31 July 2010

ನೀ ಮಳೆ ಹನಿ...

ಮಳೆಗೆ ಮನಸೋತಿದ್ದು ನಿಜ ,
ಆದರೆ ನಿನಗೆ ಸೋತಷ್ಟಲ್ಲ/
ಮುಗಿಲ ಚುಂಬಿಸುವ ಆಸೆ ಇರೂದೂ ನಿಜ ,
ಆದರೆ ನಿನ್ನ ತುಟಿಯಷ್ಟಲ್ಲ!//

ಇಷ್ಟೇ ನಡೆದಿದ್ದೆಯಂತೆ,
ಇನ್ನೂ ಒಂದಷ್ಟು ನಡಿ ಉಳಿದಿರೋದು ಎರಡೇ ಎರಡು ಹೆಜ್ಜೆ ತಾನೇ?/
ಸಹಿಸಿಕೊಂಡಿದ್ದಿ ಇಲ್ಲೀವರೆಗೂ,
ಇನ್ನೇನು ಕೆಲವೇ ದಿನ ...ನಾನು ನಿನ್ನವನೇ ತಾನೇ?//

ತಲೆ ಇದ್ದವರಿಗೆ ಮಾತ್ರ!

ಪ್ರತಾಪ



ಸರಿಯಾದ ಮಾಹಿತಿಯಿಲ್ಲದೆ ಕಂಡ ಕಂಡಲ್ಲೆಲ್ಲ ನನ್ನದೆಲ್ಲಿಡಲಿ ಅಂತ ಓಡಿ ಬರ್ತೀರಲ್ರಿ...ಹೌದೂ ನೀವು ಹೊಟ್ಟೆಗೆ ಏನ್ ತಿಂತೀರಿ? ರಸ್ತೆ ಬದಿಗೆ ವಿಸರ್ಜನೆಗೆ ಕೂತವ ಕೋಳಿಯೊಂದು ಕಾರಿಗೆ ಅಡ್ಡಸಿಕ್ಕು ಸತ್ತಾಗ ನ್ಯಾಯ ಹೇಳಲು ;ಇನ್ನೂ ಮುಗಿಸುವ ಮುನ್ನವೇ ಅರ್ಧದಲ್ಲಿ ಎದ್ದು ಅವಸರವಸರವಾಗಿ ಚಡ್ಡಿಯ ಲಾಡಿ ಬಿಗಿದು ಕೊಳ್ಳುತ್ತಾ,, ಓಡಿ ಬಂದು ಅಧಿಕಪ್ರಸಂಗಿಯ ಫೋಜು ಕೊಟ್ಟರೆ ಅಕ್ಕ-ಪಕ್ಕ ನಿಂತವರು ಹೇಸಿಕೊಂಡು ಮೂಗು ಮುಚ್ಚಿಕೊಳ್ಳುತ್ತಾರೆಯೇ ಹೊರತು ಚಬ್ಭೇಶ್ (!) ಎಂದು ಬಂದು ನಿಮ್ಮ ಅಂಡು ತಟ್ಟಲಾರರು ಅಲ್ವ?




ಪತ್ರಿಕೆಯೊಂದರ ಅಂಕಣ ಬರೆಯುವ ಅವಕಾಶ ನಿಮಗಿದೆ ಸಂತೋಷ,ಅಲ್ಲಿ ನೀವು ಬರೆಯುವ ಪ್ರತಿ ವಿಚಾರವೂ ನಿಮ್ಮ ವಯಕ್ತಿಕ ವಿಚಾರಧಾರೆ,ಅದೂ ಓಕೆ.ಹಾಗಂತ ನೀವು ಸಿಕ್ಕ ಸಿಕ್ಕ ಹಾಗೆ ಕೆರೆಯುತ್ತ ಹೋದರೆ ಪತ್ರಿಕೆಯನ್ನು ದುಡ್ಡು ಕೊಟ್ಟುಕೊಂಡು ಓದುವ ಪ್ರಾಮಾಣಿಕ ಓದುಗರಾದ ನಮ್ಮಂತವರಿಗೆ ಕಿರಿಕಿರಿ ಆಗದೆ ಇರುತ್ತದೆಯೇ? ಅಲ್ಲಾರೀ ಸೊಹ್ರಾಬುದ್ದೀನ್ ಬಗ್ಗೆ ಬರೀತೀರಿ ಅವನೊಬ್ಬ ಲುಚ್ಚ- ಉಗ್ರಗಾಮಿ- ದೇಶದ್ರೋಹಿ ಅಂತ ಚಿತ್ರಿಸ್ತೀರಿ ನಿಮ್ಮ ಬಳಿ ಅದಕ್ಕೆ ಇರುವ ಆಧಾರಗಳೇನು ಸ್ವಾಮೀ? ಕೇವಲ ಪೊಲೀಸ್ ಹೇಳಿಕೆಗಳಲ್ಲಿ ಅದೆಷ್ಟು ತಥ್ಯವಿದೆ ಅನ್ನೋದನ್ನ ಕಳೆದ ವಾರದಿಂದ ಟೈಮ್ಸ್ ನೌ,ಸಿಎನ್ಎನ್ ವಾಹಿನಿಗಳ ಕುಟುಕು ಕಾರ್ಯಾಚರಣೆಗಳು ಬಯಲು ಮಾಡಿವೆ,ಗುಜರಾತ್ ಸರಕಾರ ಅಲ್ಲಿನ ಆಡಳಿತಾರೂಢ ಪಕ್ಷ ತಮ್ಮ ಹೀನಚಾಳಿಗಳಿಂದ ಮುಖ ಮುಚ್ಚಿಕೊಳ್ಳಲು ಪರದಾಡುತ್ತಿರುವುದು ಟೀವಿ ಪರದೆಯ ಮೇಲೆ ಬಯಲಾಗಿ, ಅಲ್ಲಿನ ಮುಖ್ಯಮಂತ್ರಿ ಸೇರಿದಂತೆ ಅಮಿತ್ ಷಾವರೆಗೆ ಎಲ್ಲರೂ ಲೋಕದ ಮುಂದೆ ಬೆತ್ತಲಾಗುತ್ತಿದ್ದರೂ ಭಂಡತನದಿಂದ ಅವರನ್ನು ಮೀರಿಸುವಂತೆ ತಾವೂ ಬೆತ್ತಲಾಗುತ್ತಿದ್ದೀರಿ.ತಮ್ಮದು ಹಳೆ ಖಾಯಿಲೆ ಆದ್ದರಿಂದ ಚಿಕಿತ್ಸೆ ಅನಿವಾರ್ಯವಾಗಿದೆ,ಹೀಗಾಗಿ ಈ ಪ್ರತಿಕ್ರಿಯೆ.ಇಷ್ಟಕ್ಕೆ ತಮ್ಮ ಸುಟ್ಟ ಲೇಖನವನ್ನ ಬಹಳ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ ಎಂಬ ಭ್ರಮೆಗೆ ಬೀಳಬೇಡಿ ಪ್ಲೀಸ್.





ಮೊದಲು ಪ್ರಕರಣದ ಹಿನ್ನೆಲೆ ಸರಿಯಾಗಿ ತಿಳಿದುಕೊಳ್ಳಿ. ಆಮೇಲೆ ಆವೇಶದಿಂದ ಬರೆಯುವಿರಂತೆ.. ಸೊಹ್ರಾಬುದ್ದೀನ್ ವಂಚಕ-ಅಪಾಯಕಾರಿ ವ್ಯಕ್ತಿ ಅಂತ ಸರ್ಟಿಫಿಕೆಟ್ ಕೊಟ್ಟವರು ಗುಜರಾತ್ ಪೊಲೀಸರೇ ಹೊರತು ಇನ್ಯಾರೂ ಅಲ್ಲ.ಅಲ್ಲಿನ ರಾಜಕಾರಣಿಗಳ ಹರಾಮಿ ಕಮಾಯಿಗಳನ್ನ ದೊಡ್ಡ ದ್ವನಿಯಲ್ಲಿ ಬಹಿರಂಗ ಪಡಿಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಆಗಿದ್ದವನನ್ನ ಕುಖ್ಯಾತ ದೇಶದ್ರೋಹಿ ಸಂಘಟನೆಗಳ ಸದಸ್ಯನೆಂದು ಬಿಂಬಿಸಲಾಯಿತು,ಏಕೆ? ದುಷ್ಟ ರಾಜಕಾರಣಿಗಳ ಹುಳುಕು ಮುಚ್ಚಿಕೊಳ್ಳೋಕೆ.ಸಾಮಾಜಿಕ ಕಾರ್ಯಕರ್ತರನ್ನ ಮುಖ್ಯಮಂತ್ರಿಗಳ ಹತ್ಯೆಯ ಸಂಚಿನಡಿ ಬಂಧಿಸೋದು ಅಲ್ಲಿನ ಜನಪ್ರಿಯ ಚಾಳಿ.ಸರಿ ಆ ಕೇಸನ್ನೂ ಹೆಟ್ಟಲಾಯಿತು. ಅದು ವಿಫಲ ಪ್ರಯತ್ನವಾದಾಗ ಅವನನ್ನೂ,ಎರಡು ದಿನದ ಅಂತರದಲ್ಲಿ ಅವನ ಹೆಂಡತಿ ಕೌಸರ್ ಬೀಯನ್ನು,೨೦೦೬ರ ದಶಂಬರ್ ನಲ್ಲಿ ಸರಿ ಸುಮಾರು ವರ್ಷದ ನಂತರ ಸೊಹ್ರಾಬ್-ಕೌಸರ್ ನಕಲಿ ಎನ್ಕೌಂಟರ್ ಪ್ರಕರಣದ ಪ್ರಮುಖ ಸಾಕ್ಷಿ ತುಳಸಿರಾಮ್ ಪ್ರಜಾಪತಿಯನ್ನೂ ಹೀಗೆಯೇ ಗುಂಡಿಟ್ಟು ಕೊಲ್ಲಲ್ಲಯಿತು (ಆದ್ರೆ ಇವ್ಯಾವುದೂ ನಿಮ್ಮ ವಾದಕ್ಕೆ ಪೂರಕ ವಾಗಿಲ್ಲದ್ದರಿಂದ ನಿಮಗೆ ಮರೆತು ಹೋಗಿದೆ! ಅಥವಾ ನಿಮಗೆ ಇದೆಲ್ಲ ಗೊತ್ತೇ ಇಲ್ಲ!) . ಇನ್ನು ಮಹಾರಾಷ್ಟ್ರ,ಮಧ್ಯಪ್ರದೇಶ,ಆಂಧ್ರಪ್ರದೇಶಗಳಲ್ಲಿ ಅವನ ಮೇಲೆ ದಾಖಲಾದ ಮೊಕದ್ದಮೆಗಳ ಕುರಿತು....ಇವೆಲ್ಲ ಮೊಕದ್ದಮೆಗಳು ಗುಜರಾತ್ ಪೋಲೀಸರ ಸ್ವಯಂ ಪ್ರೇರಿತ ಅಪಾದನೆಗಳ ಕಾಳಜಿಯಿಂದ ದಾಖಲಾದವೇ ಹೊರತು ಸದರಿ ರಾಜ್ಯಗಳ ಪೋಲೀಸರ ಗುಪ್ತಚರ ಮಾಹಿತಿಯಿಂದಲ್ಲ.ಅಸಲಿಗೆ ಅಂತಹ ಪ್ರಕರಣಗಳು ಸೃಷ್ಟಿಸಲ್ಪಟ್ಟ planted ಪ್ರಕರಣಗಳಾಗಿದ್ದವು.ಅಲ್ಲಿ ಮುಟ್ಟುಗೋಲು ಹಾಕಲಾದ ಶಸ್ತ್ರಾಸ್ತ್ರಗಳು ಯೋಜಿತ ಕುತಂತ್ರದ ಭಾಗವೇ ಆಗಿದ್ದವು.ಇದನ್ನು ಹೇಳುತ್ತಿರೋದು ನಾನಲ್ಲ,ಗುಜರಾತ್ ಸರಕಾರದ ಸಿಓಡಿ ೨೦೦೬ರ ಡಿಸೆಂಬರ್ನಲ್ಲಿ ಅಲ್ಲಿನ ಸರಕಾರಕ್ಕೆ ಸಲ್ಲಿಸಿದ್ದ ೧೦೦೦ ಪುಟಗಳ ಆಂತರಿಕ ಗುಪ್ತಚರ ವರದಿಯಿಂದ ಎತ್ತಿಕೊಂಡದ್ದು. ಯಾರುತಾನೆ ತನ್ನ ಕಾಲ ಮೇಲೆ ತಾನೇ ಕಲ್ಲು ಎತ್ತಿ ಹಾಕಿಕೊಳ್ಳುತ್ತಾರೆ? ಯಥಾ ಪ್ರಕಾರ ಸರಕಾರ ತನ್ನ ಅಂಡಿನ ಅಡಿಗೆ ಆ ವರದಿಯನ್ನು ತಳ್ಳಿ ಹಾಕಿತು.ಈಗ ಸುಪ್ರೀಂ ಕೋರ್ಟ್ನ ಮಧ್ಯಪ್ರವೇಶ ಆದ ನಂತರ ಅಂದರೆ ಎಪ್ರಿಲ್ ೨೦೦೭ರ ನಂತರ ಈ ವರದಿಗೆ ಮತ್ತೆ ಜೀವ ಬಂತು,೨೪ ಎಪ್ರಿಲ್ ೨೦೦೭ಕ್ಕೆ ಗುಜರಾತ್ ಐಜಿಪಿ ರಾಜ್ ಕುಮಾರ್ ಪಾಂಡಿಯನ್,ಆಗಿನ ಅಲ್ಲಿನ ಪೊಲೀಸ್ ಉಪಮಹಾನಿರ್ದೇಶಕ ಡಿ ಜಿ ಬಂಜಾರ ಹಾಗು ಐಪಿಎಸ್ನಲ್ಲಿ ರಾಜಸ್ತಾನ ಕೇಡರ್ ನ ಅಧಿಕಾರಿಯಾಗಿರುವ ಎಂ ಎನ್ ದಿನೇಶ್ ದಸ್ತಗಿರಿಯಾದರು.ಇಂದಿಗೂ ವಿಚಾರಣಾಧೀನ ಕೈದಿಗಳ ಗೆಟಪ್ಪಿನಲ್ಲಿ ಅವರು ಅಹಮದಾಬಾದ್ ಕೇಂದ್ರೀಯ ಕಾರಾಗೃಹದ ರೊಟ್ಟಿ ಮುರಿಯುತ್ತಿದ್ದಾರೆ,ಸದರಿ ಸಿಓಡಿ ವರದಿ ಪತ್ರಕರ್ತರಿಗೆ ಲಭ್ಯವಾಗಿದೆ ನಿಜವಾದ ಪತ್ರಿಕೋದ್ಯಮದ ದರ್ದು ನಿಮಗಿದ್ದರೆ ಸಂಪಾದಿಸಿಕೊಳ್ಳಿ.




ಇನ್ನು ರಸ್ತೆಯಲ್ಲಿ ನಡೆದ ಸಮಾವೇಶಗಳಲ್ಲಿ ಮೋದಿ ಸೊಹ್ರಾಬುದ್ದೀನ್ ಒಬ್ಬ ದೇಶದ್ರೋಹಿ ಅವನನ್ನು ಏನು ಮಾಡಬೇಕು? ಅಂದಾಗ ಜನ ಸಮೂಹ ಗುಂಡಿಟ್ಟು ಕೊಲ್ಲಬೇಕು ಅಂತ ಕಿರುಚಿದರು ಹೀಗಾಗಿ ಅದನ್ನೇ ಅವರು ಮಾಡಿದರು ಅಂತ ತಲೆಯೊಳಗೆ ಸಿಮೆಂಟು ತುಂಬಿ ಕೊಂಡವರಂತೆ ನಿರ್ಲಜ್ಜರಾಗಿ ಬರೆಯುತ್ತೀರಿ,,,ಅಲ್ರಿ ನಾಳೆ ಮೂರುರಸ್ತೆ ಸೇರುವಲ್ಲಿ ತಲೆ ತಿರುಕನೊಬ್ಬ ಗಾಂಚಲಿ ಹೆಚ್ಚಾದ ಸಮಾಜದ್ರೋಹಿ ಪ್ರತಾಪನನ್ನ ಏನು ಮಾಡಬೇಕು ? ಅಂತ ಕೇಳಿ...ಅಲ್ಲಿ ನೆರೆದ ತಲೆಮಾಸಿದ ಜನ ಸಮೂಹ ಗುಂಡಿಟ್ಟು ಕೊಲ್ಲಿರಿ ಎಂದರೆ ಹಾಗೆ ಮಾಡೋಣವೇನ್ರಿ? ಹೀಗಿದ್ದರೆ ನಮಗೆ ಐಪಿಸಿ ಯಾಕೆ ಬೇಕು?,ನಾವೆ ರೂಪಿಸಿ ಕೊಂಡಿರೋ ಕಾನೂನು ಕಟ್ಟಳೆಗಳು ಯಾಕೆತಾನೆ ಬೇಕು? ನೀವು ಮುಲ್ಲಾಗಳ ತರಹ ಹೀಗೆ ಫಾರ್ಮಾನು ಹೊರಡಿಸುತ್ತಿರಿ ;ನಾವು ಕಂಡಲ್ಲಿ ಗುಂಡನ್ನ ಸಿಡಿ ಸಿಡಿಸಿ ಸಮಾಜ ಉದ್ದಾರ ಮಾಡ್ತೇವೆ!


ಇನ್ನು ಸಿಬಿಐ ಯಾ ದುರ್ಬಳಕೆ, ಕಾಲಕಾಲಕ್ಕೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳು ಮಾಡಿಕೊಂಡು ಬಂದದ್ದು ಅದನ್ನೇ.ಅಲ್ಲಿ ಪಕ್ಷ ಭೇದ ಸಲ್ಲ.ಸುಪ್ರೀಂ ಕೋರ್ಟ್ ಮರ್ಜಿಯಂತೆ ನಡೆಯುತ್ತಿರೋ ವಿಚಾರಣೆಗೆ ಕೇಂದ್ರದತ್ತ ಬೊಟ್ಟು ಮಾಡಿ ವಿಷಯಾಂತರ ಮಾಡಿದ್ದೀರಿ.ರಾಜೀವ್ ಶುಕ್ಲ,ಚಂದನ್ ಮಿತ್ರ,ತರುಣ್ ವಿಜಯ್,ತೇಜಸ್ವಿನಿ ಶ್ರೀರಮೇಶ್ ರಂತಹ ಹುದ್ದೆಗೆ ಜೋಲ್ಲುಸುರಿಸೋ ಪತ್ರಕರ್ತರ ಎಲ್ಲ ಲಕ್ಷಣಗಳೂ ತಮ್ಮಲ್ಲಿ ಗೋಚರಿಸುತ್ತಿವೆ.ದಯವಿಟ್ಟು ಜೊಲ್ಲು ಒರೆಸಿಕೊಳ್ಳಿ.ಇದನ್ನು ರಾಜಕೀಯ ಪ್ರೇರಿತ ಅಂತ ಬಿಂಬಿಸಿ ಪವಿತ್ರ ನ್ಯಾಯಸ್ಥಾನದ ಮರ್ಯಾದೆ ಕಳೆಯುವ ಅಲ್ಪತನಕ್ಕೆ ಇಳಿಯಬೇಡಿ. ಅಷ್ಟಕ್ಕೂ ಈ ವರದಿ ತಯಾರಾದದ್ದು ಗುಜರಾತ್ ಸರಕಾರದ ನಿಯಂತ್ರಣದಡಿ ಇರುವ ಸಿಓಡಿಯಿಂದ ಅನ್ನೋದನ್ನ ನೆನಪಿಡಿ.


ಮೂಲಭೂತವಾದ ಯಾರಿಂದ ನಡೆದರೂ ಅದು ಅಕ್ಷಮ್ಯವೇ.ದೀನ್ದಾರ್ ಅಂಜುಮನ್-ಸಿಮಿ-ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ದಂತಹ ಛದ್ಮವೇಷದಲ್ಲಿ ಮುಸ್ಲಿಂ ಮುಲ್ಲಾಗಳು ಅದೇ ಕೋಮಿನ ಕಮಂಗಿಗಳ ಕೈಯಲ್ಲಿ ಮಾಡಿಸುತ್ತಿರೋ ಭಯೋತ್ಪಾದನೆಗೂ...ಅಭಿನವ್ ಭಾರತ-ಭಜರಂಗದಳ ಹೆಸರಲ್ಲಿ ಹಿಂದೂ ಹದ್ದುಗಳು ಮಾಡಿಸುತ್ತಿರೋ ಗಲಭೆಗಳಿಗೂ ವ್ಯತ್ಯಾಸವೇನಿಲ್ಲ.ಎರಡೂ ದೇಶ ದ್ರೋಹವೇ.ನೀವೇನು ಬಿಜೆಪಿಯ ಭಗತ್ ಸಿಂಗರೇ? ಬಿಟ್ಟಿ ಸಿಕ್ಕ ಜಾಗದಲ್ಲಿ ಕಂಡಕಂಡಲ್ಲಿ ಕಾಲೆತ್ತುವ ಶ್ವಾನದ ಹಾಗೆ ಪ್ರತಾಪ ಕೊಚ್ಚಿಕೊಂಡ ಮಾತ್ರಕ್ಕೆ ಗ್ರಾಮ ಸಿಂಹ ಭಗತ್ ಸಿಂಹನಾಗೋದು ಸಾಧ್ಯವೇ ಸಾರ್? ಇದನ್ನು ಓದಿ ಇನ್ನೊಮ್ಮೆ ಅಂಗಿ ಹರಿದುಕೊಳ್ಳಬೇಡಿ ಮತ್ತೆ.ಎಷ್ಟೂ ಅಂತ ನಿಮ್ಮನ್ನ ಬರಿ ಬೆತ್ತಲೆ ನೋಡೋದು?...ಥೂ...ಅಸಹ್ಯ...

29 July 2010

ಹಂಬಲ...

ಗಝಲ್ ನಂತೆ ನೀನುಲಿವ ಮಾತುಗಳನ್ನೆಲ್ಲ,
ಮುಗಿಲಿನಿಂದ ನೆಲವ ಬೆಸೆವ ವರ್ಷಧಾರೆಯಲಿ ಪೋಣಿಸಿ/
ಸುರಿವ ಮಳೆರಾಗಕೆ ಛಾವಣಿಯ ಮೇಲೆ ಚಿಟಪಟ ತಾಳ ಹಾಕುವ ಹನಿಗಳ ಸಾಂಗತ್ಯದಲಿ,
ಮತ್ತೆ ಮತ್ತೆ ಕೇಳುವ ಹಂಬಲ...ಹೇಳು ಹಾಡಿನ ಪಲ್ಲವಿಯಂತೆ ಮತ್ತೆ ಉಲಿಯುತ್ತೀಯಲ್ಲ?//

ನೆನಪು...

ಸ್ವಾತಂತ್ರದ ಸವಿ ಸಿಕ್ಕು ಆರು ದಶಕಗಳು ಕಳೆದಿವೆ,ಅನೇಕ ಪ್ರಗತಿಯ ಮಜಲುಗಳನ್ನು ನಮ್ಮ ಈ ದೇಶ ದಾಟಿದೆ.ಈ ಎಲ್ಲ ಆರ್ಥಿಕ ಬೆಳವಣಿಗೆಗಳ ಸ್ಪೂರ್ತಿಯ ಬೆನ್ನು ಹತ್ತಿ ಹೊರಟರೆ ಆ ಹುಡುಕಾಟ ಟಾಟಾ-ಬಿರ್ಲಾ ಗಳ ಕುಟುಂಬಗಳತ್ತ ಸಾಗಿ ಕೊನೆಮುಟ್ಟುತ್ತದೆ.ಈಗೆಲ್ಲ ನವ ಕುಬೇರರ ಸಂತತಿ ಸಾವಿರವಾಗುತ್ತಿರುವ-ಜನಪ್ರಿಯತೆಗಾಗಿ ಪೈಪೋಟಿಗೆ ಬಿದ್ದಂತೆ ಟೀವಿ ಮಾಧ್ಯಮಗಳೂ ದಿನಕ್ಕೊಬ್ಬ ಕುಬೇರನನ್ನು ಸೃಷ್ಟಿಸುವ ಚಟಕ್ಕೆ ಬಿದ್ದಿರುವಾಗಲೂ ಈ ಎರಡು ಕುಟುಂಬಗಳ ಘನತೆ ಮೊದಲೆಷ್ಟಿತ್ತೂ ಈಗಲೂ ಅಷ್ಟೇ ಇದೆ.ಆದರೆ ದೇಶದ ಶ್ರೆಯೋಭಿವೃದ್ಧಿಯ ದೃಷ್ಟಿಯಿಂದ ನೋಡಿದಾಗ ಮಹಾತ್ಮ ಗಾಂಧೀಜಿಯಿಂದ ಹಿಡಿದು-ಇಂದಿರಾಗಾಂಧಿಯವರೆಗೂ ರಾಜಕಾರಣದ ಬಿಳಿಯಾನೆಗಳಿಗೆ ಕಾಲಕಾಲಕೆ ಬೇಕಾದಷ್ಟು ತೌಡು ಹಾಕುತ್ತ ತಮ್ಮ ಉದ್ಯಮಗಳ ಹಿತಾಸಕ್ತಿಯನ್ನು ಹಿಂಬಾಗಿಲಿನ ಮೂಲಕ ಈಡೇರಿಸಿಕೊಂಡ ಬಿರ್ಲಾಗಳ ಮುಂದೆ ಟಾಟಾ ಕುಂಟುಂಬದ ಕೊಡುಗೆ ಒಂದು ಕೈ ಹೆಚ್ಚು.ಟಾಟಾ ಉದ್ಯಮದ ಚುಕ್ಕಾಣಿ ಹಿಡಿದವರು ಕಾಲದಿಂದ ಕಾಲಕ್ಕೆ ಈ ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡಿ ಪ್ರಪಂಚದ ಆರ್ಥಿಕ ಭೂಪಟದಲ್ಲಿ ನಮಗೂ ಒಂದು ಹಕ್ಕಿನ ಸ್ಥಾನ ಗಿಟ್ಟಿಸಿಕೊಟ್ಟಿದ್ದಾರೆ.ಇಲ್ಲಿ ಕಾಣುವುದು ಅವರ ದೂರದೃಷ್ಟಿಯ ಚಿಂತನೆ,ವಯಕ್ತಿಕ ಹಿತಾಸಕ್ತಿಯ ಹೀನ ಹಿಕಮತ್ತಲ್ಲ.ಆದರೆ ಸದಾ ಅಧಿಕಾರ ರೂಢರ ಹೆಗಲ ಮೇಲೆ "ಕೈ" ಹಾಕಿಕೊಂಡೆ ಇರುವ ಬಿರ್ಲಾಗಳ 'ಸೇವೆ' ಈ ಕೋನದಿಂದ ನೋಡಿದಾಗ ಪ್ರಶ್ನಾರ್ಹ.ಇಂಡಿಯನ್ ಏರ್ಲೈನ್ಸ್,ಬೆಂಗಳೂರಿನ ಐಐಎಸ್ಸಿ ,ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್ ಫಾರ್ ಕ್ಯಾನ್ಸರ್-ಪ್ರಯೋಗ ಹಾಗು ಉಪಶಮನ ಕೇಂದ್ರ,ಕೇಂದ್ರೀಯ ಪ್ರದರ್ಶನ ಕಲೆಗಳ ಸಂಸ್ಥೆ,ಟಾಟಾ ಸಾಮಾಜಿಕ ವಿಜ್ಞಾನಗಳ ಸಂಸ್ಥೆ,ದೇಶದಾದ್ಯಂತ ಹರಡಿರುವ ಹಿಂದುಸ್ತಾನ್ ಏರೋನಾಟಿಕಲ್ ಸಂಸ್ಥೆ-ನ್ಯಾಷನಲ್ ಏರೋನಾಟಿಕಲ್ ಸಂಸ್ಥೆ ( ಬೆಂಗಳೂರಲ್ಲಿ ಪ್ರಧಾನ ಕಛೇರಿಯಿದೆ) ಇವೆಲ್ಲ ದೇಶಕ್ಕೆ ಟಾಟ ಸಮೂಹದಿಂದ ಸಂದ ಬೃಹತ್ ಕೊಡುಗೆಗಳು.ಕೇವಲ ಕಲ್ಲಿನ ದೇವಸ್ಥಾನಗಳನ್ನಷ್ಟೇ ಕಟ್ಟಿ ಸಾಂಸ್ಕೃತಿಕ ಕೊಡುಗೆ ನೀಡುತ್ತಿರುವ ( ಒಂದು ಹಂತದವರೆಗೆ ಇದು ಒಳ್ಳೆಯದೇ...ಆದರೆ ಅತಿಯಾದರೆ ವಿಷ ಕೂಡ ಹೌದು ಅನ್ನೋದನ್ನ ನೆನಪಿಡಬೇಕು ) ಬಿರ್ಲಾಗಳು ಅಸಲಿಗೆ ದೇಶಕಟ್ಟುವ ಕಾರ್ಯದಲ್ಲಿ ತೊಡಗಿದ್ಧಾರೆಯೇ? ಅದೇನೆ ಇರಲಿ ಜೆಮ್ಶೆಡ್ ಜೀ ಟಾಟಾರಿಂದ ಮೊದಲ್ಗೊಂಡು ಇಂದಿನ ರತನ್ ಟಾಟಾವರೆಗೂ ಹೋಲಿಸಿ ನೋಡಿದಾಗ ಅಪ್ರಾಸಂಗಿಕವಾಗಿ ಈ ಹೋಲಿಕೆ ಮಾಡಿದೆ ಅಷ್ಟೇ.

ಅಂದ ಹಾಗೆ ಇವತ್ತು ಟಾಟಾ ಉದ್ಯಮಜಗತ್ತನ್ನ ಈ ಪರಿ ಬೆಳೆಸಿದ ಜಮ್ಷೆಡ್ ಜಿ ರತನ್ ಜಿ ದಾದಾಭಾಯಿ ಟಾಟಾರವರ ಜನ್ಮದಿನ.ಫ್ರೆಂಚ್ ತಾಯಿ-ಹಾಗು ಭಾರತೀಯ ಪಾರ್ಸಿ ತಂದೆಗೆ ೧೯೦೪ ರಲ್ಲಿ ಇದೆದಿನ ಹುಟ್ಟಿದ್ದ ಅವರು ಬದುಕಿದ್ದರೆ ಭರ್ತಿ ೧೦೬ ವರ್ಷ ವಯಸ್ಸಗಿರುತ್ತಿತ್ತು.ಭಾರತ ಕಂಡ ಮೊದಲ ವಾಣಿಜ್ಯ ಪೈಲೆಟ್.ತಮ್ಮ ಸಂಸ್ಥೆಯ ಸಂಸ್ಥಾಪಕರ ಕನಸನ್ನ ದೇಶದ ಬೆಳವಣಿಗೆಯೊಂದಿಗೆ ಮಿಳಿತಗೊಳಿಸಿದ ನಿಜವಾದ ಅರ್ಥದ ಸಾಧಕ ಇವರು.ಭಾರತರತ್ನಕ್ಕೆ ಘನತೆ ತಂದುಕೊಟ್ಟ ಭಾರತೀಯ. ಏಕಕಾಲದಲ್ಲಿ ಭಾರತ ಸರಕಾರದ ಉನ್ನತ ನಾಗರೀಕ ಗೌರವದೊಂದಿಗೆ ಫ್ರೆಂಚ್ ಸರಕಾರ ಕೊಡ ಮಾಡುವ ಅತ್ಯುನ್ನತ ನಾಗರೀಕ ಪ್ರಶಸ್ತಿ "ಲಿಜೆನ್ದ ಡೇ ಹಾನೂರ್"ಗೂ ಪಾತ್ರರಾಗಿದ್ದರು.ತಮ್ಮ ೮೯ನೆ ವಯಸ್ಸಿನಲ್ಲಿ ೧೯೯೩ರ ನವೆಂಬರ್ ೨೩ ರಂದು ಇಹಲೋಕ ತ್ಯಜಿಸಿದರು.


ಹಡಬಿಟ್ಟಿ ದುಡ್ಡಿನಲ್ಲಿ ದುಂಡಗಾಗುವ ದರಿದ್ರ ರಾಜಕಾರಣಿಗಳ ಹುಟ್ಟು ಹಬ್ಬವನ್ನ ರಾಷ್ಟ್ರೀಯ ಪರ್ವದ ರೀತಿ ಆಚರಿಸುವ ಈ ಪರಿ ಬೌದ್ದಿಕವಾಗಿ ಬರಗೆಟ್ಟವರ ನಮ್ಮ ದೇಶದಲ್ಲಿ ನಿಜವಾದ ಅರ್ಥದಲ್ಲಿ ಭಾರತದ ಅಮೂಲ್ಯ ರತ್ನಗಳಾದ ಜೆ ಆರ್ ಡಿ,ಸ್ಯಾಮ್ ಪಿತ್ರೋದ,ವಿನೋಬಾ ಭಾವೆ,ಮಣಿ ಬೆಹನ್,ವರ್ಗೀಸ್ ಕುರಿಯನ್,ಬಾಬಾ ಅಮ್ಟೆ,ಅಣ್ಣಾ ಹಜಾರೆ ಇಂತವರ ನೆನಪಾದರೂ ನಮಗೆ ಆಗುತ್ತದೆಯೇ? ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿಯುವ ನವ ಕುಬೇರರು ಎದಿವಿದಲ್ಲೆಲ್ಲ ಸಿಗುವ ಈ ಸುಭಿಕ್ಷ ಕಾಲದಲ್ಲಿ ಪಾಪ ,ದೇಶ ಕಟ್ಟಿದ ಇಂತವರ ನೆನೆಯದಷ್ಟು ಕ್ರತಘ್ನ ರಾದೇವೆ ನಾವೆಲ್ಲಾ? ಒಂದು ನೆನಪಿಡಿ ಹಣ ಯಾರೂ ಸಂಪಾದಿಸ ಬಹುದು...ಆದರೆ ಅದರ ಸದ್ವಿನಿಯೋಗವನ್ನ ನಿಸ್ವಾರ್ಥವಾಗಿ ಮಾಡುವವರು ವಿರಳ.ಅಂಥವರನ್ನ ಕನಿಷ್ಠ ಅವರ ಹುಟ್ಟಿದ ದಿನವಾದರೂ ನೆನೆಯೋಣ.

ಆಗ ನಶೆಯ ಅರ್ಥ ನನಗಾಯ್ತು...

ಮಧುಶಾಲೆಗೆ ಹೋಗಲಿಲ್ಲ,
ಹನಿ ಮಧುವ ತುಟಿಗಳಿಗೆ ಸೋಕಿಸಲಿಲ್ಲ/
ಆದರೂ ಸದಾ ಮತ್ತಲಿ ಉನ್ಮತ್ತ ನಾನು,
ನೀನಿರದ ವಿರಹಕ್ಕಿಂತ ಕಟು ಮಧು ಬೇರೆ ಬೇಕೇನು//


ಸರೆಗೆ ಸೆರೆಯಾಗಿ ನಶೆಗೆ ದಾಸರಾಗುವರಂತೆ,
ಮದಿರೆಯ ಸೆರಗಿಗೆ ಜೋತಾಡುತ್ತಾ ಗಟಾರದಲ್ಲಿ ಬೀಳುವರಂತೆ/
ವಿಷಾದದ ಮೋರಿಯಲ್ಲಿ ಮತ್ತೇರಿ ಮುಳುಮುಳುಗಿ ನಾನೂ ತೇಲುತ್ತಿದ್ದೇನೆ,
ಮಲಗಿದ್ದೇನೆ ಅಲ್ಲಿ ನಿನ್ನ ನೆನಪಿನ ಜೊತೆಯಲ್ಲಿ//

27 July 2010

ನೋವಿದೆ...

ಹೊಟ್ಟೆ ನೋವೆಂದೆ,
ಅಪೆಂಡಿಸೈಟೆಸ್ ಎಂದು ಕರೆದರು...ಕುಯ್ಯಿಸಿ ತೆಗೆಸಿಕೊಂಡೆ/
ಎದೆಯೊಳಗೂ ನವಿರಾಗಿ ಕಾಡುವ ನೋವೊಂದಿದೆ ಎಂದೆ...ಸುಮ್ಮನೆ ನೋಡಿ ನಕ್ಕರು,
ನಾನಂತೂ ಇನ್ನೂ ನರಳುತ್ತಲೇ ಇದ್ದೇನೆ//

ಕಾಡುವ ಇರುಳು...

ಉದ್ದುದ್ದದ ಪಡಸಾಲೆಗಳಲ್ಲಿ ಒಬ್ಬಂಟಿಯಾಗಿ ಹೆಜ್ಜೆಯಿಡುವಾಗ,
ಉಕ್ಕುಕ್ಕಿ ಉಮ್ಮಳಿಸಿ ಬರುವ ದುಃಖದಲ್ಲಿ/
ತೊಟ್ಟಿಕ್ಕಿ ಕಾಡುವ ಕಂಬನಿಯಲ್ಲಿ,
ನಿನ್ನದೇ ನೆನಪಿನ ಪಸೆಯಿದೆ//


ಕಾರಿರುಳು ಕಾನ ಮಧ್ಯೆ ನನ್ನ ವ್ಯಥೆಯ ಜೋಪಡಿಯಲ್ಲಿ,
ಒಡಕು ಕಂದೀಲಿನ ಬೆಳಕ ಜೋಡಿ ನಿನ್ನದೇ ನೆನಪಲ್ಲಿ/
ನಾ ನವೆಯುತ ಹತಾಶನಾಗಿ ಕತ್ತಲ ದಿಟ್ಟಿಸುತ್ತಿದ್ದಾಗ,
ನೀನೆ ಖುದ್ದು ಬಂದು ನನ್ನ ಸಂತೈಸಿದ್ದರೆ ಎಷ್ಟು ಚೆನ್ನಾಗಿತ್ತು!//

ನಾಲ್ಕು ಸಾಲು..

ಶಾಯಿ ಆರಿದ ಬೆರಳುಗಳಲ್ಲಿ ಉಳಿದ ಕಲೆ,
ಎದೆಯ ಒಳಮನೆಯಲ್ಲಿ ಮೂಡಿದ ನಿನ್ನ ನೆನಪ ನೆರಳಿನೊಂದಿಗೆ ನಡೆಸಿದ/
ಅಂತರಂಗದ ಸಲ್ಲಾಪ,
ಕಂಬನಿಯೊಂದಿಗಿನ ಈ ನಾಲ್ಕು ಸಾಲುಗಳು//


ನಿನ್ನೆಲ್ಲ ನೆನಪಿನ ಬಿಡಿ ಚಿತ್ರಗಳನ್ನು,
ಒಂದೇ ಚಿತ್ರಕಡತದಲ್ಲಿ ಹಿಡಿದಿಡುವ ನನ್ನ ತವಕ/
ಈ ನಾಲ್ಕು ಸಾಲುಗಳನ್ನು,
ವಿರಹ ತಪ್ತನಾದ ನನ್ನಿಂದ ಗೀಚಿಸಿತು//

26 July 2010

ಕನಸು ನಿಜವಲ್ಲ...

ಗಾಜಿನ ಕನಸುಗಳಿವು...ಒಡೆದು ಚೂರಾದರೆ ಕಾಣುವ ಕಣ್ಣಿಗೆ ಚುಚ್ಚೀತು,
ರೇಶಿಮೆ ದಾರದಷ್ಟು ನವಿರು ಒಲವ ಭಾವಗಳು...
ಬಿಗಿಯಾದರೆ ಉಸಿರುಗಟ್ಟಿಸಿ ಕೊಂದೀತು/
ಸಾಲು ಸಾಲು ಸೋಲುಗಳ ನಡುವೆ ಗೆಲುವು ತರುವುದು ನಿನ್ನೊಂದು ನಗು,
ಬಂದೊಮ್ಮೆ ನನ್ನ ಅಪ್ಪಲಾರೆಯ ನಡುವೆ ಗಾಳಿಯೂ ಆಡದಷ್ಟು ಬಿಗು?//


ಕಣ್ಣ ಕಾಲುದೀಪದಲ್ಲಿ ಕನಸ ಎಣ್ಣೆ ಆರುವ ಮೊದಲು,
ಮನದಂಗಳದ ಮರದಲಿ ಅರಳಿರುವ ಪಾರಿಜಾತದ ಹೂವು ಬಾಡುವ ಮೊದಲು/
ಕೊನೆಯ ಉಸಿರು ನನ್ನೆದೆಯಿಂದ ಕೈಜಾರುವ ಮೊದಲು,
ಒಂದೇ ಒಂದು ಬಾರಿ ಮರಳಿಬಂದು ಮುತ್ತಿಡಲಾರೆಯ?...
ನಿನ್ನುಸಿರ ನನ್ನೆದೆಯಲಿ ತುಂಬಲಾರೆಯ?//

ಮನದ ಚಾವಡಿಯಲ್ಲಿ ಕೈದೀಪ ಹಿಡಿದು ನೀನು ಬಂದಂತೆ ಕನಸು,
ಬರಡುಗೆಟ್ಟ ಬಾಳಲ್ಲಿ ಕನಸಲ್ಲಾದರೂ ಬಂದು ಖುಷಿ ಮಲ್ಲಿಗೆಯ ಸುರಿಸು/
ಬಿಸಿಲಲಿ ಸುರಿವ ತುಂತುರಿವಿನಂತೆ,
ಒಳಗಿನ ಬೇಗೆ ಅದೆಷ್ಟಿದ್ದರೂ...ಇದರ ತಂಪಲಿ ತುಸು ತೇಲುತ್ತೇನೆ//

ನಿರೀಕ್ಷೆ...

ನೀನಿಲ್ಲದ ಮನೆಯಲ್ಲಿ ವಿರಹದ ಸೂತಕ,
ನೀನೆಂದೂ ಮರಳಿ ಬಾರದ ಹಾದಿ ಕಾಯುವ ನಾನು ಲೋಕದ ಕಣ್ಣಲ್ಲಿ ಕಡು ಮೂರ್ಖ/
ಆದರೂ ಭರವಸೆಯ ಲಾಟೀನಿನಲ್ಲಿ ಮಿಣುಕು ದೀಪ ಉರಿಸಿ....
ಮನದ ಗುಡಿಸಿಲ ಕಿಡಕಿಯಲ್ಲಿರಿಸಿ ನಿನ್ನ ಹೆಜ್ಜೆ ಸಪ್ಪಳ ಕೇಳಲೆಂದೇ ಕಾತರಿಸಿ ಕಾಯುತ್ತಿದ್ದೇನೆ,
ಕತ್ತಲಲ್ಲಿ ನೀ ಬಂದಾಗ ನಿನ್ನ ದಾರಿ ತಪ್ಪಬಾರದಲ್ಲ!//

25 July 2010

ಮೌನ ಕಾತರ...

ಮನಸಿನ ಪಡಸಾಲೆಯಲ್ಲಿ ನೆನಪಿನ ನೆರಳು,
ಮತ್ತೆ ಮನದೊಳಗೆ ಸುಳಿದು ಮುದಗೊಳಿಸಿದ್ದು ನಿನ್ನ ಹಣೆಯ ಚುಂಬಿಸೋ ನಿನ್ನದೇ ಬಾಗಿದ ಮುಂಗುರುಳು/
ನಸುಗತ್ತಲ ಬಾನಂಚಿನಿಂದ ಕಡತಂದ ಕಾಡಿಗೆ ತೀಡಿದಂತಾ ನಿನ್ನ ಕಡುಗಪ್ಪು ಕಣ್ಣುಗಳು,
ಇವುಗಳ ಸಾಂಗತ್ಯದಲ್ಲಿ ಅದು ಹೇಗೆತಾನೆ ಚಡಪಡಿಸದೆ ಕಳೆದೀತು ಹೇಳು ನನ್ನಿರುಳು?//

ಎಚ್ಚರ...ನಿನ್ನ ನವಿರು ಕೇಶ ಗುಚ್ಛ,
ಸುಳಿವ ಗಾಳಿಗೂ ಹಿಡಿಸೀತು ಹುಚ್ಚ/
ಮೆಲುವಾಗಿ ಉಲಿವ ತುಟಿಗಳದೆ ಭಿನ್ನ ಕರಾಮತ್ತು,
ಸೌಂದರ್ಯದ ಸೃಷ್ಟಿಯ ಗುಟ್ಟನು ಅದು ಪ್ರಕೃತಿಗೂ ಕಲಿಸೀತು//


ತಡವರಿಸುವ ಮಾತುಗಳಲ್ಲಿ ಅಡಗಿದ ಪ್ರೀತಿಗೆ ಮನಸೋತ ನಿನ್ನ ಕಣ್ಣು,
ನನ್ನ ಭಾವದ ಬಯಲಲ್ಲಿ ಒಲವ ಬೀಜ ಬಿತ್ತುತಿದೆ ಕಾಣು/
ಮೋಹದ ವೀಣೆಗೆ ಮರುಳಾಗಿದೆ ಮನದ ವೇಣುನಾದ,
ಕಾತರಿಸಿ ದಣಿದಿದೆ ನಿರೀಕ್ಷೆ...ನನ್ನೆದೆ ಅಂಗಳಕೆ ಸೋಕೀತೆ ನಿನ್ನ ಪಾದ//

22 July 2010

ಸುಮ್ಮನೆ ನೆನಪಾಗಿ ಕಾಡುತ್ತಿ..

ನಿನ್ನ ಮಾತುಗಳಲ್ಲೆಲ್ಲ ನವಿರಾದ ಪರಿಮಳವಿದೆ,
ನನ್ನ ನಿರೀಕ್ಷೆಗಳೆಲ್ಲ ನಿನ್ನ ಕಣ್ಣೋಟದಲ್ಲೇ ಅಡಗಿದೆ/
ನನ್ನೆದೆಯರಮನೆಯ ಪಡಸಾಲೆಯಲ್ಲಿ ನೀನು ಗುನುಗುವ ಚುಂಬಕ ಆಲಾಪದಲ್ಲಿ ನನ್ನ ಮನ ತನ್ಮಯ,
ನಿನ್ನುಸಿರ ವೀಣೆಯಲ್ಲೇ ನನ್ನ ಬದುಕ ನಿನಾದ ನಿಂತಿದೆ//

ಹನಿಯುವ ಮೋಡದ ಚಪ್ಪರದಡಿ ನಿನ್ನನೇ ನೆನೆಯುತ್ತ ಸಾಗುವುದು ನನಗಿಷ್ಟ,
ಸುರಿಯುವ ಬೆಳದಿಂಗಳ ಮಳೆಯಲಿ ನೀನಿತ್ತ ಸಾವಿರ ಮುತ್ತುಗಳ ನೆನಪಲ್ಲೇ ತೋಯುವುದು ಬಲು ಇಷ್ಟ/
ಮರುಳನೆಂದು ನನ್ನ ನೋಡಿ ನಗುವ ಪೂರ್ಣ ಚಂದಿರನ್ನೇ ದೂತನಾಗಿಸಿ,
ಒಲವ ಗುಪ್ತ ಸಂದೇಶವನ್ನು ಅವನಲ್ಲೇ ಕಳಿಸಿಕೊಡಲೇನು?//

20 July 2010

HOMESTEAD DEMOLITION by Govt. of Karnataka Govt. of Karnataka is against FARMERS of KARNATAKA !!!

http://www.youtube.com/watch?v=jj5RGLjF-tM
ಅಭಿವೃದ್ಧಿಯ ಹೆಸರಲ್ಲಿ ನಮ್ಮ ರೈತರನ್ನು ಬೀದಿಗೆ ತಳ್ಳುವ ಹುನ್ನಾರದ ಕುತಂತ್ರ,ಗ್ರೆಗೊರಿ ಪತ್ರಾವ ಎಂಬ ನೇಗಿಲಯೋಗಿಗೆ ಬರೆಯಿಟ್ಟ ಬೂ ಸಿ ಯ ಸರ್ಕಾರ....( ಒಮ್ಮೆ ರೆಡ್ಡಿಗಳ ಪಾತಿವ್ರತ್ಯಕ್ಕೆ ತಾನೇ ಅಗ್ನಿಪರೀಕ್ಷೆ ಎದುರಿಸುವ ಹಸಿರು ರೇಶಿಮೆಶಾಲನು ಹೊದ್ದ "ಶೋಭಾ"ಯಮಾನ ಮುಖ್ಯಮಂತ್ರಿ {ಮುಖ್ಯ ಕಂತ್ರಿ?!} ಯನ್ನು ನೆನಪಿಸಿಕೊಳ್ಳಿ.)

ಮಿಡಿದ ಮೋಡ...

ಬಾನ ಅಶ್ರುಬಿಂದುಗಳಿಗೆ ಜರಡಿ ಹಿಡಿದ ಮೋಡ,
ದುಃಖ ಕವಿದ ಹನಿಗಳ ಶೋಧಿಸಿ ಸುಖದ ಸ್ವೇದ ಬಿಂದುಗಳನೆ ನೆಲಕೆ ಹರಿಸಿತು/
ಜೊತೆಗೆ ಬೀಸಿದ ಮೆಲುಗಾಳಿ.
ಆಗಸದ ಕೆನ್ನೆ ಮೇಲೆ ಇಳಿದ ನೋವಿನ ಕಣ್ನೀರನೆಲ್ಲ ಒರೆಸಿತು/


ಸುರಿದ ಎರಡೇ ಎರಡು ಹನಿಗಳಿಗೆ ಎದೆಯೊಳಗೆ ಅಡಗಿಸಿಟ್ಟಿದ್ದ ಒಲವ ಬೀಜಗಳು ಮೊಳಕೆಯೊಡೆದವು,
ಮಡುಗಟ್ಟಿ ಹೋಗಿದ್ದ ನೆಲದ ಮನದಂಗಳವೂ ಮತ್ತೆ ಹಸಿರಾದವು/
ಪ್ರೀತಿಯ ಪಿಸುನುಡಿಗೆ ಅದೆಂಥಾ ಮೋಹಕ ನಶೆ,
ಉಷೆ ನಕ್ಕ ಮೋಡಿಗೆ ನಾಚಿ ಕೆಂಪಾಯ್ತು ಮೂಡಣ ದಿಶೆ//

19 July 2010

ಮತ್ತದೇ ಏಕಾಂತ...

ಮತ್ತೆ ಸುರಿದ ಬೆಳದಿಂಗಳು ನನ್ನ ಮನವ ತಣಿಸಲಿಲ್ಲ,
ಮುತ್ತ ಸುರಿದ ಬಾನಂಚಿನ ಮೋಡಗಳು ಬರಗೆಟ್ಟ ನನ್ನೆದೆಯ ಆರ್ದ್ರಗೊಳಿಸಲಿಲ್ಲ/
ನಿನ್ನ ನೆನಪಿನ ಬೀಜ ಅಂದು ನೀನು ಬಿತ್ತಿ ಹೋಗಿದ್ದು,
ಇಂದು ಭೀಕರ ಜಾಲಿಮರವಾಗಿ...
ಈಕಾರಿರುಳಲ್ಲಿ ಗಾಳಿ ಬೀಸಿದಾಗೆಲ್ಲ ನನ್ನನು ಚುಚ್ಚುತಿದೆ...ಭಾವಗಳ ಗೀರುತಿದೆ//

17 July 2010

ಭಂಡಗೆಟ್ಟವರು...

ರಾಜಕಾರಣಿಗಳಿಂದ ಹಲವಾರು ಸರಕಾರಿ ಯೋಜನೆಗಳ ಸಮರ್ಪಣೆ ಕುರಿತ ಜಾಹಿರಾತುಗಳನ್ನ ದಿನನಿತ್ಯ ಮಾಧ್ಯಮಗಳಲ್ಲಿ ನೋಡುತ್ತಿರುತ್ತೇವೆ ಅಥವಾ ಓದುತ್ತಿರುತ್ತೇವೆ.ಇದೆಷ್ಟು ಅಸಂಬದ್ಧ ಅಂತ ಒಮ್ಮೆಯಾದರೂ ಯೋಚಿಸಿದ್ದೇವ? ಅಲ್ಲ ಸರಕಾರಿ ಹಣದಿಂದ ಜನತೆಯ ಉಪಯೋಗಕ್ಕಾಗಿ ವಿನಿಯೋಗವಾಗಿ ಸಿದ್ದವಾಗುವ ಯೋಜನೆಯನ್ನು ದೇಶಕ್ಕೆ ಸಮರ್ಪಿಸಲು ಅದೇನು ಅವರ ಅಪ್ಪನ ಆಸ್ತಿಯ? ನಮ್ಮೆಲ್ಲರಿಗೆ ಸಮಾಜದ ಸ್ವಾಸ್ಥ್ಯ ನಿರ್ವಹಣೆ,ನಮ್ಮ ಕೆಲಸದ ಒತ್ತಡದ ನಡುವೆ ಸಾಧ್ಯ ಆಗೋದಿಲ್ಲ ಆನ್ನುವ ಕಾರಣಕ್ಕೆ ಚುನಾವಣಾ ವ್ಯವಸ್ಥೆಯ ಮೂಲಕ ನಮ್ಮ ಪ್ರತಿನಿಧಿಯಾಗಿ ಆರಿಸಿ ಕಳಿಸುವ ಈ ಭಂಡ ನನ್ನ ಮಕ್ಕಳ ಜವಾಬ್ದಾರಿಯೇ ನಮ್ಮ ಹಿತಕ್ಕಾಗಿ ಅಂದರೆ ಶ್ರೀಸಾಮಾನ್ಯನ ಹಿತಕ್ಕಾಗಿ ದುಡಿಯೋದೆ ಆಗಿರುವಾಗ (ಆ ದುಡಿಮೆಗೆ ಅವರಿಗೆ ಕೈತುಂಬಾ ಸಂಬಳವೂ..ಜೇಬು ತುಂಬಾ ಗಿಂಬಳವೂ ಗಿಟ್ಟುತ್ತದೆ ಅನ್ನೋದು ಬೇರೆ ಮಾತು) ಮಾಡಿದ ಕರ್ತವ್ಯವನ್ನು ಸಾಧನೆ ಅನ್ನುವ ಹಾಗೆ ಬಿಂಬಿಸಿಕೊಳ್ಳುತ್ತಾ ಕಂಡ ಕಂಡ ಮೋರಿಯ ಮೇಲೆ...ಮೂರು ಮಾರ್ಗ ಕೂಡುವ ಕಡೆ ತಮ್ಮ ಅಸಹ್ಯ ಭಂಗಿಯ ಫ್ಲೆಕ್ಸ್ ಹಾಕಿಕೊಂಡು ಶೋಕಿ ಮಾಡುವ ಇವರ ನಾಚಿಕೆಗೆಟ್ಟ ಬಾಳಿಗೆ ಉಗಿಯುವ ನೈತಿಕತೆ ನಮಗ್ಯಾರಿಗೂ ಇಲ್ಲವ?

16 July 2010

ಗಝಲ್...

ಮತ್ತು ಹೆಚ್ಚಾಗಿ ಮೋರಿಯಲಿ ಜಾರಿಬಿತ್ತು ಧರೆಗಿಳಿದ ಮೋಡದ ಹನಿ,
ಅದರ ಚಿತ್ತ ಕೆಡಿಸಿದ್ದು ಇಳೆ ಮೈಯಲ್ಲಿ ಅಡಗಿದ್ದ ಸಿಂಗಾರದ ಖನಿ/
ಈಗೀಗ ನನ್ನ ಪರಿಸ್ಥಿತಿಯೂ ಕೊಂಚ ಹಾಗೇನೆ,
ದಿನ ನಿತ್ಯ ನಿನ್ನ ಧ್ಯಾನದಲೇ ಬಿದ್ದೇಳುತ್ತಿದ್ದೇನೆ//

ಹುಟ್ಟು ಕುಡುಕ ನಾನಲ್ಲ,
ಆದರೂ ವಿಪರೀತ ಮತ್ತಲೇ ಸದಾ ಅಲೆವೆ/
ಸುರೆಗೆ ದಾಸ ನಾನಲ್ಲ ,
ಆದರೆ ನಿನ್ನ ಸೆರೆಗೆ ಮಾತ್ರ ಸಿಲುಕಿ ಸೋತಿರುವೆ//

15 July 2010

ಮಿನುಗು ತಾರೆ...

ತೊಟ್ಟು ಕಳಚಿ ಅನಾಥವಾಗಿ ಬೀಳೊ ಹೂವು ಅದೇ ಗಿಡಕ್ಕೆ ಆಗುವ ಹಾಗೆ ಗೊಬ್ಬರ,
ಕರಗಿ ನೀರಾಗಿ ನೆಲವ ಸೇರಲೇ ಬೇಕು..ಅದೇನೆ ಇದ್ದರೂ ಬಾನಲಿ ಮೋಡದ ಅಬ್ಬರ/
ಅದೆಷ್ಟೇ ಮುನಿಸು ನಿನಗಿದ್ದರೂ..ಇನ್ನಾದರೂ ಹರಿಸು ತಂಪು ಒಲವ ಧಾರೆ,
ನನ್ನ ಬಾಳ ಕರಿಆಗಸದಲಿ ನೀನೆ ತಾನೆ ಭರವಸೆಯ ಚುಕ್ಕಿ...ಕತ್ತಲ ಕಳೆವ ಮಿನುಗು ತಾರೆ//

14 July 2010

ಮೊದಲ ಮಳೆ...

ಮಳೆಗೆ ಮುದುಡಿ ಒಂದೇ ಕೊಡೆಯಡಿಯಲ್ಲಿ ಸಾಗಿದ್ದೆವಲ್ಲ,

ಅಂದು ನನಗೆ ಸೋಕಿದ ನಿನ್ನ ಮೈಗಂಧದ ಸುವಾಸನೆಗೆ ಇನ್ನೂ ಮೈಮರೆತಿದ್ದೇನೆ/
ಚಳಿಗೆ ನಿನ್ನನೇ ಹೊದ್ದಿದ್ದ ಆ ಇರುಳಿನ ಬೆಚ್ಚಗಿನ ಭಾವದಲ್ಲೇ,
ಇನ್ನಷ್ಟು ಚಳಿಗಾಲವನ್ನ ಎದುರಿಸಿದ್ದೇನೆ//

13 July 2010

ಗೊಂದಲ...

ನಿನ್ನ ಗುರುತ ಕೇಳುವವರಿಗೆ ಏನ ಹೇಳಲಿ?
ನೀರಿನಲ್ಲಿ ಮೂಡಿದ ನಿನ್ನ ಹೆಜ್ಜೆ ಗುರುತ ತೋರಲೇ?/
ಗಾಳಿಯಲಿ ಬೆರೆತ ನಿನ್ನ ಮೈಗಂಧವ ಬೀರಲೇ?
ಮರಳಲಿ ಕಿರು ಬೆರಳಲಿ ನಾ ಬರೆದ ನಿನ್ನ ಹೆಸರ ಉಸುರಲೆ?//


ನಿನ್ನ ಪರಿಚಯದ ದಾರಿ ಕೇಳಿದವರಿಗೆ ಏನ ಹೇಳಲಿ?
ಚಂದ್ರನ ಮೊಗದಲಿ ಮೂಡಿದ ಕೆನ್ನೆ ಗುಳಿಯ ತೋರಲೇ?/
ಮೋಡದ ಮರೆಯಲಿ ಮಿನುಗಿ ಮರೆಯಾದ ತಾರೆಗಳ ಹೊಳಪೆಂದು ತಿಳಿಸಲೇ?
ಮಲೆನಾಡಿಗೆ ಹಸಿರ ಸಾಲ ಕೊಟ್ಟ ನಿನ್ನೆದೆಯ ಕಂಪನ್ನ ಅವರತ್ತ ತೂರಲೇ?//

12 July 2010

ಕೊರತೆ...

ಒಲವ ಕಾಮಗಾರಿಗೆ ಅನುದಾನದ ಕೊರತೆ,
ಬತ್ತಿ ಹೋಗಿದೆ ನಿನ್ನ ಪ್ರೀತಿಯ ಒರತೆ/
ನಿನ್ನ ಸಂಗವಿಲ್ಲದೆ ನಾನಿರೋದಾದರೂ ಹೇಗೆ?
ಅತಿಯಾಗಿ ಸುಡುತಿರುವಾಗ ನನ್ನೆದೆಯೊಳಗೆ ವಿರಹದ ಬೇಗೆ//

11 July 2010

ಸನ್ನಿಧಿ...

ಮಾತು ಮರೆತ ಮೇಲೆ..ಮೌನದಲೇ ಬರೆದೆ ಓಲೆ...
ನಿನ್ನ ಸನಿಹ-ಸ್ಪರ್ಶ ಸುಳಿದು ಬಂತು ನೆನಪಿನಲ್ಲಿ/
ಭಾವಗಳು ಕರಗಿ ಹನಿಗಳಲಿ ಅಡಗಿ ನಯನಗಳ ತುಂಬಿದವು..
ನೋವೆಲ್ಲೋ ಅಡಗಿ ಮನದೊಡಲು ತೋಯ್ದು ನಗುವನೆ ಚಲ್ಲಿದವು,
ಕಣ್ಣು ಕರೆಯುತಿದೆ..ಒಲವು ಹುಡುಕುತಿದೆ...ನೀನು ಎಲ್ಲಿ?//

ನಿನ್ನೆದೆ ಮಿಡಿತದ ಖಜಾನೆ ತುಂಬಿ ತುಳುಕುತಿದೆ,
ನನ್ನೊಲವ ಖಾತೆಯಲೂ ಏನೂ ಬರವಿಲ್ಲ/
ಹೀಗಿದ್ದೂ ನಾನು ಪರಮ ಭಿಕಾರಿ,
ಇನ್ನೂ ನಿರೀಕ್ಷೆಯ ಪಾವತಿ ಪತ್ರಕ್ಕೆ ನಿನ್ನ ಸಹಿ ಬಿದ್ದಿಲ್ಲ//

ನೀ ನನ್ನೆದೆಯ ಹಾಡು,
ನಿನ್ನದೇ ತಾನೇ ನನ್ನೊಳಗಿರುವ ಮನ ಮಿಡಿಯುವ ಒಲವ ರಾಗ?/
ದಿನರಾತ್ರಿ ನವೆದು ಹಣ್ಣಾದ ನನಗೆ,
ದಯವಿಟ್ಟು ಇನ್ನೊಮ್ಮೆ ಕೇಳಿಸುತ್ತೀಯ ಆ ಪಲುಕುಗಳನ್ನೊಮ್ಮೆ ಈಗ?//

08 July 2010

ನೀನು...

ಇರುಳಲಿ ಹರಿದ ಬಾನಿಗೆ ತೇಪೆ ಹಾಕಿದ ತಾರೆ,
ಅಬ್ಬರಿಸಿ ಸುರಿದ ಮಳೆ ಚಲ್ಲಿದ ನೀರ ಕನ್ನಡಿಯಲಿ ಕಂಡ ಮೌನ ಧಾರೆ/
ಚಳಿಯಲಿ ನಿನ್ನನೇ ಹೊದ್ದುಕೊಳ್ಳುವ ತವಕ,
ಬೆವರಿಳಿವ ಬೇಸಿಗೆಯಲಿ ನಿನ್ನೆದೆ ಮೇಲೆ ಮೈಚೆಲ್ಲುವ ಕನಸ ಪುಳಕ//

ನಾವು ಮಾತು ಮರೆತ ಘಳಿಗೆ....ರೋಮಾಂಚನ ಇರುಳು ಬೀಸಿದ ಗಾಳಿಗೆ,
ನಡುವಿನ ಅಂತರ ತಗ್ಗಿಸಿದ ವೇಳೆ...ಸಂಕೋಚ ಚಲ್ಲಿ ದುಂದಾಗುತ್ತಿದ್ದ ಬೆಳದಿಂಗಳಿಗೆ/
ತುಟಿ ನಿನ್ನ ಮುತ್ತಿಟ್ಟರೆ ಕೆನ್ನೆಗ್ಯಾಕೆ ಅಸೂಯೆ?
ಕಣ್ಣು ನಿನ್ನಂದ ಸವಿದರೆ....ಕನಸ ಮೊಗದಲೇಕೆ ಸೂತಕದ ಹೊಟ್ಟೆಕಿಚ್ಚಿನ ಛಾಯೆ?//

05 July 2010

ಮನದ ಮಿಡಿತ...

ಎದೆ ಬಡಿತಕ್ಕೆ ಲಯಬದ್ಧ ಹೆಜ್ಜೆ ಸದ್ದು ಕೇಳಿಸಿತು,
ಮನದ ಮಿಡಿತಕ್ಕೆ ಮತ್ತೆ ನಿನ್ನ ಬರುವು ಕಾಣಿಸಿತು/
ಕನಸೋ ಇಲ್ಲ ನನಸೋ.....ನೀನೇನು? ನಿಜ ಹೇಳು?,
ಮತ್ತೆ ಮತ್ತೆ ಬಾಳಿನ ತಿರುವುಗಳಲ್ಲಿ ಸಿಗುವಾಗ..
ಗುಟ್ಟನೊಂದನು ನಿನ್ನ ಕಿವಿಯಲಿ ಉಸುರುವುದಿದೆ...ಸ್ವಲ್ಪ ತಾಳು//


ನಿನ್ನ ಮಾತುಗಳೆಲ್ಲ ಪ್ರಾರ್ಥನೆಯಂತೆ,
ಈ ರಾತ್ರಿ ನೀನು ಚೆಲ್ಲುವ ನಗೆ ಮುತ್ತುಗಳನು ಆರಿಸಿಕೊಳ್ಳೋದು ಹೇಗೆ? ಅನ್ನೋದೇ ನನ್ನ ಚಿಂತೆ/
ನಿನ್ನವೆರಡು ಕಣ್ಣುಗಳು ನನ್ನ ಪಾಲಿಗೆ ತಾರೆಗಳು,
ಸ್ವಚ್ಛಂದ ಹಾರೋ ನಿನ್ನ ರೇಶಿಮೆ ಕೂದಲು ಸೋಕುತಿರಲಿ ಹೀಗೆ..ಮರೆಸಿ ಇರುಳು...ಸುರಿವ ಬೆಳದಿಂಗಳು//

03 July 2010

ದೂರವೇ ಇರು...

ಇನ್ಯಾವ ಹರಕೆಯೂ ಇಲ್ಲ..ನೀ ಸದಾ ನಗುತಿರಬೇಕು,
ಮತ್ಯಾವ ಬಯಕೆಯೂ ಇಲ್ಲ...ನಿನ್ನ ಬಾಳಲಿ ಎಂದೂ ನಲಿವಿರಬೇಕು/
ಹನಿಗಳುಕ್ಕಬೇಕು ಕಣ್ಗಳಿಂದ ಸಂತೋಷದಲಿ...ನೋವಲಲ್ಲ,
ಇದಿಷ್ಟೇ...ಬೇರಿನ್ಯಾವ ಆಸೆಯೂ ನನಗಿಲ್ಲ//



ಮತ್ತೆ ಹುಟ್ಟಿದ ಮೋಹ ಮೊದಲಿನಷ್ಟು ಮುದವಿಲ್ಲ,
ಮರಳಿ ಬಂದ ನೀನು ನಿನ್ನ ನೆನಪಿನಷ್ಟು ಹಿತವಲ್ಲ/
ನಿತ್ಯ ನಿನ್ನ ಕಾಯುವುದರಲ್ಲಿದ್ದ ನೋವು ಬೇರೇನೆ ಇತ್ತು,
ನೀ ಬಾರದ ಹಾದಿ ಎವೆಯಿಕ್ಕದೆ ದಿಟ್ಟಿಸುವ ಸುಖ ಬೇರೇನೋ ಇತ್ತು//

02 July 2010

ನೆನಪಲಿ ನಾಲ್ಕು ಸಾಲು...

ನೆಲಕ್ಕಂಟಿದ ತುಂಬೆ ಹೂವಂತೆ ನಾನು,
ನಿನ್ನೋಲವನೆ ಕಚ್ಚಿಕೊಂಡಿರುವೆ...ನಿನ್ನನೇ ಹಚ್ಚಿ ಕೊಂಡಿರುವೆ/
ಮುಗಿಲ ಚುಂಬಿಸೋ ಪಾರಿಜಾತದಷ್ಟು ಕ್ಷಣಿಕ ಈ ಬಾಳು,
ನೀ ಬರದೆ ಇದು ಸುಮಧುರ ಹೇಗಾಗುತ್ತಿತ್ತು ಹೇಳು?//



ಮೋಡ ಮುಗಿಲ ಜೊತೆಗಿದ್ದರೂ ನೆಲದ ಕಡೆಗೆ ಅದರ ಮನಸು,
ಕೆಳಸುರಿದು ಮಣ್ಣನಪ್ಪುವ ಆಸೆ...ಸದಾ ಅದೇ ಕನಸು/
ನನ್ನೆಡೆಗೆ ಅದೇನೇ ಇದ್ದರೂ ನಿನ್ನ ತೀರದ ಮುನಿಸು,
ಕನಸಲಾದರೂ ಆಗಾಗ ಬಂದು ಕಾಡಿಸು...ಸುಳ್ಳೇ ಆದರೂ ನನ್ನನು ಅರೆಕ್ಷಣ ಪ್ರೀತಿಸು//


ಮುಗಿಲ ಮುದ್ದಿಸಿದ ಗಾಳಿ ನೆಲಕೂ ಅದನು ದಾಟಿಸಿತು,
ಜೊತೆ ಸುರಿದ ಮಳೆಹನಿ ಧರೆಯ ಎದೆಯಲೂ ಅನುರಾಗದಲೆಯ ಮೀಟಿಸಿತು/
ಇಳೆಯ ಗಾಢವಾಗಿ ಚುಂಬಿಸಿದ ಗಾಳಿಗೆ ಈ ಇರುಳೆಲ್ಲಿ ನಿದ್ದೆ?,
ನಾಚಿದ ಭೂಮಿಯ ಮೈಯಂತೂ ಅಂಗುಲ ಅಂಗುಲವೂ ಒದ್ದೆ//



ನಿನ್ನ ಕನಸಲ್ಲಿ ನನ್ನ ಜಾಗರಣೆ,
ಹುಡುಕುವವರಿಗೆ ನಾನು ನಿನ್ನ ಕಣ್ಕನ್ನಡಿಯಲಿ ಸಿಗದಿದ್ದರೆ ನನ್ನಾಣೆ/
ನಿನ್ನ ಭಾವದರಮನೆಯಲ್ಲಿ ನಾ ಸದಾ ಬಂಧಿ,
ನನ್ನ ಖಾಯಂ ವಿಳಾಸ ನಿನ್ನ ಬೆಚ್ಚನೆ ಎದೆಯೇ ತಾನೇ?//


ಕನಸೇ ಯಾವ ರಾಗದಲಿ ನಾ ಹಾಡಲಿ? ಎದೆಯ ಕವಿತೆ,
ಮನಸೇ ಯಾವ ಮಾತಿನಲಿ ನಾ ಹೇಳಲಿ? ಮನದ ಚರಿತೆ/
ನೀನಿಲ್ಲದೆ ಖಾಲಿ ಒಲವ ಖಾತೆ,
ನನ್ನ ತಳಮಳ ಹೇಳಲಾಗದೆ ನಾ ಸೋತೆ//