01 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೩.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೩.👊

ಗಣಿತದ ಪತ್ರಿಕೆಯಲ್ಲಿ ತರಗತಿಯಲ್ಲೆ ಗರಿಷ್ಠ ಅಂಕ ಗಳಿಸುತ್ತಿದ್ದ ಎರ್ರಿಕ್ಕಿನ ಮಡ್ಡ ಮಂಡೆಗೆ ಬೇರೆ ಯಾವ ವಿಷಯಗಳೂ ಏರುತ್ತಲೆ ಇರಲಿಲ್ಲವಂತೆ. ಭಾಷಾ ವಿಷಯಗಳಾದ ಸ್ಪ್ಯಾನಿಷ್ ಹಾಗೂ ಇಂಗ್ಲೀಷಿನಲ್ಲೂ ಸೇರಿ ಬಾಕಿ ಎಲ್ಲಾ ವಿಷಯಗಳಲ್ಲೂ ಒಂದಂಕಿಯ ಅಂಕ ಗಳಿಸಿ ಅನುತ್ತಿರ್ಣನಾಗುತ್ತಿದ್ದನಂತೆ. ಅದು ಹೇಗೋ ಹೈಸ್ಕೂಲಿನವರೆಗೆ ಬಂದವ ಮುಂದೆ ಓದಲಾರೆ ಅಂತ ಶಾಲೆ ಬಿಟ್ಟನಂತೆ. ಜೊತೆಗೆ ಹೊಸತಾಗಿ ಸ್ವೀಕರಿಸಿದ್ದ ಕ್ರೈಸ್ತಧರ್ಮದದ ವಿಮುಖನಾಗಿದ್ದವನಿಗೆ ಪುನಃ ಹಳೆಯ ಯಹೂದಿ ಧರ್ಮವೂ ಅಷ್ಟು ಆಕರ್ಷಕವೆನಿಸದೆ ಮರಳಿ ಸಿನಿಗಾಂಗಿಗೆ ಹೋಗುತ್ತಿದ್ದರೂ ಅಲ್ಲಿ ರೆಬ್ಬಿಗಳ ಐಲಾಟಗಳೆಲ್ಲ ರೇಜಿಗೆ ಹುಟ್ಟಿಸ ತೊಡಗಿ ಅದರಿಂದಲೂ ಹೊರಗುಳಿಯುವ ನಿರ್ಧಾರ ಮಾಡಿ ಕೆಲಕಾಲ ಮನೆಮಂದಿಯ ವಿರೋಧದ ನಡುವೆಯೂ ನಾಸ್ತಿಕನಾಗಿ ಉಳಿದಿದ್ದನಂತೆ.


ಆ ಹೊತ್ತಲ್ಲಿ ಅವನ ಕಣ್ಣಿಗೆ ಭಾರತದಲ್ಲಾಗುತ್ತಿದ್ದ ಕುಂಭಮೇಳದ ಪರಿಚಯ ಅಂತರ್ಜಾಲದ ಮೂಲಕ ಆಯಿತಂತೆ. ಅದರ ಬಗ್ಗೆ ಕುತೂಹಲ ಕೆರಳಿ ಹುಡುಕಿ ಹುಡುಕಿ ಭಾರತೀಯ ಸಂಸ್ಕೃತಿಯ ಕುರಿತ ಅನೇಕ ಲೇಖನಗಳನ್ನ ಓದಿದನಂತೆ. ಹಾಗೆಯೆ ಭಾರತೀಯತೆˌ ಹಿಂದೂಧರ್ಮಾಧಾರನೆಯ ಬಗ್ಗೆ ಅನೇಕ ವೀಡಿಯೋ ನೋಡಿ ತುಂಬಾ ಪ್ರಭಾವಿತನಾದನಂತೆ. ಅಂತಹ ಒಂದು ವೀಡಿಯೋದಲ್ಲಿ ಹೃಷಿಕೇಶದ ಸನ್ಯಾಸಿಯೊಬ್ಬರು ಮಾಡುತ್ತಿದ್ದ ಯೋಗಭ್ಯಾಸ ನೋಡಿ ಅವನಿಗೂ ಯೋಗಾಸನ ಕಲಿಯಬೇಕು ಅಂತನಿಸಿ ಭಾರತಕ್ಕೆ ಬರಲು ಅವನ ಹದಿನೇಳನೆ ವಯಸ್ಸಿನ ಪ್ರಾಯದಲ್ಲಿ ಹೊರಟು ನಿಂತನಂತೆ.

ಆ ಮಧ್ಯೆ ಅವನ ಕೌಟುಂಬಿಕ ಜೀವನದಲ್ಲೂ ಅನೇಕ ಬದಲಾವಣೆಗಳಾಗಿˌ ವಯಕ್ತಿಕವಾಗಿ ಅದರ ಪ್ರಭಾವ ಅವನ ಮೇಲಾಗಿತ್ತು. ಹೆಂಡತಿ ಹಾಗೂ ಮಗಳ ನವ ಮತಾಂತರಿತ ಮೈಮೇಲೆ ದೇವರು ಬರುವ - ಹೊತ್ತಲ್ಲದ ಹೊತ್ತಿನಲ್ಲಿ ಅಶರೀರವಾಣಿಯನ್ನೆಲ್ಲಾ ಆಲಿಸುವ ತಿಕ್ಕಲಾಟಗಳಿಂದ ಬೇಸತ್ತು ಅವನ ಹೆತ್ತ ಅಪ್ಪ ಹೆಂಡತಿಯಿಂದ ವಿವಾಹ ವಿಚ್ಛೇದನ ಪಡೆದು ಮರಳಿ ಯಹೂದಿ ಧರ್ಮಾವಲಂಬಿಯಾಗಿ ಅವರ ಬಾಲ್ಯದ ಗೆಳತಿಯೊಬ್ಬಳನ್ನೆ ಮರು ಮದುವೆಯಾದರಂತೆ. ಇತ್ತ ಹೆತ್ತ ತಾಯಿಗೂ ಕ್ರಮೇಣ ಮಗಳ ಕ್ರೈಸ್ತಾವತಾರ ಅತಿರೇಕವಾಗುತ್ತಿದೆ ಅಂತನಿಸಿ ಅವರೂ ಸಹ ಮರಳಿ ಯಹೂದಿ ಧರ್ಮಾನುಸರಣೆಗೆ ತೊಡಗಿದರಂತೆ. ವಿಚ್ಛೇದನದ ನಂತರ ಮಕ್ಕಳು ಅವರ ಜೊತೆಗೆ  ಉಳಿದಿದ್ದರಂತೆ. ಮಗಳು ಬೇರೆ ವಾಸಿಸಲು ಆರಂಭಿಸಿ ತನ್ನದೆ ಮನಸ್ಥಿತಿಯ ಧಾರ್ಮಿಕ ವ್ಯಕ್ತಿಯೊಬ್ಬನನ್ನು ಮದುವೆಯಾಗಿ ಎರಡು ಮಕ್ಕಳನ್ನೂ ಹೆತ್ತಿದ್ದಾಳಂತೆ. 


ಇತ್ತ ಇವನಮ್ಮ ಈಗ ಹಿರಿಯ ವಯಸ್ಸಿನ ಯಹೂದಿ ಸಿರಿವಂತನೊಬ್ಬನನ್ನ ಮರುಮದುವೆಯಾಗಿದ್ದವಳು ಇವನು ಭಾರತಕ್ಕೆ ಬಂದ ಎರಡನೆ ವರ್ಷ ಗಂಡನನ್ನ ಕಳೆದುಕೊಂಡು ವಿಧವೆಯಾಗಿದ್ದಾಳಂತೆ. ಅವಳ ಹೊಸ ಗಂಡನ ಸಮಸ್ತ ಸಂಪಾದನೆ ಹಾಗೂ ಉಳಿತಾಯದ ಸೊತ್ತು ಅವಳನ್ನ ರಾತ್ರೋರಾತ್ರಿ ಇದ್ದಕ್ಕಿದ್ದಂತೆ ಕೋಟ್ಯಾಧಿಪತಿಯನ್ನಾಗಿಸಿದೆಯಂತೆ. ಸದ್ಯ ಕಡೆಯ ಮಗ ಅವರೊಂದಿಗೆ ಇದ್ದು ಎರ್ರಿಕ್ಕನನ್ನ ಮಾತ್ರ ಆಕೆ ಅಕ್ಕರೆಯಿಂದ ಕಾಣದೆ ದೂರವಿಟ್ಟಿದ್ದಾಳಂತೆ. ಇವನು ನ್ಯೂಯಾರ್ಕಿನಲ್ಲಿ ಆರು ತಿಂಗಳು ಹೊಟೆಲ್ಲೊಂದರಲ್ಲಿ ಸರ್ವರ್ರಾಗಿದ್ದುಕೊಂಡು ದುಡಿದ ಹಣದಲ್ಲಿ ಭಾರತಕ್ಕೆ ಹೊರಟು ಬಂದನಂತೆ. ಇಲ್ಲಿಗೆ ಬಂದಿದ್ದ ಆರಂಭದಲ್ಲಿ ಇವನ ಮಿಂಚಂಚೆಗಳಿಗೆ ಉತ್ತರಿಸುತ್ತಿದ್ದು ಚೂರುಪಾರು ಹಣಕಾಸಿನ ನೆರವು ನೀಡುತ್ತಿದ್ದ ಇವನಮ್ಮ ಈಗ ಸಂಪೂರ್ಣವಾಗಿ ಇವನ ಸಂಪರ್ಕ ಕಳೆದುಕೊಂಡು ಇವನ ಪತ್ರಗಳಿಗೂ ಉತ್ತರಿಸದೆ ಮಗುಮ್ಮಾಗಿ ಉಳಿದಿದ್ದಾಳಂತೆ. 

ಇವನ ಬಳಿ ಈಗ ಮರಳಿ ಮನೆಗೆ ಹೋಗುವಷ್ಟು ಹಣವಿಲ್ಲ. ಜೊತೆಗೆ ದೆಹಲಿಯಲ್ಲಿದ್ದಾಗ ಇವನ ಇಲ್ಲಿನ ವೀಸಾವನ್ನೂ ಕಳೆದುಕೊಂಡಿದ್ದಾನೆ. ದೆಹಲಿಯ ಅಮೇರಿಕಾ ರಾಯಭಾರಿ ಕಛೇರಿ ಸದ್ಯ ಒಂದು ವೀಸಾದ ನಕಲು ಕೊಡಿಸಿದೆ. ಹಣವಿಲ್ಲದಿರುವುದರಿಂದ ಅವರು ಸಹ ಇವನಿಗೆ ಸಹಾಯ ಮಾಡಲು ಮುತುವರ್ಜಿ ವಹಿಸುತ್ತಿಲ್ಲವಂತೆ. ಅಲ್ಲಿಗೆ ಇವನ ಅಮೇರಿಕಾಗೆ ಮರಳುವ ಆಸೆ ಬಹುತೇಕ ಕಮರಿ ಹೋಗಿದೆಯಂತೆ. ಹತ್ತು ವರ್ಷಗಳ ವೀಸಾ ಸಿಕ್ಕಿದೆ. ಅದರಲ್ಲಿ ಐದು ವರ್ಷ ಈಗಾಗಲೆ ಭಾರತದ ಉದ್ದಗಲ ಅಂಡಲೆಯುತ್ತಾ ಕಳೆದಿದ್ದಾನೆ. 

ದೆಹಲಿಗೆ ಬಂದಿಳಿದ ಶುರುವಿನಲ್ಲೆ ಸೀದ ಹೃಷಿಕೇಶಕ್ಕೆ ಹೋಗಿ ಅಲ್ಲಿ ಅದೆ ಗುರುವನ್ನ ಹುಡುಕಿ ಯೋಗ ಕಲಿತಿದ್ದಾನೆ. ಹಿಂದೂಧರ್ಮ ಇಷ್ಟವಾಗಿ ಗುರುಗಳಿಂದ ದೀಕ್ಷೆ ಪಡೆದು ಈಗ ಸನ್ಯಾಸಿಯಾಗಿದ್ದಾನೆ. ಅಲ್ಲೆ ಕೆಲವರಿಗೆ ತಾನು ಕಲಿತ ಯೋಗ ಕಲಿಸುತ್ತಿದ್ದ ಹಾಗೂ ಆ ಮೂಲಕ ಚೂರು ಪಾರು ಸಂಪಾದನೆಯಾಗುತ್ತಿತ್ತಂತೆ. ಕರೋನಾ ಸಮಯದಲ್ಲಿ ಇಡಿ ದೇಶಕ್ಕೆ ಬೀಗ ಬಿದ್ದಿದ್ದಾಗ ಇವ ಅದೆ ಯೋಗಕೇಂದ್ರದಲ್ಲಿ ಆಶ್ರಯ ಪಡೆದು ಎರಡನೆ ಸಲ ದೇಶವನ್ನೆ ಮುಚ್ಚಿದಾಗಲೂ ಸಹ ಅಲ್ಲೆ ಉಳಿದುಕೊಂಡಿದ್ದನಂತೆ.

ಅನಂತರ ಅಲ್ಲಿಂದ ಹೊರಟು ಅಲ್ಲಿ ಇಲ್ಲಿ ಸುತ್ತಿ ಮುಂಬೈಗೆ ಬಂದಿಳಿದಿದ್ದನಂತೆ. ಅಲ್ಲಿಂದ ರೈಲಿನಲ್ಲಿ ಕೊಚ್ಚಿನ್ ಹೋಗಿದ್ದಾಗ ಯಾವುದೋ ಇನ್ನೇನು ತೆರೆಕಾಣಬೇಕಾದ ಮೋಹನಲಾಲರ ಅಭಿನಯದ ಸಿನೆಮಾವೊಂದರಲ್ಲಿ ಕಿರು ಪಾತ್ರವೊಂದನ್ನ ಮಾಡಿದನಂತೆ. ಆ ಪಾತ್ರ ಪೋಷಣೆಗೆ ಬಿಳಿಯನ ಅಗತ್ಯವಿದ್ದ ಚಿತ್ರತಂಡ ಇವನನ್ನ ಬಳಸಿ ಹದಿನೆಂಟು ಸಾವಿರ ರೂಪಾಯಿ ಸಂಭಾವನೆಯನ್ನೂ ಸಹ ಕೊಟ್ಟರಂತೆ. ಮುಂದೆಯೂ ಅಭಿನಯದ ಅವಕಾಶ ಕೊಡುತ್ತೇವೆ ಇಲ್ಲೆ ಇರು ಅಂದ ಚಿತ್ರತಂಡದವರ ಒಂಟಿ ಕಿವಿ ಚುಚ್ಚಿಸಿಕೊಂಡಿದ್ದˌ ತೋಳ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ ಕಟ್ಟುಮಸ್ತಾಗಿದ್ದ ದೇಹ ನೋಡಿ ಅವರ್ಯಾವುದೋ ಮಾಫಿಯಾ ಗ್ಯಾಂಗಿನವರುˌ ಉಳಿದರೆ ತನಗೊಂದು ಗತಿ ಕಾಣಿಸಿಯಾರು ಎಂದು ಹೆದರಿ ಅವರ್ಯಾರಿಗೂ ಹೇಳದೆ ಕೇಳದೆ ಸಿಕ್ಕ ರೈಲೇರಿ ಮರಳಿ ಮುಂಬೈಗೆ ಓಡಿ ಹೋಗಿದ್ದನಂತೆ. ಒಂದಷ್ಟು ದಿನ ಅಲ್ಲಿ ಅಡ್ಡಾಡಿ ಕೋಳಿಕ್ಕೋಡಿಗೆ ಟಿಕೇಟು ಖರೀದಿಸಿ ಸರಿಯಾಗಿ ನಿಲ್ಲಲೂ ಸಹ ಅವಕಾಶವಿರದಿದ್ದ ರೈಲಿನ ಮೂರನೆ ದರ್ಜೆಯ ಬೋಗಿಯಲ್ಲಿ ಹೆಂಗ್ಹೆಂಗೋ ಭಂಡಾಟ ಮಾಡಿಕೊಂಡು ಪ್ರಯಾಣಿಸಿ ಕಡೆಗೆ ಇಲ್ಲಿಗೆ ಬಂದು ತಲುಪಿದ್ದ. ವಾಚಾಳಿಯಾಗಿದ್ದ ಎರ್ರಿಕ ಇಷ್ಟೆಲ್ಲ ಪುರಾಣವನ್ನ ಇವನೊಂದಿಗೆ ರೈಲ್ವೆ ನಿಲ್ದಾಣದ ರಸ್ತೆಯಿಂದ ನಿತ್ಯಾನಂದಾಶ್ರಮದ ಕಡೆಗೆ ಹೋಗುವ ದಾರಿಯಲ್ಲಿ ಒದರಿದ್ದ.

*****

"ಯು ಕಮ್ ಅಲಾಂಗ್ ವಿತ್ ಮಿ" ಎಂದು ಇವ ಹೊರಟ. ಕಾವಿ ಉಟ್ಟು ಜುಬ್ಬ ತೊಟ್ಟು ಬೆನ್ನಿನ ಮೇಲೊಂದು ಬ್ಯಾಕ್ ಪ್ಯಾಕ್ ಮಾತ್ರ ಹೇರಿಕೊಂಡಿದ್ದ ಎರ್ರಿಕ್ ಇವನೊಂದಿಗೆ ಹೆಜ್ಜೆ ಹಾಕುತ್ತಲೆ "ವೇರ್ ಆರ್ ವಿ ಹೆಡ್ಡಿಂಗ್ ಟು? 'ಗುರುವನ' ಬೈ ಎನಿ ಛಾನ್ಸ್?" ಅಂದ. ಎಲಾ! ಎಲಾ! ಗುರುವನ ಸಹ ಇವನಿಗೆ ಗೊತ್ತಿದೆ?! ಇವನು ಇವನನ್ನ ತಡೆದು ವಿಚಾರಿಸುವ ಹೊತ್ತಿಗೆ ಇನ್ನೂ ಇಬ್ಬರು ಮೂವರನ್ನ ಈ ಬಗ್ಗೆ ವಿಚಾರಿಸಿದ್ದ. ಇವನ ಇಂಗ್ಲೀಷನ್ನ ಅರಿಯದ ಅವರು ಕೊಟ್ಟ ಮಾರುತ್ತರದಲ್ಲಿ 'ಗುರುವನ' ಅನ್ನುವ ಪದವನ್ನ ಮಾತ್ರ ಗ್ರಹಿಸಿದ್ದ. "ನೋ ನೋˌ ಇಟ್ ಇಸ್ ನಿತ್ಯಾನಂದಾಶ್ರಮ. ಇಫ್ ಯು ಹ್ಯಾವ್ ಬೆಟರ್ ಫೇಟ್ˌ ಸರ್ಟನ್ಲಿ ದೇರ್ ಯು ಮೇ ಗೆಟ್ ಅ ಅಕಾಮಿಡೇಶನ್ ಟು ಸ್ಟೇ ಅಲಾಂಗ್ ಫ್ರೀ ಫುಡ್" ಅಂದನಿವ.

"ವೆಲ್ ಐ ಬೀನ್ ದೇರ್ ಆಲ್ರಡಿ! ದೇ ಸೀಮ್ಸ್ ಹ್ಯಾಸ್ ನೋ ವೇಕೆಂಟ್ ರೂಮ್ಸ್" ಅಂದ ಎರ್ರಿಕ್. "ರಿಯಲಿ! ಹೂ ಟೋಲ್ಡ್?" ಅಂದನಿವ. "ಸಮ್ ವನ್ ಪ್ರೆಸೆಂಟ್ ಎಟ್ ಆಫಿಸ್ ದೇರ್" ಅಂದ. "ಲೆಟ್ ಮಿ ಆಸ್ಕ್ˌ ಇಫ್ ನಾಟ್ ಅಕಾಮಿಡೇಶನ್ˌ ಯು ವಿಲ್ ಗೆಟ್ ಸಮ್ ಫುಡ್ ಟು ಈಟ್. ನೋ ವರೀಸ್" ಅಂತನ್ನುತ್ತಾ ಮುನ್ನಡೆಯುತ್ತಾ ಅವರಿಬ್ಬರೂ ಅವನ ಆ "ಅಜ್ಜನ ಮನೆ" ನಿತ್ಯಾನಂದಾಶ್ರಮದ ಆವರಣಕ್ಕೆ ಬಂದು ಮುಟ್ಟಿದ್ದರು.

ಇವನ ಪರಿಸ್ಥಿತಿಯನ್ನ ವಿವರಿಸಿ ಹೇಳಿದರೆ ಖಂಡಿತವಾಗಿ ಇವನಿಗಲ್ಲಿ ಕನಿಷ್ಠ ಮೂರುದಿನಗಳ ಮಟ್ಟಿಗಾದರೂ ಉಳಿಯಲು - ಉಣ್ಣಲು ಅವಕಾಶ ಸಿಗುವ ಭರವಸೆ ಅವನಿಗಿತ್ತು. ಊಟದ ಮನೆಯ ಅಂಗಳದಲ್ಲಿದ್ದ ಗಣಪತಿ ಸ್ವಾಮಿಗಳಿಗೆ ಮನವಿ ಮಾಡಿ ಅವನಿಗೆ ಊಟ ಕೊಡಿಸಿದ. ಹೊಟ್ಟೆ ಪಾಡೊಂದು ಕಳೆಯಿತು.

( ಇನ್ನೂ ಇದೆ.)https://youtu.be/ppikWqEf_Is

No comments: