14 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೪.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೪.👊


ಬೆಳಗ್ಯೆ ಅಂದಿನ ದಿನಪತ್ರಿಕೆಯನ್ನ ತಂದು ಕೊಟ್ಟವರು ಅದೆ ಸಂಜೆ ಅದನ್ನವರು ಮರಳಿ ಒಯ್ಯುವ ಮೊದಲು ಹೋಗಿ ಅದನ್ನ ಸಹ ಓದಿ ಮುಗಿಸುವ ಅಭ್ಯಾಸ ಅವನ ಮೈಗಂಟಿತು. ಆದರೆ "ಕನ್ನಡಪ್ರಭ"ದಷ್ಟು ಬರೆ ಊರ ಸತ್ತವರ ವಿವಿಧ ಗಾತ್ರಗಳ ಚಿತ್ರಗಳೊಡನೆ ಶ್ರದ್ಧಾಂಜಲಿˌ ಬಾಷ್ಪಾಂಜಲಿಗಳ ಜಾಹಿರಾತುಗಳೆ ತುಂಬಿ ತುಳುಕುತ್ತಿದ್ದ ವೈಕುಂಠ ಸಮಾರಾಧನೆಯ ಆಹ್ವಾನ ಪತ್ರಿಕೆಯಂತಿದ್ದ ಸಂಪಾದಕೀಯವೂ ಪ್ರಕಟವಾಗಿರದ "ಉದಯವಾಣಿ" ಅವನಿಗೆ ಒಂಚೂರೂ ರುಚಿಸಲಿಲ್ಲ. ಆದರಿನ್ನೂ ದುಡಿಮೆ ಆರಂಭಿಸಿರದೆ ಸ್ವಂತದ ಸಂಪಾದನೆ ಇಲ್ಲದ ಅವನಿಗೆ ಖರೀದಿಸಿ ಓದುವ ಸಾಮರ್ಥ್ಯವಿನ್ನೂ ಇಲ್ಲದಿದ್ದ ಕಾರಣ ಪಾಲಿಗೆ ಬಂದದ್ದನ್ನೆ ಪಂಚಾಮೃತ ಅಂದುಕೊಂಡು ಎರವಲು ಪತ್ರಿಕೆಗಳನ್ನ ಓದುವ ಅನಿವಾರ್ಯತೆಯಿದ್ದಿತ್ತಲ್ಲ? ಬೇರೆ ಆಯ್ಕೆಯೂ ಇದ್ದಿರಲಿಲ್ಲ.

ಪುಟ್ಟರಾಜಣ್ಣನ ಮನೆಯೊಂತರಾ ಅವನ ಪಾಲಿನ ಗ್ರಂಥಾಲಯ. ಅವರು ತರಿಸುತ್ತಿದ್ದ ದಿನ-ವಾರ-ಮಾಸ ಪತ್ರಿಕೆಗಳುˌ ಗ್ರಂಥಾಲಯದ ಸದಸ್ಯತ್ವ ಬಳಸಿ ಎರವಲು ತರುತ್ತಿದ್ದ ಕಾದಂಬರಿಗಳು ಇವೆಲ್ಲಕ್ಕೂ ಅವರಿಗಿಂತ ಮೊದಲು ಇವನೆ ಓದುಗನಾಗಿರುತ್ತಿದ್ದುದು ಮೂಮೂಲು. ಹೆಚ್ ಜಿ ರಾಧಾದೇವಿˌ ವಿಜಯಶ್ರಿˌ ಹೆಚ್ ಎಸ್ ಪಾರ್ವತಿˌ ಸಾಯಿಸುತೆˌ ಕೌಂಡಿನ್ಯˌ ಬೀಚಿˌ ಸಿ ಎನ್ ಮುಕ್ತಾˌ ಸಾಕೃ ಪ್ರಕಾಶ್ˌ ಶಾರದಾ ಉಳುವಿˌ ನರಸಿಂಹಯ್ಯˌ ರಾಜಾ ಚಂಡೂರು ತರದವರು ಅನುವಾದಿಸಿದ ತೆಲುಗಿನ ಉದ್ದನಪೂಡಿ ಸುಲೋಚನಾರಾಣಿˌ ಯಂಡಮೂರಿ ವೀರೇಂದ್ರನಾಥ ಮುಂತಾದ ಬ್ರಾಂಡಿನ "ಜನಪ್ರಿಯ" ಸಾಹಿತಿಗಳು ಬರೆಬರೆದು ಗುಡ್ಡೆ ಹಾಕಿರುತ್ತಿದ್ದ ಕಾದಂಬರಿಗಳೆ ಹೆಚ್ಚಾಗಿ ಇರುತ್ತಿದ್ದು ಅಪರೂಪಕ್ಕೆ ಅವರು ಸತ್ಯಕಾಮˌ ಭೈರಪ್ಪˌ ಕುವೆಂಪು ರಚನೆಯ ಪುಸ್ತಕಗಳನ್ನೂ ಅವರು ಓದಲು ತರೋದಿತ್ತು. 

ಬಹಳಷ್ಟು ಸಲ ಅವುಗಳಲ್ಲಿ ಬರೆದಿರುವ ಅನೇಕ ಅಂಶಗಳು ನಾಲ್ಕಾಣೆಯಷ್ಟೂ ಸಹ ಅವನಿಗೆ ಅರ್ಥವಾಗುತ್ತಿರದಿದ್ದರೂ ಕೂಡ ಅವನ ಮೆದುಳು ಹೊಕ್ಕಿದ್ದ ಓದುವ ಹುಳ ಸಿಕ್ಕಸಿಕ್ಕದನ್ನೆಲ್ಲಾ ಓದುವ ಗೀಳಿಗೆ ಅವನನ್ನ ಕ್ರಮೇಣ ದಾಸನನ್ನಾಗಿಸುತ್ತಿತ್ತು.

ದಿನ ಬೆಳಗಾದರೆ ಸಾಕು ಪುಟ್ಚರಾಜಣ್ಣನ ಹೆಂಡತಿ ಪಾರ್ವತಮ್ಮ ಚೆನ್ನಾಗಿ ಗುಡಿಸಿ ತೊಳೆದಿರುತ್ತಿದ್ದ ಅವರ ಮನೆಯ ಅಂಗಳದಲ್ಲಿ ಹಾಸಿದ್ದ ಹಾಸುಗಲ್ಲುಗಳ ಮೇಲೆ ಅವರದೆ ಗೇಟಿಗೆ ಪೇಪರು ಹಾಕುವ ಹುಡುಗರು ಸಿಕ್ಕಿಸಿ ಹೋಗಿರುತ್ತಿದ್ದ ತೀರಾ ಕನಿಷ್ಠ ಗುಣಮಟ್ಟದ ಕಾಗದದಲ್ಲಿ ಪ್ರಕಟವಾಗಿರುತ್ತಿದ್ದ ಕನ್ನಡಪ್ರಭ ಹಾಗೂ ಛಲಗಾರಗಳನ್ನ ಚಾಪೆಯಂತೆ ಹಾಸಿಕೊಂಡು ಅವುಗಳ ಮೇಲೆ ಮಲಗಿಕೊಂಡು ಅವುಗಳಲ್ಲಿ ಪ್ರಕಟವಾಗುತ್ತಿದ್ದ ಮೂರು ಮಾರ್ಕಿನ ಬೀಡಿಯ ಜಾಹಿರಾತಿನಿಂದ ಆರಂಭಿಸಿ ನಿತ್ಯ ಭವಿಷ್ಯದಿಂದ ಹಿಡಿದು ಶೇರುಪೇಟೆ ಸಮಾಚಾರ - ಕಡೆಗೆ ಬೆಂಗಳೂರಿನಲ್ಲಿ ಇಂದಿನ ಬಂಗಾರದ ದರದವರೆಗೂ ತನಗೆ ಒಂಚೂರೂ ಉಪಯೋಗವಿಲ್ಲದ ಮಾಹಿತಿಗಳನ್ನೂ ಸೇರಿಸಿ ಒಂದಕ್ಷರವನ್ನೂ ಬಿಡದೆ ಓದುವ ಅವನ ಉದ್ಧಟತನ ಪುಟ್ಟರಾಜಣ್ಣನ ಕುಟುಂಬಕ್ಕೆ ಕಿರಿಕಿರಿ ಹುಟ್ಟಿಸುತ್ತಿದ್ದರೂ ಸಹ ಅಪಾರ ತಾಳ್ಮೆಯಿಂದ ಅವರೆಲ್ಲ ಅವನ ಈ ಗೂಂಡಾಗಿರಿಯನ್ನು ಸಹಿಸಿ ಕ್ಷಮಿಸುತ್ತಿದ್ದರು. 

ಕಲ್ಲು ಹಾಸಿನ ಮೇಲೆ ಆರದೆ ಉಳಿದಿರುತ್ತಿದ್ದ ನೀರು ಹೀರಿ - ಅದರ ಮೇಲೆ ಬಿದ್ದು ಒದ್ದಾಡಿದ ಇವನ ಒತ್ತಡದಿಂದ ಅತ್ತಿತ್ತಲಾಗಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡ ಪತ್ರಿಕೆ ನಿಜವಾಗಿಯೂ ಅದನ್ನ ಕಾಸು ಕೊಟ್ಟು ಖರೀದಿಸಿದವರ ಕೈ ಸೇರುವ ಹೊತ್ತಿಗೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಹರಿದ ಬಾಳೆಲೆಯಂತಾಗಿರುತ್ತಿದ್ದ ನಿಷ್ಪಾಪಿ ಹೆಣ್ಣಿನಂತಾಗಿರುತ್ತಿದ್ದರೂˌ ಅವರವನ ಈ ಅಧಿಕಪ್ರಸಂಗವನ್ನು ಮನ್ನಿಸಿ ಸುಮ್ಮನಿರುತ್ತಿದ್ದರು. ಆಗೆಲ್ಲಾ ಹಾಗೆ ಮಾಡೋದು ತಪ್ಪು ಅನ್ನುವ ಕನಿಷ್ಠ ಪ್ರಜ್ಞೆಯೂ ಇದ್ದಿರದಿದ್ದ ಅವನು ಅದನ್ನ ಹಕ್ಕೆಂಬಂತೆ ಭಾವಿಸಿ ವರ್ಷಗಟ್ಟಲೆ ಅವರೆಲ್ಲರನ್ನೂ ಸತಾಯಿಸಿದ್ದಾನೆ.

ಅವರ ಮನೆಯಲ್ಲಿ ಹೀಗೆ ಮುಂಜಾನೆ ಎದ್ದವನೆ ಕದ್ದು ಪತ್ರಿಕೆ ಓದುವˌ ಹೇಳದೆ ಕೇಳದೆ ಒಳ ನುಗ್ಗಿ ಬಂದು ಕನಿಷ್ಠ ಅನುಮತಿ ಕೇಳುವ ಸೌಜನ್ಯವನ್ನೂ ತೋರದೆ ಮನೆಗೆ ತಂದಿರುತ್ತಿದ್ದ ಪುಸ್ತಕಗಳನ್ನ ತೆಗೆದುಕೊಂಡೊಯ್ಯುವ ಇವನ ಇಂತಹ ದಬ್ಬಾಳಿಕೆಯ ನಡುವಳಿಕೆಗಳು ಹದ್ದುಮೀರಿದಾಗ ಅದನ್ನ ವಿರೋಧಿಸುತ್ತಿದ್ದವಳು ಪುಟ್ಟರಾಜಣ್ಣನ ಮಗಳು ಸಣ್ಣಿ ಅಲಿಯಾಸ್ ಉಮಕ್ಕ ಮಾತ್ರ. ಆದರೆ ಅವಳ ವಿರೋಧವನ್ನೆಲ್ಲ ಲೆಕ್ಕಕ್ಕೇ ಇಟ್ಟಿರದಿದ್ದ ಅವನು ಕಾಲೇಜಿನ ಮೊದಲ ವರ್ಷದಲ್ಲಿದ್ದ ಅವಳ ಪಠ್ಯಪುಸ್ತಕಗಳನ್ನೆ ಅವಳಿಗೆ ಹೇಳದೆ ತೆಗೆದು ಪರಿಶೀಲಿಸುತ್ತಿದ್ದ. 

ಹಾಗೊಂದು ರೇಡು ಹಾಕುತ್ತಿದ್ದಾಗ ಅವನ ಕೈಗೆ ಕೆ ಪಿ ಪೂರ್ಣಚಂದ್ರ ತೇಜಸ್ವಿ ಬರೆದಿದ್ದˌ ಆಗ ಕುವೆಂಪು ವಿಶ್ವವಿದ್ಯಾಲಯದ ಮೊದಲ ವರ್ಷದ ಪದವಿ ತರಗತಿಗೆ ಪಠ್ಯವಾಗಿ ಆಯ್ಕೆಯಾಗಿದ್ದ "ಅಲೆಮಾರಿಯ ಅಂಡಮಾನ್" ಸಿಕ್ಕಿತು. ಆ ಪ್ರವಾಸ ಕಥನವನ್ನು ಓದಿದವನಿಗೆ ಏಕಕಾಲಕ್ಕೆ ಇಷ್ಟು ಕಾಲ ತಾನು ಓದುತ್ತಿದ್ದ ಇತರರ ಒಣ ಸಾಹಿತ್ಯ ಅದೆಷ್ಟು ರಸಹೀನ ಅನ್ನುವುದು ಅರ್ಥವಾಗುವುದರೊಂದಿಗೆ. ಇಷ್ಟು ದಿನ ಈ ಲೇಖಕರನ್ನ ಓದದಿದ್ದದ್ದಕ್ಕೆ ಅಪಾರ ವ್ಯಥೆಯೂ ಆಯಿತು. ಎರಡನೆ ವರ್ಷದ ಪದವಿಯ ಕಾಲದಲ್ಲೂ ಅವಳದ್ದೆ ಪಠ್ಯ ಪುಸ್ತಕದ ಸಾಲಿನಲ್ಲಿದ್ದ ಸಾಗರದ ಸಾಹಿತಿ ನಾರ್ಬರ್ಟ್ ಡಿ'ಸೋಝಾ಼ರ ಕಾದಂಬರಿ "ಕೊಳಗ"ದ ಓದು ಅವನನ್ನ ಬೇರೆಯದ್ದೆ ಒಂದು ಲೋಕದ ಪಯಣವನ್ನ ಮಾಡಿಸಿತು. 


ವಿಜಯೇಂದ್ರಣ್ಣನ ತಮ್ಮ ರಾಧಾಕೃಷ್ಣಯ್ಯನ ಆಪ್ತ ಸ್ನೇಹಿತರಾಗಿದ್ದ ಈ ಡಿ'ಸೋಝ಼ರನ್ನ ಆತ ಬಾಲ್ಯದಿಂದಲೆ ನೋಡಿ ಬಲ್ಲ. ಅವರ ಮೊತ್ತಮೊದಲ ಕಾದಂಬರಿಯನ್ನ ಅವರು "ನನ್ನ ಗೆಳೆಯ ರಾಧಾಕೃಷ್ಣನಿಗೆ" ಅಂತಲೆ ಅರ್ಪಣೆ ಮಾಡಿದ್ದಾರೆ. ಆದರೆ ಅವರ ಸಾಹಿತ್ಯವನ್ನವನು ಓದಿದ್ದು ಮಾತ್ರ ಅದೆ ಮೊದಲು. ಬರವಣಿಗೆಯ ಹೊಸ ಮಜಲುಗಳ ಪರಿಚಯವಾಗುತ್ತಾ ಹೋದಂತೆ ಅದಕ್ಕೂ ಹಿಂದೆ ಓದುತ್ತಿದ್ದ ಲೇಖಕರ ಪುಸ್ತಕಗಳೆಲ್ಲ ತೀರಾ ಸಪ್ಪೆ ಅನ್ನಿಸಿ ಅವುಗಳ ಓದನ್ನ ಕ್ರಮೇಣ ತ್ಯಜಿಸ ತೊಡಗಿದ. 

ಅಲ್ಲದೆ ಗ್ರಂಥಾಲಯಕ್ಕೆ ಹೋದರೆ ಯಾವುದೆ ಪುಸ್ತಕವನ್ನಾದರೂ ಉಚಿತವಾಗಿ ಓದಬಹುದು ಅನ್ನುವ ಪುಟ್ಟರಾಜಣ್ಣನ ಮಾಹಿತಿಯ ಬೆನ್ನು ಹಿಡಿದು ಹೋಗಿ ಅಲ್ಲಿ ಧೂಳು ತುಂಬಿದ್ದ ಅರೆಗಳಲ್ಲಿ ಹುಳ ತಿನ್ನಲು ತಯಾರಾಗಿದ್ದ ಅನೇಕ ಪುಸ್ತಕಗಳ ಮೇಲಿದ್ದ ಧೂಳಿನ ಪರದೆ ಸರಿಸಿ ಅರ್ಥವಾದಷ್ಟು ಓದಲು ಪ್ರಯತ್ನಿಸಿದ. ಆದರೆ ನಿಗದಿ ಪಡಿಸಿದ ಹೊತ್ತಲ್ಲಲ್ಲದೆ ಮನಸೋ ಇಚ್ಛೆ ನುಗ್ಗಲು ಅವಕಾಶವಿರದಿದ್ದ ಗ್ರಂಥಾಲಯ ಅವನಿಗೆ ಒಂಥರಾ ಪುಸ್ತಕಗಳ ಸೆರೆಮನೆ ಅನ್ನಿಸಿ ಕ್ರಮೇಣ ಅಲ್ಲಿಗೆ ಠಳಾಯಿಸುವ ಅಭ್ಯಾಸವನ್ನ ಕಡಿಮೆ ಮಾಡಿದ.

*****

ಬಪಮನ ಸೊಸೆ ಸೀತಮ್ಮ ಅಡುಗೆಯಲ್ಲಿ ಗಟ್ಟಿಗಿತ್ತಿ. ಸಾರಸ್ವತರ ಸಕಲೆಂಟು ಪಾಕಪ್ರಾವೀಣ್ಯತೆ ಇದ್ದವರು. ಆದರೆ ಅವರ ಅಡುಗೆಯಲ್ಲಿ ಬಳಸುವ ವಸ್ತುಗಳ ಕಳಪೆ ಗುಣಮಟ್ಟ ಮಾತ್ರ ಅದರ ರುಚಿ ಕೆಡಿಸಿ ಉಣ್ಣುವವರ ಬಾಯಿರುಚಿ ಕೆಡಿಸಿ ಹೊಟ್ಟೆಯ ಪರಿಸ್ಥಿತಿಯನ್ನ ಹಳ್ಳ ಹಿಡಿಸುತ್ತಿತ್ತು. ಅಡಿಗಡಿಗೆ ಅವರ ಅಂಗಳಕ್ಕೆ ದಾಂಗುಡಿಯಿಡಲು ಪುಸ್ತಕ - ಪತ್ರಿಕೆಗಳನ್ನ ಹೊರತುಪಡಿಸಿ ಅವನಿಗಿದ್ದ ಮತ್ತೊಂದು ಆಕರ್ಷಣೆ ಸೀತಮ್ಮ ನೆಟ್ಟು ಬೆಳೆಸಿದ್ದ ಎರಡು ಅಮಟೆಕಾಯಿ ಮರಗಳು ಹಾಗೂ ಒಂದು ರತ್ನಗಂಧಿ ಗಿಡ. ಹುಳಿಹುಳಿಯಾದ ಅಮಟೆ ದಂಟು ಹಾಗೂ ಕಾಯಿ ತಿನ್ನುವ ಚಪಲವಿದ್ದ ಅವನಿಗೆ ರತ್ನಗಂಧಿಯ ಎಳೆಬೀಜಗಳು ಸಹ ರುಚಿ ಅನ್ನಿಸುತ್ತಿದ್ದವು. ಕಿತ್ತು ತಿಂದ ತಪ್ಪಿಗೆ ಬಹಳಷ್ಟು ಸಲ ಚೊರೆಪಟ್ ಸೀತಮ್ಮನ ಬೈಗುಳಗಳಿಗೆ ಬಲಿಯಾಗಿದ್ದರೂ ಅಭ್ಯಾಸ ಮಾತ್ರ ಬಿಟ್ಟಿರಲಿಲ್ಲ.

ತಾವು ಮಾಡುವ ಸಕಲೆಂಟು ಅಡುಗೆಗಳಿಗೂ ಹುಳಿ ಹಾಕಬೇಕಿದ್ದಲ್ಲಿ ಬಹುಪಾಲು ಅಮಟೆ ಕಾಯಿ ಜಜ್ಜಿ ಹಾಕಿಯೆ ಸುಧಾರಿಸುತ್ತಿದ್ದ ಸೀತಮ್ಮ ಹುಣಸೆ ಹಣ್ಣುˌ ಬಿಂಬುಳಿˌ ದಾರೆ ಪುಳಿˌ ಬಿರ್ಕನ ಹುಳಿ ಇವುಗಳನ್ನ ಹಾಕಬೇಕಿರುತ್ತಿದ್ದ ಖಾದ್ಯಗಳ ರುಚಿ ಕೆಡಿಸುತ್ತಿದ್ದರು.

( ಇನ್ನೂ ಇದೆ.)


https://youtu.be/dGfi4NXsdkk

No comments: