07 February 2011

ನೋಡು ಇಲ್ಲೊಮ್ಮೆ...

ಯಾವುದೊ ಮೂರನೆ ದರ್ಜೆಯ ಸಿನೆಮಾವೊಂದಕ್ಕೆ 'ಪಾರಿಜಾತ'ವೆಂದು....
ಹೆಸರಿಟ್ಟ ಸುದ್ದಿ ಕೇಳಿ ಮನಸ್ಸು ಮುದುಡಿತು...
ಸುರಲೋಕದ ಆ ಪುಷ್ಪಕ್ಕೆ ಹೋಲಿಸಿಕೊಳ್ಳಲೂ ಒಂದು ಯೋಗ್ಯತೆ ಇರಬೇಕು,
ಈಗ ನೋಡು ಉದಾಹಾರಣೆಗೆ ನೀನೆ ಇದ್ದೀಯಲ್ಲ...!/
ಮುಂಬೆಳಗನ್ನು ಮೀಯಿಸುವ ಇಬ್ಬನಿ....
ಇನ್ನು ಕೇವಲ ಕೆಲವೆ ದಿನಗಳ ಅತಿಥಿ,
ಒಡ್ದ ಬಿಸಿಲಿಗೆ ಸ್ನಾನದ ಭಾಗ್ಯವಿಲ್ಲ ಮಳೆಯೂ ಬರುವವರೆಗೂ ...
ವೈದ್ಯ ಹೇಳಿದ್ದೂ ,ರೋಗಿ ಬಯಸಿದ್ದೂ ಒಂದೇ ಆದಂತಿದೆ...!//


ಮತ್ತೆ ನಿನ್ನ ನೆನಪಾದಾಗ ನನ್ನವೆರಡು ಕಂಬನಿ ಹನಿಗಳು....
ನೆಲಕ್ಕಿಳಿದು ನೀ ಬರುವ ಅಂಗಳವ ಹಸಿಯಾಗಿಸುತ್ತವೆ,
ಕಣ್ಣ ಕಾಲುವೆಯಲ್ಲಿ ಹರಿದ ನೀರ ಕೋಡಿಗೆ ಒಂದು ದಿಕ್ಕಿತ್ತು......
ನೀ ಬಿಟ್ಟು ಹೋದ ತಿರಸ್ಕಾರದ ನೋವಿನ ಮೇಲೆ ಅದರ ಸಂಪೂರ್ಣ ಹಕ್ಕಿತ್ತು/
ನೆತ್ತರಿಗಿಂತ ಗಟ್ಟಿಯಾದ ಬಾಂಧವ್ಯದಲ್ಲಿ ಹುಟ್ಟಿದ ಬಿರುಕಿಗೆ ಮೂಲವೇನು?
ಒಗ್ಗೂಡಿಸುತ್ತದೆ ಎಂಬ ವಿಶ್ವಾಸ ಹುಟ್ಟಿಸಿದ್ದ ಒಲವಿಗೆ ದೂರಾಗಿಸುವ ಶಕ್ತಿ ಬಂದದ್ದಾದರೂ ಹೇಗೆ?//


ಇಲ್ಲೊಂದು ನಿರೀಕ್ಷೆಯಿದೆ,
ಅಲ್ಲೊಂದು ಅಪೇಕ್ಷೆ...
ನಡುವೆ ನಾವೆ ಎಬ್ಬಿಸಿಕೊಂಡಿರುವ ಗೋಡೆ.
ಅಂತರ ಸಹಿಸಲಸಾಧ್ಯ...
ಸೇರಿತಾದರೂ ಹೇಗೆ ಕಳೆದು ಎಲ್ಲ ಕೃತಕ ಭಿಡೆ/
ತಳಕಿತ್ತು ಹೋದ ಮರದ ನಾವೆಯಲ್ಲಿ ಕನಸ ಸಾಗರ ದಾಟುವ ಆಸೆ ಉತ್ಕಟ...
ಏನು ಮಾಡಲಿ ಹೇಳು? ಮನಸು ತುಂಬಾ ಉದ್ಧಟ,
ಸುರಿದ ಸ್ವಪ್ನದ ಹೂಗಳೆಲ್ಲ ಹಾರ ಹರಿದು ಮಣ್ಣು ಮುಟ್ಟಿದವು...
ಹೊಸ ಕನಸಿಗೆ ಪ್ರವೇಶವಿಲ್ಲದ ಕಂಗಳಲ್ಲಿ ಕೇವಲ ನಿರಾಸೆಯ ನೀರಷ್ಟೆ ಹುಟ್ಟಿದವು//

No comments: