30 March 2013

ತುಳುಗಾದೆ-೫೭









"ಇರ್ತಲೆಗ್ ರಡ್ ನಾಲಾಯಿ, ಪಿತ್ತಲೆಗ್ ನಾಲ್ ಕೆಬಿ"



( ಇದು ಸ್ವಂತಿಕೆ, ಸ್ವ ಬುದ್ಧಿಯ ಹಂಗಿಲ್ಲದೆ ಬೇಕಾಬಿಟ್ಟಿ ಕಂಡವರ ಮಾತಿಗೆ ಕಿವಿಗೊಟ್ಟು ಮರುಳಾಗುವ ಮಂದಿಯನ್ನ ಗೇಲಿ ಮಾಡಲು ಬಳಸಲಾಗುವ ಗಾದೆ ಮಾತು. ತನ್ನ ಮನದ ಮಾತಿಗೆ ಕಿವಿಗೊಡದೆ ಕಂಡ ಕಂಡ ಕಿವಿ ಕಚ್ಚುವ ಭಟ್ಟಂಗಿಗಳ ಸವಿಯಾದ ಭೋಪರಾಕಿಗೋ, ಅವರ ಚಾಡಿ ಮಾತುಗಳಿಗೋ ಮರುಳಾಗಿ ಸ್ವಂತಿಕೆಯನ್ನ ಪ್ರತಿಪಾದಿಸದೆ ನಿರ್ಧಾರ ಕೈಗೊಳ್ಳುವ ಅವಸರಗೇಡಿ ಮೂರ್ಖರನ್ನ ನಾವು ಕಾಣುತ್ತೇವಲ್ಲ ಅವರ ನಡೆಯನ್ನ ಹೀಗೆ ಶ್ರೀಸಾಮಾನ್ಯರು ಲೇವಡಿ ಮಾಡುತ್ತಾರೆ. ಹಿತ್ತಳೆ ಕಿವಿಯೆಂದರೆ ಅದು. ಅದರಲ್ಲಿ ಅಂದದ್ದೆಲ್ಲ ಅನುರಣಿಸಿ ಎಡವಟ್ಟಿಗೆ ಕಾರಣವಾಗುವುದು ಸಹಜ. ಹಿತ್ತಾಳೆ ದುಬಾರಿಯಾದ ಲೋಹವಾಗಿದ್ದು ಬಡವರಿಗೆ ಸುಲಭವಾಗಿ ಎಟುಕದಿದ್ದ ಆ ಕಠಿನ ಲೋಹದ ವಸ್ತುಗಳು ಸಿರಿವಂತರ-ಅಧಿಕಾರಸ್ಥರ ಮನೆಗಳಲ್ಲಿಯೆ ಇರುತ್ತಿದ್ದವು ಎನ್ನುವುದು ಇಲ್ಲಿ ಗಮನಾರ್ಹ.


ಅಂತೆಯೆ ಎರಡು ತಲೆಯ ಹಾವು, ವಾಸ್ತವವಾಗಿ ಭೂಮಿಯ ಮೇಲೆ ಎರಡು ತಲೆಯ ಹಾವು ಎನ್ನುವ ಕಲ್ಪಿತ ಸರಿಸೃಪ ಬದುಕಿಯೆ ಇಲ್ಲ! ತಲೆ ಹಾಗೂ ಬಾಲ ಎರಡೂ ಒಂದೆ ಪ್ರಮಾಣದಲ್ಲಿ ಗೋಚರಿಸುವ ಮಣ್ಣಿನ ಹಾವನ್ನು ಎರಡು ತಲೆಯ ಹಾವೆಂದೆ ಮೂಢರು ನಂಬಿದ್ದಾರೆ. ಅಲ್ಲದೆ ಧರ್ಮದ ಹೆಸರಿನಲ್ಲಿ ಶ್ರೀಸಾಮಾನ್ಯರನ್ನ ವಂಚಿಸಿ ಹೊಟ್ಟೆಹೊರೆದುಕೊಳ್ಳುವ ಸ್ವ ಘೋಷಿತ ಗುರುಗಳು, ಜ್ಯೋತಿಷಿಗಳು ಎರಡು ತಲೆಯ ಹಾವು ಅದೃಷ್ಟದ ಸಂಕೇತ ಅದನ್ನು ಸಾಕಿದವರಿಗೆ ಭಾಗ್ಯ ಒದ್ದುಕೊಂಡು ಬರುತ್ತದೆ ಎಂದು ನಂಬಿಸಿ ತಮ್ಮ ಪರಪುಟ್ಟ ಬದುಕಿಗೊಂದು ದಾರಿ ಮಾಡಿಕೊಂಡಿದ್ದಾರೆ. ಎರಡು ತಲೆ ಇರುವುದಾದರೆ ಅದರಲ್ಲಿ ಎರಡು ಬಾಯಿಗಳು ಹಾಗೂ ಆ ಎರಡೂ ಬಾಯಿಯಲ್ಲಿ ಎರಡೆರಡು ನಾಲಗೆ ಇರಬೇಕಲ್ಲ! ಎನ್ನುವ ಸಹಜ ತರ್ಕದ ಮೇಲೆ ಈ ಗಾದೆಯ ಮೊದಲಾರ್ಧ ನಿಂತಿದೆ.


ಅಂತೆಯೆ ಅಧಿಕಾರದ ಆಯಕಟ್ಟಿನ ಸ್ಥಳದಲ್ಲಿರುವ ಮಂದಿಗೆ ಸ್ವಂತ ಬುದ್ಧಿಯಿಲ್ಲದಿದ್ದಲ್ಲಿ ಆಡಳಿತದಲ್ಲಿ ಆಗಬಹುದಾದ ಅನಾಹುತವನ್ನೋ, ಆ ಮೂಲಕ ಪಾಪದ ನಾಗರೀಕರ ಮೇಲೆ ಎರಗ ಬಹುದಾದ ಅನಿರೀಕ್ಷಿತ ವಿಪತ್ತುಗಳನ್ನೋ ಸೂಚಿಸುವ ಆಶಯ ಈ ಗಾದೆಯ ಉತ್ತರಾರ್ಧಕ್ಕಿದೆ. ಪಂಡಿತೋತ್ತಮ ಗಡವರ ಮಾತಿಗೆ ಹಿತ್ತಳೆ ಕಿವಿಯಾಗಿ ದೇವಗಿರಿಗೆ ಮತ್ತೆ ಅಲ್ಲಿಂದ ಮರಳಿ ದೆಹಲಿಗೆ ರಾಜಧಾನಿಯನ್ನ ವರ್ಗಾಯಿಸಿದ ಮಹಮದ್ ಬಿನ್ ತುಘಲಕ್, ಕಂಡವರ ಮಾತಿಗೆ ಬಲಿಯಾಗಿ ತನ್ನ ಮಾರ್ಗದರ್ಶಕ ತಿಮ್ಮಣರಸರನ್ನು ಜೈಲಿಗೆ ದೂಡಿ ಹಾಳಾದ ಕೃಷ್ಣದೇವರಾಯ, ಪಿತೂರಿಗಾರರ ಮರುಳು ಮಾತುಗಳಿಗೆ ತಲೆಯಾಡಿಸಿ ಭಕ್ತಿ ಭಂಡಾರಿ ಬಸವಣ್ಣರನ್ನ ಅಮಾತ್ಯ ಪದವಿಯಿಂದ ಕಿತ್ತು ಹಾಕಿ ಬರಬಾದಾದ ದೊರೆ ಬಿಜ್ಜಳ ಹೀಗೆ ಇತಿಹಾಸದಾದ್ಯಂತ ಇದಕ್ಕೆ ನೂರಾರು ಉದಾಹರಣೆಗಳು ಸಿಗುತ್ತವೆ.)



( ಇರ್ತಲೆಗ್ ರಡ್ ನಾಲಾಯಿ, ಪಿತ್ತಲೆಗ್ ನಾಲ್ ಕೆಬಿ = ಎರಡು ತಲೆಗೆ ಎರಡು ನಾಲಗೆ, ಹಿತ್ತಾಳೆಗೆ ನಾಲ್ಕು ಕಿವಿ.)


*ನೆನ್ನೆ ೨೯ ಮಾರ್ಚ್‍ನಂದು ಕಾರ್ಯದೊತ್ತಡದಿಂದ ಒಂದು ತುಳುಗಾದೆ ತಪ್ಪಿ ಹೋಗಿದೆ. ಕ್ಷಮಿಸಿ ಮುಂದೆ ಆ ಉದಾಸಿನ ಮರುಕಳಿಸದು.

28 March 2013

ತುಳುಗಾದೆ-೫೬










"ಉಗುರ್ ಸುತ್ತುದ ಮಿತ್ ಉಜ್ಜೆರ್‍‍‍‍‍ದ ಪೆಟ್"



{ ಉಗುರು ಸುತ್ತು ಎನ್ನುವುದೊಂದು ಅತಿ ಸಾಮಾನ್ಯವಾದ ಖಾಯಿಲೆ. ಹಲವಾರು ಕಾರಣಗಳಿಂದ ಅಸ್ಥಿ ಮಜ್ಜೆಗೆಯಿಂದ ಆರಂಭವಾದ ಉಗುರಿನ ಬುಡ ಎಲುಬಿನ ಮೇಲ್ಪದರಕ್ಕೆ ಸರಿಯಾಗಿ ಅಂಟಿಕೊಳ್ಳುವಲ್ಲಿ ವಿಫಲವಾಗಿ ನಡುವಿನ ಸಂದಿಯಲ್ಲಿ ವೃಣವಾಗಿ ಅದರಿಂದ ಕೀವು ಸೋರುವ ಹಾಗಾದಾಗ ಹುಟ್ಟುವ ನರಕಯಾತನೆಯನ್ನೆ "ಉಗುರು ಸುತ್ತು" ಎನ್ನಲಾಗುತ್ತದೆ. ಕರಾವಳಿ ಜಿಲ್ಲೆಗಳ ತೇವಭರಿತ ಒಣ ವಾತಾವರಣದಲ್ಲಿ ಉಗುರು ಸುತ್ತಿನ ಬಾಧೆಯಿಂದ ನರಳುವವರ ಸಂಖ್ಯೆ ಘಟ್ಟದ ಮೇಲಿನ ಮಂದಿಗಿಂತ ಹೋಲಿಕೆಯಲ್ಲಿ ಅಧಿಕ, ಈ ನೋವಿಗೆ ಸೂಕ್ತ ಚಿಕಿತ್ಸೆ ದೊರಕದೆ ನರಳುವ ರೋಗಿಗಳನ್ನ ಕಂಡಾಗ ಅಯ್ಯೋ ಎನಿಸುತ್ತದೆ.


ಇಂತಿಪ್ಪ ಉಗುರು ಸುತ್ತಿನ ನೋವಿಗೆ ಹೈರಾಣಾಗಿರುವವರಿಗೆ ಅದರ ಮೇಲೆ ಜೋರಾದ ಒನಕೆ ಪೆಟ್ಟು ಸಹ ಬಿದ್ದರೆ ಹೇಗಾದೀತು? ಉಹಿಸಲೆ ಅಸಾಧ್ಯವದು. ನೋವಿನ ಚರಮ ಸೀಮೆ ಅಂತೇನಾದರೂ ಇದ್ದರೆ ಬಹುಷಃ ಅದು ಉಗುರು ಸುತ್ತಿನ ಮೇಲೆ ಬಿದ್ಧ ಒನಕೆ ಪೆಟ್ಟೆ ಇದ್ದೀತೇನೋ! ಗ್ರಾಮೀಣ ಭಾರತದ ಇತರೆಡೆಗಳಂತೆ ಆಧುನಿಕ ಯಂತ್ರೋಪಕರಣಗಳು ದೈನಂದಿನ ಬಳಕೆಯಲ್ಲಿ ಹಾಸು ಹೊಕ್ಕಾಗುವ ಮುನ್ನ ತುಳುನಾಡಿಗರೂ ಸಹ ಭತ್ತವನ್ನ ಅಕ್ಕಿ ಮಾಡಲು ಒನಕೆಯ ಉಪಯೋಗವನ್ನೆ ಅವಲಂಬಿಸಿದ್ದರು. ಭತ್ತವನ್ನ ಒರಳಿನಲ್ಲಿ ಹಾಕಿ ಒನಕೆಯಿಂದ ಕುಟ್ಟಿ ಸಿಪ್ಪೆ ಬೇರ್ಪಡಿಸಿದ ಅಕ್ಕಿಯನ್ನ ಪಡೆಯುವ ರೂಢಿಯಿತ್ತು. ಹಾಗೆ ಅಕ್ಕಿ ಮಾಡಿಕೊಳ್ಳುವುದು ಅನಿವಾರ್ಯವೆ ಆಗಿದ್ದ ದಿನಗಳಲ್ಲಿ ಪರಮೋಷದಿಂದ ಉಗುರು ಸುತ್ತಾದ ಒನಕೆ ಕುಟ್ಟುವ ಕೈಬೆರಳಿನ ಮೇಲೆ ರಭಸದಿಂದ ಒನಕೆಯ ಪೆಟ್ಟು ಬಿದ್ದಿರಬೇಕು ಹಾಗೂ ಈ ಗಾದೆಗೆ ನಾಂದಿ ಅಲ್ಲಿಂದಲೆ ಹುಟ್ಟಿರಬೇಕು.



ನೋವಿನಲ್ಲಿ ಸಂಕಟ ಪಡುವ ದೀನರ, ನೊಂದವರ ಸರಣಿ ಸಮಸ್ಯೆಗಳನ್ನ ನೋಡುವಾಗ ಈ ಗಾದೆಯ ಉಪಮೆಯನ್ನ ಬಳಸಲಾಗುತ್ತದೆ. ಒಂದಾದ ಮೇಲೊಂದು ಸಂಕಟದಲ್ಲಿ ಸಿಲುಕಿ ತಮ್ಮ ಆತ್ಮವಿಶ್ವಾಸವನ್ನೆ ಕಳೆದುಕೊಳ್ಳುವವರ ಪಾಡು ಹೀಗೆ ಉಗುರುಸುತ್ತಿನ ನೋವಿನ ಮೇಲೆ ಬಿದ್ದ ಒನಕೆಯ ಪೆಟ್ಟಿನಂತಹದು. "ಗಾಯದ ಮೇಲೆ ಬರೆಬಿದ್ದಂತೆ" ಎನ್ನುವ ಕನ್ನಡಗಾದೆ ಹಾಗೂ "ಅಧಿಕ ಮಾಸೆ ಅನಾವೃಷ್ಟಿ" ಎನ್ನುವ ಸಂಸ್ಕೃತ ಗಾದೆಯ ತಾತ್ಪರ್ಯವೂ ಅದೇನೆ.}



( ಉಗುರ್ ಸುತ್ತುದ ಮಿತ್ ಉಜ್ಜೆರ್‍‍‍‍‍ದ ಪೆಟ್ = ಉಗುರು ಸುತ್ತಿನ ಮೇಲೆ ಒನಕೆಯ ಪೆಟ್ಟು.)


27 March 2013

ತುಳುಗಾದೆ-೫೫










"ಒಡಾರಿನ ಇಲ್ಲಡೆ ಅಟಿಲಗ್ ಕರ ಇಜ್ಜಿ!"



{ ಇದೊಂಥರ ನೊಂದವರ ಸೋತ ಭಾವದ ಸುಪ್ತ ಪ್ರಕಟಣೆ. ಒಡಾರಿಯೆಂದರೆ ತುಳುವುವಿನಲ್ಲಿ ಕುಂಬಾರ ಎಂದರ್ಥ. ಓಡನ್ನ ಮಾಡುವವ ಒಡಾರಿಯೆನ್ನುವ ಅರ್ಥದಲ್ಲಿ ಕುಂಬಾರರನ್ನಿಲ್ಲಿ ಒಡಾರಿಯೆಂದು ಕರೆಯಲಾಗುತ್ತದೆ. ಮೂಲ್ಯ ಎನ್ನುವ ಕುಲನಾಮದ ತುಳುನಾಡಿನ ಕುಂಬಾರರು ಹಿಂದೆಲ್ಲ ಇಲ್ಲಿನವರಿಗೆ ಬಹು ಬೇಕಾದವರಾಗಿದ್ದರು. ಅದರಲ್ಲೂ ತುಳುನಾಡಿನ ಹೆಂಗಸರಿಗೆ ಇವರ ಒಡನಾಟ ಹೆಚ್ಚು. ಹಣಕ್ಕಷ್ಟು ಮಹತ್ವವಿಲ್ಲದಿದ್ದ ವಸ್ತು ವಿನಿಮಯದ ಕಾಲದಲ್ಲಿ ಕುಂಬಾರರು ಭಾರತದ ಇತರೆಡೆಗಳಂತೆ ಇಲ್ಲಿಯೂ ಬಹು ಬೇಡಿಕೆಯಲ್ಲಿದ್ದರು. ತಾವು ಮಾಡಿದ ಮಾಟವಾದ ಮಣ್ಣಿನ ಮಡಿಕೆಗಳನ್ನ ಅವರು ಆಗಾಗ ಹೆಗಲ ಮೇಲೆ-ತಲೆಯ ಮೇಲಿನ ಸಿಂಬಿಯಲ್ಲಿ ಜಾಗರೂಕತೆಯಿಂದ ಮಾರಲು ಬರುತ್ತಿದ್ದಾಗ ಅವರೊಂದಿಗೆ ಚೌಕಾಸಿಯ ಪಂಥಾಹ್ವಾನ ನೀಡುತ್ತಾ ಅಂಗಳದಲ್ಲಿ ವ್ಯಾಪಾರಕ್ಕಿಳಿಯುತ್ತಿದ್ದವರೆ ಮನೆಯ ಹೆಂಗಸರು. ವರ್ಷಾವರ್ತಿ ಅವರು ಹೀಗೆ ತಂದು ಮಾರಿದ ಮಡಿಕೆಗಳಿಗೆ ಪ್ರತಿಯಾಗಿ ವರ್ಷದ ಸುಗ್ಗಿಯ ವೇಳೆಯಲ್ಲೊಮ್ಮೆ ಅವರಿಗೆ ಅಕ್ಕಿ ಅಥವಾ ಭತ್ತದ ರೂಪದಲ್ಲಿ ಪಡಿ ಅಳೆದು ಕೊಟ್ಟು ಅವರ ಮಡಿಕೆಯ ಬೆಲೆಯನ್ನವರಿಗೆ ಮುಟ್ಟಿಸಲಾಗುತ್ತಿತ್ತು. ಹೀಗೆ ಅವರು ಮಾಡಿದ ಮಣ್ಣಿನ ಮಡಿಕೆಗಳಿಗೆ ತೆಂಗಿನ ಚಿಪ್ಪನ್ನ ನುಣುಪಾಗಿ ಹೆರೆದು ಅದರಲ್ಲೆರಡು ತೂತು ಕೊರೆದು ನಡುವೆ ನಯಗೊಳಿಸಿದ ಬೆತ್ತವನ್ನ ಸಿಕ್ಕಿಸಿ ಕೊರಗರು ಮಾಡಿತರುತ್ತಿದ್ದ ಸೌಟುಗಳು ಒಳ್ಳೆಯ ಈಡು ಜೋಡಾಗುತ್ತಿತ್ತು.


ಕ್ರಮೇಣ ಸಿರಿವಂತರ ಮನೆಯಲ್ಲಿ ಮಾತ್ರವಿರುತ್ತಿದ್ದ ಕಲಾಯಿ ಬೇಡುವ ಹಿತ್ತಾಳೆ, ತಾಮ್ರ ಹಾಗೂ ಉಕ್ಕಿನ ಪಾತ್ರೆಗಳಿಗೆ ಸರಿಸಮವಾಗಿ ತುಳುನಾಡಿನ ಬಡವರ ಮನೆಗಳಲ್ಲೂ ಕಲಾಯಿಯ ಹಂಗಿಲ್ಲದ ಆಧುನಿಕವೆನ್ನಿಸಿದ ಸಿಲವಾರ ಅಲಿಯಾಸ್ ಅಲ್ಯುಮೀನಿಯಂನ ಪಾತ್ರೆ ಪರಡಿಗಳು ತುಳುನಾಡಿನಾಡಿನಾದ್ಯಂತ ನಾಯಿಕೊಡೆಗಳಂತೆ ಚಾಲ್ತಿಗೆ ಬರುತ್ತಲೆ ಕುಂಬಾರರ ಪ್ರಸ್ತುತತೆ ಮಂಕಾಗ ತೊಡಗಿತು. ಆದಾಗ್ಯೂ ಹುಟ್ಟು ಸಾವಿನ ಸಂದರ್ಭಗಳಲ್ಲಿ, ಮೂರ್ತೆಯವರಿಗೆ ಬೈನೆ ಮರದಲ್ಲಿ ಕಳ್ಳು ಕಟ್ಟಲಿಕ್ಕೆ ಹಾಗೂ ನಾಗಾರಾಧನೆ-ತಂಬಿಲ-ಕೋಲ ಮುಂತಾದ ಧಾರ್ಮಿಕಾಚರಣೆಗಳಲ್ಲಿ ಇವರು ಮಾಡುವ ಮಡಿಕೆ-ಕುಡಿಕೆಗಳಿಗೆ ಬೇಡಿಕೆ ಇದ್ದೆ ಇತ್ತು. ಜೊತೆಗೆ ಮಣ್ಣಿನ ಓಡಿನ ಕೈಹಂಚುಗಳನ್ನೂ ಇವರು ತಯಾರಿಸುತ್ತಾ ಸಮಕಾಲೀನತೆಯಲ್ಲಿ ತೀರಾ ಹಿಂದುಳಿಯದಂತೆ ಸಾಮಾಜಿಕವಾಗಿ ಬಾಳುತ್ತಿದ್ದರು. ಆದರೆ ಬಾಸಲ್ ಮಿಶನರಿಯವರು ಮಂಗಳೂರಿನ ಮೂಲಕ ತಂದ ಅತ್ಯಾಧುನಿಕ ಗುಣಮಟ್ಟದ ಕಾರ್ಖಾನೆ ತಯಾರಿ "ಮಂಗಳೂರು ಹಂಚು"ಗಳು ಜನಪ್ರಿಯವಾದಂತೆ ಸ್ಥಳಿಯ ಕುಂಬಾರರ ಕೈ ಹಂಚುಗಳು ಕೂಡ ಅವುಗಳ ಮುಂದೆ ಮಂಕಾಗಿ ಆಕರ್ಷಣೆ ಕಳೆದುಕೊಂಡವು. ಒಟ್ಟಿನಲ್ಲಿ ಬಡತನವೆನ್ನುವುದು ಅವರ ಬೆನ್ನು ಬಿಡದ ಭೂತವಾಯಿತು.


ಹೀಗಾಗಿ ಕುಂಬಾರರ ಬಡತನವನ್ನ ಉತ್ಪ್ರೇಕ್ಷಿಸಿ "ಕುಂಬಾರನ ಮನೆಯಲ್ಲಿಯೆ ಅಡುಗೆಗೆ ಕುಡಿಕೆಯಿಲ್ಲ" ಎನ್ನುವ ಈ ಗಾದೆಯನ್ನ ಸೋತು ಸುಣ್ಣವಾದ ಎಲ್ಲರಿಗೂ ಅನ್ವಯಿಸಿ ಹೇಳುವ ರೂಢಿ ಹುಟ್ಟಿಕೊಂಡಿರಲಿಕ್ಕೂ ಸಾಕು. ಅದು ಸಹ ಒಂದು ರೀತಿಯಲ್ಲಿ ನಿಜವೆ. ಉದಹಾರಣೆಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕುಗಳ ಗಡಿ ಭಾಗವನ್ನೆ ತೆಗೆದು ಕೊಳ್ಳೋಣ. ಇಲ್ಲಿ ಜಗತ್ತಿನ ಯಾವ ಭಾಗದಲ್ಲೂ ಇದ್ದಿರಲಾರದಂತೆ ಒಟ್ಟೊಟ್ಟಿಗೆ ಐದು ಅಣೆಕಟ್ಟುಗಳನ್ನ ಒಂದರ ಹಿಂದೊಂದರಂತೆ ಕಟ್ಟಲಾಗಿದೆ. ಸಾವಿರಾರು ಸ್ಥಳಿಯ ಜನರು ನಾಡಿನ ಮನೆಮನೆಗಳಲ್ಲಿ ದೀಪದ ಬೆಳಕುಕ್ಕಿಸುವ "ಜಲ ವಿದ್ಯುತ್ ಯೋಜನೆ" ಹೆಸರಿನ ಮಾರಿಗೆ ಬಲಿಯಾಗಿ ನೆಲ-ನೆಲೆ ಕಳೆದುಕೊಂಡು ಅತಂತ್ರರಾಗಿದ್ದಾರೆ ಮತ್ತು ಅತಂತ್ರರಾಗಿಯೆ ಉಳಿದಿದ್ದಾರೆ ಸಹ. ಮಾಣಿ, ಹಿರೆಭಾಸ್ಕರ ( ಸದ್ಯ ಇದು ಇದಕ್ಕಿಂತ ಎತ್ತರದ ಲಿಂಗನಮಕ್ಕಿ ಅಣೆಕಟ್ಟಿನಲ್ಲಿ ಅಂತರ್ಧನವಾಗಿದೆ), ಸಾವೆಹಿತ್ಲು, ವಾರಾಹಿ ಹಾಗೂ ಚಕ್ರಾ ಈ ಐದೂ ಯೋಜನೆಗಳು ನಾಡಿನಾದ್ಯಂತ ಬೆಳಕಿನ ಹೊಳೆ ಹರಿಸುತ್ತಿದ್ದರೂ ಅವು ವಿದ್ಯುತ್ ಉತ್ಪಾದಿಸುವ ಈ ಸ್ಥಳಗಳಲ್ಲಿ ಮಾತ್ರ ಧಾರಾಳ ಕತ್ತಲು! ಅದರಲ್ಲೂ ತೀರ್ಥಹಳ್ಳಿ ತಾಲೂಕಿನ ಸ್ಥಿತಿಯಂತೂ ಇನ್ನೂ ಶೋಚನೀಯ. ತಾಲೂಕಿನ ಪಶ್ಚಿಮ ಭಾಗ ಹೀಗೆ ವಿದ್ಯುತ್ ಉತ್ಪಾದನೆಯ ಉದ್ದೇಶಕ್ಕೆ ಮುಳುಗಡೆಯಾಗಿದ್ದರೆ ಪೂರ್ವದ ಗಡಿಯಲ್ಲಿ ಬಯಲುಸೀಮೆಗೆ ಕೃಷಿ ನೀರಾವರಿ ಹಾಗೂ ಕುಡಿಯುವ ನೀರಿನ ಅಗತ್ಯ ಪೂರೈಸಲು ತುಂಗಾನದಿಗೆ ಕಟ್ಟಿರುವ ಗಾಜನೂರು ಅಣೆಕಟ್ಟಿನ ಹಿನ್ನೀರಿನಲ್ಲಿ ತಾಲೂಕಿನ ಪೂರ್ವದ ಬಹುಭಾಗ ಈಗಾಗಲೆ ಮುಳುಗಡೆಯಾಗಿದೆ ಇಲ್ಲವೆ ಈ ಅಣೆಕಟ್ಟನ್ನು ತುಂಗಾ ಮೇಲ್ದಂಡೆಯ ಎತ್ತರಿಸುವ ಹೆಸರಿನಲ್ಲಿ ಮುಳುಗಲು ದಿನ ಕಾಯುತ್ತಿವೆ! ಅಗತ್ಯ ವಸ್ತು ತರಲು ನಿಂತ ಹಿನ್ನೀರನ್ನ ಬಳಸಿ ಸಾಗಿ ಪೇಟೆ ಮುಟ್ಟಲು ದಿನಗಟ್ಟಲೆ ವ್ಯಯಿಸಬೇಕು. ಅಣೆಕಟ್ಟುಗಳ ಹಿಂದೆ ಹಿನ್ನೀರು ಸ್ಥಳಿಯ ರೈತಾಪಿಗಳ ಮನೆ ಜಮೀನು ನುಂಗಿ ನೊಣೆದಂತೆ ಲಕ್ಷಾಂತರ ಎಕರೆ ಪಶ್ಚಿಮಘಟ್ಟದ ನಿತ್ಯಹರಿದ್ವರ್ಣ ಕಾಡನ್ನೆ ಮುಳುಗಿಸಿ ನಾಶ ಮಾಡಿದೆ. ಮುಳುಗಡೆಯಾದ ಸ್ಥಳದ ಮಂದಿಗೆ ಚೂರೂ ವಿದ್ಯುತ್ ಲಭ್ಯವಿಲ್ಲ, ಇದ್ದರೂ ದಿನದ ಅರ್ಧಕ್ಕಿಂತ ಹೆಚ್ಚು ವೇಳೆ "ಲೋಡ್ ಶೆಡ್ಡಿಂಗ್" ಹೆಸರಿನಲ್ಲಿ ಅವ್ಯಾಹತ ಕಡಿತ. ಹೀಗಾಗಿ ಇಲ್ಲಿ ಕತ್ತಲು ಸ್ಥಳಿಯರ ಅನುಗಾಲದ ಸಂಗಾತಿ. "ದೀಪದ ಕೆಳಗೆಯೆ ಕತ್ತಲು" ಎನ್ನುವ ಕನ್ನಡದ ಗಾದೆ ಹೇಳುವ ಆಶಯವೂ ಇದೆ.}


 ( ಒಡಾರಿನ ಇಲ್ಲಡೆ ಅಟಿಲಗ್ ಕರ ಇಜ್ಜಿ! = ಕುಂಬಾರನ ಮನೆಯಲ್ಲಿಯೆ ಅಡುಗೆಗೆ ಕುಡಿಕೆಯಿಲ್ಲ!.)

26 March 2013

ತುಳುಗಾದೆ-೫೪









"ಆಳೆನ ನಾಲಾಯಿ ಪಂಡ ಸಮಗಾರೆನ ರಂಪಿಗೆ!"



{ ಗ್ರಾಮ್ಯ ಜೀವನದಲ್ಲಿ ಜಗಳ-ಕಚ್ಚಾಟ ಸರ್ವೆಸಾಮಾನ್ಯವಾಗಿರುವಂತೆ ತುಳುನಾಡಿನಲ್ಲೂ ಅದನ್ನ ದೈನಂದಿನ ಬದುಕಿನಲ್ಲಿ ಕಾಣಬಹುದು. ಇಲ್ಲೂ ಆ "ಜಗಳದ ಖಾತೆ" ಸಾಮಾನ್ಯವಾಗಿ ತುಳುವ ಗಟ್ಟಿಗಿತ್ತಿಯರಾದ ಹೆಂಗಸರಿಗೆ ಮೀಸಲಾಗಿದೆ. ಆದರೆ ಹೆಜ್ಜೆಗೊಂದು ಹೊಳೆ-ಹಳ್ಳ-ತೋಡಿನ ಸೆಲೆ ದಂಡಿಯಾಗಿ ಹರಿಯುವ ಇಲ್ಲಿ ನೀರಿನ ಸಮೃದ್ಧಿ ಇರುವುದರಿಂದ ಬರದ ಬಯಲುಸೀಮೆಯಂತೆ ಜಗಜಟ್ಟಿ ಹೆಂಗಸರು ನೀರಿನ ಕಟ್ಟೆಯ ಬಳಿ ಪರಸ್ಪರರ ಜುಟ್ಟು ಹಿಡಿದು ಕಚ್ಚಾಡುವ ಅನಿವಾರ್ಯತೆ ಇಲ್ಲವಾದರೂ ಇವರ ಜಗಳಗಳಿಗೆ ಅವಕಾಶ ಕಲ್ಪಿಸಿಕೊಡುವ ಎಡೆಗಳಿಗೆ ದಿನದ ಬಾಳಿನಲ್ಲಿ ಬರವಂತೂ ಇಲ್ಲ.


ತುಳುನಾಡಿನಲ್ಲಿ ಸಾಮಾನ್ಯವಾಗಿ ಹೆಂಗಸರು ಗಂಡಸರಿಗೆ ಸರಿಸಮವಾಗಿ ದುಡಿಯುತ್ತಾರೆ. ಅದು ಬ್ರಾಹ್ಮಣರೆ ಇರಲಿ ಶೂದ್ರರೆ ಇರಲಿ,  ಬ್ಯಾರಿಗಳೆ ಇರಲಿ ಪರ್ಬುಗಳೆ ಇರಲಿ ದುಡಿಮೆಯ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿನ ಹೆಂಗಸರು ಗಂಡಸರೊಂದಿಗೆ ಹಂಚಿಕೊಂಡು ತಾವು ಯಾವುದರಲ್ಲೂ ಕಡಿಮೆಯಿಲ್ಲ ಎಂದು ಸಾಬೀತು ಪಡಿಸುತ್ತಿದ್ದಾರೆ. ಹಿಂದೂ ಜೈನ ಹೆಂಗಸರಂತೆ ಬೂಬಮ್ಮ ಬಾಯಮ್ಮಂದಿರು ಕೂಡ ಮೈಮುರಿದು ದುಡಿದು ಸಂಪಾದಿಸುತ್ತಾರೆ. ಕಡಲಿಗೆ ಹೋಗಿ ಮೀನು ಹಿಡಿದು ತರುವುದು ಮರಕ್ಕಲ ಗಂಡಸರಾದರೆ ಅದನ್ನ ಮನೆಮನೆಗೆ ಹೊತ್ತೊಯ್ದು ಮಾರುವುದು ಮರಕ್ಕಲ್ತಿಯರು. ಅಂಗಡಿಯಲ್ಲಿ ಕಚ್ಚಾ ಎಲೆ ಹಾಗೂ ತಂಬಾಕನ್ನ ಮಾರುವುದು ಗಂಡಸರಾದರೆ ಬೀಡಿಕಟ್ಟಿ ಅದನ್ನ ಮರಳಿ ಕೊಡುವುದು ಹೆಂಗಸರು. ಹಪ್ಪಳ-ಸಂಡಿಗೆ-ಉಪ್ಪಿನಕಾಯಿಯನ್ನು ಮಾರುವುದು ಬ್ರಾಹ್ಮಣ ಗಂಡಸರಾದರೆ ಅದನ್ನ ತಯಾರಿಸಿ ಕೊಡುವುದು ಮನೆಯ ಹೆಂಗಸರು. ಅಂಗಡಿಯಂಗಡಿ ಸುತ್ತಿ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನ ಮಾರುವುದು ಕೊಂಕಣಿ ಗಂಡಸರಾದರೆ ಅದನ್ನ ಒಲೆಯ ಮುಂದೆ ಕೂತು ಕರಿದು ಕೊಡುವುದು ಕೊಂಕಣಿ ಹೆಂಗಸರು. ಹೀಗೆ ಹೆಂಗಸರು ಯಾರಿಗೂ ಕಡಿಮೆಯಿಲ್ಲದವರಂತೆ ದುಡಿಯುತ್ತಾರೆ, ಹೀಗಾಗಿ ಆಗಾಗ ತಾಳ್ಮೆ ಕಳೆದು ಕೊಂಡು ಕೂಗಾಡುತ್ತಾರೆ, ತಾವು ಹೊತ್ತು ಮಾರುವ ಮೀನಿಗೆ ನ್ಯಾಯವಾದ ಬೆಲೆ ದಕ್ಕದಿದ್ದಲ್ಲಿ ಮರಕ್ಕಲ್ತಿಯರು ದೊಡ್ಡ ಗಂಟಲಿನಲ್ಲಿ ಬೀದಿಯಲ್ಲಿಯೆ ನೇರ ಜಗಳಕ್ಕಿಳಿಯುತ್ತಾರೆ! ತಮ್ಮ ಹೆಣ್ತನದ ಕೋಮಲತೆಯ ದುರುಪಯೋಗ ಪಡೆದು ವ್ಯಾಪಾರದಲ್ಲಿ ವಂಚಿಸುವ ಗ್ರಾಹಕರನ್ನ ಜಬರ್ದಸಿನಿಂದ ಎದುರಿಸಿ ನಾಲ್ಕು ಕಾಸು ಸಂಪಾದಿಸಿಕೊಳ್ಳಲು ಬಜಾರಿಯರಂತೆ ದೊಡ್ಡ ದೊಂಡೆಯಲ್ಲಿ ಅಬ್ಬರಿಸುತ್ತಾ ಮಾತನಾಡುವುದು ಕೆಲವೊಮ್ಮೆ ಅವರಿಗೆ ಅನಿವಾರ್ಯವೂ ಆಗಿರುತ್ತದೆ. ಇದು ವ್ಯಾಪಾರ ಒಂದೆ ಅಲ್ಲ ಗಂಡಸರಿಗೆ ಸರಿಸಮವಾಗಿ ಹೆಂಗಸರು ದುಡಿಮೆಗಿಳಿಯುವ ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸುತ್ತದೆ.



ಅಂತಹ ದೊಡ್ಡ ದೊಂಡೆಯ ಒಡತಿಯರನ್ನ ಲೇವಡಿ ಮಾಡುವವರು ಬಳಸುವ ಉಪಮೆಯೆ ಈ ಗಾದೆ. ಸಮಗಾರರು ಒರಟು ಕಚ್ಚಾ ಚರ್ಮವನ್ನ ಚಪ್ಪಲಿ ಮತ್ತಿತರ ಸಾಮಾನನ್ನಾಗಿ ಪರಿವರ್ತಿಸುವಾಗ ಅದನ್ನ ಕತ್ತರಿಸಲು ಬಳಸುವ ಕತ್ತಿಯನ್ನ ತುಳುವಿನಲ್ಲಿ 'ರಂಪಿಗೆ'ಯೆಂದು ಕರೆಯಲಾಗುತ್ತದೆ. ಕೈಕತ್ತಿಗಳಲ್ಲೆ ಅತ್ಯಂತ ಹರಿತವಾಗಿರುವ ರಂಪಿಗೆ ಬಹಳ ಸುಲಭವಾಗಿ ಚರ್ಮವನ್ನ ಛೇದಿಸುತ್ತದೆ. ಹೀಗಾಗಿ ಇದು ದೊಡ್ಡ ದೊಂಡೆಯ ಹೆಂಗಸರ ಹರಿತ ನಾಲಗೆಗೆ ಸೂಕ್ತ ಹೋಲಿಕೆಯಾಗಿದೆ. ಕವಿ ಜಯಂತ ಕಾಯ್ಕಿಣಿ ತಾವು ಬರೆದ ಚಿತ್ರಗೀತೆಯೊಂದರಲ್ಲಿ ಹೆಣ್ಣಿನ ಕಣ್ಣೋಟವನ್ನ ಹರಿತವಾದ ಮುಳ್ಳುಮುಳ್ಳು ಕೇದಗೆಯ ಗರಿಗೆ ಹೋಲಿಸಿದ್ದಾರೆ, ಆದರೆ  ಅದು ಪ್ರೇಮ ಜ್ವರ ಪೀಡಿತ ನಾಯಕನ ಅಲಾಪವಾಗಿತ್ತು. ಒಂದು ವೇಳೆ ಮದುವೆಯ ನಂತರದ ಅದೆ ನಾಯಕನ ಹಳಹಳಿಕೆಯನ್ನ ಹಾಡಿನ ಸಾಲಾಗಿ ಬರೆದಿದ್ದರೆ ಬಹುಷಃ  ಅವರೂ ನಾಯಕಿಯ ನಾಲಗೆಯನ್ನ ಇನ್ನಷ್ಟು ಹರಿತವಾದ ರಂಪಿಗೆಗೆ ಹೋಲಿಸುತ್ತಿದ್ದರೇನೋ! ಅದೇನೆ ಇದ್ದರೂ ಈ ಹೋಲಿಕೆಯನ್ನ ಯಾವ ಗಯ್ಯಾಳಿ ಹೆಂಗಸರ ಮುಂದೆಯೂ ಮಾಡುವ ಧೈರ್ಯವನ್ನ ಯಾರೊಬ್ಬ ವೀರಾಧಿವೀರರೂ ಅಪ್ಪಿತಪ್ಪಿಯೂ ಪ್ರಕಟಿಸರು. ಹಾಗೆ ಮಾಡಿದಲ್ಲಿ ಅದೆ ರಂಪಿಗೆ ನಾಲಗೆಗೆ ಸಿಕ್ಕು ಸಾರ್ವಜನಿಕವಾಗಿ ಕೊಚ್ಚಿಸಿಕೊಳ್ಳಬೇಕಲ್ಲ! }



( ಆಳೆನ ನಾಲಾಯಿ ಪಂಡ ಸಮಗಾರೆನ ರಂಪಿಗೆ! = ಅವಳ ನಾಲಗೆಯೆಂದರೆ ಸಮಗಾರನ ರಂಪಿಗೆ!)

ಮನಸೋಲ್ಲಾಸ...


ಅಕಾಶವಾಣಿಯ ದಕ್ಷಿಣ ಭಾರತದಾದ್ಯಂತ ಪಸರಿಸಿರುವ ಎಫ್ ಎಂ ರೈನ್'ಬೋ ಜಾಲದಲ್ಲಿ ಪ್ರತಿನಿತ್ಯ ರಾತ್ರಿ ಭಾರತೀಯ ಸಮಯ ಹನ್ನೊಂದರಿಂದ ಹನ್ನೆರಡರವರೆಗೆ "ಸದರನ್ ಮೆಲೋಡಿಸ್" ಅನ್ನುವ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಸರಿ ಸುಮಾರು ಒಂದು ನಾಲ್ಕು ತಿಂಗಳಿಂದ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮದ ಆತಿಥ್ಯವನ್ನ ದಕ್ಷಿಣಭಾರತದ ಎಲ್ಲಾ ನಾಲ್ಕು ರಾಜ್ಯಗಳಲ್ಲಿ ಹರಡಿರುವ ರೈನ್'ಬೋ ವಿಭಾಗಗಳು ಸರದಿ ಪ್ರಕಾರ ವಹಿಸುತ್ತವೆ. ಸಾಮಾನ್ಯವಾಗಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನ ತಲಾ ನಾಲ್ಕು ಗೀತೆಗಳನ್ನ ಪ್ರತಿ ಕಂತು ಒಳಗೊಂಡಿರುತ್ತದೆ. ಖಾಸಗಿ ಎಫ್ ಎಂಗಳ ವಟಗುಟ್ಟುವ ಕಾರ್ಯಕ್ರಮಗಳಿಂದ ರೋಸತ್ತವರಿಗೆ ಇದೊಂದು ಒಳ್ಳೆಯ ರಿಲೀಫ್. ನಿಮ್ಮ ಊರಿನಲ್ಲಿ ಅದರ ವ್ಯಾಪ್ತಿ ಇಲ್ಲದಿದ್ದರೆ ಇಲ್ಲಿದೆ http://www.voicevibes.net/  ಹೈದರಾಬಾದ್ ಎಫ್ ಎಂ ರೈನ್'ಬೋದ ನೇರ ಪ್ರಸಾರದ ಅಂತರ್ಜಾಲ ಕೊಂಡಿ.



ಅಂತೆಯೆ ಭಾರತೀಯ ಸಿನೆಮಾದ ಶತಮಾನೋತ್ಸವದ ಸವಿನೆನಪಿಗಾಗಿ ವಿವಿಧಭಾರತಿಯ ಮುಂಬೈ ಕೇಂದ್ರ "ಭಾರತೀಯ ಸಿನೆಮಾಕೆ ಛಮಕ್ತೇ ಸಿತಾರೆ" ಅನ್ನುವ ಸರಣಿಯನ್ನ ಮೊನ್ನೆ ಶನಿವಾರದಿಂದ ಆರಂಭಿಸಿದೆ. ಪ್ರತಿ ಶನಿವಾರ ಮಧ್ಯಾಹ್ನ ಭಾರತೀಯ ಕಾಲಮಾನ ೧ಕ್ಕೆ ಹಾಗೂ ಅದರ ಮರು ಪ್ರಸಾರವನ್ನ ರಾತ್ರಿ ೯ಕ್ಕೆ ಕೇಳಬಹುದು. ದಾದಾ ಸಾಹೇಬ್ ಫಾಲ್ಕೆಯಿಂದ ಆರಂಭವಾಗಿರುವ ಈ ಚೇತೋಹಾರಿ ಸರಣಿಯ ಎರಡನೆ ಕಂತು ಇದೆ ೩೦ಕ್ಕೆ ಪ್ರಸಾರವಾಗಲಿದೆ. ಮೇಲಿನ ಕೊಂಡಿಯಲ್ಲಿಯೆ ಇದರ ಅಂತರ್ಜಾಲ ಸಂಪರ್ಕವೂ ಸಿಗುತ್ತದೆ.

25 March 2013

ತುಳುಗಾದೆ-೫೩











"ಉಪ್ಪಡ್ ದುಲಾಯಿ ಉಪ್ಪುನ ಪುರಿಲಾ ಸೈಯಂದೆ ಬದುಕುಂಡು"



{ ಕಷ್ಟ ನಷ್ಟಗಳ ಆಗರವಾದ ಬಾಳ ಪಯಣದ ಹಾದಿಯಲ್ಲಿ ನೊಂದ ಜೀವಕ್ಕೆ ಮರು ಉತ್ಸಾಹ ತುಂಬಿ ಅವರಲ್ಲಿ ಹೊಸ ಚೈತನ್ಯ ಮೂಡಿಸುವ ಹೊತ್ತಲ್ಲಿ ಬಳಸುವ ಭರವಸೆಯ ಮಾತಿದು. ತುಳುನಾಡಿನ ಇನ್ನಿತರ ಗಾದೆಗಳಂತೆ ಇದೂ ಕೂಡ ಇಲ್ಲಿನ ಗ್ರಾಮೀಣ ಜೀವನದ ಹಿನ್ನೆಲೆಯೊಂದಿಗೆ ಥಳುಕು ಹಾಕಿಕೊಂಡಿದೆ. ತಾಪ ತಟ್ಟಿದ ಬದುಕಿಗೆ ಇಂತಹ ಸಾಂತ್ವಾನದ ತಂಪು ಸುರಿವ ಮಾತುಗಳು ತುಸುವಾದರೂ ನೆಮ್ಮದಿ ತಂದು ಕೊಡುವುದರಲ್ಲಿ ಸಂಶಯವೆ ಇಲ್ಲ. ಇದು ಅವರನ್ನ ಮತ್ತೆ ಮೈಕೊಡವಿ ಮೇಲೇಳುವಂತೆ ಪ್ರೋತ್ಸಾಹಿಸುತ್ತದೆ.


"ಕುಚ್ಚಲಕ್ಕಿ ಗಂಜಿ"ಯನ್ನ ತುಳುನಾಡಿನ ರಾಷ್ಟ್ರೀಯ ತಿನಿಸನ್ನಾಗಿ ತಕರಾರಿಲ್ಲದೆ ಗುರುತಿಸಬಹುದು! ಸಾಮಾನ್ಯವಾಗಿ ತುಳುನಾಡಿನ ಬಡವ-ಬಲ್ಲಿದ, ಬ್ರಾಹ್ಮಣ-ಶೂದ್ರರೆನ್ನದೆ ಎಲ್ಲರ ದಿನದೂಟದ ಮೊದಲ ಪಾಳಿ ಗಂಜಿಯಿಂದಲೆ ಆರಂಭವಾಗುತ್ತದೆ. ತಮ್ಮ ಆರ್ಥಿಕ ಸಾಮರ್ಥ್ಯ ಹಾಗೂ ಜಾತಿಯ ಹಿನ್ನೆಲೆಯನ್ನ ಅನುಸರಿಸಿ ಗಂಜಿಯೊಂದಿಗೆ ತುಳುವರು ಉಪ್ಪಿನಕಾಯಿ, ತೆಂಗಿನಕಾಯಿ ಚಟ್ನಿ, ಹುರುಳಿ ಚಟ್ನಿ, ಎಳ್ಳಿನ ಚಟ್ನಿ, ಸುಟ್ಟ ಬದನೆ ಚಟ್ನಿ, ಒಣ ಮೀನಿನ ಚಟ್ನಿ, ಚಿಗಳಿ ಚಟ್ನಿ, ಒಣ ಸಿಗಡಿ ಚಟ್ನಿ ಹೀಗೆ ತರತರದ ಮೇಲೋಗರವನ್ನ ಗಂಜಿಯೊಂದಿಗೆ ನಂಚಿಕೊಂಡು ಊಟವನ್ನ ಮುಗಿಸುತ್ತಾರೆ. ಬಡತನದ ಕಾರಣ ಬಹುತೇಕ ಮಂದಿ ಇದರಲ್ಲಿ ಉಪ್ಪಿನಕಾಯಿಯ ಮೇಲೆಯೆ ಅವಲಂಬಿಸಿರುವುದು ವಿಶೇಷ. ತಾವು ಗೇಣಿ ಮಾಡುವ ಗುತ್ತಿನ ಮನೆಯ ಯಜಮಾನ್ತಿಯಿಂದ ಬೇಡಿ ಚಿಪ್ಪಿನಲ್ಲಿ ತಂದ ಮಾವಿನ ಅಪ್ಪೆಮಿಡಿಯ ಉಪ್ಪಿನಕಾಯಿ ಅವರ ಒಣ ಊಟದ ಏಕತಾನತೆಯನ್ನ ಸ್ವಲ್ಪವಾದರೂ ಮರೆಸುವಲ್ಲಿ ಯಶಸ್ವಿಯಾಗುತ್ತದೆ. ಈ ಉಪ್ಪಿನಕಾಯಿ ತಯಾರಿಕೆಯೂ ಒಂದು ಪಾಕಪ್ರಾವೀಣ್ಯತೆ. ಮೊದಲು ಕೂಯ್ಯಿಸಿದ ಅಪ್ಪೆ ಮಿಡಿಯ ಗೊಂಚಲಿನಲ್ಲಿ ಗಾಯವಾಗದ ಎಳೆಮಿಡಿಗಳನ್ನ ಬಿಡಿಸಿಕೊಳ್ಳಬೇಕು. ಅನಂತರ ಅದನ್ನ ಬೆಚ್ಚನೆ ನೀರಿನಲ್ಲಿ ತೊಳೆದು ಒಣಬಟ್ಟೆಯಲ್ಲಿ ಪಸೆಯಾರಿಹೋಗುವಂತೆ ಒರೆಸಿಕೊಳ್ಳಬೇಕು. ಅನಂತರ ಅದನ್ನ ಕೇವಲ ಕಲ್ಲುಪ್ಪು ಸುರಿದು ಭರಣಿಯಲ್ಲಿ ಹಾಕಿ ಗಾಳಿಯಾಡದಂತೆ ಕೆಲದಿನ ಬಾಯಿ ಕಟ್ಟಿ ಇಡಬೇಕು. ಅನಂತರ ತನ್ನೆಲ್ಲ ನೀರು ಬಸಿದುಕೊಂಡು ಬಿಗಿಯಾದ ಮಿಡಿಗಳಿಂದ ಸೋರಿದ ಉಪ್ಪುನೀರನ್ನೆ ಬಳಸಿ ಕೆಂಪು ಒಣ ಮೆಣಸು ಜೀರಿಗೆ ಸಾಸಿವೆ ಮುಂತಾದ ಸಾಂಬಾರಗಳನ್ನ ಸೇರಿಸಿ ನುಣ್ಣಗೆ ರುಬ್ಬಿದ ಮಸಾಲೆ ತಯಾರಿಸಿ ಅದಕ್ಕೆ ಇಂಗಿನ ಒಗ್ಗರಣೆ ಕೊಟ್ಟು ಈ ಪಕ್ವವಾದ ಮಿಡಿಗಳಿಗೆ ಬೆರೆಸಿ ಬಾಯಿಯನ್ನ ಬಿಗಿಯಾಗಿ ಕಟ್ಟಿಟ್ಟರೆ ಮತ್ತೊಂದು ವರ್ಷದ ಖರ್ಚಿಗೆ ಬೇಕಾದಷ್ಟು ಉಪ್ಪಿನಕಾಯಿ ಲಭ್ಯ.



ಹೀಗಂತ ಅದನ್ನ ಎಲ್ಲರೂ ಹಾಕುವಂತೆಯೂ ಇಲ್ಲ!. ಕೈಗುಣಕ್ಕನುಗುಣವಾಗಿ ಕೆಲವರಷ್ಟೆ ಹಾಕುವ ಉಪ್ಪಿನಕಾಯಿ ಕೊನೆಯ ಮಿಡಿ ಖರ್ಚಾಗುವವರೆಗೂ ತಾಜಾ ಆಗಿದ್ದು ಕೆಡದಂತಿರುತ್ತದೆ. ಕೈಗುಣ ಕೆಟ್ತವರು ಕೈಸೋಕಿಸಿದ ಉಪ್ಪಿನಕಾಯಿ ಬೇಗ ಹುಳವಾಗಿ ಕೆಟ್ಟು ಹೋಗುವುದು ಶತಸಿದ್ಧ. ಆಶ್ಚರ್ಯವೆಂದರೆ ಮಾರಕ ಖಾರ ಹಾಗೂ ವಿಪರೀತ ಉಪ್ಪು ಬೆರೆತ ಉಪ್ಪಿನಕಾಯಿಯಲ್ಲೂ ಮೊಟ್ಟೆಯಿಟ್ಟು ಅದನ್ನೆ ಆಹಾರವಾಗಿಸಿಕೊಂಡು ತುಳುನಾಡಿನ ತೇವಾಂಶಭರಿತ ವಾತಾವರಣದ ಶಾಖಕ್ಕೆ ಮೊಟ್ಟೆಯೊಡೆದು ಹುಳುಗಳಾಗಿ ಮಿಜಿಗುಡುವ ಹುಳುಗಳು ಹುಟ್ಟುವುದು, ಹುಟ್ಟಿ ಬಾಳುವುದು! ಅಂತಹ ವಿಪರೀತ ಪರಿಸ್ಥಿತಿಯಲ್ಲಿಯೂ ನಿರಾತಂಕವಾಗಿ ಬಾಳುವ ಜೀವಿಗಳು ಇರಬಹುದಾದರೆ; ಆ ಕ್ಷಣದಲ್ಲಿ ಸೋತು ಸುಣ್ಣವಾದವರೂ ಸಹ ಮುಂದೊಮ್ಮೆ ಯಶಸ್ವಿಯಾಗಿ ಬಾಳಿನಲ್ಲಿ ಏಳ್ಗೆಯ ಏಣಿಯನ್ನ ಏರಬಹುದು ಎನ್ನುವುದು ಈ ಗಾದೆಯ ವಾಚ್ಯಾರ್ಥ. "ಕಷ್ಟ ಮನುಷ್ಯರಿಗೆ ಬಾರದೆ ಮರಕ್ಕೆ ಬಾರದು!" ಎನ್ನುವ ಕನ್ನಡದ ಗಾದೆಯ ವಿವರಣೆಯೂ ಸಹ ಬಹುಷಃ ಅದೇನೆ.}




( ಉಪ್ಪಡ್'ದುಲಾಯಿ ಉಪ್ಪುನ ಪುರಿಲಾ ಸೈಯಂದೆ ಬದುಕುಂಡು = ಉಪ್ಪಿನಕಾಯಿಯೊಳಗೆ ಇರುವ ಹುಳುವೂ ಸಾಯದೆ ಬದುಕುತ್ತದೆ.)

24 March 2013

ತುಳುಗಾದೆ-೫೨










"ಬ್ಯಾರಿ ಭೂತ ಕಟ್ಟಿ ಲೆಕ್ಖೋ"



{ ತನ್ನದಲ್ಲದ, ತನಗೆ ಬಾರದ ಕೆಲಸದಲ್ಲಿ ಅಧಿಕ ಪ್ರಸಂಗಿಯಾಗಿ ಮೂಗು ತೂರಿಸುವ ಮಂದಿಗೆ ಹೀಗೆ ಹೇಳಿ ಹೀಗೆಳೆಯುವ ಪದ್ಧತಿ ತುಳುನಾಡಿನಾದ್ಯಂತ ಇದೆ. ಇಂದಿನ ಕರುನಾಡ ಕರಾವಳಿ ಸಹಿತ ಕೇರಳದ ಕರಾವಳಿಯುದ್ದಕ್ಕೂ ವ್ಯಾಪಿಸಿಕೊಂಡಿರುವ ಮುಸಲ್ಮಾನರಲ್ಲಿ ಒಂದು ಅಸ್ಮಿತೆಯಿದ್ದು ಅದು ಭಾರತೀಯ ಉಪಖಂಡದ ಇನ್ನಿತರ ಮುಸಲ್ಮಾನರಿಂದ ಅವರನ್ನ ಪ್ರತ್ಯೇಕವಾಗಿಸಿದೆ. ಇನ್ನಿತರ ಭಾರತದಂತೆ ಇಲ್ಲಿ ಮುಖ್ಯವಾಹಿನಿಯಿಂದ ಮುಸಲ್ಮಾನರನ್ನು ಪ್ರತ್ಯೇಕಿಸಿ ನೋಡುವುದು ಕಷ್ಟ ಸಾಧ್ಯ. ಕೋಮು ಸ್ವಾರ್ಥ ಪೀಡಿತ ರಾಜಕೀಯ ಪುಢಾರಿಗಳ ಹಾಗೂ ಅಗ್ಗದ ಧರ್ಮಪಿಪಾಸು ಮುಲ್ಲಾಗಳ ಪುಸಲಾವಣೆಯಿಂದ ಇಂದಿನ ಮುಸಲ್ಮಾನ ತರುಣರು ಹಾದಿ ತಪ್ಪಿದ ಹೋರಿಗಳಾಗುತ್ತಿರುವುದು ನಿಜವಾದರೂ ಪರಿಸ್ಥಿತಿ ಅಷ್ಟೇನೂ ಕೆಟ್ಟಿಲ್ಲ. ಸ್ವಾರ್ಥಿಗಳ ದುರ್ಬೋಧನೆಗೆ ಹಿತ್ತಾಳೆ ಕಿವಿಯಾಗುವ ಮುಂಚೆ ಮುಸಲ್ಮಾನ ಬಿಸಿರಕ್ತದ ಯುವಕರು ಯುಕ್ತಾಯುಕ್ತತೆಯನ್ನ ವಿವೇಚಿಸಿದರೆ ಮುಂದಾದರೂ ಮತ್ತೆ ಸಮರಸ್ಯ ಮರುಕಳಿಸೀತು.

ಅದೇನೆ ಇರಲಿ ಈ ಗಾದೆಯ ಮೂಲವನ್ನ ಕೆದಕುವ ಮುನ್ನ ಕರಾವಳಿಯ ಮುಸಲ್ಮಾನರ ಹಿನ್ನೆಲೆಯತ್ತ ಸ್ವಲ್ಪ ಬೆಳಕು ಚಲ್ಲೋಣ. ಭಾರತೀಯ ಉಪಖಂಡಕ್ಕೆ ಯುರೋಪಿಯನ್ನರು ಅಧಿಕೃತವಾಗಿ ಸಮುದ್ರಮಾರ್ಗದ ಮೂಲಕ ಆಗಮಿಸಿ ರಾಜಕೀಯವಾಗಿ ಇಲ್ಲಿ ಪ್ರಬಲವಾಗುವದಕ್ಕಿಂತಲೂ ಎರಡು ಸಾವಿರ ವರ್ಷದ ಹಿಂದಿನಿಂದಲೂ ಅರಬ್ಬಿ ವ್ಯಾಪಾರಿಗಳು ಇಲ್ಲಿನ ವ್ಯಾಪಾರಿ ಸರಂಜಾಮುಗಳ ಖರೀದಿಗಾಗಿ ಪದೆಪದೆ ಅರಬ್ಬಿನಿಂದ ಭಾರತದ ಕರಾವಳಿಗೆ ಹಾಯಿದೋಣಿಗಳನ್ನೇರಿ ಬರುವ ರೂಢಿಯಿತ್ತು. ಆಗಿನ್ನೂ ಇಸ್ಲಾಂ ಹುಟ್ಟಿರಲಿಲ್ಲ. ಅದಕ್ಕೂ ಅರುನೂರು ವರ್ಷ ಹಿಂದಿನಿಂದ ಬೆಸೆದು ಬಂದ ವ್ಯಾಪಾರಿ ಸಂಬಂಧವಿದು. ಹೀಗೆ ಬಂದವರು ಇಲ್ಲಿಯೆ ತಿಂಗಳಾನುಗಟ್ಟಲೆ ಬಾಳುವ ಅನಿವಾರ್ಯತೆ ಸೃಷ್ಟಿಯಾಗುತ್ತಿದ್ದರಿಂದ ಸ್ಥಳಿಯ ಹೆಂಗಸರೊಂದಿಗೆ ವೈವಾಹಿಕ ಹಾಗೂ ತತ್ಕಾಲಿಕ ಪರಸ್ಪರ ಸಮ್ಮತವಾದ ಲೈಂಗಿಕ ಸಂಬಂಧ ಹೊಂದುವ ಪರಿಪಾಠ ಬೆಳೆಯಿತು. ಉತ್ತರಕನ್ನಡದಲ್ಲಿ ಹೀಗೆ ವ್ಯಾಪಾರಿ ಅರಬ್ಬಿಗಳನ್ನ ವರಿಸಿದವರಲ್ಲಿ ಜೈನ ಹಾಗೂ ಜಾತಿ ಬಹಿಷೃತ ಬ್ರಾಹ್ಮಣ ಬಾಲ ವಿಧವೆಯರು ಹೆಚ್ಚಾಗಿದ್ದರೆ, ಉತ್ತರದ ಕಾಸರಕೋಡದಿಂದ ದಕ್ಷಿಣದ ಕಾಸರಗೋಡಿನ ತನಕ ದಕ್ಷಿಣ ಕನ್ನಡದಲ್ಲಿ ಮೀನು ಹಿಡಿಯುವ ಕುಲ ಕಸುಬಿನ ಮೊಗವೀರ ಹಾಗೂ ಮೂರ್ತೆ ಕೆಲಸದ ಅಂದರೆ ಈಚಲ ಮರದಲ್ಲಿ ಕಳ್ಳು ಕಟ್ಟುವ ಕುಲಕಸುಬಿನ ಬಿಲ್ಲವರ ಹೆಂಗಸರನ್ನು ಇವರು ನಿಖಾ ಮಾಡಿಕೊಳ್ಳುವ ರೂಢಿ ಜಾರಿಗೆ ಬಂದಿತು. ಕಾಸರಗೋಡಿನಿಂದ ಆಚೆಗೆ ಚಂದ್ರಗಿರಿಹೊಳೆಯಿಂದ ದಕ್ಷಿಣಕ್ಕೆ ನಾಯರ್ ಹಾಗೂ ಈಳವ ಹೆಣ್ಣುಮಕ್ಕಳು ಅರಬಿಗಳ ಹೆಂಡತಿಯರಾದರು. ಈಗಲೂ ಉತ್ತರಕನ್ನಡದ ನವಾಯತ ಮುಸಲ್ಮಾನರಲ್ಲಿ ನೀರನ್ನ ಸೋಸಿ ಕುಡಿಯುವ, ಸಂಜೆ ಸೂರ್ಯ ಕಂತುವ ಮೊದಲೆ ಲಘು ಉಪಹಾರ ಸೇವಿಸುವ ಜೈನ ಆಚರಣೆಗಳ ಹಾಗೂ ಮದುವೆಯ ನಂತರ ಹೆಣ್ಣುಮಕ್ಕಳು ತಾಳಿಬೊಟ್ಟಿನ ಕರಿಮಣಿ ಧರಿಸುವ ಬ್ರಾಹ್ಮಣ ಆಚರಣೆಗಳು ಪಳಯುಳಿಕೆಯಂತೆ ಉಳಿದುಕೊಂಡಿವೆ. ತುಳುನಾಡಿನ ಮಂದಿ ಬ್ಯಾರಕ್ಕೆ ಅಂದರೆ ವ್ಯಾಪಾರಕ್ಕೆ ತುಳುನಾಡಿಗೆ ಬಂದವರ ಸಂತಾನ ಇವರು ಎನ್ನುವ ಅರ್ಥದಲ್ಲಿ ಇವರ ಸಮುದಾಯವನ್ನ ಬ್ಯಾರಿಗಳೆಂದು ಗುರುತಿಸಿದರು, ಇವರಲ್ಲಿ ಬಿಲ್ಲವ ಹಾಗೂ ಮೊಗವೀರ ದೇಹಭಾಷೆಯ ಕುರುಹುಗಳನ್ನ ಈಗಲೂ ಗುರುತಿಸಬಹುದು. ಅಂತೆಯೆ ಮಲಯಾಳ ನಾಡಿನ ಮಲಬಾರಿನಾಚೆಯ ಮಾಪಿಳ್ಳೆಗಳಲ್ಲಿ ಈಳವ ಹಾಗೂ ನಾಯರ್ ಚರ್ಯೆ ಎದ್ದು ಕಾಣುತ್ತದೆ. ಇಸ್ಲಾಂ ಅರಬ್ಬಿಸ್ಥಾನದಲ್ಲಿ ಬೇರುಬಿಟ್ಟ ನಂತರ ಇಸ್ಲಾಂನ್ನ ಅನುಸರಿಸ ತೊಡಗಿದ ಕೊಂಕಣಿ ಮನೆಭಾಷೆಯ ನವಾಯತ, ತುಳು-ಕನ್ನಡ-ಮಲಯಾಳಂ ಬೆರೆತ ಬ್ಯಾರಿ ಭಾಷೆ ಮಾತನಾಡುವ ಬ್ಯಾರಿಗಳು ಹಾಗೂ ಅಪ್ಪಟ ಮಲಯಾಳಿ ಮನೆಭಾಷೆಯಾಗಿರುವ ಮಾಪಿಳ್ಳೆಗಳು ಇವರೆಲ್ಲರೂ ಸಾಮಾನ್ಯವಾಗಿ ವ್ಯಾಪಾರ ಹಾಗೂ ಮೀನುಗಾರಿಕೆಯನ್ನೆ ಕುಲಕುಸುಬಾಗಿ ಬೆಳೆಸಿಕೊಂಡು ಬಂದವರು.



ಈಗ ಗಾದೆಗೆ ಮರಳೋಣ ತುಳುನಾಡಿನ ಭೂತಗಳಲ್ಲಿ ಬ್ಯಾರಿ ಸಮುದಾಯದ ಬೊಬ್ಬರ್ಯ ಭೂತನಿದ್ದರೂ, ಮಲಯಾಳದ ದಯ್ಯಂನಲ್ಲಿ ಮಾಪಿಳ್ಳೆಗಳ ಸಮುದಾಯದ ಆಲಿ ಭೂತ ಆರಾಧಿಸಲ್ಪಡುತ್ತಿದ್ದರೂ ಸಹ ಅವರ ಸಮುದಾಯದವರು ಭೂತಕ್ಕೆ ಪಾತ್ರಧಾರಿಯಾಗಿ ವೇಷ ಕಟ್ಟುವ ಸಂಪ್ರದಾಯವಿಲ್ಲ. ರಾಜನ್ ದೈವಗಳೆ ಇರಲಿ ಅಥವಾ ಕ್ಷುಲ್ಲಕ ಪುಡಿ ಭೂತಗಳೆ ಇರಲಿ ಭೂತದ ಪಾತ್ರಧಾರಿಯಾಗಿ ದೈವ ಮಾಧ್ಯಮರಾಗುವ ಹಕ್ಕು ಮತ್ತು ಅಧಿಕಾರವಿರುವುದು ಪರವ-ಪಂಬದ-ನಲಿಕೆ ಜನಾಂಗದವರಿಗೆ ಮಾತ್ರ. ಭೂತ ಕಟ್ಟಿ ಕುಣಿಯುವುದೊಂದು ವಿಶಿಷ್ಟ ಸಾಂಪ್ರದಾಯಿಕ ಕಲಾ ಪ್ರಕಾರ. ಅವರಿಗೆ ಮೀಸಲಾಗಿರುವ ಈ ಕುಲಕಸುಬಿನಲ್ಲಿ ಬ್ಯಾರಿಯೊಬ್ಬ ಮೂಗು ತೂರಿಸಿದರೆ ಅದು ದೊಂಬರಾಟದಂತಾಗಿ ಹಾಸ್ಯಾಸ್ಪದವಾಗುತ್ತದೆ. ಅದೆ ಬಗೆಯಲ್ಲಿ ಒಂದು ವೇಳೆ ಬ್ಯಾರಿಗಳ ಕುಲ ಕಸುಬಾದ ವ್ಯಾಪಾರದಲ್ಲಿ ಪರವ ಪಂಬದರು ತಲೆಹಾಕಿದರೂ ಅದು ಕನಿಕರ ಹುಟ್ಟಿಸುವ ಮಟ್ಟಿಗೆ ತಮಾಷೆಯಾಗುತ್ತದೆ. ಅಂದರೆ ತಮ್ಮದಲ್ಲದ ಕಸುಬಿಗೆ ನಾವು ಅಡಿಯಿಟ್ಟು ಕೈಸುಟ್ಟುಕೊಂಡು ಸೋಲಬಾರದು ಎನ್ನುವುದೆ ಈ ಗಾದೆಯ ನೈಜ ಅರ್ಥ.}



( ಬ್ಯಾರಿ ಭೂತ ಕಟ್ಟಿ ಲೆಕ್ಖೋ = ಬ್ಯಾರಿ ಭೂತ ಕಟ್ಟಿದ ಹಾಗೆ.)

23 March 2013

ವಿಕಾರ ಬುದ್ಧಿಯ ವಿಷಯ ತಜ್ಞರ ವಿಕೃತ ಚರ್ಚೆಗಳು....


"ನೇರವಾಗಿ ಮೂರೂ ಬಿಟ್ಟು ದಿಟ್ಟವಾಗಿ ನೋಡುಗರ ದಿಕ್ಕೆಡಿಸಿ ನಿರಂತರವಾಗಿ ಕನ್ನಡಿಗರ ಅಭಿರುಚಿ ಕೆಡಿಸುವ" ವ್ಯಭಿಚಾರಿ ಶೈಲಿಯ ಉತ್ತಮ ಸಂ"ಮಜ"ಕ್ಕಾಗಿ ಪಣ ತೊಟ್ಟವರಂತೆ ಕಂಡವರ ಮನೆಯ ಗಳ ಹಿರಿದು ಹಲ್ಲು ಕಿರಿಯುತ್ತಾ ಅಲ್ಲಿನ ಕಟ್ಟೆ ಪುರಾಣ ಕೊಚ್ಚುವ ಕನ್ನಡದ ವಾರ್ತಾವಾಹಿನಿಗಳ ಮಾನಗೇಡಿ ವರ್ತನೆಗೆ ಮಿತಿಯೆ ಇದ್ದಂತಿಲ್ಲ. ಪಾತಾಳಕ್ಕಿಂತ ಕೆಳಗಿಳಿದ ಇವರೆಲ್ಲರ ಅಭಿರುಚಿಗೆ ಇತ್ತೀಚಿನ ಉದಾಹರಣೆ ಗಾಯಕ-ನಟ ರಾಜೇಶ್ ಕೃಷ್ಣನ್'ರ ಮುರಿದ ಮದುವೆಯ ಕಥೆ. ಅದನ್ನ ಬೆಡ್'ರೂಮ್ ರಹಸ್ಯಗಳ ಸಹಿತ ರಣೋತ್ಸಾಹದಿಂದ "ಸುವರ್ಣ"ಕ್ಕನ ಹೀನಾತಿಹೀನ ಅಕ್ರಮ ಸಂತಾನಗಳು ಹಾಗೂ "ಒಂಬತ್ತನೆ ನಂಬರ್" ಛಾನಲ್ಲಿನ ಸುಣ್ಣಬಣ್ನ ಬಳಿದುಕೊಂಡ ನಿರೂಪೆಕರರು ಹಾಗೂ ವರದಿಕೋರರು ನೋಡುಗರಿಗೆ ಯಾವ ಆಸಕ್ತಿ ಇಲ್ಲದಿದ್ದರೂ ದಿನವಿಡಿ ಥೆರೆವಾರಿ ರೀತಿಯಲ್ಲಿ ಕೊರೆದೆ ಕೊರೆದರು.



ಅವಳ್ಯಾರೋ ಗಂಡನಿಗೆ ಲೈಂಗಿಕ ಅತೃಪ್ತಿಯಿಂದ ಸೋಡಾಚೀಟಿ ಕೊಡಲು ಉಧ್ಯುಕ್ತವಾದರೆ ಟಿವಿ ವಾರ್ತಾವಾಹಿನಿ ಜಗತ್ತಿನ "ಆಸ್ಥಾನ ಕಲಾವಿದ"ರಂತಹ ಅರ್ಜೆಂಟ್ ವಿಷಯ ತಜ್ಞ(?)ರನ್ನೆಲ್ಲ ಇದ್ದಲ್ಲಿಂದಲೆ ಇದ್ದಕ್ಕಿದ್ದಂತೆ ಗೋರಿ ರಾಶಿ ಹಾಕಿಕೊಂಡು ಬಾಯಿ ಚಪ್ಪರಿಸಿಕೊಳ್ಳುತ್ತಾ

"ಸೋಡಾಚೀಟಿ ಎಸೆದವಳು ಲೈಂಗಿಕವಾಗಿ ಬಹಳ ಹಸಿದಿದ್ದಳೆ!"

"ಅವಳ ದೇಹದ ದಾಹ- ಕಾಮತೃಷೆಯನ್ನ ತಣಿಸುವಲ್ಲಿ ಅವನು ವಿಫಲವಾದದ್ದು ಹೌದೆ?"

"ಹೆಣ್ಣಿನ ಕಾಮದ ಹಸಿವು ಅದೆಷ್ಟು ಭೀಕರ!"

"ಗಂಡನೆನೆಸಿಕೊಂಡ ಅವನು ನಿಜವಾಗಿಯೂ ಹಾಸಿಯ ಮೇಲೆ ಗಂಡನೆ ಆಗಿದ್ದೆನೆ ಇಲ್ಲಾ ಆತ ಷಂಡನೆ?!"

ಎನ್ನುವ ಇಂದಿನ ವರ್ತಮಾನದ "ತುರ್ತು ಅಗತ್ಯ"ಗಳ ಕುರಿತು ಅಗ್ಗದ ನೀಲಿಚಿತ್ರಗಳಿಗಿಂತ ಹೆಚ್ಚು ರೋಚ"ಕಥೆ"ಯಿಂದ ಕೂಡಿದ್ದ ಘನಘೋರ ಪ್ಯಾನಲ್ ಚರ್ಚೆಗಳೂ ಕೂಡ ಬಿಡುವಿಲ್ಲದೆ "ಪಬ್ಲಿಕ್" ಆಗಿ ನಡೆದು ಈ "ಸಮಯ"ದಲ್ಲಿ ಇದೆ ಬಹುಷಃ ಕರುನಾಡ "ಜನಶ್ರೀ"ಗೆ ತುರ್ತು ಅಗತ್ಯವಾದ ಮಾಹಿತಿಯೇನೋ ಎಂಬಂತೆ ಧಾರಾಳ ಇಂಗ್ಲಿಷ್ ಬೆರೆಸಿದ ಅಚ್ಛ "ಕಸ್ತೂರಿ" ಕನ್ನಡದಲ್ಲಿ ೨೪*೭ ಎಗ್ಗುಸಿಗ್ಗಿಲ್ಲದೆ ಈ ಕ್ಷುಲ್ಲಕ ಸಂಗತಿಯ ಮರಣೋತ್ತರ ಪರೀಕ್ಷೆ ಕಿರುತೆರೆಯ ಮೇಲೆ ನಡೆಸಲಾಯಿತು. ಆಡಿದ್ದನ್ನೆ ಆಡಿ ಅಲ್ಲಿನ "ನಿರೋಧ್ ಪ್ರಿಯ" ನಿರೂಪಕರು ಆಗಬಾರದ ಕಡೆ ರೋಮಾಂಚಿತರಾಗುತ್ತಿದ್ದರೋ, ಇಲ್ಲವೆ ಚರ್ಚೆಯೆಂಬ ಹೆಸರಿನ ಸೊಂಟದ ಕೆಳಗಿನ ಶೈಲಿಯ ಸೋಮಾರಿ ಕಟ್ಟೆ ಪಂಚಾಯ್ತಿಯ ಹರಟೆಯಲ್ಲಿ ಜೊಲ್ಲು ಸುರಿಸಿಕೊಂಡು ಆಗಾಗ ನಾಲಗೆ ಸವರಿಕೊಳ್ಳುತ್ತಿದ್ದ ಈ ಅಬ್ಬೆಪಾರಿ ಲಡಕಾಸಿ "ವಿಷಯ ತಜ್ಞ"ರು ಪ್ರಫುಲ್ಲಿತರಾಗುತ್ತಿದ್ದರೋ ಅನ್ನುವ ಗೊಂದಲ ಮಾತ್ರ ಮೊನ್ನೆ ಗುರುವಾರ ಈ ಚಾನಲ್'ಗಳನ್ನೆಲ್ಲ ಕಾಸು ಕೊಟ್ಟು ಕೊಂಡ ಕರ್ಮಕ್ಕೆ ನೋಡ ಬೇಕಾದ ಅನಿವಾರ್ಯತೆಗೆ ಸಿಲುಕಿದ ಕಿರುತೆರೆಯ ವೀಕ್ಷಕರಿಗೆ ಎದುರಾಗಿತ್ತು.



ಕಂಡವರ ಷಂಡತನಕ್ಕೆ ಕ್ಯಾಮರಾ ಹಿಡಿದು ಹಬ್ಬ ಮಾಡುವ ಈ ನಾಮರ್ದರ ಅಟ್ಟಹಾಸಗಳನ್ನ ನೋಡಿದ ನಾವು ಕನ್ನಡಿಗ ವೀಕ್ಷಕರು "ಕಾಸು ಕೊಟ್ಟು ಅವರು ತೋರಿಸಿದ ವಿಕಾರ-ಅಸಹ್ಯದ ಕಾರ್ಯಕ್ರಮಗಳನ್ನೆ ನೋಡಿ ಸುಮ್ಮನಿದ್ದು ಷಂಡರಾಗಬೇಕೆ?" ಅನ್ನುವ ಪ್ರಶ್ನೆಯನ್ನ ಈಗಲಾದರೂ ಕ್ಯಾಕರಿಸಿ ಅಂತಹ ಕಮಂಗಿಗಳ ದರಬೇಶಿ ಮುಖಕ್ಕೆ ಉಗಿದು ವಿಚಾರಿಸಿಕೊಳ್ಳುವುದನ್ನ ಬಿಟ್ಟು ಹೀಗೆ ಸುಮ್ಮನಿದ್ದರೆ ಇನ್ನು ಮುಂದೆ ಇವರ ಅಸಹ್ಯವನ್ನೂ ಮೀರಿದ ಅರ್ಭಟಕ್ಕೆ ಕೊನೆ ಮೊದಲಿರುವುದಿಲ್ಲ. ಹೀಗೆ ಕಂಡವರ ಶಯನ ಕೋಣೆಗೆ ಕ್ಯಾಮರಾ ಹರಿಸಿ ಅನ್ನ ಸಂಪಾದಿಸಿಕೊಳ್ಳುವ ಅನಿವಾರ್ಯತೆಗಿಳಿದಿರುವ ಗತಿಗೆಟ್ಟ ಈ ಹರಾಮರ ಮನೆಯಲ್ಲಿ ಇಂತಹ ಅಪಸವ್ಯಗಳು ನಡೆದೆ ಇಲ್ಲವ? ಆವಾಗಲೆಲ್ಲ ಹೀಗೆ ಕ್ಯಾಮರಾ ಹೊತ್ತು ಕ್ಷಣಕ್ಷಣದ ರೋಚಕ ಮಾಹಿತಿಗಳನ್ನ ಹೀಗೆಯೆ ಬಿತ್ತರಿಸಿ ತಾವು ಕೂಡ ಕೂತಲ್ಲೆ ಸುಮ್ಸುಮ್ನೆ ಬೆಚ್ಚಗಾಗುತ್ತಿದ್ದರಾ? ಅದೆಲ್ಲಾ ಅತ್ತಲಾಗಿರಲಿ ಕರೆದ ಕೂಡಲೆ ಅಗ್ಗದ ಪ್ರಚಾರಕ್ಕೆ ಬಾಯಿಬಿಟ್ಟುಕೊಂಡು ಬರಗೆಟ್ಟವರಂತೆ ಮೇಕಪ್ ಬಳಿದುಕೊಂಡು ಕ್ಯಾಮರಾ ಮುಂದೆ ಕುಳಿತು ಕರುನಾಡಿಗರಿಗೆ ತಮ್ಮ ಖಾಲಿತಲೆಯ ಜ್ಞಾನ ಸಂಪನ್ನತೆಯನ್ನ ಹಂಚಿ ಸಾರ್ಥಕವಾಗುವ ಈ ವಿಶೇಷ ಜ್ಞಾನಿ "ವಿಷಯ ತಜ್ಞ" ಪ್ರಜೆಗಳನ್ನ ಎಲ್ಲಕ್ಕೂ ಮೊದಲು "ಸರಿಯಾಗಿ ವಿಚಾರಿಸಿಕೊಳ್ಳಿ" ಆಗ ಇಂತಹ ಅನರ್ಥಗಳು ಅರ್ಧ ನಿಲ್ಲುತ್ತವೆ.


ಇಲ್ಲೊಬ್ಬಳು ಆಗಾಗ ತೆರೆಯ ಮೇಲೆ ಚರ್ಚೆಗೆ ಧಾವಿಸುವ "ಲೈಂಗಿಕ ತಜ್ಞೆ" ವೈದ್ಯೆಯಿದ್ದಾಳೆ. ನಾನು ಆಗಷ್ಟೆ ಎಫ್ ಎಂ ರೈನ್'ಬೋ ಆಗಿದ್ದ ಆಗಿನ ಎಫ್ ಎಂ ಮೆಟ್ರೋದಲ್ಲಿ ಕಾರ್ಯಕ್ರಮ ನಿರೂಪಕನಾಗಿದ್ದಾಗ ಹೊಸತಾಗಿ ಆರಂಭಿಸಿದ್ದ "ಲಂಚ್ ಬಾಕ್ಸ್" ಕಾರ್ಯಕ್ರಮದಲ್ಲಿ ಆಕೆಯನ್ನ ಸಂದರ್ಶಿಸುವ ವ್ಯವಸ್ಥೆ ಮಾಡಿದ್ದೆ. ನಮ್ಮ ವಾಹಿನಿಯ ಉಸ್ತುವಾರಿಯಾಗಿದ್ದ ಆಕಾಶವಾಣಿಯ ಉಪ ನಿರ್ದೇಶಕಿಯಾಗಿದ್ದ ಸರಸ್ವತಿ ಆಗ ಈ ಕಾರ್ಯಕ್ರಮಕ್ಕೆ ಒಪ್ಪಿದ್ದರು ಅಂತ ನೆನಪು. ಬಹುಷಃ ಆವರೆಗೂ ಕೇವಲ ಪತ್ರಿಕೆಗಳಲ್ಲಿ ಲೈಂಗಿಕ ವಿಷಯ ಸಂಬಂಧಿಸಿದ ಲೇಖನಗಳನ್ನೋ ಇಲ್ಲವೆ ಗುಪ್ತ ಸಮಾಲೋಚನೆಗಳ ಕುರಿತ ಓದುಗರ ಪ್ರಶ್ನೆಗಳಿಗೆ ಉತ್ತರಿಸಿಕೊಂಡಿದ್ದ ಆ "ಲೈಂಗಿಕ ತಜ್ಞೆ"ಗೆ ಅದೆ ವಿದ್ಯುನ್ಮಾದ ಮಾಧ್ಯಮದಲ್ಲಿ ದಕ್ಕಿದ ಮೊದಲ ಪ್ರಚಾರದ "ಪ್ರಸಾದ" ಅಂತಲೂ ನನಗೆ ನೆನಪಿದೆ. ಇದೆಲ್ಲ ಹತ್ತಿರ ಹತ್ತಿರ ಹತ್ತು ವರ್ಷಗಳ ಹಿಂದಿನ ಕಥೆ. ಆದರೆ ಈ ಸುಡುಗಾಡು "ಒಂಬತ್ತನೆ ನಂಬರ್"ನ ಖಾಸಗಿ ವಾರ್ತಾವಾಹಿನಿಗಳ ಸಾಲುಸಾಲು ಹಳವಂಡ ಆರಂಭವಾಯಿತು ನೋಡಿ ಈಕೆಗೀಗ ಫುಲ್ ಡಿಮಾಂಡ್. ಅದೆಷ್ಟು ಅತಿರೇಕಕ್ಕೇರಿದೆಯೆಂದರೆ ಆಕೆ ತನ್ನ ನರ್ಸಿಂಗ್ ಹೋಂಗಿಂತ ಹೆಚ್ಚು ಯಾವುದಾದರೂ ಅರೆಬೆಂದ ವಾರ್ತಾವಾಹಿನಿಯಲ್ಲಿಯೆ ದಿನದ ಅರ್ಧ ಭಾಗವನ್ನ ಬಹುತೇಕ ವ್ಯಯಿಸುವಷ್ಟು. ಟಿವಿ ವಾಹಿನಿಗಳು ಕರೆಯುವುದಕ್ಕೆ ಕಾದಿದ್ದವಳಂತೆ ಅಲ್ಲಿ ಕಂಡವರ ಮನೆಯುರಿಗೆ ಬಿದ್ದ ಬೆಂಕಿಯಲ್ಲಿ ತಾನೂ ಮೈ ಕಾಯಿಸಿಕೊಳ್ಳಲು ಈಕೆ ಧಾವಿಸಿ ಬರುತ್ತಾಳೆ! ಸದರಿ ತಜ್ಞೆಯ ಮನೆಯಲ್ಲೂ ಹೀಗೆ ಲೈಂಗಿಕ ಸಮಸ್ಯೆ ತಲೆದೋರಿದಾಗಲೂ ಆಕೆ ಅದನ್ನ ಸುಧಾಸಿ ಸಂಭಾಳಿಸುವ ಬದಲು ಹೀಗೆಯೆ ಅದನ್ನ "ಒಂಬತ್ತನೆ ನಂಬರ್"ನ "ಸುವರ್ಣ"ಕ್ಕನ ಅಂಗಳದಲ್ಲಿ ಹೀಗೆ ಹಲ್ಲು ಬಿಟ್ಟು ನಗಾಡುತ್ತಾ "ಪಬ್ಲಿಕ್"ಕ್ಕಾಗಿ ಕನ್ನಡಿಗರೊಂದಿಗೆ ಹಂಚಿಕೊಳ್ಳುತ್ತಾರಾ ಎನ್ನುವುದು ಇಲ್ಲಿ ಹುಟ್ಟುವ ಮುಖ್ಯ ಪ್ರಶ್ನೆ.



ಹಾಗೆಯೆ ಮೂರುಮೂರು ವಿಧಾನಸಭಾ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಹಾಗೂ ಕೇವಲ ಸುಣ್ಣಬಣ್ಣ ಹೊಡೆದುಕೊಂಡರೆ ಮಾತ್ರ ನೋಡಲು ಸಹನೀಯವಾಗಿರುವ "ವಿಷಯ ತಜ್ಞೆ" ವಕೀಲೆಯೊಬ್ಬಳಿದ್ದಾಳೆ. ತಾನಿನ್ನೂ "ಪ್ರಮೀಳೆ"ಯೆಂದೆ ಭ್ರಮಿಸಿಕೊಂಡಿರುವ ಆಕೆಗೂ ಇಂತಹ ಮನೆಮುರುಕ ಪ್ಯಾನಲ್ ಚರ್ಚೆಗಳಲ್ಲಿ ಭಾಗವಹಿಸಲು ಅಸೀಮ ಕಾತರ. ಕ"ಮಲ" ಪಕ್ಷದ ಹುರಿಯಾಳಾಗಿ ಮತ್ತೆ ಬರಲಿರುವ ವಿಧಾನಸಭಾ ಚುನಾವಣೆಯ ಕಣಕ್ಕೆ ಧುಮುಕುವ ಅದಮ್ಯ ಆಸೆಯಿರುವ ಆಕೆಗೆ ಪದೆಪದೆ ಹೀಗಾದರೂ ಟಿವಿ ಪರದೆ ಮೂಲಕ ಪ್ರಚಾರದಲ್ಲುಳಿದು ಮಾನ್ಯ ಮತದಾರ ಬಾಂಧವರ ಕಣ್ಮಣಿಯಾಗುವ ಬಯಕೆ. ತನ್ನ ಮಕ್ಕಳ ಮನೆ ಮುರಿದಾಗಲೂ ಹೀಗೆಯೆ ಆಕೆಗೆ ಬಹಿರಂಗ ಚರ್ಚೆಗಿಳಿಯುವ ರಣೋತ್ಸಾಹ ಮೂಡಿಬರುತ್ತದಾ? ಎನ್ನುವುದು ಚರ್ಚೆಗೆ ಯೋಗ್ಯ ವಿಚಾರ. ಜೆ ಹೆಚ್ ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ಆಯೋಜಿತವಾಗಿದ್ದ ವಿಶ್ವಸುಂದರಿ ಸ್ಪರ್ಧೆಯನ್ನ ವಿಧಾನ ಸಭಾಧಿವೇಶನದಲ್ಲಿ ಆವೇಶದಿಂದ ವಿರೋಧಿಸಿ ಮಾತನಾಡಿದ್ದ ಆ ಕಾಲದ ಶಾಸಕಿಯಾಗಿದ್ದ ಈ ಅವಿವೇಕಿ ವಕೀಲೆಗೆ "ನೋಡಿ ಅದು 'ಸುಂದರಿ'ಯರಿಗೆ ಸಂಬಂಧಿಸಿದ ವಿಷಯ, ನೀವ್ಯಾಕೆ ನಿಮ್ಮದಲ್ಲದ ಈ ವಿಷಯದಲ್ಲಿ ಸುಮ್ಮನೆ ಕಂಠ ಶೋಷಣೆ ಮಾಡಿಕೊಳ್ಳುತ್ತೀರ!" ಅಂತ ತಣ್ಣಗೆ ಹೇಳಿ ಮುಖ್ಯಮಂತ್ರಿ ಪಟೇಲರು ಈಕೆಯ ಮುಖದ ಮೇಲೆ ಬೆವರಿಳಿಸಿ, ಆ ಬೆವರ ಹನಿಗಳಿಗೆ ಈಕೆ ಮಾಡಿಕೊಂಡಿದ್ದ ಮೇಕಪ್ ಕರಗಿ ಹರಿದು ಹೋಗುವಂತೆ ಮಾಡಿದ್ದರು. ಅದರ ಮುಂದಿನ ಚುನಾವಣೆಗಳಲ್ಲಿ ಸಾಲಾಗಿ ಸೋತು ಮಕಾಡೆ ಮಲಗಿರುವ ಈಕೆಗೆ ಈಗ ಪದೆಪದೆ ಕಂಡವರ ಒಡೆದ ಮನೆಯ ಕತೆಯನ್ನ ಆಲಿಸಿ ಅದಕ್ಕೆ ಇನ್ನಷ್ಟು ತನ್ನ ವಿಶ್ಲೇಷಣೆ ಸೇರಿಸಿ ಅಸಂಬದ್ಧ "ಕಥೆ" ಹೊಡೆಯುವ ಕೆಟ್ಟ ಚಾಳಿ.


ಇನ್ನೊಬ್ಬ ಚಾಮರಾಜಪೇಟೆಯ "ಆದರ್ಶ"ಯುತ ಮಾರ್ವಾಡಿ ಕಾಲೇಜೊಂದರ ಪ್ರಾಂಶುಪಾಲ ಕೊರಮನಿದ್ದಾನೆ. ಕರ್ನಾಟಕದ ಪ್ರಸಿದ್ಧ "ಮಾನಸಿಕ ವಿಶ್ಲೇಷಕ"ನೆಂಬ ಆರೋಪ ಹೊತ್ತ ಇವನೂ ಈ ಆಸ್ಥಾನ ಕಲಾವಿದರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾನೆ. ಇಂತಹ ಅಸಂಬದ್ಧ ವಿಚಾರಗಳ ಕುರಿತ ಚರ್ಚೆಗೆ ಕರೆದವರ ಮಾನಸಿಕ ವಿಕೃತಿಯನ್ನ ವಿಶ್ಲೇಷಿಸಿ ಅವರಿಗೆ ಸೂಕ್ತ ಚಿಕಿತ್ಸೆಗೆ ಶಿಫಾರಸ್ಸು ಮಾಡಬೇಕಾದ ಈ "ವಿಷಯ ತಜ್ಞ" ಕೊರಮ ಅದರ ಬದಲಿಗೆ ಅವರ ಕರೆಯನ್ನೆ ಕಾದಿದ್ದವನಂತೆ ಅಲ್ಲಿಗೆ ಓಡೋಡಿ ಬಂದು ವಿಷಯ ಪ್ರಸ್ತಾಪಿಸುವ ವಿಕಾರಿ ನಿರೂಪಕರನ್ನೂ ಮೀರಿಸುವ ವಿಕೃತಿಯೊಂದಿಗೆ ಕಾರ್ಯಕ್ರಮದಲ್ಲಿ ತನು-ಮನದಿಂದ ಭಾಗವಹಿಸಿ ಅವರು ಬಿಸಾಡುವ ಹೀನ ಧನಕ್ಕೆ ನಾಚಿಕೆಯಿಲ್ಲದೆ ನಾಲಗೆಯೊಡ್ಡಿ ಪುನೀತನಾಗುತ್ತಾನೆ. ಈ "ಶ್ರೀ"ಯುತ ಪ್ರಾಂಶುಪಾಲರಿಗೆ ಇರುವ ಮಾನಸಿಕ ಸಮಸ್ಯೆಯೇನು? "ಧರೆ"ಯ ಮೇಲೆಲ್ಲಾದರೂ ಅದಕ್ಕೆ ಮದ್ದು ಲಭ್ಯವಿದೆಯೆ? ಅನ್ನುವ ಬಗ್ಗೆ ಒಂದು ಪ್ಯಾನಲ್ ಚರ್ಚೆ ತುರ್ತಾಗಿ ನಡೆದರೆ ಆತನ ಹಾಗೂ ಆತನ ವಿಕಾರ ವಾದಕ್ಕೆ ಕಿವಿಗೊಡುವ ಕರ್ಮಕ್ಕೆ ಒಳಗಾಗಿರುವ ಕನ್ನಡಿಗರ ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು.


ಇನ್ನು ಟಿವಿ ಒಂಬತ್ತರ ನಿರೂಪೆಕರ ಆಗಾಗ ವಿಪರೀತ ಕಾತರನಾಗಿ "ಆತನಿಗೆ ನರದೌರ್ಬಲ್ಯವಿತ್ತಾ?" ಎಂದು ಕೇಳುತ್ತಲೆ "ಆತ ನನಗಷ್ಟೆ ಅಲ್ಲ ಯಾವ ಹೆಂಗಸಿಗೂ ಆತ ಸುಖ ಕೊಡಲಾರ!" ಅಂತ ಗಾಯಕನ ಪತ್ನಿ ಸಲ್ಲಿಸಿದ ಅಫಿಡವಿಟ್'ನಲ್ಲಿದ್ದ ಸಾಲನ್ನ ಅನಗತ್ಯವಾಗಿ ಮತ್ತೆ ಮತ್ತೆ ಜೊಲ್ಲು ಸುರಿಸಿಕೊಂಡು ಓದುತ್ತಾ ಆಕೆಗೆ ದೊರೆಯದಿದ್ದ "ಸುಖ"ಕ್ಕಾಗಿ ಲೊಚಗುಟ್ಟುತ್ತಾ ಕಾರ್ಯಕ್ರಮವನ್ನ ನಿರೂಪಿಸುತ್ತಿದ್ದ. ಆತನ ಮರ್ಜಿ ನೋಡಿದರೆ ತುರ್ತಾಗಿ ತಾನೆ ಆಕೆಯಿದ್ದಲ್ಲಿ ಓಡಿ ಹೋಗಿ ಆಕೆಗೆ ಆ "ಸುಖ"ವನ್ನ ದಯಪಾಲಿಸಲು ಅಪಾರ "ರೆಹಂ"ನೊಂದಿಗೆ ಕಾತರನಾಗಿದ್ದಂತೆ ಕಾಣುತ್ತಿತ್ತು. "ಸುಂದರವಾಗಿರುವ ತರುಣರು ಕಾಮಕ್ರೀಡೆಯಲ್ಲಿ ಹಿಂದಿರುತ್ತಾರಂತೆ ಹೌದಾ?" ಎನ್ನುವ ಅರ್ಥ ಬರುವ ಪ್ರಶ್ನೆಗಳನ್ನ ತನ್ನ ಪ್ಯಾನಲ್'ನಲ್ಲಿದ್ದ ತಲೆಮಾಸಿದ ಚರ್ಚಾಪಟುಗಳಿಗೆ ನೋಡಲು ತಕ್ಕ ಮಟ್ಟಿಗೆ ಸ್ಪುರದ್ರೂಪಿಯೂ ಆಗಿರುವ ಈ ಗಡವ ಸುಮ್ಮ ಸುಮ್ಮನಾದರೂ ಕೇಳಿ ರೋಮಾಂಚಿತವಾಗುತ್ತಿತ್ತು. ನೋಡುಗರಿಗೆ ಮಾತ್ರ ಇದು ಅವ ತನ್ನ ಸ್ವಂತ "ನರ ದೌರ್ಬಲ್ಯ"ದ ಕುರಿತೆ ಕೇಳಿದ ಆತ್ಮಗತ ಪ್ರಶ್ನೆಯಂತೆ ಕೇಳಿಸುತ್ತಿತ್ತು ಅನ್ನೋದು ಮಾತ್ರ ದೊಡ್ಡ ತಮಾಷೆ.



ಇನ್ನು ಸುವರ್ಣಕ್ಕನ ಅಂಗಳದಲ್ಲಿ ಮಾತ್ರ ಈ ಮನೆ ಮುರುಕ ವಿಚಾರದ ಪ್ರಸಾರವೆ ಅಂದಿನ ಮಟ್ಟಿಗೆ ಬಹಳ ಹೆಮ್ಮೆಯ ವಿಚಾರವಾಗಿತ್ತು. ತನ್ನ ಮುಖ"ಅರವಿಂದ"ವನ್ನ ಆಗಾಗ ವಾರ್ತೆಯಲ್ಲಿ ತೋರುತ್ತಿದ್ದ ತಪರೇಸಿ ನಿರೂಪೆಕರನೊಬ್ಬ "ಬೆಳಗ್ಯೆಯಿಂದ ನಾವು ಕುರಿತ ಕ್ಷಣ ಕ್ಷಣದ ಸುದ್ದಿಯನ್ನ ನಿಮ್ಮ ಮನೆಯಂಗಳಕ್ಕೆ ತಲುಪಿಸುತ್ತಿದ್ದೇವೆ! ಇದು ನಿಮ್ಮ ಸುವರ್ಣ ನ್ಯೂಸ್'ನಲ್ಲಿ ಮಾತ್ರ?!" ಅಂತ ಅದೇನೋ ಕಡಿದು ಕಟ್ಟಿಹಾಕುತ್ತಿರುವವನ ಗೆಟಪ್ಪಿನಲ್ಲಿ ಕಾಲರ್ ಮೇಲೇರಿಸಿಕೊಳ್ಳುತ್ತಾ ಊಳಿಡುತ್ತಿದ್ದ. ನಿಜವಾಗಿಯೂ ಇವರ್ಯಾರೂ ಈ ಕಾರ್ಯಕ್ರಮದಲ್ಲಿ ಚರ್ಚಿಸುತ್ತಿದ್ದಂತೆ ಷಂಡತನದಿಂದ ನರಳುತ್ತಿದ್ದುದೆ ಇಲ್ಲವಾಗಿದ್ದಲ್ಲಿ, ಅವರಿಗ್ಯಾರಿಗೂ ಅಡಿಗಡಿಗೆ ನರ ದೌರ್ಬಲ್ಯದಿಂದ ನರಳುತ್ತಿರದಿಲ್ಲದಿದ್ದರೆ ಅವರಿಗೆ ಈ ತರಹದ ಮಾಹಿತಿ ಪೂರ್ವ ಕಾರ್ಯಕ್ರಮವನ್ನ ನಡೆಸಿಕೊಡಲು ಅನೇಕ ರೋಚಕ ವಿಷಯಗಳು ದಂಡಿಯಾಗಿ ಇವೆ.


ಉದಾಹರಣೆಗೆ ಅವತ್ತು ಸುವರ್ಣಕ್ಕನ ಅಂಗಳದಲ್ಲಿ ಆ ವಿಷಯವಾಗಿ ಪ್ಯಾನಲ್ ಚರ್ಚೆಯ ಹೆಸರಿನಲ್ಲಿ ತೌಡು ಕುಟ್ಟುತ್ತಿದ್ದ ಅಜಿತವಾಗಿಯೆ "ಮಾಲತಿ" ಹನುಮನೆಂಬ ಬಿರುದಾವಳಿ ಹೊತ್ತ ಸಿಂಗಳೀಕ ಪದೆಪದೆ

"ಆಕಿಯ ಜೊತೆ ಅಕ್ಕಿಯ ಆಸೆಗೆ ಬೇಲಿ ಹಾರುವಾಗಲೆಲ್ಲ ಆತನಿಗೆ ನರದೌರ್ಬಲ್ಯ ಕಾಡುತ್ತಿರಲಿಲ್ಲವ?"

"ಆತನ ಹೀನ ಸುಳಿಯ ಚಾನಲ್ಲಿನ ಅಕ್ರಮ "ಸಂಪಾದಕ"ನಾಗಿರುವ ವಿಶ್ಶಿಶ್ಶಿ ಭಟ್ಟನ ಮೊದಲನೆ ರೆಡ್ಡಿ ಹೆಂಡತಿ ಅವನಿಗೆ ಮದುವೆಯಾದಷ್ಟೆ ಶೀಘ್ರವಾಗಿ ಸೋಡಾಚೀಟಿ ಎಸೆದು ಪಾರಾದದ್ದೇಕೆ? ಭಟ್ಟನ ನರವೂ ಆಗ ಕೈಕೊಟ್ಟಿತ್ತಾ?"

ಅಥವಾ


"ದಿನಾ ಆಗ ಕಛೇರಿಗೆ ಬರುವಾಗ ಈ ವಿಕೃತ ಭಟ್ಟ ಕಾಲರಿನವರೆಗೂ ಗಟ್ಟಿಯಾಗಿ ಬಟನ್ ಹಾಕಿಕೊಂಡು ತನ್ನ ಕತ್ತಿನ ವರೆಗಾಗಿರುತ್ತಿದ್ದ ಯಾವ ಕಾಮ ಜ್ವರ ಪೀಡಿತ ಪರಚಿದ ಹೆಣ್ಣು ಚಿರತೆಯ ಉಗುರಿನ ಗುರುತುಗಳನ್ನ ಮರೆಮಾಚಲು ನಿತ್ಯ  ಪರದಾಡುತ್ತಿದ್ದ? ಅವನಿಗಿದ್ದಿಲ್ಲ 'ನರ'ವೆ ಅವನಿಂದ ತಾಳಿ ಕಟ್ಟಿಸಿಕೊಂಡು ದೇಹ ಸುಖಕ್ಕೆ ಕಾದು ನಿರಾಶಳಾದ ಈ ಕಾಮ ಸಂತ್ರಸ್ತೆಯ ದಿಟ್ಟವಾದ ನೇರ ನಿರಂತರ ದಾಳಿಗೆ ಕಾರಣವಾಗಿರುತ್ತಿತ್ತಾ?"



ಹೀಗೆ ಕ್ಯಾಮರಾ ಹಿಡಿದು ಹುಡುಕಿದ್ದರೆ ಪ್ಯಾನಲ್ ಚರ್ಚೆಗೆ ವಿಷಯಗಳು ನಿಜಕ್ಕೂ ನೂರಿದ್ದವು. ಆದರೆ ಆ ಪ್ಯಾನಲ್ ಚರ್ಚೆಯ ನಿರೂಪೆಕರ ಹನುಮನಿಗಿರದಿದ್ದದ್ದು ಮಾತ್ರ ಕೇವಲ ತನಿಖಾ ಪತ್ರಿಕೋದ್ಯಮದ ಕನಿಷ್ಠ ಸಾಮಾನ್ಯ ಜ್ಞಾನ.



ಸುವರ್ಣಕ್ಕನ್ನ ಅಂಗಳದಿಂದ ಹೀಗೆ ಪಂಥಾಹ್ವಾನ ಬಂದದ್ದೆ ತಡ ಎಲ್ಲಿ ತಾವು ಈ ಹೀನಾಯ ಸ್ಪರ್ಧೆಯಲ್ಲಿ ಹಿನ್ನೆಡೆ ಯನ್ನನುಭವಿಸುತ್ತೀವೋ? ಎನ್ನುವ ಗಾಬರಿಗೆ ಬಿದ್ದ ಒಂಬತ್ತನೆ ನಂಬರಿನವರು ಮಲ್ಲೇಶ್ವರದಲ್ಲಿರುವ ರಾಜೇಶ್ ಮನೆಗೆ ಹಾಗೂ ಗಿರಿನಗರದಲ್ಲಿರುವ ರಾಜೇಶ್ ಪೋಷಕರ ಮನೆಗೆ ನೇರ ವರದಿಗಾರಿಕೆಗಾಗಿ ತಮ್ಮ ವರದಿಗಾರರನ್ನ ಅಟ್ಟಿದರು. ಮುಂದಿನದೆಲ್ಲ ಕ್ಷಣಕ್ಷಣದ ನೇರ ಅಧ್ವಾನದ ನಿರಂತರ ಪ್ರಸಾರ! ಸಾಲದ್ದಕ್ಕೆ ಅದೆ ವಿಷಯವಾಗಿ ವಿಶೇಷ ನಿರೂಪಣೆಯ ಕಾರ್ಯಕ್ರಮದ ಪ್ರಸಾರದ ಜಾಹಿರಾತು ಪ್ರಸಾರಿಸುತ್ತಾ ನಾವೂ ಹಿಂದೆ ಬೀಳುವವರಲ್ಲ ಎಂದು ಇಲ್ಲದ ಮೀಸೆ ತಿರುವಿ ಬೀಗಿದರು. ಇವನ್ನೆಲ್ಲ ನೋಡಿ ಅವಮಾನದಿಂದ ಕುಗ್ಗಿ ಬಾಗಿದ್ದು ಮಾತ್ರ ಕನ್ನಡದ ಕಿರುತೆರೆ ವೀಕ್ಷಕರು.  ಅಂತೂ ಈ ಎಲ್ಲಾ ಅಪಸವ್ಯಗಳು ಅನುಚಾನಾಗಿ ದಿನವಿಡಿ ನಡೆದವು. ಅವರ ಈ ತೆವಲಿಗೆ ಕರುನಾಡ ವೀಕ್ಷಕರ ಅಭಿರುಚಿಯೆ ಕಾರಣ ಇವರ್ಯಾರೂ ಮಲಯಾಳಿ ಕಿರುತೆರೆ ವೀಕ್ಷಕರಷ್ಟು ಪ್ರಬುದ್ಧರಲ್ಲ ಎನ್ನುವ ಸ್ವಯಂ ಸಂಶೋಧನೆಯ ಫತ್ವಾ ಹೊರಡಿಸಿ "ಸುವರ್ಣಕ್ಕ"ನ ನಿರೂಪೆಕರ ಇದೇ ಹನುಮಕ್ಕನೆಂಬ ಆದಿಮಾನವ ಹಿಂದೊಮ್ಮೆ "ಕಪ್ರ"ದಲ್ಲಿ ಠೇಂಕರಿಸಿ ಕನ್ನಡಿಗರನ್ನು "ಹೆಪ್ರ"ರನ್ನಾಗಿಸಿದ್ದು ನಿಮಗೆ ನೆನಪಿರಬಹುದು.


 ಹೌದು, ರಾಜೇಶ್ ಸಾಂಸಾರಿಕ ಸಮಸ್ಯೆಗಳ ಸರಣಿಯನ್ನೆ ಹೊಂದಿದ್ದಾರೆ. ಹಿಂದೊಮ್ಮೆ ಕರ್ನಾಟಕದ ಸಿನೆಮಾ ಪತ್ರಿಕೋದ್ಯಮದ ಪ್ರಭಾವಿ ಪತ್ರಿಕೆಯೊಂದಕ್ಕೆ ನಟ-ಗಾಯಕ ಸುನಿಲ್ ರಾವ್'ರನ್ನ ಸಂದರ್ಶಿಸುವ ಹೊತ್ತಿನಲ್ಲಿ ಅವರಿಗೆ ಇದೆ ವಿಷಯವನ್ನ ಉದ್ದೇಶಿಸಿ ಪ್ರಶ್ನೆ ಕೇಳಿದ್ದೆ. ಅವರ ಅಕ್ಕ ಸೌಮ್ಯ ರಾಜೇಶರ ಮೊದಲ ಪತ್ನಿ. ಆ ಸಂದರ್ಶನದ ವೇಳೆಗೆ ಅವರ ವಿಚ್ಚೇದನವಾಗಿ ಕೆಲವೆ ವಾರಗಳಾಗಿತ್ತು. ಸುನಿಲ್ ಅಮ್ಮನನ ಅಪ್ಪ ಬಸರಿಕಟ್ಟೆಯ ಕೃಷ್ಣಯ್ಯ ನನ್ನಜ್ಜನ ಹೊಕ್ಕು ಬಳಕೆಯವರಾಗಿದ್ದರಿಂದ ಆ ಸಲುಗೆಯಲ್ಲಿಯೆ ಸಂದರ್ಶನದಲ್ಲಿ ಅಪ್ರಸ್ತುತವಾಗಿದ್ದರೂ ನಾನವರಿಗೆ ಆ ಪ್ರಶ್ನೆಯನ್ನ ಎಸೆದಿದ್ದೆ. "ಅದು ಆಕೆಯ ವಯಕ್ತಿಕ ಬದುಕು ಹಾಗೂ ಅದನ್ನ ಅವಳೆ ಮಾತನಾಡಬೇಕು ನಾನಲ್ಲ" ಎಂದು ಹೇಳಿ ಅವತ್ತು ಸುನಿಲ್ ಧೀಮಂತಿಕೆ ಮೆರೆದಿದ್ದರು. ಮನಸ್ಸು ಮಾಡಿದ್ದರೆ ಅವತ್ತೆ ಅವರು ಆ ಬಗ್ಗೆ ತಮ್ಮ ಮನಸಲ್ಲಿರುವುದನ್ನೆಲ್ಲ ಕಾರ ಬಹುದಾಗಿತ್ತು. ಆದರೆ ಅವರ ಸಂಯಮದ ನಡೆ ಪ್ರಶ್ನೆ ಕೇಳಿದ್ದ ನನ್ನನ್ನೆ ನಾಚಿಕೆಗೆ ದೂಡಿತು. ಇದಾಗಿ ವರ್ಷದೊಳಗೆ ರಾಜೇಶ್ ಡಾ, ಹರಿಪ್ರಿಯ ಎಂಬ ದಂತ ವೈದ್ಯೆಯನ್ನ ಮದುವೆಯಾಗಿದ್ದರು. ಆ ದಾಂಪತ್ಯದ ಆಯಸ್ಸು ಉಳಿದದ್ದು ಕೇವಲ ಆರು ತಿಂಗಳಷ್ಟೆ. ಆಗಲಾದರೂ ಆತ ಎಚ್ಚೆತ್ತುಕೊಳ್ಳಬಹುದಾಗಿತ್ತೇನೋ. ಮತ್ತೆ ರಮ್ಯಾ ವಸಿಷ್ಠರನ್ನ ವರಿಸಿ ಈಗ ಮತ್ತೆ ಮದುವೆ ಮುರಿದು ಬೀಳುವ ಹಂತಕ್ಕೆ ಬಂದು ಮುಟ್ಟಿದೆ. ಅದೇನೆ ಇದ್ದರು ಇದು ಅವರಿಬ್ಬರ ವಯಕ್ತಿಕ ಸಂಗತಿ ಹಾಗೂ ಕೇವಲ ರಾಜೇಶ್ ಸಿನೆಮಾ ನಟ-ಗಾಯಕ ಅನ್ನುವ ಕಾರಣಕ್ಕೆ ಈ ಸಂಗತಿ ಒಂದಿಡೀ ದಿನ ಮಾಧ್ಯಮಗಳಲ್ಲಿ ಸುದ್ದಿಗೆ ಗ್ರಾಸವಾಗುವ ಜರೂರತ್ತೇನೂ ಇರಲಿಲ್ಲ. ಆದ್ರೂ ಈ ಕಳ್ಳ ಭಡವರು ತಮ್ಮ ತುತ್ತಿನ ಚೀಲ ತುಂಬಿಕೊಳ್ಳಲು ರಾಜೇಶ್-ರಮ್ಯಾ ವಯಕ್ತಿಕ ಬಾಳಿನ ಜೊತೆ ಚಲ್ಲಾಟವಾಡಿದರು. ಇತ್ತೀಚೆಗೆ ಇವರಲ್ಲೊಬ್ಬನಾಗಿದ್ದ ಶಿವ ಅಮೇಧ್ಯದ ಪ್ರಸಾದ ತಿಂದದ್ದನ್ನ ಊರೆಲ್ಲಾ ಅದು  ನಾರುತ್ತಿದ್ದರೂ ಮುಚ್ಚಿಟ್ಟ ಇವರೆಲ್ಲರೂ ಇಲ್ಲಿ ಮಾತ್ರ ತಮ್ಮೆಲ್ಲ ವಿಕೃತಿಯನ್ನ ಧಾರಾಳ ಮೆರೆದರು.




ಮಲಯಾಳಿ ವಾರ್ತಾವಾಹಿನಿಯ ವೀಕ್ಷಕರಲ್ಲಿ ಅಜಿತನೆಂಬ ಹನುಮ ಕಾಣುವ ಪ್ರಬುದ್ಧತೆ ಆ ಗಡವನಿಗೆ ಅಲ್ಲಿನ ವಾಹಿನಿಗಳಲ್ಲಿಯೂ ಇರೋದು ಯಾಕೆ ಕಾಣಿಸಲ್ಲ? ಅಲ್ಲಿರುವ ಡಝನ್ ವಾರ್ತಾವಾಹಿನಿಗಳಲ್ಲಿ ಅವರ್ಯಾರೂ ಇಂತಹ ಮನೆಯೊಡಕ ಕಾರ್ಯಕ್ರಮಕ್ಕೆ ಪುರೋಹಿತಿಕೆ ವಹಿಸುವುದಿಲ್ಲ. ಇವರಂದುಕೊಂಡಂತೆ ವಿವಾಹ ರದ್ದತಿ ಅರ್ಜಿಯ ಕುರಿತ ಮಾಹಿತಿಯನ್ನಷ್ಟೆ ವೀಕ್ಷಕರಿಗೆ ದಾಟಿಸಿ ಅವರನ್ನ ಪ್ರಬುದ್ಧರಾಗಿಸಲು ಅವರಿಗೆ ಇಂತಹ ಅಗ್ಗದ ಗಿಮಿಕ್ಕಿನ ಅವಶ್ಯಕತೆಯೆ ಇಲ್ಲ. ಯಾವಾಗಲಾದರೂ ಅದನ್ನವರು ಮಾಡಿ ಪ್ರಸಾರಿಸಿಯಾರು. ಮುಗಿಸುವ ಮುನ್ನ ನನ್ನ ಪತ್ರಕರ್ತ ಸಹುದ್ಯೋಗಿಯೊಬ್ಬ ಹೇಳಿದ್ದ ಘಟನೆಯೊಂದು ನನಗೆ ನೆನಪಾಗುತ್ತಿದೆ. ಇತ್ತೀಚೆಗೆ ಹೀಗೆ "ಕನ್ನಡದ ಕರಿಯ"ನೊಬ್ಬನ ಮನೆ ಮುರಿದಾಗಲೂ ಹಿರಿಯ ಸಿನೆಮಾ ಪತ್ರಕರ್ತ ಸದಾಶಿವ ಶಣೈರವರಿಗೆ ಇಂತಹ ಮನೆಮುರುಕುತನದಲ್ಲಿ ನಿಷ್ಣಾತರಾಗಿರುವ ಕುಖ್ಯಾತ ವಾರ್ತಾವಾಹಿನಿಯಿಂದ ಪ್ಯಾನಲ್ ಚರ್ಚೆಯಲ್ಲಿ ಭಾಗವಹಿಸುವ ಆಹ್ವಾನ ಹೊತ್ತ ಫೋನ್ ಕರೆ ಬಂದಿತ್ತಂತೆ. ಅವರು "ಈ ಬಗ್ಗೆ ಚರ್ಚಿಸಲಿಕ್ಕೇನಿದೆ? ನಾನಲ್ಲಿ ಬಂದು ಏನನ್ನ ಚರ್ಚಿಸಲಿ?" ಅಂತ ಕೇಳಿದರಂತೆ, ಅದಕ್ಕೆ ಅತ್ತ ಕಡೆಯಿಂದ "ಅದೆ ಸರ್, ಹೇಗೆ ಅವರ ಮನೆಯೊಡೆಯಿತು? ಅದಕ್ಯಾರು ಕಾರಣ?" ಅಂತ ಆ ಕಡೆಯಿಂದ ವಿಷಯವನ್ನ ಅರುಹಿದರಂತೆ. ಅದಕ್ಕೆ ಶಣೈ ಮಾಮ್ " ಕಾರಣ! ಇನ್ಯಾರು? ನೀವೆ?!" ಅಂತಂದದ್ದೆ ತಡ ಆ ಕಡೆಯಿಂದ ಕರೆ ಕಡಿತವಾಯಿತಂತೆ!. ಅಲ್ಲಿಗೆ ಶಣೈರವರೇನೋ ಆ ಅಸಹ್ಯದ ಚರ್ಚೆಗೆ ಹೋಗದೆ ಪಾರಾದರು ಅದರೆ ಮೇಲೆ ಹೇಳಲಾಗಿರುವ ಅಷ್ಟೂ ಮಂದಿ ನಿಲಯದ ಕಲಾವಿದರು ನಿರೂಪೆಕರನೆಂಬ ಆಸ್ಥಾನ ವಿದೂಷಕನ ಮುಂದೆ ಚರ್ಚೆಗಾಗಿ ಹಾಜರಿದ್ದರು ಎನ್ನುವುದನ್ನ ಪ್ರಬುದ್ಧರಾದ ನಿಮಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ!

ಸಿಂಹ ಸ್ಮರಣೆ....


ಮರೆಯಬಾರದ ಮರೆಯಲಾರದ ಸ್ವಾತಂತ್ರ್ಯ ವೀರ ದಂತಕಥೆ ಭಗತ್ ಸಿಂಗ್ ಕೇವಲ ಸ್ವತಂತ್ರದ ಉಸಿರಿಗೆ ಹಂಬಲಿಸಿ ನೇಣಿಗೆ ತನ್ನ ಇಪ್ಪತ್ತಮೂರು ವರ್ಷ ಪ್ರಾಯದ ಹದಿ ಹರೆಯದಲ್ಲೆ ನಿಶ್ಚಿಂತನಾಗಿ ಲಾಹೋರಿನ ಕೇಂದ್ರ ಕಾರಾಗೃಹದಲ್ಲಿ ತಲೆಯೊಡ್ಡಿದ್ದ ದಿನ ಇವತ್ತು. ಇಂದು ಪಾಕಿಸ್ತಾನಕ್ಕೆ ಸಂದು ಹೋಗಿರುವ ಆತನ ಜನ್ಮಸ್ಥಾನ, ವಧಾಸ್ಥಾನ ಹಾಗೂ ಅವನ ತ್ಯಾಗದ ಪ್ರಸ್ತುತತೆ ಹಸನ್ ನಿಸ್ಸಾರ್ ಸಾಬರ ವಿಶ್ಲೇಷಣೆಯಲ್ಲಿ.




http://www.youtube.com/watch?v=q2NbvLTq4qQ



22 March 2013

ತುಳುಗಾದೆ-೫೧


"ಏಪಲ ದೇವೆರೆ ಕೈತೆಲುಪ್ಪುನಾಯೆ ಮಾಮಲ್ಲ ಪಾಪಿಗೆ!"



{ ಊಟದಲ್ಲಿ ಉಪ್ಪಿನಕಾಯಿ ಇರಬೇಕು, ಆದರೆ ಉಪ್ಪಿನಕಾಯಿಯೆ ಊಟವಾಗಬಾರದು! ಅಂತೆಯೆ ತುಳುವರ ಪಾಲಿಗೆ ತುಳುನಾಡಿನಾದ್ಯಂತ ಹೆಜ್ಜೆಗೊಂದಂತೆ ಎಡೆವಿದಲ್ಲೆಲ್ಲಾ ಸಿಗುವ ಪುಣ್ಯ-ಪವಿತ್ರ ಕ್ಷೇತ್ರಗಳು! ಅವನ್ನ ಹತ್ತಿರದಲ್ಲೆ ಕಂಡು ಅಜೀರ್ಣವಾದ ಕಾರಣಕ್ಕೆ ಇರಬೇಕು ತುಳುವರಿಗೆ ಧಾರ್ಮಿಕ ಕ್ಷೇತ್ರಗಳ ಪರ್ಯಟನೆ ಒಂದು ಆದ್ಯತೆಯಲ್ಲ. ಇಂದಿನ ಕರುನಾಡಿನ ಕರಾವಳಿಯುದ್ದ ಹರಡಿರುವ ಅಸಂಖ್ಯ ಪುಣ್ಯಕ್ಷೇತ್ರಗಳನ್ನೊಮ್ಮೆ ನೆನೆದರೆ ಎದೆ ಧಸಕ್ಕೆನ್ನುತ್ತದೆ. ಇಡುಗುಂಜಿ, ಗೋಕರ್ಣ, ಶಿರಸಿ, ಸ್ವರ್ಣವಲ್ಲಿ, ಮುರ್ಡೇಶ್ವರ, ಕುಂಭಾಶಿ ಆನೆಗುಡ್ಡೆ, ಕೊಲ್ಲೂರು, ಮಂದಾರ್ತಿ, ಉಡುಪಿ, ಪಾಜಕ, ವರಂಗ, ಕಾರ್ಕಳ, ಮೂಡುಬಿದ್ರಿ, ಕೊಡ್ಯಡ್ಕ, ಕಟೀಲು, ಬಪ್ಪನಾಡು, ಕದ್ರಿ, ಮಂಗಳಾದೇವಿ, ಉಲ್ಲಾಳ, ಪೊಳಲಿ, ಧರ್ಮಸ್ಥಳ, ಶಿಶಿಲ, ಸೌತಡ್ಕ, ಉಪ್ಪಿನಂಗಡಿ, ಕುಕ್ಕೆ ಸುಬ್ರಮಣ್ಯ, ಮಧೂರು ಹೀಗೆ ಹತ್ತು ಮಾರಿಗೊಂದರಂತೆ ಗಣಪತಿಯಿಂದ ಹಿಡಿದು ಅವನಪ್ಪ ಮಂಜುನಾಥನ ಸಹಿತ ಅನೇಕ ದೇವಾನುದೇವತೆಗಳ ಪರಿವಾರ ಸಹಿತ ಪುಣ್ಯಕ್ಷೇತ್ರಗಳು ತ್ರಿವಳಿ ಜಿಲ್ಲೆಯಾದ್ಯಂತ ವ್ಯಾಪಿಸಿಕೊಂಡಿವೆ.


ಸಮಾನ್ಯವಾಗಿ ತುಳುವರು ತಮ್ಮ ಸಮೀಪವೆ ಇರುವ ಪುಣ್ಯಕ್ಷೇತ್ರಗಳ ಕುರಿತು ಅನಾಸಕ್ತರು. ತಮ್ಮ ಮನೆಗೆ ಸಮೀಪವೆ ಇದ್ದರೂ ಸಹ ಬಾಳಿನಲ್ಲಿ ಒಮ್ಮೆಯೋ, ಇಲ್ಲವೆ ಹೆಚ್ಚೆಂದರೆ ಎರಡು ಬಾರಿಯೋ ಅಂತಲ್ಲಿಗೆ ಸಂದರ್ಶಿಸಿ ಬಂದಿರುವ ತುಳುವರ ಸಂಖ್ಯೆಯೆ ಅಧಿಕ. ಹೀಗಾಗಿ ಮನೆಯ ಆಸ್ತಿಕ ಹಿರಿಯರು ತಮ್ಮ ಬೈಗುಳಗಳಲ್ಲಿ ಈ ಮಾತನ್ನ ಆಗಾಗ ಬಳಸುವುದುಂಟು. ಹೊರ ಊರುಗಳಿಂದ ಘಟ್ಟ ಇಳಿದು ಪ್ರಾವಾಹೋಪಾದಿಯಲ್ಲಿ ತುಳುನಾಡಿನಾದ್ಯಂತ ಸೊಕ್ಕಿ ಹರಿಯುವ "ಪಶ್ಚಿಮಘಟ್ಟದ ಪುಂಡು ನದಿಗಳಂತೆ" ನಿತ್ಯ ನುಗ್ಗಿ ಬರುವ ಭಕ್ತ ಕೋಟಿಯನ್ನ ಕಾಣುವಾಗ ನಮ್ಮ ಮನೆಗೆ ಸನಿಹವಿದ್ದರೂ ತಮ್ಮ ಮಕ್ಕಳು ಅಲ್ಲಿಗೆ ಭೇಟಿ ನೀಡುವಲ್ಲಿ ನಿರಾಸಕ್ತರಲ್ಲ ಅನ್ನುವ ಸಿಟ್ಟಿಗೆ ಈ ಮಾತು ಹಿರಿಯರ ಬಾಯಿಯಿಂದ ಹೊರ ಬೀಳುತ್ತದೆ.


ಅದರೆ ಈ ಮಾತನ್ನು ಕೇಳುವ ಕ್ಷಣದಲ್ಲೆಲ್ಲಾ ನಾನು ನನ್ನದೆ ಆದ ಹೊಸ ವ್ಯಾಖ್ಯಾನವೊಂದನ್ನ ಇದಕ್ಕೆ ನೀಡಿ ಅವರೊಂದಿಗೆ ವಾದಿಸುತ್ತಿದ್ದೆ. ಗಮನಿಸಿ ನೋಡಿ, ಸಾಮಾನ್ಯವಾಗಿ ಈ ಎಲ್ಲಾ ಪುಣ್ಯಕ್ಷೇತ್ರಗಳಲ್ಲಿ ವ್ಯಾಪಾರಕ್ಕೆ ಕುಳಿತ ವ್ಯಾಪಾರಿಗಳು ಲಾಭಕೋರರಾಗಿರುತ್ತಾರೆ. ತಾವು ಪಡೆಯುವ ಹಣದ ಮೌಲ್ಯಕ್ಕೆ ತಕ್ಕ ಗುಣಮಟ್ಟದ ಸರಂಜಾಮನ್ನ ಎಂದೂ ಮಾರದ ಇವರು ಭಕ್ತಿ ಪರವಶರಾದ ಗ್ರಾಹಕರನ್ನ ನಿರಂತರ ವಂಚಿಸಿ ಸುಲಿಯುತ್ತಿರುತ್ತಾರೆ. ಆಸೆ ಮಾನವರಿಗೆ ಇರುವುದು ಸಹಜ ಆದರೆ ಇಂತವರಲ್ಲಿ ದುರಾಸೆ ಮನೆ ಮಾಡಿರುವುದು ಕೇವಲ ದುರದೃಷ್ಟಕರ. ಇದು ಪುಣ್ಯಕ್ಷೇತ್ರಗಳ ಹೊಟೆಲು, ಹಣ್ಣು-ಕಾಯಿ, ಹರಕೆಯ ವಸ್ತುಗಳು ಎಲ್ಲದರ ಮಾರಾಟಕ್ಕೂ ಸರಿಯಾಗಿ ಅನ್ವಯವಾಗುತ್ತದೆ. ಇದನ್ನೆ ನಾನು "ದೇವರ ಹತ್ತಿರವಿರುವವರೆ ಮಹಾಪಾಪಿಗಳು!" ಎಂದು ವಿವರಿಸುತ್ತಿದ್ದರೆ. "ಅವರು ಭಕ್ತ ನಿಂದಕರು, ಹಾಗಂತ ಭಗವಂತ ಅವರನ್ನ ಸದಾ ತನ್ನ ಸನಿಹವೆ ಇಟ್ಟುಕೊಳ್ಳುತ್ತಾನೆ! 'ನಿಂದಕರಿರಬೇಕಯ್ಯ...' ಎಂದು ದಾಸರು ಹೇಳಿರುವುದೂ ಅದನ್ನೆ ಸಾಕು ನಿನ್ನ ಮೊಡಂಕು ಬಾಯಿಮುಚ್ಚು" ಎಂದು ಬಾಯಿ ಮುಚ್ಚಿಸಲಾಗುತ್ತಿತ್ತು. ಅದೇನೆ ಇದ್ದರೂ "ಕ್ಷೇತ್ರವಾಸಿ ಮಹಾ ಪಾಪಿ" ಎನ್ನುವ ಸಂಸ್ಕೃತ ಗಾದೆ ಹೊರ ಸೂಸುವ ಅರ್ಥವೂ ಇದೇನೆ.}


( ಏಪಲ ದೇವೆರೆ ಕೈತೆಲುಪ್ಪುನಾಯೆ ಮಾಮಲ್ಲ ಪಾಪಿಗೆ! = ಯಾವಾಗಲೂ ದೇವರ ಹತ್ತಿರವಿರುವಾತ ಬಹುದೊಡ್ಡ ಪಾಪಿಯಂತೆ!)