30 November 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೬.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೬.👊


ಒಲಿಯ ಬೇಕಿದ್ದ ಪ್ರಾಯದಲ್ಲಿ ಅವಳು ಒಲಿದು ಜೊತೆಗೆ ಬಂದಿದ್ದರೆ. ಆಗಬೇಕಿದ್ದ ವಯಸ್ಸಿನಲ್ಲಿ ತನ್ನದೂ ಮದುವೆಯಾಗಿದ್ದರೆ ಬಹುಶಃ ಇಷ್ಟೆ ದೊಡ್ಡ ಮಗ ಈಗ ತನಗೂ ಇದ್ದಿರುತ್ತಿದ್ದನಲ್ಲ!ˌ ಅವನೂ ಕೂಡ ಹೀಗೆಯೆ ತರಾವರಿ ಪ್ರಶ್ನಾವಳಿಗಳಿಂದ ತನ್ನನ್ನ ಕಂಗಾಲುಗೊಳಿಸುತ್ತಿದ್ದನಲ್ಲ ಅನ್ನುವ ಆಲೋಚನೆ ಅಚಾನಕ್ಕಾಗಿ ಮನಸೊಳಗೆ ಮೂಡುತ್ತಲೆˌ ವಿಷಾದಕ್ಕೋ ಕುಚೋದ್ಯಕ್ಕೋ ಒಂದು ಮಾಸಲು ನಗುವಿನ ಸೆಲೆಯೊಂದು ಅವನ ಮುಖದ ಮೇಲೆ ಹಾದು ಹೋಯಿತು. 


ಯಾವುದೆ ಒಂದು ಅರೆಬರೆ ಹಳ್ಳಿಯಂತಹ ಪಟ್ಟಣ ಪ್ರದೇಶದಿಂದ ಬರುವ ಸರಾಸರಿ ಮಕ್ಕಳ ಮನದಲ್ಲಿರುವ ಕುತೂಹಲ ಸುಭಾಶನ ಮನಸಲ್ಲೂ ಇತ್ತು. ಇಪ್ಪತ್ತೈದು ವರ್ಷಗಳ ಹಿಂದೆ ಇದ್ದ ತನ್ನನ್ನೆ ತಾನು ಕಾಲಯಾನದ ಕನ್ನಡಿಯಲ್ಲಿ ಸ್ವಲ್ಪ ಹಿಂದೆ ಸರಿದು ಕಾಣುತ್ತಿರುವ ಭ್ರಮೆಗೆ ಬಿದ್ದನವ. 


ಆ ಕಾಲಕ್ಕೂ ಈ ಕಾಲಕ್ಕೂ ಇರುವ ಸಣ್ಣಪುಟ್ಟ ವ್ಯತ್ಯಾಸಗಳೆಂದರೆ ಬಡತನ ಬಹುತೇಕ ಸಾರ್ವತ್ರಿಕವಾಗಿದ್ದ ಆ ಕಾಲದಲ್ಲಿ ಕೆಳ ಮಧ್ಯಮ ವರ್ಗದವರ ಸಂಖ್ಯೆಯೆ ಅಪಾರವಾಗಿತ್ತು. ಇವತ್ತಿನ ಪೀಳಿಗೆ ಸಹಜವಾಗಿ ಬದುಕಿನ ಅಂಗಗಳೆಂದೆ ಪರಿಗಣಿಸುವ ಟಿವಿˌ ಫ್ಯಾನುˌ ಮಿಕ್ಸರುˌ ಅಡುಗೆ ಅನಿಲದ ಬಳಕೆಯೂ ಸಹ ಐಶಾರಾಮದ ಸಾಲಿನಲ್ಲಿ ಅಂದಿತ್ತು. ಖಾಸಗಿಯಾಗಿ ವಾಹನಗಳನ್ನ ಕೊಂಡುಕೊಳ್ಳುವ ಸಾಮರ್ಥ್ಯ ಇದ್ದವರು ಆಗೆಲ್ಲ ವಿರಳಾತಿ ವಿರಳ. ಹೀಗಾಗಿ ಸಮೂಹ ಸಾರಿಗೆಗಳಿಗೆ ಬಹಳ ಬೇಡಿಕೆ ಹಾಗೂ ಮರ್ಯಾದೆ ಇತ್ತು. ಹೇಗಾದರೂ ಬೆಳೆದು ದುಡ್ಡು ಮಾಡಬೇಕು ಅನ್ನೋ ಮನಸ್ಥಿತಿಯ ಮಂದಿ ಕನಿಷ್ಠ ಗ್ರಾಮೀಣ ಭಾರತದಲ್ಲಾದರೂ ಕಡಿಮೆ ಸಂಖ್ಯೆಯಲ್ಲಿದ್ಢರುˌ ಹೀಗಾಗಿ ಹಣವಂತಿಗೆಗಿಂತ ನೈತಿಕತೆಗೆ ಜನ ಗೌರವಕೊಡುವ ಕಾಲ ಅದಾಗಿತ್ತು. 


ಸಿನೆಮಾ ಆಗಿನ್ನೂ ಬೀದಿಗೆ ಬಂದಿಲ್ಲದ ಕಾರಣ ಸಿನೆಮಾ ತಯಾರಕರು ಹಾಗೂ ನಟಿಸುವವರು ನಿಜವಾಗಿಯೂ ಕೈಗೆಟುಕದ ನಕ್ಷತ್ರಗಳೆ ಆಗಿರುತ್ತಿದ್ಢರುˌ ಈಗಿನ ಬೀದಿಗೆ ಬಿದ್ದು ಗಠಾರ ಸೇರಿರುವ ತಾರೆಗಳ ಕಥೆ ಬಿಡಿ. ಮಾರುತಿ ಕಾರುಗಳು ಆಗಷ್ಟೆ ಮಾರುಕಟ್ಟೆಗೆ ಲಗ್ಗೆ ಇಡಲಾರಂಭಿಸಿದ್ದರೂ ಸಹ ಅಂಬಾಸಡರ್ ಇನ್ನೂ ತನ್ನ ಪಟ್ಟ ಕಳೆದುಕೊಳ್ಳದೆ ನಗರವಷ್ಟೆ ಅಲ್ಲದೆ ಗ್ರಾಮೀಣ ಭಾರತದ ರಸ್ತೆಗಳಲ್ಲೂ ಅಧಿಪತಿಯಾಗಿಯೆ ಮೆರೆಯುತ್ತಿತ್ತು. ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳೆಲ್ಲ ನಿಜವೆಂದೆ ಜನ ನಂಬುತ್ತಿದ್ದರು ಹಾಗೂ ಬಹುತೇಕ ಅದು ಸತ್ಯಸಂಗತಿಯೂ ಆಗಿತ್ತುˌ ಇವತ್ತಿನ ಬಿಕರಿಗಿಟ್ಟಿರುವ ಬರಗೆಟ್ಟ ಪತ್ರಿಕೋದ್ಯಮದ ಬಗ್ಗೆ ಮಾತಾಡೋದು ಬೇಡ ಬಿಡಿ. ಇನ್ನೂ ಜನ ಪರಸ್ಪರರ ಕ್ಷೇಮ ವಿಚಾರಣೆಗೆ ಪತ್ರ ಬರೆಯುವ ತಾಳ್ಮೆ ಇಟ್ಟುಕೊಂಡಿದ್ದರು. ಕಳಿಸಿರುವ ಕಾರಣವದೇನೆ ಇದ್ದರೂ ಕೂಡ ತಂತಿ ಬಂತೆಂದರೆ ಎಲ್ಲರೂ ಆತಂಕಿತರಾಗುತ್ತಿದ್ದರು! ಮನೆಯೂಟಕ್ಕೆ ಮಹತ್ವವಿತ್ತು. ಕೂಡು ಕುಟುಂಬಗಳು ಹೇರಳವಾಗಿದ್ದವು. ತಮ್ಮ ಮನೆಯ ರೇಡಿಯೋದಿಂದಲೋ ಅಥವಾ ಅಕ್ಕಪಕ್ಕದ ಮನೆಯವರದಲಿಂದಲೋ ಬಹುತೇಕ ಎಲ್ಲರ ಕಿವಿಗೂ ಪ್ರದೇಶ ಸಮಾಚಾರˌ ಚಿತ್ರಗೀತೆಗಳು ಹಾಗೂ ಕೃಷಿ ವಾಣಿ ಎಲ್ಲರ ಕಿವಿಗೂ ಬೀಳುತ್ತಿತ್ತು. ಸಿನೆಮಾಗಳನ್ನ ಚಿತ್ರಮಂದಿರಗಳಿಗೆ ಹೋಗಿಯೆ ನೋಡುವ ಸಂಸ್ಕೃತಿ ಆಗಿನ್ನೂ ಇತ್ತು ಹಾಗೂ ಹಾಗೆ ಹೋಗುವ ದಿನ ದಿಬ್ಬಣ ಹೊರಟ ಕಳೆ ಹೋಗುವವರ ಮನೆಯಲ್ಲಿರುತ್ತಿತ್ತು. ಹಬ್ಬ ಹರಿದಿನಗಳಿಗೆ ಮಾತ್ರ ಹೊಸ ಬಟ್ಟೆ ಹಣೆಬರಹದಲ್ಲಿ ಬರೆದಿರುತ್ತಿತ್ತು. ಶಾಲೆಗೆ ಮಕ್ಕಳು ಪಾಠಿ ಚೀಲದಲ್ಲಿ ಸ್ಲೇಟು ಬಳಪ ಕೊಂಡೊಯ್ಯುವ ಕ್ರಮವಿತ್ತು. 


ನಾಲ್ಕನೆ ತರಗತಿಯವರೆಗೆ ಪೆನ್ನು ಬಳಸಲು ನಿರ್ಬಂಧವಿತ್ತು. ಕೆಲವೊಂದು ಕಡೆಗಳಲ್ಲಂತೂ ಐದರಿಂದ ಏಳರವರಗೆ ಇಂಕು ಹಾಕುವ ಮಸಿ ಪೆನ್ನುಗಳನ್ನೆ ಬಳಸಬೇಕಿತ್ತು. ಜನರಲ್ಲಿ ಲೋಲುಪತೆ ಈಗಿನಷ್ಟಿರಲಿಲ್ಲ. ದುಡ್ಡಿಗೆ ನಿಜವಾಗಲೂ ಬೆಲೆಯಿತ್ತು. ಕೊಳ್ಳುಬಾಕತನ ಅಷ್ಟಾಗಿ ಸಾಂಕ್ರಾಮಿಕವಾಗಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಭೂಮಿ  ಇನ್ನೂ ಹೆಚ್ಚು ಹಸುರ್ಹಸಿರಾಗಿತ್ತು. ಜಲ ನೆಲ ಹಾಗೂ ಗಾಳಿಯಲ್ಲಿ ಮಾಲಿನ್ಯದ ಪ್ರಮಾಣ ಇಂದಿಗಿಂತ ತುಂಬಾ ಕಡಿಮೆಯಿತ್ತು. 


ಒಟ್ಟಿನಲ್ಲಿ ಆಗಿನ ಕಾಲದಲ್ಲಿ ಒಳಗೂ ಹೊರಗೂ ಸ್ವಚ್ಛತೆಗೆ ಆದ್ಯತೆ ಮುಗ್ಧತೆಗೆ ಮಾನ್ಯತೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಯೋಗ್ಯತೆಗೆ ಗೌರವ ಇವೆಲ್ಲಾ ಇತ್ತು. ರಾಜಕೀಯದ ಕ್ರಿಮಿಗಳು ಆಗಷ್ಟೆ ಜಾತಿ ಧರ್ಮಗಳ ಹೆಸರಲ್ಲಿ ಜನರ ಮನಸೊಳಗೆ ವಿಷದ ಬೀಜ ಬಿತ್ತಲು ಆರಂಭಿಸಿದ್ದ ಕಾರಣˌ ಸಾಮಾಜಿಕ ಸ್ವಾಸ್ಥ್ಯ ಇಂದಿನಷ್ಟು  ಹದಗೆಟ್ಟಿರಲಿಲ್ಲ. ಸುಭಾಶನಂತಹ ಈ ಕಾಲದ ಮಕ್ಕಳಿಗೆ ಎಳೆಯ ಪ್ರಾಯದಲ್ಲಿ ಇವನ್ನೆಲ್ಲ ಬರಿ ಮಾತುಗಳಲ್ಲಷ್ಟೆ ಹೇಳಿ ಮನದಟ್ಟು ಮಾಡಿಸುವುದು ಕಷ್ಟ. ಅವರೆ ಬೆಳೆದ ನಂತರ ಮುಂದೆ ಕುತೂಹಲವಿದ್ದರೆ ಇದನ್ನ ಅರಸಿ ಅರಿತುಕೊಂಡಾರು ಅಂದುಕೊಂಡ.


*******

ಸುಭಾಶ ಇವತ್ತು ಸ್ವಲ್ಪ ಬೇಗ ಮನೆಗೆ ಮರಳುವ ತವಕದಲ್ಲಿದ್ದಂತೆ ಕಂಡ. "ಯಾಕೋ ಅವಸರ?" ಅಂದರೆ "ಮತ್ತೆಂತಸಾ ಇಲ್ಲˌ ಇವತ್ತು ಕೆಳಬೆಟ್ಟಿನ ತರವಾಡಿನಲ್ಲಿ ಮುತ್ತಪ್ಪ ಮತ್ತೆ ವಿಷ್ಣುಮೂರ್ತಿಯ ಕೋಲ ಉಂಟು! ನನ್ಗೆ ಹೋಗಿ ಕೋಲ ನೋಡ್ಲಿಕ್ಕುಂಟು." ಅಂದ. ಕೋಲ ಅಂದ ಕೂಡಲೆ ಇವನ ಕುತೂಹಲ ಗರಿಗೆದರಿತು. "ಅದೆಲ್ಲಿನ ಕೆಳಬೆಟ್ಟು?" ಅಂದ. "ನೀವು ಸಾ ಬರ್ತಿರ್ಯಾ! ನಿಮ್ಮ ಈ ಕ್ಯಾಮರಾದಿಂದ ಫೋಟೊ ತೆಗಿತಿರಾದ್ರೆ ಕರ್ಕೊಂಡು ಹೋಗ್ತೆ! ನನ್ದೂ ಚೆಂದಗೆ ಫೋಟೋ ತೆಗಿಬೇಕು ಮತ್ತೆ?!" ಅನ್ನುವ ಕಂಡಿಷನ್ನನ್ನ ಅವನೆ ಹಾಕಿ ಕೇಳುವ ಮೊದಲೆ ಅವನೆ ಇವನಿಗೆ ಆಹ್ವಾನವಿತ್ತ. "ಆಯ್ತು ಮಾರಾಯ! ಆದ್ರೆ ನನ್ಗೆ ಸ್ವಲ್ಪ ರೂಮಿಗೆ ಹೋಗಿ ಬರ್ಲಿಕ್ಕುಂಟ. ಆಮೇಲೆ ಬರ್ತಿನಿ ಆದಿತಲ್ಲ?" ಅಂದ. 


"ಆಯ್ತಾಯ್ತುˌ ನೀವು ನಿಮ್ಮ ಹೊಟೆಲಿನ ಕೋಣೆಗೆ ಹೋಗಿ ಬನ್ನಿ ಅಡ್ಡಿಲ್ಲ. ಕೋಲ ಊಟ ಮಾಡಿ ಹೋದ ನಂತರ. ನೀವು ಊಟ ಮಾಡಿ ಆಮೇಲೆ ಆ ಮೇಲ್ಕಾವು ಭಗವತಿ ಕ್ಷೇತ್ರದ ಹತ್ರ ಬನ್ನಿ ಆಯ್ತˌ ನಾವು ಕೋಲ ನೋಡಕ್ಕೆ ಹೋಗುವ. ಕ್ಯಾಮೆರಾ ಮರಿಬೇಡಿ ಮತ್ತೆ ಆಯ್ತ? ಫೋಟೋ ತೆಗಿ ಬೇಕಲ್ಲ!" ಅಂತ ಒತ್ತಿ ಒತ್ತಿ ಸ್ವಕಾರ್ಯವನ್ನ ನೆನಪಿಸಿದ. "ಆಯ್ತೋ ಮಾರಾಯ ಯಾವುದು ಮರೆತರೂ ಕ್ಯಾಮರಾ ಮರೆಯಲ್ಲ ಬಿಡು! ನಿನ್ನ ಫೋಟೋ ತೆಗಿದಿದ್ರೆ ಮುತ್ತಪ್ಪನಿಗೆ ಸಿಟ್ಟು ಬಂದು ಶಾಪ ಗೀಪ ಕೊಡ್ತಾನೇನೋ!" ಅಂದರೆ ಮಗು ಕಿಸಿಕಿಸಿ ಸದ್ದು ಹೊರಡಿಸುತ್ತಾ ಹಲ್ಲು ಬಿಟ್ಟು ನಕ್ಕಿತು. ಪರವಾಗಿಲ್ಲ! ಜೋಕು ಇವನಿಗೂ ಅರ್ಥವಾಗುತ್ತದೆ ಅಂದುಕೊಂಡ ಇವನ ಮುಖದಲ್ಲೂ ತುಂಟನಗು ಅರಳಿತು.

*******


ಬ್ಯಾಂಡು ಚೆಂಡೆ ತ್ರಾಸೆ ಗಂಟೆಮಣಿ ದುಡಿ ನಾದಸ್ವರ ಕೊಳಲು ಹೀಗೆ ಅಲ್ಲಿ ಹಲವಾರು ವಾದ್ಯಗಳ ಸಂತೆಯೆ ನೆರೆದಂತಿತ್ತು. ಮುತ್ತಪ್ಪನ ಕೋಲ ಬಹುತೇಕ ಸಂಜೆ ಸೂರ್ಯ ಕಂತುವಾಗಲೆ ಆರಂಭವಾಗಿ ಎರಡು ಹಂತಗಳಲ್ಲಿ ಸಾಗಿ ರಾತ್ರಿ ಮಾಗುವ ಹೊತ್ತಿಗೆ ಮುಗಿಯುತ್ತದಂತೆ. ಮುತ್ತಪ್ಪ ಭೂತಕ್ಕೆ ವೇಷ ಕಟ್ಟುವವರ ವೇಷವೂ ಸಹ ಅಷ್ಟೇನೂ ವಿಶೇಷ ಅಲಂಕಾರ ಇಲ್ಲದ ಸಾಕಷ್ಟು ಸರಳ ವೇಷಗಾರಿಕೆ ಅಷ್ಟೆ. ಇವನು ರೂಮಿಗೆ ಮರಳಿ ಮಿಂದುˌ ಕೆಳಗಿನ ನಾಯರನ ಕ್ಯಾಂಟೀನಿನಲ್ಲಿ ಮೀನೂಟ ಮಾಡಿ ಮೇಲ್ಕಾವಿಗೆ ಬರುವಾಗಲೆ ಘಂಟೆ ಎಂಟೂವರೆಯಾಗಿತ್ತು. 


ಕ್ಯಾಮರಾ ತಂದು ಫೊಟೋ ತೆಗೆಯುವ ಮಾತು ಕೊಟ್ಟ ಈ ಬೆಂಗಳೂರಣ್ಣ ಕೈಕೊಟ್ಟನೇನೋ ಎನ್ನುವ ಆತಂಕ ಹೊತ್ತ ಮುಖದಲ್ಲಿ ಚಡ್ಡಿ ಪೈಲ್ವಾನ ಸುಭಾಶ ಆಗಲೆ ಬಂದು ಚಡಪಡಿಸುತ್ತಾ ಇವನ ಬರುವನ್ನೆ ಕಾಯುತ್ತಾ ನಿಂತಿದ್ದ. ಅನಿರೀಕ್ಷಿತವಾಗಿ ಒದಗಿ ಬಂದ ಕೋಲದ ಸಾಂಸ್ಕೃತಿಕ ಪ್ರದರ್ಶನ ನೋಡುವ ಸದಾವಕಾಶ ತಪ್ಪಿಸಿಕೊಳ್ಳಲು ಇವನೇನು ಮೂರ್ಖನೆ? ಇವನ ತಲೆ ಕಂಡದ್ದೆ ದೊಡ್ಡ ಯಜಮಾನನಂತೆ ಮಂಡೆಗೆ ಉಲ್ಲಾನಿನ ಟೊಪ್ಪಿ ಏರಿಸಿಕೊಂಡು ಮಫ್ಲರ್ ಕುತ್ತಿಗೆಗೆ ಸುತ್ತಿಕೊಂಡು ಒಂದು ಕೈಯಲ್ಲಿ ಮಿಣುಕು ಬ್ಯಾಟರಿ ಹಿಡಿದುಕೊಂಡು ಮತ್ತೊಂದರಲ್ಲಿ ಚೀಲವೊಂದನ್ನ ಹಿಡಿದುಕೊಂಡು ಕಾಯುತ್ತಾ ನಿಂತಿದ್ದ ಸುಭಾಶನ ಮುಖದಲ್ಲೊಂದು ಗೆಲುವಿನ ನಗೆ ಮೂಡಿತು.


( ಇನ್ನೂ ಇದೆ.)


https://youtu.be/RLl01d6tRcc

29 November 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫ 👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫ 👊
 


ಊರ ಪ್ರಮುಖ ನೀರು ಸರಬರಾಜು ತೊಟ್ಟಿಯಲ್ಲಿ ನಾಲ್ಕಾರು ತಿಂಗಳ ಹಿಂದೆ ಜಾರಿಬಿದ್ದ ಗಡವ ಮಂಗವೊಂದು ಅಲ್ಲೆ ಮುಳುಗಿ ಸತ್ತು ಕೊಳೆತು ನಾರಿ ಅದೆ ನೀರನ್ನ ನಿತ್ಯ ಸೇವಿಸಿದ ಎಲ್ಲರಿಗೂ ಕಾಯಿಲೆ ಆಗಿದೆ ಅನ್ನುವ ಪುಕಾರೆಬ್ಬಿಸಿದರು ಕೆಲವರು. ಇಲ್ಲಾˌ ಊರಿನ ನೀರು ಸರಬರಾಜು ಕೇಂದ್ರದ ಪ್ರಮುಖ ಸಂಗ್ರಹ ತೊಟ್ಟಿ ದಶಕಗಳಿಂದ ಸ್ವಚ್ಛತೆ ಕಾಣದೆ ಹೂಳು ಕೆಸರು ಪಾಚಿ ಕಟ್ಟಿಕೊಂಡು ನಾರುತ್ತಿದೆ. ಸದ್ಯದ ಕಾಯಿಲೆ ಹುಟ್ಟಿನ ಮೂಲ ಅದೆ. ಮಂಗನ ಕಥೆಯಲ್ಲಾ ಸುಳ್ಳು ಅಂತ ಒಂದಷ್ಟು ಜನ ಗುಲ್ಲೆಬ್ಬಿಸಿದರು. 

ಮಂಗನ ಹೆಣವೋ ಇಲ್ಲಾ ಕೊಳೆತ ಕೆಸರಿನ ಪಾಚಿಯ ಋಣವೋ ಊರಿಗೆ ಊರೆ ವಾಂತಿ ಬೇಧಿಗೆ ಬಲಿಯಾದದ್ದು ಮಾತ್ರ ವಾಸ್ತವ ಹಾಗೂ ದುರಂತ. ಈ ಇಬ್ಬದಿಯ ವಿತಂಡವಾದದ ಪುಕಾರುಗಳೆಲ್ಲ ರಾಜಕೀಯ ಪ್ರೇರಿತ ಅನ್ನೋದು ಖಚಿತವಾಯ್ತು. ಪುರಸಭೆಯಲ್ಲಿ ಈ ಬಾಬ್ತು ಅನುದಾನವನ್ನ ದಾಖಲೆಗಳಲ್ಲಿ ಮಾತ್ರ ತೋರಿಸಿ ಆ ಹಣವನ್ನೆಲ್ಲಾ ನುಂಗಿ ನೀರು ಕುಡಿದಿದ್ದ ಸರದಿ ಪ್ರಕಾರ ಅಧಿಕಾರ ಅನುಭವಿಸಿದ್ದ ರಾಜಕೀಯ ಪಕ್ಷಗಳ ಪುಢಾರಿಗಳು ತಮ್ಮ ನೀಚತನವನ್ನ ಮರೆಮಾಚಲು ಹೀಗೆ ಕೆಸರೆರಚಾಟಕ್ಕಿಳಿದು ಊರಿನ ನಾಗರೀಕರನ್ನಂತೂ ಮಂಗ ಮಾಡಿದ್ದರು ಅನ್ನೋದು ಮಾತ್ರ ಕಣ್ಣಿಗೆ ರಾಚುತ್ತಿದ್ದ ಸತ್ಯ. 

ಅಂತಹ ವಿಷಮ ಪರಿಸ್ಥಿತಿಯಲ್ಲೂ ಸಹ ಸೋಂಕಿಗೆ ಬಲಿಯಾಗಿರದಿದ್ದ ಊರಿನ ಕೆಲವೆ ಗಟ್ಟಿ ಪಿಂಡಗಳ ಪೈಕಿ ಅವನೂ ಒಬ್ಬನಾಗಿದ್ದ.

*****

ಇವನ ತಾಯಿ ಊರಿನ ಖಾಸಗಿ ನರ್ಸಿಂಗ್ ಹೋಂ ಒಂದರಲ್ಲಿ ಆಯ ಆಗಿದ್ದ ಕಾಲ ಅದು. ಬಹುತೇಕರು ರೋಗಿಗಳೆ ಆಗಿದ್ದು ಆರೋಗ್ಯವಂತರು ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರˌ ಅವರಲ್ಲೂ ಬಹುಪಾಲು ಸಂಕ್ರಮಣಕ್ಕೆ ಹೆದರಿ ಇಂತಹ ವಿಷಮ ಹೊತ್ತಲ್ಲಿ ಬೆನ್ನು ತಿರುಗಿಸಿ ತಲೆಮರೆಸಿಕೊಂಡು ಪರಾರಿಯಾಗಲು ಹವಣಿಸುತ್ತಿದ್ದ ಹೊತ್ತಲ್ಲಿˌ ಇವನಂತಹ ಸ್ವಯಂ ಸೇವಕರ ತುರ್ತು ಅಗತ್ಯ ಆಸ್ಪತ್ರೆಗೂ ಇತ್ತು ಹಾಗೂ ಚಿಂತಾಜನಕ ಸ್ಥಿತಿ ತಲುಪಿದ್ದ ಊರಿಗೂ ಇವನಂತವರ ಅಗತ್ಯವಿತ್ತು. 

ಸರಕಾರಿ ಆಸ್ಪತ್ರೆಯ ಮೂಲಕ ಇವರ ಖಾಸಗಿ ಆಸ್ಪತ್ರೆಗೆ ನಿಗದಿಯಾಗಿರುತ್ತಿದ್ದ ಸಲೈನ್ ಬಾಟಲಿಗಳನ್ನ ಹೊತ್ತು ತರೋದುˌ ಒಳರೋಗಿಗಳಿಗೆ ಎಳನೀರು ಕೆತ್ತಿಸಿ ತಂದು ಕುಡಿಸೋದುˌ ಡ್ರಿಪ್ ಹಾಕೋದು - ಖಾಲಿ ಡ್ರಿಪ್ ಬಾಟಲಿಗಳನ್ನ ತೆಗೆಯೋದು. ಆಸ್ಪತ್ರೆಯ ಶೌಚಾಲಯ ತೊಳೆಯೋದು ಹೀಗೆ ಅದೂ ಇದು ಮೇಲು ಕೀಳು ಅಂತ ಪರಿಗಣಿಸದೆ ಎಲ್ಲಾ ಕೆಲಸಗಳಲ್ಲೂ ಅವನು ತೊಡಗಿಕೊಂಡಿದ್ದ ಕಾಲ ಅದು. ಹೀಗಾಗಿ ಅವನ ಆಸ್ಪತ್ರೆಯ ಒಡನಾಡ ಓಡಾಟ ಸಹಜವಾಗಿಯೆ ಹೆಚ್ಚಿತ್ತು.

ಸರಿಸುಮಾರು ಎರಡೂವರೆ ದಶಕದ ಹಿಂದಿನ ಕಥೆ ಇದು. ಆ ದಿನಮಾನಗಳಲ್ಲಿ ನಡೆದಿದ್ದ ಘಟನೆಯೊಂದು ಅವರ ಮನೆಯ ಮಂಕಾದ ವಾತಾವರಣದಲ್ಲಿ ಮತ್ತೆ ಮಿಣುಕು ದೀಪ ಹೊತ್ತಿಸಿತ್ತು. ಅವರೂರಿಂದ ಕರಾವಳಿಗೆ ಸಾಗುವ ರಾಜರಸ್ತೆಯ ಪಕ್ಕದಲ್ಲಿರುವ ಹಳ್ಳಿಯೊಂದರ ಹೆಸರು ಬೆಟ್ಟದಕೇರಿ. ಕಾಲೇಜಿನಲ್ಲಿ ಓದುತ್ತಿದ್ದ ಅಲ್ಲಿನ ಸಿರಿವಂತ ಒಕ್ಕಲಿಗರ ಮನೆಯ ಹುಡುಗಿಯೊಂದು ಪ್ರೀತಿ ಪ್ರೇಮದ ಅಮಲಿಗೆ ಬಲಿಯಾಗಿ ತನ್ನ ಬ್ರಾಹ್ಮಣ ಪ್ರಿಯಕರನ ಪಿಂಡ ಹೊತ್ತು ಗರ್ಭಿಣಿಯಾಗಿ ನಿಂತಳು. ಆರಂಭದಲ್ಲಿ ಗರ್ಭ ಜಾರಿಸಲು ಲಭ್ಯವಿದ್ದ ಎಲ್ಲಾ ಔಷಧಿ ಮಾಡಿಯೂ ಈ ಗಟ್ಟಿಪಿಂಡ ಜಾರದೆ ಭದ್ರವಾಗಿ ಉಳಿದಾಗ ಚಿಂತಾಕ್ರಾಂತವಾದ ಅವಿವಾಹಿತ ಬಸುರಿ ಹುಡುಗಿಯ ಕುಟುಂಬ ಸಣ್ಣ ಪುಟ್ಟದಕ್ಕೂ ತಾವು ಧಾವಿಸಿ ಬಂದು ಚಿಕಿತ್ಸೆ ಪಡಿಯುತ್ತಿದ್ದ ವೈದ್ಯರ ಮೊರೆಬಂತು. ಅಂತೂ ಅಲ್ಲೆ ಇರಿಸಿ ಹುಡುಗಿಗೆ ಹೆರಿಗೆ ಮಾಡಿಸುವ ಏರ್ಪಾಡಾಯಿತು. ಏಳು ತಿಂಗಳಿಗೆ ಪ್ರಸವಪೂರ್ವ ದಿನದಲ್ಲಿ ಹುಟ್ಟಿದ ಮಗುವಿನ ಮುಖ ಸಹ ನೋಡದೆ ಹೆತ್ತವಳಿಗೂ ನೋಡಗೊಡದೆ ಸಿರಿವಂತ ಸಾಹುಕಾರರು ನೋಟಿನ ಕಂತೆಗಳೊಂದಿಷ್ಟನ್ನ ವೈದ್ಯರ ಕೈಗೆ ತುರುಕಿ ತಾವು ಬಾಣಂತಿ ಮಗಳನ್ನ ಕಾರಿಗೆ ಒಟ್ಟಿ ಸುಖವಾಗಿ ಊರಿನ ಹಾದಿ ಹಿಡಿದರು. 


ಎರಡು ತಿಂಗಳು ಆಸ್ಪತ್ರೆಯ ಆರೈಕೆಯಲ್ಲೆ ಉಳಿದಿದ್ದ ಅನಾಥ ಮಗುವಿಗೆ ಒಂದು ಮನೆ ಹುಡುಕುವುದು ಅನಿವಾರ್ಯವಾಗಿತ್ತು. ಹೇಳಿ ಕೇಳಿ ಕಳ್ಳ ಬಸುರಿನ ಕಥೆ. ಸರಕಾರಿ ಆಶ್ರಯಕ್ಕೆ ಕಳಿಸುವಂತೆಯೂ ಇರಲಿಲ್ಲ! ಹೀಗಾಗಿ ಇವನ ಆಯಾ ತಾಯಿಯ ಮನವಿಗೆ ಮಣಿದ ವೈದ್ಯರು ಮಗುವನ್ನ ಇವನ ಅತ್ತೆಗೆ ದಯಪಾಲಿಸಿ ಕೈತೊಳೆದುಕೊಂಡರು. ಎರಡೆರಡು ಎಳೆ ಮಕ್ಕಳ ಸಾವಿನಿಂದ ಕೆಂಗೆಟ್ಟಿದ್ದ ಇವನ ಅತ್ತೆ ಈ ಎಳೆಬೊಮ್ಮಟೆ ಮಡಿಲು ತುಂಬುತ್ತಲೆ ನಾಟಕೀಯವಾಗಿ ಚೇತರಿಸಿಕೊಂಡಳು. ಯಾರೂ ಇಲ್ಲ ಅನ್ನುವಂತಿದ್ದ ಕೂಸಿಗೆ ಎಲ್ಲರೂ ಇರುವ ಒಂದು ಮನೆ ಹಣೆಬರಹದಲ್ಲಿತ್ತು ಅಂತ ಕಾಣ್ತದೆ. ಸ್ವಸ್ತಿಕ ಅನ್ನೋ ಹೆಸರಿಡಿಸಿಕೊಂಡು ಇವನತ್ತೆಯ ಮಗಳಾಗಿ ಆ ಮಗು ಇವರ ಮನೆಯವರಲ್ಲೆ ಒಬ್ಬಳಾಗಿ ಸೇರಿ ಹೋಯಿತು.


*****

ಬಹುಶಃ ಕಾಙಂನಗಾಡಿನಲ್ಲಿ ಅದವನ ಮೂರನೆ ದಿನ. ಆ ಸಂಜೆ ಹಾಗೆ ಅಡ್ಡಾಡುತ್ತಾ ಕುಶಾಲನಗರದ ಕಡಲ ತಡಿ ಹೋಗಿ ನಿತ್ಯ ಕೂರುವ ಮರಳ ದಿಬ್ಬದ ಮೇಲೆ ಕೂತ. ಇನ್ನೂ ಸಂಜೆ ಐದರ ಆಸುಪಾಸು. ಸೂರ್ಯ ಇನ್ನೇನು ಮುಳುಗುವ ತಯಾರಿಯಲ್ಲಿದ್ದ. ಝಳ ಕಡಿಮೆಯಾಗಿದ್ದರೂ ಬಿಸಿಲಿನ್ನೂ ಪೂರ್ತಿ ಇಳಿದಿರಲಿಲ್ಲ. ಇನ್ನೇನು ಅರ್ಧ ತಾಸಿನೊಳಗೆ ನಾಟಕೀಯವಾಗಿ ರವಿ ಜಾರಿ ಕತ್ತಲು ಸುತ್ತಲೂ ಸಾರಿ ಪರಿಸರದ ಚಹರೆಪಟ್ಟಿಯೆ ಬದಲಾಗಲಿತ್ತು. ಚಳಿಗಾಲದಲ್ಲಿ ಹಗಲಿಗೆ ಆಯುಷ್ಯ ಕಡಿಮೆ. ಇರುಳಿನದ್ದೆ ಅಧಿಪತ್ಯ ಇರುವ ಕಾಲ ಅದು.

ಒಬ್ಬ ಸಣ್ಣ ಹುಡುಗ ಹತ್ತಿರ ಬರಲೋ ಬೇಡವೋ ಅನ್ನುವ ಅನುಮಾನದಿಂದ ಇವನ ಬಳಿ ಬಂದ. ಅಪರಿಚಿತನನ್ನ ಕಾಣವಾಗಿನ ಭಯ ಮಾತನಾಡಿಸುವಾಗಿನ ಹಿಂಜರಿತದ ನಾಚಿಕೆ ಸಹಜವಾಗಿದ್ದ ಎಳೆಯನ ದ್ವಂದ್ವ ಇವನಿಗೆ ಅರ್ಥವಾಗಿ ಇವನೆ ಮುಂದಾಗಿ ಅವನನ್ನ ಮಾತನಾಡಿಸಿದ. ಇವನ ಬಾಯಿಯಿಂದ ಉದುರಿದ ಕನ್ನಡ ಆ ಮಗುವಿನ ಮಖ ಮೊರದಗಲವಾಗಿಸಿತು. "ನೀವು ಕನ್ನಡ ಮಾತಾಡುದ!" ಅಂದ ಅವ. "ಹೌದು ನೀನು?". "ನಾನೂ ಸಾ ಕನ್ನಡವೆ" ಅಂದವನ ಧ್ವನಿಯಲ್ಲಿ ಅದೊಂತರಾ ಆಪ್ತಭಾವ ಕೇಳಿದಂತಾಯಿತು.

ಹೀಗೆ ಅವರ ಸ್ನೇಹ ಆರಂಭವಾಯಿತು. ಸುಭಾಶ ಸ್ಥಳಿಯ ಕನ್ನಡ ಶಾಲೆಯಲ್ಲಿ ಐದನೆ ತರಗತಿಯ ವಿದ್ಯಾರ್ಥಿ. ಮಂಗಳೂರು ಮಹಾನಗರವನ್ನ ಮೊನ್ನೆ ಶಾಲಾ ಪ್ರವಾಸದಲ್ಲಿ ಕಂಡು ಬೆರಗಾಗಿ ಬಂದಿದ್ದಾನೆ. ಬೆಂಗಳೂರಿನ ಬಗ್ಗೆ ಅವರಿವರಿಂದ ಕೇಳಿದ್ದಾನೆ. ಇವನು ಬೆಂಗಳೂರಿಂದಲೆ ಬಂದಿರೋದು ಅಂತ ತಿಳಿದ ಮೇಲೆ ಆ ಊರಿನ ಬಗ್ಗೆ ಕೇಳಲು ಅವನ ಕುತೂಹಲದ ಮನಸಲ್ಲಿ ಸಾವಿರ ಪ್ರಶ್ನೆಗಳಿವೆ. ಎಲ್ಲರೂ ಎಲ್ಲರನ್ನ ಆಂಟಿ ಅಂಕಲ್ ಅಂತನೆ ಸಂಬೋಧಿಸಿ ಮಾತನಾಡುವ ವಿಪರೀತ ಕಾಲದಲ್ಲಿ ಮುಗ್ಧತೆ ಇನ್ನೂ ಮರೆಯಾಗದಿರುವ ಧ್ವನಿಯಲ್ಲಿ ಮಾತು ಮಾತಿಗೂ ಅಣ್ಣ ಅಂತ ಕರೆಯುತ್ತಾ ಸಂವಹಿಸುತ್ತಾನೆ.

ದೊಡ್ಡ ಪ್ರಾಯದವರೇನಾದರೂ ಹೀಗೆ ಒಟಗುಟ್ಟಲಾರಂಭಿಸಿದರೆ ಕಿರಿಕಿರಿ ಅಂತ ಎದ್ದು ಹೋಗುತ್ತಿದ್ದನೇನೋ. ಆದರೆ ಪುಟ್ಟ ಪ್ರಾಯದ ಈ ಪೋರನ ಅಮಾಯಕತೆಗೆ ಮಾರು ಹೋಗಿ ಅವನ ಸಕಲೆಂಟು ಕುತೂಹಲದ ಕಣ್ಗಳ ಪ್ರಶ್ನಾವಳಿಗಳಿಗೆ ಸಾಧ್ಯವಾದಷ್ಟು ಸಮಧಾನಕರ ಉತ್ತರ ಕೊಡುತ್ತಾ ಕೂತ.

ಅಮ್ಮ ಇದಾಳೆˌ ಅಪ್ಪ ಇಲ್ಲ. ಮರದ ಕೆಲಸ ಮಾಡ್ತಿದ್ದವ ಕುಡಿದು ಕುಡಿದೆ ಎಲುಬಿನ ಹಂದರವಾಗಿದ್ದ. ಕೊರೋನದ ಮಾರಿ ಅವನ ಉಳಿದಿದ್ದ ಜೀವದ ಪಸೆ ನೆಕ್ಕಿಕೊಂಡು ಹೋಯಿತು. ಈಗ ಇಲ್ಲೆ ಕಡಲ ತಡಿಯ ಸ್ವಂತ ಮನೆಯಲ್ಲಿ ಅಮ್ಮ ಪುಟ್ಟ ತಂಗಿಯ ಜೊತೆ ಸುಭಾಶ ಇದಾನೆ. ಕಡಲ ತಡಿಯಲ್ಲಿ ಬಿದ್ದಿರೋ ಕಾಯಿˌ ಮಡಲು ಆರಿಸಿಕೊಳ್ಳಲು ಪ್ರತಿ ಸಂಜೆ ಶಾಲೆ ಮುಗಿಸಿ ಬಂದಾದ ಮೇಲೆ ಬರುವ ಅವ ಇವನನ್ನ ಕಳೆದೆರಡು ಮೂರು ದಿನಗಳಿಂದ ಗಮನಿಸಿದ್ದಾನೆ. ಅಪರಿಚಿತ. ಪರದೇಸಿ ಅನ್ನುವ ಅನುಮಾನ ಮೂಡಿದೆ. ಮನೆಯಲ್ಯಾರೂ ಅವನ ಮಾತುಗಳಿಗೆ ಕಿವಿಯಾಗುವವರಿಲ್ಲ. ಧೈರ್ಯ ಮಾಡಿ ಇವನ ಜೊತೆ ಮಾತನಾಡಲು ಹವಣಿಸಿದ್ದಾನೆ. ಅದರಲ್ಲಿ ಯಶಸ್ವಿಯೂ ಆಗಿದ್ದಾನೆ. ಅಪರಿಚಿತ ಪರಿಸರದಲ್ಲಿ ಹೀಗೆ ಯಾವುದೆ ಉದ್ದೇಶಗಳೆ ಇದ್ದಿರದ ಸ್ನೇಹವೊಂದರ ಅಗತ್ಯ ಇವನಿಗೂ ಇತ್ತು.

( ಇನ್ನೂ ಇದೆ.)


https://youtu.be/ZsAGtBje3k0

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪ 👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪ 👊



ವಾಹನ ಅದ್ಯಾವುದೆ ಇರಲಿ ಅದರ ಚಾಲನೆ ಕಲಿಯುವ ಹಾಗೂ ಸ್ವಯಂ ಚಾಲಕನಾಗಿ ಅದನ್ನ ನಡೆಸುವ ಚಪಲ ಅವನಿಗೆ ವಿಪರೀತ. ನೆಲದ ಮೇಲಷ್ಟೆ ಅಲ್ಲˌ ನೀರಿನ ಮೇಲೆ ನಡೆಸುವ ವಾಹನ ಚಾಲನೆಯನ್ನೂ ಕಲಿತಿದ್ದಾನೆ. ಗಾಳಿಯಲ್ಲಿ ಹಾರುವ ವಾಹನ ಚಾಲನೆ ಕಲಿಯುವ ಆಸೆಯನ್ನ ಜೀವಂತವಾಗಿರಿಸಿಕೊಂಡಿದ್ದಾನೆ. ಈ ಮೂರು ಚಟಗಳನ್ನ ಬಿಟ್ಟರೆ ಇನ್ನುಳಿದಂತೆ ಚಟ ಮುಕ್ತ ಜೀವನ ಈತನದ್ದು. ಉತ್ಕಟವಾಗಿ ಪ್ರೀತಿಸದವರ ಹೊರತು ಮತ್ಯಾರೊಂದಿಗೂ ಲೈಂಗಿಕವಾಗಿ ಆಕರ್ಷಿತನಾಗಲಾರದ ಗುಣˌ ಹೀಗಾಗಿ ಕಚ್ಚೆಹರುಕನಲ್ಲ.


ಬೀಡಿಯ ಕಟ್ಟು ಕಟ್ಟುಗಳನ್ನೆ ಸೇದಿ ಸೇದಿ ಬೂದಿಯ ಬೆಟ್ಟ ಎಬ್ಬಿಸುತ್ತಿದ್ದ ಅಪ್ಪನ ಮಗ. ಅಂಕೆ ಮೀರಿದ ಕುಡಿತಕ್ಕೆ ದಾಸನಾಗಿ ಕುಡಿದ ಮೇಲೆ ಮೃಗದಂತೆ ವರ್ತಿಸುತ್ತಿದ್ದ ಅಪ್ಪನ ರೌದ್ರವತಾರ - ಅಮ್ಮನ ಜೊತೆ ಮತ್ತಿನಲ್ಲಿರುತ್ತಿದ್ದ ಅಪ್ಪನ ಮುಷ್ಠಿಯುದ್ಧ ನೋಡಿ ನೋಡಿ ಭಯ ಭೀತ ಬಾಲ್ಯ ಕಳೆದಿದ್ದ ಕಾರಣ ಧೂಮಪಾನ - ಮದ್ಯಪಾನ ಎರಡರ ಬಗ್ಗೆಯೂ ತೀರದ ಹೇವರಿಕೆ. ರಸಿಕಗ್ರೇಸರನಾಗಿದ್ದ ಅಪ್ಪನಿಗೆ ಗೆಳತಿಯರಿಗೂ ಬರವಿರಲಿಲ್ಲ ಅನ್ನುವ ಸತ್ಯದ ಅರಿವೂ ಅವನಿಗಿತ್ತು. ಲೈಂಗಿಕ ಲೋಲುಪತೆಯೆ ಇರಲಿˌ ಕುಡಿತˌ ಧೂಮಪಾನವೆ ಆಗಿರಲಿ ತನ್ನ ಪಾಲಿನ ಕೋಟಾವನ್ನೂ ತನ್ನಪ್ಪನೆ ಖಾಲಿ ಮಾಡಿ ತನಗೇನೂ ಹೊಸತಾಗಿ ಮಾಡಲು ಉಳಿಸಿಲ್ಲ ಅಂತ ಆಗಾಗ ಅಂತರಂಗದ ಗೆಳೆಯರ ಮುಂದೆ ಚಟಾಕಿ ಸಿಡಿಸುತ್ತಿದ್ದ.


ಇನ್ನು ಪಟ್ಟಣ ಸೇರಿ ಕೆಡಲು ಕಾರಣ ಹಲವಿದ್ದರೂ ಮಾದಕದ್ರವ್ಯಗಳ ಗೀಳಿಗೆ ಬೀಳದ ಸ್ವಯಂ ಆತ್ಮ ನಿಯಂತ್ರಣ ಯಾವುದೆ ದುಶ್ಚಟಗಳಿಂದ ಅವನನ್ನ ದೂರ ಇರಿಸಿತ್ತು. ಪಕ್ಕದ ದೇಶವೊಂದಕ್ಕೆ ಹೋಗಿದ್ದಾಗˌ ಅದೂ ಹದಿನೇಳು ವರ್ಷಗಳ ಹಿಂದೆ ಒತ್ತಾಯ ಹಾಗೂ ಕುತೂಹಲ ಎರಡಕ್ಕೂ ಬಲಿಯಾಗಿ ಅದೇನೋ ಮಜ್ಜಿಗೆಯಂತಿದ್ದ ಜಿಂಜರ್ ಬೀರನ್ನ ಹೀರಿ ಮುಖ ಹಿಂಡಿಕೊಂಡಿದ್ದ ಅನ್ನೋದನ್ನ ಹೊರತುಪಡಿಸಿ ಜೀವನದಲ್ಲವನು ಶರಾಬು ಕುಡಿದಿಲ್ಲ ಅಂದರೆ ಯಾರೂ ನಂಬೋದಿಲ್ಲ. ಬರಿ ನಾಟಕ ಅಂತ ತೀರ್ಪು ಹೇಳಿ ಷರಾ ಬರೆದು ಬಿಡುತ್ತಾರೆ. ಆದರೆ ಅದೆ ಸತ್ಯ. ಏಕೆಂದರೆ ಅವನ ಪಾಲಿಗಿದು ಕಥೆಯಲ್ಲˌ ಆತ್ಮನಿವೇದನೆ. ಮತ್ತವ ಆತ್ಮವಂಚಕನಲ್ಲ!


********

ಹಾಗೆ ನೋಡಿದರೆ ಬದುಕೇನೂ ಕ್ಲಿಷ್ಟವಲ್ಲ. ಹಾಗಂತ ಅಂದುಕೊಂಡಷ್ಟು ಸರಳವೂ ಆಗಿರಲ್ಲ. ಆಗಬೇಕಾದ ಪ್ರಾಯದಲ್ಲಿ ಆಗಬೇಕಾದದ್ದೆಲ್ಲ ಆಗುತ್ತಾ ಹೋದರೆˌ ಸಿಗಬೇಕಿದ್ದ ಸಮಯದಲ್ಲಿ ಸಿಗಲೆಬೇಕಿದ್ದವರು ಸಿಕ್ಕಿದರೆ ಏರಿಳಿತದ ತಗ್ಗು ಗುಂಡಿಗಳ ಹಾದಿಗೆ ಬಿದ್ದ ಬದುಕಿನ ಬಂಡಿ ಅದು ಹೇಗೋ ಸರಾಗವಾಗಿ ಹರಿದು ಹೋಗಿ ಪ್ರಯಾಣದ ಆಯಾಸ ಅರಿವಿಗೆ ಬರುವ ಹೊತ್ತಿಗೆ ದೇಹ ಅನ್ನೋ ಜನರೇಟರಿಗೆ ಮುಪ್ಪಡರಿ ತಮ್ಮ "ಕಾಲ" ಇನ್ನು ಮುಗಿಯಿತುˌ ಲೋಕದ ಜವಬ್ದಾರಿ ವಹಿಸಿಕೊಳ್ಳಲು ಹೊಸ ಪೀಳಿಗೆಯೊಂದು ತನ್ನಂತವರ ಏಕತಾನತೆಯ ಬಾಳ ಲಹರಿಯಲ್ಲೆ ಅರಿವಿಲ್ಲದೆ ಸೃಷ್ಟಿಯಾಗಿ ತಯಾರಾಗಿ ಬೆಳೆದು ನಿಂತಿದೆ. ತಾನು ತನ್ನಂತವರೇನಿದ್ದರೂ ನಿರ್ವಹಣೆಯ ಹೊಣೆ ದಾಟಿಸಿ ಆಗುವ ಬದಲಾವಣೆಗಳಿಗೆ ಮೂಕ ಸಾಕ್ಷಿಯಾಗಿ ಉಳಿಯಬೇಕಿದೆ. ಒಂದು ವೇಳೆ ಕೇಳಿದರೆ ಮಾತ್ರ ತನ್ನ ಅನುಭವದ ಮೂಸೆಯಲ್ಲರಳಿದ ಹಿತನುಡಿಗಳ ಸಲಹೆ ಮಾತ್ರ ಕೊಡಲಷ್ಟೆ ತಾನು ಸೀಮಿತ ಅನ್ನುವ ಅರಿವು ಮೂಡುತ್ತದೆ. ಇದರಲ್ಲಿ ಹೆಚ್ಚು ಕಿರಿಕಿರಿ ಅನ್ನುವಂತದ್ದೇನಿಲ್ಲ. ಎದುರಿಗೆ ಕಾಣುತ್ತಿರುವುದು ಹಾಗೂ ಸುತ್ತಮುತ್ತ ಆಗುತ್ತಿರುವುದು ಕಸಿವಿಸಿ ಹುಟ್ಟಿಸುತ್ತಿದ್ದರೆˌ ಕನಿಷ್ಠ ಕಣ್ಣುಮುಚ್ಚಿಕೊಂಡಾದರೂ ಸ್ವಸ್ಥ ಇದ್ದಿರಬಹುದು.


ಆದರೆ ಸಮಸ್ಯೆಯಿರುವುದು ಯಾವ ಯಾವ ಪ್ರಾಯದಲ್ಲೋ ತಿರುವು ಮುರುವಿನ ಹೊಣೆಗಾರಿಕೆ ಹೆಗಲಿಗೇರಿದವರಿಗೆ ಮಾತ್ರ. ತಮ್ಮ ಪ್ರಾಯಕ್ಕೆ ಮೀರಿದ ಜವಬ್ದಾರಿಗಳು ಸಣ್ಣ ಪ್ರಾಯದಲ್ಲೆ ಬೆನ್ನೇರಿ ಬಾಲ್ಯವನ್ನೆ ಕಳೆದುಕೊಂಡಿದ್ದರಂತೂ ಪರಿಸ್ಥಿತಿ ಮತ್ತೂ ಭೀಕರ. ಅವರ ಸಮಪ್ರಾಯದವರೆಲ್ಲ ಮದುವೆಯಾಗಿ ಮಡದಿ ಗಂಡ ಮಕ್ಕಳು ಮೊಮ್ಮಕ್ಕಳು ಅಂತ ಅವರವರದೆ ನಾಲ್ಕು ಗೋಡೆಗಳೊಳಗಿನ ಖಾಸಗಿ ಪ್ರಪಂಚದ ಉಸುಬಿನಲ್ಲಿ ಮೂಗು ಮಟ್ಟದವರೆಗೆ ಹೂತು ಹೋಗಿರುತ್ತಾರೆ. ಇಂತವರಲ್ಲಿ ಬಹುತೇಕರಿಗೆ ಸೂಕ್ತ ಪ್ರಾಯದಲ್ಲಿ ಜೀವನ ಸಂಗಾತಿ ಸಿಕ್ಕಿರುವುದಿಲ್ಲ ಅಥವಾ ಸಿಕ್ಕಂತವರು ಇನ್ಯಾವ್ಯಾವುದೋ ಆಕರ್ಷಣೆಗಳ ಬೆನ್ನು ಹತ್ತಿ ಅವರ ಪಯಣದ ದಿಕ್ಕು ದೆಸೆ ಬದಲಾಯಿಸಿಕೊಂಡಿರುತ್ತಾರೆ. ಯಥಾಪ್ರಕಾರ ಇಂತವರ ಶಾಶ್ವತ ಸಂಗಾತಿ ಒಂಟಿತನ ಮತ್ತೆ ಮತ್ತೆ ಜೊತೆಯಾಗಿ ಅವರ ಯೋಗ್ಯತೆಯನ್ನ ಅವರಿಗೇನೆ ನೆನಪಿಸುತ್ತಾ ಅವರನ್ನ ಮತ್ತಷ್ಟು ಒಳಗೊಳಗೆ ಹಂಗಿಸಿ ಮಾನಸಿಕವಾಗಿ ಕುಗ್ಗಿಸುತ್ತಿರುತ್ತದೆ. ದೈಹಿಕ ಸಾಂಗತ್ಯವೂ ಇಲ್ಲದ ಜೊತೆಗೆ ಮಾನಸಿಕ ಜೊತೆಗಾರಿಗೂ ಸಲ್ಲದಂತಹ ಸ್ಥಿತಿಯಲ್ಲಿ ನರಳುವ ಇಂತವರ ಆಂತರಿಕ ತುಮುಲಗಳಿಗೆ ಅಂತ್ಯವೆನ್ನುವುದು ಬಹುತೇಕ ಇರಲ್ಲ.


ಇವನು ಇನ್ನೂ ಹದಿನಾಲ್ಕು ವರ್ಷ ಪ್ರಾಯವಿದ್ದ ಸಮಯದಲ್ಲಿ ಇವರ ಮನೆಯಲ್ಲೂˌ ಊರಲ್ಲೂ ಎರಡು ದುರ್ಘಟನೆಗಳು ನಡೆದವು. ಮೊದಲನೆಯದಾಗಿˌ ಕ್ರಿಕೆಟ್ ಆಡುತ್ತಿದ್ದ ದೊಡ್ಡವರ ಆಟ ನೋಡುತ್ತಾ ಕುಳಿತಿದ್ದ ಅತ್ತೆಯ ಪುಟ್ಟ ಪ್ರಾಯದ ಹಿರಿಮಗ ಅದ್ಯಾರೋ ಬ್ಯಾಟು ಬೀಸಿ ವೇಗವಾಗಿ ಎಗರಿ ಬಂದ ಚೆಂಡು ಹೊಟ್ಚೆಗೆ ಅಪ್ಪಳಿಸಿ ಆಂತರಿಕ ರಕ್ತಸ್ರಾವವಾಗಿ ನರಳತ್ತಾ ತೀರಿ ಹೋದ. ಅದಾಗಿ ಎರಡು ವರ್ಷಕ್ಕೆ ಅದೆ ಮನೆಯಲ್ಲಿ ಎರಡನೆ ಮಗು ತೀರಿ ಹೋಯಿತು. ಈ ಸಲ ಅಪ್ಪನ ಕಿರಿತಮ್ಮನ ಹಿರಿಮಗಳ ಸರದಿ. ಹುಟ್ಟಿನಿಂದಲೆ ಮಂದಬುದ್ಧಿಯ ಮಗು ಅದು. ಮಗ ಸತ್ತ ದುಃಖದಲ್ಲಿದ್ದ ಅತ್ತೆಗೆ ಅಂಟಿಕೊಂಡು ಬೆಳೆಯುತ್ತಿದ್ದಳು. ಮನೆಯಲ್ಲಿದ್ದ ಎಲ್ಲರಿಗೂ ಇನ್ನೂ ಮುಗ್ಧತೆ ಸೂಸುವ ದೇಹದ ಬೆಳವಣಿಗೆಗೆ ತಕ್ಕಂತೆ ಬುದ್ಧಿ ಬಲಿತಿರದ ಆ ಮಗುವೆಂದರೆ ಮುದ್ದು ಮುಚ್ಚಟೆ. ಅದೊಂದು ದಿನ ಅವಳ ದೊಡ್ಡಪ್ಫ ಅಕ್ಕಿ ಮಾಡಿಸಲು ಊರಿನಿಂದ ಎತ್ತಿನ ಗಾಡಿಗೆ ಆ ಹಂಗಾಮಿನ ಭತ್ತ ಹೇರಿಕೊಂಡು ಅದಕ್ಕೊಂದು ಪ್ಲಾಸ್ಟಿಕ್ಕಿನ ಶೀಟು ಹೊದೆಸಿ ಗಾಡಿ ಹೊಡಕೊಂಡು ಹೊರಟಿದ್ದ. ಹಿಂದಿಂದ ತಾನೂ ಬರಲು ಹಟ ಹಿಡಿದು ಓಡಿ ಬಂದ ಮಗು ಅದರ ಧ್ವನಿ ಅವನ ಕಿವಿಗೆ ಗಾಡಿಯ ಗಲಾಟೆಯ ಮಧ್ಯೆ ಬಿದ್ದೆ ಇಲ್ಲ. ಆ ಮಗು ಪಟ್ಟು ಬಿಡದೆ ಚಲಿಸುವ ಗಾಡಿ ಏರಲು ಹೋಗಿ ಪ್ಲಾಸ್ಟಿಕ್ ಪರದೆಯ ಮೇಲಿಟ್ಟ ಅದರ ಪುಟ್ಟಕಾಲು ಜಾರಿ ನೇರ ಗಾಡಿಯಡಿಗೆ ಬಿದ್ದಿದೆ. ಅದರ ಹೊಟ್ಟೆಯ ಮೇಲೆಯೆ ತುಂಬಿದ ಗಾಡಿಯ ಭಾರ ಸಹಿತ ಚಕ್ರ ಏರಿಳಿದಿದೆ. ಆಗಿದ್ದ ಅನಾಹುತ ಗೊತ್ತಾಗುವಾಗ ಹೊತ್ತಾಗಿತ್ತು. ನೋವು ನೋವಂತ ನರಳುತ್ತಿದ್ದ ಮಗು ಕಡೆ ಕ್ಷಣದಲ್ಲೂ ಮಂಕು ನಗುವೊಂದನ್ನ ಬೀರುತ್ತಲೆ ಕಣ್ಮರೆಯಾಗಿಹೋಯಿತು. ಎರಡೆರಡು ಮಕ್ಕಳು ಹೀಗೆ ಸತ್ತ ನೋವು ಅತ್ತೆಯನ್ನ ಅರೆಹುಚ್ಚಿಯನ್ನಾಗಿಸಿತು.


ಅತ್ತ ಇವನಿದ್ದ ಊರಿಂದ ದೂರದ ಹಳ್ಳಿಯಲ್ಲಿ ಹೀಗಾಗಿದ್ದರೆ ಇವನಿದ್ದ ಪಟ್ಟಣಕ್ಕೆ ಇಂತಹದ್ದೆ ಅನ್ನುವ ಹೆಸರಿಡಲಾಗದ ವಾಂತಿ ಬೇಧಿಯ ಸಾಂಕ್ರಾಮಿಕ ರೋಗ ಹರಡಿ ಬೆರಳೆಣಿಕೆಯ ಕೆಲವೆ ಕೆಲವರನ್ನ ಹೊರತುಪಡಿಸಿ ಇನ್ನುಳಿದಂತೆ ಸಣ್ಣ ಜನಸಂಖ್ಯೆಯ ಊರಿಗೂರೆ ಸಂತ್ರಸ್ತವಾಗಿˌ ಊರಿನಲ್ಲಿದ್ದ ಒಂದು ಸರಕಾರಿ ಆಸ್ಪತ್ರೆ ಹಾಗೂ  ಎರಡು ಖಾಸಗಿ ಆಸ್ಪತ್ರೆಗಳು ತುಂಬಿ ತುಳುಕಿ ಹೋದವು. ಒಳರೋಗಿಗಳಾಗಿ ಸೇರಿದವರಿಗೆ ಮಲಗಿಸಲು ಮಂಚಗಳು ಸಾಲದೆˌ ಅವರವರೆ ಅವರವರ ಮನೆಯಿಂದಲೆ ಹೊತ್ತು ತಂದ ಹಾಸಿಗೆಯ ಮೇಲೆ ಡ್ರಿಪ್ಪೇರಿಸಿ ಆಸ್ಪತ್ರೆಯ ಹಜಾರ - ಪಡಸಾಲೆˌ ಕಡೆಗೆ ವಾಹನ ನಿಲುಗಡೆಯ ಜಾಗದಲ್ಲೂ ಅಂತಹ ಸಂಕ್ರಮಿತರನ್ನ ಅಡ್ಮಿಟ್ ಮಾಡಿಕೊಂಡು ಮಲಗಿಸಿ ಚಿಕಿತ್ಸೆ ಆರಂಭಿಸಲಾಯಿತು.

ಒಟ್ಟಿನಲ್ಲಿ ಊರ ಹಲವಾರು ನಾಗರೀಕರನ್ನು ಕಾಡಿ ಹೈರಾಣಾಗಿಸಿದ್ದ ವಾಂತಿ ಬೇಧಿಯ ಹೆಸರಿಡಲಾಗಿರದಿದ್ದ ಮಾರಿ ಊರಿನಿಂದಾಚೆ ನಿರ್ಗಮಿಸುವಾಗ ಅರಿವಿರದ ಆ ರೋಗ ಪೀಡಿತರಲ್ಲಿ ಆರು ಜನ ಬಲಿಯಾಗಿಯಾಗಿತ್ತು. ಅದೆ ಸಮಯದ ಆಜುಬಾಜುವಿನಲ್ಲೆ ಅವರ ಮನೆಯ ವಾತಾವರಣದಲ್ಲೂ ಸಹ ಬದಲಾವಣೆಯ ಗಾಳಿ ಬೀಸಿದ್ದು.

( ಇನ್ನೂ ಇದೆ.)



https://youtu.be/FpYQ0b5i9x0

28 November 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩ 👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩ 👊"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩ 👊


ಮಾತು ಬಲು ಹಗುರ ಮೌನ ತೂಕದ್ದು ಅಂತ ಅವನಿಗನಿಸಲು ಕಾರಣಗಳಿವೆ. ಗಲಾಟೆˌ ಅನಗತ್ಯ ಹರಟೆˌ ಪಟ್ಟಾಂಗಗಳೆಂದರೆ ಅವನಿಗೆ ಅಲರ್ಜಿ. ಮೌನವಾಗಿ ನಮ್ಮ ಆತ್ಮದ ಜೊತೆ ನಾವೆ ಮಾತನಾಡಿಕೊಳ್ಳುವ ಸಮಯ ಬಲು ಅಮೂಲ್ಯ ಅನ್ನೋದು ಅವನ ನಂಬಿಕೆ. ತಮ್ಮ ತಮ್ಮ ಆತ್ಮದ ಜೊತೆಗೆ ಸಂವಹಿಸುವಾಗ ಸಾಮಾನ್ಯವಾಗಿ ಯಾರೂ ಸುಳ್ಳಾಡುವುದಿಲ್ಲ. ಪ್ರಾಮಾಣಿಕವಾದ ಸತ್ಯವಾದ ನುಡಿಗಳಷ್ಟೆ ಅದಲು ಬದಲಾಗುವ ಪವಿತ್ರ ಹೊತ್ತದು. ಅಲ್ಲೂ ಅಪದ್ಧವನ್ನಾಡುವ ಅಧಮರು ಆತ್ಮವಂಚಕರು ಅಷ್ಟೆ.


ಇತ್ತೀಚೆಗೆ ಪ್ರಕ್ಷುಬ್ಧಗೊಂಡಿರುವ ಮನಸಿನ ಭಾರ ಹೊತ್ತು ಸಮುದ್ರಕ್ಕೆ ಮುಖ ಮಾಡಿ ದೂರ ಸಾಗರದ ಎದೆ ಮೇಲೆ ಅತ್ತಿತ್ತ ಸರಿಯುವ ಅದೇನನ್ನೋ ದಿಟ್ಟಿಸುತ್ತಾ ಧ್ಯಾನಸ್ಥನಾಗುವ ಸುಖವೆ ಪರಮಸುಖ ಅನ್ನಿಸಿದೆ ಅವನಿಗೆ. ಈ ಏಕಾಂತದ ರುಚಿ ಮನಸಿಗೆ ಹತ್ತಿದ ಹಾಗೆ ದಿನಾ ಸಂಜೆ ಹೀಗೆ ವ್ಯಸನಿಯಂತೆ ಒಬ್ಬಂಟಿಯಾಗಿ ಕಡಲ ತಡಿಗೆ ಬಂದು ಕೂರುವ ಗೀಳನ್ನ ಅಂಟಿಸಿಕೊಂಡಿದ್ದಾನವನು.


ಉಕ್ಕಿ ಬರುವ ಕಡಲಲೆಗಳು ಪ್ರೀತಿಗೂ ವಿರಹಕ್ಕೂ ಏಕಕಾಲದಲ್ಲಿ ದ್ಯೋತಕ ಅಂತೆನಿಸಿˌ ಒಂದೆ ಭಾವದಲ್ಲಿ ವೈರುಧ್ಯದ ರೂಪಕಗಳನ್ನ ಹೊತ್ತುಕೊಂಡಿರುವ ಸಾಗರದ ತೆರೆಗಳ ಮೇಲೆ ಅದೇಕೋ ಅವನಿಗೆ ಅವ್ಯಕ್ತ ಮತ್ಸರ ಮೂಡುತ್ತದೆ. ನದಿಯ ವಿರಹದ ನಡೆಗೆ ಮುಕ್ತಿ ಕಾಣಿಸುವ ಕೊನೆಯ ಆಸರೆಯೆ ಆಗಿದ್ದರೂ ಸಹ ಸಾಗರದ ಅಪ್ಪುಗೆಗೆ ಧಾವಿಸಿ ಹರಿದುಬರುವ ನದಿ ತನ್ನೊಳಗಿನ ಸಿಹಿಯನೆಲ್ಲ ಕಡಲ ತೋಳುಗಳಿಗೆ ಧಾರೆಯೆರೆದು ತಾನು ಮಾತ್ರ ತನ್ನ ಅಸ್ತಿತ್ವವನ್ನೆ ಕಳೆದುಕೊಂಡು ಶಾಶ್ವತವಾಗಿ ಉಪ್ಪುಪ್ಪಾಗುತ್ತದೆ. ಹಿಂದಿರುಗಿ ಸಿಹಿಯಾಗಲಾರದ ಸ್ಥಿತಿಗೆ ಹೋಗಿ ತಲುಪುತ್ತದೆ. ಉಪ್ಪು ಬಾಳಿನ ರುಚಿ ಹೆಚ್ಚಿಸಲು ಮುಖ್ಯ ನಿಜ. ಆದರದುˌ ಚಿಟಿಕೆಯಷ್ಟಿದಿದ್ದರೆ ಸಾಕೆ ಸಾಕು. ಅದು ಬಿಟ್ಟು ಬದುಕಿನುದ್ದ ಉಪ್ಪನ್ನೆ ಎರೆದುಕೊಂಡರೆ ವಾಕರಿಕೆ ಬಂದು ಸಾಯಬೇಕಷ್ಟೆ!


ಕಡಲ ನೀರಿಂಗಿಸಿ ಉಪ್ಪು ಮಾಡುವ ಕಸುಬಿನ ಕೂಲಿಗಳ ಕಾಲಿಗೆ ಅದ್ಯಾವ ಪರಿ ಲವಣದ ಶೇಷ ಅಂಟಿಕೊಂಡಿರುತ್ತದೆ ಅಂದರೆˌ ಉಪ್ಪು ಮಾಡುವವ ಸತ್ತರೆ ಅದೆಷ್ಟೆ ಸುಟ್ಟರೂ ಹೆಣದ ಕಾಲು ಮಾತ್ರ ಸಂಪೂರ್ಣ ಬೆಂದು ಸುಟ್ಟು ಬೂದಿಯಾಗಲಾರದು. ಅದೊಂತರಾ ಅರೆಬರೆ ಸುಟ್ಟು ಹೋಗುವ ಶಾಪಗ್ರಸ್ಥ ಬದುಕು. ಈಗ ಜೀವಂತಿಕೆಯ ಬದುಕಿನ ಹತ್ತಿರ ಮೂರು ಮೂರು ಸಲ ಹೋಗಿ ಅದರ ಉಪ್ಪಿನ ರಾಶಿಯಲ್ಲಿ ಮೊಣಕಾಲಷ್ಟೆ ಅಲ್ಲ ಕುತ್ತಿಗೆಯವರೆಗೂ ಹೂತು ಹೋಗಿಯೂ ಮೂರರಲ್ಲಿ ಕನಿಷ್ಠ ಒಂದನ್ನೂ ದಕ್ಕಿಸಿಕೊಳ್ಳಲಾರದ ದುಃಖದಲ್ಲಿರುವ ಅವನ ಸ್ಥಿತಿಯೂ ಉಪ್ಪು ಮಾಡುವ ಕೂಲಿಯ ತರಹದ್ದೆ ಆಗಿ ಹೋಗಿತ್ತು. ಉಪ್ಪು ಮಾಡುವವ ಸತ್ತಾಗ ಸುಟ್ಟರೆ ಅವನ ಕಾಲಷ್ಟೆ ಸುಡದೆ ಉಳಿಯುತ್ತೆ ಅಂತಂದುಕೊಂಡರೆˌ ಕಂಠ ಮಟ್ಟದವರೆಗೆ ಪ್ರೀತಿಯ ಉಪ್ಪ ರಾಶಿಯಲ್ಲಿ ಸೋತು ಹೂತು ಹೋಗಿದ್ದ ಇವನ್ನನ್ನೇನಾದರೂ ಸತ್ತಾಗ ಸುಟ್ಟರೆ  ಭಾವನೆಗಳಿಗೆ ಸಂಚು ಹೂಡಿ ಬಲಿಯಾಗಿಸಿದ ಮೆದುಳಿರೋ ತಲೆಯ ಹೊರತು ಬಾಕಿ ಇನ್ಯಾವ ಅಂಗಾಂಗಗಳೂ ಸುಟ್ಚು ಬೂದಿಯಾಗಲಾರವೇನೋ ಬಹುಶಃ.

******

ಕಾಙಂನಗಾಡಿನ ಚಳಿಗಾಲದ ಸಂಜೆಗಳಿಗೆ ಅದರದ್ದೆ ಆದ ಒಂದು ಮಾಧುರ್ಯವಿದೆ. ಕಡಲ ತಡಿಯಲ್ಲಿರುವ ಕಾರಣ ಸಾಗರದ ಬೆಚ್ಚನೆ ಹವೆಯ ಆಹ್ಲಾದˌ ಪೂರ್ವದ ಕಡೆಗೆ ಊರಿನ ಪಕ್ಕದಲ್ಲೆ ಆರಂಭವಾಗಿ ಕೊಡಗಿನ ದಕ್ಷಿಣ ಭಾಗದೆಡೆಗೆ ಏರುತ್ತಾ ಸಾಗುವ ಪಶ್ಚಿಮಘಟ್ಟದ ಶಿಖರಗಳಿಂದ ರಾಚಿ ಬರುವ ಶೀತಗಾಳಿಯನ್ನ ತನ್ನ ತೆಕ್ಕೆಯೊಳಗೆ ಎಳೆದುಕೊಂಡು ಊರನ್ನ ಬೆಚ್ಚಗಿರಿಸುತ್ತದೆ. ಅಂತಹ ಸುಖಶೀತೋಷ್ಣ ವಾತಾವರಣದಲ್ಲಿಯೂ ಚಳಿ ಚಳಿ ಅನ್ನುತ್ತಾ ಬಿದ್ಢ ತೆಂಗಿನ ಮಡಿಲನ್ನ ಸೀಳಿ ರಾಶಿ ಹಾಕಿಕೊಂಡು ಹೊತ್ತಿಸಿರೋ ರಾಶಿಯ ಬೆಂಕಿಯ ಮುಂದೆ ಚಳಿ ಕಾಯಿಸಕೊಳ್ಳುತ್ತಿರೋ ತರುಣರೂ ಮುದುಕರೂ ಅಲ್ಲಲ್ಲಿ ಕಡಲತಡಿಯುದ್ಧ ಕಾಣ ಸಿಗುತ್ತಾರೆ.

ಬೆಂಗಳೂರಿನಂತಹ ಗಿರಿಧಾಮ ನಗರಿಯ ಚಳಿಗೆ ಹೊಂದಿಕೊಂಡಿದ್ದ ದೇಹ ಪ್ರಕೃತಿಯ ಅವನಿಗೆ ಅಲ್ಲಿನ ಹತ್ತರಲ್ಲೊಂದು ಭಾಗವೂ ಶೀತ ಕಾಣದ ಈ ಊರಿನ ಜನ ಅಷ್ಟಕ್ಕೆ ನಡುಕ ನಟಿಸೋದುˌ ಹೀಗೆ ಬೆಂಕಿ ಕಾಯಿಸಿಕೊಳ್ಳುವ ದೊಂಬರಾಟ ಮಾಡೋದೂ ನೋಡುವಾಗ ತಮಾಷೆ ಅನ್ನಿಸುತ್ತೆ.

ಕಾಙಂನಗಾಡಿಗೆ ಬಂದವ ಪೇಟೆಯಿಂದ ಕೊಂಚ ದೂರವಿರುವ ಅಲ್ಲೆ ಒಂದು ಹೊಟೇಲಿನಲ್ಲಿ ವಾರದ ಲೆಕ್ಕದಲ್ಲಿ ಮುಂಗಡ ಪಾವತಿಸಿ ಕೋಣೆ ಹಿಡಿದ. ಬೆಳಗ್ಯೆ ಎದ್ದವನೆ ಕಟ್ಟಡದ ಕೆಳಗಿರೋ ಕ್ಯಾಂಟೀನಿನಲ್ಲಿ ಚಾ ಹೀರಿ ಹೊರಟರೆ ಇಂತಲ್ಲಿಗೆ ಅಂತಿಲ್ಲ. ಕಾಲು ಕೊಂಡೊಯ್ದ ಕಡೆಗೆ ಅಂದಿನ ಪಯಣ ಖಾತ್ರಿ. ಕುಶಾಲನಗರದ ಕಡಲ ತಡಿˌ ನಿತ್ಯಾನಂದಾಶ್ರಮˌ ಸಮೀಪದ ಹೊಸದುರ್ಗ ಕೋಟೆˌ ದೂರದ ಬೇಕಲ ಕೋಟೆˌ ಆನಂದಾಶ್ರಮˌ ಗುರುವನ ಹೀಗೆ ಸಿಕ್ಕಸಿಕ್ಕಲೆಲ್ಲಾ ಅಲೆಮಾರಿಯಂತೆ ಅಲೆದುˌ ಹಸಿದಲ್ಲಿ ಉಂಡು ಮರಳಿ ಕೋಣೆಗೆ ಹಿಂದಿರುಗುವಾಗ ಕಾಲುಗಳ ವೇದನೆ ಸುಸ್ತಿನ ಸೂಚನೆಕೊಡುತ್ತಿತ್ತು. ಮಿಂದು ಬರಿಮೈಯಲ್ಲಿ ಮಂಚಕ್ಕೆ ಮೈ ಚೆಲ್ಲಿದರೆ ಭಯಂಕರ ಸೊಳ್ಳೆ ಕಾಟದ ಮಧ್ಯೆಯೂ ಕನಸುಗಳೂ ಕಾಡದಷ್ಟು ಗಾಢ ನಿದ್ದೆ ಆವರಿಸಿಕೊಂಡು ನಡು ರಾತ್ರಿಯಲೆಲ್ಲೋ ಇದ್ದಕ್ಕಿದ್ದಂತೆ ಎಚ್ಚರವಾಗಿ ಇನ್ನೂ ಉರಿಯುತ್ತಿರೋ ದೀಪˌ ತಿರುಗುತ್ತಿರೋ ಪಂಖದ ರೆಕ್ಕೆಗಳ ಕರಕರ ಸದ್ದಿನ ಮಧ್ಯ ಏಕಾಂಗಿಯಾಗಿ ತಾನು ಸ್ವಪ್ನಹೀನನಾಗಿ ಮಲಗಿರೋ ಸ್ಥಿತಿಯ ಅರಿವಾಗಿ ಭಯವಾಗುತ್ತಿತ್ತು.

ಕನಸಿಲ್ಲದ ಕರಾಳ ರಾತ್ರಿಯ ಈ ನಿಶಾಚರ ನಿದ್ರೆ ತಾನು ಸಂವೇದನಾರಹಿತನಾಗಿ ಬದಲಾಗುತ್ತಿರುವುದರ ಪೂರ್ವ ಸೂಚನೆಯೋ? ಇಂಚಿಂಚೂ ನಿತ್ಯ ತನ್ನೊಳಗಿನ ನಿಜವಾದ ತಾನು ಕರಗಿ ಇನ್ನಿಲ್ಲವಾಗುತ್ತಿರುವುದರ ನಿಶಾನಿ ಇದಿರಬಹುದೋ! ತಾನು ನಿಜವಾಗಿಯೂ ಜೀವಂತವಾಗಿದ್ದೇನೆಯೋ? ಇಲ್ಲಾ ಅದೆಂದೋ ಸತ್ತ ಆತ್ಮದ ಬೇತಾಳನನ್ನ ಹೆಗಲ ಮೇಲೆ ಹೊತ್ತ ತ್ರಿವಿಕ್ರಮನಂತೆ ಮೌನವಾಗಿ ಜೀವಚ್ಛವವಾಗಿ ತನ್ನ ಹಣದ ಭಾರವನ್ನ ತಾನೆ ಹೊತ್ತು ಸಾಗುತ್ತಿದ್ದೇನೆಯೋ? ಅನ್ನೋ ಗೊಂದಲ ಅವನೊಳಗೆ ಒಮ್ಮೊಮ್ಮೆ ಹುಟ್ಚಿ ಹೊತ್ತಲ್ಲದ ಹೊತ್ತಲ್ಲಿ ಬೆಚ್ಚಿಬೀಳುತ್ತಿದ್ದ.

ಹೀಗೆ ತನ್ನೊಳಗೆ ತಾನು ಮಗ್ನನಾಗಿ ಯೋಚಿಸುತ್ತಾ ಸಾಗುತ್ತಿದ್ದವನ ಆಲೋಚನಾ ಸರಣಿ ಪಕ್ಕದಲ್ಲೆ ಹಾದು ಹೋಗಿದ್ದ ಹಳಿಗಳ ಮೇಲೆ ವೇಗವಾಗಿ ಸಶಬ್ಧ ಸಹಿತ ಹಾದು ಹೋದ ರೈಲಿನ ಗದ್ದಲದಿಂದ ತುಂಡರಿಸಿಹೋಯಿತು. ಕ್ಷಣಾರ್ಧದಲ್ಲಿ ತನ್ನದೆ ಆಲೋಚನಾ ಲಹರಿಯ ತ್ರಿಶಂಕು ಸ್ವರ್ಗದಿಂದ ವಾಸ್ತವ ಪ್ರಪಂಚದ ನಾರುವ ನರಕಕ್ಕೆ ದೊಪ್ಪನೆ ಜಾರಿಬಿದ್ದ ಹಾಗಾಗಿತ್ತು ಅವನ ಸ್ಥಿತಿ.

*****

ನರ ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಏನಾದರೊಂದು ಚಟವಿರಬೇಕಂತೆ! ಹಾಗಿಲ್ಲದಿದ್ದರೆ ಮನುಷ್ಯರಾಗಿ ಹುಟ್ಟಿದ್ದೂ ವ್ಯರ್ಥ ಅನ್ನುವ ಅರ್ಥದಲ್ಲಿ ಅವರಿವರು ಮಾತಾಡಿದ್ದನ್ನ ಕೇಳಿದ್ದ. ಹಾಗಂತ ಇವನಿಗ್ಯಾವುದೆ ಚಟಗಳಿಲ್ಲ ಅಂತಲ್ಲ. ಅವನ ಜಾಯಮಾನಕ್ಕೂ ಮೂರು ಚಟಗಳಂಟಿವೆ. ಪ್ರವೃತ್ತಿಯೆ ಆಗಿದ್ದರೂ ಸಹ ವೃತ್ತಿಗಿಂತ ಹೆಚ್ಚು ಸಂಗೀತಾಸಕ್ತಿ ಇವನಿಗಿರುವ ಮೊದಲ ಚಟ. ಸಂಗೀತ ಅಂದರೆ ಶಾಸ್ತ್ರೀಯವೋ ಅಶಾಸ್ತ್ರೀಯವೋ ಅನ್ನೋದಕ್ಕಿಂತ ಜಾಸ್ತಿ ಶೃತಿ-ಲಯ-ತಾಳಬದ್ಧವಾಗಿದೆಯ? ಹಾಡುತ್ತಿರುವ ಸಾಹಿತ್ಯ ಅದ್ಯಾವುದಾದರೂ ಭಾಷೆಯಲ್ಲಿರಲಿ ಪರವಾಗಿಲ್ಲ. ಆದರೆ ಅರ್ಥಗರ್ಭಿತವಾಗಿದೆಯ? ಅನ್ನೋದಷ್ಟೆ ಅವನಿಗೆ ಆದ್ಯತೆ.

ಇನ್ನು ಭಯಂಕರ ತಿಂಡಿಪೋತ. ಚಿಕ್ಕಂದಿನಲ್ಲಿ ಸಹಜವಾಗಿರುವ ರಂಗು ರಂಗಿನ ಕಣ್ಸೆಳೆಯುವ ಗಾತ್ರದ ತಿಂಡಿ ತಿನಿಸಗಳನ್ನ ಮೆಲ್ಲುವ ತಿಂಡಿಪೋತತನ ಇನ್ನೂ ಎರಡು ಕೋಣನಷ್ಟು ಪ್ರಾಯವಾದರೂ ಇನಿತೂ ಕಡಿಮೆಯಾಗಿರಲಿಲ್ಲ. ಆದರೆ ತಾನೆ ತಯಾರಿ ಕಲಿತು ಮಾಡುವ ಹಾಗೂ ಜಲಚರಗಳೆ ಮುಖ್ಯವಾಗಿರುವ ಪಾಕ ವೈವಿಧ್ಯಗಳಿಗಷ್ಟೆ ಅವನ ಜಿಹ್ವಾ ಚಾಪಲ್ಯಕ್ಕೆ ಗಡಿ. ಅನೇಕ ರಾತ್ರಿ ಕೇವಲ ಹುರಿದ ಮೀನುˌ ಸಿಗಡಿ ಚಟ್ನಿˌ ತೊರಕೆ ಪಲ್ಯ ತಿಂದು ಊಟ ಮುಗಿಸಿದ್ದಾನೆ.

ಇನ್ನು ಕಟ್ಟ ಕಡೆಯದು ಎಲ್ಲಾ ಬಗೆಯ ವಾಹನಗಳ ಚಾಲನೆ ಕಲಿತು ನಡೆಸುವ ಚಟ.

( ಇನ್ನೂ ಇದೆ.)


ಮಾತು ಬಲು ಹಗುರ ಮೌನ ತೂಕದ್ದು ಅಂತ ಅವನಿಗನಿಸಲು ಕಾರಣಗಳಿವೆ. ಗಲಾಟೆˌ ಅನಗತ್ಯ ಹರಟೆˌ ಪಟ್ಟಾಂಗಗಳೆಂದರೆ ಅವನಿಗೆ ಅಲರ್ಜಿ. ಮೌನವಾಗಿ ನಮ್ಮ ಆತ್ಮದ ಜೊತೆ ನಾವೆ ಮಾತನಾಡಿಕೊಳ್ಳುವ ಸಮಯ ಬಲು ಅಮೂಲ್ಯ ಅನ್ನೋದು ಅವನ ನಂಬಿಕೆ. ತಮ್ಮ ತಮ್ಮ ಆತ್ಮದ ಜೊತೆಗೆ ಸಂವಹಿಸುವಾಗ ಸಾಮಾನ್ಯವಾಗಿ ಯಾರೂ ಸುಳ್ಳಾಡುವುದಿಲ್ಲ. ಪ್ರಾಮಾಣಿಕವಾದ ಸತ್ಯವಾದ ನುಡಿಗಳಷ್ಟೆ ಅದಲು ಬದಲಾಗುವ ಪವಿತ್ರ ಹೊತ್ತದು. ಅಲ್ಲೂ ಅಪದ್ಧವನ್ನಾಡುವ ಅಧಮರು ಆತ್ಮವಂಚಕರು ಅಷ್ಟೆ.


ಇತ್ತೀಚೆಗೆ ಪ್ರಕ್ಷುಬ್ಧಗೊಂಡಿರುವ ಮನಸಿನ ಭಾರ ಹೊತ್ತು ಸಮುದ್ರಕ್ಕೆ ಮುಖ ಮಾಡಿ ದೂರ ಸಾಗರದ ಎದೆ ಮೇಲೆ ಅತ್ತಿತ್ತ ಸರಿಯುವ ಅದೇನನ್ನೋ ದಿಟ್ಟಿಸುತ್ತಾ ಧ್ಯಾನಸ್ಥನಾಗುವ ಸುಖವೆ ಪರಮಸುಖ ಅನ್ನಿಸಿದೆ ಅವನಿಗೆ. ಈ ಏಕಾಂತದ ರುಚಿ ಮನಸಿಗೆ ಹತ್ತಿದ ಹಾಗೆ ದಿನಾ ಸಂಜೆ ಹೀಗೆ ವ್ಯಸನಿಯಂತೆ ಒಬ್ಬಂಟಿಯಾಗಿ ಕಡಲ ತಡಿಗೆ ಬಂದು ಕೂರುವ ಗೀಳನ್ನ ಅಂಟಿಸಿಕೊಂಡಿದ್ದಾನವನು.


ಉಕ್ಕಿ ಬರುವ ಕಡಲಲೆಗಳು ಪ್ರೀತಿಗೂ ವಿರಹಕ್ಕೂ ಏಕಕಾಲದಲ್ಲಿ ದ್ಯೋತಕ ಅಂತೆನಿಸಿˌ ಒಂದೆ ಭಾವದಲ್ಲಿ ವೈರುಧ್ಯದ ರೂಪಕಗಳನ್ನ ಹೊತ್ತುಕೊಂಡಿರುವ ಸಾಗರದ ತೆರೆಗಳ ಮೇಲೆ ಅದೇಕೋ ಅವನಿಗೆ ಅವ್ಯಕ್ತ ಮತ್ಸರ ಮೂಡುತ್ತದೆ. ನದಿಯ ವಿರಹದ ನಡೆಗೆ ಮುಕ್ತಿ ಕಾಣಿಸುವ ಕೊನೆಯ ಆಸರೆಯೆ ಆಗಿದ್ದರೂ ಸಹ ಸಾಗರದ ಅಪ್ಪುಗೆಗೆ ಧಾವಿಸಿ ಹರಿದುಬರುವ ನದಿ ತನ್ನೊಳಗಿನ ಸಿಹಿಯನೆಲ್ಲ ಕಡಲ ತೋಳುಗಳಿಗೆ ಧಾರೆಯೆರೆದು ತಾನು ಮಾತ್ರ ತನ್ನ ಅಸ್ತಿತ್ವವನ್ನೆ ಕಳೆದುಕೊಂಡು ಶಾಶ್ವತವಾಗಿ ಉಪ್ಪುಪ್ಪಾಗುತ್ತದೆ. ಹಿಂದಿರುಗಿ ಸಿಹಿಯಾಗಲಾರದ ಸ್ಥಿತಿಗೆ ಹೋಗಿ ತಲುಪುತ್ತದೆ. ಉಪ್ಪು ಬಾಳಿನ ರುಚಿ ಹೆಚ್ಚಿಸಲು ಮುಖ್ಯ ನಿಜ. ಆದರದುˌ ಚಿಟಿಕೆಯಷ್ಟಿದಿದ್ದರೆ ಸಾಕೆ ಸಾಕು. ಅದು ಬಿಟ್ಟು ಬದುಕಿನುದ್ದ ಉಪ್ಪನ್ನೆ ಎರೆದುಕೊಂಡರೆ ವಾಕರಿಕೆ ಬಂದು ಸಾಯಬೇಕಷ್ಟೆ!


ಕಡಲ ನೀರಿಂಗಿಸಿ ಉಪ್ಪು ಮಾಡುವ ಕಸುಬಿನ ಕೂಲಿಗಳ ಕಾಲಿಗೆ ಅದ್ಯಾವ ಪರಿ ಲವಣದ ಶೇಷ ಅಂಟಿಕೊಂಡಿರುತ್ತದೆ ಅಂದರೆˌ ಉಪ್ಪು ಮಾಡುವವ ಸತ್ತರೆ ಅದೆಷ್ಟೆ ಸುಟ್ಟರೂ ಹೆಣದ ಕಾಲು ಮಾತ್ರ ಸಂಪೂರ್ಣ ಬೆಂದು ಸುಟ್ಟು ಬೂದಿಯಾಗಲಾರದು. ಅದೊಂತರಾ ಅರೆಬರೆ ಸುಟ್ಟು ಹೋಗುವ ಶಾಪಗ್ರಸ್ಥ ಬದುಕು. ಈಗ ಜೀವಂತಿಕೆಯ ಬದುಕಿನ ಹತ್ತಿರ ಮೂರು ಮೂರು ಸಲ ಹೋಗಿ ಅದರ ಉಪ್ಪಿನ ರಾಶಿಯಲ್ಲಿ ಮೊಣಕಾಲಷ್ಟೆ ಅಲ್ಲ ಕುತ್ತಿಗೆಯವರೆಗೂ ಹೂತು ಹೋಗಿಯೂ ಮೂರರಲ್ಲಿ ಕನಿಷ್ಠ ಒಂದನ್ನೂ ದಕ್ಕಿಸಿಕೊಳ್ಳಲಾರದ ದುಃಖದಲ್ಲಿರುವ ಅವನ ಸ್ಥಿತಿಯೂ ಉಪ್ಪು ಮಾಡುವ ಕೂಲಿಯ ತರಹದ್ದೆ ಆಗಿ ಹೋಗಿತ್ತು. ಉಪ್ಪು ಮಾಡುವವ ಸತ್ತಾಗ ಸುಟ್ಟರೆ ಅವನ ಕಾಲಷ್ಟೆ ಸುಡದೆ ಉಳಿಯುತ್ತೆ ಅಂತಂದುಕೊಂಡರೆˌ ಕಂಠ ಮಟ್ಟದವರೆಗೆ ಪ್ರೀತಿಯ ಉಪ್ಪ ರಾಶಿಯಲ್ಲಿ ಸೋತು ಹೂತು ಹೋಗಿದ್ದ ಇವನ್ನನ್ನೇನಾದರೂ ಸತ್ತಾಗ ಸುಟ್ಟರೆ  ಭಾವನೆಗಳಿಗೆ ಸಂಚು ಹೂಡಿ ಬಲಿಯಾಗಿಸಿದ ಮೆದುಳಿರೋ ತಲೆಯ ಹೊರತು ಬಾಕಿ ಇನ್ಯಾವ ಅಂಗಾಂಗಗಳೂ ಸುಟ್ಚು ಬೂದಿಯಾಗಲಾರವೇನೋ ಬಹುಶಃ.

******

ಕಾಙಂನಗಾಡಿನ ಚಳಿಗಾಲದ ಸಂಜೆಗಳಿಗೆ ಅದರದ್ದೆ ಆದ ಒಂದು ಮಾಧುರ್ಯವಿದೆ. ಕಡಲ ತಡಿಯಲ್ಲಿರುವ ಕಾರಣ ಸಾಗರದ ಬೆಚ್ಚನೆ ಹವೆಯ ಆಹ್ಲಾದˌ ಪೂರ್ವದ ಕಡೆಗೆ ಊರಿನ ಪಕ್ಕದಲ್ಲೆ ಆರಂಭವಾಗಿ ಕೊಡಗಿನ ದಕ್ಷಿಣ ಭಾಗದೆಡೆಗೆ ಏರುತ್ತಾ ಸಾಗುವ ಪಶ್ಚಿಮಘಟ್ಟದ ಶಿಖರಗಳಿಂದ ರಾಚಿ ಬರುವ ಶೀತಗಾಳಿಯನ್ನ ತನ್ನ ತೆಕ್ಕೆಯೊಳಗೆ ಎಳೆದುಕೊಂಡು ಊರನ್ನ ಬೆಚ್ಚಗಿರಿಸುತ್ತದೆ. ಅಂತಹ ಸುಖಶೀತೋಷ್ಣ ವಾತಾವರಣದಲ್ಲಿಯೂ ಚಳಿ ಚಳಿ ಅನ್ನುತ್ತಾ ಬಿದ್ಢ ತೆಂಗಿನ ಮಡಿಲನ್ನ ಸೀಳಿ ರಾಶಿ ಹಾಕಿಕೊಂಡು ಹೊತ್ತಿಸಿರೋ ರಾಶಿಯ ಬೆಂಕಿಯ ಮುಂದೆ ಚಳಿ ಕಾಯಿಸಕೊಳ್ಳುತ್ತಿರೋ ತರುಣರೂ ಮುದುಕರೂ ಅಲ್ಲಲ್ಲಿ ಕಡಲತಡಿಯುದ್ಧ ಕಾಣ ಸಿಗುತ್ತಾರೆ.

ಬೆಂಗಳೂರಿನಂತಹ ಗಿರಿಧಾಮ ನಗರಿಯ ಚಳಿಗೆ ಹೊಂದಿಕೊಂಡಿದ್ದ ದೇಹ ಪ್ರಕೃತಿಯ ಅವನಿಗೆ ಅಲ್ಲಿನ ಹತ್ತರಲ್ಲೊಂದು ಭಾಗವೂ ಶೀತ ಕಾಣದ ಈ ಊರಿನ ಜನ ಅಷ್ಟಕ್ಕೆ ನಡುಕ ನಟಿಸೋದುˌ ಹೀಗೆ ಬೆಂಕಿ ಕಾಯಿಸಿಕೊಳ್ಳುವ ದೊಂಬರಾಟ ಮಾಡೋದೂ ನೋಡುವಾಗ ತಮಾಷೆ ಅನ್ನಿಸುತ್ತೆ.

ಕಾಙಂನಗಾಡಿಗೆ ಬಂದವ ಪೇಟೆಯಿಂದ ಕೊಂಚ ದೂರವಿರುವ ಅಲ್ಲೆ ಒಂದು ಹೊಟೇಲಿನಲ್ಲಿ ವಾರದ ಲೆಕ್ಕದಲ್ಲಿ ಮುಂಗಡ ಪಾವತಿಸಿ ಕೋಣೆ ಹಿಡಿದ. ಬೆಳಗ್ಯೆ ಎದ್ದವನೆ ಕಟ್ಟಡದ ಕೆಳಗಿರೋ ಕ್ಯಾಂಟೀನಿನಲ್ಲಿ ಚಾ ಹೀರಿ ಹೊರಟರೆ ಇಂತಲ್ಲಿಗೆ ಅಂತಿಲ್ಲ. ಕಾಲು ಕೊಂಡೊಯ್ದ ಕಡೆಗೆ ಅಂದಿನ ಪಯಣ ಖಾತ್ರಿ. ಕುಶಾಲನಗರದ ಕಡಲ ತಡಿˌ ನಿತ್ಯಾನಂದಾಶ್ರಮˌ ಸಮೀಪದ ಹೊಸದುರ್ಗ ಕೋಟೆˌ ದೂರದ ಬೇಕಲ ಕೋಟೆˌ ಆನಂದಾಶ್ರಮˌ ಗುರುವನ ಹೀಗೆ ಸಿಕ್ಕಸಿಕ್ಕಲೆಲ್ಲಾ ಅಲೆಮಾರಿಯಂತೆ ಅಲೆದುˌ ಹಸಿದಲ್ಲಿ ಉಂಡು ಮರಳಿ ಕೋಣೆಗೆ ಹಿಂದಿರುಗುವಾಗ ಕಾಲುಗಳ ವೇದನೆ ಸುಸ್ತಿನ ಸೂಚನೆಕೊಡುತ್ತಿತ್ತು. ಮಿಂದು ಬರಿಮೈಯಲ್ಲಿ ಮಂಚಕ್ಕೆ ಮೈ ಚೆಲ್ಲಿದರೆ ಭಯಂಕರ ಸೊಳ್ಳೆ ಕಾಟದ ಮಧ್ಯೆಯೂ ಕನಸುಗಳೂ ಕಾಡದಷ್ಟು ಗಾಢ ನಿದ್ದೆ ಆವರಿಸಿಕೊಂಡು ನಡು ರಾತ್ರಿಯಲೆಲ್ಲೋ ಇದ್ದಕ್ಕಿದ್ದಂತೆ ಎಚ್ಚರವಾಗಿ ಇನ್ನೂ ಉರಿಯುತ್ತಿರೋ ದೀಪˌ ತಿರುಗುತ್ತಿರೋ ಪಂಖದ ರೆಕ್ಕೆಗಳ ಕರಕರ ಸದ್ದಿನ ಮಧ್ಯ ಏಕಾಂಗಿಯಾಗಿ ತಾನು ಸ್ವಪ್ನಹೀನನಾಗಿ ಮಲಗಿರೋ ಸ್ಥಿತಿಯ ಅರಿವಾಗಿ ಭಯವಾಗುತ್ತಿತ್ತು.

ಕನಸಿಲ್ಲದ ಕರಾಳ ರಾತ್ರಿಯ ಈ ನಿಶಾಚರ ನಿದ್ರೆ ತಾನು ಸಂವೇದನಾರಹಿತನಾಗಿ ಬದಲಾಗುತ್ತಿರುವುದರ ಪೂರ್ವ ಸೂಚನೆಯೋ? ಇಂಚಿಂಚೂ ನಿತ್ಯ ತನ್ನೊಳಗಿನ ನಿಜವಾದ ತಾನು ಕರಗಿ ಇನ್ನಿಲ್ಲವಾಗುತ್ತಿರುವುದರ ನಿಶಾನಿ ಇದಿರಬಹುದೋ! ತಾನು ನಿಜವಾಗಿಯೂ ಜೀವಂತವಾಗಿದ್ದೇನೆಯೋ? ಇಲ್ಲಾ ಅದೆಂದೋ ಸತ್ತ ಆತ್ಮದ ಬೇತಾಳನನ್ನ ಹೆಗಲ ಮೇಲೆ ಹೊತ್ತ ತ್ರಿವಿಕ್ರಮನಂತೆ ಮೌನವಾಗಿ ಜೀವಚ್ಛವವಾಗಿ ತನ್ನ ಹಣದ ಭಾರವನ್ನ ತಾನೆ ಹೊತ್ತು ಸಾಗುತ್ತಿದ್ದೇನೆಯೋ? ಅನ್ನೋ ಗೊಂದಲ ಅವನೊಳಗೆ ಒಮ್ಮೊಮ್ಮೆ ಹುಟ್ಚಿ ಹೊತ್ತಲ್ಲದ ಹೊತ್ತಲ್ಲಿ ಬೆಚ್ಚಿಬೀಳುತ್ತಿದ್ದ.

ಹೀಗೆ ತನ್ನೊಳಗೆ ತಾನು ಮಗ್ನನಾಗಿ ಯೋಚಿಸುತ್ತಾ ಸಾಗುತ್ತಿದ್ದವನ ಆಲೋಚನಾ ಸರಣಿ ಪಕ್ಕದಲ್ಲೆ ಹಾದು ಹೋಗಿದ್ದ ಹಳಿಗಳ ಮೇಲೆ ವೇಗವಾಗಿ ಸಶಬ್ಧ ಸಹಿತ ಹಾದು ಹೋದ ರೈಲಿನ ಗದ್ದಲದಿಂದ ತುಂಡರಿಸಿಹೋಯಿತು. ಕ್ಷಣಾರ್ಧದಲ್ಲಿ ತನ್ನದೆ ಆಲೋಚನಾ ಲಹರಿಯ ತ್ರಿಶಂಕು ಸ್ವರ್ಗದಿಂದ ವಾಸ್ತವ ಪ್ರಪಂಚದ ನಾರುವ ನರಕಕ್ಕೆ ದೊಪ್ಪನೆ ಜಾರಿಬಿದ್ದ ಹಾಗಾಗಿತ್ತು ಅವನ ಸ್ಥಿತಿ.

*****

ನರ ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಏನಾದರೊಂದು ಚಟವಿರಬೇಕಂತೆ! ಹಾಗಿಲ್ಲದಿದ್ದರೆ ಮನುಷ್ಯರಾಗಿ ಹುಟ್ಟಿದ್ದೂ ವ್ಯರ್ಥ ಅನ್ನುವ ಅರ್ಥದಲ್ಲಿ ಅವರಿವರು ಮಾತಾಡಿದ್ದನ್ನ ಕೇಳಿದ್ದ. ಹಾಗಂತ ಇವನಿಗ್ಯಾವುದೆ ಚಟಗಳಿಲ್ಲ ಅಂತಲ್ಲ. ಅವನ ಜಾಯಮಾನಕ್ಕೂ ಮೂರು ಚಟಗಳಂಟಿವೆ. ಪ್ರವೃತ್ತಿಯೆ ಆಗಿದ್ದರೂ ಸಹ ವೃತ್ತಿಗಿಂತ ಹೆಚ್ಚು ಸಂಗೀತಾಸಕ್ತಿ ಇವನಿಗಿರುವ ಮೊದಲ ಚಟ. ಸಂಗೀತ ಅಂದರೆ ಶಾಸ್ತ್ರೀಯವೋ ಅಶಾಸ್ತ್ರೀಯವೋ ಅನ್ನೋದಕ್ಕಿಂತ ಜಾಸ್ತಿ ಶೃತಿ-ಲಯ-ತಾಳಬದ್ಧವಾಗಿದೆಯ? ಹಾಡುತ್ತಿರುವ ಸಾಹಿತ್ಯ ಅದ್ಯಾವುದಾದರೂ ಭಾಷೆಯಲ್ಲಿರಲಿ ಪರವಾಗಿಲ್ಲ. ಆದರೆ ಅರ್ಥಗರ್ಭಿತವಾಗಿದೆಯ? ಅನ್ನೋದಷ್ಟೆ ಅವನಿಗೆ ಆದ್ಯತೆ.

ಇನ್ನು ಭಯಂಕರ ತಿಂಡಿಪೋತ. ಚಿಕ್ಕಂದಿನಲ್ಲಿ ಸಹಜವಾಗಿರುವ ರಂಗು ರಂಗಿನ ಕಣ್ಸೆಳೆಯುವ ಗಾತ್ರದ ತಿಂಡಿ ತಿನಿಸಗಳನ್ನ ಮೆಲ್ಲುವ ತಿಂಡಿಪೋತತನ ಇನ್ನೂ ಎರಡು ಕೋಣನಷ್ಟು ಪ್ರಾಯವಾದರೂ ಇನಿತೂ ಕಡಿಮೆಯಾಗಿರಲಿಲ್ಲ. ಆದರೆ ತಾನೆ ತಯಾರಿ ಕಲಿತು ಮಾಡುವ ಹಾಗೂ ಜಲಚರಗಳೆ ಮುಖ್ಯವಾಗಿರುವ ಪಾಕ ವೈವಿಧ್ಯಗಳಿಗಷ್ಟೆ ಅವನ ಜಿಹ್ವಾ ಚಾಪಲ್ಯಕ್ಕೆ ಗಡಿ. ಅನೇಕ ರಾತ್ರಿ ಕೇವಲ ಹುರಿದ ಮೀನುˌ ಸಿಗಡಿ ಚಟ್ನಿˌ ತೊರಕೆ ಪಲ್ಯ ತಿಂದು ಊಟ ಮುಗಿಸಿದ್ದಾನೆ.

ಇನ್ನು ಕಟ್ಟ ಕಡೆಯದು ಎಲ್ಲಾ ಬಗೆಯ ವಾಹನಗಳ ಚಾಲನೆ ಕಲಿತು ನಡೆಸುವ ಚಟ.

( ಇನ್ನೂ ಇದೆ.)

25 November 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨ 👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨ 👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨ 👊

ನಮ್ಮ ಇಂದಿನ ಭಾರತದಲ್ಲಿ ಯಾವುದೆ ಊರೊಂದರ ನಿಜ ಹೆಸರು ತಿಳಿದುಕೊಳ್ಳುವ ಆಸಕ್ತಿಯಿರುವವರು ಒಂದೋ ನಮ್ಮನ್ನ ಆಕ್ರಮಿಸಿ ಆಳಿದ ಬ್ರಿಟಿಷರ ಗೆಝೆ಼ಟಿಯರ್ - ಡೈರಿ ನಮೂದುಗಳು - ಆಡಳಿತಾತ್ಮಕ ವರದಿಗಳು - ಸರ್ವೆ ರಿಪೋರ್ಟುಗಳು ಅಥವಾ ಆ ಕಾಲದಲ್ಲಿ ಮತಾಂತರದ ಉದ್ದೇಶದಿಂದ ಭಾರತಕ್ಕೆ ಬಂದಿಳಿದಿದ್ದ ರೋಮನ ಕ್ಯಾಥೋಲಿಕ ಪಾದ್ರಿಗಳ ಹಾಗೂ ಬಾಸೆಲ್ ಮಿಶನರಿಗಳ ದಾಖಲಿತ ದಿನಚರಿ ಹಾಗೂ ಅವರು ರೋಮಿಗೋ - ಮ್ಯೂನಿಚ್ಚಿಗೋ ಬರೆದು ಕಳಿಸಿದ್ದ ಕಾರ್ಯಪ್ರಗತಿಯ ದಾಖಲಾತಿಗಳನ್ನ ಪರಿಶೀಲಿಸಬೇಕು. ಅವುಗಳಲ್ಲೆಲ್ಲ ಸ್ಥಳಿಯವಾಗಿ ಪ್ರಚಲಿತದಲ್ಲಿರುವ ನೈಜ ಸ್ಥಳನಾಮವೆ ನಮೂದಾಗಿರುತ್ತದೆ.

ಇಲ್ಲದಿದ್ದರೆˌ ಸ್ಥಳಿಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಜನಪದ ಸಂಸ್ಕಾರಗಳ ಪರಿ ಗಮನಿಸಬೇಕು. ಕಾಙಂನಗಾಡಿನ ವಿಷಯದಲ್ಲಿ ಇಲ್ಲಿನ ಭೂತದ ಕೋಲ ಇದನ್ನೆ ಅನುಕರಿಸುವ ಮಲಬಾರಿನ ಥಯ್ಯಂಗಿಂತ ವಿಭಿನ್ನ. ಅದರ ನುಡಿಗಳಲ್ಲಿ ತುಳು ಭಾಷೆಗೆ ಪ್ರಾಧಾನ್ಯತೆ ಇದೆಯೆ ಹೊರತು ಹೇರಿಕೆಯ ಮಲಯಾಳಂಗಲ್ಲ. ಇಂದಿಗೂ ಇಲ್ಲಿನ ಜನಮಾನಸದ ಮನರಂಜನೆಯ ಮೂಲವಾಗಿ ಜನಪ್ರಿಯವಾಗಿರುವುದು ತುಳುನಾಡಿನ ಯಕ್ಷಗಾನವೆ ಹೊರತುˌ ಅದರ ನಕಲಿಳಿಸಿ ಆಡುವ ಮಲಯಾಳಿಗಳ ಕಥಕ್ಕಳಿಯಲ್ಲ.

ಅದೂ ಇಲ್ಲಂತಂದರೆˌ ಸ್ಥಳಿಯವಾಗಿ ನ್ಯಾಯದಾನಕ್ಕೆ ಅದೆ ಬ್ರಿಟಿಷರು ಸ್ಥಾಪಿಸಿದ್ದ ನ್ಯಾಯಾಲಯಗಳ ಹೆಸರುಗಳನ್ನ ಗಮನಿಸಬೇಕು. ಬರಗೆಟ್ಟ ರಾಜಕಾರಣಿಗಳ ಒಡೆದಾಳುವ ನೀತಿಯ ಬಲಿಪಶುವಾಗಿರೋ ಇಂದಿನ ಭಾರತದಲ್ಲಿ ಏನೆ ಬದಲಾಗಿದ್ದರೂ ವಸಾಹತುಶಾಹಿ ಕಾಲದ ನ್ಯಾಯಾಲಯಗಳು ತಮ್ಮ ಅಸಲು ಗುರುತು ಬಿಟ್ಟು ಬದಲಾಗಿಲ್ಲ. ಈಗಲೂ ಅದು ಮದ್ರಾಸ್ ಹೈಕೋರ್ಟೆ ಹೊರತು ಚೆನ್ನೈ ಉಚ್ಛ ನ್ಯಾಯಾಲಯವಲ್ಲ. ಊರ ಹೆಸರನ್ನ ಕುಟಿಲ ರಾಜಕಾರಣಿಗಳು ಪ್ರಯಾಗರಾಜˌ ಮುಂಬೈˌ ಕೊಲ್ಕತಾˌ ನವ ದೆಹಲಿ ಅಂತ ಬದಲಿಸಿದ್ದರೂ ನ್ಯಾಯಾಲಯಗಳು ಮಾತ್ರ ಮೊದಲಿನಂತೆ ಅಲಹಾಬಾದ್ˌ ಬಾಂಬೆˌ ಕಲ್ಕತಾˌ ತೀಸ್ ಹಜಾ಼ರಿಯಾಗಿಯೆ ಉಳಿದಿವೆ. ದರಿದ್ರ ರಾಜಕಾರಣಿಗಳ ಚುನಾವಣಾ ಮರು ನಾಮಕರಣ ತಂತ್ರಕ್ಕೆ ಅವು ಬಲಿಯಾಗಿಲ್ಲ. ಒಂದು ಗೆರೆಯನ್ನ ಮುಟ್ಟದೆ ಅದನ್ನ ಸಣ್ಣದು ಮಾಡಬೇಕಿದ್ದರೆ ಅದರ ಪಕ್ಕದಲ್ಲೆ ದೊಡ್ಡ ಗೆರೆಯನೊಂದು ಎಳೆಯಬೇಕೆ ಹೊರತು ಇರೋ ಗೆರೆಯ ಅಳಿಸೋದಲ್ಲ. ಇತ್ತೀಚೆಗೆ ಟಿಪ್ಪೂ ಎಕ್ಸಪ್ರೆಸ್ ರೈಲನ್ನ ಒಡೆಯರ್ ಎಕ್ಸಪ್ರೆಸ್ ಮಾಡಿದ ಕಮಂಗಿ ನಾಲಾಯಕರ ಮುಠ್ಠಾಳತನ ನೆನಪಾಗಿ ಅವನ ತುಟಿಯಂಚಿನಲ್ಲಿ ವ್ಯಂಗ್ಯದ ನಗುವಿನ ಎಳೆಯೊಂದು ಸುಳಿಯಿತು.

ಕಾಙಂಗಾಡಿನದ್ದೂ ಒಂಥರಾ ಅಂತದ್ದೆ ಕಥೆ. ಮೂಲತಃ ಇದು ತುಳುನಾಡಿನ ಭಾಗ. ಸ್ಥಳಿಯರ ವ್ಯಾವಹಾರಿಕ ಭಾಷೆ ತುಳು ಹಾಗೂ ಕನ್ನಡ. ಹಾಗೆ ನೋಡಿದರೆ ಇದಕ್ಕೂ ದಕ್ಷಿಣಕ್ಕಿರುವ ಪಯ್ಯನೂರು ತಾಲೂಕಿನ ಕೆಳಗಿನಂಚಿನವರೆಗೂ ಅದು ತುಳುನಾಡೆ. ನ್ಯಾಯವಾಗಿ ಅಷ್ಟೂ ನೆಲ ಸ್ವತಂತ್ರೋತ್ತರ ಕಾಲದಲ್ಲಿ ಪೂರ್ತಿ ದಕ್ಷಿಣ ಕನ್ನಡ ಜಿಲ್ಲೆಯ ಜೊತೆ ಕನ್ನಡ ನಾಡಿನ ಭಾಗವಾಗಬೇಕಿತ್ತು. ಆದರೆ ಗಡಿ ನಿಗದಿ ಆಯೋಗದಲ್ಲಿದ್ದ ಪಣಿಕ್ಕರನೆಂಬ ಕುಟಿಲ ಮಲಯಾಳಿ ಸದಸ್ಯ ಪೂರ್ಣ ಕಾಸರಗೋಡು ತಾಲೂಕನ್ನ ತೆಗೆದು ಪಕ್ಕದ ಕೇರಳದ ಮಲಬಾರು ಜಿಲ್ಲೆಗೆ ಒತ್ತಾಯದಿಂದ ಸೇರಿಸಿದ! ಅನಂತರ ಮಲಬಾರು ಜಿಲ್ಲೆಯ ವಿಭಜನೆ ನಡೆದು ವಯನಾಡುˌ ಮಲ್ಲಪುರಂˌ ಕೋಳಿಕ್ಕೋಡು, ಪಾಲಕ್ಕಾಡು ಹಾಗೂ ಕಣ್ಣೂರು ಜಿಲ್ಲೆಗಳ ರಚನೆ ಮಾಡಿದಾಗ ಕಾಸರಗೋಡನ್ನ ಕಣ್ಣೂರಿನ ಭಾಗವಾಗಿ ಮುಂದುವರೆಸಲಾಯಿತು. ಮುಂದೆ ಕಾಸರಗೋಡನ್ನೆ ಜಿಲ್ಲೆ ಮಾಡಿ ಕಾಸರಗೋಡು ಹಾಗೂ ಹೊಸದುರ್ಗ ತಾಲೂಕುಗಳ ಸಹಿತ ಪ್ರತ್ಯೇಕಗೊಳಿಸಲಾಯಿತಾದರೂ ಆ ಕಾಲದಿಂದ ಅದರದ್ದೆ ಅವಿಚ್ಛಿನ್ನ ಭಾಗವಾಗಿದ್ದ ಪಯ್ಯನೂರನ್ನ ಪ್ರತ್ಯೇಕ ತಾಲೂಕಾಗಿಸಿ ಕಣ್ಣೂರಲ್ಲೆ ಇರಿಸಲಾಗಿದೆ.

ಇಂದಿಗೂ ಸರಕಾರಿ ಸೇವೆಗಳಲ್ಲಿ ಜಿಲ್ಲಾ ಬೋರ್ಡುಗಳ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾಗೂ ಗ್ರಾಮೀಣಭಿವೃದ್ಧಿ ಸಂಸ್ಥೆಗಳ ದಿನನಿತ್ಯದ ವ್ಯವಹಾರಗಳಲ್ಲಿ ಕನ್ನಡ - ಮಲಯಾಳಂ ಎರಡೂ ಭಾಷೆಗಳ ಬಳಕೆ ಕಡ್ಡಾಯವಾಗಿದ್ದರೂ ಅದು ಕೇವಲ ಕಾಗದದ ಮೇಲಿನ ಬರಹವಾಗಿ ಮಾತ್ರ ಉಳಿದಿದೆ. ಕೇರಳ ಸರಕಾರದ ಮಲಯಾಳಂ ವಿಸ್ತರಣ ನೀತಿಯ ಫಲವಾಗಿ ಸರಕಾರಿ ಸಂಬಂಧಿತ ಸಂಘ ಸಂಸ್ಥೆಗಳಲ್ಲೆಲ್ಲಾ ವ್ಯವಸ್ಥಿತವಾಗಿ ದಕ್ಷಿಣದ ತಿರುವಾಂಕೂರು - ಕೊಚ್ಚಿನ್ ಭಾಗದ ಮಲಯಾಳಿ ಭಾಷಿಗ ಉದ್ಯೋಗಿಗಳನ್ನ ತಂದು ತುಂಬಲಾಗಿದೆ. ವರ್ಷಾಂತರಗಳಲ್ಲಿ ಮಾಡಿದ್ದ ಈ ಕುತಂತ್ರ ಫಲ ಕೊಟ್ಟಿದ್ದು ಬಹುತೇಕ ಮೂರು ದಶಕಗಳ ಹಿಂದೆ ಹೀಗೆಲ್ಲ ಇಲ್ಲಿಗೆ ಬಂದು ಕಡೆಗೆ ಇಲ್ಲೆ ನೆಲೆಸಿದ ಮಲಯಾಳಿಗಳ ಮುಂದಿನ ಎರಡನೆ ತಲೆಮಾರು ಇಲ್ಲೆ ಕಣ್ಣು ಬಿಟ್ಟು ಬಹುತೇಕ ಈಗಿಲ್ಲಿ ಕನ್ನಡ ಊಟದೆಲೆಯಂಚಿನ ಉಪ್ಪಿನಂತಾಗಿ ಹೋಗಿದೆ. ಸ್ಥಳಿಯ ಕನ್ನಡಿಗರು ಸರಕಾರಿ ಹಾಗೂ ಖಾಸಗಿ ಸೇವೆಗಳನ್ನ ಪಡೆಯಲು ಮಲಯಾಳಂ ಕಲಿಯುವದು ಹಾಗೂ ಬಳಸುವುದು ಅನಿವಾರ್ಯ ಅನ್ನುವ ಪರಿಸ್ಥಿತಿಯನ್ನ ಸೃಷ್ಟಿ ಮಾಡಲಾಗಿದೆ.
....

ಹೊಸದುರ್ಗ ಕಾಙಂಗಾಡಾದದ್ದೂ ಸಹ ಹೀಗೆಯೆ. ಇವತ್ತು ಇಡಿ ಊರಲ್ಲಿ ಹುಡುಕಾಡಿದರೂ ತಾಲೂಕು ಖಾದಿ ಬೋರ್ಡು ಹಾಗೂ ತಾಲೂಕು ದಂಡಾಧಿಕಾರಿಗಳ ನ್ಯಾಯಾಲಯದ ಹೊರತು ಇನ್ನೆಲ್ಲಾ ಜಾಗಗಳಿಂದ ಹೊಸದುರ್ಗ ಅನ್ನುವ ಹೆಸರು ನಾಪತ್ತೆಯಾಗಿ ಕಾಙಂಗಾಡ್ ಅನ್ನುವ ಹೆಸರು ಒಕ್ಕರಿಸಿದೆ. ಸಾಲದ್ದಕ್ಕೆ ಅವೆರಡು ಜಾಗದ ಹೊರತು ಸ್ಥಳಿಯರಿಗೆ ಚಿರ ಪರಿಚಿತವಾಗಿರುವ ಕನ್ನಡ ಲಿಪಿಯೂ ಮಂಗಮಾಯವಾಗಿ ಲಿಪಿಯಿಲ್ಲದ ಮಲಯಾಳಂ ಭಾಷೆಯನ್ನ ಬರೆಯಲು ಮಲಯಾಳಿಗಳು ಅವಲಂಬಿಸಿರುವ ಎರವಲು ತುಳು ಲಿಪಿಯೆ ಎಲ್ಲೆಲ್ಲಿಯೂ ರಾರಾಜಿಸುತ್ತಿದೆ. ದುರದೃಷ್ಟಕ್ಕೆ ಬಹುತೇಕ ಸ್ಥಳಿಯರು ಅದನ್ನರಿಯರು.

ಇಕ್ಕೇರಿಯ "ಕೆಳದಿ ಸಂಸ್ಥಾನ"ದ ನಾಯಕರು ಸ್ಥಾಪಿಸಿದ್ದˌ ಅನಂತರ ಹೈದರಾಲಿ ಅವರಿಂದ ವಶಪಡಿಸಿಕೊಂಡಿದ್ದ ಹೊಸದುರ್ಗ ಕೋಟೆ ಹಾಗೂ ಅದರ ಸುತ್ತಲ ಊರು ಮಲಯಾಳಿಗಳು ಹುಟ್ಟಿಸಿರುವ ಕಾಙನ್ ಎಂಬ ವೀರನ ಹೆಸರಂಟಿಸಿಕೊಂಡು ಕಾಙಂನಗಾಡಾಗಿ ಬದಲಾಗಿ ಹೋಗಿದೆ. ಈ ತಾಲೂಕಿನಲ್ಲಿ ಕನ್ನಡ ಈಗೇನಿದ್ದರೂ ಇಲ್ಲಿರುವ ಅಳಿದುಳಿದ ಕನ್ನಡ ಮಾಧ್ಯಮ ಶಾಲೆಗಳಿಗೆ ಮಾತ್ರ ಸೀಮಿತ. ಮಲಯಾಳಿಗಳು ಕಾಸರಕ್ಕೋಡ್ ( ಕೋಳಿಕ್ಕೋಡಿನ ಅನುಕರಣೆಯಲ್ಲಿ.) ಎಂದೆ ಕರೆದು ಬರೆಯುವ ಕಾಸರಗೋಡು ತಾಲೂಕಿನಲ್ಲಿ ತೀವೃ ನಿಗಾ ಘಟಕದಲ್ಲಿರುವ ಕನ್ನಡ ಹಾಗೂ ತುಳು ಭಾಷೆಗಳು ಹೊಸದುರ್ಗದಲ್ಲಿ ಸತ್ತು ಸುಣ್ಣವಾಗಿ ಶವಾಗಾರಕ್ಕೆ ವರ್ಗಾವಣೆಯಾಗಿ ಮರಣೋತ್ತರ ಪರಿಕ್ಷೆಯ ನಿರೀಕ್ಷೆಯಲ್ಲಿವೆ.
....

ಬದಲಾವಣೆಯೆ ಇಲ್ಲದ ಏಕತಾನತೆಯ ಬದುಕಿಂದ ರೋಸತ್ತು ಗೊತ್ತು ಗುರಿಯಿಲ್ಲದ ಪಯಣವೊಂದನ್ನ ಅವ ಕೈಗೊಂಡಿದ್ದ. ಬದುಕಲ್ಲಿ ಮೇಲು ನೋಟಕ್ಕೆ ಎಲ್ಲಾ ಇದ್ದರೂ ಆಂತರ್ಯದಲ್ಲಿ ಇದ್ದ ಕೊರತೆಗಳು ಅವನನ್ನ ಒಳಗೊಳಗೆ ಜರ್ಜರಿತಗೊಳಿಸಿ ಹೈರಾಣಾಗಿಸಿದ್ದವು. ಇಲ್ಲದ ಇರಬೇಕಿದ್ದವುಗಳನ್ನ ಅರಸಿಕೊಂಡು ಅಂಡೆಲೆಯಲು ಹೊರಟಿದ್ದ ಅಂದರೂ ತಪ್ಪಾಗುತ್ತಿರಲಿಲ್ಲ. ಒಂಥರಾ ಗೊತ್ತು ಗುರಿಯಿರದ ಈ ಪ್ರಯಾಣವನ್ನ ಇಂತದ್ದೆ ಅಳತೆಗೋಲಲ್ಲಿ ಅಳೆಯಲು ಸ್ವತಃ ಅವನಿಗೆ ಕಷ್ಟವಾಗಿತ್ತು.

ಇಂತಲ್ಲಿಗೆ ಇಷ್ಟೆ ದಿನ ಅಂತೇನೂ ನಿಗದಿ ಮಾಡಿಕೊಳ್ಳದೆ ಮನಸಾದೆಡೆಗೆ ಹೋಗಿ ಮನಸಿರುವಷ್ಟು ಕಾಲ ಇದ್ದು ಮನ ನೆಮ್ಮದಿ ಅರಸಲು ಹೊರಟ ಪ್ರಯಾಣವಾಗಿತ್ತಿದು. ಕೆಲಸಕ್ಕೆ ಎರಡು ತಿಂಗಳ ಸುದೀರ್ಘ ರಜೆ ಹಾಕಿದ್ದ. ನೆಮ್ಮದಿ ಅನ್ನೋದನ್ನ ಹುಡುಕಬೇಕಿರೋದು ತನ್ನೊಳಗೋ? ಇಲ್ಲಾ ಇನ್ನೆಲ್ಲೋ ಹೊರಗೊ! ಅನ್ನೊ ಗೊಂದಲ ಕ್ಷಣ ಕಾಲ ಕಾಡಿದರೂ ಇದ್ದಲ್ಲೆ ಇದ್ದರೆ ಕ್ರಮೇಣ ನಿಂತ ನೀರಿನಂತೆ ನಾರಿ ಕೊಳೆತು ಹೋದೇನೆಂಬ ಭಯ ಕಾಡಿದ್ದರಿಂದ ದೇಶ ಬದಲಾದಲಾದರೂ ಮನೋಕ್ಲೇಶ ಕಳೆದೀತೆಂಬ ದೂರದಾಸೆಯಿಂದ ಸಿಕ್ಕ ರೈಲೇರಿ ಬೆಂಗಳೂರು ಬಿಟ್ಟಿದ್ದವ ಒಂದಿಡಿ ರಾತ್ರಿ ಪ್ರಯಾಣಿಸಿ ಕಾಙಂಗಾಡಿಗೆ ಬಂದು ತಲುಪಿದ್ದ. ಇಳಿಯ ಬೇಕಿನಿಸಿತು ಇಳಿದ. ಇರಬೇಕಿಸಿತು ನಾಲ್ಕು ದಿನದಿಂದ ಇದೆ ಕಾಙಂಗಾಡಿನ ಕುಶಾಲನಗರ ಪರಿಸರದಲ್ಲಿದಾನೆ.

( ಇನ್ನೂ ಇದೆ.)

https://youtu.be/Dk40V1W2DkQ




"ಕಥೆಯೊಂದು ಶುರುವಾಗಿದೆ"


ಸಂಜೆಗತ್ತಲ ಹಿನ್ನೋಟ - ೧

"ಹಮ್ ಕೋ ಮಿಲೀ ಹೈಂ 
ಆಜ್ ಯಹಂ ಘಡಿಯಾಂ ನಸೀಬ್ ಸೇ./
ಜೀ ಭರ್ ಕೇ ದೇಖ್ ಲೀಜಿಏ
ಹಮ್ ಕೋ ಕರೀಬ್ ಸೇ.//"......

ತುಂಬಾ ದೂರದಲ್ಲೇನೂ ಅಲ್ಲ ಇಲ್ಲೆ ಎಲ್ಲೋ ಸಮೀಪದಲ್ಲೆ ಯಾರದ್ದೊ ಮನೆಯಿಂದ ರೇಡಿಯೋದಲ್ಲಿ ಲತಾ ಮಂಗೇಷ್ಕರ್ ಉಲಿಯುತ್ತಿದ್ದರೆˌ ಅವನ ಗಮನವೆಲ್ಲ ಕಡಲಿನಿಂದ ಕದಲಿ ಹಾಡಿನತ್ತ ಹೊರಳಿತು. ರಾಜಾ ಮೆಹ್ದಿ ಅಲಿಖಾನ್ ಕಲ್ಪನೆಗೆ ಅದೆಷ್ಟನೆಯದೋ ಸಲ ಮೆಚ್ಚುಗೆಯನ್ನ ಮೌನವಾಗಿ ಸೂಚಿಸಿದ. ಬಹುಶಃ ವಿವಿಧ ಭಾರತಿಯದ್ದೆ ಇರಬಹುದು ಈ ಕಿತಾಪತಿ. ಘಂಟೆ ಆಗಲೆ ಏಳಾಯಿತೇನೋ! "ಜಯ ಮಾಲಾ" ಶುರುವಾಗಿರಬಹುದು ಅನಿಸಿತು.


ಮದನ್ ಮೋಹನ್ ಸ್ವರ ಸಂಯೋಜನೆಯ ಗೀತೆಗಳೆಂದರೆ ಅವನಿಗೆ ಪ್ರಾಣ. ಅವರಿದ್ದ ಕಾಲದಲ್ಲಿ ಇನ್ನೂ ಅವತರಿಸಿಯೆ ಇದ್ದಿರದ ಇವನ ಮನೋಕಾಮನೆಗಳನ್ನ ಎದೆಯ ಭಾವನೆಗಳನ್ನ ಅವನಷ್ಟೆ ಗಾಢವಾಗಿ ಅನುಭವಿಸಿ ಅವರು ಸಂಯೋಜಿಸಿದ ಹಾಡುಗಳಿಗೆ ರಾಜೇಂದ್ರಕೃಷ್ಣˌ ರಾಜಾ ಮೆಹ್ದಿ ಅಲಿಖಾನ್ˌ ಗುಲ್ಝಾರ್ ಕಟ್ಟಿದ ಭಾವನಾ ಮಹಲಿಗೆ ಇಂಪಾಗಿ ಜೀವ ತುಂಬಿದ್ದ ಲತಾˌ ಆಶಾˌ ಶಂಶಾದ್ ಬೇಗಂˌ ಗೀತಾ ದತ್ˌ ರಫಿˌ ಮನ್ನಾ ಡೇˌ ಹೇಮಂತಕುಮಾರರ ಹಿನ್ನೆಲೆ ಗಾಯನ. ಅವನಿಗಂತಲೆ ಇಂತಹ ಮನ ಸೆಳೆಯುವ ಮಧುರ ಗೀತೆಗಳನ್ನ ಬಳುವಳಿಯಾಗಿ ಬಿಟ್ಟು ಹೋಗಿದ್ದಾರೆ ಮದನ್ ಸಾಬ್ ಅಂತ ಅವ ಬಲವಾಗಿ ನಂಬಿ ಬಿಟ್ಟಿದ್ದ. ಇಂತಹ ಹಾಡುಗಳೂ ಜೊತೆ ನೀಡಲು ಈ ಪ್ರಪಂಚದಲ್ಲಿ ಇರದಿದ್ದಿದ್ದರೆ ಒಂಟಿತನ ಅನ್ನುವ ಭೂತ ಅದ್ಯಾವತ್ತೋ ತನ್ನನ್ನ ಕೊಂದು ಬೇತಾಳದ ಕಥೆಯ ಅನಾಥ ಶವದಂತೆ ಅದೆಲ್ಲೋ ಕಾಡಿನ ಮರದ ಕೊಂಬೆಗೆ ನೇತಾಡಿಸಿರುತ್ತಿತ್ತು ಅನ್ನುವ ಖಾತ್ರಿ ಅವನಿಗಿತ್ತು.


ದಿನ ಕರಗಿ ಕತ್ತಲ ಮೋಡ ಭೂಮಿಯ ಈ ಭಾಗವನ್ನ ಆವರಿಸಿ ಸಂಜೆಗತ್ತಲ ಹನಿ ತೊಟ್ಟಿಕ್ಕ ತೊಡಗಿ ಆಗಲೆ ಬಹಳ ಹೊತ್ತಾಗಿತ್ತು. ಕಡಲ ತಡಿಯಲ್ಲಿ ಅಲೆಗಳ ಅಪಾರ ಅಬ್ಬರ. ಕಿವಿಗಡಚಿಕ್ಕುವಂತೆ ತೆರೆಗಳ ಸರಣಿ ಅದ್ಯಾವುದೋ ರೊಚ್ಚಿನಲ್ಲಿರವಂತೆ ತೀರದಡೆಗೆ ಧಾವಿಸಿ ಬಂದಪ್ಪಳಿಸಿ ಹಗೆ ತೀರಿದ ಹಾಗೆ ಬಂದು ಬಂದ ಹಾಗೆಯೆ ಹಿಂದಿರುಗಿ ಕಡಲ ಒಡಲಲ್ಲಿ ಅಂತರ್ಧನವಾಗುತ್ತಿದ್ದವು.


ಕಡಲ ಎದೆಯ ಮೇಲೆ ಚುಕ್ಕಿ ಇಟ್ಟಂತೆ ಎಲ್ಲಿಂದೆಲ್ಲಿಗೋ ಸಾಗುತ್ತಿದ್ದ ದೂರ ದಿಕ್ಕಿನ ನಾವೆಗಳನ್ನˌ ತೀರದಲ್ಲೆ ಕೊಂಚ ದೂರ ಯಾರೋ ಕೆಲವರು ಕಡಲ ಎದೆ ತೀಡಿ ಬರುವ ಕುಳಿರ್ಗಾಳಿಯಿಂದ ಪಾರಾಗಲೇನೋ ಎಂಬಂತೆ ಚಳಿ ಕಾಯಿಸಲು ಹಾಕಿದ್ದ ಬೆಂಕಿಯ ಸೊಡರನ್ನೆ ಆಗೀಗ ದಿಟ್ಟಿಸುತ್ತಾ ಅವನು ಕಾಲು ಚಾಚಿ ಮರಳಿನ ದಿಬ್ಬದ ಮೇಲೆ ಅನಾಥ ಭಾವದಲ್ಲಿ ಕುಳಿತಿದ್ದ. ಜಗವೆಲ್ಲ ಜೊತೆಗಾರನದ್ದೋ ಜೊತೆಗಾತಿಯದ್ದೋ ತೆಕ್ಕೆಯಲ್ಲಿ ತನ್ಮಯವಾಗಿ ಹುದುಗಿರುವಾಗ ತನಗೆ ಮಾತ್ರ ಕನಿಷ್ಠ ಕರೆದು ಮಾತನಾಡಿಸಲೂ ಜೀವವೊಂದು ಜೊತೆಯಿಲ್ಲದೆ ಒಂಥರಾ ಈ ಜಗತ್ತಿಗೆ ಬೇಡವಾಗಿ ಕಡಲಿಗೆ ಹೋಗಿ ಸೇರುವ ತ್ಯಾಜ್ಯದಂತೆ ತಾನಾಗಿ ಹೋಗಿದ್ದ ಮನಸ್ಥಿತಿಯಲ್ಲಿ ಖುಷಿಗೋ ಬೇಜಾರಿಗೋ ಅರಿಯಲಾರದ ಮನಸ್ಥಿತಿಯಲ್ಲಿ ಕಣ್ಣು ಕಂಬನಿ ಕಟ್ಟಿತ್ತು. ಕಿವಿ ಅದೆಂದೋ ಕೇಳಿದ್ದ ಮೌನರಾಗದ ಮೆಲುಕಲ್ಲಿ ಮತ್ತದೆ ಕಳೆದು ಹೋಗಿರೋ ಮತ್ತೆ ಸಿಗಲಾರದ ದಿನಗಳ ಮಧುರ ಧ್ವನಿಗಳನ್ನೆ ಮರಳಿ ಕೇಳಲು ಕಾತರಿಸುತ್ತಿತ್ತು. ಸದ್ಯಕ್ಕೆ ಜೊತೆಗಿದ್ದ ಸಂಗಾತಿ ದೂರದಿಂದ ಚೂರು ಪಾರು ಕಿವಿ ತಮಟೆಗೆ ಬಂದಪ್ಪಳಿಸುತ್ತಿದ್ಡ ಮದನ್ ಮೋಹನ್ ಹಾಡು ಮಾತ್ರ.


...........


ರೈಲು ಪ್ರಯಾಣವನ್ನ ಇಷ್ಟ ಪಡುತ್ತಿದ್ದ ಅವನಿಗೆ ಅದು ಬಿಟ್ಟರೆ ಕೊನೆಯಿರದಂತೆ ನಡೆಯುವುದೊಂದೆ ಅತ್ಯಾಸಕ್ತಿಯ ಪ್ರಯಾಣದ ಮಾಧ್ಯಮವಾಗಿತ್ತು. ಮನೋವ್ಯಾಪಾರಗಳ ಸಂಗಡ ಮೌನ ಸಂಭಾಷಣೆ ನಡೆಸುತ್ತಾ ಮೈಲುಗಟ್ಟಲೆ ಒಂಟಿಯಾಗಿ ನಡೆದಿದ್ದಾನೆ. ಕೊನೆಯಿರದ ಅಂತಹ ನಡಿಗೆಗಳಲ್ಲೆ ಜಟಿಲವೆನಿಸಿದ್ದ ಅನೇಕ ಸಮಸ್ಯೆಗಳಿಗೆ ಪರಿಹಾರ ಅವನಿಗೆ ಹೊಳೆದದ್ದಿದೆ. ಜೊತೆಗೆ ಕಿವಿಯ ಒಟ್ಟೆಗಳಿಗೆ ಹುಟ್ಟಿನಿಂದಲೆ ಬಳುವಳಿಯಾಗಿ ಬಂದಿದ್ದ ಕರ್ಣ ಕುಂಡಲದಂತೆ ಹೆಟ್ಟಿಕೊಂಡಿರುತ್ತಿದ್ದ ನಿಸ್ತಂತು ಕಿವಿಗಾಪಿನ ಮೂಲಕ ಅರಸಿ ಆಲಿಸುತ್ತಿದ್ದ ಹಾಡುಗಳು ಈ ಜಗತ್ತಿನ ಸಕಲೆಂಟು ಹಳವಂಡಗಳ ಅನಿಷ್ಟ ಒಡಕು ಧ್ವನಿಗಳಿಂದ ಇವನನ್ನು ಬಚಾವು ಮಾಡುತ್ತಿದ್ದವು.


ರೈಲೆಂದರೆ ಒಂಥರಾ ತವರಿನ ತರ ಅವನ ಪಾಲಿಗೆ. ರಾತ್ರಿಯಾದರೆ ತೊಟ್ಟಿಲಲ್ಲಿ ತೂಗಿದಂತೆ ಒಂದೆ ಲಯದ ಜೋಗುಳ ಹಾಡುತ್ತಾ ಮುದ್ದಿಸಿ ಮಲಗಿಸುವ ರೈಲೊಂತರ ತಾಯಿಯ ಲಾಲಿ ಹಾಡಿನಂತೆ ಅನಿಸುತ್ತಿತ್ತವನಿಗೆ. ವಾತನುಕೂಲಿ ಮನೆಯ ಸುಪ್ಪೊತ್ತಿಗೆಯ ಮೇಲೆ ಬಾರದೆ ಕಾಡಿಸುವ ನಿದ್ರೆ ಅನ್ನುವ ಮಾಯಾಂಗನೆ ರೈಲಿನ ರಾತ್ರಿ ಪಯಣದಲ್ಲಿ ಮಾತ್ರ ಬರಸೆಳೆದು ಅಪ್ಪಿ ಸ್ವಪ್ನ ಲೋಕದಲ್ಲೂ ತೇಲಾಡಿಸಿ ನೆಮ್ಮದಿಯ ಹಗಲರಳುವ ಹೊತ್ತಿಗೆ ಮೆಲ್ಲಗೆ ಮೇಲೇಳಿಸುತ್ತಿತ್ತು.

ಮಧ್ಯ ಮಧ್ಯ ಕಿರಿಕಿರಿ ಹುಟ್ಟಿಸುವ ತಿಂಡಿ ಚಹಾ ಮಾರಾಟಗಾರರ ಅಸಂಬದ್ಧ ಚೀರಾಟˌ ಕರ್ಕಶ ಧ್ವನಿಯಲ್ಲಿ ಅವನ್ನ  ಸಂಯೋಜಿಸಿದವರೇನಾದರೂ ಕೇಳಿದರೆ ಕೂಡಲೆ ಜೀವನದಲ್ಲಿ ಜಿಗುಪ್ಸೆ ಬಂದು ತಮ್ಮಿಂದಾದ ಅಪರಾಧಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ವಿಹ್ವಲರಾಗುವಷ್ಟು ಮಟ್ಟಿಗೆ ಹಾಡುಗಳನ್ನ ಮೂಗಿನಲ್ಲೆ ಚೀರುತ್ತಾ ಮುಟ್ಟಿ ಭಿಕ್ಷೆ ಬೇಡುವವರ ಕಾಟಗಳನ್ನˌ ಹೊತ್ತಲ್ಲದ ಹೊತ್ತಲ್ಲಿ ಕಿವಿ ಹತ್ತಿರದಲ್ಲೆ ಜೋರಾಗಿ ಕೈ ತಟ್ಟಿ ಕಾಸು ಬೇಡುವ ಹಿಜಡಾಗಳ ಹಳವಂಡಗಳೆಲ್ಲದರ ಹೊರತಾಗಿಯೂ ಎರಡನೆ ದರ್ಜೆಯ ಕೇವಲ ವಿದ್ಯುತ್ ಬೀಸಣಿಗೆಗಳ ಹಾಗೂ ನಾರುವ ಶೌಚಾಲಯವಿರುವ ರೈಲು ಬೋಗಿ ಅವನನ್ನ ಆಪ್ತವಾಗಿ ಆವರಿಸಿಕೊಳ್ಳಲು ಅದರ ಆರ್ದ್ರ ಅಪ್ಪುಗೆಯಂತಹ ಭಾವ ಹುಟ್ಟಿಸುವ ಕುಲುಕಾಟವೆ ಅವನಿಗೆ ಸಾಕಿತ್ತು. ಹೀಗಾಗಿ ರೈಲೆಂದರೆ ಅದರಲ್ಲಿ ಸುದೂರ ಸಾಗುವುದೆಂದರೆ ಅವನಿಗೆ ಬಲು ಇಷ್ಟ.


.......


".......ಫಿರ್ ಆಪ್ ಕೇ ನಸೀಬ್ ಮೈ
ಯಹಂ ಬಾತ್ ಹೋ ನಾ ಹೋˌ
ಶಾಯದ್ ಫಿರ್ ಇಸ್ ಜನಂ ಮೈ
ಮುಲಾಕಾತ್ ಹೋ ನಾ ಹೋ./
ಲಗಾ ಜಾ ಗಲೇಂ ಕೇ ಫಿರ್ ಯಹಂˌ 
ಹಸೀನ್ ರಾತ್ ರಾತ್ ಹೋ ನಾ ಹೋ.
ಶಾಯದ್ ಫಿರ್ ಇಸ್ ಜನಂ ಮೈ
ಮುಲಾಕಾತ್ ಹೋ ನಾ ಹೋ!
ಲಗಾ ಜಾ ಗಲೇಂ ಕೇ......//


ಹಾಡಿನ್ನೂ ಮುಗಿದಿರಲಿಲ್ಲವೋ ಅಥವಾ ಅದು ರೇಡಿಯೋದಿಂದಲ್ಲದೆ ಯಾರದ್ದೊ ಧ್ವನಿವರ್ಧಕದಿಂದ ಪದೆ ಪದೆ ಮೊಳಗುತ್ತಿದ್ದಿತೇನೋ. ಬಹುಶಃ ಆ ಹಾಡನ್ನ ಮತ್ತೆ ಮತ್ತೆ ಹಾಕಿ ಕೇಳಿ ಭಾವೋನ್ಮತ್ತನಾಗಿ ಅನುಭವಿಸುತ್ತಿರುವವನಿಗೆ ಹಾಡಿನ ಇತ್ಯೋಪರಿಗಳು ಗೊತ್ತಿರಲಿಕ್ಕಿಲ್ಲ. ಅವನು ಮದನ್ ಮೋಹನ್ ಅನ್ನುವವರ ಹೆಸರನ್ನೆ ಜನ್ಮದಲ್ಲಿ ಕೇಳಿರಲಿಕ್ಕಿಲ್ಲ. ಹೆಚ್ಚೆಂದರೆ ಹಾಡಿರುವ ಲತಾ ಮಂಗೇಷ್ಕರ್ ಧ್ವನಿಯನ್ನ ಗುರುತು ಹಿಡಿದಾರೇನೋ! ಅಷ್ಟೆ. ಆದರೂ ಹಾಡಿನ ಚುಂಬಕತೆಯಿಂದ ಪಾರಾಗಲು ಪರದಾಡುತ್ತಿದ್ದಾರೆ ಅಂದುಕೊಂಡ.

ಎದ್ದು ತೀರದುದ್ದ ನಡೆಯುತ್ತ ಬಿಡಾರದ ಕಡೆ ಹೆಜ್ಜೆ ಹಾಕಲಾರಂಭಿಸಿದ. ತುಟಿ ಮಾತ್ರ ಅದೆ ಹಾಡಿನ ಸಾಲುಗಳನ್ನ ಅಪ್ರಯತ್ನ ಪೂರ್ವಕವಾಗಿ ಗುನುಗುತ್ತಿತ್ತು.
"ಲಗ್ ಜಾ ಗಲೇ ಸೇ..."

( ಇನ್ನೂ ಇದೆ.)




https://youtu.be/LU4oi6yFpLM