28 February 2011

ವಿರಹದ ನಾಲ್ಕು ಸಾಲು...

ಆಳದಲ್ಲಿ ಅಡಗಿರುವ ಒಲವ ಭಾವಗಳಿಗೆ ಒಂದು ಸ್ಪಂದನದ ಹನಿ ಸಿಂಚನ ಸಾಕು.....
ಎದೆಯಲ್ಲಿ ಗೆಲುವು ಚಿಗುರೊಡೆಯೋಕೆ,
ಮುತ್ತಾಗುವ ಮಳೆಹನಿಗೇನು ಗೊತ್ತು ನೆಲಕ್ಕಿಳಿದು ತಾನು ಬಚ್ಚಿಟ್ಟು ಕೊಳ್ಳಬೇಕಾದ ಚಿಪ್ಪಿನ ವಿಳಾಸ?
ಬಯಸಿದ ಒಲವು ಕೈಗೂಡೋದು ಕೇವಲ ವಿಧಿಯ ವಿಲಾಸ/
ನಿನಗೆ ಗೊತ್ತಲ್ಲ ನನ್ನ ಮನದ ಎಲ್ಲ ಆಸೆ,
ಇನ್ನು ಬಿಡಿಸಿ ನಾ ಹೇಳೋದಾದರೂ ಏಕೆ?...
ಮೋಡ ಕವಿದ ಮನದಲ್ಲಿ ಬೀಸಿದ ತಂಪು ತಂಗಾಳಿ ನನ್ನ ಪಾಲಿಗೆ ನೀನು,
ನಾದ ಮರೆತು ತಾಳಕೆ ಮನಸೋತ ತಂಬೂರಿಯಂತಾದೆ ನಿನ್ನೆದುರು ನಾನು//


ಮಾತಿನ ಮೋಹ ಮೌನದ ಆಸೆ ಎರಡೂ ನನ್ನಲ್ಲಿ ಗಿರಕಿ ಹೊಡೆಯುತ್ತ....
ಮಾತುಬಂದೂ ನನ್ನ ಮೂಕನನ್ನಾಗಿಸಿದೆ,
ಗಾಳಿ ಬೀಸುವಾಗ ನನ್ನ ಉಸಿರು ಅದರಲ್ಲಿ.....
ನಿನ್ನ ಪರಿಮಳಹುಡುಕುವುದು ಎಲ್ಲರ ಕಣ್ಣಿಗೆ ಮರುಳನಿಸೀತು,
ಆದರೆ ನೀನು ಹಾಗಂದುಕೊಳ್ಳಲಿಕ್ಕಿಲ್ಲಾ,ಅಲ್ಲವ?/
ಸಾವಿರ ಮಾತುಗಳಲ್ಲಿ ಉಸುರಲಾಗದ ಭಾವ....
ಒಂದು ಹಾಡಲ್ಲಿ ಬಟಾಬಯಲಾಗಿದೆ,
ಮನದ ಭಾರ ಇಳಿದು ಈಗ,
ಎದೆಯ ವೇದನೆ ಕೊಂಚ ಹಗುರಾಗಿದೆ//

ಹೆದರದಿರು ನಿನ್ನ ಖುಶಿಗಳನ್ನ ನಾನೆಂದೂ ಕಸಿಯುವುದಿಲ್ಲ...
ನಿನ್ನ ಹೆಸರನ್ನ ಎಲ್ಲೂ ಜಾಹೀರುಗೊಳಿಸೋಲ್ಲ,
ನನ್ನೆಡೆಗೆ ಗೊತ್ತಿರುವ ಗುಟ್ಟನ್ನ ನಾನಿನ್ಯಾರಿಗೂ ಉಸುರೋಲ್ಲ....
ನನ್ನ ಉಸಿರಲ್ಲಷ್ಟೆ ನೀ ಸುಭದ್ರ/
ದ್ವೇಷಿಸಲು ಕಾರಣ ನೂರು ಬೇಕು....
ಪ್ರೀತಿಸಲು ಒಂದೂ ಬೇಕಿಲ್ಲ,ಅಲ್ಲವ?
ಹಾಗೆ ನಿನ್ನ ಪ್ರೀತಿಸೋಕೆ ನನಗೆ ಕಾರಣದ ಹಂಗು ಬೇಕಿಲ್ಲ....
ಅವೆಲ್ಲವೂ ನಿನಗೆ ಇರಲಿ ಬಿಡು ನನ್ನ ಇನ್ನಷ್ಟು ದ್ವೇಷಿಸೋಕಂತ//

25 February 2011

ಅನಂತ ಪೈ ಅನಂತದಲ್ಲಿ ಲೀನ.....ಭಾರತೀಯ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಮಕ್ಕಳಿಗಾಗಿ ಚಿತ್ರಕಥೆಗಳನ್ನ ರೂಪಿಸಿದ್ದ ಅಪರೂಪದ ಮೆದುಳು ಅನಂತ ಪೈ ನೆನ್ನೆ ಮುಂಬೈನಲ್ಲಿ ತಮ್ಮ ೮೧ನೆ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.೧೯೬೦ರ ದಶಕದಲ್ಲಿ ಮಕ್ಕಳಿಗಾಗಿನ ಸಚಿತ್ರ ಕಥಾಗುಚ್ಚಗಳೆಂದರೆ ಕೇವಲ ಪಾಶ್ಚಾತ್ಯ ಮೂಲದ ಕಾಮಿಕ್ಸ್ಗಳು ಹಾಗು ಅವುಗಳ ಎರವಲು ಸರಕು ಮಾತ್ರವೆ ಎನ್ನುವಂತಾಗಿದ್ದ ಭೀಕರ ದಿನಗಳಲ್ಲಿ.ಮುಂದಿನ ತಲೆಮಾರುಗಳ ಓದುವ ದಿಕ್ಕನ್ನೆ ನಿರ್ದೇಶಿಸಿ-ಉತ್ತಮ ಓದನ್ನ ರೂಪಿಸಿಕೊಟ್ಟ "ಅಮರ ಚಿತ್ರಕಥೆಗಳು" ಹಾಗು "ಪಂಚತಂತ್ರದ ಕಥೆಗಳು" ಅನಂತ ಪೈಗಳಿಂದ ಭಾರತೀಯ ಚಿಣ್ಣರಿಗೆ ಸಂದಿದ್ದ ಒಂದು ಅದ್ಭುತ ಕೊಡುಗೆ.ಇವರು ಮೂಲತಃ ನಮ್ಮ ಕರಾವಳಿಯ ಕಾರ್ಕಳದವರು ಎನ್ನೋದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.ಅವರನ್ನ ನೆನೆಯದಿದ್ದರೆ ಮಾತ್ರ ನಾವೆಲ್ಲಾ ನಿಸ್ಸಂಶಯವಾಗಿ ಕೃತಘ್ನರ ಸಾಲಿಗೆ ಸೇರುತ್ತೀವಿ....ಅವರ ಚೇತನಕ್ಕೆ ಸಾವಿರ ಸಲಾಂ...

21 February 2011

ಮಳೆ ಹೇಳಿದ್ದೇನು?

ವರ್ಷದ ಮೊದಲ ಮಳೆಯಲಿ ನೆನೆದ ನನಗೆ ಹನಿ ಹನಿಯಲೂ ನಿನ್ನದೇ ನೆನಪು,
ಮುಗಿಲು ನೀರಾಗಿ ಜಾರಿ ಭುವಿಗೆ ಮುತ್ತಿಡುವಾಗ/
ಸುರಿಮಳೆಯಲಿ ಒಂಟಿಯಾಗಿ ಒಬ್ಬನೆ ನೆನೆಯುತ ಸಾಗುವವನ ಜೊತೆ,
ಕೈಕೈ ಹಿಡಿದು ತೋಯಲು ನೀನೂ ಇರಬೇಕಿತ್ತು//

ಮಳೆಹನಿಯ ದನಿ ಮನಸೊಳಗೆ ಮುತ್ತ ಸುರಿದಿದೆ,
ಇರುಳು ಸುರಿದ ಮಳೆ ನೆಲವನ್ನಷ್ಟೇ ಅಲ್ಲ...
ಮನಸನೂ ಆರ್ದ್ರಗೊಳಿಸಿ ಹೋಗಿದೆ/
ಮನದ ಬರಡೂ ಸಹ ಬಾನು ಸುರಿಸಿದ ಕಂಬನಿಯಿಂದ...
ತೇವವಾಗಿ ವಿವರಿಸಲಾಗದ ತಂಪಲ್ಲಿ ತೊಯ್ದಿದೆ,
ಮುಗಿಲ ಹನಿ ಸಿಂಚನ ಮನಸೊಳಗೂ ಪಿಸುಗುಟ್ಟಿದೆ...
ಹೇಳಲಾಗದ ಒಂದು ಗುಟ್ಟು//

ಮಾತು ಮುಗಿದ ನಂತರ....

ಮತ್ತೆ ಆರಂಭವಾಗಿದೆ ಬಾಳಿನ ಪರಿಷೆ....
ಇದೊಂತರಹ ತಾಳ್ಮೆಯ ಪರೀಕ್ಷೆ,
ದುಃಖದ ವಾಸ್ತವವನ್ನ ಹಲ್ಲು ಕಿರಿದಿರುವ ಸೋಗಿನ ಮುಖವಾಡದಲ್ಲಿ....
ಅಡಗಿಸಿ ಬದುಕ ಜಾತ್ರೆಯಲ್ಲಿ ನಲಿಯುತ್ತೇನೆ,
ಇಷ್ಟವಿಲ್ಲದಿದ್ದರೂ/
ಸೋಗಿನ ಕಪಟ ಸಾಕು ಸಾಕಾಗಿದ್ದರೂ....
ಮುಖವಾಡದ ಮರೆಯಲ್ಲಿ ಒತ್ತರಿಸಿ ಬಂದು ಬಿಕ್ಕಳಿಸಿದರೂ....
ಮೇಲ್ನೋಟಕ್ಕೆ ಮಾತ್ರ ಮುಗುಳ್ನಗಲೇ ಬೇಕು,
ಏಕೆಂದರೆ ಈ ಜಗತ್ತು ಮೆಚ್ಚೋದು ಕೇವಲ ತೋರಿಕೆಯ ನಗುಮೊಗವನ್ನ....
ಸತ್ಯದ ಸಂಕಟಗಳಿಗೆ ಇಲ್ಲಿ ಮೂರುಕಾಸಿನ ಬೆಲೆಯಿಲ್ಲ//

ಗರಿಬಿಚ್ಚಿ ಕನಸಿನ ನಭಕ್ಕೆ ಏರಿದ ನನ್ನೆದೆಯ ಹಕ್ಕಿ....
ರೆಕ್ಕೆ ಸೋತು ನಿನ್ನ ನೆಲದ ಒಲವಿನಾಸರೆ ಅರಸಿ ದೃಷ್ಟಿ ಹಾಯಿಸಿದರೂ,
ದೂರ ದೂರದವರೆಗೂ ನಿರಾಶೆಯ ಕಡಲೊಂದೆ ಕಾಣಿಸಿದ್ದರಿಂದ....
ಅನಿವಾರ್ಯವಾಗಿ ಅಲ್ಲೇ ಇಳಿದು ಅಸುನೀಗ ಬೇಕಾಯ್ತು/
ಸಿಕ್ಕುಸಿಕ್ಕಾದ ಸಂಬಂಧಗಳ ಗೋಜಲನ್ನ,
ಸುಲಭವಾಗಿ ಬಿಡಿಸಲು ಒಲವಿನಿಂದಲೇ ಮಾಡಿದ ಹಣಿಗೆಯೊಂದು ಇದ್ದಿರುತ್ತಿದ್ದರೆ!/
ಸೊಗಸಾಗಿರುತ್ತಿತ್ತು....
ನೀನೇನಂತೀಯ?//

19 February 2011

ಸಾವಿರ ಹಣತೆಗಳ ಸಾಲು...

ಈ ಜಗದಲ್ಲಿ ಯಾರಿಗೆ ಯಾರೂ ಇಲ್ಲ,
ಸುಳ್ಳಿನ ಬುನಾದಿಯ ಮೇಲೆ ಸಂಬಂಧಗಳ ನೆಲೆಯಿದೆ....
ಉಸುಕಿನ ನೆಲಗಟ್ಟಿನ ಮೇಲೆ ಭಾವನೆಗಳ ಉಸಿರು ನಿಂತಿದೆ/
ಭ್ರಾಮಕ ತೋರಿಕೆಯ ಆತ್ಮೀಯತೆ ಆತ್ಮವಂಚನೆ ಎಂದು ತಿಳಿದೂ ಸಹ,
ನಟಿಸುವವರನ್ನು ಸಹಿಸಿಕೊಳ್ಳುವ ಮನಸ್ಸಿನ ಹುಚ್ಚು ಅಪೇಕ್ಷೆಯಾದರೂ ಏನು?
ಒಲವೆಂದರೆ ಪ್ರಾಮಾಣಿಕತೆ ಅಲ್ಲವೆ?
ಅಥವಾ ಪ್ರಾಮಾಣಿಕತೆಯ ಸೋಗನ್ನೆ ಒಲವೆನ್ನಬಹುದೆ?//

ಅಜ್ಞಾತ ಬಾಳು...
ಅಪರಿಚಿತ ಹಾದಿ,
ಅವ್ಯಕ್ತವೊಂದನ್ನು ಉಸಿರಾಗಿಸಿಕೊಂಡಾದ ಮೇಲೆ...
ಅಂಜಿಕೆ ಇನ್ನೆಲ್ಲಿ?/
ಪ್ರತಿಬಾರಿಯೂ ಒಂದು ಹೊಸ ಮುಖವಾಡ....
ಪ್ರತಿಯೊಂದು ಸಲ ಲಗ್ಗೆಯಿಟ್ಟರೂ ಹೊಸತೊಂದು ಕನಸಿನ ಘಡ,
ಎಲ್ಲಿ ಅದೇನೆ ಬದಲಾದರೂ ನಾನಂತೂ ಅದೇ ಹಚ್ಚ ಹಳಬ...
ಅದೆ ಹಳೆಯ ಗೋಳಿನ ನನ್ನ ಬಾಳಲ್ಲಿ ನಿನ್ನ ನೆನಪಾದಾಗ ಮಾತ್ರ ಬೆಳಕಿನ ಹಬ್ಬ//

07 February 2011

ತುಮುಲ...

ಸಾಲು ಸಾಲು ತಲ್ಲಣಗಳಲ್ಲಿ ತಣ್ಣಗಿನ ಮಂದ ಮಾರುತ....
ನಿನ್ನೊಂದು ತುಣುಕು ನೆನಪು ಎದೆಯೊಳಗೆ,
ಉಸಿರ ಲಯದಲ್ಲಿ ಏರುಪೇರು....
ಕಪೋಲಗಳಿಗೇಕೊ ಏರಿ ಕೊಂಚ ನೆತ್ತರು....
ಅವು ರಂಗಾದಂತೆ ಕಣ್ಣೆರಡೂ ಮಿನುಗಿ ಕವಿದ ಕತ್ತಲಲೂ ನನಗೆ ಬೆಳಕಿನ ಅನುಭವವಾದರೆ,
ಅಂದು ನಿನ್ನ ಕನಸು ಬಿದ್ದಿದ್ದೆ ಎಂದೇ ಅರ್ಥ/
ಮೌನಕೆ ನೂರು ಅರ್ಥ,
ಮಾತಿನ ಬಾಣಗಳಿಗಿಂತ ಅದು ಹರಿತ....
ವಿರಹದ ಕತ್ತಿಯ ಮೊನೆಯ ಮೇಲೆ ಕುಳಿತ ನನಗಿಂತ
ಚೆನ್ನಾಗಿ ಇನ್ಯಾರು ಅದನ್ನರಿಯಲು ಸಾಧ್ಯ?//

ಗೊತ್ತಿರದ ಉತ್ತರದ ಹಾದಿ ಕಾಯುತ...

ಹಾದಿ ಬಿಟ್ಟ ಹಸುವಿನಂತೆ ಮನಸೂ ಕೂಡ....
ನಿನ್ನ ಮನದ ಮನೆಯ ಕೊಟ್ಟಿಗೆಯ ಸೇರೊ ದಾರಿ ಅರಿಯದೆ ಕಂಗಾಲಾಗಿದೆ,
ಬೇರು ಕತ್ತರಿಸಿ ಹೋದ ವೃದ್ಧ ಮರದಂತಿಹೆನು...
ಆಧರಿಸಿ ಆಸರೆ ನೀಡುವವರಿಲ್ಲ,
ನಿನ್ನದೆ ನಿರೀಕ್ಷೆಯಲಿ ಕುಟುಕು ಜೀವ ಹೊತ್ತು ಕಾದಿಹೆನು....
ನೀನೆಲ್ಲಿ?/
ನೀರಿಲ್ಲದೆ ಬಾಡಿದ ಬಳ್ಳಿ ನಾನು....
ಸಾಯುವ ಸನ್ನಾಹದಲಿ ಅನಿವಾರ್ಯವಾಗಿ ಸಿಲುಕಿದೆನು....
ನೀನೆಲ್ಲಿ?.//


ಮುಗಿದ ತಿರಸ್ಕಾರದ ನಿನ್ನ ಮಾತುಗಳ ಮುಗ್ಗಲು ಇನ್ನೂ ಇದೆ....
ಕಣ್ಣೀರ ಮಗ್ಗುಲಲ್ಲಿ ಕುಳಿತ ನನ್ನ ಸುತ್ತಲು,
ಸದ್ದಿರದ ನಿಶಾರಾತ್ರಿಗಳ ಮೌನ ಕಲಕುವ ನನ್ನ ಬಿಕ್ಕಳಿಕೆಗಳಿಗೆ....
ನಿನ್ನ ನೆನಪಿನ ಲೇಪವಿದೆ/
ಹೌದು ಇನ್ಯಾರು ಇಲ್ಲ....
ನಿನ್ನಂತೆ ನನ್ನ ಆವರಿಸ ಬಲ್ಲವರು ನನಗ್ಯಾರೂ ಇಲ್ಲ...
ನನ್ನೆಲ್ಲ ಬಾಳ ವ್ಯಾಪಿಸಿಕೊಳ್ಳ ಬಲ್ಲವರು ಯಾರೂನೂ ಇಲ್ಲ,
ಕಾರಣದ ಹಂಗಿಲ್ಲದೆ ನಗುವ ಮಗುವಂತೆ...
ಮುತ್ತುವ ದುಂಬಿಯಿಂದಮುದ್ದಿಸಿ ಕೊಳ್ಳುವ ಹೂಗಳ ನಗುವಂತೆ.....
ಬೊಚ್ಚುಬಾಯಿಯ ಅಜ್ಜಿಯೊಂದಿಗೆ ಕಿಲ ಕಿಲ ಗುಟ್ಟುವ ಬೊಚ್ಚು ಬಾಯಿಯದೆ ಆದ ಮೊಮ್ಮಗುವಿನಂತೆ....
ನಿನ್ನ ನೆನಪು//


ಮೌನ ರಾಗಗಳಿಗೆ ಎದೆಯಾಳದ ನೋವಿನೆಳೆಗಳ ಸಂಯೋಜಿಸಿ...
ಸೃಷ್ಟಿಸಿದ ಹಾಡಿನಲ್ಲಿ ಕೇವಲ ವಿರಹದ ವೇದನೆಯೇ ತುಂಬಿತ್ತು,
ನಿನ್ನ ನೆನಪಿನ ನೆರಳಷ್ಟೂ ಅದರಲ್ಲಿತ್ತು/
ನಡೆವ ಘಟನೆಗಳೆಲ್ಲ ನನ್ನ ಕೈ ಮೀರಿದವು...
ನನ್ನ ನೆಮ್ಮದಿಯ ಒರತೆಯನ್ನೆಲ್ಲ ಹನಿಯೂ ಬಿಡದೆ ಅವು ಹೀರಿದವು...
ಮನದೊಳಗೆ ಭಾವಗಳ ಕಾಲ್ಗೆಜ್ಜೆ ಕುಲುಕುವ ಸದ್ದಲ್ಲಿ ನನ್ನೆಲ್ಲ ನಿಟ್ಟುಸಿರುಗಳು ಕರಗಿಹೋದವು//

ನೋಡು ಇಲ್ಲೊಮ್ಮೆ...

ಯಾವುದೊ ಮೂರನೆ ದರ್ಜೆಯ ಸಿನೆಮಾವೊಂದಕ್ಕೆ 'ಪಾರಿಜಾತ'ವೆಂದು....
ಹೆಸರಿಟ್ಟ ಸುದ್ದಿ ಕೇಳಿ ಮನಸ್ಸು ಮುದುಡಿತು...
ಸುರಲೋಕದ ಆ ಪುಷ್ಪಕ್ಕೆ ಹೋಲಿಸಿಕೊಳ್ಳಲೂ ಒಂದು ಯೋಗ್ಯತೆ ಇರಬೇಕು,
ಈಗ ನೋಡು ಉದಾಹಾರಣೆಗೆ ನೀನೆ ಇದ್ದೀಯಲ್ಲ...!/
ಮುಂಬೆಳಗನ್ನು ಮೀಯಿಸುವ ಇಬ್ಬನಿ....
ಇನ್ನು ಕೇವಲ ಕೆಲವೆ ದಿನಗಳ ಅತಿಥಿ,
ಒಡ್ದ ಬಿಸಿಲಿಗೆ ಸ್ನಾನದ ಭಾಗ್ಯವಿಲ್ಲ ಮಳೆಯೂ ಬರುವವರೆಗೂ ...
ವೈದ್ಯ ಹೇಳಿದ್ದೂ ,ರೋಗಿ ಬಯಸಿದ್ದೂ ಒಂದೇ ಆದಂತಿದೆ...!//


ಮತ್ತೆ ನಿನ್ನ ನೆನಪಾದಾಗ ನನ್ನವೆರಡು ಕಂಬನಿ ಹನಿಗಳು....
ನೆಲಕ್ಕಿಳಿದು ನೀ ಬರುವ ಅಂಗಳವ ಹಸಿಯಾಗಿಸುತ್ತವೆ,
ಕಣ್ಣ ಕಾಲುವೆಯಲ್ಲಿ ಹರಿದ ನೀರ ಕೋಡಿಗೆ ಒಂದು ದಿಕ್ಕಿತ್ತು......
ನೀ ಬಿಟ್ಟು ಹೋದ ತಿರಸ್ಕಾರದ ನೋವಿನ ಮೇಲೆ ಅದರ ಸಂಪೂರ್ಣ ಹಕ್ಕಿತ್ತು/
ನೆತ್ತರಿಗಿಂತ ಗಟ್ಟಿಯಾದ ಬಾಂಧವ್ಯದಲ್ಲಿ ಹುಟ್ಟಿದ ಬಿರುಕಿಗೆ ಮೂಲವೇನು?
ಒಗ್ಗೂಡಿಸುತ್ತದೆ ಎಂಬ ವಿಶ್ವಾಸ ಹುಟ್ಟಿಸಿದ್ದ ಒಲವಿಗೆ ದೂರಾಗಿಸುವ ಶಕ್ತಿ ಬಂದದ್ದಾದರೂ ಹೇಗೆ?//


ಇಲ್ಲೊಂದು ನಿರೀಕ್ಷೆಯಿದೆ,
ಅಲ್ಲೊಂದು ಅಪೇಕ್ಷೆ...
ನಡುವೆ ನಾವೆ ಎಬ್ಬಿಸಿಕೊಂಡಿರುವ ಗೋಡೆ.
ಅಂತರ ಸಹಿಸಲಸಾಧ್ಯ...
ಸೇರಿತಾದರೂ ಹೇಗೆ ಕಳೆದು ಎಲ್ಲ ಕೃತಕ ಭಿಡೆ/
ತಳಕಿತ್ತು ಹೋದ ಮರದ ನಾವೆಯಲ್ಲಿ ಕನಸ ಸಾಗರ ದಾಟುವ ಆಸೆ ಉತ್ಕಟ...
ಏನು ಮಾಡಲಿ ಹೇಳು? ಮನಸು ತುಂಬಾ ಉದ್ಧಟ,
ಸುರಿದ ಸ್ವಪ್ನದ ಹೂಗಳೆಲ್ಲ ಹಾರ ಹರಿದು ಮಣ್ಣು ಮುಟ್ಟಿದವು...
ಹೊಸ ಕನಸಿಗೆ ಪ್ರವೇಶವಿಲ್ಲದ ಕಂಗಳಲ್ಲಿ ಕೇವಲ ನಿರಾಸೆಯ ನೀರಷ್ಟೆ ಹುಟ್ಟಿದವು//

ಯಾರೊಂದಿಗೂ...ಇನ್ಯಾರೊಂದಿಗೂ...

ಯಾರೊಂದಿಗೂ ಹಂಚಿಕೊಳ್ಳಲಾಗದೆ ಮೌನವಾಗಿ....
ನನ್ನೊಳಗೆ ನಾ ಅದುಮಿಟ್ಟುಕೊಂಡಿರುವ ಭಾವಗಳೆಲ್ಲ,
ಅದ್ಯಾವಾಗ ಸಿಡಿದು ನನ್ನ ತಲೆಯನ್ನ ಸಹಸ್ರ ಹೊಳಾಗಿಸುತ್ತದೋ ಎಂಬ ಆತಂಕ ನನಗೆ...
ಇದ್ಯಾವುದನ್ನೂ ನೀನಲ್ಲದೆ ಇನ್ಯಾರೊಂದಿಗೂ ನಾ ಹಂಚಿಕೊಳ್ಳಲಾರೆ/
ಆಯ್ಕೆ-ಆದ್ಯತೆ-ಅನಿವಾರ್ಯತೆಗಳು ಜೀವನದ ದಿಕ್ಕನ್ನ ನಿರ್ದೇಶಿಸುತ್ತವೆ...
ನನಗೊ ನೀನೆ ಆರಂಭದ ಆದ್ಯತೆ,
ಮೊದಲ ಆಯ್ಕೆ,ಹಾಗು ತುದಿಯ ಅನಿವಾರ್ಯತೆ.....
ಆದರೆ ನಿನಗೆ ನಾನು ಆಯ್ಕೆಯೂ ಅಲ್ಲ,
ಆದ್ಯತೆಯೂ ಅಗುಳಿದಿಲ್ಲ,
ಅನಿವಾರ್ಯನಂತೂ ಮೊದಲೆ ಅಲ್ಲ ಅನ್ನುವ ಅರಿವಿದೆ ನನಗೆ....
ಆದರೇನು ಮಾಡಲಿ ಮನಸ್ಸು ಸ್ವಲ್ಪ ಮೊಂಡು...!//


ನಾನೊಬ್ಬ ಮರುಳ,
ನಿನಗಾಗಿ ಇರುಳ ಬಾನತುಂಬ ಮಿನುಗಿಸುವ ನಿರೀಕ್ಷೆಯ ತಾರೆಗಳನ್ನ....
ಬಿಡುಗಣ್ಣಲ್ಲಿ ಕನಸ ಚಾಪೆಯ ಮೇಲೆ :
ಮನಸ ಮನೆಯಂಗಳದಲ್ಲಿ ಅಂಗಾತ ಮಲಗಿ ರಾತ್ರಿಪೂರ ನೋಡುತ್ತಾ ಹುಡುಕುತ್ತೇನೆ...
ನಿರಾಶನಾಗುತ್ತೇನೆ/
ಹಗಲ ಬೆಳಕು ಸೋರುವ ಛಾವಣಿಯ ಮಾಡಿನಂಚು
ಮೂಡಿಸುವ ಬಿಸಿಲ ಕೋಲಿನಲ್ಲಿ ನಿನ್ನ ಬೆಚ್ಚನೆ ಭಾವವಿದೆ,
ಬೆಳದಿಂಗಳ ಚೂರುಗಳನ್ನೆಲ್ಲ ಮನೆಯೊಳಗೆ ಚೆಲ್ಲುವ....
ಒಡೆದ ಮಾಡಿನ ಹಂಚುಗಳೆಡೆಗಳಲ್ಲಿ ನಿನ್ನ ನಗುವಿನ ಹಾಲ್ಬೆಳಕು ಚಲ್ಲಿದೆ//


ಕಿಟಕಿಯ ದಳಿಗಳಿಂದ ಸಾಲಾಗಿ ಇಳಿದ ಮುಂಬಿಸಿಲ ಎಳೆಗಳಿಂದ
ನಿನಗಾಗಿ ಒಂದು ಕನಸ ಹೆಣೆಯುತೀನಿ..
ಮುಂಜಾವಿನ ಬೆಚ್ಚನೆ ಕಾವಿನಲ್ಲಿ ಇಬ್ಬನಿ ಸುರಿವ ಸಂಭ್ರಮದ ಹನಿಗಳಿಗಳಿಂದ
ನಿನಗಾಗಿ ಮಾಲೆಯೊಂದನು ಪೋಣಿಸುತ್ತೀನಿ,
ನೆಲವ ತೋಯಿಸುವ ಬೆಳಕ ಮಳೆಯಲ್ಲಿ ಮಿಂದ ನಿನ್ನ ನೋಡುವ ತವಕವ ಅದುಮಿಟ್ಟು ಕೊಳ್ಳುತೀನಿ...
ನಿನ್ನಿಂದ ಮರೆಯಾಗಿಯೆ ಇದ್ದು ನನ್ನೆಲ್ಲ ಕನಸುಗಳ ನಿರ್ದಯವಾಗಿ ಕತ್ತು ಹಿಸುಕಿ ಕೊಲ್ಲುತ್ತೀನಿ/
ತಿರುಕನ ಕನಸು ಕಾಣುವುದರಲ್ಲೂ ....
ಹಗಲು ಕನಸುಗಳ ಗುಚ್ಛ ಹೆಣೆಯುವುದರಲ್ಲೂ,
ಇರುಳನಿದ್ದೆ ಕಳೆದುಕೊಂಡು ಮನಸಿನಾಳ ಅಸಹನೆ ತುಂಬಿಕೊಳ್ಳುವುದರಲ್ಲೂ ಒಂದು ಸುಖವಿದೆ//

ಸಂವೇದನೆ....ವೇದನೆ...

ತಳವಿರದ ಬಾವಿಯೊಳಗೆ ಕೊನೆಗಾಣದ ಕತ್ತಲ ಕೂಪದಲಿ....
ನಿನ್ನ ಕೈ ಜಾರಿ ಬಿದ್ದಂತೆ ;
ನೀ ನನ್ನೊಂದಿಗಿದ್ದಾಗ ಆಗಾಗ ಕನಸಾಗುತ್ತಿತ್ತು,
ಅದೇ ಕನಸಲ್ಲಿ ನಿನ್ನ ಕ್ಷೀಣ ಧ್ವನಿಯ ಬೋಬ್ಬೆಯೂ ಕೇಳಿಸುತ್ತಿತ್ತು....
ಆದರೀಗ ಕನಸು ನಿಜವಾಗಿದೆ,
ಬೊಬ್ಬಿಡಲು ಯಾರೂ ಇಲ್ಲ...
ನೀನೆ ದೂಡಿದ ಬಾವಿಯೊಳಗೆ ನಾನಿನ್ನೂ ಆಳ ಆಳಕ್ಕೆ ಜಾರುತ್ತಲೆ ಇದ್ದೇನೆ/
ಆತ್ಮಸಾಕ್ಷಿಯನ್ನು ಮಾತ್ರ ನಂಬುವ ನನಗೆ...
ನಿನ್ನ ನನ್ನ ನಡುವೆ ಇನ್ಯಾರ ಮಧ್ಯಸ್ತಿಕೆಯ ಅಗತ್ಯ ಯಾವಾಗಲೂ ಕಂಡು ಬಂದಿರಲಿಲ್ಲ...
ಮುಂದೆಯೂ ಕಂಡು ಬರೋದಿಲ್ಲ//


ಎಳೆ ಚಿಗುರನ್ನು ಮೆಲ್ಲಗೆ ತಾಯಿಗಿಡದಿಂದ ಬಿಡಿಸಿ....
ಪದೆಪದೆ ಅದಕ್ಕೆ ತುಟಿಯೊತ್ತುವ ಬಾಲ್ಯದಿಂದ ಬಂದ ಅಭ್ಯಾಸವೊಂದಿದೆ ನನಗೆ,
ಆ ಎಲೆಗಳ ಮೃದುಕಂಪಿನಲ್ಲೂ ನಿನ್ನನ್ನೆ ಕಾಣುತ್ತದೆ ಕಣ್ಣಿಲ್ಲದ ನನ್ನವೆರಡು ತುಟಿಗಳು...
ಅರಳು ಪಾರಿಜಾತವನ್ನ ಪರಿಮಳ ಆಘ್ರಾಣಿಸುವ ಸಲುವಾಗಿ ನಾಸಿಕಕ್ಕೆ ಸೋಕಿಸುತ್ತೇನೆ,
ಆ ಸುವಾಸನೆಯೂ ಕೂಡ ಅದು ಹೇಗೊ ನಿನ್ನನ್ನೆ ಹೋಲುತ್ತದೆ...
ಅಲ್ಲಿಯೆ ನನ್ನ ದುರ್ಬಲ ಮನಸು ನಿನ್ನೆಡೆಗೆ ಸೋಲುತ್ತದೆ...!/
ಯಾರೂ ನಮಗೆ ಸೇರಿದವರಲ್ಲ...
ಯಾರೊಬ್ಬರೂ ಇಲ್ಲಿ ಶಾಶ್ವತ ನಮ್ಮೊಂದಿಗಿರೋದಿಲ್ಲ ಎಂಬ ವಾಸ್ತವದ ಅರಿವಿದ್ದಂತೆಯೂ,
ನಾನೇಕೆ ನಿನ್ನ ಬಿಡಲಾಗದಷ್ಟು ಅಪ್ಪಿಕೊಂಡಿದ್ದೇನೆ?
ಉತ್ತರ ಸ್ವತಹ ನನಗೂ ಗೊತ್ತಿಲ್ಲ//


ಸೂಕ್ತ ಪದಗಳ ಕೊರತೆ...
ಭಾವನೆಗಳನ್ನು ಮಾತಾಗಿಸುವ ತವಕವ ತಾಕದ ಭಾಷೆಯ ನಿರ್ದಯತೆ,
ನನ್ನ ತುಟಿಗಳೆರಡನ್ನೂ ಹೊಲೆದು ಮನಸನ್ನು ಮೂಕವಾಗಿಸಿವೆ/
ಎದೆಯ ಒಳಕಿಂಡಿಯಲ್ಲಿ ಬರುವ ಚೂರು ಬೆಳಕಿನ ಆಸರೆಯಲ್ಲಿ,
ನನ್ನೆಲ್ಲ ಉಸಿರು ನಿಂತಿದೆ ಎನ್ನುವುದು ನಿನಗೂ ಗೊತ್ತು...
ಆದರೂ ನೀನೇಕೆ ಇಷ್ಟು ನಿರ್ದಯಿ...
ಅರ್ಥವೆ ಆಗುತ್ತಿಲ್ಲ//.

ಮನದಾಲಿಕೆ...

ಎರಡು ಅಲೆಗಳ ನಡುವಿನ ಬಿಕ್ಕಳಿಕೆಗಳ ಆಲಿಸುತ್ತ...
ಹಗಲಿರುಳಿನ ನಡುವಿರುವ ಮೌನವ ಅನುಭವಿಸುತ್ತ...
ನಿನ್ನೆಲ್ಲ ಸಂತಸದ ಕ್ಷಣಗಳಿಗೆ,
ನನ್ನ ನೋವಿನ ಸುಂಕ ಪಾವತಿಸುತ್ತ....
ನಿನ್ನ ಬರುವಿಕೆಯನ್ನ ಕಾಯುವುದರಲ್ಲೂ ಒಂದು ಸಂಭ್ರಮದ ನೆಮ್ಮದಿಯ ಹೊಳಹಿದೆ/
ಕಾಲಕ್ಕೆ ಕಟ್ಟಿಲ್ಲ...
ದಿನಗಳು ಸರಿದು ಹೋದರೇನು ನನ್ನೆದೆಯ ಭಾವದ ಬಾವಿ ಬತ್ತಿಲ್ಲ...
ಗೊತ್ತಿಲ್ಲ ನಿನ್ನ ಮನಸ್ಥಿತಿ ;ಬಹುಷಃ ಅಲ್ಲಿ ನನಗಾಗಿ ಹನಿ ಒಲವೂ ಇನ್ನುಳಿದಿಲ್ಲ.
ಆದರೇನು ನನ್ನೊಳಗಿರುವ ನಿನ್ನೆಡೆಗಿನ ಪ್ರೀತಿಯ ಹೂವು ತುಸು ಮಾತ್ರವೂ ನಲುಗಿಲ್ಲ//


ಇದ್ದೆಲ್ಲ ಅಭಾವಗಳೂ ಸರಿದು ಹೋಗಿದ್ದವು ಕಂಡು ನನ್ನ ಬಾಳಲ್ಲಿ ನಿನ್ನ ,
ಆದರೆ; ಹೋಗುವಾಗ ನೀ....ನಿನ್ನ ಅಭಾವವನ್ನು ಮಾತ್ರ ಉಳಿಸಿಯೆ ಹೋಗಿದ್ದೆ...!
ನಿನ್ನ ಒಲವ ವ್ಯಾಪಾರದಲ್ಲೂ ನ್ಯಾಯವಿತ್ತು...
ಲಾಭದ ಧಾರೆಯೆಲ್ಲ ನಿನ್ನೆಡೆಗೆ ಹರಿದರೂನೂ,
ನಷ್ಟದ ಕಂಬನಿ ಧಾರೆಯಾದರೂ ನನ್ನೆಡೆಗೆ ಮರುಗಿತ್ತು/
ಯೋಚಿಸಲಿಕ್ಕೆ ಅರೆಕ್ಷಣವನ್ನೂ ಕೊಡದಿದ್ದರೂನು...
ನಿದ್ದೆಯಿರದ ರಾತ್ರಿಗಳಲ್ಲಿ ನಿನ್ನನೆ ಕನವರಿಸಲು ಇಡೀ ಬಾಳನ್ನೆ ಉಳಿಸಿ ಹೋಗಿದ್ದೀಯಲ್ಲ ಸಾಕಲ್ಲ?
ಬೇಕಿನ್ನೇನು?!//

ನಿತ್ಯದ ಜಂಜಡದಲ್ಲಿ ನಿನ್ನದೊಂದು ನೆನಪಷ್ಟೆ ದೊಡ್ಡ ಬಿಡುಗಡೆ....
ನಿನ್ನ ಸ್ಮೃತಿಯೇ ನನ್ನ ದಿನದಾರಂಭ ಅದೆ ತಾನೆ ದಿನದ ಕಟ್ಟಕಡೆ?
ಕಾಲು ಸಾಗಿದ ಕಡೆ ವಿಧಿಯು ದಬ್ಬಿದೆಡೆ....
ಬಾಳಿನುದ್ದಕೂ ಅಲೆಮಾರಿಯಾಗಿ ಸುತ್ತುತ್ತಿದ್ದರೂ ವಸುಂಧರೆಯ ಉದ್ದಗಲ,
ನನ್ನೊಡನೆ ಸದಾ ಇರುವುದು ನೀನು ನಿನ್ನ ನೆನಪು/
ನಾನೆಷ್ಟು ಹೇಳಿದರೂ ನೀ ಅದೊಂದನ್ನೂ ಪರಿಗಣಿಸದೆ ಅಸಾಧ್ಯ ಹತ್ತಿರವಾದೆ....
ಆಗಲೂ ಗೆದ್ದದ್ದು ನಿನ್ನದೇ ಹಟ,
ಈಗೆಷ್ಟು ಬೇಡಿಕೊಂಡರೂ ಕಿಂಚಿತ್ತೂ ದಯೆ ತೋರದೆ ಇತ್ತ ನನ್ನ ತೊರೆದೆ....
ಈಗಲೂ ಗೆದ್ದದ್ದು ನಿನ್ನದೇ ಹಟ ;ಮಧ್ಯ ಎರಡೂ ಪರಿಸ್ಥಿತಿಯ ಸಂತೃಸ್ತ ಮಾತ್ರ ನಾನು...!//

ಆಸರೆ....

ನಿರೀಕ್ಷೆಗಳಿದ್ದರೂ ನೂರು...
ಸಂಕಟ ಸಾವಿರವಿದೆ ಅನ್ನೋದು ವಾಸ್ತವ,
ಪ್ರೀತಿಯ ಮಂಜುಗೆಡ್ಡೆ ಕರಗಿದ ನಂತರ ಉಳಿದದ್ದು ಕೇವಲ ತೊಟ್ಟಿಕ್ಕುವ ಕಣ್ಣೀರ ಹನಿ...
ನೆನಪಿನ ನಾವೆಯಲ್ಲಿ ಜೊತೆಯಾಗಿ ಸಾಗುತ್ತಿದ್ದಾಗ ನನ್ನ ಕಿವಿಯಲ್ಲಿ ಉಲಿಯುತ್ತಿದ್ದ ನಿನ್ನ ಪಿಸುದನಿ/
ಉತ್ತರಗಳು ಬೇಕಿದ್ದವು ಗೊಂದಲ ಹುಟ್ಟಿಸಿದ ಹಲವು ಪ್ರಶ್ನೆಗಳಿಗೆ...
ಏನೊಂದನೂ ಸ್ಪಷ್ಟಪಡಿಸದೆ ನೀ ದೂರ ಸರಿದ ಆ ಘಳಿಗೆ,
ಈಗ ಈಹೊತ್ತಿನಲ್ಲಿ ಎಲ್ಲಾ ಅರಿವಾಗುತ್ತಿದೆ...
ಯಾವೊಂದು ಉತ್ತರದ ನಿರೀಕ್ಷೆಯೂ ಇನ್ನುಳಿದಿಲ್ಲ...
ಏಕೆಂದರೆ ಕೊಡಲು ನಿನ್ನ ಬಳಿಯೆ ಅವಿಲ್ಲವಲ್ಲ...!//


ಹೊಲಿದ ತುಟಿಗಳು...
ಮುದುಡಿ ಬಾಡಿದ ಮನಸು....
ಹಗಲೆಲ್ಲ ಕನಸು....
ವೃತವೇನೂ ಇಲ್ಲದಿದ್ದರೂ,
ನಿತ್ಯ ಇರುಳ ಜಾಗರಣೆ....
ನಿನ್ನ ನೆನಹು......
ಇಷ್ಟು ಖಾತ್ರಿಯಾಗಿರುವ ನನ್ನ ಬಾಳ ಜಾತ್ರೆಯಲ್ಲಿ,,,
ನಿತ್ಯ ನಿನ್ನ ನೆನಪುಗಳದೆ ರಾಜಬೀದಿ ಉತ್ಸವ/
ನೋಡದ ;ಕೇಳದ ದೇಶದಲ್ಲಿ ನಿನ್ನ ಕಳೆದು ಕೊಂಡ ನಾನು ನನ್ನ ಪಾಲಿಗೆ ಈಗ ತಬ್ಬಲಿ...
ಮನದ ವೇದನೆ ಹೆಚ್ಚಿದಾಗ ಕಣ್ತೋಯಿಸೊ ಕಂಬನಿಯ ಮಬ್ಬಲಿ, ಹೇಳು?
ಸಾಂತ್ವಾನ ಅರಸಿ ನಾ ಇನ್ಯಾರ ಹೆಗಲ ತಬ್ಬಲಿ?//


ಅನಾಮಿಕ ಮೋಡವೊಂದರ ತೆಕ್ಕೆಯಿಂದ ಮೈ ಮುರಿಯುತ್ತ ಮೇಲೇಳುವ ನೇಸರನ ಆಲಸ್ಯ ..
ಕಂಡ ನನಗೇಕೆ ನಿನ್ನ ನೆನಪಾಯ್ತು?
ಅವನ ಸುತ್ತಲೂ ಹರಡಿದ್ದ ಕೆಂಪನು ಹೋಲುವಂತೆ,
ನನ್ನ ಮುಖವೇಕೆ ನಿನ್ನ ನೆನಪಲ್ಲಿ ರಂಗಾಯ್ತು?
ನೀನೂ ಆ ಕ್ಷಣ ಒಂದುವೇಳೆ ನನ್ನೊಂದಿಗೆ ಇದ್ದಿದ್ದರೆ....
ಇಬ್ಬರೂ ಕೂಡಿ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿತ್ತು/
ಸುತ್ತ ನೆರೆದ ಕನಸುಗಳ ಕನ್ನಡಿಗಳಲ್ಲಿ ಕಾಣುವ ಬಿಂಬಗಳಲಿ....
ನಿನ್ನ ನಗು ಕಾಣದೆ ಕೆಂಗೆಟ್ಟ ನನಗೆ ಬೇಕಿದೆ ಒಂದೇ ಒಂದು ನಿನ್ನ ಮುಗುಳ್ನಗೆಯ ಆಸರೆ,
ಮತ್ತದೆ ಮೆಲುಮಾತುಗಳ ಸಂಗಡ ಬೆಚ್ಚಗೆ ಬೆರೆತ ನಿನ್ನೊಲವಿನ ಒಂದೇ ಒಂದು ಕರೆ//

ನಿನ್ನೆದೆಯಲ್ಲಿ ನನ್ನೊಲವ ನೆಲೆ...

ಇನ್ನುಳಿದಿರುವ ಕೊನೆ ಭರವಸೆ ....
ನಿರೀಕ್ಷೆ ಕೇವಲ ಅದರದ್ದೆ....
ನೆನಪುಗಳೊಂದೆ ಶಾಶ್ವತ,
ಅದೊಂದೆ ನನ್ನ ಸ್ವಂತ-ನನ್ನೆದೆಯ ಖಾಸಗಿ ಸ್ವಗತ/
ಸುಳ್ಳಿರಲಾರದು ನಿನ್ನ ಹಿಂದಿನ ನುಡಿಯಲ್ಲಿ...
ಕಪಟ ಕಾಣುತ್ತಿಲ್ಲ ನಿನ್ನ ಇಂದಿನ ನಡೆಯಲ್ಲಿ,
ನನ್ನ ಪಾಲಿಗೆ ಹತಾಶ ಗೊಂದಲ ಮಾತ್ರ ಉಳಿದಿದೆ//

ಒಲವು ಎರಡು ಜೀವಗಳನ್ನ ಒಂದುಗೂಡಿಸುವಂತದ್ದು ಅಂದುಕೊಂಡಿದ್ದೆ....
ಅದು ಹೇಗೆ ತದ್ವಿರುದ್ದವಾಯ್ತೋ ನನ್ನ ವಿಷಯದಲ್ಲಿ ತಿಳಿಯುತ್ತಿಲ್ಲ/
ಕಳಿಯುವುದಕ್ಕೂ ಕೊಳೆಯುವುದಕ್ಕೂ ವ್ಯತ್ಯಾಸ ಕೇವಲ ನೂಲಿನೆಳೆಯಷ್ಟು..
ನೀನಿಲ್ಲದ ನನ್ನ ಬಾಳಿಗೆ ಇದನ್ನು ಅನ್ವಯಿಸಿದಾಗ ಅನಿಸುತ್ತೆ,
ಒಂಟಿಯಾಗಿ ಈಗ ಜಗದ ಕಣ್ಣಲ್ಲಿ ನನ್ನ ಬೆಲೆಯೆಷ್ಟು?//

ಪಾಲಿಗೆ ಬಂದದ್ದನ್ನು ಇಷ್ಟವಿಲ್ಲದಿದ್ದರೂ ಅನುಭವಿಸುವೆ...
ಏಕೆಂದರೆ ನನಗೆ ಗೊತ್ತಿರೊ ಹಾಗೆ ನಿನ್ನ ಸುಖ ಸಂತೋಷದ ಬೆಲೆ ನನ್ನ ಮೌನ ರೋಧನ,
ನಿನ್ನೊಲವು ಸೋಕಿದ ಮನದಲ್ಲಿ ಅದೆ ಹಳೆಯ ದಿನಗಳ ನೆನಪುಗಳ ಕಲರವ...
ಅಲ್ಲೆಲ್ಲ ನಿನ್ನುಸಿರು ತಾಕಿದ ಕನಸುಗಳ ಪರಿಮಳದ ಸಡಗರ/
ಮನಸಿಗೇಕೊ ವಿಪರೀತ ಕಾತರ ನಿನ್ನುಸಿರ ಸಂಗಡ ನೆನೆದು ಮೀಯಲು...
ಕ್ಷಣ ಮಾತ್ರ ಸಿಗುವ ನಿನ್ನ ಕನಸಿನ ಸಾಂಗತ್ಯಕ್ಕೆ,
ನನ್ನ ಇರುಳ ಅರೆವಾಸಿ ನಿದ್ದೆ ಮೀಸಲು//

ನಿನ್ನೆಡೆಗೆ....

ಭರವಸೆ ಕಳೆದು ಕೊಂಡ ಬಾಳಿನಲ್ಲಿ...
ನೆನಪುಗಳ ಸಾಂಗತ್ಯವೊಂದೆ ಉಸಿರಾಡಲು ಸ್ಪೂರ್ತಿ...
ಖಾಲಿ ರೈಲುಡಬ್ಬಿಗಳಂತೆ ಮನಸಿನ ಮಾತುಗಳೆಲ್ಲ ,
ಹಂಚಿಕೊಳ್ಳುವವರ ಜೊತೆ ಸಿಗದೆ ಹಾಗೆ ಶೂನ್ಯದಲ್ಲಿ ಕರಗಿ ಕಣ್ಮರೆಯಾಗುತ್ತಿವೆ/
ಇರುಳಲ್ಲೀಗ ಅಕ್ಷರಶಃ ನಿದ್ದೆಯಿಲ್ಲ...
ಅಪ್ಪಿತಪ್ಪಿ ಚೂರು ಕಣ್ಣಡ್ಡವಾದರೂ ನೀನೆ ಕನಸಲ್ಲೂ ನೆನಪಾಗಿ ಕಾಡುತ್ತೀಯಲ್ಲ,
ಭಾವದ ಬಲೆಯಲ್ಲಿ ಸಿಲುಕಿದ ಮನಸು....
ಒಲವ ಜೇಡನ ನಿತ್ಯ ಶಿಕಾರಿ...
ಪ್ರೀತಿಯಿಲ್ಲದ ಮೇಲೆ ಇದ್ದೇನು ಸುಖ,ಅದೆಷ್ಟೇ ಸಿರಿವಂತಿಕೆ ಕೈಗೆಟುಕಿದರೂ ನಾ ಭಿಕಾರಿ//


ತುಟಿ ಹೊಲಿದ ಹಾಗೆ...
ಮಾತುಗಳನೆಲ್ಲ ಮರೆತ ಹಾಗೆ...
ಮನದ ಮನೆಯಂಗಳದ ಮಾವಿನ ಮರದ ಟೊಂಗೆಯಲ್ಲಿ ಕುಳಿತ ಕಾಗೆ,
ವಿಲಕ್ಷಣವಾಗಿ ಕೂಗುತ್ತಲೇ ಇದೆ....
ಬರಲಿರುವುದು ನೀನೇನಾ? ಏಕೊ ನನಗನ್ನಿಸುತ್ತಿದೆ ಹೀಗೆ/
ಶೂಲಕ್ಕೇರಿಸಿದ ಒಲವ ಆತ್ಮಕ್ಕೆ ಮತ್ತೆ ಮತ್ತೆ ಹೊಡೆದ ಮೊಳೆಗಳೆ?
ನನ್ನೊಲವಿನೆಡೆಗೆ ನೀ ಬೀರುವ ಪರಮ ನಿರ್ಲಕ್ಷ್ಯದ ನೋಟ,
ಸುರಿವ ಮಳೆಯ ಧಾರೆಗಳಿಗೆ ನನ್ನ ಎದೆ ಮಿಡಿತ ಕೇಳೋದು ಯಾವಾಗಲೂ....
ಮೋಡವಾಗಿ ನೀಲಾಗಸದಲ್ಲಿ ತೇಲಿ ಬರುವಾಗಲೊಮ್ಮೆ ನಿನ್ನ ಮೊಗ ಕಂಡಿತ್ತ?
ನಿನ್ನ ಕಣ್ಣುಗಳಲ್ಲಿ ಮತ್ತದೆ ಎಂದಿನ ಹೊಳಪಿತ್ತ?
ಅನ್ನೋ ಪ್ರಶ್ನೆಯನ್ನೆ//


ಮೌನವೆ ಮನದ ವೇದನೆಗೆ ಮದ್ದು...
ನನ್ನ ಒಲವಿನ ಸತ್ಯಸತ್ಯತೆಗೆ ರುಜುವಾತು ಕೊಡುವ ದರ್ದು ನನಗಿಲ್ಲ,
ನನ್ನೆದೆಗೆ ಗೊತ್ತಿದೆ ನಿನ್ನೆಡೆಗಿನ ನನ್ನ ಪ್ರೀತಿಯ ಪ್ರಾಮಾಣಿಕತೆ...
ಸುಮ್ಮನಿರುವ ;ಒಂಟಿತನ ಕಾಡುವ ಮೌನದ ಹಿಂದೆಯೂ ವೇದನೆಯಿದೆ....
ಆದರೂ ನೀ ನನ್ನ ಒಂದೊಮ್ಮೆ ಆವರಿಸಿದ್ದೆ ಅನ್ನೋದಷ್ಟೆ ಸಾಂತ್ವಾನ/
ಕನಸಿನ ಮನೆಯ ಗೋಡೆಗೆ ಅಂತಹದ್ದೊಂದು ಕಿಡಕಿ ಇಡಿಸಬೇಕಿದೆ...
ತೆರೆದಾಗ ಕೇವಲ ನೀಲಾಗಸ ಕಾಣಬೇಕು,
ಅಲ್ಲಿ ನಿನ್ನ ಬಿಂಬ ಮಾತ್ರ ಹೊಳೆಯುತಿರಬೇಕು....
ಆ ಮನೆಯ ದಾರಿಯ ತಿರುವಿನ ಕೊನೆಯಲ್ಲೊಂದು ಮಾಮರ ನೆಡಬೇಕಿದೆ....
ನೀ ಬಂದಾಗ ಬೀಸಲು ಚಾಮರ...
ಕೋರಲು ಸ್ವಾಗತ ಕೋಗಿಲೆಯ ಇಂಚರ....
ಆದರೆ ನಿನ್ನ ಹುಸಿ ಒಲವ ಪ್ರತ್ಯುತ್ತರಕ್ಕೆ ಮುದುಡಿರುವ ಮನಸ್ಸು,
ಇನ್ನೆಂದೂ ಮರಳಿ ಅರಳುವ ದೂರದ ಲಕ್ಷಣಗಳೂ ಕಂಡು ಬರುತ್ತಿಲ್ಲ//

ಉಸಿರಾಡಲು ಸ್ಪೂರ್ತಿ...

ಉಸಿರ ಲಯದಲ್ಲಿ ಏರುಪೇರು....
ಕಪೋಲಗಳಿಗೇಕೊ ಏರಿ ಕೊಂಚ ನೆತ್ತರು....
ಅವು ರಂಗಾದಂತೆ ಕಣ್ಣೆರಡೂ ಮಿನುಗಿ ಕವಿದ ಕತ್ತಲಲೂ ನನಗೆ ಬೆಳಕಿನ ಅನುಭವವಾದರೆ....
ಅಂದು ನಿನ್ನ ಕನಸು ಬಿದ್ದಿದ್ದೆ ಎಂದೇ ಅರ್ಥ,
ಮೌನಕೆ ನೂರು ಅರ್ಥ...
ಮಾತಿನ ಬಾಣಗಳಿಗಿಂತ ಅದು ಹರಿತ....
ವಿರಹದ ಕತ್ತಿಯ ಮೊನೆಯ ಮೇಲೆ ಕುಳಿತ ನನಗಿಂತ ಚೆನ್ನಾಗಿ ಅದನ್ನರಿಯಲು ಇನ್ಯಾರಿಗೆ ಸಾಧ್ಯ?/
ತುಂಬಾ ಮನ ಮುಟ್ಟುವಂತಿದೆ...
ಎದೆಯ ಕದ ತಟ್ಟುವಂತಿದೆ,
ನಿನ್ನ ನೆನಪಿನ ಸೆಳಕು...
ಕತ್ತಲ ಮನಸೊಳಗೂ ಹಚ್ಚುವಂತಿದೆ ಬೆಳಕು//

ನಿನ್ನ ನಿಲುವಿನ ಹಿಂದೆ ಇರುವ ಉದ್ದೇಶ ಗೊತ್ತಿಲ್ಲದ ನನಗೆ.....
ಅದರಲ್ಲೆ ನಿನ್ನ ನೆಮ್ಮದಿಯಿದ್ದರೆ.....
ನನಗೆ ನೋವೆಲ್ಲ ಉಳಿದರೂ ಸರಿ ;
ನಿನ್ನಿಂದ ದೂರವಾಗಿಯೆ ಇರುವ ಮನಸಾಗುತ್ತಿದೆ,
ನೋವಿನ ಬೀಜ ಮೊಳಕೆಯೊಡೆದು ಬರುವ ಕುಡಿಯೆ ಒಲವೋ?
ಸಂತಸದ ಗರ್ಭಕ್ಕೆ ವಿರಹದ ಹುಟ್ಟೆ ಮೂಲವೋ?
ಗೊಂದಲವಿದೆ/
ನೀರಲ್ಲಿ ಕಂಡ ಬಿಂಬ ಭ್ರಮೆ...
ಕನ್ನಡಿ ಪ್ರತಿಬಿಂಬಿಸಿದ್ದೂ ಕೂಡ ಹುಸಿ ಮಾಯೆ,
ಸಂತಸದ ಹಗಲಲ್ಲಿ ಜೊತೆ ಬಂದರೂ ಕತ್ತಲಲ್ಲಿ ಕೈಬಿಡುವ ಸ್ವಾರ್ಥಿ ಸ್ವಂತದ ಛಾಯೆ...
ಇವೆಲ್ಲ ತಿಳಿದೂ ಪ್ರೀತಿಸುವುದರಿಂದ ತಪ್ಪಿಸಿಕೊಳ್ಳಲಾಗಲಿಲ್ಲ//


ನೆಲಕೆ ಮುತ್ತಿಡುವ ಮುಂಜಾನೆಯ ಇಬ್ಬನಿ ಹನಿಯಂತೆ....
ನನ್ನ ಮನಸೊಳಗೆ ಹೊಳೆಯುತಿದೆ ನಿನ್ನ ಬಿಂಬ,
ನಿನ್ನದೇನು ತಪ್ಪಿಲ್ಲಬಿಡು...
ಅಷ್ಟಕ್ಕೂ ನಾನು ಕೇಳಿದ್ದು ಒಲವಿನ ಭಿಕ್ಷೆ,
ಭಿಕ್ಷುಕನನ್ನು ಯಾರಾದರೂ ಮನೆಯೊಳಗೆ ಬಿಟ್ಟು ಕೊಳ್ಳುತ್ತಾರ?
ನೀನೋ ಕೊಡುವುದನ್ನೆಲ್ಲ ಕೊಟ್ಟು ಹೊಸ್ತಿಲಿನಿಂದಾಚೆಗೆ ವಾಪಾಸು ಕಳಿಸಿದರೆ ತಪ್ಪೇನು?/
ಕಟ್ಟಿದ ಕನಸಿನ ಮನೆಯೆಲ್ಲ ಮರಳಿನ ಕಣಗಳ ಮೇಲೆ ನಿಂತಿತ್ತು....
ಪೋಣಿಸಿದ ನಿರೀಕ್ಷೆಯ ಮಾಲೆಯೆಲ್ಲ ಮಣ್ಣಿನ ಮಣಿಗಳಿಂದಾಗಿತ್ತು,
ಅದರ ಅರಿವಾದದ್ದು ಅನಿರೀಕ್ಷಿತವಾಗಿ ಅಕಾಲದಲ್ಲಿ ತಿರಸ್ಕಾರದ ಮಳೆ ಬಂದಾಗಲೆ...
ಆದರೇನು,ಕಾಲ ಮಿಂಚಿ ಹೋಗಿತ್ತಲ್ಲ!//