07 February 2011

ಆಸರೆ....

ನಿರೀಕ್ಷೆಗಳಿದ್ದರೂ ನೂರು...
ಸಂಕಟ ಸಾವಿರವಿದೆ ಅನ್ನೋದು ವಾಸ್ತವ,
ಪ್ರೀತಿಯ ಮಂಜುಗೆಡ್ಡೆ ಕರಗಿದ ನಂತರ ಉಳಿದದ್ದು ಕೇವಲ ತೊಟ್ಟಿಕ್ಕುವ ಕಣ್ಣೀರ ಹನಿ...
ನೆನಪಿನ ನಾವೆಯಲ್ಲಿ ಜೊತೆಯಾಗಿ ಸಾಗುತ್ತಿದ್ದಾಗ ನನ್ನ ಕಿವಿಯಲ್ಲಿ ಉಲಿಯುತ್ತಿದ್ದ ನಿನ್ನ ಪಿಸುದನಿ/
ಉತ್ತರಗಳು ಬೇಕಿದ್ದವು ಗೊಂದಲ ಹುಟ್ಟಿಸಿದ ಹಲವು ಪ್ರಶ್ನೆಗಳಿಗೆ...
ಏನೊಂದನೂ ಸ್ಪಷ್ಟಪಡಿಸದೆ ನೀ ದೂರ ಸರಿದ ಆ ಘಳಿಗೆ,
ಈಗ ಈಹೊತ್ತಿನಲ್ಲಿ ಎಲ್ಲಾ ಅರಿವಾಗುತ್ತಿದೆ...
ಯಾವೊಂದು ಉತ್ತರದ ನಿರೀಕ್ಷೆಯೂ ಇನ್ನುಳಿದಿಲ್ಲ...
ಏಕೆಂದರೆ ಕೊಡಲು ನಿನ್ನ ಬಳಿಯೆ ಅವಿಲ್ಲವಲ್ಲ...!//


ಹೊಲಿದ ತುಟಿಗಳು...
ಮುದುಡಿ ಬಾಡಿದ ಮನಸು....
ಹಗಲೆಲ್ಲ ಕನಸು....
ವೃತವೇನೂ ಇಲ್ಲದಿದ್ದರೂ,
ನಿತ್ಯ ಇರುಳ ಜಾಗರಣೆ....
ನಿನ್ನ ನೆನಹು......
ಇಷ್ಟು ಖಾತ್ರಿಯಾಗಿರುವ ನನ್ನ ಬಾಳ ಜಾತ್ರೆಯಲ್ಲಿ,,,
ನಿತ್ಯ ನಿನ್ನ ನೆನಪುಗಳದೆ ರಾಜಬೀದಿ ಉತ್ಸವ/
ನೋಡದ ;ಕೇಳದ ದೇಶದಲ್ಲಿ ನಿನ್ನ ಕಳೆದು ಕೊಂಡ ನಾನು ನನ್ನ ಪಾಲಿಗೆ ಈಗ ತಬ್ಬಲಿ...
ಮನದ ವೇದನೆ ಹೆಚ್ಚಿದಾಗ ಕಣ್ತೋಯಿಸೊ ಕಂಬನಿಯ ಮಬ್ಬಲಿ, ಹೇಳು?
ಸಾಂತ್ವಾನ ಅರಸಿ ನಾ ಇನ್ಯಾರ ಹೆಗಲ ತಬ್ಬಲಿ?//


ಅನಾಮಿಕ ಮೋಡವೊಂದರ ತೆಕ್ಕೆಯಿಂದ ಮೈ ಮುರಿಯುತ್ತ ಮೇಲೇಳುವ ನೇಸರನ ಆಲಸ್ಯ ..
ಕಂಡ ನನಗೇಕೆ ನಿನ್ನ ನೆನಪಾಯ್ತು?
ಅವನ ಸುತ್ತಲೂ ಹರಡಿದ್ದ ಕೆಂಪನು ಹೋಲುವಂತೆ,
ನನ್ನ ಮುಖವೇಕೆ ನಿನ್ನ ನೆನಪಲ್ಲಿ ರಂಗಾಯ್ತು?
ನೀನೂ ಆ ಕ್ಷಣ ಒಂದುವೇಳೆ ನನ್ನೊಂದಿಗೆ ಇದ್ದಿದ್ದರೆ....
ಇಬ್ಬರೂ ಕೂಡಿ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿತ್ತು/
ಸುತ್ತ ನೆರೆದ ಕನಸುಗಳ ಕನ್ನಡಿಗಳಲ್ಲಿ ಕಾಣುವ ಬಿಂಬಗಳಲಿ....
ನಿನ್ನ ನಗು ಕಾಣದೆ ಕೆಂಗೆಟ್ಟ ನನಗೆ ಬೇಕಿದೆ ಒಂದೇ ಒಂದು ನಿನ್ನ ಮುಗುಳ್ನಗೆಯ ಆಸರೆ,
ಮತ್ತದೆ ಮೆಲುಮಾತುಗಳ ಸಂಗಡ ಬೆಚ್ಚಗೆ ಬೆರೆತ ನಿನ್ನೊಲವಿನ ಒಂದೇ ಒಂದು ಕರೆ//

No comments: