17 December 2012

ನಿರಂತರ ನನ್ನೆದೆಯಲ್ಲಿ ನಿನ್ನದೆ ಧ್ಯಾನ......

ಕನಸಾದ ಆಸೆಗಳೆಲ್ಲ ಗಾಳಿಪಟದಂತೆ ಮನದ ಬಾನಗಲ ರಂಗು ತುಂಬಿ ಹಾರಾಡುವಾಗ..... ನಲಿವ ಹನಿಸುವುದರ ಜೊತೆಜೊತೆಗೆ ನಯನಗಳಲ್ಲಿ ನೋವಿನ ಹನಿಗಳನ್ನೂ ಉಕ್ಕಿಸುತ್ತಿದೆ, ಕಾತರಕೆ ಕೊನೆಯಿಲ್ಲ ಆತುರದ ಮಾತಲ್ಲ.... ನೋವು ಗೊತ್ತಿರೋದು ಕೇವಲ ಕಾದು ಕುಳಿತ ಅಪೂರ್ಣ ಕನಸಿಗೆ ಸಂಕಟದ ಹೊರೆಹೊತ್ತ ಭಾವುಕ ಮನಸಿಗೆ/ ಮೋಡ ಮುಸುಗಿದ ಬಾನಿನಂಚಿನಲ್ಲಿ ಬೆಚ್ಚಗೆ ಹೊಳೆವ ಭಾನುವಿನ ಕಣ್ಣಲ್ಲಿ ನಿನ್ನದೆ ಪ್ರತಿಬಿಂಬ.... ಮನದ ಹಿತ್ತಲಿನಲ್ಲಿ ಅರಳಿದ್ದ ಕನಸಿನ ಸುಮಗಳಿಗೆ ನನ್ನ ಕಣ್ಣುಗಳಷ್ಟೆ ಅನುಗಾಲದ ಮಾಲಿಗಳು// ಮನಸಿನ ಕವಲಿನಲ್ಲಿ ಕೊನರೊಡೆದಿದ್ದ ಕನಸುಗಳಿಗೆಲ್ಲ ಹೋಗಿ ಸೇರುವ ಗುರಿಯತ್ತ ಯಾವುದೆ...... ಗೊಂದಲಗಳಿರಲಿಲ್ಲ ಗೊತ್ತ?, ಬಾನ ಮನಸೊಳಗೂ ತೀರದ ನೋವಿನ ಮೋಡ ಮಡುಗಟ್ಟಿ ಮಳೆಯ ನಯನದ ಹನಿಗಳಾಗಿ ಹನಿಯುತ್ತಿವೆ.... ಶಿಶಿರದ ಕಾತರ ಹೇಮಂತದಲ್ಲಿ ಚಳಿಯಾಗಿ ಮನ ನಡುಗುವಾಗಲೂ ನನ್ನ ನೇತ್ರಗಳಲ್ಲಿ ನಿನ್ನ ನೆನಪುಗಳದೆ ವರ್ಷಧಾರೆ/ ಮರೆತು ಮನಸು ಹಾಡಿದ ಸಂತಸದ ಪದಗಳಲ್ಲಿಯೂ ನಿನ್ನ ನೆನಪುಗಳೆ ನುಗ್ಗಿ ವಿಷಾದ ಮತ್ತೆ ನನ್ನನಾವರಿಸಿದೆ....... ನೆನ್ನೆ ಸುರಿದ ಮಳೆಯಲ್ಲಿ ಮೊದಲಿನ ಆರ್ದ್ರತೆಯಿಲ್ಲದಿದ್ದರೂ ನಿನ್ನ ನೆನಪಿನ ತಂಪಿತ್ತು// ಮಳೆಯಲ್ಲಿ ಜಿನುಗುವ ಹನಿಗಳ ಅಂತರಾಳದಲ್ಲಿ ಇಳೆಯೆಡೆಗೆ ಅಂಕುರಿಸಿದ ಇನಿತು ಪ್ರೀತಿಗೆ ಕಾರಣ ನೂರಿದೆ.... ಕಾದಿರಿಸಿದ ಎದೆಯ ಜಾಗದಲ್ಲಿ ನಿನ್ನ ಹೆಸರಿನ ಹಚ್ಚೆಯಿದೆ.... ಅದರ ಹಿಂದೆಯಿರುವ ಮೃದು ಭಾವಗಳ ಹೃದಯದಲಿ ನಿನ್ನೊಲವ ಗೆಲ್ಲುವ ಇಚ್ಛೆಯಿದೆ, ಕಾದು ಕುಳಿತಿದ್ದ ವೈದೇಹಿಗೂ ರಾಮ ಭರ್ತ್ಸನೆ ತಪ್ಪಲಿಲ್ಲ ರಾಧೆ ಶ್ಯಾಮನಿಗಾಗಿ ವ್ಯರ್ಥ ಬಾಳು ಪೂರ ನಿರೀಕ್ಷಿಸ ಬೇಕಾಯಿತಲ್ಲ.... ಅವರ ಮುಂದೆ ನನ್ನದೇನು ಮಹಾ ಹೇಳು?/ ಇರುಳಲ್ಲಿ ಪೂರ್ಣ ಶಶಿಗೆ ಶರಣಾಗದೆ ಮಿನುಗುತ್ತಲೆ ನನ್ನೊಲವ ಕಾತರದಂತೆ ಕೆಲವು ತಾರೆಗಳು..... ಇನ್ನೂ ಹೊಳೆಯುತ್ತಿವೆ, ಕಡು ಶಾಪಕ್ಕೆ ಗುರಿಯಾದ ಚಂದ್ರ ಮಾಸಕ್ಕೊಮ್ಮೆ ಮಾಸುತ್ತಾ ಹೋಗಿ ಮರೆಯಾಗಿ..... ಮತ್ತೆ ಚಿಗುರುವಂತೆ ನನ್ನೆದೆಯ ಭಾವಗಳಿಗೂ ಅಕಾಲ ಗ್ರಹಣ ಕವಿದಿದೆ// ಕಾರಣವಿಲ್ಲದೆ ಕದಲುವ ಕನಸಿನ ಪ್ರತಿ ಕದಲಿಕೆಯಲ್ಲೂ ನಿನ್ನ ಮೆಲು ಮಾತುಗಳ ಕನವರಿಕೆಗಳಿವೆ.... ಮುಗಿಲ ಮೃದು ಹನಿಗಳ ಮತ್ತಲ್ಲಿ ಮೈಮನ ಇರುಳಲ್ಲಿ ಕನವರಿಸಿದಾಗ ನೆನಪಾದದ್ದು ನಿನ್ನ ಮಂದಸ್ಮಿತ, ಸ್ವಲ್ಪ ದೂರ ನನ್ನೊಂದಿಗೆ ಜೊತೆಗೆ ಹೆಜ್ಜೆ ಹಾಕಿದ್ದ ನಿನ್ನ ಉಸಿರ ಘಮ ಆಗ ನನ್ನಾವರಿಸಿದ್ದು..... ಇನ್ನೂ ನನ್ನ ಸುತ್ತಲೆ ಸುಳಿಯುತ್ತಿದೆ/ ಕಾದು ಕುಳಿತುಕೊಳ್ಲುವುದು ಸುಖ ನಿಜ ಆದರೆ ಆ ಹೊತ್ತೆಲ್ಲ ಮುಳ್ಳಿನ ನೆಲಹಾಸಿನ ಮೇಲೆಯೆ ಕೂತಿರಬೇಕಲ್ಲ... ಅದನ್ನೊಮ್ಮೆ ಊಹಿಸಿ ನೋಡು, ಮನದ ಕತ್ತಲ ಕೋಣೆಯಲ್ಲಿ ಹಚ್ಚಿದ ಕಿರು ಕಂದೀಲು ದೀಪದ ಬೆಳಕಲ್ಲಿ ನಿನ್ನ ಕಣ್ಗಳದೆ ಹೊಳಪು.... ಕದಡದ ಏಕಾಂತದ ಅಡಿಪಾಯವಿರುವ ಸ್ವಪ್ನ ಸರೋವರದಲ್ಲಿ ಆಗಾಗ ಏಳುವ ಆತಂಕದ ಅಲೆಗಳಿಗೆ ಅಡೆತಡೆಯಿಲ್ಲ..... ಮಾರ್ದವ ಮೌನದ ದಾಸ ನನ್ನ ಮನ ನಿರಂತರ ನನ್ನೆದೆಯಲ್ಲಿ ನಿನ್ನದೆ ಧ್ಯಾನ ಅನುಕ್ಷಣ//

15 December 2012

ಮೌನ ಮುರಿದ ಮಾತಿನ ಹರಿವಿನ ನಡುವೆ......

ಜ್ಞಾಪಕದ ಗೋಳವನ್ನು ಕೈಯಲ್ಲಿ ಹಿಡಿದು ನಿನ್ನ ನೆಲೆಯನ್ನ ಅದರಲ್ಲಿ ಹುಡುಕುತ್ತಿರುವ..... ನನ್ನ ಕಳವಳದ ಕೊನೆಗೆ ಇರುವುದು ಕೇವಲ ನಿರಾಸೆಯ ಕುರುಹು, ಮತ್ತೆ ಮತ್ತೆ ಮರುಕಳಿಸಿ ಮನವ ಕಾಡುವ ಮೌನದ ಮಾತ ಹನಿಗಳೆಲ್ಲ.... ಮನಸಿನ ಮೋಡದೊಳಗೆ ಮಡುಗಟ್ಟಿವೆ/ ಇಬ್ಬನಿಯ ತೆರೆ ಕರಗಿ ಹನಿ ನೆಲ ಮುಟ್ಟುವ ಹೊತ್ತಿಗೆ ಕನಸೊಡೆದ ಮನಸಿಗೆ ನಿನ್ನ ನೆನಪಾಯ್ತು.... ಕಡಿವಾಣವಿಲ್ಲದ ಕನಸಿನ ಕುದುರೆ ಅನುಮಾನವಿಲ್ಲದೆ ನಿನ್ನೆದೆಯ ಗುರಿಯತ್ತಲೆ ದೌಡಾಯಿಸುತ್ತಿದೆ, ಕನಸ ಕಡಲು ಅಗಾಧವಾಗಿದ್ದರೂ ನನಗೆ ನಿರೀಕ್ಷೆ ಹಾಯಿದೋಣಿಯೇರಿ.... ಕೇವಲ ಕೈ ಹುಟ್ಟಿನ ಆಸರೆಯಿಂದಲೆ ಅದನ್ನ ದಾಟುವ ಕಷ್ಟಸಾಧ್ಯ ಹಂಬಲ// ಕನಸಿಗೆ ದುಗ್ಗಾಣಿಯ ಖರ್ಚಿಲ್ಲ ಅದಕ್ಕೇನೆ ಈ ಜುಗ್ಗ ಮನಸು ಹಗಲಲ್ಲೂ.... ಬಿಟ್ಟಿ ಸಿಗುವ ಸ್ವಪ್ನಗಳ ಸೂರೆ ಹೊಡೆಯುವ ಅವಕಾಶ ತಪ್ಪಿಸಿಕೊಳ್ಳಲ್ಲ!, ಮನಸಿನ ತುಮುಲಗಳ ಜೊತೆಗೆ ಜೂಟಾಟವಾಡುತ್ತಿರುವ ಭಾವ ತೀವೃತೆಗಳಲ್ಲೆಲ್ಲ..... ಗೊಂದಲದ ಹಾಯಿದೋಣಿಗಳು ಓಲಾಡುತ್ತಿವೆ/ ಕಳವಳಗೊಂಡ ಮನಕ್ಕೆ ನಿನ್ನ ಬಿಂಬ ಕನಸಿನಲ್ಲಿ ಕಾಣುವ ಕ್ಷಣವಷ್ಟೆ..... ತಂಪಿನ ಅನುಭವವಾಗುತ್ತದೆ, ಎಲ್ಲ ಚೌಕಟ್ಟುಗಳ ಮೀರಿ ಕಟ್ಟುಪಾಡುಗಳೆಲ್ಲವನ್ನೂ ನೀಲಾಗಸಕ್ಕೆ ತೂರಿ.... ಕೇವಲ ನಿನ್ನ ನೆರಳಿನ ಗುರುತು ಹಿಡಿದು ನಡೆಯುತ್ತಿದ್ದವನಿಗೆ ನಡುನೆತ್ತಿ ಮೇಲೆ ಸೂರ್ಯ ಬಂದ ಹೊತ್ತು..... ನೆರಳಿನ ಜಾಡು ಕಾಣಿಸದೆ ಕಂಗಾಲಾದಂತೆ ನೆನ್ನಿನಿರುಳು ಕನಸಾಗಿತ್ತು// ನಿರಾಳತೆಯೂ ಸುಖನಿದ್ರೆಯನ್ನ ತಂದು ಕೊಡಬಹುದು ಎನ್ನುವ ಸತ್ಯ.... ಕೆಸುವಿನೆಲೆಯ ಮೇಲಿನ ನೀರ ಹನಿಯಾಗಲು ನಿರ್ಧರಿಸಿದ ನೆನ್ನಿನಿರುಳ ಸುಖನಿದ್ರೆಯಲ್ಲಿ ಸಾಬೀತಾಯ್ತು, ಸರಳವಲ್ಲದ ಬಾಳ ಹಾದಿಯಲ್ಲಿ ಸಿಗುವ ಮುಳ್ಳುಗಳ ನಡು ನಡುವೆ...... ನಿನ್ನ ನಗುವ ಹೂಗಳನ್ನ ಹುಡುಕುವ ನನ್ನ ಮನ ಮರುಳು/ ಇನ್ನೊಬ್ಬರ ಕನಸುಗಳ ಸಾಕಾರದಲ್ಲಿ ಮೂಕ ಪ್ರೇಕ್ಷಕನಾಗುವಾಗ.... ನನ್ನಲಿರುವ ಕೊರತೆ ಕಾಡುವುದು ನನ್ನೆದೆಯ ದೌರ್ಬಲ್ಯ, ನಿರೀಕ್ಷೆ ಮನಸಿನ ಜೊತೆ ಬಿಡದ ತನಕ ನಾಳಿನ ಕನಸಿನ ಆಸರೆ ಕೈತಪ್ಪಿ ಹೋಗದ ತನಕ..... ನನ್ನ ಮನ ಸದಾ ನಿನ್ನ ನೆನಪಲ್ಲೆ ಭಾವುಕ// ಕಾವಿಳಿದ ಬಾನು ಸುರಿವ ತಂಪಿನ ನಿಲ ವರ್ಷದಲ್ಲಿ ತೋಯ್ದ ಭೂಮಿಯೆದೆಯೊಳಗಡೆ.... ಬೆಚ್ಚನೆ ನೆನಪುಗಳ ಸಂಚಿತ ಸಂಗ್ರಹದ ದಾಸ್ತಾನಿದೆ, ಬೆಳೆದು ಬಲವಾಗಿರುವ ಒಲವ ಹೆಮ್ಮರದ ತುದಿಯಲ್ಲಿ ನಿರೀಕ್ಷೆಯ ಸ್ವಚ್ಛ ಗಾಳಿಗಾಗಿ ಕಾತರಿಸುವ.... ಕೊಂಬೆ ನಿನ್ನೆದುರು ಮಾತ್ರ ಸಮ್ಮತಿಯಿಂದ ಕಷ್ಟಪಟ್ಟಾದರೂ ಬಾಗಲಿದೆ/ ಮೌನ ಮುರಿದ ಮಾತಿನ ಹರಿವಿನ ನಡುವೆ ತೇಲುತ್ತಿರುವ ನೆನಪಿನ ಕಾಗದದ ದೋಣಿ.... ಕೈಲಾದಷ್ಟು ದೂರ ಮುಳುಗುವ ಮುನ್ನ ಸಾಗಲಿದೆ, ಸಂಶಯಕ್ಕೆ ಎಡೆಗೊಡದೆ ವರ್ತಿಸುತ್ತಿದ್ದ ಕನಸುಗಳೆಲ್ಲ ಸಂಕಟದಲ್ಲಿ ಮುಳುಗಿ ಉಸಿರು ಕಟ್ಟಿ ನರಳಲಿಕ್ಕೆ.... ನನ್ನ ಕುರುಡು ನಂಬಿಕೆಗಳೆ ನೇರ ಕಾರಣ//

ನೋವಿನ ಮಾ ನಿಷಾದದಲ್ಲಿಯೆ......

ವಿರಹ ಯಾನಕ್ಕೆ ಸಿಕ್ಕವ ಸುಮ್ಮನೆ ಇದ್ದ ನಾ ಕವಿಯಾದೆ ನೆನಪಿನ ಬುತ್ತಿ ಬಿಚ್ಚುತ ಕೂತ ನನ್ನ ಕಹಿ ಉಣಿಸಿನ ನಡುವೆ...... ನೀ ಕೊಂಚ ಮಾತ್ರ ಅನಿರೀಕ್ಷಿತವಾಗಿ ಸಿಗುವ ಸವಿಯಾದೆ, ಇನ್ನೇನಿದ್ದೀತು ಹೇಳು ನನ್ನ ತಪ್ತ ಮನದ ಇರಾದೆ? ನಾವಿಬ್ಬರೂ ಇಬ್ಬರೆಂದು ಕೊಂಡಿರಲಿಲ್ಲ ನಿನ್ನೊಂದಿಗೆ ನಾ ಸೇರಿ ಹೋಗಿದ್ದ ಮೇಲೆ..... ನನ್ನ ಮನಸೊಂತರ ನಿನ್ನ ಕನಸ ಕೃಷ್ಣನಲ್ಲಿ ಐಕ್ಯವಾದ ರಾಧೆ/ ಆತ್ಮ ವಿಮರ್ಶೆಯ ಧಶರಥನಾಗಿದೆ ಮನಸು ಬಹಿರಂಗ ಒಡ್ಡೋಲಗಗಳಲ್ಲಿ ನಿರ್ಭೀತವಾಗಿ ಮನದ ಕನ್ನಡಿಯಲ್ಲಿ.... ಮುಖದ ಕನ್ನಡಿಯನ್ನ ನೋಡಲಿದು ಕಲಿತಿದೆ ತಪ್ಪುಗಳನ್ನ ಕಂಡು ಕೊಳ್ಳುವ ಪರಿಯಲ್ಲಿದು ಬಲಿತಿದೆ, ಮನ ಕೈಕೇಯಿ ಅದರ ಕಿವಿ ಕಚ್ಚುವ ಆಕ್ಷಾಂಶೆಯ ಸ್ವಪ್ನಗಳೆ ಮಂಥರೆ..... ಲೋಕಕ್ಕೇನು ನಷ್ಟ ಹೇಳು ನಾನು ನಿನ್ನ ನೆನಪ ನಿಲ್ದಾಣದಲ್ಲಿಯೆ ಶಾಶ್ವತವಾಗಿ ನಿಂತರೆ?// ಮಂದ್ರ ಮಾರುತದ ಜೊತೆಯಲ್ಲಿ ಮೆಲುಮಾತನ್ನಾಡುವ ಮರದ ಎಲೆಗಳ ಎದೆಯಲ್ಲೆಲ್ಲ ಸುಪ್ತ ಸ್ವಪ್ನಗಳದ್ದೆ ಕನವರಿಕೆ...... ಚಳಿಯ ನಡುಕದ ನಡುವೆ ಮನದ ಬನದಲ್ಲಿ ನಿನ್ನ ನೆನಪಿನ ಸುಮ ಅರಳಿದ್ದು, ನನ್ನೆದೆಯೊಳಗೆಲ್ಲ ಪರಿಮಳವನ್ನೇಳಿಸುತ್ತಿದೆ/ ಇಬ್ಬನಿಯ ಹನಿಯೊಳಗೆ ಅಡಗಿರುವ ಇನಿದನಿಗೆ ಮೌನ ಸಮ್ಮತಿಯಿತ್ತ ಇಳೆ..... ಸುಮ್ಮನೆ ಮಾತು ಮರೆತು ಇಂದು ನಸುಕದರಲ್ಲಿ ಮಿಂದಳೆ?, ಬಾನ ಒಲವಲ್ಲಿ ತನ್ಮಯ ಲೀನಳಾಗಿ ಅದರ ತಂಪಲ್ಲಿ ತೋಯ್ದು ನಿಂದಳೆ? ನೋಡಿ ಅವಳ ಮುಖದಲ್ಲದೇನು ಸಂತೃಪ್ತಿಯ ಕಳೆ!// ಮನಸು ಚಂಚಲಗೊಳ್ಳುವ ಕ್ಷಣಗಳಲ್ಲೆಲ್ಲ ಹಿಡಿತ ಮೀರಿ ಕಣ್ಣು ತೇವಗೊಳ್ಳುವ ಪರಿಗೆ...... ನನ್ನೊಳಗೇನೆ ನನಗೆ ಪ್ರಶ್ನೆಗಳೇಳುತ್ತಿವೆ, ಸಂಕಟಗಳನ್ನೆಲ್ಲ ನುಂಗಿ ಸಂಭ್ರಮದ ಹಾದಿ ಹುಡುಕುವ ಕ್ಷಣದಲ್ಲಿಯೆ ಕನಸಿನ ಪುಗ್ಗೆಯೊಡೆದು ಚೂರಾಗಿ ಹೋದರೂ... ನಿರೀಕ್ಷೆಗಳ ಸೆಲೆ ನನ್ನೆದೆಯಂಗಳದಲ್ಲಿ ಬತ್ತಿ ಹೋಗದೆ ಹಾಗೆಯೆ ಉಳಿದಿದೆ/ ಸಂಕಟಗಳನ್ನೆಲ್ಲ ನುಂಗಿ ಸಂಭ್ರಮದ ಹಾದಿ ಹುಡುಕುವ ಕ್ಷಣದಲ್ಲಿಯೆ ಕನಸಿನ ಪುಗ್ಗೆಯೊಡೆದು ಚೂರಾಗಿ ಹೋದರೂ.... ನಿರೀಕ್ಷೆಗಳ ಸೆಲೆ ನನ್ನೆದೆಯಂಗಳದಲ್ಲಿ ಬತ್ತಿ ಹೋಗದೆ ಹಾಗೆಯೆ ಉಳಿದಿದೆ, ಮನಸು ಚಂಚಲಗೊಳ್ಳುವ ಕ್ಷಣಗಳಲ್ಲೆಲ್ಲ ಹಿಡಿತ ಮೀರಿ ಕಣ್ಣು ತೇವಗೊಳ್ಳುವ ಪರಿಗೆ...... ನನ್ನೊಳಗೇನೆ ನನಗೆ ಪ್ರಶ್ನೆಗಳೇಳುತ್ತಿವೆ// ಮರೆತು ಹೋಗದ ನೆನಪು ನೀನು ಇನ್ನೆಲ್ಲರತ್ತ ನಿರ್ಲಕ್ಷಿತನಾಗಿರುವ ನನಗೆ..... ನಿನ್ನ ನನ್ನೊಳಗಿಂದ ತೊಳೆದು ಹಾಕಲು ಯಾವುದೆ ಭಾವ ಮಾರ್ಜಕಗಳು ಬಳಿಯಿಲ್ಲವಲ್ಲ!, ಕಥೆ ಬಗೆ ಹರಿದರೂನು ಕೊನೆಯಾದದ್ದು ವಿಷಾದದಲ್ಲಿಯೆ ಮನಸೊಳಗೆ ನಿರಾಸೆಯ ನೋವಿನ ಮಾ ನಿಷಾದದಲ್ಲಿಯೆ/ ಮನಸ ಖಾಲಿ ಹಾಳೆಯ ಮೇಲೆ ಬರೆದೇನು ಕನಸ ಹೃದಯದ ಭಿತ್ತಿಯ ಮೇಲೆ ಕಣ್ಣ ಮೊನೆಯಿಂದಲೆ ಕೊರೆದೇನು.... ಆದರೆ ಅದನ್ನ ಓದಿ ಸಂಭ್ರಮಿಸ ಬೇಕಿದ್ದ ನೀನೆ ನನ್ನ ಪರಿಧಿಯಿಂದ ನಾಪತ್ತೆಯಾದ ಮೇಲೆ ನನಗಿನ್ನೇನಿದ್ದರೇನು?, ನಿನ್ನೆದೆಯಲ್ಲಿ ಕಾಲಡಿಯ ಕಸವಾಗಿರುವ ನನ್ನ ಕನಸು..... ನನ್ನೆದೆಯ ಒಳಮನೆಯಲ್ಲಿ ಮಾತ್ರ ಅಮೂಲ್ಯ ಕಸವರ//

17 November 2012

ನಿನ್ನ ಹೊರತು ಇನ್ಯಾರಿಗೂ......


ಎಂದೆಂದೂ ಒಂದು ಸೇರಲಾರೆವೆಂದು ನಿರೀಕ್ಷೆಯ ಹಳಿಗಳಿಗೆ ಅರಿವಿದ್ದರೂ..... ಅದರ ಮೇಲೆ ಬಾಳಬಂಡಿ ನಿಲ್ಲದೆ ಓಡಲೆ ಬೇಕು, ಸಂಕಟ ಸಂತಸದ ಬೋಗಿಗಳನ್ನ ಸರಿಸಮನಾಗಿ ಎಳೆದೊಯ್ಯಲೇಬೇಕು.... ತನ್ನ ನಿಟ್ಟುಸಿರಿದ್ದರೂ ನೂರಾರು ತಾನು ಬಿಡುತ್ತಿದ್ದರೂ ಹಾದಿಯುದ್ದ ಅರ್ತನಾದದ ಬಿಸಿಯುಸಿರು/ ಆಗಾಗ ಸಂಭ್ರಮದ ಸೀಟಿ ಹೊಡೆಯುವ ಮನಸಾಗೋದೂ ಹೌದು ಎಲ್ಲೆ ಮೀರಿದಾಗ ಖುಷಿ.... ವಿಧಿ ಅಘಾತದ ಸರಪಳಿಯನ್ನ ಎಳೆದು ಒತ್ತಾಯವಾಗಿ ನಿಲ್ಲಿಸಲೂಬಹುದು, ತುರ್ತು ಅಘಾತದ ಸರಿಗೆ ಎಳೆದಾಗ ನಿಲ್ಲಿಸದೆ ಮುನ್ನುಗ್ಗುವಂತಿಲ್ಲ ಅಂತಿಮ ನಿಲ್ದಾಣ ಎಂದಿಗೂ ಸೇರೆನೆಂಬ ಹಟ ಹಿಡಿಯುವಂತಿಲ್ಲ..... ವಿಧಿ ಹೊಡೆದಟ್ಟಿದಲ್ಲಿ ಹೋಗಲೆ ಬೇಕಾದ ನಿರ್ಜೀವ ಯಂತ್ರಕ್ಕೆ ಸಮಾನ ಮನಸು ಮತ್ತೆ ಒಂದಾಗಲಾರೆವು ಎಂಬ ಖಚಿತ ಸುಳಿವಿರುವಾಗ ಅದೆಂದೋ ಕರಟಿ ಹೋಗಿವೆ ಕಣ್ಣೊಳಗಿನ ಕೋಟಿ ಕನಸು// ಕನಸುಗಳಿಲ್ಲದ ಕುರುಡು ಹಾದಿಯಲ್ಲಿ ಸತ್ತ ಮನಸಿನ ಅಂತಿಮಯಾತ್ರೆ ಸಾಗಿದ ಬರಡು ಬೀದಿಯಲ್ಲಿ.... ಒಂಟಿತನವನ್ನು ಅನುಕ್ಷಣ ಮಾರುವ ಮುರುಕು ಮೌನದ ಅಂಗಡಿ ಅನುಗಾಲವೂ ತೆರೆದೆ ಇದೆ, ಪ್ರತಿ ಸಂಜೆ ಕನವರಿಸುವ ಬೆಳಕಿನ ಕನಸು ಕಡು ಕತ್ತಲಿನಲ್ಲಿಯೆ..... ನಿರಾಸೆಯಲ್ಲಿ ಕೊನೆಗೊಳ್ಳುತ್ತದೆ/ ಉದುರಿದ ಕನಸಿನ ಪಕಳೆಗಳೆಲ್ಲ ಒಲವ ಗಿಡಕ್ಕೇನೆ ಗೊಬ್ಬರವಾಗಿ..... ತನ್ನ ಜಾಗದಲ್ಲಿ ಮತ್ತೊಂದು ಸುಮವರಳಿದ್ದನ್ನು ಕಂಡು ಒಳಗೊಳಗೆ ನರಳುತ್ತಲೆ ನಗುವ ನಟಿಸುತ್ತಿದೆ, ನಿರ್ಮಲ ಮನಸಿಗೆ ಬಿದ್ದ ಕಂಬನಿಯ ಪುಟ್ಟ ಹನಿಯಿಂದ ಬಾಳಿನ ಭಿತ್ತಿಯ ಮೇಲೆ.... ಢಾಳಾದ ಕಲೆಯೆದ್ದಿದೆ// ಇನ್ಯಾರನ್ನೋ ಮುಟ್ಟಿ ಅವರೆದೆಯ ಕಲಕುವ ನನ್ನ ಅನುಗಾಲದ ವೇದನೆಗಳಿಗೆ.... ನಿನ್ನ ಕನಸಿನಲ್ಲಿ ಗೇಣು ಜಾಗವೂ ಇಲ್ಲದ್ದು ವಿಚಿತ್ರವಾದರೂ ಸತ್ಯ, ಕರಗದ ಕಲ್ಲಿಗೂ ಒಂದು ಮನಸಿರಬಹುದು ಅದರೊಳಗೂ ಬಾಡದ ಒಂದು ಕನಸಿರಬಹುದು..... ನನ್ನ ನಿರೀಕ್ಷೆ ತೀರ ಹುಸಿ ಹೋಗಲಿಕ್ಕಿಲ್ಲ/ ಪ್ರೀತಿಸುವಷ್ಟಲ್ಲದಿದ್ದರೂ ದ್ವೇಷಿಸುವಷ್ಟಂತೂ ನಾನು ಕೆಟ್ಟವನಿದ್ದಿರಲಿಕ್ಕಿಲ್ಲ ಅನ್ನಿಸುತ್ತೆ.... ಇಲ್ಲದಿದ್ದರೆ ತೀವೃವಾಗಿ ನನ್ನನಿಂದು ದ್ವೇಷಿಸುವ ನಿನಗೂ ಒಂದೊಮ್ಮೆ ನಾನು ಅಷ್ಟು ಇಷ್ಟವಾಗುತ್ತಿದ್ದೆನ?, ಮನಸು ಪಿಸುಗುಡುವ ಪ್ರತಿ ಗುಟ್ಟಲ್ಲೂ ನೀನೆ ನೀನಾಗಿ ಉಳಿದಿರುವಾಗ... ನನ್ನೊಳಗೆ ಯಾವುದೆ ಸಂಗತಿ ಗುಟ್ಟಿನ್ನೆಲ್ಲಿ?// ಪ್ರತಿ ಬಾರಿ ನಿನ್ನ ನೆನಪು ಸುಳಿವಾಗ ನನ್ನೊಳಗೆ ಮಿಡುಕಾಟ ಮೂಡಿಸುವ..... ಮಧುರ ಭಾವಗಳು ಖಂಡಿತ ನನ್ನ ಹಿತಶತ್ರುಗಳು, ಗುಜುರಿಗೆ ಹಾಕುವಷ್ಟು ಹಾಳಾಗಿ ಹೋಗಿರುವ ಹೃದಯ ನನ್ನದು.... ನಿನ್ನ ಹೊರತು ಇನ್ಯಾರಿಗೂ ಅದರ ಮೌಲ್ಯ ಅರಿವಾಗದು/ ಕನಸ ಕರಗಿಸುವ ಕಡುಗಪ್ಪು ಇರುಳೆ ಹಗಲು ಕನಸು ಕಾಣುವ ನಾನೇನಾದರೂ.... ನಾನು ನಿನ್ನ ಕಣ್ಣಿಗೂ ಮರುಳೆ?, ತುಸುವಾದರೂ ಬೀಳಲಿ ಬರಡು ಬಾಳಲ್ಲಿ ಕನಸು ಮೌನದೊಂದಿಗೆ ಮಾತಿಗೆ.... ಇದ್ಯಾತರ ಮುನಿಸು?//

12 November 2012

ನಾನೂ ನನ್ನಾ ಕ(ನ)ಸಾ..........!


"ಕರುನಾಡ ಕಸಾ ಕಣೆ...." ಅಂತ ಬೆಂಗಳೂರಿಗ ಮೂರು ರಸ್ತೆ ಸೇರುವಲ್ಲಿ ತನ್ನ ಆಸನ(?) ಊರಿ ಗಂಟಲು ಹರಿದು ಹೋಗುವಷ್ಟು ಎತ್ತರದ ಧ್ವನಿಯಲ್ಲಿ ಇನ್ನು ಮುಂದೆ ನಿರಾತಂಕವಾಗಿ ಊಳಿಡಬಹುದು. "ಕ...." ಅನ್ನುವ ಮಾತು ಸುದ್ದಿ ಸುಬ್ಬಪ್ಪಗಳ ನಾಲಿಗೆ ತುದಿಯಲ್ಲಿ ಹುಟ್ಟುವ ಮೊದಲೆ ಎಲ್ಲಿ "....ಸಾ!" ಎಂದು ಅಮಾಯಕ ಮಗುವಿನಂತೆ ಮುಗ್ಧತೆ ನಟಿಸಿ, ಯಾವುದೋ ಕೇಳ ಬಾರದ ಕೇಳಿಸಿಕೊಂಡವರಂತೆ ಇಂತಹ ಘಾತುಕ ಪ್ರಶ್ನೆ ಕೇಳಿದ ಬದ್ಮಾಶರನ್ನು ಕೇವಲ ಕಣ್ಣೋಟದಲ್ಲಿಯೆ ಸುಟ್ಟು ಬಿಡುವ ದೂರ್ವಾಸರಂತೆ ದಿಟ್ಟಿಸುತ್ತಾ ಬಾಯಲ್ಲಿ ಮಾತ್ರ ಮೇಲಿನಂತೆ ಕೇಳುವ ಮಾನ್ಯ ಮುನ್ಸಿಪಾಲ್ಟಿ ಕಮೀಶನರ್ರನ್ನೂ, ಪೂಜ್ಯ ಮೇಯುವವರನ್ನೂ ಮೂಗಿದ್ದವರಿಗೆ ಖಡ್ಡಾಯ ನಿಷೇಧ ಹೇರಲೆ ಬೇಕಿರುವ "ಕಸ ಪೀಡಿತ" ಬೆಂದಕಾಳೂರಿನ ಬಿಟ್ಟಿ ದರ್ಶನ ಮಾಡಿಸಿ ಆದಷ್ಟು ಅವರ ಅಂತಃಚಕ್ಷುಗಳನ್ನ ತೆರೆಸುವ ಪ್ರಯತ್ನ ಮಾಡೋಣ ಅಂತಿದೀನಿ. ನಿಮ್ಮ ನಿಮ್ಮ "ಅತಿ ಸ್ವಚ್ಛ ಬಡಾವಣೆ"ಗಳ ನಾರುವ ಕಟ್ಟಕಡೆಯ ಕಸದ ರಾಶಿಯ ಛಾಯಾಚಿತ್ರವನ್ನ ನೀವೂ ಇಲ್ಲಿನ ಗೋಡೆಯ ಮೇಲೇರಿಸಿ. ಈ ಪವಿತ್ರ ಕಾರ್ಯದಲ್ಲಿ ನಿಮ್ಮ ಕಿಂಚಿತ್ ಸೇವೆಯನ್ನು ಮನಸ್ಸಿದ್ದಲ್ಲಿ ನೀವು ಸಲ್ಲಿಸಬಹುದು. ಕಮೀಶನ್ ವಸೂಲಿ ಸುಗ್ಗಿಯಲ್ಲಿ ಬೆದೆಗೆ ಬಂದ ಕುದುರೆಗಳಂತಾಗಿರುವ ಜನಪ್ರತಿ"ನಿಧಿ"ಗಳಿಗೆ ಕಸದವರೆಗೂ ಹೋಗೊ ಪುರುಸೊತ್ತಿಲ್ಲ ಪಾಪ! ನಾವೆ ಯಾಕೆ ಅವರಿದ್ದಲ್ಲಿಗೆ ಕಸವನ್ನ ಕೊಂಡೊಯ್ಯಬಾರದು?!

11 November 2012

ಸಾವಿರದ ಸಾವಿರ ಕನಸುಗಳು.....


ಕೇಡಿಗ ಮನಸು ಕಾಣುವ ಕನಸಿನಲ್ಲಿ ನಿನ್ನ ನೆನಪುಗಳೆ ಭರಪೂರ ಉಕ್ಕಿ ನನ್ನನ್ನ ಸಂತಸಕ್ಕಿಂತ ಸಂಕಟದಲ್ಲಿ...... ಬಿಕ್ಕಿಬಿಕ್ಕಿ ಅಳುವಂತೆ ಕಾಡುತ್ತದೆ, ಎದೆಗೂಡಿನಲ್ಲಿ ಗೂಡು ಕಟ್ಟಿದ ನಿನ್ನೊಲವಿನ ಹಕ್ಕಿ..... ಅದೇಕೋ ನನ್ನೆದೆಯನ್ನೆ ಕುಕ್ಕಿಕುಕ್ಕಿ ನೋವಿನ ನೆತ್ತರನ್ನ ಉಕ್ಕಿ ಹರಿವಂತೆ ಮಾಡುತ್ತದೆ/ ಕೇದಿಗೆಯ ಘಮವೂ ಮಂದ ಸುರಗಿಯ ಪೋಣಿಸಿ ಸುರಿವ ಹೂಗಳ ಹಾರವೂ..... ಕಳೆದುಕೊಂಡಂತೆ ತನ್ನ ಚಂದ ನೀನನ್ನನ್ನಾವರಿಸಿದ್ದೀಯ, ಅದೇನೆ ಇದ್ದರೂ ನನ್ನುಸಿರ ಪ್ರೇಷಕ ಹೊಮ್ಮಿಸುವ ನೋವಿನ ಕಂಪನದ ಅಲೆಗಳು..... ನಿನ್ನೊಳಗೆ ಅಂತರ್ಧನಾಗಿ ಹೋಗಲಿ ಎಂದು ಸ್ವಪ್ನದಲ್ಲೂ ನಾನು ಶಪಿಸಲಾರೆ// ನಿನ್ನೆದೆಯ ಬೆಚ್ಛನೆಯ ಸಂಚಿತ ಖಾತೆಯಲ್ಲಿ ನಾನಿಟ್ಟಿದ್ದ ಒಲವ ದೀರ್ಘಾವಧಿ ಠೇವಣಿಗೆ.... ಒಂದೆ ಕಂತಿನಲ್ಲಿ ನೀನಿತ್ತಿರುವ ವಿರಹದ ಬಡ್ಡಿಯನ್ನ ಕೂತುಂಡರೂ ಕರಗಿಸಲು ನನಗೆ ಇದೊಂದು ಜೀವಮಾನ ಸಾಲದು!, ಕಾದು ಬಸವಳಿದ ಕಣ್ಣುಗಳದ್ದು ಖಂಡಿತಾ ತಪ್ಪಲ್ಲ ಕಂಬನಿಯನ್ನ ಹಿಡಿದಿಟ್ಟುಕೊಳ್ಳುವುದು..... ಈಗೀಗ ಅದರ ಕೈಯನ್ನೂ ಮೀರಿದ್ದು/ ಅಂಧಕಾರದೊಂದಿಗೆ ಹೊಂದಾಣಿಕೆಯೆ ಬದುಕಾಗಿದೆ.... ಮೌನಮಾತ್ರ ಮನಸಿನ ಮಾತಾಗಿದೆ, ಬಾಳು ಬೋಳಾಗದಿರಲು ಕನಸಿನ ಹಾದಿಯಂದು ತೆರೆದಿರಬೇಕು.... ಅಲ್ಲಿ ನಿರೀಕ್ಷೆಯ ಕಂದೀಲು ಹಿಡಿದು ಮನಸನ್ನಾವರಿಸಿದವರು ಜೊತೆಯಲ್ಲಿ ಹೆಜ್ಜೆ ಹಾಕಲು ಕಾದಿರಬೇಕು// ನೀನಿಲ್ಲದ ಒಂಟಿ ಬಾಳು ಭೀಕರ ನಾನೆ ಸ್ವತಃ ಕಟ್ಟಿಕೊಂಡು ಹೊಕ್ಕಂತಾಗಿದೆ..... ದುರ್ಭರ ದಟ್ಟ ಸಂಕಟದ ಕಾಡು, ನನ್ನೆದೆಯ ಭಾವವೆಲ್ಲ ಪದಗಳಾಗಿ ಹನಿದು..... ಈ ಹಾಡಿನಲ್ಲಿ ಹರಿದು ಬಂದಿದೆ ನೋಡು/ ಕೆಲವೊಮ್ಮೆ ಅನ್ನಿಸುತ್ತೆ ನಿನ್ನ ನಿರ್ಧಾರ ನಿಜವಾಗಲೂ ಸರಿಯಾಗಿಯೆ ಇತ್ತು..... ನನ್ನ ಹೆಗಲೇರಿದ್ದ ಶನಿ ನಿನ್ನನೂ ಆವರಿಸುವ ಮೊದಲೆ ನೀನಿಲ್ಲಿಂದ ಪಾರಾದೆ, ಆದರೆ ಅದೇನೆ ಇದ್ದರೂ ನಾನಂತೂ ಒಳಗೊಳಗೆ ಒಡೆದು ಚೂರಾದೆ.... ಮೌನದ ಚಿಪ್ಪಿನಲ್ಲಿ ಅಡಗಿದ್ದರೂ ನುಚ್ಚುನೂರಾದೆ// ಇಂಗಿ ಹೋದ ಕನಸಿನ ಪಸೆಯ ಕೊನೆಯ ಆರ್ದ್ರತೆಯಲ್ಲೂ ನನಗೆ.... ನಿನ್ನದೆ ಸ್ಪರ್ಶದ ಹುಡುಕಾಟವಿದೆ, ಬೆತ್ತಲೆ ಪಾದಗಳಲ್ಲಿ ನೋವಿನ ಸುಡು ಮರಳ ಮೇಲೆ ಮರುಳನಂತೆ ಹೆಜ್ಜೆ ಹಾಕಲು ನನಗಿರೋದು...... ನಿನ್ನೊಲವಿನ ಓಯಸಿಸ್ನಲ್ಲಿ ದಾಹವಾರಿಸಿಕೊಳ್ಳುವ ತೀರದ ಸುಂದರ ಸುಳ್ಳು ನಿರೀಕ್ಷೆಯ ಜೊತೆಯೊಂದೆ!/ ಮೋಹಕ ಸ್ವಪ್ನಗಳ ನಾವೆಯಲ್ಲಿ ಹುಟ್ಟು ಹಾಕುವ ಹುಚ್ಚಿನಲ್ಲಿ.... ನೀನು ಮರೆತು ಹೋದ ಚಂದದ ಗುಟ್ಟು ಬಹುಷಃ ನಾನೆ!, ಸಾವಿರದ ಸಾವಿರ ಕನಸುಗಳು ಕುಟುಕು ಜೀವ ಹಿಡಿದುಕೊಂಡಿರಲು..... ನಿರೀಕ್ಷೆಯ ಆತ್ಮಬಲವೆ ಕಾರಣ.//

ಶಾರದೆ ದಯೆ ತೋರಿದೆ.....















ನನ್ನ ಹಳೆಯ ನೆನಪುಗಳಲ್ಲೊಂದು ಗರಿ ದಸರೆಯ ಶಾರದಾ ಪೂಜೆಯಲ್ಲಿ ಹುದುಗಿ ಹೋಗಿದೆ. ನಾನು ಹುಟ್ಟಿದ್ದು ಘಟ್ಟದ ಮೇಲಿನ ತೀರ್ಥಹಳ್ಳಿಯಲ್ಲಾದರೂ ನನ್ನ ಬೇರುಗಳಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ನಮ್ಮಲ್ಲಿ ಶಾರದ ಪೂಜೆಯೆ ದಸರೆಯ ಮಹತ್ವದ ದಿನ, ಆಯುಧ ಪೂಜೆ ಹಾಗೂ ವಿಜಯ ದಶಮಿಗಿಂತಲೂ ಶಾರದೆಯನ್ನ ಆರಾಧಿಸುವ ದಿನ ನಮಗೆ ಆಚರಣೆಯ ದೃಷ್ಟಿಯಿಂದ ಶ್ರೇಷ್ಠವಾಗಿದೆ. ನಾವು ಶೃಂಗೇರಿ ಶಾರದಾ ಪೀಠದ ಅನುಯಾಯಿಗಳಗಿದ್ದು, ಅಲ್ಲಿನ ಗುರುಗಳೆ ನಮ್ಮ ಕುಲಗುರುಗಳಾಗಿರುವುದೂ ಕೂಡ ಈ ಪ್ರತ್ಯೇಕ ಶ್ರದ್ಧೆಗೆ ಕಾರಣವಾಗಿರಬಹುದು. ನಮ್ಮ ಮನೆಯ ಎಲ್ಲಾ ಧಾರ್ಮಿಕ ನಿಲುವುಗಳೂ ಶೃಂಗೇರಿ ಶಾರದಾ ಪೀಠದ ಅದ್ವೈತ ಸಭ್ಯತೆಗೆ ಅನುಸಾರವಾಗಿಯೆ ನಡೆಯುತ್ತಿದ್ದುದು ಆ ಕಾಲದಿಂದಲೂ ನಡೆಯುತ್ತ ಬಂದ ಪದ್ಧತಿ.


ಸಾಮಾನ್ಯವಾಗಿ ಮಧ್ಯಂತರ ರಜೆಯ ಕಾಲ ಅದಾಗಿರುತ್ತಿದ್ದರಿಂದ ಶಾಲೆಯೆಂಬ ಜೈಲಿನಿಂದ ತತ್ಕಾಲಿಕ ಪರೋಲ್ ಮೇಲೆ ಬಿಡುಗಡೆ ಸಿಕ್ಕು ಬಂದ ಖೈದಿಯ ಮನಸ್ಥಿತಿಯಲ್ಲಿ ನಾನಿರುತ್ತಿದ್ದೆ. ಅಮ್ಮ ನನ್ನನ್ನು ಆ ರಜಾವಧಿಯಲ್ಲಿ ತನ್ನ ತವರು ಮನೆಯಾದ ಸಾಗಿನಬೆಟ್ಟಿಗೆ ಕರೆದೊಯ್ಯುತ್ತಿದ್ದರು. ಶಾರದಾ ಪೂಜೆಯ ದಿನ ಮನೆಯಲ್ಲಿ ವಿಪರೀತ ಗೌಜಿ ಗದ್ದಲ ಏರ್ಪಡುತ್ತಿತ್ತು. ಮನೆಯ ದೇವರ ಮನೆಯನ್ನ ವಿಶೇಷವಾಗಿ ಅಲಂಕರಿಸಲಾಗುತ್ತಿತ್ತು. ನನ್ನ ಓರಗೆಯ ಸಹೋದರ ಸಂಬಂಧಿ ಹುಡುಗಿಯರಾದ ಕವಿತಾ, ಮಮತಾ, ಸುಷ್ಮಾ, ಅಮಣಿ ಎಲ್ಲರೂ ಹಿಂದಿನ ದಿನವೆ ದೇವರ ಮನೆಯ ಅಷ್ಟೂ ಪಾತ್ರೆ ಪಡಗ, ಕಾಲು ದೀಪಗಳನ್ನ ಹುಣಸೆ ಹಣ್ಣಿನಲ್ಲಿ ತಿಕ್ಕಿ ತಿಕ್ಕಿ ಹೊಳಪು ಬರುವಂತೆ ತೊಳೆದು ಒಣ ಬಟ್ಟೆಯಿಂದ ಒರೆಸಿಡುತ್ತಿದ್ದರು. ಅವರಿಗೆ ಪೂಜೆಯ ಹಿಂದಿನ ದಿನ ಮೈಮುರಿವ ಕೆಲಸ ಕಾದಿರುತ್ತಿತ್ತು. ನಮ್ಮದು ನಾಲ್ಕೆಂಟು ಒಕ್ಕಲುಗಳಿರುವ ತುಂಬು ಸಂಸಾರ. ಮನೆಯ ಎಲ್ಲಾ ಹಬ್ಬ ಹರಿದಿನಗಳಲ್ಲಿ ಒಕ್ಕಲುಗಳ ಮನೆಮಂದಿಯೂ ಬರುತ್ತಿದ್ದರಿಂದ ಎಲ್ಲರ ಊಟವೂ ಅವತ್ತು ನಮ್ಮಲ್ಲಿಯೆ.


 ಅವತ್ತಿಗೆ ಮುಖ್ಯವಾಗಿ ಮಾಡಲೆ ಬೇಕಾದ ಬುಟ್ಟಿಗಟ್ಟಲೆ ಉದ್ದಿನ ದೋಸೆಗಾಗಿ ಹಿಂದಿನ ದಿನವೆ ಸೇರುಗಟ್ಟಲೆ ನೆನೆಸಿಟ್ಟ ಅಕ್ಕಿ ಮತ್ತು ಉದ್ದನ್ನ ರುಬ್ಬುವ ಕಲ್ಲಿನಲ್ಲಿ ಹಾಕಿಕೊಂಡು ರುಬ್ಬಿಡ ಬೇಕಾಗಿತ್ತು. ಮರುದಿನ ಬೆಳಗ್ಯೆ ಚಟ್ನಿಗಾಗಿ ಸುಲಿದು ಒಡೆವ ಕಾಯಿಗಳ ರಾಶಿಯನ್ನ ತುರಿದು ತೆಗೆಯುವುದು, ಮಧ್ಯಾಹ್ನದ ಪದಾರ್ಥಕ್ಕಾಗಿ ತರಕಾರಿ ಹೆಚ್ಚುವುದು, ಸೌದೆ ಒಲೆಯ ಮುಂದೆ ಕೂತು ಎಂದೆಂದಿಗೂ ಮುಗಿಯದಷ್ಟಿರುತ್ತಿದ್ದ ಬಂದವನ್ನ ಮೊಗೆಮೊಗೆದು ದೋಸೆ ಹೊಯ್ಯುವುದು, ಇಡಿ ಮನೆಯನ್ನ ಚನ್ನಾಗಿ ಗುಡಿಸಿ ತೊಳೆಯುವುದು, ಅಂಗಳವನ್ನ ನೀರು ಹೊಡೆದು ಗುಡಿಸಿ ಸಗಣಿ ಸಾರಿಸಿ ರಂಗೋಲಿ ಬಿಡಿಸುವುದು ಹೀಗೆ ಅನೇಕ ಕೆಲಸಗಳ ಸರಣಿಯೆ ಆ ಎರಡು ದಿನಗಳು ಅವರನ್ನ ತುರಿಸಿ ಕೊಳ್ಳುವುದಕ್ಕೂ ಬಿಡುವಾಗದಂತೆ ಬಿಸಿಯಾಗಿಡುತ್ತಿತ್ತು. ಎಲ್ಲಾದರೂ ಅವರ ಕೆಲಸದ ನಡುವೆ ನಾನು ಮಂಗಾಟ ಮಾಡಿದರೆ ಎಲ್ಲಾ ಹುಡುಗಿಯರ ಗ್ಯಾಂಗ್ ಎಲ್ಲಿ ಹೊಡೆದು ಹೊಸಕಿ-ಬಿಸಾಕಿ ಒದ್ದು ಓಡಿಸಿ ಬಿಡುತ್ತಾರೋ ಎನ್ನುವ ರೀತಿ ಉಗ್ರವಾಗಿ ಎಗರಿ ಬೀಳುತ್ತಿದ್ದರು! ಇಂತಹ ಅಕಾಲದ ಅಪಾಯಗಳ ಖಚಿತ ಅರಿವಿದ್ದೂ ನಾನು ಆಗಾಗ ಅಲ್ಲಲ್ಲಿ ಬತ್ತಿಯುಟ್ಟು ಮಜಾ ತಗೊಳ್ಳುತ್ತಿದ್ದೆ. ಹಿಡಿದು ಬಡಿದು ಬುದ್ದಿ ಕಲಿಸಲು ಬರುವ ವೀರ ವನಿತೆಯರಿಂದ ಪಾರಾಗಲು ಹಟ್ಟಿಯ ಅಟ್ಟವಂತೂ ಇದ್ದೇ ಇತ್ತು! ಅದೇನೆ ಆಕಾಶ ಭೂಮಿ ಒಂದಾದರೂ ಲಂಗ ಹಾಕಿಕೊಂಡ ಅಡೆತಡೆಯ ಕಾರಣ ಅವರು ಅಟ್ಟ ಹತ್ತುವ ಸಾಹಸ ಮಾಡುತ್ತಿರಲಿಲ್ಲ ಎನ್ನುವ ಭರವಸೆ ನೂರಕ್ಕೆ ಇನ್ನೂರರಷ್ಟಿದ್ದಾಗ ಅದು ಬಾಲ್ಯದುದ್ದಕ್ಕೂ ನನ್ನ "ಅಜ್ಞಾತ ಸ್ಥಳ"ವಾಗಿ ಅಗತ್ಯ ಬಿದ್ದಾಗಲೆಲ್ಲಾ ಅಂತಹ ತುರ್ತು ಪರಿಸ್ಥಿತಿಯಲ್ಲಿ ಬಳಕೆಯಾಗುತ್ತಿತ್ತು. 


ಮರುದಿನ ಬೆಳಗ್ಯೆ ಮನೆಯ ಬಾಗಿಲುಗಳಿಗೆ, ಹಟ್ಟಿಯ ಮುಂಬಾಗಿಲಿಗೆ ಮಾವಿನ ಎಲೆಗಳ ತೋರಣ ಕಟ್ಟಿ ಬೆಳಗ್ಗಿನ ತಿಂಡಿಗಾಗಿ ಎಲ್ಲರಿಗೂ ದೋಸೆಯ ಸಮಾರಾಧನೆ ನಡೆಸಿ, ಅಂದಿನ ಪೂಜೆಯ ಎಡೆಯ ನೈವೇದ್ಯಕ್ಕಾಗಿ ಪಾಯಸ, ಅತಿರಸ ಇವನ್ನೆಲ್ಲ ಮಿಂದು ಮಡಿಯಲ್ಲೆ ಮಾಡಿ ಮಧ್ಯಾಹ್ನದ ಪೂಜೆಗೆ ಅರಳಿನ ಪ್ರಸಾದ, ಪಂಚಾಮೃತ ತಾಯಾರು ಮಾಡಿಟ್ಟು ಎಲ್ಲರೂ ಕೂಡಿದ ಮೇಲೆ ಅಮ್ಮನ ಅಣ್ಣ ಸುಂದರ ಮಾವ ಪೂಜೆ ಮಾಡಿ ಮಂಗಳಾರತಿ ಮುಗಿಸಿದ ಮೇಲೆ ಪಾಯಸದೂಟದ ಸೊರ ಸೊರ ಶುರು ವಾಗುತ್ತಿತ್ತು. ಎರಡೆರಡು ಬಗೆಯ ತೊಂಡೆ ಮತ್ತು ಗುಜ್ಜೆ ಪಲ್ಯ, ಕೋಸಂಬರಿ, ಹಪ್ಪಳ-ಸಂಡಿಗೆ. ಅತಿರಸ, ಪ್ರಸಾದದ ಶಿರಾ, ಸೌತೆಯ ಪದಾರ್ಥ, ಎಲ್ಲಕ್ಕೂ ಹೆಚ್ಚಾಗಿ ಕಡಲೆ ಬೇಳೆಯ ಪಾಯಸ ಹೀಗೆ ಸ್ವರ್ಗಕ್ಕೆ ಕಿಚ್ಚು ಹಚ್ಚುವ ಸದಾವಕಾಶವನ್ನ ಅಲ್ಲಿ ನೆರೆದ ಯಾರೊಬ್ಬರೂ ಕಳೆದು ಕೊಳ್ಳುತ್ತಿರಲಿಲ್ಲ. ಸಂಜೆಯಾದಾಗ ಮನೆ ಮಂದಿಯೆಲ್ಲ ಕೂಡಿ ಕೊಣಾಜೆ ಕಲ್ಲಿಗೆ ಹೋಗುತ್ತಿದ್ದೆವು. ಇಂದು ಪ್ರವಾಸಿ ಸ್ಥಳವಾಗಿ ಹೆಸರು ಮಾಡುತ್ತಿರುವ ಕೊಣಾಜೆ ಕಲ್ಲು ಒಂದು ಕಾಲಕ್ಕೆ ನಂಬಿದ ಕೆಲವು ಮಂದಿಯ ಹೊರತು ಇನ್ಯಾರೂ ಹೋಗದ ಗುಡ್ಡದ ನೀತಿಯ ಮೇಲಿನ ಬೃಹತ್ ಜೋಡಿ ಬಂಡೆಗಳು ನನ್ನಮ್ಮನ ಕುಟುಂಬದ ಜೊತೆ ಭಾವನಾತ್ಮಕ ಸಂಬಂಧ ಹೊಂದಿದೆ.


ನನ್ನಮ್ಮ ಇನ್ನೂ ಮೂರ್ನಾಲ್ಕು ವರ್ಷದ ಕೂಸಾಗಿದ್ದಾಗ ಒಬ್ಬ ಸಂನ್ಯಾಸಿ ಮನೆಯಂಗಳಕ್ಕೆ ಬರಿಗಾಲಲ್ಲಿ ಅವರಪ್ಪನನ್ನು ಹುಡುಕಿಕೊಂದು ಬಂದರಂತೆ. ಹೀಗೆ ಬಂದ ಅನಾಮಿಕ ಕಾವಿಧಾರಿಗಳನ್ನ ಚಾವಡಿಯೇರಿಸಿ ಸತ್ಕರಿಸಿದಾಗ "ಹೆಗಡೆರೆ ನನಗೆ ಮುಡಿಯಕ್ಕಿ ಬೇಕು, ಮೊಗೆ ತೆಂಗಿನೆಣ್ಣೆ ಬೇಕು. ಜೊತೆಗೆ ಈಗಲೆ ನನ್ನ ಜೊತೆ ಕೈಗತ್ತಿ ಹಿಡಿದು ನೀವೂ ಬರಬೇಕು!" ಅಂದಾಗ ಅಮ್ಮನ ಅಪ್ಪ ಮರು ಮಾತನಾಡದೆ ಎಳೆಯ ಮಗಳಾಗಿದ್ದ ನನ್ನಮ್ಮನನ್ನು ಹೆಗಲ ಮೇಲೆ ಹೂರಿಸಿಕೊಂದು ಮನೆಯಾಳಿನ ಕೈಯಲ್ಲಿ ಅವರು ಕೇಳಿದ್ದನ್ನ ಹೊರೆಸಿ, ತಾನೊಂದು ಕೈಗತ್ತಿ ಹಿಡಿದು ಹೊರಟರಂತೆ. ಸೀದ ಅವರ ಅವರ ಸವಾರಿ ಸಾಗಿದ್ದು ಮನೆಯಿಂದ ನಾಲ್ಕು ಫರ್ಲಾಂಗ್ ದೂರದಲ್ಲಿ ಸರಕಾರಿ ರಾಜ ರಸ್ತೆಯಾಚೆಗೆ ಮತ್ತೆರಡು ಕಿಲೋಮೀಟರ್ ಮೇಲ್ಮುಖ ಸಾಗಿ ಹತ್ತಿ ಸಿಗುವ ಕೊಣಾಜೆ ಕಲ್ಲಿನತ್ತ. ತನ್ನ ದೈತ್ಯಾಕಾರದಿಂದ ಬಲು ದೂರದ ವರೆಗೂ ಕಾಣಲಿಕ್ಕೆ ಸಿಗುವ ಈ ದೊಡ್ಡ ಬಂಡೆಗಳ ಒಳಗೆ ತಳದಲ್ಲಿ ವಿಶಾಲವಾದ ಗುಹೆಗಳಿವೆ. ಕರಡಿ ಮತ್ತು ಹುಲಿಗಳು ವಾಸವಿದ್ದ ಜಾಗ ಅದಾಗಿದ್ದಂತೆ. ಅದನ್ನ ಮುತ್ತಲು ದಾರಿ ಅನ್ನುವಂತದ್ದೊಂದು ಅಲ್ಲದೆ ಇದ್ದುದ್ದರಿಂದ ಕೈಗತ್ತಿಯಲ್ಲಿ ಮುಳ್ಳು ಕಂಟಿ, ಕಾಡು ಬಳ್ಳಿಗಳನ್ನ ಕಡಿದು ಅಮ್ಮನ ಅಪ್ಪ ದಾರಿ ಮಾಡಿಕೊಂಡು ಮುಂದೆ ಸಾಗಿ ಸಂನ್ಯಾಸಿ ಹೇಳಿದಂತೆ ದಾರಿ ಸಾಗಿದರಂತೆ. ಕಡೆಗೂ ಗುಹೆಗಳೆದುರಾದಾಗ ಅಲ್ಲಿಯೆ ನಿಂತ ಆ ಸಂನ್ಯಾಸಿಗಳು ಅಲ್ಲಿಯೆ ನೆಲೆ ನಿಲ್ಲುವುದಾಗಿ ಘೋಷಿಸಿ ಅಲ್ಲಿ ಶಾರದೆಯ ನೆಲೆ ಇದೆ ಇನ್ನು ಮುಂದೆ ಇದೆ ನನ್ನ ನೆಲೆ ಎಂದರಂತೆ. ಅಲ್ಲಿ ಗುಂಪುಗುಂಪಾಗಿದ್ದ, ಈಗಲೂ ಇರುವ ರೌಡಿ ವಾನರ ಪಡೆ ಸಂನ್ಯಾಸಿಗಳ ತಂಟೆಗೆ ಬರದೆ ಅವರಿಗೆ ದೂರದಲ್ಲಿಯೆ ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ಇವರ ಕಾರುಬಾರನ್ನೆಲ್ಲ ನೋಡುತ್ತ ನಿಂತವಂತೆ. ಜೊತೆಯಲ್ಲಿ ಬಂದ ಆಳಿನ ಸಹಾಯದೊಂದಿಗೆ ಅಮ್ಮನ ಅಪ್ಪ ಆ ಜಾಗವನ್ನೆಲ್ಲ ಸ್ವಚ್ಛ ಮಾಡಿ ಒಪ್ಪಗೊಳಿಸಿ ಕೊಟ್ಟು ಸಂನ್ಯಾಸಿ ಮಾಡಿದ ಮೊದಲ ಪೂಜೆಯ ಹೂ ಪ್ರಸಾದ ತಗೊಂಡು ಮರಳಿ ಮನೆಗೆ ಬಂದರಂತೆ,


ಮರುದಿನ ಇನ್ನಷ್ಟು ನಿತ್ಯೋಪಯೋಗಿ ಸಾಮಾನು, ಪಾತ್ರೆ ಪಡಗ ಹೊತ್ತು ಕೊಣಾಜೆ ಕಲ್ಲಿಗೆ ಮಕ್ಕಳು ಮತ್ತು ಹೆಂಡತಿ ನಮ್ಮ ಅವ್ವನನ್ನು ಕರೆದುಕೊಂಡು ಹೋಗಿ ಬಂದರಂತೆ. ಅಂದು ಅವರೆಲ್ಲರ ಊಟ ಅಲ್ಲಿಯೆ ಸಂನ್ಯಾಸಿಗಳ ಕೈಯಡುಗೆಯಲ್ಲಿಯೆ ಆಯಿತಂತೆ. ಅಲ್ಲಿಂದೀಚೆಗೆ ಅದು ನಮ್ಮೆಲ್ಲರ ಶ್ರದ್ಧಾ ಸ್ಥಳವಾಗಿದೆ. ಇವತ್ತಿಗೂ ನಾವು ಶ್ರದ್ಧಾ ಭಕ್ತಿಯಿಂದ ಅಲ್ಲಿಗೆ ವರ್ಷಕ್ಕೆ ನಾಲ್ಕಾರು ಬಾರಿ ಹೋಗಿ ಒಂದು ರಾತ್ರಿ ಅಲ್ಲಿಯೆ ಉಳಿದು ಮರುದಿನದ ಬೆಳಗಿನ ಝಾವದ ಫಲಾಹಾರ ಮತ್ತು ಚಾವನ್ನ ಅಲ್ಲಿಯೆ ತೀರಿಸಿ ಮರಳಿ ಬರುತ್ತೇವೆ. ಅಲ್ಲಿ ಸಂನ್ಯಾಸಿಗಳು ಬದಲಾಗುತ್ತಲೇ ಬಂದಿದ್ದಾರೆ. ಅವರು ಎಲ್ಲಿ ಹೋಗಿ ಮರೆಯಾಗುತ್ತಾರೆ? ಹೊಸ ಸಂನ್ಯಾಸಿಗಳು ಆ ಕೂಡಲೆ ಹೇಳಿ ಕಳಿಸಿದಂತೆ ಅದೆಲ್ಲಿಂದ ಬರುತ್ತಾರೆ? ಯಾರೊಬ್ಬರಿಗೂ ಗೊತ್ತಿಲ್ಲ! ಆದರೆ ಬಂದ ಹೊಸಬರಿಗೆ ನಮ್ಮ ಮನೆಯವರ ಸ್ಪಷ್ಟ ಪರಿಚಯವಿರುತ್ತದೆ. ಮತ್ತವರು ನಮ್ಮಲ್ಲಿಗೆ ಮೊದಲ ಕರೆ ಕಳಿಸುತ್ತಾರೆ! ಇಂದಿಗೂ ನಮ್ಮ ಸಾಗಿನ ಬೆಟ್ಟಿನ ಮನೆಯಿಂದ ಅಲ್ಲಿಗೆ ತಿಂಗಳಿಗೊಂದು ಮುಡಿ ಅಕ್ಕಿ, ಇನ್ನಿತರ ದಿನಸಿ ಸಾಗಣೆಯಾಗುತ್ತದೆ. ಕಾಲಕ್ರಮೇಣ ಸುತ್ತಮುತ್ತಲಿನ ವಿವಿಧ ಜಾತಿ ಪಂಗಡಗಳ ಮಂದಿ ಅಲ್ಲಿಗೆ ಬರುತ್ತಿದ್ದರೂ ನಮ್ಮ ಕುಟುಂಬಕ್ಕೆ ಈಗಲೂ ಅಲ್ಲಿ ಮೊದಲ ಮರ್ಯಾದೆಯಿದೆ. ಶಾರದಾ ಪೂಜೆಯ ದಿನದ ಸಂಜೆ ನಮ್ಮ ಕುಟುಂಬ ದಂಡು ಕಟ್ಟಿಕೊಂಡು ಅಲ್ಲಿಗೆ ಹೋಗಿ ತಪ್ಪದೆ ಪೂಜೆ ಮಾಡಿಸಿ ಬರಲಿಕ್ಕೂ ಈ ಅಂಟಿನ ನಂಟೆ ಕಾರಣ.


ದೇವರಲ್ಲಿ ನಂಬಿಕೆಯಿರದ ನಾನೂ ಇದನ್ನ ಎಂಜಾಯ್ ಮಾಡ್ತೇನೆ, ವರ್ಷಕ್ಕೊಂದಾವರ್ತಿಯಾದರೂ ಅಲ್ಲಿಗೆ ಹೋಗಿದ್ದು ರಾತ್ರಿ ಉಳಿದು ಬರುತ್ತೇನೆ. ಅಲ್ಲಿನ ಸ್ವಾಮಿಗಳಿಗೂ ಗೊತ್ತು ನಾನು ದೇವರಿಗೆ ಕೈ ಮುಗಿಯುವುದಿಲ್ಲ ಅಂತ. ಆದರೆ ನನ್ನ ಅಲ್ಲಿನ ತಲೆಮಾರುಗಳ ಮುಂದುವರೆದ ಸೌಹಾರ್ದ ಬಾಂಧವ್ಯಕ್ಕೆ ಇದು ಎಂದೂ ತೊಡಕಾಗಿ ಪರಿಣಮಿಸಿಲ್ಲ. ಇಂದು ಅನೇಕ ಕಾರಣಗಳಿಂದ ಸಾಗಿನಬೆಟ್ಟು ಮನೆಯಲ್ಲಿ ಶಾರದಾ ಪೂಜೆ ಆಚರಣೆ ಚಾಲ್ತಿಯಲ್ಲಿದ್ದರೂ ಮೊದಲಿನ ಗೌಜಿಯನ್ನ ಕಳೆದುಕೊಂಡಿದೆ. ನಗರೀಕೃತ ಯಾಂತ್ರಿಕ ಬದುಕು ಹಬ್ಬದ ಹಳೆಯ ಲವಲವಿಕೆಯನ್ನ ನಮ್ಮೆಲ್ಲರಿಂದ ಕದ್ದುಕೊಂಡಿದೆ. ಇದು ಗೊತ್ತಿದ್ದೂ ಮಾಡುತ್ತಿರುವ ಸ್ವಯಂಕೃತಾಪರಾಧವಾಗಿದ್ದರೂ ಸಹ ನಾವು ಕನಿಷ್ಠ ಅದೇನನ್ನೋ ಕಳೆದುಕೊಂಡಂತೆ ನಟಿಸುತ್ತೇವೆ! ಅನ್ನದ ಬೆಲೆ ನನಗೆ ಅಮ್ಮನಿಂದ ಸಣ್ಣಂದಿನಿಂದಲೆ ಅರಿವಿಗೆ ಬರ ತೊಡಗಿತ್ತು. ತುಂಬಿದ ಸಂಸಾರದ ಕಿರಿಯ ಕೂಸು ನಾನಾಗಿದ್ದೆ. ಅಜ್ಜನ ದುಡಿಮೆಯನ್ನೆ ಆಧರಿಸಿದ್ದ ಎಲ್ಲರ ಹೊಟ್ಟೆಗೆ ತುಂಬುವಷ್ಟನ್ನು ಹೊಂದಿಸುವ ಅಮ್ಮನ ಕಷ್ಟವನ್ನು ಊಹಿಸಬಲ್ಲೆ. ಅನ್ನದ ಪ್ರತಿ ಅಗುಳಿನ ಮಹತ್ವ ಆಕಾರಣದಿಂದಲೆ ಬಹುಷಃ ನನಗೆ ಗೊತ್ತಾಗಿದೆ. ನಮ್ಮ ಮನೆಯಲ್ಲಿ ಅನ್ನಕ್ಕೆ ಬರವಿರಲಿಲ್ಲ ಆದರೆ ಚಲ್ಲುವಷ್ಟು ಸಮೃದ್ಧಿಯಂತೂ ಖಂಡಿತ ಇರಲಿಲ್ಲ. ಹೀಗಿದ್ದರೂ ಹಂಚಿಕೊಂಡು ತಿನ್ನುವ ಸ್ವಭಾವ ಆಗಿನಂದಲೆ ಮನೆಯ ಹಿರಿಯರನ್ನ ನೊಡಿಕಂಡು ಕಲಿಯುವುದು ನನಗೆ ರೂಢಿಯಾಗಿತ್ತು. ನಮ್ಮ ಮನೆಗೆ ವಾರದ ಎಲ್ಲಾ ದಿನಗಳಲ್ಲೂ ಅನೆಕರು ಬೇಡಲು ಬರುತ್ತಿದ್ದರು. ಇವರನ್ನ ಭಿಕ್ಷುಕರೆಂದು ಕರೆಯುವುದು ಅಷ್ಟು ಸಮಂಜಸವಾಗಲಾರದು. ಸೋಮವಾರದ ಅಜ್ಜಿ, ಶಿವಾಯನಮಃದ ಜೋಗಿ, ಕುರುಕುರು ನರ್ಸಣ್ಣ ಮಾಮ, ಜಾಗಟೆ ದಾಸಯ್ಯ, ಕುಯ್ಯೋ ಢಕ್ಕೆ ಡೋಲಿನ ಅಮ್ಮಾ-ಮಗ, ಅಪರೂಪಕ್ಕೊಬ್ಬ ಕರಡಿ ಮಾಮ, ಅಮವಾಸ್ಯೆಗೊ ಹುಣ್ಣಿಮೆಗೊ ಬರುತ್ತಿದ್ದ ಹಾವಾಡಿಗ ಈ ಎಲ್ಲರಿಗೂ ನಮ್ಮ ಮನೆಯ ಹೊಸಿಲ ಬಳಿ ಅವರವರ ಅನುಕೂಲದ ದಿನಗಳಲ್ಲಿ ಸ್ವಾಗತವಿರುತ್ತಿತ್ತು. ಇವರೆಲ್ಲರಿಗೂ ನಮ್ಮ ಅಜ್ಜನ ಕಷ್ಟದ ದಿನಗಳ ದುಡಿಮೆಯಲ್ಲಿ ಒಂದು ಪಾಲಿರುತ್ತಿತ್ತು. ನಾನು ಅವರಲ್ಲಿ ಯಾರಾದರು ಮನೆ ಬಾಗಿಲಿಗೆ ಬಂದದ್ದೆ ತಡ ಅಮ್ಮ ಕೊಡುತ್ತಿದ್ದ ಒಂದು ಮುಷ್ಠಿ ಅಕ್ಕಿಯನ್ನೋ, ಇಲ್ಲವೆ ಮಾಡಿರುತ್ತಿದ್ದ ಬೆಳಗಿನ ತಿಂಡಿಯಲ್ಲಿ ಒಂದು ಪಾಲನ್ನೋ ಅಡುಗೆ ಮನೆಯಂದ ಓಯ್ದು ಅವರ ಕೈಪಾತ್ರೆಗೆ ಹೆಮ್ಮಯಿಂದ ಹಾಕುತ್ತಿದ್ದೆ.


 ಪ್ರತಿ ಸೊಮವಾರ ನಮ್ಮ ಬೀದಿಯ ಎಲ್ಲಾ ಮನೆಯ ಮಂಬಾಗಿಲಿನಲ್ಲೂ "ಶಿವಾಯ ನಮಃ.... ಅಮ್ಮಾ ಅಮ್ಮಾ..." ಎನ್ನುವ ಧ್ವನಿ ಕೇಳಿ ಬರುತ್ತಿತ್ತು. ಕಾವಿ ಅಥವಾ ಕಪ್ಪು ಶಾಠಿ ಹೊದ್ದು ಅಂತಹದ್ದೆ ಇನ್ನೊಂದು ಬಟ್ಟೆಯ ತುಂಡನ್ನ ಅವರು ಸೊಂಟಕ್ಕೆ ಬಿಗಿದುಕೊಂಡಿರುತ್ತಿದ್ದರು.ಬಿಳಿ ಗಡ್ಡದ ಕಡುಗಪ್ಪು ಮುಖದ ಅವರ ಕಣ್ಣುಗಳ ನಡುವಿನಲ್ಲಿ ದೊಡ್ಡ ಕುಂಕುಮದ ಬೊಟ್ಟಿದ್ದು ಅದಕ್ಕೂ ಮೇಲೆ ಮೂರು ವಿಭೂತಿ ಪಟ್ಟಿಯಿರುತ್ತಿತ್ತು. ಮೂಗಿನ ಕೊನೆಯಲ್ಲೊಂದು ಕಪ್ಪು ಅಂಚಿನ ದಪ್ಪ ಗಾಜಿನ ಕನ್ನಡಕ ಇಷ್ಟು ಅವರ ಅನುಗಾಲದ ವೇಷ. ಒಂದುವೇಳೆ ಅವರ ಒಂದು ಕೂಗಿಗೆ ಮನೆಯೊಳಗಿನಿಂದ ಯಾವುದೆ ಪ್ರತಿಕ್ರಿಯೆ ಬಾರದಿದ್ದರೆ ಮತ್ತೆ ಅದೆ ರಾಗವನ್ನ ಅವರು ಹಾಡಿಯೇ ಹಾಡುತ್ತಿದ್ದರು. ಅವರ ಬಗಲಲ್ಲಿ ಸದಾ ಒನ್ದು ಕಪ್ಪು "ಸಾಹಿತಿ ಚೀಲ"ದಂತಹ ಜೋಳಿಗೆ ನೇತಾಡುತ್ತಿತ್ತು. ಕೈಯಲ್ಲೊಂದು ಸಿಲವಾರದ ಕೈಪಾತ್ರೆಯನ್ನ ಅವರು ಹಿಡಿದಿರುತ್ತಿದ್ದರು. ನಾವು ಅದರಲ್ಲಿ ಹಾಕುತ್ತಿದ್ದ ಪಾವಕ್ಕಿಯನ್ನ ಅನಂತರ ಅವರು ಆ ಜೋಳಿಗೆಗೆ ಸುರಿದುಕೊಳ್ಳುತ್ತಿದ್ದರು. ಮೇಲುಬಸ್ಟಾಂಡಿಗೆ ಹೋಗುವ ದಾರಿಯಲ್ಲಿ ಖಾದರ್ ಸಾಬರ ಬಂಗಲೆಯ ಮಂದೆ ಮಸೀದಿ ರಸ್ತೆಗೆ ಹೊಗಲಿಕ್ಕಿದ್ದ ಸಣ್ಣ ದಾರಿಯ ಮೂಲೆಯಲ್ಲಿದ್ದ ಕಲ್ಲಿನ ಬಿಡಾರದಲ್ಲಿ ಅವರ ವಾಸ್ತವ್ಯವಿತ್ತು. ಪ್ರತಿ ಸೋಮವಾರ ಮಾತ್ರ ಅವರ ಸವಾರಿ ನಮ್ಮ ಮನೆಯಂಗಳದಲ್ಲಿ ಕಾಣಲಿಕ್ಕೆ ಸಿಗುತ್ತಿತ್ತು. ಅವತ್ತಿನ ಹೊರತು ಇನ್ಯಾವುದೇ ದಿನವೂ ಅವರು ಯಾರ ಮನೆಗೂ ಬೇಡಲು ಬರುತ್ತಲೆ ಇರಲಿಲ್ಲ. ದೂರದ ಪಡುಬಿದ್ರಿಯಲ್ಲಿ ಅವರ ಕುಟುಂಬ ಇತ್ತಂತೆ, ಅವರಿಗೆ ಊರಲ್ಲಿ ಹೆಂಡತಿ-ಮಕ್ಕಳೂ ಇದ್ದಾರಂತೆ. ಗುರುಪುರದ ಬಳಿಯಿರುವ ಲಿಂಗಾಯತ ಮಠದ ಅನುಯಾಯಿಗಳಾಗಿದ್ದ ಜೋಗಿ ಜಂಗಮರಂತೆ ಅವರು. ಹೀಗೆ ಬೇಡುವುದೇ ಅವರ ಕುಲ ಕಸುಬಂತೆ! ಅವರು ಹೇಗೆ ಬೇಡಿ ಬೇಡಿಯೇ ತಮ್ಮ ಮನೆ ನಡೆಸಿಕೊಂಡು ಮಕ್ಕಳ ಮದುವೆಯನ್ನೂ ಮಾಡಿ ಮುಗಿದಸಿದ್ದರಂತೆ!! ಆಗೆಲ್ಲಾ ಅವರು ಬಾರದ ಸೋಮವಾರಗಳಲ್ಲಿ ಏನೋ ಮಿಸ್ ಆದಂತೆ ಅನ್ನಿಸುತ್ತಿತ್ತು.


 ( ಮುಂದೂ ಇದೆ....)

09 November 2012

ನನ್ನ ಆಸೆ ವಾಸ್ತವಕ್ಕೆ ಬಹು ದೂರ.....


ನನಗೆ ಗೌಣವಾದಾಗಿದ್ದಾಗ ನಿನಗೆ ಮುಖ್ಯವಾಗಿದ್ದ ಸಾಂಗತ್ಯ..... ಇಂದು ತಿರುವು ಮುರುವಾಗಿದೆ ಕಾಲ ಬಹಳ ಕ್ರೂರಿ, ಕನಸು ಕಮರಿದ ಹಾಗೆ ಮನಸೂ ಸಹ ಮುರಿದಿದೆ ಮೌನ ಆಪ್ತ... ಸಂಕಟವೆಲ್ಲ ಎದೆಯೊಳಗೆ ಸುಪ್ತ/ ಇನ್ನೇನೂ ಹೇಳಲಿಕ್ಕೆ ಉಳಿದಿಲ್ಲ ನನ್ನಲ್ಲಿ ನಿನಗೆ ನಾ ದೂರ ನಿಜ ನನಗಂತೂ ನಿನ್ನಷ್ಟು ಇನ್ಯಾರೂ ಇಲ್ಲ ಹತ್ತಿರ... ಖಾತ್ರಿಯಿಲ್ಲದ ಕ್ಷಣಿಕ ಒಲವಿಗೆ ಇಡಿ ಬಾಳನ್ನೆ ಬಿಟ್ಟುಕೊಟ್ಟು ತ್ಯಾಗಿಯ ವೇಷದಲ್ಲಿ ನಿಂತ ನನ್ನ ನೋಡಿ ನೀನೆ ಒಂದುವೇಳೆ ನಕ್ಕರೂ, ಅದನ್ನ ಅಪಾರ್ಥ ಮಾಡಿಕೊಳ್ಳಲಾರದಷ್ಟು ದೂರದ ಹಾದಿಯನ್ನ ಒಂಟಿಯಾಗಿ.... ಬರಿಗಾಲಿನಲ್ಲಿಯೆ ಸವೆಸಿ ನಾನು ಬಂದಿದ್ದೇನೆ// ನೆನಪಿನೆಳೆಯ ಕೊನೆಯಂಚಿನಲ್ಲೂ ನಿನ್ನೆದೆಯ ಮಿಡಿತವೆ ಹುದುಗಿದೆ ಬೆಚ್ಚಗೆ.... ಕುದಿವೆದೆಯ ಬೇಗುದಿಯ ಮೌನ ನನ್ನ ನೋವಿನ ಪ್ರತಿ ಹನಿಗಳಲ್ಲೂ ನಿನ್ನದೆ ಧ್ವನಿಯಿದೆ, ಕಾಯಲು ಮರೆಯದ ಹಾದಿಯಲ್ಲಿ ಮೂಡಬಹುದಾದ ಹೆಜ್ಜೆ ಸಪ್ಪಳ ನಿನ್ನದೆ ಆಗಿರಲಿ ಅನ್ನುವ.... ನನ್ನ ಆಸೆ ವಾಸ್ತವಕ್ಕೆ ಬಹು ದೂರ/ ಕಳೆದು ಹೋದ ಕ್ಷಣಗಳ ಕನವರಿಕೆ ಕೊನೆಯವರೆಗೂ ಕೈಬಿಡದೆ ಕಾಡಲಿದೆ.... ಕಾದಿರಿಸಿರುವ ಎದೆಯ ಜಾಗ ಎಂದೆಂದೂ ನಿನ್ನದೆ ನೀನೊಂದು ವೇಳೆ ಮರಳಿ ಬಂದರೂ ಬಾರದಿದ್ದರೂ, ಇಂದಿಲ್ಲದ ಒಲವನ್ನ ಅಂದಿನ ಆಕ್ಷಾಂಶೆಯಲ್ಲಿ ಹುಡುಕುವ ನನ್ನದು ಹುಚ್ಚು ಪ್ರಾಮಾಣಿಕ ಪ್ರಯತ್ನ!// ಮರಗೆ ಸರಿದ ಮರೆಯಲಾಗದ ನೆನಪುಗಳ ಛಾಯೆಯ ಕಪ್ಪಲ್ಲಿ ನನ್ನ ಕಮರಿದ ಸ್ವಪ್ನಗಳ ಸಪ್ತ ರಂಗುಗಳ ಕಲೆ.... ಇನ್ನೂ ಉಳಿದಿವೆ, ನನ್ನ ಅತಿ ಸಾಧಾರಣ ಕವಿತೆಗಳಲ್ಲಿ ಅವಿತ ನಿನ್ನ ಹುಡುಕಿ ಕೊಟ್ಟವರಿಗೆ ಕೋಟಿ ವರಹದ ಬಹುಮಾನವಿದೆ ಈ ವಿರಹಿಯಿಂದ!/ ಮನಸಿನ ಪಡಸಾಲೆಯಲ್ಲಿ ತೊಟ್ಟಿಕ್ಕುವ ಭಾವನೆಗಳ ಹನಿಗಳೆಲ್ಲ ಮೌನದ ತಂಪಲ್ಲಿ ಮಿಂದೆದ್ದಿವೆ... ಕೂಡಿಡಲು ನನ್ನಲ್ಲಿ ನಿನ್ನವೆ ಕೋಟಿ ಕನಸುಗಳಿವೆ ಇನ್ನುಳಿದಂತೆ ಮನದ ಗೋದಾಮಿನಲ್ಲಿ ಎಲ್ಲಕ್ಕೂ ಖಡ್ಡಾಯ ನಿಷೇಧ, ಯಾತರದ ಚಿಂತೆ ನನಗೆ? ಹೃದಯದ ಅನುಗಾಲದ ಬೇನೆ ನನ್ನದೆ ಆಯ್ಕೆಯಾಗಿರುವಾಗ.... ನೀನದಕ್ಕೆ ಹೇಗೆ ತಾನೆ ಹೊಣೆ?// ಮಳೆ ಮೆಲ್ಲಗೆ ಉಸುರಿದ ಗುಟ್ಟನ್ನ ಕೇಳಿಸಿಕೊಂಡ ನೆಲ ನಾಚಿ ನೀರಾಗಿದೆ.... ದೂರದಲ್ಲೆಲ್ಲೋ ಮಳೆಯಾದ ಸುದ್ದಿ ಹರಡುವ ಹರಕು ಬಾಯಿಯ ಗಾಳಿ ಒಂದೆರಡು ಹನಿಗಳ ತಂಪನ್ನ ತಾನೂ ಕದ್ದು ತಂದಿದೆ, ಮನಸು ಮೌನದ ನದಿ ತೀರದಲ್ಲಿ ಲಂಗರು ಹಾಕಿರುವಾಗ ನೋವಿನ ಬಿರುಗಾಳಿ ಅದೆಷ್ಟಾದರೂ ಬೀಸಲಿ ಚಿಂತೆಯಿಲ್ಲ/ ಕವಲೊಡೆದ ದಾರಿಗಳು ಮುಂದೆಲ್ಲೋ ಒಂದೆಡೆ ಸೇರಿಯಾವು..... ಎನ್ನುವ ನಿರೀಕ್ಷೆಯ ಮೋಡ ನನ್ನೊಲವಿನ ಮಳೆಗಿಂತಲೂ ನನಗಾಪ್ತ, ನೆನಪಲ್ಲಿ ನೀನಿರುವ ತನಕ ಮನಸಲ್ಲಿ ನೋವು ಕೇವಲ ಒಂದು ತತ್ಕಾಲಿಕ ಅತಿಥಿ..... ಖಂಡಿತಾ ಸಂಕಟದ ಸಂಧ್ಯೆಯ ಸೆರಗಲ್ಲಿ ಅಡಗಿದ ಸೂರ್ಯನ ತುಂಟಾಟಕ್ಕೆ ಪಡುವಣದ ಬಾನು ಎಂದಾದರೊಮ್ಮೆ ನಿಜಕ್ಕೂ ರಂಗೇರಲಿದೆ...

08 November 2012

ದಿಕ್ಕು ತಪ್ಪಿದ ಅನಾಮಿಕ ನಾವೆಗೆ....


ನಿನ್ನೆದೆಯ ಗಡಿಯಂಚಿನಲ್ಲಿಯೆ ನನ್ನೆಲ್ಲ ಕನಸುಗಳು ಅಹೋರಾತ್ರಿ ಕಾವಲಿಗಿವೆ.... ನನ್ನ ಕಣ್ಣಚಿಂದ ಜಾರಿದ ಕಿರು ಕನಸೊಂದು ನಿನ್ನ ನಗುವಲ್ಲಿ ಕರಗಿ ಕಣ್ಮರೆಯಾಗುವಾಗ ನಾನು ಪರಮ ಸುಖಿ, ಅಳಿಸಲಾಗದ ಗುರುತನ್ನ ಮನಸಲ್ಲಿ ಹಚ್ಚೆ ಹೊಯ್ದ ನೆನಪಿನ ಲೇಖನಿ ಇನ್ನೂ ಮನಸಿನಲ್ಲಿ.... ಬಾಣದಂತೆ ಚುಚ್ಚಿಕೊಂಡಿದೆ/ ಹೇಳದ ನೂರು ಮಾತುಗಳಿಗೆ ಒಂದು ಮೌನ ಸಮ ಕಣ್ಣ ಭಾಷೆಯದ್ದೆ ಅಸಮಾನ ಘಮ.... ನೀನಿಲ್ಲ ನಿನ್ನ ನೆನಪಿದೆ ಮರೆತಿಲ್ಲ ನಿನ್ನಲ್ಲೆ ನನ್ನ ಮನಸಿದೆ, ಕಣ್ಣ ಕನ್ನಡಿಯ ಪ್ರತಿ ಪ್ರತಿಫಲನವೂ ನಿನ್ನ ನೆನಪುಗಳಲ್ಲೆ ಹೊಳೆಯುವಾಗ.... ಇನ್ನು ನನ್ನದೇನು ಇಲ್ಲಿ ಹೇಳು?// ಕತ್ತಲಲ್ಲಿ ಕರಗಿದ್ದ ಕುರುಡು ಕನಸುಗಳಿಗೆ ನೀ ಜೊತೆಗಿದ್ದಾಗ ಕಡುಗಪ್ಪು ಹಾದಿಯೂ ನಿನ್ನ ಕಣ್ಬೆಳಕಲ್ಲಿ ಸಲೀಸು.... ಕಡೆಯವರೆಗೂ ಅಂತಹ ನೆನಪುಗಳ ನಿರಂತರ ಜೊತೆ ಮಾತ್ರ ನನಗೆ ಸಾಕು, ಪ್ರತಿ ಉಸಿರ ಆವರ್ತದ ಬಸಿರಿನಲ್ಲಿ ಬಿಸಿಯಾಗಿ ಹೊಮ್ಮುವ ನೀನಿತ್ತ ಬೆಚ್ಚನೆಯ ನೆನಪುಗಳ.... ಸಾಂಗತ್ಯ ಸದಾ ನನಗೆ ಬೇಕು/ ನೆಲದ ನಿರೀಕ್ಷೆಗೆ ಬಾನಿನ ಆರ್ದ್ರತೆಯ ಬಗ್ಗೆ ಆರ್ತ ನೋಟವಿದ್ದಾಗ ಮೋಡ ಮಳೆಯಾಗಿ ಇಳೆಯ ತಣಿಸುತ್ತಿದೆ.... ಧರೆಗೆ ತಂಪೆರೆವ ಇರುಳ ನಿಲಕ್ಕೆ ನೆಲವನ್ನ ಮುಟ್ಟುವ ಹಂಬಲ ನಿರಂತರ, ನೆನೆದಷ್ಟೂ ನಿನ್ನ ನೆನಪಲ್ಲಿ ನನ್ನ ಒಳ ಮನಕ್ಕೆ ಅದೇನೋ ಹಿತದ ಅಮಲೇರುತ್ತದೆ.... ಕೇವಲ ಕನಸಲ್ಲಿ ಹೀಗೆಯೆ ಕಾಡುತ್ತಿರು ಮನಸೊಳಗಿನ ನೆನಪುಗಳು ಬಾಡದಂತೆ ನೀ ಕಾಪಾಡುತ್ತಿರು.... ಹಗಲಿನ ಬೆಳಕ ಹಿನ್ನೆಲೆಯಲ್ಲಿ ಹೊಳೆವ ನಿನ್ನ ಕನಸುಗಳು ನನ್ನ ಹೀಗೆಯೆ ಆವರಿಸುತ್ತಿರಲಿ// ಖಚಿತ ಭರವಸೆಗಳ ಆಸರೆಯಿಲ್ಲದಿದ್ದರೂ ಕನಸುಗಳಿಗೆ ಬರವೆ ನನ್ನ ಕಣ್ಣುಗಳಲ್ಲಿ ಹೇಳು? ತಾವರೆ ಮೇಲಿಳಿವ ಹನಿ ನೀರು ಕೆಸುವಿನ ಪತ್ರೆ ಮೇಲಿರುವ ಹೊಳೆವ ಜಲದ ಬಿಂದುವಿನ ದನಿ ನಾನು.... ಜಾರುವುದು ಖಚಿತ ಆದರೂ ಅದು ನಿನ್ನ ಅಂಗೈ ಮೇಲೆ ಆಗಿರಲಿ ಅಂತನ್ನುವ ಕ್ಷೀಣ ಆಸೆ ನನ್ನದು, ಉಸಿರ ಕೊನೆಯ ಉಚ್ವಾಸದಲ್ಲೂ ನೋಡಿದೆಯ ನಿನ್ನದೆ ಅವಾಸ... ದಿನವಿಡಿ ಕಾದ ಮನ ಉಸಿರ ಕೊನೆ ಕ್ಷಣದವರೆಗೂ ನಿನ್ನ ಪ್ರತೀಕ್ಷೆಯಲ್ಲಿ ತಲ್ಲೀನ ನನ್ನೆಲ್ಲ ಮೌನ ನಿನ್ನ ಮಾತಲ್ಲಿ ಲೀನ/ ಕತ್ತಲ ಅಂತರಾಳದಲ್ಲಿ ಅಡಗಿರುವ ಕನಸುಗಳ ಕಣ್ಣುಗಳಲ್ಲಿ ಕಾತರದ ಕಡತಗಳ ದೊಡ್ಡ ದಾಸ್ತಾನಿದೆ..... ದೂರ ಇದ್ದಷ್ಟು ಬಾನಿಗೂ ನೆಲಕ್ಕೂ ತೀರದ ಸೆಳೆತ ಮೋಡದ ಮನದಲ್ಲಿ ನಿರಂತರ ಧರೆಯದೆ ನಾಮದ ಮಿಡಿತ, ಮನಕ್ಕೆ ಮುಸುಗಿರುವ ಮೋಡ ಮಳೆಯಾಗಿ ಮಣ್ಣು ಸೇರುವ ತನಕ ದುಗುಡದ ಕರಿಛಾಯೆ.... ಹೀಗೆಯೆ ಆವರಿಸಿರಲಿದೆ// ದೂರದ ದ್ವೀಪ ಮುಟ್ಟುವ ದಿಕ್ಕು ತಪ್ಪಿದ ಅನಾಮಿಕ ನಾವೆಗೆ.... ಕಡೆಗೂ ದಡ ಮುಟ್ಟಿದ್ದೊಂದೆ ಕಳ್ಳ ಸಮಾಧಾನ, ಸಾಗರದ ಎದೆಯ ಮೇಲೆ ಸಾಗುವ ದೋಣಿಗಳಿಗೆ ದಡ ಮುಟ್ಟಿಸುವ ಹೊಣೆ ಎಲ್ಲಾ ಅಲೆಗಳಿಗೂ ಇದ್ದೇ ಇದೆ/ ಕೇವಲ ನಿರೀಕ್ಶೆಯ ನೆಲೆಗಟ್ಟಿನ ಮೇಲೆಯೆ ಸಾಗಿಸ ಬೇಕಿದೆ ಬದುಕು.... ಅದರೊಂದಿಗೆ ಸಲ್ಲ ಬೇಕಿದೆ ಅದಕೂ-ಇದಕೂ, ಕಂಬನಿ ಹಿಡಿತ ಮೀರಿ ಉಕ್ಕುತ್ತಿರೋದು ಕನಸು ಕಮರಿ ಹೋಗಿದ್ದಕ್ಕೊ ಇಲ್ಲಾ ಮನಸು ಮುದುಡಿದ್ದಕ್ಕೋ ಗೊತ್ತಾಗುತ್ತಿಲ್ಲ.... ಕತ್ತಲ ಕೊನೆಯಂಚಿನಲ್ಲಿ ಅಡಗಿದ ಬೆಳಕಿನ ಭರವಸೆಯಲ್ಲಿಯೆ ಅಡಗಿದೆ ನಾಳಿನ ಬದುಕು//

07 November 2012

ಸಕಾರಣವಿದೆ.......


ಕಿತ್ತಿಡಲಾಗದ ಸಹಜ ಭಾವ ನಿನ್ನೆಡೆಗಿನ ನನ್ನ ಸೆಳೆತ ಇಷ್ಟು ಬೇಗ ನಾವು ಅಗಲಲೆ ಬೇಕಿತ್ತಾ?.... ಏನೆಲ್ಲಾ ಕನಸಿದ್ದೆ ಎಷ್ಟನ್ನೆಲ್ಲ ಕನವರಿಸಿದ್ದೆ ಕಮರಿತು ಸ್ವಪ್ನ ಸುಮ ಬಾಳಲ್ಲಿ ಇನ್ನೆಲ್ಲಿ ಸಂತಸದ ಸ್ನೇಹ ಘಮ, ಇಂದು ನೋವಿಗೆ ನೂರು ಕಾರಣಗಳಿವೆ ನಲಿವಿಗೆ ಮಾತ್ರ ನಿನ್ನ ಎಂದಿನದ್ದೋ ಒಂದು ನಿಷ್ಕಲ್ಮಶ ಮುಗುಳ್ನಗೆಯ ನೆನಪೊಂದೆ ನನಗಾಸರೆ/ ಕಂಡಿದ್ದ ಸುಂದರ ಕನಸು ಬಾಳಲ್ಲಿ ಕಡೆಗೂ ಸುಂದರ ಕನಸಾಗಿಯೇ ಉಳಿದು ಹೋಯಿತಲ್ಲ... ನಾನೆಂತಾ ನತದೃಷ್ಟ, ಬಾನು ಭೂಮಿಯ ಗಾಢ ಸಂಬಂಧದ ನಡುವೆ ಮೂಡುವ ಬಿರುಕೆ ಮುಗಿಲಂಚಿನ ಮಿಂಚು// ಗಾಳಿಗೂ ಮೋಡಕೂ ಕಳೆದೆರಡು ದಿನಗಳಿಂದ ವಿರಸ ಅದಕ್ಕೇನೆ ಬಾನು ಬಿಡುತ್ತಿದೆ ಕಡು ತಂಪಿನ ಶ್ವಾಸ... ಮನಸ ಬರಡು ಮರಳುಗಾಡಲ್ಲೂ ಉಳಿದ ನೆನಪ ಜೋಡಿ ಹೆಜ್ಜೆಗಳು ನೆನ್ನೆಯ ನೆನಪನ್ನ ಅಚ್ಚಳಿಯದಂತೆ ಉಳಿಸಿವೆ, ಸಾವಿರ ಕನಸುಗಳ ಅಶ್ವವನ್ನೇರಿ ನಿಶ್ಚಿತ ಗುರಿಯನ್ನಷ್ಟೆ ಹೋಗಿ ಸೇರುವ ಸ್ವಪ್ನಗಳೆಲ್ಲ.... ಹಾದಿಯುದ್ದ ಹೆಜ್ಜೆಗುರುತುಗಳನ್ನ ಉಳಿಸುತ್ತಾ ಸಾಗಿವೆ/ ನನ್ನ ಕಣ್ಣಚಿಂದ ಜಾರಿದ ಕಿರು ಕನಸೊಂದು ನಿನ್ನ ನಗುವಲ್ಲಿ ಕರಗಿ ಕಣ್ಮರೆಯಾಗುವಾಗ ನಾನು ಪರಮ ಸುಖಿ.... ಮಳೆಗೆ ಮರುಳಾದ ಇಳೆ ಇರುಳಿಡಿ ತೊಯ್ದು ಮನದ ಒಳಗೆ ಹನಿ ಒಲವನ್ನೂ ಹಿಡಿದಿಟ್ಟುಕೊಳ್ಳುತ್ತಿದೆ// ಕದಡಿ ಹೋಗಿದ್ದ ಕನಸಿನ ಕೊಳದಲ್ಲಿ ಮೆಲ್ಲಗೆ ಮಳೆಹನಿಗಳು ತಾಕಿ...... ನೆಮ್ಮದಿಯ ಅಲೆಗಳು ಏಳಲಿಕ್ಕೆ ಹವೆಣಿಸುತ್ತಲಿವೆ, ಸರಿ ಹೋಗದ ಮನಸ್ಥಿತಿಯಲ್ಲಿ ಕಿರು ಬೆಳಕು/ ಕಹಿ ನೂರಿದ್ದರೂ ನೆತ್ತಿಯ ಮೇಲೆ ಸಂಕಟದ ಶಾಶ್ವತ ಸೂರಿದ್ದರೂ ನಾಮ ಜಪದ ಕ್ಷಣಿಕ ಸಂತಸವೂ ನನ್ನ ಸಂಗಡವಿದ್ದೇ ಇದೆ, ಕರಿ ಮೆತ್ತಿದ ಕನಸುಗಳಿಗೆ ಬೆಳಕಿನ ನಿರೀಕ್ಷೆಯಿಲ್ಲ..... ಬರಿ ಮತ್ತಿನ ಮಾತುಗಳಿಗೆ ಸಾಕಾರದ ಅಪೇಕ್ಷೆಯೂ ಇಲ್ಲವಲ್ಲ// ಕಿತ್ತು ತಿನ್ನುವ ಹತ್ತು ನೋವುಗಳ ಸಂಗಡ ನಿತ್ಯ ಏಗುವ ಮನ ಮುಗ್ಧ ಮೂಢ..... ಮರೆಮಾಚಿದ ಮಾತುಗಳೆಲ್ಲ ಮೌನದಲ್ಲಿ ಲೀನವಾಗಿ ಮನಸೊಳಗೆ ಕರಗಿ ಹೋದವು, ಕಡುಚಳಿಯ ಕತ್ತಲ ಹಾದಿ ಸವಿಸಲಿದೆ ಎದೆಯಲ್ಲಿ ನೀ ಹೊತ್ತಿಸಿ ಹೋಗಿರುವ ಸುಡುವ ನೋವಿನ ಉರಿ ಅಗ್ಗಿಷ್ಟಿಕೆ/ ಕಾರಣವಿಲ್ಲದೆ ತುಂಬಿಬರುವ ಕಂಗಳಿಗೆ ಹನಿಯಲು ನಿನ್ನ ಅಗಲಿಕೆಯ ಸಕಾರಣವಿದೆ, ನನ್ನ ಕಣ್ನುಗಳು ಗುತ್ತಿಗೆ ಹಿಡಿದ ನಿನ್ನ ಕನಸುಗಳಿಗೆ ನಿತ್ಯ ನಿನ್ನ ನೆನಪಲ್ಲಿಯೆ ನವೀಕರಣ//

ಸುರಿವ ಹನಿಮಳೆಯೂ .......

ಒಲವೂ, ವಿರಹವೂ, ಸಂತಸವೂ, ಸಂಕಟವೂ ನೋವೂ, ನಲಿವೂ ನೀನೆ ತಾನೆ ನನಗಿತ್ತ ಗೋಳು.... ಎಲ್ಲವೂ ನಿನ್ನ ಭಿಕ್ಷೆ, ಅತಿರೇಕದ ಅವಲಂಬನೆಗೆ ಮನಸು ತೆತ್ತ ದುಬಾರಿ ದಂಡ ಎಕಾಂತದ ದೀರ್ಘ ಬಾಳು... ಇದೊಂಥರಾ ಸ್ವಯಂ ಶಿಕ್ಷೆ./ ಬಲು ಬೇಸರದ ಸಂಜೆ ಅದೇಕೊ ಆವರಿಸಿ ಮೆಲ್ಲನೆ ಮನಸ ಹಿಂಡುತ್ತಿದೆ.... ಕಣ್ಣ ಮರೆಯ ಕಡು ನೋವಲ್ಲೂ ತುಟಿಯಂಚಲ್ಲಿ ನಸು ನಗು ಅರಳಿಸುವಲ್ಲಿ ಯಶಸ್ವಿಯಾದ ನಿನ್ನ ನೆನಪುಗಳಿಗೆ ಎಂದೂ ಬೆಲೆ ಕಟ್ಟಲಾಗದು, ನಗುವಿನ ಮೊಗವಾಡ ಹೊತ್ತು ನಿನಗೆ ಶುಭ ಹಾರೈಸುವ ನನ್ನೊಳಗೆ... ನೋವಿನ ಮಡು ತುಂಬಿ ನಿಂತಿದೆ// ಮುರಿದ ಮನದ ಮೂಲೆಯಲ್ಲೂ ನಿನ್ನ ನೆನಪುಗಳದೆ ಮಾರ್ದನಿ... ಮನಸ ಪುಸ್ತಕದ ನಡು ಪುಟದಲ್ಲಿ ಇಟ್ಟು ಮರೆತಿದ್ದ ಬಣ್ಣದ ನವಿಲುಗರಿ ನೀನು, ಒಲವಲ್ಲಿ ನಲಿವಿಲ್ಲ ಬರಿದೆ ನೋವಿನ ಸುಳಿಯೆ ಈ ಮಡುವಲ್ಲಿ ತುಂಬಿದೆಯಲ್ಲ! ಆದೇನೆ ಇದ್ದರೂ.... ಮಳ್ಳ ಮನಸಿಗೆ ಇದರಿಂದ ಪಾರಾಗುವ ಇರಾದೆಯೆ ಇಲ್ಲ?!/ ಗತ್ತಿನಿಂದ ಹೇಳುವ ನನ್ನ ನೆನಪುಗಳಲ್ಲೆಲ್ಲ ನೀನೆ ಬಹುಪಾಲು ಆವರಿಸಿರುತ್ತೀಯಲ್ಲ.... ಇದೆಂಥಾ ವಿಸ್ಮಯ, ಕಣ್ಣು ಕದ್ದು ಕಾಣುವ ಕನಸುಗಳಿಗೆ ಸುಂಕವಿಲ್ಲ ಒಂದು ವೇಳೆ ಇದ್ದಿದ್ದರೆ.... ನಾನಿವತ್ತು ಪೂರ್ತಿ ದಿವಾಳಿಯಾಗಿರುತ್ತಿದ್ದೆ// ಕೆಲವನ್ನು ಹೇಳದೆ ಕೆಲವನ್ನ ಕೇಳದೆ ಅರಿತುಕೊಳ್ಳ ಬೇಕಿತ್ತು ನೀನು ನಾನಿನ್ನನರಿತಂತೆ.... ಸಂಜೆ ಅಚಾನಕ್ಕಾಗಿ ಕವಿಯುವ ಮೋಡ ಹನಿಯಾಗಿ ಧರೆಯ ಸೋಕುವಾಗ ಮನಕ್ಕೀಯುವ ಮುದ ವರ್ಣನೆಗೆ ಹೊರತು, ಕಳೆದ ಕೆಲವು ಕ್ಷಣಗಳ ಕದದ ಮರೆಯಲ್ಲಿ ಕುತೂಹಲದ ಕಳ್ಳ ಕಣ್ಣುಗಳು ಕಾಯುತ್ತಿರುವುದು ನಿನ್ನನ್ನೆ/ ಕರೆಯದೆ ಬರುತ್ತಿದ್ದ ನೀನು ನಿನ್ನ ನೆನಪಿನಲ್ಲೂ ಪೂರಾ ಹಾಗೆಯೆ ಹೋಲುತ್ತೀಯ.... ನೆನಪುಗಳೂ ಹೇಳದೆ ಕೇಳದೆ ದಾಳಿಯಿಡುತ್ತಿವೆಯಲ್ಲ !, ಕಣ್ಣಾಡಿಸುತ್ತಾ ಕಾದಿರುವ ಹಾದಿಯಲ್ಲಿ ನಿನ್ನ ಹಳೆಯ ಹೆಜ್ಜೆಗುರುತುಗಳು ಮಾಸುವ ಮುನ್ನ.... ಹೊಸತನ್ನ ಮತ್ತೆ ಮೂಡಿಸಲು ನೀ ಬಂದರೆ ನನಗಷ್ಟೇ ಸಾಕು.// ನೀರಲ್ಲಿ ಕರಗದ ಗಾಳಿ ಅಪಹರಿಸಲಾಗದ ಬಾನಲ್ಲಿ ಲೀನವಾಗದ ನನ್ನ ಒಲವಿಗೆ.... ಅಪ್ಪಟ ಮಣ್ಣಿನ ವಾಸನೆಯಿದೆ, ಇದೆಂದೂ ಮುಗಿಯದ ಕಥೆ ನಿನ್ನ ನೆನಪು ಮಾಸುವ ಇರಾದೆ ಇಟ್ಟುಕೊಂಡಂತಿಲ್ಲ.... ನನ್ನದು ನಿರಂತರ ವ್ಯಥೆ/ ಕಳೆದು ಕೊಂಡ ನಷ್ಟ ನನಗೋ? ಪಡೆಯದೆ ಹೋದ ಪಾಪಿ ನೀನೋ.... ಒಂದಂತೂ ನಿಜ ಎಲ್ಲೋ ಎನೋ ತಾಳತಪ್ಪಿದೆ, ಸುರಿವ ಹನಿಮಳೆಯೂ ಇಷ್ಟೊಂದು ಭೀಕರ ಶೀತಲ ಅನುಭವ ತರುವಾಗ... ನಿನ್ನ ಬೆಚ್ಛನೆ ಅಪ್ಪುಗೆಯಿಲ್ಲದ ಮುಂದಿನ ದೀರ್ಘ ಬಾಳು ದುರ್ಭರವೆನ್ನಿಸುತ್ತದೆ?!//

06 November 2012

ಬಾಣ ಹೋಯ್ತು, ಪಿಸ್ತೂಲ್ ಬಂತು ಡುಂ ಡುಂ ಡುಂ....!


" ಕೇಡುಗಾಲಕ್ಕೆ ಕುದುರೆ ಮೊಟ್ಟೆಯಿಟ್ಟಿತಂತೆ!" ಹಾಗಂತ ಅನ್ನಿಸಿದ್ದು "ಕನ್ನಡ"ದ ಹಡಾಲೆದ್ದು ಹೋದ "ಪ್ರಭೆ"ಯೊಂದರ, ಅಮಾಯಕರನ್ನು ಪತ್ರಿಕೋದ್ಯಮದ ಹೆಸರಿನಲ್ಲಿ ಹೆದರಿಸಿ ದೋಚಿ ಸಂಪಾದಿಸುವ ದಗಲ್ಬಾಜಿ "ಸಂಪಾದಕ"ನ ಸಾಮಾಜಿಕ ತಾಣಗಳಲ್ಲಿನ ಚಿಲ್ಲರೆ ಶೋಕಿಯನ್ನ ನೋಡುವಾಗ ನಗು ಒತ್ತರಿಸಿಕೊಂಡು ಬರುತ್ತಿದೆ. "ನೋಡಿ ನನ್ನ ರಿವಾಲ್ವರ್!" ಎಂದು ದೀಪಾವಳಿ ಪಿಸ್ತೂಲಿನಂತದೊಂದರ ಫೋಟೋ ಹಾಕಿಕೊಂಡು "ಹೆಂಗೆ" ಅನ್ನುವಂತೆ ಹಣಮಂತನ ಮೂತಿ ಮಾಡಿಕೊಂಡು ನಿಂತ ಇವರು ತನ್ನಲ್ಲಿ "ಬಾಣ" ಇಲ್ಲದಿದ್ದರೂ "ಬಿಲ್ವಿದ್ಯೆ"ಯಲ್ಲಿ ಅತಿ ನಿಪುಣರು! ಈ ಕಾರಣಕ್ಕಾಗಿಯೆ ದಿಗ್ವಿ"ವಿಜಯ"ಯಾತ್ರೆಯನ್ನ ಕರ್ನಾಟಕದಾದ್ಯಂತ ನಡೆಸುತ್ತಿದ್ದ ನಂಬರ್ ಒನ್ ಪತ್ರಿಕೆಯಿಂದ "ಹಚ್ಯಾ" ಅಂತ ಉಗಿದಟ್ಟಿಸಿ ಕೊಂಡಿದ್ದರು. ಇದಕ್ಕೆ ಪೂರಕವಾಗಿ ಅಲ್ಲಿಯೂ "ಸಂಪಾದಕ"(?)ರಾಗಿದ್ದ ಸನ್ಮಾನ್ಯರು ಲಿಂಬೆಹುಳಿಯಂತಹ "ಬೆಡ್ ಮೇಟ್"ನ ಜೊತೆ ಒಟ್ಟೊಟ್ಟಿಗೆ ರಾಜಧಾನಿಯಲ್ಲಿ "ರಾತ್ರಿ ಕಾರ್ಯಾಚರಣೆ"ಗೆ ಇಳೀದಿದ್ದೂ ಅಶ್ಯವಾಗಿ ಸುದ್ದಿಯಾದ್ದರಿಂದ "ಇಂಡಿಯಾ"ದ ದೊಡ್ಡ ಪತ್ರಿಕಾ ಸಮೂಹದವರು ಈ ಚೋರಗುರುವನ್ನ ಇವರ ಇನ್ನೆಲ್ಲ ಚಾಂಡಾಳ ಶಿಷ್ಯಂಡಿರೊಂದಿಗೆ ಸಕಲ ಗೌರವಾದಾರಗಳೊಂದಿಗೆ ಚಾಪೆ ಚೊಂಬು ಕೊಟ್ಟು ಬೀಳ್ಕೊಟ್ಟಿತ್ತು. ಆದರೆ "ಹುಟ್ಟು ಗುಣ ಸುಟ್ಟರೂ ಹೋಗದು" ಎಂಬಂತೆ ಅಂತರ್ಜಾಲ ತಾಣಗಳಲ್ಲಿ ತಮ್ಮ ನಾಲಿಗೆ ತೀಟೆಯನ್ನ ಹಳೆಯ ಅನ್ನದಾತ ಸಂಸ್ಥೆಯ ಮೇಲೆ ವ್ಯಥಾ ವಿಷ ಕಾರುವ ಮೂಲಕ ತೀರಿಸಿಕೊಂಡಿದ್ದರು. ಆಗಲೆ ನಡುವಯಸ್ಸಿನವರಾಗಿದ್ದ ಇವರು "ಅಮೇರಿಕೆಗೆ ಹೋಗುತ್ತೀನಿ" ಅಂತಲೂ, "ಅಲ್ಲಿ ಅದೆನನ್ನೋ ಓದಿ ಗುಡ್ಡೆ ಹಾಕುತ್ತೀನಿ" ಬಹಿರಂಗವಾಗಿ ಊಳಿಟ್ಟರಾದರೂ ಇವರ ಅಸಲಿಯತ್ತನ್ನ ಬಲ್ಲ ಬಲ್ಲಿದರು "ಬಹುಶಃ ರಾತ್ರಿ 'ಕೇಳ್ರಪ್ಪೋ ಕೇಳಿ' ನಡೆಸುವಾಗ ಹೇಗೆ ಸಿಕ್ಕಿಬೀಳದೆ ಬಚಾವಾಗೋದು?" ತರದ ಯಾವುದೊ "ಅಲ್ಪ" ಅವಧಿಯ ಕೋರ್ಸನ್ನ ಅಲ್ಲಿ ಅವರು ಮಾಡಿ "ಪದವಿಧರ"ರಾಗಬಹುದು ಅಂದುಕೊಂಡು ತುಟಿ ಅಂಚಿನಲ್ಲಿಯೆ ವ್ಯಂಗ್ಯದ ನಗೆ ನಕ್ಕು ಸುಮ್ಮನಾದರು.ಆದರೆ ಅಮೇರಿಕೆಯಿರಲಿ ಪಕ್ಕದ ಅಮ್ಮಸಂದ್ರಕ್ಕೂ ವಲಸೆ ಹೋಗದ ಇಲ್ಲದ "ಬಾಣ ಭಟ್ಟ"ರು ಕರುನಾಡ ಕಂಡಕಂಡ ಪತ್ರಿಕಾ ಸಮೂಹಗಳ ಬಾಗಿಲು ತಟ್ಟಿದರೂ ೈವರ "ಸಂಪಾದಕ" ನೈಪುಣ್ಯದ ಅರಿವಿದ್ದ ಎಲ್ಲರೂ ರಾಗವಾಗಿ "ಮುಂದೋಗಪ್ಪಾ....!" ಅಂತ ಸಾಗ ಹಾಕಿ ತೊಲಗಿತು ಶನಿ ಅಂತ ನಿಟ್ಟುಸಿರು ಬಿಟ್ಟರು. ಆದರೆ "ಕನ್ನಡ" ಪತ್ರಿಕೋದ್ಯಮದಲ್ಲಿ ತನ್ನ "ಪ್ರಭಾ"ವವನ್ನ ದಟ್ಟವಾಗಿ ಬೀರಲೆ ಬೇಕೆಂದು ಪಣ ತೊಟ್ಟಿದ್ದ ಈ ತೊಟ್ಟಿ ಗ್ಯಾಂಗ್ ಗಣಿ ಕಳ್ಳ ರೆಡ್ಡಿಯಿಟ್ಟ ಸ"ಗಣಿ" ತಿಂದು ತನ್ನ ಪತ್ರಿಕೆಯನ್ನ ಬಿಕರಿಗಿಟ್ಟು ಆಗಷ್ಟೆ ಹೊಸ ಗಿರಾಕಿಯನ್ನ ಹುಡುಕಿಕೊಂಡಿದ್ದ ಮನೋಜ ಮಾರ್ವಾಡಿಯೊಬ್ಬನಿಗೆ ಒಂದು ಕೋಟಿಯ ಕಕ್ಕ ತಿನ್ನಿಸಿ ಅಲ್ಲಿಗೆ ಪುನಃ "ಮೈತುಂಬ"(?!) ಸಂಪಾದಿಸಲು ತನ್ನ ಶನಿ ಶಿಷ್ಯಂದಿರೊಂದಿಗೆ ಅಮರಿಕೊಂಡು ಬಿಟ್ಟರು. ಅಲ್ಲಿಯವರೆಗೂ ಕೇಳಿದವರಿಗಿರಲಿ ಕೇಳದವರಿಗೂ ಕರೆಕರೆದು ಕರಕರೆಯಾಗುವ ಹಾಗೆ ಅಮೇರಿಕೆಯ ಕಥೆ ಹೇಳುತ್ತಿದ್ದ ಅಮ್ಮಸಂದ್ರದ ಈ ಅರ್ಜೆಂಟ್ ಗಿರಾಕಿ ಅಲ್ಲಿಗೆ ಬಂದದ್ದೆ ತಡ ಅಲ್ಲಿವರೆಗೂ ಆ ಪತ್ರಿಕೆಗೊಂದು ಕಳೆತಂದು ಕೊಟ್ಟಿದ್ದ ಉತ್ಸಾಹಿ ಸಂಪಾದಕರು "ಶಿವಾ" ಅಂತ ಇವನೊಂದಿಗೆ ಏಗಲಾರೆ ಅಂತ ಇವನ ಮುಖಕ್ಕೆ ರಾಜಿನಾಮೆ ರಾಚಿ ಧೀಮಂತಿಕೆಯಿಂದ ಎದ್ದು ಹೊರ ಬಂದರು. ಹೀಗೆ ಮೊದಲ ದಿನವೆ ಕ್ಯಾಕರಿಸಿ ಉಗಿಸಿ ಕೊಂಡರೂ ಅಭ್ಯಾಸ ಬಲದಿಂದ ಅದನ್ನ ಒರೆಸಿಕೊಂಡ ಈ "ಜಾಣ ಭಟ್ಟ"ರು ಮತ್ತೆ ಮೊದಲಿನ ಜೋಷಿನಿಂದಲೆ "ಎನೇನೆಲ್ಲ ಮಾಡ್ತೀವಿ ನೋಡ್ತಿರಿ!" ಅಂತ ಅಕ್ರಮ "ಸಂಪಾದನೆ"ಯ ಎರಡನೆ ಸುತ್ತಿನ ಕಾರ್ಯಾಚರಣೆಗೆ ಇಳಿದರು. ಈ ಸಾರಿ "ಇಪ್ಪತ್ನಾಲ್ಕು ಕ್ಯಾರೆಟ್" ರೋಲ್ಡ್'ಗೋಲ್ಡ್ ವಾರ್ತಾವಾಹಿನಿಯೊಂದು ಇವರ ಹಿಡಿತಕ್ಕೆ ಬಂದಿದ್ದರಿಂದ "ನಿತ್ಯ" "ಋಷಿ" ಮೂಲ ಹುಡುಕಿ ತಮ್ಮ ಅಕ್ರಮ ಗಳಿಕೆಯನ್ನ ಈ ಥರ್ಡ್'ರೇಟ್ ಸಂಪಾದಕ ದಿನ ದಿನಕ್ಕೂ ವೃದ್ಧಿಸಿಕೊಳ್ಳ ತೊಡಗಿದ. ತನ್ನ "ನೂರೆಂಟು ಗೂಟ"ಗಳನ್ನ ಹಲುಬಲು ಪತ್ರಿಕೆ, ಈ ಗೂಟದ ಸುಖದ ವ್ಯವಸ್ಥೆಗೆ ಛಾನಲ್! ಅಂದಿನಿಂದ "ಬಾಣ" ಬಿಟ್ಟಲ್ಲೆಲ್ಲ ಭಟ್ಟನ ಲಾಭದ ಒಸರು ಉಕ್ಕುಕ್ಕಿ ಹರಿಯುತ್ತಿದೆ. ಈ ನಡುವೆ "ದುಬಾರಿ ಕಾರು ಕೊಂಡೆ" ಅಂತ ಬೀಗಿದ ಇವ ವಾಸ್ತವವಾಗಿ ಅದನ್ನ ಕೋಟಾ ಜ್ಯೋತಿಷಿಯೊಬ್ಬನಿಂದ ನಯಾಪೈಸೆಯ ಖರ್ಚಿಲ್ಲದೆ ಕಿತ್ತು"ಕೊಂಡಿದ್ದ" ಅನ್ನೋದು ಎಲ್ಲರಿಗೂ ಗೊತ್ತಿತ್ತು. ತನ್ನ ಹೀನಚಾಳಿಗಳನ್ನ ಎಲ್ಲರಂತೆ ತಾವೂ ಹೇಳಿಕೊಂಡು ಕ್ಯಾಕರಿಸಿದರು ಎನ್ನುವ ಏಕೈಕ ಕಾರಣಕ್ಕಾಗಿ ಇನ್ನೊಂದು "ಪಟ್ಟಣ"ದಲ್ಲಿ ಶೆಟ್ಟರಾಗಿದ್ದ ತನ್ನ ವಿದ್ಯಾಗುರುಗಳನ್ನ ವ್ಯಥಾ ತನ್ನ "ನೂರೆಂಟು ಗೂಟ"ದಲ್ಲಿ ಅನ್ಗತ್ಯವಾಗಿ ಹೀನಾಯ ತಿವಿದು ನನ್ನ ಸುದ್ದಿಗೆ ಬಂದವರಿಗೆ ಇದೇ ಗತಿ ಎನ್ನುವ ಬಹಿರಂಗ ಬೆದರಿಕೆಯೊಡ್ಡಿದ. ಇಂತಹ ಪೊಳ್ಳೂ ಬೆದರಿಕೆಗಳಿಗೆ ನಯಾಪೈಸದ ಬೆಲೆ ಕೊಡದ ಪ್ರಜ್ಞಾವಂತರು "ಅದೇನು ಕಿತ್ಕೋಳ್ತೀಯೋ ಕಿತ್ಕೋ ಹೋಗೋಲೇಯ್" ಅಂತ ಇವನ ಊಳನ್ನ ಎಡಗಾಲಲ್ಲಿ ಒದ್ದರು. ಹಿಂಗಿರೊ ಈ ಕಮಂಗಿ ಮೊನ್ನೆಮೊನ್ನೆ "ಜ್ಞಾನಜ್ಯೋತಿ" ಸಭಾಂಗಣದಲ್ಲಿ ಬಸ್ಸುಗಟ್ಟಲೆ ಮಂದಿಯನ್ನ ವಿಶ್ವವಿದ್ಯಾಲಯದ ಹಾಸ್ಟೆಲ್'ಗಳಿಂದ ತುಂಬಿಕೊಂಡು ಬಂದ ಪಾರ್ಟ್'ಟೈಮ್ ರಾಜಕಾರಣಿ ಹಾಗೂ ಫುಲ್'ಟೈಮ್ ವಿಶ್ವವಿದ್ಯಾಲಯದ ಅಧಿಕಾರಿ ಚುನಾವಣೆಯಲ್ಲಿ ಡೆಪಾಜಿಟ್ ಜಪ್ತಾಗಿದ್ದ "ಮೈಲಾರಿ"ಯ ಜೊತೆ ಸೇರಿ ಮಾಡಿದ ಗಾಂಧಿ ಕುರಿತ ಕಾರ್ಯಕ್ರಮದ ಬಹಿರಂಗ ಶ್ರಾದ್ಧದ ಪ್ರತ್ಯಕ್ಷದರ್ಶಿಗಳಾಗಿದ್ದ ಹಿರಿಯ ಗಾಂಧಿವಾದಿಗಳೊಬ್ಬರು "ಗಾಂಧಿ ಕಾರ್ಯಕ್ರಮದ ವೇದಿಕೆಯಲ್ಲಿ ಈ ಗೂಂಡಾಗಳಿಗೇನು ಕೆಲಸ?" ಅಂತ ವಿಷಾದದಿಂದ ಲೊಚಗುಟ್ಟಿದರು. ಅಲ್ಲಿನ ವೇದಿಕೆಯಲ್ಲಿ "ನಾನು ಹದಿನೈದು ವರ್ಷದ ಹಿಂದೆ ಇಂಗ್ಲೆಂಡಿಗೆ ಹೋಗಿದ್ದಾಗ ಕನ್ನಡದಲ್ಲಿ ಈ ಮೈಲ್ ಹೊಂದಿದ ಮೊದಲ ಪತರಕರ್ತ ನಾನೆ!" ಅಂತ ತನ್ನ ಎಂದಿನ ಸ್ವಕುಚ ಮರ್ದನದ ಶೈಲಿಯಲ್ಲಿ ಈ ಕಪಿ ಆತ್ಮರತಿಗಿಳಿದಿದ್ದರೆ, ಮೈಲಾರಿಯ ಹಿಂ'ಬಾಲಕ"ರು ತಮ್ಮ ಕೊರಮ ಗುರುವಿನ ಹೆಸರು ಮೈಕಿನಲ್ಲಿ ಮೊಳಗಿದಾಗಲೆಲ್ಲ ಕೂಗಿ-ಕಿರುಚಿ, ಸಿಳ್ಳೆ ಹೊಡೆದು ಯಶಸ್ವಿಯಾಗಿ ಕಾರ್ಯಕ್ರಮದ ಆಶಯವನ್ನ ಹಳ್ಳ ಹಿಡಿಸಿಯೆಬಿಟ್ಟರು. ನಿಜವಾಗಿಯೂ ಕಾರ್ಯಕ್ರಮದ ಕುರಿತ ಆಸಕ್ತಿ ಹೊತ್ತು ಹೋದವರಿಗೆ ಅಂದು ಗತಿಯಾದದ್ದು ಕೇವಲ ನಿಟ್ಟುಸಿರು!. ಹಾಗೆ ನೋಡಿದರೆ ತನ್ನ ಪೂರ್ವಾಶ್ರಮದ ಪತ್ರಿಕೆಯಲ್ಲಿ "ಮೈಲಾರಿ"ಯ ಮಗ್ಗುಲು ಮುರಿಯುತ್ತಿದ್ದ ಈ ಬಾಣಭಟ್ಟ ಈಗ ಅದೆ ಮೈಲಾರಿಯನ್ನ ಅಪ್ಪಿ ಮುದ್ದಾಡುವಲ್ಲಿ ಕೈ ಬದಲಾಗಿರುವ ಮೈಲಿಗೆಯಾಗಿರುವ ಹಡಬೆ ಕಾಂಚಣದ ಝಣಝಣದ ಹಿರಿದಾದ ಪಾತ್ರ ಇರೋದು ಬಹಿರಂಗ ಗುಟ್ಟು. ಅದೆ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಗಳೆ ಹಾಜರಿದ್ದರೂ ಕುಲ ಸಚಿವರಿಗೆ ಮೊದಲ ಮಣೆ ಹಾಕಿದ ಅಪಸವ್ಯಗಳನ್ನೂ ಭಟ್ಟಂಗಿ ಬಾಣಭಟ್ಟ ನಡೆಸಿ ಧನ್ಯನಾದ. ಎಷ್ಟೆಂದರೂ ಬಾಚಿ ತಿಂದ ಕೊಳಕು ಕಾಸಿನ ಋಣ!. ಇವೆಲ್ಲವನ್ನೂ ಕಡೆಪಕ್ಷ ಇಷ್ಟು ದಿನ ತೆರೆಮರೆಯಲ್ಲಿ ಮಾಡಿ ಸಿಗ ಬೀಳುತ್ತಿದ್ದ ಈ "ಸಂಪಾದಕ" ಕೈಪಾರ್ಟಿಯ 'ವಿಗ್'ನೇಶ್ವರ ವಿದೇಶಾಂಗ ಖಾತೆಯಿಂದ ಮರಳಿ ಮಂಡ್ಯದ ಮಣ್ಣಿಗೆ ಮೊನ್ನೆಮೊನ್ನೆಯಷ್ಟೆ ಬಂದಾಗ "ಇನ್ನು ನನ್ನ ಪುಕ್ಸಟ್ಟೆ ವಿಮಾನದಲ್ಲಿ ಫಾರಿನ್ ಸುತ್ಸವ್ರ್ ಯಾರು?" ಅಂತ ಬಹಿರಂಗವಾಗಿ ರೋಧಿಸಿ ಎಲ್ಲರ ನಗೆಪಾಟಲಿಗೆ ಈಡಾದ. ಈ ಹಿಂದೆ "ಫಾರಿನ್ ಕೃಷ್ಣ" ಮಾಡಿಸಿದ್ದ ಬಿಟ್ಟಿ ಟ್ರಿಪ್ಪಿಗೆ ಮುಂದಿನ ದಿನಗಳಲ್ಲಿ "ಪ್ರ್ಭಭಾ"ವಶಾಲಿ ಭೋಪರಾಕನ್ನ ಕನ್ನಡದ ಕಣ್ಮಣಿಗಳು ಇನ್ನು ಮುಂದೆ ನಿರೀಕ್ಷಿಸಬಹುದು. ಜೊತೆಗೆ ಇಲ್ಲದ ಬಾಣದ ಜಾಗದಲ್ಲಿ ಹೊಸತಾಗಿ ಕೊಂಡುಕೊಂಡ "ದೀಪಾವಳಿ ಪಿಸ್ತೂಲು" ಬೇರೆ! ಈ ಖದೀಮರನ್ನ ಕ್ಯಾಕರಿಸಿ ದೂರವಿರಿಸಲು ಕನ್ನಡಿಗರಿಗೆ ಹೊಸತೊಂದು ಕಾರಣ ಸಿಕ್ಕಂತಾಯಿತು.

29 October 2012

ಯಾರದ್ದೋ ಕಸ... ಅಣ್ಣಮ್ಮನ ಜಾತ್ರೆ?!


ನಾಡಿನ -ನುಡಿಯ ಇಲ್ಲಿನ ನೆಲ-ಜಲದ ಕುರಿತು ಪುಟಗಟ್ಟಲೆ ಪತ್ರಿಕೆಗಳಲ್ಲಿ ಹಾರಾಡುವ "ಉಟ್ಟು ಖನ್ನಡ ಓರಾಟಗಾರರು" ಅದೆಲ್ಲಿ ಹಪ್ತಾ ಕಮಾಯಿಸುತ್ತಾ ಅಂಡಲೆಯುತ್ತಿದ್ದಾರೆ? ಈ ವಸೂಲಿ ವೀರರಿಂದ ಮೊದಲು ಕನ್ನಡ ಹಾಗೂ ಕರುನಾಡನ್ನ ಕಾಪಾಡಬೇಕಿದೆ. ಥರೇವಾರಿ ಕಾಯಿಲೆಗಳು ಕಸದ ಹೆದ್ದಾರಿಯೇರಿ ನಗರ ಪ್ರವೇಶಿಸುವ ಮೊದಲು ಇದಕ್ಕಾಗಿ ಹೋರಾಡಲಿಕ್ಕೇನಾಗಿದೆ ರೋಗ ಈ ಅರ್ಜೆಂಟ್ ಕನ್ನಡಮ್ಮನ ಅರ್ಜೆಂಟ್ ಕುವರರ ಅರ್ಭಟಕ್ಕೆ? ನಮ್ಮೂರಿನ ಪೇಪರ್'ಗಳಲ್ಲಿ ಕೈ ಸೋಲುವಷ್ಟು ಬರೆದು ಬರೆದು ಕೈ ಬಿದ್ದು ಹೋಗಿದ್ದರೂ "ಕ್ಯಾರೇ!" ಅನ್ನದ ಎಲ್ಲರೂ ಇದೀಗ ಅಮೇರಿಕಾದ "ನ್ಯೂಯಾರ್ಕ್ ಟೈಮ್ಸ್"ನ ಕಮಂಡಲದಿಂದ ತೀರ್ಥ ಸುರಿದಿದ್ದೇ ತಡ "ಸತ್ತಂತಿಹರನು ಬಡಿದೆಚ್ಚರಿಸಿ"ದಂತೆ ಗಡಿಬಿಡಿ ಮಾಡ್ತಿದಾರೆ. ಇನ್ನು ಇಷ್ಟು ದಿನ "ನಿತ್ಯ" "ಋಷಿ" ಮೂಲದ ತಲಾಷಿನಲ್ಲಿ ನೌಟಂಕಿಯಾಡುತ್ತಿದ್ದ "ಉತ್ತಮ ಸಮ್ 'ಮಜ'"ಕ್ಕಾಗಿ "ನೇರ (ವಾಗಿ)- (ಮೂರೂ) ಬಿಟ್ಟ- ನಿರಂತರ (ಹಡಬೆ)"ಗಳು ಈಗ "ಕಸದಿಂದ ಟಿಆರ್'ಪಿ ರಸ"ವನ್ನ ತೆಗೆಯಲು ಹೊರಟಿದ್ದಾರೆ! ಅಂತೂ ಕೂಗು ಮಾರಿಗಳಿಗೆಲ್ಲ ಅಮೇರಿಕಾದ ಮೋಹನ ಮುರುಳಿಯ ರಾಗಕ್ಕೆ ಅರ್ಜೆಂಟ್ ಎಚ್ಛರವಾಗಿದೆ. ಅಂತೂ ನಮ್ಮೂರಿನವರು ಬರೆದರೆ ರದ್ದಿ, ಅಮೇರಿಕೆಯಲ್ಲಿ ಪ್ರಕಟವಾದರಷ್ಟೆ ಸುದ್ದಿ ಅನ್ನುವುದು ಮತ್ತೆ ಸರಾಸಗಟಾಗಿ ಸಾಬೀತಾಯಿತು. ನಾಚಿಕೆಗೇಡು. ಊರೆಲ್ಲಾ ವಿಲೇವಾರಿಯಾಗದ ಕಸದ ರಾಶಿ ಹೊತ್ತು ನಾರುತ್ತಿದೆ. ನಮ್ಮಲ್ಲಿ ನಿಮ್ಮೂರಿನ ದರಿದ್ರ ಕಸ ತಂದು ಸುರಿಯಬೇಡಿ ಎಂದು ಆಗ್ರಹಿಸುವ ಮಂಡ್ಲೂರು ಮತ್ತಿತರ ಕಸ ಸುರಿವ ತಾಣಗಳ ಜನರ ನೋವೂ ನ್ಯಾಯವೆ ಆಗಿದೆ. ನಮಗದು ಕಸವಾಗಿದ್ದರೆ ಅವರಿಗೂ ಅದು ಕಸವೇ ತಾನೆ? ಸಂಸ್ಕರಿಸುವ ಉದ್ದೇಶ ಹೊತ್ತು ಪಡೆದ ಅಲ್ಲಿನ ಭೂಮಿಗಳಲ್ಲಿ ಮಾಡಬೇಕಿದ್ದ ಕಸ ಸಂಸ್ಕರಣೆಯ ಹೆಸರಲ್ಲಿ ಹಡಬಿಟ್ಟಿ ದುಡ್ಡು ಹೊಡೆದ ಜನಪ್ರತಿನಿಧಿಗಳ, ಪಾಲಿಕೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ದುಷ್ಟ ಗ್ಯಾಂಗ್; ಈಗ ಮ್ಯೂಸಿಕಲ್ ಛೇರಿನಂತೆ ತಪ್ಪನ್ನ ಇನ್ನೊಬ್ಬರ ಮೇಲೆ ಸರಾಗವಾಗಿ ವರ್ಗಾಯಿಸುತ್ತಾ ಮುಸಿಮುಸಿ ನಗುತ್ತಿದ್ದಾರೆ. ಕಸದಲ್ಲಿ ಹೊಡೆದ ಕಾಸು ಅವರ ತಿಜೋರಿಯಲ್ಲಿ ಗಹಗಹಿಸುತ್ತಿದೆ. ಲಜ್ಜೆ ಮರೆತು ಮಾಡುವ ಕೆಲಸಬಿಟ್ಟು ಮೆರೆಯುತ್ತಾ ಇರುವ ಈ ಆಳುವ ಮಂದಿಗೆ ಮಾನ-ಮರ್ಯಾದೆ ಎನಾದರೂ ಇದೆಯ? ಅಂದಹಾಗೆ ಖರ್ಚಿಗೆ ಕಾಸಿಲ್ಲದೆ ಬಿಬಿಎಂಪಿ ಕಂಡಕಂಡವರಲ್ಲಿ ಸಾಲ ಎತ್ತುತ್ತಿದೆಯಂತಪ್ಪ! ಇದಾಗಲೆ ಎತ್ತಿದ್ದ ತೀರಿಸಲಾಗದ ಹಳೆ ಸಾಲ ತೀರಿಸೋಕೆ ಮತ್ತೊಂದು ಹೊಸ ಸಾಲ!! ಇವಕ್ಕೆ ಹಣ ಹೊಂದಿಸೊಕೆ ಪಾಲಿಕೆಯ ದೊಣೆನಾಯಕರು ಜನರ ಆಸ್ತಿಗಳನ್ನ ಕಂಡಕಂಡವರಿಗೆ ಅಡ ಹಾಕುತ್ತಾ ಕಾಲ ಹಾಕುತ್ತಿದ್ದಾರೆ. ಬಡ ಬೆಂಗಳೂರಿಗ ಮಾತ್ರ ಮೂಗು ಮುಚ್ಚಿಕೊಳ್ಳಲು ಪರದಾಡುತ್ತಿದ್ದರೆ ಅಧಿಕಾರದ ಮತ್ತಿನಲ್ಲಿ ಮೇಯೋರು ಮಾತ್ರ ಹಸನಾಗಿ ಮೂರೂ ಬಿಟ್ಟು ಮೇಯ್ತಾನೆ ಇದಾರೆ. ಇವರ ಕೃಪೆಯಿಂದ ಈಗಷ್ಟೆ ಶುರುವಾಗಿರುವ ಚಳಿಯಲ್ಲಿ ನಗರದ ನಾಗರೀಕರ ಚಳಿಯಲ್ಲಿ ನಾಸಿಕಕ್ಕೆ ನಿರಂತರ ಉಚಿತವಾದ ನಾತ. ಇಂತಾ ಸು"ಭಿಕ್ಷ" ಕಾಲದಲ್ಲಿ ತಿರುಪತಿ ತಿಮ್ಮಪ್ಪನ ಹೆಸರಿಟ್ಟು ಕೊಂಡಿರೋ ಮೇಯರ್-ಉಪ ಮೇಯರ್'ಗಳೆಂಬ ಗಳ ಹಿಡುಕರಿಬ್ಬರೂ ಸೇರಿ ಪಾಲಿಕೆಯನ್ನ ಚನ್ನಾಗಿ ಮುಂಡಾಯಿಸಿ ಇಡೀ ಬೆಂದಕಾಳೂರಿನ ಪ್ರಜೆಗಳಿಗೆ ಉಚಿತ ಉಂಡೆನಾಮ ತಿಕ್ಕುತ್ತಿದ್ದಾರೆ. ಇಂತದ್ದರಲ್ಲಿ ಇವರಲ್ಲೊಬ್ಬ ಹೈವಾನ ತನ್ನ ಜಾತಿಯ "ಕುರಿ" ಪುರಸೇವಕರ ಮಂದೆ ಹೊಡಕೊಂಡು ಥೇಟ್ "ಕುರುಬ"ನ ಗೆಟಪ್ಪಿನಲ್ಲಿ ದುಬೈಗೆ ಹೋಗಿ ಬಂದ, ಅಫ್'ಕೋರ್ಸ್ ಬಿಬಿಎಂಪಿಯ ಖಜಾನೆಯ ಖರ್ಚಲ್ಲಿ. ಇದಕ್ಕೆ ಸಡ್ಡು ಹೊಡೆಯುವಂತೆ ಅಳಿದೂರಿಗೆ ಉಳಿದವನೆ "ಗೌಡ"ನಂತಾಡಿದ ಇನ್ನೊಬ್ಬ ತನ್ನ ಜಾತಿಯ ಪುರಸೇವಕರನ್ನೆಲ್ಲ ಥೇಟ್ ಗೌಡಿಕೆಯ ಗತ್ತಲ್ಲಿ ಅದೆ ಪಾಲಿಕೆಯ ಖರ್ಚಿನಲ್ಲಿ ಮೂರ್ಮೂರು ದಿನ ಮಡಿಕೇರಿ ಸುತ್ತಿಸಿದ. ಊರು ನೈರ್ಮಲ್ಯದ ವಿಷಯದಲ್ಲಿ ಹಳ್ಳ ಹಿಡಿಯುತ್ತಿದ್ದರೆ ಈ ಖದೀಮರಿಗೆ ಮಾತ್ರ ತೆರಿಗೆದಾರರ ದುಡ್ಡಲ್ಲಿ ಚಿಲ್ಲರೆ ಶೋಕಿ ಮಾಡುವ ಖಾಯಿಲೆ. ನೆನಪಿಡಿ ಬಿಬಿಎಂಪಿಯೆಂಬ ಬಡ ಗೋಮಾಳವನ್ನ ಈ ಇಬ್ಬರೂ ಮನಸೋ ಇಚ್ಛೆ ಅಧಿಕಾರದ ಹೆಸರಲ್ಲಿ ನಿರಾತಂಕವಾಗಿ ಮೇಯ್ದು "ಮೇಯರ್" ಎನ್ನುವುದು "ಮೇಯುವವರ್" ಕೂಡಾ ಆಗಬಹುದು ಎನ್ನುವುದನ್ನ ಸಾಬೀತು ಪಡಿಸಿ ಪುನೀತರಾದರು. ಇಬ್ಬರ ಪ್ರವಾಸದ ಖರ್ಚನ್ನೂ ಬಡ ಬಿಬಿಎಂಪಿಯೆ ಸಾಲದ ಶೂಲ ಹೊತ್ತೇ ಭರಿಸಲಾಗದೆ ಭರಿಸಿತು. ಮೇರಾ ಭಾರತ್ ಮಹಾನ್!

12 October 2012

ಅನುದಿನದ ಅಕಾಲಿಕ ಮರಣ....





















ಕೇವಲ ಮನಡದೊಳಗೆ ಆರದೆ ಉಳಿದ ಇಬ್ಬನಿ ಹನಿಯಲ್ಲ
 ನೀನು ಆಡದೆ ಉಳಿದ ಮೋಹಕ ದನಿಯೂ ಅಲ್ಲ...
 ನೀ ನನ್ನೊಳಗಿನ ಮೌನ,
 ನಾನದರಲ್ಲೆ ತಲ್ಲೀನ/
ಬಂಧಕ್ಕಿಂತ ಮಿಗಿಲಾದ ಸಂಬಂಧ ಬೆಸೆದಿರುವಾಗ ನಿನ್ನೊಂದಿಗೆ
ಇನ್ನಿತರ ಬೆಸುಗೆಗಳ ಬಯಕೆ ನನಗಿಲ್ಲವೆ ಇಲ್ಲ...
ಪ್ರತಿ ಪದವೂ ನಿನ್ನ ಹೆಸರನ್ನೆ ಪದೆಪದೆ ಉಸುರುವಾಗ
ಈ ನನ್ನ ಉಸಿರು ಕೇವಲ ನನ್ನದಷ್ಟೆ ಹೇಗಾದೀತು?,
ಕನಸ ಚಂಬಿಸುವ ಭ್ರಮೆಗಳ
ಈಡೇರದ ಬಯಕೆಗಳದ್ದು ಅನುದಿನ ಅಕಾಲಿಕ ಮರಣ.//


 ಮೋಡದಾಚೆಗೆ ಜಾರಿದ ಭಾಸ್ಕರನ
 ತೆರೆಮರೆಯ ಕಣ್ಣಾಮುಚ್ಚಾಲೆಯಲ್ಲಿ ಧರೆ ಪುಳಕಗೊಳ್ಳುತ್ತಿದೆ....
ಅರಳಿದ ಮನದಾವರೆ ಮುದುಡಿ ಮೆಲ್ಲಗೆ
ಬಾಡುವ ಕ್ಷಣದಲ್ಲಿ ನಿನ್ನ ನೆನಪುಗಳ
ಕೊನೆ ಹನಿಯನ್ನ ತನ್ನೆದೆಯೊಳಗೆ ಇಳಿಸಿಕೊಂಡಿದೆ,
ನಿನ್ನ ಹೆಜ್ಜೆಗುರುತುಗಳು ಹಸಿ ಆವೆ ಆವರಿಸಿರುವ
ನನ್ನೆದೆಯಲ್ಲಿ ಆಳವಾಗಿ ಉಳಿದು ಹೋಗಿ...
ನಿನ್ನನೆ ಪದೇಪದೇ ನೆನಪಿಸುತ್ತಿದೆ/
ಕಮರಿದ ಕನಸನ್ನು ಮತ್ತರಳಿಸಿದ
ನಿನ್ನ ನೆನಪುಗಳಿಗೆ ನನ್ನ ಮನಸು ಸದಾ ಋಣಿ....
ಸ್ವಪ್ನಗಳ ಗಾಢಾಲಿಂಗನದಲ್ಲಿ ಮಗ್ನ ಮನ
 ನಿನ್ನೆದೆಯ ಕಾವಲ್ಲಿ ತುಸು ಬೆಚ್ಛಗಾಗುತ್ತಿದೆ.//


 ಕಡೆಯ ಕುರುಹನ್ನೂ ಉಳಿಸದೆ ನೀ
ಒರೆಸಿ ಹಾಕಿದ್ದರೂನು ನನ್ನೆಲ್ಲ ನೆನಪುಗಳನ್ನು....
 ನನ್ನೆದೆಯ ಸಂದೂಕದಲ್ಲಿ ನಿನ್ನೆಲ್ಲಾ ಪಳಯುಳಿಕೆಗಳು
 ಶಾಶ್ವತ ಉಳಿದಿವೆ,
ಎದೆ ಸುಡುವ ವಿರಹದ ಉರಿಗೆ...
 ನೆನಪುಗಳನ್ನೂ ಕರಕಲಾಗಿಸುವ ಶಕ್ತಿ ಇಲ್ಲ/
ಸಾದ್ಯಂತ ಸಲಹುವ ನೆನಪಿನ ಅಲಗು
ಅದೆಷ್ಟೆ ಹರಿತವಾಗಿದ್ದರೂ...
 ನಿತ್ಯ ನನ್ನೆದೆ ತೂರಿ ಅದು ಹೊರಬರುವಾಗ
ಮೂಡುವ ನೋವಿನಲ್ಲೂ ಒಂದು ಸುಖವಿದೆ,
ಇದು ಎಂದಿಗೂ ಸರಿ ಹೋಗದ ಹುಚ್ಚು ಮನಕ್ಕೆ
ನೀನೆಂದರೆ ಇನ್ನೂ ನೆಚ್ಚು....
 ನೀ ಇನ್ನೆಲ್ಲದಕ್ಕಿಂತ ನನಗೆ ಹೆಚ್ಚು.//


 ನನ್ನೆದೆ ಕುದಿ ಮೌನದ ಕುಡಿ ಮನದ ಜ್ವಾಲಾಮುಖಿಯಲ್ಲಿ
 ನಿನ್ನದೆ ನೆನಪಿನ ಲಾವಾರಸ ಉಕ್ಕುತ್ತಿದೆ...
ಕಾರಣವಿಲ್ಲದೆ ಕೆಣಕುವ ಕನಸುಗಳೆ ,
 ನೆಮ್ಮದಿಯ ನಿದ್ರೆ ಬರುವ ಈ ರಾತ್ರಿ
 ನಿಮಗೆ ನನ್ನ ಮನಸ ಕದ ಮುಚ್ಚಲಾಗಿದೆ/
ಗಾಳಿ ಗೀಚಿದ ಮೋಡದೆದೆಯ ಮೇಲಿನ ಗಾನ
ನನ್ನ ಮನದ ಶ್ರುತಿಯನ್ನೂ ಮೀಟಿ
ಮಳೆಹನಿಗಳ ಮಧುರ ಹಾಡಾಗಿಸಿದೆ,
ಒಳಮನದ ಇಳಿಮನೆಯಲ್ಲಿ ಉಳಿದ
ನೂರು ಕನಸುಗಳು ನಿನ್ನ ದಾರಿಯನ್ನೆ.....
ಕಡೆವರೆಗೂ ಕಾಯುತ್ತವೆ.//

07 October 2012

ನನಸಾಗದ ಕನಸಿನ ಆನೆಯ ಅಂಬಾರಿಯೇರಿ...
















( ಮುಂದುವರೆದದ್ದು...)



 ಆನೆಯ ಸವಾರಿ ಮಾಡುವ ನಾಡದೇವಿ ರಾಮೇಶ್ವರ ದೇವಸ್ಥಾನದಿಂದ ಹೊರಟು ಕುಶಾವತಿಯ ಪಾರ್ಕ್ ಮುಟ್ಟಲು ಆ ಜನಜಂಗುಳಿಯಲ್ಲಿ ಭರ್ತಿ ಎರಡರಿಂದ ಮೂರು ಘಂಟೆಯ ಕಾಲ ಬೇಕಾಗುತ್ತಿತ್ತು. ಹೆಚ್ಚು ಕಡಿಮೆ ಮೂರು ಕಿಲೋಮೀಟರ್ ದೂರವಿದ್ದ ಈ ಅಂತರ ಘಂಟೆಗೆ ಒಂದು ಕಿಲೋಮೀಟರ್ ವೇಗದಲ್ಲಿ ನೆರೆದವರನ್ನು ರಂಜಿಸುತ್ತಾ ಅಕ್ಷರಶಃ ತೆವಳಿಕೊಂಡು ಹೋಗುತ್ತಿದ್ದುದರಿಂದ ಇಷ್ಟು ಗರಿಷ್ಠ ವೇಗ ಇದ್ದದ್ದೆ ಹೆಚ್ಚು. ಇಷ್ಟೊಂದು "ಅತಿವೇಗ" ಇರುತ್ತಿದ್ದುದೆ ಈ ಎಲ್ಲಾ ಕಿರಿಕಿರಿಯನ್ನೂ ಸಹಿಸಿಕೊಂಡು ಸ್ಥಬ್ಧಚಿತ್ರಗಳಾಗಿ ವಿವಿಧ ತೆರೆದ ವಾಹನಗಳಲ್ಲಿ ಚಿತ್ರವಿಚಿತ್ರ ವೇಷ ತೊಟ್ಟು -ಧಾರಾಳ ಬಣ್ಣ ಬಳಿಸಿಕೊಂಡು ಸುಡು ಸೆಖೆಯಲ್ಲಿ ನಿಂತಿರುವ ಪಾತ್ರಧಾರಿಗಳ ಹಾಗೂ ಅಂಬಾರಿ ಹೊತ್ತು ಬಿಸಿಲಲ್ಲಿ ಬರಿಗಾಲಲ್ಲಿ ಅಷ್ಟು ದೂರ ಕಾದ ಟಾರು ರಸ್ತೆಯಲ್ಲಿ ಸಾಗುವ ಆನೆಯಮ್ಮನ ಪೂರ್ವಜನ್ಮದ ಭಾಗ್ಯ!. ಇದು ಸಾಲದು ಎಂಬಂತೆ ನಡುನಡುವೆ ತಟ್ಟಿರಾಯ, ಹುಲಿವೇಷ, ಈಗೀಗ ಜಾಗತೀಕರಣದ ಗಾಳಿ ಬಲವಾಗಿಯೆ ಬೀಸಲಾರಂಭಿಸಿದ ಮೇಲೆ ನೇರ ಅಮೆರಿಕಾದ ಡಿಸ್ನಿಲೋಕದಿಂದ ಹಾರಿ ಬಂದಂತೆ ಕಾಣುವ ಡೋನಾಲ್ದ್ ಡೆಕ್, ಮಿಕ್ಕಿ ಮೌಸ್ ಹೀಗೆ ಅಸಹಜ ಗಾತ್ರದ ಅರ್ಜೆಂಟ್ ಫಾರನ್ ಛದ್ಮವೇಷಗಳು, ಅದೇನನ್ನೋ ನೋಡಿ(?) ಅವಾಕಾಗಿ ಬಾಯಿಗೆ ಬೆರಳಿಟ್ಟು ಕೊಂಡ ಕೂಚುಭಟ್ಟ, ಬೊಚ್ಚು ಬಾಯಿ ಕಳಿದ ಅಜ್ಜ -ಅಜ್ಜಿಯ ಜೋಡಿ ಹೀಗೆ ಇನ್ನೂ ಅನೇಕ ದೊಡ್ಡಗಾತ್ರದ ಬೊಂಬೆಗಳಿಗೂ ಭರಪೂರ ಪ್ರತಿಭಾ(?) ಪ್ರದರ್ಶನಕ್ಕೆ ಅವಕಾಶವಾಗಬೇಕಲ್ಲ? ಹೀಗಾಗಿ ಅನಿವಾರ್ಯವಾಗಿ ಇಡಿ ಮೆರವಣಿಗೆ ಯಾವುದೋ ಸ್ಲೋಮೋಶನ್ ಸಿನೆಮಾದ ಹಾಡಿನ ಶಾಟಿನಂತೆ ನೋಡುವವರ ಕಣ್ಣಿಗೆ ಬೀಳುತ್ತಿತ್ತು.



 ಉತ್ಸಾಹಿ ಹುಲು ಮಾನವರ ಇವೆಲ್ಲ ಕೋಟಲೆಗಳನ್ನ ಸಹಿಸಿಕೊಂಡ ಆನೆಯಮ್ಮನ ಮೆರವಣಿಗೆ ಶಿವಮೊಗ್ಗ ರಸ್ತೆಯಲ್ಲಿದ್ದ ಊರಿನ ಗಡಿ ಮುಟ್ಟುವಾಗ ಅಂತೂ ಬಾನಾಡಿಗಳು ತಮ್ಮ ಗೂಡು ಸೇರುವ ಹೊತ್ತಾಗಿರುತ್ತಿತ್ತು. ಅಲ್ಲಿ ಕುಶಾವತಿಯ ನೆಹರೂ ಉದ್ಯಾನವನದಲ್ಲಿದ್ದ ಶಮಿವೃಕ್ಷದ ಪೂಜೆಯನ್ನ ಆನೆಯಮ್ಮನ ಬೆನ್ನ ಮೇಲಿರುತ್ತಿದ್ದ ಮೂಲದೇವಿಯ ಮುಖಬಿಂಬದ ಮುಂದೆ ನೆರವೇರಿಸಿ ;ಚಿಗುರಿರುತ್ತಿದ್ದ ಆ ಗಿಡದ ಮೇಲೆರಗಿದ ಭಕ್ತಾದಿಗಳೆಲ್ಲ ಭಕ್ತಿಯ ಪರಾಕಾಷ್ಠೆಯಲ್ಲಿ ಸಾಸಿವೆ ಗಾತ್ರದ ಕೊಟ್ಟ ಕೊನೆಯ ಹಸಿರು ಎಲೆಯನ್ನೂ ಬಿಡದಂತೆ ಮರವನ್ನ ಬೋಳಿಸಿ, "ಪ್ರೀತಿ ವಿಶ್ವಾಸವಿರಲಿ" ಅಂತ ಪರಸ್ಪರ ಹೇಳಿಕೊಳ್ಳುತ್ತಾ ಊರಿನುದ್ದ ಎಲ್ಲರೂ ಅವನನ್ನ ವಿನಿಮಯ ಮಾಡಿಕೊಳ್ಳುತ್ತಿರುವಾಗ ಬಾನೆಲ್ಲ ಕಾಡಿಗೆ ತೀಡಿದಂತೆ ಪೂರ್ಣ ಕತ್ತಲಾವರಿಸಿ ದಸರೆಯ ಸಂಭ್ರಮಗಳೆಲ್ಲ ಆ ವರ್ಷದ ಮಟ್ಟಿಗೆ ಕೊನೆಯಾಗಿ ಆನೆಯಮ್ಮ ಮರು ಮೆರವಣಿಗೆಯನ್ನ ದೇವಿಯ ಬಿಂಬವನ್ನ ಮರಳಿ ಹೊತ್ತು ದೇವಸ್ಥಾನಕ್ಕೆ ಮುಟ್ಟಿಸುವ ಶಾಸ್ತ್ರ ಮುಗಿಸಿ ತನ್ನ ಸಕ್ರೆಬೈಲಿನ ಬಿಡಾರಕ್ಕೆ ಹೊರಟು ನಿಲ್ಲುತ್ತಿದ್ದಳು, ಅವಳ ಕಿರು ಸೊಂಡಿಲು ಕುಮಾರ ತನ್ನ ಪುಟ್ಟ ಕಿವಿಯಾಡಿಸುತ್ತಾ ನಮ್ಮೂರಿಗೆ ಸಂತಸದಿಂದಲೇ ವಿದಾಯ ಹೇಳುತ್ತಿದ್ದ.



ದಸರದ ಸಡಗರ ಹೀಗೆ ಪ್ರತಿ ವರ್ಷವೂ ಹೊಸತಾಗಿಯೆ ನಮ್ಮನ್ನ ಆವರಿಸಿ ಕೊಳ್ಳುತ್ತಿದ್ದುದು ಹೀಗೆ. ಆದರೆ 1996ರ ದಸರೆಯನ್ನ ಕೊನೆಯುಸಿರಿರುವ ತನಕವೂ ಬಾಳಿನುದ್ದ ನಾನು ಮರೆಯಲಾರೆ. ಏಕೆಂದರೆ ಅಂತಹ ಒಂದು ಮೆರವಣಿಗೆಯಲ್ಲಿ ಹದಿನೈದು ವರ್ಷಗಳ ಹಿಂದೆ ನಾನೂ ಒಂದು ಪಾತ್ರಧಾರಿಯಾಗಬೇಕಿತ್ತು! ಅದು ಸಮುದ್ರ ಮಥನದ ಸ್ತಬ್ಧಚಿತ್ರ. ನೋಡಲು ಎಳೆತನದಲ್ಲಿ ಕತ್ತೆಯೂ ಮುದ್ದಾಗಿಯೇ ಇರುತ್ತದಂತೆ, ಅಲ್ಲದೆ ನನಗೂ ಕತ್ತೆಮರಿಯ ವಯಸ್ಸಾಗಿದ್ದ ಪುಣ್ಯಕಾಲವದು!! ಹೀಗಾಗಿ ಯಾವುದೋ ಪೂರ್ವಜನ್ಮದ ಪುಣ್ಯದಿಂದ ನಮ್ಮ ಇಂಗ್ಲಿಶ್ ಮಾತಾಜಿ ಅಲಿಯಾಸ್ ಶಾಂತಲಾ ಮಾತಾಜಿಯ ಕಣ್ಣಿಗೆ ನನ್ನ ಚೆಲುವು ರಾಚಿಯೇಬಿಟ್ಟಿತು!!! ಅದು ಅಕಾಲದಲ್ಲಿ ರಾಚಿದ ತಪ್ಪಿಗೆ ನಾನೂ ಅವರು ರೂಪಿಸಿದ್ದ "ಸಮುದ್ರ ಮಥನ" ಸ್ತಬ್ಧ ಚಿತ್ರದಲ್ಲಿ ರಬ್ಬರ್ ವಾಸುಕಿಯನ್ನ ಹಿಡಿದೆಳೆವ ಒಬ್ಬ ವೇಷಧಾರಿ ದೇವತೆಯಾಗಿ ಅನಿರೀಕ್ಷಿತವಾಗಿ ಆಯ್ಕೆಯಾದೆ.



ಅರುಂಧತಿ ಎನ್ನುವ ನಮ್ಮ ಶಾಲೆಯ ಹಿರಿಯ ವಿಧ್ಯಾರ್ಥಿನಿ ವಿಷ್ಣುವಾಗಿ ಅವತಾರ ಎತ್ತಲಿಕ್ಕಿದ್ದಳು ಅಂತ ನೆನಪು. ಅವಳನ್ನ "ಮುಂಗಾರಿನ ಮಿಂಚು" ಚಿತ್ರ ಕೊನೆಯ ದೃಶ್ಯದಲ್ಲಿ ನೀವು ನೋಡಿರುತ್ತೀರಿ. ಈ ಆಯ್ಕೆಯ ಹಿಂದಿನ ಕಾರಣ ಇಷ್ಟೆ. ನಾನಾಗ ಮಂಗಳೂರಿನಲ್ಲಿ ಓದುತ್ತಿದ್ದೆ. ಬೇಸಿಗೆ ರಜೆಯಲ್ಲಿ ತೀರ್ಥಹಳ್ಳಿಗೆ ಹೋದಾಗ "ಮಾತೃ ಮಂಡಳಿ"ಯ ಪರವಾಗಿ ಶಾಂತಲಾ ಮಾತಾಜಿ ಏರ್ಪಡಿಸುತ್ತಿದ್ದ ಬೇಸಿಗೆ ಶಿಬಿರದಲ್ಲಿ ಭಾಗವಹಿಸುತ್ತಿದ್ದೆ. ಅಲ್ಲಿ ಚೂಟಿಯಾಗಿ ಹೇಳಿದ ಕೆಲಸ ಮಾಡಿ ಕೊಡುತ್ತಾ, ಹೇಳಿ ಕೊಡುತ್ತಿದ್ದ ಎಲ್ಲಾ ಶ್ಲೋಕ ಹಾಗೂ ವೇದವನ್ನ ತಪ್ಪಿಲ್ಲದೆ ಕಲಿತು ಒಪ್ಪಿಸುತ್ತಿದ್ದ ನನ್ನ ಉಚ್ಚಾರದ ಸ್ಪಷ್ಟತೆ ಅವರನ್ನ ಮೊದಲಿಗೆ ಆಕರ್ಷಿಸಲಿಕ್ಕೂ ಸಾಕು. ಜೊತೆಗೆ ನನ್ನ ಚೆಲುವು ಎದ್ದು ಕಾಣುವಷ್ಟು ಅವರ ದೃಷ್ಠಿಗೂ ದೋಷ ಇತ್ತೇನೋ! ಅಂತೂ ಮುಂದಿನ ರಜೆಯಲ್ಲಿ ಊರಿಗೆ ಬಂದವ ನಾನೂ ಅರ್ಜೆಂಟ್ ದೇವತೆಯಾದೆ.



ದಸರಾಕ್ಕೆ ಇನ್ನೂ ಹದಿನೈದು ದಿನವಿತ್ತು, ಪರ್ಫೆಕ್ಷನ್ನಿಗೆ ವಿಪರೀತ ಮಹತ್ವ ಕೊಡುತ್ತಿದ್ದ ಶಾಂತಲಾ ಮಾತಾಜಿ ಇನ್ನೂ ಹದಿನೈದು ದಿನ ದೂರವಿದ್ದ ವಿಜಯದಶಮಿಗೆ ಬಹಳ ಕಟ್ಟುನಿಟ್ಟಿನ ಅಭ್ಯಾಸ ಮಾಡಿಸುತ್ತಿದ್ದರು, ಎರಡು ಘಂಟೆ ಗೊಂಬೆಗಳಂತೆ ನಿಲ್ಲುವುದನ್ನು ಕಷ್ಟಪಟ್ಟು ಅಭ್ಯಾಸ ಮಾಡಿಯೆ ಮಾಡಿದೆವು! ನಸುಕಿನಲ್ಲಿ ಎದ್ದು ಬಪಮನ ಮಗ ಸಣ್ಣಣ್ಣ ಕೊಟ್ಟಿದ್ದ  ವೃತ್ತ ಪತ್ರಿಕೆಗಳನ್ನ ಊರ ತುಂಬಾ "ಕನ್ನಡಪ್ರಭ" 'ಇಂಡಿಯನ್ ಎಕ್ಸ್'ಪ್ರೆಸ್" ಹಂಚುವ ಕೆಲಸ ಮುಗಿಸಿ ಬೆಳಗ್ಯೆ ತಿಂಡಿಯ ನಂತರ ಈ "ಕಲ್ಲಾಗಿ ನಿಲ್ಲುವ" ಹಟಯೋಗವನ್ನು ನಾನು ಕಟ್ಟೆ ಚನ್ನಕೇಶವನ ಬೀದಿಯಲ್ಲಿದ್ದ ಶಾಂತಲಾ ಮಾತಾಜಿಯ ಮನೆಯಲ್ಲಿ ಕಲಿತರೆ, ಸಂಜೆ ಮೂರರ ನಂತರ ಅವರದ್ದೆ "ಮಾತೃ ಮಂಡಳಿ"ಯ ರಾಮ ಮಂದಿರದಲ್ಲಿನ ವೇದ ತರಗತಿಯಲ್ಲಿ ಭಗವತ್ಗೀತೆಯ ಸಾಲುಗಳನ್ನ ಉರು ಹೊಡೆಯುತ್ತಾ ಕಾಲ ಹಾಕುತ್ತಿದ್ದೆ. ನಡುನಡುವೆ ಶಾಂತಲಾ ಮಾತಾಜಿ ಮನೆಯ ಚಿಕ್ಕಪುಟ್ಟ ಕೆಲಸಗಳಿಗೆ ದಿನದ ಕಾರ್ಯ ಚಟುವಟಿಕೆ ಸೀಮಿತವಾಗಿರುತ್ತಿತ್ತು. ಪರಿಸ್ಥಿತಿ ಹೀಗಿರುವಾಗ ನನ್ನ ತಾಯಿ ಹಾಗೂ ತಂದೆಗೆ ನಾನೂ ಒಬ್ಬ ದೇವತೆಯಾಗುವ ಸಂಭ್ರಮದಲ್ಲಿ ಅದನ್ನ ಅವರ ಪರಿಚಿತರ ಕಿವಿಗೆಲ್ಲ ಯಾರೂ ಕೇಳದೆ ಇದ್ದರೂ ಇವರೆ ಬಿತ್ತರಿಸಿ ಬೀಗಿದ್ದರು. ಹೀಗೆ ಖುಷಿಖುಷಿಯಾಗಿದ್ದ ದಸರೆಗೆ ವಾರದ ಅಂತರವಿದ್ದಾಗ ನನಗೆ ತಗುಲಿತು ಮೊದಲ ಆಘಾತ.


ನೋಡಲು ಸುಮಾರಾಗಿದ್ದ ಶಾಂತಲಾ ಮಾತಾಜಿಯ  ಇನ್ನೊಬ್ಬ ನನ್ನದೆ ವಯಸ್ಸಿನ ಶಿಷ್ಯೋತ್ತಮನಿಗಾಗಿ ನಾನು ದೇವತೆಯಿಂದ ರಾಕ್ಷಸನಾಗಿ ಪಾತ್ರಾಂತರ ಮಾಡಬೇಕಾಯಿತು. ಸಿರಿವಂತಿಕೆಯೊಂದೆ ಆ ಅರ್ಜೆಂಟ್ ದೇವನಿಗಿದ್ದ ಏಕೈಕ ಯೋಗ್ಯತೆ! . "ಬೇಜಾರು ಮಾಡ್ಕೋಬೇಡ ಪುಟ್ಟು, ರಾಕ್ಷಸರೇನೂ ದೇವತೆಗಳಿಗಿಂತ ಕಡಿಮೆಯವರಲ್ಲ!" ಅಂತ ಹೇಳಿ ಶಾಂತಲಾ ಮಾತಾಜಿ ನನ್ನ ತಲೆ ಸವರಿದರು! ನಾನು ಪಾಲಿಗೆ ಬಂದ ಪಂಚಾಮೃತಕ್ಕೆ ತೃಪ್ತಿಪಟ್ಟು ಅದನ್ನೆ ಶ್ರದ್ದೆಯಿಂದ ಅಭ್ಯಸಿಸಿದೆ. ದಸರೆಗೆ ಇನ್ನೂ ವಾರದ ಅಂತರವಿದ್ದುದರಿಂದ ರಾಕ್ಷಸನಾಗಿಯೆ ನನ್ನ ಸ್ತಬ್ಧ ನಟನಾ ಸಾಮರ್ಥ್ಯ(!) ಮೆರೆಯಲು ಅಭ್ಯಾಸ ನಿರತನಾದೆ. ಆದರೆ ನನ್ನ ಈ ಶ್ರದ್ಧೆಗೆ ಇನ್ನೊಂದು "ಪ್ರಭಾವಿ" ಸಹಪಾಠಿಯ ಪ್ರತಿಭಾ ಪ್ರದರ್ಶನದ ತವಕ ಅಷ್ಟಮಿಯಂದೆ ವೀಟೊ ಚಲಾಯಿಸಿತು. ಪುನಃ " ಪುಟ್ಟೂ... ಛೆ ಆ ಬಿಸಿಲಲ್ಲಿ ಅಷ್ಟೆಲ್ಲ ಹೊತ್ತು ನಿಲ್ಲೋದು ತುಂಬಾ ಕಷ್ಟ! ಅದೆಲ್ಲ ಅಂತವರಿಗೆ(?) ಇರ್ಲಿ ಬಿಡು. ಬಿಸಿಲಲ್ಲಿ ನಿಂತರೆ ನೀನು ಕಪ್ಪಾಗಿ ಬಿಡ್ತೀಯ?!, ನೀನು "ಮಾತೃ ಮಂಡಳಿ"ಯ ಬ್ಯಾನರ್ ಹಿಡಿದು ಕೊಂಡು ಆರಾಮವಾಗಿ ವ್ಯಾನಿನ ಹಿಂದೆ ಕೂತುಕೋ ಆರಾಮಾಗಿರುತ್ತೆ!!!" ಅಂತ ಶಾಂತಲಾ ಮಾತಾಜಿ ಮತ್ತೆ ನಯವಾಗಿಯೆ ನನ್ನ ತಲೆ ಸವರಿದರು!.


ಮೊದಲಿನಿಂದಲೂ ಇಂತಹ ಪಕ್ಷಪಾತ ನೈಪುಣ್ಯತೆಯಲ್ಲಿ ಪಳಗಿದ್ದ ಅವರಿಗದು ಸಹಜವಾಗಿತ್ತು. ಇದಕ್ಕೆ ಒಂಚೂರೂ ಮನಸಿಲ್ಲದಿದ್ದರೂ, ಅಸಹಾಯಕತೆಯಿಂದ ಕಣ್ತುಂಬಿ ಬಂದರೂ ನಾನು ಅವರ ಸಿಹಿ ಲೇಪಿಸಿದ ಕ್ವಿನೈನಿನಂತಹ ಮೃದು ಮಾತುಗಳಿಗೆ ಗೋವಿನಂತೆ ತಲೆಯಾಡಿಸಿದೆ. ವಿಜಯದಶಮಿಯ ಮೆರವಣಿಗೆಯುದ್ದಕ್ಕೂ ಆಗಾಗ ನಾನು ಕಣ್ಣನ್ನ ಒರೆಸಿಕೊಳ್ಳುತ್ತಿದ್ದೆ. ಇಡಿ ಮೆರವಣಿಗೆ ನನಗೆ ಮಂಜುಮಂಜಾಗಿ ಕಾಣಿಸುತ್ತಿತ್ತು. ನನ್ನ "ದೇವತೆ ಪಾತ್ರ"ವನ್ನ ನೋಡಲು ಕೊಪ್ಪ ಸರ್ಕಲ್ಲಿನ ರಸ್ತೆ ಪಕ್ಕದ ಜಂಗುಳಿಯಲ್ಲಿ ಕುತ್ತಿಗೆ ಉದ್ದ ಮಾಡಿಕೊಂಡು ಕಾಯುತ್ತಿದ್ದ ನನ್ನ ತಂದೆ- ತಾಯಿ ಅದೆಷ್ಟೇ ಕಣ್ಣು ಕಿರಿದುಗೊಳಿಸಿಕೊಂಡು ಹುಡುಕಿದರೂ ದೇವತೆಗಳ ಸಾಲಿನಲ್ಲಾಗಲಿ- ರಾಕ್ಷಸರ ಗುಂಪಿನಲ್ಲಾಗಲಿ ನನ್ನನವರು ಕಾಣಲಿಲ್ಲ. ಕಡೆಗೆ ಸ್ತಬ್ಧಚಿತ್ರದ ಮೂಲೆಯಲ್ಲಿ ಬ್ಯಾನರ್ ಹಿಡಿದು ಕೂತ ಉರಿ ಬಿಸಿಲಿಗೆ ಕೆಂಪೇರಿ ಮುದುದಿದ್ದ್ದ ನನ್ನ ಮುಖವನ್ನ ನೋಡಿ ಅವರ ಮುಖದಲ್ಲಿ ಕಂಡ ನಿರಾಸೆ ಇನ್ನೂ ನನ್ನ ನೆನಪಿನಲ್ಲಿಯೆ ಅಚ್ಚು ಹಾಕಿದಂತೆ ಉಳಿದಿದೆ. ನಾನು ಕೊನೆಯ ಕ್ಷಣದವರೆಗೂ ನನ್ನ ಈ ಪಾತ್ರಾಂತರದ ಗುಟ್ಟನ್ನ ಮನೆಯಲ್ಲಿ ಬಿಟ್ಟು ಕೊಟ್ಟಿರಲೇ ಇಲ್ಲ! ನಾನೂ ಒಬ್ಬ ಎಳೆಯನಾಗಿದ್ದ ಕಾಲ ಅದು. ಇನ್ನೊಬ್ಬ ಎಳೆಯನ ಮನ ಅರಳಿಸಲು ಮುಲಾಜಿಲ್ಲದೆ ಒಂದು ಮಗುವಿನ ಮನ ಮುದುಡಿಸಲು ಶಾಂತಲಾ ಮಾತಾಜಿಗೆ ಮನಸಾದರೂ ಹೇಗೆ ಬಂತು? ಎನ್ನುವ ಪ್ರಶ್ನೆ ಇನ್ನೂ ನನ್ನ ಮನಸಿನಲ್ಲಿ ಉಳಿದಿದೆ. ನಾನು ಆ ಪಾತ್ರವನ್ನ ಎಂದೂ ಬೇಡಿರಲಿಲ್ಲ. ಅವರೇ ಕರೆದು ಕೊಟ್ಟರು, ಇನ್ನೊಬ್ಬನ ಪ್ರವೇಶವಾದಾಗ ನನ್ನನ್ನ ಅವರೆ ಕೆಳ ದೂಡಿದರು! ಅವರ ಈ ಕಸರತ್ತಿನಲ್ಲಿ ಹಣವಂತನಾಗಿಲ್ಲದಿದ್ದುದೆ ನನ್ನ ಕೊರತೆಯಾಗಿತ್ತೆ? ಶಿಕ್ಷಕ ವೃತ್ತಿಯಲ್ಲಿರುವವರಿಗೂ ಸಮತೆಯ ದೃಷ್ಟಿ ಇರದಿರುವುದು ಶಿಕ್ಷಣ ವ್ಯವಸ್ಥೆಯ ಕೊರತೆಯಲ್ಲವೆ? ಹೀಗೆ ತಾರತಮ್ಯಕ್ಕೆ ಒಳಗಾದ ಮಗು ಮುಂದೆ ಸಿನ್ಕನಾಗುವ ಅಪಾಯ ಇದೆಯಲ್ಲವೇ? ಹೀಗೆ ಉತ್ತರ ಕಾಣದ ಅನೇಕ ಪ್ರಶ್ನೆಗಳು ನನ್ನೊಳಗೆ ಇನ್ನೂ ಹಾಗೆ ಉಳಿದಿವೆ. ಉತ್ತರಿಸಲು ಶಾಂತಲಾ ಮಾತಾಜಿ ಇಂದೂ ಬದುಕಿ ಉಳಿದಿರುವ ಬಗ್ಗೆ ನನಗೆ ಸಂಶಯವಿದೆ. ಬೇಸರವಿದೆ ನಿಜ ಅದಕ್ಕಿಂತಲೂ ಹೆಚ್ಚು ಅನುಕಂಪ ಅವರ ಮೇಲೆ ಈಗ ನನಗಿದೆ. ಅಷ್ಟು ಸೂಕ್ಷ್ಮವಾಗಿ ಆಲೋಚಿಸದ್ದು ಅವರ ಸಂಸ್ಕಾರದ ಮಿತಿ ಅಂದು ಕೊಳ್ಳುತ್ತೇನೆ. ಎಲ್ಲಿದ್ದರೂ ಅವರ ಆತ್ಮಕ್ಕೆ ಶಾಂತಿಯನ್ನ ಮನಃಪೂರ್ವಕ ಬಯಸುತ್ತೇನೆ.


 ಅದೇನೆ ಇದ್ದರೂ ನನಗೆ ಭಾಷೆಯೊಂದರ ಹೊಸ ಪರಿಚಯ ಮಾಡಿಸಿದ್ದ ಶಾಂತಲಾ ಮಾತಾಜಿಗೆ ನಾನು ಚಿರಋಣಿ. ಗುರು ಋಣವನ್ನ ಎಂದೂ ತೀರಿಸಲಾರೆ. ಪರದೇಶಿ ಇಂಗ್ಲಿಷಿನ ಸೋಂಕನ್ನ ನನಗೆ ಮೊದಲು ತಗಲಿಸಿದ್ದು ಶಾಂತಲಾ ಮಾತಾಜಿ, ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದ ನಮಗೆ ಅಧಿಕೃತವಾಗಿ ಆಂಗ್ಲ ಭಾಷಾ ಪರಿಚಯ ಆಗಲಿಕ್ಕಿದ್ದುದು ಸರಕಾರಿ ಭಾಷಾ ನೀತಿಯ ಪ್ರಕಾರ ಐದನೆ ತರಗತಿಯಿಂದ. ಆದರೆ ಶಾಂತಲಾ ಮಾತಾಜಿಯ ಕೃಪೆಯಿಂದ ನಾವೆಲ್ಲಾ ಒಂದನೆ ತರಗತಿಯಲ್ಲಿಯೆ "ಕನ್ನಡ ಮಾಧ್ಯಮ"ದಲ್ಲಿದ್ದು ಕೊಂಡೂ "ಇಂಗ್ಲೀಷ್ ಪಂಡಿತ"ರಾಗಿದ್ದೆವು!. ನಾವೆಲ್ಲಾ ಅವರನ್ನ ಇಂಗ್ಲೀಶ್ ಮಾತಾಜಿ ಅಂತ ಕರಿಯುತ್ತಿದ್ದೆವು. ಅವರ ಊರು ನಾವು ಕೇಳಿ ಮಾತ್ರ ಗೊತ್ತಿದ್ದ ದೂರದ ಮದರಾಸಂತೆ. ಅಲ್ಲಿನ ಕಸಗುಡಿಸುವವರೂ ಕೂಡ ಸ್ವಚ್ಛ ತಮಿಳಿನಲ್ಲಿ ಮಾತನಾಡುತ್ತಾರಂತೆ ! ಈ ಸಂಗತಿ ಕನ್ನಡ ಮಾತ್ರ ಗೊತ್ತಿದ್ದ ನಮ್ಮಂತವರಿಗೊಂದು ವಿಸ್ಮಯದ ಸಂಗತಿಯಾಗಿತ್ತು. ಆದರೆ ಅವರು ಬಹಳ ಹಿಂದಿನಿಂದಲೆ ತೀರ್ಥಹಳ್ಳಿಯಲ್ಲಿ ನೆಲೆಸಿದ್ದರು. ಅವರ ಗಂಡನಿಗೆ ಇಲ್ಲಿಯೆ ಏನಾದರೂ ಕೆಲಸ ಇತ್ತೇನೊ ಗೊತ್ತಿಲ್ಲ. ಅವರಿಗೆ ಮಕ್ಕಳ ಭಾಗ್ಯವಿರಲಿಲ್ಲ. ಹೀಗಾಗಿ ಅವರು ನಮ್ಮ ಶಾಲೆ "ಸೇವಾಭಾರತಿ"ಯಲ್ಲಿ ಸ್ವಯಂ- ಶಿಕ್ಷಕಿಯಾಗಿ ಮಕ್ಕಳೊಂದಿಗೆ ಬೆರೆಯುತ್ತಿದ್ದರು, ಗೌಡ ಸಾರಸ್ವತರಾಗಿದ್ದ ಅವರ ಮಾತೃ ಭಾಷೆ ಕೊಂಕಣಿ. ತೀರ ಹಳ್ಳಿಗರಾಗಿದ್ದು ಮಾತೃಭಾಷೆಯಾಗಿದ್ದ ತುಳು, ಕೊಂಕಣಿ, ಬ್ಯಾರಿ, ಕನ್ನಡದ ಹೊರತು ಇನ್ಯಾವುದೆ ಭಾಷೆಯ ಪರಿಚಯವಿಲ್ಲದಿದ್ದ ನಮಗೆ ಏಕಕಾಲದಲ್ಲಿ ಕನ್ನಡ, ಹಿಂದಿ, ಸಂಸ್ಕೃತ, ತಮಿಳು, ಕೊಂಕಣಿ ಹೀಗೆ ಹಲವು ಭಾಷೆಗಳನ್ನ ಮಾತಾಡ ಬಲ್ಲವರಾಗಿದ್ದ ಶಾಂತಲಾ ಮಾತಾಜಿ ನಡೆದಾಡುವ ಆಲ್ ಇಂಡಿಯಾ ರೇಡಿಯೋದಂತೆ ಕಾಣಿಸುತ್ತಿದ್ದರು! ಅವರ ಕೀರಲಾದ ದೊಡ್ಡ ಧ್ವನಿಯೂ ಈ ಉಪಮಾಲಂಕಾರಕ್ಕೆ ಪೂರಕವಾಗಿತ್ತು. ನಮಗೆಲ್ಲರಿಗೂ ಅವರೆ ಇಂಗ್ಲೀಷಿನ ಮೊದಲ ಪರಿಚಯ ಮಾಡಿಸಿದರು.



ರಾಷ್ಟ್ರೋತ್ಥಾನ ಪರಿಷತ್ತಿನ ಅಂಗವಾಗಿದ್ದ ನಮ್ಮ ಶಾಲೆ ಅದೆ ಪರಿಷತ್ತಿನ ಇನ್ನೊದು ಅಂಗವಾಗಿದ್ದ "ಮಾತೃ ಮಂಡಳಿ"ಯ ಕಾರ್ಯಕರ್ತೆಯಾಗಿದ್ದ ಶಾಂತಲಾ ಮಾತಾಜಿಯವರನ್ನ ಗೌರವ ಶಿಕ್ಷಕಿಯಾಗಿ ನಮ್ಮ ಶಾಲೆಯಲ್ಲಿ ಬೋಧಿಸಲು ಅವಕಾಶ ಕೊಟ್ಟಿತ್ತು. ನಾವು ನೋಡುವಾಗಲೆ ಬೆಳ್ಳಿ ಕೂದಲಿನವರಾಗಿದ್ದ ಶಾಂತಲಾ ಮಾತಾಜಿ ತಮ್ಮ ಕೋಳಿ ಜುಟ್ಟಿನಂತಹ ಕಿರು ಕೇಶರಾಶಿಗೆ ಒಂದು ರಿಬ್ಬನ್ ಸಿಕ್ಕಿಸಿಕೊಂಡು ತಮ್ಮ ಗೋಪಾದದಷ್ಟು ಕೂದಲನ್ನ ಬಿಗಿಯಾಗಿ ಕಟ್ಟಿಕೊಳ್ಳುತ್ತಿದ್ದರು. ಅವರ ಇಂಗ್ಲಿಶ್ ಪಾಠಕ್ಕೆ ಅವರೆ ಒಂದು ಪಾಠದ ಕ್ರಮವನ್ನು ರೂಪಿಸಿಕೊಂಡಿದ್ದರು. ವರ್ಷಕ್ಕೊಮ್ಮೆ ಬೆಂಗಳೂರಿನಿಂದ ಅವರೆ ಮಾಡಿಸಿದ ನಾಲ್ಕು ಬಗೆಯ ಪಾಠ ಪುಸ್ತಕಗಳು ನಮ್ಮ ಶಾಲೆಗೆ ಬಂದು ಮುಟ್ಟುತ್ತಿದ್ದವು. ಐದನೆ ತರಗತಿಯಿಂದ ಸರಕಾರದ ಪಾಠ ಪುಸ್ತಕಗಳು ಅಧಿಕೃತ ಇಂಗ್ಲಿಶ್ ಕಲಿಕೆಗಾಗಿ ನಮ್ಮ ಕೈ ಸೇರುವ ಮುಂಚೆಯೆ ಶಾಂತಲಾ ಮಾತಾಜಿಯ ಕೃಪೆಯಿಂದ ಅವುಗಳಲ್ಲಿರುತ್ತಿದ್ದ ಅನೇಕ ಪದ್ಯಗಳು ಈ ಮೂಲಕ ನಮಗೆ ಬಾಯಿಪಾಠವಾಗಿ ಹೋಗಿರುತ್ತಿದ್ದವು! ಅಗತ್ಯವಿತ್ತೋ ಇಲ್ಲವೋ ಅಂತೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಾಗಿದ್ದರೂ ನಮಗೆ ಆರಂಭಿಕ ಇಂಗ್ಲಿಶ್ ಕಲಿಕೆಗೂ ಹೀಗೆ ಅವಕಾಶ ಒದಗಿ ಬಂದಿತ್ತು. ಮೊದಲ ಶಾಲೆಯಾಗಿದ್ದ ಬಾಲವಾಡಿಯಲ್ಲಿ ಸಾಥ್ ಕೊಟ್ಟಿದ್ದ ರೊಟ್ಟಿ ಅಂಗಡಿ ಕಿಟ್ಟಪ್ಪನೆ ಶಾಂತಲಾ ಮಾತಾಜಿಯ "ಕ್ಲಾಸ್"ನಲ್ಲಿ ಹಾಟ್ ಕ್ರಾಸ್ ಬನ್ ಮಾರುತ್ತಿದ್ದ! ಮೈಸೂರಿನ ಅರಮನೆಗೆ ದಸರೆ ನೋಡಲು ಹೋಗಿದ್ದ ಮುದ್ದಿನ ಸೊಕ್ಕಾಗಿದ್ದ ಬೆಕ್ಕು ಇವರ ಇಂಗ್ಲಿಶ್ ರಿಮೇಕಿನಲ್ಲಿ ಅದು ಹೇಗೊ ಅಷ್ಟು ದೂರದ ಲಂಡನ್ನಿಗೆ ಫೆಸ್ಟಿವಲ್ ನೋಡಲು ಹೋಗಿ ಬಂದಿರುತ್ತಿತ್ತು!! ಇಲ್ಲಿನ ಬೆಕ್ಕು ರಾಣಿಯ ಜೊತೆಗೆ ರಾಜನೂ ಇದ್ದ ಮೈಸೂರಿನ ಅಂತಃಪುರದೊಳಗೆ ಹೊಕ್ಕಿ ಬಂದಿದ್ದಾರೆ, ಅವರ ಪುಸ್ಸಿ ಕ್ಯಾಟ್ ಲಂಡನ್ನಿನಲ್ಲಿ ಕ್ವೀನನ್ನ ನೋಡಿಯೆ ಬಂದಿರುತ್ತಿದ್ದು ವಿಸ್ಮಯ ಹುಟ್ಟಿಸುತ್ತಿತ್ತು. ಬಾವಿಗೆ ನೀರು ತರಲು ಹೋಗುತ್ತಿದ್ದ ನಮ್ಮ ಪುಟ್ಟಾ-ಪುಟ್ಟಿ ಅವರ ಇಂಗ್ಲಿಷಿನಲ್ಲಿ ಜಾಕ್ ಎಂಡ್ ಜಿಲ್ಲಾಗಿ ನೀರು ಹೊತ್ತು ತರಲು ಗುಡ್ಡಕ್ಕೆ ಹತ್ತಿ ಹೋಗಿರುತ್ತಿದ್ದರು!!! ನಮ್ಮ ತಿಂಡಿ ಬೇಡುತ್ತಿದ್ದ ನಾಯಿ ಮರಿಯೆ ಅವರ ಬಿಸ್ಕೆಟ್ ಬೇಡುವ ಟಾಮಿಯಾಗಿರುತ್ತಿತ್ತು !!! ನೀರು ತರದ ಸೋಮಾರಿ ಮಲ್ಲ, ಜಾನಿಯಾಗಿ ಪಪ್ಪನ ಮುಂದೆ ಎಸ್ ಹೇಳುತ್ತಿದ್ದ!!! ಹೀಗಾಗಿ ಶಾಂತಲ ಮಾತಾಜಿ ನಮಗೆ ಮೋಡಿ ಹಾಕಲು ಹೆಚ್ಚು ಶ್ರಮ ಪಡುವ ಅಗತ್ಯ ಬೀಳಲೆ ಇಲ್ಲ.


ಹೀಗೆ ಇಂಗ್ಲಿಷ್ ಜಗತ್ತಿನ ಕಿರು ಕಿಟಕಿಯನ್ನ ನನ್ನ ಬಾಳಲ್ಲಿ ಮೊದಲಿಗೆ ತೆರೆದು ಇನ್ನೊಂದು ವಿಚಿತ್ರ ಪ್ರಪಂಚದ ವಿಸ್ಮಯಗಳನ್ನು ಪರಿಚಯಿಸಿ ಕೊಟ್ಟವರು ಶಾಂತಲಾ ಮಾತಾಜಿ. ಅಲ್ಲಿಯವರೆಗೂ ಕೇವಲ ಒಂದು ಎರಡಷ್ಟೇ ಕಲಿತು ಗೊತ್ತಿದ್ದ ನನಗೆ ವನ್ ಟೂವನ್ನು ಕಲಿಸಿದ, "ಪ್ರಭಾವ- ವಿಭವ" ದಂತಹ ಸಂವತ್ಸರಗಳ ಹೆಸರನ್ನ, ರವಿವಾರದಿಂದ- ಶನಿವಾರದವರೆಗಿನ ವಾರಗಳನ್ನ, ಚೈತ್ರ - ವೈಶಾಖದಂತಹ ಮಾಸಗಳನ್ನ. ಅನುರಾಧಾ- ಮೂಲದಂತಹ ನಕ್ಷತ್ರಗಳ ಹೆಸರನ್ನಷ್ಟೆ ಉರು ಹೊಡೆದು ನೆನಪಿಟ್ಟುಕೊಳ್ಳುತ್ತಿದ್ದ ನಾನು ಸಂಡೆ ಮಂಡೆಯಿಂದಾರಂಭಿಸಿ ಜನವರಿ- ಡಿಸೆಂಬರಿನ ಗಡಿಯನ್ನ ಶ್ರಮವಿಲ್ಲದೆ ಮುಟ್ಟಿಬರಲು ಸಾಧ್ಯವಾಗುವಂತಾಗಿಸಿದ ಆರಂಭಿಕ ಆಸರೆಯ ಕಿರು ಬೆರಳು ಶಾಂತಲಾ ಮಾತಜಿಯದ್ದೆ. ಹೀಗಾಗಿ ತಂಪು ಹೊತ್ತಿನಲ್ಲಿ ಅವರನ್ನ ನೆನೆಯುತ್ತೇನೆ. ದಸರಾ ಮತ್ತೆ ಮರಳಿ ಬಂದಾಗ ಇವೆಲ್ಲ ಮತ್ತೆಮತ್ತೆ ನೆನಪಾಗುತ್ತವೆ. ಕಹಿಯಾಗಿದ್ದರೂ ನೆನಪು ನನ್ನದೆ ತಾನೆ?

06 October 2012

ವಲಿ.... (ಭಾಗ -10 )

















ಮೆಕ್ಕಾ ಪಟ್ಟಣವನ್ನು ತ್ಯಜಿಸಿದ ಎಂಟನೆ ದಿನ ಅವರ ಸವಾರಿ ಮದೀನ ಪಟ್ಟಣದ ಮೇರೆಯನ್ನು ಹೋಗಿ ಮುಟ್ಟಿತು. ಆದರೆ ಆ ಕೂಡಲೆ ಪುರ ಪ್ರವೇಶಿಸದ ಅವರಿಬ್ಬರೂ ಹತ್ತಿರದ ಕೊಬಾ ಎನ್ನುವ ಹಳ್ಳಿಯಲ್ಲಿಯೆ ಉಳಿದುಕೊಂಡರು. ಮದೀನಾ ವಾಸಿಗಳಲ್ಲಿ ಕೆಲವರು ಅದಾಗಲೇ ನೂತನ ಇಸ್ಲಾಮನ್ನು ಒಪ್ಪಿಕೊಂಡಿದ್ದರೂ ಸಹ ಮೆಕ್ಕಾದಲ್ಲಿ ಆದಂತೆ ಇಲ್ಲಿಯೂ ಅವರ ಬುಡಕಟ್ಟಿನೊಳಗೆ ಅದೆ ಕಾರಣಕ್ಕೆ ಒಡಕು ಉಂಟಾಗಿರಬಾರದೇಕೆ? ಅವರು ಅದೇನೆ ಹೊಸ ಧರ್ಮ ಪಾಲಿಸುವ ಪ್ರಮಾಣ ಮಾಡಿದ್ದರೂ ಅವರನ್ನ ಮುಕ್ತವಾಗಿ ನಂಬೋದು ಹೇಗೆ? ಏಕಾಏಕಿ ನಾವು ಅಲ್ಲಿಗೆ ಕಾಲಿಟ್ಟರೆ ದೊರೆಯುವ ಆತಿಥ್ಯದ ಭೀಕರತೆ ಹೇಗಿರಬಹುದು? ಎನ್ನುವ ಆತಂಕಗಳೆಲ್ಲ ಸಹಜವಾಗಿ ಇದ್ದುದರಿಂದ ಈ ಸಂಶಯಾಸ್ಪದ ಆತ್ಮರಕ್ಷಕ ನಡೆಯನ್ನ ಮಹಮದ್ ಹಾಗೂ ಅಬು ಬಕರ್ ಅನುಸರಿಸಿದರು. ನೂತನ ಮತಾಂತರಿಗಳನ್ನ ಇನ್ನೊಮ್ಮೆ ಪರೀಕ್ಷಿಸಿಯೆ ಅಲ್ಲಿಗೆ ಕಾಲಿಡಲು ಅವರಿಬ್ಬರೂ ನಿರ್ಧರಿಸಿದರು. 




ಕೊಬಾದ ಮುಖಂಡ ಕುಲ್ತ್ಹುಂ ಎಂಬಾತನ ಮನೆಯಲ್ಲಿ ಮುಸಾಫಿರನಾಗಿ ಮಹಮದ್ ಆಶ್ರಯ ಪಡೆದರೆ, ಅಬು ಬಕರ್ ಖಾರಿಜಾ ಎಂಬಾತನ ಅತಿಥಿಯಾದ. ಈ ಆತಿಥ್ಯ ಪಡೆಯುವ ಭರದಲ್ಲಿ ಅಬು ಬಕರ್ ಖಾರಿಜಾನ ಮಗಳನ್ನ ಮುಂದೆ ಮದುವೆಯೂ ಆಗಿ ಮಾವನ ಮನೆಯಳಿಯನಾಗಿ ಅಲ್ಲಿಯೆ ಖಾಯಂ ಠಿಕಾಣಿ ಹೂಡಿದ! ಇದರ ಮೂರು ದಿನಗಳ ನಂತರ ಮಹಮದನ ದೊಡ್ಡಪ್ಪನ ಮಗ ಅಲಿ ಮೆಕ್ಕಾದಿಂದ ಪಾರಾಗಿ ಬಂದು ಕೊಬಾದಲ್ಲಿ ಅಣ್ಣನನ್ನು ಸೇರಿ ಕೊಂಡನು. ಅದರ ಮುಂದಿನ ಶುಕ್ರವಾರ ಮಹಮದ್, ಅಬು ಬಕರ್ ಹಾಗೂ ಅಲಿ ಈ ಮೂವರೂ ಸೇರಿ ಮದೀನಾದ ದಾರಿ ಹಿಡಿದರು. ದಾರಿಯ ಮಧ್ಯದಲ್ಲಿ ಬೆನ್ ಸಾಲಿಂ ಎಂಬ ಸ್ಥಳದಲ್ಲಿ ಪ್ರಯಾಣಕ್ಕೆ ವಿರಾಮ ಕೊಟ್ಟು ಒಂದು ಪ್ರಾರ್ಥನಾ ಸ್ಥಳದಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸಿದರು. ಈ ಸ್ಥಳದಲ್ಲಿ ಒಂದು ಮಸೀದಿ ಕಟ್ಟಿಸಿದ ಮುಸ್ಲೀಮರು ಮುಂದೆ ಇದನ್ನೆ "ಜುಮ್ಮಾ ಮಸೀದಿ" ಎಂದು ಕರೆದರು.. ಮಹಮದ್ ಹಾಗೂ ಅವನ ಅನುಚರರ ಸವಾರಿ ಮದೀನದತ್ತ ಹೆಜ್ಜೆ ಹಾಕುತ್ತಿದ್ದ ಹಾಗೆ ಅದಾಗಲೆ ಇಸ್ಲಾಮಿನತ್ತ ಆಕರ್ಷಿತರಾಗಿದ್ದ ಆಸಕ್ತ ಜನರು ಇವರನ್ನು ದಾರಿಯುದ್ದ ಅವರನ್ನು ಸ್ವಾಗತಿಸಿ ಆದರಿಸಿದರು. ದಾರಿಯಲ್ಲಿ ಬಳಲಿದ ಮಹಮದನ ಒಂಟೆ ಬಳಲಿ ಒಂದು ಖರ್ಜೂರದ ತೋಟದಲ್ಲಿ ನಿಂತಿತು. ಆ ಜಾಗ ಯಾರದ್ದೆಂದು ವಿಚಾರಿಸಲು ಮಹಮದ್ ಒಂಟೆಯಿಂದ ಕೆಳಗಿಳಿದ. ಖರ್ಜೂರದ ಮರಗಳಿಂದ ಆವೃತ್ತವಾಗಿದ್ದ ಆ ಜಾಗ ಬೆನ್ ಆನ್ ನೆಝಾರ್ ಕುಟುಂಬಸ್ಥರದ್ದು ಅನ್ನುವ ಪತ್ತೆಯಾಯಿತು. ಮನೆಯೊಡೆಯ ಅಬು ಅಯೂಬನ ಪರಿಚಯವಾಗಿ ಆತ ಅತಿಥಿಗಳನ್ನ ಸತ್ಕರಿಸಿದ. ಈ ಸತ್ಕಾರಕ್ಕೆ ಮಾರುಹೋದ ಮಹಮದ್ ಮುಂದೆ ಮದೀನದಲ್ಲಿ ತನ್ನ ಮನೆ ಹಾಗೂ ಸ್ವಂತ ಮಸೀದಿಯ ನಿರ್ಮಾಣ ಆಗುವವರೆಗೂ ಅಬು ಅಯೂಬನ ಅತಿಥಿಯಾಗಿಯೆ ಉಳಿದ. ಅಲ್ಲಿ ಮೊದಲಿಗೆ ಒಂಟೆ ಬಳಲಿ ನಿಂತ ಜಾಗವನ್ನು ಖರೀದಿಸಲು ನಿರ್ಧರಿಸಿದ ಮಹಮದ್ ಅದರ ಮಾಲಕರನ್ನು ಹುಡುಕಿಸಿದ. ಅವರು ಅನಾಥ ಬಡಪಾಯಿಗಳಾಗಿದ್ದರು. ಅವರಿಗೆ ಹಣ ಪಾವತಿಸಿ ಜಾಗ ಕೊಂಡ ನಂತರ ಅಲ್ಲಿದ್ದ ಮರಗಳನ್ನ ಕಡಿಸಿ ಅನಂತರ ಅಲ್ಲಿದ್ದ ಎಲ್ಲಾ ಹಳೆ ಗೋರಿಗಳನ್ನ ಆಗಿಸಿ ಸಿಕ್ಕ ಮೂಳೆಯ ಅವಶೇಷಗಳನ್ನ ಅಲ್ಲಿಂದ ದೂರ ಸಾಗಿಸಿದ ನಂತರ ಮನೆ ಹಾಗೂ ಮಸೀದಿ ನಿರ್ಮಾಣಕ್ಕೆ ಅಡಿಪಾಯ ಹಾಕಿಸಿದ ಎನ್ನುತ್ತಾನೆ ತನ್ನ " ಸೀಲ್ದ್ ನೆಕ್ತರ್" ಕೃತಿಯಲ್ಲಿ ಇತಿಹಾಸಕಾರ ಅಲ ಮುಬಾರಖಿ.




 ಇದಾದ ನಂತರ ಮೆಕ್ಕದಿಂದ ಹೆಣ್ಣು ಮಕ್ಕಳಾದ ಉಂಕುಲ್ಸುಂ, ಫಾತಿಮಾ ಹಾಗೂ ಹೆಂಡತಿ ಸೌದಾಳನ್ನು ತಾನಿದ್ದಲ್ಲಿಗೆ ಮಹಮದ್ ಕರೆಸಿಕೊಂಡ. ಮಹಮದನ ಹಿರಿಯ ಮಗಳಾದ ಜೈನಬ್ ಹಾಗೂ ಅವಳ ಗಂಡನ ಹೊರತು ಇನ್ನುಳಿದ ಕುಟುಂಬವರ್ಗದವರೆಲ್ಲ ಮದೀನಕ್ಕೆ ಬಂದು ಮುಟ್ಟಿದರು.ಈ ಹಿಂದೆಯೆ ಮೆಕ್ಕಾದಿಂದ ಓಡಿ ಹೋಗಿದ್ದ ಗುಪಿನಲ್ಲಿ ಇನ್ನೊಬ್ಬ ಮಗಳು ರೋಕೈರಾ ಹಾಗೂ ಅವಳ ಗಂಡ ಒತ್ತೆಮನ್ ಬಂದಿದ್ದರು. ಮಹಮದನ ಆಪ್ತ ಗುಲಾಮ ಜೈದ್ ತನ್ನ ಪತ್ನಿ ಉಂಐಮನ್ ಹಾಗೂ ಮಗ ಒಸಾಮನೊಂದಿಗೆ ಮದೀನದಲ್ಲಿಯೆ ಸ್ವಲ್ಪ ಸಮಯ ಹಿಂದಿನಿಂದ ಬೀಡು ಬಿಟ್ಟಿದ್ದ. ಅಬು ಬಕರನ ಸಂಸಾರವೂ ಮಹಮದನ ವಧುವಾಗಿದ್ದ ಎಳೆಯ ಮಗಳು ಆಯೆಷಾಳೊಂದಿಗೆ ಮದೀನದಲ್ಲಿಯೆ ನೆಲೆ ಕಂಡಿತು. ಆದರೆ ಆ ಸಮಯದಲ್ಲಿ ಮದೀನದ ಹವೆ ಅಷ್ಟೇನೂ ಹಿತಕರವಾಗಿಲ್ಲದೆ ಇದ್ದುದರಿಂದ ಬಂದ ಆರಂಭದಲ್ಲಿ ಅವರೆಲ್ಲರೂ ಒಂದಲ್ಲಾ ಒಂದು ಖಾಯಲೆಗೆ ತುತ್ತಾಗಿ ನರಳಿದರು. ಅನಾರೋಗ್ಯದ ಸರಣಿ ಅವರನ್ನ ಕಾಡಿತು. ಮದೀನದ ಪ್ರಜೆಗಳೊಂದಿಗೆ ಭ್ರಾತ್ತ್ರತ್ವ ಬೆಳೆಸುವ ಇರಾದೆಯಿಂದ ತನ್ನೊಂದಿಗೆ ಬಂದ ಎಲ್ಲಾ ಮೆಕ್ಕಾ ಮೂಲದವರಿಗೂ ಸ್ಥಳೀಯ ಮದೀನ ವಾಸಿಗಳಲ್ಲಿ ಇಬ್ಬರನ್ನು ತಮ್ಮ ಸಹೋದರರೆಂದು ಭಾವಿಸಿ ಅವರ ಜೊತೆಗೂಡಿ ಜೀವನ ಸಾಗಿಸುವ ಸೂತ್ರ ಜಾರಿಗೆ ತಂದ. ಆದರೆ ಈ ಸೂತ್ರ ಕೇವಲ ಪುರುಷ ನಿರಾಶ್ರಿತರಿಗೆ ಅನ್ವಯವಾಗುತ್ತಿತ್ತು ಅನ್ನುವುದು ಗಮನಾರ್ಹ !




ಇತಿಹಾಸಕಾರ ಅಲ್ ಮುಬಾರಖಿ ಈ ಈ ಸ್ನೇಹ-ಸಂಬಂಧ ಹಾಗೂ ಭ್ರಾತ್ರತ್ವದ ಮಹಿಮೆ ಸಾರುವ ಉದಾಹರಣೆಯನ್ನು ನೀಡುತ್ತಾನೆ. ಅಬ್ದುಲ್ ರೆಹಮಾನ್ ಎನ್ನುವ ಮೆಕ್ಕಾವಾಸಿ ಇಸ್ಲಾಂ ಸ್ವೀಕರಿಸಿ ಮದೀನಕ್ಕೆ ನಿರಾಶ್ರಿತನಾಗಿ ಬಂದು ಮುಟ್ಟಿದಾಗ ಅವನನ್ನು ಸಾದ್ ಇಬ್ನ ಅರಬ್ ಎಂಬಾತನ ಮನೆಯಲ್ಲಿ ನಿಲ್ಲಲು ನೆಲೆ ಕಲ್ಪಿಸಿ ಅವನನ್ನು ತನ್ನ ಸಹೋದರನಂತೆ ನೋಡಿಕೊಳ್ಳಲು ಮಹಮದ್ ಸೂಚಿಸಿದ. ನೂತನ ಮತಾಂತರಿಯಾಗಿದ್ದ ಸಾದ್ ಇಬ್ನ ಅರಬ್ ತನ್ನ ಮನೆಯಲ್ಲಿ ಅಬ್ದುಲ್ ರೆಹಮಾನನಿಗೆ ಆಶ್ರಯ ನೀಡುವ ಜೊತೆಗೆ ತನ್ನ ಇಬ್ಬರು ಪತ್ನಿಯರಲ್ಲಿ ಒಬ್ಬಳನ್ನು ತೊರೆದು ಅವನಿಗೆ ಆಕೆಯೊಂದಿಗೆ ಮದುವೆ ಮಾಡಿ ಕೊಟ್ಟ! ಇಸ್ಲಾಂ ಕಟ್ಟಳೆಯಂತೆ ಅಬ್ದುಲ್ ರೆಹಮಾನ್ ವಧುದಕ್ಷಿಣೆಯಾಗಿ ಒಂದು ಖರ್ಜೂರದ ಗಾತ್ರದ ಚಿನ್ನದ ಚೂರನ್ನ ನೀಡಿ ಈ ಲಗ್ನ ಮಾಡಿಕೊಂಡು ಸಂಸಾರಿಯಾದ!!. ತನ್ನ ಅನುಚರರ ಕರಸೇವೆಯಿಂದ ಮಹಮದ್ ತಾನು ಕೊಂಡಿದ್ದ ಜಾಗದಲ್ಲಿ ಮನೆಯೊಂದನ್ನು ಕಟ್ಟಿ ಮುಗಿಸಿದ. ಮನೆಯ ಪೂರ್ವದ ಗೋಡೆಗೆ ಅಂಟಿಕೊಂಡಂತೆ ಮಹಮದ್ ತನ್ನ ಹಾಗೂ ತನ್ನ ಪತ್ನಿಯರ ವಸತಿಗಳನ್ನು ನಿರ್ಮಿಸಿಕೊಂಡ.ಕ್ರಮೇಣ ಪತ್ನಿಯರ ಸಂಖ್ಯೆ ಹೆಚ್ಚಿಸಿ ಕೊಂಡಂತೆ ಈ ಜನಾನವನ್ನು ಕಾಲಕಾಲಕ್ಕೆ ವಿಸ್ತರಿಸಲಾಯಿತು. ಅವೆಲ್ಲ ಕೇವಲ ಮಣ್ಣಿನ ಗುಡಿಸಲುಗಳೆ ಆಗಿದ್ದವು ಎನ್ನುತ್ತಾನೆ ವಾಸ್ತುಶಿಲ್ಪಿಯೂ ಆಗಿದ್ದ ಇತಿಹಾಸಕಾರ ಬರ್ಟನ್.



ಮಹಮದ್ ಮದೀನದಲ್ಲಿ ಮೊತ್ತಮೊದಲಿಗೆ ಕಟ್ಟಿಸಿದ ಮಸೀದಿಯ ಗುಮ್ಮಟ ಹಾಗೂ ಸಪೂರವಾದ ಸ್ಥಂಭಗಳು ಪ್ರಪಂಚದ ಇತರ ಮಸೀದಿಗಳ ನಿರ್ಮಾಣಕ್ಕೆ ಮಾದರಿಯಾದವು. ಅದರ ಸರಳತೆ ಹಾಗೂ ಸುಂದರತೆಯನ್ನ ಇನ್ನಿತರ ಎಲ್ಲಾ ಮಸೀದಿಗಳಲ್ಲೂ ಕಾಣಬಹುದು ಎಂದು ಇತಿಹಾಸಕಾರ ಮ್ಯೂರ್ ಅಭಿಪ್ರಾಯ ಪಡುತ್ತಾನೆ. ಏಳು ತಿಂಗಳ ನಿರ್ಮಾಣ ಕಾರ್ಯ ಮುಗಿದ ನಂತರ ತನ್ನ ಪತ್ನಿ ಸೌದಾಳೊಂದಿಗೆ ಮಹಮದ್ ನೂತನ ಗೃಹ ಪ್ರವೇಶ ಮಾಡಿದ. ಈಗಾಗಲೆ ಆಯೆಷಾಳೊಂದಿಗೆ ನಿಶಿತಾರ್ಥ ಮುಗಿದಿದ್ದರಿಂದ ಆಕೆಯನ್ನು ಮದುವೆಯಾಗಿ ನೂತನ ಮನೆ ತುಂಬಿಸಿಕೊಂಡ. ಹತ್ತು ವಯಸ್ಸಿನ ವಧು ಆಯೆಷಾ ಬಿನ್ ಅಬು ಬಕರ್ , ಐವತ್ತು ಮೂರು ವರ್ಷ ಪ್ರಾಯದ ವರ ಮಹಮದ್ ಬಿನ್ ಅಬ್ದುಲ್ಲಾ ಎಂಬ ವರನನ್ನು ಲಗ್ನವಾಗಿ ಸಂಸಾರ ಸಾಗರಕ್ಕೆ ಅಡಿಯಿಟ್ಟಳು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ. ಮಹಮದನ ನಿರ್ಮಿತಿ ಮಸೀದಿಯೆ ಇಸ್ಲಾಮಿನ ಪ್ರಥಮ ಅಭಯಾಶ್ರಯವಾಯಿತು. ಅಲ್ಲಿಯೆ ಆತನ ದೈವವಾಣಿಗಳು ಪುಂಖಾನುಪುಂಖವಾಗಿ ಮೂಡಿ ಬಂದಿತ್ತು. ದಾರ್ಶನಿಕರನ್ನು ಆತ ಭೇಟಿ ಮಾಡುವ ನಗರದ ಸಭಾಂಗಣವೂ ಅದೆ ಆಯಿತು. ಮಹಮದ್ ನಿರ್ಮಿಸಿದ್ದ ಆ ಮಸೀದಿ ಅತ್ಯಂತ ಸರಳ ವಾಸ್ತು ಹೊಂದಿದ್ದು ಯಾವೊಂದು ಭವ್ಯತೆ ಹಾಗೂ ಆಡಂಬರವಿಲ್ಲದಂತೆ ಇತ್ತು. ವಾಸ್ತವವಾಗಿ ತನ್ನ ನಿರ್ವಹಣೆ ಮದೀನಾವಾಸಿಗಳಿಗೆ ಹೊರೆಯಾಗಬಾರದು ಎನ್ನುವ ಮಹಮದನ ಉದ್ದೇಶ ಇದರ ಹಿಂದಿದ್ದರೂ ಇಸ್ಲಾಮಿನ ಮತ ಪಂಡಿತರು ಅದನ್ನ ಪ್ರವಾದಿಯ ಸರಳತೆಯ ಭೋದನೆ ಎಂದು ವ್ಯಾಖ್ಯಾನಿಸಿ ಅದಕ್ಕೊಂದು ದೈವತ್ವವನ್ನು ಆರೋಪಿಸಿದರು. ಬಿಲಾಲ್ ಎಂಬ ದೊಡ್ಡ ಗಂಟಲಿನ ತನ್ನ ಅನುಚರನಿಗೆ ನಿತ್ಯ ಐದು ಹೊತ್ತಿನ ಪ್ರಾರ್ಥನೆಗೆ ಎಲ್ಲಾ ಇಸ್ಲಾಂ ಶ್ರದ್ಧಾಳುಗಳಿಗೆ ಕರೆ ನೀಡುವ ಮಹತ್ವದ ಜವಾಬ್ದಾರಿಯನ್ನು ಮಹಮದ್ ವಹಿಸಿದ. ಉಚ್ಚ ಧ್ವನಿಯ ಬಿಲಾಲನ ದೊಡ್ಡ ಗಂಟಲಿನ ಉಪಯೋಗವನ್ನು ಮಹಮದ್ ಸರಿಯಾಗಿಯೆ ಪಡೆದುಕೊಂಡ. ಆಜಾನ್ ಎಂದು ಕರೆಯಲಾಗುವ ಈ ವಿಧಿಯನ್ನ ಜಾರಿಗೆ ತರುವಲ್ಲಿ ಮಹಮದ್ ಬಹಳಷ್ಟು ಪ್ರಯಾಸ ಪಡಬೇಕಾಯಿತು.




 ಮಹಮದನೊಂದಿಗೆ ತಾವು ಹೊಸತಾಗಿ ನಂಬಿದ ಧರ್ಮಕ್ಕಾಗಿ ಊರು ಬಿಟ್ಟು ಮದೀನಕ್ಕೆ ಬಂದ ಎಲ್ಲರನ್ನೂ "ಮಜಹರೀನ್" ಅಂದರೆ ನಿರಾಶ್ರಿತರೆಂದು ಮದೀನಾವಾಸಿಗಳು ಕರೆದರು. ತಮ್ಮ ಸಕಲವನ್ನೂ ತ್ಯಾಗ ಮಾಡಿ ಬಹುತೇಕ ಬರಿಗೈಯಲ್ಲಿಯೆ ಬಂದಿದ್ದ ಅವರನ್ನು ಯಾವೊಂದೂ ಕೊರತೆಯಾಗದಂತೆ ಮದೀನಾ ವಾಸಿಗಳು ಆದರಿಸಿದರು. ಹೀಗೆ ಆದರಿಸಿ ಆಶ್ರಯ ನೀಡಿದ ಮದೀನಾವಾಸಿಗಳನ್ನು "ಅನ್ಸಾರಿ"ಗಳೆಂದು ಕರೆಯಲಾಯಿತು. 'ಅನ್ಸಾರ್" ಎಂದರೆ ಅಭಯ ಹಸ್ತ ಚಾಚುವವರು ಅಥವಾ ಸನ್ಮಿತ್ರರು ಎನ್ನುವ ಅರ್ಥ ಬರುತ್ತದೆ. ಮದೀನಾವಾಸಿಗಳಲ್ಲಿ ಆವ್ಸ್ ಹಾಗೂ ಖಸ್ರಾಜ್ ಬುಡಕಟ್ಟಿನವರೆ ಅಧಿಕ ಸಂಖ್ಯೆಯಲ್ಲಿದ್ದು ಶತಶತಮಾನಗಳ ವೈರತ್ವ ಅವರ ನಡುವೆಯಿದ್ದು ರಕ್ತಪಾತವಾಗುವ ಮಟ್ಟಿಗೆ ಅವರು ಪರಸ್ಪರ ಕಾದಾಡುತ್ತಿದ್ದರು. ಆದರೆ ಮಹಮದನ ನೂತನ ಮತ ಒಪ್ಪಿಕೊಂಡ ನಂತರ ಅವರು ಹಳೆಯ ವಯಕ್ತಿಕ ವೈರವನ್ನು ಮರೆತು ಮಹಮದನ ನಾಯಕತ್ವವನ್ನು ಒಪ್ಪಿಕೊಂಡರು. ಆದರೂ ಇಸ್ಲಾಮಿಗೆ ಆರಂಭದಲ್ಲಿ ದೊರೆತ ಗೌರವ, ಭಕ್ತಿ ಹಾಗೂ ಮಹಮದನ ನಾಯಕತ್ವಕ್ಕೆ ದೊರೆತ ಮನ್ನಣೆ ಪೂರ್ಣ ಪ್ರಮಾಣದ್ದಾಗಿರಲಿಲ್ಲ ಅನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ. ಎದುರಿಗೆ ವಿಶ್ವಾಸ ನಟಿಸಿದರೂ ಹಿಂದೆ ಆಕ್ರೋಶ ಪ್ರಕಟಿಸುವವರೂ ಕೊರತೆಯಿಲ್ಲದಷ್ಟು ಇದ್ದರು. ಅವರೆಲ್ಲರನ್ನೂ ಮಹಮದ್ "ಕಪಟ ವಿಶ್ವಾಸಿ'ಗಳೆಂದು ಕರೆದ. ಮದೀನಾ ವಾಸದ ಆರಂಭದ ದಿನಗಳಲ್ಲಿ ಮಹಮದ್ ಯಹೂದಿಗಳ ವಿಶ್ವಾಸ ಗಳಿಸಲು ಅನೇಕ ಸ್ನೇಹ ವರ್ಧಕ ಕ್ರಮಗಳನ್ನು ಕೈಗೊಂಡ.




ಉದಾಹಾರಣೆಗೆ ಯಹೂದಿಗಳು ಆಚರಿಸುತ್ತಿದ್ದ "ಪ್ರಾಯಶ್ಚಿತದ ದಿನ"ವನ್ನು ಉಪವಾಸದ ದಿನವನ್ನಾಗಿ ಆಚರಿಸಲು ಕರೆ ನೀಡಿದ. ಇಸ್ಲಾಮಿಗೆ ಧರ್ಮಾಂತರವಾದ ನಂತರವೂ ಅಸಲಂ ಬುಡಕಟ್ಟಿನ ಯಹೂದಿಗಳಿಗೆ ಅದೆ ಪೂರ್ವ ಧರ್ಮಾಚರಣೆಯ "ಪ್ರಾಯಶ್ಚಿತದ ದಿನ" ಆಚರಿಸಲು ಸಮ್ಮತಿ ನೀಡಿದ. "ಟೋರಾ"ದಲ್ಲಿ ಬರೆದಿರುವಂತೆ ತಮ್ಮ ಮುಂದಿನ ಪ್ರವಾದಿಗಳು ಸಿರಿಯಾದಲ್ಲಿ ಹುಟ್ಟಿ ಬರುವರೆಂಬ ನಂಬಿಕೆ ಹೊಂದಿದ್ದ ಯಹೂದಿಗ;ಳನ್ನ ಭಾವನಾತ್ಮಕವಾಗಿ ಯಾಮಾರಿಸಲು ಸಿರಿಯಾದತ್ತ ಪ್ರಯಾಣ ಬೆಳೆಸಿದರೂ ಸಹ ಉರಿ ಬಿಸಿಲಿನ ಹವಾಮಾನ ವೇಪರಿತ್ಯದಿಂದಾಗಿ ಈ ನಕಲಿ ನಾಟಕ ನಡೆಸಲಾಗಲಿಲ್ಲ ಅನ್ನೋದು ಬೇರೆ ಮಾತು. ಆದರೂ ಈ ಯಹೂದಿಗಳ ವಿಶ್ವಾಸ ಗಳಿಸುವ ಪ್ರಯತ್ನದಲ್ಲಿ ಅವರ ಅನೇಕ ಆಚರಣೆಗಳಿಗೆ ಇಸ್ಲಾಮಿನಲ್ಲಿಯೂ ಗೌರವ ಪೂರ್ವಕ ಒತ್ತು ನೀಡಿದ. ಯಹೂದಿಗಳ ಅಂತಿಮ ಯಾತ್ರೆ ಹಾದು ಹೋಗುವ ಸಂದರ್ಭಗಳಲ್ಲಿ ಮಹಮದ್ ಹಾಗೂ ಅವನ ಅನುಯಾಯಿಗಳು ಎದ್ದು ನಿಂತು ಗೌರವ ಪ್ರಕಟಿಸುತ್ತಿದ್ದರು. ಯಹೂದಿಯೊಬ್ಬ ಒಮ್ಮೆ ಮಹಮದನನ್ನು ತನ್ನ ಮನೆಗೆ ಊಟಕ್ಕೆ ಆಹ್ವಾನಿಸಿ ಅಲ್ಲಿ ರೊಟ್ಟಿ, ಬಾರ್ಲಿ ಹಾಗೂ ಕೊಳೆತ ಮಾಂಸವನ್ನು ನೀಡಿದರೂ ಮಹಮದ್ ಅದನ್ನು ಸಭ್ಯತೆಯಿಂದ ಒಲ್ಲೆ ಎನ್ನದೆ ತಿಂದು ಮುಗಿಸಿದ!





 ಯಹೂದಿಗಳ ಒಡನಾಟದಿಂದ ಅವರ ಧರ್ಮದ ಬಗ್ಗೆ ಮಹಮದ್ ತಿಳಿದು ಕೊಂಡು ಅನೇಕ ಧರ್ಮ ಸೂಕ್ಷ್ಮದ ಮಾಹಿತಿಗಳನ್ನ ಕಲೆ ಹಾಕಿದರೂ ಸಹ ಆತ ಅವರ ಧರ್ಮಗ್ರಂಥದ ಸಂಪೂನ ಅಧ್ಯಯನ ಕೈಗೊಂಡು ಅದರ ಆಚರಣೆಗೆ ಇಳಿದಿರಲಿಲ್ಲ. ಅನಕ್ಷರಸ್ಥನಾದ ಅವನಿಗೆ ಅದು ಅಸಾಧ್ಯವೂ ಆಗಿತ್ತು. "ಬೆನ್ ಕುರೈಜಾ" ಬುಡಕಟ್ಟಿನ ಯಹೂದಿಯೊಬ್ಬ ಬೈಬಲ್ಲಿನ ಹೊಸ ಒಡಂಬಡಿಕೆಯ ಕೆಲ ಅಧ್ಯಾಯಗಳನ್ನು ಅರೆಬ್ಬಿಯಲ್ಲಿ ಅನುವಾದಿಸಿ ಅದರ ಪ್ರತಿಯೊಂದನ್ನು ಅಧ್ಯಯನಕ್ಕೆಂದು ಮಹಮದನ ನೆಂಟ ಓಮರನಿಗೆ ನೀಡಿದಾಗ ಆತ ಮಹಮದನ ಅಪ್ಪಣೆಯಿಲ್ಲದೆ ಅದನ್ನ ಓದುವುದಿಲ್ಲವೆಂದು ಸಾರಿದ. ಇದಕ್ಕೆ ಒಪ್ಪಿಗೆ ನೀಡದ ಮಹಮದ್ ಕೂಡ " ಒಂದೊಮ್ಮೆ ಪ್ರವಾದಿ ಮೂಸ ( ಯಹೂದಿಗಳ ಮೊದಲನೆ ಪ್ರವಾದಿ ಮೋಸೆಸ್.) ಪುನರ್ಜನ್ಮ ತಾಳಿ ಪುನಃ ಭೂಮಿಯಲ್ಲಿ ಹುಟ್ಟಿ ಬಂದರೂ, ಇಸ್ಲಾಮನ್ನ ಒಪ್ಪಿ ನಡೆಯುವವರ್ಯಾರೂ ತನ್ನ ಬಿಟ್ಟು ಮರಳಿ ಅವರ ಹಿಂದೆ ನಡೆಯುವಂತಿಲ್ಲ!" ಎಂದು ಅಬ್ಬರಿಸಿದ! ಇಸ್ಲಾಮಿನಲ್ಲಿ ಸ್ವತಃ ಮಹಮದನೆ ಘೋಷಿಸಿದ ಹಾಗೆ ಪುನರ್ಜನ್ಮದಲ್ಲಿ ನಂಬಿಕೆಯೆ ಇಲ್ಲ ಎನ್ನುವುದು ನೆನಪಿಡಬೇಕಾದ ಸಂಗತಿ?!


 ( ಇನ್ನೂ ಇದೆ...)

05 October 2012

ವಲಿ.... ( ಭಾಗ- 9 )


ಇಷ್ಟಲ್ಲದೆ ಕ್ರಿಸ್ತನ ಹುಟ್ಟು ಹಾಗೂ ಆತನ ಶಿಲುಬೆಗೇರಿಸಿದ ವಧೆಯನ್ನು ಮಹಮದ್ ಸಾರಾಸಗಟಾಗಿ ಅಲ್ಲಗೆಳೆದ. ಸುರಾ 19/1 ಹಾಗೂ 5/109ಗಳ ಮೂಲಕ ದೈವಾನುಗ್ರಹದಿಂದ ಕನ್ಯಾ ಮೇರಿಮಾತೆಯ ಒಡಲಲ್ಲಿ ಕ್ರಿಸ್ತನ ಜೀವಾಂಕುರವಾಯಿತು ಎಂದ ! ಜೈವಿಕವಾಗಿ ಅಸಾಧ್ಯವಾದ ಈ ನೆಲಗಟ್ಟಿಲ್ಲದ ಪೊಳ್ಳು ನಂಬಿಕೆಯನ್ನ ಬೈಬಲ್ಲಿನಂತೆಯೇ ಖುರಾನ್ ಕೂಡ ಸಮರ್ಥಿಸುತ್ತದೆ. ಆದರೆ ಮಹಮದ್ ಇಷ್ಟಕ್ಕೆ ನಿಲ್ಲಿಸದೆ, ದೇವರ ಕೃಪೆಯಿಂದ ಇನ್ನೂ ಜನಿಸಿ ತೊಟ್ಟಿಲಲ್ಲಿದ್ದಾಗಲೆ ತಾನು ದೇವರ ಸೇವಕ ಎಂಬುದು ಅವನಿಗೆ ಅರಿವಾಗಿ ಕ್ರಿಸ್ತ ತಾನು ದೇವದೂತನೆಂದು ಸಾರಿದ ಎಂದ !. ಮಗು ತೊಟ್ಟಿಲಿನಲ್ಲಿಯೇ ತಾರ್ಕಿಕವಾಗಿ ಮಾತನಾಡಿತು ಎನ್ನುವ ಅತಾರ್ಕಿಕ ವಾದವನ್ನ್ನ ಖುರಾನ್ ಸಾರಿ ಹೇಳಿತು!!! ಎಸುವಿನಿಂದ ತನಗೊಂದು ಧರ್ಮಗ್ರಂಥ ಕೊಡಲ್ಪಟ್ಟಿದೆ ಎಂದ ಮಹಮದ್ ತನ್ನ ಮರಣಕ್ಕೆ ಹಲವು ವರ್ಷ ಮೊದಲು ಮದೀನಾದಲ್ಲಿ ಸುರಾ 3/32-57ರ ಮೂಲಕ ಕ್ರಿಸ್ತನ ಜನನ, ಜೀವನ ಹಾಗೂ ಮರಣಗಳ ಕುರಿತ ತನ್ನ ವ್ಯಾಖ್ಯಾನಗಳನ್ನು ಪುನರುಚ್ಚರಿಸಿದ. ಈ ಮೂಲಕ ಮಹಮದ್ ಏಸುವಿನ ಜನನ, ಮರಣ ಹಾಗೂ ಆತ ಸಾರಿದ ತತ್ವಗಳ ಬಗ್ಗೆ ಕ್ರಿಸ್ತ ಮತಾವಲಂಭಿಗಳಲ್ಲಿದ್ದ ಪುರಾತನ ನಂಬಿಕೆಗಳನ್ನ ನಿರಾಕರಿಸಿದ. ಕ್ರಿಸ್ತನನ್ನು ಅವನ ಪ್ರಕಾರ ಯಹೂದಿಗಳು ಶಿಲುಬೆಗೆ ಏರಿಸಿಯೆ ಇರಲಿಲ್ಲ! ವಧೆಯಾಗದೆ ಆತ ದೇವರ ಕೈಹಿಡಿದು ಸಶರೀರನಾಗಿ ಸ್ವರ್ಗ ಆರೋಹಣ ಮಾಡಿದ ಎಂದು ಅವನು ಸುರಾ 4/155-159 ಹಾಗೂ 5/109-110ಗಳ ಮೂಲಕ ಆತ ಸಾಧಿಸಿದ. ಖುರಾನ್ ಪ್ರತಿಪಾದನೆಯ ಪ್ರಕಾರ ಅಲ್ಲಿಗೆ ದೇವಲೋಕಕ್ಕೆ ದೇವದೂತ ಏಸು ಸಾಯದೆ ಬದುಕಿದ್ದೆ ಸ್ವರ್ಗ ಸೇರಿ ಹೋಗಿದ್ದ ?! ಮಹಮದನ ಈ ಹೊಸ ಉಪಖ್ಯಾನದ ಹಿನ್ನೆಲೆಯಲ್ಲಿ ಪ್ರಾಯಶಃ ಏಸುವಿನ ಕೊಲೆಯ ಆರೋಪದಿಂದ ಯಹೂದಿಗಳನ್ನು ಮುಕ್ತಗೊಳಿಸಿ ಅವರನ್ನೂ ಇಸ್ಲಾಮಿನತ್ತ ಸೆಳೆದುಕೊಳ್ಳುವ ಹುನ್ನಾರ ಅಡಗಿತ್ತು ಎನ್ನುವ ಊಹೆ ಇತಿಹಾಸಕಾರ ಕ್ಲೇರನದ್ದು. ಇದೇನೆ ಇದ್ದರೂ ಮಹಮದ್ ಏಸು ಒಬ್ಬ ಪ್ರವಾದಿಯೆಂದು ಸಾಧಿಸಿ ಆತನ ಕೊಲೆಯಾಗದೆ ನೇರ ದೇವರೆ ಕೈಹಿಡಿದು ಆತನ ಸ್ವರ್ಗಾರೋಹಣ ಮಾಡಿಸಿದ ಎಂದು ಸಾರಿದ್ದು ವಿಶೇಷ ಮಹತ್ವ ಪಡೆಯುತ್ತದೆ. ಹೀಗಿರುವಾಗ ಮೆಕ್ಕಾದಲ್ಲಿ ಪ್ರತಿವರ್ಷದಂತೆ ಜರಗುವ ವರ್ಷಾವಧಿಯ ಪವಿತ್ರ ಯಾತ್ರೆಗೆ ಮದೀನದ ನವ ಮತಾಂತರಿತರೂ ಯಾತ್ರೆ ಕೈಗೊಂಡು ಕಾಬಾದ ಆರಾಧನೆಗೆ ಸಿದ್ಧರಾದರು. ಆದರೆ ಅವರ ಮತಾಂತರದ ಸುದ್ದಿ ಖುರೈಷಿಗಳಿಗೇನಾದರೂ ತಿಳಿದ್ದಿದ್ದೆ ಹೌದಾಗಿದ್ದಲ್ಲಿ ಅವರು ಖುರೈಶಿಗಳೊಂದಿಗೆ ಹೊಡೆದಾಟ ಹಾಗು ರಕ್ತಪಾತಕ್ಕೂ ಈ ಬಾರಿ ಅಣಿಯಾಗಿಯೇ ಹೋಗಬೇಕಿತ್ತು! ಆದರೆ ಮಹಮದನಿಗೆ ಇಂತಹದ್ದೊಂದು ತಿಕ್ಕಾಟ ಬೇಕಿರಲಿಲ್ಲ. ಹಾಗೊಂದು ವೇಳೆ ಹೊಡೆದಾಟವಾದರೆ ಅದರಿಂದ ತನ್ನ ಗುರಿ ಸಾಧನೆಗೆ ಘೋರ ಧಕ್ಕೆ ಬಂದೊದಗುತ್ತದೆ ಎಂಬ ಅರಿವು ಅವನಿಗಿತ್ತು. ಹೀಗಾಗಿ ಅದಕ್ಕೂ ಮೊದಲೆ ಆತ ಮದೀನಾದ ನವ ಮತಾಂತರಿಗಳನ್ನು ಗುಪ್ತವಾಗಿ ಸಂಧಿಸಿದ. ಅವರ ಸಂಖ್ಯೆ, ಧರ್ಮನಿಷ್ಠೆ ಹಾಗೂ ಮನೋಗುಣ ಅರಿಯುವ ಪ್ರಯತ್ನ ಇದಾಗಿತ್ತು. ಆತ ಅವರನ್ನು ಅಕಾಬಾದಲ್ಲಿಯೆ ಸಂಧಿಸಿದ. ಮಧ್ಯರಾತ್ರಿ ನಡೆದ ಆ ಸಭೆಯಲ್ಲಿ ಮತಾಂತರಿತ ಎಪ್ಪತ್ತೆರಡು ಮದೀನಾವಾಸಿಗಳನ್ನು ಉದ್ದೇಶಿಸಿ ಮಹಮದ್ ಖುರಾನ್ ದೈವವಾಣಿಗಳನ್ನು ಸಾದರ ಪಡಿಸಿದ. ಜೊತೆಗೆ ತನ್ನ ಜೀವ ರಕ್ಷಣೆಯ ಪ್ರತಿಜ್ಞೆಯನ್ನು ಅವರೆಲ್ಲರಿಂದಲೂ ಮಾಡಿಸಿಕೊಂಡ ! ಎನ್ನುತ್ತಾನೆ ಇತಿಹಾಸಕಾರ ಕ್ಯಾರನ್ ಅರ್ಮೆಸ್ತ್ರಾಂಗ್. ಈ ಪೈಕಿ ಹನ್ನೆರಡು ಮೂಲ ಮತಾಂತರಿತರನ್ನು ಅವರೆಲ್ಲರ ನಾಯರನ್ನಾಗಿ ಆತ ನೇಮಿಸಿದ, ಇದನ್ನೆ 'ಎರಡನೆ ಅಲ್ ಅಕಾಬಾ' ಎಂದು ಕರೆಯಲಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ. ಆದರೆ ಗುಪ್ತಚಾರರ ಮೂಲಕ ಈ ಗುಪ್ತ ಸಭೆಯ ಸುದ್ದಿ ಖುರೈಶಿಗಳನ್ನು ಮಿಂಚಿನಂತೆ ಮುಟ್ಟಿತು. ಅವರು ಆ ಎಲ್ಲಾ ಮತಾಂತರಿತ ಮದೀನ ನಿವಾಸಿಗಳನ್ನು ಸೆರೆ ಹಿಡಿಯಲು ಅತ್ತ ಧಾವಿಸುವಷ್ಟರಲ್ಲಿ ಆ ಎಲ್ಲಾ ಯಾತ್ರಿಕರೂ ಅಲ್ಲಿಂದ ಸಕಾಲದಲ್ಲಿ ಕಾಲು ಕಿತ್ತಾಗಿತ್ತು. ಆದರೆ ಈ ಘಟನೆಯ ನಂತರ ಮಹಮದನಿಗೆ ಶಾಂತಿ ಎನ್ನುವುದು ಮೆಕ್ಕಾದಲ್ಲಿ ಅಕ್ಷರಶಃ ಮರೀಚಿಕೆಯೆ ಆಯಿತು. ಖುರೈಷಿಗಳ ಇಮ್ಮಡಿಗೊಂಡ ಆಕ್ರೋಶ ನಾನಾ ಕೋಟಲೆಗಳಾಗಿ ಅವನ ಮೇಲೆರಗಿತು. ಮಹಮದ್ ಹಾಗೂ ಅವನ ಸ್ಥಳೀಯ ನಿವಾಸಿ ಅನುಯಾಯಿಗಳ ಮೇಲೆ ಹಿಂಸೆ ಹೆಚ್ಚಾಯಿತು. ಹೀಗಾಗಿ ಮತ್ತೆ ಆತ ಮೆಕ್ಕಾವನ್ನು ತೊರೆಯಲು ನಿರ್ಧರಿಸಿದ. ನೂರಕ್ಕೆ ನೂರರಷ್ಟು ಪ್ರಾಣ ಸುರಕ್ಷತೆಯ ಖಾತ್ರಿಯಿರುವ ತನ್ನ ನವ ಹಿಂಬಾಲಕರಿರುವ ಮದೀನಕ್ಕೆ ತೆರಳಲು ಆತ ನಿರ್ಧರಿಸಿದ. ತನ್ನ ಮತ ಬಾಂಧವರಿಗೂ ಆತ ಇದೆ ಅಪ್ಪಣೆಯನ್ನು ರವಾನಿಸಿದ. ಅಕಾಬಾದಲ್ಲಿ ಮದೀನಾ ವಾಸಿಗಳಿಂದ ಮಾಡಿಸಿಕೊಂಡಿದ್ದ ಪ್ರತಿಜ್ಞೆ ಅವನ ಈ ನಿರ್ಧಾರಕ್ಕೆ ಬಲತುಂಬಿತ್ತು. ಮನೆ- ಮಠ ತೊರೆದು ಮೆಕ್ಕಾದಿಂದ ನೂರಾ ಎಂಬತ್ತು ಮೈಲಿ ದೂರದಲ್ಲಿದ್ದ ಮದೀನಕ್ಕೆ ಕೈಗೊಂಡ ಆ ವಲಸೆ ಅವರೆಲ್ಲರಿಗೂ ಸಾಕಷ್ಟು ಸಂಕಷ್ಟಗಳನ್ನು ತಂದೊಡ್ಡಿತು. ಪ್ರಯಾಸಕರವಾಗಿದ್ದ ಆ ಪ್ರಯಾಣದಲ್ಲಿ ಸುಮಾರು ಇನ್ನೂರು ಮಂದಿ ಮೆಕ್ಕಾದಿಂದ ಮದೀನಕ್ಕೆ ವಲಸೆ ಹೋದರೆಂದು ಇತಿಹಾಸಕಾರ ಅಲ್ ಮುಬಾರಕಿ ತಿಳಿಸುತ್ತಾನೆ. ಅತ್ಯಂತ ಗುಟ್ಟಾಗಿ ಕೈಗೊಂಡಿದ್ದ ಈ ಪಯಣ ಸುಮಾರು ಎರಡು ತಿಂಗಳಲ್ಲಿ ಮುಗಿಯಿತು! ಹೇಗೊ ಸುರಕ್ಷಿತವಾಗಿ ಮದೀನಾ ತಲುಪಿಕೊಂಡ ಅವರನ್ನು ಮದೀನಾದ ಮುಸ್ಲೀಮರು ಆದರ ಹೊತ್ತ ಅಂತಃಕರಣದಿಂದ ಬರಮಾಡಿಕೊಂಡರು. ಇತ್ತ ಈ ವಿಷಯ ಅರಿವಾದ ಖುರೈಶಿಗಳಿಗೆ ದಿಗ್ಭ್ರಮೆಯಾಯಿತು. ಚೂರೂ ಸುಳಿವು ಕೊಡದೆ ಕುಟುಂಬಗಳು ತಮ್ಮ ಮನೆ- ಮಠ ಗಳನ್ನು ಇದ್ದಕ್ಕಿದಂತೆ ಅದೆ ಸ್ಥಿತಿಯಲ್ಲಿ ತೊರೆದು ಹೋಗಿದ್ದು ಅವರೆಲ್ಲರ ಅಚ್ಚರಿಗೆ ಕಾರಣವಾಯಿತು. ಹಾಗೊಂದು ವೇಳೆ ಆ ಬಗ್ಗೆ ಅವರಿಗೆ ಸುಳಿವು ಮೊದಲೆ ದೊರೆತಿದ್ದರೂ ಅವರೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅವರೇನಾದರೂ ಉಗ್ರವಾಗಿ ವರ್ತಿಸಿದ ಪಕ್ಷದಲ್ಲಿ ತಮ್ಮ ರಕ್ತ ಸಂಬಂಧಿಗಳೊಂದಿಗೆ ಕಾದಾಡಿ ಅವರ ದ್ವೇಷ ಕಟ್ಟಿಕೊಳ್ಳಬೇಕಾಗುತ್ತಿತ್ತು, ಅಲ್ಲದೆ ಅದು ಅವರ ಬುಡಕಟ್ಟಿನ ಒಳಗೆ ಅದು ಬಿರುಕು ಮೂಡಿಸಿದ್ದರೂ ಆಶ್ಚರ್ಯ ಪಡಬೇಕಾಗಿರಲಿಲ್ಲ. ಒಟ್ಟಿನಲ್ಲಿ ಖುರೈಷಿಗಳು ನಿಸ್ಸಹಾಯಕರಾಗಿದ್ದರು. ಇಷ್ಟರ ನಡುವೆಯೂ ಮಹಮದ್, ಅವನ ಮಾವ ಅಬು ಬಕರ್ ಹಾಗೂ ದೊಡ್ಡಪ್ಪನ ಮಗ ಅಲಿಯೊಂದಿಗೆ ಅವನ ಕುಟುಂಬದವರು ಇನ್ನೂ ಅಲ್ಲಿಯೆ ಉಳಿದುಕೊಂಡಿದ್ದರು! ಮಹಮದನ ಈ ನಡೆ ಖುರೈಶಿಗಳಂತೆ ಅಬು ಬಕರನಿಗೂ ಬಿಡಿಸಲಾರದ ಒಗಟಾಗಿತ್ತು. ಮಹಮದನೂ ಅವರೊಂದಿಗೆ ಹೋಗಿದ್ದಿದ್ದರೆ ಪೀಡೆ ತೊಲಗಿತು ಎಂದುಕೊಳ್ಳಲು ತಯಾರಿದ್ದ ಖುರೈಶಿಗಳೆಲ್ಲ ಈ ಹಿನ್ನೆಲೆಯಲ್ಲಿ ಸಭೆಗೂಡಿದರು. ಅಲ್ಲಿ ಕೆಲವರು ಮಹಮದನ ಜೀವಹರಣ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲಹೆ ಕೊಟ್ಟರಾದರೂ ಹಾಗೊಂದು ವೇಳೆ ಮಹಮದನ ಕೊಲೆ ಮಾಡಿದರೆ ಆತನ ಕುಟುಂಬಸ್ಥರು ಅರಬ್ಬಿ ಬುಡಕಟ್ಟಿನ ಒಳ ನಿಯಮಗಳಂತೆ ಪ್ರತಿಕಾರಕ್ಕೆ ಮುನ್ನುಗ್ಗಿದರೆ ವ್ಯಥಾ ರಕ್ತಪಾತ ಆದೀತು ಎಂಬ ಅಭಿಪ್ರಾಯವೂ ಎದುರಾಗಿ, ಅವನನ್ನು ಅವನ ಮನೆಯಲ್ಲೆ ಭೇಟಿಯಾಗಿ ತೀವ್ರವಾಗಿ ಅವನನ್ನು ಹೆದರಿಸಿ ಸುಮ್ಮನಾಗಿಸಲು ತೀರ್ಮಾನ ಕೈಗೊಂಡು ಸಭೆ ಬರಖಾಸ್ತುಗೊಳಿಸಲಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ. ಆದರೆ ಮಹಮದನಿಗೆ ಖುರೈಷಿಗಳ ಸಂಧಾನದ ಕರೆ ಸಂಶಯ ಮೂಡಿಸಿತು. ಹಾಗೊಮ್ಮೆ ತಾನವರನ್ನು ಎದುರುಗೊಂಡರೆ ಅವರು ತನ್ನ ಹತ್ಯೆ ಜರುಗಿಸಿಯಾರು ಎಂಬ ಸಂಶಯಕ್ಕೆ ಅವನು ಒಳಗಾದ. ಖುರಾನಿನ ಸುರಾ 8/30ರಲ್ಲಿ ಅದನ್ನವನು ವ್ಯಕ್ತಪಡಿಸಿದ ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಈ ವಿಷಯ ತಿಳಿದ ಮಹಮದ್ ಆಲಿಯನ್ನು ತನ್ನ ಮನೆಯಲ್ಲಿ ಇರಲು ಹೇಳಿ ಅಬು ಬಕರನ್ನು ಕಾಣಲು ದೌಡಾಯಿಸಿದ. ಅಲ್ಲಿ ಮದೀನಕ್ಕೆ ಪಲಾಯನ ಮಾಡಲು ತೀರ್ಮಾನಿಸಲಾಯಿತು. ಅದೆ ರಾತ್ರಿ ಆತ ಹಾಗೂ ಅಬುಬಕರ್ ಮೆಕ್ಕಾದಿಂದ ಓಡಿಹೋದರು. ಎರಡು ಘಂಟೆ ಪ್ರಯಾಣಿಸಿ ದಾರಿಯಲ್ಲಿ ಸಿಗುವ ಥೌರ್ ಎಂಬ ಬೆಟ್ಟವನ್ನು ಕಷ್ಟದಿಂದ ಏರಿ ಅಲ್ಲಿದ್ದ ಗುಹೆಯೊಂದರಲ್ಲಿ ಇಬ್ಬರೂ ಅಡಗಿಕೊಂಡರು. ಅಬು ಬಕರನ ಮಗ ಅಬ್ದುಲ್ಲಾ ಹಾಗೂ ಮಗಳು ಆಸ್ಮಾ ಇವರಿಗೆ ಹಾಲು-ಹಣ್ಣು ಹಾಗೂ ಅಗತ್ಯ ತಿನಿಸುಗಳನ್ನು ಸರಬರಾಜು ಮಾಡಿದರು. ಇದೆ ಗುಹೆಯಲ್ಲಿ ಅಡಗಿ ಕುಳಿತಾಗ ಜೇಡವೊಂದು ಗುಹೆ ಬಾಗಿಲಿಗೆ ಬಲೆ ಹೆಣೆದು ಹಿಂಬಾಲಿಸಿ ಬಂದ ಕೊಲೆಗಡುಕ ಖುರೈಶಿಗಳಿಂದ ಮಹಾಮದನನ್ನು ಪಾರುಮಾಡಿತು ಎಂಬ ದಂತಕಥೆಯೊಂದು ಚಾಲ್ತಿಯಲ್ಲಿದೆ. ಇತ್ತ ಮಹಮದನ ಪಲಾಯನದ ಸುದ್ದಿ ಅರಿತ ಖುರೈಷಿಗಳು ಗಲಿಬಿಲಿಗೊಂಡರು. ಅವನನ್ನು ಹಿಡಿದು ಹೆಡೆಮುರಿಗೆ ಕಟ್ಟಿತರಲು ಬೆನ್ನ ಹಿಂದೆಯೆ ಪಡೆಗಳನ್ನೂ ಅಟ್ಟಲಾಯಿತು. ಆ ಪ್ರಯತ್ನವೂ ವಿಫಲವಾದ ನಂತರ ಮೂರು ದಿನಗಳನ್ನು ಗುಹೆಯೊಳಗೆ ಕಳೆದ ಮಹಮದ್ ಹಾಗೂ ಅಬು ಬಕರ್ ಧೈರ್ಯವಹಿಸಿ ಗುಹೆಯಿಂದ ಹೊರಬಿದ್ದರು. ಅವರಿಗಾಗಿಯೆ ಬೆಟ್ಟದ ತಪ್ಪಲಿನಲ್ಲಿ ಗುಪ್ತವಾಗಿ ಒಂಟೆಗಳನ್ನು ಸಿದ್ಧಪಡಿಸಿ ಇಡಲಾಗಿತ್ತು. ಅವನ್ನೇರಿ ಇಬ್ಬರೂ ಮದೀನದತ್ತ ಪೇರಿಕಿತ್ತರು. ಕ್ಷೇಮವಾಗಿಯೆ ಅವರಲ್ಲಿಗೆ ಮುಟ್ಟಿದರು. ಹೀಗೆ ಮದೀನದತ್ತ ಆತ ಯಾತ್ರಿಸಿದ ದಿನ ಮುಸ್ಲೀಮರಿಗೆ ಪವಿತ್ರವಾಗಿ ಪರಿಣಮಿಸಿ ಅಂದಿನಿಂದ 'ಹಿಜ್ರಾ' ಶಕೆ ಆರಂಭವಾಯಿತು ಎನ್ನುವುದು ಇತಿಹಾಸಕಾರ ಮ್ಯೂರನ ಅಭಿಪ್ರಾಯ. ದಿನದರ್ಶಿಕೆಯ ಪ್ರಕಾರ ಅಂದು ಕ್ರಿಸ್ತಶಕೆ 622ರ ಜೂನ್ 20ನೆ ತಾರೀಕು ಆಗಿತ್ತು. ಮಹಾಮದನಿಗಾಗ ಐವತ್ತಮೂರರ ಹರೆಯ. ಮಹಮದನ ದೊಡ್ಡಪ್ಪನ ಮಗ ಆಲಿ, ಆತನ ಹೆಂಡತಿ ಸೌದ, ಮಕ್ಕಳಾದ ಜೈನಾಬ್, ಉಮ್'ಕುಲ್'ಸುಮ್ ಹಾಗೂ ಫಾತಿಮಾರ ಜೊತೆಗೆ ಮಹಮದನ ಎಳೆಯ ಹೆಂಡತಿ ಆಯೆಷಾ ಇವರಿಷ್ಟು ಮಂದಿ ಮಾತ್ರ ಇನ್ನೂ ಮೆಕ್ಕಾದಲ್ಲಿಯೆ ಉಳಿದುಕೊಂಡಿದ್ದರು. ಇವರಿಗ್ಯಾರಿಗೂ ಖುರೈಷಿಗಳು ಉಪಟಳ ನೀಡದಿದ್ದುದ್ದು ಸೋಜಿಗ ಹುಟ್ಟಿಸಿತು ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಏಕೆಂದರೆ ಮಹಮದ್ ಖುರೈಷಿಗಳ ಪುರಾತನ ಮತ, ವಿಗ್ರಹಾರಾಧನೆ ಹಾಗೂ ಆಚಾರಗಳ ವಿರುದ್ಧ ಎಸಗಿದ ಅಪಚಾರ ಇವೆಲ್ಲ ಅವರಲ್ಲಿ ಅವನ ಹಾಗೂ ಅವನ ಆತ್ಮೀಯರ ವಿರುದ್ಧ ವೈರತ್ವ ಸಾರುವಂತೆ ಮಾಡಿತ್ತು, ಹೀಗಿರುವಾಗ ಆತ ಕೈಸಿಗದೆ ಪಲಾಯನಗೈದ ಹತಾಶೆ ಆತನ ಕುಟುಂಬದವರ ಮೇಲೆ ಹಿಂಸಾತ್ಮಕವಾಗಿ ತಿರುಗದಿದ್ದುದು ಅಚ್ಚರಿ ಹುಟ್ಟಿಸುವುದು ಸಕಾರಣವಾಗಿದೆ. ಇದೇನೆ ಇದ್ದರೂ ಮಹಮದ್ ಕ್ಷೇಮವಾಗಿ ಅಬು ಬಕರನೊಂದಿಗೆ ಮದೀನ ಮುಟ್ಟಿದ. ಈ ಹಿಂದೆ ಮದೀನವನ್ನು 'ಯಾತ್ರಿಬ್' ಎಂದು ಕರೆಯಲಾಗುತ್ತಿತ್ತು. ಕ್ರಮೇಣ ಖುರಾನಿನಲ್ಲಿ ಅದನ್ನು ಯಹೂದಿಗಳು ಅರಮಾಯಿಕ್ ಭಾಷೆಯಲ್ಲಿ ಕರೆಯುತ್ತಿದ್ದಂತೆ 'ಮೆದಿಂಕಾ' ಅಂದರೆ 'ನಗರ'ವೆಂದು ಕರೆಯಲಾಯಿತು. ಇದೆ ಮದಿಂಕಾ ಮುಂದೆ ಮದೀನ ಎಂದು ಕರೆಸಿಕೊಂಡಿತು. ಮಹಮದ್ ಅಲ್ಲಿಗೆ ವಲಸೆ ಬಂದ ನಂತರ ಅದನ್ನು 'ಅಲ್ ಮದೀನಾತ್' ಅಂದರೆ 'ಪ್ರವಾದಿಯ ನಗರ'ವೆಂದು ಕರೆಯಲಾಯಿತು ಎನ್ನುತ್ತಾನೆ ಇತಿಹಾಸಕಾರ ಕ್ಯಾರನ್ ಅರ್ಮೆಸ್ಟ್ರಾಂಗ್. (ಇನ್ನೂ ಇದೆ....)

04 October 2012

ವಲಿ.... ( ಭಾಗ-8 )


ಮುಂದೆ ಕ್ರಿಸ್ತಶಕ ನಾಲ್ಕನೆ ಶತಮಾನದಲ್ಲಿ ಅರೇಬಿಯಾದ ದಕ್ಷಿಣ ಪ್ರಾಂತ್ಯದ ಎಮನ್'ನಿಂದ ಅರಬ್ಬಿ ಮೂಲದವರು ವಲಸೆ ಹೋಗಿ ಸಿರಿಯಾ ಹಾಗೂ ದಾರಿಯಲ್ಲಿ ಸಿಗುವ ಮದೀನಾದ ಸುತ್ತಲೂ ಬೇರೂರಿದರು. ಹೀಗೆ ವಲಸೆ ಹೋದವರಲ್ಲಿ 'ಅವ್ಸ್' ಹಾಗೂ 'ಖಸ್'ರಾಜ್' ಬುಡಕಟ್ಟಿನ ಮಂದಿ ಪ್ರಮುಖರು. ಈ ಅರಬ್ಬಿ ವಲಸೆಗಾರರು ಅದಾಗಲೆ ಮೂರು ಶತಮಾನದ ಹಿಂದೆಯೆ ಅಲ್ಲಿಗೆ ವಲಸೆ ಬಂದು ನೆಲೆಸಿದ್ದ ಯಹೂದಿಗಳೊಂದಿಗೆ ಅವರ ವಾಸದ ಜಾಗವನ್ನು ಆಕ್ರಮಿಸುವ ಉದ್ದೇಶದಿಂದ ಸಮರ ಹೂಡಿದರು. ಆದರೆ ವಾಸ್ತವದಲ್ಲಿ ಬಲು ಹಿಂದಿನಿಂದಲೂ ಇವೆರಡು ಅರಬ್ಬಿ ಬುಡಕಟ್ಟಿನವರ ಮಧ್ಯೆಯೆ ದ್ವೇಷ ಹೊಗೆಯಾಡುತ್ತಿತ್ತು. ಈಗ ಹೂಡಿದ್ದ ಸಮರದಲ್ಲಿ ಅವರ ಪ್ರಯತ್ನ ಯಶಸ್ವಿಯಾಗಿ ಎರಡೂ ಗುಂಪಿನವರ ಒತ್ತಡ ತಾಳಲಾರದೆ ಯಹೂದಿಗಳು ಅಲ್ಲಿಂದ ಕಾಲು ಕಿತ್ತರೂ, ಇವೆರಡು ಬುಡಕಟ್ಟಿನವರ ನಡುವೆಯೆ ಮತ್ತೆ ಆರಂಭವಾದ ಕಿತ್ತಾಟ ಬಿಡುವಿಲ್ಲದೆ ಮುಂದುವರೆಯಿತು. ಈ ಆಂತರಿಕ ಕಲಹದಲ್ಲಿ ಅಂತಿಮವಾಗಿ 'ಖಸ್'ರಾಜ್' ಬುಡಕಟ್ಟಿನವರು ಜಯ ಸಾಧಿಸಿದರೂ ದ್ವೇಷದ ಮಟ್ಟ ಮಾತ್ರ ಇನಿತೂ ಕಡಿಮೆಯಾಗಲಿಲ್ಲ. 'ಖಸ್'ರಾಜ್' ಗುಂಪಿನ ನಾಯಕರಲ್ಲೊಬ್ಬನಾದ ಅಸಾದ್ ಎನ್ನುವವನು ಮುಂದೆ ಮದೀನಾದ ಪುರಪ್ರಮುಖನಾಗಿ ಮೆರೆದ. ಅವನ ಮನಸ್ಸಿನಲ್ಲಿ ಅವರ ವೈರಿಗಳು ಅಷ್ಟೊಂದು ತೀವ್ರತರವಾಗಿ ತಮ್ಮವರ ವಿರುದ್ಧ ಕಾದಾಡಲು ಅವರಿಗೆ ಯಹೂದಿಗಳ ಕುಮ್ಮಕ್ಕು ಸಿಕ್ಕಿದ್ದೆ ಕಾರಣ ಎನ್ನುವ ಬಲವಾದ ಭಾವನೆ ಮನೆಮಾಡಿತ್ತು. ಹೀಗಾಗಿ ವಿನಾಕಾರಣ ಅವನು ಯಹೂದಿಗಳ ಮೇಲೆ ದ್ವೇಷ ಸಾಧಿಸುತ್ತಿದ್ದ. ಆದರೆ ಕ್ರಮೇಣ ಇತ್ತಂಡಗಳಿಗೂ ಶಾಂತಿಯ ಅವಶ್ಯಕತೆ ಕಂಡು ಬಂತು. ಅದಾಗಲೆ ಅವರಿಬ್ಬರ ಬಳಗಗಳಿಗೂ ಮಹಮದನ ಪರಿಚಯವಾಗಿ ಭೋದನೆಯೂ ಆಗಿತ್ತು. ಮದೀನದ ಸುತ್ತಮುತ್ತಲೂ ನೆಲೆಯೂರಿದ್ದ ಯಹೂದಿಗಳ ಧರ್ಮದ ಮರ್ಮ, ಅದರ ಆಚರಣೆಯ ಗುಟ್ಟುಗಳು, ಧರ್ಮಾಚರಣೆ ಪರಿಪಾಲನೆಯ ಪರಿಚಯ ಮಹಮದನಿಗೂ ಆಗಿದ್ದರಿಂದ ದೇವರ ವಿವರಣೆ, ಪ್ರವಾದಿ ಮೋಸಸ್ ಮತ್ತು ಇತರ ದೇವದೂತರ ದೈವವಾಣಿಗಳು ಹಾಗೂ ಯಹೂದಿ ಪುರಾಣ ಪುಣ್ಯ ಕಥೆಗಳ ವಿವರಣೆ ಅವನ ಪ್ರವಚನಗಳಲ್ಲೂ ನಿಯಮಿತವಾಗಿ ಕಾಣಿಸಿಕೊಂಡು ಮದೀನಾದ ಯಹೂದಿಯೇತರ ಅರಬರಿಗೂ ಅಲ್ಪಸ್ವಲ್ಪ ಅವುಗಳ ಪರಿಚಯವಾಗಿದ್ದಿತು. ಯಹೂದಿಗಳು ನಂಬಿದ್ದಂತೆ ದೇವರ ಪುನರುತ್ತಾನ ಹಾಗೂ ಅದಕ್ಕೆ ಮುನ್ನ ಆಗುವ ದೇವದೂತ ಹಾಗೂ ಪ್ರವಾದಿಯ ಪುನರಾಗಮನದ ನಂಬಿಕೆಯ ಅನುಸಾರ ತಾನೆ ಆ ಕೊನೆಯ ಪ್ರವಾದಿಯೆಂದು, ತನ್ನ ಮೂಲಕವೆ ದೇವರು ಧರ್ಮದ ಪುನರ್ ಸಂಸ್ಥಾಪನೆಗೆ ಆಗಮಿಸಲಿದ್ದಾನೆ ಎಂದು ಮಹಮದ ಪ್ರಚಾರ ಆರಂಭಿಸಿದ. ಆಗ ಹೊರಹೊಮ್ಮಿದ ಸುರಾ 2;89=90ರಮೂಲಕ ಈ ಹಿಂದೆ ದೇವರು ಭೂಮಿಗೆ ಕಳುಹಿಸಿದ್ದ ಪವಿತ್ರ ಗ್ರಂಥಗನ್ನು ಹಾಗೂ ಪ್ರವಾದಿಗಳಾದ ಏಸು ಮತ್ತು ತನ್ನನ್ನು ನಂಬದಿರುವುದರಿಂದಲೆ ದೇವರ ಶಾಪ ಯಹೂದಿಗಳಿಗೆ ತಟ್ಟಿದೆ ಎಂದು ನಿರೂಪಿಸಿದ. ಮರುವರ್ಷ ಅಂದರೆ ಕ್ರಿಸ್ತಶಕ 621ರಲ್ಲಿ ಮೆಕ್ಕಾದ ಪವಿತ್ರ ಯಾತ್ರೆಯ ದಿನಗಳಲ್ಲಿ ಮದೀನಾದಿಂದ ಭಕ್ತರು ಯಾತ್ರಾರ್ಥಿಗಳಾಗಿ ಬಂದಾಗ ಮಹಮದ್ ಅವರನ್ನು ಖುದ್ದಾಗಿ ಸಂಪರ್ಕಿಸಿದ. ಅವನ ಪ್ರಭಾವಕ್ಕೆ ಒಳಗಾದ ಖಾಸ್'ರಾಜ್ ಬುಡಕಟ್ಟಿನ ಹತ್ತು ಮಂದಿ ಹಾಗೂ ಅವಸ್ ಬುಡಕಟ್ಟಿನ ಇಬ್ಬರು ಆ ಸಂದರ್ಭದಲ್ಲಿ ಇಸ್ಲಾಮಿಗೆ ಮತಾಂತರಗೊಂಡರು. ತಾವು ಇಸ್ಲಾಮನ್ನು ಒಪ್ಪಿಕೊಂಡಿದ್ದೇವೆ ಎಂಬುದಕ್ಕೆ ಸಾಕ್ಷಿಯಾಗಿ ಅವರು 'ನಾವಿನ್ನು ಏಕದೇವನನ್ನಲ್ಲದೆ ಇತರ ದೇವರನ್ನು ಆರಾಧಿಸುವುದಿಲ್ಲ, ವ್ಯಭಿಚಾರಗೈಯ್ಯುವುದಿಲ್ಲ, ನಮ್ಮ ಮಕ್ಕಳನ್ನು ಹತ್ಯೆಗೈಯುವುದಿಲ್ಲ, ಯಾರ ಮೇಲೂ ಯಾವುದೆ ರೀತಿಯ ಮಿಥ್ಯಾರೋಪ ಮಾಡುವುದಿಲ್ಲ ಹಾಗೂ ಪ್ರವಾದಿ ವಿಧಿಸಿರುವ ಯಾವುದೆ ಒಳ್ಳೆಯದಕ್ಕೆ ಅವಿಧೇಯ ಪೂರ್ಣರಾಗಿರುವುದಿಲ್ಲ' ಎಂದು ಕಾಬಾದ ಎದುರೆ ಪ್ರತಿಜ್ಞೆ ಕೈಗೊಂಡರು. ಇದೆ ಮುಂದೆ ಇಸ್ಲಾಂ ಇತಿಹಾಸದ ಪುಟಗಳಲ್ಲಿ ಮೊತ್ತಮೊದಲ ಅಕಾಬಾದ ಪ್ರತಿಜ್ಞೆ ಎಂದು ಪ್ರಸಿದ್ಧಿ ಪಡೆಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ತಮೀಮಿ. ಹೀಗೆ ಮತಾಂತರಿತವಾದ ಹನ್ನೆರಡು ಮಂದಿ ಮದೀನಕ್ಕೆ ಮರಳಿದ ನಂತರ ಮಹಮದನ ಮತದ ಪ್ರಚಾರ ಕೈಗೊಂಡ ಪ್ರಮುಖ ಶಿಷ್ಯಂದಿರಾದರು. ಮದೀನಾದ ಮನೆಮನೆಗಳಿಗೂ ತೆರಳಿ ಬಿರುಸಿನಿಂದ ಅವರೆಲ್ಲರೂ ಕೈಗೊಂಡ ಮತಪ್ರಚಾರದ ಫಲವಾಗಿ ಅನೇಕರನ್ನು ಇಸ್ಲಾಮಿನತ್ತ ಸೆಳೆದು ಮತಾಂತರಿಸಲು ಅವರಿಗೆ ಸಾಧ್ಯವಾಯಿತು. ಇದೆ ಸಮಯದಲ್ಲಿ ಬೆಜಂಟೈನ್ ಗ್ರೀಕರ ಹಾಗೂ ಪರ್ಷಿಯನ್ ಸಾಮ್ರಾಜ್ಯಶಾಹಿಗಳ ನಡುವೆ ಕದನ ಜರುಗಿ ಅದರಲ್ಲಿ ಪರ್ಶಿಯನ್ನರ ಕೈ ಮೇಲಾಗಿ ಅವರು ಬಹುತೇಕ ಕಾನ್'ಸ್ಟಾಂಟಿನೋಪೋಲಿನ ಬಾಗಿಲವರೆಗೂ ತಲುಪಿಯಾಗಿತ್ತು, ಆದರೆ ತಡವಾಗಿಯಾದರೂ ಬೆಜಂಟೈನರ ರೋಮನ್ ಸಾಮ್ರಾಟ ಹಿರಾಕ್ಲಿಯಸ್ ಮೈ ಕೊಡವಿಕೊಂಡು ಎದ್ದಾಗ ಪರ್ಷಿಯನ್ನರು ಸೋತು ಹಿಮ್ಮೆಟ್ಟಲೆ ಬೇಕಾಯಿತು. ಈ ಘಟನಾವಳಿ ಕ್ರಿಸ್ತಶಕ 621ರಲ್ಲಿಯೆ ಜರುಗಿತ್ತು ಎನ್ನುವ ಕುರುಹು ಅಲ್ ತಮೀಮಿಯ ಐತಿಹಾಸಿಕ ದಾಖಲೆಗಳಿಂದ ಸ್ಪಷ್ಟವಾಗುತ್ತದೆ. ಈ ಚಾರಿತ್ರಿಕ ಘಟನೆ ಮಹಮದನ ಅರಿವಿಗೆ ಬಂದಿರುವುದು ಖುರಾನಿನ ಸುರಾ 30/1/6ರ ಮೂಲಕ ಸ್ಪಷ್ಟವಾಗುತ್ತದೆ. ಅದೆ ಸುರಾದಲ್ಲಿ ಮ್ಸಹಮದ್ ಗ್ರೀಕರ ವಿಜಯದ ಕುರಿತು ಭವಿಷ್ಯ ನುಡಿದಂತೆ ಮೇಲ್ನೋಟಕ್ಕೆ ಕಂಡುಬಂದರೂ ಆ ಸುರಾಕ್ಕಿಂತಲೂ ಮೊದಲೆ ಈ ಸಂಗತಿ ಜರುಗಿ ಮುಗಿದೆ ಹೋಗಿತ್ತು!. ಈ ನಡುವೆ ಮೆಕ್ಕಾದಲ್ಲಿ ಶಾಂತಿ ನೆಲೆಸಿತ್ತು. ಮದೀನದಲ್ಲಿ ಸಫಲಗೊಂಡಿದ್ದ ಮಹಮದನ ಮತಪ್ರಚಾರದ ಬಿಸಿ ಮೆಕ್ಕಾದ ಮಟ್ಟಿಗೆ ಮಾತ್ರ ತಣ್ಣಗಾಗಿತ್ತು. ಹೀಗಾಗಿ ವಯಕ್ತಿಕವಾಗಿ ಶಾಂತ ಜೀವನ ಸವೆಸಿದರೂ ಆ ಸಮಯದಲ್ಲಿ ಮಹಮದನ ಆರ್ಥಿಕ ಸ್ಥಿತಿ ಅಷ್ಟೇನೂ ಹಿತಕರವಾಗಿರಲಿಲ್ಲ. ಈ ಬಡತನದ ಹೊತ್ತಿನಲ್ಲಿಯೆ ಮೆಕ್ಕಾದಲ್ಲಿ ತನ್ನ ಮತ ಪ್ರಚಾರ ಮಾಡುತ್ತಿರುವಾಗಲೆ ಇಸ್ಲಾಂ ಜಗತ್ತಿನಲ್ಲಿ ಇಂದಿಗೂ ಪ್ರಚಲಿತದಲ್ಲಿರುವ ಮಹಮದನ ಪ್ರಸಿದ್ಧ ಜೆರೂಸಲಂ ಯಾತ್ರೆ ಜರುಗಿತು ಎಂಬ ನಂಬಿಕೆಯ ಜನನವೂ ಆಯಿತು ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅದು ಪ್ರಸಿದ್ಧ ಯಾತ್ರಾಸ್ಥಳವಾಗಿದ್ದ ಜೆರೂಸಲಮ್ಮಿಗೆ ಮಹಮದ್ ಆಕಾಶಯಾನ ಮಾಡಿದ್ದ ಕಪೋಲ ಕಲ್ಪಿತ ಸಂಗತಿಯಿದು. ಪುರಾತನ ಕಾಲದಿಂದಲೂ ಅತ್ಯಂತ ಪವಿತ್ರ ಯಾತ್ರಾಸ್ಥಳವಾಗಿ ಜೆರೂಸಲಂ ಮೆರೆದಿದೆ. ಮಹಮದ್ ಕೂಡ ಮಾನಸಿಕವಾಗಿ ಅಲ್ಲಿನ ಯಹೂದಿ ಹಾಗೂ ಕ್ರೈಸ್ತ ಗುಡಿ- ಗೋಪುರಗಳನ್ನು ಆರಾಧಿಸುತ್ತಿದ್ದ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ. ಮದೀನಕ್ಕೆ ವಲಸೆ ಬಂದ ನಂತರ ಪ್ರಾರ್ಥನೆ ಮಾಡುವಾಗ ಅದರ ವಿಧಿಗಳನ್ನು ಜೆರೂಸಲಮ್ಮಿನ ದಿಕ್ಕಿಗೆ ಮುಖಮಾಡಿ ಸಲ್ಲಿಸಬೇಕೆಂಬ ಕಟ್ಟಳೆಯನ್ನೂ ಆತ ಮಾಡಿದ್ದ. ಅದು ಆ ನಗರದ ಪಾವಿತ್ರ್ಯತೆಯ ಬಗ್ಗೆ ಅವನಿಗಿದ್ದ ಶ್ರದ್ಧೆಗೊಂದು ದ್ಯೋತಕವಾಗಿತ್ತು. ವಸ್ತುಸ್ಥಿತಿ ಹೀಗಿರುವಾಗಲೆ ಯಕ್ಷ ಗೇಬ್ರಿಯಲ್ ತನ್ನನ್ನು ರೆಕ್ಕೆಗಳಿಂದ ಕೂಡಿದ್ದ ಅಶ್ವಾರೂಢನನ್ನಾಗಿಸಿ ಅಲ್ಲಿಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ನೆರೆದಿದ್ದ ಪ್ರಾಚೀನ ಪ್ರವಾದಿಗಳಿಂದ ತನಗೆ ಸ್ವಾಗತ ಹಾರ್ದಿಕವಾಗಿ ಸಿಕ್ಕಿದ್ದು, ಅಲ್ಲಿಂದ ಅದೆ ಅಶ್ವದ ಮೇಲೆ ಕುಳಿತೆ ಒಂದೊಂದೆ ಮೆಟ್ಟಲೇರಿ ಅಂತಿಮವಾಗಿ ತಾನು ಏಳನೆ ಸ್ವರ್ಗದ ಮುಂಬಾಗಿಲು ದಾಟಿದಾಗ ತನಗಲ್ಲಿ ಸಾಕ್ಷಾತ್ ದೈವದರ್ಶನವಾಗಿದ್ದು, ದೇವರು ಅವನ ನೂತನ ಮತಾನುಯಾಯಿಗಳು ನಿತ್ಯ ಐದುಬಾರಿ ಪ್ರಾರ್ಥನೆ ಸಲ್ಲಿಸಲು ಕಟ್ಟಪ್ಪಣೆ ಮಾಡಿ ಅಂತರ್ಧನವಾಗಿದ್ದು ಇವೆಲ್ಲವನ್ನೂ ಪರಿಭಾವಿಸುತ್ತಿದ್ದಾಗ ಸೊಗಸಾದ ನಿದ್ದೆ ಒಡೆದು ಅದೂವರೆಗೂ ಕಾಣುತ್ತಿದ್ದ ಸುಂದರ ಕನಸಿನಿಂದ ಮಹಮದ್ ಹೊರಬಂದ ! ಎಚ್ಚರಗೊಂಡ ಬೆಳಗ್ಯೆ ಕೂಡಲೆ ಅಬು ತಾಲೀಬನ ಮನೆಗೆ ಆವೇಶಪೂರಿತನಾಗಿ ಧಾವಿಸಿ ಅಲ್ಲಿದ್ದ ಅವನ ಮಗಳಿಗೆ ಮಹಮದ್ ಈ ವಿಷಯವನ್ನು ಹೇಳಿದಾಗ ಅವಳು ಅದಕ್ಕೆ ಸೊಪ್ಪು ಹಾಕಲಿಲ್ಲ. ಆದರೆ ಅವಳ ವಿವೇಕದ ಮಾತುಗಳಿಗೆ ಇನಿತೂ ಕಿವಿಗೊಡದೆ ಮಹಮದ್ ತನಗೆ ಜೆರೂಸಲಂನಲ್ಲಿ ದೇವರದರ್ಶನವಾದ ಸಂಗತಿಯನ್ನು ಪ್ರಕಟಪಡಿಸಿದ ಎನ್ನುತ್ತಾನೆ ಇತಿಹಾಸಕಾರ ಕ್ಲೇರ್.ಅವನ ಈ ಕನಸಿನ ಸಾಕಾರ ಸ್ವರೂಪವನ್ನು ಖುರಾನಿನ ಸುರಾ 17/1 ರಲ್ಲಿ ಗಮನಿಸಬಹುದು. ಆದರೆ ಈ ಯಾತ್ರೆಯನ್ನು ಭಾವುಕವಾಗಿ ಸ್ವೀಕರಿಸಿ ನಿಜವೆಂದೆ ನಂಬಿದ ಮಹಮದನ ಹಿಂಬಾಲಕರು ಜೆರೂಸಲಮ್ಮಿನ ಓಮರ್ ಮಸೀದಿಯಲ್ಲಿ ಮಹಮದ್ ಸ್ವರ್ಗದಿಂದ ಕೆಳಗಿಳಿದ ಸ್ಥಳದಲ್ಲಿ ಆತನದೆಂದು ನಂಬಿಸಲಾಗುವ ಪಾದದ ಬಿಂಬಗಳನ್ನು ಇಂದಿಗೂ ಪವಿತ್ರವೆಂದು ಪೂಜಿಸಿ ಧನ್ಯತೆ ಅನುಭವಿಸುತ್ತಾರೆ!. ಮಹಮದ್ ಅಲ್ ತೈಫ್'ನಿಂದ ಮೆಕ್ಕಾನಗರಕ್ಕೆ ಮರಳಿದ ಮೇಲೆ ತನ್ನ ದೈವವಾಣಿಯ ಮೂಲಕ ಕ್ರಿಸ್ತಧರ್ಮದ ಬಗ್ಗೆ, ಮೇರಿ ಮಾತೆಯ ಬಗ್ಗೆ, ಕ್ರಿಸ್ತನ ಜನನದ ಬಗ್ಗೆ, ಆತನ ಜೀವನ ಹಾಗೂ ಸಾವಿನ ಕುರಿತು ಸ್ವಲ್ಪ ಮಟ್ಟಿಗೆ ತನ್ನ ಸುರಾ 19/5, 43/57-62, 4/171ಗಳಲ್ಲಿ ತನಗೆ ಲಭ್ಯವಾದ ಮಾಹಿತಿ ಹೊರಗೆಡವಿದ್ದಾನೆ ಎನ್ನುತ್ತಾರೆ ಇತಿಹಾಸಕಾರರಾದ ಇಶಾಕ್, ಕ್ಲೇರ್ ಹಾಗೂ ಮ್ಯೂರ್ ಒಕ್ಕೊರಲಿನಿಂದ. ಈ ಬಗ್ಗೆ ಅವರಲ್ಲಿ ಭಿನ್ನಭಿಪ್ರಾಯಗಳಿಲ್ಲ. ಯಹೂದಿ ಹಾಗೂ ಕ್ರಿಸ್ತ ಮತದ ಬಗ್ಗೆ ಅದಾಗಲೆ ಅರಿತಿದ್ದ ಮಂದಿ ಇದರಿಂದ ಮಹಮದನ ಭೋದನೆಯಲ್ಲಿ ಹೊಸತೇನನ್ನೂ ಕಾಣದೆ ಅವನ ಖುರಾನ್ ಈ ಹಿಂದೆ ಹೊರಬಂದ 'ಟೋರಾ' ಹಾಗೂ 'ಬೈಬಲ್'ನ ನಕಲಿಯಾಗಿದೆ ಹಾಗೂ ಕೇವಲ ಕಟ್ಟುಕಥೆಗಳ ಕಂತೆಯಾಗಿದೆ ಎಂದು ಆರೋಪಿಸಿದರು. ಆ ಎಲ್ಲಾ ಟೀಕೆಗಳಿಗೆ ಮಹಮದ್ ಸುರಾ 46.47ಗಳಲ್ಲಿ ಸಮಜಾಯಷಿ ನೀಡಲು ಯತ್ನಿಸಿದ್ದಾನೆ. ಮಹಮದ್ ಯಹೂದಿಗಳ ಪವಿತ್ರಗ್ರಂಥವಾದ 'ತಾಲ್'ಮಡ್'ನಲ್ಲಿ ಬರುವ ಹಲವಾರು ದಂತಕಥೆಗಳನ್ನು ಖುರಾನಿನಲ್ಲೂ ಮಕ್ಕಿ-ಕಾ-ಮಕ್ಕಿ ಕಾಪಿ ಹೊಡೆದು ಬಳಸಿಕೊಂಡಿರುವ ಉದಾಹಾರಣೆಗಳನ್ನು ಇತಿಹಾಸಕಾರ ಕ್ಲೇರ್ ಸಾಧಾರವಾಗಿ ನೀಡುತ್ತಾನೆ. ಮಹಮದ್ ಯಹೂದಿ ಹಾಗೂ ಕ್ರಿಸ್ತಮತಾವಲಂಭಿಗಳಿಗೆ ತಮ್ಮತಮ್ಮ ಧರ್ಮಗ್ರಂಥಗಳನ್ನೆ ಆಧರಿಸಿ ಅವುಗಳ ಸಂದೇಶಗಳನ್ನು ಪಾಲಿಸಬೇಕೆಂದು ಆರಂಭದಲ್ಲಿ ಕರೆಯಿತ್ತಿದ್ದ. ಸುರಾ 5/72 ಹಾಗೂ 5/47ರಲ್ಲಿ ಇದನ್ನು ಕಾಣಬಹುದು. ಈ ಉದಾರ ನೀತಿಯನ್ನ ಯಹೂದಿ ಹಾಗು ಕ್ರೈಸ್ತರಿಗೆ ನೀಡುತ್ತ ಸುರಾ 42/3-53,ಹಾಗೂ 42/115ರಲ್ಲಿ 'ನಿಮ್ಮ ದೇವ ನಮ್ಮ ಹಾಗೂ ನಿಮ್ಮ ಪ್ರಭುವೂ ಆಗಿರುತ್ತಾನೆ!' ಎನ್ನುವ ಮೂಲಕ ನೀಡಿದ್ದಾನೆ. ಆದರೆ ಕ್ರಮೇಣ ಇಸ್ಲಾಂ ಪ್ರಬಲಗೊಳ್ಳುತ್ತಿದ್ದಂತೆ ತನ್ನ ಈ ಉದಾರ ನೀತಿಯನ್ನು ಮಹಮದ್ ಮುಲಾಜಿಲ್ಲದೆ ಬದಲಿಸಿದ!. ಎಲ್ಲಿಯೂ ಕ್ರೈಸ್ತ ಅಥವಾ ಯಹೂದಿ ಧರ್ಮಗ್ರಂಥಗಳ ಹೆಸರನ್ನು ಉಲ್ಲೇಖಿಸದೆ ( ತಾನೇ ಭೋದಿಸಿದ ಖುರಾನಿನ ಹೊರತು ಅನಕ್ಷರಸ್ತನಾದ ಆತನಿಗೆ ಕೇಳಿ ಅರಿವಿದ್ದ ಇತರ ಧರ್ಮಗ್ರಂಥಗಳು ಅವೆರಡು ಮಾತ್ರ ಎನ್ನುವುದು ಇತಿಹಾಸಕಾರ ಅಲ್ ತಮೀಮಿಯ ಅಂಬೋಣ. ) ಖುರಾನ್ ಮೂಲಕ ದೇವರು ಈ ಹಿಂದೆ ಉಪದೇಶಿತವಾದ ಎಲ್ಲಾ ಧರ್ಮಗ್ರಂಥಗಳನ್ನು ರದ್ದುಪಡಿಸಿದ್ದಾನೆ! ಎಂದು ಸಾರಿದ. ಇಷ್ಟಕ್ಕೆ ನಿಲ್ಲಿಸದೆ ಖುರಾನ್ ಅಂತಿಮ ದೈವ ಸಂದೇಶವಾಗಿದ್ದು ತಾನು ಅಂತಿಮ ಪ್ರವಾದಿ ಎಂದೂ ಘೋಷಿಸಿಕೊಂಡ!!. ಇದಕ್ಕೆ ಪೂರಕವಾಗಿ ತನ್ನ ಅಂತಿಮ ಮೆಕ್ಕಾಯಾತ್ರೆಯ ಸಮಯದಲ್ಲಿ ಕಾಬಾದ ಬಳಿ ಯಹೂದಿ ಮತ್ತು ಕ್ರೈಸ್ತರು ಇನ್ನೆಂದೂ ಸುಳಿಯಬಾರದು ಎಂದು ಪ್ರತಿಬಂಧಿಸಿದ್ದನ್ನು ಅಲ್ ಮುಬಾರಕಿ ಎತ್ತಿ ತೋರಿಸುತ್ತಾನೆ. ( ಇನ್ನೂ ಇದೆ...)

02 October 2012

ವಲಿ.... ( ಭಾಗ- 7 )


ಅಬು ತಾಲಿಬನ ಮರಣಾನಂತರ ಅವನ ಸಹೋದರ ಅಬು ಲಹಾಬ್ ಮಹಮದನ ಬಗ್ಗೆ ಕರುಣೆ ತೋರಿದ. ಎಷ್ಟಾದರೂ ತನ್ನ ಅಣ್ಣನ ಮಗನಲ್ಲವೆ ಎಂಬ ಕರುಣೆಯಿಂದ ಆತನೆದೆ ಮೃದುಧೋರಣೆ ಹೊಂದಿದ ಅಬು ಲಹಾಬ್ ತನ್ನ ಮಕ್ಕಳಿಗೆ ಮಹಮದನ ಇನ್ನಿಬ್ಬರು ಹೆಣ್ಣುಮಕ್ಕಳನ್ನು ತಂದು ಕೊಂಡು ಮಹಮದನಿಗೆ ದೊಡ್ಡಪ್ಪನ ಜೊತೆಗೆ ಬೀಗನೂ ಆದ. ಆದರೆ ಈ ಬಾಂಧವ್ಯ ಹೆಚ್ಚು ಕಾಲ ಬಾಳಲಿಲ್ಲ. ಇತರ ಖುರೈಷಿಗಳ ಪ್ರಭಾವ ದಟ್ಟವಾಗಿದ್ದುದರಿಂದ ಅಬು ಲಹಾಬ್ ಆತನ ನೂತನ ಮತಭೋದನೆ ಹಾಗೂ ಅದರ ಬಗ್ಗೆ ಮಹಮದನ ಪ್ರಚಾರ ವೈಖರಿಯ ಬಗ್ಗೆ ಕಿಡಿಕಾರತೊಡಗಿದ. ಈ ಅಸಹನೆಯಿಂದಲೆ ಮಹಮದನನ್ನು ಮತಭ್ರಷ್ಟನೆಂದು ಹೀಯಾಳಿಸಿ ಅವನಿಗೆ ಕಿರುಕುಳ- ಉಪಟಳ ನೀಡಲೂ ಆರಂಭಿಸಿದ. ಅವನ ಈ ಹಿಂಸೆಗೆ ರೋಸಿ ಹೋದ ಮಹಮದ್ ತನ್ನ ಒಂದು ದೈವವಾಣಿಯಲ್ಲಿ ಅವನ ಮೇಲಿದ್ದ ದ್ವೇಷವನ್ನು ಹೊರಹಾಕಿದ. ಅದೇ ಸುರಾ 111/1-5ದಲ್ಲಿನ ದೈವವಾಣಿ ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಅದರಲ್ಲಿ ಹೀಗೆ ಹೇಳಲಾಗಿದೆ: 1) ಅಬು ಲಹಾಬನ ಕೈಗಳು ಮುರಿದು ಹೋದವು ಹಾಗೂ ಅವನು ನಾಶವಾಗಿ ಹೋದನು. 2) ಅವನು ಮಾಡುತ್ತಿದ್ದ ಸಂಪಾದನೆಯಾಗಲಿ, ಅವನು ಕೂಡಿಟ್ಟ ಸಂಪತ್ತಾಗಲಿ ಅವನ ಯಾವ ಕೆಲಸಕ್ಕೂ ಬರಲಿಲ್ಲ. 3) ಖಂಡಿತವಾಗಿಯೂ ಅವನು ನರಕದ ಸುಡುವ ಬೆಂಕಿಯಲ್ಲಿ ಹಾಕಲ್ಪಡುವನು. 4) ಕುಪ್ರಚಾರಕಳಾದ ಅವನ ಪತ್ನಿಗೂ ಅದೆ ಭೀಕರ ನರಕ ಕಾದಿದೆ. 5) ಅವರಿಬ್ಬರ ಕತ್ತಿನಲ್ಲಿಯೂ ಆಗ ದರ್ಭೆಯ ಹಾರವಿರುವುದು. ಕ್ರಮೇಣ ಮಹಮದನಿಗೂ ಅವನ ಅನುಯಾಯಿಗಳಿಗೂ ಖುರೈಷಿಗಳ ಉಪಟಳ ಹೆಚ್ಚಾಗಿ ಅವರು ಅವಮಾನಪೂರಿತವಾಗಿ ಜೀವನ ಸಾಗಿಸಬೇಕಾಗಿತ್ತು. ಇತ್ತ ಅಬು ತಾಲೀಬನ ಮರಣದ ನಂತರ ಸೂಕ್ತ ಭದ್ರತೆಯೂ ಇಲ್ಲದೆ ದೈಹಿಕ ರಕ್ಷಣೆ ಒಂದು ಸವಾಲಾಗಿ ಪರಿಣಮಿಸಿತ್ತು ಅವನಿಗೆ. ಅಪ್ಪಿತಪ್ಪಿ ಮನೆಯಿಂದ ಹೊರಗೆ ಅಡಿಯಿಟ್ಟರೆ ಅವನ ಮತದತ್ತ ಹನಿಯಷ್ಟೂ ಆಸಕ್ತಿ ಪ್ರಕಟಿಸದ ಮೆಕ್ಕಾದ ಮಂದಿಯಿಂದ ಅವನ ಮೇಲೆ ಕಲ್ಲು ಮಣ್ಣುಗಳು ಎಲ್ಲೆಂದರಲ್ಲಿ ಸುರಿಮಳೆಯಾಗುತ್ತಿತ್ತು. ಅಲ್ಲದೆ ಅವನ ಮತಪ್ರಚಾರವೂ ಕುಂಠಿತವಾಗಿತ್ತು. ಹೀಗಾಗಿ ತನ್ನ ಜೀವಮಾನದ ಪರಮ ಗುರಿಯಾದ ಇಸ್ಲಾಂ ಪ್ರಚಾರಕ್ಕಾಗಿ ಸೂಕ್ತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಆತ ನಿರ್ಧರಿಸಿದ. ಅದೆ ಕಾರಣಕ್ಕೆ ಮೆಕ್ಕಾದಿಂದ ಅರವತ್ತು ಮೈಲಿ ದೂರದ ಅಲ್ ತೈಫ್ ಎಂಬ ಪಟ್ಟಣಕ್ಕೆ ಸೇವಕ ಜೈದ್'ನೊಂದಿಗೆ ಪ್ರಯಾಣಿಸಿದ. ಅಲ್ಲಿನ ಒಂದು ಕುಟುಂಬದೊಂದಿಗೆ ತನ್ನ ಉದ್ದೇಶ ತಿಳಿಸಿ ಅದಕ್ಕಾಗಿ ಅವರ ಬೆಂಬಲ ಅಪೇಕ್ಷಿಸಿದ. ಆದರೆ ಆತ ನಿರೀಕ್ಷಿಸಿದಷ್ಟು ಬೆಂಬಲ ವ್ಯಕ್ತವಾಗಲಿಲ್ಲ. ತನ್ನ ಹಾಗೂ ತನ್ನ ಮತಬಾಂಧವರ ರಕ್ಷಣೆಗೆ ಆತನಿಟ್ಟ ಮೊರೆಯನ್ನು ಅಲ್ಲಿನವರು ಪುರಸ್ಕರಿಸಲಿಲ್ಲ. ಅವನ ಹುಟ್ಟಿನ ಕುಲವಾದ ಖುರೈಶಿಗಗಳಿಂದಲೇ ದೊರೆಯದ ಬೆಂಬಲ ಇನ್ನುಳಿದವರರಿಂದ ಹೇಗೆ ನಿರೀಕ್ಷಿಸುತ್ತಿ ಎಂದು ಮೊದಲಿಸಿಕೊಂಡು 'ಅಂಗೈ ತೋರಿಸಿ ಅವಲಕ್ಷಣ' ಎನ್ನಿಸಿಕೊಂಡವನಂತೆ ಪೆಚ್ಚಾಗಿ ಆತ ಅಲ್ಲಿಂದ ಕಾಲ್ತೆಗೆಯಬೇಕಾಯಿತು. ಅಲ್ಲಿನ ಮಂದಿ ಮಹಮದ್ ಹಾಗೂ ಜೈದ್'ನನ್ನು ಅಲ್ಲಿಂದ ಹೊಡೆತ, ಬೈಗುಳ ಹಾಗೂ ಭರ್ತ್ಸನೆಗಳೊಂದಿಗೆ ಹೊರದಬ್ಬಿದರು ಎನ್ನುತ್ತಾನೆ ಇತಿಹಾಸಕಾರ ಡೋಜಿ. ಹೀಗೆ ಅವಮಾನಿತನಾದ ಮಹಮದ್ ಮರಳಿ ಮೆಕ್ಕಾಗೆ ವಾಪಸ್ಸಾಗುವಾಗ ಅತಿಯಾದ ಹಸಿವು ಹಾಗೂ ದೈಹಿಕ ಬಳಲಿಕೆಗೆ ತುತ್ತಾಗಿ ನಖ್ಲಾ ಎಂಬಲ್ಲಿ ಬೀಡು ಬಿಟ್ಟನು. ಅವರ ಹೀನಸ್ಥಿತಿ ಕಂಡು ಮರುಕಗೊಂಡ ಅಲ್ಲಿನ ತೋಟದ ಯಜಮಾನ ಕರುಣಾಪೂರಿತನಾಗಿ ಆಹಾರ ನೀಡಿ ಅವರಿಬ್ಬರನ್ನೂ ಆದರಿಸಿದ. ಅವರು ತಂಗಿದ್ದ ತೋಟ ವಾಸ್ತವವಾಗಿ ಇಬ್ಬರು ಖುರೈಷಿಗಳಿಗೆ ಸೇರಿತ್ತು. ಹೃದಯ ವೈಶಾಲ್ಯದ ಅವರುಗಳು ಅವನ ಸ್ಥಿತಿಗೆ ಮರುಗಿ ತಮ್ಮ ಕ್ರೈಸ್ತ ಸೇವಕನ ಕೈಯಲ್ಲಿ ದ್ರಾಕ್ಷಿಹಣ್ಣಿನ ಬುಟ್ಟಿಯೊಂದನ್ನು ಅವನಿಗಾಗಿ ಕಳುಹಿಸಿಕೊಟ್ಟರು. ಅದ್ವಾಸ್ ಎಂಬ ಆ ಸೇವಕನೊಂದಿಗೆ ಮಾತನಾಡುವಾಗ ಆತ ನಿನೆವಾ ಪಟ್ಟಣದವನು ಎಂಬುದು ಮಹಮದನ ಅರಿವಿಗೆ ಬಂತು. ಅಬ್ಬಾಸನೆದುರು ಬೈಬಲ್ಲಿನಲ್ಲಿ ಉಲ್ಲೇಖವಾಗಿರುವ ಪ್ರವಾದಿ ಮೋಸೆಸನ ಬಗ್ಗೆ ಪ್ರಸ್ತಾಪಿಸಿದ ಮಹಮದ್ ಅದ್ವಾಸನ ಅಚ್ಚರಿಗೆ ಕಾರಣವಾದ. ತನ್ನಂತೆ ಮೋಸೆಸ್ ಕೂಡ ಪ್ರವಾದಿ ಎಂದು ಮಹಮದ್ ಆತನಿಗೆ ಸಾರಿದ. ಮಹಮದನ ವಿನಯ ಹಾಗೂ ಧರ್ಮಶ್ರದ್ಧೆಗೆ ಮಾರುಹೋದ ಅಬ್ಬಾಸ್ ಮಹಮದನಿಗೆ ಒದಗಿ ಬಂದ ಸಂಕಟ ಹಾಗೂ ಪರಿತಾಪಗಳಿಗೆ ದೇವರಲ್ಲಿ ಪರಿಪರಿಯಾಗಿ ಪ್ರಾರ್ಥನೆ ಸಲ್ಲಿಸಿದ. ಮಹಮದನೂ ದೇವರಿಗೆ ತನ್ನ ಹೀನಸ್ಥಿತಿಯನ್ನು ಮನವರಿಕೆ ಮಾಡುವ ಪ್ರಾರ್ಥನೆಗಳನ್ನು ಸಲ್ಲಿಸಿ ದೇವರು ತನ್ನ ಮೊರೆಯನ್ನಾಲಿಸುವನು ಎಂಬ ನಂಬಿಕೆ ಹೊತ್ತು ಮೆಕ್ಕಾದೆಡೆಗೆ ಪ್ರಯಾಣ ಬೆಳೆಸಿದ. ದಾರಿಯಲ್ಲಿ ಸಿಗುವ ನೆಖ್ಲಾದ ಕಣಿವೆಯ ಬಳಿಯೆ ಇದ್ದ ಗುಡಿಯೊಂದರಲ್ಲಿ ತಂಗಿ, ಮರಳಿ ಮೆಕ್ಕಾ ಪ್ರವೇಶಿಸಿದರೆ ತನಗ್ಯಾವ ಸತ್ಕಾರ ಕಾದಿದೆಯೋ ಎಂದು ಹೆದರಿ ಆ ರಾತ್ರಿ ಅಲ್ಲಿಯೆ ವಿರಮಿಸಿದ. ರಾತ್ರಿ ಮಲಗುವ ಮುನ್ನ ದೇವರಿಗೆ ಪ್ರಾರ್ಥನೆ ಸಲ್ಲಿಸುವಾಗ ಅವನ ಖುರಾನಿನ ಸೂತ್ರ ಪಠಣವನ್ನು ಆಲಿಸಿದ 'ಜಿನ್ನು'ಗಳು (ಭೂತಗಳು) ಉತ್ತೇಜಿತರಾಗಿ ತಮ್ಮ ಬಳಗದವರನ್ನು ಕೂಡಿಕೊಂಡು ಮಹಮದನ ಪ್ರಾರ್ಥನೆಯನ್ನು ಆಲೈಸಿದವು. ಅವೆಲ್ಲ ಇದರಿಂದ ಪ್ರಭಾವಿತರಾಗಿ ಮಹಮದನ ಹಿಂಬಾಲಕರಾಗಿ ಖುರಾನಿನ ಆದೇಶ ಪಾಲಿಸಿದರೆ ಮುಕ್ತಿ ಖಚಿತ ಎಂದು ನಂಬಿ ಅಲ್ಲಿನ ಅವೆಲ್ಲ ನಿರ್ಗಮಿಸಿದವು. ಇದೆ ವಿವರಣೆ ಖುರಾನಿನ ಸುರಾ 66/28-30 ಹಾಗೂ 12/1 ಗಳಲ್ಲಿ ಪ್ರಸ್ತಾಪಿತವಾಗಿದೆ ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಮರಳಿದ ನಂತರ ಖುರೈಷಿ ದ್ವೇಷಿಗಳಿಂದ ಮೆಕ್ಕಾದಲ್ಲಿ ಕಾದಿರಬಹುದಾದ ವಿಪತ್ತಿಗೆ ಹೆದರಿದ ಮಹಮದ್ ಖುರೈಷಿಗಳಲ್ಲೆ ದಯಾರ್ದವಾಗಿದ್ದ ಅಲ್ ಮಾತಮ್ ಎಂಬ ಮುಖಂಡನೊಬ್ಬನನ್ನು ಸಂಪರ್ಕಿಸಿ ಮರಳಿ ಊರನ್ನ ಹೊಕ್ಕಲು ಅವನ ಸಹಾಯವನ್ನು ಬೇಡಿದ. ಆಸರೆಯ ಭರವಸೆ ಅವನಿಂದ ದೊರಕಿದ ನಂತರ ಮೆಕ್ಕಾದ ಮನೆಗೆ ಹಿಂದಿರುಗಿದ ಮಹಮದನ ಪರಿಸ್ಥಿತಿ ದಿನದಿಂದ ದಿನಕ್ಕೆ ಕೆಡುತ್ತಲೆ ಹೋಯಿತು. ವಿಪರೀತವಾಗಿದ್ದ ಆರ್ಥಿಕ ಹಿನ್ನೆಡೆ ಅನೇಕ ಕಷ್ಟ ಕಾರ್ಪಣ್ಯಗಳಿಗೆ ಮೂಲವಾಯಿತು. ಆದರೆ ಇಂತಹ ಪರಿಸ್ಥಿಯನ್ನು ಎದುರಿಗಿಟ್ಟುಕೊಂಡೆ ಆತ ಸೌದಾ ಎಂಬ ವಿಧವೆಯೊಬ್ಬಳನ್ನು ಮರುವಿವಾಹವಾದ. ಮೂರು ತಿಂಗಳ ಹಿಂದಷ್ಟೆ ಪತ್ನಿ ಖತೀಜಳನ್ನು ಕಳೆದುಕೊಂಡು ವಿಧುರನಾಗಿದ್ದ ಮಹಮದ್ ಈಗ ಹೊಸ ಮದುವೆಯ ಜೊತೆಜೊತೆಗೆ ಗೆಳೆಯ ಅಬು ಬಕರನ ಆರು ವರ್ಷದ ಎಳೆ ಮಗಳು ಆಯೆಶಾಳೊಂದಿಗೆ ತನ್ನ ವಿವಾಹ ನಿಸ್ಚಿತಾರ್ಥವನ್ನೂ ನೆರವೇರಿಸಿಕೊಂಡ!. ಇದಕ್ಕೆ ಇತಿಹಾಸಕಾರರಾದ ಮ್ಯೂರ್ ಹಾಗೂ ಅಲ್ ಮುಬಾರಕಿ ಮುಂತಾದವರು ಮಹಮದನಿಗೆ ಅದಾಗಲೆ ಐವತ್ತುವರ್ಷ ವಯಸ್ಸಾಗಿದ್ದರೂ ಮುಂದಿನ ದಿನಗಳಲ್ಲಿ ತನ್ನ ಮತಪ್ರಚಾರಕ್ಕೆ ಅಬು ಬಕರನ ಪ್ರಬಲ ಬೆಂಬಲ ಅಪೇಕ್ಷಿಸಿ, ಅದಕ್ಕೆ ಪೂರ್ವಭಾವಿಯಾಗಿ ತಮ್ಮಿಬ್ಬರ ನಡುವಿನ ಸ್ನೇಹಕ್ಕೆ ಸಂಬಂಧದ ನಿಕಟತೆಯ ಲೇಪ ಹಚ್ಚಲು ಈ ನಿರ್ಧಾರಕ್ಕೆ ಬಂದಿದ್ದಾನೆ ಎಂದು ಹೇಳುತ್ತಾರೆ. ಕ್ರಿಸ್ತಶಕ 620ರಲ್ಲಿ ಮೆಕ್ಕಾದ ಪವಿತ್ರ ದಿನಗಳ ಜಾತ್ರೆ ಪ್ರಾರಂಭವಾದಾಗ ಅಲ್ಲಿಗೆ ಯಾತ್ರಾರ್ಥಿಗಳಾಗಿ ಬಂದಿದ್ದ ಅನೇಕ ಮದಿನಾ ವಾಸಿಗಳನ್ನು ಮಹಮದ್ ಅನಾಯಾಸವಾಗಿ ಸಂಪರ್ಕಿಸಿದ. ಮದೀನ ವಾಸಿಗಳು ಮಹಮದನ ನೂತನ ಧರ್ಮದ ಬಗ್ಗೆ ಕೇಳಿ ಅದಾಗಲೆ ಅರಿತಿದ್ದರು. ಅವನನ್ನೆ ಈಗ ನೇರವಾಗಿ ಭೇಟಿಯಾಗಿ ಅವನ ಸಂದೇಶಗಳನ್ನು ಕೇಳಿ ಸಂತುಷ್ಟರಾದರೂ ಒಮ್ಮೆಲೆ ಅವರಲ್ಲಿ ಯಾರೂ ಮತಾಂತರವಾಗಲಿಲ್ಲ. ಅಲ್ಲದೆ ಅಷ್ಟು ಸುಲಭವಾಗಿ ಅವರ ಬೆಂಬಲವೂ ಅವನಿಗೇನೂ ಸಿಗಲಿಲ್ಲ. ಆದರೆ ಆತನ ಹಾಗೂ ಆತನ ನೂತನ ಮತದ ಬಗ್ಗೆ ಸದ್ಭಾವನೆ ಬೆಳಿಸಿಕೊಂಡ ಅವರು ಮರಳಿ ಮದೀನಾ ಸೇರಿದಾಗ ಅದು ಅಲ್ಲಿ ಬಾಯಿಪ್ರಚಾರವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಮುಟ್ಟಿತು. ಅತ್ತ ಇಸ್ರೇಲಿನ ಯಹೂದಿಗಳು ರೋಮನ್ ಚಕ್ರಾಧಿಪತ್ಯದ ಅಧೀನಕ್ಕೆ ಒಳಪಟ್ಟು ಧರ್ಮ ದ್ವೇಷದ ಹಿನ್ನೆಲೆಯಲ್ಲಿ ಅವರಿಂದ ನಿರಂತರ ಹಿಂಸಾಚಾರಕ್ಕೆ ಒಳಗಾಗಿ ಪಡಬಾರದ ಪಾಡುಪಟ್ಟು ಅಲ್ಲಿಂದ ಅನಿವಾರ್ಯವಾಗಿ ದೇಶಭ್ರಷ್ಟರಾಗಿ ಪ್ರಪಂಚದಾದ್ಯಂತ ಹರಡಿಹೋದ ಐತಿಹಾಸಿಕತೆಗೆ ಈಗ ಹೊಸತಿರುವು ಸಿಗಲಾರಂಭಿಸಿತು. ಹೀಗೆ ನೆಲೆ ಕಳೆದುಕೊಂಡ ಯಹೂದಿಗಳ ಗುಂಪುಗಳು ಅರೇಬಿಯವನ್ನೂ ಪ್ರವೇಶಿಸಿ ಮದೀನ ಸುತ್ತಮುತ್ತಲು ನೆಲೆಯೂರಿ ಕೋಟೆ- ಕೊತ್ತಲು ಕಟ್ಟಿಕೊಂಡು ಜೀವನವನ್ನಾರಂಭಿಸಿದರು. ಹೀಗೆ ವಲಸೆ ಬಂದಿದ್ದ ಪ್ರಮುಖ ಯಹೂದಿ ಬುಡಕಟ್ಟುಗಳೆಂದರೆ ಅಲ್ ನದೆಶ್, ಬೆನ್ ಕುರೈಜಾ ಹಾಗೂ ಬೆನ್ ಕೆನುಕಾ. ಇವರ ವಲಸೆಯೆಲ್ಲ ಕ್ರಿಸ್ತಶಕಾರಂಭ 70ರಲ್ಲಿಯೆ ಆರಂಭವಾಗಿತ್ತು ಎನ್ನುವುದು ಇತಿಹಾಸಗಾರ ಮಾರ್ಗೊಲಿಯತ್ತನ ಅಭಿಪ್ರಾಯ. (ಇನ್ನೂ ಇದೆ....)

01 October 2012

ವಲಿ.... (ಭಾಗ-6)


ಈ ರೀತಿ ಮತ ಪರಿವರ್ತಿತವಾದವರು ಮೆಕ್ಕಾ ಬಿಟ್ಟು ಮರಳಿ ಮತ್ತೆ ಅಬಿಸೀನಿಯಕ್ಕೆ ವಲಸೆಹೋದರು. ಹೀಗಾದರೂ ಸಹ ಮಹಮದನಿಗೆ ಖುರೈಷಿಗಳ ಕಾಟ ತಪ್ಪಲಿಲ್ಲ. ದೊಡ್ಡಪ್ಪ ಅಬು ತಾಲೀಬನ ಸುರಕ್ಷೆ ಇದ್ದ ಕಾರಣದಿಂದ ಅದು ಹೇಗೊ ಅವನ ರಕ್ಷಣೆ ಚ್ಯುತಿಯಿಲ್ಲದಂತೆ ಸಾಗುತ್ತಿತ್ತು. ಇತ್ತ ಅವನ ಈ ರಕ್ಷಣಾ ಅಭಯದ ವಿರುದ್ಧವಾಗಿ ಅಬು ತಾಲೀಬನಿಗೆ ಖುರೈಷಿಗಳು ತಾಳಲಾರದಷ್ಟು ಒತ್ತಡಗಳನ್ನು ತರಲಾರಂಭಿಸಿದರು. ವಯೋವೃದ್ಧನಾಗಿದ್ದ ಅಬು ತಾಲಿಬ್ ನಿಜಕ್ಕೂ ಈಗ ಸಮಾಜದ ಬಾಂಧವರನ್ನು ಎದುರು ಹಾಕಿಕೊಳ್ಳಲಾಗದೆ ಹಾಗೂ ತಮ್ಮನ ಮಗನ ಮೇಲಿನ ಮಮತೆ ಬಿಡಲಾಗದೆ ಅಡ ಕತ್ತರಿಯಲ್ಲಿ ಸಿಕ್ಕು ಹಾಕಿಕೊಂಡಿದ್ದ. ತನ್ನ ಆಶ್ರಯದಲ್ಲಿದ್ದ ಮಹಮದನ ಕಾರಣಕ್ಕೆ ಅವನು ತನ್ನ ಸಮಾಜವನ್ನೆ ಎದುರು ಹಾಕಿಕೊಳ್ಳುವ ಪರಿಸ್ಥಿತಿ ಉದ್ಭವಿಸಿತ್ತು. ಖುರೈಷಿಗಳು ಮಹಮದನನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಅವನ ಮೇಲೆ ಅಪಾರ ಒತ್ತಡ ತಂದಾಗ ಅದನ್ನು ತಾಳಲಾರದೆ ಮಹಮದನಿಗೆ ತಾನಿನ್ನು ಅವನ ರಕ್ಷಣೆಯ ಹೊಣೆ ಹೊರಲಾರೆನೆಂದು ಹೇಳಿ, ಅವನೆ ಸ್ವ-ರಕ್ಷಣೆಗೆ ಕಾಳಜಿ ವಹಿಸಿಕೊಳ್ಳುವುದು ಸೂಕ್ತ ಎಂಬ ಸೂಚನೆ ನೀಡಿದನು. ಅದನ್ನು ಕೇಳಿದ್ದೆ ತಡ ಬೆದರಿದ ಮಹಮದ್ ಅಪ್ರತಿಭನಾಗಿ ಕಣ್ಣೀರುಗೆರೆದನು. ಈ ಕಂಬನಿಯನ್ನು ಕಂಡು ಕರುಣಾಮಯಿಯಾದ ಅಬು ತಾಲೀಬನ ಅಂತಕರಣ ತುಂಬಿಬಂದು ಮರಳಿ ಅವನ ರಕ್ಷಣೆಯ ಹೊಣೆ ಹೊರಲು ಆತ ಕಟಿಬದ್ಧನಾದ. ಈ ಸಂಭಾಷಣೆ ಜರುಗಿದ ಸಂಜೆ ಅವನ ಮೊದಲ ಮಾತುಗಳನ್ನು ಕೇಳಿ ನೊಂದಿದ್ದ ಮಹಮದ್ ವ್ಯಾಕುಲಗೊಂಡು ಮನೆಯಿಂದ ಹೊರಹೋಗಿದ್ದವನು ಲುಪ್ತ ಸಮಯಕ್ಕೆ ಮರಳಿ ಬಾರದಿರುವುದನ್ನು ಕಂಡು ಖುರೈಶಿಗಳಿಂದ ಆತನ ಪ್ರಾಣಕ್ಕೆ ಕುತ್ತು ಒದಗಿ ಬಂದಿರಬಹುದು ಎಂದು ಅಬು ತಾಲಿಬ್ ಗಾಬರಿಗೊಂಡ. ಅದೆ ಸಂಶಯದಲ್ಲಿ ಆಯುಧಪಾಣಿಯಾಗಿ ತನ್ನವರೊಂದಿಗೆ ಮಹಮದನನ್ನು ಹುಡುಕುತ್ತಾ ಹೊರಟಾಗ ಬೀದಿಯ ಕೊನೆಯಲ್ಲಿ ಅವನಿಗೆ ಮಹಮದ್ ಎದುರಾದ. ಕೂಡಲೆ ಅಲ್ಲಿಂದಲೆ ಅವನನ್ನು ಕರೆದುಕೊಂಡು ಕಾಬಾದತ್ತ ಸಾಗಿದ ಅಬು ತಾಲಿಬ್ ಅಲ್ಲಿ ನೆರೆದಿದ್ದ ಖುರೈಷಿಗಳನ್ನು ಉದ್ದೇಶಿಸಿ "ನೋಡಿ ಇಂದು ನಿಮ್ಮೆಲ್ಲರಿಂದ ಮಹಮದನಿಗೆ ಹಾನಿಯಾಗಿದ್ದಿರಬಹುದೆಂದು ಊಹಿಸಿದ್ದೆ. ಹಾಗೇನಾದರೂ ಆಗಿದ್ದೆ ಹೌದಾಗಿದ್ದಿದ್ದಲ್ಲಿ ನಿಮ್ಮಲ್ಲಿ ಒಬ್ಬರೂ ಇಲ್ಲಿ ಉಸಿರಿನೊಂದಿಗೆ ಉಳಿಯುತ್ತಿರಲಿಲ್ಲ ಅನ್ನೋದನ್ನ ನೆನಪಿನಲ್ಲಿಡಿ! ಇದು ಇಂದಿಗಷ್ಟೆ ಅಲ್ಲ ಎಂದೆಂದಿಗೂ ಸತ್ಯ !!" ಎಂದು ಆವೇಶದಿಂದ ನುಡಿದ. ಅವನ ಈ ಎಚ್ಚರಿಕೆಯ ನುಡಿಗೆ ಬೆರಗಾದ ಖುರೈಷಿಗಳು ತಮ್ಮ ಸಿಟ್ಟು-ಸೆಡವು, ಸೊಕ್ಕನ್ನೆಲ್ಲ ಆ ಕ್ಷಣ ಬಲು ಕಷ್ಟದಿಂದ ತಡೆ ಹಿಡಿದುಕೊಂಡರು. ಇತಿಹಾಸದ ಪುಟಗಳಲ್ಲಿ ಅವನ ಮತವನ್ನೊಪ್ಪದವರಿಂದ ಮಹಮದನ ಮೇಲೆ ನಿಂದನೆ, ಭರ್ತ್ಸನೆ ಮುಂತಾದವುಗಳೊಂದಿಗೆ ದೈಹಿಕ ಹಲ್ಲೆ ನಡೆದ ಬಗ್ಗೆ ನಮೂದಾಗಿದ್ದರೂ ಅದು ಹಿಂಸೆಯ ಪರಿಧಿ ದಾಟಿದ ಬಗ್ಗೆ ಸೂಚನೆ ಎಲ್ಲೂ ಸಿಗುವುದಿಲ್ಲ. ಹೆಚ್ಚೆಂದರೆ ಹೊಲಸು ಪದಾರ್ಥಗಳನ್ನು ಅವನ ಮೇಲೆ ಎಸೆಯುವುದರ ಮೂಲಕ ಅವರ ಅಸಹಿಷ್ಣುತೆ ಪ್ರಕಟವಾಗುತ್ತಿತ್ತು ಅಷ್ಟೆ. ಕ್ರಿಸ್ತಶಕ 615ರಲ್ಲಿ ಮಹಮದ್ ತನ್ನ ಮತ ಭೋದನೆಯನ್ನು ಆರಂಭಿಸಿದಾಗ ಮೊದಲು ಎದ್ಸುರಾಗಿದ್ದ ಅಡ್ಡಿ ಆತಂಕಗಳೆಲ್ಲ ಕ್ರಮೇಣ ಇನ್ನಿಲ್ಲವಾಗಲು ಅವನ ಮತಕ್ಕೆ ಮಾರುಹೋದ ಇಬ್ಬರು ಪ್ರಮುಖವಾಗಿ ಕಾರಣವಾದರು. ಅವರೆ ಹಮ್ಜಾ ಮತ್ತು ಓಮರ್. ಈ ಹಮ್ಜಾ ಮಹಮದನ ಅಜ್ಜ ಅಬ್ದುಲ್ ಮುತಾಲಿಬ್ ತನ್ನ ಎಪ್ಪತ್ತನೆ ವಯಸ್ಸಿನಲ್ಲಿ ವಿವಾಹವಾಗಿ ಪಡೆದ ಮಗನಾಗಿದ್ದ. ಏಕಕಾಲದಲ್ಲಿ ಆತ ಮಹಮದನಿಗೆ ಮಲ ಸಹೋದರ (ತಾಯಿಯ ತಂಗಿಯ ಮಗ) ಹಾಗೂ ಚಿಕ್ಕಪ್ಪ (ತಂದೆಯ ದೊಡ್ಡಪ್ಪನ ಮಗ) ಏಕಕಾಲದಲ್ಲಿ ಎರಡೂ ಆಗುತ್ತಿದ್ದ! ಒಮ್ಮೆ ಅಸ್ ಸದಾಫ್ ಎಂಬ ಎತ್ತರದ ಸ್ಥಳದಲ್ಲಿ ಮಹಮದ್ ಕುಳಿತಿದ್ದಾಗ ಅಬು ಜಲಾಲ್ ಎಂಬ ಖುರೈಶಿಯೊಬ್ಬ ಅವನನ್ನು ಕಟುಮಾತುಗಳಿಂದ ನಿಂದಿಸಲಾರಂಭಿಸಿದ, ಮಹಮದ್ ಮಾತ್ರ ಅದನ್ನು ಕೇಳಿದರೂ ಕೇಳಿಸಿಕೊಳ್ಳದಂತೆ ಕಿವುಡನಂತೆ ನಿರ್ಲಕ್ಷಿಸಿ ಕೂತಿದ್ದ. ಆದರೆ ಅದನ್ನು ಗಮನಿಸಿದ ಒಬ್ಬ ಗುಲಾಮ ಸ್ತ್ರೀ ಮನೆಗೆ ಮರಳುವಾಗ ದಾರಿಯಾಲ್ಲಿ ಸಿಕ್ಕ ಹಮ್ಜಾನಿಗೆ ಈ ಘಟನೆಯನ್ನ ಹೇಳಿ ಪರಿತಾಪ ಪಟ್ಟಳು. ಮೂಲತಃ ಹಮ್ಜಾ ಒಳ್ಳೆಯ ಬಿಲ್ಲುಗಾರನಾಗಿದ್ದ. ಅಲ್ಲದೆ ಆಗಷ್ಟೆ ಆತ ಬೇಟೆಗೆ ಹೋಗಿದ್ದವ ಅಲ್ಲಿಂದ ಮನೆಗೆ ಮರಳಿಹೋಗುತ್ತಿದ್ದ. ಈ ಸಂಗತಿ ಕೇಳಿ ಕ್ಷುದ್ರನಾದ ಆತ ಕೂಡಲೆ ಇದ್ದ ಸ್ಥಿತಿಯಲ್ಲೆ ಕಾಬಾ ಬಳಿ ತೆರಳಿ ಅಲ್ಲಿ ಇತರ ಖುರೈಷಿಗಳೊಂದಿಗೆ ಹರಟೆ ನಿರತನಾಗಿದ್ದ ಅಬು ಜಹಾಲ್'ನನ್ನು ಕಂಡವನೆ ವರಸೆಯಲ್ಲಿ ತನ್ನ ಮಗನೂ ಮಲ ಸಹೋದರನು ಆದ ಮಹಮದನಿಗೆ ಆತ ಮಾಡಿದ ಅಪಮಾನವನ್ನು ನೆನೆಸಿಕೊಂಡು ಕೆಂಡಾಮಂಡಲನಾಗಿ ಅಲ್ಲಿಯೆ ಬಿಲ್ಲಿಗೆ ಹದೆಯೇರಿಸಿ ಬಾಣ ಹೂಡಿ ಆತನನ್ನು ಗಾಯಗೊಳಿಸಿ "ನೋಡು ನಾನೀಗ ಮಹಮದನ ಧರ್ಮವನ್ನು ಪಾಲಿಸುತ್ತೇನೆ! ನಿನಗೆ ಸಾಧ್ಯವಿದ್ದರೆ ತಡೆದು ನೋಡು ನೋಡೋಣ!" ಎಂದು ಬಹಿರಂಗ ಪಂಥಾಹ್ವಾನ ನೀಡಿ ಸೆಡ್ಡುಹೊಡೆದು ನಿಂತ. ಹೀಗೆ ಆವೇಶದಲ್ಲಿ ಆತ ಅವನಿಗೆ ಗೊತ್ತಿಲ್ಲದೆ ಮಾನಸಿಕವಾಗಿ ಆತ ಮತಾಂತರಿತವಾಗಿದ್ದ ! ಇದು ಹಮ್ಜಾನ ಕಥೆಯಾದರೆ ಇನ್ನೊಬ್ಬ ಓಮರನ ಕಥೆ ತುಸು ವಿಭಿನ್ನವಾಗಿತ್ತು. ಒಮರ್ ಒಬ್ಬ ಸದೃಢ ಖುರೈಷಿ ಯುವಕನಾಗಿದ್ದ. ಶೀಘ್ರಕೋಪಿ, ಮುಂಗೋಪಿ ಎರಡೂ ಆಗಿದ್ದ ಅವನದ್ದು ವಿಪರೀತ ದುಡುಕಿನ ಸ್ವಭಾವವಾಗಿತ್ತು. ಆವೇಗ ಪರನಾಗಿದ್ದ ಆತ ಇತರ ಖುರೈಶಿಗಳಂತೆ ಮೊದಲಿಗೆ ಮಹಮದನ ಕಟ್ಟಾ ವಿರೋಧಿಯಾಗಿದ್ದು ಅವನನ್ನು ಕಂಡಲ್ಲಿ ನಿಂದಿಸುತ್ತಾ, ಅವನ ಅನುಯಾಯಿಗಳನ್ನು ಸಾಧ್ಯವಾದಷ್ಟು ಹಿಂಸಿಸುತ್ತಿದ್ದ. ಅಂತವನ ಸ್ವಂತ ಸಹೋದರಿ ಫಾತಿಮಾ ಹಾಗು ಆಕೆಯ ಪತಿ ಇಸ್ಲಾಮಿಗೆ ಗೌಪ್ಯವಾಗಿ ಮತಾಂತರಿತವಾಗಿದ್ದರು. ಈ ವಿಷಯ ಇನ್ನೂ ಓಮರನ ಕಿವಿಯನ್ನು ಇನ್ನೂ ಮುಟ್ಟಿರಲಿಲ್ಲ. ಹೀಗೆ ಒಮ್ಮೆ ನವ ಮತಾಂತರಿತವಾದವನೊಬ್ಬನನ್ನು ಆತ ಪೀಡಿಸುತ್ತಿರುವಾಗ ಅದನ್ನು ತಾಳಲಾರದೆ ನರಳಿದ ಆ ಮುಸ್ಲೀಂ ರೋಷದಿಂದ ಮಾತನಾಡುವಾಗ ಅವನ ಸಹೋದರಿಯ ಮತಾಂತರದ ಬಗ್ಗೆ ಸುಳಿವು ನೀಡಿದ ! ಈ ಮಾತನ್ನು ಕೇಳಿ ಓಮರ್ ಕೆರಳಿ ಕೆಂಡವಾದ. ಅವನ ಬೆನ್ನ ಹಿಂದೆಯೆ ನಡೆದ ಈ ಮಹಮದನ ಕಿತಾಪತಿ ಅವನ ಸಿಟ್ಟಿಗೆ ತುಪ್ಪ ಸುರಿಯಿತು. ಇದರಿಂದ ನೊಂದು ತೀವ್ರ ಆಕ್ರೋಶಿತನಾದ ಒಮರ್ ಆ ಕೂಡಲೆ ಸೋದರಿಯ ಮನೆಗೆ ಧಾವಿಸಿದ. ಅಲ್ಲಿ ಅವನಿಗೆ ಕಂಡದ್ದು ಕುಟುಂಬದ ಗುಲಾಮನೊಬ್ಬ ಒಂದು ತುಂಡು ಕಾಗದವನ್ನು ಹಿಡಿದು ಓದುತ್ತಿರುವ ದೃಶ್ಯ. ಓಮರನ ಉರಿಮುಖ ಕಂಡವನೆ ಅವನು ಒಳಹೊಕ್ಕು ಅದೆಲ್ಲೊ ಅವಿತುಕೊಂಡ. ಆದರೆ ಆ ಕೂಡಲೆ ಅವನ ನಡೆಯ ಹಿನ್ನೆಲೆ ಓಮರನಿಗೆ ಅರಿವಾಗಿತ್ತು. ಆ ಗುಲಾಮ ಮಹಮದನ ಉಪದೇಶದ ಸಾರವನ್ನು ಗುಟ್ಟಾಗಿ ಓದಿ ಪಠಿಸುತ್ತಿದ್ದ. ಒಳಬಂದ ಬಳಿಕ ಎದುರಿಗೆ ಕಂಡ ಫಾತಿಮಾಳ ಪತಿಯನ್ನು ಈ ಬಗ್ಗೆ ಪ್ರಶ್ನಿಸಿ ಅವನ ಮೇಲೆ ಓಮರ್ ಹಲ್ಲೆ ಎಸಗುವಾಗ ನಡುವೆ ಅಡ್ಡಿ ಬಂದ ಫಾತಿಮಾಳೂ ಅವನಿಂದ ಪೆಟ್ಟು ತಿನ್ನಬೇಕಾಯಿತು. ಮುಖದ ಮೇಲೆ ಬಲವಾಗಿ ಬಿದ್ದ ಪೆಟ್ಟಿನಿಂದ ಆಕೆಗೆ ರಕ್ತಸ್ರಾವವಾದಾಗ ಸಂಯಮ ಕಳೆದುಕೊಂಡ ಆಕೆ ಸಹೋದರನ ಮೇಲೆಯೆ ಎಗರಿಬಿದ್ದಳು. "ಹೌದು! ನಾವು ಮತಾಂತರಗೊಂಡಿದ್ದೀವಿ. ನಾವು ದೇವರು ಹಾಗೂ ಅವನ ಪ್ರವಾದಿಯನ್ನ ನಂಬುತ್ತೇವೆ ನೀನು ಅದೇನೆ ಬೇಕಿದ್ದರೂ ಮಾಡಿಕೊಳ್ಳಬಹುದು" ಎಂದು ಚೀರಿಹೇಳಿ ಸ್ಮೃತಿ ತಪ್ಪಿಬಿದ್ದಳು. ಅವಳ ರಕ್ತಸಿಕ್ತ ಮುಖವನ್ನು ಕಂಡಾಗ ಓಮರ್ ಮೆತ್ತಗಾದ. ಅವನ ಕ್ಷಣಿಕ ಆವೇಶವೆಲ್ಲ ಜರ್ರನೆ ಇಳಿದು ಹೋಯಿತು. ಅವಳ ಕೈಯಲ್ಲಿಯೆ ಭದ್ರವಾಗಿದ್ದ ಕಾಗದದ ತುಣುಕಿನಲ್ಲಿದ್ದ ಉಪದೇಶ ಸಾರವನ್ನು ತಾನೂ ಸಹ ಓದಿ ಪ್ರಭಾವಿತನಾದ. ಆ ಕೂಡಲೆ ಮಹಮದನನ್ನು ಕಾಣಲು ಆತ ಇಚ್ಚೆಪಟ್ಟು ಆತ ಉಳಿದಿದ್ದ ಅಲ್ ಅಕ್ರಮನ ಮನೆಗೆ ಸಾಗಿದ. ತನ್ನ ಮೇಲೆ ವಿಶ್ವಾಸವಿರಿಸಿ ಬಂದ ಓಮರನನ್ನು ಮಹಮದ್ ಬಹಳ ಆದರದಿಂದಲೆ ಇಸ್ಲಾಮಿಗೆ ಬರಮಾಡಿಕೊಂಡ. ಈ ಇಬ್ಬರು ಪ್ರಭಾವಿಗಳ ಮತಾಂತರದಿಂದ ಮಹಮದನ ಆಶೋತ್ತರಗಳಿಗೆ ಮಹತ್ತರವಾದ ಬಲ ಬಂದೊದಗಿತು ಅನ್ನುತ್ತಾನೆ ಇತಿಹಾಸಕಾರ ಮ್ಯೂರ್. ಇಸ್ಲಾಮಿನ ಉನ್ನತಿಗಾಗಿ ಮುಂದೆ ಹೂಡಿದ ಅನೇಕ ಕಾಳಗಗಳಲ್ಲಿ ಹಮ್ಜಾ ಒಬ್ಬ ಅಪ್ರತಿಮ ವೀರನಾಗಿ ಕಂಗೊಳಿಸಿದರೆ ಒಮರ್ ಅಬುಬಕರನ ನಂತರ ಖಲೀಫನಾಗಿ ಮೆರೆದ. ಹುಂಬತನದ ಅತಿರೇಕಿಗಳ ಈ ಮತಾಂತರ ಮಹಮದನ ಮನೋಬಲ ವಿಪರೀತ ಹೆಚ್ಚಿತು. ಇವರಿಬ್ಬರಿಂದ ಮಹಮದನಿಗೆ ತನ್ನ ವಿಚಾರ ಮಂಡನೆಗೆ ವಿಚಿತ್ರ ಧೈರ್ಯ ಪ್ರಾಪ್ತಿಯಾಗಿತ್ತು. ಈ ಆನೆಬಲವನ್ನು ಹಿಂದಿಟ್ಟುಕೊಂಡೆ ಆತ ಇದೂವರೆಗೂ ಗುಪ್ತವಾಗಿಯಷ್ಟೆ ಮಾಡುತ್ತಿದ್ದ ತನ್ನ ಮತಪ್ರಚಾರವನ್ನು ಮರಳಿ ಬಹಿರಂಗವಾಗಿ ಕಾಬಾದ 'ಹುಬಾಬ್' ದೇವರ ಗುಡಿಯೆದುರಿಗೆ ಮಾಡಲು ಉಪಕ್ರಮಿಸಿದ. ಅಲ್ಲಿಯೆ ಆತನ ಪಠಣ- ಪ್ರವಚನ ಮತ್ತಿತರ ಪಾಠ ಪ್ರವಚನಗಳು ಆರಂಭವಾದವು. ಇದರಿಂದ ಇರುಸು ಮುರುಸಿಗೆ ಒಳಗಾದ ಖುರೈಷಿಗಳು ತಮ್ಮವರನ್ನೆಲ್ಲ ಮತ್ತೆ ಸಂಘಟಿಸಿ ಇದನ್ನು ವಿರೋಧಿಸಲು ಆರಂಭಿಸಿದರು. ಅದರ ಒಂದು ನಿರ್ಬಂಧಕ ಕ್ರಮವಾಗಿ ಅವರೆಲ್ಲರೂ ಕೂಡಿ ಮಹಮದನ ಕುಟುಂಬವಾಗಿದ್ದ 'ಹಶೀಮ್' ಉಪ ಬುಡಕಟ್ಟಿಗೆ ಸಾಮಾಜಿಕ ಬಹಿಷ್ಕಾರ ಹೇರಿದರು.ಅವರ ಕುಟುಂಬದೊಂದಿಗೆ ಸಮಾಜದ ಇತರರ ವೈವಾಹಿಕ ಸಂಬಂಧಗಳು ಕೊನೆಯಾದವು. ಅವರೊಂದಿಗೆ ವ್ಯಾಪಾರ- ವ್ಯವಹಾರಗಳಿಗೂ ತಿಲಾಂಜಲಿ ಕೊಡಲಾಯಿತು, ಎಲ್ಲಾ ಸಾಮಾಜಿಕ ವ್ಯವಹಾರಗಳಿಂದಲೂ ಅವರನ್ನು ದೂರ ತಳ್ಳಲಾಯಿತು, ಈ ಬಹಿಷ್ಕಾರದಿಂದ ತತ್ತರಿಸಿದ ಹಶೀಮರು ಮೆಕ್ಕಾ ತೊರೆದು ಸುತ್ತಲಿನ ಬೆಟ್ಟಗುಡ್ಡಗಳಲ್ಲಿ ಆಶ್ರಯ ಅರಸುವಂತಾಯಿತು. ಮಹಮದನ ಮೇಲಿದ್ದ ಅಭಿಮಾನಧ ಕಾರಣದಿಂದ ಆ ಕಷ್ಟದ ದಿನಗಳನ್ನು ಮಹಮದನ ಕುಟುಂಬದವರೆಲ್ಲ ಐಕ್ಯತೆಯಿಂದಲೆ ಹಲ್ಲುಕಚ್ಚಿ ಸಹಿಸಿ ಕಳೆದರು. ಆದರೆ ಅವರು ಜೀವನೋಪಾಯಕ್ಕೆ ಕಷ್ಟ ಬೀಳಬೇಕಾಯಿತು. ಹಸಿವಿನಿಂದ ಅವರು ನರಳುವುದನ್ನು ನೋಡಲಾಗದೆ ಕೆಲವು ಕರುಣಾಮಯಿಗಳಾದ ಖುರೈಷಿಗಳು ಗುಟ್ಟಾಗಿ ಹಿರಿಯರ ಕಣ್ಣುತಪ್ಪಿಸಿ ಅವರಿಗೆ ಆಹಾರ ಹಾಗೂ ಇನ್ನಿತರೆ ಜೀವನಾವಶ್ಯಕ ವಸ್ತುಗಳನ್ನ ಪೂರೈಸುವುದೂ ಆ ಕಾಲದಲ್ಲಿ ಅಲ್ಲಲ್ಲಿ ನಡೆಯಿತು. ವರ್ಷಕ್ಕೊಮ್ಮೆ ನಡೆಯುವ ಕಾಬಾ ಉತ್ಸವಗಳಲ್ಲಿ ಮಾತ್ರ ಅವರು ಮೆಕ್ಕಾ ಪ್ರವೇಶಿಸಿ ತಮ್ಮತಮ್ಮ ಮತಪ್ರಚಾರ ಕೈಗೊಳ್ಳಲು ಅಡ್ಡಿಯಿರಲಿಲ್ಲ. ಅಂತಹ ದಿನಗಳನ್ನು ಶಾಂತಿಯ ದಿನಗಳೆಂದು ಘೋಷಿಸಿದ್ದರಿಂದ ಮಹಮದ್ ನಿರಾತಂಕವಾಗಿ ತನ್ನ ಮತವನ್ನು ಮನಬಂದಂತೆ ಆ ಪವಿತ್ರ ಯಾತ್ರಾಕ್ಷೇತ್ರದಲ್ಲಿ ಭೋದಿಸಲು ಯಾರೂ ತಕರಾರು ತೆಗೆಯುತ್ತಿರಲಿಲ್ಲ. ಆದರೆ ಆತನ ಈ ಮತಪ್ರಚಾರದಿಂದ ಖುರೈಷಿಗಳೇನೂ ಪ್ರಭಾವಿತರಾಗಲಿಲ್ಲ. ಅವರ ನಾಯಕನಾದ ಅಬು ಲಹಾಬನಂತೂ ಬಹಿರಂಗವಾಗಿಯೆ ಮಹಮದನನ್ನು ಹೀಯ್ಯಾಳಿಸಲು ಹಿಂಜರೆಯುತ್ತಿರಲಿಲ್ಲ. 'ಅವನನ್ನು ನಂಬಬೇಡಿ ಅವನೊಬ್ಬ ವಂಚಕ ಧರ್ಮಭ್ರಷ್ಟ!' ಎಂದು ಕೂಗಿ ಮಹಮದನಿಂದ ಉಳಿದೆಲ್ಲರನ್ನೂ ಆತ ದೂರವಿರಿಸುವುದರಲ್ಲಿ ಸಫಲನಾಗಿದ್ದ. ಹೀಗಾಗಿ ಮಹಮದ್ ನೊಂದು ಸಂಕಟ ಪಡುವಂತಾಯಿತು. ಇದೆ ಸಮಯದಲ್ಲಿ ಮಹಮದನಿಗೆ ಕಾಬಾಕ್ಕೆ ತೀರ್ಥಯಾತ್ರೆಗೆ ಬಂದಿದ್ದ ಯಹೂದಿಗಳ ಸಂಪರ್ಕ ಏರ್ಪಟ್ಟು ಅವರ ವಿಚಾರಧಾರೆಗಳಿಂದ ಆತ ಬಹಳ ಪ್ರಭಾವಿತನಾಗುವಂತಾಯಿತು. ಇದು ಆ ಕಾಲದಲ್ಲಿ ಆತನಿಗೆ ದೊರೆತ ದೈವವಾಣಿಗಳಲ್ಲಿ ಅಡಗಿದ್ದ ಯಹೂದಿ ವಿಚಾರಧಾರೆಗಳಿಂದ ಸ್ಪಷ್ಟವಾಗುತ್ತದೆ ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ದೇವರ ಪುನರುತ್ಥಾನ ಮುಂತಾದ ಉದಾಹರಣೆಗಳನ್ನವನು ಕೊಡುತ್ತಾನೆ. ಇವೆಲ್ಲ ಸೇರಿ ಸುಮಾರು ಇಪ್ಪತ್ತು ಸುರಾಗಳು ಆ ಕಾಲದಲ್ಲಿ ಹೊರಬಂದವು. ಈ ಸುರಾಗಳಲ್ಲಿ ಮಹಮದ್ ದೇವರು ವಿಶ್ವವನ್ನು ಕೇವಲ ಆಟವನ್ನಾಗಿ ಸೃಷ್ಟಿಸದೆ ಒಂದು ನಿರ್ದಿಷ್ಟ ಗುರಿ, ಧ್ಯೇಯ ಹಾಗೂ ಉದ್ದೇಶಗಳನ್ನೆ ಇಟ್ಟುಕೊಂಡು ಸೃಷ್ಟಿಸಿದ ಎಂದು ಆತ ಸಾಧಿಸಿದ. ಇವನ್ನು ಸುರಾ 72/28ರಲ್ಲಿ ಸ್ಪಷ್ಟವಾಗಿ ಕಾಣಬಹುದು. ಯಹೂದಿಗಳ ಪ್ರವಾದಿ ಮೋಸೆಸ್'ನಿಗೆ (ಇಸ್ಲಾಮಿನಲ್ಲಿ ಮೂಸಾ-ಎ-ಅಸಲ್ಲಂ) ತಾಲ್'ಮೇಡ್'ನಲ್ಲಿ ದೇವರು ಕರುಣಿಸಿದ ದೈವವಾಣಿ ಹಾಗೂ ವಿಚಾರಧಾರೆಗಳೂ ಹೀಗಾಗಿ ಖುರಾನಿನ ಸುರಾಗಳಲ್ಲಿ ಕಾಣುತ್ತವೆ. ಮಹಮದ್ ಅವನ್ನು ಉದ್ದರಿಸುವಾಗ ತಾನು ಸಾರುತ್ತಿರುವ ಈ ವಿಚಾರಧಾರೆ ಈಗಾಗಲೆ ಇಂತಹ ಧರ್ಮಗ್ರಂಥಗಳಲ್ಲಿ ಮೂಡಿಬಂದಿದೆ ಎಂದು ಅವನ್ನು ಉದಾಹರಿಸಿ ಹೇಳುತ್ತಿದ್ದ. ಹಾಗೆ ಹಿಂದೆ ಬಂದ ಧರ್ಮಸಾರಗಳನ್ನೆ ಪುನಃ ಹೇಳಿ ಎಚ್ಚರಿಸಲು ತಾನು ಹುಟ್ಟಿ ಬಂದಿರುವುದಾಗಿಯೂ, ಅವುಗಳನ್ನೆಲ್ಲ ಅರೇಬಿಕ್ ಭಾಷೆಯಲ್ಲಿ ಪ್ರಚುರ ಪಡಿಸುವುದಷ್ಟೆ ತನ್ನ ಕರ್ತವ್ಯ ಎಂದು 4/160 ಹಾಗೂ 28/43ರಲ್ಲಿ ಘಂಟಾಘೋಷವಾಗಿ ಸಾರಿದ. ಇದರೊಂದಿಗೆ 2/256ರಲ್ಲಿ 'ಧರ್ಮದ ವಿಷಯಗಳಲ್ಲಿ ಯಾವುದೆ ಬಲಾತ್ಕಾರಗಳಿಲ್ಲ!' ಎಂದೂ ಸಾರಿದ. ಆದರೆ ಕ್ರಮೇಣ ಇಸ್ಲಾಂ ಪ್ರಬಲವಾಗುತ್ತಾ ಹೋದಂತೆ ಈ ಮಾತುಗಳಿಗೆ ಸ್ವತಃ ಮಹಮದನೆ ಕವಡೆಯ ಕಿಮ್ಮತ್ತನ್ನೂ ಕೊಡಲಿಲ್ಲ! ಆ ಬಗ್ಗೆ ಮುಂದಿನ ಅಧ್ಯಾಯಗಳಲ್ಲಿ ವಿವರಣೆಯಿದೆ. ಹಾಶಿಮ್ ಉಪ ಬುಡಕಟ್ಟಿನವರ ಮೇಲೆ ಹೇರಿದ್ದ ಬಹಿಷ್ಕಾರಕ್ಕೆ ಸ್ವತಃ ಖುರೈಷಿಗಳಲ್ಲೆ ಒಮ್ಮತವಿರಲಿಲ್ಲ. ಹೀಗಾಗಿ ಹಾಶೀಮರಿಗೆ ಅವರಲ್ಲೆ ಕೆಲವರಿಂದ ಗುಪ್ತವಾಗಿ ಸಹಕಾರಗಳು ಸಿಕ್ಕವು. ಅಷ್ಟರಲ್ಲಿ ಖುರೈಶಿಗಳಲ್ಲಿ ಒಬ್ಬ ನಾಯಕನೆನೆಸಿಕೊಂಡಿದ್ದ ಮಹಮದನ ದೊಡ್ಡಪ್ಪ ಅಬು ತಾಲಿಬ್ ಅವರೆಲ್ಲರೂ ಬಹಿಷ್ಕಾರದಿಂದ ಪಡುತ್ತಿರುವ ಬವಣೆಗಳನ್ನು ನೋಡಿ ಸಂತಾಪಗೊಂಡು ಒಂದು ದಿನ ತನ್ನ ಕೆಲವು ಸಂಗಡಿಗರೊಡನೆ ಕಾಬಾದತ್ತ ಹೆಜ್ಜೆಹಾಕಿದ. ಸಹತಾಪದಿಂದ ಕೂಡಿದ ಹೃದಯ ಹೊಂದಿದ್ದ ಅಬು ತಾಲಿಬ್ ಅವರು ಬರೆದಿರಿಸಿದ್ದ ಬಹಿಷ್ಕಾರ ಸನ್ನದನ್ನು ಪ್ರಸ್ತಾವಿಸುತ್ತಾ ಅಲ್ಲಿ ನೆರೆದಿದ್ದ ಇತರ ಖುರೈಶಿಗಳನ್ನ ಉದ್ದೇಶಿಸಿ "ನೀವು ಬರೆದು ದಾಖಲಿಸಿರುವ ಪತ್ರ ಆಗಲೆ ಗೆದ್ದಲು ತಿಂದು ಲಡ್ಡಾಗಿ ಹೋಗಿದೆ ! ಅದರಿಂದ ಇನ್ನು ಮೂರುಕಾಸಿನ ಉಪಯೋಗವಿಲ್ಲ, ಇದರ ಮೇಲೆಯೂ ನೀವೆಲ್ಲ ಇಚ್ಚಿಸಿದರೆ ಅವನನ್ನೆ ನಿಮ್ಮ ಮುಂದೆ ತರುತ್ತೇನೆ. ನಿಮ್ಮ ಇಷ್ಟದ ಪ್ರಕಾರ ವಿಚಾರಿಸಿ ತೀರ್ಮಾನ ಕೈಗೊಳ್ಳಿ. ಆದರೆ ಮೊದಲು ಈ ಬೋಳು ಬಹಿಷ್ಕಾರವನ್ನ ಮರುಮಾತಿಲ್ಲದೆ ಹಿಂತೆಗೆದುಕೊಳ್ಳಿ!" ಎಂದು ಅಬ್ಬರಿಸಿದ. ಈ ಆವೇಶದ ಮಾತುಗಳನ್ನು ಕೇಳಿದ ಅಲ್ಲಿನ ಪೂಜಾರಿ ಕಾಬಾದಲ್ಲಿನ ಸಂದೂಕದಲ್ಲಿ ಇರಿಸಿದ್ದ ಬಹಿಷ್ಕಾರ ಪತ್ರವನ್ನು ಹೊರತೆಗೆದು ನೋಡಿದಾಗ ಅದು ನಿಜಕ್ಕೂ ಲಡ್ಡಾಗಿ ಹುಳತಿಂದು ಹಾಳಾಗಿತ್ತು! ಇದನ್ನು ಕಂಡ ಖುರೈಷಿಗಳು ಗಾಬರಿಯಿಂದ ಕಂಗಾಲಾದರು. ಅವರ ಸೋಕ್ಕೆಲ್ಲ ಅಡಗಿಹೋಗಿ ಅವರಲ್ಲೆ ಹಿರಿಯರಾದವರು ಬಹಿಷ್ಕಾರ ರದ್ದುಪಡಿಸಿ ಹಾಶೀಮ್ ಕುಲಸ್ಥರನ್ನು ಮರಳಿ ಮೊದಲಿನಂತೆ ಮೆಕ್ಕಾ ಪ್ರವೇಶಿಸಲು ಅನುವು ಮಾಡಿಕೊಟ್ಟರು. ಹೀಗೆ ಬಹಿಷ್ಕಾರ ಮುಗಿದ ಮಾತ್ರಕ್ಕೆ ಮಹಮದನ ವಯಕ್ತಿಕ ಬವಣೆಗಳೇನೂ ಕೊನೆಯಾಗಲಿಲ್ಲ. ವಯೋ ವೃದ್ಧಳಾಗಿದ್ದ ಆತನ ಪತ್ನಿ ಖತೀಜಾ ಖಾಯಿಲೆಯಿಂದ ನರಳಿ ಕ್ರಿಸ್ತಶಕ 616ರ ಡಿಸೆಂಬರ್ ತಿಂಗಳಲ್ಲಿ ಕಣ್ಣು ಮುಚ್ಚಿದಳು. ಇದು ಮಹಮದನ ಪಾಲಿಗೆ ಅತ್ಯಂತ ನೋವಿನ ಸಂಗತಿಯಾಗಿತ್ತು. ಕಾಲುಶತಮಾನಗಳ ಕಾಲ ಆತನ ಪ್ರೀತಿಸುವ ಜೀವವಾಗಿ, ಹಿತೈಷಿಯಾಗಿ, ಬಾಳ ಗೆಳತಿಯಾಗಿ ಹಾಗೂ ಆತನಿಂದ ಮತಾಂತರ ಹೊಂದಿದ ಪ್ರಥಮ 'ಮುಸ್ಲೀಂ'ಮಳಾಗಿ ಆತನಿಗೆ ಒತ್ತಾಸೆ ನೀಡಿದ್ದ ಖತೀಜ ಮಹಮದನ ವಂಶೋದ್ಧಾರಕಳೂ ಆಗಿ ನಾಲ್ವರು ಹೆಣ್ಣುಮಕ್ಕಳ ತಾಯಿಯೂ ಆಗಿದ್ದು ತುಂಬು ಜೀವನ ಸವೆಸಿ ಕಣ್ಮುಚ್ಚಿದ್ದಳು. ವಯಕ್ತಿಕ ನೆಲೆಯಲ್ಲಿ ಇದು ಆತನನ್ನು ಸಹಜವಾಗಿ ಕೆಂಗೆಡೆಸಿತು. ಇದರ ಹಿಂದೆಯೆ ಗಾಯದ ಮೇಲೆ ಉಪ್ಪು ಸುರಿದಂತೆ ಆತನ ದೊಡ್ಡಪ್ಪ ಅಬು ತಾಲೀಬನೂ ಅದೆ ಕಾಲದಲ್ಲಿ ಕೊನೆಯುಸಿರು ಎಳೆದಿದುದರಿಂದಾಗಿ ಮಹಮದ್ ಸಂಕಟದಿಂದ ನರಳಬೇಕಾಯಿತು. ಮಹಮದನಿಗಾಗಿ ಸಂಪೂರ್ಣ ಖುರೈಷಿ ಕುಲದ ವೈರತ್ವವ್ವನ್ನೆ ಕಟ್ಟಿಕೊಳ್ಳಲು ಹೇಸದ ಅಬು ತಾಲೀಬ್ ವಯಕ್ತಿಕವಾಗಿ ಇಸ್ಲಾಮಿಗೆ ಮತಾಂತರವಾಗದಿದ್ದರೂ ಮಹಮದನ ಜೊತೆಗೆ ಬೆಸೆದು ಕೊಂಡಿದ್ದ ರಕ್ತ ಸಂಬಂಧದ ಕಟ್ಟಿಗೆ ಬೆಲೆಕೊಟ್ಟು ಆತನ ಸಮೀಪ ವರ್ತಿಯಾಗಿ ಮುತುವರ್ಜಿಯಿಂದ ಆತನ ಹಿತಬಯಸಿದ ನಿಸ್ಪ್ರಹ ಜೀವ ಅಬು ತಾಲೀಬನದು. ಹೆತ್ತವರನ್ನು ಬಾಲ್ಯದಲ್ಲೆ ಕಳೆದುಕೊಂಡಿದ್ದ ಮಹಮದನನ್ನು ಸ್ವಂತ ಹೆತ್ತಮಗನಂತೆ ಸಲಹಿದ್ದ ಅಬು ತಾಲೀಬನನ್ನು ಮಹಮದ್ ಕಳೆದುಕೊಂಡು ಶಾಂತಿಯಿಂದ ಇರುವುದು ಅಸಾಧ್ಯವಾಗಿತ್ತು. ಅವನು ಇದನ್ನು ಭಾವಪೂರ್ಣವಾಗಿ ಪ್ರಕಟಿಸಿ ಶೋಕಿಸಿದ. ನಾಲ್ಕು ದಶಕಗಳ ಈ ಗಟ್ಟಿಬಾಂಧವ್ಯ ಹೀಗೆ ಅಬು ತಾಲೀಬನ ಸಾವಿನಲ್ಲಿ ಕೊನೆಯಾದುದರಿಂದ ಮಹಮದ್ ಮಾನಸಿಕವಾಗಿ ಕೆಂಗೆಟ್ಟ. ( ಇನ್ನೂ ಇದೆ....)