14 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೫.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೫.👊


ಅದೆಷ್ಟೆ ನಿಪುಣರಾಗಿದ್ದರೂ ಸಹ ಸೀತಮ್ಮನ ಪಾಕಶಾಸ್ತ್ರ ಪ್ರಾವೀಣ್ಯತೆಯನ್ನ ಅವರ ಕೈಯಡುಗೆ ಉಂಡವರೆಲ್ಲ ತಾತ್ಸಾರದಿಂದ ನೋಡಿ ಅದರ ಮರುದಾಳಿಯಿಂದ ತಪ್ಪಿಸಿಕೊಳ್ಳಲು ಹವಣಿಸುವಂತಾಗಲು ಸ್ವಲ್ಪ ಮಟ್ಟಿಗೆ ಪಟ್ಚಣದ ಗಣಪತಿ ಕಟ್ಟೆಯ ಕಲ್ಲಾರೆ ಗಣಪತಿಯೂ ಕೂಡಾ ಕಾರಣನಾಗಿದ್ದ ಅನ್ನಬಹುದೇನೋ!. ಇಂದು ಪ್ರಸಾದಪುರದ ಅಂಬಾನಿಯ ರಾಷ್ಟ್ರೀಯ ಮೊಹರಿನ ಬಂಗಾರದಂಗಡಿ ಇರುವಲ್ಲೆ ಆ ಕಾಲದಲ್ಲಿ ಸೀತಮ್ಮನ ಮಾವ ಅಂದರೆ ಬಪಮನ ಗಂಡ ಶ್ರೀನಿವಾಸ ಶಣೈಗಳಿಟ್ಟಿದ್ದ ಹೊಟೇಲ್ ಇತ್ತಂತೆ. ಅದರ ಎಡ ಮಗ್ಗಲಿನಲ್ಲಿ ಇದ್ದದ್ದೆ ಈ ಕಲ್ಲಾರೆ ಗಣಪತಿ ಕಟ್ಟೆ. ಬಹುಶಃ ಅದೆ ಕಾರಣದಿಂದಿರಬಹುದುˌ ಅವರ ಕುಟುಂಬವೂ ಸಹ ದೇವರ ಧರ್ಮದರ್ಶಿ ಮಂಡಳಿಯ ಸದಸ್ಯರಲ್ಲೊಬ್ಬರಾಗಿದ್ದರು. 


ಮೊದಲೆಲ್ಲಾ ಅತ್ಯಂತ ಸರಳವಾಗಿದ್ದ ಕೇವಲ ಬಯಲು ಗಣಪತಿ ಕಟ್ಟೆ ಬರುಬರುತ್ತಾ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆ ಮೊದಲಿಗೆ ಪುಟ್ಟ ಗುಡಿಯಾಗಿ ಬದಲಾದದ್ದು ಕ್ರಮೇಣ ದೊಡ್ಡ ದೇವಸ್ಥಾನದ ರೂಪಾಂತರದ ಅವತಾರವೆತ್ತಿದ್ದನ್ನ ಸ್ವತಃ ಅವನೆ ಸಾಕ್ಷಿಯಾಗಿ ಕಂಡಿದ್ದಾನೆ. ಮೊದಲಿಗೆ ತಂತ್ರಿಗಳಿಂದ ಪೂಜಿಸಲ್ಪಡುತ್ತಿದ್ದ ಗಣಪತಿಯನ್ನ ಪೂಜಿಸುವ ಹಕ್ಕು ತಂತ್ರಿಗಳು ತೀರಿ ಹೋದ ಮೇಲೆ ಅವರ ಮಗ ಲಕ್ಷ್ಮೀಶನಿಗೆ ಬಂದಿದೆ. ಈ ಲಕ್ಷ್ಮೀಶ ಇವನ ಶಾಲೆಯ ಹಿರಿಯ ಸಹಪಾಠಿಯಾಗಿದ್ದವ. 


ಧರ್ಮದರ್ಶಿಯಾಗಿದ್ದವರ ಮನೆಗಳಿಗೆ ಅದೆ ಕಾರಣದಿಂದ ಹರಕೆಯ ಹೆಸರಲ್ಲಿ ಸಲ್ಲುತ್ತಿದ್ದ ಅಸಂಖ್ಯ ತೆಂಗಿನಕಾಯಿಗಳನ್ನ ಒಡೆದು ದೇವರಿಗೆ ನೈವೇದ್ಯ ಮಾಡಿಯಾದ ಮೇಲೆ ಹಂಚುವುದಿತ್ತು. ಆದರೆ ಬೆಳಗ್ಯೆ ಒಡೆದು ಅಷ್ಟೇನೂ ಶುಭ್ರವಲ್ಲದ ವಾತಾವರಣದಲ್ಲಿ ರಾಶಿ ಹಾಕಿರಲಾಗುತ್ತಿದ್ದ ಆ ಒಡೆದ ತೆಂಗಿನಕಾಯಿಗಳು ದೇವಸ್ಥಾನ ಊರ ಮಧ್ಯದಲ್ಲಿದ್ದ ಕಾರಣ ಓಡಾಡುವ ವಾಹನಗಳು ಎಬ್ಬಿಸುವ ಧೂಳು ಹಾಗೂ ಉಗುಳುವ ಹೊಗೆ ಇವುಗಳಿಂದೆಲ್ಲಾ ಆವೃತವಾಗಿ ಒಂದು ಮಟ್ಟಿಗೆ ತನ್ನ ಮೂಲ ಸ್ವರೂಪವನ್ನೆ ಕಳೆದುಕೊಂಡು ಜೊತೆಗೆ ವಾತಾವರಣದ ಸೆಕೆಗೂ ಸ್ಪಂದಿಸುತ್ತಾ ಕೆಡಲು ಆರಂಭವಾಗಿರುತ್ತಿತ್ತು. ಅಂತಹ ತೆಂಗಿನಕಾಯಿಗಳ ಮೂಟೆ ಮನೆಗೆ ಬಂದದ್ದೆ ಮರಿಗೆ ನೀರಲ್ಲದನ್ನ ತೊಳೆದು ಹಗಲಲ್ಲಿ ಅವುಗಳನ್ನ ಒಣಗಲೊಂದು ಚಾಪೆಯ ಮೇಲೆ ಅಂಗಳದಲ್ಲಿ ಹರಡುತ್ತಿದ್ದ ಸೀತಮ್ಮ ಬೆಕ್ಕುˌ ಕಾಗೆˌ ಗುಬ್ಬಿ ಅದನ್ನ ಎಗರಿಸಿಕೊಂಡು ಹೋಗದಿರುವಂತೆ ಮಾಡಲು ಒಂದು ನೈಲಾನ್ ಬಲೆಯನ್ನ ಅದರ ಮೇಲೆ ಹಾಕಿ ಬಿಡುತ್ತಿದ್ದರು.


ವರ್ಷಕ್ಕಾರು ತಿಂಗಳು ಮಳೆ ಸುರಿಯುವˌ ಇನ್ನಾರು ತಿಂಗಳಲ್ಲಿ ಮಂಕು ಬಿಸಿಲಿರುವ ಚಳಿಗಾಲದ ಪಾರುಪತ್ಯವಿರುವ ಪ್ರಸಾದಪುರದಂತಹ ಗಿರಿಸೀಮೆಯ ಊರಲ್ಲಿ ಮೊದಲೆ ಅರೆಬರೆ ಕೊಳೆತಿರುತ್ತಿದ್ದ ಆ ಗಣಪತಿಗೆ ಒಡೆದಿರುತ್ತಿದ್ದ ಕಾಯಿಗಳು ಸರಿಯಾಗಿ ಒಣಗೋದು ಅಷ್ಟರಲ್ಲೆ ಇರುತ್ತಿತ್ತು. ಸಹಜವಾಗಿ ಬೂಸ್ಟು ಹಿಡಿದು ಶಿಲೀಂದ್ರ ಬೆಳೆದು ಕಪ್ಪಾಗುತ್ತಿದ್ದ ಆ ಕಾಯಿಗಳನ್ನೆ ತುರಿದು ಹಾಕಿ ವಿವಿಧ ಅಡುಗೆ ಮಾಡುತ್ತಿದ್ದ ಸೀತಮ್ಮ ಒಟ್ಟಿನಲ್ಲಿ ಸ್ವಾದಿಷ್ಟವಾಗಿರಬಹುದಾಗಿದ್ದ ದೂರದ ಸಾಧ್ಯತೆಯಿರುತ್ತಿದ್ದ ತಮ್ಮ ಕೈಯಡುಗೆಯ ರುಚಿಯನ್ನ ತನ್ನ ಕೈಯಾರೆ ತಾನೆ ಕೆಡಿಸಿ ಹಾಳುಗೆಡವುತ್ತಿದ್ದರು. ಅವರ ಮನೆಯವರಿಗೆ ಈ ಭಯಂಕರ ಅಡುಗೆಯನ್ನ ಉಣ್ಣಬೇಕಾದ ದುಸ್ಥಿತಿ ಅನಿವಾರ್ಯವಾಗಿರುತ್ತಿತ್ತು.


ಸ್ವಲ್ಪ ದೊಡ್ಡ ಮನಸ್ಸು ಮಾಡಿ ಈ ಪಿಟ್ಟಾಸಿ ಸೀತಮ್ಮ ಹೀಗೆ ಅಳತೆ ಮೀರಿ ಪುಕ್ಕಟೆಯಾಗಿ ತಮ್ಮ ಮನೆಯನ್ನ ಹುಡುಕಿಕೊಂಡು ಬರುತ್ತಿದ್ದ ಲೋಡುಗಟ್ಟಲೆ ತೆಂಗಿನಕಾಯಿಗಳನ್ನ ಅಕ್ಕಪಕ್ಕದವರೊಂದಿಗೆ ಆದಷ್ಟು ಹಂಚಿ ತಿನ್ನುತ್ತಿದ್ದರೆ ಬಹುಶಃ ತಮ್ಮ ಮನೆಯವರ ಹೊಟ್ಟೆಯನ್ನೂ ಕೆಡಿಸದೆˌ ಚೂರುಪಾರು ನೆರೆಕರೆಯವರ ದಿನಸಿಯ ಖರ್ಚನ್ನೂ ಕಡಿಮೆ ಮಾಡಿದ ಪುಣ್ಯ ಕಟ್ಟಿಕೊಂಡು ಒಂದೆ ಏಟಿಗೆ ಎರಡು ಹಕ್ಕಿಯನ್ನ ಹೊಡೆಯುವ ಜಾಣೆಯಾಗಬಹುದಿತ್ತು. 


ಆದರೆ ಕಡೆಯವರೆಗೂˌ ಇರುವ ಮೂರು ಮಂದಿಗೆ ಅಷ್ಟು ಕಾಯಿ ಬೇಕೆ? ಅನ್ನುವ ವಿವೇಕ ಮೂಡಿಸದ ಅವರ ಜನ್ಮಜಾತ ಜುಗ್ಗ ಸ್ವಭಾವ ಅವರನ್ನ ಔದಾರ್ಯ ತೋರದಂತೆ ತಡೆಯುತ್ತಿತ್ತಷ್ಟೆ ಅಲ್ಲದೆ ಅವರದ್ದೆ ಕೈಯಡುಗೆ ತಿನ್ನುವ ಅನಿವಾರ್ಯತೆಯಿರುತ್ತಿದ್ದ ಅವರ ಮನೆಮಂದಿಯ ನಾಲಗೆಯ ರುಚಿಮೊಗ್ಗುಗಳ ಕತ್ತು ಹಿಸುಕಿ ಕೊಂದು ಜೀರ್ಣಾಂಗಗಳ ಪರಿಸ್ಥಿತಿಯನ್ನ ಚಿಂತಾಜನಕವಾಗಿಸಿತ್ತು. ತೆಂಗಿನ ಹಂಗಿಲ್ಲದ ಸಾರಸ್ವತರ ಟ್ರೇಡ್ ಮಾರ್ಕ್ 'ದಾಳಿ ತೊವ್ವೆ'ಯ ಹೊರತು ಸೀತಮ್ಮನ ಚಾಕಚಾಕ್ಯತೆಯಿಂದ ತಯಾರಾಗುತ್ತಿದ್ದ ಉಳಿದೆಲ್ಲಾ ಕಾಯಿ ಬೇಡುವ ಪಾಕ ವೈವಿಧ್ಯಗಳೂ ಸಹ ಕೊಳೆತˌ ಬೂಷ್ಟು ಹಿಡಿದ ಗಣಪತಿಯ ಹರಕೆಗೆ ಸಂದ ತೆಂಗಿನಕಾಯಿಯ ಕೃಪೆಯಿಂದ ಕಷ್ಟಪಟ್ಟು ನುಂಗುವ ಖಾದ್ಯಗಳಾಗಿ ರೂಪಾಂತರವಾಗುತ್ತಿದ್ದವು.  ಹೀಗಾಗಿಯೆ ಬಪಮ ಸೀತಮ್ಮನ ಕೈಯಡುಗೆಗಿಂತ ಮತ್ತೊಬ್ಬ ಸೊಸೆ ವಿಮಲಮ್ಮನ ಕೈಯಡುಗೆಯನ್ನ ಮೆಚ್ಚುತ್ತಿದ್ದರು.


*****


ಇದಲ್ಲದೆ ಅವರಿದ್ದ ಬೀದಿಯಲ್ಲಿ ಸೀತಮ್ಮನ ಬಗ್ಗೆ ಮತ್ತೊಂದು ವಿಚಿತ್ರ ವದಂತಿ ಹೆಂಗಸರ ವಲಯದಲ್ಲಿ ಹರಡಿತ್ತು. ವಿಜಯೇಂದ್ರಣ್ಣ ಬಸ್ ಬುಕ್ಕಿಂಗ್ ಏಜೆಂಟಾಗಿರುವುದರ ಜೊತೆಜೊತೆಗೆ ಲಾಟರಿ ಏಜೆಂಟರೂ ಆಗಿದ್ದರಲ್ಲ? ಆಗ ಚಾಲ್ತಿಯಲ್ಲಿದ್ದ ಕರ್ನಾಟಕ ರಾಜ್ಯ ಲಾಟರಿಯ ಮೈಸೂರು ಲಕ್ಷ್ಮಿಯಿಂದ ಹಿಡಿದು ಒಂದಂಕಿ ಲಾಟರಿ ಟಿಕೇಟುಗಳವರೆಗೂ ಅವರ ಬಸ್ ನಿಲ್ದಾಣದ ಕೌಂಟರಿನಲ್ಲಿ ಮಾರಾಟ ಮಾಡುತ್ತಿದ್ದರು. ಅವುಗಳಲ್ಲಿ ಕನಿಷ್ಠ ಬೆಲೆಯ ಒಂದಂಕಿ ಲಾಟರಿಯ ವ್ಯಾಪಾರವಾಗದೆ ಅಳಿದುಳಿದ ಕಟ್ಟುಗಳನ್ನ ಸೀತಮ್ಮನ ನೇತೃತ್ವದಲ್ಲಿ ಬೀದಿಯಲ್ಲಿದ್ದ ನೆರೆಕರೆಯ ಇತರ ಹೆಂಗಸರೆಲ್ಲರೂ ಚಂದಾ ಹಾಕಿ ಒಟ್ಟುಗೂಡಿಸಿದ ಹಣದಲ್ಲಿ ಕೊಂಡು ತಮ್ಮೆಲ್ಲರ ಸಾಮೂಹಿಕ ಅದೃಷ್ಟ ಪರೀಕ್ಷೆಗಿಳಿಯುವುದಿತ್ತು. 


ಆಗೆಲ್ಲ ಕರಾವು ಸಾಕುತ್ತಿದ್ದ ಸೀತಮ್ಮ ಹಾಲು ಕರೆಯುವಾಗ ತಪ್ಪಿ ದನ-ಎಮ್ಮೆಯಿಂದ ಒದಿಸಿಕೊಂಡು ಬಿದ್ದರೆ ಅಥವಾ ಒಂದಿಂಚು ಪಾಚಿಗಟ್ಟಿರುತ್ತಿದ್ದ ಕೊಟ್ಟಿಗೆಯ ಕಲ್ಲುಹಾಸಿನ ನೆಲದ ಮೇಲೆ ಕಾಲಿಟ್ಟು ಅವರೇನಾದರೂ ಜಾರಿ ಬಿದ್ದು ಸೊಂಟದ ಕೀಲು ಸಡಿಲವಾಗಿಸಿಕೊಂಡರೆˌ ಕುಡಿಯಲು ಕುದಿಸಿಟ್ಟ ನೀರಿನ ಪಾತ್ರೆ ಕೈ ಪಾತ್ರೆಗೆ ಸುರಿಯವ ಸರ್ಕಸ್ಸಿನಲ್ಲಿ ಪರಮೋಷ ಜಾರಿ ಅವರ ಕಾಲ ಮೇಲೆ ಬಿದ್ದು ಬೊಬ್ಬೆಗಳೆದ್ದರೆˌ ಸ್ನಾನದ ಕೋಣೆಯಲ್ಲಿದ್ದ ವಿದ್ಯುತ್ ಬಾಯ್ಲರಿನ ಸುಡುಸುಡು ಮುಚ್ಚಳ ಮೀಯುವಾಗ ಕೂರಲಿಟ್ಟಿದ್ದ ಮರದ ಕುರ್ಚಿಯ ಮೇಲಿಟ್ಟದನ್ನ ಮರೆತು ಸ್ನಾನಕ್ಕೆ ಹೋದವರೆ ಅದರ ಮೇಲೆ ಏಕಾಏಕಿ ಕೂತು ತನ್ನ ಅಂಡು ಸುಟ್ಟುಕೊಂಡರೆˌ ಅವರ ಕಾಲ ಸಂದಿಯಲ್ಲಿ ಉದ್ದಿನ ಕಾಳಿನಷ್ಟು ದೊಡ್ಡ ಮೊಳಕೆ ಬಂದು ಕೀವು ಕಟ್ಟಿಕೊಂಡು ವಾರವಿಡಿ ವಿಪರೀತ ಕಾಟ ಕೊಡುತ್ತಿದ್ದ ಅಡಿಕೆ ಗಾತ್ರದ ಕುರ ಎದ್ದು ಅವರು ನರಳಾಡುತ್ತಿದ್ದರೆ - ಅಂತಹ ಹೊತ್ತಲ್ಲಿ ಎಲ್ಲಾ ಮಹಿಳಾಮಣಿಗಳು ಅವರ ನೇತೃತ್ವದಲ್ಲಿ ಕೊಂಡ ಟಿಕೇಟುಗಳಿಗೆ ಬಹುಮಾನ ಕಾಕತಾಳೀಯವಾಗಿ ಒಲಿದು ಬರುತ್ತಿತ್ತು! 


ಒಂದೊಮ್ಮೆ ಅಂತದ್ದೇನೂ ಆಗಿರದೆ ಸೀತಮ್ಮ ಫಲಿತಾಂಶ ಬರುವಂದು ಸ್ವಸ್ಥವಾಗಿದ್ದರೆ ಮಾತ್ರ ಅವರೆಲ್ಲರ ಬಂಡವಾಳದ ಆರೋ ಮೂರೋ ಕಾಸು ಮುಳುಗಿ ಹೋಗುತ್ತಿತ್ತು. ಹೀಗಾಗಿ ಅವರ ಈ ಲಾಟರಿ ಬಳಗದ ಷೇರುದಾರರೆಲ್ಲಾ ಬಹುಮಾನದ ಫಲಿತಾಂಶ ಬರಬೇಕಿರುತ್ತಿದ್ದ ದಿನ ಇನ್ಯಾವುದೆ ಬೇರೆ ದುರುದ್ದೇಶವಿಲ್ಲದೆ ಸೀತಮ್ಮನ ಥರೇವಾರಿ ಅನಾರೋಗ್ಯಕ್ಕಾಗಿ ಒಳಗೊಳಗೆ ಮನಸಾರೆ ಹಾರೈಸಿ ಬೇಡಿಕೊಳ್ಳುತ್ತಲೆ ದೇವರಿಗೆ ದೀಪ ಹಚ್ಚುತ್ತಿದ್ದರು! ಅವರಿಗೆಲ್ಲ ಅಷ್ಟು ಖಚಿತ ಭರವಸೆ ಆ ಭಯಂಕರ ಶಕುನದ ಬಗ್ಗೆ?!


ಒಟ್ಟಿನಲ್ಲಿ ಇಂತಹ ಹಲವಾರು ಅನಿರೀಕ್ಷತ ಎಡವಟ್ಟುಗಳ ಏಕಮಾತ್ರ ವಿಳಾಸವಾಗಿದ್ದ ಸೀತಮ್ಮ ಅತ್ತೆ-ಗಂಡ-ಮಕ್ಕಳು-ನೆರೆಕರೆಯ ಅವನಂತಹ ಕಪಿಗಳು ಎಲ್ಲರ ಮೇಲೂ ನಿರಂತರ ಪಿರಿಪಿರಿ ಮಾಡಿಕೊಂಡು ಆ ಬೀದಿಯ ಜೀವಂತಿಕೆಯ ಅವಿಭಾಜ್ಯ ಅಂಗಗಳಲ್ಲೊಬ್ಬರಾಗಿ ಹೇಗೋ ತಮ್ಮ ಗೃಹಿಣಿ ಜೀವನವನ್ನ ಮುನ್ನಡೆಸುತ್ತಿದ್ದರು.


( ಇನ್ನೂ ಇದೆ.)https://youtu.be/0A_WVakkM90

No comments: