ನನಗೆ ನೆನಪಿರುವ ಹಾಗೆ ಬಾಲ್ಯದಲ್ಲೇನೂ ಸುಖ ಸಂತೋಷಕ್ಕೆ ಕೊರತೆಯಿರಲಿಲ್ಲ,ಅಥವಾ ನೋವಿನ ಅರಿವೂ ಇರದ ಎಲ್ಲವೂ ಸುಂದರ ಎನಿಸೊ ಮುಗ್ಧ ಸ್ಥಿತಿಯದು ಎನ್ನೋದು ಹೆಚ್ಚು ಸರಿ.ಆಗಿನಿಂದಲೂ ನಾವು ಅಂದರೆ ನನ್ನಮ್ಮ,ಅಜ್ಜ,ಅಜ್ಜಿ.ಇಬ್ಬರು ಚಿಕ್ಕಮ್ಮಂದಿರು ಹಾಗೆ ಇಬ್ಬರು ಮಾವಂದಿರು ಜೊತೆಯಾಗಿಯೇ ಇದ್ದ ನೆಮ್ಮದಿಗೆನೂ ಕೊರತೆಯಿರದ ಸರಳ ಮಧ್ಯಮವರ್ಗದ ಕುಟುಂಬ ನಮ್ಮದು.ನನ್ನ ಪ್ರಪಂಚವೂ ಅಷ್ಟಕ್ಕೆ ಸೀಮಿತ.ಅದು ಬಿಟ್ಟರೆ ನಾನು ಹೋಗುತ್ತಿದ್ದ ಬಾಲವಾಡಿ,ಅಲ್ಲಿನ ಉದ್ದ ಜಡೆಯ ಟೀಚರ್ ಹಾಗು ತುರುಬಿನ ಟೀಚರ್ ಇವರಿಗೆ ನನ್ನ ಅರಿವಿನ ಪರಿಧಿ ಮುಗಿದಿರುತ್ತಿತ್ತು.ನಿಜವಾಗಿ ನಾನು ಅಂಟಿಕೊಂಡಿರುತ್ತಿದ್ದುದು ನನ್ನಜ್ಜಿಗೆ ಅವರನ್ನೇ ಅಮ್ಮ ಎಂದು ಕರೆಯುತ್ತಿದ್ದೆ,ಈಗಲೂ ಅವರನ್ನೇ ಅಮ್ಮ ಎನ್ನೋದು.
ಮನೆಯಲ್ಲಿ ಆರು ಕರೆಯುವ ದನಗಳಿದ್ದವು ಅಜ್ಜ ಆಗಿನ್ನೂ ಗಜಾನನ ಕಂಪೆನಿಯಲ್ಲಿ ಡ್ರೈವರ್ ಆಗಿದ್ದರು.ನಿತ್ಯ ಉಡುಪಿಯಿಂದ ಶಿವಮೊಗ್ಗದ ರೂಟಲ್ಲಿ ಅವರದ್ದು ಪಾಪ ಗಾಣದೆತ್ತಿನ ದುಡಿತ.ಇತ್ತ ಮನೆಯಲ್ಲಿ ತಿನ್ನೋ ಕೈಗಳು ಹದಿನಾರು,ಅತ್ತ ದುಡಿಮೆ ಆಗುತಿದ್ದುದು ಎರಡೇ ಕೈಗಳಿಗೆ.ಹೀಗಾಗಿ ಅಷ್ಟಿಷ್ಟು ಮನೆ ಕರ್ಚು ಸರಿದೂಗಿಸಲು ಅಮ್ಮ ಮಾಡುತಿದ್ದ ಪ್ರಯತ್ನದ ಫಲವೆ ಹಾಲು ಮಾರಾಟಕ್ಕಾಗಿ ದನ ಸಾಕಣೆ.ಹೀಗೆ ಕರೆದ ಹಾಲನ್ನ ಮನೆ ಮನೆ ಮನೆಗೆ ಕೊಟ್ಟು ಬರೊ ಜವಬ್ದಾರಿ ನನ್ನದು.
No comments:
Post a Comment