17 December 2012
ನಿರಂತರ ನನ್ನೆದೆಯಲ್ಲಿ ನಿನ್ನದೆ ಧ್ಯಾನ......
ಕನಸಾದ ಆಸೆಗಳೆಲ್ಲ ಗಾಳಿಪಟದಂತೆ
ಮನದ ಬಾನಗಲ ರಂಗು ತುಂಬಿ ಹಾರಾಡುವಾಗ.....
ನಲಿವ ಹನಿಸುವುದರ ಜೊತೆಜೊತೆಗೆ
ನಯನಗಳಲ್ಲಿ ನೋವಿನ ಹನಿಗಳನ್ನೂ ಉಕ್ಕಿಸುತ್ತಿದೆ,
ಕಾತರಕೆ ಕೊನೆಯಿಲ್ಲ
ಆತುರದ ಮಾತಲ್ಲ....
ನೋವು ಗೊತ್ತಿರೋದು ಕೇವಲ ಕಾದು ಕುಳಿತ ಅಪೂರ್ಣ ಕನಸಿಗೆ
ಸಂಕಟದ ಹೊರೆಹೊತ್ತ ಭಾವುಕ ಮನಸಿಗೆ/
ಮೋಡ ಮುಸುಗಿದ ಬಾನಿನಂಚಿನಲ್ಲಿ
ಬೆಚ್ಚಗೆ ಹೊಳೆವ ಭಾನುವಿನ ಕಣ್ಣಲ್ಲಿ ನಿನ್ನದೆ ಪ್ರತಿಬಿಂಬ....
ಮನದ ಹಿತ್ತಲಿನಲ್ಲಿ ಅರಳಿದ್ದ ಕನಸಿನ ಸುಮಗಳಿಗೆ
ನನ್ನ ಕಣ್ಣುಗಳಷ್ಟೆ ಅನುಗಾಲದ ಮಾಲಿಗಳು//
ಮನಸಿನ ಕವಲಿನಲ್ಲಿ ಕೊನರೊಡೆದಿದ್ದ ಕನಸುಗಳಿಗೆಲ್ಲ
ಹೋಗಿ ಸೇರುವ ಗುರಿಯತ್ತ ಯಾವುದೆ......
ಗೊಂದಲಗಳಿರಲಿಲ್ಲ ಗೊತ್ತ?,
ಬಾನ ಮನಸೊಳಗೂ ತೀರದ ನೋವಿನ ಮೋಡ ಮಡುಗಟ್ಟಿ
ಮಳೆಯ ನಯನದ ಹನಿಗಳಾಗಿ ಹನಿಯುತ್ತಿವೆ....
ಶಿಶಿರದ ಕಾತರ ಹೇಮಂತದಲ್ಲಿ ಚಳಿಯಾಗಿ ಮನ ನಡುಗುವಾಗಲೂ
ನನ್ನ ನೇತ್ರಗಳಲ್ಲಿ ನಿನ್ನ ನೆನಪುಗಳದೆ ವರ್ಷಧಾರೆ/
ಮರೆತು ಮನಸು ಹಾಡಿದ ಸಂತಸದ ಪದಗಳಲ್ಲಿಯೂ
ನಿನ್ನ ನೆನಪುಗಳೆ ನುಗ್ಗಿ ವಿಷಾದ ಮತ್ತೆ ನನ್ನನಾವರಿಸಿದೆ.......
ನೆನ್ನೆ ಸುರಿದ ಮಳೆಯಲ್ಲಿ ಮೊದಲಿನ ಆರ್ದ್ರತೆಯಿಲ್ಲದಿದ್ದರೂ
ನಿನ್ನ ನೆನಪಿನ ತಂಪಿತ್ತು//
ಮಳೆಯಲ್ಲಿ ಜಿನುಗುವ ಹನಿಗಳ ಅಂತರಾಳದಲ್ಲಿ
ಇಳೆಯೆಡೆಗೆ ಅಂಕುರಿಸಿದ ಇನಿತು ಪ್ರೀತಿಗೆ ಕಾರಣ ನೂರಿದೆ....
ಕಾದಿರಿಸಿದ ಎದೆಯ ಜಾಗದಲ್ಲಿ
ನಿನ್ನ ಹೆಸರಿನ ಹಚ್ಚೆಯಿದೆ....
ಅದರ ಹಿಂದೆಯಿರುವ ಮೃದು ಭಾವಗಳ ಹೃದಯದಲಿ
ನಿನ್ನೊಲವ ಗೆಲ್ಲುವ ಇಚ್ಛೆಯಿದೆ,
ಕಾದು ಕುಳಿತಿದ್ದ ವೈದೇಹಿಗೂ ರಾಮ ಭರ್ತ್ಸನೆ ತಪ್ಪಲಿಲ್ಲ
ರಾಧೆ ಶ್ಯಾಮನಿಗಾಗಿ ವ್ಯರ್ಥ ಬಾಳು ಪೂರ ನಿರೀಕ್ಷಿಸ ಬೇಕಾಯಿತಲ್ಲ....
ಅವರ ಮುಂದೆ ನನ್ನದೇನು ಮಹಾ ಹೇಳು?/
ಇರುಳಲ್ಲಿ ಪೂರ್ಣ ಶಶಿಗೆ ಶರಣಾಗದೆ ಮಿನುಗುತ್ತಲೆ
ನನ್ನೊಲವ ಕಾತರದಂತೆ ಕೆಲವು ತಾರೆಗಳು.....
ಇನ್ನೂ ಹೊಳೆಯುತ್ತಿವೆ,
ಕಡು ಶಾಪಕ್ಕೆ ಗುರಿಯಾದ ಚಂದ್ರ
ಮಾಸಕ್ಕೊಮ್ಮೆ ಮಾಸುತ್ತಾ ಹೋಗಿ ಮರೆಯಾಗಿ.....
ಮತ್ತೆ ಚಿಗುರುವಂತೆ
ನನ್ನೆದೆಯ ಭಾವಗಳಿಗೂ ಅಕಾಲ ಗ್ರಹಣ ಕವಿದಿದೆ//
ಕಾರಣವಿಲ್ಲದೆ ಕದಲುವ ಕನಸಿನ ಪ್ರತಿ ಕದಲಿಕೆಯಲ್ಲೂ
ನಿನ್ನ ಮೆಲು ಮಾತುಗಳ ಕನವರಿಕೆಗಳಿವೆ....
ಮುಗಿಲ ಮೃದು ಹನಿಗಳ ಮತ್ತಲ್ಲಿ ಮೈಮನ
ಇರುಳಲ್ಲಿ ಕನವರಿಸಿದಾಗ ನೆನಪಾದದ್ದು ನಿನ್ನ ಮಂದಸ್ಮಿತ,
ಸ್ವಲ್ಪ ದೂರ ನನ್ನೊಂದಿಗೆ ಜೊತೆಗೆ ಹೆಜ್ಜೆ ಹಾಕಿದ್ದ
ನಿನ್ನ ಉಸಿರ ಘಮ ಆಗ ನನ್ನಾವರಿಸಿದ್ದು.....
ಇನ್ನೂ ನನ್ನ ಸುತ್ತಲೆ ಸುಳಿಯುತ್ತಿದೆ/
ಕಾದು ಕುಳಿತುಕೊಳ್ಲುವುದು ಸುಖ ನಿಜ
ಆದರೆ ಆ ಹೊತ್ತೆಲ್ಲ ಮುಳ್ಳಿನ ನೆಲಹಾಸಿನ ಮೇಲೆಯೆ ಕೂತಿರಬೇಕಲ್ಲ...
ಅದನ್ನೊಮ್ಮೆ ಊಹಿಸಿ ನೋಡು,
ಮನದ ಕತ್ತಲ ಕೋಣೆಯಲ್ಲಿ ಹಚ್ಚಿದ
ಕಿರು ಕಂದೀಲು ದೀಪದ ಬೆಳಕಲ್ಲಿ ನಿನ್ನ ಕಣ್ಗಳದೆ ಹೊಳಪು....
ಕದಡದ ಏಕಾಂತದ ಅಡಿಪಾಯವಿರುವ ಸ್ವಪ್ನ ಸರೋವರದಲ್ಲಿ
ಆಗಾಗ ಏಳುವ ಆತಂಕದ ಅಲೆಗಳಿಗೆ ಅಡೆತಡೆಯಿಲ್ಲ.....
ಮಾರ್ದವ ಮೌನದ ದಾಸ ನನ್ನ ಮನ
ನಿರಂತರ ನನ್ನೆದೆಯಲ್ಲಿ ನಿನ್ನದೆ ಧ್ಯಾನ ಅನುಕ್ಷಣ//
Subscribe to:
Post Comments (Atom)
No comments:
Post a Comment