ತಳವಿರದ ಬಾವಿಯೊಳಗೆ ಕೊನೆಗಾಣದ ಕತ್ತಲ ಕೂಪದಲಿ....
ನಿನ್ನ ಕೈ ಜಾರಿ ಬಿದ್ದಂತೆ ;
ನೀ ನನ್ನೊಂದಿಗಿದ್ದಾಗ ಆಗಾಗ ಕನಸಾಗುತ್ತಿತ್ತು,
ಅದೇ ಕನಸಲ್ಲಿ ನಿನ್ನ ಕ್ಷೀಣ ಧ್ವನಿಯ ಬೋಬ್ಬೆಯೂ ಕೇಳಿಸುತ್ತಿತ್ತು....
ಆದರೀಗ ಕನಸು ನಿಜವಾಗಿದೆ,
ಬೊಬ್ಬಿಡಲು ಯಾರೂ ಇಲ್ಲ...
ನೀನೆ ದೂಡಿದ ಬಾವಿಯೊಳಗೆ ನಾನಿನ್ನೂ ಆಳ ಆಳಕ್ಕೆ ಜಾರುತ್ತಲೆ ಇದ್ದೇನೆ/
ಆತ್ಮಸಾಕ್ಷಿಯನ್ನು ಮಾತ್ರ ನಂಬುವ ನನಗೆ...
ನಿನ್ನ ನನ್ನ ನಡುವೆ ಇನ್ಯಾರ ಮಧ್ಯಸ್ತಿಕೆಯ ಅಗತ್ಯ ಯಾವಾಗಲೂ ಕಂಡು ಬಂದಿರಲಿಲ್ಲ...
ಮುಂದೆಯೂ ಕಂಡು ಬರೋದಿಲ್ಲ//
ಎಳೆ ಚಿಗುರನ್ನು ಮೆಲ್ಲಗೆ ತಾಯಿಗಿಡದಿಂದ ಬಿಡಿಸಿ....
ಪದೆಪದೆ ಅದಕ್ಕೆ ತುಟಿಯೊತ್ತುವ ಬಾಲ್ಯದಿಂದ ಬಂದ ಅಭ್ಯಾಸವೊಂದಿದೆ ನನಗೆ,
ಆ ಎಲೆಗಳ ಮೃದುಕಂಪಿನಲ್ಲೂ ನಿನ್ನನ್ನೆ ಕಾಣುತ್ತದೆ ಕಣ್ಣಿಲ್ಲದ ನನ್ನವೆರಡು ತುಟಿಗಳು...
ಅರಳು ಪಾರಿಜಾತವನ್ನ ಪರಿಮಳ ಆಘ್ರಾಣಿಸುವ ಸಲುವಾಗಿ ನಾಸಿಕಕ್ಕೆ ಸೋಕಿಸುತ್ತೇನೆ,
ಆ ಸುವಾಸನೆಯೂ ಕೂಡ ಅದು ಹೇಗೊ ನಿನ್ನನ್ನೆ ಹೋಲುತ್ತದೆ...
ಅಲ್ಲಿಯೆ ನನ್ನ ದುರ್ಬಲ ಮನಸು ನಿನ್ನೆಡೆಗೆ ಸೋಲುತ್ತದೆ...!/
ಯಾರೂ ನಮಗೆ ಸೇರಿದವರಲ್ಲ...
ಯಾರೊಬ್ಬರೂ ಇಲ್ಲಿ ಶಾಶ್ವತ ನಮ್ಮೊಂದಿಗಿರೋದಿಲ್ಲ ಎಂಬ ವಾಸ್ತವದ ಅರಿವಿದ್ದಂತೆಯೂ,
ನಾನೇಕೆ ನಿನ್ನ ಬಿಡಲಾಗದಷ್ಟು ಅಪ್ಪಿಕೊಂಡಿದ್ದೇನೆ?
ಉತ್ತರ ಸ್ವತಹ ನನಗೂ ಗೊತ್ತಿಲ್ಲ//
ಸೂಕ್ತ ಪದಗಳ ಕೊರತೆ...
ಭಾವನೆಗಳನ್ನು ಮಾತಾಗಿಸುವ ತವಕವ ತಾಕದ ಭಾಷೆಯ ನಿರ್ದಯತೆ,
ನನ್ನ ತುಟಿಗಳೆರಡನ್ನೂ ಹೊಲೆದು ಮನಸನ್ನು ಮೂಕವಾಗಿಸಿವೆ/
ಎದೆಯ ಒಳಕಿಂಡಿಯಲ್ಲಿ ಬರುವ ಚೂರು ಬೆಳಕಿನ ಆಸರೆಯಲ್ಲಿ,
ನನ್ನೆಲ್ಲ ಉಸಿರು ನಿಂತಿದೆ ಎನ್ನುವುದು ನಿನಗೂ ಗೊತ್ತು...
ಆದರೂ ನೀನೇಕೆ ಇಷ್ಟು ನಿರ್ದಯಿ...
ಅರ್ಥವೆ ಆಗುತ್ತಿಲ್ಲ//.
07 February 2011
Subscribe to:
Post Comments (Atom)
No comments:
Post a Comment