04 November 2013

ಗೋ ಪೂಜೆಯ ಗಮ್ಮತ್ತು......

ದೀಪಾವಳಿ ಅದರಲ್ಲೂ ಬಲಿ ಪಾಡ್ಯಮಿ ಶ್ರಾವಣದ ನಂತರ ದಾಂಗುಡಿಯಿಟ್ಟು ಬರುವ ಇನ್ನೆಲ್ಲಾ ಹಬ್ಬಗಳಿಗಿಂತ ಹೆಚ್ಚು ಇಷ್ಟವಾಗುವುದಕ್ಕೆ ನನಗೆ ಬಾಲ್ಯದಲ್ಲಿ ಹಲವಾರು ಕಾರಣವಿದ್ದವು. ನಾವು ಮೂಲತಃ ಕೃಷಿಕರಾಗಿರುವುದರಿಂದಲೂ, ಮನೆಯಲ್ಲಿ ಜಾನುವಾರುಗಳನ್ನ ಸಾಕುತ್ತಲಿದ್ದರಿಂದಲೂ ದೀಪಾವಳಿಯ ಕಡೆಯ ದಿನದ ಬಲಿ ಪಾಡ್ಯಮಿ ಮೊದಲೆರಡು ದಿನಗಳಿಗಿಂತ ಆಚರಣೆಯಲ್ಲಿ ನಮಗೆ ಹೆಚ್ಚು ಮುಖ್ಯವಾಗುತ್ತಿದ್ದುದು ಸಹಜ. ಸಾಲದ್ದಕ್ಕೆ ನಾನು ದಕ್ಷಿಣ ಕನ್ನಡ ಮೂಲದವನಾಗಿದ್ದರೂ ಅಚ್ಚ ಮಲೆನಾಡಾದ ಘಟ್ಟದ ಮೇಲಿನ ತೀರ್ಥಹಳ್ಳಿಯಲ್ಲಿ ಹುಟ್ಟಿ ಬೆಳೆದ ಕಾರಣ ದೇಶಾಚಾರದಂತೆ ನಮ್ಮ ದೀಪಾವಳಿಯ ಆಚರಣೆಯಲ್ಲಿ ಸ್ಥಳಿಯ ರಿವಾಜುಗಳ ಪ್ರಭಾವವೂ ಆಗಿತ್ತು. ಇದೊಂಥರಾ ಎರಡು ರೀತಿಯ ಆಚರಣೆಯನ್ನ ನಮ್ಮ ಅನುಕೂಲತೆಗೆ ತಕ್ಕಂತೆ ಮಾರ್ಪಡಿಸಿಕೊಂಡು ಆಚರಿಸುವ ಅನುಕೂಲ ಸಿಂಧು ವಿಧಾನವಾಗಿತ್ತು.ನಮ್ಮದೋ "ಸೌರಮಾನ ಪಂಚಾಂಗ" ಅದರೆ ಇಲ್ಲಿ ಘಟ್ಟದ ಮೇಲೆ ತದ್ವಿರುದ್ಧವಾದ " ಚಾಂದ್ರಮಾನ ಪಂಚಾಂಗ"ದ ಅನುಕರಣೆ. ಆದರೂ ತೀರ್ಥಹಳ್ಳಿಯಲ್ಲಿದ್ದಷ್ಟು ಕಾಲ ಅಲ್ಲಿನ ಪದ್ಧತಿಯ ಪ್ರಕಾರವೆ ಅನುಸರಿಸಿಕೊಂಡು ಅಮ್ಮ ಹಬ್ಬಗಳನ್ನ ಆಚರಿಸುತ್ತಿದ್ದರು. ಅಜ್ಜನ "ಗಜಾನನ ಕಂಪನಿ"ಯ ಡ್ರೈವರ್ ಸಂಬಳವೆ ಆದಾಯದ ಮೂಲವಾಗಿದ್ದ ನಮ್ಮ ಮನೆಯಲ್ಲಿ ಆದಾಯದ ಉಪ ಮೂಲ ಹೈನುಗಾರಿಕೆ ಅಗಿತ್ತು. ಹಾಗಂತ ನಾವೇನೂ ಹಂಡೆಗಟ್ಟಲೆ ಹಾಲು ಕರೆದು ಮಾರುವಷ್ಟು ಜಾನುವಾರುಗಳನ್ನ ಸಾಕಿರಲಿಲ್ಲ. ನಮ್ಮಲ್ಲಿದ್ದದೆಲ್ಲ ಅರ್ಧ ಅಥವಾ ಹೆಚ್ಚೆಂದರೆ ಒಂದು ಲೀಟರಿನಷ್ಟು ಹಾಲು ಕರೆಯಬಲ್ಲ ಮಲೆನಾಡು ಗಿಡ್ಡದ ತಳಿಯ ಜಾನುವಾರುಗಳು. ಅವಕ್ಕೆ ತಳಿಯಾಂತರದ ಪ್ರಯೋಗ ನಡೆಸಿ ಅಮ್ಮ ಸಿಂಧಿ ದನಗಳ ಅಡ್ದ ತಳಿಯ ಎರಡು ಮೂರು ದನಗಳನ್ನ ಹುಟ್ಟಿಸಲು ಯಶಸ್ವಿಯಾಗಿದ್ದರು. ಒಂದು ಲೋನೆಮ್ಮೆಯೂ ಮನೆಯ ಹಟ್ಟಿಯಲ್ಲಿತ್ತು. ಎಲ್ಲಾ ಸೇರಿ ಮನೆಯ ಖರ್ಚು ಕಳೆದು ಕುಡ್ತೆ, ಅರ್ಧ ಲೀಟರಿನ ಲೆಕ್ಖದಲ್ಲಿ ಎರಡು ಲೀಟರ್ ನಿತ್ಯ ಮಾರುತ್ತಿದ್ದೆವೇನೋ. ಒಟ್ಟಿನಲ್ಲಿ ಅಲ್ಲಿಗಲ್ಲಿಗೆ ಸರಿ ಹೋಗುವಷ್ಟು ಪಶು ಸಂಪತ್ತು ನಮ್ಮ ಹಟ್ಟಿಯಲ್ಲಿತ್ತು.ವರ್ಷಕ್ಕೊಮ್ಮೆಯೋ ಅಥವಾ ಅದು ತುಂಬಿದಾಗಲೋ ಎರಡು ಬಾರಿ ನಮ್ಮ ಹಿತ್ತಲಿನಲ್ಲಿದ್ದ ಗೊಬ್ಬರದ ಗುಂಡಿಯಿಂದ ಸಗಣಿ ಗೊಬ್ಬರವನ್ನ ಮಾರಿ ಇನ್ನಷ್ಟು ಪುಡಿ ಕಾಸನ್ನ ಅಮ್ಮ ಕೂಡುತ್ತಿದ್ದರು. ಮನೆಯ ನಿತ್ಯದ ಖರ್ಚಿಗೆ ಅಷ್ಟು ಧಾರಾಳ ಸಾಲುತ್ತಿದ್ದವು. ತೀರ್ಥಹಳ್ಳಿಯ ಸೋಮವಾರದ ಸಂತೆಯಲ್ಲಿ ನಿತ್ಯ ಬಳಕೆಯ ತರಕಾರಿಗಳನ್ನ ಚೌಕಾಸಿ ಮಾಡಿ ಕೊಂಡು, ಮನೆ ಹಿತ್ತಲಿನ ಗೊಬ್ಬರ ಗುಂಡಿಗೆ ಹಬ್ಬಿಸಿದ ಚಪ್ಪರದಲ್ಲಿ ಬೆಳೆದ ತೊಂಡೆ, ಬಸಳೆ, ಅವರೆಯ ಬಳ್ಳಿಯ ಫಲಗಳನ್ನ ಬಳಸಿ, ಅಲ್ಲೆ ಮೂಲೆಯಲ್ಲಿದ್ದ ಪಪ್ಪಾಯದ ಕಾಯಿಗಳನ್ನ ಬಳಸಿದ ಮೇಲೋಗರಗಳನ್ನ ಮಾಡಿ ಹೇಗೋ ನಮ್ಮ ನಿಯಮಿಯತ ವೆಚ್ಚಗಳನ್ನ ಹಿಡಿತದಲ್ಲಿಡುವಂತೆ ಮನೆವಾರ್ತೆಯನ್ನ ಅತ್ಯಂತ ಚಾಣಾಕ್ಷತೆಯಿಂದ ಅಮ್ಮ ನಿರ್ವಹಿಸುತ್ತಿದ್ದರು. ಗ್ರಾಮೀಣ ಭಾಗದ ಅಂತಹ ಬದುಕಿನ ದೊಂಬರಾಟವನ್ನ ಹದ ತಪ್ಪದ ಹಗ್ಗದ ನಡುಗೆಯಂತೆ ನಿತ್ಯ ಮಾಡುವ ಹೆಂಗಸರಿಂದ ದೇಶ ಸಂಭಾಳಿಸಲಿಕ್ಕೆ ಏದುಸಿರು ಬಿಡುತ್ತಿರುವ ಮಹಾ"ಮೌನಿ" ಸಿಂಗ ಮತ್ತು ಅವರ ತಿಜೋರಿಯ ಗೂರ್ಖಾ ಅಡ್ಡ ಪಂಚೆಯ ಗಿರಾಕಿ ಪಳನಿಯಪ್ಪನ ಮಗ ಚಿದಂಬರಂನಂತಹ ಅಡ್ಡ ಕಸುಬಿ ಅರ್ಥ ಶಾಸ್ತ್ರಜ್ಞರು ಕಲಿತಯುವುದು ಬೇಕಾದಷ್ಟಿದೆ. ಎಲ್ಲಿಯೂ ಲೋಪವಾಗದಂತೆ ತುಂಬಿದ ಮನೆಯ ಅಗತ್ಯಗಳನ್ನ ಯಶಸ್ವಿಯಾಗಿ ಸರಿ ಸುಮಾರು ಮೂರು ದಶಕ ನಿರ್ವಹಿಸಿದ ಕೀರ್ತಿ ನಮ್ಮಮ್ಮನದು.ಹಬ್ಬಗಳಲ್ಲಿ ಆದರಲ್ಲೂ ದೀಪಾವಳಿಯ ಕಡೆಯ ದಿನದ ಬಲಿ ಪಾಡ್ಯಮಿಯ ಗೋಪೂಜೆಯ ಹೊತ್ತಿನಲ್ಲಿ ನಮ್ಮ ಮನೆಯಲ್ಲಿ ಗಡಿಬಿಡಿ ಏರ್ಪಡುತ್ತಿತ್ತು. ಭಾನು, ಲಕ್ಷ್ಮಿಯರ ಅಸಂಖ್ಯ ಸಂತಾನಗಳ ನಡುವೆ ಎಮ್ಮೆಯಮ್ಮ ಹಾಗೂ ಅವಳ ಮಗರಾಯ ಮರಿ ಕೋಣಕುಮಾರನಿಗೂ ಅಂದು ಬಿಸಿ ನೀರಿನ ಸ್ನಾನದ ಸೌಭಾಗ್ಯ!. ಆಗಾಗ ನಿಯಮಿತವಾಗಿ ಅವರೆಲ್ಲರಿಗೂ ಸ್ನಾನ ಮಾಡಿಸಲಾಗುತ್ತಿತ್ತಾದರೂ. ದೀಪಾವಳಿಯಂದು ಮಾತ್ರ ಚೂರು ಎಣ್ಣೆ ಸವರಿದ ಶಾಸ್ತ್ರ ಮಾಡಿ ವಿಶೇಷವಾಗಿ ಅವರೆಲ್ಲರಿಗಂತಲೆ ನೀರು ಕಾಯಿಸಿ ತೆಂಗಿನ ಚೊಪ್ಪಿನಲ್ಲಿ ತಿಕ್ಕಿತಿಕ್ಕಿ ಅವರ ಸಂತಾನವನ್ನೆಲ್ಲ ಅಂದು ಮೀಯಿಸಲಾಗುತ್ತಿತ್ತು. ಕಸ್ತೂರಿ ಬಾರ್ ಸೋಪಿನ ಬಿಲ್ಲೆಗಳನ್ನ ಆವರೆಲ್ಲರ ಮೈ ಮೇಲೆಲ್ಲ ಉಜ್ಜಿ ಉಜ್ಜಿ ನೊರೆ ಉಕ್ಕುವಂತೆ ಚೊಪ್ಪಿನಲ್ಲಿ ಅನಂತರ  ತಿಕ್ಕಿತಿಕ್ಕಿ ಅವರೆಲ್ಲರ ಮೈಯನ್ನ ಲಕ ಲಕ ಹೊಳೆಯುವಂತೆ ಮಾಡುವ ಕಾಯಕದಲ್ಲಿ ಯಾರು ಕರೆಯದಿದ್ದರೂ ಮುಂಚೂಣಿಯವನಾಗಿ ಕರೆಯದೆ ಬರುವ ಅತಿಥಿಯಂತೆ ಆಗಾಗ ಸೊಂಟದ ಬೆಳ್ಳಿ ಉಡಿದಾರದಿಂದಾಚೆ ಜಾರುವ ಕಿರು ಚಡ್ದಿ ಏರಿಸಿಕೊಂಡ ಶೂರ ನಾನು ಮುನ್ನುಗ್ಗುತ್ತಿದ್ದೆ.ಸಾಮಾನ್ಯವಾಗಿ ದನಗಳನ್ನ ಮೀಯಿಸುವುದು ಅಜ್ಜನ ಕೆಲಸ. ಗೋಪೂಜೆಯಾದ್ದರಿಂದ ಅಜ್ಜನ ಬಸ್ಸಿನ ಲೈನಿಗೆ ಹೋಗುವ ಡ್ಯೂಟಿಗೆ ಅವತ್ತು ರಜೆ. ಬೆಳ್ಳಂಬೆಳಗ್ಯೆ ಅವರು ಬರಿ ಕೋಮಣದಲ್ಲಿ (ಲಂಗೋಟಿ) ಮನೆ ಹಿಂಭಾಗದ ಬಚ್ಚಲಿನ ಹಂಡೆಯ ಒಲೆಗೆ ತೆಂಗಿನ ಮಡಿಲ ಸೋಗೆ ತುರುಕಿ ಸೀಮೆ ಎಣ್ಣೆಯನ್ನಷ್ಟು ಚೋಪಿ ಬೆಂಕಿ ಎಬ್ಬಿಸುವಾಗ ನಾನು ಸದಾ ಜಾರುವ ನನ್ನ  ಚಡ್ಡಿ ಅವತಾರದೊಂದಿಗೆ ಅಮ್ಮ ಕೊಟ್ಟ ಎಣ್ಣೆಯ ಮಿಳ್ಳಿ ಹಿಡಿದು ಅಲ್ಲಿ ಹಾಜರಾಗುತ್ತಿದ್ದೆ. ಬೆಂಕಿ ಸರಿಯಾಗಿ ಹೊತ್ತಿಕೊಂಡದ್ದು ಖಾತ್ರಿಯಾಗುತ್ತಲೆ ಅಜ್ಜ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಕುಕ್ಕರಗಾಲಿನಲ್ಲಿ ಎಳೆ ಬಿಸಿಲು ಕಾಯಿಸುತ್ತಾ ಕೂರುತ್ತಿದ್ದರು. ಅವರ ಆ  ಹೊತ್ತಿನ ಚಾ ಅಲ್ಲಿಗೆ ಸರಬರಾಜು ಆಗಿರುತ್ತಿತ್ತು. ಕಾರ್ತಿಕ ಮಾಸದ ಇಬ್ಬನಿ ಇಳೆಯ ತಬ್ಬುವ ಚುಮುಚುಮು ಚಳಿಗೆ ಎಳೆಯ ಸೂರ್ಯನ ಬಿಸಿಲ ಕಾವಿಗೆ ಕಾಯುತ್ತಾ ಮೈ ಒಡ್ಡುವ ಸುಖವ ಅನುಭವಿಸಿದವನೆ ಬಲ್ಲ! ಜೊತೆಗೆ ಮಿಳ್ಳಿಯಲ್ಲಿ ತುಸುವೆ ಬಿಸಿ ಮಾಡಿದ್ದ ಕೊಬ್ಬರಿ ಎಣ್ಣೆಯನ್ನ ನಾನು ನನ್ನ ಪುಟ್ಟ ಪುಟ್ಟ ಕೈಗಳಿಂದ ಅವರ ಬೆನ್ನಿಗೆ ಮಾಲೀಸು ಮಾಡುತ್ತಿದ್ದರೆ ನಾರಾಯಣ ಹೆಗಡೇರು ಅಂತರಿಕ್ಷದಲ್ಲಿ ತೇಲುವಂತೆ ಮುಖ ಮಾಡುತ್ತಾ ಅರೆ ನಿಮೀಲಿತ ಕಣ್ಣುಗಳಲ್ಲಿ ಹಗಲು ಕನಸು ಕಾಣುತ್ತಿದ್ದರು!


ಇವರ ಮಾಲೀಸು ಮುಗಿಯುವ ಹೊತ್ತಿಗೆ ಹಂಡೆಯ ನೀರು ಕೊತಕೊತ ಕುದಿದು ಕಾದಿರುತ್ತಿತ್ತು. ಅದನ್ನ ಅಮ್ಮ ಅಲ್ಯುಮೀನಿಯಂ ಬಕೇಟಿಗೆ ತೋಡಿ ಕೊಟ್ಟರೆ ಅದಕ್ಕೆ ತಣ್ಣೀರು ಬೆರೆಸಿ "ಹದ" ಮಾಡುವ ಹೊಣೆ ಮಾತ್ರ ನನ್ನದು. ಧಾರಾಳ ನೀರಾಟಕ್ಕೆ ಮುಕ್ತ ಪರವಾನಿಗೆ ದೊರೆಯುತ್ತಿದ್ದ, ನೀರಲ್ಲಿ ಬಿದ್ದು ಹೊಡಕಲು ಯಾರದೆ ಅನುಮತಿಯ ವಿಸಾ-ಪಾಸ್'ಪೋರ್ಟ್'ಗಳ ಅಗತ್ಯದ ಹಂಗು ಅಂದಿರಲಿಲ್ಲವಾಗಿ, ಒಂದೊಮ್ಮೆ ಮನೆಯ ದೊಡ್ಡವರ್ಯಾರಾದರೂ "ಇವನೇನು ದನಗಳಿಗೆ ಮೀಯಿಸುತ್ತಿದ್ದಾನ? ಇಲ್ಲ ಇವನೆ ನೀರಿಗೆ ಬಿದ್ದು ಕುಂಟೆ ಕೋಣನಂತೆ ಹೊಡಕುತ್ತಿದ್ದಾನ!" ಎನ್ನುವ ಗುಮಾನಿ ಬೆರೆತ ಕಣ್ಣುಗಳಿಂದ ನಡುನಡುವೆ ನನ್ನ ಅನುಮಾನಾಸ್ಪದ ನಡುವಳಿಕೆಯನ್ನ ದೃಷ್ಟಿಸುವುದೂ ಇತ್ತು. ಅಂತಹ ಸಮಯದಲ್ಲೆಲ್ಲ ಅಂತಹ ಸಂಶಯದ ಸೂಚನೆ ಸಿಕ್ಕವನೆ ನನ್ನ ಎಳೆಯ ಕೀರಲು ಕಂಠಕ್ಕೆ ಶಕ್ತಿ ಮೀರಿ ಬಲ ಕೊಟ್ಟು ಕೆಲಸಕ್ಕಿಂತ ಹೆಚ್ಚು ದೊಂಡೆ ದೊಡ್ದದು ಮಾಡುತ್ತಾ ನನ್ನಿಂದಾಗುತ್ತಲಿದ್ದ "ಅನ್ಯಾಯ"ದ ಅನಾಚಾರಗಳನ್ನೆಲ್ಲ ಆ "ಕಂಠ ಮಾಲಿನ್ಯ"ದಲ್ಲಿ ಮರೆಮಾಡಿ ಭಾರಿ ಜಂಬರ ಇರುವನಂತೆ ಅತ್ತಿಂದಿತ ಓಡಿಯಾಡಿ ದಂಡು ಕಡಿದು ಬಂದವನ ಹಾಗೆ ಫೋಜು ಕೊಟ್ಟು ಸಂಭಾವ್ಯ ಶಿಕ್ಷೆಯಿಂದ ಪಾರಾಗುತ್ತಿದ್ದೆ!ಆಮೇಲೆ ಅಜ್ಜ ಹಿಂದಿನ ಅಂಗಳಕ್ಕೆ ಒಬ್ಬೊಬ್ಬರಾಗಿ ಕೊಟ್ಟಿಗೆ ರಾಣಿಯರನ್ನ ಕರೆತಂದು ಕಟ್ಟುತ್ತಿದ್ದರು ನಾನು ನೀರು ಚೋಪಿ ಸಿಕ್ಕಸಿಕ್ಕಲ್ಲಿ ಆಥವಾ ನನ್ನ ಕೈ ಎಟುಕಿದಲ್ಲೆಲ್ಲಾ ಕಸ್ತೂರಿ ಬಾರ್ ಸೋಪು ತಿಕ್ಕಿದರೆ ಆಜ್ಜ ತಯಾರು ಮಾಡಿಕೊಂಡಿರುತ್ತಿದ್ದ ತೆಂಗಿನ ಚೊಪ್ಪಿನಲ್ಲಿ ಗಸಗಸ ಉಜ್ಜಿ ಮೈಗಂಟಿದ್ದ ಕೊಳೆ, ಉಣ್ಣೆ ಎಲ್ಲವನ್ನೂ ತೆಗೆದು ಬಿಸಿ ನೀರಿನ ಮಹಾ ಮಜ್ಜನದಲ್ಲಿ ಅವರನ್ನೆಲ್ಲ ಮುಳುಗಿಸುತ್ತಿದ್ದರು. ನಮ್ಮದು ಪೇಟೆ ಮನೆಯಾಗಿದ್ದರೂ ವಿಪರೀತ ಉಣ್ಣೆ ಕಾಟ ನಮ್ಮ ಕೊಟ್ಟಿಗೆಯಲ್ಲಿತ್ತು, ನಾಯಿ ಸಾಕುವುದೂ ಕೂಡಾ ಈ ಕಾರಣದಿಂದ ನಮಗೆ ಅಸಾಧ್ಯವೇ ಆಗಿತ್ತು. ಒಂದೆರಡು ಬಾರಿ ನನ್ನ ಮಾವ ಜಾತಿ ಆಲ್ಸೇಷಿಯನ್ ನಾಯಿಗಳನ್ನ ಬೆಂಗಳೂರಿನಿಂದಲೆ ನೇರವಾಗಿ ತಂದು ಸಾಕಲಿಕ್ಕೆ ಯತ್ನಿಸಿದರೂ ಹಾಳು ಉಣ್ಣೆಗಳ ಕಾರಣ ನಾಯಿಗಳು ಸೊರಗಿ ಸಾಯುವ ಸ್ಥಿತಿಗೆ ಬಂದು ಮುಟ್ಟಿದ್ದವು. ಅನಂತರ ಅವೆ ನಾಯಿಗಳನ್ನ ಇಂಬ್ರಗೋಡಿನ ಶ್ರೀನಿವಾಸಯ್ಯರ ಮನೆಗೆ ಕೊಟ್ಟೆವು, ಅಲ್ಲಿಗೆ ಹೋದದ್ದೆ ನಾಯಿಗಳ ಆರೋಗ್ಯದಲ್ಲಿ ಹಟಾತ್ ಚೇತರಿಕೆ ಉಂಟಾಗಿ ಅವುಗಳು ತಮ್ಮ ವಯೋ ಸಹಜವಾಗಿ ಚಟುವಟಿಕೆಯನ್ನ ಮೈಗೂಡಿಸಿಕೊಂಡವು! ಇದು ಹೀಗೇಕೆ ? ಎನ್ನುವ ನನ್ನ ಪ್ರಶ್ನೆಗೆ ಅಮ್ಮ ನಮ್ಮದು ನಾಗನ ನೆಲೆ ಇರುವ ಜಾಗ, ಇಲ್ಲಿ ಹಾಗೆಲ್ಲ ಪ್ರಾಣಿಗಳನ್ನ ಸಾಕುವುದು 'ನಾಗ ದೋಷ'ಕ್ಕೆ ಕಾರಣವಾಗುತ್ತದೆ, ಹೀಗಾಗಿಯೆ ಉಣ್ಣೆಯ ಕಾಟ ಹೆಚ್ಚಿಗೆ ಆಗೋದು ಅಂತ ಹೇಳಿ ಹೆದರಿಕೆ ಹುಟ್ಟಿಸುತ್ತಿದ್ದರು. ಈ ಸುಡುಗಾಡು 'ನಾಗ ದೋಷ'ದ ದೆಸೆಯಿಂದ ನಮಗೆ ಕಡೆಗೂ ನಾಯಿಗಳನ್ನ ಸಾಕಲಾಗಲೇ ಇಲ್ಲ.


ಅದು ಅತ್ತಲಾಗಿರಲಿ ಮತ್ತೆ ಗೋ ಮಜ್ಜನದ ಕಥೆಗೆ ಮರಳೋಣ. ಸ್ನಾನದ ನಂತರ ಅವರೆಲ್ಲರೂ ಮೈ ಕೊಡವಿಕೊಂಡರೆ ನನಗೆ ಹನಿ ಸಿಡಿದು ಖುಷಿಯಾಗುತ್ತಿತ್ತು. ಅವರೆಲ್ಲರ ಮೈಯಿಂದ ಏಳುತ್ತಿದ್ದ ಮೈ ಶಾಖದ ಹಬೆಯನ್ನ ನಾ ನೋಡುತ್ತಲೆ ಮೈ ಮರೆಯುವಾಗ ಎಲ್ಲರನ್ನೂ ಮತ್ತೊಂದು ಗೊಂತಿಗೆ ಅಜ್ಜ ಕಟ್ಟಿ ಕೊಟ್ಟಿಗೆ ತೊಳೆಯಲು ಅಣಿಯಾಗುತ್ತಿದ್ದರು. ನಮ್ಮ ಕೊಟ್ಟಿಗೆಗೆ ಚಪ್ಪಡಿಯ ನೆಲಹಾಸು ಹಾಕಿದ್ದರಿಂದ ನೆಲ ತೊಳೆಯೋದು ಒಂದು ಸವಾಲಿನ ಕೆಲಸ ಆಗಿರಲಿಲ್ಲ. ಮೊದಲು ಬರಿ ನೀರನ್ನ ಹಾಕಿ ಗುಡಿಸಿ ತೊಳೆದು, ಅನಂತರ ಸ್ವಲ್ಪ ಬ್ಲೀಚಿಂಗ್ ಪೌಡರ್ ಚುಮುಕಿಸಿ ಕೆಲಕಾಲದ ನಂತರ ಅದನ್ನ ಬ್ರೆಷ್ಷಿನಲ್ಲಿ ತಿಕ್ಕಿ ತಿಕ್ಕಿ ತೊಳೆದು ಸ್ವಚ್ಛಗೊಳಿಸಿ ಅಜ್ಜ ಅಲ್ಲಿಂದ ಹೊರ ಬಂದರೆ ಅಲ್ಲಿಯವರೆಗೆ ಅವರ ತೈನಾತಿಯಾಗಿ ನೀರಿನ ಸರಬರಾಜು ಮಾಡುತ್ತಿದ್ದ ನಾನು ಕೊನೆಗೆ ಕೊಟ್ಟಿಗೆ ಪೂರ್ತಿ ಫಿನಾಯಿಲ್ ಚುಮುಕಿಸಿ ಸ್ವಚ್ಛತೆಯ ಕೆಲಸ ಖೈದುಗೊಳಿಸುತ್ತಿದ್ದೆ. ಅಷ್ಟರಲ್ಲಿ ಮೈ ತೊಳೆಸಿಕೊಂಡ ದನಗಳೆಲ್ಲ ಬಿಸಿಲಿಗೆ ನೀರು ಆರಿ ಫಳಫಳ ಹೊಳೆಯುತ್ತಾ ನಿಂತಿದ್ದರೆ, ಅವರ ಕುಲತಿಲಕರು ತಮ್ಮ ಕಿವಿಗೆ ನುಗ್ಗುತ್ತಿದ್ದ ಗಾಳಿಗೆ ಕಚಗುಳಿ ಇಟ್ಟಂತಾಗಿ ಅತ್ತಿಂದಿತ್ತ ಜಿಗಿಜಿಗಿದು ಓಡಿಯಾಡುತ್ತಾ ತಮ್ಮ ಎಲ್ಲೆ ಖಚಿತಪಡಿಸಿಕೊಳ್ಳುತ್ತಾ ದರ್ಬಾರು ನಡೆಸುತ್ತಿದ್ದವು.ಅಮ್ಮ ತಯಾರಾಗಿಟ್ಟು ಹೋಗಿರುತ್ತಿದ್ದ ಕಾವಿ ಹಾಗೂ ಜೇಡಿಯಲ್ಲಿ ಇಡ್ಲಿ ಕಪ್ಪನ್ನ ಅದ್ದಿ ಅದರ ಅಚ್ಚನ್ನ ದನಗಳ ಮೈ ಮೇಲೆ ಅಜ್ಜ ಮೂಡಿಸುತ್ತಿದ್ದರು. ಆಮೇಲೆ ಎಲ್ಲ ದನಗಳ ಕೊಂಬಿಗೆ ಕಾವಿ - ಜೇಡಿ ಬಳಿದು ಕುತ್ತಿಗೆಗೆ ಚಂಡೂ ಹೂವಿನ ಹಾರ ಹಾಗೂ ಉಗುಣೆ ಸರ ಹಾಕಲಾಗುತ್ತಿತ್ತು. ಹಿತ್ತಲಿನ ತುಂಬ ಚಂಡೂ ಹೂಗಳ ಸುವಾಸನೆ ಆವರಿಸುತ್ತಿರೋವಂತೆ ಅಡುಗೆ ಮನೆಯಿಂದ ಕಾಯಿಗಂಜಿ ಹಾಗೂ ಸೌತೆಕಾಯಿ ಕಡುಬಿನ ಪರಿಮಳವೂ ಮೂಗು ಹೊಕ್ಕು ಕರುಳು ಸೇರಿ ಅಲ್ಲಿ ಅಡಗಿರುವ ಹಸಿವಿನ ಕಾಳ ಸರ್ಪವನ್ನ ಬಡಿದೆಬ್ಬಿಸುತ್ತಿತ್ತು. ಜೊತೆಗೆ ಪಾಯಸದ ಪರಿಮಳವೂ ಬಂದು ಮೂಗಿನ ಹೊಳ್ಳೆಗಳನ್ನ ಕೆರಳಿಸಿ ದನಗಳ ಅಲಂಕಾರ ಮಾಡಲೋ? ಇಲ್ಲಾ ಅಡುಗೆ ಮನೆಗೆ ಹೋಗಿ ಜೊಲ್ಲು ಸುರಿಸಲೋ? ಎನ್ನುವ ಗೊಂದಲಕ್ಕೆ ಬಿದ್ದು "ಅಕ್ಕಿ ಮೇಲೆ ಆಸೆ; ನೆಂಟರ ಮೇಲೆ ಪ್ರೀತಿ" ತರಹದ ಸ್ಥಿತಿ ನನ್ನದಾಗುತ್ತಿತ್ತು. ಚಂಡೂ ಹೂ ಗೋಪೂಜೆಯ ಒಂದು ಅವಿಭಾಜ್ಯ ಅಂಗ. ಅವತ್ತಿಗೆ ಅದಿಲ್ಲದೆ ಪೂಜೆಯೆ ಇಲ್ಲ ದನಗಳಿಗೆ. ಇನ್ನು ಉಗುಣೆ ಸರ ಈಗೆಲ್ಲ ಅಪರೂಪವಾಗಿರಲಿಕ್ಕೆ ಸಾಕು. ಕಾಡಿನಲ್ಲಿ ಸಿಗುವ ಕಾಟು ಮರವೊಂದರ ಕಾಯಿಗಳೆ ಉಗಣೆ. ನೋಡಲಿಕ್ಕೆ ಬಲಿತ ಕಾಫಿ ಹಣ್ಣುಗಳಂತೆ ಕಾಣುವ ಇವು ಅದೇ ರಂಗಿನಲ್ಲಿ ಹೊಳೆಯುತ್ತಿರುತ್ತದೆ. ಸ್ವಲ್ಪ ಗಡಸಾದ ಈ ಕಾಯಿಗಳನ್ನ ದಾರಕ್ಕೆ ಸುರಿದು ಪೋಣಿಸಿ ಹವಳದ ಹಾರದಂತೆ ಎರಡೆಳೆಯ ಹಾರವನ್ನಾಗಿಸಿ ಅವನ್ನ ದನ ಹಾಗೂ ಕರುಗಳ ಕುತ್ತಿಗೆಗೆ ಕಟ್ಟಲಾಗುತ್ತಿತ್ತು. ಕಟ್ಟಿ ಈಚೆಗೆ ಬರುವುದರೊಳಗೆ ಪರಸ್ಪರರ ಹೂವಿನ ಹಾರಗಳನ್ನ ಕಿತ್ತು ತಿಂದು ಮುಗಿಸುತ್ತಿದ್ದ ದನಗಳು ಈ ಉಗುಣೆ ಸರಕ್ಕೆ ಮಾತ್ರ ತಪ್ಪಿಯೂ ಬಾಯಿ ಹಾಕುತ್ತಿರಲಿಲ್ಲ. ಬಹುಷಃ ಅವು ಕಟು ಕಹಿಯ ರುಚಿ ಹೊಂದಿರುತ್ತಿದ್ದವೇನೋ! ಹೀಗಾಗಿ ಗೋ ಪೂಜೆಯಾದ ತಿಂಗಳವರೆಗೂ ಈ ಉಗುಣೆ ಸರ ಅವುಗಳ ಕುತ್ತಿಗೆಯಲ್ಲಿ ಚಂದವಾಗಿ ಜೋತಾಡುತ್ತಿರುತ್ತಿದ್ದವು.

ಇಷ್ಟೆಲ್ಲಾ ಆಗುವಾಗ ಘಂಟೆ ಹತ್ತಿರ ಹತ್ತಿರ ಹತ್ತರ ಸಮೀಪ ಆಗಿರುತ್ತಿದ್ದು ಚಾ ಬಿಟ್ಟು ಇನ್ನೇನೂ ಹೊಟ್ಟೆಗೆ ಬೆಳಗಿನಿಂದ ಬಿದ್ದರದೆ ಹೊಟ್ಟೆ ಚುರುಗುಟ್ಟಲಿಕ್ಕೆ ಆರಂಭಿಸಿರುತ್ತಿತ್ತು. ಆದರೆ ಪೂಜೆಯಾಗದೆ ತಿಂಡಿ ಕೊಡುತ್ತಿರಲಿಲ್ಲವಾಗಿ ಆದಷ್ಟು ಬೇಗ ಪೂಜೆ ಆಗಲಿ ಎಂದು ನಾನು ಮನಸೊಳಗೆ ಹಾರೈಸುತ್ತಾ ಸ್ನಾನ ಮಾಡಿಸಿಕೊಳ್ಳುತ್ತಿದ್ದೆ. ದನಗಳಿಗೆ ಸ್ನಾನ "ಮಾಡಿಸುತ್ತಿದ್ದ" ನನಗೆ ಸ್ವಂತಃ ಸ್ನಾನ ಮಾಡಲಿಕ್ಕೆ ಮಾತ್ರ ಬರುತ್ತಲೆ ಇರಲಿಲ್ಲ! ಯಾರಾದರೂ ಹಿರಿಯರು ದನದ ಕರುಗಳನ್ನ ಹಿಡಿಯುವಂತೆ ನನ್ನನ್ನೂ ಹಿಡಿದು ನನ್ನ "ಕಣ್ಣಿಗೆ ಸೋಪು ಹೋಯ್ತು ಉರೀಈಈಈಈಈಈಈಈಈ" "ಕಿವಿಗೆ ನೀರು ಹೊಕ್ಕಿತು" ಮುಂತಾದ ಸುಳ್ಳುಸುಳ್ಳೇ ಆಕ್ಷೇಪಗಳನ್ನೆಲ್ಲ ಕೇರು ಮಾಡದೆ ಮೀಯಿಸುವ ತನಕ ನಾನು ಸ್ವಚ್ಛವಾಗುತ್ತಿರಲಿಲ್ಲ. ಮೀಯಿಸುವ ವಿಷಯದಲ್ಲಿ ಅವತ್ತು ನನಗೂ ದನಗಳಿಗೂ ಏನೂ ವ್ಯತ್ಯಾಸವೆ ಇರುತ್ತಿರಲಿಲ್ಲ. ಹೆಚ್ಚೆಂದರೆ ಇಬ್ಬರಿಗೂ ಉಪಯೋಗಿಸುತ್ತಿದ್ದ ಸಾಬೂನು ಬೇರೆ ಬೇರೆಯಾಗಿರುತ್ತಿತ್ತು ಅಷ್ಟೆ!


ಅಷ್ಟರಲ್ಲಿ ಅಕ್ಕಪಕ್ಕದ ಮನೆಯವರೂ ತಮ್ಮ ತಮ್ಮ ಪೂಜಾ ಪರಿಕರ ಮತ್ತು ನೈವೇದ್ಯಗಳೊಂದಿಗೆ ನಮ್ಮ ಕೊಟ್ಟಿಗೆಯ ಬಾಗಿಲಲ್ಲಿ ನೆರೆಯುತ್ತಿದ್ದರು. ಇತ್ತ ಅಮ್ಮ ನಿತ್ಯದ ಅಕ್ಕಚ್ಚು ಹಾಗೂ ತೌಡಿಗೆ ಹೆಚ್ಚು ಹಿಂಡಿ ಬೆರೆಸಿ ಬಿಸಿ ಮಾಡಿದ ಮುರುವನ್ನ ಉಪ್ಪು ಬೆಲ್ಲ ಬೆರೆಸಿ ಇನ್ನಷ್ಟು ಸ್ವಾದಿಷ್ಟವಾಗಿಸಿ ಅವರೆಲ್ಲರ ಮುಂದೆ ತಂದಿಡುತ್ತಿದ್ದರು. ಹಬೆಯಾಡುವ ರುಚಿಯಾದ ಆ ಮುರುವಿಗೆ ಹಸಿದ ದನಗಳು ಬಾಯಿ ಹಾಕಿ ಸಶಬ್ಧವಾಗಿ ಹೀರುತ್ತಿರುವಂತೆ ಆಗ ಅವರೆಲ್ಲರ ಪೂಜೆ ಆರಂಭವಾಗುತ್ತಿತ್ತು. ಮೊದಲಿಗೆ ದೀಪವನ್ನ ಬೆಳಗಿಸಿ ಅದರ ಬೆಳಕನ್ನ ದನಗಳಿಗೆ ತೋರಿಸಿ ಆ ಕಣ್ಣುಗಳಲ್ಲಿ ದೀಪದ ಪ್ರತಿಬಿಂಬ ಕಾಣುತ್ತಿರುವಂತೆ ಕಾಲಿನ ಗೊರಸು ಹಾಗೂ ಹಣೆ-ಕೊಂಬಿಗೆ ಅರಷಿಣ ಕುಂಕುಮ ಹಚ್ಚಿ ಆಜ್ಜ ಆರತಿ ಬೆಳಗುತ್ತಿದ್ದರು. ಮುತ್ತೈದೆಯರು ಇನ್ನುಳಿದ ದನಗಳಿಗೂ ಅರಷಿಣ ಕುಂಕುಮ ಹಚ್ಚಿ ವಾತಾವರಣವನ್ನ ಕಳೆಗಟ್ಟಿಸುತ್ತಿದ್ದರು. ಈಗಾಗಲೆ ಕಾವಿ ಹಾಗೂ ಜೇಡಿಯ ಮೇಕಪ್ಪಿನ ಜೊತೆ ಚಂಡೂ ಹೂವಿನ - ಉಗುಣೆ ಸರದ ಅಲಂಕಾರದಲ್ಲಿ ಚಂದ ಕಾಣುವ ದನಗಳು ಈಗ ರಂಗೋಲಿ ಬಿಟ್ಟ ಕೊಟ್ಟಿಗೆಯಲ್ಲಿ ಅರಷಿಣ ಕುಂಕುಮ ಶೋಭಿತೆಯರಾಗಿ ವಿಶ್ವಸುಂದರಿಯರಿಗೆ ಸಡ್ಡು ಹೊಡೆಯುವಂತೆ ಕಾಣಿಸುತ್ತಿದ್ದರು. ಆರತಿಯ ನಂತರ ಎಲ್ಲರಿಗೂ ಸಿಹಿ ಅವಲಕ್ಕಿ ಹಾಗೂ ಕಡಲೆ ಉಸುಳಿಯ ಪ್ರಸಾದ ಹಾಗೂ ಕಾಯಿ ನೀರಿನ ಮತ್ತು ಪಂಚಾಮೃತದ ತೀರ್ಥ ಹಂಚಿಕೆಯಾಗುತ್ತಿತ್ತು. ಅಲ್ಲಿಗೆ ಗೋಪೂಜೆ ಮುಗಿದು ನಮ್ಮ ಹೊಟ್ಟೆ ಪೂಜೆಯ ಗೌಜಿ ಆರಂಭವಾಗುತ್ತಿತ್ತು.ನಮ್ಮ ದೇವರ ಗೂಡಿನಲ್ಲಿದ್ದ ಅಷ್ಟೂ ಪೂಜಾ ಸಾಮಗ್ರಿಗಳು ಅವತ್ತು ಕೊಟ್ಟಿಗೆಗೆ ವಲಸೆ ಬಂದಿರುತ್ತಿದ್ದವು. ಘಂಟೆ ಮಣಿಯ ನಿನಾದ ಅವತ್ತು ಅಲ್ಲಿಂದಲೆ ಮೊಳಗುತ್ತಿತ್ತು. ಹಬ್ಬದ ವಿಶೇಷ ಖಾದ್ಯಗಳಾಗಿ ಅವತ್ತು ನಾವು ತಿನ್ನಲಿದ್ದ ಸೌತೆ ಕಡುಬು, ಚಪ್ಪೆ ರೊಟ್ಟಿ, ಉದ್ದಿನ ದೋಸೆ ಹಾಗೂ ಪಾಯಸ ಇವೆಲ್ಲ ದನಗಳಿಗೂ ಶಾಸ್ತ್ರಕ್ಕಷ್ಟು ತಿನ್ನಿಸಿ ಅವತ್ತಿನ ಮಟ್ಟಿಗೆ ನಾವು ಸದಾ ಕಟ್ಟಿಯೇ ಸಾಕುತ್ತಿದ್ದ ದನಗಳನ್ನ ಮನೆಯಿಂದಾಚೆ ಸ್ವಲ್ಪ ಅಡ್ಡಾಡಲಿಕ್ಕೆ ಬಿಟ್ಟು ಹಬ್ಬದ ಅಂಕದ ಕೊನೆಯ ಪರದೆಯನ್ನ ಅಜ್ಜ ಎಳೆಯುತ್ತಿದ್ದರು. ಇವತ್ತು ನಮ್ಮಲ್ಲಿ ದನಗಳಿಲ್ಲ. ಬರಿದಾದ ಖಾಲಿ ಖಾಲಿ ಕೊಟ್ಟಿಗೆಯನ್ನ ನೋಡುವಾಗ ಹೊಟ್ಟೆಯಲ್ಲಿ ಅವ್ಯಕ್ತ ಸಂಕಟವಾಗುತ್ತದೆ. ಭಾನು, ಲಕ್ಷ್ಮಿಯರು ಕೇವಲ ಹಟ್ಟಿಯ ಅರಸಿಯರಾಗಿರದೆ ನಮ್ಮ ಮನೆಯ ಭಾಗ್ಯದ ದೇವತೆಗಳೆ ಆಗಿದ್ದರು. ಅವರೆಲ್ಲರ ಕೃಪೆಯಿಂದಲೆ ನಮ್ಮ ಮನೆಯ ಒಲೆಯಲ್ಲಿ ನಿತ್ಯ ಅನ್ನ ಬೇಯುತ್ತಿತ್ತು. ಅವರೆಲ್ಲರ ಋಣದಿಂದ ಬಹುಷಃ ನಮ್ಮ ಮನೆ ಮಂದಿಗೆ ಯಾವತ್ತಿಗೂ ಮುಕ್ತಿ ಇಲ್ಲವೇ ಇಲ್ಲ. ನಗರದ ಯಾಂತ್ರೀಕೃತ ಏಕತಾನತೆಯ ಬದುಕಿನಲ್ಲಿ ಆ ವಾಸ್ತವದ ಬದುಕಿನ ಸತ್ಯಗಳನ್ನೆಲ್ಲ ಕಳೆದುಕೊಂಡು ದೀಪಾವಳಿಯ ಕಾಲಕ್ಕೆ ದಿವಾಳಿಯಾಗಿದ್ದೇನೆ ಅನ್ನಿಸುವಂತಾಗಿದೆ.

No comments: