08 March 2013

"ಭಾರತ ಸ್ಕೌಟರು ನಾವು..... ಕ್ಯಾಂಪಿಗೆ ಬಂದಿಹೆವು!"






ರತ್ನಾವತಿ ಟೀಚರ್ ನನ್ನೂರು ತೀರ್ಥಹಳ್ಳಿಯಲ್ಲಿ ಬಹುಕಾಲ ಇದ್ದವರು. ಹೆಬ್ರಿ ಬೀಡಿನ ಉತ್ತರಾಧಿಕಾರಿ ಸಹೋದರಿಯರಲ್ಲಿ ಒಬ್ಬರಾಗಿರುವ ಇವರ ಅಕ್ಕ ರಾಜೀವಕ್ಕ ನಮ್ಮ ಮನೆಯಿಂದ ಒಂದು ಮನೆಯಾಚೆಗೆ ಗಂಡ ಭೋಜ ಶೆಟ್ಟರೊಂದಿಗೆ ವಾಸವಿದ್ದರು. ವಿದ್ಯುತ್ ಗುತ್ತಿಗೆದಾರರಾದ ಭೋಜಣ್ಣನಿಗೆ ನಾದನಿಯ ಮೇಲೆ ಮಗಳ ಪ್ರೀತಿ. ಅವಳನ್ನ ಓದಿಸುವ ಸಲುವಾಗಿ ತೀರ್ಥಹಳ್ಳಿಯಲ್ಲಿಯೆ ಅವಳನ್ನ ಇಟ್ಟುಕೊಂಡು ಆರೈಕೆ ಮಾಡಿದ್ದ ಪುಣ್ಯಾತ್ಮ ಭೋಜಣ್ಣ. ಹೀಗಾಗಿ ಮದುವೆಯಾಗಿ, ಕೆಲಸ ಸಿಕ್ಕಿ ಕಾರ್ಕಳದಲ್ಲಿ ಸಂಸಾರದೊಂದಿಗೆ ನೆಲೆಸಿದ್ದರೂ ರತ್ನಾವತಿ ಟೀಚರ್ ಆಗಾಗ ಅಕ್ಕನ ಮನೆಗೆ ಮಕ್ಕಳಾದ ದೀಪಕ್ ಮತ್ತು ದಿವ್ಯಾನ ಜೊತೆ ಬರೋದಿತ್ತು. ದೀಪಕ್ ಉದ್ದನೆಯ ನಿಲುವಿನ ಸುಂದರ ತರುಣ. ದಿವ್ಯ ವಯಸ್ಸಿನಲ್ಲಿ ನನಗಿಂತೆರಡು ವರ್ಷಕ್ಕೆ ಹಿರಿಯವಳು ನಮ್ಮ ಶಾಲೆಯಲ್ಲಿಯೆ ಏಳನೆ ತರಗತಿ ಓದುತ್ತಿದ್ದಳು. ಇವರೆಲ್ಲರನ್ನೂ ಚಿಕ್ಕಂದಿನಿಂದಲೆ ನೋಡಿ ಪರಿಚಯವಿತ್ತು. ಹೀಗಾಗಿ ನನಗವರ ಜೊತೆ ಸಲುಗೆಯ ಬಾಂಧವ್ಯವಿತ್ತು. ಅವರು ಕಾಬೆಟ್ಟು ಶಾಲೆಯ ಬಾಲವಾಡಿಯ ಉಸ್ತುವರಿ ಹೊತ್ತಿದ್ದರಿಂದ ಅವರನ್ನ ಎಲ್ಲರೂ "ಬಾಲವಾಡಿ ಟೀಚರ್" ಎಂದೆ ಕರೆಯುತ್ತಿದ್ದುದು ವಾಡಿಕೆ. ಅವರ ಬಾಲವಾಡಿಯ ತರಗತಿಗಳು ಅರ್ಧ ದಿನಕ್ಕೆನೆ ಮುಗಿದು ಮಕ್ಕಳೆಲ್ಲ ಮಧ್ಯಾಹ್ನವೆ ಮನೆಗೆ ಹೋಗುತ್ತಿದ್ದರಿಂದ. ಅವರು ಅನಂತರ ಒಂದೆರಡು ತರಗತಿಗಳಿಗೆ ವಿಜ್ಞಾನದ ಪಾಠ ಮಾಡುತ್ತಿದ್ದರು, ಐದನೆ 'ಬಿ' ತರಗತಿಯಲ್ಲಿದ್ದ ನಮಗೂ ವಿಜ್ಞಾನದ ಪಾಠ ಅವರಿಂದಲೆ.


ಬಾಲವಾಡಿ ಟೀಚರ್ ವಿವಿಧ ಕ್ರಿಯಾಶೀಲ ಆಸಕ್ತಿಗಳನ್ನ ಹೊಂದಿದ್ದ ಉತ್ತಮ ಅಧ್ಯಾಪಿಕೆ. ಕಾಬೆಟ್ಟು ಶಾಲೆಯಲ್ಲಿ ಅವರು ಹಾಗೂ ಶೇಖರ್ ಮಾಸ್ಟ್ರು "ಭಾರತ್ ಸ್ಕೌಟ್ಸ್ ಎಂಡ್ ಗೈಡ್ಸ್" ಸಂಘಟಿಸಿ ನಡೆಸಿಕೊಂಡು ಹೋಗುತ್ತಿದ್ದರು. ಶಾಲೆಯ ಹತ್ತಿರ ಸಾಲ್ಮರದಲ್ಲಿಯೆ ಬಹುಕಾಲ ಬಾಡಿಗೆ ಮನೆಯೊಂದರಲ್ಲಿ ಅವರು ವಾಸವಿದ್ದರು. ಅನಂತರ ನಮ್ಮ ಹಾಸ್ಟೆಲ್ ಹತ್ತಿರದ "ಕರ್ನಾಟಕ ವಸತಿ ಮತ್ತು ಗೃಹ ಮಂಡಳಿ" ಯೋಜಿಸಿ ವಿಸ್ತರಿದ್ದ ಎಂಐಜಿ ಮನೆಗಳ ಸಾಲಿನಲ್ಲಿ ಅವರದ್ದೂ ಒಂದು ಮನೆಗೆ ವಾಸ್ತವ್ಯವನ್ನ ಬದಲಿಸಿದರು. ಬಾಲವಾಡಿ ಟೀಚರ್ ಇದ್ದಾರೆ ಅನ್ನುವ ಕಾರಣಕ್ಕೆ  ನಾನೂ ಐದನೆಗೆ ಅಲ್ಲಿ ಸೇರಿದ ಹೊಸತರಲ್ಲಿಯೆ ಸ್ಕೌಟ್ಸ್ ಸೇರಿ ಎದೆಯುಬ್ಬಿಸಿ ನಡೆಯ ತೊಡಗಿದೆ. ವಾರಕ್ಕೆ ಮೂರುದಿನ ಊಟದ ಬಿಡುವಿನಲ್ಲಿ ಅರ್ಧ ಘಂಟೆಯ ತರಬೇತಿ ತರಗತಿಗೆ ಹಾಜರಾಗಬೇಕಿತ್ತು. ಹೀಗಾಗಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ನಮ್ಮನ್ನ ಸ್ಕೌಟ್ಸ್ ಆಗಿ ಪಳಗಿಸುವ ರಿಂಗ್ ಮಾಸ್ಟರ್ಸ್ ರೂಪದಲ್ಲಿ ಶೇಖರ್ ಮಾಸ್ಟ್ರು ಹಾಗೂ ಬಾಲವಾಡಿ ಟೀಚರ್ ಕಂಗೊಳಿಸ ತೊಡಗಿದರು! ಮೊದಲಿಗೆ ಅವತ್ತು ನಾವು ಖಡ್ಡಾಯವಾಗಿ ಶಾಲೆಯ ಸಮವಸ್ತ್ರದ ಬದಲಿಗೆ ತಿಳಿನೀಲಿ ಹಾಗೂ ಬೂದಿ ಬಣ್ನದ ಸ್ಕೌಟ್ಸ್ ಸಮವಸ್ತ್ರ ಧರಿಸಿ, ತಲೆಯ ಮೆಲೆ ಅದರ ಲಾಂಛನದ ಬಿಲ್ಲೆ ಹೊತ್ತ ಕಪ್ಪು ಪೊಲೀಸ್ ಟೊಪ್ಪಿ ಧರಿಸಿ ಆ ತರಬೇತಿ ಅನ್ನುವ ಸರ್ಕಸ್ಸಿನಲ್ಲಿ ಮೊದಮೊದಲಿಗೆ ಮನಃಪೂರ್ವಕವಾಗಿಯೆ ಭಾಗವಹಿಸುತ್ತಿದ್ದರೂ. ಆಮೇಲಾಮೇಲೆ ನಮ್ಮ ಅಶಿಸ್ತು, ವಯೋ ಸಹಜ ಮಂಗಾಟಗಳಿಗೆ ಶೇಖರ್ ಮಾಸ್ಟ್ರ ಶಿಸ್ತು ಸನ್ನದ್ಧ ಮನಸು ನಿರ್ದಾಕ್ಷಿಣ್ಯವಾಗಿ ದಯಪಾಲಿಸುತ್ತಿದ್ದ ಅವರ ಕೈ ಚಾಟಿಯ ಚುರುಕ್ಕೆನ್ನುವ ಏಟುಗಳಿಗೆ ಗಾಬರಿಯಾಗಿ ಅದೊಂತರಾ ಕಾಲಾಪಾನಿ ಶಿಕ್ಷೆಯಂತೆಯೆ ಭಾಸವಾಗತೊಡಗಿತು.


ಶುರುಶುರುವಿನಲ್ಲಿದ್ದ "ಗೋಣಿಯನ್ನ ಎತ್ತೆತ್ತಿ ಒಗೆಯುವ" ಅಗಸನ ನಮ್ಮ ಹುಮ್ಮಸ್ಸಿನ ರೋಮ್ಯಾಂಟಿಕ್ ಅವೇಶಗಳೆಲ್ಲ ಬರಬರುತ್ತಾ ತಣ್ಣಗಾಗಿ ಹೋಗಲಾರಂಭಿಸಿತ್ತು. ಆದರೆ ಅದಾಗಲೆ ಸ್ಕೌಟಿನ ಹುಲಿ ಬೋನು ಹೊಕ್ಕಿಯಾಗಿತ್ತು, ಮಧ್ಯದಲ್ಲಿ ಬಿಡುವಂತಿಲ್ಲ ಅನ್ನುವ ಪೂರ್ವ ಷರತ್ತಿಗೆ ಒಪ್ಪಿರುತ್ತಿದ್ದರಿಂದ ಅವಧಿ ಮಧ್ಯದಲ್ಲಿ ಅದರಿಂದ ಬಿಡುಗಡೆಯ ಭಾಗ್ಯವಂತೂ ನಮಗ್ಯಾರಿಗೂ ನಸೀಬಿರಲಿಲ್ಲ. ಜೊತೆಗೆ ಹಾಗೊಂದು ವೇಳೆ ತಲೆ ತಪ್ಪಿಸಿಕೊಂಡು ತರಬೇತಿ ತರಗತಿಗೆ ಚಕ್ಕರ್ ಹೊಡೆದರೆ ನಮಗೆ ಪಾಠವನ್ನ ಮಾಡಲು ಬರುತ್ತಿದ್ದ ಶೇಖರ್ ಮಾಸ್ಟ್ರ ಕೈಗೆ ಅವರ ಇಂಗ್ಲಿಷ್ ಕ್ಲಾಸಿನಲ್ಲಿ ಸುಲಭವಾಗಿ "ರೆಡ್ ಹ್ಯಾಂಡ್"ಆಗಿ ಸಿಕ್ಕಿಬಿದ್ದು ಉಗ್ರ ಶಿಕ್ಷೆಗೆ ಗುರಿಯಾಗಬೇಕಾದ ಹೆದರಿಕೆಯೂ ಇರುತ್ತಿದ್ದರಿಂದ ಬಾಲ ಮುದುರಿಕೊಂಡು ಅವರ ತರಬೇತಿಯೆಂಬ ವಧಾಸ್ಥಾನಕ್ಕೆ, ಗೊತ್ತಿದ್ದೂ ಸಾಗುವ ಮೂಕ ಪಶುಗಳಂತೆ ತಪ್ಪದೆ ಯಾಂತ್ರಿಕವಾಗಿ ಹಾಜರಾಗುತ್ತಿದ್ದೆವು. ನಮ್ಮ ಶಾಲೆಯಲ್ಲಿ ಭಾರತ ಸೇವಾದಳದ ಶಾಖೆಯೂ ಒಂದಿದ್ದು ಶ್ಯಾಂ ಮಾಸ್ಟ್ರು ಅದನ್ನ ನಡೆಸುತ್ತಿದ್ದರು. ಹಾಸ್ಟೆಲ್ಲಿನಿಂದ ನಾನು ಸ್ಕೌಟ್ಸ್ ಸೇರಿದ್ದರೆ ನನ್ನ ಸಹಪಾಠಿ ಕಲ್ಲುಕುಟ್ಟಿ ಸುರೇಶ ಹಾಗೂ ಪದ್ಮನಾಭ ಸೇವಾದಳಕ್ಕೆ ಮಣ್ಣು ಹೊರುತ್ತಿದ್ದರು.



ಎರಡು ಬೆರಳು ಮಡಚಿ ಸ್ಕೌಟ್ ಸಲ್ಯೂಟ್ ಹೊಡೆಯುವುದು, ಮೂರು ಕೋಲುಗಳನ್ನ ಭದ್ರವಾಗಿ ಬಂದೊಬಸ್ತಾಗಿ ಕಟ್ಟಿ ಅದಕ್ಕೆ ಧ್ವಜ ಕಟ್ಟಿ ಬಯಲಲ್ಲಿ ಗೂಟ ನೆಟ್ಟು ದ್ವಜಾರೋಹಣ ನಡೆಸೋದು, ಶಾಲೆಯ ಆವರಣವನ್ನ ಕಸ ಹೆಕ್ಕಿ ಸ್ವಚ್ಛ ಮಾಡೋದು, ಹಲವು ಬಗೆಯ ಗಂಟುಗಳನ್ನ ಕರುಕಟ್ಟುವ ಹಗ್ಗದಲ್ಲಿ ಹಾಕಲು ಕಲಿಯೋದು ಹೀಗೆ ನಮ್ಮ ಎಡೆಬಿಡದ ಚಟುವಟಿಕೆಗಳ ನಡುವೆ ಆಗಾಗ ಆಗುವ ಆಯಾಚಿತ ತಪ್ಪುಗಳಿಗೆ ಶೇಖರ್ ಮಾಸ್ಟ್ರ ಚಾಟಿಯೇಟಿಗೆ ಬೆನ್ನೊಡ್ಡಿಕೊಂಡು ಅದು ಹೇಗೋ ಮೂರು ವರ್ಷದ ಸ್ಕೌಟ್ ತರಬೇತಿಯನ್ನ ಯಶಸ್ವಿಯಾಗಿ ಮುಗಿಸಿ ಗೆದ್ದು ಬಂದ ಧೀರರಲ್ಲಿ ನಾನೂ ಒಬ್ಬ! ಈ ಮೂರು ವರ್ಷದ ತರಬೇತಿಯಲ್ಲಿ ಎರಡು ತಾಲೂಕು ಮಟ್ಟದ ಕ್ಯಾಂಪಿಗೆ ಶಾಲೆಯನ್ನ ಪ್ರತಿನಿಧಿಸಿದ ತಂಡದಲ್ಲಿ ನಾನೂ ಇದ್ದೆ. ಮೊದಲ ಬಾರಿಗೆ ನಮ್ಮ ತಾಲೂಕಿನ ಕೊನೆ ಮೂಲೆ ದುರ್ಗಕ್ಕೆ ಹೋಗಿದ್ದರೆ, ಎರಡನೆ ಸಲ ಉಡುಪಿ-ಹೆಬ್ರಿ ಮಾರ್ಗ ಮಧ್ಯವಿರುವ ಶಿವಪುರದಕ್ಕೆ ಹೋಗಿ ಎರಡೆರಡು ದಿನದ ಕ್ಯಾಂಪ್ ಅನುಭವಿಸಿ ಬಂದಿದ್ದೆವು.


ಜಿಲ್ಲಾ ಮಟ್ಟದ ಕ್ಯಾಂಪ್ ಸುರತ್ಕಲ್'ನಲ್ಲಿ ಏರ್ಪಾಡಾಗಿದ್ದಾಗ ನಾನು ಅದಕ್ಕೆ ಆಯ್ಕೆಯಾಗಿರಲಿಲ್ಲ. ಒಂದು ವೇಳೆ ಆಯ್ಕೆಯಾಗಿದ್ದರೂ ಸಹ ಕ್ಯಾಂಪಿನ ಖರ್ಚು ಐವತ್ತು ರೂಪಾಯಿಯನ್ನ ಹೊಂದಿಸುವುದು ನನ್ನ ಪಾಲಿಗೆ ಬಹುತೇಕ ಅಸಾಧ್ಯವೆ ಆಗಿತ್ತು. ಮತ್ತೆ ಚಿಕ್ಕಮ್ಮನ ಮುಂದೆ ಆ ಹಣಕ್ಕಾಗಿ ಅವರ ಸ್ಟಾಫ್'ರೂಮಿನಲ್ಲಿ ಬೇಡ ಬೇಕಿತ್ತು. ಒಂದು ವೇಳೆ ಬೇಡಿದ್ದರೂ ಹಣ ಸಿಗುವ ಖಚಿತತೆ ನನ್ನ ಮನಸಿಗಿರಲಿಲ್ಲ. ಹೀಗಾಗಿ ಅಂಗೈ ತೋರಿಸಿ ಅವಲಕ್ಷಣವೆನ್ನಿಸಿಕೊಳ್ಳುವ ಪ್ರಯತ್ನಕ್ಕೆ ನಾನು ಕೈಹಾಕುತ್ತಲೂ ಇರಲಿಲ್ಲ. ಸ್ಕೌಟ್ಸ್ ಎನ್'ಸಿಸಿಯ ಹಾಗೆ ಉಚಿತ ಕ್ಯಾಂಪ್'ಗಳನ್ನ ಸಂಘಟಿಸುವುದಿಲ್ಲ. ಅದರಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳು ತಗಲುವ ಖರ್ಚಿನ ವೆಚ್ಚವನ್ನ ಹಂಚಿಕೊಂಡು ಭರಿಸಬೇಕಾಗುತ್ತದೆ. ದುರ್ಗ ಹಾಗೂ ತೆಳ್ಳಾರ್ ನಮ್ಮ ತಾಲೂಕಿನ ಕೊನೆಯ ಗ್ರಾಮಗಳು. ಸರಕಾರಿ ರಾಜರಸ್ತೆ ಎರಡಾಗಿ ಕವಲೊಡೆದು ಅಕ್ಕಪಕ್ಕದ ಅವಳಿ ಗ್ರಾಮಗಳಾದ ದುರ್ಗ ಹಾಗೂ ತೆಳ್ಳಾರಿನಲ್ಲಿ ಕೊನೆಯಾಗಿ ಅಲ್ಲಿಂದ ಮುಂದೆ ಘಟ್ಟದ ಸೆರಗು ಶುರುವಾಗಿ ಅದು ಕುದುರೆಮುಖದ ಹತ್ತಿರವಿರುವ ಮಹಾಮಲೆಯಲ್ಲಿ ಕೊನೆಯಾಗುತ್ತದೆ.

ಆಗೆಲ್ಲ ನಾವು ಎಳೆಯರು ಪ್ರಾಸಬದ್ಧವಾಗಿ ತುಳುವಿನಲ್ಲಿ

" ಮಾಳ ಮಲ್ಲಾರ್
ದುರ್ಗ ತೆಳ್ಳಾರ್/
ದೇವೆರ್ ಮಲ್ಲಾರ್,
ಮಾತ ಕೋಡಿಡ್ಲಾ ಉಳ್ಳಾರ್//

( ಮಾಳ ಮಲ್ಲಾರ್
ದುರ್ಗ ತೆಳ್ಳಾರ್/
ದೇವರು ದೊಡ್ಡವರು,
ಅವರೆಲ್ಲೆಡೆಯೂ ಇರುವವರು//)

ಎಂದು ಕುದುರೆಮುಖ ಶ್ರೇಣಿಯ ಸುತ್ತಮುತ್ತಲ ಮಾಳ, ಮಲ್ಲಾರ್, ದುರ್ಗ, ತೆಳ್ಳಾರ್ ಗ್ರಾಮಗಳ ಹೆಸರುಗಳನ್ನ ಪೋಣಿಸಿ ಅರಚುವ ರೂಢಿಯಿದ್ದವರು. ನಮ್ಮ ಪಾಲಿಗೆ ಅಕ್ಷರಶಃ ಅಂಡಮಾನ್-ನಿಕೋಬಾರ್ ಆಗಿದ್ದ ಅಂತಹ ದುರ್ಗದಲ್ಲಿ ನಮ್ಮ ಮೊತ್ತಮೊದಲ ಸ್ಕೌಟ್ ಕ್ಯಾಂಪ್! ಹೆಚ್ಚೆಂದರೆ ಕಾರ್ಕಳ ಪೇಟೆಯಿಂದ ಅರ್ಧಗಂಟೆ ಬಸ್ಸಿನ ದಾರಿಯಾಗಿದ್ದ ದುರ್ಗಕ್ಕೆ ಹೋಗಿ ಮುಟ್ಟಿದ ನಮ್ಮ ತಂಡ ಬಹಳ ಸುದೀರ್ಘ ಪ್ರಯಾಣ ಮುಗಿಸಿ ಬಂದವರ ಫೋಜು ಕೊಡುತ್ತಾ ದುರ್ಗದಲ್ಲಿ ಇಳಿದೆವು. ಅಲ್ಲಿನ ಸರಕಾರಿ ಶಾಲೆಯಲ್ಲಿ ಒಂದು ಕೋಣೆಯನ್ನ ನಮಗೆ ಮೀಸಲಾಗಿರಿಸಲಾಗಿತ್ತು. ನಮ್ಮ ಹಡಪಗಳನ್ನೆಲ್ಲ ಅಲ್ಲಿ ಹರವಿ ದುರ್ಗ ಶಾಲೆಯ ಬಯಲಿನಲ್ಲಿ ನಾಲ್ಕು ಕಡೆ ಕಬ್ಬಿಣದ ಗೂಟಗಳನ್ನ ನೆಟ್ಟು ನಮ್ಮ ಕಾರ್ಯಕ್ಷೇತ್ರದ ಗಡಿರೇಖೆಗಳನ್ನ ಗುರುತಿಸಿ ಭದ್ರ ಪಡಿಸಿಕೊಂಡೆವು. ಹೋದ ಕೂಡಲೆ ಹೀಗೆ ಕಂಭ ಕಟ್ಟಿ ಏರಿಸಿ ಧ್ವಜಾರೋಹಣ ನಡೆಸುವುದು ನಮ್ಮ ಮೊತ್ತ ಮೊದಲ ಆದ್ಯತೆಯ ಕಾರ್ಯಕ್ರಮವಾಗಿದ್ದರಿಂದ. ನಾವು ಅದರಲ್ಲಿ ಮಗ್ನರಾಗಿದ್ದರೆ ಅವತ್ತು ಮಾತ್ರ ನಮ್ಮಂತೆ ಸ್ಕೌಟ್ ಧಿರಿಸು ದರಿಸಿದ್ದ ಶೇಖರ್ ಮಾಸ್ಟ್ರು ಅವಸರವಸರವಾಗಿ ಅತ್ತಿಂದಿತ್ತ ಠಳಾಯಿಸುತ್ತಾ ಆಗಾಗ ಸಣ್ಣಪುಟ್ಟ ತಪ್ಪಿಗೂ ಎಲ್ಲರ ಮೇಲೂ ಅಭ್ಯಾಸ ಬಲದಿಂದೆಂಬಂತೆ ಚಾಟಿಯಾಡಿಸುತ್ತಾ ಜಬರ್ದಸ್ತ್ ಮಾಡುತ್ತಿದ್ದರು. ಗೈಡ್ ಹುಡುಗಿಯರನ್ನ ಕರೆತಂದಿದ್ದ ಬಾಲವಾಡಿ ಟೀಚರ್ ಕೂಡ ಅವತ್ತು ಬಿಳಿ ಕುಬುಸ-ನೀಲಿ ಸೀರೆಯ ಗೈಡ್ ಸಮವಸ್ತ್ರದಲ್ಲಿದ್ದು ಅವರ ಹುಡುಗಿಯರನ್ನ ಅತ್ತಿಂದಿತ್ತ ಓಡಿಯಾಡಿಸುತ್ತಾ ಇದ್ದರು. ಇವೆಲ್ಲಾ ದೊಂಬರಾಟ ಮುಗಿದ ಮೇಲೆ ನಾವೆಲ್ಲ ಅಲ್ಲಿ ಸೇರಿದ್ದ ಕೆಡೆಟ್'ಗಳು ಅಲ್ಲಿಗೆ ಬಂದಿದ್ದ ಎಲ್ಲಾ ಶಾಲಾ ಗುಂಪಿನ ಸರದಿಯಲ್ಲಿ ದುರ್ಗದ ಒಂದೆ ಒಂದು ರಾಜರಸ್ತೆಯಲ್ಲಿ ಮೆರವಣಿಗೆ ತೆಗೆದೆವು. ನಮ್ಮ ತಂಡಕ್ಕೆ ಏಳನೆ ತರಗತಿಯಲ್ಲಿದ್ದ ಸಂದೀಪ ಪ್ರಭು ಸಾರ್ಜೆಂಟ್ ಆಗಿದ್ದ. ಬಾಲವಾಡಿ ಟೀಚರ್ ಸ್ವತಃ ಬರೆದು ರಾಗ ಹಾಕಿದ್ದ

"ಭಾರತ ಸ್ಕೌಟರು ಗೈಡರು ನಾವು....
ಕ್ಯಾಂಪಿಗೆ ಬಂದಿಹೆವು.....
ಶ್ರೀ ದುರ್ಗಕೆ ಬಂದಿಹೆವು......
ಸಂತಸ ನೀಡುತ ಶಾಂತಿಯ ಬೀರುತ ಹರುಷದಿ ನಡೆಯುವೆವು......
ಲಾಲ ಲಲ್ ಲಲ್ ಲಲ್ ಲಲ್ ಲಾ.
ಲಲ್ಲಲ ಲಲ್ಲಲ ಲಲ್ಲಲ ಲಲ್ಲಲ ಲಾ"


ಎನ್ನುವ ಸಾಹಿತ್ಯವಿದ್ದ ಗೀತೆಯನ್ನ ಆ ಗೀತೆಯ ನಾಲ್ಕನೆ ಸಾಲಿಗೆ ಚೂರೂ ಸಂಬಂಧವಿಲ್ಲದಂತೆ ತೋಚಿದಂತೆ ಕಿರುಚುತ್ತಾ, ಅದನ್ನೆ ಸುಶ್ರಾವ್ಯ ಹಾಡು ಎಂದು ಭ್ರಮಿಸಿ ಬೀಗುತ್ತಾ "ಜಿಲ್ಲಾ ಪರಿಷತ್ ಹಿರಿಯ ಪ್ರಾಥಮಿಕ ಶಾಲೆ, ಕಾಬೆಟ್ಟು. ಕಾರ್ಕಳ-೫೭೪೧೦೪. ದ ಕ" ಎನ್ನುವ ನಮ್ಮ ಶಾಲೆಯ ಹೆಸರಿದ್ದ ಫಲಕವನ್ನ ಅಗತ್ಯಕ್ಕಿಂತ ಚೂರು ಹೆಚ್ಚೆ ಹೆಮ್ಮೆಯಿಂದ ಹೊತ್ತು ಅಲ್ಲಿನ ದೇವಸ್ಥಾನದಿಂದ ಶಾಲೆಯವರೆಗೆ ಒಂದು ಕಿಲೋಮೀಟರ್ ಜಾಥಾ ತೆಗೆದೆ ಬಿಟ್ಟೆವು! ಮಲೆನಾಡಿನ ಸೆರಗಿನಲ್ಲಿ ಶಾಂತವಾಗಿ ಮಲಗಿದ್ದ ದುರ್ಗದ ಮೂಲನಿವಾಸಿಗಳ ಸಹಿತ ಸುತ್ತಲೂ ಗಂವ್ವೆನಿಸುವಂತೆ ಆವರಿಸಿದ್ದ ದಟ್ಟಕಾಡಿನ ನಡುವೆ ನೆಮ್ಮದಿಯಾಗಿದ್ದ ಪ್ರಾಣಿ ಪಕ್ಷಿಗಳೆಲ್ಲ ನಮ್ಮ ಈ ರಣ ರಾಗದ ಘೋಷಕ್ಕೆ ಬೆದರಿ ಬೆಚ್ಚಿ ಕಂಗಾಲಾಗಿದ್ದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ! ಬಾಲವಾಡಿ ಟೀಚರ್ ಸಂಯೋಜಿಸಿದ್ದ ಸುಂದರ ಗೀತೆಯೊಂದನ್ನ ನಿರ್ದಾಕ್ಷಿಣ್ಯವಾಗಿ ನಮ್ಮ ಗಂಟಲಲ್ಲಿ ಅರಚಿ ಕೊಂದು, ಅದರ ಶ್ರಾದ್ಧವನ್ನ ಚೂರೂ ಮುಜಗರ ಪಟ್ಟುಕೊಳ್ಳದೆ ನಮ್ಮ ತಂಡ  ಹೀಗೆ ಭೀಕರವಾಗಿ ಮಾಡಿ ಬಿಸಾಡಿತ್ತು.


ಅಷ್ಟಿಷ್ಟು ಚನ್ನಾಗಿ ಹಾಡಲು ಬರುತ್ತಿದ್ದ ಬಾಲವಾಡಿ ಟೀಚರ್ ಸಣ್ಣಪುಟ್ತ ಹಾಡುಗಳನ್ನ ತಾವೆ ಸ್ವತಃ ಬರೆದು ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಮ್ಮಿಂದ ಹಾಡಿಸುವುದೂ ಇತ್ತು. ನಮಗಿಂತ ಎರಡು ವರ್ಷಕ್ಕೆ ದೊಡ್ದವಳಾಗಿದ್ದ ರಾಧಿಕಾ ಶಣೈಳಲ್ಲಿದ್ದ ಹಾಡುವ ಪ್ರತಿಭೆಯನ್ನ ಗುರುತಿಸಿ ಆಗಾಗ ಶಾಲೆಯ ಸಭೆ-ಸಮಾರಂಭಗಳಲ್ಲಿ ಅವಳಿಂದ ಹಾಡಿಸಿ ಅವಳನ್ನ ಕಾಬೆಟ್ಟು ಶಾಲೆಯ ಮಟ್ಟಿಗೆ "ಗಾನ ಕೋಗಿಲೆ" ಮಾಡಿದ್ದೆ ಬಹುಷಃ ಈ ಬಾಲವಾಡಿ ಟೀಚರ್. ಅವರು ಹಾಡಲು ಹೇಳಿದಾಗಲೆಲ್ಲ ತನ್ನೆಲ್ಲ ಬಿಂಕ-ಬಿನ್ನಾಣ ಪ್ರದರ್ಶಿಸುತ್ತಾ ವಯ್ಯಾರದಿಂದ ವೇದಿಕೆಯೇರುತ್ತಿದ್ದ ಈ ಲೋಕಲ್ ಲತಾ ಮಂಗೇಷ್ಕರ್ ಯಾವುದಾದರೊಂದು ಹಾಡನ್ನ ಹಾಡಿಯೆ ಹಾಡುತ್ತಿದ್ದಳು. ಸಾಮಾನ್ಯವಾಗಿ ಮತ್ತೆ ಮತ್ತೆ ಅವಳ ಕೋಗಿಲೆ ಕಂಠದಿಂದ ನಮಗೆ ಕೇಳಲು ಸಿಗುತ್ತಿದ್ದುದು "ಪೂಜಿಸಲೆಂದೆ ಹೂಗಳ ತಂದೆ!" ಈ ಹಾಡನ್ನೆ ಅದ್ಯಾಕೆ ಹಾಡುತ್ತಿದ್ದಳೋ? ಆ ದೇವರಿಗೆ ಗೊತ್ತು!. ಆದರೆ ಅವಳು "ತೆರೆಯೋ ಬಾಗಿಲನು ರಾಮಾಆಆಆಆ...." ಅನ್ನುವ ಸಾಲಿಗೆ ಮುಟ್ಟುವಾಗ ತಪ್ಪದೆ ನಮ್ಮ ವರದರಾಜ ನಾಯಕ ಮಾತ್ರ ಅದ್ಯಾಕೋ ವಿಪರೀತ ನಾಚಿ ಕೆಂಪುಕೆಂಪಾಗುತ್ತಿದ್ದ! ಅವನ ಈ ನಾಚಿಕೆಯ ರಹಸ್ಯ ಆಗೆಲ್ಲ ನನಗೆ ಒಂದು ಬಗೆಹರಿಯದ ಒಗಟಾಗಿಯೆ ಇತ್ತು  ನಿಜವಾದ ಲತಾ ಮಂಗೇಷ್ಕರ್'ರನ್ನ ನೇರವಾಗಿ ನೋಡುವ ಕೇಳುವ ಭಾಗ್ಯವಿಲ್ಲದ ನಾವು ಇವಳ ಹಾಡುಗಾರಿಕೆಯನ್ನೆ ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಾ ತಲೆದೂಗುತ್ತಿದ್ದೆವು.



ಇನ್ನು ಆರನೆ ತರಗತಿಯಲ್ಲಿದ್ದಾಗ ಶಿವಪುರದದಲ್ಲಿ ನಡೆದಿದ್ದ ಮತ್ತೊಂದು ತಾಲೂಕು ಮಟ್ಟದ ಕ್ಯಾಂಪಿಗೆ ಹೋಗಿದ್ದ ನೆನಪು ಸದಾ ಹಸಿರು. ಅಲ್ಲಿ ನಾವು ಶೀಲ್ಡಿನ ವಿಚಾರದಲ್ಲಿ ನಮ್ಮ ಅಜನ್ಮ ಶತ್ರುಗಳಾಗಿದ್ದ "ಪೆರ್ವಾಜೆ ಶಾಲೆ"ಯವರನ್ನ ಹಿಮ್ಮೆಟ್ಟಿಸಿ ಧೀರೋದತ್ತವಾಗಿ ಸರ್ವತೋಮುಖ ಪ್ರದರ್ಶನದ ಪ್ರಶಸ್ತಿಯನ್ನ ಅಲ್ಲಿಂದ ಹೊತ್ತು ತಂದಿದ್ದೆವು ಅಂತ ನೆನಪು. ಅಲ್ಲಿನ ಗೋಡಂಬಿ  ಕಾರ್ಖಾನೆಯ ಮಾಲಕರೊಬ್ಬರು ನಮ್ಮ ಊಟೋಪಚಾರಗಳ ಖರ್ಚಿನ ಭಾರವನ್ನ ಹೊತ್ತುಕೊಂಡಿದ್ದರು. ಅವರ ಕಾರ್ಖಾನೆಯ ಆವರಣದಲ್ಲಿಯೆ ನಮಗೆ ಸುಗ್ರಾಸ ಭೋಜನ ಬಡಿಸಲಾಗಿತ್ತು. ಅಲ್ಲಿಗೂ ಹೋಗಿ ಮೆರವಣಿಯ ಹೆಸರಿನಲ್ಲಿ ಗದ್ದಲವೆಬ್ಬಿಸಿದ್ದು, ಹಿರಿಯಡ್ಕದವರೆಗೆ ಒಂದು ಬಸ್ಸಿನಲ್ಲಿ ಹೋಗಿ ಮರಳಿ ಅಲ್ಲಿಂದ ಇನ್ನೊಂದು ಬಸ್ಸು ಹಿಡಿದು ಶಿವಪುರ ಮುಟ್ಟಿದ್ದು, ಹಿಂದಿರುಗಿ ಬರುವಾಗಲೂ ಹೀಗೆಯೆ ಎರಡೆರಡು ಬಸ್ಸುಗಳನ್ನ ಬದಲಿಸಿ ಬಂದದ್ದು ಕಾರ್ಕಳವೆಂಬ ಕಿರು ಬಾವಿಯ ಕಪ್ಪೆಗಳಾಗಿದ್ದ ನಮಗೆಲ್ಲ ಒಂದು ತರದಲ್ಲಿ ಎಲ್ಲೋ ವಿದೇಶಕ್ಕೆ ಹೋಗಿ ಬಂದ ಹಾಗಾಗಿತ್ತು. ಅಲ್ಲಿಯೂ ನಾವು ಬಾಲವಾಡಿ ಟೀಚರ್ ಹಿಂದೆ ಹೇಳಿಕೊಟ್ಟಿದ್ದ ಹಾಡನ್ನೆ "...ಶಿವಪುರಕೆ ಬಂದಿಹೆವು!" ಅಂತ ಚೂರು ಬದಲಾಯಿಸಿಕೊಂಡು ಹಾಡಿದ್ದು ನೆನಪು.


ಶಾಲೆಯ ನಿತ್ಯದ ದಾರಿಯಲ್ಲಿ ನಾವು ಶಣೈ ಮಾಮನ ಹಿತ್ತಲು-ಗದ್ದೆಗೆ ಹೊಕ್ಕುವ ಮೊದಲು ಪೊಲೀಸ್ ವಸತಿಗೃಹಗಳ ಹಿಂದಿದ್ದ ವಿಶಾಲ ಬಯಲನ್ನ ಹಾಯ್ದು ಬರಬೇಕಿತ್ತು. ಬಹುಷಃ ಆ ಖಾಲಿ ಬಯಲು ಈಗಲೂ ಸಹ ಖಾಲಿ ಬಯಲಾಗಿಯೆ ಉಳಿದುಕೊಂಡಿರುವುದು ಸಂಶಯ. ಅಲ್ಲಿಯೂ ನಾಯಿಕೊಡೆಗಳಂತೆ ಮನೆಗಳು ಎದ್ದಿರಬಹುದು. ಇಂಚು ನೆಲ ಖಾಲಿಯಿದ್ದರೂ ಅದಕ್ಕೆ ಹೊಂಚಹಾಕಿ ಕಬಳಿಸುವ ಆಸೆಬುರುಕ ಮಂದಿ ಇಂದು ಅಲ್ಲಿಗೂ ಒಂದು ಬೇಲಿ ಸುತ್ತಿರಬಹುದು. ಆಗ ಅಲ್ಲಿನ ಮಳೆನೀರು ಹರಿಯುವ ಕೆಸರ ಅಗ್ಗಿನಲ್ಲಿ ಅಲ್ಲೊಂದಷ್ಟು ಜೌಗಿನ ಪ್ರದೇಶವಿದ್ದು ಆ ಜೌಗಿನಲ್ಲಿ ಕೀಟ ಭಕ್ಷಕವಾಗಿದ್ದ ವಿಚಿತ್ರ ಸಸ್ಯವೊಂದಿರುವುದು ನನ್ನ ಗಮನಕ್ಕೆ ಬಂತು. ಮೊದಲಿಗೆ ನನ್ನ ಜೊತೆಗಾರರಿಗೆ ಅದನ್ನ ತೋರಿಸಿದ ನಾನು ಅನಂತರ ನಮಗೆ ವಿಜ್ಞಾನ ಬೋಧಿಸುತ್ತಿದ್ದ ಬಾಲವಾಡಿ ಟೀಚರ್ ಗಮನಕ್ಕೂ ತಂದೆ. ಅವರು ನನ್ನ ಸೂಕ್ಷ್ಮ ದೃಷ್ಠಿಯನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದೆ ಅಲ್ಲದೆ ಮುಂದೆಯೂ ಅಂತಹ ಸದ್ಗುಣಗಳನ್ನ ಬೆಳೆಸಿಕೊಳ್ಳಲಿಕ್ಕೆ ಒತ್ತಾಸೆಯಾದರು.


ಅಳಿಲೋ-ಇಲಿಯೋ ಅದೇನೋ ಬಿದ್ದು ಅಲ್ಲೆ ಸತ್ತು ಕೊಳೆತು ಅಡ್ಡ ವಾಸನೆ ಬರುತ್ತಿದ್ದ ನಮ್ಮ ಶಾಲೆಯ ಬಾವಿಯನ್ನ ಅವರೆ ಹೇಳಿದ್ದ ಪಾಠದ ಅನುಸಾರ ಚಾಚೂ ತಪ್ಪದೆ ಅನುಸರಿಸಿ ಕಾರ್ಕಳದ "ಟಿಎಂಏಪೈ ಮೆಮೋರಿಯಲ್ ಮಣಿಪಾಲ ಆಸ್ಪತ್ರೆ"ಯ ಪೆಥಾಲಜಿ ಪ್ರಯೋಗಶಾಲೆಯಲ್ಲಿ ಕಾಡಿಬೇಡಿ "ಪೊಟಾಷಿಯಂ ಪರಮಾಂಗನೇಟ್" ಸಂಗ್ರಹಿಸಿ ತಂದು ಅದನ್ನ ಬಾವಿ ನೀರಿಗೆ ಹಾಕಿ ನೀರನ್ನ ಮತ್ತೆ ಶುದ್ಧಗೊಳಿಸಿ ಅವರಿಂದ ಭೇಷ್ ಅನ್ನಿಸಿಕೊಂಡಿದ್ದೆ. ಕಾರ್ಕಳದ ಸರಕಾರಿ ಆಸ್ಪತ್ರೆಯಲ್ಲಿ ಕಾಂಪೌಂಡರಾಗಿದ್ದ ಹಾಜಿ ಬ್ಯಾರಿಯವರನ್ನ ಮಕ್ಕಳೊಂದಿಗೆ ಮುಖಾಮುಖಿಗೆ ಆಹ್ವಾನಿಸಿದ್ದಾಗಲೂ ಅತಿ ಹೆಚ್ಚು ಆರೋಗ್ಯ ಸಂಬಂಧಿ ತಾರ್ಕಿಕ ಪ್ರಶ್ನೆಗಳನ್ನ ಅವರಿಗೆಸೆದು ನಮ್ಮ ವಿಜ್ಞಾನದ ಅಧ್ಯಾಪಿಕೆ ಯಾರೆಂದು ಹುಬ್ಬೇರಿಸಿದ ಹಾಜಿ ಬ್ಯಾರಿಗಳಿಂದ ಕೇಳಿಸಿಕೊಂಡು ಬಾಲವಾಡಿ ಟೀಚರ್'ರ ಮುಖ ಬೆಳಗುವಂತೆ ಮಾಡಿದ್ದೆ. ಬಾಲವಾಡಿ ಟೀಚರ್ ಹಾಡುಗಾರಿಕೆಯಿಂದ ಸ್ಪೂರ್ತಿ ಪಡೆದ ನಾನು ನನ್ನ ಗಾರ್ದಭ ಕಂಠಕ್ಕೆ ಅಷ್ಟಿಷ್ಟು ಸಾಣೆ ಹಿಡಿದು ಶಾಲೆಯ ಸಮಾರಂಭಗಳಲ್ಲಿ ಹಾಡಲು ಪ್ರಯತ್ನಿಸಿದೆ. ಅದನ್ನ ಕೇಳಿದವರ ಕಿವಿಯ ಆಯುರಾರೋಗ್ಯದ ಬಗ್ಗೆ ಮಾತ್ರ ನನಗೆ ಯಾವುದೆ ಖಾತ್ರಿಯಿರಲಿಲ್ಲ ಅನ್ನೋದು ಬೇರೆ ಮಾತು.



ನಮಗೆ ಒಂದು ವರ್ಷ ತರಗತಿ ಅಧ್ಯಾಪಿಕೆಯೂ ಆಗಿದ್ದ ಬಾಲವಾಡಿ ಟೀಚರ್ ನಮ್ಮ ತರಗತಿಯ ಮಕ್ಕಳನ್ನೆಲ್ಲ ಊರಿನ ಇನ್ನೊಂದು ಭಾಗದಲ್ಲಿದ್ದ ಗೊಮ್ಮಟ ಬೆಟ್ಟ, ಚತುರ್ಮುಖ ಬಸದಿ ಹಾಗೂ ರಾಮಸಮುದ್ರಕ್ಕೆ ಒಂದು ದಿನದ ವಿಹಾರಕ್ಕೆ ಕರೆದುಕೊಂಡು ಹೋಗಿದ್ದೊಂದು ಸವಿ ನೆನಪು. ಗೊಮ್ಮಟ ಬೆಟ್ಟದ ಮೇಲಿನಿಂದ ಕಾಣ ಸಿಗುವ ದೂರದ ನೆಕ್ರೆ ಕಲ್ಲಿನ ಮನೋಹರ ನೋಟ, ಇನ್ನೊಂದೆಡೆ ಕಾಣುವ ಪಶ್ಚಿಮ ಘಟ್ಟ ಶ್ರೇಣಿಯ ಮಹಾಮಲೆ ಬೆಟ್ಟ, ಮೈಚಾಚಿಕೊಂಡು ಮಲಗಿರುವ ಪರ್ಪಲ ಗುಡ್ಡೆಯ ಉನ್ನತ ದರ್ಶನ, ಚತುರ್ಮುಖ ಬಸದಿಯ ಒಳಗಡೆ ನೇತು ಹಾಕಿರುವ ಕಿರು ಕನ್ನಡಿಯಲ್ಲಿ ಪೂರ್ತ ಹುದುಗಿ ಪ್ರತಿಫಲಿಸುವ ಅಷ್ಟು ದೊಡ್ಡ ಗೊಮ್ಮಟ ಮೂರ್ತಿ ಇವೆಲ್ಲ ನನ್ನ ಬಾಲ ಮನಸನ್ನ ಮಂತ್ರ ಮುಗ್ಧವಾಗಿಸಿ  ಅದಾದ ನಂತರ ನನಗಲ್ಲಿಗೆ ಪದೆಪದೆ ಹೋಗುವ ತೆವಲು ಕಾಡ ತೊಡಗಿತು. ಏಳನೆ ತರಗತಿಯ ಪಬ್ಲಿಕ್ ಪರೀಕ್ಷೆಯ ತಯಾರಿಯ ರಜೆಯಲ್ಲಿ ಓದುವ ನೆಪ ಹೇಳಿ ಹಾಸ್ಟೆಲ್ಲಿನಿಂದ ಆಲ್ಲಿಗೆ ಒಂದು ತಿಂಗಳು ನಿತ್ಯ ಪಾದಯಾತ್ರೆ ಮಾಡಿದ್ದೇನೆ. ಅದೇನೋ ಬಿಡಲಾಗದ ಚಟದಂತೆ ದಿನ ನಾಲ್ಕು ಕಿಲೋಮೀಟರ್ ನಡೆದು ಹೋಗಿ, ಅಷ್ಟೆ ಮರಳಿ ನಡೆದು ಬರುವಷ್ಟು ಅದರ ಸೆಳೆತ ಹತ್ತಿಕೊಂಡಿತ್ತು. ರಾಮ ಸಮುದ್ರದ ನಿಂತ ನೀರನ್ನ ಬೆಟ್ಟದ ಮೇಲಿಂದಲೆ ದಿಟ್ಟಿಸಿ ನೋಡುತ್ತಾ ಹಲವಾರು ಬಾರಿ ಮೈ ಮರೆತಿದ್ದೇನೆ. ಹಾಗೆ ನೋಡಿದರೆ ಅಲ್ಲಿ ಕೂತು ಓದಿದ್ದಕ್ಕಿಂತ ಹೀಗೆ ಹಸಿರ ಸಿರಿಯ ಪ್ರಾಕೃತಿಕ ಸೌಂದರ್ಯವನ್ನ ಮರುಳನಂತೆ ನೋಡುತ್ತಾ ಆಸ್ವಾದಿಸಿದ್ದೆ ಜಾಸ್ತಿ.


ಕಡೆಯ ವರ್ಷ ಶಾಲೆಯಲ್ಲಿ ನಮಗೆ ಕೊಡಲಾಗಿದ್ದ "ವಿದಾಯ ಕೂಟ" ( ಸೆಂಡಾಫ್ ಪಾರ್ಟಿ)ದಲ್ಲಿ ನಾನು ಬಾಲವಾಡಿ ಟೀಚರ್ ಹಾಡುಗಾರಿಕೆಯಿಂದಲೆ ಪ್ರೇರಣೆ ಪಡೆದು ಬಹಳ ಸಿನಿಮೀಯವಾಗಿ ಆಗ ಜನಪ್ರಿಯವಾಗಿದ್ದ "ಪ್ರೀತಿ ವಾತ್ಸಲ್ಯ" ಸಿನೆಮಾದಲ್ಲಿ ಅದರ ನಾಯಕ ಪ್ರಭಾಕರ್ ಹಾಡಿದಂತೆ ನಟಿಸಿದ್ದ "ಸ್ನೇಹಿತರೆ ನಿಮಗೆ ಸ್ವಾಗತ" ಎನ್ನುವ ವಿದಾಯ ಗೀತೆಯನ್ನ ಹಾಡಿದ್ದೆ. ಅವರ ಬಾಲವಾಡಿಯಿದ್ದ ಕೋಣೆಯಲ್ಲಿಯೆ ನಮಗೆ ವಿದಾಯ ಕೂಟವನ್ನ ಕೊಡಲಾಗಿತ್ತು. ವಾಸ್ತವವಾಗಿ ಸೆಂಡಾಫ್ ಪಡೆಯುತ್ತಿರುವ ವಿದ್ಯಾರ್ಥಿಗಳ ಪರವಾಗಿ ಮಾತನಾಡಬೇಕಿದ್ದ ನಾಲ್ವರಲ್ಲಿ ನಾನೂ ಒಬ್ಬನಾಗಿದ್ದೆ. ಆದರೆ ಅವರೆಲ್ಲ ಹೇಳಿದ್ದನ್ನೆ ಹೇಳಿ ಬೋರು ಹೊಡೆಸುತ್ತಾರೆ ಎಂದು ಅಂದಾಜಿಸಿ ಮೊದಲೆ ಹಾಡು ಕಂಠಪಾಠ ಮಾಡಿಕೊಂಡು ಬಂದಿದ್ದೆ. ಅಂದುಕೊಂಡಂತೆ ಮೊದಲು ಮಾತನಾಡಿದ ಮೂವರು ಮೂರ್ಖರು ಶಾಲೆಯನ್ನ, ಎಲ್ಲಾ ಮಾಸ್ಟ್ರು-ಟೀಚರ್'ಗಳನ್ನ ಸ್ವತಃ ಅವರಿಗೇನೆ ರೇಜಿಗೆಯಾಗುವಂತೆ ಅವವೆ ಕ್ಲೀಷೆಯ ಮಾತುಗಳಿಂದ ಹೊಗಳಿ ಬೋರು ಹೊಡೆಸಿದರು. ನಾನೂ ಆ ಸಾಲಿಗೆ ಇನ್ನಷ್ಟು ಬಡಾಯಿ ಸೇರಿಸಿ ಬೋರು ಹೊಡೆಸುತ್ತೇನೆಂದು ಅಂದುಕೊಳ್ಳುತ್ತಾ ಇನ್ನೊಂದು ಹತ್ತು ನಿಮಿಷ ಆಕಳಿಸಲು ಸಕಲ ಸಿದ್ಧತೆಗಳನ್ನ ಮಾಡಿಕೊಂಡು ಕಾಯುತ್ತಿದ್ದ ಪ್ರೇಕ್ಷಕ ಪ್ರಭುಗಳನ್ನ ಹಾಗೂ ಅಧ್ಯಾಪಕ ವೃಂದವನ್ನ ಚಕಿತಗೊಳಿಸುವಂತೆ ಮೈಕು ಕೈಗೆ ಸಿಕ್ಕಿದ್ದೆ ನಾನು ಹಾಡ ತೊಡಗಿದೆ. ತಕ್ಕ ಮಟ್ಟಿಗೆ ಚನ್ನಾಗಿಯೆ ಹಾಡುತ್ತಿದ್ದವ ಹಾಡಿನ ಕೊನೆಕೊನೆ ಮುಟ್ಟುತ್ತಲೆ ಭಾವುಕನಾಗಿ ಗದ್ಗದಿತನಾದೆ, ಕೊನೆಯ ಅದೆಷ್ಟೆ ಸಾಲನ್ನ ಬಯಸಿದರೂ ಹಾಡಲಾಗಲೆ ಇಲ್ಲ. ನನ್ನ ಗಂಟಲು ಕಟ್ಟಿಕೊಂಡಿತು. ಕಣ್ಣು ತುಂಬಿ ತೇವವಾಗಿತ್ತು. ಅಲ್ಲಿ ಸೇರಿದ್ದ ನನ್ನ ಸಹಪಾಠಿಗಳ ಕಣ್ಣುಗಳನ್ನೂ ನಾನು ಈ ಮೂಲಕ ತೇವಗೊಳಿಸಿದ್ದೆ. ನಮ್ಮ ನೆಚ್ಚಿನ ಟೀಚರ್ ನಮ್ಮೆಲ್ಲರ ನೆನಪುಗಳಲ್ಲಿ ಸದಾ ಹೀಗೆ ಹಸಿರಾಗಿಯೆ ಇದ್ದಾರೆ ಅಂದುಕೊಳ್ಳುತ್ತೇನೆ.




( ಇನ್ನೂ ಇದೆ.)

No comments: