21 February 2011

ಮಾತು ಮುಗಿದ ನಂತರ....

ಮತ್ತೆ ಆರಂಭವಾಗಿದೆ ಬಾಳಿನ ಪರಿಷೆ....
ಇದೊಂತರಹ ತಾಳ್ಮೆಯ ಪರೀಕ್ಷೆ,
ದುಃಖದ ವಾಸ್ತವವನ್ನ ಹಲ್ಲು ಕಿರಿದಿರುವ ಸೋಗಿನ ಮುಖವಾಡದಲ್ಲಿ....
ಅಡಗಿಸಿ ಬದುಕ ಜಾತ್ರೆಯಲ್ಲಿ ನಲಿಯುತ್ತೇನೆ,
ಇಷ್ಟವಿಲ್ಲದಿದ್ದರೂ/
ಸೋಗಿನ ಕಪಟ ಸಾಕು ಸಾಕಾಗಿದ್ದರೂ....
ಮುಖವಾಡದ ಮರೆಯಲ್ಲಿ ಒತ್ತರಿಸಿ ಬಂದು ಬಿಕ್ಕಳಿಸಿದರೂ....
ಮೇಲ್ನೋಟಕ್ಕೆ ಮಾತ್ರ ಮುಗುಳ್ನಗಲೇ ಬೇಕು,
ಏಕೆಂದರೆ ಈ ಜಗತ್ತು ಮೆಚ್ಚೋದು ಕೇವಲ ತೋರಿಕೆಯ ನಗುಮೊಗವನ್ನ....
ಸತ್ಯದ ಸಂಕಟಗಳಿಗೆ ಇಲ್ಲಿ ಮೂರುಕಾಸಿನ ಬೆಲೆಯಿಲ್ಲ//

ಗರಿಬಿಚ್ಚಿ ಕನಸಿನ ನಭಕ್ಕೆ ಏರಿದ ನನ್ನೆದೆಯ ಹಕ್ಕಿ....
ರೆಕ್ಕೆ ಸೋತು ನಿನ್ನ ನೆಲದ ಒಲವಿನಾಸರೆ ಅರಸಿ ದೃಷ್ಟಿ ಹಾಯಿಸಿದರೂ,
ದೂರ ದೂರದವರೆಗೂ ನಿರಾಶೆಯ ಕಡಲೊಂದೆ ಕಾಣಿಸಿದ್ದರಿಂದ....
ಅನಿವಾರ್ಯವಾಗಿ ಅಲ್ಲೇ ಇಳಿದು ಅಸುನೀಗ ಬೇಕಾಯ್ತು/
ಸಿಕ್ಕುಸಿಕ್ಕಾದ ಸಂಬಂಧಗಳ ಗೋಜಲನ್ನ,
ಸುಲಭವಾಗಿ ಬಿಡಿಸಲು ಒಲವಿನಿಂದಲೇ ಮಾಡಿದ ಹಣಿಗೆಯೊಂದು ಇದ್ದಿರುತ್ತಿದ್ದರೆ!/
ಸೊಗಸಾಗಿರುತ್ತಿತ್ತು....
ನೀನೇನಂತೀಯ?//

No comments: