27 October 2008

ಬಲವಂತದಿಂದ ಹುಟ್ಟಲಾರದು ಪ್ರೀತಿ....

ಪ್ರೀತಿಯಲ್ಲಿ ಒತ್ತಾಯ ಸಲ್ಲ,ಒಪ್ಪಿಗೆ ಮಾತ್ರ ಚೆನ್ನ.ಕ್ರಮೇಣ ಕಳೆದೆ ಹೋಗಿರುವ ಬಾಲ್ಯವನ್ನು ನೆನಪಿಸಿಕೊಳ್ಳೋದ್ದಕ್ಕಿಂತ ಹೆಚ್ಚಿನ ಸುಖ ಬಾಳಲ್ಲಿ ಉಳಿದೆ ಇಲ್ಲ.ಊರು ಬಿಟ್ಟು ಊರು ಸೇರಿ ಮತ್ತೊಂದು ಪರಿಚಯವೇ ಇರದ ಜಗತ್ತಿನಲ್ಲಿ ಹೊಸದಾಗಿ ಬೆರೆಯುವ ಅನಿವಾರ್ಯತೆಯ ತಲ್ಲಣ.ಅಲ್ಲಿಗೂ ನನ್ನೊಂದಿಗೆ ಜೊತೆಯಾಗಿ ಬಂದದ್ದು ಮಳೆ ಮಾತ್ರ ಇನ್ನೊಂದು ಶಾಲೆ,ನಗೆಪಾಟಿಲಿಗೆ ಈಡಾಗೋ ನನ್ನ ಹಳ್ಳಿ ಕನ್ನಡ,ಗೊತ್ತಿರುವ ಭಾಷೆಯೇ ಆದರೂ ಬೇರೆಯದೇ ಅನ್ನಿಸೋ ಉಚ್ಛಾರಣೆಯ ಅನುಕರಿಸೋ ಕರ್ಮ.ನನ್ನಂತ ಇಬ್ಬರನ್ನು ತೋರಿಸ ಬಹುದಾಗಿರುತ್ತಿದ್ದ ಯಾವಾಗಲೂ ದೊಡ್ಡ ಅಳಯತೆಯದೆ ಆಗಿರುತಿದ್ದು ರೇಜಿಗೆ ಹುಟ್ಟಿಸುತ್ತಿದ್ದ ಯೂನಿಫಾರ್ಮ್.ಆಗಲೂ ಆಪ್ತವಾಗುತ್ತಿದ್ದ ಕ್ಷಣಗಳು ಯಾವುದೆಂದರೆ ಮತ್ತದೇ ಹಬೆಯಾಡುವ ಚಹಾದ ಬಿಸಿಯನ್ನು ಗುಟುಕು ಗುಟುಕಾಗಿ ಗಂಟಲಲ್ಲಿ ಇಳಿಸುವ ಸುಖದ ಮತ್ತಲಿ ಮುಳುಗಿ ಹನಿವ ಮಳೆಯನ್ನೇ ಮುಗ್ಧನಂತೆ ದಿಟ್ಟಿಸುತ್ತಿದ್ದೆನಲ್ಲ ಅದು ಮಾತ್ರ.

ಇಲ್ಲಿಯೂ ಮಳೆ ಸುರಿಯುತ್ತದೆ ಆದರೆ ಬಾಲ್ಯದ ಸ್ಮ್ರತಿಯಲ್ಲಿ ಉಳಿದಿರುವಂತೆ ಚುಚ್ಚುವುದಿಲ್ಲ. ತೇಪೆ ಹಾಕಿದ ಕೊಡೆ ನಿರ್ದಯಿಯಾಗಿ ಬೀಸೊ ಗಾಳಿಗೆ ಕೋಡಂಗಿಯಂತೆ ಮುಂಬಾಗಿದಾಗ ಕೆಕರುಮೆಕರಾಗಿ ಮೊದಲು ಜಾರೋ ಚಡ್ಡಿಯನ್ನು ಸರಿಮಾಡಿಕೊಳ್ಳಲೋ? ಮುರುಟಿದ ಛತ್ರಿಯನ್ನು ಸಂಭಾಳಿಸಲೋ? ಎಂಬ ಸಂದಿಗ್ಧ ಕಾಡುತಿತ್ತು.ನಿಷ್ಕರುಣೆಯಿಂದ ಸೂಜಿ ಚುಚ್ಚಿದಂತೆ ಒಂದೇ ಸಮ ಮುಖದ ಮೇಲೆ ರಾಚಿ ಮೈಯೆಲ್ಲಾ ತೋಯಿಸಿ ತೊಪ್ಪೆ ಮಾಡುತ್ತಿದ್ದರೂ ಅದೇಕೋ ಮಳೆಯೆಂದರೆ ಮನಸ್ಸಿಗೆ ವಿಚಿತ್ರ ಮೋಹ.

26 October 2008

ಹಳೆಯ ಮಧುರ ಕ್ಷಣಗಳು...

ಹಳೆ ನೆನಪುಗಳು ಮರುಕಳಿಸುವಾಗ ಹಬೆಯಾಡುವ ಚಹಾ ಕಪ್ ಕೈಯಲ್ಲಿ ಹಿಡಿದು ಮಳೆಯನ್ನೇ ನೋಡುತ್ತಾ ಅದರ ಬಿಸಿಯ ಗುಟುಕು ಗುಟುಕಾಗಿ ಅನುಭವಿಸುತ್ತಾ ಕಿಟಕಿಯಂಚಿನಲ್ಲಿ ಕೂರೋದೇ ಹಿತ.ನಿಂತ ಮಳೆಯ ಉಳಿದ ಹನಿ ಮೆಲ್ಲನೆ ಬೀಸೊಗಾಳಿಗೆ ಮರದ ಎಲೆಗಳಿಂದ ಉದುರೋವಾಗ ಅವಕ್ಕೂ ನನ್ನಂತೆ ಚಳಿಗೆ ನಡುಕ ಹುಟ್ಟಿರಬಹುದೇ? ಎಂಬ ಅನುಮಾನ ನನಗೆ.ಮೈತುಂಬ ಹೊದ್ದುಕೊಂಡು ಅಕ್ಷರಶಃ ಕಂಬಳಿ ಮರೆಯಲ್ಲಿ ಭೂಗತನಾದವನು ಜಾರಿದೆ ಹಳೆಯ ಸ್ಮ್ರತಿಗೆ.ಹೌದಲ್ವ? ಹೀಗೆಯೇ ಮಳೆಯ ಸವಾರಿ ಬಂದಾಗಲೆಲ್ಲಾ ಬೆಚ್ಚಗೆ ಹೊದಿಸಿ ಅಮ್ಮ ಚಿಕ್ಕಂದಿನಲ್ಲಿ ನನ್ನ ತಬ್ಬಿ ಮಲಗುತಿದ್ದರಲ್ಲ! ಎಂಬ ಬೆಚ್ಚನೆಯ ನೆನಪು.ಆಗೆಲ್ಲ ಕಂಬಳಿಗಿಂತಲೂ ಹಿತವೆನಿಸಿದ್ದು ಅಮ್ಮನ ಮೈಯ್ಯ ಹಿತವಾದ ಬಿಸಿ ಹಾಗು ಅವರ ಸೀರೆಯ ಆಪ್ತ ವಾಸನೆ.

ಬಾರ್ ಮಾತ್ರ ಬದಲಿಸಿದ ಹಳೆಯ ಹವಾಯಿ ಚಪ್ಪಲಿಯನ್ನು ವರ್ಷ ವರ್ಷವೂ ಬಳಸುತ್ತಿದ್ದುದು.ಮಳೆಗೆ ರಾಡಿಯೆದ್ದು ಕೆಸರಾದ ರಸ್ತೆಗಳಲ್ಲಿ ಅವನ್ನೇ ಮೆಟ್ಟಿ ಶಾಲೆಗೆ ಹೋಗುವಾಗ ಬೆನ್ನಿಗೆಲ್ಲ ಕೆಮ್ಮಣ್ಣ ಕೆಸರ ಚಿತ್ತಾರ ಹರಡುತ್ತಿದ್ದುದು ಎಲ್ಲಾ ನೆನಪಾಗುತ್ತೆ.ಮುಗಿಯದ ನೆನಪುಗಳ ಜಾತ್ರೆ ! ಜೋಕಾಲಿ,ಭರಪೂರ ಆಟಿಕೆ,ಕೊಳಲು,ವಾಚು,ಬಣ್ಣಬಣ್ಣದ ತಿಂಡಿಗಳೇ ತುಂಬಿದ ಎಳ್ಳಮವಾಸ್ಯೆ ಜಾತ್ರೆಯಲ್ಲಿ ಇದ್ದಕ್ಕಿದ್ದಂತೆ ಎಲ್ಲರೂ ಮಾಯವಾಗಿ ನಾನೊಬ್ಬನೇ ಪುಟ್ಟ ಮಗುವಾಗಿ ಉಳಿದಂತಿದೆ ನನ್ನ ಮನಸ್ತಿತಿ.ನೆನಪಿನ ಒಲೆಯ ಮುಂದೆ ಮಾರ್ದವ ಬೆಚ್ಚಗಿನ ಚಳಿ ಕಾಯಿಸೋದೆ ಚೆನ್ನ ಅಲ್ಲವಾ?

19 October 2008

18 October 2008

ಹೀಗೆ ಬದಲಾಯ್ತು....

ಎಲ್ಲಾ ಯಾತ್ರೆಗಳಿಗೂ ಒಂದು ಕಾರ್ಯಸಾಧನೆಯ ಉದ್ದೇಶ ಇರಲೇಬೇಕಂತಿಲ್ಲ ಎನ್ನುವುದು ನನ್ನ ಆಲೋಚನಾ ಬುನಾದಿ.ಹುಟ್ಟು ಅಲೆಮಾರಿಯ ಮನಸಿರುವ ನನ್ನ ಈ ವಾದ ನಿನ್ನೊಂದಿಗಿನ ಪ್ರೇಮ ನಿವೇದನೆಯಲ್ಲೂ ಬದಲಾಗಿಲ್ಲ ಎಂದರೆ ಆಶ್ಚರ್ಯ ಪಡಬೇಕಿಲ್ಲ.ನನ್ನ ಜೀವಮಾನದಲ್ಲಿ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿದ್ದು ಕೇವಲ ಮೂವರನ್ನು.
ಅಮ್ಮ ಮೊದಲನೆಯವರು,,ನನಗೀಗಲೂ ನೆನಪಿದೆ ಹೆತ್ತತಾಯಿಗಿಂತ ಹೆಚ್ಚಾಗಿ ನಾನು ಅಂಟಿಕೊಂಡಿರುತ್ತಿದ್ದುದು ಅಮ್ಮನಿಗೇನೆ,aವರ ಸೀರೆಯ ಹಿತವಾದ ವಾಸನೆ ಇಲ್ಲದಿದ್ದರೆ ನನಗೆ ನಿದ್ದೆ ಬರುತ್ತಿರಲಿಲ್ಲ.ಅನಂತರ ಹೆಚ್ಚು ಹತ್ತಿರವಾದವನು ರುದ್ರಪ್ರಸಾದ್ ಅವನು ನಂಗೆ ಕೇವಲ ಗೆಳೆಯ ಮಾತ್ರನಲ್ಲ ಜೀವದ ಬಂಧು,ಆತ್ಮಸಖ.ನನ್ನ ಬಗ್ಗೆ ನನಗಿಂತ ಹೆಚ್ಚು ಕಳಕಳಿ ಇರುವ ಒಬ್ಬನೇ ಒಬ್ಬ ಅವನು.ಅವನ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ.
ಇನ್ನು ನೀನು ಮನಕೆ ಜೀವಕೆ ಹತ್ತಿರವಾದವಳು.ದೂರವೇ ಇದ್ದರೂ...ಏನನೂ ಹೇಳದಿದ್ದರೂ ನನ್ನೊಳಗೆ ಆವರಿಸಿರುವವಳು.ನನ್ನ ಪಾಲಿಗೆ ನೀನು ಪಾರಿಜಾತ,ದೇವಲೋಕದ ಆ ಸುಮದಂತೆ ಕಾರಣವೆ ಇಲ್ಲದೆ ಕನಸಾಗಿ ಕಾಡುವವಳು.ಅಸಲಿಗೆ ನಾನು ನನ್ನ ಪುರಾಣ ಹೇಳದೆ ನೀನೆ ಅದನ್ನು ಅರಿತುಕೊಂಡರೆ ಚೆನ್ನ.ಆದರೆ ನಿನಗೆ ಹೇಳುವ ನೆಪದಲ್ಲಿ ನಾನು ಹಳೆಯ ನೆನಪಿನ ಹೊಳೆಯಲ್ಲಿ ಈಜುವಂತಾಗಿದೆ...ಕೊರೆತವೆನ್ದೆನಿಸಿದರೂ ಪ್ಲೀಸ್ ಸಹಿಸಿಕೋ!
ಆಗಷ್ಟೆ ನಾನು ಶಾಲೆಗೆ ಸೇರಿ ಒಂದುವರ್ಷ ಕಳೆದಿತ್ತು.ರಾಮಾಯಣದ ಜನಪ್ರಿಯತೆಯ ದಿನಗಳವು.ಅಪ್ಪಿ ತಪ್ಪಿ ಟಿ ವಿ ಇಟ್ಟುಕೊಂಡಿರುವವರ ಮನೆಯಲ್ಲಿ ಜನಜಾತ್ರೆ.ಭಾನುವಾರ ಬಂದರೆ ಊರೆಲ್ಲ ಕರ್ಫ್ಯೂ ಹಾಕಿದಂತೆ ನಿರ್ಜನವಾಗುತ್ತಿದ್ದ ಅಧ್ಭುತ ಕಾಲವದು.ಆಗ ಎಲ್ಲರಂತೆ ನಾನೂ ಅದರ ದಾಸಾನುದಾಸ.ಅಂತಹ ಒಂದು ದಿನದಲ್ಲೇ ನಮ್ಮ ಮನೆಗೊಬ್ಬ ಹೊಸ ಅತಿಥಿ ಬಂದರು.
ದಪ್ಪ ದಪ್ಪ ಮೀಸೆಯ ದೈತ್ಯ ಆಕ್ರತಿಗೆ ಹೆದರಿ ನಾನಂತೂ ಅವರ ಹತ್ತಿರವೂ ಸುಳಿಯಲಿಲ್ಲ.ಯಥಾಪ್ರಕಾರ ಅಮ್ಮನ ಸೇರಗಿನಲ್ಲಿಅದಾಗಿ ಕೊಂಡೆ ಆ ಮನುಷ್ಯನನ್ನ ದಿಟ್ಟಿಸಿ ಮುಖ ಮುಚ್ಚಿಕೊಂಡೆ.ಮನೆಯಲ್ಲಿ ಎಲ್ಲರೂ ಅವರೊಂದಿಗೆ ಸಲುಗೆಯಿಂದಿದ್ದರು,ನನ್ನ ಹೆತ್ತಮ್ಮನ ಮುಖವಂತೂ ವಿಪರೀತ ಅರಳಿತ್ತು! ಎಲ್ಲರೂ ನನ್ನನ್ನು ಅವರ ಬಳಿ ಹೋಗುವಂತೆ ಪುಸಲಾಯಿಸುವವರೇ! ಒಲ್ಲದ ಕುರಿಮರಿಯನ್ನು ಹುಲಿಬೋನಿಗೆ ತಳ್ಳುವಂತೆ ಕಡೆಗೂ ಅವರ ಕೈಗೆ ಬಲಿಪಶುವಾಗಿ ಒಪ್ಪಿಸಲ್ಪಟ್ಟೆ.ಆಗ ಆ ವ್ಯಕ್ತಿ chuchhutidda ತನ್ನ ಮೀಸೆಯಿಂದ ನನ್ನ muddisutta ನನ್ನ kiviyalli usurida maatugalu nanaginnoo nenapive.''ಏಕೆ hedarodu? ನಾನು ನಿನ್ನ pappanalva?!"

17 October 2008

ನೆನಪಿನ ನೆರಳು...

ಮನೆಯ ನಿರ್ವಹಣೆ ಅಮ್ಮ ಹೇಗೆ ಮಾಡುತ್ತಿದ್ದರೋ? ಎಂಬ ವಿಸ್ಮಯ ಈಗಲೂ ಕಾಡುತ್ತದೆ.ಅಜ್ಜ ಡ್ರೈವರ್ ಆಗಿದ್ದರಿಂದ ಸಮೀಪದ ಹಳ್ಳಿಗರ ಪರಿಚಯ ಅವರಿಗಿತ್ತು.ಅವರಲ್ಲಿ ಒಬ್ಬರಾದ ಎಡುವಿನಕೊಪ್ಪದ ಪುಟ್ಟಪ್ಪಗೌಡರ ಒಬ್ಬ ಮಗ ಹಾಗು ಮೂವರು ಸಂಭಂದಿಕರನ್ನು ಶಾಲೆಗೆ ಹೋಗುವ ಸಲುವಾಗಿ ಮನೆಯಲ್ಲಿ ಇಟ್ಟುಕೊಂಡರು.ಆಗ ತುಂಗಾನದಿಗೆ ಅವರೂರಿನಿಂದ ಸೇತುವೆ ಇರದಿದ್ದರಿಂದ ಮಳೆಗಾಲದಲ್ಲಿ ತುಂಗೆ ಉಕ್ಕಿಹರಿದಾಗ ಅವರೂರಿನ ಸಂಪರ್ಕ ತೀರ್ಥಹಳ್ಳಿಯಿಂದ ಕಡಿದು ಹೋಗುತ್ತಿತ್ತು,ಆದ್ದರಿಂದ ಓದುವ ಹುಡುಗರು ಪೇಟೆಯಲ್ಲಿ ಹೀಗೆ ವ್ಯವಸ್ಥೆ ಮಾಡಿಕೊಂಡೋ,ಇಲ್ಲ ಹಾಸ್ಟೆಲ್ಲಿನಲ್ಲಿ ಇದ್ದುಕೊಂಡೋ ಶಾಲೆಗೆ ಹೋಗುವುದು ಅನಿವಾರ್ಯವಾಗಿತ್ತು.ಇವರೊಂದಿಗೆ ಊರಿನ ಅಜ್ಜನ ಮನೆಕಡೆಯ ಇಬ್ಬರು ಟೀಚರ್ಗಳೂ ಆಗ ನಮ್ಮ ಮನೆಯಲ್ಲೇ ಉಳಿದುಕೊಂಡಿದ್ದರು.ಅವರೆಲ್ಲರ ಕಡೆಯಿಂದ ಒಂದಲ್ಲ ಒಂದು ರೀತಿಯ ಪ್ರತಿಫಲ ದೊರೆಯುತ್ತಾ ಇದ್ದಿರಬೇಕು ಎಂಬುದು ನನ್ನ ಊಹೆ.ಇದರೊಂದಿಗೆ ಸಾಕಿದ್ದ ದನಗಳ ಹಾಲಿನ ವ್ಯಾಪಾರ-ಅಮ್ಮ ಇಟ್ಟುಕೊಂಡಿದ್ದ ಹೊಲಿಗೆ ಮಿಶನ್ನಿನಿಂದ ಹುಟ್ಟುತ್ತಿದ್ದ ಪುಡಿಗಾಸು.... ಹೀಗೆ ಉಟ್ಟು ಉಡಲು ಕೊರತೆಇಲ್ಲದಂತೆ ನಮ್ಮೆಲ್ಲರ ಕನಿಷ್ಠ ಅಗತ್ಯಗಳು ಸುಸೂತ್ರವಾಗಿ ಪೂರೈಕೆ ಆಗುತ್ತಿದ್ದವು.
ನಾನು ಬಾಲವಾಡಿಗೆ ಹೋಗಲಾರಂಭಿಸಿದ ನಂತರ ನನ್ನ ಪ್ರಪಂಚವೂ ನಿಧಾನವಾಗಿ ಹಿಗ್ಗಿತು ಅನ್ನಿಸುತ್ತೆ.ಅಲ್ಲಿಂದ ನನ್ನನ್ನು ಭಾರತಿ ಶಿಶುವಿಹಾರಕ್ಕೆ ಸೇರಿಸಲಾಯಿತು.ಅಲ್ಲಿ ಎರಡು ವರ್ಷದ ಓದು.ಅನಂತರ ಸೇವಾಭಾರತಿಯಲ್ಲಿ ಭರ್ತಿಯಾದೆ.ಮನೆ,ಶಾಲೆ,ಶಿಶುವಿಹಾರದಲ್ಲಿದ್ದಾಗ ಕರೆದುಕೊಂಡು ಹೋಗುತ್ತಿದ್ದ ಶಾರದಕ್ಕ...ಅಲ್ಲಿನ ಮೊದಲ ಗೆಳೆಯರು..ಮನೆ ತುಂಬ ಇದ್ದ ಹಲವಾರು ಅಕ್ಕ,ಅನ್ನ,ಮಾವಂದಿರು ಹೀಗೆ ಯಾವಾಗಲೂ ತುಂಬಿದ ಮನೆಯಲ್ಲಿದ್ದು ಅಭ್ಯಾಸವಾಗಿದ್ದ ನನಗೆ ಹೊರಗೂ ಹೆಚ್ಚಿನ ವ್ಯತ್ಯಾಸ ಅನ್ನಿಸುತ್ತಿರಲಿಲ್ಲ.

16 October 2008

ಬಾಲ್ಯ ಬಲು ಮಧುರ...

ಹಾಗೆ ನೋಡಿದರೆ ನಮ್ಮ ಅಜ್ಜನಿಗೆ ಒಟ್ಟು ಆರು ಮಕ್ಕಳು.ನನ್ನ ಹೆತ್ತಮ್ಮ ಮೊದಲನೆಯವಳು,ನನ್ನ ಮೊದಲ ಚಿಕ್ಕಮ್ಮನಿಗೆ ಎರಡೆ-ಎರಡು ವರ್ಷ ವಯಸ್ಸಾಗಿದ್ದಾಗ ಕ್ಷುಲ್ಲಕ ಕಾರಣಕ್ಕಾಗಿ ನನ್ನಜ್ಜಿ ಆತ್ಮಹತ್ಯೆ ಮಾಡಿಕೊಂಡರಂತೆ.ಡ್ರೈವರ್ ಕೆಲಸ ಮಕ್ಕಳ ದೆಖಾರೇಖಿ ಮಾಡಿಕೊಳ್ಳಬೇಕಾದ ಸಂಕಟ ನೋಡಲಾರದೆ ಅಳಿಯನ ಮರು ಮದುವೆಯನ್ನ ತಾವೇ ಖುದ್ಧಾಗಿ ಹೆಣ್ಣು ನೋಡಿ ಅತ್ತೆ-ಮಾವನೆ ಮುಂದೆನಿಂತು ಮಾಡಿಸಿಕೊಟ್ಟರಂತೆ.ಶೀಘ್ರ ಕೋಪಿಯೂ,ಅವಿವೇಕಿಯೂ ಆದ ಮಗಳ ತಪ್ಪು ತಿಳಿದ ವಿವೇಕಿಗಳು ಅವರಿದ್ದಿರಬಹುದೇನೋ!.ಹೀಗೆ ನಮ್ಮ ಮನೆತುಂಬಿ ಬಂದವರೇ ನನ್ನಮ್ಮ.
ಅವರಿಗೂ ಎರಡು ಗಂಡು ಹಾಗು ಎರಡು ಹೆಣ್ಣು ಮಕ್ಕಳಾದವು.ನನ್ನ ಹೆತ್ತಮ್ಮ ಅಹಲ್ಯ,ಚಿಕ್ಕಮ್ಮ ನಾಗರತ್ನ,ಮಾವಂದಿರಾದ ಸುರೇಶ-ಪ್ರಕಾಶ,ಕಿರಿಚಿಕ್ಕಮ್ಮಂದಿರು ಆಶಾ -ಪೂರ್ಣಿಮಾ ಇವರಿಷ್ಟೇ ಇದ್ದ ನಮ್ಮ ಮನೆಗೆ ಕಿರಿಯವನಾಗಿ ನಾನು ಹುಟ್ಟಿದ್ಧು ೨೬ ಆಗೋಸ್ಟ್ ೧೯೮೨ ರಂದು.ಮನೆಗೆ ಮೊದಲ ಮೊಮ್ಮಗ ನಾನಾಗಿದ್ದರಿಂದ ಆ ಕಾಲದ ಸೆಂಟಿಮೆಂಟ್ನಂತೆ ನಾನು ಮನೇಲೆ ಹುಟ್ಟಿದೆ.
ಇಲ್ಲೊಂದು ತಮಾಷೆಯೂ ಇದೆ.ನನ್ನ ಹುಟ್ಟಿನ ಕಾಲಕ್ಕೋ ನಮ್ಮಜ್ಜ ಡ್ಯೂಟಿ ಮೇಲಿದ್ದರು,ಅವರು ಬಂದು ನನ್ನ ಮೊದಲಿಗೆ ನೋಡಿದಾಗ ನಾನು ನಾಲ್ಕು ಧಿನ ದೊಡ್ಡವನಾಗಿದ್ದೆ.ಇವರು ಪುರಸಭೆಗೆ ಜನನ ನೋಂದಣಿ ಮಾಡಿಸೋಕೆ ಹೋದಾಗ ಅಲ್ಲಿನವರು ತಡವಾಗಿ ಬಂದುದಕ್ಕೆ "ಏನ್ರಿ ನಾಲ್ಕ್ ದಿನದಿಂದ ಮಗು ಹುಟ್ ತಲೆ ಇತ್ತ?" ಅಂತ ಸರಿಯಾಗಿ ಬೈದರಂತೆ.ಅವರ ಮಾತಿಗೆ ಬೆಪ್ಪಾಗಿ ನನ್ನ ಜನನ ದಿನವನ್ನ ಅಜ್ಜ ಅದೇ ದಿನಕ್ಕೆ ಅಂದರೆ ೧ನೆ ಸೆಪ್ಟೆಂಬರ್ ಅಂತಲೇ ಬರಿಸಿದ್ದಾರೆ ಹೀಗಾಗಿ ದಾಖಲಾತಿಗಳಲ್ಲಿ ನಾನು ನಾಲ್ಕುದಿನ ತಡವಾಗಿ ಹುಟ್ಟಿದೆ!
ನಾನು ಹುಟ್ಟುವಾಗ ಮೊದಲ ಚಿಕ್ಕಮ್ಮ ಅಲ್ಲೇ ಸಮೀಪದ ಊರಲ್ಲಿ ಟೀಚರ್ ಆಗಿದ್ದರು.ಮಾವಂದಿರು ಕಾಲೇಜ್ನಲ್ಲಿದ್ದರೆ,ಒಬ್ಬ ಚಿಕ್ಕಮ್ಮ ಹೈಸ್ಕೂಲ್ನಲ್ಲೂ ಇನ್ನೊಬ್ಬಳು ನಾಲ್ಕನೇ ಕ್ಲಾಸಿನಲ್ಲೂ ಇದ್ದಳು.ಹೀಗಾಗಿ ನಾನೆಂದರೆ ಎಲ್ಲರಿಗೂ ವಿಪರೀತ ಪ್ರೀತಿ.ಅವರೆಲ್ಲರಿಗೂ ಆಡಲು ಒಂದು ಜೀವಂತ ಬೊಂಬೆ ಸಿಕ್ಕಂತೆ ಆಗಿತ್ತೇನೋ! ಅದೇನೇ ಇದ್ದರೂ ನನ್ನ ಮೊದಲ ಐದು ವರ್ಷಗಳು ಸಂಭ್ರಮದಿಂದಲೇ ಕೂಡಿದ್ದವು.

11 October 2008

ಆರಂಭದ ದಿನಗಳು

ನನಗೆ ನೆನಪಿರುವ ಹಾಗೆ ಬಾಲ್ಯದಲ್ಲೇನೂ ಸುಖ ಸಂತೋಷಕ್ಕೆ ಕೊರತೆಯಿರಲಿಲ್ಲ,ಅಥವಾ ನೋವಿನ ಅರಿವೂ ಇರದ ಎಲ್ಲವೂ ಸುಂದರ ಎನಿಸೊ ಮುಗ್ಧ ಸ್ಥಿತಿಯದು ಎನ್ನೋದು ಹೆಚ್ಚು ಸರಿ.ಆಗಿನಿಂದಲೂ ನಾವು ಅಂದರೆ ನನ್ನಮ್ಮ,ಅಜ್ಜ,ಅಜ್ಜಿ.ಇಬ್ಬರು ಚಿಕ್ಕಮ್ಮಂದಿರು ಹಾಗೆ ಇಬ್ಬರು ಮಾವಂದಿರು ಜೊತೆಯಾಗಿಯೇ ಇದ್ದ ನೆಮ್ಮದಿಗೆನೂ ಕೊರತೆಯಿರದ ಸರಳ ಮಧ್ಯಮವರ್ಗದ ಕುಟುಂಬ ನಮ್ಮದು.ನನ್ನ ಪ್ರಪಂಚವೂ ಅಷ್ಟಕ್ಕೆ ಸೀಮಿತ.ಅದು ಬಿಟ್ಟರೆ ನಾನು ಹೋಗುತ್ತಿದ್ದ ಬಾಲವಾಡಿ,ಅಲ್ಲಿನ ಉದ್ದ ಜಡೆಯ ಟೀಚರ್ ಹಾಗು ತುರುಬಿನ ಟೀಚರ್ ಇವರಿಗೆ ನನ್ನ ಅರಿವಿನ ಪರಿಧಿ ಮುಗಿದಿರುತ್ತಿತ್ತು.ನಿಜವಾಗಿ ನಾನು ಅಂಟಿಕೊಂಡಿರುತ್ತಿದ್ದುದು ನನ್ನಜ್ಜಿಗೆ ಅವರನ್ನೇ ಅಮ್ಮ ಎಂದು ಕರೆಯುತ್ತಿದ್ದೆ,ಈಗಲೂ ಅವರನ್ನೇ ಅಮ್ಮ ಎನ್ನೋದು.

ಮನೆಯಲ್ಲಿ ಆರು ಕರೆಯುವ ದನಗಳಿದ್ದವು ಅಜ್ಜ ಆಗಿನ್ನೂ ಗಜಾನನ ಕಂಪೆನಿಯಲ್ಲಿ ಡ್ರೈವರ್ ಆಗಿದ್ದರು.ನಿತ್ಯ ಉಡುಪಿಯಿಂದ ಶಿವಮೊಗ್ಗದ ರೂಟಲ್ಲಿ ಅವರದ್ದು ಪಾಪ ಗಾಣದೆತ್ತಿನ ದುಡಿತ.ಇತ್ತ ಮನೆಯಲ್ಲಿ ತಿನ್ನೋ ಕೈಗಳು ಹದಿನಾರು,ಅತ್ತ ದುಡಿಮೆ ಆಗುತಿದ್ದುದು ಎರಡೇ ಕೈಗಳಿಗೆ.ಹೀಗಾಗಿ ಅಷ್ಟಿಷ್ಟು ಮನೆ ಕರ್ಚು ಸರಿದೂಗಿಸಲು ಅಮ್ಮ ಮಾಡುತಿದ್ದ ಪ್ರಯತ್ನದ ಫಲವೆ ಹಾಲು ಮಾರಾಟಕ್ಕಾಗಿ ದನ ಸಾಕಣೆ.ಹೀಗೆ ಕರೆದ ಹಾಲನ್ನ ಮನೆ ಮನೆ ಮನೆಗೆ ಕೊಟ್ಟು ಬರೊ ಜವಬ್ದಾರಿ ನನ್ನದು.

09 October 2008

ಮುಗಿಲು ಮುಟ್ಟಿದ ಮೋಡ,ಮುಗಲನೆ ಮುಚ್ಚಿದ ಪರಿ ನೋಡ/ ಮಳೆ ಬಿಲ್ಲಿಗೂ ಹಾಕಿ ಸಂಚಕಾರ,ಸುರಿಯಲಿ ಮಳೆ ಹನಿ ಕಳೆಯೆ ಮನಭಾರ//

06 October 2008

ಈ ಪ್ರೀತಿ ಹುಟ್ಟಲು ಕಾರಣವೇ ಬೇಕಿಲ್ಲ....

ಅಷ್ಟಕ್ಕೂ.. ನಾನು ನಿನ್ನನ್ನೇ ಏಕೆ ಇಷ್ಟಪಟ್ಟೆ? ನೀನು ನನ್ನ ಮನದ ಕೊಳಕ್ಕೆ ಕಲ್ಲೋಗೆದದ್ದಾದರೂ ಹೇಗೆ? ಇದು ಕೇವಲ ಬಾಲಿಶ ಸೆಳೆತ ಅಲ್ಲ ತಾನೆ? ಎನ್ನೋ ಅನುಮಾನ ನನಗೂ ಕೆಲವು ಸಾರಿ ಅನಿಸಿದ್ದಿದೆ.ಆದರೆ ಯಾವಾಗಲೂ ನಿನ್ನ ನನ್ನ ನಡುವೆ ಇದ್ದ ಅಂತರ ನನಗೆ ಇದೆ ಎಂದೆ ಅನಿಸಿಲ್ಲ.ಕಾರಣ ನಾನು ನಿನ್ನನ್ನು ಎಂದೂ ಮರೆಯಲೇ ಇಲ್ಲ.ಕೇವಲ ಆಕರ್ಷಣೆ ಯಾಗಿದ್ದರೆ ಇನ್ಯಾರಾದರೂ ಸೆಳೆಯುತಿದ್ದರೆನೋ? ರೂಪಕ್ಕೆ ಸೋತೆ ಎನ್ನಲು ಕಾರಣವಿಲ್ಲ,ನೀನೇನು ಸೌಂದರ್ಯದ ಪ್ರದರ್ಶನಕ್ಕಿಳಿದವಳಲ್ಲ,ಆದರೂ ನೀನೆ ನನಗಿಷ್ಟ...ಏಕೆಂದರೆ ಈ ಪ್ರೀತಿಗೆ ಕಾರಣ ಬೇಕಿಲ್ಲ.ದ್ವೇಷಿಸೋಕೆ ನೂರು ಕಾರಣಗಳಿರಬಹುದು,ಆದರೆ ಪ್ರೀತಿ ಚಿಗುರೋದೆಯೋಕೆ ಕಾರಣವೆ ಬೇಕಿಲ್ಲ...ಇದು ಪ್ರೀತಿಗಾಗಿ ಮಾತ್ರ ಪ್ರೀತಿ,,,,ನಿರೀಕ್ಷೆಯಿದೆ ಹುಸಿಮಾಡಬೇಡ.ಇಷ್ಟು ಕಾಲ ಒಂದೇ ಒಂದು ಮಾತನಾಡದೆಯೂ ಪ್ರೀತಿಯ ಸೆಳೆತ ಹಾಗೆ ಉಳಿದಿರೋಕೆ ಅದೇ ತಾನೆ ಕಾರಣ..ಕೇವಲ ಪ್ರೀತಿ.

05 October 2008

ನನ್ನ ಮನಸೊಳಗೆ ಇರೋದು ಏನಂದ್ರೆ..

ಈಗ ನಾನಿರೋ ಸ್ಥಿತಿನಲ್ಲಿ ನನ್ ಪ್ರೀತೀನ ಹೇಳ್ಕೊಳ್ಳೋಕೆ ಅಡ್ಡಿಯೇನಿಲ್ಲ.ಸ್ವತಂತ್ರವಾಗಿದ್ಧೀನಿ,ಶ್ರಮದಿಂದ ವಿದ್ಯಾವಂತನಾಗಿದೀನಿ,ತಕ್ಕ ಮಟ್ಟಿಗೆ ದುಡಿಮೆಯೂ ಇದೆ.ನನ್ನನ್ನು ನಂಬಿ ಬಾಳಲು ಬರುವವರಿಗೆ ಕಾಮ್ಫೆರ್ತೆಬ್ಲ್ ಲೈಫ್ ಕೊಡುವ ಶಕ್ತಿಯೂ ಈಗ ನನ್ನಲ್ಲಿದೆ.ನನಗ್ಗೊತ್ತು ''ಇನ್ನೂ ನಾನು ಯಾವ ಉತ್ತರವನ್ನೂ ಹೇಳಿಲ್ಲ...ಆಗ್ಲೇ ಇದನ್ನೆಲ್ಲಾ ನಂಗೆ ಹೇಳ್ತಿದಾನಲ್ಲ" ಅನ್ನೋ ಸಂದೇಹ ನಿನಗೆ ಮೂಡಿದೆ.ಆದ್ರೆ...ಕೇಳು,ನನ್ನ ಪ್ರೀತಿಯಗೆಲುವಿನ ಬಗ್ಗೆ ನನಗಿರೋ ಅತಿಯಾದ ಆತ್ಮವಿಶ್ವಾಸವೆ ಇದಕ್ಕೆಲ್ಲ ಕಾರಣ.ಮುಖ್ಯವಾಗಿ ಮುಂದೆ ಜಾತಿ ಪ್ರಶ್ನೆ ಎದುರಾದರೂ ನನ್ನ ಪ್ರೀತಿಗೆಲ್ಲುತ್ತೆ,ನೀನು ನನ್ನವಳಾಗ್ತೀಯ,ನನ್ನ ಬಾಳ ಜೋತೆಗಾರ್ತಿಯಾಗ್ತೀಯ ಎನ್ನುವ ಅದಮ್ಯ ನಿರೀಕ್ಷೆ...ನನ್ನ ಈ ಕನ್ಫೆಶನ್ ಪ್ರತೀ ದಿನ ನಿನ್ನ ತಲುಪುತ್ತೆ.ಹುತ್ತಿನಿನ್ದೀಚೆಗೆನನಗೆ ತಿಳಿದ ಸಂಗತಿಗಳನ್ನೆಲ್ಲ ನಿನ್ನಲ್ಲಿ ಹೇಳ್ತೀನಿ ಕೇಳು.ಶಾಂತವಾಗಿ ಕೂತುಕೊಂಡು ಕೂಲಾಗಿ ಯೋಚಿಸು.ನೀನು ಯುನಿಕ್ ಇನ್ ಆಲ್ ದ ಆಸ್ಪೆಕ್ತ್ ಅನ್ಕೊಂಡಿದೀನಿ.ಜಸ್ಟ್ ಲಿಸನ್ ಇಟ್ ಎವರಿಡೇ ಎಂಡ್ ಯು ಆರ್ ಫ್ರೀ ಟೂ ಸೆ ಯುವರ್ ಒಪಿನಿಯನ್ ಎಂಡ್ ಕಂಕ್ಲುಶನ್.ನೀನು ಸಿಕ್ಕಿದರೆ ಧನ್ಯ;ಸಿಗದಿದ್ರೆ ಈ ಬಾಳೇ ಶೂನ್ಯ.ಆಗಾಗಿ ಮದುವೆ,ದಾಂಪತ್ಯ ಇವೆಲ್ಲ ಈ ಬಾಳಲ್ಲಿ ಮರೆತ ಮಾತುಗಳು.ಕೇಳು ಮತ್ತು ಹೇಳು.ನಿನ್ನ ಉತ್ತರದ ನಿರೀಕ್ಷೆಯಿದೆ,ಆದರೆ ಈಗಲ್ಲ ನನ್ನ ಮಾತುಗಳೆಲ್ಲ ಮುಗಿದ ನಂತರ.ಇವತ್ತಿಗೆ ಇಷ್ಟೇ ಸಾಕು.ನಾಳೆ ಇನ್ನಷ್ಟು.ಬರಲ?

ಒಂದೇ ಒಂದು ಅವಕಾಶ ಬೇಕು...

ನನಗೆ ನಿನ್ ಪರಿಚಯವಾಗಿ ಹದಿಮೂರು ವರ್ಷ ಕಳೆದೆ ಹೋಗಿದೆ.ಈ ಹದಿ ಮೂರು ವರ್ಷದಲ್ಲಿ ನನ್ ಬಾಳಲ್ಲಿ ಏರು ಪೇರಾದಂತೆ ನಿನ್ ಬಾಳಲ್ಲೂ ಸಾಕಷ್ಟು ಬದಲಾವಣೆ ಆಗಿರಬಹುದು ಎನ್ನೋ ಅರಿವು ನನಗಿದೆ.ನಿನ್ನ ಜಾಡನ್ನೇ ಅನುಸರಿಸುತ್ತ ತೀರ್ಥಹಳ್ಳಿಯಿಂದ ಬೆಂಗಳೂರಿಗೆ ಬಂದ ನಾನು ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದೆ.ಕದ್ದು ಮುಚ್ಚಿ ನಿನ್ನ ಬಗ್ಗೆ ಮಾಹಿತಿಯನ್ನೂ ಕಲೆ ಹಾಕ್ತಿದ್ದೆ.ನಿನ್ನ ಪ್ರೀತಿಯ ಸೆಳೆತವಷ್ಟೇ ಈ ಹುಡುಕಾಟದ ಹಿಂದಿದ್ಧದ್ದು ಅದಕ್ಕೆ ನಿನ್ನ ಕ್ಷಮೆ ನಿರೀಕ್ಷೆಯಿದೆ.ಕ್ಷಮಿಸ್ತೀಯ ಅಲ್ವ? ಈ ಒಂದ್ ಡಿಕೆಡ್ನಲ್ಲಿ ನೀನು ಇನ್ಯಾರ್ನಾದ್ರೂ ಇಷ್ಟಪಟ್ಟಿರಬಹುದು ಅಥವಾ ನಿನ್ನ ತಂದೆ ತಾಯಿ ನಿನ್ನ ಮುಂದಿನ ಬಾಳಿಗೆ ಏನಾದ್ರೂ ಪ್ಲಾನ್ ಮಾಡಿರ ಬಹುದು.ಹಾಗು ಅದು ನಿನಗೂ ಹಿಡಿಸಿರಲೂಬಹುದು,ಅದು ಸಹಜ ಕೂಡ.ತಡವಾಗಿದೆ ಅಂತ ಗೊತ್ತು...ಆಧರೆ ನಾನು ಹೇಳಲು ಮರೆತಿರೋದು ಇನ್ನೂ ಇದೆ.ದಯವಿಟ್ಟು ನನ್ನ ಮಾತುಗಳನ್ನು ಪೂರ್ತಿಯಾಗಿ ಕೇಳು.ಆ ನನ್ನ ಪ್ರೀತಿಯಲ್ಲಿ ಹನಿಯಷ್ಟಾದರೂ ಪ್ರಾಮಾಣಿಕತೆಯಿದ್ದರೆ ನೀನು ನನ್ನನ್ನು ಇಷ್ಟಪಡ್ತೀಯಅನ್ನೋ ಕ್ಷೀಣ ಆಸೆ ನನ್ನದು.ಒಂದೇ ಒಂದು ಅವಕಾಶ ನನಗೆ ನೀನು ಕೊಡ್ತೀಯಲ್ವ?

ಹೇಳೇ ಬಿಡಲಾ?

ಹೌದು.. ಇದೆಲ್ಲ ನಾನು ನಿನಗೇ ಏಕೆ ಹೇಳ್ಬೇಕು? ನೀನು ಏಕೆ ಇದ್ನೆಲ್ಲ ಕೇಳ್ಬೇಕು? ಅಂತ ನಿನಗನ್ನಿಸ್ಬಹುದು.ಉತ್ತರ ಇಷ್ಟೇ..ಏಕೆಂದರೆ ''ಈ ನನ್ನ ಕನಸಿನ ರಾಜಕುಮಾರಿ ಬೇರೆ ಯಾರೂ ಅಲ್ಲ; ಅದು ನೀನೆ" ತೀರಾ ಭಾವುಕವಾಗಿ ಪ್ರೀತೀನ ನಿನ್ ಮುಂದೆ ಹೇಳಿಕೊಳ್ ಬೇಕು ಅಂತ ನನ್ನೊಳಗಿನ ಭಂಡ ಧೈರ್ಯ ನನ್ನ ಪುಸಲಾಯಿಸುತ್ತಿರೋದೇನೋ ನಿಜ.ಆದ್ರೆ ಬದುಕು ಕೇವಲ ಭಾವುಕತೆಯಲ್ಲ.ಇಲ್ಲಿ ವಾಸ್ತವನೂ ಇದೆ.ಆ ವಾಸ್ತವದ ತಳಹದಿಯ ಮೇಲೆ ನಾನು ನನ್ನ ಸ್ವಪ್ನಸೌಧವನ್ನ ಕಟ್ಟಬೇಕು ಅನ್ಕೊಂಡಿದೀನಿ.ಅದಾಗ ಬೇಕಿದ್ದರೆ ನಾನು,ನನ್ನ ಬಗ್ಗೆ,ನನಗೆ ಗೊತ್ತಿರೋ ಎಲ್ಲ ಸತ್ಯಗಳನ್ನೂ ನಿನ್ನ ಮುಂದೆ ಹೇಳಲೇ ಬೇಕು.ಇದರಲ್ಲೇನು ಸುಳ್ಳು-ಮೋಸ ಇರಕೂಡದು.ನಿನ್ನ ದೃಷ್ಟಿಯಲ್ಲಿರುವ ನನ್ನ ಇಮೇಜ್ ಅಥವಾ ವ್ಯಕ್ತಿತ್ವವನ್ನ ಪ್ರಾಮಾಣಿಕವಾದ ನನ್ನ ಕಾನ್ಫೆಶನ್ ಜೊತೆ ಹೋಲಿಸಿ ನೋಡು.ನಿನಗೂ ಈ ಪ್ರೀತಿಯ ಪರಿಶುದ್ದತೆ ಅರಿವಾಗಬಹುದು.ನಾನೂ ನಿನ್ನ ಪ್ರೀತಿಗೆ ಪಾತ್ರವಾಗಬಹುದು.ಕೇಳುತ್ತೀಯಲ್ವ?

ನಿನ್ನ ಕನವರಿಕೆ

ಪ್ರೀತಿ... ಹೌದು ನಾನೂ ಒಬ್ಬಳನ್ನ ಪ್ರೀತಿಸ್ತಿದೀನಿ.ಅದೂ ಕಳೆದ ಹದಿಮೂರು ವರ್ಷಗಳಿಂದ! ತಮಾಷೆ ಅಂದ್ರೆ ಅದನ್ನ ಅವಳಿಗೆ ಹೇಳೇ ಇಲ್ಲ.ಯಾಕ್ ಹೇಳಿಲ್ಲ? ಅಂತ ಯಾರದ್ರೂ ಕೇಳಿದ್ರೆ ಅದೇಕೋ ಹೇಳುವಷ್ಟು ದೈರ್ಯ ನನಗಿರಲಿಲ್ಲ ಅಂತೀನಿ.ಯೂರೋಪಿನಲ್ಲಿ ಹದಿಮೂರು ಅಶುಭ ಸಂಖ್ಯೆಯಂತೆ! ಅದೇ ಸಂಖ್ಯೆಯಷ್ಟು ವರ್ಷ ನನ್ನೊಳಗೆ ಹುದುಗಿದ್ದ ಭಾವಪ್ರಪಂಚನ ಈಗ ದೈರ್ಯ ಮಾಡಿ ಅವಳ ಮುಂದೆ ತೆರೆದಿಡುವ ಮನಸಾಗಿದೆ.ಅವಳು ನಡೆಯುವ ಮುಂದಿನ ಬಾಳ ಹಾದಿಗೆ ಸುಖದ ಬೆಳದಿಂಗಳ ನೆಲಹಾಸನ್ನೆ ಹಾಸುವ ಕನಸಿದೆ....ನಂದು ಒಂದೇ ಮೊರೆ ''ಕೇಳು ನನ್ನ ಈ ಆಲಾಪ;ಕೇಳದೆ ಹೋದರೆ ಇದು ವ್ಯರ್ಥ ಪ್ರಲಾಪವಾಗುವ ಅಪಾಯಾನೂ ಇದೆ", ಕೇಳ್ತೀಯಲ್ವ?

ಪ್ರೇಮ ಪತ್ರ

ವಯಸ್ಸು ಇಪ್ಪತೈದಾಯ್ತು,ಹೊಸತಾಗಿ ಪ್ರೇಮ ಪತ್ರ ಬರೆಯೋ ವಯಸ್ಸೇನು ಅಲ್ಲ.ಈ ವಯಸ್ಸಿನಲ್ಲಿ ಪ್ರೀತಿಯ ಅನ್ವೇಷಣೆ,ಭಾಂದವ್ಯದ ಹುಡುಕಾಟ.ನೋಡುವವರ ಕಣ್ಣಿಗೆ ಅಲ್ಲದಿದ್ದರೂ ನನ್ನ ಕಂಗಳಿಗೆ ಅವಳ ಸೌಂದರ್ಯ ಕಾಣಿಸುತ್ತೆ.ಅದಕ್ಕೆ...ಏಳು ಸಮುದ್ರದಾಚೆ ಇದ್ದರೂ ನನ್ನ ಕನಸಿನ ರಾಜಕುಮಾರಿನ ಹುಡುಕುತ್ತ ಹೊರಟಿದ್ದೇನೆ.ಇದು ನನ್ನ ಸುಂದರ ಸ್ವಪ್ನದ ಕಥೆ..ಕೇಳಿದ್ರೆ ನಿಂಗೂ ಇಷ್ಟವಾಗುತ್ತೆ.ನನ್ನ ಎದೆಯಾಳಧ ಭಾವಗೀತೆ ನಿನಗೂ ಆಪ್ತವಾಗುತ್ತೆ.ಯಾರಿಗ್ ಗೊತ್ತು? ನನ್ನ ಮಾತುಗಳಲ್ಲಿ ಪ್ರಾಮಾಣಿಕತೆ ಧ್ವನಿಸಿದರೆ ನನ್ನ ರಾಜಕುಮಾರಿ ನನ್ನವಳಾಗಬಹುದು.ನೀನೂ ಅವಳಾಗ ಬಹುದು! ಹುಚ್ಚು ಪ್ರೀತಿಯ ಹತ್ತು ಮುಖಗಳನ್ನು ಗುರುತಿಸಿದರೂ ಗುರುತಿಸಬಹುದು.ಕೇಳ್ತೀಯ ಅಲ್ವ?