02 March 2013

ತುಳುಗಾದೆ-೩೨





"ಪಿತ್ತಲ್ದ ಪಜಿರ್ ಮರ್ದತ್, ಜೋಕುಲೆ ಪಾತೆರ ನಂಬಿಗೆ ಅತ್"


{ ಸಾಮಾನ್ಯವಾಗಿ ತುಳುನಾಡಿನ ಮನೆಗಳಲ್ಲಿ ತಕ್ಕಮಟ್ಟಿನ ವಿಸ್ತಾರದ ಹಿತ್ತಲು ಇದ್ದೆ ಇರುತ್ತಿತ್ತು. ಅಲ್ಲಿ ಬಸಳೆಯಿಂದ ಹಿಡಿದು ತೊಂಡೆ, ಅವರೆ, ನುಗ್ಗೆಕಾಯಿ ಸಹಿತ ಅನೇಕ ತರಕಾರಿಗಳು. ಬೇವು, ಹುಣಸೆ, ನಲ್ಲಿ, ಲಕ್ಕಿ, ದಾಸವಾಳ, ಲೋಳೆಸರ, ಸಾಂಬರ್ ಬಳ್ಳಿ ಸೊಪ್ಪು, ಒಂದೆಲಗ, ಕಾಳುಮೆಣಸು ತರಹದ ಅನೇಕ ಸಸ್ಯ ಸಂಪತ್ತಿರುತ್ತಿತ್ತು. ಇವುಗಳಲ್ಲಿ ಕೆಲವನ್ನ ಅಸ್ಥೆಯಿಂದ ಬೆಳೆಸಿರುತ್ತಿದ್ದರೆ ಇನ್ನು ಕೆಲವು ತನ್ನಷ್ಟಕ್ಕೆ ತಾವೆ ಯಾವುದೆ ಮುತುವರ್ಜಿ ನಿರೀಕ್ಷಿಸದೆ ಬೆಳೆವ ವಿಫುಲ ಸಸ್ಯಗಳು. ಪಾಶ್ಚಾತ್ಯ ಪ್ರಣೀತ ಕೃಷಿ ವಿಜ್ಞಾನದಲ್ಲಿ ಕಳೆಯೆಂದು ಸಾರಲಾಗಿರುವ ಅನೇಕ ಸಸ್ಯಗಳು ಅಲ್ಲಿರುತ್ತಿದ್ದು ಅವುಗಳು ಮನುಷ್ಯನ ಆರೋಗ್ಯದ ಪಾಲಿಗೆ ಸಂಜೀವಿನಿಯಂತಿರುತ್ತಿದ್ದ ಅನೇಕ ಪ್ರಭೇದಗಳನ್ನ ಒಳಗೊಂಡಿರುತ್ತಿದ್ದುಇದು ಸುಳ್ಳಲ್ಲ. ಆದರೆ ಇವುಗಳ ಮಹತ್ವ ಅನೇಕರಿಗೆ ಗೊತ್ತೆ ಇರಲಿಲ್ಲ! ಒಂದು ವೇಳೆ ಗೊತ್ತಿದ್ದರೂ ಎಷ್ಟಾದರು ಅದು ಹಿತ್ತಲಲ್ಲಿರುವುದಲ್ಲವೆ ಎನ್ನುವ ಅಸಡ್ಡೆಯ ಭಾವ ಮನಸಲ್ಲಿ ಬೆಳೆದಿರುತ್ತದೆ.


ಹೀಗಾಗಿ ಹಿತ್ತಲಲ್ಲಿರುವುದು ಯಾವಾಗಲೂ ನಮಗೆ ಮದ್ದಿನಂತೆ ಗೋಚರಿಸುವುದಿಲ್ಲವಂತೆ. ಒಂದು ಬಗೆಯ ಸಲುಗೆಯಿಂದ ಬೆಳೆದ ತಾತ್ಸಾರದ ಗುಣವೆ ಅದು. ಹಾಗೆನೆ ಪುಟ್ತ ಮಕ್ಕಳ ತೊದಲು ತೊದಲಾದ ಬಾಲಿಶ ನುಡಿಗಳು ಅವನ್ನ ಕೇಳಿ ನಲಿಯಬೇಕೆ ವಿನಃ ನಂಬಿ ಮೂರ್ಖರಾಗಬಾರದು. ಸಾಮಾನ್ಯವಾಗಿ ಮಕ್ಕಳು ಹುಸಿ ನುಡಿಯುವುದಿಲ್ಲ ನಿಜ ಆದರೆ ಅವರ ಮಾತುಗಳಲ್ಲಿ ಅವರದ್ದೆ ಆದ ವಿಶಿಷ್ಟ ಕಲ್ಪನೆಯೆ ವಾಸ್ತವಕ್ಕಿಂತ ಅಧಿಕವಾಗಿರುತ್ತದೆ. ಅವರ ಮಟ್ಟಿಗೆ ಅದು ನಿಜವೆ ಆಗಿದ್ದರೂ ಅಸಲಿಗೆ ಅವರ ಅಭಿವ್ಯಕ್ತಿಯ ಕೌಶಲ್ಯ ಅಲ್ಲಿ ಅತಿಯಾಗಿ ಬಿಂಬಿತವಾಗಿರುವುದು ಮರೆಯತಕ್ಕದ್ದಲ್ಲ. ಅದನ್ನ ನಂಬಿ ವಿವೇಚಿಸದೆ ಮುಂದಡಿಯಿಡುವುದು ಮೂರ್ಖತನದ ಪರಮಾವಧಿ.

ಅಂತೆಯೆ ಹಿತ್ತಲ ಗಿಡದ ಬಗೆಗಿರುವ ತಾತ್ಸಾರ ಮಕ್ಕಳ ಮಾತುಗಳ ಬಗ್ಗೆಯೆ ಸೀಮಿತವಾಗಿದ್ದರೆ ಸಾಕು. ಹಿತ್ತಲ ಗಿಡಗಳಲ್ಲಿ ಮನೆಮದ್ದು ಹುಡುಕುವುದೇನೂ ತಪ್ಪಲ್ಲ. ಅದರ ಮಹತ್ವ ಅರಿವಾದರೆ ನಮ್ಮ ಅನೇಕ ಸಮಸ್ಯೆಗಳಿಗೆ ಮನೆಯ ವಾತಾವರಣದಲ್ಲಿಯೆ ಪರಿಹಾರ ಲಭ್ಯ. ಇದೆ ಈ ಗಾದೆ ವಿವೇಚಿಸುವ ವಿವೇಕ. "ಹಿತ್ತಲಗಿಡ ಮದ್ದಲ್ಲ" ಎನ್ನುವ ಗಾದೆ ಕನ್ನಡದಲ್ಲಿಯೂ ಚಾಲ್ತಿಯಲ್ಲಿದೆ.}


( ಪಿತ್ತಲ್ದ ಪಜಿರ್ ಮರ್ದತ್, ಜೋಕುಲೆ ಪಾತೆರ ನಂಬಿಗೆ ಅತ್ = ಹಿತ್ತಲ ಹುಲ್ಲು ಮದ್ದಲ್ಲ, ಮಕ್ಕಳ ಮಾತು ನಂಬುಗೆ ಅಲ್ಲ.)

No comments: