12 March 2013

ಕಣ್ಣ ಕಾಲುವೆಯ ಹಾದಿಯಲ್ಲಿ ನಿರೀಕ್ಷೆಯ ಒಂಟಿ ದೋಣಿ.....





ನಿನ್ನ ಶ್ವಾಸದ ಆವರ್ತಗಳಲ್ಲಿ ಸೇರಿ
ನಿನ್ನೊಳಗಿಳಿದು ಅಲ್ಲೆ ನೆಲೆಯಾಗುವ.....
ಒಂದೆ ಒಂದು ಉಸಿರ ಉಛ್ವಾಸವಾದರೂ ಸಾಕಿತ್ತು ನಾನು
ಬಾಳು ಸಾರ್ಥಕವಾಗುತಿತ್ತು ಆಗಲಾದರೂ,
ಮೊದಲ ಮಧುರ ತಪ್ಪು ಒಲವು
ಗುಣವಾಗದ ಖಾಯಲೆ....
ನಿನ್ನ ನೆನಪಲ್ಲೆ ನೆನಪುಗಳನ್ನ ಕನವರಿಸುತ್ತ ನಾ ಹೀಗೆ ನಿತ್ಯ ಸಾಯಲೆ?/
ಬಿಡಿಸಿ ಪೋಣಿಸಿದ ಮಲ್ಲಿಗೆಯ ಮಾಲೆಯ ನಡುವೆ
ಒಂದೆ ಒಂದು ಅರಿಶಿಣದ ಸುಮ ಸೇರಿದ ಹಾಗೆ....
ಸುಗಂಧ ನನ್ನ ಬಾಳು ನಿನ್ನ ಕಿರು ಭೇಟಿಯಿಂದ,
ಗಲಿಬಿಲಿಗೊಂಡ ಮನ ಸಣ್ಣಗೆ ಕಂಪಿಸಿ
ಕನಸ ಕಿವಿಯಲ್ಲಿ ಉಸಿರು ಸೋಕುವಷ್ಟು ಸನಿಹ ತಾಕಿ....
ಮೆಲ್ಲಗೆ ಉಸುರಿದ್ದು "ಒಲವೆ ನೀನೆ ನನ್ನ ಉಸಿರು!"
ಎನ್ನುವ ಮೆಲು ನುಡಿಯನ್ನ ಮಾತ್ರ//


ಬತ್ತಲೆ ಪಾದಗಳಲ್ಲಿ ಕತ್ತಲೆ ಹೊತ್ತಲ್ಲಿ
ಮನ ಹೊಕ್ಕ ಸುಮದಂತಹ ಪುಟ್ಟಪುಟ್ಟ ಸ್ವಪ್ನಗಳು....
ಒಲವಿಗೆ ಮೋಹಗೊಂಡು ಅಲ್ಲೆ ಉಳಿದುಹೋದವು,
ಥರೇವಾರಿ ಕಣ್ಣುಗಳು ಆ ಜಂಗುಳಿಯಲ್ಲಿದ್ದರು
ನನಗೆ ನಿನ್ನದರಿಂದ ಹೊಮ್ಮುತ್ತಿದ್ದ ಕಾಂತಿಯ ಸೆಳೆತದ ನೆನಪಿದೆ.....
ನಿನ್ನ ನೋಟಕ್ಕೆ ಅದರದ್ದೆ ಆದ ಒನಪಿದೆ/
ಬರಿಯ ವೀಕ್ಷಕನಾಗುಳಿದೆ
ಅದ್ಭುತ ಕಲೆಯೊಂದನ್ನ ಕಂಡು ಮೂಕನಾದ ಪ್ರೇಕ್ಷಕನಾಗುಳಿದೆ....
ನಿನ್ನೊಳಗೆ ನಾ ಅದೆಂದೋ ಸಿಗಲಾರದಂತೆ ಕಳೆದು ಹೋದೆ,
ಅಚಾನಕ್ಕಾಗಿ ಅದೆಲ್ಲೋ ಕಂಡು
ನಿನ್ನ ಸ್ವತ್ತೊಂದನ್ನ ನನಗೆ ಜತನವಾಗಿರಿಸಲು ಕೊಟ್ಟು.....
ಕೊಟ್ಟಲ್ಲೆ ಅದನ್ನ ಮರೆತು ಬಿಟ್ಟು
ಎಲ್ಲಿ ಮರೆಗೆ ಸರಿದು ಹೋದೆ?//


ಎಲ್ಲರ ಆರಾಧ್ಯ ದೇವರಲ್ಲಿ ನನ್ನ ವಾದ ಯಾವತ್ತಿಗೂ ಇಷ್ಟೆ
ಚೂರೂ ನಂಬಿಕೆಯಿಲ್ಲ ನಿನ್ನ ಮೇಲೆ....
ಭಕ್ತಿ ತುಸುವೂ ಇಲ್ಲ
ನೀನಿದ್ದದ್ದೆ ಒಂದುವೇಳೆ ಹೌದಾಗಿದ್ದರೆ....
ಮೌನ ಏಕಾಂತದಲ್ಲಿ ಹೀಗೆ ನರಳ ಬೇಕಿರಲಿಲ್ಲ,
ಒಂದು ಇರುಳೇನು?
ನನ್ನ ಬಾಳೆ ಜಾಗರಣೆಗೆ ಮೀಸಲಾಗಿರುವಾಗ....
ನಿನ್ನ ನಾಮ ಜಪವಲ್ಲದೆ ಇನ್ಯಾವ ಹಾದಿಯಿದೆ ಇದನ್ನ ಭರಿಸಲು?/
ಕತ್ತಲ ಗೌಜಿಯಲ್ಲಿ ಯಾವಾಗಲೂ ಬೆಳಕು ಅನಾಥ
ಕನಸಿಗಿಲ್ಲದೆ ದೀಪದ ಹಂಗು....
ಕಪ್ಪು ಕೂಡ ಅದರ ಅಂತರಂಗದ ಆಪ್ತ ರಂಗು,
ಕನ್ನಡಿಯಲ್ಲಿ ಕರಗುವ ಕನಸಿನ ಗಂಟುಗಳೆಲ್ಲ
ಕತ್ತಲಲ್ಲಿ ಕನವರಿಸಿದ
ಬರಿಯ ಸೊರಗಿದ ಸ್ವಪ್ನಗಳು//


ನಿರೀಕ್ಷಣೆ ಕೊಠಡಿಯಲ್ಲಿ ನಿರಂತರ ಕಾದು ಕುಳಿತುಕೊಳ್ಳುವ
ಪಣ ತೊಟ್ಟ ಮನಸಿಗೆ....
ಒಂಟಿತನ ಬೇಸರವಲ್ಲ,
ಬೆಳಕಿನ ಚಿಪ್ಪೊಳಗೆ ಅಡಗಿ ಕುಳಿತ
ಕತ್ತಲ ಪಸೆಗೆ ಮುತ್ತಾಗಿ ಜಗವ ಮುತ್ತಿಡುವ ಅದಮ್ಯ ಬಯಕೆ/
ತಣ್ಣನೆ ಗಾಳಿಗೆ ಇರುಳಿನಲ್ಲೂ
ತತ್ವಾರವಾಗುವ ಸೆಖೆಯ ಬೇಸಿಗೆಯಲ್ಲಿ....
ಕನಸುಗಳಷ್ಟೆ ತುಸು ತಂಪಿನ ಆಸರೆ,
ಕಠಿನ ಹಾದಿಯ ಬಾಳನ್ನ ಕೊಂಚ
ಸಹನೀಯವಾಗಿಸುವ ಕನಸುಗಳು....
ಆಶೆಯ ಕ್ಷೀಣ ಕಿರಣಗಳು//

No comments: