ಯಾರೊಂದಿಗೂ ಹಂಚಿಕೊಳ್ಳಲಾಗದೆ ಮೌನವಾಗಿ....
ನನ್ನೊಳಗೆ ನಾ ಅದುಮಿಟ್ಟುಕೊಂಡಿರುವ ಭಾವಗಳೆಲ್ಲ,
ಅದ್ಯಾವಾಗ ಸಿಡಿದು ನನ್ನ ತಲೆಯನ್ನ ಸಹಸ್ರ ಹೊಳಾಗಿಸುತ್ತದೋ ಎಂಬ ಆತಂಕ ನನಗೆ...
ಇದ್ಯಾವುದನ್ನೂ ನೀನಲ್ಲದೆ ಇನ್ಯಾರೊಂದಿಗೂ ನಾ ಹಂಚಿಕೊಳ್ಳಲಾರೆ/
ಆಯ್ಕೆ-ಆದ್ಯತೆ-ಅನಿವಾರ್ಯತೆಗಳು ಜೀವನದ ದಿಕ್ಕನ್ನ ನಿರ್ದೇಶಿಸುತ್ತವೆ...
ನನಗೊ ನೀನೆ ಆರಂಭದ ಆದ್ಯತೆ,
ಮೊದಲ ಆಯ್ಕೆ,ಹಾಗು ತುದಿಯ ಅನಿವಾರ್ಯತೆ.....
ಆದರೆ ನಿನಗೆ ನಾನು ಆಯ್ಕೆಯೂ ಅಲ್ಲ,
ಆದ್ಯತೆಯೂ ಅಗುಳಿದಿಲ್ಲ,
ಅನಿವಾರ್ಯನಂತೂ ಮೊದಲೆ ಅಲ್ಲ ಅನ್ನುವ ಅರಿವಿದೆ ನನಗೆ....
ಆದರೇನು ಮಾಡಲಿ ಮನಸ್ಸು ಸ್ವಲ್ಪ ಮೊಂಡು...!//
ನಾನೊಬ್ಬ ಮರುಳ,
ನಿನಗಾಗಿ ಇರುಳ ಬಾನತುಂಬ ಮಿನುಗಿಸುವ ನಿರೀಕ್ಷೆಯ ತಾರೆಗಳನ್ನ....
ಬಿಡುಗಣ್ಣಲ್ಲಿ ಕನಸ ಚಾಪೆಯ ಮೇಲೆ :
ಮನಸ ಮನೆಯಂಗಳದಲ್ಲಿ ಅಂಗಾತ ಮಲಗಿ ರಾತ್ರಿಪೂರ ನೋಡುತ್ತಾ ಹುಡುಕುತ್ತೇನೆ...
ನಿರಾಶನಾಗುತ್ತೇನೆ/
ಹಗಲ ಬೆಳಕು ಸೋರುವ ಛಾವಣಿಯ ಮಾಡಿನಂಚು
ಮೂಡಿಸುವ ಬಿಸಿಲ ಕೋಲಿನಲ್ಲಿ ನಿನ್ನ ಬೆಚ್ಚನೆ ಭಾವವಿದೆ,
ಬೆಳದಿಂಗಳ ಚೂರುಗಳನ್ನೆಲ್ಲ ಮನೆಯೊಳಗೆ ಚೆಲ್ಲುವ....
ಒಡೆದ ಮಾಡಿನ ಹಂಚುಗಳೆಡೆಗಳಲ್ಲಿ ನಿನ್ನ ನಗುವಿನ ಹಾಲ್ಬೆಳಕು ಚಲ್ಲಿದೆ//
ಕಿಟಕಿಯ ದಳಿಗಳಿಂದ ಸಾಲಾಗಿ ಇಳಿದ ಮುಂಬಿಸಿಲ ಎಳೆಗಳಿಂದ
ನಿನಗಾಗಿ ಒಂದು ಕನಸ ಹೆಣೆಯುತೀನಿ..
ಮುಂಜಾವಿನ ಬೆಚ್ಚನೆ ಕಾವಿನಲ್ಲಿ ಇಬ್ಬನಿ ಸುರಿವ ಸಂಭ್ರಮದ ಹನಿಗಳಿಗಳಿಂದ
ನಿನಗಾಗಿ ಮಾಲೆಯೊಂದನು ಪೋಣಿಸುತ್ತೀನಿ,
ನೆಲವ ತೋಯಿಸುವ ಬೆಳಕ ಮಳೆಯಲ್ಲಿ ಮಿಂದ ನಿನ್ನ ನೋಡುವ ತವಕವ ಅದುಮಿಟ್ಟು ಕೊಳ್ಳುತೀನಿ...
ನಿನ್ನಿಂದ ಮರೆಯಾಗಿಯೆ ಇದ್ದು ನನ್ನೆಲ್ಲ ಕನಸುಗಳ ನಿರ್ದಯವಾಗಿ ಕತ್ತು ಹಿಸುಕಿ ಕೊಲ್ಲುತ್ತೀನಿ/
ತಿರುಕನ ಕನಸು ಕಾಣುವುದರಲ್ಲೂ ....
ಹಗಲು ಕನಸುಗಳ ಗುಚ್ಛ ಹೆಣೆಯುವುದರಲ್ಲೂ,
ಇರುಳನಿದ್ದೆ ಕಳೆದುಕೊಂಡು ಮನಸಿನಾಳ ಅಸಹನೆ ತುಂಬಿಕೊಳ್ಳುವುದರಲ್ಲೂ ಒಂದು ಸುಖವಿದೆ//
07 February 2011
Subscribe to:
Post Comments (Atom)
No comments:
Post a Comment