07 February 2011

ಗೊತ್ತಿರದ ಉತ್ತರದ ಹಾದಿ ಕಾಯುತ...

ಹಾದಿ ಬಿಟ್ಟ ಹಸುವಿನಂತೆ ಮನಸೂ ಕೂಡ....
ನಿನ್ನ ಮನದ ಮನೆಯ ಕೊಟ್ಟಿಗೆಯ ಸೇರೊ ದಾರಿ ಅರಿಯದೆ ಕಂಗಾಲಾಗಿದೆ,
ಬೇರು ಕತ್ತರಿಸಿ ಹೋದ ವೃದ್ಧ ಮರದಂತಿಹೆನು...
ಆಧರಿಸಿ ಆಸರೆ ನೀಡುವವರಿಲ್ಲ,
ನಿನ್ನದೆ ನಿರೀಕ್ಷೆಯಲಿ ಕುಟುಕು ಜೀವ ಹೊತ್ತು ಕಾದಿಹೆನು....
ನೀನೆಲ್ಲಿ?/
ನೀರಿಲ್ಲದೆ ಬಾಡಿದ ಬಳ್ಳಿ ನಾನು....
ಸಾಯುವ ಸನ್ನಾಹದಲಿ ಅನಿವಾರ್ಯವಾಗಿ ಸಿಲುಕಿದೆನು....
ನೀನೆಲ್ಲಿ?.//


ಮುಗಿದ ತಿರಸ್ಕಾರದ ನಿನ್ನ ಮಾತುಗಳ ಮುಗ್ಗಲು ಇನ್ನೂ ಇದೆ....
ಕಣ್ಣೀರ ಮಗ್ಗುಲಲ್ಲಿ ಕುಳಿತ ನನ್ನ ಸುತ್ತಲು,
ಸದ್ದಿರದ ನಿಶಾರಾತ್ರಿಗಳ ಮೌನ ಕಲಕುವ ನನ್ನ ಬಿಕ್ಕಳಿಕೆಗಳಿಗೆ....
ನಿನ್ನ ನೆನಪಿನ ಲೇಪವಿದೆ/
ಹೌದು ಇನ್ಯಾರು ಇಲ್ಲ....
ನಿನ್ನಂತೆ ನನ್ನ ಆವರಿಸ ಬಲ್ಲವರು ನನಗ್ಯಾರೂ ಇಲ್ಲ...
ನನ್ನೆಲ್ಲ ಬಾಳ ವ್ಯಾಪಿಸಿಕೊಳ್ಳ ಬಲ್ಲವರು ಯಾರೂನೂ ಇಲ್ಲ,
ಕಾರಣದ ಹಂಗಿಲ್ಲದೆ ನಗುವ ಮಗುವಂತೆ...
ಮುತ್ತುವ ದುಂಬಿಯಿಂದಮುದ್ದಿಸಿ ಕೊಳ್ಳುವ ಹೂಗಳ ನಗುವಂತೆ.....
ಬೊಚ್ಚುಬಾಯಿಯ ಅಜ್ಜಿಯೊಂದಿಗೆ ಕಿಲ ಕಿಲ ಗುಟ್ಟುವ ಬೊಚ್ಚು ಬಾಯಿಯದೆ ಆದ ಮೊಮ್ಮಗುವಿನಂತೆ....
ನಿನ್ನ ನೆನಪು//


ಮೌನ ರಾಗಗಳಿಗೆ ಎದೆಯಾಳದ ನೋವಿನೆಳೆಗಳ ಸಂಯೋಜಿಸಿ...
ಸೃಷ್ಟಿಸಿದ ಹಾಡಿನಲ್ಲಿ ಕೇವಲ ವಿರಹದ ವೇದನೆಯೇ ತುಂಬಿತ್ತು,
ನಿನ್ನ ನೆನಪಿನ ನೆರಳಷ್ಟೂ ಅದರಲ್ಲಿತ್ತು/
ನಡೆವ ಘಟನೆಗಳೆಲ್ಲ ನನ್ನ ಕೈ ಮೀರಿದವು...
ನನ್ನ ನೆಮ್ಮದಿಯ ಒರತೆಯನ್ನೆಲ್ಲ ಹನಿಯೂ ಬಿಡದೆ ಅವು ಹೀರಿದವು...
ಮನದೊಳಗೆ ಭಾವಗಳ ಕಾಲ್ಗೆಜ್ಜೆ ಕುಲುಕುವ ಸದ್ದಲ್ಲಿ ನನ್ನೆಲ್ಲ ನಿಟ್ಟುಸಿರುಗಳು ಕರಗಿಹೋದವು//

No comments: