07 February 2011

ಮನದಾಲಿಕೆ...

ಎರಡು ಅಲೆಗಳ ನಡುವಿನ ಬಿಕ್ಕಳಿಕೆಗಳ ಆಲಿಸುತ್ತ...
ಹಗಲಿರುಳಿನ ನಡುವಿರುವ ಮೌನವ ಅನುಭವಿಸುತ್ತ...
ನಿನ್ನೆಲ್ಲ ಸಂತಸದ ಕ್ಷಣಗಳಿಗೆ,
ನನ್ನ ನೋವಿನ ಸುಂಕ ಪಾವತಿಸುತ್ತ....
ನಿನ್ನ ಬರುವಿಕೆಯನ್ನ ಕಾಯುವುದರಲ್ಲೂ ಒಂದು ಸಂಭ್ರಮದ ನೆಮ್ಮದಿಯ ಹೊಳಹಿದೆ/
ಕಾಲಕ್ಕೆ ಕಟ್ಟಿಲ್ಲ...
ದಿನಗಳು ಸರಿದು ಹೋದರೇನು ನನ್ನೆದೆಯ ಭಾವದ ಬಾವಿ ಬತ್ತಿಲ್ಲ...
ಗೊತ್ತಿಲ್ಲ ನಿನ್ನ ಮನಸ್ಥಿತಿ ;ಬಹುಷಃ ಅಲ್ಲಿ ನನಗಾಗಿ ಹನಿ ಒಲವೂ ಇನ್ನುಳಿದಿಲ್ಲ.
ಆದರೇನು ನನ್ನೊಳಗಿರುವ ನಿನ್ನೆಡೆಗಿನ ಪ್ರೀತಿಯ ಹೂವು ತುಸು ಮಾತ್ರವೂ ನಲುಗಿಲ್ಲ//


ಇದ್ದೆಲ್ಲ ಅಭಾವಗಳೂ ಸರಿದು ಹೋಗಿದ್ದವು ಕಂಡು ನನ್ನ ಬಾಳಲ್ಲಿ ನಿನ್ನ ,
ಆದರೆ; ಹೋಗುವಾಗ ನೀ....ನಿನ್ನ ಅಭಾವವನ್ನು ಮಾತ್ರ ಉಳಿಸಿಯೆ ಹೋಗಿದ್ದೆ...!
ನಿನ್ನ ಒಲವ ವ್ಯಾಪಾರದಲ್ಲೂ ನ್ಯಾಯವಿತ್ತು...
ಲಾಭದ ಧಾರೆಯೆಲ್ಲ ನಿನ್ನೆಡೆಗೆ ಹರಿದರೂನೂ,
ನಷ್ಟದ ಕಂಬನಿ ಧಾರೆಯಾದರೂ ನನ್ನೆಡೆಗೆ ಮರುಗಿತ್ತು/
ಯೋಚಿಸಲಿಕ್ಕೆ ಅರೆಕ್ಷಣವನ್ನೂ ಕೊಡದಿದ್ದರೂನು...
ನಿದ್ದೆಯಿರದ ರಾತ್ರಿಗಳಲ್ಲಿ ನಿನ್ನನೆ ಕನವರಿಸಲು ಇಡೀ ಬಾಳನ್ನೆ ಉಳಿಸಿ ಹೋಗಿದ್ದೀಯಲ್ಲ ಸಾಕಲ್ಲ?
ಬೇಕಿನ್ನೇನು?!//

ನಿತ್ಯದ ಜಂಜಡದಲ್ಲಿ ನಿನ್ನದೊಂದು ನೆನಪಷ್ಟೆ ದೊಡ್ಡ ಬಿಡುಗಡೆ....
ನಿನ್ನ ಸ್ಮೃತಿಯೇ ನನ್ನ ದಿನದಾರಂಭ ಅದೆ ತಾನೆ ದಿನದ ಕಟ್ಟಕಡೆ?
ಕಾಲು ಸಾಗಿದ ಕಡೆ ವಿಧಿಯು ದಬ್ಬಿದೆಡೆ....
ಬಾಳಿನುದ್ದಕೂ ಅಲೆಮಾರಿಯಾಗಿ ಸುತ್ತುತ್ತಿದ್ದರೂ ವಸುಂಧರೆಯ ಉದ್ದಗಲ,
ನನ್ನೊಡನೆ ಸದಾ ಇರುವುದು ನೀನು ನಿನ್ನ ನೆನಪು/
ನಾನೆಷ್ಟು ಹೇಳಿದರೂ ನೀ ಅದೊಂದನ್ನೂ ಪರಿಗಣಿಸದೆ ಅಸಾಧ್ಯ ಹತ್ತಿರವಾದೆ....
ಆಗಲೂ ಗೆದ್ದದ್ದು ನಿನ್ನದೇ ಹಟ,
ಈಗೆಷ್ಟು ಬೇಡಿಕೊಂಡರೂ ಕಿಂಚಿತ್ತೂ ದಯೆ ತೋರದೆ ಇತ್ತ ನನ್ನ ತೊರೆದೆ....
ಈಗಲೂ ಗೆದ್ದದ್ದು ನಿನ್ನದೇ ಹಟ ;ಮಧ್ಯ ಎರಡೂ ಪರಿಸ್ಥಿತಿಯ ಸಂತೃಸ್ತ ಮಾತ್ರ ನಾನು...!//

No comments: