28 February 2011

ವಿರಹದ ನಾಲ್ಕು ಸಾಲು...

ಆಳದಲ್ಲಿ ಅಡಗಿರುವ ಒಲವ ಭಾವಗಳಿಗೆ ಒಂದು ಸ್ಪಂದನದ ಹನಿ ಸಿಂಚನ ಸಾಕು.....
ಎದೆಯಲ್ಲಿ ಗೆಲುವು ಚಿಗುರೊಡೆಯೋಕೆ,
ಮುತ್ತಾಗುವ ಮಳೆಹನಿಗೇನು ಗೊತ್ತು ನೆಲಕ್ಕಿಳಿದು ತಾನು ಬಚ್ಚಿಟ್ಟು ಕೊಳ್ಳಬೇಕಾದ ಚಿಪ್ಪಿನ ವಿಳಾಸ?
ಬಯಸಿದ ಒಲವು ಕೈಗೂಡೋದು ಕೇವಲ ವಿಧಿಯ ವಿಲಾಸ/
ನಿನಗೆ ಗೊತ್ತಲ್ಲ ನನ್ನ ಮನದ ಎಲ್ಲ ಆಸೆ,
ಇನ್ನು ಬಿಡಿಸಿ ನಾ ಹೇಳೋದಾದರೂ ಏಕೆ?...
ಮೋಡ ಕವಿದ ಮನದಲ್ಲಿ ಬೀಸಿದ ತಂಪು ತಂಗಾಳಿ ನನ್ನ ಪಾಲಿಗೆ ನೀನು,
ನಾದ ಮರೆತು ತಾಳಕೆ ಮನಸೋತ ತಂಬೂರಿಯಂತಾದೆ ನಿನ್ನೆದುರು ನಾನು//


ಮಾತಿನ ಮೋಹ ಮೌನದ ಆಸೆ ಎರಡೂ ನನ್ನಲ್ಲಿ ಗಿರಕಿ ಹೊಡೆಯುತ್ತ....
ಮಾತುಬಂದೂ ನನ್ನ ಮೂಕನನ್ನಾಗಿಸಿದೆ,
ಗಾಳಿ ಬೀಸುವಾಗ ನನ್ನ ಉಸಿರು ಅದರಲ್ಲಿ.....
ನಿನ್ನ ಪರಿಮಳಹುಡುಕುವುದು ಎಲ್ಲರ ಕಣ್ಣಿಗೆ ಮರುಳನಿಸೀತು,
ಆದರೆ ನೀನು ಹಾಗಂದುಕೊಳ್ಳಲಿಕ್ಕಿಲ್ಲಾ,ಅಲ್ಲವ?/
ಸಾವಿರ ಮಾತುಗಳಲ್ಲಿ ಉಸುರಲಾಗದ ಭಾವ....
ಒಂದು ಹಾಡಲ್ಲಿ ಬಟಾಬಯಲಾಗಿದೆ,
ಮನದ ಭಾರ ಇಳಿದು ಈಗ,
ಎದೆಯ ವೇದನೆ ಕೊಂಚ ಹಗುರಾಗಿದೆ//

ಹೆದರದಿರು ನಿನ್ನ ಖುಶಿಗಳನ್ನ ನಾನೆಂದೂ ಕಸಿಯುವುದಿಲ್ಲ...
ನಿನ್ನ ಹೆಸರನ್ನ ಎಲ್ಲೂ ಜಾಹೀರುಗೊಳಿಸೋಲ್ಲ,
ನನ್ನೆಡೆಗೆ ಗೊತ್ತಿರುವ ಗುಟ್ಟನ್ನ ನಾನಿನ್ಯಾರಿಗೂ ಉಸುರೋಲ್ಲ....
ನನ್ನ ಉಸಿರಲ್ಲಷ್ಟೆ ನೀ ಸುಭದ್ರ/
ದ್ವೇಷಿಸಲು ಕಾರಣ ನೂರು ಬೇಕು....
ಪ್ರೀತಿಸಲು ಒಂದೂ ಬೇಕಿಲ್ಲ,ಅಲ್ಲವ?
ಹಾಗೆ ನಿನ್ನ ಪ್ರೀತಿಸೋಕೆ ನನಗೆ ಕಾರಣದ ಹಂಗು ಬೇಕಿಲ್ಲ....
ಅವೆಲ್ಲವೂ ನಿನಗೆ ಇರಲಿ ಬಿಡು ನನ್ನ ಇನ್ನಷ್ಟು ದ್ವೇಷಿಸೋಕಂತ//

No comments: