16 November 2013

ಕೂಊಊಊಊ ಬಲೀಂದ್ರಾ ಕೂಊಊಊಊ........................
ಕಾರ್ತಿಕ ಮಾಸಕ್ಕಿರುವ ವಿಚಿತ್ರ ಆಪ್ತತೆ ನನಗೆ ಇನ್ನುಳಿದ ಹನ್ನೊಂದು ಮಾಸಗಳೊಂದಿಗಿಲ್ಲ. ದೀಪಾವಳಿಯ ಖುಷಿಯೊಂದಿಗೆ ಬೆಸೆದಿರುವ ಬಾಲ್ಯದ ಕಾರ್ತಿಕದ ನೆನಪುಗಳು ಅಗಾಗ ಮುದ ಉಕ್ಕಿಸುವಂತೆ ನೆನಪಾಗುತ್ತವೆ. ನಾವು ಮಲೆನಾಡಿನಲ್ಲಿ ವಾಸಿಸುತ್ತಿದ್ದರೂ ಕರಾವಳಿಯ ಮೂಲವನ್ನ ಮುಚ್ಚಿಡಲಾಗದಷ್ಟು ಢಾಳವಾಗಿ ನಮ್ಮ ನಡೆ, ನುಡಿ ಹಾಗೂ ಆಹಾರ ಪದ್ಧತಿಯಲ್ಲಿ ತುಳುನಾಡಿನ ಸಂಸ್ಕಾರವನ್ನ ಅಳವಡಿಸಿಕೊಂಡಿದ್ದುದು ಎದ್ದು ಕಾಣುತ್ತಿತ್ತು. ತೀರ್ಥಹಳ್ಳಿಯಲ್ಲಿ ಒಂದು ರೀತಿಯಲ್ಲಿ ಬದುಕುತ್ತಿದ್ದ ನಾವು ಮೂಲದ ಊರನ್ನೆ ಅಲ್ಲಿಯೂ ಉಸಿರಾಡುತ್ತಿದ್ದೆವು ಅನ್ನಿಸುತ್ತೆ.


ಕೆಳಗೆ ಕರಾವಳಿಯಲ್ಲಿ ಬಲಿಯೇಂದ್ರನ ನೆನಪಿನ ದೀಪಾವಳಿ ನಮ್ಮದು, ಘಟ್ಟದವರ ದೀಪಾವಳಿಯಲ್ಲಿ ಬಲೀಂದ್ರ ಬರುವುದು ಕಾರ್ತಿಕ ಮಾಸದ ಪಾಡ್ಯದ ಒಂದೇ ಒಂದು ದಿನ ಮಾತ್ರ! ಸೌತೆ ಗಟ್ಟಿ, ಉದ್ದಿನದೋಸೆ, ಚಟ್ಟಂಬಡೆ, ಕಡಲೆ ಬೇಳೆ ಪಾಯಸದ ದೀಪಾವಳಿ ನಮ್ಮದು. ಚಪ್ಪೆರೊಟ್ಟಿ, ಶಾವಿಗೆ ಪಾಯಸ, ಹೋಳಿಗೆಯೂಟದ ದೀಪಾವಳಿ ಇಲ್ಲಿಯವರದು. ಕಾರ್ತಿಕದುದ್ದ ದಿನ ಸಂಜೆ ಗದ್ದೆ, ಹಟ್ಟಿ, ಮನೆಯಂಗಳ ಹಾಗೂ ತೋಟದ ದರೆಯ ಅಂಚಿಗೆಲ್ಲ ಅಡಿಕೆ ದಬ್ಬೆಯಿಂದ ಮಾಡಿದ ದೊಂದಿ ಹಚ್ಚಿ ಊರಿಗೆಲ್ಲ ಕೇಳುವಂತೆ ಮುಸ್ಸಂಜೆ ಹೊತ್ತಿನಲ್ಲಿ ಜೋರಾಗಿ "ಕೂ" ಹಾಕಿ ಬಲೀಂದ್ರನನ್ನು ಕೂಗಿ ಕರೆದು ಆಚರಿಸುವ ದೀಪಾವಳಿ ನಮ್ಮದು, ಒಂದು ದೊಡ್ಡ ಕಾಲ್ದೀಪವನ್ನ ಜನಪದ ಹಾಡುಗಳ ಕಂಠಸ್ಥರ ತಂಡ ಮನೆ ಮನೆಗೆ ರಾತ್ರಿ ಹೊತ್ತಿನಲ್ಲಿ ಹೊತ್ತೊಯ್ದು ಸರದಿಯಂತೆ "ಅಂಟಿಗೆ ಪಿಂಟಿಗೆ" ಪದ ಹಾಡಿ ತಮ್ಮ ದೊಂದಿಯ ಸೊಡರೊಂದನ್ನ ಆ ಮನೆಗೆ ಕೊಟ್ಟು ಬದಲಿಗೆ ಕಾಣಿಕೆ ವಸೂಲಿ ಮಾಡಿ ಆಚರಿಸುವ ದೀಪಾವಳಿ ಈ ಘಟ್ಟದವರದ್ದು. ಒಟ್ಟಿನಲ್ಲಿ ಅತ್ಯಲ್ಪ ದೂರದಲ್ಲಿದ್ದರೂ ಎರಡು ವಿಭಿನ್ನ ನೆಲೆಯ ದೀಪಾವಳಿ ಆಚರಣೆ ಮಲೆನಾಡು ಹಾಗೂ ಕರಾವಳಿಯದ್ದು. ಈ ಎರಡೂ ತರದ ಸಾಂಸ್ಕೃತಿಕ ಭಿನ್ನತೆಯ ಹಬ್ಬದಾಚರಣೆಗಳ ಪರಿಚಯ ಹಾಗೂ ಅನುಭವ ನನಗೆ ಬಾಲ್ಯದಲ್ಲಾಗಿತ್ತು. ನಮ್ಮ ಮನೆಯವರ ಪಾಲಿಗೆ ಕಾರ್ಕಳ-ಉಡುಪಿ-ಮಂಗಳೂರು-ಮೂಡುಬಿದಿರೆ ಅಸುಪಾಸಿನ ಕರಾವಳಿ ಹೆತ್ತ ತಾಯಿ ದೇವಕಿಯಾದರೆ, ತೀರ್ಥಹಳ್ಳಿ-ಸಾಗರ-ಕೊಪ್ಪ-ಶೃಂಗೇರಿ ಸೀಮೆಯ ಮಲೆನಾಡು ಮುದ್ದಿನಿಂದ ಸಾಕಿದ ಸಾಕುತಾಯಿ ಯಶೋದೆಯಂತಿತ್ತು.


ಕಾರ್ತಿಕದ ಉದ್ದಕ್ಕೂ ನನಗೆ ಸುತ್ತಲಿಕ್ಕೆ ಅವಕಾಶ ಸಿಗುತ್ತಿದ್ದುದು ಹಾಗೂ ಅದಕ್ಕೆ ಅನುಮತಿ ಮಂಜೂರಾಗುತ್ತಿದ್ದುದು ಕೇವಲ ಎರಡು ಕಡೆಗೆ ತಲೆ ಹಾಕಲಿಕ್ಕೆ ಮಾತ್ರ. ಒಂದು ಅಮ್ಮನ ತವರು ಮನೆ ಸಾಗಿನಬೆಟ್ಟಿಗೆ, ಇನ್ನೊಂದು ತೀರ್ಥಹಳ್ಳಿಗೆ ಹತ್ತು ಮೈಲು ದೂರದಲ್ಲಿ ತುಂಗಾನದಿಯ ತೀರದಲ್ಲಿಯೆ ಇದ್ದ ನಮ್ಮಲ್ಲಿ ಓದಲಿಕ್ಕಿದ್ದ ದಬ್ಬಣಗದ್ದೆಯ ಪ್ರಭಾಕರಣ್ಣನ ಹಳ್ಳಿ ಮನೆಗೆ. ಬಲಿಯೇಂದ್ರ ಪೂಜೆ, ನೊಗ ನೇಗಿಲಿನ ಪೂಜೆಯ ಸಂಭ್ರಮ ಕಾಣಲಿಕ್ಕೆ ಜೊತೆಗೆ ಕೊಣಾಜೆ ಕಲ್ಲಿಗೂ ಹೋಗುವ ಅವಕಾಶ ಸಾಗಿನಬೆಟ್ಟಿನಲ್ಲಿ ಸಿಗುತ್ತಿತ್ತು. ಮಲೆನಾಡಿನ ಒಕ್ಕಲಿಗರ ಮನೆಯ ದೀವಳಿಗೆ ಆಚರಣೆ, ಅಂಟಿಗೆ ಪಿಂಟಿಗೆಯ ಸವಿ, ತೋಟ ಸುತ್ತಿ ಹೊಳೆಯಲ್ಲಿ ಆಡುವ ಅವಕಾಶ ದಬ್ಬಣಗದ್ದೆಯಲ್ಲಿ ಅನುಭವಿಸಲಿಕ್ಕೆ ಸಿಗುತ್ತಿತ್ತು. ಹೀಗಾಗಿ ಸರದಿಯ ಮೇಲೆ ಆ ತಿಂಗಳಿನಲ್ಲಿ ಬರುವ ಮೊಹರಂ ಹಾಗೂ ಮಕ್ಕಳ ದಿನಾಚರಣೆಯ ರಜೆಗಳನ್ನೆಲ್ಲ ಜಿಪುಣನಂತೆ ಕಷ್ಟದಲ್ಲಿ ಹೊಂದಿಸಿಕೊಂಡು ಹಟ ಮಾಡಿ, ಮನೆಯಲ್ಲಿ ಒಪ್ಪದೆ ಅದೆಷ್ಟೆ ಪೆಟ್ಟು ಕೊಟ್ಟರೂ ನನ್ನ ದೊಂಡೆಯ ವಾಲಗದ ಸದ್ದನ್ನ ಒಂದಿಷ್ಟೂ ಕುಗ್ಗಿಸದೆ ಒಂದು ರೀತಿಯಲ್ಲಿ ಪ್ರತಿಭಟನಾಸ್ತ್ರವನ್ನ ಪ್ರಯೋಗಿಸಿಯೇ ಈ ಎರಡೂ ಸ್ಥಳಗಳಿಗೆ ಅದೆಷ್ಟೆ ಕಷ್ಟವಾದರೂ ವರ್ಷವೂ ಹೋಗಿಯೇ ತೀರುತ್ತಿದ್ದೆ. ನನ್ನದೂ ಒಂಥರಾ ಉಗ್ರಗಾಮಿ ಸ್ವರೂಪದ ಸತ್ಯಾಗ್ರಹವೆ! ಈ "ಸಾಗಿನಬೆಟ್ಟು ಚಲೋ" ಹಾಗೂ "ದಬ್ಬಣಗದ್ದೆ ಚಲೋ" ಚಳುವಳಿಗಳನ್ನ ಹತ್ತಿಕ್ಕಲು ಮನೆಯ ಹಿರಿಯರು ಬ್ರಿಟಿಷರ ಲಾಠಿಗಳ ಬದಲಿಗೆ ಎದುರು ಮನೆ ಪದ್ದಯ್ಯನ ಮನೆ ಬೇಲಿ ಬದಿಯ ಲಕ್ಕಿ ಬೆತ್ತದ ಕೆಲಸಕ್ಕೆ ಬಾರದ ಪ್ರಯೋಗ ಮಾಡಿ ಕಡೆಗೆ ಕೈಸೋತು ಸುಮ್ಮನಾಗುತ್ತಿದ್ದರು ಅನ್ನೋದಷ್ಟೆ "ದಂಡಿ ಯಾತ್ರೆ"ಗೂ ನನ್ನ "ದಂಡವಾಗದ ಹಳ್ಳಿ ಯಾತ್ರೆಗಳಿಗೂ" ಇರುತ್ತಿದ್ದ ಸಣ್ಣಪುಟ್ಟ ವ್ಯತ್ಯಾಸ!ದೀಪಾವಳಿ ಮೇಲ್ನೋಟಕ್ಕೆ ಮೂರುದಿನದ ಆಚರಣೆಯಾದರೂ, ಕಡೆಯ ಕಾರ್ತಿಕ ವಾರದಲ್ಲಿ ಶುರುವಾಗುವ ತುಳಸಿ ಪೂಜೆಯ ಲೆಕ್ಖವನ್ನೂ ಹಿಡಿದರೆ ಸರಿ ಸುಮಾರು ಇಪ್ಪತ್ತು ದಿನ ಹಬ್ಬ ಊರಲ್ಲಿ ಇದ್ದೆ ಇರುತ್ತಿತ್ತು. ಸಾಲದ್ದಕ್ಕೆ ತಿಂಗಳಿಡಿ ದೀಪವಿಡುವ ಸಂಪ್ರದಾಯವೂ ಸೇರಿ ಕಾರ್ತಿಕದ ಕತ್ತಲನ್ನ ನಿತ್ಯವೂ ಕಾದು ಕೂರುವಂತಾಗುತ್ತಿತ್ತು. ಚಳಿ ಮೆಲ್ಲಗೆ ಮೊಗ್ಗೊಡೆದು ಹೂವಾಗುವ ಹೊತ್ತದು, ಆ ತಿಂಗಳಲ್ಲಿ ದಿನಕ್ಕೆ ಆಯಸ್ಸು ಕಡಿಮೆ. ಸಂಜೆ ಐದೂವರೆಗೆಲ್ಲ ಕತ್ತಲು ಕಾಡಿಗೆ ತೀಡಿದಂತೆ ಸುತ್ತಲೂ ಆವರಿಸಿಕೊಂಡು ಬಿಟ್ಟರೆ ಇನ್ನು ಬೆಳಗ್ಯೆ ಏಳರ ತನಕವೂ ಜಪ್ಪಯ್ಯಾ ಅಂದರೂ ತೊಲಗುತ್ತಿರಲಿಲ್ಲ. ಬೆಳಗ್ಯೆ ಮನೆಯ ಹಿಂದಿನ ಅಂಗಳದಲ್ಲಿನ ಬಟ್ಟೆ ಹರಗುವ ತಂತಿಗಳ ಮೇಲೆಲ್ಲ ಮುತ್ತು ಪೋಣಿಸಿದಂತೆ ಇಬ್ಬನಿ ಹನಿಗಳು ಕಟ್ಟಿಕೊಂಡಿರುತ್ತಿದ್ದವು. ಎಳೆಯ ಬಿಸಿಲು ಅವುಗಳನ್ನ ಸ್ಪರ್ಷಿಸುತ್ತಿದ್ದ ಹಾಗೆಯೆ ನಾಚಿದವಂತೆ ಆವು ಕಾಮನಬಿಲ್ಲಿನ ಬಣ್ಣಗಳನ್ನೆಲ್ಲ ಹೊಳೆಹೊಳೆಸುತ್ತಾ ಕರಗಿ ಕಣ್ಮರೆಯಾಗುತ್ತಿದ್ದವು. ಊರಿಗೆ ಹೋದಾಗ ನಸು ಮುಂಜಾನೆಯ ಹೊತ್ತಿಗೆಲ್ಲ ಅಲ್ಲಿ ಸಣ್ಣ ಮಳೆ ಬಂದಂತೆ ಗದ್ದೆ ಬದುವಿನ ಹುಲ್ಲುಗಳೆಲ್ಲ ನೆನೆದಿರುತ್ತಿದ್ದವು. ಬೆಳಗಿನ "ಚಾ"ವನ್ನ ಗದ್ದೆ ಹೂಡುವವರಿಗೆ ಅವರಿದ್ದಲ್ಲಿಯೆ ಕೊಡಲಿಕ್ಕೆ ಸಾಗಿನಬೆಟ್ಟಿಗೆ ಹೋದಾಗಲೆಲ್ಲ ಚಿಕ್ಕಮ್ಮ ಕಳಿಸುವುದಿತ್ತು. ಆಗೆಲ್ಲಾ ಹಬೆಯಾಡುವ ಚಹಾದ ಕೆಟಲ್ ಹಿಡಿದು ಗದ್ದೆಯಂಚಿನಲ್ಲಿ ನಡೆಯುವಾಗ ಈ ಇಬ್ಬನಿ ಪಸೆ ಹವಾಯಿ ಚಪ್ಪಲಿಯೊಳಗೆ ಸೇರಿ ಸವೆದು ಸವೆದು ನಯವಾದ ನನ್ನ ಚಪ್ಪಲಿಯೊಳಗಿನ ಪಾದ ಜಾರುತ್ತಿತ್ತು.


ಮುಟ್ಟಾಳೆಯ ಟೊಪ್ಪಿ ಹಾಕಿಕೊಳ್ಳದೆ ಹೊರಗೆ ಹೋಗಿ ಇಬ್ಬನಿಯಲ್ಲಿ ನೆನೆದು ಬಂದರೆ ನೆತ್ತಿಯ ಕೂದಲೆಲ್ಲ ಒದ್ದೆಯಾಗಿ ಮನೆಯ ದೊಡ್ದವರಿಂದ ಬೆಳಗ್ಯೆ ಬೆಳಗ್ಯೆಯೆ ಪುಕ್ಸಟ್ಟೆ ಉಗಿಸಿಕೊಳ್ಳಬೇಕಾಗುತ್ತಿತ್ತು! ಬೆಳಗ್ಯೆ ತೋಡಿನ ಬದಿಗೆ ಹೋಗಿ ಚಡ್ಡಿ ಜಾರಿಸಿ ಕೂತು ಕನಸು ಕಾಣುತ್ತಾ ವಿಸರ್ಜನಾನಂದದಲ್ಲಿ ಆಕಾಶ ನೋಡುತ್ತಿದ್ದರೆ ಜುಳುಜುಳು ಹರಿಯುತ್ತಿದ್ದ ತೋಡಿನ ನೀರಿನ ಮೇಲೆ ಹೊಗೆಯಂತೆ ನೆಲದ ಕಾವು ಏರುತ್ತಿದ್ದು; ಅದ್ಯಾವುದೋ ಬಿಂದುವಿನಲ್ಲಿ ಆದು ನೆಲವನ್ನ ಚುಂಬಿಸುತ್ತಿದ್ದ ಇಬ್ಬನಿಯ ಜೊತೆ ಬೆರೆಯುವುದನ್ನ ಕಾಣಲಿಕ್ಕೆ ಸಿಗುತ್ತಿತ್ತು. ಕೆಲವು ಸಾರಿಯಂತೂ ಹತ್ತು ಅಡಿ ದೂರದವರೆಗೂ ಬರುತ್ತಿದ್ದವರ್ಯಾರೂ ಕಣ್ಣಿಗೆ ಗೋಚರಿಸುತ್ತಲೆ ಇರಲಿಲ್ಲ. ಬಾಯಿ ಬಿಟ್ಟರೆ ನಮ್ಮ ಬಾಯಿಯಿಂದಲೂ ಬೆಚ್ಚನೆ ಹಬೆ ಹೊಗೆಯಂತೆ ಹೊರಹೊಮ್ಮುತ್ತಿತ್ತು. ಬೀಡಿ ಸೇಯುವಂತೆ ಗೇರು ಬೀಜ ಮರದ ಎಲೆಯನ್ನ ಹಲ್ಲುಜ್ಜುವ ಮುನ್ನ ಸುರುಳಿ ಸುತ್ತಿ ಹೊಗೆ ಬಿಡುವ ಆಟ ಆಡಿ ಆಮ್ಮನಿಂದ ತಲೆಗೆ ಮೊಟಕಿಸಿಕೊಳ್ಳುತ್ತಿದ್ದೆ.


ನಮ್ಮ ತೀರ್ಥಹಳ್ಳಿ ಮನೆಯ ಗೋಪೂಜೆಯ ನಂತರ ನಮ್ಮ ಸವಾರಿ ಸಾಗಿನಬೆಟ್ಟಿನತ್ತ ಹೊರಡುತ್ತಿತ್ತು. ವಾಸ್ತವವಾಗಿ ಅಮ್ಮ ಒಬ್ಬರೆ ತವರಿನತ್ತ ಮುಖ ಮಾಡುತ್ತಿದ್ದರಾದರೂ ನಾನು ಅವರ ಬೆಂಬಿಡದ ಬಾಲವಾಗಿದ್ದ ಕಾಲ ಅದಾಗಿದ್ದು. ಒಂದು ವೇಳೆ ಬಿಟ್ಟು ಹೋಡರೆ ಆಕಾಶ ಭೂಮಿ ಒಂದು ಮಾಡುವಂತೆ ಅರ್ಭಟ ಮಾಡಿ ಆತ್ತು ಕರೆದು ಎಲ್ಲರಿಗೂ ಕಿರಿಕಿರಿ ಹುಟ್ಟಿಸುತ್ತಿದ್ದ ನನ್ನನ್ನೂ ಅನಿವಾರ್ಯವಾಗಿ ಜೊತೆಗೆ ಕರೆದೊಯ್ಯದೆ ಅವರಿಗೆ ಬೇರೆ ವಿಧಿಯೇ ಇರುತ್ತಿರಲಿಲ್ಲ. ನಾಯಿಯ ಹಿಂದಿನ ಬಾಲದ ಹಾಗೆ ನಾನೂ ಸಹ ಅಮ್ಮನ ಜೊತೆ ಅವರ ತವರಿಗೆ ಲಗ್ಗೆ ಇಡುತ್ತಿದ್ದೆ. ಸಾಗಿನಬೆಟ್ಟು ಮನೆ ಅವಿಭಕ್ತ ಕುಟುಂಬದ ಸೊತ್ತು. ಅಮ್ಮನ ಹಿಂದೆ ಮುಂದೆ ಹುಟ್ಟಿದವರು ಒಟ್ಟು ಹದಿನಾಲ್ಕು ಮಂದಿ. ಅಮ್ಮನ ಅಮ್ಮ ಹಣ್ಣುಹಣ್ಣು ಮುದುಕಿ ಅವ್ವ ಇನ್ನೂ ಜೀವಂತವಾಗಿದ್ದರು. ಆಕಾಲದಲ್ಲಿ ಅವರ ಹಿರಿಯಕ್ಕ ಮತ್ತು ಒಬ್ಬ ಅಣ್ಣ ತೀರಿ ಹೋಗಿದ್ದರು. ಇನ್ನುಳಿದವರಲ್ಲಿ ವಿಧವೆಯಾಗಿದ್ದ ತಂಗಿ ರತ್ನ ಚಿಕ್ಕಮ್ಮ ಮಾತ್ರ ಅಲ್ಲಿದ್ದು ಉಳಿದಂತೆ ಎರಡನೆ ಹಾಗೂ ಮೂರನೆ ಅಣ್ಣಂದಿರನ್ನ ಬಿಟ್ಟು ಬಾಕಿ ಎಲ್ಲರೂ ಬೊಂಬಾಯಿನಲ್ಲಿದ್ದರು. ಎರಡನೆ ಅಣ್ಣ ಮಂಗಳೂರಿನಲ್ಲಿದ್ದರೆ ಮೂರನೆ ಅಣ್ಣ ಅಲ್ಲೆ ಸಮೀಪದ ಹೌದಾಲಿನಲ್ಲಿ ಅಂಗಡಿಯಿಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದರು. ಒಟ್ಟಿನಲ್ಲಿ ಮನೆಯಲ್ಲಿ ಸದಾ ಹತ್ತಿಪ್ಪತ್ತು ಮಂದಿ ಗಿಜಿಗುಡುತ್ತಲೆ ಇರುತ್ತಿದ್ದ ಆಲ್ಲಿ ಸಮಾರಾಧನೆಯಂತೆ ನಿತ್ಯದ ಮೂರು ಹೊತ್ತಿನ ಅಡುಗೆ ಆಗುತ್ತಿತ್ತು.


ಮನೆಯ ಅಂಗಳ ಇಳಿದರೆ ಮೆಟ್ಟಿಲುಗಳಿವೆ. ಅವುಗಳ ಮೊದಲ ಪಂಕ್ತಿಯಿಂದಾಚೆಗೆ ಬೆಟ್ಟುಗದ್ದೆಗಳು ಹಾಗೂ ಪಂಪ್'ಹೌಸ್, ಇನ್ನೊಂದು ಪಂಕ್ತಿ ಇಳಿದರೆ ಎಡಕ್ಕೊಂದು ದೊಡ್ಡ ಕೆರೆ, ಎದುರಿಗೆ ತುಂಬಿ ಹರಿವ ಪಲ್ಗುಣಿಯ ತೋಡಿನ ತೊರೆ. ಆದರಾಚೆಗೆ ವಿಶಾಲ ಗದ್ದೆ ಬಯಲು ಆದರ ಮತ್ತೊಂದಂಚಿಗೆ ಕಲ್ಲಿನ ಪಾದೆ. ಅದರಾಚೆಗೆ ಮನೆಯ ಮರಗಳಿರುವ ದರ್ಖಾಸು, ಅದನ್ನೂ ದಾಟಿ ಮುಂದುವರೆದರೆ ದೊಡ್ಡದೊಂದು ಊರೊಟ್ಟಿನ ಗರೋಡಿಯ ಭೂತಸ್ಥಾನ ಹಾಗೂ ಅದರಂಚಿಗೆ ಮೂಡುಬಿದಿರೆಯನ್ನ ಶಿರ್ತಾಡಿಯಾಗಿ ನಾರಾವಿಯೊಂದಿಗೆ ಬೆಸೆಯುವ ಸರಕಾರಿ ರಾಜರಸ್ತೆ. ತೀರ್ಥಹಳ್ಳಿಯ ೪೦*೬೦ ಜಾಗದಲ್ಲಿ ಉಸಿರುಕಟ್ಟಿದವನಂತೆ ಆಡುತ್ತಿದ್ದ ನನ್ನ ಮಂಗ ಮನಸಿಗೆ ಸೊಕ್ಕಲು ಇಷ್ಟು ವೈವಿಧ್ಯತೆಗಳಿರುವ, ಎದ್ದು ಬಿದ್ದು ಆಡಿ ಮೈ ಮಣ್ಣು ಮಾಡಿಕೊಳ್ಳಲಿಕ್ಕೆ ಅಪಾರ ಅವಕಾಶಗಳಿರುವ ಸಾಗಿನಬೆಟ್ಟು ಇಷ್ಟವಾಗಲಿಕ್ಕೆ ಇವಕ್ಕಿಂತಾ ವಿಶೇಷ ಕಾರಣಗಳೇನೂ ಬೇಕಿರಲಿಲ್ಲ. ಸಾಲದ್ದಕ್ಕೆ ಇಲ್ಲಿನ ಹಟ್ಟಿ ತುಂಬ ದನಗಳ ಜಾತ್ರೆ! ಹೂಡುವ ಮೂರು ಜೊತೆ ರಕ್ಕಸ ಗಾತ್ರದ ಕೋಣಗಳ ಜೊತೆಗೆ ಕಂಬಳಕ್ಕಾಗಿಯೆ ಬೆಳೆಸಿ ಕೊಬ್ಬಿಸಿಡಲಾಗಿರುವ ಎರಡು ಬೀಜ ಒಡೆಯದ ಸೈಂಧವ ಗಾತ್ರದ ಕೊಣಗಳ ಜೋಡಿಗಳು ಬೇರೆ ಪಕ್ಕದ ಹಟ್ಟಿಯಲ್ಲಿ ಭುಸುಗುಡುತ್ತಿರುವಾಗ. ಸದಾ ನೀರು ಹರಿವ ತೋಡಿನ ನೀರು ಕಡಿಮೆ ಇರುವ ತೋಡಿನ ಅಂಚಿನಲ್ಲಿ ಹಾಗೂ ಕೆರೆಯಲ್ಲಿ ಈಜುವ ಪುಕ್ಕಟೆ ಅವಕಾಶ ಸಿಗುವಾಗ ಇಲ್ಲಿಗೆ ಬರುವ ಅವಕಾಶವನ್ನ ತಪ್ಪಿಸಿಕೊಳ್ಳುವ ಮೂರ್ಖನಾಗುವುದೆಲ್ಲದರೂ ಉಂಟೆ! ಹೀಗಾಗಿ ಆಮ್ಮ ಅಲ್ಲಿಗೆ ಹೋಗುವುದನ್ನೆ ಸದಾ ಬೇಟೆಗೆ ಕುಳಿತ ಹುಲಿಯಂತೆ ಹೊಂಚು ಹಾಕಿ ಕಾಯುತ್ತಿದ್ದೆ. ಇದಕ್ಕೆಲ್ಲ ಬೋನಸ್ಸಿನಂತೆ ಕಡೆಗೊಂದು "ಕೊಣಾಜೆ ಕಲ್ಲಿ"ನ ಅಹೋರಾತ್ರಿ ಯಾತ್ರೆಯೂ ನಮ್ಮ ಈ ಕಿರು ಪ್ರವಾಸದ ಅವಿಭಾಜ್ಯ ಅಂಗವಾಗಿರುತ್ತಿತ್ತು.


ವ್ಯವಸಾಯ ಮಾಡುವ ಮನೆಯಾದ್ದರಿಂದ ನಮಗೆ ಎಂಟು ಖಾಯಂ ಒಕ್ಕಲುಗಳೂ ಇದ್ದರು. ನಮ್ಮ ಜಾಗದ ಅಂಚಿನಲ್ಲಿಯೆ ಅವರೆಲ್ಲರ ಬಿಡಾರಗಳಿರುತ್ತಿದ್ದವು. ಅವರೆಲ್ಲರೂ ಸಹ ಈ ತುಡರ್'ದ ಪರ್ಬ ( ಸೊಡರಿನ ಹಬ್ಬ)ವನ್ನ ನಮ್ಮನ್ನೊಡಗೂಡಿ ಆಚರಿಸುವುದು ವಾಡಿಕೆ. ನಮ್ಮ ನೊಗ ನೇಗಿಲುಗಳಿಗೆಲ್ಲ ಪೂಜೆ ಮಾಡಿ ಅವಕ್ಕೂ ಅಗೆಲು ಅಂದರೆ ನೈವೇದ್ಯಕ್ಕಾಗಿ ಮಾಡಿದ ಎಲ್ಲ ಭಕ್ಷ್ಯಗಳನ್ನ ಬಡಿಸುವ ಪದ್ಧತಿ ಇತ್ತು. ಸಂಜೆ ಚಿಕ್ಕಮ್ಮನ ಕಿರಿಮಗ ಕೇಶವ ಅಡಿಕೆ ದಬ್ಬೆಗಳನ್ನ ಒಂದೆ ಅಳತೆಗೆ ಬರುವಂತೆ ಎರಡೂ ಮೂರು ಅಡಿಗಳಿರುವಂತೆ ಸೀಳಿ ಅದರ ಒಂದು ತುದಿಗೆ ಬಿಳಿ ಪಾಣಿಪಂಚೆಯನ್ನ ಹರಿದು ಮಾಡಿದ ಬತ್ತಿಯನ್ನ ಸುತ್ತಿ ಆವುಗಳನ್ನೆಲ್ಲ ಎಳ್ಳೆಣ್ಣೆಯಲ್ಲಿ ಆದ್ದಿ ಸರಿಯಾದ ದೊಂದಿ ತಯ್ಯಾರು ಮಾಡಿಡುತ್ತಿದ್ದ. ಸಂಜೆ ಕತ್ತಲು ಕವಿಯುತ್ತಿದ್ದಂತೆ ಬೆನ್ನಿಗೆ ಬತ್ತಳಿಕೆಯಂತೆ ಅಂತಹ ದೊಂದಿಗಳ ಕಟ್ಟನ್ನ ಕಟ್ಟಿಕೊಂಡ ಅವನ ಸವಾರಿ ಜಮೀನಿನ ಉದ್ದಗಲಕ್ಕೆ ಹೊರಡುತ್ತಿತ್ತು.


ಬೇರೆ ಹೊತ್ತಿನಲ್ಲಿ ಆವನ ದಬ್ಬಾಳಿಕೆಗಳನ್ನೆಲ್ಲ ಒಂದು ಚೂರೂ ಕೇರು ಮಾಡದೆ ವಿರೋಧಿಸುತ್ತಿದ್ದ ನಾನು ಆಗ ಮಾತ್ರ ಆವನ ವಿಧೇಯ ಶಿಷ್ಯನಂತೆ ಆವನು ಹೇಳಿದ್ದನೆಲ್ಲ ಚಾಚೂ ತಪ್ಪದೆ ಪಾಲಿಸುತ್ತಾ ಕಾಲಕ್ಕೆ ತಕ್ಕ ಕೋಲಕಟ್ಟುವವನಂತೆ ಅವನ ಬೆನ್ನು ಹಿಡಿಯುತ್ತಿದ್ದೆ. ನನ್ನ ಈ ಮಾರ್ಜಾಲ ಸನ್ಯಾಸದ ಅರಿವಿದ್ದ ಅವನು ಸಾಕಷ್ಟು ಸತಾಯಿಸಿಯೆ ನನ್ನನ್ನು ಜೊತೆಗೆ ದಿಬ್ಬಣ ಕರೆದುಕೊಂಡು ಹೋಗಲು ಕಡೆಗೆ ಒಪ್ಪುತ್ತಿದ್ದ. ಮೊದಲಿಗೆ ಮನೆ ಹಿತ್ತಲಿನ ಹಟ್ಟಿಯಲ್ಲಿ ದೊಂದಿ ಹಚ್ಚಿ ಅಲ್ಲಿನ ಗೋ ವೃಂದ ಹಾಗೂ ಮಹಿಷ ಮಲ್ಲರಿಗೆ ಬೆಳಕನ್ನ ತೋರಿಸಿದ ನಂತರ ಗದ್ದೆಯಂಚಿನಲ್ಲೆಲ್ಲ ಒಂದೊಂದು ದೊಂದಿ ಹಚ್ಚಿ ಅವನ್ನ ಗದ್ದೆಯ ಕೆಸರಿನ ನೆಲದಲ್ಲಿ ಊರಿ ನಾವು ಮುಂದುವರೆಯುತ್ತಿದ್ದೆವು. ಹೀಗೆ ಜಾಗದ ಉದ್ದಗಲಕ್ಕೂ ನಮ್ಮ ದೊಂದಿಗಳನ್ನ ಊರಿ ಮುಗಿಸುವ ಹೊತ್ತಿಗೆ ಮನೆಯ ಜಗಲಿಯಂಚಿನಲ್ಲಿ ಹಾಗೂ ತುಳಸಿಕಟ್ಟೆಯ ಉದ್ದಗಲಕ್ಕೂ ಮನೆಯ ಹುಡುಗಿಯರೆಲ್ಲ ಆಮ್ಮನ ಅಣತಿಯಂತೆ ಸಾಲು ಮಣ್ಣಿನ ಹಣತೆ ಹಚ್ಚಿಡುತ್ತಿದ್ದರು. ಆಗೆಲ್ಲ ಕರಾವಳಿಯ ಮನೆಗಳ ಜಗಲಿಗಳಿಗೆ ಹೊರ ಗೋಡೆಗಳೆ ಇರುತ್ತಿರಲಿಲ್ಲ. ಈ ಬಾಗಿಲು ಕಿಟಕಿಗಳೆಲ್ಲ ಇತ್ತೀಚಿನ ಅಪನಂಬಿಕೆಯ ಕಾಲದ ಬಳುವಳಿಗಳು ಅಷ್ಟೆ. ನಮ್ಮ ಜಗಲಿಯಂಚಿನಲ್ಲಿ ಒಂದರ ಪಕ್ಕ ಒಂದಿರಿಸಿದ ಸಾಲು ದೀಪಗಳ ಸೊಬಗು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಅಡಿಕೆಯ ಮರದಿಂದಲೆ ಸಾಂಕೇತಿಕವಾಗಿ ಒಂದು ಪೂಕರೆ ಕಂಬ ಮಾಡಿಡಲಾಗಿರುತ್ತಿದ್ದು ಅದರ ಸುತ್ತ ಮರದ ಸ್ಟ್ಯಾಂಡ್ ಮೇಲೆ ಮತ್ತಷ್ಟು ಹಣತೆಗಳು ಉರಿಯುತ್ತಿದ್ದವು. ಇದೆಲ್ಲ ಅದ ನಂತರ ಬಲಿಯೇಂದ್ರನನ್ನ ಕರೆಯುವ ಕೆಳಗಿನ ಪಾಡ್ದನವನ್ನ ಅಮ್ಮ ರಾಗವಾಗಿ ಹಾಡುತ್ತಿದ್ದರು. ಅವರಷ್ಟು ಪಾಡ್ದನ ಬಾಯಿಪಾಠವಾಗಿರದ ನಾವೂ ಸಹ ಅರೆಬರೆಯಾಗಿ ಅದನ್ನ ಹಾಡಿ ಧ್ವನಿಗೂಡಿಸುತ್ತಿದ್ದೆವು.


ತುಳುವಿನಲ್ಲಿರುವ ಆ ಪಾಡ್ದಾನ ಹೀಗಿದೆ:


"ಕರ್ಗಲ್ ಕಾಯ್ ಆವನಗ ಬೋರ್ಕಲ್ ಪೂ ಪೋನಗ
ಜಾಲ್ ಪಾದೆ ಆವನಗ ಗೊಡ್ಡೆರ್ಮೆ ಗೋಣೆ ಆನಗ
ಎರು ದಡ್ಡೆ ಆವನಗ ತುಂಬೆ ದಡದಿಡ್ ಕೂಟ ಆನಗ
ನೆಕ್ಕಿದಡಿಟ್ ಆಟ ಆನಗ ದಂಬೆಲಿಗ್ ಪಾಂಪು ಪಾಡುನಗ
ಅಲೆಟ್ ಬೊಲ್ ನೆಯ್ಯಿ ಮುರ್ಕುನಗ ಗುರುಗುಂಜಿದ ಕಲೆ ಮಾಜಿನಗ
ಕಲ್ಲುದ ಕೋರಿ ಕಿಲೆಪ್ಪುನಗ ದಂಟೆದಜ್ಜಿ ಮದುಮಲ್ ಆನಗ
ಮಂಜೆಲ್'ದ ಪಕ್ಕಿ ಮೈ ಪಾಡುನಗ ಕೊಟ್ರುಂಜೆ ಕೊಡಿ ಏರುನಗ
ನಂದಿಗೋಣ ಮುಕ್ಕುರುದ್ ಲಕ್ಕುನಗ ಬಲ್ಲಮಲೆ ಸುಲ್ಲಮಲೆ ಒಂಜಾವನಗ


ಮೂಜಿ ದಿನತ ಉಚ್ಛಯ ಮೂಜಿ ದಿನತ ಬಲಿ
ಕಂಡ ಕಂಡೊಡು ತುಡರ್ ತೂಯರೆ ಆ ದಿನತ ಬಲಿ ಕಣಯರೆ
ಆಟಿದ ಅಮಾಸೆಗ್ ಸೋಣದ ಸಂಕ್ರಾಂತಿಗ್ ಬೊಂತೆಲ್ದ ಕೊಡಿ ಪೊರ್ಬೊಗ್


ಈ ಊರುದ ಬಲಿ ಆ ಊರುದ ಪೊಲಿ ದೆತೊಂದು ಪೋಲ ಬಲೇಂದ್ರಾ
ಅರಕ್ಕುದ ಒಟ್ಟೆ ಓಡುಡು ಮಯಣದ ಮೋಟು ಜಲ್ಲೊಡು
ಪೊಟ್ಟು ಗಟ್ಟಿ ಪುಡಿ ಬಜಿಲ್ ಬಲಿ ಗೆತೊಣೆರೆ
ಕೊಟ್ಟೊಗು ಗೊಂಡೆ ಪೂ ಕಟ್ಟುದ್ ಬಲ ಬಲೀಂದ್ರಾ
ಆ ಊರುದ ಬಲಿ ಕೊಣಲ ಈ ಊರುದ ಪೊಲಿ ಕೊಣಲ
ಕೂ ಬಲೀಂದ್ರಾ ಕೂಊಊಊಊಊಊಊಊಊ.....

ಅಂದರೆ

ಕರಿ ಬೆಣಚುಕಲ್ಲು ಹಸಿ ಕಾಯಿಯಾಗುವಾಗ ಬಿಳಿ ಬೆಣಚುಕಲ್ಲು ಆರಳಿದ ಹೂವಾಗುವಾಗ
ಅಂಗಳ ಕಲ್ಲ ಬಂಡೆ ಅಗುವಾಗ ಗೊಡ್ಡೆಮ್ಮೆ ಕೋಣನಾಗುವಾಗ
ಕೋಣ ಗರ್ಭ ಧರಿಸುವ ಎಮ್ಮೆಯಾದಾಗ ತುಂಬೆ ಸಸಿಯಡಿ ಕೂಟ ಸೇರುವಾಗ
ನೆಕ್ಕಿ ಗಿಡದಡಿ ಯಕ್ಷಗಾನ ಆಗುವಾಗ ಒಣಗಿದ ಗದ್ದೆಯ ಬಿರುಕುಗಳಿಗೆ ಕಾಲು ಸಂಕ ಹಾಕುವಾಗ
ಮಜ್ಜಿಗೆಯಲ್ಲಿ ಬೆಣ್ಣೆ ಮುಳುಗಿ ಹೋಗುವಾಗ ಗುಲಗಂಜಿಯ ಕಲೆ ಮಾಯವಾಗುವಾಗ
ಕಲ್ಲಿನ ಕೋಳಿ ಕೂಗುವಾಗ ಕೋಲು ಹಿಡಿದ ಬೆನ್ನು ಬಾಗಿದ ಮುದುಕಿ ಮದುಮಗಳಾಗುವಾಗ
ಹಳದಿ ಹಕ್ಕಿ ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳುವಾಗ ಮರಕುಟುಕ ಮರದ ತುದಿಯನ್ನೇರಿ ಅಲ್ಲಿ ಕುಟುಕುವಾಗ
ಶಿವನ ಮುಂದಿನ ಕಲ್ಲಿನ ನಂದಿ ಹೂಂಕರಿಸಿ ಮೇಲೆದ್ದೇಳುವಾಗ
ದೂರದೂರದಲ್ಲಿರುವ ಬಲ್ಲಮಲೆ ಬೆಟ್ಟ ಹಾಗೂ ಸುಲ್ಲಮಲೆ ಬೆಟ್ಟ ಪರಸ್ಪರ ಕೂಡಿ ಒಂದಾಗುವಾಗ


ಮೂರು ದಿನದ ಆಚರಣೆ ಮೂರು ದಿನದ ಬಲಿ
ಗದ್ದೆ ಗದ್ದೆಯಲ್ಲಿನ ಹಬ್ಬ ನೋಡಲಿಕ್ಕೆ ಆ ದಿನದ ಎಡೆ ಕೊಡು ಹೋಗಲಿಕ್ಕೆ
ಆಟಿ ತಿಂಗಳ ಅಮವಾಸ್ಯೆಗೆ ಸೋಣ ತಿಂಗಳ ಸಂಕ್ರಾಂತಿಗೆ ಬೊಂತೆಲ್ ತಿಂಗಳಿನ ದೀಪಾವಳಿ ಹಬ್ಬಕ್ಕೆಆ ಊರಿನ ಐಶ್ವರ್ಯ ಈ ಊರಿನ ಎಡೆ ಕಂಡು ಹೋಗು ಬಲಿಯೇಂದ್ರ
ಅರಗಿನ ತೂತು ತೆಪ್ಪದಲ್ಲಿ ಮೇಣದ ಮೊಂಡು ಹುಟ್ಟು ಹಾಕುತ್ತಾ
ಹಾಳಾಗಿ ಹಳಸಿದ ಕಡುಬು ಹಾಗೂ ಪುಡಿ ಹುಡಿಯಾದ ಅವಲಕ್ಕಿಯ ಪನಿವಾರ
ಕೊಂಡು ಹೋಗಲಿಕ್ಕೆ ಕಿರೀಟಕ್ಕೆ ಚಂಡೂ ಹೂ ಕಟ್ಟಿಕೊಂಡು ಬಾ ಬಲಿಯೇಂದ್ರ.
ಆ ಊರಿನ ಐಶ್ವರ್ಯ ಈ ಊರಿನ ಎಡೆ ಕಂಡು ಹೋಗು ಬಲಿಯೇಂದ್ರ
ಕೂ ಬಲಿಯೇಂದ್ರ ಕೂ ಬಲೀಂದ್ರಾ ಕೂಊಊಊಊಊಊಊಊಊ.....


ಇದನ್ನ ಪ್ರತಿಯೊಬ್ಬ ತುಳುವನೂ ಜಾತಿ-ವರ್ಗ-ಪಂಥ-ಪ್ರಾಯದ ಭೇದವಿಲ್ಲದೆ ಅರ್ಥವರಿಯದಿದ್ದರೂ ಶ್ರದ್ಧಾ ಭಕ್ತಿಯಿಂದ ಕಿರುಚಿ ಬಲಿಯೇಂದ್ರನನ್ನು ಕರೆದು ಮತ್ತೆ ಪನಿವಾರ ತಿಂದು ಹಬ್ಬದ ಸವಿ ಹೆಚ್ಚಿಸಿಕೊಳ್ಳುತ್ತಾರೆ. ಅಂತೆಯೆ ನಾವೂ ಸಹ ಯಾರೋ ನಮ್ಮ ತಲೆಮಾರುಗಳ ಹಿಂದಿನ ಅಜ್ಜ ಹಾಕಿದ ಅಚರಣೆಯ ಅಲದ ಮರಕ್ಕೆ ಪ್ರತಿ ದೀಪಾವಳಿಯಲ್ಲಿಯೂ ನೇಣು ಹಾಕಿಕೊಳ್ಳುತ್ತಿದ್ದೆವು.


ನಾವು ಘಟ್ಟದ ಕೆಳಗಿನವರು ಅಂದರೆ ಗೋಕರ್ಣದಿಂದ ಸುಚೀಂದ್ರಂವರೆಗಿನ ಪರಶುರಾಮ ಸೃಷ್ಟಿಯ ದೇವರ ಸ್ವಂತ ನಾಡಿನವರಾದ ತುಳುವರು ಹಾಗೂ ಮಲಯಾಳಿಗಳು ದಾನಶೂರ ಬಲಿ ಚಕ್ರವರ್ತಿಯ ಪ್ರೀತಿಯ ಪ್ರಜೆಗಳಂತೆ. ಯಶಸ್ವಿಯಾಗಿ ಒಂದು ನೂರು ಯಾಗ ಮಾಡಿದವರು ಮೂರು ಲೋಕಗಳ ಪರಮೋಚ್ಛ "ಇಂದ್ರ" ಪದವಿ ಏರ ಬಹುದಾಗಿದ್ದ ಕಾಲದಲ್ಲಿ ಆತ ಸ್ವ ಸಾಮರ್ಥ್ಯದಿಂದ ಪರ ಪೀಡಕನಾಗದೆ ೯೯ ಯಾಗಗಳನ್ನ ಯಶಸ್ವಿಯಾಗಿ ಮಾಡಿ ಮುಗಿಸಿ ನೂರನೆಯದಕ್ಕೆ ಸಂಕಲ್ಪ ಮಾಡಿದನಂತೆ. ಆಗ ಬೆಚ್ಚಿಬಿದ್ದ ಆಗಿನ ಇಂದ್ರ ಹಾಗೂ ಅವನ ಛೇಲಾಗಳಾದ ದೇವರ ಪಡೆ ವಿಷ್ಣುವಿನಲ್ಲಿ ತಮ್ಮ ಸಂಭಾವ್ಯ ಪದಚ್ಯುತಿಯನ್ನ ತಪ್ಪಿಸಲು ಮೊರೆಯಿಟ್ಟರಂತೆ. ದೇವತೆಗಳ ಪಕ್ಷಪಾತಿ ವಿಷ್ಣು ಕುಬ್ಜ ಬಾಲವಟು ವಾಮನಾವತಾರಿಯಾಗಿ ಬಲಿ ಚಕ್ರವರ್ತಿಯ ಯಜ್ಞ ಶಾಲೆಗೆ ಕಾಲಿಟ್ಟನಂತೆ. ಎಳೆ ಬ್ರಾಹ್ಮಣನ ಆಗಮನದಿಂದ ಸ್ವಭಾವತಃ ಧಾರಾಳಿಯಾದ ಬಲಿ ಆತನಿಗೆ ದಾನ ಕೊಡಲಿಕ್ಕೆ ಉದ್ಯುಕ್ಥನಾದ.


ಆದರೆ ಈ ವಟು ಬೇಡಿದ್ದು ಕೇವಲ ಮೂರು ಹೆಜ್ಜೆ ನೆಲ! ಇದರ ಹಿಂದಿನ ಕುತಂತ್ರವನ್ನ ಗ್ರಹಿಸಿದ ದಾನವ ಕುಲಗುರು ಶುಕ್ರಾಚಾರ್ಯರು ಬಲಿಯನ್ನ ಆವಸರಿಸಿ ಭಿಕಾರಿಯಾಅಗದಂತೆ ತಡೆದರು. ಆದರೆ ಅದಾಗಲೆ ದಾನಕ್ಕೆ ಭಾಷೆ ಕೊಟ್ಟಿದ್ದ ಬಲಿ ಅವರ ಮಾತನ್ನ ಹಗುರವಾಗಿ ಪರಿಗಣಿಸಿದ. ಇದರಿಂದ ನೊಂದ ಶುಕ್ರಾಚಾರ್ಯರು ತಮ್ಮ ಯೋಗ ಬಲ ಪ್ರಯೋಗಿಸಿ ಸೂಕ್ಷ್ಮ ರೂಪದಿಂದ ಬಲಿಯ ಕಮಂಡಲದಿಂದ ದಾನೋದಕ ಬೀಳದಂತೆ ಅಡ್ಡಲಾಗಿ ಕೂತರು. ಇದನ್ನರಿತ ವಾಮನಾವತಾರಿ ವಿಷ್ಣು ನಿರ್ದಯನಾಗಿ ತನ್ನಲ್ಲಿದ್ದ ದರ್ಬೆಯಿಂದ ಆ "ಕಸ"ವನ್ನ ಚುಚ್ಚಿ ಸರಿಸಿದ! ಆಗ ಶುಕ್ರಾಚಾರ್ಯರ ಎಡಗಣ್ನು ಒಡೆದು ಹೋಯಿತು. ಕಣ್ಣು ಹೋದರೂ ಆಗುವ ಅನಾಹುತ ತಡೆಯಲಾರದೆ ಹೋದೆನಲ್ಲ ಎಂದು ಪರಿತಪಿಸಿದ ಶುಕ್ರಾಚಾರ್ಯರಿಗೆ ಅಂದಿನಿಂದ ದೇವತೆಗಳಿಂದ "ಒಕ್ಕಣ್ಣ ಶುಕ್ರಾಚಾರಿ" ಎನ್ನುವ ಅಡ್ಡ ಹೆಸರು ಸಿಕ್ಕಿತು. ಇಂದಿಗೂ ಯಾರನ್ನಾದರೂ ಮಳ್ಳೆಗಣ್ಣಿನ ಸಮಸ್ಯೆ ಇದ್ದಲ್ಲಿ ಗೇಲಿ ಮಾಡುವಾಗ ಈ ಉಪಮೆಯನ್ನ ಉಪಯೋಗಿಸುವ ಕುಹಕವನ್ನ ನಾವು ಗಮನಿಸಬಹುದು.


ಈಗ ಬಲಿಯನ್ನ ವಾಮನ ಬಲಿ ಹಾಕಿದ ಕಥೆಗೆ ವಾಪಾಸು ಬರೋಣ. ಒಮ್ಮೆ ದಾನೋದಕ ಗಿಂಡಿಯಿಂದ ಕೈಯ ಮೇಲೆ ಬಿದ್ದು ಕೊಟ್ಟ ಮಾತು ಅಧಿಕೃತವಾಗಿ ಪಕ್ಕಾ ಆದಾಗ ವಾಮನಮೂರ್ತಿ ತ್ರಿವಿಕ್ರಮನಾಗಿ ಅಸಾಧ್ಯ ಗಾತ್ರಕ್ಕೆ ಬೆಳೆದು ತನ್ನ ಪಾದದಲ್ಲಿ ಎರಡೆ ಎರಡು ಹೆಜ್ಜೆಗೆ ಭೂಮಿ ಮತ್ತು ಆಕಾಶವನ್ನ ಅಳೆದು ಬಿಟ್ಟನಂತೆ, ಕೊಟ್ಟ ಮಾತಿಗೆ ತಪ್ಪದ ಬಲಿ ಮೂರನೆ ಹೆಜ್ಜೆಗೆ ತನ್ನದಾಗಿ ಉಳಿದಿದ್ದ ತಲೆಯೊಂದನ್ನೆ ಬಾಗಿಸಿದಾಗ ಅದರ ಮೇಲೆ ಪಾದ ಊರಿದ ವಾಮನ ಬಲಿಯನ್ನ ಶಾಶ್ವತವಾಗಿ ಪಾತಾಳಕ್ಕೆ ತಳ್ಳಿದನಂತೆ. ಪಾತಾಳಕ್ಕೆ ಜಾರುತ್ತಾ ಬಲಿ ಉಸುರಿದ ಕೊನೆಯಾಸೆಯೂ ವರ್ಷಕ್ಕೊಂದಾವರ್ತಿ ತನ್ನ ಪ್ರೀತಿಯ ಪ್ರಜೆಗಳನ್ನ ಕಾಣಬೇಕು ಅನ್ನೋದು ಮಾತ್ರ. ಅವನ ನಿಸ್ಪ್ರಹ ಪ್ರಜಾ ಪ್ರೀತಿಗೆ ಮರುಳಾದ ವಿಷ್ಣು ಅದಕ್ಕೆ ಅನುಮತಿಸಿ ಜೊತೆಜೊತೆಗೆ ತಾನೆ ಸದಾ ಕಾಲಕ್ಕೂ ಅವನ ದ್ವಾರಪಾಲಕನಾಗುವ ಅಭಯ ನೀಡಿದನಂತೆ! ಅಂತೂ ತನ್ನ ಪ್ರಜೆಗಳಿಂದ ದೂರಾದ ಬಲಿ ಚಕ್ರವರ್ತಿ ಕೇರಳದಲ್ಲಿ ತನ್ನ ಮಲಯಾಳಿ ಪ್ರಜೆಗಳನ್ನ ಸೋಣ(ಶ್ರಾವಣ)ದ ಸಂಕ್ರಾಂತಿಯ ಹೊತ್ತಿಗೆ ಓಣಂ ನೆಪದಲ್ಲಿಯೂ, ತುಳುನಾಡಿನ ತುಳುವ ಪ್ರಜೆಗಳನ್ನ ಬೊಂತೆಲ್(ಕಾರ್ತಿಕ)ನ ತುಡರ್ ಪರ್ಬ ಅರ್ಥಾತ್ ದೀಪಾವಳಿಯಲ್ಲಿಯೂ ಬಂದು ಇಲ್ಲಿನ ಸಮೃದ್ಧಿಯನ್ನ ಕಂಡು ಕಣ್ತುಂಬಿಸಿಕೊಂಡು ತನ್ನ ಪ್ರಜೆಗಳು ಸುಖವಾಗಿದ್ದಾರೆ ಎಂದುಕೊಂಡು ಸಂತೃಪ್ತನಾಗಿ ಮತ್ತೆ ಮರಳಿ ಪಾತಾಳ ಸೇರಿಕೊಳ್ಳುತ್ತಾನಂತೆ.ಹಾಗೆ ನೋಡಿದರೆ ಬಾಲ್ಯದಲ್ಲಿ ಮೇಲಿನ ಕಥೆ ಗೊತ್ತಿದ್ದರೂ ಅದನ್ನ ತರ್ಕಕ್ಕೆ ಒಡ್ದಿ ಎಂದೂ ನಾನು ಯೋಚಿಸಿದ್ದೆ ಇಲ್ಲ. ಈಗ ಈ ಪಾಡ್ದನವನ್ನ ಕನ್ನಡಕ್ಕೆ ಅನುವಾದಿಸುವಾಗ ಈ ಪಾಡ್ದನದ ಆಶಯ ಹಾಗೂ ಬಲಿಯ ನಿಸ್ಪ್ರಹತೆ ಅರಿವಾಗಿ ಖೇದವಾಯಿತು. ಪಾಪದ ಬಲಿ ಚಕ್ರವರ್ತಿ ಮಾಡಿದ ತಪ್ಪಾದರೂ ಏನು? ಅವನೇನು ಪ್ರಜಾ ಪೀಡಕನಾಗಿ "ಇಂದ್ರ" ಪದವಿಗೆ ಲಗ್ಗೆ ಹಾಕಲಿಲ್ಲ. ಪುರಾಣಗಳೆ ವಿಧಿಸಿದ್ದ ನಿಯಮವನ್ನ ಶಿಸ್ತಾಗಿ ಅನುಸರಿಸಿ ಅತ ಇಂದ್ರ ಪದವಿಗೆ ಏರಲಿದ್ದ ಹೊರತು ಸ್ವರ್ಗ ಲೋಕದ ಸೂಳೆಯರಾದ ರಂಭೆ. ಊರ್ವಶಿ, ತಿಲೋತ್ತಮೆ ಹಾಗೂ ಮೇನಕೆಯರ ಕ್ಯಾಬರೆ ನೋಡುತ್ತಾ, ಬೇರೆ ಮಾಡಲಿಕ್ಕಿನ್ನೇನೂ ಕೆಲಸವಿಲ್ಲದೆ ಸದಾ ಮದಿರೆ ಕುಡಿದು ಟೈಟಾಗಿ ಓಲಾಡುತ್ತಾ ಇನ್ಯಾರನ್ನೋ ಕುತಂತ್ರದಿಂದ ಕೆಳಗಿಳಿಸಿಯೆ ಮೆರೆದ ಇಂದ್ರ ಹಾಗೂ ಅವನ ಪಟಾಲಂನಂತಲ್ಲ ಬಲಿ ಚಕ್ರವರ್ತಿ. ಅಷ್ಟಾಗಿ ಪಕ್ಷಪಾತಿಯಾಗಿ ಆವನ ಕಥೆ ಮುಗಿಸಿದ ವಾಮನ ರೂಪಿ ವಿಷ್ಣು ಅಲ್ಲಿಗೆನೆ ತೃಪ್ತನಾಗದೆ ಕೇಳದಿದ್ದರೂ ಅವನ ದ್ವಾರಪಾಲಕನಾಗುವ ಒತ್ತಡದ ವರ ಬೇರೆ ಒತ್ತಾಯವಾಗಿಯೇ ಕರುಣಿಸಿದ! ಅಂದರೆ ಅವನ ಮುಂದಿನ ಎಲ್ಲಾ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟ. ಇನ್ನು ಅವನ ಕಡೆಯ ಆಸೆ ಈಡೇರಿಸಿದ ವಿಷ್ಣುವಿನ ಕಟ್ಟಾ ಅನುಯಾಯಿಗಳಾದ ಪಂಡಿತೋತ್ತಮರು ರಚಿಸಿದ ಬಲಿಯನ್ನ ಆವನ ಕೊನೆಯ ಆಸೆಯಂತೆ ಅವನದ್ದೆ ರಾಜ್ಯಕ್ಕೆ ಮರಳಿ ಆಹ್ವಾನಿಸುವ ಪಾಡ್ದನವಾದರೂ ಯಾವ ಧಾಟಿಯಲ್ಲಿದೆ? ಕುಶಾಲಿನ ಸಭ್ಯತೆ ಮೇರೆ ಮೀರಿದ ಅದು ಗೇಲಿಯ ಮಟ್ಟದಲ್ಲಿರುವುದು ಮಾತ್ರವಲ್ಲದೆ ಬಲಿ ಅತ್ತಲಾಗಿರಲಿ ಆತ್ಮಾಭಿಮಾನವಿರುವ ಆತನ ಯಾವೊಬ್ಬ ಭಿಕ್ಷುಕ ಪ್ರಜೆಯೂ ಅಂತಹ ಅದ್ವಾನದ ಆಹ್ವಾನವನ್ನ ಒಪ್ಪಿಕೊಂಡು ಬೇಕಿದ್ದರೆ ಹುಟ್ಟಿದ ಮನೆಯೆ ಅಗಿರಲಿ ಮರಳಿ ಎಂದಿಗೂ ಮತ್ತಲ್ಲಿಗೆ ಬರಲಾರ. ಇದೊಂತರ "ಕರೆದ ಹಾಗೂ ಇರಬೇಕು, ಅದರೆ ಆತ ಇತ್ತ ತಪ್ಪಿಯೂ ತಲೆ ಹಾಕಿ ಮಲಗಬಾರದು!" ಅನ್ನುವ ಕುತಂತ್ರ.


ಅದೇನೆ ಇದ್ದರೂ ಅಂದಿನ ದೀಪಾವಳಿಯ ಹಿತದ ನೆನಪಿನಲ್ಲಿಯೇ ಕಳೆದ ಎಂಟು ವರ್ಷಗಳಿಂದ ಕಾರ್ತಿಕ ಮಾಸದ ಅಷ್ಟೂ ದಿನ ಮನೆಯಂಗಳದಲ್ಲಿ ತಪ್ಪದೆ ಮಣ್ಣಿನ ಹಣತೆ ದೀಪ ಉರಿಸುತ್ತೇನೆ. ಅಮ್ಮನ ಅಮ್ಮ ಅವ್ವ ಹೇಳಿದ ನಮ್ಮ ಪ್ರೀತಿಯ ಕಥಾ ನಾಯಕ ಬಲಿಯನ್ನ ನಾನಂತೂ ಅಷ್ಟೆ ನಿರ್ಮಲ ಮನಸಿನಿಂದ ನನ್ನ ಮನೆಗೆ ಪ್ರತಿ ವರ್ಷ ಆಹ್ವಾನಿಸುತ್ತಲೇ ಇದ್ದೇನೆ. ಆವನಿಗೆ ನನ್ನಂತಹ ಅಭಿಮಾನಿಗಳ ಸಂಖ್ಯೆ ವಿಪರೀತವಾಗಿರಲಿಕ್ಕ್ರೆ ಸಾಕು!  ಹೀಗಾಗಿ ನನ್ನ #೪೪, "ಅನ್ನಪೂರ್ಣ" ೫ನೆ ಮುಖ್ಯರಸ್ತೆಯ ವಿಳಾಸವನ್ನ ಹುಡುಕಿಕೊಂಡು ಬರಲಿಕ್ಕೆ ಆತನಿಗೆ ಇನ್ನೂ ಪುರುಸೊತ್ತಾಗಿರಲಿಕ್ಕಿಲ್ಲ. ಆದರೆ ನನ್ನ ತಾಳ್ಮೆಯ ಸ್ಟಾಕು ಮಾತ್ರ ಇನ್ನೂ ಮುಗಿದಿಲ್ಲ. ನಾನಂತೂ ನಿರಂತರ ಆಶಾವಾದಿ. ಒಂದಲ್ಲಾ ಒಂದು ದಿನ ಅವ್ವನ ಕಣಿಯಂತೆ ನಮ್ಮ ಅಂಗಳದಲ್ಲಿ ದೀಪದ ಗುರುತು ಕಂಡು ಅವ ಬಂದೇ ಬಂದಾನು, ಹಾಗೆ ಬಂದಾಗ ಕತ್ತಲಲ್ಲಿ ಅವನು ಹಾದಿ ತಪ್ಪಿ ಎಡವ ಬಾರದಲ್ಲ ಅದಕ್ಕೆ ನಿರೀಕ್ಷೆಯ ಹಣತೆಯನ್ನ ಹಚ್ಚಿ ಕಾರ್ತಿಕದುದ್ದ ಪ್ರತಿ ದಿವಸ ಸಂಜೆಯೂ ಇಡುತ್ತಲೇ ಇರುತ್ತೇನೆ ನನ್ನ ಕೈಲಾಗುವವರೆಗೂ. ತುಳಸಿ ಪೂಜೆಯ ಸವಿಯೂ ಮನಸಿನಾಳದಲ್ಲಿದೆ ಅದನ್ನ ಮುಂದೊಮ್ಮೆ ಬರೆಯಲಿಕ್ಕೆನೇ ಬೇಕು. ಸದ್ಯ ಇಷ್ಟು ಕೊರೆತ ಓದಿದವರಿಗೆ ಧಾರಾಳ ಸಾಕು!

13 November 2013

"ಭಾಗ್ಯ"ದ ಲಕ್ಸ್ಮವ್ವ ನೀ ಇಸ್ಟ್ ಬ್ಯಾಗ್ ಬ್ಯಾಗ ಕುಣ್ದಾಡ್ಕೊಂಡ್ ಬಂದ್ ಬುಟ್ರೆ ಎಂಗವ್ವಾ?ಉಟ್ಟಿದರೆ ಕನ್ನಡ ನಾಡಲ್ಲಿ ಉಟ್ಟಿಯಾದ ಮ್ಯಾಕೆ ಇನ್ನೆಲ್ಲೈತೆ ಯೋಳಿ ದೌ"ರ್ಭಾಗ್ಯ"? ಸಿದ್ಧರಾ"ಮೈ ನೆ ಪ್ಯಾರ್ ಕಿಯಾ", ಪರ್ ಉನ್ಕೋ ಉನ್ಕೇ "ಭಾಗ್ಯ"ಶ್ರೀ ನೆ ಶಾಯದ್ ದೋಖಾ ದಿಯಾ?! ಅಂಗಾಗಿನೆ ಮಹಾಜನ"ಗೋಳೆ" "ಕುರಿತೋದದೆಯುಂ ಪರಿಣತ ಮತಿ"ಗಳಾದ ನಿಮಗೆಲ್ಲ ಮುಂದೆ ಕಾದೈತೆ

"ಭಾಗ್ಯ"ವೇ "ಭಾಗ್ಯ" ಅನ್ನ"ಭಾಗ್ಯ", ಶಾದಿ"ಭಾಗ್ಯ", ಮುನ್ನ(?)"ಭಾಗ್ಯ".

ಮುನ್ನಂದಿರು ಅತ್ತರೆ ಕ್ಷೀರ "ಭಾಗ್ಯ",ಮುನ್ನನ ಅಪ್ಪಂದಿರು ಆತ್ತರೆ ದ್ರಾಕ್ಷಾರ "ಭಾಗ್ಯ". ಇದ್ಕಿಂತ ಬೇಕೈತಾ ಇನ್ನ"ಭಾಗ್ಯ"?
ಇಷ್ಟ್ ಸಾಕಾಗಂಗಿಲ್ಲ ಆಂತಾವ ನಮ್ ಸಿದ್ರಾಮಣ್ಣ ಒಂದ್ ಕೋಟಿ ಖರ್ಚ್ ಮಾಡಿ ಈಗಾ ಇರೋ ಮನೆನೆ ಸುಮ್ಸುಮ್ಕೆ ವಾಸ್ತು ಪರ್ಕಾರ ವೈನಾ ಮಾಡ್ಕಂತೈತಣ್ಣೋ!
ಇದು ಯಾವ ಗೂಢ ನಂಬಿಕೆ ಅಂತೆಲ್ಲಾ ಕೇಳೀರ ಉಸಾರ್!

"ಕಂಡವ್ರ್ ಕಾಸು, ಸದ್ಯಕ್ಕೆ ಸಿದ್ರಾಮಣ್ಣನೆ ಅದನ್ನ ಖರ್ಚ್ ಮಾಡೋ ಬಾಸು"

ಬೂಸಿಯ ಬಿಟ್ಟೊದ್ ಖುರ್ಚಿಲಿ ಅಪ್ಪಂತವ್ರ್ಯಾರಾರ ಬಂದ್ ಕುಂತ್ಕತೌರೆ ಅಂತ ಕಸ್ತೂರಿ ಕನ್ನಡಿಗರು ಕಾದಿದ್ದೆ ಬಂತು. ಇವ್ರ್ಯಾರೋ "ಶಾದಿ - ಬಿದಾಯಿ" ಅಂತಾವ ಕಿತ್ತೋದ ಕಲ್ಯಾಣ ಮಂಟಪದ ಗಿರಾಕಿಗಳು ಇಧಾನಸೌಧವ ಅಟ್ಕಾಯಿಸ್ ಕೊಂಡವ್ರೆ! ಒಟ್ನಲ್ಲಿ ಕರ್"ನಾಟಕ"ದಲ್ಲಿ ಪಾಲುದಾರರಾದ ನಮ್ಮದೆಲ್ಲ ಶಾನೆ "ಭಾಗ್ಯ"ವೋ "ಭಾಗ್ಯ" ಕಣಣ್ಣೋ?!

10 November 2013

ಕರುನಾಡ ಅಧುನಿಕ ಆಳರಸರು.

ಸಂಸದೀಯ ಪ್ರಜಾಪ್ರಭುತ್ವಕ್ಕೆ ಒಳಪಟ್ಟ ನಂತರ ಕರ್ನಾಟಕ ಇಲ್ಲಿಯವರೆಗೂ ಹದಿನಾಲ್ಕು ವಿಧಾನ ಮಂಡಲಗಳನ್ನೂ, ಇಪ್ಪತ್ತೆರಡು ಮುಖ್ಯಮಂತ್ರಿಗಳನ್ನೂ ಕಂಡಿದೆ. ಈ ಹದಿನಾಲ್ಕರಲ್ಲಿ ಮೊದಲನೆಯದು ನೇಮಕದ ಮೂಲಕ ಆಗಿದ್ದರೆ ಇನ್ನುಳಿದ ಹದಿಮೂರು ಮಂದಿ ಚುನಾವಣೆಗಳ ಮೂಲಕ ಆಯ್ಕೆಗೊಂಡಿದ್ದಾರೆ. ಇವರಲ್ಲಿ ನಾಲ್ಕು ಮಂದಿ ಎರಡೆರಡು ಬಾರಿ ಅಧಿಕಾರದ ಗದ್ದುಗೆಯನ್ನ ಏರಿದ್ದರೆ ಒಬ್ಬರು ಮೂರು ಸಾರಿ ಆಧಿಕಾರದ ಸೂತ್ರ ಹಿಡಿಯುವ ಅದೃಷ್ಟವಂತರಾಗಿದ್ದರು. ಪ್ರತಿಯೊಬ್ಬ ಮುಖ್ಯಮಂತ್ರಿಯ ಅಧಿಕಾರವಧಿಯಲ್ಲೂ ಕರುನಾಡು ವಿಭಿನ್ನ ನೆಲೆಯಲ್ಲಿ ಬೆಳೆದಿದೆ. ಒಬ್ಬೊಬ್ಬರ ಕಾಲಾವಧಿಯಲ್ಲೂ ವಿಭಿನ್ನ ಸವಾಲುಗಳು ನಾಡಿನ ಮುಂದಿದ್ದವು. ಅದರಲ್ಲಿ ಕೆಲವನ್ನ ತಮ್ಮ ಮಿತಿಯಲ್ಲಿ ಇವರಲ್ಲಿ ಕೆಲವರು ಸಮರ್ಥವಾಗಿ ನಿಭಾಯಿಸಿದರೆ ಇನ್ನು ಕೆಲವರು ತಮ್ಮ ಖಾಸಗಿ ಖಜಾನೆ ತುಂಬಿಸಿಕೊಳ್ಳುವ ಹಪಾಹಪಿ ಹಾಗೂ ಸಿಂಹಾಸನವನ್ನೇರಿದ ರೋಮಾಂಚನದಲ್ಲಿ ನಾಡಿನ ಹಿತಾಸಕ್ತಿಗೆ ಎಳ್ಳುನೀರು ಬಿಟ್ಟರು.


ಈ ಇಪ್ಪತ್ತೆರಡು ಮಂದಿಯಲ್ಲಿ ಕೆ ಚಂಗಲರಾಯರೆಡ್ಡಿ. ಕೆಂಗಲ್ ಹನುಮಂತಯ್ಯ, ಕಡಿದಾಳು ಮಂಜಪ್ಪ, ಎಸ್ ನಿಜಲಿಂಗಪ್ಪ, ಬಿ ಡಿ ಜತ್ತಿ, ಎಸ್ ಆರ್ ಕಂಠಿ, ವೀರೇಂದ್ರ ಪಾಟೀಲ್, ಡಿ ದೇವರಾಜ ಅರಸು, ಆರ್ ಗುಂಡೂರಾವ್, ಎಸ್ ಬಂಗಾರಪ್ಪ, ಮರ್ಪಾಡಿ ವೀರಪ್ಪ ಮೊಯ್ಲಿ, ಎಸ್ ಎಂ ಕೃಷ್ಣ, ಧರ್ಮಸಿಂಗ್, ಸಿದ್ಧರಾಮಯ್ಯ ಹೀಗೆ ಹದಿನಾಲ್ಕು ಮಂದಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿದ್ದರೆ, ರಾಮಕೃಷ್ಣ ಹೆಗಡೆ, ಎಸ್ ಆರ್ ಬೊಮ್ಮಾಯಿ, ಹೆಚ್ ಡಿ ದೇವೇಗೌಡ, ಜೆ ಹೆಚ್ ಪಟೇಲ್, ಹೆಚ್ ಡಿ ಕುಮಾರಸ್ವಾಮಿ ಜನತಾ ಪರಿವಾರದ ಶಾಸಕಾಂಗ ನಾಯಕರಾಗಿದ್ದರು. ಇವರಿಗೆ ಪೈಪೋಟಿ ಕೊಡುವಂತೆ ಕೇವಲ ಐದು ವರ್ಷದ ಕಾಲಾವಧಿಯಲ್ಲಿ ಭಾರತೀಯ ಜನತಾ ಪಕ್ಷ ಬಿ ಎಸ್ ಯಡಿಯೂರಪ್ಪ, ಡಿ ವಿ ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್ ಹೀಗೆ ಮೂರು ಮೂರು ಮಂದಿಯನ್ನ ತಮ್ಮ ಶಾಸಕಾಂಗ ಪಕ್ಷದ ನಾಯಕರನ್ನಾಗಿಸಿಕೊಂಡು ದೊಡ್ಡಾಟ ನಡೆಸಿದರು.


ಜಾತಿಯ ದೃಷ್ಟಿಯಿಂದ ನೋಡುವುದಾದರೂ ಸಹ ಇಲ್ಲಿಯವರೆಗೆ ತಲಾ ಆರು ಒಕ್ಕಲಿಗ ಹಾಗೂ ಇತರ ಹಿಂದುಳಿದ ವರ್ಗಗಳ ಮುಖ್ಯಮಂತ್ರಿಗಳನ್ನ, ಎಂಟು ಲಿಂಗಯತ ಮುಖ್ಯಮಂತ್ರಿಗಳನ್ನ, ಇಬ್ಬರು ಬ್ರಾಹ್ಮಣ ಮುಖ್ಯಮಂತ್ರಿಗಳನ್ನ ಕರ್ನಾಟಕ ಕಂಡಿದೆ. ಅಖಂಡ ಕರ್ನಾಟಕದ ಎರಡು ಪ್ರಬಲ ಜಾತಿಗಳಾದ ಲಿಂಗಾಯತ ಹಾಗೂ ಒಕ್ಕಲಿಗ ಜಾತಿಯ ಮುಖಂಡರು ಈ ಐವತ್ತೆಂಟು ವರ್ಷದುದ್ದಕ್ಕೂ ಅಧಿಕಾರದ ಗದ್ದುಗೆಯನ್ನೇರಲಿಕ್ಕಾಗಿ ಪಕ್ಷಾತೀತವಾಗಿ ಮೇಲಾಟ ನಡೆಸಿರುವುದನ್ನ ಕಾಣಬಹುದು. ಬಹುಸಂಖ್ಯಾತ ಜಾತಿಯೊಂದರ ನಿವ್ವಳ ಬೆಂಬಲ ಪಡೆದ ನಾಯಕರು ಗದ್ದುಗೆಗೆ ಏರಿದ ಉದಾಹರಣೆಗಳಂತೆ, ಇನ್ನೊಂದು ಪ್ರಬಲ ಜಾತಿಯನ್ನ ಸರಾಸಗಟಾಗಿ ಎದುರು ಹಾಕಿಕೊಂಡ ನಾಯಕರು ಬರಿ ಚಡ್ಡಿಯಲ್ಲಿ ಬೆತ್ತಲಾಗಿ ಬೀದಿಯ ಪಾದಾಚಾರಿ ಮಾರ್ಗದ ಪಾಲಾದ ಉದಾಹರಣೆಗಳೂ ಸಾಕಷ್ಟಿವೆ.


ದೇಶಕ್ಕೆ ಸ್ವಾತಂತ್ರ ಬಂದ ಹೊಸತರಲ್ಲಿ ಇನ್ನೂ ಭಾರತ ಗಣರಾಜ್ಯವಾಗಿರಲಿಲ್ಲ. ಹೀಗಾಗಿ ಅಂದಿನ ಪ್ರಾಂತೀಯ ಸರಕಾರದ ಮುಖ್ಯಮಂತ್ರಿಗಳನ್ನ ಕೇಂದ್ರ ಸರಕಾರದ ಶಿಫಾರಸ್ಸುಗಳ ಅನುಸಾರ ಅಂದಿನ ಗವರ್ನರ್ ಜನರಲ್ ಅಂದರೆ ಗಣರಾಜ್ಯ ಘೋಷಣೆಯ ನಂತರದ ರಾಷ್ಟ್ರಪತಿಗಳೆ ನೇಮಿಸುತ್ತಿದ್ದರು. ಹೀಗೆ ನೆಹರು ಬಯಕೆಯಂತೆ ಅಂದಿನ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ದು ಕೊಂಡದ್ದು ಕೋಲಾರ ಜಿಲ್ಲೆ ಬಂಗಾರಪೇಟೆಯ ಕ್ಯಾಸಂಬಳ್ಳಿ ಮೂಲದವರಾದ ಕಟ್ಟಾ ಕಂಗ್ರೆಸ್ಸಿಗ ಚೆಂಗಲರಾಯರೆಡ್ಡಿಯವರನ್ನ. ಆರಂಭದಲ್ಲಿ "ಪ್ರಜಾ ಪಕ್ಷ"ದ ಮೂಲಕ ಶುರುವಾದ ಚಂಗಲರಾಯರೆಡ್ಡಿಯವರ ರಾಜಕೀಯ ಯಾತ್ರೆ ಅನಂತರ ಕಾಂಗ್ರೆಸ್ಸಿನಲ್ಲಿ ತಮ್ಮ ಪಕ್ಷವನ್ನ ವಿಲೀನವಾಗಿಸುವ ಮೂಲಕ ಪ್ರಕರವಾಯಿತು.


ಕೆ ಸಿ ರೆಡ್ಡಿ ಮೈಸೂರು ಸಂಸ್ಥಾನದ ಮುಖ್ಯಮಂತ್ರಿಗಳಾಗಿ ನಾಲ್ಕು ವರ್ಷದ ನೂರಾ ಐವತ್ತೇಳು ದಿನ ಗದ್ದುಗೆಯಲ್ಲಿದ್ದರು. ಅದೆ ಅವಧಿಯಲ್ಲಿ ದೇಶದ ಸಂವಿಧಾನ ರಚನಾ ಸಭೆಯ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಪದವಿಯಿಂದ ನಿರ್ಗಮಿಸಿದ ನಂತರ ಅವರು ಕ್ರಮವಾಗಿ ಒಂದು ಅವಧಿಗೆ ರಾಜ್ಯಸಭಾ ಹಾಗೂ ಕೋಲಾರದಿಂದ ಲೋಕಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ಲೋಕಸಭಾ ಸದಸ್ಯತ್ವದ ಕೊನೆಯ ವರ್ಷ ಕೇಂದ್ರ ಸರಕಾರದ ವಾಣಿಜ್ಯ ಹಾಗೂ ಭಾರಿ ಕೈಗಾರಿಕೆಗಳ ಖಾತೆಯ ಸಚಿವರೂ ಆಗಿದ್ದರು. ಆನಂತರ ಅವರನ್ನ ರಾಷ್ಟ್ರಪತಿಗಳು ಮಧ್ಯಪ್ರದೇಶದ ರಾಜ್ಯಪಾಲರನ್ನಾಗಿಯೂ ನೇಮಿಸಿದರು. ಮೈಸೂರಿನಲ್ಲಿ ಜವಾಬ್ದಾರಿ ಸರಕಾರದ ರಚನೆಗಾಗಿ ನಡೆದ "ಮೈಸೂರು ಚಲೋ" ಚಳುವಳಿ ಹಾಗೂ "ಶಿವಪುರ ಧ್ವಜ ಸತ್ಯಾಗ್ರಹ"ದ ಮುಂದಾಳತ್ವ ವಹಿಸಿದ್ದ ಕೆ ಚಂಗಲರಾಯರೆಡ್ಡಿಯವರಿಗೆ ಆ ಹೋರಾಟದ ಫಲವಾಗಿ ಅಧಿಕಾರದ ಗದ್ದುಗೆ ಸಮೀಪವಾಗಿತ್ತು. ಅವರು ತಮ್ಮ ಎಪ್ಪತ್ತಮೂರು ವರ್ಷಗಳ ಪ್ರಾಯದಲ್ಲಿ ೧೯೭೬ರ ಫೆಬ್ರವರಿ ೨೭ರಂದು ಈ ಜಗತ್ತಿನಿಂದಲೂ ತಣ್ಣಗೆ ನಿರ್ಗಮಿಸಿದರು.


೧೯೫೨ರಲ್ಲಿ ನೂತನ ಅಂಗೀಕೃತ ಸಂವಿಧಾನದ ಅನುಸಾರ ವಿಧಾನಸಭಾ ಚುನಾವಣೆಗಳು ದೇಶದಾದ್ಯಂತ ನಡೆದವು. ಯುವ ನೇತಾರ ಕೆಂಗಲ್ ಹನುಮಂತಯ್ಯನವರ ನೇತೃತ್ವದ ಕಾಂಗ್ರೆಸ್ ಮೈಸೂರು ರಾಜ್ಯದಲ್ಲಿ ಬಹುಮತ ಗಳಿಸಿ ಅಧಿಕಾರ ವಹಿಸಿಕೊಂಡಿತು, ಬಹುಮತದ ಅನುಸಾರ ಅವರನ್ನೆ ರಾಜ್ಯದ ಮುಖ್ಯಮಂತ್ರಿಗಳಾಗಿ ಶಾಸಕಾಂಗ ಪಕ್ಷ್ಜದ ಅಪೇಕ್ಷೆಯ ಮೇರೆಗೆ ಕಾಂಗ್ರೆಸ್ ಹೈಕಮಾಂಡ್ ನೇಮಿಸಿತು. ಹನುಮಂತಯ್ಯ ಮುಂದಿನ ಏಕೀಕರಣದ ಸುಳಿವರಿತಿದ್ದರು, ಹೀಗಾಗಿ ಹಾಗೊಮ್ಮೆ ಐಕ್ಯವಾಗುವ ಕರ್ನಾಟಕದ ರಾಜಧಾನಿ ಬೆಂಗಳೂರೆ ಆಗಿರಲಿ ಎಂದು ಆಶಿಸಿ ಬೆಂಗಳೂರಿನ ಪ್ರಗತಿಗೆ ಅವರು ಪ್ರಾಮುಖ್ಯತೆ ಕೊಟ್ಟರು. ಹಾಗೆ ವಿಧಾನಸೌಧ ಅವರ ಕನಸಿನ ಕೂಸಾಗಿ ರಾಜಧಾನಿಯಲ್ಲಿ ಎದ್ದು ನಿಂತಿತು. ಆದರೆ ಅವರ ದುರಾದೃಷ್ಟಕ್ಕೆ ಆ ಕಲ್ಲು ಕಟ್ಟಡದಲ್ಲಿ ಕುಳಿತು ಒಂದೆ ಒಂದು ನಿಮಿಷವೂ ರಾಜ್ಯವನ್ನಾಳುವ ಅವರ ಆಸೆ ಮಾತ್ರ ಕಡೆಗೂ ಕೈಗೂಡಲೇ ಇಲ್ಲ! ಪಕ್ಷದಲ್ಲಿ ಆವರ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಕ್ರಮೇಣ ಅಪಸ್ವರ ಏಳತೊಡಗಿತ್ತು. ಆಂತರಿಕವಾಗಿ ಭಿನ್ನಮತವನ್ನೆದುರಿಸುತ್ತಿದ್ದ ಮುಖ್ಯಮಂತ್ರಿಗಳ ಮೇಲೆ ನಿರ್ಮಾಣ ಹಂತದಲ್ಲಿದ್ದ ವಿಧಾನಸೌಧದ ಪರಿಶೀಲನೆಯ ವೇಳೆ ಕೂಲಿ ಕಾರ್ಮಿಕನೊಬ್ಬ ಹರಿತವಾದ ಚಾಕುವಿನಿಂದ ಹಲ್ಲೆ ನಡೆಸಿದ. ಅದರ ಕಾರಣ ಮಾತ್ರ ಇವತ್ತಿಗೂ ನಿಗೂಢ. ಅವರಿಗಿದ್ದ ಹೆಣ್ಣಿನ ಖಯಾಲಿಯೂ ಇದರ ಹಿಂದಿರಬಹುದು ಎನ್ನುವ ಗಾಳಿಮಾತು ಚಾಲ್ತಿಯಲ್ಲಿದೆ.ಆದರೆ ಆ ದಾಳಿಯಲ್ಲಿ ಕೇವಲ ಸಣ್ಣಪುಟ್ಟ ಗಾಯಗಳಿಂದ ಪಾರಾದ ಹನುಮಂತಯ್ಯನವರು ಇದರಿಂದ ವಿಚಲಿತರಾದರು. ಇದನ್ನೆ ನೆಪ ಮಾಡಿಕೊಂಡ ಕಾಂಗ್ರೆಸ್ ಹೈಕಮಂಡ್ ಅವರನ್ನ ಕೇಂದ್ರ ರಾಜಕೀಯಕ್ಕೆ ಸೆಳೆದುಕೊಂಡು ತೀರ್ಥಹಳ್ಳಿಯ ಶಾಸಕರಾಗಿದ್ದ ಅಂದಿನ ಕಂದಾಯ ಸಚಿವ ಕಡಿದಾಳ್ ಮಂಜಪ್ಪನವರನ್ನ ರಾಜ್ಯದ ನೂತನ ಮುಖ್ಯಮಂತ್ರಿಯ ಆಯ್ಕೆಯ ತನಕದ ತತ್ಕಾಲಿಕ ಅನುಕೂಲಕ್ಕೊಬ್ಬ ಮುಖ್ಯಮಂತ್ರಿಯನ್ನಾಗಿ ನೇಮಿಸಿತು. ಕೆಂಗಲ್ ಹನುಮಂತಯ್ಯ ಅಲ್ಲಿಂದ ಮುಂದೆ ಸರಿ ಸುಮಾರು ಎರಡು ದಶಕಗಳ ಕಾಲ ರಾಷ್ಟ್ರ ರಾಜಕರಣದಲ್ಲಿ ಸಕ್ರಿಯರಾಗಿದ್ದು ಕೇಂದ್ರ ಸರಕಾರದಲ್ಲಿ ಕೈಗಾರಿಕೆ, ವಾಣಿಜ್ಯ ಹಾಗೂ ರೈಲ್ವೇ ಸಚಿವರಾಗಿ ಸೇವೆ ಸಲ್ಲಿಸಿದರು. ಕಾಂಗ್ರೆಸ್ ವಿಭಜನೆಯ ಕಾಲದಲ್ಲಿ ಅವರು ಇಂದಿರಾ ಕಾಂಗ್ರೆಸ್'ನ ಇಂಡಿಕೇಟ್ ಪರವಾಗಿ ಉಳಿದರು. ದೇಶದ ಸ್ವತಂತ್ರೋತ್ತರ ಕಾಲದ ಕರಿಚುಕ್ಕೆಯಾದ ಆಂತರಿಕ ತುರ್ತು ಪರಿಸ್ಥಿತಿಯ ನಂತರ ತೀವೃವಾಗಿ ಇಂದಿರಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ಭುಗಿಲೆದ್ದ ಜನಾಭಿಪ್ರಾಯದ ದೆಸೆಯಿಂದ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾಗಿದ್ದ ಕೆಂಗಲ್ ೧೯೭೭ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದ ( ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ತಂದೆ.) ನ್ಯಾಯಮೂರ್ತಿ ಕೆ ಸದಾನಂದ ಹೆಗ್ಡೆಯವರ ವಿರುದ್ಧ ಹೀನಾಯವಾಗಿ ಪರಾಭವಗೊಂಡರು. ಗೆದ್ದ ಕೆ ಸದಾನಂದ ಹೆಗ್ಡೇರು ಲೋಕಸಭಾ ಅಧ್ಯಕ್ಷರಾದರು ಅನ್ನೋದು ಇಲ್ಲಿ ಗಮನಾರ್ಹ. ಆ ಚುನಾವಣೆಯಲ್ಲಿ ಇಂದಿನ ಭಾಜಪದ ಪೂರ್ವಾವತಾರ ಭಾರತೀಯ ಜನಸಂಘದ ಅಭ್ಯರ್ಥಿಯಾಗಿ ಕನ್ನಡದ ಪ್ರಸಿದ್ದ ಚಿಂತಕ - ಕವಿ ಗೋಪಾಲಕೃಷ್ಣ ಅಡಿಗರು ಸ್ಪರ್ಧಿಸಿದ್ದರು. ೧೯೮೦ರ ಡಿಸೆಂಬರ್ ೧ ರಂದು ಕೆಂಗಲ್ ಕೊನೆಯುಸಿರೆಳೆದರು. ಅವರ ಕನಸಿನ ಕಟ್ಟಡ ವಿಧಾನಸೌಧವನ್ನ ಅವರ ಉತ್ತರಾಧಿಕಾರಿ ಕಡಿದಾಳು ಮಂಜಪ್ಪರ ಅವಧಿಯಲ್ಲಿ ಉದ್ಘಾಟಿಸಲಾದರೆ ಅವರ ನಂತರದ ಸರಕಾರಗಳು ಆಲ್ಲಿಂದಲೆ ಆಡಳಿತ ನಡೆಸಿದವು. ಕೆಂಗಲ್ ಹನುಮಂತಯ್ಯ ಕಡೆಗೂ ಅಲ್ಲಿಂದ ಆಡಳಿತ ನಡೆಸಲಾಗದೆ ಹೋದದ್ದು ಮಾತ್ರ ಕರ್ನಾಟಕದ ಆಧುನಿಕ ಇತಿಹಾಸದ ಅತಿದೊಡ್ಡ ವ್ಯಂಗ್ಯ.ವಾಸ್ತವದಲ್ಲಿ ಕಡಿದಾಳು ಮಂಜಪ್ಪ ಒಬ್ಬ ಒಳ್ಳೆಯ ಮುತ್ಸದ್ಧಿಯಾಗಿದ್ದು ಪ್ರಾಮಾಣಿಕತೆಯಲ್ಲಿ ಪ್ರಶ್ನಾತೀತರಾಗಿದ್ದರೂ ಜನ ಸಂಘಟನೆಯಲ್ಲಿ ಅಷ್ಟಾಗಿ ಮುಂದಿರಲಿಲ್ಲ. ಅಲ್ಲದೆ ಅದಾಗಲೆ ನಾಡಿನ ಏಕೀಕರಣದ ದಿನಾಂಕ ಘೋಷಣೆಯೂ ಆಗಿದ್ದು ಏಕೀಕೃತ ಮೈಸೂರಿನ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದಲ್ಲಿ ಪ್ರಬಲ ಲಿಂಗಾಯತ ನಾಯಕರಾಗಿದ್ದ ಚಿತ್ರದುರ್ಗ ಜಿಲ್ಲೆಯ ಸಿದ್ಧವನಳ್ಳಿಯ ನಿಜಲಿಂಗಪ್ಪನವರು ಅಧಿಕಾರ ವಹಿಸಿಕೊಳ್ಳುವುದು ಎಂದು ಪಕ್ಷದ ಹೈಕಮಾಂಡ್ ನಿರ್ಧರಿಸಿಯಾಗಿತ್ತು. ಹೀಗಾಗಿ ಹನುಮಂತಯ್ಯನವರಿಗೆ ಗೌರವಪೂರ್ವಕವಾಗಿ ರಾಜ್ಯ ರಾಜಕಾರಣದಿಂದ ನಿರ್ಗಮನ ಕೊಡಿಸಲು ಮಂಜಪ್ಪನವರನ್ನ ತತ್ಕಾಲಿಕ ನಾಯಕತ್ವ ವಹಿಸಿಕೊಳ್ಳುವಂತೆ ಮನ ಒಲಿಸಲಾಗಿತ್ತು. ವೃತ್ತಿಯಿಂದ ವಕೀಲರಾಅಗಿದ್ದ ಕಡಿದಾಳ್ ಮಂಜಪ್ಪನವರು ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ಕೊಟ್ಟ ಮರುದಿನ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಒಂದು ಪ್ರಕರಣದಲ್ಲಿ ತಮ್ಮ ಕಕ್ಷಿದಾರರ ಪರವಾಗಿ ವಾದ ಮಂಡಿಸಲು ಬಾಡಿಗೆ ರಿಕ್ಷಾದಲ್ಲಿ ಉಚ್ಛ ನ್ಯಾಯಾಲಯದ ಆವರಣಕ್ಕೆ ಬಂದಿದ್ದರು. ವೃತ್ತ ಪತ್ರಿಕೆಗಳನ್ನ ಓದುವ ಹವ್ಯಾಸವಿದ್ದ ಅ ಅಟೋದ ಚಾಲಕ ನಾಡಿನ ಮಾಜಿ ಮುಖ್ಯಮಂತ್ರಿಗಳನ್ನ ಗುರುತಿಸಿ ಇಳಿಸುವಾಗ "ಏನು ಸ್ವಾಮಿ ನೀವು ಆಟೋದಲ್ಲಿ ಪ್ರಯಾಣಿಸೋದಾ?" ಎಂದು ಬೆರಗಾಗಿ ಪ್ರಶ್ನಿಸಿದನಂತೆ. ಅವನಿಗೆ ಸರಿಯಾದ ಚಿಲ್ಲರೆ ಸಹಿತ ತಕ್ಕ ದರ ಎಣಿಸಿ ಕೊಟ್ಟ ಮಾಜಿ ಮುಖ್ಯಮಂತ್ರಿಗಳು ನಸು ನಗುತ್ತಾ "ಇದು ನನ್ನ ಹೊಟ್ಟೆ ಪಾಡು ಮಾರಾಯ! ಅದು ಜವಾಬ್ದಾರಿಯಾಗಿತ್ತು ಅಷ್ಟೆ!" ಎಂದು ಉತ್ತರಿಸಿ  ನ್ಯಾಯಾಲಯದ ಅವರಣ ಹೊಕ್ಕರಂತೆ! ಇಂದು ನೆನ್ನೆಯವರೆಗೂ ಬೋರ್ಡಿಗಿಲ್ಲದ ಪುಟಗೋಸಿ ಶಾಸಕನೂ ವಿಧಾನಸೌಧ  ಹೊಕ್ಕ ಮರುದಿನ ಹೆಲಿಕಾಪ್ಟರ್ ಏರಿಯೇ ತೇಲುವ ಹಂತಕ್ಕೆ ಆಶ್ಚರ್ಯಕರವಾಗಿ ಏರುವುದನ್ನ ಹೋಲಿಸಿ ಯೋಚಿಸಿ.


ಇಂತಹ ಪ್ರಾಮಾಣಿಕನೊಬ್ಬ ಒಂದು ಕಾಲದಲ್ಲಿ ನಮ್ಮನ್ನ ಪ್ರತಿನಿಧಿಸಿದ್ದ ಎನ್ನುವುದು ತೀರ್ಥಹಳ್ಳಿ - ಹೊಸನಗರ ಹಾಗೂ ಶೃಂಗೇರಿ ತಾಲೂಕುಗಳನ್ನೊಳಗೊಂಡಿದ್ದ ವಿಶಾಲ ವಿಧಾನಸಭಾ ಕ್ಷೇತ್ರವಾಗಿದ್ದ ಕಡಿದಾಳು ಮಂಜಪ್ಪನವರ ತವರು ಕ್ಷೇತ್ರದ ಮಂದಿಗೆ ಅತೀವ ಹೆಮ್ಮೆ. ಇಲ್ಲಿನ ಮತದಾರರೆ ತೀವೃವಾಗಿ ವಿರೋಧಿಸಿದ ಭೂಸುಧಾರಣೆ ಕಾನೂನಿಗೆ ಆರಂಭಿಕ ಚಾಲನೆ ಕೊಟ್ಟ ಮಂಜಪ್ಪ ಅನೇಕ ಭೂರಹಿತ ಬಡವರ ಬಾಳಿನ ಆಶಾಕಿರಣವಾಗಿ ಗೋಚರಿಸಿದರೂ ಸಹ ಸ್ಥಳಿಯ ಬೆಂಬಲ ಕಳೆದುಕೊಳ್ಳುವಂತಾಯಿತು. ಅನಂತರದ ಚುನಾವಣೆಯಲ್ಲಿ ಮತ್ತೊಬ್ಬ ಪ್ರಾಮಾಣಿಕ ರಾಜಕಾರಣಿ ಪ್ರಜಾ ಸೋಷಿಯಲಿಶ್ಟ್ ಪಕ್ಷದ ಅಭ್ಯರ್ಥಿ ಶಾಂತಾವೇರಿ ಗೋಪಾಲಗೌಡರ ಎದುರು ವಿಧಾನಸಭಾ ಚುನಾವಣೆಯಲ್ಲಿ ಮಂಜಪ್ಪ ಸೋತರು. ತಾವು ನಂಬಿದ ತತ್ವ ಹಾಗೂ ಆದರ್ಶಗಳಿಗೆ ಕಟಿಬದ್ಧರಾದ ಮಂಜಪ್ಪ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.


ಅನಂತರ ಅವರಿಗೆ ರಾಜಕೀಯ ಪುನರ್ವಸತಿ ಕಲ್ಪಿಸಲಿಕ್ಕೆ ಅಂದಿನ ಕೇಂದ್ರ ಸರಕಾರ ರಾಜ್ಯಪಾಲರಾಗುವ ಅವಕಾಶವನ್ನವರಿಗೆ ಕಲ್ಪಿಸಿಕೊಟ್ಟರೂ ಸಹ ಮಂಜಪ್ಪ ಅದನ್ನ ನಯವಾಗಿ ನಿರಾಕರಿಸಿದರು. ಹೀಗಾಗಿ ಬಹಳ ಒತ್ತಾಯದ ನಂತರ ಅವರು ನಿಜಲಿಂಗಪ್ಪ ಹಾಗೂ ಬಿ ಡಿ ಜತ್ತಿಯವರ ಸರಕಾರದಲ್ಲಿ ಕಂದಾಯ ಸಚಿವರಾಗಿ ಮುಂದುವರೆಯಲು ಒಪ್ಪಿಕೊಂಡರು. ಮುಂದೆ ತುರ್ತು ಪರಿಸ್ಥಿತಿಯನ್ನ ವಿರೋಧಿಸಿ ಬಾಬು ಜಗಜೀವನರಾಂ ನೇತೃತ್ವದ "ಪ್ರಜಾಪ್ರಭುತ್ವಕ್ಕಾಗಿ ಕಾಂಗ್ರೆಸ್" ಸಂಘಟನೆಯ ರಾಜ್ಯ ನಾಯಕತ್ವವನ್ನ ಅವರು ವಹಿಸಿಕೊಂಡರು. ಬೆಂಗಳೂರು ನಗರದ ರಿಚ್ಮಂಡ್ ಟೌನನ್ನ ಹೊಸೂರು ರಸ್ತೆಗೆ ಬೆಸೆಯುವ ಲ್ಯಾಂಗ್'ಫೋರ್ಡ್ ರಸ್ತೆಯನ್ನ ಅವರ ಹೆಸರಿನಿಂದ ಮರು ನಾಮಕರಣ ಮಾಡಲಾಗಿದೆ. ಕಡಿದಾಳ ಮಂಜಪ್ಪನವರು ೧೯೯೨ರಲ್ಲಿ ಕೊನೆಯುಸಿರೆಳೆದರು. ಕೇವಲ ಎಪ್ಪತ್ತಮೂರು ದಿನಗಳ ಕಾಲ ಆಡಳಿತದ ಚುಕ್ಕಾಣಿ ಹಿಡಿದಿದ್ದ ಈ ವಾಮನ ಮೂರ್ತಿ ಅಷ್ಟು ಕಿರು ಅಧಿಕಾರವಧಿಯಲ್ಲಿ ಮಾಡಿ ತೋರಿಸಿದ ಸಾಧನೆ ಮಾತ್ರ ಅಚ್ಚರಿ ಹುಟ್ಟಿಸುವಷ್ಟು ಅಪೂರ್ವ. ರಾಜ್ಯದ ಒಟ್ಟಾರೆ ಮುಖ್ಯಮಂತ್ರಿಗಳಲ್ಲಿ ಅತಿ ಕಡಿಮೆ ಅವಧಿಗೆ ಮುಖ್ಯಮಂತ್ರಿಗಳಾಗಿದ್ದ ದಾಖಲೆ ಇತ್ತೀಚೆಗೆ ಬೂಸಿಯ ತಮ್ಮ ಮೊದಲ ಅವಧಿಯಲ್ಲಿ ಕೇವಲ ಏಳು ದಿನಗಳವರೆಗೆ ಮುಖ್ಯಮಂತ್ರಿಗಳಾಗುವ ತನಕ ಕಡಿದಾಳು ಮಂಜಪ್ಪನವರ ಹೆಸರಿನಲ್ಲಿಯೇ ಇತ್ತು.


೧೯೫೬ರ ನವೆಂಬರ್ ಒಂದರಂದು ರಾಜ್ಯದ ಕಳೆದು ಹೋಗಿದ್ದ ಭಾಗಗಳೆಲ್ಲ ಮರಳಿ ಒಂದಾದವು. ಮೈಸೂರು ರಾಜ್ಯ ಎಂಬ ಹೆಸರಿನಡಿ ಈ ಹೊಸ ರಾಜ್ಯವನ್ನ ಕರೆಯಲಾಯಿತು. ನಿರೀಕ್ಷೆಯಂತೆ ಸಿದ್ಧವನಹಳ್ಳಿಯ ನಿಜಲಿಂಗಪ್ಪನವರು ಏಕೀಕೃತ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆಗೆಲ್ಲಾ ವಿಧಾನಸಭೆಯ ಅಧಿಕಾರವಧಿ ಈಗಿನಂತೆ ಐದು ವರ್ಷಗಳಾಗಿರದೆ ಆರು ವರ್ಷಗಳಿರುತ್ತಿದ್ದರಿಂದ ಮೊದಲ ವಿಧಾನಸಭೆಯ ಅವಧಿಯನ್ನೆ ಆಗ ಮುಂದುವರೆಸಲಾಗಿತ್ತು. ಹೀಗೆ ಮುಂದುವರೆದ ಸರಕಾರದ ನಾಯಕತ್ವ ಬದಲಾದರೂ ರಾಜಕೀಯ ಮೇಲಾಟಕ್ಕೇನೂ ಕೊರತೆಯಿರಲಿಲ್ಲ. ಜೊತೆಗೆ ಎರಡನೆ ವಿಧಾನಸಭಾ ಚುನಾವಣೆ ಎದುರಾಗುವ ಹೊತ್ತಿಗೆ ಉತ್ತರ ಕರ್ನಾಟಕದ ನಾಯಕ ಬಿ ಡಿ ಜತ್ತಿಯವರ ಬಣದ ಕೈ ಮೇಲಾಗಿತ್ತು. ಅಗಿನ ಕಾಂಗ್ರೆಸ್ ಪಕ್ಷದ ಚಿನ್ಹೆ ಈಗಿನಂತೆ "ಹಸ್ತ"ವಾಗಿರದೆ "ಆಲದ ಮರ" ಆಗಿತ್ತು. ಜಮಖಂಡಿ ಸಂಸ್ಥಾನದ ದಿವಾನರಾಗಿ ಅದಾಗಲೆ ಸೇವೆ ಸಲ್ಲಿಸಿದ್ದ ಬಸಪ್ಪ ದಾನಪ್ಪ ಜತ್ತಿಯವರು ಮುಖ್ಯಮಂತ್ರಿ ಗಾದಿಯ ಮೇಲೆ ತಮ್ಮ ಹಕ್ಕನ್ನು ಸಾಧಿಸಿದರು. ಹೀಗಾಗಿ ಕೇವಲ ಒಂದೂವರೆ ವರ್ಷದಲ್ಲಿ ನಿಜಲಿಂಗಪ್ಪನವರು ತತ್ಕಾಲಿಕವಾಗಿ ಪಕ್ಷದ ಆಂತರಿಕ ವ್ಯವಹಾರಗಳಲ್ಲಿ ವ್ಯಸ್ತರಾಗಿ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಕೊಂಡು ರಾಜ್ಯದಲ್ಲಿನ ಆಂತರಿಕ ಕಚ್ಚಾಟವನ್ನ ಪಾರಾಗಿ ಕೆಸರೆರಚಾಟದಿಂದ ತಪ್ಪಿಸಿಕೊಂಡರು.


ಬಸಪ್ಪ ದಾನಪ್ಪ ಜತ್ತಿಯವರಿಗೆ ಆಗಿನ ಕಾಲದಲ್ಲಿ ಪ್ರಬಲ ವರ್ಚಸ್ಸು ಇದ್ದ ಕಾರಣ ಅವರಿಗೆ ಮುಖ್ಯಮಂತ್ರಿಯ ಪಟ್ಟ ಕಟ್ಟುವುದು ಕಾಂಗ್ರೆಸ್ ಆಡಳಿತದ ಆಂತರಿಕ ಮಟ್ಟಿಗೆ ಅನಿವಾರ್ಯವೆ ಆಗಿತ್ತು. ಆವರ ಸುದೀರ್ಘ ರಾಜಕೀಯ ಅನುಭವ ಅವರ ಒತ್ತಾಸೆಗೆ ಬಂದಿತ್ತು. ಮೊದಲಿಗೆ ಜಮಖಂಡಿ ಸಂಸ್ಥಾನದ ದಿವಾನರಾಗಿದ್ದ ಜತ್ತಿಯವರು ೧೯೪೮ರಲ್ಲಿ ಅವರ ಕಿರು ಸಂಸ್ಥಾನ ಬೊಂಬಾಯಿ ಪ್ರಾಂತ್ಯದಲ್ಲಿ ಲೀನವಾದಾಗ ಆಗಿನ ಬೊಂಬಾಯಿಯ ಮುಖ್ಯಮಂತ್ರಿ ಬಿ ಜಿ ಖೇರ್'ರವರ ಸಂಸದೀಯ ಕಾರ್ಯದರ್ಶಿಯಾಗಿ ನೇಮಕವಾದರು. ಅನಂತರ ಮುಂದೆ ೧೯೫೨ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಮಖಂಡಿಯನ್ನ ಪ್ರತಿನಿಧಿಸಿ ಬೊಂಬಾಯಿ ಸರಕಾರದಲ್ಲಿ ಕಾರ್ಮಿಕ ಹಾಗೂ ಆರೋಗ್ಯ ಸಚಿವರಾಗಿಯೂ ರಾಜ್ಯದ ಏಕೀಕರಣದವರೆಗೆ ಆರು ವರ್ಷದ ಒಂದು ಅವಧಿಯಲ್ಲಿ ಸೇವೆ ಸಲ್ಲಿಸಿದರು. ಆಂದಿನ ಬೊಂಬಾಯಿ ಪ್ರಾಂತ್ಯದ ವ್ಯಾಪ್ತಿ ಇಂದಿನ ಮಹರಾಷ್ಟ್ರ, ಗುಜರಾತ್ ಹಾಗೂ ಇಂದೋರ್ ಸಂಸ್ಥಾನವನ್ನೂ ಒಳಗೊಂಡಿತ್ತು. ಅನಂತರ ಎಸ್ ನಿಜಲಿಂಗಪ್ಪನವರ ಸರಕಾರ ಅವರನ್ನ "ಭೂ ಸುಧಾರಣಾ ಆಯೋಗ"ದ ಅಧ್ಯಕ್ಷರಾಗಿ ನೇಮಿಸಿತು. ಈ ಹಂತದಲ್ಲಿ ಅವರ ಹಾಗೂ ನಿಜಲಿಂಗಪ್ಪರ ಬಣಗಳ ನಡುವೆ ಆರಂಭವಾದ ತಿಕ್ಕಾಟ ಅವರನ್ನ ಮುಖ್ಯಮಂತ್ರಿ ಗಾದಿಗೆ ತಲುಪಿಸಿ ನಾಲ್ಕು ವರ್ಷ ಅಲ್ಲಿ ಅವರನ್ನ ಭದ್ರವಾಗಿಸಿತು!. ಆದರೆ ಪಕ್ಷದ ಆಂತರಿಕ ವಿಭಾಗದಲ್ಲಿ ತಮ್ಮ ಹಿಡಿತ ಬಿಗಿ ಮಾಡಿಕೊಂಡ ನಿಜಲಿಂಗಪ್ಪನವರು ಮರಳಿ ಮುಖ್ಯಮಂತ್ರಿಯಾಗಿ ಮೈಸೂರಿಗೆ ಬಂದರೆ ಬದಲಾದ ಪರಿಸ್ಥಿತಿಯಲ್ಲಿ ಅವರ ಮಂತ್ರಿಮಂಡಲದಲ್ಲಿ ಬಿ ಡಿ ಜತ್ತಿಯವರು ಆರಂಭದಲ್ಲಿ ಹಣಕಾಸು ಖಾತೆಯಂತಹ ಪ್ರಮುಖ ಖಾತೆಯನ್ನ ಪಡೆದರೆ ಅನಂತರ ಆಹಾರ ಮತ್ತು ನಾಗರೀಕ ಪೂರೈಕೆಯಂತಹ ಅಮುಖ್ಯ ಖಾತೆಗೆ ತಳ್ಳಲ್ಪಟ್ಟರು!ಕಾಲಚಕ್ರ ವೇಗವಾಗಿ ಒಂದು ಸುತ್ತು ಸುತ್ತಿದ ಪರಿಣಾಮವಾಗಿ ಮೊದಲಿಗೆ ನಿಜಲಿಂಗಪ್ಪನವರಿಗೆ ಒದಗಿದ ಗತಿ ಇದೀಗ ಜತ್ತಿಯವರಿಗೂ ಒದಗಿ ಬಂದು ಅವರೀಗ ರಾಷ್ಟ್ರ ರಾಜಕಾರಣದತ್ತ ಮುಖ ಮಾಡ ಬೇಕಾಯಿತು! ಅವರನ್ನ ಕೇಂದ್ರ ಸರಕಾರ ಕೇಂದ್ರಾಡಳಿತ ಪ್ರದೇಶ ಪಾಂಡಿಚೆರಿಯ ಉಪ ರಾಜ್ಯಪಾಲರನ್ನಾಗಿ ನೇಮಿಸಿತು. ಅನಂತರ ಅಲ್ಲಿಂದ ಒರಿಸ್ಸಾದ ರಾಜ್ಯಪಾಲರಾಗಿ ಅವರಿಗೆ ಭಡ್ತಿಯನ್ನೂ ದಯಪಾಲಿಸಲಾಯಿತು. ಮುಂದೆ ಇಂದಿರಾಗಾಂಧಿ ಸರಕಾರ ಅವರನ್ನ ದೇಶದ ಉಪ ರಾಷ್ಟ್ರಪತಿಯನ್ನಾಗಿಯೂ ನೇಮಿಸಿತು. ಕರಾಳ ತುರ್ತು ಪರಿಸ್ಥಿತಿಯ ಕಾಲಕ್ಕೆ ಜತ್ತಿಯವರು ದೇಶದ ಉಪ ರಾಷ್ಟ್ರಪತಿಗಳಾಗಿದ್ದರು. ಆಗಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದರ ಹಟಾತ್ ನಿಧನದ ನಂತರ ಸಂವಿಧಾನ ಬದ್ಧವಾಗಿ ಅವರು ಈ ದೇಶದ ಹಂಗಾಮಿ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದರು. ಆದರೆ ತಮ್ಮ ಖಡಕ್ ನಡುವಳಿಕೆಯಿಂದ ಮುಂದೆ ದೇಶದ ರಾಷ್ಟ್ರಪತಿಯಾಗುವ ಸದಾವಕಾಶವನ್ನ ಕೂದಲೆಳೆಯಿಂದ ತಪ್ಪಿಸಿಕೊಂಡರು!ಅಲ್ಲಿಯವರೆಗೆ ಕೇಂದ್ರ ಸರಕಾರದ ಅಂಧಾದುಂಧಿಗೆ ಕೇವಲ ಠಸ್ಸೆ ಒತ್ತುವ "ಹೌದಪ್ಪ"ಗಳಾಗಿ ಎಲ್ಲಾ ಪ್ರಧಾನಿಗಳು ರಾಷ್ಟ್ರಪತಿಗಳನ್ನ ನಡೆಸಿಕೊಳ್ಲುತ್ತಿದ್ದವು. ಸೋಮನಾಥ ದೇವಾಲಯದ ಜೀರ್ಣೋದ್ಧಾರದ ಹೊರತು ಇನ್ಯಾವುದೆ ವಿಷಯದಲ್ಲಿ ಕೇಂದ್ರ ಹಾಗೂ ರಾಷ್ಟ್ರಪತಿಗಳು ಪರಸ್ಪರ ವಿರುದ್ಧ ನಿಲುವು ತೆಳೆದ ಉದಾಹರಣೆಗಳಿರಲಿಲ್ಲ. ಫಕ್ರುದ್ದೀನ ಅಲಿ ಅಹಮದರಂತೂ ಸ್ನಾನದ ಮನೆಯಿಂದ ಇನ್ನೂ ಸ್ನಾನದ ತೊಟ್ಟಿಯಲ್ಲಿ ಮಲಗಿದ್ದಂತೆಯೆ ಇಂದಿರಾರ ರಾಜಕೀಯ ಕಾರ್ಯದರ್ಶಿ ಹಕ್ಸರ್ ತಂದ ತುರ್ತು ಪರಿಸ್ಥಿತಿಯ ಶಿಫಾರಸ್ಸಿಗೆ ಕಣ್ಣು ಮುಚ್ಚಿ ಸಹಿ ಹಾಕಿ, ಮೊಹರು ಗುದ್ದಿ ಕಳಿಸಿದ್ದರು ಅನ್ನುವ ಜೋಕು ಕೂಡ ಚಾಲ್ತಿಯಲ್ಲಿದ್ದ ಸಮಯ ಅದು. ಅಂತದ್ದರಲ್ಲಿ ಪಕ್ಷದ ವಿಭಜನೆಯ ನಂತರ ತಮ್ಮ ವಿರುದ್ಧ ಇದ್ದ ಹಾಗೂ ವಿರೋಧ ಪಕ್ಷಗಳ ತೆಕ್ಕೆಯಲ್ಲಿದ್ದ ಒಂಬತ್ತು ರಾಜ್ಯ ವಿಧಾನಸಭೆಗಳನ್ನ ಒಮ್ಮೆಲೆ ವಿಸರ್ಜಿಸುವ ಶಿಫಾರಸ್ಸನ್ನ ಕೇಂದ್ರ ಸಚಿವ ಸಂಪುಟದ ಅಣತಿಯಂತೆ ಆಂದಿನ ಗೃಹ ಸಚಿವರಾದ ಚೌಧರಿ ಚರಣ್ ಸಿಂಗರು ಪ್ರಸ್ತಾಪ ಮಾಡಿದಾಗ; ಇಂದಿರಾರ ಎಂದಿನ ನಿರ್ಲಕ್ಷ್ಯದ ನಿರೀಕ್ಷೆಗೆ ಸಂಪೂರ್ಣ ವಿರುದ್ಧವಾಗಿ ಮುಲಾಜಿಲ್ಲದೆ ಸಹಿ ಹಾಕಲು ನಿರಾಕರಿಸಿ ಆದನ್ನ ಹಿಂದಿರುಗಿಸಿದ ಜತ್ತಿಯವರು ಇಂದಿರಾ ಗಾಂಧಿಯವರನ್ನ ಹೆದರದೆ ಎದುರು ಹಾಕಿಕೊಂಡರು. ತುರ್ತು ಪರಿಸ್ಥಿತಿ ಆಗಷ್ಟೆ ಮುಕ್ತಾಯಗೊಂಡು ಇಂದಿರೆಯ ಮುದ್ದಿನ ಮಗ ಸಂಜಯ್ ಪುಂಡಾಟದಲ್ಲಿ ಚುನಾವಣೆಗಳು ನಡೆಯಲಿಕ್ಕಿದ್ದ ದಿನಗಳವು. ತಮ್ಮ ಈ ನಡುವಳಿಕೆಯಿಂದ ಕೇಂದ್ರಕ್ಕೆ ಅಘಾತ ತಂದರೂ ಸಹ ಮುಂದೆ ಸಂವಿಧಾನದ ನಿರ್ದೇಶನದಂತೆ ಆದರ ಮರು ಪ್ರಸ್ತಾಪವನ್ನ ಒಪ್ಪಿಕೊಳ್ಳಲೇ ಬೇಕಾಯಿತು. ಆದರೂ ಅವರ ರಾಜಕೀಯ ಜೀವನ ಅಲ್ಲಿಗೆ ಮುಕ್ತಾಯವಾದಂತಾಯಿತು. ಸುಮಾರು ಮೂವತ್ತು ವರ್ಷಗಳ ತಮ್ಮ ರಾಜಕೀಯ ಅಜ್ಞಾತ ವಾಸದ ನಂತರ ಜತ್ತಿಯವರು ೨೦೦೨ರ ಜೂನ್ ೭ರಂದು ಕೊನೆಯುಸಿರೆಳೆದರು.


ಮುಖ್ಯಮಂತ್ರಿಯಾಗಿ ಪದವಿ ಬಿಟ್ಟಿಳಿದ ಜತ್ತಿಯವರಿಂದ ಆಧಿಕಾರವನ್ನ ನಿಜಲಿಂಗಪ್ಪರಿಗೆ ವರ್ಗಾಯಿಸುವ ಅವಧಿಯಲ್ಲಿ ಎಸ್ ಆರ್ ಕಂಠಿಯವರನ್ನ ತತ್ಕಾಲಿಕವಾಗಿ ಮುಖ್ಯಮಂತ್ರಿ ಪದವಿಗೆ ಏರಿಸಲಾಯಿತು. ಅದು ರಾಜ್ಯದ ಮೂರನೆ ವಿಧಾನಸಭೆಯ ಆರಂಭದ ದಿನಗಳಾಗಿದ್ದು ಕೇವಲ ಆರಂಭದ ೯೮ ದಿನಗಳು ಕಂಠಿಯವರು ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಹೆಚ್ಚಿನ ವಿವಾದಗಳಿಗೆ ಅವರು ಈ ಕಿರು ಅವಧಿಯಲ್ಲಿ ಎಡೆ ಮಾಡಿಕೊಡಲಿಲ್ಲ. ಮುಖ್ಯಮಂತ್ರಿಗಳಾಗುವ ಮುನ್ನ ಅವರು ರಾಜ್ಯದ ಎರಡನೆ ವಿಧಾನಸಭೆಯ ವಿಧಾನ ಸಭಾದ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಆನಂತರವೂ ಅವರು ನಿಜಲಿಂಗಪ್ಪನವರ ಸರಕಾರದಲ್ಲಿ ಶಿಕ್ಷಣ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದರು. ಅವರ ಅವಧಿಯಲ್ಲಿಯೆ ಮೈಸೂರು ವಿಶ್ವವಿದ್ಯಾಲಯವನ್ನ ವಿಭಜಿಸಿ ಬೆಂಗಳೂರು ವಿಶ್ವವಿದ್ಯಾಲಯವನ್ನ ಸ್ಥಾಪಿಸಲಾಗಿತ್ತು. ಕಿತ್ತೂರು ರಾಣಿ ಚೆನ್ನಮ್ಮ ಸೈನಿಕ ಶಾಲೆಯ ಸ್ಥಾಪನೆಯೂ ಅವರ ಕಾಲದ ಸಾಧನೆಗಳಲ್ಲಿ ಒಂದು. ಬಾಗಲಕೋಟೆ ಮೂಲದವರಾಗಿದ್ದ ಕಂಠಿಯವರು ಪಂಚ ನದಿಗಳ ಜಿಲ್ಲೆಯಾದ ಅವಿಭಜಿತ ಬಿಜಾಪುರದಲ್ಲಿ ಕೃಷ್ಣೆಗೆ ಅಡ್ಡಲಾಗಿ ಅಲಮಟ್ಟಿ ಅಣೆಕಟ್ಟು ನಿರ್ಮಿಸಲು ಕೇಂದ್ರದ ಮನ ಒಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.


ಕಂಠಿಯವರ ನಂತರ ಮತ್ತೆ ನಿಜಲಿಂಗಪ್ಪನವರಿಗೆ ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕವಾಯಿತು. ಒಂದು ಕಡೆ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಇನ್ನೊಂದೆಡೆ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ ಎರಡು ದೋಣಿಯ ಮೇಲೆ ಸಿದ್ಧವನಹಳ್ಳಿ ನಿಜಲಿಂಗಪ್ಪನವರ ರಾಜಕೀಯ ಯಾನ ಮತ್ತೆ ಮುಂದುವರೆಯಿತು. ಈ ಬಾರಿ ಬರೋಬ್ಬರಿ ಆರು ವರ್ಷಕ್ಕೆ ಕೇವಲ ಹದಿನೆಂಟು ದಿನಗಳ ಕಡಿಮೆ ಆವಧಿಗೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪ ಮೈಸೂರು ರಾಜ್ಯದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿ ಪದವಿ ಅಲಂಕರಿಸಿದ ಖ್ಯಾತಿ ಪಡೆದರೆ; ಕರ್ನಾಟಕದ ಮಟ್ಟಿಗೆ ಎರಡನೆಯ ಅತಿ ದೀರ್ಘಾವಧಿಯ ಮುಖ್ಯ ಮಂತ್ರಿಗಳೆನ್ನುವ ಹೆಚ್ಚುಗಾರಿಕೆಗೆ ಪಾತ್ರವಾದರು. ಆದರೆ ಆವರ ಎರಡನೆ ಆವಧಿಯ ಕೊನೆಯ ದಿನಗಳು ಅವರಿಗೆ ರಾಜಕೀಯವಾಗಿ ಯಾತನಾದಾಯಕವಾಗಿದ್ದವು.

ಆ ಕಾಲಕ್ಕೆ ಆವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಖಿಲ ಭಾರತ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಆ ಹುದ್ದೆಯಲ್ಲಿ ಎರಡೆರಡು ಕಂಗ್ರೆಸ್ ಅಧಿವೇಶನಗಳನ್ನೂ ಅವರು ನಡೆಸಿದ್ದರು. ಪಕ್ಷದ ಅಧ್ಯಕ್ಷರು, ಕಾಮರಾಜ ನಾಡಾರ್ ಸಹಿತ ಬಹುತೇಕ ಪಕ್ಷದ ಹಿರಿಯರೆಲ್ಲರೊಂದಿಗೂ ಇಂದಿರಾಗಾಂಧಿ ವಿರೋಧವನ್ನ ಕಟ್ಟಿಕೊಂಡಿದ್ದರು. ೧೯೬೮ರ ಬೆಂಗಳೂರಿನ ಲಾಲ್'ಬಾಗ್ ಗಾಜಿನ ಮನೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ಇಂದಿರಾರನ್ನೆ ಪಕ್ಷದಿಂದ ಅಶಿಸ್ತಿನ ಕಾರಣಕ್ಕೆ ಉಚ್ಛಾಟಿಸಿ ಪಕ್ಷದ ಅಧ್ಯಕ್ಷ ನಿಜಲಿಂಗಪ್ಪ ಆದೇಶ ಹೊರಡಿಸಿದ ಪರಿಣಾಮ ಪಕ್ಷದಲ್ಲಿ ಒಡಕುಂಟಾಗಿ ಪಕ್ಷ ಶಾಶ್ವತವಾಗಿ ಇಬ್ಬಾಗವಾಯಿತು. ಇಂದಿರಾ ಹೊರತು ಕಾರ್ಯಕಾರಣಿಯಲ್ಲಿದ್ದ ಹಿರಿಯರೆಲ್ಲ ಸಂಸ್ಥಾ ಕಾಂಗ್ರೆಸ್ ರಚಿಸಿಕೊಂಡರೂ ಮೂಲ ಪಕ್ಷದ ಬೆಂಬಲಿಗರೆಲ್ಲ ಇಂದಿರಾ ನಿಷ್ಠರಾಗಿ ಉಳಿದರು. ಅಂದಿನಿಂದ ಅವರ ಚಿನ್ಹೆ " ಆಕಳು-ಕರು" ಅಯಿತು. ಇಂದಿರಾ ಎಂಬ ಆಕಳಿನ ಕಳ್ಳ ಕರು ಸಂಜಯನ ದರ್ಬಾರಿನ ಅಧಿಕೃತ ಅಧ್ಯಾಯ ಹೀಗೆ ಆರಂಭವಾಗಿ; ಅಲ್ಲಿಗೆ ಕಾಂಗ್ರೆಸ್ ಎನ್ನುವುದು ನೆಹರೂ ಕುಟುಂಬದ ಜಹಗೀರಿನಂತಾಗಿ ಹೋಗಿ ಸಂಸ್ಥಾ ಕಾಂಗ್ರೆಸ್ ಕ್ರಮೇಣ ಸಮಾನ ಮನಸ್ಕರನ್ನ ಒಗ್ಗೂಡಿಸಿ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಮತದಾರರಿಗೆ ಗೋಚರಿಸಿದ ಜನತಾ ಪರಿವಾರ ಅನಂತರ ಜನತಾದಳವಾದದ್ದು ಈಗ ಇತಿಹಾಸ.ಅಸಲಿಗೆ ಈ ಒಡಕಿಗೆ ಕಾರಣವಾದದ್ದು ಇಂದಿರಾಗಾಂಧಿಯ ಏಕಪಕ್ಷೀಯ ಹಿಟ್ಲರ್'ಶಾಹಿ ಆಡಳಿತ ಹಾಗೂ ಪಕ್ಷದ ಅಧಿಕೃತ ಅಭ್ಯರ್ಥಿ ನೀಲಂ ಸಂಜೀವರೆಡ್ಡಿಯವರ ಪರಾಭವಕ್ಕೆ ಕಾರಣವಾದ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ್ದಿದ್ದ ವಿ ವಿ ಗಿರಿಯವರ ಪರ ಆಕೆ ಹೊರಡಿಸಿದ್ದ "ಆತ್ಮ ಸಾಕ್ಷಿಗೆ ಅನುಗುಣವಾಗಿ ಮತ" ಚಲಾಯಿಸುವ ಅಪ್ಪಣೆ. ಇದರಿಂದ ಪಕ್ಷದ ಅಧ್ಯಕ್ಷ ನಿಜಲಿಂಗಪ್ಪ ಸಹಿತ ಇತರ ಹಿರಿಯ ನಾಯಕರಿಗಾದ ಮುಖಭಂಗ. ಒಟ್ಟಿನಲ್ಲಿ ಬಹುಮತ ಕಳೆದುಕೊಂಡ ನಿಜಲಿಂಗಪ್ಪ ತಮ್ಮ ಪಟ್ಟ ಬಿಟ್ಟು ಕೆಳಗಿಳಿಯುವುದು ಅನಿವಾರ್ಯವಾಯಿತು. ಏಕೆಂದರೆ ಪಕ್ಷದ ಮೇಲೆ ಇಂದಿರಾ ಕಪಿಮುಷ್ಠಿ ಮೊದಲಿಗಿಂತ ಈಗ ಬಿಗಿಯಾಗಿತ್ತು. ಎಲ್ಲಾ ಬೆನ್ನೆಲುಬಿಲ್ಲದ ನಾಲಾಯಕ್ ನಾಯಕರು ಆಕೆಯ ಪಾಳಯ ಸೇರಿಯಾಗಿತ್ತು!


ಕುಚೋದ್ಯವೆಂದರೆ ಇವರ ಶಿಷ್ಯೋತ್ತಮರಾಗಿದ್ದು ಸಿಂಡಿಕೇಟಿನ ಸದಸ್ಯರಿಂದ "ಲವ - ಕುಶ"ರೆಂದೆ ಕರೆಸಿಕೊಳ್ಳುತ್ತಿದ್ದ ವೀರೇಂದ್ರ ಪಾಟೀಲ್ ಹಾಗೂ ರಾಮಕೃಷ್ಣ ಹೆಗಡೆಯವರಲ್ಲಿ ಲವ ಇಂದಿರಾ ಪಾಳಯಕ್ಕೆ ಹನುಮಂತನಂತೆ ಹಾರಿ ಅಲ್ಲಿ ಮುಂದಿನ ಮೂರು ವರ್ಷಗಳ ಕಾಲಕ್ಕೆ ಗದ್ದುಗೆಯೇರುವ ಅದೃಷ್ಟಶಾಲಿಯಾಗಿ ಬಿಟ್ಟ! ಅಲ್ಲಿಗೆ ನಿಜಲಿಂಗಪ್ಪನವರ ಶಕೆ ರಾಜ್ಯ ರಾಜಕಾರಣದಲ್ಲಿ ಮುಗಿದು ಮುಂದೆ ಅವರು ಜನತಾ ಪರಿವಾರದ ಮಾರ್ಗದರ್ಶಕರಾಗಿ ಮಾತ್ರ ಉಳಿದರು. ಅವಿಭಜಿತ ಕಂಗ್ರೆಸ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಏ ಹ್ಯೂಂ ಆಗಿದ್ದರೆ ಕೊನೆಯ ಅಧ್ಯಕ್ಷ ನಮ್ಮ ಎಸ್ ನಿಜಲಿಂಗಪ್ಪನವರೆ ಆಗಿದ್ದರು. ಅವರ ನಿರ್ಗಮನದೊಂದಿಗೆ ಕಾಂಗ್ರೆಸ್ಸಿನ ಶವ ಪೆಟ್ಟಿಗೆಗೆ ಕೊನೆ ಮೊಳೆ ಬಿದ್ದು ಅದು ಸಂಪೂರ್ಣ ದಿವಾಳಿಯಾಯಿತು. ಕಾಂಗ್ರೆಸ್ಸಿನ ಘನತೆ ಶಾಶ್ವತವಾಗಿ ಮಣ್ಣು ಪಾಲಾಯಿತು.


ಟಿಬೆಟಿಯನ್ ನಿರಾಶ್ರಿತರಿಗಂತೂ ಎಸ್ ನಿಜಲಿಂಗಪ್ಪ ಪ್ರಾತಃ ಸ್ಮರಣೀಯರು. ಚೀನಿಯರ ದುರಾಕ್ರಮಣದಿಂದ ದಿಕ್ಕೆಟ್ಟು ಭಾರತಕ್ಕೆ ಓಡಿ ಬಂದಿದ್ದ ಟಿಬೇಟಿಯನ್ನರಿಗೆ ಅತ್ಯಧಿಕ ಭೂಮಿಯನ್ನ ದಯಪಾಲಿಸಿ ತಮ್ಮ ವಸತಿ ಕ್ಯಾಂಪ್'ಗಳನ್ನ ಸ್ಥಾಪಿಸಿಕೊಳ್ಲಲು ಒತ್ತಾಸೆಯಾದದ್ದೆ ಮುಖ್ಯಮಂತ್ರಿ ನಿಜಲಿಂಗಪ್ಪನವರು. ಅವರ ಕೃಪೆಯಿಂದ ಬೈಲುಕುಪ್ಪೆ, ಮುಂಡಗೋಡ ಹಾಗೂ ಕೊಳ್ಳೆಗಾಲದಲ್ಲಿ ಟಿಬೇಟಿಯನ್ನರು ನೆಮ್ಮದಿಯ ಬದುಕನ್ನ ಕಟ್ಟಿಕೊಳ್ಳುವಂತಾಯಿತು. ತಮ್ಮ ಅಧಿಕಾರವಧಿಯ ನಂತರ ಅಜ್ಞಾತರಂತೆ ಚಿತ್ರದುರ್ಗದಲ್ಲಿಯೆ ಬಾಳಿದ ಎಸ್ ನಿಜಲಿಂಗಪ್ಪನವರು ೨೦೦೦ದ ಅಗೋಸ್ತು ೮ರಂದು ಕೊನೆಯುಸಿರೆಳೆದರು. ವೀರೆಂದ್ರ ಪಾಟೀಲರು ಮೈಸೂರು ರಾಜ್ಯದ ಮುಖ್ಯಮಂತ್ರಿಗಳ ಪಟ್ಟಿಯಲ್ಲಿದ್ದರೂ ಅವರ ಎರಡನೆ ಅವಧಿ ಕರ್ನಾಟಕ ರಾಜ್ಯದಲ್ಲಿ ನಡೆದಿದ್ದರಿಂದ ಅವರ ಬಗ್ಗೆ ಮುಂದಿನ ಕಂತಿನಲ್ಲಿ ತಿಳಿದಿದ್ದನ್ನ ಹೇಳುವೆ.


ನಿಜಲಿಂಗಪ್ಪನವರ ನಿರ್ಗಮನದೊಂದಿಗೆ ಮೈಸೂರು ರಾಜ್ಯದ ಮುಖ್ಯಮಂತ್ರಿಗಳ ಕಥೆ ಕೊನೆಯಾಯಿತು. ಆ ಕಾಲದಲ್ಲಿ ಬಂಡಾಯ, ಭಿನ್ನಾಭಿಪ್ರಾಯ ಚಾಲ್ತಿಯಲ್ಲಿದ್ದರೂ ಈಗಿನಷ್ಟು ಹೇಸಿಗೆ ಹುಟ್ಟಿಸುವ ಹಾಸ್ಯಾಸ್ಪದ ಸಂಗತಿ ಅದಾಗಿರಲಿಲ್ಲ. ರಾಜಕೀಯಕ್ಕೆ ಒಂದು ಘನತೆ ಇತ್ತು. ಕಂಡ ಕಂಡಲ್ಲಿ - ಹಾದಿ ಬೀದಿ ರಂಪ ಆಗುತ್ತಿದ್ದುದು ಅಪರೂಪ. ಭ್ರಷ್ಟಾಚಾರ ಈಗಿನಷ್ಟು ಭೀಕರ ಭೂತವಾಗಿರಲಿಲ್ಲ. ಸಾರ್ವಜನಿಕ ಕಾಮಗಾರಿಗಳಲ್ಲಿ ಕದಿಯುವಾಗ ರಾಜಕಾರಣಿಗಳು ಅಂಜುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಸಮಾಜಘಾತುಕ ಶಕ್ತಿಗಳು ಅಧಿಕಾರ ಕೇಂದ್ರದ ಸುತ್ತ ಸುತ್ತುವ ಗ್ರಹಗಳಾಗಿರಲಿಲ್ಲ ಹಾಗೂ ಗೂಂಡಾಗಳನ್ನ ಜನಪ್ರತಿನಿಧಿಗಳಾಗಿಸುವ ಸಂಪ್ರದಾಯವನ್ನ ಪಕ್ಷಗಳು ಇನ್ನೂ ಆರಂಭಿಸಿರಲಿಲ್ಲ. ಇನ್ನೂ ಶೈಶವಾವಸ್ಥೆಯಲ್ಲಿದ್ದ ಕರುನಾಡಿನ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅನೇಕ ಜನೋಪಕಾರಿ ಯೋಜನೆಗಳು ರೂಪಿಸಲ್ಪಟ್ಟವು. ಶ್ರೀಸಾಮಾನ್ಯರ ನಿತ್ಯ ಬಳಕೆಯ ವಸ್ತುಗಳ ಬೆಲೆ ಹಿಡಿತದಲ್ಲಿತ್ತು. ಸರಕಾರದ ಕಠಿಣ ಕ್ರಮಗಳಿಗೆ ಪುಂಡ ಪೋಕರಿಗಳು ಸ್ವಲ್ಪವಾದರೂ ಅಂಜುತ್ತಿದ್ದರು. ಈಗ ಪರಿಸ್ಥಿತಿ ಪೂರ್ಣ ವಿಭಿನ್ನವಾಗಿದೆ. ಮೈಸೂರು ರಾಜ್ಯ ಕರ್ನಾಟಕವಾಗುತ್ತಲೆ ಈ ಎಲ್ಲಾ ನಾಟಕಗಳು ಆರಂಭವಾದವು. ಮುಂದೆ ಅವುಗಳನ್ನ ಖಂಡಿತಾ ಕೊರೆಯುತ್ತೇನೆ.

06 November 2013

ಕನ್ನಡದ ಸಿರಿದೇವಿ ಬರದೇವಿಯಾಗದಿರಲಿ.......
ಹರಿದು ಹಂಚಿ ಹೋಗಿದ್ದ ಕನ್ನಡಿಗರು ಕರುನಾಡು ಎನ್ನುವ ದೊಡ್ಡಾಲ ಮರದ ಬಿಳಲುಗಳಾಗಿ ಮತ್ತೆ ಜೋತು ಬೀಳುವ ಹೊತ್ತಿಗೆ ವಾಸ್ತವದಲ್ಲಿ ಆದದ್ದು "ಕನ್ನಡ ಮಾತನಾಡುವ ಪ್ರದೇಶ"ಗಳ ಏಕೀಕರಣವ? ಇಲ್ಲಾ ಹಳೆ ಮೈಸೂರಿನ ಭಾಗವಾದ ಇನ್ನುಳಿದ ಎಲ್ಲಾ ಕನ್ನಡಿಗ ನೆಲಗಳ ಮೈಸೂರು ಸಂಸ್ಥಾನದ ಜೊತೆಗೆ ವಿಲೀನಿಕರಣವ? ಅನ್ನುವ ಗೊಂದಲ ಮಾತ್ರ ಇವತ್ತಿಗೂ ಜಾರಿಯಲ್ಲಿದೆ. ಅಂದಿನ ಮೈಸೂರು ಸಂಸ್ಥಾನದ ರಾಜಕಾರಣಿಗಳ ಸೊಕ್ಕಿನ ಸ್ವಾರ್ಥಿ ನಡವಳಿಕೆಗಳು ಈ ಬಗೆಯ ಗೊಂದಲ ಮೂಡಲಿಕ್ಕೆ ನೀರು - ಗೊಬ್ಬರ ಎರೆಯುವಂತಿದ್ದವು. ವಾಸ್ತವವಾಗಿ ಕರ್ನಾಟಕ ಏಕೀಕರಣದ ಬೀಜಮಂತ್ರ ಮೊದಲಿಗೆ ಹೊಮ್ಮಿ ಹೊರಟಿದ್ದೆ ಬಳ್ಳಾರಿ ಹಾಗೂ ಧಾರವಾಡಗಳಲ್ಲಿ. ಆಲೂರು ವೆಂಕಟರಾಯರ ಈ ಕನವರಿಕೆಗೆ ಅಂದಿನ ಯುವ ಹೋರಾಟಗಾರರಾದ ಪಾಟೀಲ ಪುಟ್ಟಪ್ಪ, ಡಿ ಎಸ್ ಕರ್ಕಿ ಮುಂತಾದವರ ಹಿಮ್ಮೇಳವೂ ಸಿಕ್ಕಿತು.


ಅದರೆ ಏಕೀಕರಣದ ಕನಸು ನನಸಾದ ಮೇಲೆ ಅದದ್ದಾದರೂ ಏನು? ಮೈಸೂರು ಸಂಸ್ಥಾನದ ರಾಜಧಾನಿ ಬೆಂಗಳೂರನ್ನ ವಾಸ್ತವ ಪ್ರಜ್ಞೆಯಿಲ್ಲದೆ ಹೊಸ ರಾಜ್ಯದ ರಾಜಧಾನಿಯನ್ನಾಗಿ ಅಯ್ಕೆ ಮಡಿಕೊಳ್ಳಲಾಯಿತು, ಬೊಂಬಾಯಿಯಿಂದ ಮರಳಿ ಸಿಕ್ಕ ಪ್ರಾಂತ್ಯಗಳು ಅನಗತ್ಯವಾಗಿ ಕಳೆದುಕೊಂಡಿದ್ದ ಅನೇಕ ಅಚ್ಚ ಕನ್ನಡದ ಪ್ರದೇಶಗಳನ್ನ ನ್ಯಾಯವಾದ ಪೂರ್ಣ ಹಕ್ಕು ಸಾಧಿಸದೆ ಉಢಾಫೆಯಿಂದ ಹೊಸತಾಗಿ ರೂಪಿತವಾದ ಬೊಂಬಾಯಿ ಪ್ರೆಸಿಡೆನ್ಸಿಗೆ ಬಿಟ್ಟು ಕೊಡಲಾಯಿತು, ಮದರಾಸು ಪ್ರಾಂತ್ಯದಿಂದ ಮರಳಿ ಸಿಕ್ಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಸರಗೋಡು ತಾಲೂಕನ್ನ ನುಂಗಿ ಹಾಕುವ ಮಲಯಾಳಿ ಪ್ರಭಾವಿಗಳ ಹುನ್ನಾರದ ಅರಿವಿದ್ದೂ ಅಲ್ಲಿನ ಸ್ಥಳಿಯ ಹೋರಾಟಕ್ಕೆ ಬಲ ತುಂಬದೆ ಆಮಾಯಕರಂತೆ ಕಣ್ಣುಮುಚ್ಚಿ ಕೂತುಕೊಳ್ಳಲಾಯಿತು,


ಬಳ್ಳಾರಿಯ ಮೇಲೆ ಆಂಧ್ರದ ಹಕ್ಕು ಸಾಧನೆಯನ್ನ ಆಲೂರು ವೆಂಕಟರಾಯರ, ಕೋ ಚೆನ್ನಬಸಪ್ಪನವರ ಸಹಿತ ಎಲ್ಲಾ ಹೋರಾಟಗಾರರು ಪ್ರಾಬಲವಾಗಿ ವಿರೋಧಿಸಿದಾಗ ಆಲೂರು ಮತ್ತು ರಾಯದುರ್ಗ ತಾಲೂಕುಗಳನ್ನ ಮಡ್ದರಂತೆ ತೆಲುಗರಿಗೆ ದಾನ ಮಾಡಿ ಬಳ್ಳಾರಿಯನ್ನ ಉಳಿಸಿಕೊಳ್ಳುವ ಖಾಜಿ ನ್ಯಾಯ ಮಾಡಲಾಯಿತು, ಅದು ಹೇಗೆ ನೋಡಿದರೂ ಮಡಕಸಿರ ನಮ್ಮದೆ ಆಗಬೇಕಿತ್ತು. ಆದರೆ ಅದನ್ನ ಸುಲಭವಾಗಿ ಆಂಧ್ರದ ತೆಕ್ಕೆಗೆ ಕೊಟ್ಟು ಪಾವಗಡವನ್ನ ಆತಂತ್ರ ಮಾಡಲಾಯಿತು, ಹೊಸೂರನ್ನ ತಮಿಳು ರಾಜಕಾರಣಿಗಳನ್ನ ಓಲೈಸಲು ಅನ್ಯಾಯವಾಗಿ ತಮಿಳರ ಮಡಿಲು ತುಂಬಿದರೆ, ಊಟಿ, ನೀಲಗಿರಿಯ ಬಡಗರನ್ನ ಶಾಸ್ತ್ರಕ್ಕೂ ಅವರನ್ನೊಂದು ಮಾತನ್ನೂ ಕೇಳದೆ ತಮಿಳರ ಕಪಿಮುಷ್ಟಿಗೆ ಸಿಲುಕಿಸಲಾಯಿತು. ಒಟ್ಟಿನಲ್ಲಿ ತಮ್ಮ ಹೈಕಮಾಂದ್ ಪುಂಗಿಗೆ ತಲೆಯಾಡಿಸುವ ನಿಷ್ಠೆಯ ಹಲ್ಲಿಲ್ಲದ ಹಾವುಗಳಂತೆ ತಮ್ಮೆಲ್ಲ ಹಕ್ಕನ್ನ ಇನ್ಯಾರ್ಯಾರಿಗೋ ಬಿಟ್ಟು ಕೊಟ್ಟು ಹಳೆ ಮೈಸೂರಿನ ರಾಜಕಾರಣಿಗಳು ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳುವುದರಲ್ಲಿ ಮಗ್ನರಾದದ್ದು ಮಾತ್ರ ಅಕ್ಷಮ್ಯ.


ನಾಡಿನ ಏಕೀಕರಣದ ಕುರಿತು ಹಳೆ ಮೈಸೂರಿನ ರಾಜಕಾರಣಿಗಳ ನಡುವಳಿಕೆ ಅದೇನೆ ಇರಲಿ ಇಲ್ಲಿನ ಪ್ರಜ್ಞಾವಂತರು ಹಾಗೂ ಚಿಂತಕರು ಈ ಕುರಿತು ವಿಪರೀತ ಉತ್ಸಾಹದಲ್ಲಿದ್ದರು. ಕನ್ನಡದ ಎರಡನೆ ರಾಷ್ಟ್ರಕವಿ ಕುವೆಂಪು ಅವರಂತೂ ನಾಡಿನ ಮುಂದಿನ ಹಿತದೃಷ್ಟಿಯನ್ನ ಗಮನದಲ್ಲಿರಿಸಿಕೊಂಡು ನಾಡಿನ ನಡು ಮಧ್ಯವಿರುವ ದಾವಣಗೆರೆಯನ್ನ ನೂತನ ರಾಜ್ಯದ ರಾಜಧಾನಿಯನ್ನಾಗಿಸಿಕೊಳ್ಳುವ ವಿವೇಕದ ಸಲಹೆಯನ್ನ ನೀಡಿದ್ದರು. ಆದರೆ ಸ್ಥಳಿಯ ರಾಜಕಾರಣಿಗಳು ಅದಕ್ಕೆ ಗಮನವನ್ನೆ ಕೊಡಲಿಲ್ಲ. ಸಾಹುಕಾರ್ ಚನ್ನಯ್ಯ, ಸಿದ್ಧವೀರಪ್ಪ, ದಾಸಪ್ಪ, ಸಿದ್ಧಯ್ಯ, ಎಸ್ ನಿಜಲಿಂಗಪ್ಪ, ಕಡಿದಾಳು ಮಂಜಪ್ಪ, ಕೊಪ್ಪದ ದ್ಯಾವೇಗೌಡ್ರು ಹೀಗೆ ಯಾರೊಬ್ಬರೂ ಇದನ್ನ ಪರಿಗಣಿಸದೆ ಒಳಗೊಳಗೆ ಬೆಂಗಳೂರನ್ನೆ ರಾಜಧಾನಿಯಾಗಿ ಅಭಿವೃದ್ಧಿ ಪಡಿಸುವಂತೆ ತಮ್ಮ ನಾಯಕ ಕೆಂಗಲ್ ಹನುಮಂತಯ್ಯನವರನ್ನ ಬೆಂಬಲಿಸಿದರು. ಅಲ್ಲಿಯವರೆಗೂ ರಾಜ್ಯ ಸಚಿವಾಲಯ ಇದ್ದುದ್ದು, ಮೈಸೂರು ಜವಾಬ್ದಾರಿ ಸರಕಾರದ ಶಾಸನ ಸಭೆ ಹಾಗೂ ಪ್ರಜಾ ಪ್ರತಿನಿಧಿ ಸಭೆಗಳು ನೆರೆಯುತ್ತಿದ್ದುದು ಇಂದು ರಾಜ್ಯ ಉಚ್ಛ ನ್ಯಾಯಾಲಯವಾಗಿರುವ ಕೆಂಪು ಬಣ್ಣದ ಅಠಾರ ಕಛೇರಿಯಲ್ಲಿ. ಸಚಿವಾಲಯದ ಜೊತೆ ಜೊತೆಗೆ ರಾಜ್ಯ ಆಡಳಿತಕ್ಕೆ ಸಂಬಂಧಿಸಿದ ಹದಿನೆಂಟು ವಿವಿಧ ಬಗೆಯ ಕಛೇರಿಗಳು ಅಲ್ಲಿಂದಲೆ ಕಾರ್ಯ ನಿರ್ವಹಿಸುತ್ತಿದ್ದುದ್ದರಿಂದ ಅದನ್ನ "ಅಠಾರ ಕಛೇರಿ" ಎಂದು ಕರೆಯಲಾಗುತ್ತಿತ್ತು. ಮೈಸೂರು ಸಾಂಸ್ಥಾನದ ಆಡಳಿತವರ್ಗಕ್ಕೆ ಅದು ಸಾಕಾಗುತ್ತಿದ್ದರೂ ಮುಂದೆ ಏಕೀಕರಣವನ್ನ ಗಮನದಲ್ಲಿರಿಸಿಕೊಂಡ ಸಂಸ್ಥಾನದ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯನವರು ಕಬ್ಬನ್ ಉದ್ಯಾನವನದ ಇನ್ನೊಂದು ಪಾರ್ಶ್ವದಲ್ಲಿ ಅಠಾರ ಕಛೇರಿಯ ಎದುರಿಗೆ ಇಂದಿನ ವಿಧಾನಸೌಧವನ್ನ ಕಟ್ಟಿಸಿದರು. ಅನಂತರ ಅಠಾರ ಕಛೇರಿಯನ್ನ ನ್ಯಾಯಾಂಗಕ್ಕೆ ಹಸ್ತಾಂತರಿಸಲಾಯಿತು. ಈ ಎರಡು ಕಟ್ಟಡಗಳ ನಡುವಿನ ಜಾಗದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ರಾಜಪಥದ ಮಾದರಿಯಲ್ಲಿ ಡಾ ಆಂಬೇಡ್ಕರ್ ಬೀದಿಯನ್ನ ವಿನ್ಯಾಸಗೊಳಿಸಲಾಯಿತು.


೭೨೫ ಕಿಲೋಮೀಟರ್ ಅಂತರ ಬೆಂಗಳೂರಿನಿಂದ ಬೀದರಿಗಿದ್ದರೆ, ಅದೇ ಬೀದರಿನಿಂದ ದಾವಣಗೆರೆಗೆ ಕೇವಲ ೪೨೦ ಕಿಲೋಮೀಟರ್ ಅಂತರವಿದೆ. ೫೯೦ ಕಿಲೋಮೀಟರ್ ಅಂತರ ದಾವಣಗೆರೆಯಿಂದ ಬೆಳಗಾವಿಗಿದ್ದರೆ ಅದೆ ಬೆಳಗಾವಿಯಿಂದ ಬೆಂಗಳೂರನ್ನ ಮುಟ್ಟಲಿಕ್ಕೆ ೫೦೯ ಕಿಲೋಮೀಟರ್ ಮಾರ್ಗ ಕ್ರಮಿಸಬೇಕು. ೨೧೩ ಕಿಲೋಮೀಟರ್ ದೂರದಲ್ಲಿ ದಾವಣಗೆರೆ ಮಂಗಳೂರಿನಿಂದ ಇದ್ದರೆ ಅದೆ ಬೆಂಗಳೂರಿಗೆ ಮಂಗಳೂರು ೩೭೦ ಕಿಲೋಮೀಟರ್ ದೂರದಲ್ಲಿದೆ. ಬಿಜಾಪುರ ಬೆಂಗಳೂರಿನಿಂದ ೫೩೧ ಕಿಲೋಮೀಟರ್ ಅಂತರದಲ್ಲಿದ್ದರೆ ಅದೆ ದಾವಣಗೆರೆ ಬಿಜಾಪುರಕ್ಕೆ ಕೇವಲ ೨೭೧ ಕಿಲೋಮೀಟರ್'ಗಳ ಅಂತರದಲ್ಲಿದೆ. ಮಡಿಕೇರಿ ಬೆಂಗಳೂರಿಗೆ ೨೫೮ ಕಿಲೋಮೀಟರ್ ದೂರದಲ್ಲಿದ್ದರೆ ದಾವಣಗೆರೆ ೩೧೮ ಕಿಲೋಮೀಟರ್ ದೂರದಲ್ಲಿದೆ. ಕಾರವಾರ ಬೆಂಗಳೂರಿಗೆ ೫೩೭ ಕಿಲೊಮೀಟರ್ ದೂರದಲ್ಲಿದ್ದರೆ ಅದೆ ದಾವಣಗೆರೆ ಕೇವಲ ೧೯೬ ಕಿಲೋಮೀಟರ್ ದೂರದಲ್ಲಿದೆ. ಮೈಸೂರು ಬೆಂಗಳೂರಿನಿಂದ ೧೪೦ ಕಿಲೋಮೀಟರ್ ದೂರದಲ್ಲಿದ್ದಿದ್ದರೆ ದಾವಣಗೆರೆ ೩೧೯ ಕಿಲೋಮೀಟರ್ ದೂರದಲ್ಲಿದೆ ಆಷ್ಟೆ.
ಅದು ಹೇಗೆ ನೋಡಿದರೂ ದಾವಣಗೆರೆ ಬೆಂಗಳೂರಿಗಿಂತ ಪ್ರಸ್ತಾವಿತ ಏಕೀಕೃತ ಹೊಸ ರಾಜ್ಯಕ್ಕೆ ದಾವಣಗೆರೆ ಎಲ್ಲಾ ದೃಷ್ಟಿಯಿಂದಲೂ ಸೂಕ್ತವಾಗಿತ್ತು. ಸದ್ಯದ ರಾಜಧಾನಿ ಬೆಂಗಳೂರಿಗಿಂತ ದಾವಣಗೆರೆ ಹಳೆ ಮೈಸೂರು ಭಾಗದ ದಕ್ಷಿಣದ ಜಿಲ್ಲೆಗಳಿಗೆ ಹೆಚ್ಚೆಂದರೆ ಒಂದು ನೂರು ಕಿಲೋಮೀಟರ್'ಗಳಷ್ಟು ಬಳಸಾಗುತ್ತಿತ್ತೇ ಹೊರತು ಪ್ರಸ್ತಾವಿತ ಹೊಸ ರಾಜ್ಯದ ಉಳಿದೆಲ್ಲಾ ಭಾಗಗಳಿಗೆ ದಾವಣಗೆರೆ ಕೇಂದ್ರ ಸ್ಥಾನದಲ್ಲಿರುವುದರಿಂದ ಸಂಪರ್ಕದ ದೃಷ್ಟಿಯಿಂದ ಶ್ರೀಸಾಮನ್ಯನಿಗೆ ರಾಜ್ಯದ ರಾಜಧಾನಿ ಸುಲಭ ಲಭ್ಯವಾಗುತ್ತಿತ್ತು. ಆದರೆ ಕುವೆಂಪು ಹೇಳಿದ ವಿವೇಕಕ್ಕೆ ಈ ಅತಿ ಬುದ್ಧಿವಂತ ಸ್ವಾರ್ಥಿಗಳೆಲ್ಲ ಕಿವುಡಾಗಿದ್ದರು. ಜಾತಿ ಲೆಕ್ಖಾಚಾರದಲ್ಲಿ ಏಕೀಕೃತ ಕರ್ನಾಟಕದಲ್ಲಿ ಲಿಂಗಾಯತ ಮತದಾರರ ಸಂಖ್ಯೆ ಸಹಜವಾಗಿ ಒಕ್ಕಲಿಗ ಮತದಾರರಿಗಿಂತ ಹೆಚ್ಚಾಗುತ್ತಿದ್ದು ಎಲ್ಲಿ ತಮ್ಮ ಏಕಸಾಮ್ಯಕ್ಕೆ ಧಕ್ಕೆ ಒದಗುತ್ತದೋ ಎನ್ನುವ ಆತಂಕದಲ್ಲಿದ್ದ ಅವರೆಲ್ಲಾ ಒಂದೊಮ್ಮೆ ದಾವಣಗೆರೆ ರಾಜಧಾನಿ ಆದಲ್ಲಿ ಸಹಜವಾಗಿ ಲಿಂಗಾಯತರ ಕೈಮೇಲಾಗುತ್ತದೆ ಎನ್ನುವ ಸಲ್ಲದ ಆತಂಕಕ್ಕೆ ಒಳಗಾಗಿ ಈ ಸಮಯೋಚಿತ ಸಲಹೆಯನ್ನ ತಿರಸ್ಕರಿಸಿದ ಫಲವನ್ನ, ಇಂದು ನಾವು ಬೆಂಗಳೂರಿಗರು ಓತಪ್ರೋತವಾಗಿ ನಗರ ಬೆಳೆಯುತ್ತಿರುವ ಪರಿಯನ್ನ ಕಂಡು ಆಸಹಾಯಕವಾಗಿ ಕೂತು ಎರಡೂ ಕೈಗಳಿಂದ ಅದರ ಫಲವನ್ನ ಉಣ್ಣುತ್ತಿದ್ದೇವೆ.


ಈ ಸ್ವಾರ್ಥಿಗಳ ಹುನ್ನಾರವನ್ನ ಖಂಡಿಸಿ ಕುವೆಂಪು "ಅಖಂಡ ಕಾರ್ನಾಟಕಮಲ್ತೋ...." ಎನ್ನುವ ಕವನ ಬರೆದು ಅಂದಿನ ಮಂತ್ರಿ ಮಂಡಲದಿಂದ ಕಾನೂನು ಕ್ರಮ ಎದುರಿಸುವ ಬೆದರಿಕೆಗೆ ಗುರಿಯಾಗಿದ್ದರೆ. ತಮ್ಮ ಮನೆ ಮನಗಳನ್ನ ಸರಾಸಗಟಾಗಿ ಮಲಯಾಳಿಗಳಿಗೆ ಅಡವಿಡುವ ರಾಜಕಾರಣಿಗಳ ಹುನ್ನಾರದ ಸುಳಿವರಿತ ಕವಿ ಕಯ್ಯಾರ ಕಿಂಙ್ಞಣ್ಣ ರೈಗಳು ಕಾಸರಗೋಡಿನ ದುಸ್ಥಿಗೆ ಮರುಗಿ "ಬೆಂಕಿ ಬಿದ್ದಿದೆ ಮನೆಗೆ ಓಡಿ ಬನ್ನಿ" ಎನ್ನುವ ಕವನ ಬರೆದು ಅರಣ್ಯ ರೋಧನಗೈದರು. ಇವೆಲ್ಲಕ್ಕೂ ನಮ್ಮ ಹಳೆ ಮೈಸೂರಿನ ಪ್ರಭಾವಿ ಮುಖಂಡರು ತಮ್ಮ ಪಕ್ಷಬೇಧ ಮರೆತು ಕಿವುಡು ನಟಿಸಿದರೆ ಸಾಹಿತ್ಯ ಹಾಗೂ ಆಗಷ್ಟೆ ನೆಲೆ ಕಂಡುಕೊಳ್ಳುತ್ತಿದ್ದ ಕನ್ನಡ ಸಾಂಸ್ಕೃತಿಕ ಕ್ಷೇತ್ರಗಳು ಮಾತ್ರ ತಮ್ಮ ಬೆಂಬಲವನ್ನ ಸೂಚಿಸಿದವು. ಆದರೆ ಇದರಿಂದ ನಾಡಿನ ಉದ್ಧಾರಕ್ಕೆ ಅಷ್ಟೇನೂ ಉಪಯೋಗವಾಗಲಿಲ್ಲ. ಏಕೆಂದರೆ ನಾಡಿನ ಪುನರ್ವಿಂಗಡನೆ ಒಂದು ರಾಜಕೀಯ ಪ್ರಕ್ರಿಯೆ ಆಗಿದ್ದು ಸಾಹಿತ್ಯ ಹಾಗೂ ಸಂಸ್ಕೃತಿಯ ಪ್ರಭಾವ ಅಲ್ಲಿ ಗೌಣ.ಫಜಲ್ ಆಲಿ ಆಯೋಗ ಹಾಗೂ ಮಹಾಜನ್ ಆಯೋಗಗಳ ಶಿಫಾರಸ್ಸಿನ ಹೊರತಾಗಿಯೂ ನೆಹರೂ ಛೇಲ ಪಣಿಕ್ಕಾರ್ ತನ್ನ ಪ್ರಭಾವ ಬಳಸಿ ಚಂದ್ರಗಿರಿ ಹೊಳೆಯಿಂದ ಉತ್ತರದ ಭಾಗದ ಕಾಸರಗೋಡು ತಾಲೂಕನ್ನ ಕರ್ನಾಟಕಕ್ಕೂ, ಅದರ ದಕ್ಷಿಣ ಭಾಗದ ಮೂರನೆ ಒಂದು ಭಾಗ ತಾಲೂಕನ್ನ ಕೇರಳಕ್ಕೂ ಹಂಚುವುದು ಎಂಬ ರಾಜಿ ಸೂತ್ರ ಆಗಿದ್ದ ಮೇಲೂ ಏಕಪಕ್ಷೀಯವಾಗಿ ಕಾಸರಗೋಡನ್ನ ಕೇರಳದ ಎಲ್ಲೆಯೊಳಗೆ ಸೇರಿಸುವ ಧ್ರಾಷ್ಟ್ಯ ಮೆರೆದು ಬಿಟ್ಟ. ಮಡಕಸಿರದಿಂದ ಸುತ್ತುವರೆದಿರುವ ಪಾವಗಡ ಮಡಕಸಿರ ಹಾದಿಯ ಹೊರತು ಕರುನಾಡಿನ ಜೊತೆಗೆ ಭೂಸಂಪರ್ಕ ಕಳೆದುಕೊಂಡು ದ್ವೀಪವಾಗುತ್ತಿತ್ತು. ಮಡಕಸಿರವೂ ಕನ್ನಡ ಬಹುಸಂಖ್ಯಾತರ ವಲಯವೆ ಆಗಿದ್ದು ಅದನ್ನ ಪಕ್ಕದ ಆಂಧ್ರರ ಪಾಲು ಮಾಡುವ ಅಗತ್ಯ ಇರಲೆ ಇಲ್ಲ. ಇಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಮೂಲಕ ಮಾತ್ರ ರಾಜ್ಯದ ಭೂಭಾಗದೊಂದಿಗೆ ನೂಲಿನಂತೆ ಬೆಸೆದುಕೊಂಡಿರುವ ಪಾವಗಡ ಮೊನ್ನಿನ ಅಖಂಡಾಂಧ್ರ ಪರ ಪ್ರತಿಭಟನೆಯ ಹೊತ್ತಿನಲ್ಲಿ ಅನುಭವಿಸಿದ ಕಷ್ಟ ನಷ್ಟಗಳಿಗೆ ಅಂದು ರಾಜ್ಯವನ್ನ ಬೇಕಾ ಬಿಟ್ಟಿ ರೂಪಿಸಿದ ದೂರದೃಷ್ಟಿಯಿದ್ದಿರದ ಸ್ವಾರ್ಥ ರಾಜಕಾರಣಿಗಳೆ ನೇರ ಹೊಣೆ.


ಇನ್ನು ಬೆಳಗಾವಿ ಸಹಿತ ಉತ್ತರಕನ್ನಡ ಜಿಲ್ಲೆಯಾದ್ಯಂತ ತಮ್ಮ ಹಕ್ಕು ಸಾಧಿಸುತ್ತಿದ್ದ ರಾಜ್ಯ ಪುನರ್ವಿಂಗಡನೆಯಿಂದ ಅತೃಪ್ತರಾದ ಮಹಾರಾಷ್ಟ್ರಿಗರ ಬಾಯಿ ಮುಚ್ಚಿಸಲು ಜತ್ತ, ಅಕ್ಕಲಕೋಟೆ, ಸೊಲ್ಲಾಪುರ, ಡಂಕಣಿಕೋಟೆ ಕೊಲ್ಲಾಪುರವನ್ನ ಫಜಲ್ ಅಲಿ ಆಯೋಗದ ಮೂಲಕ ಮಹಾರಾಷ್ಟ್ರಕ್ಕೆ ಬಿಟ್ಟುಕೊಟ್ಟಿದ್ದರು. ಐತಿಹಾಸಿಕವಾಗಿ ನೋಡುವುದಾದರೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುವುದು ಆತ್ತಲಾಗಿರಲಿ ಕೊಂಕಣ, ಮರಾಠವಾಡ ಹಾಗೂ ವಿದರ್ಭಸಹಿತ ಇಡಿ ಮಹಾರಾಷ್ಟ್ರವೆ ಕರ್ನಾಟಕಕ್ಕೆ ಸೇರಬೇಕು! ಆದರೂ ಅವರ ವರಾತ ನಿಲ್ಲದಿದ್ದಾಗ ಅವರದ್ದೆ ಸಲಹೆಯ ಮೇರೆಗೆ ಮರಾಠಿ ಮಾತೃಭಾಷೆಯ ನ್ಯಾಯಮೂರ್ತಿ ಮಹಾಜನ್ ಆಯೋಗವನ್ನ ಇದರ ಪುನರ್ ಪರಿಶೀಲನೆಗೆ ಒಪ್ಪಿಸಲಾಯಿತು. ಅದೇನೆ ಫಲಿತಾಂಶ ಬಂದರೂ ಮಹಾಜನ್ ಆಯೋಗದ ನಿರ್ಣಯವನ್ನ ಒಪ್ಪುವುದಾಗಿ ಪೂರ್ವ ಶರತ್ತಿದ್ದು ಅದಕ್ಕೆ ಕರ್ನಾಟಕ, ಕೇರಳ ಹಾಗೂ ಮಹಾರಾಷ್ಟ್ರ ಮೂರೂ ವಿಧಾನ ಸಭೆಗಳು ಒಪ್ಪಿದ್ದವು.


ಆದರೆ ಸುದೀರ್ಘ ಪ್ರವಾಸದ ನಂತರ ತಮ್ಮ ಅಂತಿಮ ವರದಿಯಲ್ಲಿ ನ್ಯಾಯಮೂರ್ತಿ ಮಹಾಜನರು ಕರ್ನಾಟಕಕ್ಕೆ ಕೊಡಲಾಗಿದ್ದ ನಿಪ್ಪಾಣಿ ಹಾಗೂ ರಾಮದುರ್ಗ ತಾಲೂಕುಗಳನ್ನ ಸಂಪೂರ್ಣವಾಗಿ ಹಾಗೂ ಬೆಳಗಾವಿ ತಾಲೂಕಿನ ೩೮ ಗ್ರಾಮಗಳನ್ನ ಮಾತ್ರ ಆಂಶಿಕವಾಗಿಯೂ ಮಹಾರಾಷ್ಟ್ರಕ್ಕೆ ಕೊಟ್ಟು; ಕೊಲ್ಲಾಪುರ, ದಕ್ಷಿಣ ಸೊಲ್ಲಾಪುರ, ಜತ್ತ, ಡಂಕಣಿಕೋಟೆ, ಅಕ್ಕಲಕೋಟೆ, ಬೆಳಗಾವಿ ನಗರ ಹಾಗೂ ಸಂಪೂರ್ಣ ಉತ್ತರ ಕನ್ನಡ ಜಿಲ್ಲೆ  ನಿರ್ವಿವಾದವಾಗಿ ಕರ್ನಾಟಕಕ್ಕೆ ಸೇರಬೇಕು ಅಂದಾಗ ಮಾತ್ರ ಪರಿಸ್ಥಿತಿ ವಿಲೋಮವಾಯಿತು! ಯಾವುದೇ ಕಾರಣಕ್ಕೂ ಈ ವಾಸ್ತವಾಂಶ ಒಳಗೊಂಡಿದ್ದ ವರದಿಯನ್ನ ಒಪ್ಪಲಿಕ್ಕೆ ಮಹಾರಾಷ್ಟ್ರ ತಯಾರಿರಲಿಲ್ಲ! ಏಕಾಪಕ್ಷೀಯವಾಗಿ ಪೂರ್ವ ಷರತ್ತನ್ನ ಮುರಿದು ಮತ್ತೆ ತನ್ನ ಹಳೆಯ ಮೊಂಡುವಾದಕ್ಕೆ ಅದು ಮರಳಿದೆ. ಕರ್ನಾಟಕ ವಿಧಾನಸಭೆ ಮಾತ್ರ ಇದನ್ನ ಒಪ್ಪಿದೆ. ಇದೆ ವರದಿಯ ಪ್ರಕಾರ ಚಂದ್ರಗಿರಿ ಹೊಳೆಯ ಉತ್ತರ ಭಾಗದ ಮೂರನೆ ಎರಡು ಭಾಗ ವಿಸ್ತೀರ್ಣದ ಕಾಸರಗೋಡು ಸಹ ಕರ್ನಾಟಕದ ಆಸ್ತಿ. ಆದರೆ ಪೂರ್ತಿ ವರದಿ ಜಾರಿಯಾಗದೆ ಈ ಒಂದು ಅಂಶವನ್ನ ಜಾರಿಗೊಳಿಸೋದು ಅಸಾಧ್ಯವೆ ಅಗುಳಿದಿದೆ. ಈ ನೆಪವನ್ನ ಬಳಸಿಕೊಂಡ ಕೇರಳ ಸರಕಾರ ಅಲ್ಲಿ ಮಲಯಾಳಿ ಪಾರ್ಥೇನಿಯಂ ಹಬ್ಬಿಸಿ ಕನ್ನಡದ ಕಳೆ ನಿರ್ಮೂಲನೆಗೆ ಆಡಳಿತಾತ್ಮಕವಾಗಿಯೆ ನೀರು - ಗೊಬ್ಬರ ಸುರಿಯುತ್ತಿದ್ದಾರೆ. ಒಟ್ಟಿನಲ್ಲಿ ಬಳುವಳಿಯಾಗಿ ಸಿಕ್ಕಿದ ನೆಲಗಳ ಹಿತಾಸಕ್ತಿಗಳನ್ನ ಕಾಯ್ದುಕೊಳ್ಳುವುದರಲ್ಲಿ ಹಳೆ ಮೈಸೂರಿನ ರಾಜಕಾರಣಿಗಳು ಗಂಭೀರ ನಿಲುವನ್ನಂತೂ ತೆಳೆಯದಿರುವುದು ಇತಿಹಾಸದಲ್ಲಿ ದಾಖಲಾಗಿರುವ ಸತ್ಯಾಂಶ.


ಇಂದು ಮಾತೆತ್ತಿದರೆ ಮತ ರಾಜಕಾರಣಕ್ಕಾಗಿ "ಕಾಸರಗೋಡು ನಮ್ಮದು" ಎಂದು ಚುನಾವಣೆ ಕಾಲದಲ್ಲಿ ನಮ್ಮ ಸಮಯಸಾಧಕ ನಾಯಕರು ಊಳಿಟ್ಟ ಮಾತ್ರಕ್ಕೆ, ರಾಜಧಾನಿಯಿಂದ ಅಷ್ಟು ದೂರದ ಬೆಳಗಾವಿಯಲ್ಲಿ ಬಡ ತೆರಿಗೆದಾರರ ಶ್ರಮದ ಹಣ ಉಡಾಯಿಸಿ ಸುವರ್ಣ ಸೌಧ ಎನ್ನುವ ಖಾಲಿ ಗೋದಾಮನ್ನ ಕಟ್ಟಿ ಮೀಸೆ ತಿರುವಿದ ಕೂಡಲೆ, ವರ್ಷಕ್ಕೊಮ್ಮೆ ಕೆಲಸವಿಲ್ಲದೆ ದೇವಸ್ಥಾನದ ಜಾತ್ರೆಗಳಂತೆ ಮಾಡುವ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ "ಮಹಾಜನ್ ವರದಿ ಜಾರಿಯಾಗಲಿ" ಎನ್ನುವ ಮೂರು ಕಾಸಿಗೂ ಪ್ರಯೋಜನಕ್ಕೆ ಬಾರದ ಠರಾವುಗಳನ್ನ ಪಾಸು ಮಾಡಿಸಿಕೊಳ್ಳುವ ಉತ್ಸಾಹ ತೋರಿದ ತಕ್ಷಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಂಬ ಗಂಜಿ ಕೇಂದ್ರ ತೆರೆದು ಅತೃಪ್ತ ರಾಜಕಾರಣಿಯೊಬ್ಬರಿಗೆ ಕಛೇರಿ - ಕಾಸು ಜೊತೆಗೆ ಗೂಟದ ಕಾರು ಕೊಟ್ಟ ಕೂಡಲೆ ಗಡಿನಾಡ ಬವಣೆಗಳು ತೀರುವುದಿಲ್ಲ. ಅಲ್ಲಿನ ಕನ್ನಡ ಶಾಲೆಗಳ ದುಸ್ಥಿತಿ ಸುಧಾರಿಸುವುದಿಲ್ಲ. ಭಾಷಾ ಅಲ್ಪಸಂಖ್ಯಾತರೆಂದು ಆವರಿರುವ ರಾಜ್ಯದಿಂದ ಗುರುತಿಸಲ್ಪಡುವ ಅವರೆಲ್ಲರ ಸಾಂವಿಧಾನಿಕ ಹಕ್ಕುಗಳು ಈಡೇರಿ ಅವರ ಪಾಲಿಗೆ ನ್ಯಾಯ ಸಿಗುವುದೂ ಇಲ್ಲ.


ಐತಿಹಾಸದಿಂದ ಪಾಠ ಕಲಿಯದವನಿಗೆ ಭವಿಷ್ಯದಲ್ಲಿಯೂ ಸ್ಥಿರ ನೆಲೆ ಸಿಗುವುದಿಲ್ಲ. ರಾಜಕಾರಣಿಗಳ ಬೊಗಳೆ ಮಾತುಗಳು ಒತ್ತಟ್ಟಿಗಿರಲಿ, ರಾಜಧಾನಿಯ ಅನ್ಯಭಾಷಿಗ ವ್ಯಾಪಾರಿಗಳಿಂದ ನಿತ್ಯ ವಸೂಲಿ ಮಾಡಿಕೊಂಡು ಬದುಕುವುದನ್ನೆ ಒಂದು ದಂಧೆ ಮಾಡಿಕೊಂಡಿರುವ ಪರಾವಲಂಬಿ ಜೀವಿಗಳಂತಹ "ಉಟ್ಟು ಖನ್ನಡಿಗ ಓರಾಟಗಾರ"ರ ದೊಂಬರಾಟಗಳನ್ನೆಲ್ಲ ಯಾವೊಬ್ಬ ಪ್ರಾಮಾಣಿಕ ಕನ್ನಡಿಗನೂ ಬೆಂಬಲಿಸದೆ "ನಿಮಗೆ ನಿಜಕ್ಕೂ ಭಾಷೆಯ ಬಗ್ಗೆ ಕಾಳಜಿಯಿದ್ದರೆ ರಾಜ್ಯದ ಗಡಿ ಭಾಗಗಳಿಗೆ ತಮ್ಮ ಚಳುವಳಿಗಳನ್ನ ವಿಸ್ತರಿಸಿ, ಅಲ್ಲಿ ಪ್ರತಿಭಟನೆಗಳನ್ನ ಹಮ್ಮಿಕೊಳ್ಳಿ" ಎಂದು ಉಗಿದಟ್ಟಿದರೆ ಮಾತ್ರ ಕನ್ನಡಮ್ಮ ಈ ಕಿರಾತಕರ ಕೈಯಿಂದ ಪಾರಾದಾಳು. ವಿವೇಕದ ನಡೆಗೆ ಇನ್ನೂ ಕಾಲ ಮಿಂಚಿಲ್ಲ. ಈಗಾಗಲೆ ತೀರ್ಥಹಳ್ಲಿ ತಾಲೂಕಿನ ಗಾಜನೂರಿನಲ್ಲಿ ಕಳೆದ ಶತಮಾನದ ಅರವತ್ತರ ದಶಕದಲ್ಲಿ ಕಟ್ಟಿರುವ ತುಂಗಾ ಅಣೆಕಟ್ಟಿಗೆ ಮೇಲ್ದಂಡೆಯನ್ನು ನಿರ್ಮಿಸಿ ಅದರ ಜಲ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಲಾಗಿದೆ. ಒಂದೊಮ್ಮೆ ದಾವಣಗೆರೆ ಹೊಸ ರಾಜಧಾನಿಯಾಗಿ ರೂಪಿತವಾದರೆ ಆ ಊರಿಗೆ ನೀರಿನ ಕೊರತೆ ಖಂಡಿತಾ ಕಾಡಲಾರದು. ಈಗಿನಂತೆ ನಿತ್ಯ ತಮಿಳುನಾಡಿನವರೊಂದಿಗೆ ಹೋರಾಡಿ ಕಾವೇರಿಯಮ್ಮನ ಕೃಪೆಗಾಗಿ ಪರದಾಡುವ ಅಗತ್ಯ ಆಗಿರಲಾರದು. ಆಡಳಿತದ ಅನುಕೂಲಕ್ಕೆ ಬೇಕಿದ್ದರೆ ಬೆಳಗಾವಿ, ಬೆಂಗಳೂರು, ಗುಲ್ಬರ್ಗಾ, ಮೈಸೂರು ಹಾಗೂ ಮಂಗಳೂರನ್ನ ದಾವಣಗೆರೆಗೆ ಸರಿಸಮವಾಗಿ ಅಭಿವೃದ್ಧಿ ಪಡಿಸಿದರೆ ಕನ್ನಡನಾಡು ಹೊನ್ನಿನ ನಾಡಾಗುವ ಪಯಣದ ಆರಂಭ ಸುಗಮವಾಗುತ್ತದೆ. ನಮ್ಮ ಆಳುವ ಅಯ್ಯ, ಅಣ್ನ, ಅಪ್ಪರ ಕೆಪ್ಪ ಕಿವಿಗೆ ಇದು ಬೀಳುತ್ತದ?


http://www.youtube.com/watch?v=zA8AXSMhEPk

05 November 2013

ಒಂದಾಯಿತು ಕನ್ನಡ, ಕನ್ನಡಿಗರು ಮಾತ್ರ ಒಂದಾಗಲೆ ಇಲ್ಲ
ಕನ್ನಡ ನಾಡಿನ ಕಳೆದು ಹೋಗಿದ್ದ ಭೂಭಾಗಗಳೇನೋ ಐವತ್ತೆಂಟು ವರ್ಷಗಳ ಹಿಂದೆ ಚೂರುಪಾರು ಮರಳಿ ಬಂದು ಮತ್ತೆ ಮನೆ ಸೇರಿಕೊಂಡಿವೆ, ಆದರೆ ಕನ್ನಡದ ಮನಸುಗಳೂ ಮತ್ತೆ ಒಂದಾದವ? ಎನ್ನುವ ಪ್ರಶ್ನೆಯನ್ನ ಎತ್ತಿಕೊಂಡು ಉತ್ತರ ಹುಡುಕಹೋದರೆ ನಿರುತ್ತರ ಕುಮಾರರಾಗಿ ಹಿಂದಿರುಗುವಷ್ಟು ವಿಕಾರ ವಾಸ್ತವಗಳು ನಮ್ಮ ಕಣ್ಣಿಗೆ ರಾಚುತ್ತವೆ. ಹಳೆ ಮೈಸೂರಿನವರ ಒಡ್ದತನ, ಮುಂಬೈ ಪ್ರಾಂತ್ಯದಿಂದ ಬಂದವರ ದಡ್ಡತನ, ಪ್ರಜಾ ಪೀಡಕ ನಿಜಾಮನ ಮರಿಗಳಂತಹ ರಾಜಕಾರಣಿ ಹೆಗ್ಗಣಗಳಿಂದ ಅಭಿವೃದ್ಧಿಯ ಹೆಸರಿನಲ್ಲಿ ತಮಗಾಗುತ್ತಿರುವ ಅನುಗಾಲದ ವಂಚನೆಯನ್ನ ಗ್ರಹಿಸದ ಮಾಜಿ ಹೈದರಾಬಾದ್ ಸಂಸ್ಥಾನದ ಪ್ರಜೆಗಳ ಮಡ್ಡತನ, ತಾವು ಇನ್ನೆಲ್ಲರಿಗಿಂತ ಅತಿ ಶ್ರೇಷ್ಠರೆಂಬ ಜಂಭದಲ್ಲಿ ಮೇಲರಿಮೆ ಖಾಯಿಲೆಯಿಂದ ನರಳುತ್ತಿರುವ ಕರಾವಳಿ ಮಂದಿಯ ಹೆಡ್ಡತನ ಹೀಗೆ ಎಲ್ಲರಲ್ಲೂ ಒಂದೊಂದು ಬಗೆಯ ವೈಕಲ್ಯ ಎದ್ದು ಕಾಣುವಂತೆ ಇವೆ.


ಕರುನಾಡಿನಲ್ಲಿ ಆಧುನಿಕತೆಯ ಹವೆ ಸ್ವಾತಂತ್ರೋತ್ತರದಲ್ಲಿ ತುಸು ಹೆಚ್ಚೇ ಬೀಸಿದೆ. ಆದರೆ ಇದು ಪ್ರಾದೇಶಿಕವಾಗಿ ಸರಿ ಸಮನಾಗಿಲ್ಲ ಅನ್ನುವುದು ಸತ್ಯ. ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸಿ ವಿ ರಂಗಾಚಾರ್ಲು, ಕೆ ಶೇಷಾದ್ರಿ ಆಯ್ಯರ್, ವಿ ಪಿ ಮಾಧವ ರಾವ್, ಟಿ ಆನಂದರಾಯರು, ಸರ್ ಎಂ ವಿಶ್ವೇಶ್ವರಯ್ಯ, ಎ ಆರ್ ಬ್ಯಾನರ್ಜಿ, ಮಿರ್ಜಾ ಇಸ್ಮಾಯಿಲ್ ಮುಂತಾದವರು ತಮ್ಮ ಕರ್ತವ್ಯ ನಿಷ್ಠೆಯಿಂದ ಮೈಸೂರು ಸಂಸ್ಥಾನವನ್ನು ಆಧುನಿಕತೆಯೆಡೆಗೆ ತಿರುಗಿಸಿದ್ದರು. ಅದಾಗಲೆ ಮೈಸೂರು ಸಂಸ್ಥಾನದ ಭದ್ರಾವತಿ, ಮಂಡ್ಯ, ಬೆಂಗಳೂರುಗಳಲ್ಲಿ ಕೈಗಾರಿಕಾ ಕ್ರಾಂತಿ ಆರಂಭವಾಗಿಯಾಗಿತ್ತು. ಕಾವೇರಿಗೆ ಅಡ್ದಲಾಗಿ ಕೃಷ್ಣರಾಜ ಸಾಗರವನ್ನ ಕಟ್ಟಲಾಗಿ, ಹೇಮಾವತಿಗೆ ಗೊರೂರಿನಲ್ಲಿ ಅಣೆಕಟ್ಟು ನಿರ್ಮಿಸಲಾಗಿ, ಭದ್ರೆಗೆ ಲಕ್ಕವಳ್ಳಿಯಲ್ಲಿ ಆಣೆಕಟ್ಟು ಮಾಡಲಾಗಿ ಸಂಸ್ಥಾನದಾದ್ಯಂತ ನೀರಾವರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಹೀಗಾಗಿ ಇಲ್ಲಿನ ರೈತಾಪಿಗಳು ಪ್ರಗತಿಪರರಾಗಲು ಸಾಧ್ಯವಾಗಿತ್ತು.ಕೋಲಾರದಲ್ಲಿ ಚಿನ್ನ ಅಗೆಯಲಾಗುತ್ತಿದ್ದರೆ ಕೆಮ್ಮಣ್ಣುಗುಂಡಿ ಹಾಗೂ ಕುದುರೆಮುಖದಲ್ಲಿ ಅಗೆದ ಕಬ್ಬಿಣದ ಅದಿರನ್ನ ಸಾಗಿಸಲು ಆ ಕಾಲದಲ್ಲಿಯೆ ನರಸಿಂಹರಾಜಪುರದ ಮೂಲಕ ಅಲ್ಲಿಗೆ ಮೀಟರ್ ಗೇಜ್ ರೈಲುಗಳನ್ನ ಓಡಿಸಲಾಗುತ್ತಿತ್ತು. "ಮೈಸೂರು ಮರಾಠ ರೈಲ್ವೇಸ್" ಮೂಲಕ ಆರ್ಥಿಕ ರಾಜಧಾನಿಗಳಾದ ಮದರಾಸು ಹಾಗೂ ಬೊಂಬಾಯಿವರೆಗೆ ರೈಲ್ವೆ ಸಂಪರ್ಕವನ್ನ ಏರ್ಪಡಿಸಿಕೊಳ್ಲಲಾಗಿತ್ತು. ಹಿರೇಭಾಸ್ಕರ ಹಾಗೂ ಶಿವನ ಸಮುದ್ರದಲ್ಲಿ ಜಲವಿದ್ಯುತ್ ಆಗರಗಳನ್ನ ನಿರ್ಮಾಣ ಮಾಡಿ ವಿದ್ಯುತ್ ಉತ್ಪಾದನೆಯನ್ನ ಆರಂಭಿಸಲಾಗಿತ್ತು. ಬೆಂಗಳೂರಿನಲ್ಲಿ ಟಾಟಾ ಸಂಸ್ಥೆಯ ಸಹಯೋಗದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ರಾಷ್ಟ್ರೀಯ ವೈಮಾನಿಕ ಸಂಶೋಧನೆಯ ಕೇಂದ್ರಗಳು ಆರಂಭವಾಗಿದ್ದವು. ಸಂಸ್ಥಾನದ ಉದ್ದಗಲಕ್ಕೂ ಕೆರೆಕಟ್ಟೆ ಬ್ಯಾರೇಜುಗಳನ್ನ ನಿರ್ಮಿಸಿ ನೀರಾವರಿಯ ಅಗತ್ಯಗಳಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಅ ಕಾಲದಲ್ಲಿಯೆ ಅನೇಕ ನದಿಗಳು ಸೇತುವೆ ಕಂಡವು. ವಿಲಾಯತಿ ಔಷಧ ಪದ್ಧತಿಯ ಸಾರ್ವನಿಕ ಲೋಕಲ್ ಫಂಡ್ ಆಸ್ಪತ್ರೆಗಳನ್ನೂ ಆರಂಭಿಸಲು ಸರಕಾರದಿಂದ ಒತ್ತಾಸೆ ನೀಡಲಾಯಿತು.


ಕೈಗಾರಿಕೆ, ಆರೋಗ್ಯ ಹಾಗೂ ಲೋಕೋಪಯೋಗಿ ಇಲಾಖೆಗಳಿಗೆ ಸಂಬಂಧಿಸಿದಂತೆ ಮೈಸೂರು ಸಂಸ್ಥಾನದ್ದು ಅಭಿವೃದ್ಧಿಯ ನಾಗಲೋಟದ ಕಥೆಯಾದರೆ ಏಕೀಕರಣದವರಗೂ ಬೊಂಬಾಯಿ ಪ್ರಾಂತ್ಯದ ದಕ್ಷಿಣ ಭಾಗವಾಗಿದ್ದ ಕನ್ನಡದ ಜಿಲ್ಲೆಗಳು ಆ ನಿಟ್ಟಿನಲ್ಲಿ ಮೈಸೂರಿನ ಹೋಲಿಕೆಯಲ್ಲಿ ಅರೆವಾಸಿಗಿಂತಲೂ ಹೆಚ್ಚು ಹಿಂದುಳಿದಿದ್ದವು. ಬ್ರಿಟಿಷರ ನೇರ ಆಡಳಿತದ ಪ್ರಾಂತ್ಯವಾಗಿದ್ದೂ ಬೊಂಬಾಯಿ ಪ್ರಾಂತ್ಯದ ಕನ್ನಡದ ಜಿಲ್ಲೆಗಳು ಅದೆ ಪ್ರಾಂತ್ಯದ ಮರಾಠವಾಡ, ಸೌರಾಷ್ಟ್ರ ಹಾಗೂ ಸಿಂಧ್'ಗಳಿಗಿಂತಾ ಹೋಲಿಕೆಯಲ್ಲಿ ಗಮನಾರ್ಹವಾಗಿ ಅಭಿವೃದ್ಧಿ ದರದಲ್ಲಿ ವಂಚಿತವಾದದ್ದು ತುಸು ಆಶ್ಚರ್ಯ ಹುಟ್ಟಿಸುತ್ತದೆ. ಬೆಳಗಾವಿ, ಧಾರವಾಡ ಹಾಗೂ ಬಿಜಾಪುರ ನಿರಂತರ ಮಲತಾಯಿ ಧೋರಣೆಗೆ ತುತ್ತಾಗಲಿಕ್ಕೆ ಅಂದಿನ ಆಧಿಕಾರ ವಲಯದಲ್ಲಿ ಅಲ್ಲಿನ ಪ್ರಭಾವಿಗಳ ಕ್ರಿಯಾಹೀನತೆ ಮೂಲಭೂತ ಕಾರಣವಾದರೆ, ವಿಪರೀತ ವಿಸ್ತೀರ್ಣ ಹೊಂದಿದ್ದ ಅಗಾಧ ಬೊಂಬಾಯಿ ಪ್ರಾಂತ್ಯದ ತ್ರಿವಿಕ್ರಮ ಗಾತ್ರವೆ ಆನೆ ಹೊಟ್ಟೆಗೆ ಸಿಗುತ್ತಿದ್ದ ಅರೆಕಾಸಿನ ಮಜ್ಜಿಗೆಯಂತಾ ಅನುದಾನದ ಸಮರ್ಪಕ ಹಂಚಿಕೆಗೆ ಕಲ್ಲು ಹಾಕಿರಲಿಕ್ಕೂ ಸಾಕು. ಅಲ್ಲದೆ ಅದಾಗಲೆ ಕನ್ನಡ - ಮರಾಠಿ ಅಸ್ಮಿತೆಯ ತಿಕ್ಕಾಟವೂ ಶೈಶವಾವಸ್ಥೆಯಲ್ಲಿದ್ದು ಅದರ ಕರಿ ನೆರಳೂ ಅಭಿವೃದ್ಧಿ ಪಥದ ದೀಪಗಳನ್ನ ಮಂಕಾಗುವಂತೆ ಮಾಡಿರಲಿಕ್ಕೆ ಸಾಕು. ಮುಲ್ತಾನ್, ವಿದರ್ಭ ಹಾಗೂ ಮಧ್ಯಪ್ರಾಂತ್ಯದ ಕೆಲವು ಜಿಲ್ಲೆಗಳು ಸಹಾ ಅದೆ ಬೊಂಬಾಯಿ ಪ್ರಾಂತ್ಯದ ಅಧೀನದಲ್ಲಿದ್ದು ಅವುಗಳ ಅಭಿವೃದ್ಧಿಯೂ ಅಷ್ಟಕ್ಕಷ್ಟೆ ಆಗಿರುವುದನ್ನ ಗಮನಿಸಿದರೆ ಈ ಮಾತಿಗೆ ಆಧಾರ ಸಿಗುತ್ತದೆ.


ನಿಜಾಮನ ಪೈಶಾಚಿಕ ರಜಾಕಾರರ ಅಧೀನವಾಗಿದ್ದ ಕನ್ನಡದ ಮೂರು ಜಿಲ್ಲೆಗಳಂತೂ ಇನ್ನೂ ಕರ್ನಾಟಕದ ಇನ್ನಿತರ ಜಿಲ್ಲೆಗಳನ್ನ ಅಭಿವೃದ್ಧಿ ದರದಲ್ಲಿ ಸರಿಗಟ್ಟಲು ಏದುಸಿರು ಬಿಡುತ್ತಿವೆ ಏಕೀಕರಣದ ಹಂತದಲ್ಲಂತೂ ಅವುಗಳ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿತ್ತು. ಮೂಲಭೂತ ಸೌಕರ್ಯಗಳ ವಿಪರೀತ ಕೊರತೆಯಿಂದ ಅಲ್ಲಿನ ಜನ ನರಳುತ್ತಿದ್ದರು. ಬರಡು ನೆಲದಲ್ಲಿ ಹಸಿರು ಹುಟ್ಟಿಸಲು ಮಳೆಯ ಹೊರತು ಇನ್ನೊಂದು ಮಾರ್ಗವಿಲ್ಲದೆ ಅಲ್ಲಿನ ಮಂದಿ ಪರದಾಡುತ್ತಿದ್ದರು. ಮೈಸೂರಿನ ಸಮೃದ್ಧಿ ಅವರನ್ನ ಆದಷ್ಟು ಬೇಗ ಹಳೆ ಮೈಸೂರಿಗರೊಂದಿಗೆ ಕೂಡಿ ತಾವೂ ಮುಂದುವರೆಯುವ ಹೊಸ ಕನಸುಗಳನ್ನ ಹುಟ್ಟಿಸುತ್ತಿರಲಿಕ್ಕೂ ಸಾಕು. ಆದರೆ ಇಲ್ಲಿಯವರೆಗೂ ಅವರನ್ನ ಆಳಿದ ಪಾಳೆಗಾರಿಕೆ ಮನಸ್ಥಿತಿಯ ಮರಿ ನಿಜಾಮನಂತಹ ಚುನಾಯಿತ ಜನಪ್ರತಿನಿಧಿಗಳು ಆ ಭಾಗದ ಜನರಿಗಾಗಿ ಬಿಡುಗಡೆಯಾದ ಅಷ್ಟೂ ಹಣವನ್ನ ನುಣ್ಣಗೆ ನುಂಗಿ ನೊಣೆದು ಇನ್ನೂ ಆ ಭಾಗವನ್ನ ದಟ್ಟ ದಾರಿದ್ರ್ಯದಲ್ಲೆ ಇಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿನ ಜನರೂ ಸಹ ವಲಸೆಯ ಮೂಲ ಮಂತ್ರಕ್ಕೆ ಜೋತುಬಿದ್ದು ಹೈದರಾಬಾದು ಹಾಗೂ ಬೆಂಗಳೂರಿನತ್ತ ಸಾಗಿ ನೆಲೆಸುವಲ್ಲಿ ತೋರುವ ಉತ್ಸಾಹವನ್ನ ಅನುದಾನ ದಂಡಿಯಾಗಿ ದಕ್ಕಿದರೂ ಸ್ಥಳಿಯ ಪ್ರದೇಶಾಭಿವೃದ್ಧಿ ಮಾಡದ ಹಲಾಲುಕೋರ ಶಾಸಕ ಸಂಸದ ದಂಡಪಿಂಡಗಳ ಕೊರಳುಪಟ್ಟಿಗೆ ಕೈ ಹಾಕಿ ಕೆಲಸ ಮಾಡಿಸುವಲ್ಲಿ ತೋರುತ್ತಿಲ್ಲ. ಒಟ್ಟಿನಲ್ಲಿ ಆ ಪ್ರದೇಶಗಳಿಗೆ ಅದೇನೆ ಸಂವಿಧಾನದ ವಿಶೇಷ ವಿಧಿಯ ನೆರವಿನ ಹಸ್ತ ಚಾಚಿದರೂ ಆದರ ಪೂರ್ಣ ಫಲ ಅವರನ್ನ ಮುಟ್ಟುವ ಖಾತ್ರಿಯಂತೂ ಯಾವತ್ತಿಗೂ ಇಲ್ಲವೆ ಇಲ್ಲ.ಇದ್ದುದ್ದರಲ್ಲಿ ಮೈಸೂರಿಗೆ ಸ್ವಲ್ಪ ಮಟ್ಟಿಗೆ ಪೈಪೋಟಿ ನೀಡುವ ಶಕ್ತಿ ಇದ್ದದ್ದು ಮದರಾಸು ಪ್ರಾಂತ್ಯದ ಭಾಗವಾಗಿದ್ದ ಕಾಸರಗೋಡು, ಉಡುಪಿ ಸಹಿತ ಅಖಂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ! ಬ್ರಿಟಿಷ್ ಲೋಕೋಪಯೋಗಿ ಇಲಾಖೆ ಇಲ್ಲಿನ ಬಂದರುಗಳನ್ನ ವ್ಯವಸ್ಥಿತವಾಗಿಟ್ಟಿದ್ದರೆ, ಜಿಲ್ಲೆಯಾದ್ಯಂತ ಸಮುದ್ರ ಮುಖಿಯಾಗಿ ಹರಿಯುವ ನದಿಗಳಿಗೆ ಬ್ರಿಟಿಷ್ ಇಂಡಿಯಾದ ಮೋರ್ಗನ್ ಕಂಪನಿಯ ತಂತ್ರಜ್ಞರು ಗಟ್ಟಿಮುಟ್ಟಾದ ಸಿಮೆಂಟಿನ ಸೇತುವೆಗಳನ್ನ ನಿರ್ಮಿಸಿ ಜಿಲ್ಲೆಯ ಭಟ್ಕಳದಿಂದ ( ಆಗ ಅದು ಮೈಸೂರು ಸಂಸ್ಥಾನದ ಆಸ್ತಿಯಾಗಿತ್ತು.) ಕಾಸರಗೋಡಿನ ದಕ್ಷಿಣದ ಹೊಸದುರ್ಗದವರೆಗೆ ಜಿಲ್ಲೆಯನ್ನ ಏಕತ್ರಗೊಳಿಸಿದ್ದರು. ಅದುವರೆಗೂ ಉಗ್ಗಗಳಲ್ಲಿ, ದೋಣಿಗಲಲ್ಲಿ, ಜಟಕಾಗಳಲ್ಲಿ ದಿನಗಟ್ಟಲೆ ಪ್ರಯಾಣಿಸುತ್ತಿದ್ದ ಜನರಿಗೆ ಸೇತುವೆಗಳ ಮೂಲಕ ಘಂಟೆಗಳ ಲೆಕ್ಖದಲ್ಲಿ ಜಿಲ್ಲೆಯ ಒಂದು ತುದಿಯಿಂದ ಇನ್ನೊಂದು ತುದಿಗೆ ತಂದು ಮುಟ್ಟಿಸುತ್ತಿದ್ದ ಸಿಪಿಸಿ ಕಂಪನಿಯ ಬಸ್ಸುಗಳು ವಾಣಿಜ್ಯಿಕ ಕಾರಣಗಳಿಗಾಗಿ ಹೊಸ ಸಾಧ್ಯತೆಗಳನ್ನೆ ಸೃಷ್ಟಿಸಿದ್ದವು. ಸಾಲದ್ದಕ್ಕೆ ಪ್ರಾಂತ್ಯದ ರಾಜಧಾನಿ ಮದರಸಿನಿಂದ ಕೇರಳದ ಪಾಲ್ಘಾಟ್, ಶೊರನೂರು, ಕಣ್ಣೂರು, ಪಯ್ಯನೂರು ಮಾರ್ಗವಾಗಿ ನೇರ ರೈಲಿನ ಸೌಲಭ್ಯವೂ ಜಿಲ್ಲಾ ಕೇಂದ್ರ ಮಂಗಳೂರಿಗಿತ್ತು.ವಿದ್ಯೆ ಹಾಗೂ ಆರೋಗ್ಯ ಸೇವೆಯಲ್ಲಿ ಬಾಸೆಲ್ ಮಿಷನ್ ಹಾಗೂ ಕ್ಯಾಥೋಲಿಕ್ ಮಿಷನರಿಗಳು ಸಕ್ರಿಯವಾಗಿದ್ದರಿಂದ ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯ ಶಾಲಾ ಕಾಲೇಜುಗಳು ಹಾಗೂ ಆಸ್ಪತ್ರೆಗಳು ತಲೆ ಎತ್ತಿದ್ದವು. ಇದರ ಜೊತೆಜೊತೆಗೆ ಜಿಲ್ಲಾ ಬೋರ್ಡ್ ಕೂಡಾ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳನ್ನ ಆರಂಭಿಸಿ ಜನರನ್ನ ಸುಶಿಕ್ಷಿತವಾಗಿಸುವತ್ತ ವಿಶೇಷ ಗಮನ ಕೊಟ್ಟಿತ್ತು. ಹೆಚ್ಚು ಕಡಿಮೆ ಹತ್ತಿರ ಹತ್ತಿರದಲ್ಲಿ ಒಂದೆ ಕಾಲ ಘಟ್ಟದಲ್ಲಿ ಮಂಗಳೂರು ಹಾಗೂ ಮಣಿಪಾಲಗಳಲ್ಲಿ ಶುರುವಾದ ಕರ್ನಾಟಕ ಬ್ಯಾಂಕ್, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್ ಹಾಗೂ ವಿಜಯಾ ಬ್ಯಾಂಕ್ ಜಿಲ್ಲೆಯನ್ನ ದೇಶದಲ್ಲಿಯೆ ಬ್ಯಾಂಕಿಂಗ್ ಕ್ಶೇತ್ರದಲ್ಲಿ ಮುಂಚೂಣಿಗೆ ಬರುವಂತೆ ಮಾಡಿದ್ದವು. ಸದರಿ ಬ್ಯಾಂಕುಗಳ ಜಾಲ ಜಿಲ್ಲೆಯಾದ್ಯಂತ ನಿಧಾನವಾಗಿ ವ್ಯಾಪಿಸುತ್ತಿದ್ದವು. ಹೊರ ರಾಷ್ಟ್ರಗಳ ಜೊತೆಗೆ ವಾಣಿಜ್ಯ ಸಂಪರ್ಕಕ್ಕೆ ಮಂಗಳೂರಿನ ಹಳೆ ಬಂದರು ಹಾಗೂ ಭಟ್ಕಳದ ಬಂದರು ಬಳಕೆಯಾಗುತ್ತಿದ್ದವು. ಯುರೋಪಿಯನ್ ಕಂಪನಿಗಳು ಆರಂಭಿಸಿದ್ದ ಹೆಂಚಿನ ಕಾರ್ಖಾನೆಗಳು ಜಿಲ್ಲೆಯ ಮನೆಗಳ ಸ್ವರೂಪವನ್ನೆ ಬದಲಿಸಿದ್ದಲ್ಲದೆ ಘಟ್ಟದ ಮೇಲಿನ ಊರುಗಳಲ್ಲಿಯೂ ಈ ನವ ತಾಂತ್ರಿಕತೆಯ "ಮಂಗಳೂರು ಹಂಚು"ಗಳಿಗೆ ವಿಪರೀತ ಬೇಡಿಕೆ ಹುಟ್ಟ ತೊಡಗಿತ್ತು. ಜಿಲ್ಲೆ ಆ ಕಾಲದಲ್ಲಿಯೂ ಗೋಡಂಬಿ ಹಾಗೂ ಬೀಡಿ ಉದ್ಯಮದಲ್ಲಿ ಮುಂದಿತ್ತು. ಉಪ್ಪಿನ ವ್ಯಾಪಾರಕ್ಕೂ ಅಲ್ಲಿನವರು ಹೆಸರು ವಾಸಿಯಾಗಿದ್ದರು. ಒಟ್ಟಿನಲ್ಲಿ ಜಿಲ್ಲೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಯನ್ನ ದಾಖಲಿಸುತ್ತಿತ್ತು.


ಆದರೆ ರಾಜ್ಯ ಮರುವಿಂಗಡನೆ ಆಗುವ ಕ್ಷಣಕ್ಕೆ ಈ ಒಂದೆ ತಾಯಿಯ ಮಕ್ಕಳಲ್ಲಿದ್ದ ಅಭಿವೃದ್ಧಿಯ ವ್ಯತ್ಯಾಸ ಪರಸ್ಪರರ ಮನಸಿನಲ್ಲಿ ಆರೋಗ್ಯಕರ ಸ್ಪರ್ಧಾ ಮನೋಭಾವನೆ ಮೂಡಿಸುವ ಬದಲಿಗೆ ಒಬ್ಬರ ಮೇಲೊಬ್ಬರಿಗೆ ಮತ್ಸರ ಹುಟ್ಟಿಸಿದ್ದು ಮಾತ್ರ ವಿಪರ್ಯಾಸ.  ನೂರಾರು ಎಕರೆ ಜಮೀನಿನ ಒಡೆಯನಾಗಿದ್ದರೂ ನೀರಿನ ಲಭ್ಯತೆಯ ಕೊರತೆಯಿಂದ ಶುಚಿತ್ವದಲ್ಲಿ ಸ್ವಲ್ಪ ಮಟ್ಟಿಗೆ ಅನಾಸಕ್ತನಾಗಿದ್ದ ಬೊಂಬಾಯಿ ಪ್ರಾಂತ್ಯದ ಹಾಗೂ ಹೈದರಾಬಾದು ಪ್ರಾಂತ್ಯದ ಕನ್ನಡಿಗರ ಬಗ್ಗೆ ಕರಾವಳಿಯ ಬುದ್ಧಿವಂತ ಗಡವಗಳಿಗೆ ಮುಚ್ಚಿಡಲಾಗದ ತಿರಸ್ಕಾರ! ಮೈಸೂರು ಸಂಸ್ಥಾನದ ಸಮೃದ್ಧಿಯ ಮಟ್ಟಿಗೆ ತಾವು ಏರುವುದರ ಬಗ್ಗೆ ಆಲೋಚಿಸ ಬೇಕಾದ ಉತ್ತರ ಕರ್ನಾಟಕದ ಮಂದಿಗೆ ತಮಗೆ ಸೇರಬೇಕಾದ ಹಕ್ಕಿನ ಸ್ವತ್ತುಗಳ ಮೇಲೂ ಈ "ನಾಜೂಕಯ್ಯ" ಹಳೆ ಮೈಸೂರಿಗರ ಕಬ್ಜಾ ಆಗಿದೆ ಎನ್ನುವ ವಿಚಿತ್ರ ಗುಮಾನಿ! ಇನ್ನು ಈ ಉತ್ತರ ಕಾರ್ನಾಟಕದ ಒರಟರು ನಮ್ಮೊಂದಿಗೆ ಸೇರಿ ನಮ್ಮ ರಾಜಕೀಯ "ಮಡಿ"(?)ಯನ್ನ ಸಂಪೂರ್ಣ ಕೆಡಿಸಿದರು ಎಂದು ಎದುರಿಗೆ ಸಿಕ್ಕಾಗ ಹಲ್ಲು ಕಿರಿದಾರೂ ಬೆನ್ನ ಹಿಂದೆ ಹಲ್ಲು ಕಡಿಯುವ ಹಳೆ ಮೈಸೂರಿಗರ ಇಬ್ಬಂದಿತನ. ಒಟ್ಟಿನಲ್ಲಿ ಕನ್ನಡೆಮ್ಮೆಯ ಈ ನಾಲ್ಕು ಮುದ್ದು ಕರುಗಳಿಗೆ ತಮ್ಮ ಅಮ್ಮನ ನಾಲ್ಕು ಕೆಚ್ಚಲುಗಳಲ್ಲಿ ಸರಿ ಸಮವಾಗಿ ಸುರಿಯುವ ಪೋಷಕ ಹಾಲಿನ ಬಗ್ಗೆಯೆ ತೀರದ ಸಂಶಯ! ಗಂಜಿಯೋ, ತಿಳಿಯೋ ಸಿಕ್ಕಿದ್ದನ್ನ ಹಂಚಿಕೊಂಡು ತಿನ್ನ ಬೇಕಾದವರು ಪರಸ್ಪರರನ್ನು ಕಂಡು ಕುರುಬುವ ಹಂಚಿಕೆಯಲ್ಲಿಯೆ ಕಾಲ ಹಾಕುತ್ತಿರೋದು ಮಾತ್ರ ನಿಜವಾಗಿಯೂ ಕರುನಾಡಿನ ದೌರ್ಭಾಗ್ಯ.


ಇಂದು ನಾವೆಲ್ಲ ಕರ್ನಾಟಕವೆಂಬ ಒಂದೆ ಛತ್ರಿಯ ನೆರಳಿಗೆ ಬಂದು ಐವತ್ತ ಎಂಟು ವರ್ಷಗಳನ್ನ ಪೂರೈಸಿದ್ದೇವೆ. ಈ ಸುದೀರ್ಘ ಅವಧಿಯ ಕಾಲದಲ್ಲಿ ನಮ್ಮ ಕೃಷ್ಣೆ- ಕಾವೇರಿಯ ಪಾತ್ರಗಳಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ನಮ್ಮಲ್ಲಿ ಯಾರೂ ವಾಸ್ತವವನ್ನು ಗ್ರಹಿಸಲಾದಷ್ಟು ಆಪ್ರಬುದ್ಧರೂ ಅಲ್ಲ. ಪ್ರಾಂತ್ಯವಾರು ಕನ್ನಡಿಗರೆಲ್ಲರಲ್ಲಿಯೂ ಯಾವುದದರೊಂದು ಅಸ್ಮಿತ ಹೆಚ್ಚುಗಾರಿಕೆ ಇರುವಂತೆಯೆ ಮತ್ತಿನ್ನೇನಾದರೂ ನ್ಯೂನತೆಯೂ ಇದ್ದೇ ಇದೆ. ಆಲ್ಲದೆ ತುಳುವರು, ಮರಾಠಿಗರು, ಕೊಂಕಣಿಗರು, ತೆಲುಗರು, ತಮಿಳರು ಹಾಗೂ ಮಲಯಾಳಿಗಳು ಸಹ ಅಲ್ಪ ಸಂಖ್ಯೆಯಲ್ಲಾದರೂ ಸರಿ ನಮ್ಮ ಕನ್ನಡ ಜನಸಂಖ್ಯೆಯ ಭಾಗವೆ ಅಗಿರುವುದನ್ನ ನಾವ್ಯಾರೂ ಮರೆಯುವಂತಿಲ್ಲ.


ಒಬ್ಬೊಬ್ಬರ ಹಿರಿಮೆಯನ್ನ ಇನ್ನೊಬ್ಬರು ಗೌರವಿಸುತ್ತಾ, ಇನ್ನೊಬ್ಬರ ತಪ್ಪನ್ನ ಒಬ್ಬರು ತಿದ್ದಿ ಸರಿ ಪಡಿಸುತ್ತಾ ನಾವೆಲ್ಲರೂ ಒಂದೆ ತಾಯಿಯ ಮಕ್ಕಳೆನ್ನುವ ಹಿರಿಮೆಯನ್ನ ಕೇವಲ ಈ ದೇಶಕ್ಕ್ಷ್ಟೆ ಅಲ್ಲ ಇಡಿ ಜಗತ್ತಿಗೆ ತೋರಿಸಿ ಕೊಡಬೇಕಾದ ಹೊಣೆಗಾರಿಕೆ ಬೀದರಿನಿಂದ ಬೆಂಗಳೂರಿನವರೆಗೆ, ಬೆಳಗಾವಿಯಿಂದ ಕೊಳ್ಳೆಗಾಲದವರೆಗೆ, ರಾಯಚೂರಿನಿಂದ ಮಂಗಳೂರಿನವರೆಗೆ ಹರಡಿರುವ ಕನ್ನಡದ ನೆಲದಲ್ಲಿ ವಾಸಿಸುವ ಪ್ರತಿಯೊಬ್ಬ ಹುಟ್ಟು ಕನ್ನಡಿಗರ ಹೊಣೆಗಾರಿಕೆಯಾಗಿದೆ. ಅದನ್ನ ಬಿಟ್ಟು ಕಡು ಮೂರ್ಖರಂತೆ ನಾಡು ಒಡೆವ ಸ್ವಾರ್ಥದ ಪಥ ಹಿಡಿದರೆ ಎಲ್ಲರೂ ಹೋಗಿ ಪಕ್ಕದ ಮನೆಯ ಕೋಡಂಗಿಗಳು ಮಾಡಿಕೊಳ್ಳುತ್ತಿರುವ ಹಾಗೆ ನಾವೂ ಸಹ ಹಗಲು ಕಂಡ ಹಾಳು ಬಾವಿಗೆ ಹಾಡು ಹಗಲೆ ಬೀಳುವ ಹುಚ್ಚರಾಗುತ್ತೇವೆ ಅಷ್ಟೆ. ಒಡೆದ ನಾಡು ಮತ್ತೆ ಒಂದಾಗ ಬಹುದಾದರೆ ಸ್ವಲ್ಪ ವಿವೇಚನೆ ಬಳಸಿ ಅನುಸರಿಸಿ ನಡೆದರೆ ಒಡಕಿನ ಧ್ವನಿ ಎದ್ದಿರುವ ಮನಸುಗಳೂ ಸಹ ಮತ್ತೆ ಒಂದಾಗುವುದು ಹೆಚ್ಚು ಕಷ್ಟವೇನಲ್ಲ. ಒಡೆಯುವುದು ಅಥವಾ ಉಳಿಸಿಕೊಳ್ಳುವುದು ಎರಡೂ ಸಹ ವಿವೇಕವಿರುವ ಕನ್ನಡಮ್ಮನ ಮಕ್ಕಳಾದ ನಮ್ಮ ನಮ್ಮ ಕೈಯಲ್ಲಿಯೇ ಇದೆ.

04 November 2013

ಗೋ ಪೂಜೆಯ ಗಮ್ಮತ್ತು......

ದೀಪಾವಳಿ ಅದರಲ್ಲೂ ಬಲಿ ಪಾಡ್ಯಮಿ ಶ್ರಾವಣದ ನಂತರ ದಾಂಗುಡಿಯಿಟ್ಟು ಬರುವ ಇನ್ನೆಲ್ಲಾ ಹಬ್ಬಗಳಿಗಿಂತ ಹೆಚ್ಚು ಇಷ್ಟವಾಗುವುದಕ್ಕೆ ನನಗೆ ಬಾಲ್ಯದಲ್ಲಿ ಹಲವಾರು ಕಾರಣವಿದ್ದವು. ನಾವು ಮೂಲತಃ ಕೃಷಿಕರಾಗಿರುವುದರಿಂದಲೂ, ಮನೆಯಲ್ಲಿ ಜಾನುವಾರುಗಳನ್ನ ಸಾಕುತ್ತಲಿದ್ದರಿಂದಲೂ ದೀಪಾವಳಿಯ ಕಡೆಯ ದಿನದ ಬಲಿ ಪಾಡ್ಯಮಿ ಮೊದಲೆರಡು ದಿನಗಳಿಗಿಂತ ಆಚರಣೆಯಲ್ಲಿ ನಮಗೆ ಹೆಚ್ಚು ಮುಖ್ಯವಾಗುತ್ತಿದ್ದುದು ಸಹಜ. ಸಾಲದ್ದಕ್ಕೆ ನಾನು ದಕ್ಷಿಣ ಕನ್ನಡ ಮೂಲದವನಾಗಿದ್ದರೂ ಅಚ್ಚ ಮಲೆನಾಡಾದ ಘಟ್ಟದ ಮೇಲಿನ ತೀರ್ಥಹಳ್ಳಿಯಲ್ಲಿ ಹುಟ್ಟಿ ಬೆಳೆದ ಕಾರಣ ದೇಶಾಚಾರದಂತೆ ನಮ್ಮ ದೀಪಾವಳಿಯ ಆಚರಣೆಯಲ್ಲಿ ಸ್ಥಳಿಯ ರಿವಾಜುಗಳ ಪ್ರಭಾವವೂ ಆಗಿತ್ತು. ಇದೊಂಥರಾ ಎರಡು ರೀತಿಯ ಆಚರಣೆಯನ್ನ ನಮ್ಮ ಅನುಕೂಲತೆಗೆ ತಕ್ಕಂತೆ ಮಾರ್ಪಡಿಸಿಕೊಂಡು ಆಚರಿಸುವ ಅನುಕೂಲ ಸಿಂಧು ವಿಧಾನವಾಗಿತ್ತು.ನಮ್ಮದೋ "ಸೌರಮಾನ ಪಂಚಾಂಗ" ಅದರೆ ಇಲ್ಲಿ ಘಟ್ಟದ ಮೇಲೆ ತದ್ವಿರುದ್ಧವಾದ " ಚಾಂದ್ರಮಾನ ಪಂಚಾಂಗ"ದ ಅನುಕರಣೆ. ಆದರೂ ತೀರ್ಥಹಳ್ಳಿಯಲ್ಲಿದ್ದಷ್ಟು ಕಾಲ ಅಲ್ಲಿನ ಪದ್ಧತಿಯ ಪ್ರಕಾರವೆ ಅನುಸರಿಸಿಕೊಂಡು ಅಮ್ಮ ಹಬ್ಬಗಳನ್ನ ಆಚರಿಸುತ್ತಿದ್ದರು. ಅಜ್ಜನ "ಗಜಾನನ ಕಂಪನಿ"ಯ ಡ್ರೈವರ್ ಸಂಬಳವೆ ಆದಾಯದ ಮೂಲವಾಗಿದ್ದ ನಮ್ಮ ಮನೆಯಲ್ಲಿ ಆದಾಯದ ಉಪ ಮೂಲ ಹೈನುಗಾರಿಕೆ ಅಗಿತ್ತು. ಹಾಗಂತ ನಾವೇನೂ ಹಂಡೆಗಟ್ಟಲೆ ಹಾಲು ಕರೆದು ಮಾರುವಷ್ಟು ಜಾನುವಾರುಗಳನ್ನ ಸಾಕಿರಲಿಲ್ಲ. ನಮ್ಮಲ್ಲಿದ್ದದೆಲ್ಲ ಅರ್ಧ ಅಥವಾ ಹೆಚ್ಚೆಂದರೆ ಒಂದು ಲೀಟರಿನಷ್ಟು ಹಾಲು ಕರೆಯಬಲ್ಲ ಮಲೆನಾಡು ಗಿಡ್ಡದ ತಳಿಯ ಜಾನುವಾರುಗಳು. ಅವಕ್ಕೆ ತಳಿಯಾಂತರದ ಪ್ರಯೋಗ ನಡೆಸಿ ಅಮ್ಮ ಸಿಂಧಿ ದನಗಳ ಅಡ್ದ ತಳಿಯ ಎರಡು ಮೂರು ದನಗಳನ್ನ ಹುಟ್ಟಿಸಲು ಯಶಸ್ವಿಯಾಗಿದ್ದರು. ಒಂದು ಲೋನೆಮ್ಮೆಯೂ ಮನೆಯ ಹಟ್ಟಿಯಲ್ಲಿತ್ತು. ಎಲ್ಲಾ ಸೇರಿ ಮನೆಯ ಖರ್ಚು ಕಳೆದು ಕುಡ್ತೆ, ಅರ್ಧ ಲೀಟರಿನ ಲೆಕ್ಖದಲ್ಲಿ ಎರಡು ಲೀಟರ್ ನಿತ್ಯ ಮಾರುತ್ತಿದ್ದೆವೇನೋ. ಒಟ್ಟಿನಲ್ಲಿ ಅಲ್ಲಿಗಲ್ಲಿಗೆ ಸರಿ ಹೋಗುವಷ್ಟು ಪಶು ಸಂಪತ್ತು ನಮ್ಮ ಹಟ್ಟಿಯಲ್ಲಿತ್ತು.ವರ್ಷಕ್ಕೊಮ್ಮೆಯೋ ಅಥವಾ ಅದು ತುಂಬಿದಾಗಲೋ ಎರಡು ಬಾರಿ ನಮ್ಮ ಹಿತ್ತಲಿನಲ್ಲಿದ್ದ ಗೊಬ್ಬರದ ಗುಂಡಿಯಿಂದ ಸಗಣಿ ಗೊಬ್ಬರವನ್ನ ಮಾರಿ ಇನ್ನಷ್ಟು ಪುಡಿ ಕಾಸನ್ನ ಅಮ್ಮ ಕೂಡುತ್ತಿದ್ದರು. ಮನೆಯ ನಿತ್ಯದ ಖರ್ಚಿಗೆ ಅಷ್ಟು ಧಾರಾಳ ಸಾಲುತ್ತಿದ್ದವು. ತೀರ್ಥಹಳ್ಳಿಯ ಸೋಮವಾರದ ಸಂತೆಯಲ್ಲಿ ನಿತ್ಯ ಬಳಕೆಯ ತರಕಾರಿಗಳನ್ನ ಚೌಕಾಸಿ ಮಾಡಿ ಕೊಂಡು, ಮನೆ ಹಿತ್ತಲಿನ ಗೊಬ್ಬರ ಗುಂಡಿಗೆ ಹಬ್ಬಿಸಿದ ಚಪ್ಪರದಲ್ಲಿ ಬೆಳೆದ ತೊಂಡೆ, ಬಸಳೆ, ಅವರೆಯ ಬಳ್ಳಿಯ ಫಲಗಳನ್ನ ಬಳಸಿ, ಅಲ್ಲೆ ಮೂಲೆಯಲ್ಲಿದ್ದ ಪಪ್ಪಾಯದ ಕಾಯಿಗಳನ್ನ ಬಳಸಿದ ಮೇಲೋಗರಗಳನ್ನ ಮಾಡಿ ಹೇಗೋ ನಮ್ಮ ನಿಯಮಿಯತ ವೆಚ್ಚಗಳನ್ನ ಹಿಡಿತದಲ್ಲಿಡುವಂತೆ ಮನೆವಾರ್ತೆಯನ್ನ ಅತ್ಯಂತ ಚಾಣಾಕ್ಷತೆಯಿಂದ ಅಮ್ಮ ನಿರ್ವಹಿಸುತ್ತಿದ್ದರು. ಗ್ರಾಮೀಣ ಭಾಗದ ಅಂತಹ ಬದುಕಿನ ದೊಂಬರಾಟವನ್ನ ಹದ ತಪ್ಪದ ಹಗ್ಗದ ನಡುಗೆಯಂತೆ ನಿತ್ಯ ಮಾಡುವ ಹೆಂಗಸರಿಂದ ದೇಶ ಸಂಭಾಳಿಸಲಿಕ್ಕೆ ಏದುಸಿರು ಬಿಡುತ್ತಿರುವ ಮಹಾ"ಮೌನಿ" ಸಿಂಗ ಮತ್ತು ಅವರ ತಿಜೋರಿಯ ಗೂರ್ಖಾ ಅಡ್ಡ ಪಂಚೆಯ ಗಿರಾಕಿ ಪಳನಿಯಪ್ಪನ ಮಗ ಚಿದಂಬರಂನಂತಹ ಅಡ್ಡ ಕಸುಬಿ ಅರ್ಥ ಶಾಸ್ತ್ರಜ್ಞರು ಕಲಿತಯುವುದು ಬೇಕಾದಷ್ಟಿದೆ. ಎಲ್ಲಿಯೂ ಲೋಪವಾಗದಂತೆ ತುಂಬಿದ ಮನೆಯ ಅಗತ್ಯಗಳನ್ನ ಯಶಸ್ವಿಯಾಗಿ ಸರಿ ಸುಮಾರು ಮೂರು ದಶಕ ನಿರ್ವಹಿಸಿದ ಕೀರ್ತಿ ನಮ್ಮಮ್ಮನದು.ಹಬ್ಬಗಳಲ್ಲಿ ಆದರಲ್ಲೂ ದೀಪಾವಳಿಯ ಕಡೆಯ ದಿನದ ಬಲಿ ಪಾಡ್ಯಮಿಯ ಗೋಪೂಜೆಯ ಹೊತ್ತಿನಲ್ಲಿ ನಮ್ಮ ಮನೆಯಲ್ಲಿ ಗಡಿಬಿಡಿ ಏರ್ಪಡುತ್ತಿತ್ತು. ಭಾನು, ಲಕ್ಷ್ಮಿಯರ ಅಸಂಖ್ಯ ಸಂತಾನಗಳ ನಡುವೆ ಎಮ್ಮೆಯಮ್ಮ ಹಾಗೂ ಅವಳ ಮಗರಾಯ ಮರಿ ಕೋಣಕುಮಾರನಿಗೂ ಅಂದು ಬಿಸಿ ನೀರಿನ ಸ್ನಾನದ ಸೌಭಾಗ್ಯ!. ಆಗಾಗ ನಿಯಮಿತವಾಗಿ ಅವರೆಲ್ಲರಿಗೂ ಸ್ನಾನ ಮಾಡಿಸಲಾಗುತ್ತಿತ್ತಾದರೂ. ದೀಪಾವಳಿಯಂದು ಮಾತ್ರ ಚೂರು ಎಣ್ಣೆ ಸವರಿದ ಶಾಸ್ತ್ರ ಮಾಡಿ ವಿಶೇಷವಾಗಿ ಅವರೆಲ್ಲರಿಗಂತಲೆ ನೀರು ಕಾಯಿಸಿ ತೆಂಗಿನ ಚೊಪ್ಪಿನಲ್ಲಿ ತಿಕ್ಕಿತಿಕ್ಕಿ ಅವರ ಸಂತಾನವನ್ನೆಲ್ಲ ಅಂದು ಮೀಯಿಸಲಾಗುತ್ತಿತ್ತು. ಕಸ್ತೂರಿ ಬಾರ್ ಸೋಪಿನ ಬಿಲ್ಲೆಗಳನ್ನ ಆವರೆಲ್ಲರ ಮೈ ಮೇಲೆಲ್ಲ ಉಜ್ಜಿ ಉಜ್ಜಿ ನೊರೆ ಉಕ್ಕುವಂತೆ ಚೊಪ್ಪಿನಲ್ಲಿ ಅನಂತರ  ತಿಕ್ಕಿತಿಕ್ಕಿ ಅವರೆಲ್ಲರ ಮೈಯನ್ನ ಲಕ ಲಕ ಹೊಳೆಯುವಂತೆ ಮಾಡುವ ಕಾಯಕದಲ್ಲಿ ಯಾರು ಕರೆಯದಿದ್ದರೂ ಮುಂಚೂಣಿಯವನಾಗಿ ಕರೆಯದೆ ಬರುವ ಅತಿಥಿಯಂತೆ ಆಗಾಗ ಸೊಂಟದ ಬೆಳ್ಳಿ ಉಡಿದಾರದಿಂದಾಚೆ ಜಾರುವ ಕಿರು ಚಡ್ದಿ ಏರಿಸಿಕೊಂಡ ಶೂರ ನಾನು ಮುನ್ನುಗ್ಗುತ್ತಿದ್ದೆ.ಸಾಮಾನ್ಯವಾಗಿ ದನಗಳನ್ನ ಮೀಯಿಸುವುದು ಅಜ್ಜನ ಕೆಲಸ. ಗೋಪೂಜೆಯಾದ್ದರಿಂದ ಅಜ್ಜನ ಬಸ್ಸಿನ ಲೈನಿಗೆ ಹೋಗುವ ಡ್ಯೂಟಿಗೆ ಅವತ್ತು ರಜೆ. ಬೆಳ್ಳಂಬೆಳಗ್ಯೆ ಅವರು ಬರಿ ಕೋಮಣದಲ್ಲಿ (ಲಂಗೋಟಿ) ಮನೆ ಹಿಂಭಾಗದ ಬಚ್ಚಲಿನ ಹಂಡೆಯ ಒಲೆಗೆ ತೆಂಗಿನ ಮಡಿಲ ಸೋಗೆ ತುರುಕಿ ಸೀಮೆ ಎಣ್ಣೆಯನ್ನಷ್ಟು ಚೋಪಿ ಬೆಂಕಿ ಎಬ್ಬಿಸುವಾಗ ನಾನು ಸದಾ ಜಾರುವ ನನ್ನ  ಚಡ್ಡಿ ಅವತಾರದೊಂದಿಗೆ ಅಮ್ಮ ಕೊಟ್ಟ ಎಣ್ಣೆಯ ಮಿಳ್ಳಿ ಹಿಡಿದು ಅಲ್ಲಿ ಹಾಜರಾಗುತ್ತಿದ್ದೆ. ಬೆಂಕಿ ಸರಿಯಾಗಿ ಹೊತ್ತಿಕೊಂಡದ್ದು ಖಾತ್ರಿಯಾಗುತ್ತಲೆ ಅಜ್ಜ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಕುಕ್ಕರಗಾಲಿನಲ್ಲಿ ಎಳೆ ಬಿಸಿಲು ಕಾಯಿಸುತ್ತಾ ಕೂರುತ್ತಿದ್ದರು. ಅವರ ಆ  ಹೊತ್ತಿನ ಚಾ ಅಲ್ಲಿಗೆ ಸರಬರಾಜು ಆಗಿರುತ್ತಿತ್ತು. ಕಾರ್ತಿಕ ಮಾಸದ ಇಬ್ಬನಿ ಇಳೆಯ ತಬ್ಬುವ ಚುಮುಚುಮು ಚಳಿಗೆ ಎಳೆಯ ಸೂರ್ಯನ ಬಿಸಿಲ ಕಾವಿಗೆ ಕಾಯುತ್ತಾ ಮೈ ಒಡ್ಡುವ ಸುಖವ ಅನುಭವಿಸಿದವನೆ ಬಲ್ಲ! ಜೊತೆಗೆ ಮಿಳ್ಳಿಯಲ್ಲಿ ತುಸುವೆ ಬಿಸಿ ಮಾಡಿದ್ದ ಕೊಬ್ಬರಿ ಎಣ್ಣೆಯನ್ನ ನಾನು ನನ್ನ ಪುಟ್ಟ ಪುಟ್ಟ ಕೈಗಳಿಂದ ಅವರ ಬೆನ್ನಿಗೆ ಮಾಲೀಸು ಮಾಡುತ್ತಿದ್ದರೆ ನಾರಾಯಣ ಹೆಗಡೇರು ಅಂತರಿಕ್ಷದಲ್ಲಿ ತೇಲುವಂತೆ ಮುಖ ಮಾಡುತ್ತಾ ಅರೆ ನಿಮೀಲಿತ ಕಣ್ಣುಗಳಲ್ಲಿ ಹಗಲು ಕನಸು ಕಾಣುತ್ತಿದ್ದರು!


ಇವರ ಮಾಲೀಸು ಮುಗಿಯುವ ಹೊತ್ತಿಗೆ ಹಂಡೆಯ ನೀರು ಕೊತಕೊತ ಕುದಿದು ಕಾದಿರುತ್ತಿತ್ತು. ಅದನ್ನ ಅಮ್ಮ ಅಲ್ಯುಮೀನಿಯಂ ಬಕೇಟಿಗೆ ತೋಡಿ ಕೊಟ್ಟರೆ ಅದಕ್ಕೆ ತಣ್ಣೀರು ಬೆರೆಸಿ "ಹದ" ಮಾಡುವ ಹೊಣೆ ಮಾತ್ರ ನನ್ನದು. ಧಾರಾಳ ನೀರಾಟಕ್ಕೆ ಮುಕ್ತ ಪರವಾನಿಗೆ ದೊರೆಯುತ್ತಿದ್ದ, ನೀರಲ್ಲಿ ಬಿದ್ದು ಹೊಡಕಲು ಯಾರದೆ ಅನುಮತಿಯ ವಿಸಾ-ಪಾಸ್'ಪೋರ್ಟ್'ಗಳ ಅಗತ್ಯದ ಹಂಗು ಅಂದಿರಲಿಲ್ಲವಾಗಿ, ಒಂದೊಮ್ಮೆ ಮನೆಯ ದೊಡ್ಡವರ್ಯಾರಾದರೂ "ಇವನೇನು ದನಗಳಿಗೆ ಮೀಯಿಸುತ್ತಿದ್ದಾನ? ಇಲ್ಲ ಇವನೆ ನೀರಿಗೆ ಬಿದ್ದು ಕುಂಟೆ ಕೋಣನಂತೆ ಹೊಡಕುತ್ತಿದ್ದಾನ!" ಎನ್ನುವ ಗುಮಾನಿ ಬೆರೆತ ಕಣ್ಣುಗಳಿಂದ ನಡುನಡುವೆ ನನ್ನ ಅನುಮಾನಾಸ್ಪದ ನಡುವಳಿಕೆಯನ್ನ ದೃಷ್ಟಿಸುವುದೂ ಇತ್ತು. ಅಂತಹ ಸಮಯದಲ್ಲೆಲ್ಲ ಅಂತಹ ಸಂಶಯದ ಸೂಚನೆ ಸಿಕ್ಕವನೆ ನನ್ನ ಎಳೆಯ ಕೀರಲು ಕಂಠಕ್ಕೆ ಶಕ್ತಿ ಮೀರಿ ಬಲ ಕೊಟ್ಟು ಕೆಲಸಕ್ಕಿಂತ ಹೆಚ್ಚು ದೊಂಡೆ ದೊಡ್ದದು ಮಾಡುತ್ತಾ ನನ್ನಿಂದಾಗುತ್ತಲಿದ್ದ "ಅನ್ಯಾಯ"ದ ಅನಾಚಾರಗಳನ್ನೆಲ್ಲ ಆ "ಕಂಠ ಮಾಲಿನ್ಯ"ದಲ್ಲಿ ಮರೆಮಾಡಿ ಭಾರಿ ಜಂಬರ ಇರುವನಂತೆ ಅತ್ತಿಂದಿತ ಓಡಿಯಾಡಿ ದಂಡು ಕಡಿದು ಬಂದವನ ಹಾಗೆ ಫೋಜು ಕೊಟ್ಟು ಸಂಭಾವ್ಯ ಶಿಕ್ಷೆಯಿಂದ ಪಾರಾಗುತ್ತಿದ್ದೆ!ಆಮೇಲೆ ಅಜ್ಜ ಹಿಂದಿನ ಅಂಗಳಕ್ಕೆ ಒಬ್ಬೊಬ್ಬರಾಗಿ ಕೊಟ್ಟಿಗೆ ರಾಣಿಯರನ್ನ ಕರೆತಂದು ಕಟ್ಟುತ್ತಿದ್ದರು ನಾನು ನೀರು ಚೋಪಿ ಸಿಕ್ಕಸಿಕ್ಕಲ್ಲಿ ಆಥವಾ ನನ್ನ ಕೈ ಎಟುಕಿದಲ್ಲೆಲ್ಲಾ ಕಸ್ತೂರಿ ಬಾರ್ ಸೋಪು ತಿಕ್ಕಿದರೆ ಆಜ್ಜ ತಯಾರು ಮಾಡಿಕೊಂಡಿರುತ್ತಿದ್ದ ತೆಂಗಿನ ಚೊಪ್ಪಿನಲ್ಲಿ ಗಸಗಸ ಉಜ್ಜಿ ಮೈಗಂಟಿದ್ದ ಕೊಳೆ, ಉಣ್ಣೆ ಎಲ್ಲವನ್ನೂ ತೆಗೆದು ಬಿಸಿ ನೀರಿನ ಮಹಾ ಮಜ್ಜನದಲ್ಲಿ ಅವರನ್ನೆಲ್ಲ ಮುಳುಗಿಸುತ್ತಿದ್ದರು. ನಮ್ಮದು ಪೇಟೆ ಮನೆಯಾಗಿದ್ದರೂ ವಿಪರೀತ ಉಣ್ಣೆ ಕಾಟ ನಮ್ಮ ಕೊಟ್ಟಿಗೆಯಲ್ಲಿತ್ತು, ನಾಯಿ ಸಾಕುವುದೂ ಕೂಡಾ ಈ ಕಾರಣದಿಂದ ನಮಗೆ ಅಸಾಧ್ಯವೇ ಆಗಿತ್ತು. ಒಂದೆರಡು ಬಾರಿ ನನ್ನ ಮಾವ ಜಾತಿ ಆಲ್ಸೇಷಿಯನ್ ನಾಯಿಗಳನ್ನ ಬೆಂಗಳೂರಿನಿಂದಲೆ ನೇರವಾಗಿ ತಂದು ಸಾಕಲಿಕ್ಕೆ ಯತ್ನಿಸಿದರೂ ಹಾಳು ಉಣ್ಣೆಗಳ ಕಾರಣ ನಾಯಿಗಳು ಸೊರಗಿ ಸಾಯುವ ಸ್ಥಿತಿಗೆ ಬಂದು ಮುಟ್ಟಿದ್ದವು. ಅನಂತರ ಅವೆ ನಾಯಿಗಳನ್ನ ಇಂಬ್ರಗೋಡಿನ ಶ್ರೀನಿವಾಸಯ್ಯರ ಮನೆಗೆ ಕೊಟ್ಟೆವು, ಅಲ್ಲಿಗೆ ಹೋದದ್ದೆ ನಾಯಿಗಳ ಆರೋಗ್ಯದಲ್ಲಿ ಹಟಾತ್ ಚೇತರಿಕೆ ಉಂಟಾಗಿ ಅವುಗಳು ತಮ್ಮ ವಯೋ ಸಹಜವಾಗಿ ಚಟುವಟಿಕೆಯನ್ನ ಮೈಗೂಡಿಸಿಕೊಂಡವು! ಇದು ಹೀಗೇಕೆ ? ಎನ್ನುವ ನನ್ನ ಪ್ರಶ್ನೆಗೆ ಅಮ್ಮ ನಮ್ಮದು ನಾಗನ ನೆಲೆ ಇರುವ ಜಾಗ, ಇಲ್ಲಿ ಹಾಗೆಲ್ಲ ಪ್ರಾಣಿಗಳನ್ನ ಸಾಕುವುದು 'ನಾಗ ದೋಷ'ಕ್ಕೆ ಕಾರಣವಾಗುತ್ತದೆ, ಹೀಗಾಗಿಯೆ ಉಣ್ಣೆಯ ಕಾಟ ಹೆಚ್ಚಿಗೆ ಆಗೋದು ಅಂತ ಹೇಳಿ ಹೆದರಿಕೆ ಹುಟ್ಟಿಸುತ್ತಿದ್ದರು. ಈ ಸುಡುಗಾಡು 'ನಾಗ ದೋಷ'ದ ದೆಸೆಯಿಂದ ನಮಗೆ ಕಡೆಗೂ ನಾಯಿಗಳನ್ನ ಸಾಕಲಾಗಲೇ ಇಲ್ಲ.


ಅದು ಅತ್ತಲಾಗಿರಲಿ ಮತ್ತೆ ಗೋ ಮಜ್ಜನದ ಕಥೆಗೆ ಮರಳೋಣ. ಸ್ನಾನದ ನಂತರ ಅವರೆಲ್ಲರೂ ಮೈ ಕೊಡವಿಕೊಂಡರೆ ನನಗೆ ಹನಿ ಸಿಡಿದು ಖುಷಿಯಾಗುತ್ತಿತ್ತು. ಅವರೆಲ್ಲರ ಮೈಯಿಂದ ಏಳುತ್ತಿದ್ದ ಮೈ ಶಾಖದ ಹಬೆಯನ್ನ ನಾ ನೋಡುತ್ತಲೆ ಮೈ ಮರೆಯುವಾಗ ಎಲ್ಲರನ್ನೂ ಮತ್ತೊಂದು ಗೊಂತಿಗೆ ಅಜ್ಜ ಕಟ್ಟಿ ಕೊಟ್ಟಿಗೆ ತೊಳೆಯಲು ಅಣಿಯಾಗುತ್ತಿದ್ದರು. ನಮ್ಮ ಕೊಟ್ಟಿಗೆಗೆ ಚಪ್ಪಡಿಯ ನೆಲಹಾಸು ಹಾಕಿದ್ದರಿಂದ ನೆಲ ತೊಳೆಯೋದು ಒಂದು ಸವಾಲಿನ ಕೆಲಸ ಆಗಿರಲಿಲ್ಲ. ಮೊದಲು ಬರಿ ನೀರನ್ನ ಹಾಕಿ ಗುಡಿಸಿ ತೊಳೆದು, ಅನಂತರ ಸ್ವಲ್ಪ ಬ್ಲೀಚಿಂಗ್ ಪೌಡರ್ ಚುಮುಕಿಸಿ ಕೆಲಕಾಲದ ನಂತರ ಅದನ್ನ ಬ್ರೆಷ್ಷಿನಲ್ಲಿ ತಿಕ್ಕಿ ತಿಕ್ಕಿ ತೊಳೆದು ಸ್ವಚ್ಛಗೊಳಿಸಿ ಅಜ್ಜ ಅಲ್ಲಿಂದ ಹೊರ ಬಂದರೆ ಅಲ್ಲಿಯವರೆಗೆ ಅವರ ತೈನಾತಿಯಾಗಿ ನೀರಿನ ಸರಬರಾಜು ಮಾಡುತ್ತಿದ್ದ ನಾನು ಕೊನೆಗೆ ಕೊಟ್ಟಿಗೆ ಪೂರ್ತಿ ಫಿನಾಯಿಲ್ ಚುಮುಕಿಸಿ ಸ್ವಚ್ಛತೆಯ ಕೆಲಸ ಖೈದುಗೊಳಿಸುತ್ತಿದ್ದೆ. ಅಷ್ಟರಲ್ಲಿ ಮೈ ತೊಳೆಸಿಕೊಂಡ ದನಗಳೆಲ್ಲ ಬಿಸಿಲಿಗೆ ನೀರು ಆರಿ ಫಳಫಳ ಹೊಳೆಯುತ್ತಾ ನಿಂತಿದ್ದರೆ, ಅವರ ಕುಲತಿಲಕರು ತಮ್ಮ ಕಿವಿಗೆ ನುಗ್ಗುತ್ತಿದ್ದ ಗಾಳಿಗೆ ಕಚಗುಳಿ ಇಟ್ಟಂತಾಗಿ ಅತ್ತಿಂದಿತ್ತ ಜಿಗಿಜಿಗಿದು ಓಡಿಯಾಡುತ್ತಾ ತಮ್ಮ ಎಲ್ಲೆ ಖಚಿತಪಡಿಸಿಕೊಳ್ಳುತ್ತಾ ದರ್ಬಾರು ನಡೆಸುತ್ತಿದ್ದವು.ಅಮ್ಮ ತಯಾರಾಗಿಟ್ಟು ಹೋಗಿರುತ್ತಿದ್ದ ಕಾವಿ ಹಾಗೂ ಜೇಡಿಯಲ್ಲಿ ಇಡ್ಲಿ ಕಪ್ಪನ್ನ ಅದ್ದಿ ಅದರ ಅಚ್ಚನ್ನ ದನಗಳ ಮೈ ಮೇಲೆ ಅಜ್ಜ ಮೂಡಿಸುತ್ತಿದ್ದರು. ಆಮೇಲೆ ಎಲ್ಲ ದನಗಳ ಕೊಂಬಿಗೆ ಕಾವಿ - ಜೇಡಿ ಬಳಿದು ಕುತ್ತಿಗೆಗೆ ಚಂಡೂ ಹೂವಿನ ಹಾರ ಹಾಗೂ ಉಗುಣೆ ಸರ ಹಾಕಲಾಗುತ್ತಿತ್ತು. ಹಿತ್ತಲಿನ ತುಂಬ ಚಂಡೂ ಹೂಗಳ ಸುವಾಸನೆ ಆವರಿಸುತ್ತಿರೋವಂತೆ ಅಡುಗೆ ಮನೆಯಿಂದ ಕಾಯಿಗಂಜಿ ಹಾಗೂ ಸೌತೆಕಾಯಿ ಕಡುಬಿನ ಪರಿಮಳವೂ ಮೂಗು ಹೊಕ್ಕು ಕರುಳು ಸೇರಿ ಅಲ್ಲಿ ಅಡಗಿರುವ ಹಸಿವಿನ ಕಾಳ ಸರ್ಪವನ್ನ ಬಡಿದೆಬ್ಬಿಸುತ್ತಿತ್ತು. ಜೊತೆಗೆ ಪಾಯಸದ ಪರಿಮಳವೂ ಬಂದು ಮೂಗಿನ ಹೊಳ್ಳೆಗಳನ್ನ ಕೆರಳಿಸಿ ದನಗಳ ಅಲಂಕಾರ ಮಾಡಲೋ? ಇಲ್ಲಾ ಅಡುಗೆ ಮನೆಗೆ ಹೋಗಿ ಜೊಲ್ಲು ಸುರಿಸಲೋ? ಎನ್ನುವ ಗೊಂದಲಕ್ಕೆ ಬಿದ್ದು "ಅಕ್ಕಿ ಮೇಲೆ ಆಸೆ; ನೆಂಟರ ಮೇಲೆ ಪ್ರೀತಿ" ತರಹದ ಸ್ಥಿತಿ ನನ್ನದಾಗುತ್ತಿತ್ತು. ಚಂಡೂ ಹೂ ಗೋಪೂಜೆಯ ಒಂದು ಅವಿಭಾಜ್ಯ ಅಂಗ. ಅವತ್ತಿಗೆ ಅದಿಲ್ಲದೆ ಪೂಜೆಯೆ ಇಲ್ಲ ದನಗಳಿಗೆ. ಇನ್ನು ಉಗುಣೆ ಸರ ಈಗೆಲ್ಲ ಅಪರೂಪವಾಗಿರಲಿಕ್ಕೆ ಸಾಕು. ಕಾಡಿನಲ್ಲಿ ಸಿಗುವ ಕಾಟು ಮರವೊಂದರ ಕಾಯಿಗಳೆ ಉಗಣೆ. ನೋಡಲಿಕ್ಕೆ ಬಲಿತ ಕಾಫಿ ಹಣ್ಣುಗಳಂತೆ ಕಾಣುವ ಇವು ಅದೇ ರಂಗಿನಲ್ಲಿ ಹೊಳೆಯುತ್ತಿರುತ್ತದೆ. ಸ್ವಲ್ಪ ಗಡಸಾದ ಈ ಕಾಯಿಗಳನ್ನ ದಾರಕ್ಕೆ ಸುರಿದು ಪೋಣಿಸಿ ಹವಳದ ಹಾರದಂತೆ ಎರಡೆಳೆಯ ಹಾರವನ್ನಾಗಿಸಿ ಅವನ್ನ ದನ ಹಾಗೂ ಕರುಗಳ ಕುತ್ತಿಗೆಗೆ ಕಟ್ಟಲಾಗುತ್ತಿತ್ತು. ಕಟ್ಟಿ ಈಚೆಗೆ ಬರುವುದರೊಳಗೆ ಪರಸ್ಪರರ ಹೂವಿನ ಹಾರಗಳನ್ನ ಕಿತ್ತು ತಿಂದು ಮುಗಿಸುತ್ತಿದ್ದ ದನಗಳು ಈ ಉಗುಣೆ ಸರಕ್ಕೆ ಮಾತ್ರ ತಪ್ಪಿಯೂ ಬಾಯಿ ಹಾಕುತ್ತಿರಲಿಲ್ಲ. ಬಹುಷಃ ಅವು ಕಟು ಕಹಿಯ ರುಚಿ ಹೊಂದಿರುತ್ತಿದ್ದವೇನೋ! ಹೀಗಾಗಿ ಗೋ ಪೂಜೆಯಾದ ತಿಂಗಳವರೆಗೂ ಈ ಉಗುಣೆ ಸರ ಅವುಗಳ ಕುತ್ತಿಗೆಯಲ್ಲಿ ಚಂದವಾಗಿ ಜೋತಾಡುತ್ತಿರುತ್ತಿದ್ದವು.

ಇಷ್ಟೆಲ್ಲಾ ಆಗುವಾಗ ಘಂಟೆ ಹತ್ತಿರ ಹತ್ತಿರ ಹತ್ತರ ಸಮೀಪ ಆಗಿರುತ್ತಿದ್ದು ಚಾ ಬಿಟ್ಟು ಇನ್ನೇನೂ ಹೊಟ್ಟೆಗೆ ಬೆಳಗಿನಿಂದ ಬಿದ್ದರದೆ ಹೊಟ್ಟೆ ಚುರುಗುಟ್ಟಲಿಕ್ಕೆ ಆರಂಭಿಸಿರುತ್ತಿತ್ತು. ಆದರೆ ಪೂಜೆಯಾಗದೆ ತಿಂಡಿ ಕೊಡುತ್ತಿರಲಿಲ್ಲವಾಗಿ ಆದಷ್ಟು ಬೇಗ ಪೂಜೆ ಆಗಲಿ ಎಂದು ನಾನು ಮನಸೊಳಗೆ ಹಾರೈಸುತ್ತಾ ಸ್ನಾನ ಮಾಡಿಸಿಕೊಳ್ಳುತ್ತಿದ್ದೆ. ದನಗಳಿಗೆ ಸ್ನಾನ "ಮಾಡಿಸುತ್ತಿದ್ದ" ನನಗೆ ಸ್ವಂತಃ ಸ್ನಾನ ಮಾಡಲಿಕ್ಕೆ ಮಾತ್ರ ಬರುತ್ತಲೆ ಇರಲಿಲ್ಲ! ಯಾರಾದರೂ ಹಿರಿಯರು ದನದ ಕರುಗಳನ್ನ ಹಿಡಿಯುವಂತೆ ನನ್ನನ್ನೂ ಹಿಡಿದು ನನ್ನ "ಕಣ್ಣಿಗೆ ಸೋಪು ಹೋಯ್ತು ಉರೀಈಈಈಈಈಈಈಈಈ" "ಕಿವಿಗೆ ನೀರು ಹೊಕ್ಕಿತು" ಮುಂತಾದ ಸುಳ್ಳುಸುಳ್ಳೇ ಆಕ್ಷೇಪಗಳನ್ನೆಲ್ಲ ಕೇರು ಮಾಡದೆ ಮೀಯಿಸುವ ತನಕ ನಾನು ಸ್ವಚ್ಛವಾಗುತ್ತಿರಲಿಲ್ಲ. ಮೀಯಿಸುವ ವಿಷಯದಲ್ಲಿ ಅವತ್ತು ನನಗೂ ದನಗಳಿಗೂ ಏನೂ ವ್ಯತ್ಯಾಸವೆ ಇರುತ್ತಿರಲಿಲ್ಲ. ಹೆಚ್ಚೆಂದರೆ ಇಬ್ಬರಿಗೂ ಉಪಯೋಗಿಸುತ್ತಿದ್ದ ಸಾಬೂನು ಬೇರೆ ಬೇರೆಯಾಗಿರುತ್ತಿತ್ತು ಅಷ್ಟೆ!


ಅಷ್ಟರಲ್ಲಿ ಅಕ್ಕಪಕ್ಕದ ಮನೆಯವರೂ ತಮ್ಮ ತಮ್ಮ ಪೂಜಾ ಪರಿಕರ ಮತ್ತು ನೈವೇದ್ಯಗಳೊಂದಿಗೆ ನಮ್ಮ ಕೊಟ್ಟಿಗೆಯ ಬಾಗಿಲಲ್ಲಿ ನೆರೆಯುತ್ತಿದ್ದರು. ಇತ್ತ ಅಮ್ಮ ನಿತ್ಯದ ಅಕ್ಕಚ್ಚು ಹಾಗೂ ತೌಡಿಗೆ ಹೆಚ್ಚು ಹಿಂಡಿ ಬೆರೆಸಿ ಬಿಸಿ ಮಾಡಿದ ಮುರುವನ್ನ ಉಪ್ಪು ಬೆಲ್ಲ ಬೆರೆಸಿ ಇನ್ನಷ್ಟು ಸ್ವಾದಿಷ್ಟವಾಗಿಸಿ ಅವರೆಲ್ಲರ ಮುಂದೆ ತಂದಿಡುತ್ತಿದ್ದರು. ಹಬೆಯಾಡುವ ರುಚಿಯಾದ ಆ ಮುರುವಿಗೆ ಹಸಿದ ದನಗಳು ಬಾಯಿ ಹಾಕಿ ಸಶಬ್ಧವಾಗಿ ಹೀರುತ್ತಿರುವಂತೆ ಆಗ ಅವರೆಲ್ಲರ ಪೂಜೆ ಆರಂಭವಾಗುತ್ತಿತ್ತು. ಮೊದಲಿಗೆ ದೀಪವನ್ನ ಬೆಳಗಿಸಿ ಅದರ ಬೆಳಕನ್ನ ದನಗಳಿಗೆ ತೋರಿಸಿ ಆ ಕಣ್ಣುಗಳಲ್ಲಿ ದೀಪದ ಪ್ರತಿಬಿಂಬ ಕಾಣುತ್ತಿರುವಂತೆ ಕಾಲಿನ ಗೊರಸು ಹಾಗೂ ಹಣೆ-ಕೊಂಬಿಗೆ ಅರಷಿಣ ಕುಂಕುಮ ಹಚ್ಚಿ ಆಜ್ಜ ಆರತಿ ಬೆಳಗುತ್ತಿದ್ದರು. ಮುತ್ತೈದೆಯರು ಇನ್ನುಳಿದ ದನಗಳಿಗೂ ಅರಷಿಣ ಕುಂಕುಮ ಹಚ್ಚಿ ವಾತಾವರಣವನ್ನ ಕಳೆಗಟ್ಟಿಸುತ್ತಿದ್ದರು. ಈಗಾಗಲೆ ಕಾವಿ ಹಾಗೂ ಜೇಡಿಯ ಮೇಕಪ್ಪಿನ ಜೊತೆ ಚಂಡೂ ಹೂವಿನ - ಉಗುಣೆ ಸರದ ಅಲಂಕಾರದಲ್ಲಿ ಚಂದ ಕಾಣುವ ದನಗಳು ಈಗ ರಂಗೋಲಿ ಬಿಟ್ಟ ಕೊಟ್ಟಿಗೆಯಲ್ಲಿ ಅರಷಿಣ ಕುಂಕುಮ ಶೋಭಿತೆಯರಾಗಿ ವಿಶ್ವಸುಂದರಿಯರಿಗೆ ಸಡ್ಡು ಹೊಡೆಯುವಂತೆ ಕಾಣಿಸುತ್ತಿದ್ದರು. ಆರತಿಯ ನಂತರ ಎಲ್ಲರಿಗೂ ಸಿಹಿ ಅವಲಕ್ಕಿ ಹಾಗೂ ಕಡಲೆ ಉಸುಳಿಯ ಪ್ರಸಾದ ಹಾಗೂ ಕಾಯಿ ನೀರಿನ ಮತ್ತು ಪಂಚಾಮೃತದ ತೀರ್ಥ ಹಂಚಿಕೆಯಾಗುತ್ತಿತ್ತು. ಅಲ್ಲಿಗೆ ಗೋಪೂಜೆ ಮುಗಿದು ನಮ್ಮ ಹೊಟ್ಟೆ ಪೂಜೆಯ ಗೌಜಿ ಆರಂಭವಾಗುತ್ತಿತ್ತು.ನಮ್ಮ ದೇವರ ಗೂಡಿನಲ್ಲಿದ್ದ ಅಷ್ಟೂ ಪೂಜಾ ಸಾಮಗ್ರಿಗಳು ಅವತ್ತು ಕೊಟ್ಟಿಗೆಗೆ ವಲಸೆ ಬಂದಿರುತ್ತಿದ್ದವು. ಘಂಟೆ ಮಣಿಯ ನಿನಾದ ಅವತ್ತು ಅಲ್ಲಿಂದಲೆ ಮೊಳಗುತ್ತಿತ್ತು. ಹಬ್ಬದ ವಿಶೇಷ ಖಾದ್ಯಗಳಾಗಿ ಅವತ್ತು ನಾವು ತಿನ್ನಲಿದ್ದ ಸೌತೆ ಕಡುಬು, ಚಪ್ಪೆ ರೊಟ್ಟಿ, ಉದ್ದಿನ ದೋಸೆ ಹಾಗೂ ಪಾಯಸ ಇವೆಲ್ಲ ದನಗಳಿಗೂ ಶಾಸ್ತ್ರಕ್ಕಷ್ಟು ತಿನ್ನಿಸಿ ಅವತ್ತಿನ ಮಟ್ಟಿಗೆ ನಾವು ಸದಾ ಕಟ್ಟಿಯೇ ಸಾಕುತ್ತಿದ್ದ ದನಗಳನ್ನ ಮನೆಯಿಂದಾಚೆ ಸ್ವಲ್ಪ ಅಡ್ಡಾಡಲಿಕ್ಕೆ ಬಿಟ್ಟು ಹಬ್ಬದ ಅಂಕದ ಕೊನೆಯ ಪರದೆಯನ್ನ ಅಜ್ಜ ಎಳೆಯುತ್ತಿದ್ದರು. ಇವತ್ತು ನಮ್ಮಲ್ಲಿ ದನಗಳಿಲ್ಲ. ಬರಿದಾದ ಖಾಲಿ ಖಾಲಿ ಕೊಟ್ಟಿಗೆಯನ್ನ ನೋಡುವಾಗ ಹೊಟ್ಟೆಯಲ್ಲಿ ಅವ್ಯಕ್ತ ಸಂಕಟವಾಗುತ್ತದೆ. ಭಾನು, ಲಕ್ಷ್ಮಿಯರು ಕೇವಲ ಹಟ್ಟಿಯ ಅರಸಿಯರಾಗಿರದೆ ನಮ್ಮ ಮನೆಯ ಭಾಗ್ಯದ ದೇವತೆಗಳೆ ಆಗಿದ್ದರು. ಅವರೆಲ್ಲರ ಕೃಪೆಯಿಂದಲೆ ನಮ್ಮ ಮನೆಯ ಒಲೆಯಲ್ಲಿ ನಿತ್ಯ ಅನ್ನ ಬೇಯುತ್ತಿತ್ತು. ಅವರೆಲ್ಲರ ಋಣದಿಂದ ಬಹುಷಃ ನಮ್ಮ ಮನೆ ಮಂದಿಗೆ ಯಾವತ್ತಿಗೂ ಮುಕ್ತಿ ಇಲ್ಲವೇ ಇಲ್ಲ. ನಗರದ ಯಾಂತ್ರೀಕೃತ ಏಕತಾನತೆಯ ಬದುಕಿನಲ್ಲಿ ಆ ವಾಸ್ತವದ ಬದುಕಿನ ಸತ್ಯಗಳನ್ನೆಲ್ಲ ಕಳೆದುಕೊಂಡು ದೀಪಾವಳಿಯ ಕಾಲಕ್ಕೆ ದಿವಾಳಿಯಾಗಿದ್ದೇನೆ ಅನ್ನಿಸುವಂತಾಗಿದೆ.

03 November 2013

ಕರುನಾಡು ಕರಗಿದ ಹೊತ್ತು......ಕನ್ನಡಮ್ಮನ ಮತ್ತೊಂದು ಜನ್ಮದಿನ.

ನಮ್ಮ ಕರುನಾಡು ಕರ್ನಾಟಕವೆಂಬ ಹೊಸ ಹೆಸರು ಹೊತ್ತು ಭರ್ತಿ ಐವತ್ತೆಂಟು ವರ್ಷ. ೧೯೧.೯೭೬ ಚದರ ಕಿಲೋಮೀಟರ್ ವ್ಯಾಪ್ತಿಯ ಪ್ರದೇಶವನ್ನ "ಕರ್ನಾಟಕ"ವನ್ನಾಗಿ ಆಧಿಕೃತವಾಗಿ ಘೋಷಿಸುವಾಗ ಅಚ್ಚ ಕನ್ನಡದ ಅನೇಕ ಪ್ರದೇಶಗಳು ಆಕ್ಕಪಕ್ಕದ ರಾಜ್ಯಗಳ ಪಾಲಾಗಿ ಆದ ಅನ್ಯಾಯಕ್ಕೂ ಈಗ ಅಷ್ಟೆ ಪ್ರಾಯವಾಗಿದೆ! ಅಲ್ಲಿನ ಕನ್ನಡಿಗ ಇನ್ನೂ ಅತಿ ಅಸೆಯಿಂದ ನಮ್ಮತ್ತ ದೀನನಾಗಿ ನೋಡುತ್ತಿರುವಂತೆಯೆ ಕನ್ನಡಿಗರ ಜನಸಂಖ್ಯೆಯನ್ನ ಅರು ಕೋಟಿ ಹನ್ನೊಂದು ಲಕ್ಷದ ಮೂವತ್ತು ಸಾವಿರದ ಏಳುನೂರಾ ನಾಲ್ಕಕ್ಕೆ ಏರಿಸಿಕೊಂಡಿದ್ದೇವೆ!

ಸದ್ಯ ೩೦ ಜಿಲ್ಲೆಗಳು, ೨೨೦ ತಾಲೂಕುಗಳು, ೫೨
 ಉಪ ವಿಭಾಗಗಳು ಅಸ್ತಿತ್ವದಲ್ಲಿರುವ ನಮ್ಮ ಕರ್ನಾಟಕದಲ್ಲಿ ಕನ್ನಡವೆ ಅಧಿಕೃತ ಆಡಳಿತ ಭಾಷೆ. ಆದರೆ ಇಂದು ಇದು ಕೇವಲ ಬೂಟಾಟಿಕೆಯ ಮಾತಾಗಿ ಕಾಗದ ಹಾಗೂ ಸರಕಾರಿ ಸುತ್ತೋಲೆಯ ಕಡತಗಳಲ್ಲಿ ಮಾತ್ರ ಉಳಿದಿದೆ ಅನ್ನೋದು ಮಾತ್ರ ಕಠೋರ ಸತ್ಯ. ಕನ್ನಡವನ್ನೆ ವಿವಿಧ ಮಾಧ್ಯಮಗಳಲ್ಲಿ ಅನ್ನ ಸಂಪಾದನೆಯ ಹಾದಿಯನ್ನಾಗಿಸಿಕೊಂಡವರಲ್ಲಿ ಅನೇಕರು ಮೇಲೆ ಆದರ್ಶದ ಬೋಳೆ ಮಾತು ಹೊಡೆಯುತ್ತಾ ಒಳಗೊಳಗೆ ಕೇಂದ್ರೀಯ ಪಠ್ಯ ವ್ಯವಸ್ಥೆಯಿರುವ ಆಂಗ್ಲ ಮಾಧ್ಯಮದಲ್ಲಿ ತಮ್ಮ ಕುಲೋದ್ಧಾರಕ, ಕುಲೋದ್ಧಾರಕಿಯರನ್ನ ಓದಿಸುತ್ತಿದ್ದಾರೆ. ಎಲ್ಲೋ ಆಪರೂಪಕ್ಕೆ ಕನ್ನಡ ಮಾಧ್ಯಮಗಳಲ್ಲಿ ಬದ್ಧತೆಯಿಂದ ಓದಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಕುಂದರಾಜ್'ರಂತವರನ್ನ ಕಾಣಬಹುದು. ಇನ್ನು ಬಹುಸಂಖ್ಯಾತರದು ಊಸರವಳ್ಳಿ "ಕನ್ನಡೆಮ್ಮೆಯ ಶೇವೆ"! ನಾಲಗೆಯ ಮೇಲೊಂದು ಅಸಲಲ್ಲಿ ಇನ್ನೊಂದು. ಇಂತಹ "ಉಟ್ಟು ಖನ್ನಡ ಓರಾಟಗಾರ"ರ ಹಾವಳಿಯಲ್ಲಿ ಕನ್ನಡಮ್ಮ ನಲುಗಿ ಹೋಗುತ್ತಿದ್ದಾಳೆ.

ಪೇಟೆಯಲ್ಲಿ ಮೂರು ಕಾಸಿನ ಸಾಮಾನು ಖರೀದಿಸಲಿಕ್ಕೂ ಇಲ್ಲಿನ ರಾಜಧಾನಿಯಲ್ಲಿ ಆಂಗ್ಲದಲ್ಲಿ ವ್ಯವಹರಿಸುವಂತೆ ಆಗಿದ್ದರೆ; ಅದಕ್ಕೆ ಅದನ್ನ ಮಾರುವ ಭಂಡ ವ್ಯಾಪಾರಿಯ ದೌಲತ್ತಿನಷ್ಟೆ ನಮ್ಮ ಮಕ್ಕಳ ಮುಂದೆ ಚೂರೂ ಬಾರದಿದ್ದರೂ ಕೆಟ್ಟ ಆಂಗ್ಲದಲ್ಲೆ ಹರುಕು ಮುರುಕು ವ್ಯವಹಾರ ನಡೆಸಿ ಅವರಿಗೂ ಅದರ ಮೇಲ್ಪಂಕ್ತಿ ಹಾಕಿಕೊಡುವ ಹೆತ್ತವರ ಕೊಡುಗೆಯೂ ಸಾಕಷ್ಟಿದೆ. ಅದರ ನಡುವೆಯೂ ಮತ್ತೆ ಕರುನಾಡಿನಲ್ಲಿ "ಕನ್ನಡ ತಾಯಿ"ಯ ಜನ್ಮದಿನ ಆವರಿಸಿದೆ. ಆಕೆಗೆ ಮುಂದಾದರೂ ಇಂತ (ಕಳ್ಳ ನನ್ನ) ಮಕ್ಕಳ ಕಾಟದಿಂದ ಮುಕ್ತಿ ಸಿಗಲಿ.

ಕರುನಾಡ ಕಿರು (ಕಿರಿಕಿರಿ) ಪುರಾಣ.....

ನಮ್ಮ ಕರ್ನಾಟಕದ ಸದ್ಯದ ಭೂಪಟದ ಅಸ್ತಿತ್ವಕ್ಕೆ ಐವತ್ತೆಂಟು ವರ್ಷ ಮಾತ್ರ ತುಂಬಿದ್ದರೂ ಕರುನಾಡಿನ ಪ್ರಸ್ತಾಪ ಮಹಾಕಾವ್ಯ ರಾಮಾಯಣ ಹಾಗೂ ಭಾರತದ ಇತಿಹಾಸ ಮಹಾಭಾರತದಲ್ಲೂ ಕಾಣ ಸಿಗುತ್ತದೆ. ರಾಮಾಯಣದ ಕಿಷ್ಕಿಂದೆಯ ಕಪಿಗಳು ನಮ್ಮ ನಾಡಿನ ನಟ್ಟ ನಡು ಭಾಗದ ಇಂದಿನ ಕೊಪ್ಪಳ, ಬಳ್ಳಾರಿ ಸೀಮೆಯ ಆದಿವಾಸಿಗಳಾಗಿರಲಿಕ್ಕೆ ಸಾಕು. ಭಾರತೀಯರ ಧಾರ್ಮಿಕ ನಂಬುಗೆಯನುಸಾರ ಅಸ್ತಿತ್ವದಲ್ಲಿರುವ ವಿಂಧ್ಯ ಪರ್ವತದ ಬೆಳವಣಿಗೆಯನ್ನ ನಿಗ್ರಹಿಸಿ ದಕ್ಷಿಣ ಹಾಗೂ ಉತ್ತರ ಭಾರತಗಳನ್ನ ಸಮವಾಗಿ ವಿಭಜಿಸಿದ ಸಪ್ತ ಋಷಿಗಳಲ್ಲಿ ಒಬ್ಬರಾಗಿದ್ದ ತಮಿಳು ಮೂಲದ ಅಗಸ್ತ್ಯ ಮುನಿಗಳು ದೇವಗಂಗೆಗೆ ಸರಿಸಮವಾಗಿ ಜಲಧಾರೆಯ ಬುಗ್ಗೆ ಸೃಷ್ಟಿಸಲಿಕ್ಕೆ ಆಯ್ದುಕೊಂಡದ್ದು ಇಂದಿನ ಕೊಡಗಿನ ಬ್ರಹ್ಮಗಿರಿಯನ್ನ. ಇಂದಿಗೂ ಚಿರಂಜೀವಿಯಾದ ಅವರು ಅಲ್ಲಿಯೆ ಸುಳಿದಾಡುತ್ತಿದ್ದಾರೆ ಎನ್ನುವ ಗಾಢ ನಂಬುಗೆಯಿದೆ.

ಸೃಷ್ಟಿಗೆ ಪ್ರತಿ ಸೃಷ್ಟಿಯನ್ನ ಆಗ ಮಾಡಿ ತೋರಿಸಿದ ಹಟಯೋಗಿ ಮಹಾಮುನಿ ವಿಶ್ವಾಮಿತ್ರರೂ ಕರುನಾಡಿನ ಮೂಲದವರೆ ಎಂಬ ನಂಬುಗೆ ಚಾಲ್ತಿಯಲ್ಲಿದೆ. ತೆಂಗಿಗೆ ಪ್ರತಿಯಾಗಿ ತಾಳೆಯನ್ನೂ, ದನಕ್ಕೆ ಪ್ರತಿಯಾಗಿ ಎಮ್ಮೆಯನ್ನೂ ಸೃಷ್ಟಿಸಿದ ಖ್ಯಾತಿಯಿರುವ ವಿಶ್ವಾಮಿತ್ರ ಮಹಾಮುನಿಗಳ ಮುಖದಿಂದ ಹೊರಬಂದ ಗಾಯತ್ರಿ ಮಂತ್ರವೆ ರುದ್ರವನ್ನು ಹೊರತು ಪಡಿಸಿದರೆ ಇಂದಿಗೆ ಹಿಂದೂಗಳ ಪಾಲಿಗೆ ಅತಿ ಶ್ರೇಷ್ಠ ಬೀಜ ಮಂತ್ರ. ಶ್ರೀರಾಮನ ವಿದ್ಯಗುರುಗಳೂ ಸಹ ಇದೇ ಕನ್ನಡಿಗ ವಿಶ್ವಾಮಿತ್ರರು. ಮಹಿಷಾಸುರನ ಆಧೀನದಲ್ಲಿದ್ದ ಮಹಿಷೂರು ಪ್ರಾಂತ್ಯವೆ ಮಹಿಷೂರು ಅಥವಾ ಇಂದಿನ ಮೈಸೂರು. ಪಾಂಡವರಿಗಾಗಿ ಖಾಂಡವವನ ದಹನದ ನಂತರ ಬೆಂಕಿಯಲ್ಲಿ ಬೇಯಲು ಬಿಡದೆ ಪ್ರಾಣ ಭಿಕ್ಷೆ ನೀಡಿದ್ದಕ್ಕೆ ಪ್ರತಿಯಾಗಿ ತನ್ನ ನೈಪುಣ್ಯತೆ ಹಾಗೂ ಕೌಶಲ್ಯವನ್ನ ಬಳಸಿ ಅತಿ ಸುಂದರ ನಗರಿ ಅಂದಿನ ಇಂದ್ರಪ್ರಸ್ಥ ಅಂದರೆ ಇಂದಿನ ರಾಷ್ಟ್ರ ರಾಜಧಾನಿ ದೆಹಲಿಯನ್ನ ವಿನ್ಯಾಸ ಗೊಳಿಸಿದ ವಾಸ್ತು ವಿನ್ಯಾಸಗಾರ ಮಯಾಸುರನೂ ಇದೇ ಮಹಿಷಾಸುರನ ಪ್ರಜೆಯಂತೆ! ಸುಟ್ಟ ಇಟ್ಟಿಗೆಯ ಬಳಕೆಯ ಬಗ್ಗೆ ಮಾಹಿತಿಯಿರದಿದ್ದ ಉತ್ತರದವರಿಗೆ ಮಯ ಈ ಮೂಲಕ ಆವುಗಳನ್ನ ಬಳಸಿ ಗಟ್ಟಿಮುಟ್ಟಾದ ಭವನಗಳನ್ನ ನಿರ್ಮಿಸುವ ತಾಂತ್ರಿಕತೆ ಪರಿಚಯಿಸಿ ಬೆರಗುಗೊಳಿಸಿದನಂತೆ. ಅಲ್ಲಿಗೆ ಕನ್ನಡಿಗರು ಆಗಲೆ ತಾಂತ್ರಿಕವಾಗಿ ಇನ್ನುಳಿದ ಭಾರತೀಯರಿಗಿಂತ ಮುಂದಿದ್ದರು ಅಂತಾಯಿತಲ್ಲ!

ತಮಾಷೆಯೆಂದರೆ ಮಹಾಭಾರತದಲ್ಲಿ ಬರುವ ಇದೆ ಮಯಾಸುರ ರಾಮಾಯಣದಲ್ಲೂ ಪ್ರತ್ಯಕ್ಷನಾಗುತ್ತಾನೆ! ಅತಿಸುಂದರಿಯಾಗಿದ್ದ ಮಂಡೋದರಿ ಇವನ ಮಗಳು, ಪಂಚ ಮಹಾಪತಿವೃತೆಯರಲ್ಲಿ ಒಬ್ಬಳಾಗಿ ಪರಿಗಣಿಸಲಾಗುವ ಮಂಡೋದರಿಯನ್ನ ರಾವಣಾಸುರ ಮೋಹಿಸಿ ಮದುವೆಯಾಗಿ ಪಟ್ಟದ ರಾಣಿಯನ್ನಾಗಿಸಿಕೊಂಡಿದ್ದ! ಅಲ್ಲಿಗೆ ಮಹಿಷಮಂಡಲದ ಹೆಣ್ಣುಗಳು ಆ ಕಾಲದಲ್ಲೂ ಸೌಂದರ್ಯದ ಖನಿಗಳಾಗಿದ್ದರು ಎಂದು ನಂಬಲು ಆಧಾರ ಸಿಕ್ಕಂತಾಯಿತು! ರಾವಣ ಹಾಗೆ ನಮ್ಮ ನಾಡ ಅಳಿಯ! ಆ ಕಾಲಕ್ಕೇ ಅವನ ಬಳಿ ಪುಷ್ಪಕ ವಿಮಾನವೂ ಇದ್ದು ಅದರ ತಾಂತ್ರಿಕತೆಯಲ್ಲೂ ನಮ್ಮ ಕರುನಾಡ ಬುದ್ಧಿವಂತ ಮೆದುಳುಗಳ ಕೈವಾಡ ಇದ್ದಿರಲಿಕ್ಕೆ ಸಾಕು. ವಸಿಷ್ಠ ಮಹಾಮುನಿಗಳ ವಿನಂತಿಯ ಮೇರೆಗೆ ಮಕ್ಕಳಿಲ್ಲದ ದಶರಥನಿಗೆ ಪುತ್ರಕಾಮೇಷ್ಟಿ ಯಾಗ ಮಾಡಿಸಿದ ಮುನಿ ಋಷ್ಯಶೃಂಗರು ಕೂಡ ನಮ್ಮ ಕರುನಾಡಿನ ಅಪ್ಪಟ ಕನ್ನಡಿಗರು. ಅವರ ಹೆಸರೆ ಅವರು ಜನಿಸಿ ಬಾಳಿ ಬದುಕಿದ್ದ ಶೃಂಗೇರಿಯಾಗಿ ಪವಿತ್ರ ತೀರ್ಥಯಾತ್ರಾ ಸ್ಥಳಗಳಲ್ಲೊಂದಾಗಿ ಪ್ರಸಿದ್ಧವಾಗಿದೆ. ಇಂದಿಗೆ ಇವೆಲ್ಲ ಪೌರಾಣಿಕ ನಂಬುಗೆಗಳ ಅಜ್ಜಿಕಥೆಗಳ ಕಥೆಯಾಯಿತು!.

ಕಪಿ ಶೂರರಾದ ಹನುಮ, ಸುಗ್ರೀವ, ಅಂಗದರು ಗಣಿನಾಡು ಬಳ್ಳಾರಿಯವರೋ?, ಕುಳ್ಳ ತಮಿಳ ಅಗಸ್ತ್ಯರು ನಮ್ಮ ತುಂಬಿ ಹರಿವ ಕಾವೇರಿಯ ಮುದ್ದಿನ ಗಂಡನಾಗಿದ್ದರೋ?, ದಪ್ಪ ಚರ್ಮದ ಕೋಣಗಳ ಹುಟ್ಟೂರು ನಮ್ಮ ಕಸ್ತೂರಿ ಕನ್ನಡದ ಕರುನಾಡೆ ಇರಬಹುದೋ? ಇಂದಿನ ಪೂರ್ವದ ಸಿಲಿಕಾನ್ ಕಣಿವೆಯಾದ ನಮ್ಮ ಹಿರಿಮೆ ಗಮನಿಸಿದರೆ, ಎನ್ ಎ ಎಲ್ ಹಾಗೂ ಹೆಚ್ ಎ ಎಲ್ ಮೂಲಕ ಸ್ವತಂತ್ರ ಭಾರತದ ವೈಮಾನಿಕ ಅನ್ವೇಷಣೆಗಳ ಪ್ರಯೋಗಾಲಯವಾದ ನಮ್ಮ ನಾಡಿನ ಹೆಚ್ಚುಗಾರಿಕೆಯನ್ನ ಗ್ರಹಿಸಿದರೆ ನಾವು ಕನ್ನಡಿಗರು ಅಂದು ಇಂದು ಎಂದೂ ಮುಂದೂ ಹೀಗೆ ಇದ್ದೆವು- ಇದ್ದೇವೆ- ಇದ್ದೇ ತೀರುತ್ತೇವೆ ಅನ್ನುವುದು ಖಚಿತವಾಗುತ್ತದೆ.


ಯಾವ್ಯಾವಾಗ ಕನ್ನಡಿಗರು ಭಾಷೆಯ ಆಧಾರದ ಮೇಲೆ ರಾಜಕೀಯವಾಗಿ ಒಗ್ಗೂಡಿದ್ದರೋ ಆಗೆಲ್ಲ ಬಾಹ್ಯ ಶಕ್ತಿಗಳಿಗೆ ಅವರನ್ನ ಮಣಿಸಲಿಕ್ಕಾಗಿಲ್ಲ. ಸಾಲದ್ದಕ್ಕೆ ಆಂತಹ ಒಗ್ಗಟ್ಟಿನ ಕಾಲದಲ್ಲಿ ಅವರ ಸಮೃದ್ಧಿ ನೆರೆಕೆರೆಯ ಉಳ್ಳವರ ಕಣ್ಣು ಕುಕ್ಕಿಸಿದೆ. ಅದು ಆರಂಭದ ಸ್ವಾಭಿಮಾನಿ ಕನ್ನಡಿಗ ಸಾಮ್ರಾಜ್ಯ ಹಲಸಿಯ ಕದಂಬರಿಂದ ಹಿಡಿದು ಕೊನೆಯ ಮೈಸೂರು ಸಂಸ್ಥಾನದವರೆಗೂ ಅನೂಚಾನವಾಗಿ ಕಾಣಸಿಗುವ ಇತಿಹಾಸದ ಪುಟಗಳ ನಿರಾಕರಿಸಲಾಗದ ಸಂಗತಿ. ಅಷ್ಟೆ ಪ್ರಮುಖವಾಗಿ ಬಾಹ್ಯ ಶಕ್ತಿಗಳು ಕನ್ನಡಿಗರ ನಡು ಮುರಿದಾಗ ನಮ್ಮ ನಾಡನ್ನ ಭಾಷಾತೀತ ಹಾಗೂ ಧರ್ಮಾತೀತವಾಗಿ ಹರಿದು ಹಂಚಿಕೊಂಡಾಗ ಮಾತ್ರ ನಮ್ಮ ಉಕ್ಕುವ ಉತ್ಸಾಹವನ್ನ ಕಟ್ಟಿಡಲು ಸಾಧ್ಯವಾಗಿದೆ ಅನ್ನುವುದನ್ನೂ ಕೂಡ ನಿರಾಕರಿಸೋದು ಅಷ್ಟೆ ಕಷ್ಟ.

ಪಲ್ಲವರು ಸಾಮ್ರಾಜ್ಯಶಾಹಿಗಳಾಗಿ ದಕ್ಷಿಣ ಭಾರತದ ಕರಾವಳಿ ಹಾಗೂ ದಕ್ಖನ್ ಪ್ರಸ್ತಭೂಮಿಯಾದ್ಯಂತ ಪ್ರಬಲವಾಗಿದ್ದಾಗ ಅವರ ಸೊಕ್ಕಿನ ವಿರುದ್ಧ ಸಿಡಿದೆದ್ದು ನಿಂತದ್ದೆ ಬನವಾಸಿ ಮೂಲದ ಬ್ರಾಹ್ಮಣ ಯುವಕ ಮಯೂರ ಶರ್ಮ. ಅಂದಿನ ಪಲ್ಲವ ಸಾಮ್ರಾಜ್ಯದ ರಾಜಧಾನಿ ಕಂಚಿಗೆ ಸೆಡ್ಡು ಹೊಡೆದು ಕ್ಷತ್ರಿಯನಾಗಿ ಮಯೂರವರ್ಮನ ಹೆಸರಿನಲ್ಲಿ ಆತ ಕ್ರಿಸ್ತಶಕ ೩೪೫ರಲ್ಲಿ ಸ್ಥಾಪಿಸಿದ್ದ ಕದಂಬ ರಾಜಸಂಸ್ಥಾನ ರಾಜಕೀಯವಾಗಿ ಕನ್ನಡಿಗರ ಮೊದಲ ಒಗ್ಗೂಡುವಿಕೆ ಆಗಿತ್ತು. ಸರಿಸುಮಾರು ಎರಡು ಶತಮಾನ ಆಳಿದ ಕದಂಬರ ಸಾಮ್ರಾಜ್ಯ ಇಂದಿನ ಕನ್ನಡನಾಡಿನ ಬಹುತೇಕ ಎಲ್ಲಾ ಭಾಗಗಳನ್ನ ಒಳಗೊಂಡಿತ್ತು. ಆದರೆ ಅಳುಪರ ಆಡಳಿತದಲ್ಲಿದ್ದ ಇಂದಿನ ದಕ್ಷಿಣ ಕನ್ನಡ ಜಿಲ್ಲೆ ಮಾತ್ರ ಅವರ ಹಿಡಿತಕ್ಕೆ ಪೂರ್ತಿ ಸಿಕ್ಕಿರಲಿಲ್ಲ.

ಕದಂಬರ ನಂತರ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಕನ್ನಡಿಗರ ಕಥೆ ಇಲ್ಲಿಯವರೆಗೂ ಬಹುಕಾಲ ವಿಜಯದ ಯಶಸ್ಸಿನಗಾಥೆಯಾಗಿ ಮಾತ್ರ ಉಳಿದುಕೊಂಡಿದೆ. ಕದಂಬರ ನಂತರ ಸಾಮ್ರಾಜ್ಯ ಕಟ್ಟಿದ ಬದಾಮಿಯ ಚಾಲುಕ್ಯರ ಸಾಮ್ರಾಜ್ಯದ ವಿಸ್ತಾರ ಇಂದಿನ ಗುಜರಾತಿನಿಂದ ಹಿಡಿದು ಪಶ್ಚಿಮ ಕರಾವಳಿಯಾದ್ಯಂತ ಆವರಿಸಿ ಇಂದಿನ ಮಹಾರಾಷ್ಟ್ರ, ಆಂಧ್ರದ ತೆಲಂಗಾಣ - ರಾಯಲಸೀಮೆ ಹಾಗೂ ಸಂಪೂರ್ಣ ಕರುನಾಡನ್ನ ಒಳಗೊಂಡು ಕೇರಳದ ವಯನಾಡು ಹಾಗೂ ತಮಿಳುನಾಡಿನ ಸರಿಸುಮಾರು ಉತ್ತರದ ಅರ್ಧ ಭಾಗವನ್ನ ಒಳಗೊಂಡಿತ್ತು. ದಕ್ಷಿಣದಲ್ಲಿ ಚೋಳರನ್ನ ಬಾಲ ಬಿಚ್ಚದಂತೆ ತೆಪ್ಪಗಿರಿಸಿದ್ದ ಚಾಲುಕ್ಯರು ಉತ್ತರದ ಗುರ್ಜರ ಪ್ರತಿಹಾರರ ಸೊಕ್ಕನ್ನ ಗದಮುರಿಗೆ ಕಟ್ಟಿ ಅವರ ಆಟಾಟೋಪ ವಿಂಧ್ಯದಿಂದ ದಕ್ಷಿಣಕ್ಕೆ ಆವರಿಸಿದಂತೆ ನಿರ್ಬಂಧಿಸಿತ್ತು. ಚಾಲುಕ್ಯರ ಇಮ್ಮಡಿ ಪುಲಿಕೇಶಿ ಗುರ್ಜರ ಪ್ರತಿಹಾರರ ಸಾಮ್ರಾಟ ಕನೌಜಿನ ಹರ್ಷವರ್ಧನನನ್ನ ಸದಾ ಒತ್ತಡದಲ್ಲಿ ಆಳುವಂತೆ ಮಾಡಿದ್ದ ಹಾಗೂ ಅವನನ್ನ ನಿರ್ಣಾಯಕವಾಗಿ ಮಣಿಸಿ ಕನ್ನಡಿಗರ ಕೀರ್ತಿ ಮೆರೆದಿದ್ದ. ಸುಮಾರು ಇನ್ನೂರ ಹತ್ತು ವರ್ಷ ನಡೆದ ಚಾಲುಕ್ಯರ ದರ್ಬಾರಿನಲ್ಲಿ ಕರುನಾಡಿನ ಕೀರ್ತಿ ಏಷ್ಯಾ ಖಂಡದಾದ್ಯಂತ ಹರಡಿತ್ತು.

ಚಾಲುಕ್ಯರ ನಂತರ ಕನ್ನಡಿಗರ ಕೀರ್ತಿ ಪತಾಕೆಯನ್ನ ಇನ್ನಷ್ಟು ಎತ್ತರಕ್ಕೆ ಏರಿಸಿದವರು ರಾಷ್ಟ್ರಕೂಟರು. ಇವರ ದರ್ಬಾರು ಸಹ ಸರಿ ಸುಮಾರು ಎರಡೂಕಾಲು ಶತಮಾನ ತಡೆಯಿಲ್ಲದೆ ಸಾಗಿತು. ಇವರ ಸಾಮ್ರಾಜ್ಯ ವಿಸ್ತರಣೆಯ ದಾಹ ಅವರನ್ನ ಸಾಗರದಾಚೆಗೂ ದಂಡೆತ್ತಿ ಹೋಗುವಂತೆ ಮಾಡಿ ಬಹುತೇಕ ಅಂದು ಅಸ್ತಿತ್ವದಲ್ಲಿದ್ದ ಪೂರ್ವ ಏಷ್ಯನ್ ರಾಜಾಳ್ವಿಕೆಗಳನ್ನ ಇವರು ಸಾಮಂತರಾಗಿಸಿಕೊಂಡಿದ್ದರು. ಇಂದಿನ ದೆಹಲಿವರೆಗೂ ಇವರು ಕೈಚಾಚಿದರೂ ಅಲ್ಲಿ ಶಾಶ್ವತವಾಗಿ ತಂಗುವ ಮನಸು ಮಾಡದೆ ಮರಳಿ ಕರುನಾಡಿನಲ್ಲೆ ತಮ್ಮ ಕೇಂದ್ರವನ್ನ ಉಳಿಸಿಕೊಂಡರು. ಅವರ ಕಾಲದಲ್ಲಿ ರಾಜಧರ್ಮ ಜೈನವಾಗಿದ್ದು ಅನೇಕ ಜೈನ ವಿದ್ವಾಂಸರು ಕನ್ನಡದ ಅನೇಕ ಆರಂಭಿಕ ಸಾಹಿತ್ಯ ಜೈನ ವಿದ್ವಾಂಸರನೇಕರಿಂದ ಮೂಡಿಬಂತು. ಸ್ವತಃ ಖ್ಯಾತ ರಾಷ್ಟ್ರಕೂಟ ದೊರೆ ಆಮೋಘವರ್ಷ ನೃಪತುಂಗನೂ ಸ್ವತಃ ಕವಿಯಾಗಿದ್ದ. ಅವನ "ಕವಿರಾಜಮಾರ್ಗ" ಇಂದಿಗೂ ಕನ್ನಡ ಸಾಹಿತ್ಯದ ಉತ್ತಮ ಕೃತಿಗಳಲ್ಲೊಂದಾಗಿ ಪರಿಗಣಿತವಾಗುತ್ತಿದೆ.

ಇವರ ನಂತರ ಕಲಚೂರಿಗಳ ಹಾಗೂ ಹೊಯ್ಸಳರ ಕೆಲಕಾಲದ ಅಸ್ತಿತ್ವದ ಹೋರಾಟದ ಫಲವಾಗಿ ಹೊರಹೊಮ್ಮಿದ್ದೆ ಅದ್ವಿತೀಯ ವಿಜಯನಗರ ಸಾಮ್ರಾಜ್ಯ. ಉತ್ತರದಲ್ಲಿ ಅಫ್ಘಾನ್ ಪರ್ಶಿಯನ್ ಮೂಲದ ಮುಸಲ್ಮಾನರ ಬಿಗಿ ಹಿಡಿತ ದೆಹಲಿಯ ಸಿಂಹಾಸನದ ಮೇಲೆ ಬೀಳುತ್ತಿದ್ದಾಗ ಭಾರತೀಯ ಮೂಲದ ಹಿಂದೂ ಧರ್ಮದ ಮರು ಸ್ಥಾಪನೆ ವಿಜಯನಗರದ ಆಳರಸರ ಮೂಲಕ ದಕ್ಷಿಣ ಭಾರತದಾದ್ಯಂತ ಕಾಲಕ್ರಮೇಣ ಆಯಿತು. ಸಂಗಮ ವಂಶಜರಿಂದ ಆರಂಭವಾದ ವಿಜಯನಗರ ಸಾಳ್ವ ವಂಶದಲ್ಲಿ ದೃಢವಾಗಿ ಬೇರು ಬಿಟ್ಟು ತುಳುವರ ಕಾಲದಲ್ಲಿ ಅತ್ಯುಚ್ಛ ಮಟ್ಟ ಕಂಡು ಅರವಿಡರ ಕಾಲದಲ್ಲಿ ಸರ್ವ ಪತನ ಕಂಡಿತು. ದೆಹಲಿ ಬಾದಶಹರ ನಿದ್ದೆ ಕೆಡಿಸಿದ ವಿಜಯನಗರದ ಆಳರಸರು ಯಶಸ್ಸು ದೆಹಲಿಯ ದೊರೆಗಳ ದಕ್ಷಿಣದ ಪಾಳೆಗಾರರಾದ ಪಂಚ ಶಾಹಿ ಮುಸಲ್ಮಾನ ಸಾಮಂತರನ್ನ ಸಮಯ ಸಿಕ್ಕಾಗಲೆಲ್ಲ ರೆಕ್ಕೆ ಪುಕ್ಕ ಕತ್ತರಿಸಿ ಚಿಗುರಲಾಗದಂತೆ ಮಾಡಿಟ್ಟಿದ್ದರು. ಆದರೆ ಸಾಮ್ರಾಜ್ಯದ ಕೊನೆಯ ದಿನಗಳಲ್ಲಿ ಆಡಳಿತ ಕೇಂದ್ರ ದುರ್ಬಲವಾಗಿ ಅವರೆದುರು ತಲೆ ಎತ್ತಲಾಗದೆ ಛಪ್ಪನ್ನ ಚೂರಾಗಿದ್ದ  ಬಿಜಾಪುರ, ಅಹಮದ್ ನಗರ, ಗುಲ್ಬರ್ಗಾ, ಬೀದರ್ ಹಾಗೂ ಭಾಗ್ಯನಗರಗಳ ಪಂಚ ಶಾಹಿ ಮನೆತನಗಳು ಕೇವಲ ವಿಜಯನಗರವನ್ನ ಇನ್ನಿಲ್ಲವಾಗಿಸಲು ಒಂದಾಗಿ ಅದರಲ್ಲಿ ಯಶಸ್ವಿಯಾದ ನಂತರ ತಮ್ಮಲ್ಲೆ ಇಡಿ ಅಖಂಡ ವಿಜಯನಗರ ಸಾಮ್ರಾಜ್ಯದ ಉತ್ತರ ಭಾಗವನ್ನ ಹರಿದು ಹಂಚಿಕೊಂಡರು.

ಇಷ್ಟಾದರೂ ಕನ್ನಡಿಗರ ಒಂದಾಗುವ ತುಡಿತವನ್ನ ಬಹಳ ಕಾಲ ಹಿಡಿದಿಡಲಾಗಿಲ್ಲ. ಆರಂಭದಲ್ಲಿ ವಿಜಯನಗರದವರ ಸಾಮಂತರಾಗಿದ್ದ ಮೈಸೂರಿನ ಯದು ವಂಶಜರು ಶ್ರೀರಂಗಪಟ್ಟಣವನ್ನ ರಾಜಧಾನಿ ಮಾಡಿಕೊಂಡು ಮತ್ತೊಮ್ಮೆ ಬಲಿಷ್ಠವಾಗಿ ತನ್ನ ಮೈ ಕೊಡವಿಕೊಂಡು ಎದ್ದೆ ಬಿಟ್ಟರು. ಅದರೆ ದುರಾದೃಷ್ಟವಶಾತ್ ಅದಾಗಲೆ ಯುರೋಪಿಯನ್ನರ ಕಾಕದೃಷ್ಟಿಗೆ ಭಾರತ ಬಿದ್ದಾಗಿತ್ತು. ಮೈಸೂರಿನ ಒಡೆಯರ ನಡುವೆ ಅವರ ಆಡಳಿತದ ಹೆಸರಿನಲ್ಲಿ ಹೈದರಾಲಿ ಹಾಗೂ ಟಿಪ್ಪೂ ಸುಲ್ತಾನ್ ಕನ್ನಡಿಗರ ಸಾಮ್ರಾಜ್ಯವನ್ನ ಮತ್ತೆ ವಿಸ್ತರಿಸಿದರು. ಆದರೆ ಆಗ ರಾಜಕೀಯವಾಗಿ ದೇಶದಾದ್ಯಂತ ಪ್ರಬಲರಾಗುತ್ತಿದ್ದ ಬ್ರಿಟಿಷರು ಟಿಪ್ಪುವನ್ನ ಮುಗಿಸಿ ಮೈಸೂರನ್ನ ತಮ್ಮ ಅಧೀನ ಸಂಸ್ಥಾನವನ್ನಾಗಿಸಿಕೊಂಡು ಕನ್ನಡಿಗರ ಅಖಂಡತೆಯನ್ನ ಇಂದಿನ ಹದಿನೈದು ಕಂದಾಯ ಜಿಲ್ಲೆಗಳನ್ನ ಮೈಸೂರು, ಒಂದೂವರೆ ಕಂದಾಯ ಜಿಲ್ಲೆಯನ್ನ ಜಮಖಂಡಿ, ಅರ್ಧ ಕಂದಾಯ ಜಿಲ್ಲೆಯನ್ನ ಸಂಡೂರು ಹಾಗೂ ಆರು ಕಂದಾಯ ಜಿಲ್ಲೆಗಳನ್ನ ಹೈದರಾಬಾದ್ ಸಂಸ್ಥಾನಗಳಲ್ಲಿ ಹಾಗೂ ಮುಂಬೈ ನೇರಾಡಳಿತದ ಹೆಸರಿನಲ್ಲಿ ಇಂದಿನ ಆರು ಕಂದಾಯ ಜಿಲ್ಲೆಗಳನ್ನ, ಮದರಾಸು ನೇರಾಡಳಿತ ಹೆಸರಿನಲ್ಲಿ ಇಂದಿನ ಮೂರು ಕಂದಾಯ ಜಿಲ್ಲೆಗಳನ್ನ ತಮ್ಮ ನೇರ ನಿಗಾದಲ್ಲಿಟ್ಟುಕೊಂಡಿದ್ದರು.

ಹೀಗೆ ಹರಿದು ಹಂಚಿಹೋಗಿದ್ದ ಕನ್ನಡದ ನೆಲಗಳೆಲ್ಲ ತನ್ನ ಬಹುಪಾಲು ಅಚ್ಚ ಕನ್ನಡದ ಅವಿಭಾಜ್ಯ ಅಂಗವೆ ಆಗಿದ್ದ ಆಕ್ಕಲಕೋಟೆ, ಸೊಲ್ಲಾಪುರ, ಕೊಲ್ಲಾಪುರ, ಜತ್ತ, ಆಲೂರು, ರಾಯದುರ್ಗ, ಮಡಕಸಿರ, ಹೊಸೂರು, ಉದಕಮಂಡಲ, ನೀಲಗಿರಿ, ವಯನಾಡು, ಕಾಸರಗೋಡು ಮುಂತಾದ ಅನೇಕ ತಾಲೂಕುಗಳನ್ನ ತನ್ನ ಆಕ್ಕಪಕ್ಕದ ಸಹೋದರ ರಾಜ್ಯಗಳಿಗೆ ಆನಿವಾರ್ಯವಾಗಿ ಧಾರೆ ಎರೆದು ಕೊಟ್ಟು ಸೋತು ವಿರಮಿಸುತ್ತಿರುವ ವೃದ್ಧನ ಆಕಾರದಲ್ಲಿ ಇಂದು ತನ್ನ ಅಸ್ತಿತ್ವನ್ನ ಕಂಡುಕೊಂಡಿದೆ. ಇನ್ನೆರಡು ವರ್ಷಕ್ಕೆ ಇನ್ನು ಹಾರಾಡಿ ಹೋರಾಡಲಾಗದೆ ಈ ಸುಸ್ತು ಹೊಡೆದು ಕೂತಿರುವ ಮುದುಕನಿಗೆ ಆರು ದಶಕವನ್ನ ಮುಟ್ಟಿ ಷಷ್ಠಿಪೂರ್ತಿ ಆಗಲಿದೆ!. ಇನ್ನೂ ನಮ್ಮ ಅಖಂಡತೆಯ ತಿರುಕನ ಕನಸನ್ನ ಎಲ್ಲಾ ಆಳುವ ಸರಕಾರಗಳೂ ನವೆಂಬರ್ ಮೊದಲನೆ ದಿನ ವಾಡಿಕೆಯಂತೆ ಆಡಿ ಮುಂದಿನ ನವೆಂಬರ್'ವರೆಗೆ ಮುಲಾಜಿಲ್ಲದೆ ಅದನ್ನ ಮರೆತು ಬಿಡುತ್ತಾರೆ. ಇದನ್ನ ಕೇಳಿ ರೋಸಿ ಹೋದ ಬಡ ಕನ್ನಡಿಗ ಮಾತ್ರ "ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ" ಕೆಲಸಕ್ಕೆ ಬಾರದ ಠರಾವಿನಂತಹ ಇಂತಹ ಉಡಾಫೆಯ ಮೂರುಕಾಸಿಗೂ ಬಾಳದ ಹೇಳಿಕೆ ಇನ್ನಾದರೂ ಕೇಳದಂತೆ ಎನ್ನ ಕಿವುಡನ ಮಾಡಯ್ಯಾ ತಂದೆ! ಎಂದು ಕಾಣದ ಆ ದೇವರಲ್ಲಿ ಮನ ಕಲಕುವಂತೆ ದೀನವಾಗಿ ಅನುಗಾಲದಿಂದ ಮೊರೆಯಿಡುತ್ತಲೇ ಇದ್ದಾನೆ. ಆತನ ಪ್ರಾರ್ಥನೆ ಮಾತ್ರ ಫಲಿಸುತ್ತಿಲ್ಲ ಅಷ್ಟೆ?!ಇಂದು ಸ್ವತಃ ತಮ್ಮ ಕೈಯ್ಯಾರೆ ಪಟ್ಟೆ ಬಳಿದುಕೊಂಡ ಸ್ವಯಂಘೋಷಿತ ಹುಲಿವೇಷಗಳ ಚಿತಾವಣೆಯಿಂದ ಕರುನಾಡಿನ ವಾಯುವ್ಯ ಮೂಲೆಯಲ್ಲಿ ಸಲ್ಲದ ಗಡಿ ವಿವಾದದ ಚಿಲ್ಲರೆ ಗಲಾಟೆಯ ಕಿರುಕುಳ ಎದ್ದಿದ್ದರೂ, ಐತಿಹಾಸಿಕ ದೃಷ್ಟಿಯಿಂದ ನೋಡಿದರೆ ಕೇವಲ ಆರು ಶತಮಾನಗಳ ಇತಿಹಾಸ ಹೊಂದಿರುವ ಮರಾಠಿ ಆಡಳಿತ ಭಾಷೆಯಾಗಿ ಇಂದು ವ್ಯಾಪಿಸಿರುವ ನೆಲವೆಲ್ಲಾ ಅಂದು ಅಚ್ಚ ಕನ್ನಡದ್ದೆ ಆಸ್ತಿಯಾಗಿದ್ದವು. ಇಂದಿನ ಮಹಾರಾಷ್ಟ್ರದಲ್ಲಿ ಇರುವ ಶಿಲ್ಪಕಲೆಯ ಸೊಬಗೆಲ್ಲ ಕನ್ನಡದ ಚಾಲುಕ್ಯ ಹಾಗೂ ರಾಷ್ಟ್ರಕೂಟ ವಂಶಗಳ ಕಲಾಭಿರುಚಿಯ ಕೊಡುಗೆಗಳಾಗಿ ಉಳಿದಿವೆ. ಇಂದಿಗೂ ಮಹಾರಾಷ್ಟ್ರದಲ್ಲಿ ಉತ್ಖನನ ನಡೆದಾಗ ಸಿಗುವುದು ಕನ್ನಡ ಭಾಷೆ ಹಾಗೂ ಲಿಪಿಯ ಶಿಲಾ ಶಾಸನಗಳೆ.

ಇಂದು ದೇವನಾಗರಿಯ ಮೋಹದಿಂದ ಅದೇನೆ ಇತಿಹಾಸದ ಸತ್ಯಗಳನ್ನ ಅಲ್ಲಿನ ಪುಢಾರಿಗಳು ತಿರುಚಲು ಯತ್ನಿಸಿದರೂ ಅಲ್ಲಿನ ಊರುಗಳ, ಆರಾಧನಾ ಕ್ಷೇತ್ರಗಳ ಹಾಗೂ ಸ್ಥಳನಾಮಗಳ ಕನ್ನಡದ ಛಾಯೆಯನ್ನ ಅದೇನೆ ದ್ವೇಷದ ಸೋಪು ಹಾಕಿ ತಿಕ್ಕಿದರೂ ಅವರಿಂದ ತೊಳೆಯಲಿಕ್ಕೆ ಆಗುತ್ತಲೆ ಇಲ್ಲ! ಅವರ ಕೆಲವು ವ್ಯರ್ಥ ಕಸರತ್ತುಗಳು ಕಂಡವರ ಮಾತಿಗೆ ಕಿವಿಗೊಟ್ಟು ಮತಾಂಧವವಾಗಿ ತನ್ನ ಸುದೀರ್ಘ ಹಿಂದೂ ಚರಿತ್ರೆಯನ್ನ ಸರಾಸಗಟಾಗಿ ನಿರಾಕರಿಸಿ ಸಾವಿರದ ಇನ್ನೂರು ವರ್ಷಗಳ ಹಿಂದೆ ಬರ್ಬರವಾಗಿ ಸ್ವತಃ ತನ್ನವರ ಮೇಲೆಯೆ ಧಾಳಿ ಎಸಗಿದ ಮಹಮದ್ ಶಾ ಅಬ್ದಾಲಿ, ಘಜ್ನಿ ಹಾಗೂ ಘೋರಿಯಂತಹ ಅಫ್ಘನ್, ಪರ್ಷಿಯನ್ ಆಕ್ರಮಣಕಾರರನ್ನ, ಮತೀಯ ಅಂಧನಾಗಿದ್ದ ಔರಂಗಾಜೇಬನಂತಹ ಹಿಂಸಾ ವಿನೋದಿಯನ್ನ ತಮ್ಮ ಐತಿಹಾಸಿಕ ನಾಯಕರಂತೆರಂತೆ ಚಿತ್ರಿಸಿ ಸಲ್ಲದ ಚರಿತ್ರೆಯನ್ನ ಸೃಷ್ಟಿಸಿ ತಮ್ಮ ಮಕ್ಕಳಿಗೆ ಪಠ್ಯವಾಗಿ ಸುಳ್ಳು ಸುಳ್ಳೇ ಚರಿತ್ರೆಯೊಂದನ್ನ ಬಿಂಬಿಸುತ್ತಿರುವ ಪಾಕಿಸ್ತಾನದ ದುಸ್ಸಾಹಸದಂತೆ ಕಂಡು ಕನಿಕರ ಹುಟ್ಟಿಸುತ್ತದೆ!

ಹೆಚ್ಚು ಕಡಿಮೆ ಮೂರೂವರೆ ಶತಮಾನಗಳ ಕಾಲ ಚಾಣಾಕ್ಷ ಬ್ರಿಟಿಷರು ಎರಡು ನೇರಾಡಳಿತದ ಪ್ರಾಂತ್ಯಗಳಲ್ಲಿ ಹಾಗೂ ಐದು ದೇಶೀಯ ಸಂಸ್ಥಾನಗಳಲ್ಲಿ ತಮ್ಮ ಸ್ವಾರ್ಥ ಸಾಧನೆಗಾಗಿ ಹರಿದು ಹಂಚಿದ್ದರೂ; ಆಶ್ಚರ್ಯಕರವಾಗಿ ಕನ್ನಡ ಒಂದು ಭಾಷೆಯಾಗಿ ಅಲ್ಲಿನ ಕನ್ನಡಿಗರ ಜನಮಾನಸದಲ್ಲಿ ಅರ್ಧ ಶತಮಾನಕ್ಕೂ ಹೆಚ್ಚಿನ ಅವಧಿಯಲ್ಲಿ ಜೀವಂತವಾಗುಳಿದದ್ದು ಒಂದು ವಿಸ್ಮಯದ ಸಂಗತಿ ಆನ್ನುವುದನ್ನ ಒಪ್ಪಲೇ ಬೇಕು. ಬೊಂಬಾಯಿ ಪ್ರಾಂತ್ಯ ವಿಸ್ತೀರ್ಣದ ದೃಷ್ಟಿಯಿಂದ ಬೃಹತ್ತಾಗಿತ್ತು. ಕರ್ನಾಟಕದ ಇಂದಿನ ಅರು ಜಿಲ್ಲೆಗಳಾಗ ಬೊಂಬಾಅಯಿ ಪ್ರಾಂತ್ಯದ ದಕ್ಷಿಣದ ಭಾಗಗಳಾಗಿದ್ದು ನಮ್ಮ ತುಂಗಭದ್ರೆಯರು ಹಾಗೂ ಶರಾವತಿ ಅದರ ಕೊನೆಯ ಮೇರೆಗಳಾಗಿದ್ದವು. ಉತ್ತರದಲ್ಲಿ ಆ ಪ್ರಾಂತ್ಯ ಮುಲ್ತಾನಿನವರೆಗೆ; ಪಶ್ಚಿಮದಲ್ಲಿ ಸಿಂಧ್ ಪ್ರಾಂತ್ಯವನ್ನೂ ಒಳಗೊಂಡು ಇಂದಿನ ಇರಾನ್ ಗಡಿಯವರೆಗೆ ಹಬ್ಬಿತ್ತು! ಶರಾವತಿ ಜೋಗದಲ್ಲಿ ಮೈಸೂರು ಸಂಸ್ಥಾನದಿಂದ ಧಾರೆಯಾಗಿ ಧುಮುಕಿದರೆ ನೇರ ಬೊಂಬಾಯಿ ಪ್ರಾಂತ್ಯದ ಉತ್ತರ ಕನ್ನಡ ಜಿಲ್ಲೆಗೆ ಬಿದ್ದು ಮುಂದೆ ಹರಿಯುತ್ತಿದ್ದಳು! ಆ ಪ್ರಾಂತ್ಯದ ಆಡಳಿತದ ಮುಖ್ಯಸ್ಥ ರಾಜ್ಯಪಾಲನಿಗೆ ಸ್ಥಳಿಯ ವ್ಯಾಪಾರಿ ನಿಯೋಗ ಕಳೆದ ಶತಮಾನದ ಅದಿಯಲ್ಲಿ ಅರ್ಪಿಸಿದ ತಮ್ಮ ಬೇಡಿಕೆಗಳ ಮನವಿ ಪತ್ರ ಇದ್ದದ್ದು ಕನ್ನಡ ಹಾಗೂ ಸಿಂಧಿಯಲ್ಲಿ! ಗುಜರಾತಿ ಹಾಗೂ ಮರಾಠಿ ವ್ಯಾಪಾರಸ್ಥರೆ ತುಂಬಿದ್ದ ಈ ನಿಯೋಗ ಬೊಂಬಾಯಿ ಪ್ರಾಂತ್ಯದ ಅಂದಿನ ಬ್ರಿಟಿಶ್ ರಾಜ್ಯಪಾಲನ ಮೂಲಕ ಭಾರತದ ವೈಸ್'ರಾಯ್ ಸಮಕ್ಷಮಕ್ಕೆ ಕಳಿಸಿ ಕೊಟ್ಟದ್ದು ಕೂಡಾ ಕಸ್ತೂರಿ ಕನ್ನಡದಲ್ಲಿ ಬರೆದಿದ್ದ ಮನವಿ ಪತ್ರವನ್ನೆ! ಇದು ಬೊಂಬಾಯಿ ಗೆಜೆಟಿಯರ್'ನಲ್ಲಿ ಅಚ್ಚಳಿಯದಂತೆ ದಾಖಲಾಗಿ ಹೋಗಿದೆ.

ಇನ್ನು ರಾಜ್ಯದ ಇಂದಿನ ಈಶಾನ್ಯ ಭಾಗದ ಐದು ಜಿಲ್ಲೆಗಳು ವಿಜಯನಗರ ಸಾಮ್ರಾಜ್ಯದ ಪತನ ಹಾಗೂ ನಿಜಾಮನೊಂದಿಗೆ ಅನಂತರದ ಕಾಲ ಘಟ್ಟದಲ್ಲಾದ ಬ್ರಿಟಿಶ್ ಸ್ನೇಹ ಒಪ್ಪಂದದ ಪ್ರಕಾರ ಹೈದರಾಬಾದಿನ ನಿಜಾಮನ ವಶದಲ್ಲಿತ್ತು. ದೇಶದ ಇನ್ನಿತರ ಭಾಗಕ್ಕೆ ಸ್ವತಂತ್ರ್ಯದ ಸವಿ ೧೫ ಅಗೋಸ್ತು ೧೯೪೭ರಂದೆ ಸಿಕ್ಕಿದ್ದರೂ ಈ ಜಿಲ್ಲೆಗಳು ನಿಜಾಮನ ರಜಾಕಾರರ ಪಡೆಯಿಂದ ವಿಮುಕ್ತವಾಗಲಿಕ್ಕೆ ಮತ್ತೂ ಹದಿನಾಲ್ಕು ತಿಂಗಳು ದೈನೇಸಿಗಳಂತೆ ಕಾಯಬೇಕಾಯಿತು! ಕಡೆಗೂ ಸರದಾರ ಪಟೇಲರ ಸೈನಿಕ ಕಾರ್ಯಾಚರಣೆಯಿಂದ ವಿಮುಕ್ತವಾಗಿ ಭಾರತೀಯ ಒಕ್ಕೂಟದ ಭಾಗವಾದ ಈ ಜಿಲ್ಲೆಗಳು ಭಾಷಾವಾರು ಹಂಚಿಕೆಯ ಹಿನ್ನೆಲೆಯಲ್ಲಿ ೫೮ ವರ್ಷಗಳ ಹಿಂದೆ ಕರುನಾಡಿಗೆ ಮರಳಿ ಕೂಡಿಕೊಂಡವು. ನಿಜಾಮನ ಆಡಳಿತದಲ್ಲಿ ವಿದ್ಯೆ ಹಾಗೂ ಲೋಕೋಪಯೋಗಿ ಇಲಾಖೆಗಳು ನಿಷ್ಕ್ರಿಯತೆಯ ಪರಮಾವಧಿಯಲ್ಲಿದ್ದ ಕಾರಣ ಈ ಜಿಲ್ಲೆಗಳೂ ಕರ್ನಾಟಕದ ಇನ್ನಿತರ ಪ್ರಾಂತ್ಯಗಳಿಗಿಂತ ವಿದ್ಯಾಭ್ಯಾಸದ ಗುಣಮಟ್ಟ ಹಾಗೂ ಮೂಲಭೂತ ಸೌಕರ್ಯಗಳ ಮಟ್ಟಿಗೆ ಹೋಲಿಕೆಯಲ್ಲಿ ಹಿಂದುಳಿದಿದ್ದವು. ಮೈಸೂರು ಸಂಸ್ಥಾನದ ವಶದಲ್ಲಿದ್ದ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು, ಹಾಸನ ಹಾಗೂ ಮೈಸೂರು ಜಿಲ್ಲೆಗಳು ವಿದ್ಯೆ ಹಾಗೂ ಕೈಗಾರಿಕರಣದ ದೃಷ್ಟಿಯಿಂದ ಉತ್ತಮ ಪ್ರಗತಿ ಸಾಧಿಸಿದ್ದವು. ಅಧೀನ ಜಿಲ್ಲೆ ಕೊಡಗು ಕೂಡಾ ಎಲ್ಲಾ ರೀತಿಯಿಂದ ಪ್ರಗತಿಯ ಪಥದಲ್ಲಿತ್ತು.

ಮದರಾಸು ಪ್ರಾಂತ್ಯದ ಭಾಗವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ತನ್ನ ದಕ್ಷಿಣದ ಹೊಸದುರ್ಗ ( ಕಾಂಙಂಗಾಡ್.) ದಿಂದ ಉತ್ತರದ ಭಟ್ಕಳದವರೆಗೆ ತೃಪ್ತಿಕರ ಸಾಧನೆ ಹಾಗೂ ಪ್ರಗತಿಯನ್ನ ದಾಖಲಿಸಿತ್ತು. ಪೂರ್ವದಲ್ಲಿ ಮದರಾಸು ಪ್ರಾಂತ್ಯದ ಗಡಿಯಾಗಿದ್ದ ರಾಯಲಸೀಮೆಯ ತುದಿ ಬಿಸಿಲನಾಡು ಬಳ್ಳಾರಿ ಜಿಲ್ಲೆಯೂ ಸಮೀಪದ ನಿಜಾಮನ ಆಡಳಿತದಲ್ಲಿದ್ದ ರಾಯಚೂರು ಹಾಗೂ ಗುಲ್ಬರ್ಗದ ಮುಂದೆ ಅಗತ್ಯಕ್ಕಿಂತ ಹೆಚ್ಚು ಪ್ರಕಾಶಿಸುತ್ತಿತ್ತು!. ಒಟ್ಟಿನಲ್ಲಿ ಕರ್ನಾಟಕದ ವಿವಿಧ ಭಾಗಗಳ ಆರ್ಥಿಕ ಹಾಗೂ ಮೂಲಭೂತ ಕ್ಷೇತ್ರಗಳ ಪ್ರಗತಿ ವಿಲೀನೋತ್ತರದಲ್ಲಿ ಒಂದೊಂದು ಕಡೆ ಒಂದೊಂದು ತರಹವಿದ್ದು ಪರಸ್ಪರ ಅಭಿವೃದ್ಧಿಯಲ್ಲಿ ಸಾಮ್ಯತೆ ಇದ್ದಿರಲಿಲ್ಲ.

ಇಷ್ಟರ ನಡುವೆ ಒದಗಿ ಬಂದದ್ದೆ ಕೇಂದ್ರ ಸರಕಾರದ ಭಾಷಾವಾರು ಪ್ರಾಂತ್ಯದ ಘೋಷಣೆ. ಆಂಧ್ರದಲ್ಲಿ ತೆಲುಗು ಭಾಷಿಗ ಪ್ರಾಂತ್ಯಗಳೆಲ್ಲ ಒಗ್ಗೂಡಬೇಕೆಂದು ವಿದ್ಯಾರ್ಥಿ ಪೊಟ್ಟಿ ಶ್ರೀರಾಮುಲು ಅಮರಾಣಾಂತ ಉಪವಾಸ ಸತ್ಯಾಗ್ರಹಕ್ಕೆ ಕೂತು ಜೀವ ಬಿಟ್ಟಾಗ ಅದ್ಯಾರೋ(?) "ಭಾರತದ ಕೋಗಿಲೆ" ಎಂಬ ಆರೋಪ ಹೊತ್ತಿದ್ದ ಹದ್ದೊಂದರ ಮರಿಯೊಂದಿಗೆ ಸಾಗುತ್ತಿದ್ದ ತನ್ನ ನಿದ್ದೆ ಬಿಟ್ಟೆದ್ದ ಕಚ್ಚೆ ಹರುಕ ನೆಹರು ನೇತೃತ್ವದ ಕೇಂದ್ರ ಸರಕಾರ ಕಡೆಗೂ ತನ್ನ ಮೊಂಡು ಹಟ ಬಿಟ್ಟುಕೊಟ್ಟು ಭಾಷೆಯ ಆಧಾರದ ಮೇಲೆ ಪ್ರಾಂತ್ಯಗಳ ವಿಭಜನೆಗೆ ಸಮ್ಮತಿಸಿದ್ದು, ಇದಕ್ಕಾಗಿಯೆ ಮೇಲಿಂದ ಮೇಲೆ ಮೂರು ಮೂರು ವಿಂಗಡನಾ ಆಯೋಗಗಳು ರಚನೆಯಾದದ್ದು, ಅದನ್ನ ನಮ್ಮ ಆಂದಿನ ಹಳೆ ಮೈಸೂರಿನ ರಾಜಕಾರಣಿಗಳು ತಮ್ಮ ವಯಕ್ತಿಕ ಸ್ವಾರ್ಥಕ್ಕಾಗಿ ವಿರೋಧಿಸಿ ಅಂದಿನ ಬೊಂಬಾಯಿ ಹಾಗೂ ಹೈದರಾಬಾದಿನ ಭಾಗಗಳನ್ನು ಹಳೆ ಮೈಸೂರಿನಲ್ಲಿ ಸೇರಿಸದಂತೆ ಆಗ್ರಹಿಸಿದ್ದು, ನಾವು ಅನೇಕ ಕನ್ನಡದ ಪ್ರದೇಶಗಳನ್ನ ಕಾರಣವಿಲ್ಲದೆ ಅವೈಜ್ಞಾನಿಕವಾಗಿ ಕಳೆದುಕೊಂಡಿದ್ದು ಇವೆಲ್ಲ ಮುಂದೊಮ್ಮೆ ವಿವರಿಸಬಹುದಾದ ವ್ಯಥೆಯ ಕಥೆ.