25 November 2022

"ಕಥೆಯೊಂದು ಶುರುವಾಗಿದೆ"


ಸಂಜೆಗತ್ತಲ ಹಿನ್ನೋಟ - ೧

"ಹಮ್ ಕೋ ಮಿಲೀ ಹೈಂ 
ಆಜ್ ಯಹಂ ಘಡಿಯಾಂ ನಸೀಬ್ ಸೇ./
ಜೀ ಭರ್ ಕೇ ದೇಖ್ ಲೀಜಿಏ
ಹಮ್ ಕೋ ಕರೀಬ್ ಸೇ.//"......

ತುಂಬಾ ದೂರದಲ್ಲೇನೂ ಅಲ್ಲ ಇಲ್ಲೆ ಎಲ್ಲೋ ಸಮೀಪದಲ್ಲೆ ಯಾರದ್ದೊ ಮನೆಯಿಂದ ರೇಡಿಯೋದಲ್ಲಿ ಲತಾ ಮಂಗೇಷ್ಕರ್ ಉಲಿಯುತ್ತಿದ್ದರೆˌ ಅವನ ಗಮನವೆಲ್ಲ ಕಡಲಿನಿಂದ ಕದಲಿ ಹಾಡಿನತ್ತ ಹೊರಳಿತು. ರಾಜಾ ಮೆಹ್ದಿ ಅಲಿಖಾನ್ ಕಲ್ಪನೆಗೆ ಅದೆಷ್ಟನೆಯದೋ ಸಲ ಮೆಚ್ಚುಗೆಯನ್ನ ಮೌನವಾಗಿ ಸೂಚಿಸಿದ. ಬಹುಶಃ ವಿವಿಧ ಭಾರತಿಯದ್ದೆ ಇರಬಹುದು ಈ ಕಿತಾಪತಿ. ಘಂಟೆ ಆಗಲೆ ಏಳಾಯಿತೇನೋ! "ಜಯ ಮಾಲಾ" ಶುರುವಾಗಿರಬಹುದು ಅನಿಸಿತು.


ಮದನ್ ಮೋಹನ್ ಸ್ವರ ಸಂಯೋಜನೆಯ ಗೀತೆಗಳೆಂದರೆ ಅವನಿಗೆ ಪ್ರಾಣ. ಅವರಿದ್ದ ಕಾಲದಲ್ಲಿ ಇನ್ನೂ ಅವತರಿಸಿಯೆ ಇದ್ದಿರದ ಇವನ ಮನೋಕಾಮನೆಗಳನ್ನ ಎದೆಯ ಭಾವನೆಗಳನ್ನ ಅವನಷ್ಟೆ ಗಾಢವಾಗಿ ಅನುಭವಿಸಿ ಅವರು ಸಂಯೋಜಿಸಿದ ಹಾಡುಗಳಿಗೆ ರಾಜೇಂದ್ರಕೃಷ್ಣˌ ರಾಜಾ ಮೆಹ್ದಿ ಅಲಿಖಾನ್ˌ ಗುಲ್ಝಾರ್ ಕಟ್ಟಿದ ಭಾವನಾ ಮಹಲಿಗೆ ಇಂಪಾಗಿ ಜೀವ ತುಂಬಿದ್ದ ಲತಾˌ ಆಶಾˌ ಶಂಶಾದ್ ಬೇಗಂˌ ಗೀತಾ ದತ್ˌ ರಫಿˌ ಮನ್ನಾ ಡೇˌ ಹೇಮಂತಕುಮಾರರ ಹಿನ್ನೆಲೆ ಗಾಯನ. ಅವನಿಗಂತಲೆ ಇಂತಹ ಮನ ಸೆಳೆಯುವ ಮಧುರ ಗೀತೆಗಳನ್ನ ಬಳುವಳಿಯಾಗಿ ಬಿಟ್ಟು ಹೋಗಿದ್ದಾರೆ ಮದನ್ ಸಾಬ್ ಅಂತ ಅವ ಬಲವಾಗಿ ನಂಬಿ ಬಿಟ್ಟಿದ್ದ. ಇಂತಹ ಹಾಡುಗಳೂ ಜೊತೆ ನೀಡಲು ಈ ಪ್ರಪಂಚದಲ್ಲಿ ಇರದಿದ್ದಿದ್ದರೆ ಒಂಟಿತನ ಅನ್ನುವ ಭೂತ ಅದ್ಯಾವತ್ತೋ ತನ್ನನ್ನ ಕೊಂದು ಬೇತಾಳದ ಕಥೆಯ ಅನಾಥ ಶವದಂತೆ ಅದೆಲ್ಲೋ ಕಾಡಿನ ಮರದ ಕೊಂಬೆಗೆ ನೇತಾಡಿಸಿರುತ್ತಿತ್ತು ಅನ್ನುವ ಖಾತ್ರಿ ಅವನಿಗಿತ್ತು.


ದಿನ ಕರಗಿ ಕತ್ತಲ ಮೋಡ ಭೂಮಿಯ ಈ ಭಾಗವನ್ನ ಆವರಿಸಿ ಸಂಜೆಗತ್ತಲ ಹನಿ ತೊಟ್ಟಿಕ್ಕ ತೊಡಗಿ ಆಗಲೆ ಬಹಳ ಹೊತ್ತಾಗಿತ್ತು. ಕಡಲ ತಡಿಯಲ್ಲಿ ಅಲೆಗಳ ಅಪಾರ ಅಬ್ಬರ. ಕಿವಿಗಡಚಿಕ್ಕುವಂತೆ ತೆರೆಗಳ ಸರಣಿ ಅದ್ಯಾವುದೋ ರೊಚ್ಚಿನಲ್ಲಿರವಂತೆ ತೀರದಡೆಗೆ ಧಾವಿಸಿ ಬಂದಪ್ಪಳಿಸಿ ಹಗೆ ತೀರಿದ ಹಾಗೆ ಬಂದು ಬಂದ ಹಾಗೆಯೆ ಹಿಂದಿರುಗಿ ಕಡಲ ಒಡಲಲ್ಲಿ ಅಂತರ್ಧನವಾಗುತ್ತಿದ್ದವು.


ಕಡಲ ಎದೆಯ ಮೇಲೆ ಚುಕ್ಕಿ ಇಟ್ಟಂತೆ ಎಲ್ಲಿಂದೆಲ್ಲಿಗೋ ಸಾಗುತ್ತಿದ್ದ ದೂರ ದಿಕ್ಕಿನ ನಾವೆಗಳನ್ನˌ ತೀರದಲ್ಲೆ ಕೊಂಚ ದೂರ ಯಾರೋ ಕೆಲವರು ಕಡಲ ಎದೆ ತೀಡಿ ಬರುವ ಕುಳಿರ್ಗಾಳಿಯಿಂದ ಪಾರಾಗಲೇನೋ ಎಂಬಂತೆ ಚಳಿ ಕಾಯಿಸಲು ಹಾಕಿದ್ದ ಬೆಂಕಿಯ ಸೊಡರನ್ನೆ ಆಗೀಗ ದಿಟ್ಟಿಸುತ್ತಾ ಅವನು ಕಾಲು ಚಾಚಿ ಮರಳಿನ ದಿಬ್ಬದ ಮೇಲೆ ಅನಾಥ ಭಾವದಲ್ಲಿ ಕುಳಿತಿದ್ದ. ಜಗವೆಲ್ಲ ಜೊತೆಗಾರನದ್ದೋ ಜೊತೆಗಾತಿಯದ್ದೋ ತೆಕ್ಕೆಯಲ್ಲಿ ತನ್ಮಯವಾಗಿ ಹುದುಗಿರುವಾಗ ತನಗೆ ಮಾತ್ರ ಕನಿಷ್ಠ ಕರೆದು ಮಾತನಾಡಿಸಲೂ ಜೀವವೊಂದು ಜೊತೆಯಿಲ್ಲದೆ ಒಂಥರಾ ಈ ಜಗತ್ತಿಗೆ ಬೇಡವಾಗಿ ಕಡಲಿಗೆ ಹೋಗಿ ಸೇರುವ ತ್ಯಾಜ್ಯದಂತೆ ತಾನಾಗಿ ಹೋಗಿದ್ದ ಮನಸ್ಥಿತಿಯಲ್ಲಿ ಖುಷಿಗೋ ಬೇಜಾರಿಗೋ ಅರಿಯಲಾರದ ಮನಸ್ಥಿತಿಯಲ್ಲಿ ಕಣ್ಣು ಕಂಬನಿ ಕಟ್ಟಿತ್ತು. ಕಿವಿ ಅದೆಂದೋ ಕೇಳಿದ್ದ ಮೌನರಾಗದ ಮೆಲುಕಲ್ಲಿ ಮತ್ತದೆ ಕಳೆದು ಹೋಗಿರೋ ಮತ್ತೆ ಸಿಗಲಾರದ ದಿನಗಳ ಮಧುರ ಧ್ವನಿಗಳನ್ನೆ ಮರಳಿ ಕೇಳಲು ಕಾತರಿಸುತ್ತಿತ್ತು. ಸದ್ಯಕ್ಕೆ ಜೊತೆಗಿದ್ದ ಸಂಗಾತಿ ದೂರದಿಂದ ಚೂರು ಪಾರು ಕಿವಿ ತಮಟೆಗೆ ಬಂದಪ್ಪಳಿಸುತ್ತಿದ್ಡ ಮದನ್ ಮೋಹನ್ ಹಾಡು ಮಾತ್ರ.


...........


ರೈಲು ಪ್ರಯಾಣವನ್ನ ಇಷ್ಟ ಪಡುತ್ತಿದ್ದ ಅವನಿಗೆ ಅದು ಬಿಟ್ಟರೆ ಕೊನೆಯಿರದಂತೆ ನಡೆಯುವುದೊಂದೆ ಅತ್ಯಾಸಕ್ತಿಯ ಪ್ರಯಾಣದ ಮಾಧ್ಯಮವಾಗಿತ್ತು. ಮನೋವ್ಯಾಪಾರಗಳ ಸಂಗಡ ಮೌನ ಸಂಭಾಷಣೆ ನಡೆಸುತ್ತಾ ಮೈಲುಗಟ್ಟಲೆ ಒಂಟಿಯಾಗಿ ನಡೆದಿದ್ದಾನೆ. ಕೊನೆಯಿರದ ಅಂತಹ ನಡಿಗೆಗಳಲ್ಲೆ ಜಟಿಲವೆನಿಸಿದ್ದ ಅನೇಕ ಸಮಸ್ಯೆಗಳಿಗೆ ಪರಿಹಾರ ಅವನಿಗೆ ಹೊಳೆದದ್ದಿದೆ. ಜೊತೆಗೆ ಕಿವಿಯ ಒಟ್ಟೆಗಳಿಗೆ ಹುಟ್ಟಿನಿಂದಲೆ ಬಳುವಳಿಯಾಗಿ ಬಂದಿದ್ದ ಕರ್ಣ ಕುಂಡಲದಂತೆ ಹೆಟ್ಟಿಕೊಂಡಿರುತ್ತಿದ್ದ ನಿಸ್ತಂತು ಕಿವಿಗಾಪಿನ ಮೂಲಕ ಅರಸಿ ಆಲಿಸುತ್ತಿದ್ದ ಹಾಡುಗಳು ಈ ಜಗತ್ತಿನ ಸಕಲೆಂಟು ಹಳವಂಡಗಳ ಅನಿಷ್ಟ ಒಡಕು ಧ್ವನಿಗಳಿಂದ ಇವನನ್ನು ಬಚಾವು ಮಾಡುತ್ತಿದ್ದವು.


ರೈಲೆಂದರೆ ಒಂಥರಾ ತವರಿನ ತರ ಅವನ ಪಾಲಿಗೆ. ರಾತ್ರಿಯಾದರೆ ತೊಟ್ಟಿಲಲ್ಲಿ ತೂಗಿದಂತೆ ಒಂದೆ ಲಯದ ಜೋಗುಳ ಹಾಡುತ್ತಾ ಮುದ್ದಿಸಿ ಮಲಗಿಸುವ ರೈಲೊಂತರ ತಾಯಿಯ ಲಾಲಿ ಹಾಡಿನಂತೆ ಅನಿಸುತ್ತಿತ್ತವನಿಗೆ. ವಾತನುಕೂಲಿ ಮನೆಯ ಸುಪ್ಪೊತ್ತಿಗೆಯ ಮೇಲೆ ಬಾರದೆ ಕಾಡಿಸುವ ನಿದ್ರೆ ಅನ್ನುವ ಮಾಯಾಂಗನೆ ರೈಲಿನ ರಾತ್ರಿ ಪಯಣದಲ್ಲಿ ಮಾತ್ರ ಬರಸೆಳೆದು ಅಪ್ಪಿ ಸ್ವಪ್ನ ಲೋಕದಲ್ಲೂ ತೇಲಾಡಿಸಿ ನೆಮ್ಮದಿಯ ಹಗಲರಳುವ ಹೊತ್ತಿಗೆ ಮೆಲ್ಲಗೆ ಮೇಲೇಳಿಸುತ್ತಿತ್ತು.

ಮಧ್ಯ ಮಧ್ಯ ಕಿರಿಕಿರಿ ಹುಟ್ಟಿಸುವ ತಿಂಡಿ ಚಹಾ ಮಾರಾಟಗಾರರ ಅಸಂಬದ್ಧ ಚೀರಾಟˌ ಕರ್ಕಶ ಧ್ವನಿಯಲ್ಲಿ ಅವನ್ನ  ಸಂಯೋಜಿಸಿದವರೇನಾದರೂ ಕೇಳಿದರೆ ಕೂಡಲೆ ಜೀವನದಲ್ಲಿ ಜಿಗುಪ್ಸೆ ಬಂದು ತಮ್ಮಿಂದಾದ ಅಪರಾಧಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ವಿಹ್ವಲರಾಗುವಷ್ಟು ಮಟ್ಟಿಗೆ ಹಾಡುಗಳನ್ನ ಮೂಗಿನಲ್ಲೆ ಚೀರುತ್ತಾ ಮುಟ್ಟಿ ಭಿಕ್ಷೆ ಬೇಡುವವರ ಕಾಟಗಳನ್ನˌ ಹೊತ್ತಲ್ಲದ ಹೊತ್ತಲ್ಲಿ ಕಿವಿ ಹತ್ತಿರದಲ್ಲೆ ಜೋರಾಗಿ ಕೈ ತಟ್ಟಿ ಕಾಸು ಬೇಡುವ ಹಿಜಡಾಗಳ ಹಳವಂಡಗಳೆಲ್ಲದರ ಹೊರತಾಗಿಯೂ ಎರಡನೆ ದರ್ಜೆಯ ಕೇವಲ ವಿದ್ಯುತ್ ಬೀಸಣಿಗೆಗಳ ಹಾಗೂ ನಾರುವ ಶೌಚಾಲಯವಿರುವ ರೈಲು ಬೋಗಿ ಅವನನ್ನ ಆಪ್ತವಾಗಿ ಆವರಿಸಿಕೊಳ್ಳಲು ಅದರ ಆರ್ದ್ರ ಅಪ್ಪುಗೆಯಂತಹ ಭಾವ ಹುಟ್ಟಿಸುವ ಕುಲುಕಾಟವೆ ಅವನಿಗೆ ಸಾಕಿತ್ತು. ಹೀಗಾಗಿ ರೈಲೆಂದರೆ ಅದರಲ್ಲಿ ಸುದೂರ ಸಾಗುವುದೆಂದರೆ ಅವನಿಗೆ ಬಲು ಇಷ್ಟ.


.......


".......ಫಿರ್ ಆಪ್ ಕೇ ನಸೀಬ್ ಮೈ
ಯಹಂ ಬಾತ್ ಹೋ ನಾ ಹೋˌ
ಶಾಯದ್ ಫಿರ್ ಇಸ್ ಜನಂ ಮೈ
ಮುಲಾಕಾತ್ ಹೋ ನಾ ಹೋ./
ಲಗಾ ಜಾ ಗಲೇಂ ಕೇ ಫಿರ್ ಯಹಂˌ 
ಹಸೀನ್ ರಾತ್ ರಾತ್ ಹೋ ನಾ ಹೋ.
ಶಾಯದ್ ಫಿರ್ ಇಸ್ ಜನಂ ಮೈ
ಮುಲಾಕಾತ್ ಹೋ ನಾ ಹೋ!
ಲಗಾ ಜಾ ಗಲೇಂ ಕೇ......//


ಹಾಡಿನ್ನೂ ಮುಗಿದಿರಲಿಲ್ಲವೋ ಅಥವಾ ಅದು ರೇಡಿಯೋದಿಂದಲ್ಲದೆ ಯಾರದ್ದೊ ಧ್ವನಿವರ್ಧಕದಿಂದ ಪದೆ ಪದೆ ಮೊಳಗುತ್ತಿದ್ದಿತೇನೋ. ಬಹುಶಃ ಆ ಹಾಡನ್ನ ಮತ್ತೆ ಮತ್ತೆ ಹಾಕಿ ಕೇಳಿ ಭಾವೋನ್ಮತ್ತನಾಗಿ ಅನುಭವಿಸುತ್ತಿರುವವನಿಗೆ ಹಾಡಿನ ಇತ್ಯೋಪರಿಗಳು ಗೊತ್ತಿರಲಿಕ್ಕಿಲ್ಲ. ಅವನು ಮದನ್ ಮೋಹನ್ ಅನ್ನುವವರ ಹೆಸರನ್ನೆ ಜನ್ಮದಲ್ಲಿ ಕೇಳಿರಲಿಕ್ಕಿಲ್ಲ. ಹೆಚ್ಚೆಂದರೆ ಹಾಡಿರುವ ಲತಾ ಮಂಗೇಷ್ಕರ್ ಧ್ವನಿಯನ್ನ ಗುರುತು ಹಿಡಿದಾರೇನೋ! ಅಷ್ಟೆ. ಆದರೂ ಹಾಡಿನ ಚುಂಬಕತೆಯಿಂದ ಪಾರಾಗಲು ಪರದಾಡುತ್ತಿದ್ದಾರೆ ಅಂದುಕೊಂಡ.

ಎದ್ದು ತೀರದುದ್ದ ನಡೆಯುತ್ತ ಬಿಡಾರದ ಕಡೆ ಹೆಜ್ಜೆ ಹಾಕಲಾರಂಭಿಸಿದ. ತುಟಿ ಮಾತ್ರ ಅದೆ ಹಾಡಿನ ಸಾಲುಗಳನ್ನ ಅಪ್ರಯತ್ನ ಪೂರ್ವಕವಾಗಿ ಗುನುಗುತ್ತಿತ್ತು.
"ಲಗ್ ಜಾ ಗಲೇ ಸೇ..."

( ಇನ್ನೂ ಇದೆ.)




https://youtu.be/LU4oi6yFpLM

No comments: