ ಆದ ನಂತರವೂ ಹಿಂದಿನ ತಮ್ಮ ತಪ್ಪುಗಳಿಗೆ ಮರುಗಿ ಪಶ್ಚಾತಾಪ ಪಡುತ್ತಿದ್ದವರೂ ಇಲ್ಲ ಅಂತೇನಿಲ್ಲ. ಆದರೆ ಅಂತವರ ಸಂಖ್ಯೆ ಮಾತ್ರ ತುಂಬಾ ಕಡಿಮೆ ಅನ್ನೋದು ಅವನಿಗೆ ಅನುಭವ ವೇದ್ಯ.

ಅವನ ಪ್ರಕಾರ ತಪ್ಪು ಮಾಡೋದು ಮನುಷ್ಯ ಜನ್ಮಕ್ಕೆ ಸಹಜವಾದ ನಡೆ. ಗೊತ್ತಿದ್ದು ಮಾಡಿದರಷ್ಟೆ ಅಲ್ಲˌ ಗೊತ್ತಿಲ್ಲದಂತೆ ಮಾಡಿದರೂ ಸಹ ಅದು ತಪ್ಪೆ. ಹಾಗಂತˌ ಅದೇನು ಮಹಾ ಅಪರಾಧವಲ್ಲ. ಆದರೆ ಮಾಡಿದ ತಪ್ಪನ್ನು ತಿದ್ದಿಕೊಳ್ಳದೆ ತನ್ನ ಮೊಂಡುತನವನ್ನ ಸಾಧಿಸೋದು ಮಾತ್ರ ಘನಪರಾಧ ಅಷ್ಟೆ ಅಲ್ಲ ಘಾತುಕತನ. ಆದ ತಪ್ಪನ್ನ ತಿದ್ದಿಕೊಳ್ಳಲು ಮೊದಲದನ್ನ ಒಪ್ಪಿಕೊಳ್ಳಬೇಕಿರುತ್ತೆ. ಅದು ಧೀಮಂತಿಕೆಯ ಲಕ್ಷಣ. ಅದಿರುವವರೆ ನಿಜವಾಗಲೂ ದೊಡ್ಡವರು ಅನ್ನೋದು ಅವನ ನಿಲುವು.

ಹಾಗಂತ ಅದೆಷ್ಟೆ ಸ್ಥಿತಪ್ರಜ್ಞತೆಯಿಂದಿರಲು ಪ್ರಯತ್ನಿಸಿದರೂನು ಅವನಲ್ಲೂ ಒಂದು ಅಳಿಸಲಾಗದ ವಿಕೃತಿ ಅವನ ಪ್ರಯತ್ನ ಮೀರಿ ಉಳಿದಿದೆ. ಬಿಳಿ ಚರ್ಮದ ಪಾಶ್ಚಿಮಾತ್ಯರನ್ನˌ ಅದರಲ್ಲೂ ಬ್ರಿಟಿಷರುˌ ಫ್ರೆಂಚರುˌ ಡಚ್ಚರುˌ ಪೋರ್ತಗೀಜರು ಹಾಗೂ ಅಮೇರಿಕಾದವರನ್ನ ಅವಕಾಶ ಸಿಕ್ಕಾಗಲೆಲ್ಲ ಸಹಾಯ  ಬೇಕಿದ್ದಲ್ಲಿ ಮಾಡಿˌ ಆಮೇಲೆ ಅವರಲ್ಲಿ ಅವರ ಪೂರ್ವಜರ ಕೊಳ್ಳೆ ಹೊಡೆಯುವ ಕಳ್ಳ ಮನಸ್ಥಿತಿಯನ್ನ ಪರಿಪರಿಯಾಗಿ ವಿವರಿಸಿ ಹೇಳಿ ಅವರೊಳಗೆ ತಮ್ಮ ಜನಾಂಗದ ಬಗ್ಗೆಯೆ ಕೀಳರಿಮೆ ಮೂಡಿಸುವುದೆಂದರೆ ಅವನಿಗೆ ಒಂಥರಾ ಇಷ್ಟದ ಕೆಲಸ. ಆ ವಿಷಯದಲ್ಲಿ ಅವನೂ ವರ್ಣತಾರತಮ್ಯ ನಿಪುಣ. ಅದರಲ್ಲೂ ಅವರ ನೆಲದಲ್ಲೆ ಅವರನ್ನ ಹಳಿದು ಖುಷಿ ಪಡುವುದರಲ್ಲಿ ಸದಾ ಅವನು ಮುಂದೆ. ವಸಾಹತು ಕಾಲದ ಕೊಳ್ಳೆ-ಹಿಂಸೆˌ ತನ್ನ ಹಿರಿಯರನ್ನ ಅವರು ಅದೆ ವರ್ಣತಾರತಮ್ಯದಿಂದ ಹೀಯ್ಯಾಳಿಸಿ ಹೀನವಾಗಿ ನಡೆಸಿಕೊಂಡದ್ದಕ್ಕೆ ಅವರನ್ನೂ ತಾನು ಹೀಗೆಯೆ ನಡೆಸಿಕೊಳ್ಳೋದು ನ್ಯಾಯ ಅನ್ನೋದು ಅವನ ವಾದ.

ಎರ್ರಿಕ್ಕನಿಗೆ ಮಾಡಿದ ಸಹಾಯದಲ್ಲೂ ವಾಸ್ತವದಲ್ಲಿ ಅವನನ್ನ ಪ್ರೇರೇಪಿಸಿದ್ದು ಅಂತಹ ಸುಪ್ತ ವಿಕೃತಿಯ ಒತ್ತಡವೆ. ಕೇವಲ ಬಿಳಿಯರಷ್ಟೆ ಅಲ್ಲದೆ ಅವರನ್ನ ದೊಂಬರಂತೆ ನಡೆ ನುಡಿಯಲ್ಲಿ ಕೆಟ್ಟ ನಕಲು ಹೊಡೆಯುವ ಕರಿ ಚರ್ಮದ "ಸೂಡೋ ಬಿಳಿಯ"ರ ಬಗ್ಗೆಯೂ ಅವನದ್ದು ಅದೆ ನಿಲುವು. ಬಿಳಿಯನೊಬ್ಬನನ್ನ ಪ್ಯಾರಿಸ್ಸಿನ ವಿಮಾನ ನಿಲ್ದಾಣದಲ್ಲಿ ಮರ್ಮಕ್ಕೆ ತಾಗುವಂತೆ ಹೀಯ್ಯಾಳಿಸಿದಾಗ ಆ ಬಿಳಿಯ ಅವಮಾನದಿಂದ ಕೆರಳಿ ಎಗರಾಡಿದ್ದುˌ ಕೊಲಂಬೋದ ಕಟುನಾಯಕೆ ವಿಮಾನ ನಿಲ್ದಾಣದ ವಲಸೆ ಸಾಲಿನಲ್ಲಿ ನಿಂತಿದ್ದಾಗ "ಶ್ರೀಲಂಕನ್ನರನ್ನ ನೀವು ಭಾರತೀಯರ ಹೋಲಿಕೆಯಲ್ಲಿ ಹೇಗೆ ನೋಡುತ್ತೀರಿ?" ಎನ್ನುವ ಪಾಶ್ಚಿಮಾತ್ಯ ಸಹ ಪಯಣಿಗರ ಪ್ರಶ್ನೆಗೆ ಗಟ್ಟಿಯಾಗಿ "We Indians are high thinking but low living, where as Lankans are low thinking and high living!" ಅಂದ ಮಾತನ್ನ ಕೇಳಿದ ಅವನ ಬೆನ್ನ ಹಿಂದೆ ಸರದಿಯಲ್ಲಿ ನಿಂತಿದ್ದ ಲಂಕೆಯ 'ರಾಕ್ಷಸಿ'ಯೊಬ್ಬಳು "How dare you to critisize my land while stood at my soil!" ಅಂತ ಎಗರಾಡಿದ್ದಳು. ಅದಕ್ಕವನು ತಣ್ಣಗೆ ಅದೆ ವೇಗದಲ್ಲಿ "May it be your soil or mine, i cannot stay hyporicrite as you." ಅಂದು ಅವಳ ಉರಿಗೆ ಮತ್ತಷ್ಟು ತೈಲ ಸುರಿದಿದ್ದ. ಆ ವಿಷಯದಲ್ಲವನು ಒಂಥರಾ ಒರಟ. ಅದನ್ನೂ ಮೀರಿ ವಿಕೃತ. ಆ ವಿಕಾರದಿಂದ ತನ್ನನ್ನ ತಾನು ಬಿಡಿಸಿಕೊಳ್ಳಲು ಬಹಳ ಪ್ರಯತ್ನಿಸಿದ್ದರೂ ಸಹ ಪದೆ ಪದೆ ವಿಫಲನಾಗುತ್ತಿದ್ದ.

*****

ಬಪಮನ ಏಕಾಂತದ ಬರ್ಬರತೆ ಮರುಕಳಿಸುತ್ತಿದ್ದ ಕಾಲದಲ್ಲಿ ಅವರಿಗೆ ಓದಿನˌ ಮಾತುಕತೆಯ ಮೂಲಕ ಹತ್ತಿರವಾದ ಅವನಲ್ಲಿ ಅವರು ಆಗಾಗ ತಮ್ಮ ಅಂತರಾಳದ ಮಾತುಗಳನ್ನ ಹಂಚಿಕೊಳ್ಳುವುದಿತ್ತು. ಪೆರಂಪಳ್ಳಿಯ ತಮ್ಮ ತವರಿನ ದಿನಗಳನ್ನ ನೆನೆಸಿಕೊಳ್ಳುವಾಗ ಮಾತ್ರ ಅವರಲ್ಲಿ ಒಂಥರಾ ಲವಲವಿಕೆ ಮೂಡುತ್ತಿದ್ದುದು ಅವನ ಗಮನಕ್ಕೆ ಬರುತ್ತಿತ್ತು. ತನ್ನ ತಾಯಿ ಮನೆಯನ್ನ-ಅಲ್ಲಿನ ತನ್ನ ಬಾಳ್ವೆಯನ್ನ ಬಪಮ ತುಂಬಾ ಕಳೆದುಕೊಂಡ ಸುಖದ ಭಾಗವಾಗಿ ಪರಿಗಣಿಸುತ್ತಿದ್ದರು. ಸೊಸೆ ಸೀತಮ್ಮನ ನಿರಂತರ ಪಿರಿಪಿರಿ ಅವರನ್ನ ಹೈರಾಣಾಗಿಸಿತ್ತು.

ಅವರ ಮನ ಗೆಲ್ಲಲು ಚಂದಾಮಾಮದಿಂದ "ಬೇತಾಳದ ಕಥೆಗಳು" ಬೊಂಬೆಮನೆಯ "ಮದ್ಭಾಗವತ" ಬಾಲಮಿತ್ರದ "ಮಂಡೂಕ ದ್ವೀಪದಲ್ಲಿ ರಾಜಕುಮಾರಿ ಸರಣಿ" ಅದರ ಕೊನೆಯಲ್ಲಿರುತ್ತಿದ್ದ "ಮನಿ ಕಾದಂಬರಿ" ಓದಿ ಹೇಳುತ್ತಿದ್ದಾಗ ಬಪಮ ಅದರ ಕಥಾ ಲಹರಿಯ ಅವೇಗದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದನ್ನ ಕಾಣೋದು ಅವನಿಗೆ ಒಂಥರಾ ಖುಷಿ ಕೊಡುತ್ತಿತ್ತು.

ಈ ಕಥೆಯ ಓದಿನ ಕಿರು ಆಲೈಕೆಯ ಕ್ಷಣಗಳಲ್ಲಿ ಮಾತ್ರ ಅವರಿಗೆ ಒಂಥರಾ ನೆಮ್ಮದಿ ಸಿಗುತ್ತಿತ್ತು ಅನ್ನೋದನ್ನವನು ಬಲ್ಲ. ಹೀಗಾಗಿ ಅವನ್ನ ಓದುವ ನೆಪ ಮಾಡಿಕೊಂಡು ತನಗೂ ಸಿಗುವ ಮನರಂಜನೆಯ ಬೆನ್ನು ಹತ್ತಿ ಬಿಡುವಿದ್ದಾಗಲೆಲ್ಲಾ ಅವರ ಮನೆಗೆ ದಾಳಿಯಿಡುವುದು ಅವನಿಗೆ ರೂಢಿಯಾಯಿತು. ಅವರ ಮನೆಯಲ್ಲಿ ವಿಜಯೇಂದ್ರಣ್ಣ ಓದಲಿ ಎಂದು ನಿತ್ಯ ಅವರ ತಮ್ಮ "ಉದಯವಾಣಿ" ತಂದು ಕೊಡುವ ರೂಢಿಯೂ ಇತ್ತು. ಓದಲವನಿಗೆ ಸಿಕ್ಕಿದ ಎರಡನೆ ದಿನಪತ್ರಿಕೆ ಅದು.

( ಇನ್ನೂ ಇದೆ.)

https://youtu.be/b4bGLGzMko0



11 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೨.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೨.👊

ತಮ್ಮ ಮೊಮ್ಮಗಳ ಹಾಗೂ ಮತ್ತೊಬ್ಬ ಸೊಸೆಯ ಜೊತೆ ಸೇರಿಕೊಂಡು ಮೀನು ಮಾಡಿ ತಿನ್ನುವ ಅತ್ತೆ ಬಪಮನಿಗೂ ಸೀತಮ್ಮನ ಬೈಗುಳ ಭಂಡಾರದ ಸಹಸ್ರ ನಾಮಾರ್ಚನೆಯಲ್ಲೊಂದು ಪಾಲು ತಪ್ಪದೆ ಸಲ್ಲುತ್ತಿದ್ದುದು ಎಲ್ಲಾ ರಜಾಕಾಲದ ಸಂಪ್ರದಾಯ. ಅವರ ತರ್ಕದ ಪ್ರಕಾರ ಮೀನು ತಿನ್ನುವ ದುರಭ್ಯಾಸವನ್ನ ರೂಪಿಸಿಕೊಂಡಿರೋದಷ್ಟೆ ಅಲ್ಲದೆˌ ತನ್ನ ಅಡುಗೆ ಮನೆಯನ್ನೆ ಆಕ್ರಮಿಸಿಕೊಂಡು ಅಪವಿತ್ರಗೊಳಿಸುವ ಹೆಚ್ಚು ಕಡಿಮೆ ಸಮಪ್ರಾಯದ ಆ ಕುದುರೆಗಳಿಗೆ ಕಿವಿ ಹಿಂಡಿ ಬುದ್ಧಿ ಹೇಳಬೇಕಾಗಿದ್ದ ಅತ್ತೆಯೂ ಅವರ ಜೊತೆ ಶಾಮೀಲಾಗಿ ಕೇವಲ ಬಾಯಿ ರುಚಿಯ ಚಪಲದಿಂದ ಅವರಾಡಿಸಿದಂತೆ ಕುಣಿಯುವುದು ಮಾತ್ರ ಘೋರ ಅಪರಾಧವಾಗಿತ್ತು. 


ಪ್ರಾಯ ಸಂದಂತೆ ಸಹಜವಾಗಿ ಶ್ರವಣ ಶಕ್ತಿ ಕುಂದಿದ್ದರಿಂದ ಕೇಳುವ ಯಂತ್ರವನ್ನ ಧರಿಸುವ ಅಭ್ಯಾಸ ಮಾಡಿಕೊಂಡಿದ್ದ ಬಪಮ ಮಾತ್ರ ಸೀತಮ್ಮನ ಪಿರಿಪಿರಿಯ ಅಬ್ಬರ ಹೆಚ್ಚುತ್ತಿದ್ದ ಅಂತಹ ವಿಪರೀತ ಸಮಯಗಳಲ್ಲಿ ತನ್ನ ಕಿವಿಗೆ ಸಿಕ್ಕಿಸಿಕೊಂಡಿರುತ್ತಿದ್ದ ಆ ಯಂತ್ರದ ಕಿವಿಗಾಪನ್ನ ಮೆಲ್ಲಗೆ ಕಿತ್ತು ಸೆರಗೊಳಗೆ ಮರೆಮಾಡಿಟ್ಟುಕೊಂಡು ತನ್ನ ಸೊಸೆಯ ಭಯಂಕರ ಚೊರೆಯಿಂದ ಪಾರಾಗುವುದನ್ನ ರೂಢಿ ಮಾಡಿಕೊಂಡಿದ್ದರು. ಇದೊಂತರ ಇಬ್ಬರಿಗೂ ಗೆಲುವು ಗೆಲುವಿನ ಸನ್ನಿವೇಶ. ಮನೆಯಲ್ಲಾಗುತ್ತಿದ್ದ ಮೀನಡಿಗೆಯ ಅನಾಚಾರ ಕಂಡು ಕೂಡ ಏನೂ ಮಾಡಲಾಗದ ಅಸಹಾಯಕತೆಯಿಂದ ತನ್ನ ರಕ್ತದೊತ್ತಡ ಹೆಚ್ಚಿಸಿಕೊಂಡಿರುತ್ತಿದ್ದ ಸೀತಮ್ಮನಿಗೂ ಬಾಯಿ ನೋಯುವವರೆಗೂ ಮೂವರನ್ನೂ ನಿವಾಳಿಸಿ ಬೈದು ಕೊಂಚ ನೆಮ್ಮದಿಯಾಗುತ್ತಿತ್ತು. ಅದೆ ವೇಳೆ ಅವರ ಮುರಿಯ ಮಾತುಗಳ್ಯಾವುದೂ ಕೇಳದ ಹಾಗಾಗಿದ್ದಕ್ಕೆ ವಯಸ್ಸಿನ ವರದಾನವಾಗಿ ಸಿಕ್ಕಿದ್ದ ಕಿವುಡುತನಕ್ಕೆ ಋಣಿಯಾದ ಬಪಮನ ಮನಃಶಾಂತಿಯೂ ಕದಡದೆ ನೆಮ್ಮದಿ ಉಳಿಯುತ್ತಿತ್ತು.


ಹಾಗೆ ನೋಡಿದರೆ ಸೀತಮ್ಮನ ಮನಸು ಒಳ್ಳೆಯದೆ. ಆದರೆ ತನ್ನನ್ನ ಕಟ್ಟಿಕೊಂಡಿರುವ ಗಂಡನಾಗಲಿˌ ತಾನು ಹೆತ್ತ ಇಬ್ಬರು ಹೆಣ್ಣು ಮಕ್ಕಳಾಗಲಿ ತನ್ನ ಮಾತಿಗೆ ಬೆಲೆ ಕೊಡುವುದಿಲ್ಲ ಅನ್ನುವ ಅಸಮಧಾನ ಅವರಿಗಿತ್ತು. ಹೀಗಾಗಿ ಸದಾ ಸಣ್ಣಪುಟ್ಟ ವಿಷಯಗಳಿಗೂ ಎಲ್ಲರ ಮೇಲೂ ಪಿರಿಪಿರಿ ಮಾತುಗಳ ಮಳೆ ಸುರಿಸುತ್ತಾ ತನ್ನದೆ ಆದ ಮನಃ ಸಂತೈಕೆಯ ಮಾರ್ಗವನ್ನ ಕಂಡುಕೊಂಡಿದ್ದರು.


ಅವರ ಇಬ್ಬರು ಹೆಣ್ಣು ಮಕ್ಕಳು ನಿಶಾ ಹಾಗೂ ರಾಧಾ ಓದಿನಲ್ಲಿ ಅಪಾರ ಬುದ್ಧಿವಂತರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಭೌತಶಾಸ್ತ್ರದ ಪದವಿಯನ್ನ ರ್ಯಾಂಕ್ ಗಳಿಸಿ ಪೂರೈಸಿದ್ದ ಇಬ್ಬರಲ್ಲಿ ಹಿರಿಯ ಮಗಳು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲೂˌ ಎರಡನೆಯವಳು ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾನಿಲಯದಲ್ಲೂ ಪ್ರಾಧ್ಯಾಪಕರಾಗಿದ್ದಾರೆ.


ಅವರಿಗೆ ಹಿರಿಯ ಮಗಳನ್ನ ಆಗ ದಾವಣಗೆರೆಯಲ್ಲಿ ಉದ್ಯೋಗಸ್ದನಾಗಿದ್ದ ತನ್ನಣ್ಣನ ಮಗ ಮಹಾಪ್ರಾಣನಿಗೆ ಕೊಟ್ಟು ತವರಿನ ಬಾಂಧವ್ಯ ಬೆಸೆಯುವ ಬಯಕೆಯಿತ್ತು. ಬಾಲ್ಯದಲ್ಲಿ ಇದಕ್ಕೆ ಪೂರಕವಾಗಿ ವರ್ತಿಸುತ್ತಿದ್ದ ಮಗಳು ಹಾಗೂ ಸಹೋದರಳಿಯ ಬೆಳೆದು ದೊಡ್ಡವರಾದ ಮೇಲೆ ಮಾತ್ರ ಸೀತಮ್ಮನ ನಿರೀಕ್ಷೆಗೆ ವ್ಯತಿರಿಕ್ತವಾಗಿ ಈ ಸಂಬಂಧವನ್ನ ನಿರಾಕರಿಸಿದ್ದಷ್ಟೆ ಅಲ್ಲದೆˌ ಹುಡುಗ ಬೇರೆ ಮದುವೆಯೂ ಆಗಿ ಮಗಳು ಶಾಶ್ವತವಾಗಿ ಬೆಂಗಳೂರು ಸೇರಿ ಹೋದದ್ದು ಅವರ ಮನಸ್ಸಿಗೆ ಅಘಾತ ತಂದಿತ್ತು. 


ಇದಕ್ಕೆಲ್ಲಾ ತನ್ನ ನಾದಿನಿ ವಿನೀತನ ಕಿತಾಪತಿಯೆ ಕಾರಣ ಎಂದು ತೀರ್ಮಾನಿಸಿದ ಸೀತಮ್ಮ ಅನಂತರದ ದಿನಗಳಲ್ಲಿ ಅಣ್ಣ-ಅತ್ತಿಗೆ ಮನೆಗೆ ಬಂದರೆ ಆದರಿಸುವುದು ಅತ್ತಲಾಗಿರಲಿˌ ಕನಿಷ್ಠ ಮುಖ ಕೊಟ್ಟು ಮಾತಾಡುವುದನ್ನೂ ಸಹ ನಿಲ್ಲಿಸಿಬಿಟ್ಟರು. ಅವರ ಗಂಡನೂ ಸಹ ತನ್ನ ತಂಗಿ ಹಾಗೂ ಬಾವನೊಡನೆ ಇದೆ ಕಾರಣಕ್ಕೆ ಮಾತು ಬಿಟ್ಟಿದ್ದೂ ಸಹ ಅವರ ಈ ನಡೆಗೆ ಪೂರಕವಾಗಿತ್ತು ಅನ್ನೋದು ಸ್ಪಷ್ಟ. ಇಷ್ಟೆ ಅಲ್ಲದೆ ಅತ್ತೆ ಮನಸು ಮಾಡಿದ್ದರೆ ಖಂಡಿತವಾಗಿ ಈ ಮದುವೆ ನೆರವೇರುತ್ತಿತ್ತುˌ ಅವರು ಪ್ರಯತ್ನಿಸದೆ ಅದು ನಿಂತು ಹೋಯಿತು ಅನ್ನುವ ದುಸುಮುಸು ಅವರನ್ನ ಅಂತಹ ಸಂದರ್ಭಗಳಲ್ಲಿ ಬಪಮನ ಮೇಲೂ ಎಗರಾಡುವಂತೆ ಮಾಡುತ್ತಿತ್ತು. 


ಇದರಿಂದ ನೊಂದ ವಿನೀತಮ್ಮ ಮತ್ತವರ ಗಂಡ ಅಣ್ಣನ ಮನೆಗೆ ಕ್ರಮೇಣ ಬರೋದನ್ನೆ ನಿಲ್ಲಿಸಿದರು. ಹಾಗೊಮ್ಮೆ ಊರಿಗೆ ಬಂದರೂ ಸಹ ಎರಡನೆ ಅಣ್ಣನ ಮನೆಯಲ್ಲಿ ಉಳಿದುˌ ಇಲ್ಲಿಗೆ ಒಂದರ್ಧ ತಾಸಿನ ಭೇಟಿಯಿತ್ತು ಅಮ್ಮನನ್ನ ಮಾತನಾಡಿಸಿ ಹಿಂದಿರುಗುತ್ತಿದ್ದರು. ಆ ಭೇಟಿಯ ಅವಧಿಯಲ್ಲಿ ಅವರ ಮನೆಯಲ್ಲೊಂತರಾ ತುರ್ತು ಪರಿಸ್ಥಿತಿ ಘೋಷಣೆಯಾದ ವಾತಾವರಣವಿರುತ್ತಿತ್ತು. ಅವರಲ್ಲಿಂದ ಹೋದ ನಂತರ ಸೀತಮ್ಮ ಹಾಗೂ ವಿಜಯೇಂದ್ರಣ್ಣ ತುಂಬಾ ಹೊತ್ತು ಹಳೆಯದನ್ನೆಲ್ಲ ನೆನೆಸಿಕೊಂಡು ಅವರಿಬ್ಬರಿಗೂ ಬೈದು ಸುಧಾರಿಸಿಕೊಳ್ಳುತ್ತಿದ್ದರು.


ಇದನ್ನೆಲ್ಲ ಅವನು ನೋಡಿಕೊಂಡೆ ಬೆಳೆಯುತ್ತಿದ್ದ. ಮಗಳು ಅಳಿಯ ಬಂದು ಹೋದ ನಂತರ ತುಂಬಾ ಬೇಜಾರಾಗುತ್ತಿದ್ದ ಬಪಮ ತನ್ನ ಜಗಲಿಯ ಆರಾಮ ಕುರ್ಚಿಯಲ್ಲಿ ಕೂತು ವ್ಯಥೆ ತಾಳಲಾರದೆ ಆ ಹೊತ್ತಿನಲ್ಲಿ ಹಾಕುತ್ತಿದ್ದ ಕಣ್ಣೀರನ್ನ ಮೌನವಾಗಿ ಹೋಗಿ ಅವರದೆ ಸೀರೆಯ ಸೆರಗಿನಲ್ಲಿ ಒರೆಸಿ ಹಸಿರು ನರಗಳು ಉಬ್ಬಿರುತ್ತಿದ್ದ ಅವರ ಕೈ ಹಿಡಿದು ಮಾತಿಲ್ಲದೆ ಅವರೊಂದಿಗೆ ಕೂತು ಮೌನದಲ್ಲೆ ಅವರನ್ನ ಸಂತೈಸುತ್ತಿದ್ದ. ತನ್ನ ಮಗಳಿಗೆ ಇದೆ ತವರುಮನೆ. ಮೊಮ್ಮಕ್ಕಳ ಮದುವೆಯ ವಿಷಯದಲ್ಗಿರುವ ಅಸಮಧಾನದ ಪರಿಣಾಮವಾಗಿ ಮಗಳು ತವರಿಗೂ ಬರಲಾಗದಂತಾಗಿದ್ದು ಅವರನ್ನ ಕಡೆಯವರೆಗೂ ಕಂಗೆಡುವಂತೆ ಮಾಡಿತ್ತು. ಅವನ ಸಮಾಧಾನದ ನುಡಿಗಳಿಗೆ ಅವರನ್ನ ಸಹಜ ಸ್ಥಿತಿಗೆ ತರುವ ಶಕ್ತಿಯಿರಲಿಲ್ಲವಾಗಿ ಅವನು ಆ ಹೊತ್ತಿನಲ್ಲಿ ಸುಮ್ಮನೆ ಮೌನವಾಗಿ ಅವರ ಜೊತೆಗೆ ಕೂತಿರುತ್ತಿದ್ದ ಅಷ್ಟೆ.


ವಿಜಯೇಂದ್ರಣ್ಣನಾಗಲಿ ಅಥವಾ ಸೀತಮ್ಮನಾಗಲಿ ಸ್ಥಿತಪ್ರಜ್ಞರಲ್ಲ. ತಮಗೆ ವಯಕ್ತಿಕವಾಗಿ ಆದ ನಷ್ಟಕ್ಕೆ ಬೇರೆಯವರನ್ನ ಹೊಣೆಗಾರರನ್ನಾಗಿಸಿ ಪಾರಾಗುವ ಸ್ವಭಾವ ಹೊಂದಿರುವವರು. ತಮ್ಮ ಒರಟು ನಡತೆ ಬೇರೆಯವರಿಗೆ ಎಷ್ಟು ವೇದನೆ ಕೊಡಬಲ್ಲದು ಅನ್ನುವುದನ್ನ ಅರಿಯದಷ್ಟು ಕಾಡು ನಡತೆಯ ಹಳ್ಳಿಗರು. ಅವರಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಲಾಗದು ಎನ್ನುವುದನ್ನವನು ಚೆನ್ನಾಗಿ ಬಲ್ಲ.


ಪರರಿಂದ ನಮಗೆ ಅದೆಷ್ಟೆ ನಷ್ಟವಾಗಿದ್ದರೂˌ ಇನ್ನಿತರರ ನಡತೆಯಿಂದ ಅದೇನೆ ಕಷ್ಟ-ನಷ್ಟ ಎದುರಾಗಿದ್ದರೂ ಅದನ್ನ ಅಷ್ಟು ಒರಟಾಗಿ ಮಾರುತ್ತರಿಸಬೇಕಿಲ್ಲ ಅನ್ನುವ ರೂಢಿಗತ ಮನಸ್ಥಿತಿ ಅವನದ್ದು. ಸಣ್ಣಂದಿನಿಂದಲೂ ಇನ್ಯಾರಾದರೂ ಅಂಕೆ ಮೀರಿ ತನ್ನೊಂದಿಗೆ ವರ್ತಿಸಿದರೆ ಅವನದನ್ನ ತಲೆಗೆ ಹಚ್ಚಿಕೊಂಡವನಲ್ಲ. ಹಾಗಂತ ಅದವನಿಗೆ ದುಃಖವನ್ನ ಉಂಟು ಮಾಡುತ್ತಿರಲಿಲ್ಲ ಅಂತಲ್ಲ. ಅದನ್ನವನು ಆಗ ಮೌನವಾಗಿ ಅನುಭವಿಸಿದ್ದರೂ ಯಾರಿಂದ ಅಂತಹ ವೇದನೆ ಅವನಿಗಾಗಿತ್ತೋ ಅವರಿಗೆ ಅದರ ಅರಿವನ್ನ ಅವ ಮೂಡಿಸದೆ ಮೌನವಾಗುಳಿದ ಅಂತ ಇದರ ಅರ್ಥವಲ್ಲ.


ಅದನ್ನವನು ಅಂತಹ ನೀಚರ ಮುಖಕ್ಕೆ ಕನ್ನಡಿ ಹಿಡಿದಂತೆ ತಿರುಗಿಸಿ ಹೇಳಲು ಸೂಕ್ತ ಸಮಯವನ್ನ ಕಾಯುತ್ತಾನೆ ಹಾಗೂ ಮರೆಯದೆ ತಣ್ಣನೆ ಧ್ವನಿಯಲ್ಲಿ ನಡತೆಯಲ್ಲಿ ಯಾವ ಉದ್ವಿಗ್ನತೆಯನ್ನೂ ಪ್ರಕಟಿಸಿದೆ ಅವರಂದ ಮಾತುಗಳನ್ನಷ್ಟೆ ಅವರಿಗೆ ನೆನಪಿಸುತ್ತಾ "ನೀವಂದು ನನಗೆ ಇಂತ ಸಂದರ್ಭದಲ್ಲಿ ಅನಗತ್ಯವಾಗಿ ಹೀಗಂದಿದ್ದಿರಿˌ ಹಾಗನ್ನ ಬಾರದಿತ್ತು. ನಿಮ್ಮ ಆ ನೀಚ ವರ್ತನೆ ನಿಮಗೆ ಸರಿ ಅನ್ನಿಸುತ್ತಾ?ˌ ಈ ಪ್ರಶ್ನೆಗೆ ನೀವು ನನಗೇನೂ ಉತ್ತರಿಸಬೇಕಿಲ್ಲ. ಆತ್ಮ ಅನ್ನೋದೇನಾದರೂ ನಿಮಗಿರೋದೆ ನಿಜವಾದರೆ ನಿಮಗೆ ನೀವೆ ಉತ್ತರ ಕೊಟ್ಟುಕೊಳ್ಳಿ. ಬಹುಶಃ ಆತ್ಮದ ಮುಂದೆ ಸುಳ್ಳಾಡಿ ನೀವು ಆತ್ಮವಂಚಕರಾಗಲಿಕ್ಕಿಲ್ಲ." ಅನ್ನುತ್ತಿದ್ದ. 


ಅವರ ಅಂದಿನ ನಡತೆಯ ಬಗ್ಗೆ ಅವರಿಗೇನೆ ಅರಿವು ಮೂಡಿಸುವುದಷ್ಟೆ ಅವನ ಆ ಕ್ರಿಯೆಯ ಮೂಲ ಉದ್ದೇಶವಾಗಿರುತ್ತಿತ್ತು. ಹಾಗಾದರೂ ಮುಂದೆ ಬೇರೆಯಾರನ್ನಾದರೂ ಅವಮಾನಿಸುವ ಅಥವಾ ಅನ್ಯಾಯ ಮಾಡುವ ಮೊದಲು ಅವರು ಯೋಚಿಸಲಿ ಅನ್ನುವುದಷ್ಟೆ ಅವನ ಉದ್ದೇಶ.

( ಇನ್ನೂ ಇದೆ.)




https://youtu.be/z0fMNkQ8iZQ

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೧.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೧.👊


ಅಕ್ಷರ ಜ್ಞಾನವಿಲ್ಲದ ಬಪಮನಿಗೆ ಮನೆಯ ಯಾರಾದರೊಬ್ಬರು ಆ ಪುಸ್ತಕಗಳೆಲ್ಲವನ್ನೂ ಓದಿ ಹೇಳುವುದಿತ್ತು. ಅವರಿಗಾಗಿಯೆ ಮಾಡಿಸಿಟ್ಚಿದ್ದಂತ ಬಟ್ಟೆ ಕಟ್ಟುವ ಮರದ ಆರಾಮ ಕುರ್ಚಿಯೊಂದನ್ನು ಮನೆಯ ಜಗಲಿಯ ಹೊರ ಕಿಟಕಿಯ ದಳಿಯ ಪಕ್ಕದಲ್ಲಿ ಹಾಕಿದ್ದುˌ ಬಪಮ ಅದರಲ್ಲಿ ಮಲಗಿದ ಭಂಗಿಯಲ್ಲಿ ಕೂತು ಹೆಚ್ಚಾಗಿ ಮೊಮ್ಮಕ್ಕಳೋ ಅಥವಾ ಆಗೀಗ ಸೊಸೆಯಂದಿರೋ ಇಲ್ಲಾ ಮಕ್ಕಳೋ ದೊಡ್ಡ ಧ್ವನಿಯಲ್ಲಿ ಓದಿ ಹೇಳುತ್ತಿದ್ದ ಆ ಮಾಸಿಕ-ಸಾಪ್ತಾಹಿಕಗಳಲ್ಲಿ ಪ್ರಕಟವಾಗಿರುತ್ತಿದ್ದ ಕಥೆಗಳನ್ನ ತದೇಕ ಚಿತ್ತದಿಂದ ಆಲಿಸುತ್ತಾ ಕಥೆಯ ಪಾತ್ರಗಳ ಭಾವಾಭಿವ್ಯಕ್ತಿಯ ಸಂಭಾಷಣೆಗಳಿಂದ ನಡುನಡುವೆ ಉತ್ತೇಜಿತರಾಗಿ ಪ್ರತಿಕ್ರಿಯಿಸುತ್ತಿದ್ದುದಿತ್ತು. ಅವರು ತಲೆಗೆ ಸದಾ ಹಚ್ಚಿಕೊಳ್ಳುತ್ತಿದ್ದ ಎಣ್ಣೆಯ ಕೃಪೆಯಿಂದ ಆ ಆರಾಮ ಕುರ್ಚಿಯ ತಲೆ ಇಡುವ ಭಾಗ ಎಣ್ಣೆಯನ್ನ ಹೀರಿ ಹೀರಿ ತನ್ನ ಮೂಲ ಬಣ್ಣವನ್ನೆ ಕಳೆದುಕೊಂಡು ಒಂಥರಾ ಜಿಡ್ಡು ಜಿಡ್ಡಾದ ಕಪ್ಪಾಗಿ ಹೋಗಿತ್ತು.


ಟಿವಿ ಅನ್ನುವ ಮಾಯಾಪೆಟ್ಟಿಗೆ ಆ ಊರಿಗೆ ಬಂದ ಹೊಸತು. ಮೊದಲೆಲ್ಲ ಟಿವಿಗೆ ಮನೆಯಲ್ಲೆ ಆಂಟೆನಾ ಕಟ್ಟಿಕೊಳ್ಳುತ್ತಿದ್ದವರು ಊರವರಿಗೆ ಡಿಶ್ ಕೇಬಲ್ ಪರಿಚಯಿಸಿದ ಶ್ರೀನಿವಾಸ ಶೆಟ್ಟರ ಮೂಲಕ ತಾವೂ ಆಂಟೆನಾಕ್ಕೆ ವಿದಾಯ ಹೇಳಿ ಕೇಬಲ್ ಜಾಲದ ಸದಸ್ಯರಾಗಿದ್ದ ಆರಂಭಿಕ ಮನೆಗಳಲ್ಲಿ ವಿಜಯೇಂದ್ರ ಶಣೈರವರ ಮನೆಯೂ ಒಂದು. ಪುಟ್ಟದೊಂದು ಕಪ್ಪು-ಬಿಳುಪು ಟಿವಿಯನ್ನ ಮನೆಯ ಮಧ್ಯದ ಕೋಣೆಯಲ್ಲಿಟ್ಟ ಮೇಲೆ ಅದೆ ಕೋಣೆಯ ಮೂಲೆಯಲ್ಲಿದ್ದ ಮಂಚದ ಮೇಲೆ ಮಲುಗುವ ಅಭ್ಯಾಸವಿದ್ದ ಬಪಮನಿಗೆ ಆಗಿದ್ದ ಏಕೈಕ ದೂರದರ್ಶನದ ಮೂಲಕ ರಾಮಾಯಣˌ ಮಹಾಭಾರತ ನೋಡುವ ಅವಕಾಶವೂ ಸಿಕ್ಕಿತು. ಹಿಂದಿ ಭಾಷೆ ಬಾರದ ಅವರಿಗೆ ಕಥೆ ಹಾಗೂ ಸಂಭಾಷಣೆಯನ್ನ ಜೊತೆಯಲ್ಲಿ ಕೂತವರ್ಯಾರಾದರೂ ಅವರಿಗೆ ಕೇಳುವಷ್ಟು ಗಟ್ಟಿಯಾಗಿ ವಿವರಿಸಿ ಹೇಳುತ್ತಿದ್ದರೆ ಮಂತ್ರಮಗ್ಧರಾಗಿ ಟಿವಿಯ ಧಾರವಾಹಿ ನೈಜವಾಗಿ ನಡೆಯುತ್ತಿದೆಯೇನೊ ಅನ್ನುವಂತೆ ಅದಕ್ಕೆ ಪ್ರತಿಕ್ರಿಯಿಸುತ್ತಾ ಅವರು ತನ್ನ ದಪ್ಪ ಗಾಜಿನ ಕಪ್ಪು ಕನ್ನಡಕ ಏರಿಸಿಕೊಂಡು ಅವುಗಳನ್ನ ನೋಡುವುದಿತ್ತು.

ಕಾಲಕ್ರಮೇಣ ಒಂದಿದ್ದ ದೆಹಲಿಯ ಹಿಂದಿ ದೂರದರ್ಶನ ಎರಡಾಗಿ ಬೆಂಗಳೂರಿನ ಕನ್ನಡ ದೂರದರ್ಶನವಾಗಿ ಮರಿ ಹಾಕಿತು. ಮಧ್ಯಾಹ್ನದ ಊಟದ ನಂತರ ಬಪಮನ ಮನರಂಜನೆಯ ಸಾಲಿಗೆ "ಮನೆತನ" "ಜನನಿ" "ಸಾಧನೆ" "ಮಾಯಾಮೃಗ" ಮುಂತಾದ ದೈನಂದಿನ ಧಾರವಾಹಿಗಳು ಸೇರ್ಪಡೆಯಾದವು. ಅವರ ಏಕತಾನತೆಯನ್ನೆಲ್ಲ ಈ ಟಿವಿ ಧಾರಾವಾಹಿಗಳ ಅಸಂಖ್ಯ ಪಾತ್ರಗಳು ಕಡಿಮೆ ಮಾಡುವಲ್ಲಿ ಒಂದಷ್ಟು ಮಟ್ಟಿಗೆ ಯಶಸ್ವಿಯಾಗಿದ್ದವು.

ಸದಾ ತುಂಬಿರುತ್ತಿದ್ದ ಮನೆ ಕ್ರಮೇಣ ವಯಸ್ಸಾಗುತ್ತಾ ಬರುತ್ತಿದ್ದ ಅವರ ಹಿರಿಯ ಮಗ-ಸೊಸೆಯ ಹೊರತು ಅವರೊಬ್ಬರನ್ನೆ ಆ ಮನೆಯಲ್ಲಿರಿಸುವಂತಾಗಿಸಿದ್ದ ಕಾಲ ಅದು. ಬೆಳೆದು ನಿಂತಿದ್ದ ಮೊಮ್ಮಕ್ಕಳೆಲ್ಲಾ ಹೆಚ್ಚಿನ ವಿದ್ಯಾಭ್ಯಾಸˌ ಅನಂತರದ ಉದ್ಯೋಗ ಅಂತ ದೂರದ ನಗರಗಳಿಗೆ ವಲಸೆ ಹೋಗಿದ್ದವರು ಹಿಂದೆ ಬರಲೊಲ್ಲದೆ ಅಲ್ಲಲ್ಲೆ ನೆಲೆ ನಿಂತರು. ಮೊದಲಿನಂತೆ ಕಥೆ ಪುಸ್ತಕಗಳನ್ನ ಓದಿ ಹೇಳುವ ಪುಣ್ಯಾತ್ಮರ್ಯಾರೂ ಈಗೀಗ ಇರಲಿಲ್ಲ. ಪ್ರಾಯ ಸಂದ ಕಾರಣ ಆರೈಕೆ ಮಾಡಲಾಗದೆ ಮನೆಯ ಹಿತ್ತಲ ಕೊಟ್ಟಿಗೆಯಲ್ಲಿದ್ದ ಎಮ್ಮೆ ಹಾಗೂ ದನವನ್ನು ಸೊಸೆ ಮಾರಿದ್ದರಿಂದ ಹಟ್ಟಿ ಕೆಲಸವೂ ಇದ್ದಿರಲಿಲ್ಲ. ಅವರ ಸಮಪ್ರಾಯದ ಸುತ್ತಮುತ್ತಲ ಮನೆಗಳ ಹೆಂಗಸರು ಒಂದರೆ ಘಳಿಗೆ ಸಂಜೆ ಹೊತ್ತಿಗೆ ಅವರಲ್ಲಿಗೆ ಬಂದು ಕೂತುˌ ಹಲ್ಲಿಲ್ಲದ ಅವರು ಕುಟ್ಟಾಣಿಯಲ್ಲಿ ಹಾಕಿ ಜಜ್ಜಿದ ಎಲೆ-ಅಡಿಕೆ-ಹೊಗೆಸೊಪ್ಪು-ಸುಣ್ಣದ ಮಿಶ್ರಣವನ್ನ ಮೆದ್ದುˌ ಅವರಂತೆ ಚೂರುಪಾರು ನಸ್ಯ ಎಳೆದು ಅದೂ ಇದೂ ಊರ ಪಂಚಾಯ್ತಿ ಬಾಯಿ ತುಂಬಾ ಹರಟಿ ಹೋಗುತ್ತಿದ್ದುದು ಬಿಟ್ಟರೆ ಅವರಿಗೆ ಒಂಟಿತನ ಬಾಧಿಸ ತೊಡಗಿದ್ದ ಕಾಲ ಅದು. ಟಿವಿಯ ಈ ಧಾರವಾಹಿಗಳೂ ಇಲ್ಲದಿದ್ದಿದ್ದರೆ ಬಹುಶಃ ಅವರಿಗೆ ಹುಚ್ಚೆ ಹಿಡಿಯುವ ಸಂಭವವಿತ್ತು ಅನ್ನಿಸುತ್ತೆ.


ತಮ್ಮ ತಮ್ಮ ಶಾಲಾ-ಕಾಲೇಜು-ಕಛೇರಿಗಳಿಗೆ ರಜೆ ಸಿಕ್ಕಾಗ ಮಾತ್ರ ಅವರ ಮನೆ ಮತ್ತೆ ಮಕ್ಕಳು ಮೊಮ್ಮಕ್ಕಳಿಂದ ಗಿಜಿಗುಡುವುದು ಮಾಮೂಲಾಯಿತು. ಅವರೆಲ್ಲ ಬಂದಾಗ ಖುಷಿಯಿಂದಿರುತ್ತಿದ್ದ ಬಪಮ ಅವರೆಲ್ಲಾ ರಜೆ ಮುಗಿದು ತಮ್ಮ ತಮ್ಮ ನಿತ್ಯದ ಬಾಳ್ವೆಗೆ ಮರಳಿದ ಮೇಲೆ ಒಂಟಿತನದ ಬಾಧೆ ಅನುಭವಿಸುವುದು ಅವರ ಖಾಯಂ ಹಣೆಬರಹವೆ ಆಯಿತು. ಮಗ ಇನ್ನೂ ನಿವೃತ್ತ ಜೀವನ ಆರಂಭಿಸದೆ ಬಸ್ ಸ್ಟ್ಯಾಂಡಿನಲ್ಲಿದ್ದ ತನ್ನ ಬುಕ್ಕಿಂಗ್ ಕೌಂಟರಿಗೆ ಹೋಗಿ ಕೂತುಕೊಳ್ಳುತ್ತಿದ್ದರಂತೂ ಮನೆಯಲ್ಲಿ ಕೇವಲ ಅತ್ತೆ-ಸೊಸೆ ಇಬ್ಬರೆ ಆಗಿ ಒಟ್ಟಿನಲ್ಲಿ ಅವರಿಗೆ ಇದೊಂತರ ಮಾನಸಿಕ ಹಿಂಸೆ ಅನಿಸತೊಡಗಿತ್ತು. 


ಆಗಷ್ಟೆ ಶಾಲೆಗೆ ಹೋಗಲು ಆರಂಭಿಸಿದ್ದ ಅವನು ಬಪಮನಿಗೆ ಹತ್ತಿರವಾಗಿದ್ದ. ಅವನಿಗೂ ಓದುವ ಚಟ ಅಂಟಿದ್ದರಿಂದ ಬಪಮನಿಗೆ ಓದಿ ಹೇಳುವ ನೆಪದಲ್ಲಿ ಅವರ ಮನೆಯಲ್ಲಿ ಓದಲು ಸಿಗುವ ಎಲ್ಲಾ ದಿನ-ವಾರ-ಮಾಸ ಪತ್ರಿಕೆಗಳನ್ನ ಗೋರಿ ಗುಡ್ಡೆ ಹಾಕಿಕೊಂಡುˌ ಅವನ ಈ ಅವತಾರ ಕಂಡು ರೋಸಿ ಹೋಗಿ ಸದಾ ಪಿರಿಪಿರಿ ಮಾಡುತ್ತಿದ್ದ ಬಪಮನ ಸೊಸೆ ಸೀತಮ್ಮನ ಅಸಹನೆಯನ್ನೆಲ್ಲ ಭಂಡತನದಿಂದ ನಿರ್ಲಕ್ಷ್ಯಿಸಿ ಸಿಕ್ಕ ಅವಕಾಶವನ್ನ ಸದುಪಯೋಗ ಪಡಿಸಿಕೊಂಡು ಹೊತ್ತಲ್ಲದ ಹೊತ್ತಲ್ಲಿ ಅನುಮತಿಗೂ ಕಾಯದೆ ಅವರ ಮನೆಗೆ ನುಗ್ಗಿ ಹೋಗಿ ಓದುತ್ತಾ ಕೂರುವುದನ್ನು ಅಭ್ಯಾಸ ಮಾಡಿಕೊಂಡ. ಕರೆಯದೆ ಬರುವ ಅವನ ಉಪಸ್ಥಿತಿ ಹಾಗೆ ನೋಡಿದರೆ ಬಪಮನನ್ನು ಬಿಟ್ಟರೆ ಅಲ್ಯಾರಿಗೂ ಇಷ್ಟವೆ ಆಗುತ್ತಿರಲಿಲ್ಲ. ಆದರೆ ಅದನ್ನೆಲ್ಲ ಪರಿಗಣಿಸುವಷ್ಟು ಬುದ್ಧಿಮಟ್ಟವೂ ಇಲ್ಲದ ವಯಸ್ಸಿನಲ್ಲಿದ್ದ ಅವನು ಅಂತಹ ಕ್ಷುಲ್ಲಕ ಸಂಗತಿಗಳನ್ನೆಲ್ಲಾ ಗಮನಿಸುತ್ತಲೆ ಇರಲಿಲ್ಲˌ 

ಸಾಲದ್ದಕ್ಕೆˌ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಪುಟ್ಟರಾಜಣ್ಣ ಅವರ ಮನೆಯಲ್ಲಿ ಸಂಸಾರ ಸಮೇತ ಬಹುಕಾಲ ಬಾಡಿಗೆಗಿದ್ದರು. ಅವರಲ್ಲಿಗೆ 'ಕನ್ನಡಪ್ರಭ' ತರಿಸುತ್ತಿದ್ದರು. ಅಷ್ಟಲ್ಲದೆ ಅಲ್ಲಿನ ಸರಕಾರಿ ಗ್ರಂಥಾಲಯದಿಂದ ಸದಸ್ಯತ್ವ ಪಡೆದಿದ್ದ ಪುಟ್ಟರಾಜಣ್ಣ ಹಲವು ಬಗೆಯ ಕಾದಂಬರಿ ಪುಸ್ತಕಗಳನ್ನ ತರುತ್ತಿದ್ದರು ಬೇರೆ. ಇವನ ಓದಿನ ನಶೆಗೆ ಇದೊಂತರಾ ಸಂಜೆ ತಂಪು ಹೊತ್ತಿಗೆ ಕರೆದು ಕೂರಿಸಿ 'ಶಕ್ತಿಮದ್ದ'ನ್ನು ಕುಡಿಸಿ ಕಳಿಸುವ ತಾಣದಂತಾಗಲು ಇಷ್ಟು ಸವಲತ್ತು ಧಾರಾಳವಾಗಿ ಸಾಕಿತ್ತು. ಈ ಓದಿನ ಚಟವೆ ಅವನನ್ನ ಬಪಮನಿಗೆ ಮತ್ತಷ್ಟು ಹತ್ತಿರ ಮಾಡಿತು.


ಬಪಮ ಮನೆಯಲ್ಲಿ ಸೊಸೆಯ ಮಡಿಯ ದೆಸೆಯಿಂದ ಶುದ್ಧ ಸಸ್ಯಹಾರಿಯಾದರೂˌ ಅವರ ತವರು ಮನೆಯಲ್ಲಿ ಮೀನಡಿಗೆ ಮಾಡುವ ಪದ್ಧತಿ ಇತ್ತಂತೆ. ಒತ್ತಾಯಕ್ಕೆ ಆಸೆ ಅಪಾರವಾಗಿದ್ದರೂ ಸಹ ಮೀನು ತೊರೆದು ಇರಬೇಕಾದ ಒತ್ತಡದಲ್ಲಿ ಅವರಿದ್ದರು. ಅವರ ಮೊದಲ ಮೊಮ್ಮಗಳು ಹಾಗೂ ಕಿರಿಯ ಸೊಸೆ ಊರಿಗೆ ಬಂದಾಗ ಮಾತ್ರ ಅವರಿಗೆ ಮೀನು ತಿನ್ನುವ ಅವಕಾಶ ಸಿಗುತ್ತಿತ್ತು. ತನ್ನ ಅಡುಗೆ ಮನೆಯನ್ನ ಆಕ್ರಮಿಸಿಕೊಂಡು ಅನ್ಯಾಯವಾಗಿ ಮಡಿ ಕೆಡಿಸುತ್ತಾ ಮೀನು ಹುರಿದು ತನಗೆ ಇರಿಸುಮುರುಸು ಉಂಟು ಮಾಡುವ ಮಗಳು ಮತ್ತು ಒರೆಗಿತ್ತಿಗೆ ಬೈಗುಳದ ಸುರಿಮಳೆಯನ್ನೆ ಸುರಿಸಿದರೂ ಸಹ ಅದನ್ನೆಲ್ಲ ಆದ ಅಪಮಾನವೆಂದು ಪರಿಗಣಿಸದೆˌ  ಮನೆಯೊಡತಿ ಸೀತಮ್ಮನ ವಿರೋಧಕ್ಕೆಲ್ಲಾ ಸೊಪ್ಪು ಹಾಕದೆ ವಿಜಯೇಂದ್ರ ಶಣೈ ಮಗಳು ನಿಶಾ ಮತ್ತವಳ "ಪಚ್ಚಿ" ಕಸ್ತೂರಿ ಅಲ್ಲಿರುವಷ್ಟು ದಿನವೂ ದಿನಕ್ಕೊಂದು ತರಹದ ಮೀನು ಮೀನುಪೇಟೆಯಿಂದ ಕೊಂಡು ತಂದು ಬಗೆಬಗೆಯ ಅಡುಗೆ ಮಾಡಿ ಬಪಮನನ್ನೂ ಜೊತೆಗೆ ಸೇರಿಸಿಕೊಂಡು ಪಟ್ಟಾಗಿ ಮೀನೂಟವನ್ನ ಇಷ್ಟಪಟ್ಟು ಉಣ್ಣೋದಿತ್ತುˌ ಆ ಕಾಲದ ಹೊರತು ಬಪಮನಿಗೆ ಮೀನು ತಿನ್ನುವ ಭಾಗ್ಯವಿರಲಿಲ್ಲ. 

ಒಟ್ಟಿನಲ್ಲಿ ಕುಟ್ಟಾಣಿಯ ಕವಳˌ ಸಂಜೆ ಹರಟೆ ಸಮ್ಮೆಳನಕ್ಕೆ ಬರುತ್ತಿದ್ದ ಅವರ ಒರಗಿತ್ತಿ ದೋನ ಬಪಮನ ಸಂಚಿಯ ನಸ್ಯ ಹಾಗೂ ಮೀನು ಖಾದ್ಯಗಳಷ್ಟೆ ಬಪಮನಿಗಿದ್ದ ಬಿಡಲಾಗದ ಗೀಳು.


( ಇನ್ನೂ ಇದೆ.)



https://youtu.be/21RkCOVpOZE

09 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೦.👊


"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೦.👊

ಮದುವೆಯಾಗಿ ಪಾರಂಪಳ್ಳಿಯಿಂದ ಪ್ರಸಾದಪುರಕ್ಕೆ ಬಂದ ಶಾಂತಾಮಾಯಿಗೆ ಶಾಂತವಾದ ಬದುಕನ್ನ ಬಾಳಲು ಮತ್ತೆರಡು ದಶಕಗಳ ಅವಧಿ ಕಾಯಬೇಕಾಗಿ ಬಂದದ್ದು ಮಾತ್ರ ವಿಪರ್ಯಾಸ. ಅವರ ಬದುಕಿನ ಹೊಸ ಪುಟಗಳು ತೆರೆದುಕೊಳ್ಳಲು ಅವರು ಹೆತ್ತ ಮಕ್ಕಳು ಬೆಳೆದು ಸ್ವತಂತ್ರ್ಯರಾಗಿ ಬದುಕುವ ಕಾಲ ಬರಬೇಕಾಯಿತು. ಅವರಿಗೆ ಒಟ್ಟು ಐದು ಮಕ್ಕಳು. ಹಿರಿಯವರಾದ ಶಂಕರ ಬಸ್ ಕಂಪನಿಯ ಬುಕ್ಕಿಂಗ್ ಏಜೆಂಟರೂ-ಕರ್ನಾಟಕ ರಾಜ್ಯ ಲಾಟರಿ ಮಾರಾಟಗಾರರೂ ಆಗಿದ್ದ ವಿಜಯೇಂದ್ರ ಶಣೈˌ ಮೊದಲಿಗೆ ಆ ಊರಿಗೆ ಸಂಯುಕ್ತ ಕರ್ನಾಟಕದ ಹಂಚಿಕೆದಾರರಾಗಿದ್ದು ಅನಂತರ ಕನ್ನಡಪ್ರಭ-ಇಂಡಿಯನ್ ಎಕ್ಸಪ್ರೆಸ್ ವಿತರಕರಾಗಿ ಬದಲಾದ ರಾಧಾಕೃಷ್ಣಯ್ಯˌ ಗೃಹಿಣಿಯಾಗಿದ್ದ ಮಗಳು ವಿನೀತˌ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದ ಮಗ ವೀರೇಂದ್ರ ಹಾಗೂ ಅವನಿಗೆ ಹೆಸರರಿವಿಲ್ಲದ ಕಿವುಡ-ಮೂಗನಾಗಿದ್ದ ಕೊನೆಯ ಹುಡುಗ. ಹೀಗೆ ಒಟ್ಟು ಐದು ಮಕ್ಕಳು ಬೆಳೆದು ದೊಡ್ಡವರಾಗುವ ಹೊತ್ತಿಗೆ ಅವರ ಗಂಡ ಶ್ರೀನಿವಾಸ ಶಣೈಮಾಮನ ಹೊಟೇಲು ಮುಚ್ಚಿ ಹೋಯಿತು. ಊರು ಬೆಳೆಯುತ್ತಿತ್ತು. ಬೆಳೆಯುತ್ತಿದ್ದ ಊರಿನಲ್ಲಿ ಹೊಸ ಹೊಟೇಲುಗಳು ಉದ್ಭವವಾಗಿ ಹಳೆಯ ಪದ್ಧತಿಯ ಅವರ ಹೊಟೆಲು ಹೊಸತನ ಮೈಗೂಡಿಸಿಕೊಂಡು ಮೆರೆಯಲಾರಂಭಿಸಿದ್ದ ಅನೇಕ ಹೊಸ ಹೊಟೇಲುಗಳ ಮುಂದೆ ಮಂಕು ಬಡಿಯಲಾರಂಭಿಸಿ ವ್ಯಾಪಾರ ಕುಸಿಯಲಾರಂಭಿಸಿದ್ದೂ ಸಹ ಅದು ಮುಚ್ಚಿ ಹೋಗಲು ಕಾರಣವಾಗಿತ್ತು. ಅದೆ ಸಮಯದಲ್ಲಿ ಹೊಸತಾಗಿ ರೂಪಿಸಲಾದ ಸೊಪ್ಪುಗುಡ್ಡೆ ವಿಸ್ತೀರ್ಣದ ಬಡಾವಣೆಯಲ್ಲಿ ಅವರ ಹಿರಿಯ ಮಗನಿಗೂ ಒಂದು ನಿವೇಶನ ಮಂಜೂರಾಗಿ ಅಲ್ಲಿ ಮನೆಯನ್ನ ಹೊಸತಾಗಿ ಕಟ್ಟಿ ನೆಮ್ಮದಿಯ ಬಾಳ್ವೆ ಆರಂಭಿಸಿದವರು.


ಅದರ ಹಿಂದೆಯೆ ಬಂಟ್ವಾಳದ ಹುಡುಗಿ ರತ್ನಾಬಾಯಿಯ ಜೊತೆಗೆ ಅವರ ಹಿರಿಯ ಮಗ ವಿಜಯೇಂದ್ರರ ಮದುವೆಯಾಯಿತು. ಪಟ್ಟಣದ ಕಟ್ಟೆ ಚನ್ನಕೇಶವನ ಬೀದಿಯಲ್ಲಿ ನಿವೇಶನ ಕೊಂಡು ಮನೆ ಕಟ್ಟಿ ನೆಲೆಸಿದ ಅವರ ಎರಡನೆ ಮಗ ರಾಧಾಕೃಷ್ಣಯ್ಯ ಕಾರ್ಕಳ ಮೂಲದ ವಿಮಲಾಬಾಯಿಯನ್ನ ಮದುವೆಯಾದರು. ದೀಪಾವಳಿ ಸಮಯದಲ್ಲಿ ಪಟಾಕಿ ಹಚ್ಚುವ ಮಕ್ಕಳ ಅಚಾತುರ್ಯದಿಂದಾದ ಅಪಘಾತದಲ್ಲಿ ತಮ್ಮ ಶ್ರವಣ ಶಕ್ತಿಯನ್ನ ಅವರು ಭಾಗಶಃ ಕಳೆದುಕೊಂಡರು.


ಮೂರನೆ ಮಗಳು ಸುನೀತಾ ಅಣ್ಣ ವಿಜಯೇಂದ್ರರ ಹೆಂಡತಿಯ ಪೋಸ್ಟ್ ಮಾಸ್ತರರಾಗಿದ್ದ ಹಿರಿಯಣ್ಣನನ್ನೆ ಮದುವೆಯಾಗಿ ಗಂಡನಿಗೆ ವರ್ಗಾವಣೆಯಾದಲೆಲ್ಲಾ ತಮ್ಮ ಬೆಕ್ಕಿನ ಬಿಡಾರದಂತಹ ಮನೆ ಬೆಳಗಿಸಿಕೊಂಡು ಗೃಹಿಣಿಯಾಗಿ ನೆಲೆಸಿದರು. ತಮ್ಮ ತವರಿನ ಬಾಂಧವ್ಯ ಮತ್ತೆ ಬೆಳೆಸಲು ಮನಸು ಮಾಡಿದ ಶಾಂತಾಮಾಯಿ ಕೆನರಾ ಬ್ಯಾಂಕಿನ ಉದ್ಯೋಗಿಯಾಗಿದ್ದ ನಾಲ್ಕನೆಯ ಮಗ ವೀರೇಂದ್ರರಿಗೆ ಸಿಂಡಿಕೇಟ್ ಬ್ಯಾಂಕಿನ ಉದ್ಯೋಗಿಯಾಗಿದ್ದ ತನ್ನಣ್ಣನ ಮಗಳು ಕಸ್ತೂರಿಯನ್ನೆ ತಂದುಕೊಂಡು ಊರಿಂದೂರಿಗೆ ಬ್ರಹ್ಮಚಾರಿಯಾಗಿ ವರ್ಗಾವಣೆಯಾಗಿ ಹೋಗುತ್ತಿದ್ದ ಅವನನ್ನೂ ಗೃಹಸ್ಥನನ್ನಾಗಿಸಿದರು.

ಕಡೆಯ ಮಗ ವಿಶ್ವ ಮಾತ್ರ ಅವರ ಪಾಲಿಗೆ ಹುಟ್ಟಿನಿಂದಲೂ ಯಾತನೆಯ ಕೂಸು. ಹುಟ್ಟಿದ ಮಗು ಉಸಿರು ಹಿಡಿಹಿಡಿದು ಅಳುತ್ತಿತ್ತಂತೆ. ಕಾರಣ ಏನಂತ ಗೊತ್ತಾಗದೆ ಕಕ್ಕಾಬಿಕ್ಕಿಯಾಗಿ ಹುಡುಕಿ ನೋಡಿದರೆ ಹುಟ್ಟಿದ ಕೂಸಿಗೆ ಮಲದ್ವಾರವೆ ಇರಲಿಲ್ಲವಂತೆ! ಅದಿರಬೇಕಾದ ಕಡೆ ಚರ್ಮ ಮುಚ್ಚಿಕೊಂಡಿದ್ದು ಮಲ ವಿಸರ್ಜಿಸಲಾಗದೆ ಮಗು ಹಾಗೆ ಉಸಿರು ಕಟ್ಟಿಕೊಂಡು ಒದ್ದಾಡುತ್ತಾ ಅಳುತ್ತಿತ್ತು. ಆಗೆಲ್ಲಾ ಮನೆಯಲ್ಲಿಯೆ ಹೆರಿಗೆಯಾಗುತ್ತಿದ್ದುದು ಕ್ರಮ. ಹೆರಿಗೆ ಮಾಡಿಸಲು ಬಂದಿದ್ದ ಸೂಲಗಿತ್ತಿ ಆಗಿದ್ದು ಆಗಿಹೋಗಲಿ ಅಂತ ಭಂಡಧೈರ್ಯ ಮಾಡಿ ಒಂದು ದಬ್ಬಣವನ್ನ ಬೆಂಕಿಗೆ ಹಿಡಿದು ಚೆನ್ನಾಗಿ ಬಿಸಿ ಮಾಡಿ ಅನಂತರ ತಣ್ಣೀರಲ್ಲಿ ಚುಂಯ್ ಎನ್ನಿಸಿ ಅಂದಾಜಿನ ಮೇಲೆ ಮಲದ್ವಾರ ಇರಬೇಕಿದ್ದ ಕಡೆ ಚುಚ್ಚಿಯೆ ಬಿಟ್ಟರಂತೆ! ಆ ರಣ ವೈದ್ಯದ ಪರಿಣಾಮ ಅಪಾರವಾದ  ರಕ್ತಸ್ರಾವವಾದರೂ ಗಟ್ಟಿಪಿಂಡವಾಗಿದ್ದ ಮಗು ಬದುಕುಳಿದು ಬಿಟ್ಟಿತು! ಹೊಟ್ಟೆಯೊಳಗೆ ಮಲ ಕಟ್ಟಿಕೊಂಡಿದ್ದ ಬಾಧೆಗಿಂತ ಈ ದಬ್ಬಣದ ಚಿಕಿತ್ಸೆ ಹೆಚ್ಚು ಯಾತನಾದಾಯಕ ಅನ್ನಿಸಲಿಲ್ಲವೇನೋ ಮಗು ಕ್ರಮೇಣ ಗೆಲುವಾಯಿತು. ಆದರೆ ಹುಟ್ಟಿನಿಂದಲೆ ಕಿವಿಯೆರಡೂ ಕೆಪ್ಪಾಗಿಯೆ ಇದ್ದ ಅದಕ್ಕೆ ಮಾತನಾಡುವ ಶಕ್ತಿ ಸಹ ಇಲ್ಲದೆ ಅಸಹಾಯಕವಾಗಿಯೆ ಅಂಗವಿಕಲತೆ ಹೊತ್ತು ಬೆಳೆಯಿತು. ಸಾಕಷ್ಟು ಆರೋಗ್ಯದ ಸಮಸ್ಯೆ ಹೊಂದಿದ್ದ ಆ ಹುಡುಗ ಹೆಚ್ಚು ಕಾಲ ಬದುಕದೆ ಇಪ್ಪತ್ತು ವರ್ಷಗಳ ಪ್ರಾಯ ತುಂಬುವ ಮೊದಲೆ ಅಸು ನೀಗಿದ್ದು ಮಾತ್ರ ಶಾಂತಾಮಾಯಿಗೆ ವಿಶ್ರಾಂತ ಜೀವನವನ್ನು ಸವೆಸುತ್ತಿದ್ದ ಈ ಅವಧಿಯಲ್ಲಿ ದುಃಖ ಹೊತ್ತು ತಂದಂತಹ ಸಂಗತಿ. 


ಕಾಲಕ್ರಮೇಣ ಮದುವೆಯಾಗಿ ಮನೆ ತುಂಬಿಕೊಂಡ ಸೊಸೆಯರಿಗೂ ಮಕ್ಕಳಾಗಿˌ ಅವರೆಲ್ಲರ ಆರೈಕೆ ಮಾಡುವ ಹೊತ್ತಲ್ಲಿ ಶಾಂತಾಮಾಯಿ ಶಾಶ್ವತವಾಗಿ ಮೊಮ್ಮಕ್ಕಳೆಲ್ಲರ "ಬಪಮ"ನಾಗಿ ರೂಪಾಂತರಗೊಂಡು ಅವರ ನಿಜ ನಾಮ ಎಲ್ಲರ ಸ್ಮೃತಿಯಿಂದಲೂ ಮರೆಯಾಗಿ ಹೋಯಿತು. ಅದರಲ್ಲೂ ಹೊಸ ತಲೆಮಾರಿನ ಮಕ್ಕಳಿಗಂತೂ ಅವರ ಹೆಸರೆ ಅರಿವಿಲ್ಲದಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಹಾಗೆ ನೋಡಿದರೆ ಶಾಂತಾ ಅನ್ನೋದು ಸಹ ಅವರ ನಿಜನಾಮವಲ್ಲ. ಗೌಡ ಸಾರಸ್ವತರಲ್ಲಿ ಮದುವೆಯಾದ ನಂತರ ಗಂಡನ ಮನೆಯಲ್ಲಿ ಹೆಣ್ಣಿಗೆ ಹೊಸ ಹೆಸರಿಡುವ ಕ್ರಮವಿದೆ. ಅವರ ಮೊದಲ ಸೊಸೆ ರತ್ನಾಬಾಯಿಯೂ ಇವರ ಮನೆ ತುಂಬಿದ ಮೇಲೆ ಸೀತಮ್ಮನಾದಂತೆˌ ಎರಡನೆ ಸೊಸೆ ವಿಮಲಾಬಾಯಿಯಿಂದ ಲೀಲಮ್ಮನಾದ ಹಾಗೆ ಶಾಂತಾಮಾಯಿ ಆಗಿದ್ದ ಅವರೂ ಹಿಂದೆ ಬೇರೊಂದು ಹೆಸರನ್ನ ಹೊತ್ತಿರಲೆಬೇಕು. ಪುರುಷ ಪ್ರಧಾನ ವ್ಯವಸ್ಥೆಯ ಅಪರೋಕ್ಷ ದಬ್ಬಾಳಿಕೆಯ ಫಲಶ್ರುತಿಯೆ ಈ ಹೆಸರು ಬದಲಾವಣೆ ಹಾಗೂ ಶಾಂತಿಮಾಯಿಯಂತಹ ಆ ತಲೆಮಾರಿನವರೆಲ್ಲರೂ ಅದರ ಬಲಿಪಶುಗಳು. ಬಹುಶಃ ಸ್ವಲ್ಪ ಆಧುನಿಕರಾಗಿದ್ದು ಉದ್ಯೋಗಸ್ಥೆಯಾಗಿದ್ದರಿಂದ ಸ್ವಾವಲಂಬಿತನದ ಪರಿಣಾಮವಾಗಿ ಕೊಂಚ ಸ್ವತಂತ್ರ ಮನೋಭಾವದವರಾಗಿದ್ದ ಮೂರನೆ ಸೊಸೆ ಕಸ್ತೂರಿ ಮಾತ್ರ ಜಯಲಕ್ಷ್ಮಿ ಅನ್ನೋ ಹೊಸ ಹೆಸರು ಇಟ್ಟರೂ ಅದನ್ನ ಹೊತ್ತು ಮೆರೆಸದೆ ಕೇವಲ ಕಸ್ತೂರಿಯಾಗಿಯೆ ಮುಂದುವರೆದರು.

ಕಾಲ ಮುಂದೋಡುತ್ತಿತ್ತು. ಆರ್ಥಿಕವಾಗಿ ಮನೆಯ ಪರಿಸ್ಥಿತಿ ಸುಧಾರಿಸಿತ್ತು. ಮೊಮ್ಮಕ್ಕಳು ಬೆಳೆಯುತ್ತಿದ್ದರುˌ ಕಲಿಕೆಯಲ್ಲಿ ಬುದ್ಧಿವಂತರಾಗಿದ್ಧ ಅವರೆಲ್ಲರೂ ತಮ್ಮ ತಮ್ಮ ಓದಿನ ಕ್ಷೇತ್ರದಲ್ಲಿ ತರಗತಿಗೆ ಮೊದಲಿಗರಾಗಿ ಮುನ್ನೆಲೆಗೆ ಬರತೊಡಗಿದರು. ಬಪಮನಾಗಿದ್ದ ಶಾಂತಾಮಾಯಿಗೂ ಸಹ ವಯಸ್ಸಾಗಿ ಮುಪ್ಪಡರ ತೊಡಗಿತು.

ಎಲ್ಲರ ಮನೆಯ ದೋಸೆಯೂ ತೂತು ಅನ್ನುವ ಹಾಗೆ ಲೋಕದ ಅಲಿಖಿತ ಅಘೋಷಿತ ನಿಯಮವಿರುವಂತೆ ಬಪಮನಿಗೂ ಅವರ ಜೊತೆಯಿದ್ದ ಹಿರಿಯ ಸೊಸೆಯಂದಿರಿಗೂ ಅಷ್ಟೇನು ಮಧುರವಾದ ಬಾಂಧವ್ಯವಿರಲಿಲ್ಲ. ಅಪಾರ ತಾಳ್ಮೆಯಿದ್ದ ಬಪಮ ಸೊಸೆಯಂದಿರ ಸಣ್ಣಪುಟ್ಟ ತಪ್ಪುಗಳು ಕಣ್ಣಿಗೆ ಬಿದ್ದರೂ ಅವನ್ನೆಲ್ಲ ಅವಗಣಿಸಿˌ ಅವರ ಅಸಹನೆಯ ದುಸುಮುಸುಗಳನ್ನ ಎದುರಾಡದೆ ಸಹಿಸಿ ಅಂತಹ ಸಂದರ್ಭಗಳಲ್ಲಿ ಶಾಂತಿಮಂತ್ರ ಪಠಿಸಿ ಮೌನಕ್ಕೆ ಜಾರಿ ಸಂಭವನೀಯ ಕಲಹಗಳಿಂದ ಪಾರಾಗುವ ಕಲೆಯಲ್ಲಿ ನಿಪುಣರಾಗಿದ್ದರು. ಮನೆಯಲ್ಲಿ ಅವರ ಅಂತರಂಗಕ್ಕೆ ಆಪ್ತರಾದವರು ಕೇವಲ ಅವರ ಮೊಮ್ಮಕ್ಕಳು ಮಾತ್ರ.

ಮೊಮ್ಮಕ್ಕಳು ಅಜ್ಜಿಗೆ ಮೊಮ್ಮಕ್ಕಳಿಗಿಂತ ಹೆಚ್ಚು ಸ್ನೇಹಿತರಂತಾದರು. ಶಾಲೆಗೆ ಹೋಗಿರದ ಬಪಮನಿಗೆ ಅಕ್ಷರ ಜ್ಞಾನವಿರಲಿಲ್ಲ. ಅನಕ್ಷರಸ್ಥೆಯಾದ ಅವರಿಗೆ ಮೊದಲಿಗೆ ಮನರಂಜನೆಯ ಮಾಧ್ಯಮವಾಗಿದ್ದುದು ರೇಡಿಯೋ. ಅದನ್ನ ಸಹ ಮೀರಿ ಅವರ ಮನಸನ್ನ ಆವರಿಸುತ್ತಿದ್ದುದು ಪತ್ರಿಕಾ ವಿತರಕರಾಗಿದ್ದ ಅವರ ಎರಡನೆ ಮಗ ತಂದು ಕೊಡುತ್ತಿದ್ದ ಚಂದಾಮಾಮ-ಬೊಂಬೆಮನೆ-ಬಾಲಮಿತ್ರ-ತುಷಾರ-ಮಯೂರ-ಸುಧಾ-ತರಂಗ. 


ಅವುಗಳಲ್ಲಿ ಪ್ರಕಟವಾಗಿರುತ್ತಿದ್ದ ಕಥಾಸರಿತ್ಸಾಗರವೆ ಅವರ ಪ್ರಪಂಚ. ದೂರದರ್ಶನದ ಮೆಘಾ ಧಾರವಾಹಿಗಳ ಕಾಲ ಆರಂಭವಾಗಿ ಅದರಲ್ಲಿ ಕೆಲವು ಅವರ ಮನ ಸೆಳೆದರೂ ಸಹ ಪತ್ರಿಕೆಗಳನ್ನ ಓದಿಸಿ ಕೇಳುವ ಸುಖವೆ ಅವರಿಗಿಷ್ಟ.

( ಇನ್ನೂ ಇದೆ.)


https://youtu.be/pqECyZtYqpA

07 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೯.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೯.👊


ಅವನು ಹುಟ್ಟಿ ಬೆಳೆದಿದ್ದ ಬಡಾವಣೆ ಆ ಪುಟ್ಟ ಪಟ್ಟಣದ ಒಂದು ಯೋಜಿತ ವಿಸ್ತರಣ. ಗುಡ್ಡವೊಂದರ ನೆತ್ತಿಯಲ್ಲಿ ಸರಕಾರಿ ಕಟ್ಟಡಗಳ ನಿರ್ಮಾಣಕ್ಕಾಗಿ ಜಾಗ ಉಳಿಸಿಕೊಂಡು ಅದರ ಪೂರ್ವ ಭಾಗದಲ್ಲಿ ಕಂಠಿಹಾರದಂತೆ ಆಂಗ್ಲ ಅಕ್ಷರ "ಯು" ಆಕಾರದಲ್ಲಿ ಮುಖ್ಯರಸ್ತೆ ನಿರ್ಮಿಸಿ ಅದಕ್ಕೆ ಉದ್ದಲಾಗಿ ಒಂದು ಪಕ್ಕ ಜಟೆ ಇಳಿಸಿದ್ದಂತೆ ಹದಿನಾಲ್ಕು ೩೦*೪೦ ಚದರಡಿ ಅಳತೆಯ ಗೃಹ ನಿವೇಶನ ಯೋಗ್ಯ ತಿರುವುಗಳನ್ನ ಆ ಗುಡ್ಡದ ಬುಡದ ಕಣಿವೆಯಲ್ಲಿದ್ದ ಶೆಟ್ಟರ ಗದ್ದೆಯ ಮೇಲು ಬದುವಿನಲ್ಲಿದ್ದ ಅಡ್ಡಲಾದ ಮತ್ತೊಂದು ಪುಟ್ಟರಸ್ತೆಯವರೆಗೂ ಯೋಜಿತವಾಗಿ ನಿರ್ಮಿಸಲಾಗಿತ್ತು. ಅದೆ ಆ ಗುಡ್ಡದ ಪಶ್ಚಿಮ ಭಾಗದಲ್ಲಿ ಕೊಂಚ ದೊಡ್ಡದಾದ ಅಂದರೆ ೬೦*೮೦ ಅಡಿ ನಿವೇಶನಗಳ ಅಡ್ಡಡ್ಡವಾದ ರಸ್ತೆಗಳನ್ನ ಆ ಭಾಗದ ಗುಡ್ಡದ ಬುಡದ ಕಣಿವೆಯಲ್ಲಿದ್ದ ಬೆಟ್ಟಮಕ್ಕಿ ಗದ್ದೆಗಳವರೆಗೂ ನಿರ್ಮಿಸಿ ಹಂಚಿದ್ದರು. 


ಆ ಗುಡ್ಡದ ಮೇಲ್ಭಾಗದಲ್ಲಿ ಸಂಸ್ಕೃತಿ ಮಂದಿರˌ ತಾಲೂಕು ದಂಡಾಧಿಕಾರಿಗಳ ನ್ಯಾಯಾಲಯˌ ಪುರಸಭೆ ಕಛೇರಿˌ ಬಾಲಕಿಯರ ಸರಕಾರಿ ಪ್ರೌಢಶಾಲೆˌ ಅದರ ಮಗ್ಗುಲಲ್ಲೆ ನಿರ್ಮಿಸಲಾಗಿದ್ದ ಹೊಸ ಸರಕಾರಿ ಕಿರಿಯ ಪ್ರಾಥಮಿಕ ಶಾಲೆˌ ಊರಿನ ಸಂತೆಮಾಳˌ  ಎರಡು ಸಿನೆಮಾ ಮಂದಿರಗಳು ಹಾಗೂ ತಾಲೂಕಿನ ಸಹಕಾರಿ ಭತ್ತದ ಮಿಲ್ಲುˌ ಪಡಿತರ ದಾಸ್ತಾನು ಕೇಂದ್ರˌ ವಿದ್ಯುತ್ ಸರಬರಾಜು ಕೇಂದ್ರದ ತಾಲೂಕು ಮುಖ್ಯ ಕಛೇರಿˌ ಅದರ ಸಿಬ್ಬಂದಿಗಳ ವಸತಿಗೃಹದ ಸಾಲುˌ ವಿಶಾಲವಾಗಿದ್ದ ಮೂರು ಆಟದ ಬಯಲುˌ ಉಪಯೋಗದಲ್ಲಿ ಇಲ್ಲದ ಸಾಬರ ಸ್ಮಶಾನ ಇಷ್ಟು ಇದ್ಧವು.


ಹಿಂದೆ ಊರದಷ್ಟು ಬೆಳೆದಿದ್ದಿರದ ಕಾಲದಲ್ಲಿˌ ಆ ಗುಡ್ಡದಲ್ಲಿ ಯತೇಚ್ಛವಾಗಿ ಬೆಳೆದುಕೊಂಡಿರುತ್ತಿದ್ದ ಕಾಡಿನ ಸೊಪ್ಪುಗಳನ್ನ ಕೃಷಿಕಾರ್ಯಕ್ಕೂˌ ಹೈನು ಮೇವಿಗೂ ಊರವರು ಕೊಚ್ಚಿಕೊಂಡು ಹೋಗುವ ಅಭ್ಯಾಸವಿಟ್ಟುಕೊಂಡಿದ್ದುˌ ಅದನ್ನ ಆಡುನುಡಿಯಲ್ಲಿ "ಸೊಪ್ಪುಗುಡ್ಡೆ"ಯೆಂದೆ ಕರೆಯುವ ರೂಢಿ ಇಟ್ಟುಕೊಂಡಿದ್ದರು. ನಿರ್ಜನವಾಗಿದ್ದ ಕಾಲದಲ್ಲಿ ಅಲ್ಲಿ ಸತ್ತವರ ಹೆಣಗಳನ್ನ ಹೂಳುವ ಹಾಗೂ ಸುಡುವ ತಾಣವಾಗಿಯೂ ಬಳಸುತ್ತಿದ್ದರಂತೆ. ಒಟ್ಟಿನಲ್ಲಿ ನಿಶ್ಯಬ್ಧದ ತಾಣವಾಗಿದ್ದ ನೈಸರ್ಗಿಕ ಹಸಿರು ಸಮೃದ್ಧವಾಗಿದ್ದ ಗುಡ್ಡವೊಂದು ಕಾಲಾಂತರದಲ್ಲಿ ಹೆಚ್ಚುತ್ತಿದ್ದ ಜನಸಂಖ್ಯೆಯ ಕಾರಣದಿಂದ ಮಾನವನ ಮೂಗು ತೂರಿಸುವಿಕೆಗೆ ಬಲಿಯಾಗಿ ವಾಸಯೋಗ್ಯ ಬಡಾವಣೆಯಾಗಿ ರೂಪಾಂತರಗೊಂಡು ಗಿಜಿಗುಡುವ ವಿಸ್ತರಣದ ಅವತಾರ ಎತ್ತಿತ್ತು. ಅದೆ ಆ ಊರಿನ ಮೊತ್ತಮೊದಲ ವಿಸ್ತರಣ ಸಹ ಹೌದು.


ಇಂತಿಪ್ಪ ಬಡಾವಣೆಯ ಪೂರ್ವದಂಚಿನಲ್ಲಿದ್ದ ತಿರುವುಗಳಲ್ಲಿ ಮುಖಾಮುಖಿ ನಿವೇಶನಗಳನ್ನ ಮಧ್ಯದಲ್ಲೊಂದು ಕಿರು ರಸ್ತೆ ಮಾತ್ರ ಬಿಟ್ಟುˌ ಜೊತೆಗೆ ನಿವೇಶನಗಳ ಹಿಂಭಾಗದಲ್ಲಿ ಹಿಂದಿನ ಹಾದಿಯೊಂದನ್ನ ಯೋಜಿಸಿ ಕಟ್ಟಿದ್ದರು. ಅಂತಹ ತಿರುವೊಂದರ ಅಂಚಿನಲ್ಲಿದ್ದ ಮೊದಲ ಮನೆ ಅವನ ಅಜ್ಜನದ್ದು. ಹೀಗಾಗಿ ಅವನನ್ನ ಅವನಮ್ಮ ಅಲ್ಲೆ ಹೆತ್ತಿದ್ದಳು.


ಇವರ ಮನೆಯೆದುರಿದ್ದದ್ದೆ "ಶಂಕರ್ ಕಂಪನಿ"ಯ ಬುಕ್ಕಿಂಗ್ ಏಜೆಂಟ್ ವಿಜಯೇಂದ್ರ ಶಣೈ ಮನೆ. ಅವರಮ್ಮನೆ ಈ ಇವನ ನೆಚ್ಚಿನ ಅಜ್ಜಿ "ಬಪಮ". ಕೊಂಕಣಿಗಳಾಗಿದ್ದ ಶಣೈಗಳ ಮನೆಯಲ್ಲಿ ಅವರ ಅಜ್ಜಿಯನ್ನ ಮೊಮ್ಮಕ್ಕಳೆಲ್ಲ ಬಪಮ ಎಂದೆ ಕೊಂಕಣಿಯಲ್ಲಿ ಸಂಬೋಧಿಸುವುದು ರೂಢಿ. ಹೀಗಾಗಿ ಊರಿನˌ ಕೇರಿಯˌ ಬೀದಿಯ ಆ ವಯಸ್ಸಿನ ಹಾಗೂ ಅದಕ್ಕಿಂತ ಸಣ್ಣ ಪ್ರಾಯದ ಮಕ್ಕಳ ಪಾಲಿಗೆ ಅವರು ಸಾರ್ವತ್ರಿಕವಾಗಿ ಬಪಮನೆ ಆಗಿದ್ದರು. ಪ್ರತಿದಿನ ಸಂಜೆ ಗಣಪತಿ ಪೂಜೆ ಮಾಡಿ ನೆನೆಸಿಟ್ಟ ಕಡಲೆಯನ್ನೋˌ ಒಂದೊಮ್ಮೆ ಮಗ-ಸೊಸೆ ತಂದ ಕಡಲೆಯ ದಾಸ್ತಾನು ತೀರಿ ಹೋಗಿದ್ದರೆ ನೆನೆಸಿಟ್ಟ ಹೆಸರುಬೇಳೆಯನ್ನೋ ಅದೆ ಗಣಪತಿಗೆ ನೈವೇದ್ಯ ಮಾಡಿ ಬೀದಿಯ ಎಲ್ಲಾ ಕಿರಿಯರಿಗೂ ಅದನ್ನ ಕರೆದು ಹಂಚುವ ಕ್ರಮ ಇಟ್ಟುಕೊಂಡಿದ್ದ ಬಪಮ ಎಲ್ಲಾ ಮಕ್ಕಳ ಮನಗೆಲ್ಲಲು ಅದೂ ಸಹ ಒಂದು ಕಾರಣವಾಗಿತ್ತು.


ತಲೆಮಾರುಗಳು ಬದಲಾದರೂ ಹೊಸಹುಟ್ಟಿನ ಮಕ್ಕಳ ಪಾಲಿಗೂ ಅಕ್ಕರೆಯ ಅಜ್ಜಿಯಾಗಿಯೆ ಉಳಿದಿದ್ದ ಬಪಮನ ವಯಕ್ತಿಕ ಜೀವನ ಮಾತ್ರ ಅಷ್ಟು ಹಿತಕಾರಿಯಾಗಿರಲಿಲ್ಲ. ಅದರಲ್ಲೂ ಅವರ ವೈವಾಹಿಕ ಬದುಕಂತೂ ದೊಡ್ಡ ದುರಂತ. ಉಡುಪಿ ಹತ್ತಿರದ ಪಾರಂಪಳ್ಳಿಯ ತುಂಬು ಕುಟುಂಬದ ಹುಡುಗಿ ಶಾಂತಾಮಾಯಿ ಅದಾಗಲೆ ಒಂದು ಹೆಣ್ಣುಮಗುವಿದ್ದ ವಿಧುರ ಶಣೈಮಾಮ್ ಎರಡನೆ ಹೆಂಡತಿಯಾಗಿ ಕರಾವಳಿಯ ತನ್ನೂರಿಂದ ಮಲೆಸೀಮೆಯ ಪ್ರಸಾದಪುರಕ್ಕೆ ಶಾಶ್ವತವಾಗಿ ಸ್ಥಳಾಂತರವಾದದ್ದು ಕಳೆದ ಶತಮಾನದ ಮೂರನೆ ದಶಕದಲ್ಲಿ. ಆಗಷ್ಟೆ ಪ್ರಾಯಕ್ಕೆ ಬಂದಿದ್ದ ಶಾಂತಾಮಾಯಿಗೂ ಅದಾಗಲೆ ಹೆಂಡತಿಯನ್ನ ಕಳೆದುಕೊಂಡು ವಿಧುರರಾಗಿದ್ದ ಅವರಿಂದ ಮೂರು ಪಟ್ಟು ಹೆಚ್ಚು ಪ್ರಾಯಸ್ಥರಾಗಿದ್ದ ಶಣೈಮಾಮರಿಗೂ ವರಸಾಮ್ಯವೆ ಇರಲಿಲ್ಲ. ಆದರೆ ಆಗೆಲ್ಲಾ ಇಂತಹ ಅಪಸವ್ಯದ ಜೋಡಿಗಳ ಮದುವೆಗಳಾಗುತ್ತಿದ್ದುದು ಸರ್ವೇಸಾಮಾನ್ಯ. ಅಂತಹ ಒಂದು ಒಲ್ಲದ ಮದುವೆಯ ಬಲಿಪಶುವಾಗಿ ಆ ಊರಿಗೆ ಬಂದಿದ್ದ ಶಾಂತಮಾಯಿಗೆ ತನ್ನ ಪ್ರಾಯಸಂದ ಗಂಡನ ಕೃಪೆಯಿಂದ ಮುಂದಿನ ಒಂದೆರಡು ದಶಕಗಳಲ್ಲಿ ಅನುಭವಿಸಬೇಕಾಗಿ ಬಂದದ್ದು ಮಾತ್ರ ಕೇವಲ ನರಕ ಸದೃಶ ಬಾಳ್ವೆ.


ಅದಾಗಲೆ ಅವರ ಗಂಡನಿಗೆ ಆ ಊರಿನ ಪ್ರಮುಖ ಸ್ಥಳದಲ್ಲಿ ಹೊಟೇಲೊಂದರ ವ್ಯವಹಾರವಿತ್ತು. ಅನ್ನ ಮಾರೋದು ಅಪರಾಧ ಅನ್ನುವ ಭಾವನೆಯಿದ್ದ ಕಾಲ ಅದು. ಹೊಟೆಲಿನಲ್ಲಿ ಬಂದು ತಿನ್ನುವ ಚಪಲ ಒಂದೆಡೆಯಾದರೆˌ ಹಾಗೆ ತಿಂದದ್ದು-ಕುಡಿದದ್ದು ಕಂಡವರ ಕಣ್ಣಿಗೆ ಬಿದ್ದರೆ ಆಡಿಕೊಳ್ಳುವ ಜನರ ಬಾಯಿಗೆ ಪುಗಸಟ್ಟೆ ಆಹಾರವಾದೇವು ಎಂದು ಅಂತಹ ಸಣ್ಣ ಊರುಗಳ ಮಂದಿ ಹೆದರುತ್ತಿದ್ದˌ ಇಬ್ಬಂದಿತನ ಇನ್ನೊಂದೆಡೆಗೆ ತುಂಬಿಕೊಂಡೆ ಕದ್ದುಮುಚ್ಚಿ ಹೊಟೇಲು ತಿಂಡಿಗಳಿಗೆ ಜೊಲ್ಲು ಸುರಿಸಿಕೊಂಡು ಬರುತ್ತಿದ್ದ ಆಶಾಡಭೂತಿ ಗ್ರಾಹಕರ ಕೃಪೆಯಿಂದ ತಕ್ಕಮಟ್ಟಿಗೆ ಚೆನ್ನಾಗಿಯೆ ಶಣೈಮಾಮರ ವ್ಯಾಪಾರ ಲಾಭದಲ್ಲಿ ಕುದುರಿತ್ತು. 


ಹೆಸರಿಗೆ ಹೊಟೇಲಾದರೂ ಅಲ್ಲಿನ ಅಡುಗೆಯವರˌ ಸಪ್ಲೆಯರˌ ಕ್ಲೀನರˌ ಎಂಜಲು ತಟ್ಟೆ ಲೋಟ ಪಾತ್ರೆ ತೊಳೆಯುವˌ ಅಡುಗೆಗೆ ಹಿಟ್ಟು-ಚಟ್ನಿ-ಖಾರ ಇವೆಲ್ಲವನ್ನೂ ಕಡೆದು ಅಚ್ಚುಕಟ್ಟಾಗಿ ಬೇಯಿಸಿ "ಊಟ ತಯಾರಿದೆ" ಬೋರ್ಡಿಗೆ ನ್ಯಾಯ ಒದಗಿಸುವ ಈ ಎಲ್ಲಾ ಬಹುಪಾತ್ರಗಳ ಏಕಪಾತ್ರಾಭಿನಯವನ್ನ ಮನೆಯವರೆ ಮಾಡಬೇಕಿತ್ತು. ಅದಕ್ಕಾಗಿ ಬೇರೆ ಕೆಲಸದವರನ್ನ ಇಟ್ಟುಕೊಂಡಿರದ ಹೊಟೇಲ್ ಮನೆಯ ವ್ಯವಸ್ಥೆ ಅದಾಗಿತ್ತು. ಮೊದಲ ಮೂರು ವಿಭಾಗಗಳನ್ನ ಶಣೈಮಾಮ್ ವಹಿಸಿಕೊಂಡಿದ್ದರೆˌ ಉಳಿದ ಎಲ್ಲಾ ಒಳಮನೆಯ ವಿಭಾಗಗಳಿಗೂ ಶಾಂತಾಮಾಯಿಯೆ ಜವಬ್ದಾರಿ. ಒಟ್ಟಿನಲ್ಲಿ ಇನ್ನೂ ಬೆಳ್ಳಿ ಮೂಡುವ ಮೊದಲೆ ಎದ್ದು ನಡುರಾತ್ರಿ ಜಾರಿದ ನಂತರ ಮಲಗುವ ಅನಿವಾರ್ಯತೆಯಿದ್ದ ಅವರ ಬದುಕಿನ ನಡುವಿನ ಕಾಲವೆಲ್ಲ ಒಂದೆ ಸಮನೆ ಮೈಮುರಿತದ ದುಡಿಮೆ.


ಇಷ್ಟು ಸಾಲದು ಅಂತ ಇದರ ಜೊತೆಗೆˌ ಅಷ್ಟೆಲ್ಲಾ ಪುಗಸಟ್ಟೆಯಾಗಿ ದುಡಿಸಿಕೊಂಡೂ ಸಹ ಕಿಂಚಿತ್ತೂ ಕರುಣೆಯಿಲ್ಲದವನಂತೆ ಸಣ್ಣಪುಟ್ಟದಕ್ಕೂ ಸಿಟ್ಟಾದಾಗ ಜಾಡಿಸಿ ಸೊಂಟಕ್ಕೆ ಒದೆಯುವುದನ್ನೆ ಅಭ್ಯಾಸ ಮಾಡಿಕೊಂಡಿದ್ದ ದುರುಳ ಗಂಡನ ಹಿಂಸಾಪ್ರವೃತ್ತಿಯನ್ನ ಸಹಿಸಿಕೊಂಡುˌ ಆ ನಡುವೆ ರಾತ್ರಿ ದಣಿದಿದ್ದರೂ ಬಿಡದೆ ಹಾಸಿಗೆಯಲ್ಲೂ ಹಾಕಿಕೊಂಡು ಹಿಂಸಿಸುತ್ತಿದ್ದ ಶಣೈಮಾಮನ ಪ್ರಸಾದದಿಂದ ಪುಟ್ಟ ಪ್ರಾಯದಲ್ಲೆ ನಾಲ್ಕು ಗಂಡು ಹಾಗೂ ಒಂದು ಹುಡುಗಿಯ ತಾಯಿಯಾಗಿದ್ದರು ಶಾಂತಾಮಾಯಿ. 

ಬಸಿರು-ಬಾಣಂತನಗಳ ಮಧ್ಯ ಹೊಟೇಲಿನ ಗೇಯ್ಮೆಯನ್ನೂ ಮಾಡಿಕೊಂಡುˌ ಮುದುಕ ಗಂಡನ ಹಿಂಸಾ ಪ್ರವೃತ್ತಿಯನ್ನೂ ತಾಳಿಕೊಂಡುˌ ತನ್ನ ಮಕ್ಕಳ ಜೊತೆಗೆ ಮಲ ಮಗಳ ದೇಖಾರೇಖಿಯನ್ನೂ ಮಾಡಿಕೊಂಡು ತನ್ನ ದೌರ್ಭಾಗ್ಯದ ಬದುಕನ್ನ ಹಲ್ಲುಕಚ್ಚಿ ಸಹಿಸಿಕೊಂಡೆ ಬದುಕಿ ಮಾಗಿ ಮುಪ್ಪಾಗಿ ತನ್ನ ವಯಸ್ಸಿಗಿಂತ ಬೇಗ ಮುದಿತನಕ್ಕೆ ಜಾರಿದ್ದ ಶಾಂತಾಮಾಯಿ ಅವನನ್ನೂ ಸೇರಿ ಅವನ ತಲೆಮಾರಿನವರನ್ನ ಹೊರತುಪಡಿಸಿ ಉಳಿದೆಲ್ಲ ಪರಿಚಿತರ ಪಾಲಿಗೂ ಬಪಮನಾಗಿ ಬದಲಾಗಿದ್ದರು.

( ಇನ್ನೂ ಇದೆ.)



https://youtu.be/Muv9sDDHmEE

06 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೮.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೮.👊


ಈಗ ಆ ಸಣ್ಣವನ ಮಾನದ ಪ್ರಶ್ನೆಯಾದ ಪೇಚಾಟ ಅವನಿಗೆ ಮಾತ್ರ ಒಂಥರಾ ತಮಾಷೆ ಅನಿಸಿತು. ಒಂದೊಂದು ಪ್ರಾಯಘಟ್ಟದಲ್ಭಿ ನಾವೆಲ್ಲರೂ ಬೆಳೆಸಿಕೊಂಡಿರುವ ಅನೇಕ ಭ್ರಮೆಗಳು ಬೇರೆಯವರಿಗೆ ನಗೆಪಾಟಲಿನ ವಸ್ತುವಾಗಿದ್ದರೂˌ ಆ ಪ್ರಾಯಸ್ಥರ ಪಾಲಿಗಂತೂ ಅದು ಬಹಳ ಗಂಭೀರವಾದ ವಿಚಾರ ಅನ್ನೋ ವಿಷಯವನ್ನ ಅವನು ಚೆನ್ನಾಗಿ ಬಲ್ಲ. ಒಂದು ಕಾಲದಲ್ಲಿ ಅವನೂ ಸಹ ಅದೆ ವಯಸ್ಸನ್ನ ದಾಟಿ ಬಂದಿದ್ದವವನೆ ಅಲ್ಲವೆ?


ಹೀಗಾಗಿ ಸುಭಾಶನ ಮನಸಿನ ಆತಂಕವನ್ನ ಅರ್ಥ ಮಾಡಿಕೊಂಡವನಂತೆ ಅವನನ್ನ ಸಂತೈಸುತ್ತಾ "ನೋಡಾ ಅದನ್ನ ಬೇರೆಯವರು ಕಾಣೋದು ನಿನಗಷ್ಟು ನಾಚಿಕೆ ಆಗ್ತದೆ ಅಂದ್ರೆ ಬೇಡ ಬಿಡು ಆ ಫೊಟೋಗಳನ್ನೆಲ್ಲ ಬೇರೆ ಫೊಟೋಗಳ ಹಿಂದೆ ತಿರುಗುಮುರುಗಾಗಿ ಅಡಗಿಸಿಡು. ಎಂತಸ ಆಗದಿಲ್ಲನ ಆಗ. ಆದರೆ ನೋಡುˌ ಈಗಲ್ಲ ಇನ್ಯಾವುದೋ ಒಂದು ದಿನ ನಿನಗವುಗಳನ್ನ ನೋಡಿದಾಗ ಈಗ ಅವನ್ನ ತೆಗೆಯುವಾಗ ನನಗೇನನ್ನಿಸುತ್ತಿತ್ತೋ ಅದೆ ಅನಿಸಿಯಾತು." ಕಿರಿಯನ ಹೆಗಲ ಮೇಲೆ ಆತ್ಮೀಯತೆಯಿಂದ ತನ್ನ ಎಡಗೈ ಹಾಕಿ ಬಲಗೈಯಿಂದ ಅವನ ಬಲ ಅಂಗೈ ಹಿಡಿದು ಅದೆ ಮಾತನ್ನ ಮುಂದುವರೆಸುತ್ತಾ "....ಈಗ ನಿನ್ನ ಅಂಗೈಯಲ್ಲಿರೋ ಐದು ಬೆರಳುಗಳನ್ನೆ ನೋಡು ಒಂದೆ ಸಮ ಇವೆನ ಅವೆಲ್ಲ? ಒಂದೊಮ್ಮೆ ಅವೆಲ್ಲ ಒಂದೆ ತರ ಸರಿಸಮಾನವಾಗಿರ್ತಿದ್ರೆ ಎಷ್ಟು ಗಲೀಜಾಗಿ ಕಾಣ್ತಿತ್ತು ಕೈ ಅಂತ ಯೋಚಿಸಿ ನೋಡು! ನಮ್ಮೆಲ್ಲರ ಬದುಕು ಸಹ ಹಾಗೆಯೆ. ಒಂದೊಂದು ದಿನ ಮತ್ತೊಂದು ದಿನಕ್ಕೆ ಸರಿಸಮವಾಗಿರಬೇಕು ಅಂತೇನಿಲ್ಲನ. ಹಾಗೇನಾದ್ರೂ ಎಲ್ಲಾ ದಿನಗಳೂ ಒಂದೆ ತರಹ ಇರ್ತಿದ್ರೆ ಜೀವನನೆ ಬೇಸರ ಹುಟ್ಟಿಸಿಬಿಡ್ತದೆ. ಇಂದಿನ ತಮಾಷೆ ಮುಂದೊಂದು ದಿನದ ಮಧುರ ನೆನಪುಗಳಾಗುತ್ತವೆ ಆಯ್ತ. ಅವನ್ನ ಕಳೆಯದೆ ನಾನು ಹೋದ ಮೇಲೆ ಹರಿಯದೆ ಹಾಗೆ ಉಳಿಸಿಕೊಳ್ಳ. ನಾನು ಈಗ ಹೇಳಿದ ಮಾತುಗಳು ಇನ್ಯಾವತ್ತಾದ್ರೂ ನೀನೂ ನನ್ನಂತೆನೆ ಆದಾಗ ನಿನಗೂ ಖಂಡಿತವಾಗಿ ಅರ್ಥವಾಗ್ತವೆ" ಅಂದ. 


ಮೌನವಾಗಿ ಇವನ ಬೋಧನೆ ಆಲಿಸುತ್ತಿದ್ದ ಹುಡುಗನಿಗೆ ಇನ್ನಷ್ಟು ತತ್ವ ಹೇಳುವ ಉಮೇದು ಹುಟ್ಟಿ ಅವ ತನ್ನ ಜೇಬಿನಿಂದ ರುಮಾಲು ತೆಗೆದು ಅದನ್ನ ತ್ರಿಕೋನಾಕೃತಿ ತಲೆಕೆಳಗಾಗುವಂತೆ ಮಡಚಿ ತನ್ನ ಎರಡೂ ಕೈಗಳಲ್ಲಿ ಅದರ ಒಂದೊಂದು ತುದಿ ಹಿಡಿದು "ಇಗ ಇಲ್ಲಿ ನೋಡು ನಾವೆಲ್ಲರೂ ಬದುಕುತ್ತಿರೋ ಬಾಳು ಇದಂತ ಭಾವಿಸು ಈಗ. ಈ ಎಡಗೈಯಲ್ಲಿ ನಾನು ಹಿಡಿದಿರೋದೆ 'ಹುಟ್ಟು'. ನಾವು ಯಾರ ಮಕ್ಕಳಾಗಿ-ಯಾರ ಮನೆಯಲ್ಲಿ-ಯಾವ ಜಾತಿಯಲ್ಲಿ-ಯಾವ ಮತದಲ್ಲಿ-ಯಾವ ಊರಲ್ಲಿ ಹುಟ್ತೇವೋ ಅದು ನಮ್ಮ ಹಿಡಿತದಲ್ಲಿರಲ್ಲ." ಅಂತ ಕರವಸ್ತ್ರದ ಆ ಭಾಗವನ್ನ ಕೈ ಬಿಟ್ಟ. ಅದೆ ಮಾತುಗಳನ್ನ ಮುಂದುವರೆಸಿಕೊಂಡು "....ಹಾಗೆನೆ ಈ ಬಲಗೈಯಲ್ಲಿ ಹಿಡಿದ ತುದಿಯನ್ನ ಸಾವು ಅಂತ ತಿಳಕೋ. ಯಾವಾಗ-ಎಲ್ಲಿ-ಎಷ್ಟು ಹೊತ್ತಿಗೆ-ಹೇಗೆ ಸಾಯುತ್ತೇವೋ ಅದೂ ಸಹ ನಮ್ಮ ಹಿಡಿತದಲ್ಲಿಲ್ಲ." ಅನ್ನುತ್ತಾ ಬಲಗೈಯಿಂದಲೂ ಅದನ್ನ ಕೈಬಿಟ್ಟ. ರುಮಾಲು ಅವನ ಮಡಿಲಿಗೆ ಬಿತ್ತು. 


ಅದೆ ಲಹರಿಯಲ್ಲಿ ಮುಂದುವರೆದು "...ಹೀಗೆ ಹುಟ್ಟಾಗಲಿ ಸಾವಾಗಲಿ ಯಾರದ್ದೂ ಹಿಡಿತದಲ್ಲಿರೋದಿಲ್ಲ ನೋಡು. ಹಾಗಂತ ನಾವೂ ಸಹ ಬದುಕನ್ನ ಇನ್ನಷ್ಟು ಮತ್ತಷ್ಟು ಅರ್ಥಪೂರ್ಣವಾಗಿಸಿಕೊಳ್ಳದೆ ಸೋಮಾರಿ ಸಿದ್ಧರಾಗಿ ಪ್ರಯತ್ನವನ್ನೆ ಪಡದೆ ಉಳಿಯೋದಲ್ಲ. ಹೀಗಾಗಿ ಬದುಕನ್ನ ಬಂದ ಹಾಗೆ ಎದುರಿಸ್ತಾˌ ಯಾರು ಕರೆದು ಬುದ್ಧಿ ಹೇಳಿ ತಿದ್ದಿ ತೀಡಿ ಸರಿದಾರಿಯಲ್ಲಿ ನಡೆಸುವವರು ನಮಗೆ ಇಲ್ದೆ ಇದ್ರೂಸˌ ನಮಗೆ ನಾವೆ ಒಳ್ಳೆಯವರಾಗಿ ಬದುಕುವುದನ್ನ ಯಾವಾಗಲೂ ಕಲಿಯಬೇಕು. ಬೇರೆಯವರಿಗೆ ತೊಂದರೆ ಕೊಡದೆ ಸಾಧ್ಯವಾದಷ್ಟು ನಾವಿರುವ ಈ ಸಮಾಜಕ್ಕೆ ಉಪಕಾರಿಯಾಗಿˌ ಒಂದು ಪಕ್ಷ ಉಪಕಾರ ಮಾಡೋ ಮನಸು ಒಂದ್ವೇಳೆ ಇಲ್ಲದಿದ್ರೆ ಉಪದ್ರವನ್ನಾದರೂ ಮಾಡದೆ ಬದುಕುವುದನ್ನ ಕಲಿಯಬೇಕು. ಅದು ಬೇರೆಯವರು ನಮ್ಮನ್ನ ಹೊಗಳಲಿ ಅಂತ ಒಳ್ಳೆಯವರಾಗೋದಲ್ಲ ಕೇಳ್ತ? ನಮಗೆ ನಾವೆ ಕೆಟ್ಟವರು ನಾವಲ್ಲ ಅನ್ನುವ ತೃಪ್ತಿ ಬರೋದಕ್ಕಾದ್ರೂ ಸರಿ ಒಳ್ಳೆಯ ಬುದ್ಧಿ ಬೆಳೆಸಿಕೊಂಡು ಬಾಳಬೇಕು ಗೊತ್ತಾಯ್ತನ?" ಅಂದು ತನ್ನ ಸುದೀರ್ಘ ಭಾಷಣಕ್ಕೆ ಪೂರ್ಣವಿರಾಮವನ್ನಿತ್ತು ತನ್ನದೆ ಲಹರಿಯಲ್ಲಿ ಮುಳುಗಿ ಹೋಗಿ ಕಡಲ ಒಡಲಲ್ಲಿ ಕಡುಕೆಂಪಗೆ ಹೊಳೆಯುತ್ತಾ ಮುಳುಗುತ್ತಿರುವ ಸೂರ್ಯನನ್ನ ದಿಟ್ಚಿಸುತ್ತಾ ಮೌನವಾದ.


ಇವನ ಆ ತತ್ವಸಂಚಯದ ಕೊರೆತ ಆ ಎಳೆಯನಿಗೆ ಅದೆಷ್ಟು ಅರ್ಥವಾಯಿತೋ? ಬಿಟ್ಟಿತೋ! ಅವನಿಗೆ ಆ ಹೊತ್ತಲ್ಲಿ ಹೇಳಬೇಕಿನಿಸಿದ್ದನ್ನ ಒಟ್ರಾಶಿ ಇದೆ ಸರಿಯಾದ ಸಂದರ್ಭ ಅಂದುಕೊಂಡು ಒದರಿ ಮುಗಿಸಿದ್ದ. ಬಹುಶಃ ಆ ಸಣ್ಣ ಪ್ರಾಯದವನ ಬುದ್ಧಿಮಟ್ಟಕ್ಕೆ ಇವನ ಪುಗಸಟ್ಟೆ ಉಪದೇಶ ಚೂರು ಅಧಿಕವೆ ಆಯ್ತೇನೋ. ಆದರೆ ಆ ಹುಡುಗನಿಗೆ ಈ ಮಾತುಗಳನ್ನ ಹೀಗೆ ತಿಳಿಸಿ ಹೇಳುವವರು ಇನ್ಯಾರೂ ಇಲ್ಲ ಅನ್ನುವ ಅರಿವು ಅವನಿಗಿದ್ದುದರಿಂದಲೂˌ ಈಗ ಬಿಟ್ಟರೆ ಇನ್ಯಾವತ್ತಾದರೂ ಮುಂದಿನ ದಿನಮಾನಗಳಲ್ಲಿ ಒಂದೊಮ್ಮೆ ತಾನಿಲ್ಲಿಗೆ ಮುಂದೆ ಬಂದರೂ ಇವನನ್ನ ತಾನು ಭೇಟಿಯಾಗುವ ಸಂಭವ ಕಡಿಮೆ ಎನ್ನುವ ಖಚಿತತೆ ಅವನಿಗಿದ್ದುದರಿಂದಲೂ ಒಬ್ಬ ಅಪ್ಪ ತನ್ನ ಮಗನಿಗೆ ಹೇಳಬೇಕಾದ ಆಪ್ತ ಧಾಟಿಯಲ್ಲಿ ಆ ಮಾತುಗಳನ್ನ ಸುಭಾಶನಿಗವ ಹೇಳಿ ಮುಗಿಸಿದ್ದ.


ಸುತ್ತಲೂ ಕತ್ತಲು ಮೆತ್ತಗೆ ಮುತ್ತಿ ಹೊತ್ತು ಪೂರ್ತಿ ಕಂತುತ್ತಿತ್ತು. ಅದೆ ಹತ್ತಿರದ ಮನೆಯ ರೇಡಿಯೋದಲ್ಲಿ ಅವತ್ತು ಮಲಯಾಳಿಗಳ ನೆಚ್ಚಿನ ದಾಸೆಟ್ಟ ಏಸುದಾಸ್ "ಅಕಲೇ..." ಅಂತ ದೀರ್ಘ ಆಲಾಪ ಆರಂಭಿಸಿದ್ದು ಅರೆಬರೆಯಾಗಿ ಗಾಳಿಯಲೆಗಳಲ್ಲಿ ತೇಲಿ ಬಂತು. ಅವರ ಆ ಆರ್ದ್ರ ಧ್ವನಿಗೆ ಪಕ್ಕವಾದ್ಯದಂತೆ ಪಡುವಣದ ಸಮುದ್ರದಲೆಗಳು ಮೊರೆಯುತ್ತಿದ್ದವು. "ನಡಿ ಹೋಗಣ ಇನ್ನು" ಅಂತ ಅವ ಎದ್ದು ತನ್ನ ಕುಂಡೆಗಂಟಿದ್ದ ಮರಳನ್ನ ಕೊಡವಿಕೊಂಡ. ಸುಭಾಶನೂ ಅವನನ್ನ ಅನುಸರಿಸಿದ. ಅವನ ಹೆಗಲ ಮೇಲೆ ಕೈ ಹಾಕಿಕೊಂಡು ಅವರೆಲ್ಲರೂ ನಾರಾಯಣಗುರುಗಳ ಜಯಂತಿಯ ರಜೆಯ ಗಮ್ಮತ್ತಿನಲ್ಲಿ ನಾಳೆ ಆಡಲಿಕ್ಕಿದ್ದ ಮ್ಯಾಚಿನ ಇತ್ಯೋಪರಿಗಳನ್ನ ವಿಚಾರಿಸಿಕೊಳ್ಳುತ್ತಾˌ ಅವನ ನೆಚ್ಚಿನ ಆಟಗಾರ ವಿರಾಟ ಕೋಹ್ಲಿಯ ಬಗ್ಗೆ ಬೇಕಂತಲೆ ಸಾಕಷ್ಟು ಮಕ್ಕರು ಮಾಡಿ ಅವನ ಅಭಿಮಾನದ ಆಟಗಾರನ ಇಮೇಜಿಗೆ ಭಂಗ ತರುವ ತನ್ನ ಮಾತುಗಳಿಗೆ ಈ ಅಪ್ಪಟ ಅಭಿಮಾನಿ ದೇವರು ನಿಜವಾಗಿಯೂ ಕಸಿವಿಸಿಗೊಳ್ಳುತ್ತಿದ್ದ ಕ್ಷಣಗಳ ಮಜಾ ತೆಗೆದುಕೊಳ್ಳುತ್ತಾ ರೈಲ್ವೆ ನಿಲ್ದಾಣದ ರಸ್ತೆಯತ್ತ ಇಬ್ಬರೂ ಹೊರಳಿಕೊಂಡರು.


ದಾರಿಯಲ್ಲಿದ್ದ ಕಾಕಾನ ಗೂಡಂಗಡಿಯಲ್ಲಿ ಇವನು ಉದ್ದುದ್ದದ ಎರಡು ಬೋಟಿ ಪ್ಯಾಕೇಟುಗಳ ಜೊತೆ ಎಂಟಾಣೆ ಪೆಪ್ಪರಮಿಂಟುಗಳನ್ನಿಷ್ಟು ಕೊಂಡ. ಸಣ್ಣದರಿಂದಲೂ ಈ ಪೆಪ್ಪರುಮಿಂಟು-ಚಾಕ್ಲೇಟು ತಿನ್ನುವ ಚಟ ಅವನಿಗೆ ಬಿಡಲಾರದೆ ಅಂಟಿಕೊಂಡಿತ್ತು. ಬೋಟಿ ಪೊಟ್ಟಣಗಳೆರಡನ್ನೂ ಸುಭಾಶ ಹಾಗೂ ಅವನ ಪುಟ್ಟ ತಂಗಿಗಾಗಿ ಕೊಂಡಿದ್ದ. ಅದರೊಂದಿಗೆ ಕೆಲವು ಮಿಠಾಯಿಗಳನ್ನೂ ಅವನಿಗೆ ಕೊಟ್ಟು ಅವನ ಮನೆ ಕಡೆಗೆ ತಿರುಗುವ ಮಾರ್ಗ ಒಡೆಯುವಲ್ಲಿ ಬಂದಾಗ ವಿದಾಯ ಹೇಳಿ ಅವನು ಮುಂದುವರೆದ. ಸಣ್ಣವ ಕುಣಕೊಂಡು ಅವನ ಮನೆಯ ದಿಕ್ಕಿನತ್ತ ಓಡ ತೊಡಗಿದ. ತನ್ನ ಸ್ವಂತಕ್ಕೊಂದು ತನ್ನದೆ ಚಿತ್ರಗಳಿರುವ ಫೊಟೋ ಆಲ್ಬಂ ದಕ್ಕಿದ್ದು ಅವನ ಸಂಭ್ರಮದ ಮೂಲ ಕಾರಣ ಅನ್ನುವುದನ್ನ ಬಲ್ಲ ಅವನು ನಸು ನಗುತ್ತಾ ಎಳೆಯನ ಬೀಳ್ಕೊಟ್ಟು ದಿನದ ಹಾರಾಟ ಅಲೆದಾಟ ಮುಗಿಸಿದ ಹಕ್ಕಿ ತನ್ನ ತಾವಿನತ್ತ ಹಿಂದಿರುಗುವ ಉಮೇದಿನಲ್ಲಿ ಹೆಜ್ಜೆ ಹಾಕತೊಡಗಿದ. ಇಂದು ಅವನು ಹೇಳಿದ್ದ ಮಾತುಗಳು ಮನಸಿಗದೆಷ್ಟು ಇಳಿದವೋ? ಇಲ್ಲವೋ! ಆದರೆ ಹೇಳಿದ್ದಷ್ಟನ್ನೂ ಮೌನವಾಗಿ ಆ ಪುಟ್ಟ ಮನುಷ್ಯ ಕೇಳಿಸಿಕೊಂಡಿದ್ದ ಅನ್ನುವ ತೃಪ್ತಿ ಅವನಿಗಿತ್ತು.


ಸುಭಾಶನಷ್ಟೆ ಪ್ರಾಯದಲ್ಲಿದ್ದಾಗ ಅವನಿಗೆ ಹೀಗೆ ಪಕ್ಕದಲ್ಲಿ ಕೂರಿಸಿಕೊಂಡು ಆತ್ಮವಿಶ್ವಾಸ ತುಂಬುತ್ತಾ ಸನ್ನಡತೆಯ ಪಾಠವನ್ನ ಹೇಳಿಕೊಡುವ ಕೆಲಸವನ್ನ ಯಾರೂ ಮಾಡಿರಲಿಲ್ಲ. ಅವನ ಎದುರು ಮನೆಯ "ಬಪಮ"ನ ಹೊರತು.


( ಇನ್ನೂ ಇದೆ.)



https://youtu.be/jX94JawPvwo

05 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೭.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೭.👊


"ಶ್ಯೋˌ ಞಾನ್ ಎಂದೋ ಒನ್ನು ಮರಙಿಟ್ಟು ವನ್ನಲ್ಲೋ ಎಂಡೆ ಈಶ್ವರ!ˌ ಇಪ್ಪ ವರ ನಾಯರೆˌ ಚಾಯ ಪೋಟ್ಟು ವೆಚ್ಚಟ್ಟೆ" ಅಂದವನೆ ಮರಳಿ ಕೋಣೆಗೆ ಬಂದು ಬೆನ್ನುಚೀಲದಲ್ಲಿದ್ದ ಆಲ್ಬಂ ತೆಗೆದು ಸೊಂಟದ ಪೌಚಿಗೆ ಸಿಕ್ಕಿಸಿಕೊಂಡ. ಹಿಂಬದಿಯ ಕಿಟಕಿಯನ್ನ ಮುಚ್ಚಲೂ ಸಹ ಮರೆತು ಹೋಗಿತ್ತು. ಹೊರಗೆ ದಿಟ್ಟಿಸಿದರೆ ತಾನು ಮೆಟ್ಟಿಲಿಳಿದು ಪುನಃ ಹತ್ತಿ ಬರುವ ಮಧ್ಯಂತರದ ಒಳಗಾಗಿ ಯಾರದೋ ಚತುರ ಮಧ್ಯಸ್ತಿಕೆಯಲ್ಲಿ ಏರ್ಪಟ್ಟ ಯಾವುದೋ ಸಂಧಾನ ಸೂತ್ರ ಫಲಿಸಿ ಆ ಪುಟ್ಟ ಹಕ್ಕಿಗೂ-ದುಂಬಿಗಳ ಜೋಡಿಗೂ ಮಧ್ಯ ಮಧು ಹೀರುವ ಹಕ್ಕಿಗಾಗಿ ರಾಜಿಯಾದಂತಿತ್ತು. ಇತ್ತಂಡಗಳೂ ಚಪ್ಪರದ ಒಂದೊಂದು ಕಡೆ ಪರಸ್ಪರರ ವಿರುದ್ಧ ದಿಕ್ಕುಗಳಲ್ಲಿ ತಮ್ಮ ತಮ್ಮ ಹಕ್ಕು ಸಾಧಿಸಿಕೊಂಡು ತತ್ಕಾಲಿಕ ಕದನ ವಿರಾಮ ಘೋಷಿಸಿಕೊಂಡು ಆ ಹೊತ್ತಿಗಷ್ಟು ಶಾಂತಿ ಅಲ್ಲಿ ನೆಲೆಸುವಂತೆ ವ್ಯವಸ್ಥೆ ಮಾಡಿಕೊಂಡಿದ್ದವು. ಕಿಟಕಿ ಮುಚ್ಚಿ ಪರದೆ ಎಳೆದುˌ ಹೊರಬಂದು ಮತ್ತೆ ಕೋಣೆಯ ಬಾಗಿಲಿಗೆ ಚಿಲಕವಿಟ್ಟು ಬೀಗ ಜ಼ಡಿದು ಇವ ಕೆಳಗಿಳಿದು ಬಂದ.

ಕ್ಯಾಂಟೀನಿನಲ್ಲಿ ನಾಯರನ ಚಹಾ ಇವನಿಗಾಗಿ ಕಾದಿತ್ತು. ಬಾಯಿಗದನ್ನ ಇಟ್ಟಾಗಲಷ್ಟೆ ಅವನಿಗೆ ತನ್ನ ದುರ್ಗತಿಯ ಅರಿವಾದದ್ದು. ಅವನಿಗೆ ತನ್ನ ತಪ್ಪು ತಿಳಿಯುವ ಹೊತ್ತಿಗೆ ತಡವಾಗಿ ಹೋಗಿತ್ತು. ಆಗಬಾರದ ದುರಂತ ಘಟಿಸಿಯಾಗಿತ್ತು! ಮಿಂಚಿ ಹೋಗಿರುವ ಕಾಲಕ್ಕೆ ಚಿಂತಿಸಿ ಫಲವಿಲ್ಲ ಅನ್ನುವಂತೆ ಪಾಲಿಗೆ ಬಂದಿದ್ದ ಆ "ಮಧುರ ಪಾಷಾಣ"ವನ್ನ ಹಂಗೂ ಹಿಂಗೂ ಕುಡಿದು ಮುಗಿಸದೆ ವಿಧಿಯಿರಲಿಲ್ಲ. ಯಾರಾದರೂ ಕಿಲಾಡಿ ವೈದ್ಯ ಈ "ಮಧುರಾಷ್ಟಕ" ಪ್ರಿಯ ನಾಯರನ ಕ್ಯಾಂಟೀನಿನ ಬದಿಯಲ್ಲೊಂದು ಸಣ್ಣ ಚಿಕಿತ್ಸಾಲಯ ಆರಂಭಿಸಿದರೂ ಸಾಕು. ಈ ನಾಯರ್ಸ್ ಸ್ಪೆಷಲ್ ಸ್ಟ್ರಾಂಗ್ ಚಾಯಾದ ಕೃಪೆಯಿಂದ ಆದಷ್ಟು ಬೇಗ ಮೈ ತುಂಬಾ ಓವರ್ಲೋಡ್ "ಮಧುರಂ" ತುಂಬಿಕೊಂಡು ಮಧುರಾತಿಮಧುರರಾಗುವ "ಮಧು"ರಮೇಹಿಗಳ ಕೃಪೆಯಿಂದ ರಾತ್ರೋರಾತ್ರಿ ಆ ವೈದ್ಯನ ನಸೀಬು ಖುಲಾಯಿಸಿ ಅವ ಕೋಟ್ಯಧೀಶನಾಗುವುದರಲ್ಲಿ ಯಾವ ಸಂಶಯವೂ ಇಲ್ಲ ಅನ್ನಿಸಿತವನಿಗೆ. ಈ ನಾಯರನ ಸ್ಟ್ರಾಂಗ್ ಚಾಯಾಕ್ಕೂˌ ಈಗ ತಾನು ಹೊರಟಿರುವ ತಡಿಯ ಎದುರಿರುವ ಅಪಾರ ಜಲರಾಶಿಯ ಕಡಲಿಗೂ ಏನೊಂದೂ ವ್ಯತ್ಯಾಸವಿದೆ ಅಂತ ಅವನಿಗನಿಸಲೆಯಿಲ್ಲ! ಎರಡರ ನಡುವೆ ಇರುವ ಏಕಮಾತ್ರ ವ್ಯತ್ಯಾಸವೆಂದರೆˌ ಕಡಲ ನೀರಲ್ಲಿ ಅಳತೆ ಮೀರಿದ ಉಪ್ಪು ಉಪಟಳ ಕೊಟ್ಟರೆˌ ಈ ನಾಯರನ ಚಾಯಾದಲ್ಲಿ ಸಕ್ಕರೆ ಯಶಸ್ವಿಯಾಗಿ ಆ ಪಾತ್ರ ನಿರ್ವಹಿಸುತ್ತಿತ್ತು. ಒಟ್ಟಿನಲ್ಲಿ ಅವೆರಡೂ ಸಹ ಆರೋಗ್ಯಭಾಗ್ಯವನ್ನ ಬಯಸುವ ಯಾರೊಬ್ಬರೂ ಸಹ ಕುಡಿಯಲು ಅನರ್ಹವಾಗಿದ್ದವು.


ಮಧುರಂ ಸಂತ್ರಸ್ತನಾಗಿದ್ದ ಅವನ ಮನೋವ್ಯಾಪಾರವನ್ನರಿಯದ ನಾಯರ್ ತನ್ನ ಎಂದಿನ ಶೈಲಿಯ "ಸ್ಟ್ರಾಂಗ್ ಚಾಯ" ತಯಾರಿಸಿ ಕುಡಿಸಿದ್ದ. ಚಹಾ ಹೇಳುವ ಹೊತ್ತಿಗೆ ಬಂಡಿ ಸಕ್ಕರೆ ಸುರಿಯದಿರುವಂತೆ ಹೇಳಲು ಮರೆತ ಆ ಒಂದು ಸಣ್ಣ ತಪ್ಪಿಗೆ ಇಷ್ಟು ಘನಘೋರ ಶಿಕ್ಷೆಯೆ ಭಗವಂತ ಅಂತ ಇವ ಹಳಹಳಿಸುತ್ತಲೆ ತನ್ನನ್ನ ನಗುನಗುತ್ತಲೆ ಸಿಹಿಯ ಶೂಲಕ್ಕೇರಿಸಿದ್ದ ವಧಾಕಾರ ನಾಯರನ ಮುಖವನ್ನ ದೈನ್ಯತೆ ಹೊತ್ತ ಮೋರೆಯಲ್ಲಿ ದಿಟ್ಟಿಸಿದ. ಅದನ್ನ ತಪ್ಪಾಗಿ ಗ್ರಹಿಸಿದ ಕೊಳೆತ ಹಲ್ಲುಗಳ ನಾಯರ ತನ್ನ ಎಂದಿನ ಕಾಳಜಿಯಿಂದಲೆ "ಮಧುರಂ ಮದಿ ತನ್ನೆ? ಕೊರಚ್ಚಿರುನ್ನಾಲ್ ತರಟ್ಟೆ!" ಎಂದು ಮತ್ತೊಂದು ತೋಪು ಸಿಡಿಸಿದ. ಜೀವನದಲ್ಲೆ ಮೊತ್ತ ಮೊದಲಬಾರಿಗೆ ಎಲ್ಲೂ ಇಲ್ಲದ ಆ ಅಪೂರ್ವವಾದ ದಂತಪಂಕ್ತಿಗಳಿರುವ ನಾಯರನಿಂದ ಮುತ್ತು ಕೊಡಿಸಿಕೊಳ್ಳಬೇಕಾದ ಅವನ ಹೆಂಡತಿ ಹಾಗೂ ಮಕ್ಕಳ ಮೇಲೆ ಅವನಿಗೆ ಅಪಾರವಾದ ಕರುಣೆ ಉಕ್ಕಿ ಬಂತು!


ನಾಯರನ ಈ ಅನಿರೀಕ್ಷಿತ ಆಕ್ರಮಣಕ್ಕೆ ಬೆಚ್ಖಿ ಬೆದರಿದ ಅವನು ಮೊದಲೆ ಹಿಂಡಿಕೊಂಡಿದ್ದ ತನ್ನ ಮುಖವನ್ನ ಮತ್ತಷ್ಟು ಹಿಂಡಿಕೊಂಡು "ಒರುಪಾಡು ಉಂಡಲ್ಲೋˌ ಅವಶ್ಯಮಿಲ್ಲ ಮದಿ" ಅಂದು ಮಾತಿನ ಗುರಾಣಿ ಹಿಡಿದು ಆ ಅಪಾಯಕಾರಿ "ಮಧುರಂ" ಅಸ್ತ್ರದ ಮರುದಾಳಿಯ ಪ್ರಹಾರದಿಂದ ಪಾರಾಗಿ ನಿಟ್ಟುಸಿರು ಬಿಟ್ಟ. ಆ "ಸ್ಟ್ರಾಂಗ್ ಚಾಯಾ" ಕುಡಿಯುವ ಕಾಲಾಪಾನಿ ಶಿಕ್ಷೆಯ ತೀವೃತೆಯನ್ನ ನಾಯರ ಚಹಾದ ಜೊತೆಗೆ ಕೊಟ್ಟಿದ್ದ ಒಂದೊಂದು ಅಡೈ ಹಾಗೂ ಪಣಂಪೂರಿ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದ್ದವುˌ ಅವೆರಡೂ ರುಚಿಯಾಗಿದ್ದದ್ದು ಮಾತ್ರ ಸುಳ್ಳಲ್ಲ. ಆದರೆ ಎಲ್ಲಾ ಬಣ್ಣವನ್ನು ಮಸಿ ನುಂಗಿತು ಎಂಬಂತೆ ಈ "ನಾಯರ್ಸ್ ಸ್ಪೆಷಲ್ ಸ್ಟ್ರಾಂಗ್ ಚಾಯಾ" ಅದರೊಂದಿಗೆ ಸವಿಯಲು ಲಭ್ಯವಿರುತ್ತಿದ್ದ ಇನ್ನಿತರ ಖಾದ್ಯ ಪದಾರ್ಥಗಳ ರುಚಿಯನ್ನೂ ಸಹ ತನ್ನ ಕೈಲಾದಷ್ಟು ಮಟ್ಟಿಗೆ ಕೆಡಿಸಲು ಸಮರ್ಥವಾಗಿತ್ತು. ಹೀಗಾಗಿ ಅವುಗಳ ಅಸಲು ರುಚಿ ಬಹುತೇಕರ ಅರಿವಿಗೆ ಬರುತ್ತಿರಲಿಲ್ಲ!


*****

ಇವನು ಕಡಲ ತಡಿಗೆ ಇಂದು ಸಾಮಾನ್ಯವಾಗಿ ದಕ್ಷಿಣದ ಕಡೆಯಿಂದ ಹೊಕ್ಕದೆ. ಅದರ ವಿರುದ್ಧ ದಿಕ್ಕಿನಿಂದ ಪ್ರವೇಶಿಸಿದ. ಸಾಗರದಲೆಗಳ ಹೊಡೆತಕ್ಕೆ ಕಾಲು ತೋಯ್ಯಿಸಿಕೊಳ್ಳುತ್ತಾ ಸಕ್ಕರೆಯ ರಾಶಿಯಂತಹ ಮರಳಿನಲ್ಲಿ ಚೂರು ಚೂರೆ ಕುಸಿಯುವ ಪಾದಗಳನ್ನ ಹೆಜ್ಜೆ ಕಿತ್ತು ಮುಂದಡಿ ಇಡುತ್ತಾ ಸಾಗುವುದರಲ್ಲೂ ಒಂದು ಸುಖವಿತ್ತು. ದೂರದಿಂದಲೆ ತನ್ನ ನಿತ್ಯದ ಕೂರುವ ತಾವಿನಲ್ಲಿ ಅದಾಗಲೆ ಸುಭಾಶ ಬಂದು ಕಾತರದಿಂದ ಕಾಯುತ್ತಿರುವುದು ಗೋಚರಿಸಿತು. ಹುಡುಗ ಮಾಮೂಲಿಯಾಗಿ ದಕ್ಷಿಣದ ಕಡೆಯಿಂದ ಬಂದಾರೇನೋ ಎಂದು ಆ ಕಡೆಗೇನೆ ತಿರುಗಿ ಕೂತು ಇವನ ಹಾದಿಯನ್ನ ಕಾಯುತ್ತಿತ್ತು. ಅವನ ಹೊಸ ಕಪ್ಪು ಚಪ್ಪಲಿಯನ್ನ ಅಚ್ಚುಕಟ್ಟಾಗಿ ಪಕ್ಕದಲ್ಲಿಟ್ಟುಕೊಂಡಿದ್ದ. 


ಸದ್ದಾಗದಂತೆ ಹೆಜ್ಜೆಯಿಟ್ಟುಕೊಂಡು ಅವನ ಹಿಂದಿಂದ ಹೋದವನೆ "ಬಕ್" ಅಂತ ಏಕಾಏಕಿ ಕಿರುಚಿ ಅವನನ್ನ ಕುಮುಟಿ ಹಾರಿ ಬೆಚ್ಚಿಬೀಳುವಂತೆ ಮಾಡಿದ. "ಅಯ್ಯಯ್ಯˌ ಇದೆಂತ ನೀವಿಲ್ಲಿಂದ ಬಂದ್ರಿಯಾ! ಶೇˌ ಹೆದರಿ ಪಡ್ಚ ನಾನು" ಅನ್ನುತ್ತಾ ಅವ "ಫೋಟೋ ತಂದ್ರಿಯಾ" ಅನ್ನುತ್ತಾ ಊರಿಂದ ಮುಂದೆ ಇಂದು ತಾನು ಬಂದಿರುವುದರ ಹಿಂದಿರುವ ನೈಜ ಕಾರಣವನ್ನ ಜಗಜಾಹೀರುಗೊಳಿಸಿದ. ನಾಳೆ "ನಾರಾಯಣಗುರು ಜಯಂತಿ"ಯಂತೆ ಹೀಗಾಗಿ ಅವನ ಶಾಲೆಗೆ ಸರಕಾರಿ ರಜವಿತ್ತು. ಅವನ ಸಮವಯಸ್ಕ ಹುಡುಗರೆಲ್ಲ ಬೆಳಗ್ಯೆ ಕ್ರಿಕೆಟ್ಟಾಡಲು ಬಾಕಿಮಾರು ಗದ್ದೆಯ ಗ್ರೌಂಡಿಗೆ ದೌಡಾಯಿಸಲಿರುವುದಾಗಿಯೂˌ ಅಲ್ಲಿ ತಾನು ಎಲ್ಲರಿಗೂ ಈ ಆಲ್ಬಂನಲ್ಲಿರುವ ಕೋಲದ ಫೊಟೋಗಳನ್ನ ತೋರಿಸಬೇಕಂತ ಇರುವುದಾಗಿಯೂ ಉತ್ಸಾಹದ ಬುಗ್ಗೆಯಾಗಿದ್ದ ಸುಭಾಶ ಹೇಳಿದ.


"ಅಯ್ಯೋˌ ಹೌದಲ! ಫೊಟೋ ತರಬೇಕಿತ್ತು ಮಾರಾಯ. ಛೇ ಮರ್ತೆ ಹೋಯ್ತಲನ. ಇರ್ಲಿ ಬಿಡ ನಾಳೆ ಸಂಜೆ ತಂದ್ರಾಗದ?" ಅನ್ನುತ್ತಾ ತಣ್ಣಗೆ ಉತ್ತರಿಸಿದ ಅವ ಬೇಕಂತಲೆ ಅವನ ಅತ್ಯುತ್ಸಾಹದ ಪುಗ್ಗೆಗೆ ಮುಳ್ಳು ಚುಚ್ಚಿದ. ಇವನ ಚೇಷ್ಟೆಯ ತಮಾಷೆ ಅರ್ಥವಾಗದೆ ಬಾಡಿದ ಮುಖ ಮಾಡಿಕೊಂಡು ಬೇಸರದ ಧ್ವನಿಯಲ್ಲಿ ಹುಡುಗ "ಹಾಂ! ಫೊಟೋ ತರ್ಲಿಲ್ಲನ? ನಾನು ನಾಳೆ ಅಲ್ಲಿಗೆ ತರ್ತಿನಂತ ದೋಸ್ತಿಗಳಿಗೆಲ್ಲಾ ಹೇಳಿಯಾಗಿದೆ. ಈಗ ಎಂತ ಮಾಡದ ಏನ? ಕಾಸರಗೋಡಿಂದ ಸ್ಟೂಡಿಯೋದವರಿಗೆ ಫೊಟೋಗಳು ಬಂದಿರಲಿಲ್ಲನ? ನೀವಲ್ಲಿಗಿವತ್ತು ಹೋಗಲಿಲ್ಲನ?" ನಿರಾಶೆ ಧ್ವನಿಸುತ್ತಾ ಅವನನ್ನ ಹುಡುಗ ಪ್ರಶ್ನಿಸಿದ.

ಇನ್ನೂ ಸುಳ್ಳು ಹೇಳಿದರೆ ಅವನು ಅತ್ತೇ ಬಿಟ್ಟಾನು ಅನ್ನಿಸಿ ಮೆಲ್ಲನೆ ಬೆಲ್ಟಿನ ನಡುವೆ ಬೀಳದಂತೆ ಹೊಟ್ಟೆಗೆ ಸಿಕ್ಕಿಸಿಕೊಂಡಿದ್ದ ಆಲ್ಬಂನ್ನು ಕೈಗೆ ಕೊಡುತ್ತಲೆ ಸಣ್ಣವನ ಮುಖ ಮೊರದಗಲವಾಯಿತು. "ಶ್ಯೇ ನೀವು ಕುಶಾಲು ಮಾಡದ ಮಾರ್ರೆ! ಎಲ್ಲಿ ನೀವು ತರಲೆ ಇಲ್ಲವ ಅಂತ ಮಂಡೆಬೆಚ್ಚ ಆಗಿತ್ತು ನನಗೆ" ಅಂತ ಹುಸಿಕೋಪ ಪ್ರಕಟಿಸುತ್ತಲೆ ಆಲ್ಬಂನ್ನ ಬಹುತೇಕ ಕೊಡುತ್ತಿದ್ದ ಇವನ ಕೈಯಿಂದ ಕಸಿದುಕೊಂಡ.

ಒಂದೊಂದಾಗಿ ಚಿತ್ರಗಳನ್ನ ತಿರುವಿ ಹಾಕುತ್ತಿದ್ದವನಿಗೆ ಅವನ ನಿದ್ರಾ ಭಂಗಿಯ ಫೊಟೋಗಳೂ ಸಹ ಅಲ್ಲಿರುವುದನ್ನ ಕಂಡು ಅಭಿಮಾನ ಭಂಗವಾದಂತಾಯಿತು. ಮುಖ ಸಿಂಡರಿಸುತ್ತಾ "ನಾನು ಹೇಳಿದ್ದೆ ಇದು ಬೇಡನಿಯ ಅಂತ" ಅಂತ ಬೇಸರಿಸಿದ.

( ಇನ್ನೂ ಇದೆ.)



https://youtu.be/0V2l1QEg444

04 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೬.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೬.👊

ಹಾಡಿನ ಗುಂಗಿನಲ್ಲೆ ಮುಳುಗಿ ಹೋಗಿದ್ದವ ಮೈಯನ್ನ ನೇರ ನಲ್ಲಿಯಿಂದ ಸುರಿಯುತ್ತಿದ್ದ ತಣ್ಣೀರಿಗೆ ಒಡ್ಡಿಕೊಂಡ. ಬೆನ್ನಿನ ನರಗಳಿಗೆ ಸುರಿಯುತ್ತಿದ್ದ ನೀರಿನಿಂದ ಉಂಟಾಗುತ್ತಿದ್ದ ಒತ್ತಡ ಒಂಥರಾ ಹಿತಕಾರಿಯಾಗಿತ್ತು. ಹಾಡು ವಾಸ್ತವವಾಗಿ ಯುಗಳ ಗೀತೆಯ ಜೊತೆಜೊತೆಗೆ ಲತಾ ಮಂಗೇಷ್ಕರ್ ಒಬ್ಬರೆ ಹಾಡಿರುವ ವಿಷಾದ ಗೀತೆಯಾಗಿಯೂ ಚಲಾವಣೆಯಲ್ಲಿದೆ. ವಾಸ್ತವವಾಗಿ ಅದೆ ಜನಮಾನಸದಲ್ಲಿ ಹೆಚ್ಚು ಪ್ರಚಲಿತದಲ್ಲೂ ಇದೆ. ಹೀಗಾಗಿ ಬಹುತೇಕರಿಗೆ ಅದರ ಯುಗಳ ಆವೃತ್ತಿಯ ಸಾಹಿತ್ಯ ಮುಂದಿನ ಪೀಳಿಗೆಯವರ ಕಿವಿಗೆ ಬಿದ್ದಿರುವ ಸಾಧ್ಯತೆ ಕ್ಷೀಣಿಸಿˌ ಅತ್ಯುತ್ತಮ ಅಭಿರುಚಿಯ ಹಾಡೊಂದು ಕಾಲದ ಕತ್ತಲೆಯಲ್ಲಿ ಕರಗಿ ಕಳೆದೆ ಹೋಗಿದೆ ಅಂತ ಯೋಚಿಸುತ್ತಲೆ ಅವನ ಮಜ್ಜನ ಮುಂದುವರೆಯಿತು.

"ಖೋಯೇ ಹಮ್ ಐಸೇ
ಕ್ಯಾ ಹೈಂ ಮಿಲನಾ?
ಕ್ಯಾ ಬಿಛಡನಾ
ನಹೀಂ ಹೈಂ ಯಾದ್ ಹಮ್ ಕೋ./
ಕೂಚೇ ಮೈ ದಿಲ್ ಕೇ
ಜಬ್ ಸೇ ಆಏ
ಸಿರ್ಫ್ ದಿಲ್ ಕೀ 
ಜಮೀನ್ ಹೈಂ
ಯಾದ್ ಹಮ್ ಕೋ.
ಇಸೀ ಸರಜ಼ಮೀನ್ 
ಇಸೀ ಸರಜಮೀನ್ ಪೇ
ಹಮ್ ಥೋ ರಹೇಂಗೇ
ಬನಕೇ ಕಲೀ ಬನಕೇ ಸಬಾ
ಭಾಗ್-ಏ-ವಫಾ ಮೈ.//"

ಸ್ನಾನ ಮುಗಿಸಿ ಬೈರಾಸಿನಿಂದ ತಲೆ ಒರೆಸಿಕೊಂಡು ಹೊರ ಬಂದವ ಕೋಣೆಯ ಹಿಂಬದಿಯ ಕಿಟಕಿಯನ್ನ ಗಾಳಿಯಾಡಲು ತೆರೆದ. ಹಿಂಭಾಗದಲ್ಲಿ ಯಾರದ್ದೋ ಮನೆಯ ಹಿತ್ತಲಿತ್ತು. ಅಲ್ಲಿ ಅವರು ನೆಟ್ಟು ಬೆಳೆಸಿದ್ದ ಮೂರ್ನಾಲ್ಕು ಬಗೆಯ ದಾಸವಾಳಗಳದ ಗಿಡಗಳಲ್ಲಿ ಅರಳಿ ನಿಂತ ಹೂಗಳು ಮನೆಸೂರೆಗೊಳಿಸುವಂತಿದ್ದವು.ಮಿಂದ ಮೇಲೆ ಮೈ ಒರೆಸಿಕೊಳ್ಳುವ ಅಭ್ಯಾಸ ಅವನಿಗಿರಲಿಲ್ಲ. ವಾತಾವರಣದ ಗಾಳಿಯಲೆಗಳಿಗೆ ಮೈಯೊಡ್ಡಿ ನಿಂತು ದೇಹದ ಶಾಖಕ್ಕೆ ಮೈ ಒಣಗಿಸಿಕೊಳ್ಳುವುದು ಅವನಿಗೆ ಅಭ್ಯಾಸವಾಗಿತ್ತು.

ತೊಂಡೆ ಬಳ್ಳಿ ಹಾಗೂ ಬಸಳೆ ಸೊಪ್ಪನ್ನ ಸೊಂಪಾಗಿ ಹಬ್ಬಿಸಿದ್ದ ಅದೆ ಹಿತ್ತಲಿನ ಚಪ್ಪರದಲ್ಲಿ ಗೂಡುಕಟ್ಟಿದ್ದ ಯಾವುದೋ ಉದ್ದ ಕೊಕ್ಕಿನ ಗುಬ್ಬಿ ಗಾತ್ರದ ಹಕ್ಕಿಯೊಂದು ಅರಳಿದ ದಾಸವಾಳದ ಒಡಲೊಳಗೆ ಸ್ಟ್ರಾದಂತೆ ತೂರಿಸಿ ಖುಷಿಯಿಂದ ಚಿಲಿಪಿಲಿಗುಟ್ಟುತ್ತಾ ಮಧು ಹೀರುತ್ತಿತ್ತು. ಹೆಚ್ಚೆಂದರೆ ಒಂದು ಹೂವಿನಲ್ಲಿ ಹನಿ ಮಧು ಅದಕ್ಕೆ ಸಿಕ್ಕರೂ ಅಷ್ಟು ಸುಮಗಳ ಒಡಲ ಸಿಹಿಗಳನ್ನ ಅದು ಹೀರಿದರೆ ಒಂದಿಡಿ ಲೋಟ ತುಂಬುವಷ್ಟು ಮಧು ಅದರ ಒಡಲು ಸೇರೀತು ಅನಿಸಿತು. ಚೀಲದಿಂದ ದುರ್ಬೀನು ಹೊರ ತೆಗೆದು ಚಪ್ಪರದತ್ತ ತದೇಕಚಿತ್ತದಿಂದ ದಿಟ್ಟಿಸಿದಾಗ ಪುಟ್ಟ ಪುಟ್ಟ ನಾಲ್ಕು ಕಪ್ಪು-ಬಿಳಿ ಕಲೆಗಳಿದ್ದ ಮುತ್ತಿನ ಮಣಿಗಳಂತಹ ಮೊಟ್ಟೆಗಳು ಗೋಚರಿಸಿದವು. ಅದರ ಆಹಾರದ ಆತುರತೆಗೆ ಕಾರಣ ಆಗ ಅವನಿಗೆ ಅರ್ಥವಾಯಿತು. ತನ್ನದೆ ಲೋಕದಲ್ಲಿ ಮಗ್ನವಾಗಿ ಇವನ ಅಧಿಕಪ್ರಸಂಗಗಳನ್ನೆಲ್ಲಾ ಅರಿಯದೆ ಮಧುವುಣ್ಣುತ್ತಿದ್ದ ಅದರ ಖುಷಿಯನ್ನ ಕೆಡಿಸದಂತೆ ಮೆಲ್ಲನೆ ನಿಶ್ಯಬ್ಧತೆಗಷ್ಟು ಭಂಗತಾರದ ಹಾಗೆ ಲೆನ್ಸ್ ಬದಲಿಸಿ ಆದಷ್ಟು ಹತ್ತಿರದಿಂದ ಕಾಣುವ ಹಾಗೆ ಕ್ಯಾಮರಾ ಕಣ್ಣನ್ನು ಹೊಂದಿಸಿ ಈ ಬಾಣಂತಿ ಹಕ್ಕಿಯಮ್ಮನ ಹಲವು ಫೊಟೋಗಳನ್ನ ಸೆರೆ ಹಿಡಿದ. ವಿರುದ್ಧ ದಿಕ್ಕಿನಿಂದ ಪೂರ್ವದ ಚಪ್ಪರದತ್ತ ಬೀಳುತ್ತಿದ್ದ ಬಾಡುತ್ತಿದ್ದ ಬಿಸಿಲು ಚಿತ್ರದ ಅಂದವನ್ನ ಸಹಜವಾಗಿ ಹೆಚ್ಚಿಸಿದ್ದವು.


ಪುಟ್ಟ ಹಕ್ಕಿ ಸ್ವಚ್ಛಂದವಾಗಿ ಮಧು ಹೀರುತ್ತಾ ಆನಂದಿಸುತ್ತಿದ್ದ ಹೂಗಳನ್ನ ನೋಡುವಾಗ ಅವನ ಬಾಯೊಳಗಿನಿಂದ ನಾಲಗೆ ಅನಿಯಂತ್ರಿತವಾಗಿ ನೀರೂರಿಸುತ್ತಿತ್ತು. ಮನೆಯಲ್ಲಿದ್ದಾಗ ನಿತ್ಯ ಅವನಿಗೂ ದಾಸವಾಳದ ನೀಲ ಚಹಾ ಮಾಡಿ ಅದಕ್ಕೆ ಲಿಂಬೂ ರಸ ಹಿಂಡಿದ ಕೂಡಲೆ ರಕ್ತವರ್ಣಕ್ಕೆ ತಿರುಗುವ ಅದಕ್ಕೆ ಸಿಹಿಗೆ ಜೇನುತುಪ್ಪ ಬೆರೆಸಿ ಕುಡಿಯುವ ಅಭ್ಯಾಸವಿತ್ತು. ಇಲ್ಲಿ ಬಂದ ಮೇಲೆ ಅದನ್ನ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದ. ಈಗ ಆ ಪುಟ್ಟ ಹಕ್ಕಿಯ ಅದೃಷ್ಟ ಕಂಡವನಿಗೆ ವಿಪರೀತ ಹೊಟ್ಟೆಕಿಚ್ಚಾಯಿತು.


"ಹೈಂ ಖೂಬಸೂರತ್ 
ಯಹಂ ನಜಾ಼ರೇಂ
ಯಹಂ ಬಹಾರೇಂ
ಹಮಾರೇ ಧಮ್ ಕದಮ್ ಪೇ.
ಜಿ಼ಂದಾ ಹುಈ ಹೈಂ
ಫಿರ್ ಜಹಾನ್ ಮೈ
ಆಜ್ ಇಷ್ಕ್-ಓ-ವಫಾ ಕೇ
ರಸ್ಮ್ ಹಮ್ ಸೇ./
ಯೂಂ ಹೀ ಇಸ್ ಚಮನ್ 
ಯೂಂ ಹೀ ಇಸ್ ಚಮನ್ ಕೀ
ಜೀ಼ನತ್ ರಹೇಂಗೇ
ಬನಕೇ ಕಲೀ ಬನಕೇ ಸಬಾ
ಭಾಗ್-ಏ-ವಫಾ ಮೈ.//"

ಇವನ ಈ ಕಳ್ಳಾಟದ ಅರಿವಿಲ್ಲದೆ ಮುಕ್ತವಾಗಿ ಮಧು ಹೀರಿ ತೃಪ್ತವಾಗುತ್ತಿದ್ದ ಹಕ್ಕಿಗೆ ಪುಗಸಟ್ಟೆಯಾಗಿ ಸಿಗುತ್ತಿರುವ ಮಧು ಲಪಟಾಯಿಸುವ ಕಳ್ಳತನದ ಕಸುಬಿನಲ್ಲಿ ಒಂದೆರಡು ದುಂಬಿಗಳು ಪೈಪೋಟಿಗಿಳಿದು ಕಿರಿಕಿರಿಯನ್ನುಂಟು ಮಾಡಲಾರಂಭಿಸಿದವು. ಹಾಗೆ ನೋಡಿದರೆ ಅವೆಲ್ಲಕ್ಕೂ ಹೊಟ್ಟೆ ತುಂಬುವಷ್ಟು ಹೂಗಳು ಗಿಡಗಳಲ್ಲಿ ಅರಳಿ ನಿಂತಿದ್ದರೂ ಹಂಚಿ ತಿನ್ನಲು ಅವುಗಳಲ್ಲೊಬ್ಬರಿಗೂ ಮನಸಿದ್ದಂತಿರಲಿಲ್ಲ. 

ಅವುಗಳನ್ನ ಅಟ್ಟಾಡಿಸಿದರೆ ಗಿಡದ ಹಸಿರೆಡೆ ಮರೆಯಾಗುತ್ತಿದ್ದ ಅವು ಹಕ್ಕಿ ಮತ್ತೆ ಹೂವೊಂದರ ಒಡಲಲ್ಲಿ ಕೊಕ್ಕು ತೂರಿಸುವ ಹೊತ್ತಿಗೆ ಸರಿಯಾಗಿ ಪ್ರತ್ಯಕ್ಷವಾಗಿ ಅದರ ತಾಳ್ಮೆ ಪರಿಕ್ಷಿಸುತ್ತಿದ್ದವು! ಅವುಗಳ ಹಾವಳಿ ಮಿತಿ ಮೀರಿˌ ಸಾಕು ಸಾಕಾದ ಹಕ್ಕಿ ಇನ್ನು ಈ ಗಾಳಿಯೊಡನೆಯ ಗುದ್ದಾಟ ಸಾಕೆನಿಸಿತೋ ಏನೋ! ಹೋಗಿ ತೆಪ್ಪಗೆ ಗೂಡಿನಲ್ಲಿದ್ದ ಮೊಟ್ಟೆಗಳ ಮೇಲೆ ಮತ್ತೆ ಕಾವಲು ಕೂತರೂˌ ಅದರ ವರ್ತನೆ ಅದಕ್ಕಾಗಿದ್ದ ಅಸಹನೆಯ ಪ್ರತೀಕದಂತೆ ಅವನಿಗೆ ಕಾಣಿಸುತ್ತಿತ್ತು. ಅಯಾಚಿತವಾಗಿ ಕಾಣಲು ಸಿಕ್ಕ ನಿಸರ್ಗದ ಈ ಆಟ ನೋಡಿ ಅವನ ಮನ ಮುದಗೊಂಡಿತ್ತು.

"ರಹೇನಾ ರಹೇ ಹಮ್
ಮೆಹಕಾ ಕರೇಂಗೇ/
ಬನಕೇ ಕಲೀ ಬನಕೇ ಸಬಾ
ಭಾಗ್-ಏ-ವಫಾ ಮೈ.//"

*****

ಅಷ್ಟರಲ್ಲಿ ಅವನ ಮಿಂದು ಒದ್ದೆಯಾಗಿದ್ದ ಮೈ ಒಣಗಿತ್ತು. ದಿನವಿಡಿ ಹೊರೆ ಹೊತ್ತ ಕತ್ತೆ ಸಂಜೆ ಕೆಲಸ ಮುಗಿಸಿದ ಕೂಡಲೆ ಅಂಗಾತ ನೆಲದ ಹುಲ್ಲಿನ ಮೇಲೆ ಹೊರಳಿ ಬೆನ್ನಿನ ನೋವಿಗೆ ಉಪಶಮನ ಕಂಡುಕೊಳ್ಳುವಂತೆ ಅವನೂ ಸಹ ಹಾಸಿಗೆಯ ಮೇಲೆ ಅಂಗಾತ ಮಲಗಿ ಅತ್ತಿತ್ತ ಹೊರಳಿ ಅವನ ಅಸ್ತವ್ಯಸ್ತ ಭಂಗಿಯ ಓಡಾಟದಿಂದ ಅತ್ತಿತ್ತ ಸರಿದು ನೋವನ್ನೇಳಿಸುತ್ತಿದ್ದ ಬೆನ್ನುಮೂಳೆಯನ್ನ ಕಾಲುಗಳೆರಡನ್ನೂ ಸರದಿಯಂತೆ ಅವುಗಳ ವಿರುದ್ಧ ದಿಕ್ಕುಗಳಿಗೆ ಸರಿಸಿ ಸಶಬ್ಧವಾಗಿ ಎದ್ದ ಮೂಳೆಗಳ ಲಟಲಟ ಸದ್ದಿನೊಂದಿಗೆ ವೇದನೆ ಮುಕ್ತನಾಗಿ ಏನೋ ಒಂಥರಾ ಹಿತಭಾವದಲ್ಲಿ ಮುಲುಗಿದ.


ಕೈಫೋನು ಸರಿಯಾಗಿ ಮಧ್ಯಾಹ್ನದ ನಾಲ್ಕೂ ಐದಾಗಿದೆ ಎನ್ನುವುದನ್ನ ಸೂಚಿಸುತ್ತಿತ್ತು. ಸಂಜೆ ಐದರ ಹೊತ್ತಿಗೆ ಕಡಲತಡಿಗೆ ಹೋಗಲು ಯೋಚಿಸಿದ್ದ. ಇನ್ನರ್ಧ ತಾಸು ವಿರಾಮದಲ್ಲಿ ಆರಾಮಿಸಲು ಅಡ್ಡಿಯಿರಲಿಲ್ಲ. ಒಂದರ ಹಿಂದೊಂದು ಹಳೆಯ ಮಧುರ ಗೀತೆಗಳು ಮೆಲುವಾಗಿ ರೇಡಿಯೋದಿಂದ ಹೊಮ್ಮಿ ಬರುತ್ತಿದ್ದವು. ಕೈಫೋನಿನಲ್ಲಿ ಹಾಡುಗಳನ್ನ ಆಲಿಸುತ್ತಲೆ ಜೊತೆಜೊತೆಗೆ ಅದರ ಸ್ಮರಣೆಯಲ್ಲಿ ಭಟ್ಟಿಯಿಳಿಸಿಕೊಂಡಿದ್ದ ಅರ್ಧಕ್ಕೆ ಓದಿ ಬಿಟ್ಟಿದ್ದ ಪುಸ್ತಕವೊಂದನ್ನ ತೆರೆದು ಮಲಗಿಕೊಂಡೆ ಮುಂದುವರೆಸಿಕೊಂಡು ಓದ ತೊಡಗಿದ. ವಿಶ್ವ ಇತಿಹಾಸದ ವಿಶ್ಲೇಷಣಾತ್ಮಕ ಪ್ರಬಂಧಗಳಿದ್ದ ಆ ಪುಸ್ತಕದಲ್ಲಿದ್ದ ಬರಹದ ಗ್ರಹಿಕೆಗಳಲ್ಲಿ ಹೊಸ ಹೊಳಹುಗಳು ಅವನಿಗೆ ಗೋಚರಿಸಿದವು. ಓದಿನಲ್ಲಿ ಮಗ್ನನಾದವನ ಕಣ್ಣು ಸಮಯದ ಮೇಲೆ ಬಿದ್ದಾಗ ಅರ್ಧ ತಾಸು ಅದೆಷ್ಟು ಬೇಗ ಸರಿಯಿತೋ! ಎಂದು ಆಶ್ಚರ್ಯ ಪಟ್ಟ. 


ಅರಿವಾಗುವುದರೊಳಗೆ ನಾಲ್ಕೂ ಮುಕ್ಕಾಲು ಆಗಿ ಹೋಗಿತ್ತು. ದೊಡ್ಡದಾಗಿ ಆಕಳಿಸುತ್ತಲೆ ಎದ್ದು ಮತ್ತೊಮ್ಮೆ  ಮುಖ ತೊಳೆದುಕೊಂಡು ಬರ್ಮುಡ ಟೀಶರ್ಟು ತೊಟ್ಟುˌ ಹೆಗಲಿಗೆ ಕ್ಯಾಮರಾ ಇಳಿಬಿಟ್ಟುಕೊಂಡು ಸೊಂಟಕ್ಕೆ ಅದರ ಪೌಚನ್ನ ಕಟ್ಟಿಕೊಂಡು ತಂಪುಗನ್ನಡಕ ಅಂಗಿಗೆ ಸಿಕ್ಕಿಸಿಕೊಂಡು ಮೆಟ್ಟು ಮೆಟ್ಟಿ ಕೋಣೆಗೆ ಬೀಗ ಜಡಿದು ಕುಶಾಲನಗರದ ಹಾದಿ ಹಿಡಿಯಲು ಮೆಟ್ಟಿಲಿಳಿದು ಬಂದ.


ಬೆರಳೆಣಿಕೆಯಷ್ಟು ಗಿರಾಕಿಗಳಿಗೆ ಅದೂ ಇದೂ ಸರಬರಾಜು ಮಾಡುತ್ತಿದ್ದ ನಾಯರನಿಗೆ ಚಹಾದ ಬೇಡಿಕೆ ಸಲ್ಲಿಸುತ್ತಿದ್ದಂತೆˌ ಸುಭಾಶನಿಗೆ ಕೊಡಬೇಕಾದ ಅವನ ಚಿತ್ರಗಳ ಆಲ್ಬಂ ಕೋಣೆಯಲ್ಲೆ ಮರೆತದ್ದು ನೆನಪಾಯಿತು. ಮರೆತು ಹೋದರೆ ಅವನ ಮಗು ಮನಸು ಬೇಸರಿಸಿಕೊಂಡೀತು. 

( ಇನ್ನೂ ಇದೆ.)


https://youtu.be/jAHIyNu8jv0

03 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೫.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೫.👊



ಮೀನು ತಿನ್ನುವ ಬಾಯಿ ಚಪಲ ಹತ್ತಿಸಿಕೊಂಡ ನಂತರ ಬಹುಕಾಲ ಕೇವಲ ಹಸಿ ಹಾಗೂ ತಾಜಾ ಮೀನುಗಳನ್ನಷ್ಟೆ ಚಪ್ಪರಿಸುತ್ತಿದ್ದವನ ನಾಲಗೆಯ ರುಚಿಮೊಗ್ಗಿಗೆ ಹತ್ತು ವರ್ಷಗಳ ಹಿಂದೆ ಅದು ಹೇಗೋ ಏನೋ ಒಣಮೀನಿನ ರುಚಿಯೂ ಹತ್ತಿತ್ತು. ಈ ಒಣಮೀನನ್ನ ಸಾಮಾನ್ಯವಾಗಿ ಹೆಚ್ಚು ಉಪ್ಪಿನಲ್ಲಿ ಸಂಸ್ಕರಿಸದೆ ಊರಿಟ್ಟ ಹಸಿಮೀನುಗಳನ್ನ ಕಡಲತಡಿಯ ಬಿರುಬಿಸಿಲಿನಲ್ಲಿ ಅದರಲ್ಲಿರುವ ನೀರಿನಂಶವೆಲ್ಲಾ ಸಂಪೂರ್ಣ ಇಂಗಿ ಹೋಗುವ ತನಕ ಒಣಗಿಸಿಟ್ಟು ಮರಕ್ಕಲರು ತಯಾರಿಸುತ್ತಾರೆ. ಸಹಜವಾಗಿ ಅದು ತನ್ನ ತ್ಯಾಜ್ಯದ ಅಂಶವನ್ನ ತನ್ನೊಳಗೆ ಇಟ್ಟುಕೊಂಡುˌ ಕೆಡದಿರಲು ಹಾಕಲಾಗಿರುವ ಅಗತ್ಯಕ್ಕಿಂತ ಅಧಿಕ ಉಪ್ಪಿನಂಶವನ್ನ ಹೀರಿಕೊಂಡುˌ ಒಣಗುವ ಹಂತದಲ್ಲಿ ಬೀಸಿ ಬರುವ ಕಡಲಕೆರೆಯ ಗಾಳಿ ಹೊತ್ತು ತರುವ ಸಣ್ಣ ಸಣ್ಣ ಮರಳಿನ ಕಣಗಳನ್ನ ಅಂಟಿಸಿಕೊಂಡು ಒಂಥರಾ ಕಟ್ಟಿಗೆಯಂತಾಗಿರುತ್ತದೆ.

ಹೀಗಾಗಿ ಅನಿವಾರ್ಯವಾಗಿ ಅಡುಗೆಗೆ ಉಪಯೋಗಿಸುವ ಮೊದಲು ಐದಾರು ಬಾರಿ ಅದನ್ನ ಬೆಚ್ಚನೆ ಹಾಗೂ ತಣ್ಣೀರಲ್ಲಿ ಬದಲಿಸಿ - ಬದಲಿಸಿ ಚೆನ್ನಾಗಿ ತೊಳೆದು ಅದರಲ್ಲಿರುವ ಉಪ್ಪಿನಂಶವನ್ನ ಆದಷ್ಟು ಕಡಿಮೆ ಮಾಡಿˌ ಪೂರ್ತಿಯಾಗಿ ಅಂಟಿದ ಮರಳಿನ ಕಣಗಳನ್ನ ಬೇರ್ಪಡಿಸಿ ತೆಗೆಯಬೇಕಿರುತ್ತೆ. ಅದಾದ ಮೇಲೆ ತಿನ್ನಲು ಬೇಡದ ಹೊಟ್ಟೆಯೊಳಗಿರುವ ಅದರ ಅಂಗಾಂಶಗಳು-ಬಾಲ-ರೆಕ್ಕೆ-ಮಂಡೆ ಎಲ್ಲವನ್ನೂ ತೆಗೆದೆಸೆದ ನಂತರವೆ ಅದು ಬೇಯಿಸಲರ್ಹವಾಗೋದು. ಹಸಿಮೀನಿನ ಮಂಡೆ ತನ್ನ ಅಪಾರ ರುಚಿಗೆ ಎಷ್ಟು ಪ್ರಖ್ಯಾತವೋˌ ಅದೆ ಒಣ ಮೀನಿನದ್ದು ತನ್ನ ರುಚಿಹೀನತೆಗೆ ಅಷ್ಟೆ ಕುಖ್ಯಾತ. ನಿರುಪಯುಕ್ತ ಭಾಗಗಳನ್ನ ಒಣಮೀನಿನಿಂದ ಕತ್ತರಿಸಿ ತೆಗೆಯೋದೆ ಒಂದು ಸವಾಲು. ಅದನ್ನ ಗೆದ್ದರಷ್ಟೆ ಅಡುಗೆ ಸುಸಂಪನ್ನ.

ಸಾಲದ್ದಕ್ಕೆ ಬಾಯಿಗೆ ರುಚಿಯಿದ್ದಷ್ಟೂ ಸಹ ಆ ಒಣಮೀನು ಸ್ವಲ್ಪ ವಾಸನೆಯೂ ಹೆಚ್ಚಿರುವುದು ಸಹಜ. ಅದರಿಂದ ಅದೆಷ್ಟೆ ಅದರ ಗೀಳಿಗೆ ಬಿದ್ದದ್ದರೂ ಸಹ ತೊಳೆದು ಸೋಸಿದ ನಂತರ ಅದನ್ನೊಮ್ಮೆ ಎಣ್ಣೆಯಲ್ಲಿ ಹುರಿದುಕೊಳ್ಳುವಾಗ ತಿನ್ನುವ ಚಪಲಚನ್ನಿಗರೆ ಮೂಗು ಮುಚ್ಚಿಕೊಳ್ಳಬೇಕು. ಅದು ಸಾಲದು ಅಂತ ನೆರೆಕರೆಯಲ್ಯಾರಾದರೂ ಮತ್ಸ್ಯ  ದ್ವೇಷಿಗಳಿದ್ದರೆ ಆ ಹೊತ್ತಿನಲ್ಲಿ ಅಡುಗೆ ಮನೆಯಲ್ಲರಳಿ ಊರು ಸುತ್ತಲು ಹೊರಡುವ ಅದರ ಘಾಟಿನಿಂದ ಅಘಾತರಾಗುವ ಅಂತವರ ಹಿಡಿಶಾಪವನ್ನ ಸಹ ಜೊತೆಜೊತೆಗೆ ತಿನ್ನಲು ತಯಾರಾಗಿರಬೇಕು. ಇದಕ್ಕೆಲ್ಲ ಕಳಶವಿಟ್ಟಂತೆ ಗಾಳಿಯಲೆಯಲ್ಲಿ ಬಡಾವಣೆಯೆಲ್ಲಾ ಹೋಗಿ ಅಂದಿನ ಅಡುಗೆಯ ಚಾಡಿ ಹರಡಿ ಆ "ಮನಮೋಹಕ" ವಾಸನೆಗೆ ಮನಸೋತು ಅಂತಹ ಒಣಮೀನು ಅಡುಗೆಯಾಗುತ್ತಿರವಲ್ಲಿಗೆ ತುರ್ತು ಮೈತ್ರಿಯ ಆಹ್ವಾನ ಕೊಡಲು ಕಾತರಿಸುತ್ತಾ ಎಂದಿಲ್ಲದ ಪೂಸಿ ಹೊಡೆದುಕೊಂಡು ಬರುವ ಸುತ್ತಮತ್ತಲಿನ ಪುಸ್ಸಿಕ್ಯಾಟುಗಳು ಮಾಡುವ ಅನುಕೂಲ ಸಿಂಧು ಪ್ರೀತಿಯ ರಗಳೆಯನ್ನೂ ಸಹ ಎದುರಿಸಿ ಅವುಗಳ ಅವಕಾಶವಾದಿ ಒಲವಿನ ನಾಟಕವನ್ನೂ ಸಹ ನಿಭಾಯಿಸಿ ಗೆಲ್ಲುವ ಛಾತಿ ಹೊಂದಿರಬೇಕು. ಇಷ್ಟೆಲ್ಲಾ ದಪ್ಪಚರ್ಮ ಬೆಳೆಸಿಕೊಂಡಾಗ ಮಾತ್ರ ಬಾಯಲ್ಲಿ ನೀರೂರಿಸುವ ಸಿಗಡಿ ಚಟ್ನಿಯನ್ನಾಗಲಿˌ ಬದನೆ ಕಾಯಿ ಬೆರಕೆ ಹಾಕಿದ ಒಣಮೀನಿನ ತಾಳ್ಯವನ್ನಾಗಲಿˌ ಇಲ್ಲಾ ಬಸಳೆ ಸೊಪ್ಪು ಅಥವಾ ನುಗ್ಗೆಕಾಯಿಯನ್ನ ಬೆರೆಸಿದ ರುಚಿಕಟ್ಟಾದ ಒಣಮೀನಿನ ಸಾರು ತಯಾರಿಸಿ ಸವಿಯಲು ಸಾಧ್ಯವಾಗುತ್ತಿತ್ತು. ಇವನ ಜಿಹ್ವಾಚಾಪಲ್ಯ ಅದಕ್ಕೆಲ್ಲಾ ಒಗ್ಗಿ ಹೋಗಿ ಈಗವನೂ ಸಹ ಒಣಮೀನಿನ ರುಚಿಗೆ ಮಾರು ಹೋಗಿ ಅದರ ಖಾದ್ಯ ವೈವಿಧ್ಯಗಳ ಪರಮ ಅಭಿಮಾನಿಯಾಗಿ ಶಾಶ್ವತವಾಗಿ ಮತಾಂತರವಾಗಿದ್ದ.

ಗಣಪತಿ ಸ್ವಾಮಿಗಳೊಡನೆ ಇವನು ಮಾರುಕಟ್ಟೆ ರಸ್ತೆಯಲ್ಲಿದ್ದ ಮೀನಂಗಡಿಗೆ ಹೊಕ್ಕಾಗˌ ಆಗಷ್ಟೆ ಮಧ್ಯಾಹ್ನದೂಟ ಮುಗಿಸಿ ಮನೆಯಿಂದ ಬಂದಂತಿದ್ದ ಬಿಳಿ ಮುಂಡುಟ್ಟು ಜೇಬಿನಲ್ಲೊಂದು ಬಾಲ್ ಪೆನ್ ಸಿಕ್ಕಿಸಿಕೊಂಡಿದ್ದ ಬೆಳ್ಳನೆ ಅಂಗಿ ತೊಟ್ಟಿದ್ದ ದಪ್ಪ ಗಾಜಿನ ಕಪ್ಪು ಫ್ರೇಮಿನ ಕನ್ನಡಕ ತೊಟ್ಟಿದ್ದ ಮಾಧವನ್ ಕುರ್ರುಪ್ಪರು ಸೆಖೆಗೆ ಪಂಖ ಹಾಕಿಕೊಂಡು ಖಾಲಿ ಹೊಡೆಯುತ್ತಿದ್ದ ತಮ್ಮ  ಅಂಗಡಿಯ ಗಲ್ಲಾದ ಕುರ್ಚಿಯ ಮೇಲೆ ಆರಾಮದ ಭಂಗಿಯಲ್ಲಿ ಕೂತುಕೊಂಡು ಅಂದಿನ "ಮಾತೃಭೂಮಿ"ಯನ್ನ ಕೂಲಂಕಷವಾಗಿ ಓದುತ್ತಿದ್ದರು.

ಆಶ್ರಮದಿಂದ ಕುಶಾಲನಗರಕ್ಕೆ ಹೋಗುವ ದಾರಿಯ ಕುಟೀರದಲ್ಲಿ ತಮ್ಮ ನೆರೆಯವರಾಗಿ ವಾಸವಿದ್ದ ಪರಿಚಿತರಾದ ಗಣಪತಿ ಸ್ವಾಮಿಗಳ ಮಖ ದರ್ಶನವಾಗುತ್ತಲೆ "ವರು ವರುˌ ಎದಾ ವಂದದು?" ಎನ್ನುತ್ತಾ ಬಿಡಿಸಿ ಓದುತ್ತಿದ್ದ "ಪತ್ರಂ"ವನ್ನು ಮಡಿಚಿಡುತ್ತಾ ಎದ್ದು ನಿಂತರು.
ಅವನ ಬೇಡಿಕೆಯನ್ನ ಗಣಪತಿ ಸ್ವಾಮಿಗಳು ಕುರುಪ್ಪರಿಗೆ ಅರುಹಿದರು. ವ್ಯಾಪಾರಕ್ಕವನು ಮೊದಲಿಟ್ಟ.

ಉದ್ದನೆ ಮರದ ಮೇಜುಗಳ ಮೇಲೆ ಬಗೆಬಗೆಯ ಮೀನುಗಳನ್ನ ಪೇರಿಸಿಟ್ಟ ಬುಟ್ಟಿಗಳನ್ನ ಸಾಲಾಗಿ ಜೋಡಿಸಿಟ್ಟಿದ್ದರು. "ಞಾನ್ ಇವಿಡೆಲೇತ್ತಿ ಪಲ ಸ್ಥಳಂಗಳೆ ಕಂಡು ಪಿನ್ನೆ ಮಡಕ್ಕಯಾತ್ರ ಚೇಯ್ದುಳ್ಳುˌ ಬುದ್ಧಿಮುಟ್ಟೊನ್ನೂ ಆಗಾದೆ ಕೊಂಡುಪೋವಾನ್ ಪೆಟ್ಟೋ?" ಎನ್ನುತ್ತಾ ಇವನು ಮಾಧವನ್ ಕುರುಪ್ಪರ ಮುಖ ದಿಟ್ಟಿಸಿದ. ಅದಕ್ಕವರು "ಅಯ್ಯೋˌ ಅದ್ಯೊನ್ನು ಕೊಳಪಿಲ್ಲಯ. ತಿಗಞ್ಞಾ ಕೆಟ್ಟಾಕಿ ತರ. ಮಣಂ ಪೊರುತ್ತು ವರಾದಿರುನ್ನ ಪುರತ್ತಾಕ್ಕಲ್ ಇರುಂದುಕೊಂಡು ಪ್ರಶ್ನಂ ಇಲ್ಲಾದೆ ಪಲದಿವಸಂ ಅಕಲೆ ಕೊಂಡು ಪೋಯಾಂಪೆಟ್ಟು" ಎಂದು ಮಾರುತ್ತರಿಸಿದರು.


ಅವರ ಉತ್ತರದಿಂದ ತೃಪ್ತನಾದ ಇವನು ಎರಡು ಕಿಲೋ ಮಲಯಾಳಂನಲ್ಲಿ ತಿರಂಣ್ಭಿ ಎನ್ನಲಾಗುವ ತೊರಕೆ. ಎರಡೂವರೆ ಕಿಲೋ ಮಲಯಾಳಂನಲ್ಲಿ ಚೆಮ್ಮೀನ್ ಎನ್ನಲಾಗುವ ಪೊಡಿ ಎಟ್ಟಿ ಹಾಗೂ ಮಲಯಾಳಿಗಳು ನೆತ್ತೋಲಿ ಅನ್ನುವ ಕೊಲ್ಲತ್ತರು ಒಂದು ಕಿಲೋ ಕಟ್ಟಿಸಿಕೊಂಡು ಚೂರು ಕ್ರಯದಲ್ಲಿ ಚೌಕಾಸಿ ಮಾಡಿ ವ್ಯಾಪಾರ ಕುದುರಿಸಿದ. ಅಂದ ಮಾತಿನಂತೆ ಮೀನಿನ ವಾಸನೆ ಹೊರಬಾರದಂತೆ ಕೌಶಲ್ಯಪೂರ್ಣವಾಗಿ ಕುರಪ್ಪರು ಅವನ್ನ ಕಟ್ಟಿ ಕೊಟ್ಟರು. ಜೊತೆಗೆ ತಲಾ ಎರಡೆರಡು ಕಿಲೋ ತೆಂಗಿನೆಣ್ಣೆ ಹಾಗೂ ಆಣಿಬೆಲ್ಲವನ್ನೂ ಸಹ ಪಕ್ಕದಲ್ಲಿದ್ದ ಕೊಗ್ಗ ಕಾಮತರ ಅಂಗಡಿಯಿಂದ ಕೊಂಡು ಮಾಡಿದ ಸಹಾಯಕ್ಕಾಗಿ ಗಣಪತಿ ಸ್ವಾಮಿಗಳಿಗೆ ಕೃತಜ್ಞತೆ ತಿಳಿಸಿˌ ಅವರ ವ್ಯಾಪಾರಕ್ಕೆ ಅವರು ಅತ್ತ ತಿರುಗುತ್ತಿದ್ದಂತೆ ಇವನು ರಿಕ್ಷ ಹಿಡಿದು ತನ್ನ ಕೋಣೆಯ ಹಾದಿಯತ್ತ ಹೊರಳಿದ. ಹೋಗುವ ಮೊದಲು "ನಾಳೆ ಸಂಜೆ ವಿಶೇಷ ಪೂಜೆ ಇದೆ. ಮರೆಯದೆ ಬನ್ನಿ" ಎಂದು ಗಣಪತಿ ಸ್ವಾಮಿಗಳು ಹೇಳಿದ್ದರು.

*****

"ಜಬ್ ಹಮ್ ನಾ ಹೋಂಗೇ
ತಬ್ ಹಮಾರಿ 
ಕಾಕ್ ಪೇ ತುಮ್ ರುಕೋಗೆ 
ಚಲತೇ ಚಲತೇ.
ಅಶ್ಕೋಂಸೇ ಭೀಗೀ ಚಾಂದನೀ ಮೈ
ಏಕ್ ಸದಾ ಸೀ ಸುನೋಗೇ ಚಲತೇ ಚಲತೇ./
ವಹೀಂ ಪೇ ಕಹೀಂ
ವಹೀಂ ಪೇ ಕಹೀಂ ಹಮ್ˌ
ತುಮ್ ಸೇ ಮಿಲೇಂಗೇ
ಬನ್ ಕೇ ಕಲೀ 
ಬನ್ ಕೇ ಸಬಾ
ಭಾಗ್-ಏ-ವಫಾ಼ ಮೈ.//

ಕೋಣೆಗೆ ಹೋಗಿ ಕೈಫೋನಿನ ರೇಡಿಯೋ ಹಚ್ಚಿದವನಿಗೆ ಹಚ್ಚಗೆ ಸುಮನ ಕಲ್ಯಾಣಪುರ ರಫಿ ಸಾಹೇಬರೊಂದಿಗೆ ಹಾಡುತ್ತಿದ್ದ ಮಧುರ ಯುಗಳ ಮೂಡಿ ಬರುತ್ತಿದ್ದುದು ಕೇಳಿ ಬಂತು. ಅಯಾಚಿತವಾಗಿ ಅವನ ಬಾಯಿ ಸ್ವರ ಸಂಯೋಜನೆ ರೋಷನ್-ಸಾಹಿತ್ಯ ಮಾಜ್ರೂಹ್ ಸುಲ್ತಾನಪುರಿ ಅನ್ನುವ ಮನಸಿನಾಳದ ಪುಟಗಳಿಂದ ಹೆಕ್ಕಿ ತೆಗೆದ ಹೆಸರುಗಳನ್ನ ಗಟ್ಟಿಯಾಗಿ ಉಚ್ಛರಿಸಿತು. ಬಿಸಿಲಿನ ಧಗೆ ನಿಜವಾಗಲೂ ಕಾಡಿಸುವಷ್ಟು ಹೆಚ್ಚಾಗಿತ್ತು. ಹಾಡಿನ ಇಂಪಿನ ಜೊತೆಗೆ ದೇಹಕ್ಕೂ ಕೊಂಚ ತಂಪು ಬೇಕಿದೆ ಅನಿಸಿ ತಣ್ಣೀರಿನ ಸ್ನಾನ ಮಾಡಿ ಸುಧಾರಿಸಿಕೊಳ್ಳಲು ಅಣಿಯಾದ. ಬಿಸಿಲ ಪ್ರಕೋಪಕ್ಕೆ ಬಳಲಿದ್ದ ದೇಹಕ್ಕೆ ತಂಪನುಣಿಸದಿದ್ದರೆ ಚಡಪಡಿಕೆಯಾಗುವ ಸಂಭವವಿತ್ತು.

"ಮೌಸಂ ಕೋಈ ಹೋ
ಇಸ್ ಚಮನ್ ಮೈ
ರಂಗ್ ಬನಕೇ ರಹೇಂಗೇ
ಹಮ್ ಖರೀಮಾˌ
ಚಾಹತ್ ಕೀ ಖುಷ್ಬೂ
ಯೂಂ ಹೀ ಜು಼ಲ್ಫೋಂ 
ಸೇ ಉಢೇಗೀ 
ಖಿಜಾ಼ ಹೋ ಯಾ ಬಹಾರೇಂ!
ಯೂಂ ಹೀ ಜೂಮ್ ಥೇ
ಯೂಂ ಹೀ ಜೂಮ್ ಥೇ
ಔರ್ ಖಿಲತೇ ರಹೇಂಗೇ
ಬನಕೇ ಕಲೀ ಬನಕೇ ಸಬಾ
ಭಾಗ್-ಏ-ವಫಾ ಮೈ.//

ರಹೇನಾ ರಹೇ ಹಮ್
ಮೆಹಕಾ ಕರೇಂಗೇ/
ಬನಕೇ ಕಲೀ ಬನಕೇ ಸಬಾ
ಭಾಗ್-ಏ-ವಫಾ ಮೈ.//




( ಇನ್ನೂ ಇದೆ.)


https://youtu.be/WH1GWfIpjBw