ಹಳೆ ನೆನಪುಗಳು ಮರುಕಳಿಸುವಾಗ ಹಬೆಯಾಡುವ ಚಹಾ ಕಪ್ ಕೈಯಲ್ಲಿ ಹಿಡಿದು ಮಳೆಯನ್ನೇ ನೋಡುತ್ತಾ ಅದರ ಬಿಸಿಯ ಗುಟುಕು ಗುಟುಕಾಗಿ ಅನುಭವಿಸುತ್ತಾ ಕಿಟಕಿಯಂಚಿನಲ್ಲಿ ಕೂರೋದೇ ಹಿತ.ನಿಂತ ಮಳೆಯ ಉಳಿದ ಹನಿ ಮೆಲ್ಲನೆ ಬೀಸೊಗಾಳಿಗೆ ಮರದ ಎಲೆಗಳಿಂದ ಉದುರೋವಾಗ ಅವಕ್ಕೂ ನನ್ನಂತೆ ಚಳಿಗೆ ನಡುಕ ಹುಟ್ಟಿರಬಹುದೇ? ಎಂಬ ಅನುಮಾನ ನನಗೆ.ಮೈತುಂಬ ಹೊದ್ದುಕೊಂಡು ಅಕ್ಷರಶಃ ಕಂಬಳಿ ಮರೆಯಲ್ಲಿ ಭೂಗತನಾದವನು ಜಾರಿದೆ ಹಳೆಯ ಸ್ಮ್ರತಿಗೆ.ಹೌದಲ್ವ? ಹೀಗೆಯೇ ಮಳೆಯ ಸವಾರಿ ಬಂದಾಗಲೆಲ್ಲಾ ಬೆಚ್ಚಗೆ ಹೊದಿಸಿ ಅಮ್ಮ ಚಿಕ್ಕಂದಿನಲ್ಲಿ ನನ್ನ ತಬ್ಬಿ ಮಲಗುತಿದ್ದರಲ್ಲ! ಎಂಬ ಬೆಚ್ಚನೆಯ ನೆನಪು.ಆಗೆಲ್ಲ ಕಂಬಳಿಗಿಂತಲೂ ಹಿತವೆನಿಸಿದ್ದು ಅಮ್ಮನ ಮೈಯ್ಯ ಹಿತವಾದ ಬಿಸಿ ಹಾಗು ಅವರ ಸೀರೆಯ ಆಪ್ತ ವಾಸನೆ.
ಬಾರ್ ಮಾತ್ರ ಬದಲಿಸಿದ ಹಳೆಯ ಹವಾಯಿ ಚಪ್ಪಲಿಯನ್ನು ವರ್ಷ ವರ್ಷವೂ ಬಳಸುತ್ತಿದ್ದುದು.ಮಳೆಗೆ ರಾಡಿಯೆದ್ದು ಕೆಸರಾದ ರಸ್ತೆಗಳಲ್ಲಿ ಅವನ್ನೇ ಮೆಟ್ಟಿ ಶಾಲೆಗೆ ಹೋಗುವಾಗ ಬೆನ್ನಿಗೆಲ್ಲ ಕೆಮ್ಮಣ್ಣ ಕೆಸರ ಚಿತ್ತಾರ ಹರಡುತ್ತಿದ್ದುದು ಎಲ್ಲಾ ನೆನಪಾಗುತ್ತೆ.ಮುಗಿಯದ ನೆನಪುಗಳ ಜಾತ್ರೆ ! ಜೋಕಾಲಿ,ಭರಪೂರ ಆಟಿಕೆ,ಕೊಳಲು,ವಾಚು,ಬಣ್ಣಬಣ್ಣದ ತಿಂಡಿಗಳೇ ತುಂಬಿದ ಎಳ್ಳಮವಾಸ್ಯೆ ಜಾತ್ರೆಯಲ್ಲಿ ಇದ್ದಕ್ಕಿದ್ದಂತೆ ಎಲ್ಲರೂ ಮಾಯವಾಗಿ ನಾನೊಬ್ಬನೇ ಪುಟ್ಟ ಮಗುವಾಗಿ ಉಳಿದಂತಿದೆ ನನ್ನ ಮನಸ್ತಿತಿ.ನೆನಪಿನ ಒಲೆಯ ಮುಂದೆ ಮಾರ್ದವ ಬೆಚ್ಚಗಿನ ಚಳಿ ಕಾಯಿಸೋದೆ ಚೆನ್ನ ಅಲ್ಲವಾ?
No comments:
Post a Comment