27 March 2013

ತುಳುಗಾದೆ-೫೫










"ಒಡಾರಿನ ಇಲ್ಲಡೆ ಅಟಿಲಗ್ ಕರ ಇಜ್ಜಿ!"



{ ಇದೊಂಥರ ನೊಂದವರ ಸೋತ ಭಾವದ ಸುಪ್ತ ಪ್ರಕಟಣೆ. ಒಡಾರಿಯೆಂದರೆ ತುಳುವುವಿನಲ್ಲಿ ಕುಂಬಾರ ಎಂದರ್ಥ. ಓಡನ್ನ ಮಾಡುವವ ಒಡಾರಿಯೆನ್ನುವ ಅರ್ಥದಲ್ಲಿ ಕುಂಬಾರರನ್ನಿಲ್ಲಿ ಒಡಾರಿಯೆಂದು ಕರೆಯಲಾಗುತ್ತದೆ. ಮೂಲ್ಯ ಎನ್ನುವ ಕುಲನಾಮದ ತುಳುನಾಡಿನ ಕುಂಬಾರರು ಹಿಂದೆಲ್ಲ ಇಲ್ಲಿನವರಿಗೆ ಬಹು ಬೇಕಾದವರಾಗಿದ್ದರು. ಅದರಲ್ಲೂ ತುಳುನಾಡಿನ ಹೆಂಗಸರಿಗೆ ಇವರ ಒಡನಾಟ ಹೆಚ್ಚು. ಹಣಕ್ಕಷ್ಟು ಮಹತ್ವವಿಲ್ಲದಿದ್ದ ವಸ್ತು ವಿನಿಮಯದ ಕಾಲದಲ್ಲಿ ಕುಂಬಾರರು ಭಾರತದ ಇತರೆಡೆಗಳಂತೆ ಇಲ್ಲಿಯೂ ಬಹು ಬೇಡಿಕೆಯಲ್ಲಿದ್ದರು. ತಾವು ಮಾಡಿದ ಮಾಟವಾದ ಮಣ್ಣಿನ ಮಡಿಕೆಗಳನ್ನ ಅವರು ಆಗಾಗ ಹೆಗಲ ಮೇಲೆ-ತಲೆಯ ಮೇಲಿನ ಸಿಂಬಿಯಲ್ಲಿ ಜಾಗರೂಕತೆಯಿಂದ ಮಾರಲು ಬರುತ್ತಿದ್ದಾಗ ಅವರೊಂದಿಗೆ ಚೌಕಾಸಿಯ ಪಂಥಾಹ್ವಾನ ನೀಡುತ್ತಾ ಅಂಗಳದಲ್ಲಿ ವ್ಯಾಪಾರಕ್ಕಿಳಿಯುತ್ತಿದ್ದವರೆ ಮನೆಯ ಹೆಂಗಸರು. ವರ್ಷಾವರ್ತಿ ಅವರು ಹೀಗೆ ತಂದು ಮಾರಿದ ಮಡಿಕೆಗಳಿಗೆ ಪ್ರತಿಯಾಗಿ ವರ್ಷದ ಸುಗ್ಗಿಯ ವೇಳೆಯಲ್ಲೊಮ್ಮೆ ಅವರಿಗೆ ಅಕ್ಕಿ ಅಥವಾ ಭತ್ತದ ರೂಪದಲ್ಲಿ ಪಡಿ ಅಳೆದು ಕೊಟ್ಟು ಅವರ ಮಡಿಕೆಯ ಬೆಲೆಯನ್ನವರಿಗೆ ಮುಟ್ಟಿಸಲಾಗುತ್ತಿತ್ತು. ಹೀಗೆ ಅವರು ಮಾಡಿದ ಮಣ್ಣಿನ ಮಡಿಕೆಗಳಿಗೆ ತೆಂಗಿನ ಚಿಪ್ಪನ್ನ ನುಣುಪಾಗಿ ಹೆರೆದು ಅದರಲ್ಲೆರಡು ತೂತು ಕೊರೆದು ನಡುವೆ ನಯಗೊಳಿಸಿದ ಬೆತ್ತವನ್ನ ಸಿಕ್ಕಿಸಿ ಕೊರಗರು ಮಾಡಿತರುತ್ತಿದ್ದ ಸೌಟುಗಳು ಒಳ್ಳೆಯ ಈಡು ಜೋಡಾಗುತ್ತಿತ್ತು.


ಕ್ರಮೇಣ ಸಿರಿವಂತರ ಮನೆಯಲ್ಲಿ ಮಾತ್ರವಿರುತ್ತಿದ್ದ ಕಲಾಯಿ ಬೇಡುವ ಹಿತ್ತಾಳೆ, ತಾಮ್ರ ಹಾಗೂ ಉಕ್ಕಿನ ಪಾತ್ರೆಗಳಿಗೆ ಸರಿಸಮವಾಗಿ ತುಳುನಾಡಿನ ಬಡವರ ಮನೆಗಳಲ್ಲೂ ಕಲಾಯಿಯ ಹಂಗಿಲ್ಲದ ಆಧುನಿಕವೆನ್ನಿಸಿದ ಸಿಲವಾರ ಅಲಿಯಾಸ್ ಅಲ್ಯುಮೀನಿಯಂನ ಪಾತ್ರೆ ಪರಡಿಗಳು ತುಳುನಾಡಿನಾಡಿನಾದ್ಯಂತ ನಾಯಿಕೊಡೆಗಳಂತೆ ಚಾಲ್ತಿಗೆ ಬರುತ್ತಲೆ ಕುಂಬಾರರ ಪ್ರಸ್ತುತತೆ ಮಂಕಾಗ ತೊಡಗಿತು. ಆದಾಗ್ಯೂ ಹುಟ್ಟು ಸಾವಿನ ಸಂದರ್ಭಗಳಲ್ಲಿ, ಮೂರ್ತೆಯವರಿಗೆ ಬೈನೆ ಮರದಲ್ಲಿ ಕಳ್ಳು ಕಟ್ಟಲಿಕ್ಕೆ ಹಾಗೂ ನಾಗಾರಾಧನೆ-ತಂಬಿಲ-ಕೋಲ ಮುಂತಾದ ಧಾರ್ಮಿಕಾಚರಣೆಗಳಲ್ಲಿ ಇವರು ಮಾಡುವ ಮಡಿಕೆ-ಕುಡಿಕೆಗಳಿಗೆ ಬೇಡಿಕೆ ಇದ್ದೆ ಇತ್ತು. ಜೊತೆಗೆ ಮಣ್ಣಿನ ಓಡಿನ ಕೈಹಂಚುಗಳನ್ನೂ ಇವರು ತಯಾರಿಸುತ್ತಾ ಸಮಕಾಲೀನತೆಯಲ್ಲಿ ತೀರಾ ಹಿಂದುಳಿಯದಂತೆ ಸಾಮಾಜಿಕವಾಗಿ ಬಾಳುತ್ತಿದ್ದರು. ಆದರೆ ಬಾಸಲ್ ಮಿಶನರಿಯವರು ಮಂಗಳೂರಿನ ಮೂಲಕ ತಂದ ಅತ್ಯಾಧುನಿಕ ಗುಣಮಟ್ಟದ ಕಾರ್ಖಾನೆ ತಯಾರಿ "ಮಂಗಳೂರು ಹಂಚು"ಗಳು ಜನಪ್ರಿಯವಾದಂತೆ ಸ್ಥಳಿಯ ಕುಂಬಾರರ ಕೈ ಹಂಚುಗಳು ಕೂಡ ಅವುಗಳ ಮುಂದೆ ಮಂಕಾಗಿ ಆಕರ್ಷಣೆ ಕಳೆದುಕೊಂಡವು. ಒಟ್ಟಿನಲ್ಲಿ ಬಡತನವೆನ್ನುವುದು ಅವರ ಬೆನ್ನು ಬಿಡದ ಭೂತವಾಯಿತು.


ಹೀಗಾಗಿ ಕುಂಬಾರರ ಬಡತನವನ್ನ ಉತ್ಪ್ರೇಕ್ಷಿಸಿ "ಕುಂಬಾರನ ಮನೆಯಲ್ಲಿಯೆ ಅಡುಗೆಗೆ ಕುಡಿಕೆಯಿಲ್ಲ" ಎನ್ನುವ ಈ ಗಾದೆಯನ್ನ ಸೋತು ಸುಣ್ಣವಾದ ಎಲ್ಲರಿಗೂ ಅನ್ವಯಿಸಿ ಹೇಳುವ ರೂಢಿ ಹುಟ್ಟಿಕೊಂಡಿರಲಿಕ್ಕೂ ಸಾಕು. ಅದು ಸಹ ಒಂದು ರೀತಿಯಲ್ಲಿ ನಿಜವೆ. ಉದಹಾರಣೆಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕುಗಳ ಗಡಿ ಭಾಗವನ್ನೆ ತೆಗೆದು ಕೊಳ್ಳೋಣ. ಇಲ್ಲಿ ಜಗತ್ತಿನ ಯಾವ ಭಾಗದಲ್ಲೂ ಇದ್ದಿರಲಾರದಂತೆ ಒಟ್ಟೊಟ್ಟಿಗೆ ಐದು ಅಣೆಕಟ್ಟುಗಳನ್ನ ಒಂದರ ಹಿಂದೊಂದರಂತೆ ಕಟ್ಟಲಾಗಿದೆ. ಸಾವಿರಾರು ಸ್ಥಳಿಯ ಜನರು ನಾಡಿನ ಮನೆಮನೆಗಳಲ್ಲಿ ದೀಪದ ಬೆಳಕುಕ್ಕಿಸುವ "ಜಲ ವಿದ್ಯುತ್ ಯೋಜನೆ" ಹೆಸರಿನ ಮಾರಿಗೆ ಬಲಿಯಾಗಿ ನೆಲ-ನೆಲೆ ಕಳೆದುಕೊಂಡು ಅತಂತ್ರರಾಗಿದ್ದಾರೆ ಮತ್ತು ಅತಂತ್ರರಾಗಿಯೆ ಉಳಿದಿದ್ದಾರೆ ಸಹ. ಮಾಣಿ, ಹಿರೆಭಾಸ್ಕರ ( ಸದ್ಯ ಇದು ಇದಕ್ಕಿಂತ ಎತ್ತರದ ಲಿಂಗನಮಕ್ಕಿ ಅಣೆಕಟ್ಟಿನಲ್ಲಿ ಅಂತರ್ಧನವಾಗಿದೆ), ಸಾವೆಹಿತ್ಲು, ವಾರಾಹಿ ಹಾಗೂ ಚಕ್ರಾ ಈ ಐದೂ ಯೋಜನೆಗಳು ನಾಡಿನಾದ್ಯಂತ ಬೆಳಕಿನ ಹೊಳೆ ಹರಿಸುತ್ತಿದ್ದರೂ ಅವು ವಿದ್ಯುತ್ ಉತ್ಪಾದಿಸುವ ಈ ಸ್ಥಳಗಳಲ್ಲಿ ಮಾತ್ರ ಧಾರಾಳ ಕತ್ತಲು! ಅದರಲ್ಲೂ ತೀರ್ಥಹಳ್ಳಿ ತಾಲೂಕಿನ ಸ್ಥಿತಿಯಂತೂ ಇನ್ನೂ ಶೋಚನೀಯ. ತಾಲೂಕಿನ ಪಶ್ಚಿಮ ಭಾಗ ಹೀಗೆ ವಿದ್ಯುತ್ ಉತ್ಪಾದನೆಯ ಉದ್ದೇಶಕ್ಕೆ ಮುಳುಗಡೆಯಾಗಿದ್ದರೆ ಪೂರ್ವದ ಗಡಿಯಲ್ಲಿ ಬಯಲುಸೀಮೆಗೆ ಕೃಷಿ ನೀರಾವರಿ ಹಾಗೂ ಕುಡಿಯುವ ನೀರಿನ ಅಗತ್ಯ ಪೂರೈಸಲು ತುಂಗಾನದಿಗೆ ಕಟ್ಟಿರುವ ಗಾಜನೂರು ಅಣೆಕಟ್ಟಿನ ಹಿನ್ನೀರಿನಲ್ಲಿ ತಾಲೂಕಿನ ಪೂರ್ವದ ಬಹುಭಾಗ ಈಗಾಗಲೆ ಮುಳುಗಡೆಯಾಗಿದೆ ಇಲ್ಲವೆ ಈ ಅಣೆಕಟ್ಟನ್ನು ತುಂಗಾ ಮೇಲ್ದಂಡೆಯ ಎತ್ತರಿಸುವ ಹೆಸರಿನಲ್ಲಿ ಮುಳುಗಲು ದಿನ ಕಾಯುತ್ತಿವೆ! ಅಗತ್ಯ ವಸ್ತು ತರಲು ನಿಂತ ಹಿನ್ನೀರನ್ನ ಬಳಸಿ ಸಾಗಿ ಪೇಟೆ ಮುಟ್ಟಲು ದಿನಗಟ್ಟಲೆ ವ್ಯಯಿಸಬೇಕು. ಅಣೆಕಟ್ಟುಗಳ ಹಿಂದೆ ಹಿನ್ನೀರು ಸ್ಥಳಿಯ ರೈತಾಪಿಗಳ ಮನೆ ಜಮೀನು ನುಂಗಿ ನೊಣೆದಂತೆ ಲಕ್ಷಾಂತರ ಎಕರೆ ಪಶ್ಚಿಮಘಟ್ಟದ ನಿತ್ಯಹರಿದ್ವರ್ಣ ಕಾಡನ್ನೆ ಮುಳುಗಿಸಿ ನಾಶ ಮಾಡಿದೆ. ಮುಳುಗಡೆಯಾದ ಸ್ಥಳದ ಮಂದಿಗೆ ಚೂರೂ ವಿದ್ಯುತ್ ಲಭ್ಯವಿಲ್ಲ, ಇದ್ದರೂ ದಿನದ ಅರ್ಧಕ್ಕಿಂತ ಹೆಚ್ಚು ವೇಳೆ "ಲೋಡ್ ಶೆಡ್ಡಿಂಗ್" ಹೆಸರಿನಲ್ಲಿ ಅವ್ಯಾಹತ ಕಡಿತ. ಹೀಗಾಗಿ ಇಲ್ಲಿ ಕತ್ತಲು ಸ್ಥಳಿಯರ ಅನುಗಾಲದ ಸಂಗಾತಿ. "ದೀಪದ ಕೆಳಗೆಯೆ ಕತ್ತಲು" ಎನ್ನುವ ಕನ್ನಡದ ಗಾದೆ ಹೇಳುವ ಆಶಯವೂ ಇದೆ.}


 ( ಒಡಾರಿನ ಇಲ್ಲಡೆ ಅಟಿಲಗ್ ಕರ ಇಜ್ಜಿ! = ಕುಂಬಾರನ ಮನೆಯಲ್ಲಿಯೆ ಅಡುಗೆಗೆ ಕುಡಿಕೆಯಿಲ್ಲ!.)

No comments: