04 March 2013

ತುಳುಗಾದೆ-೩೪






"ಪೆಜ್ಯರ ತಿಕ್ಕಿನವು, ಬಿರ್ಕುದ್ ಪೋಂಡ್"


{ ನಾವು ಯಾವಾತ್ತೂ ಅನ್ಯರ ಸಿರಿ ಸಂಪತ್ತಿಗೆ ಅಸೂಯೆ ಆಸೆ ಪಡಬಾರದು. ನಮ್ಮ ಶ್ರಮದ ದುಡಿಮೆಯೆ ಕೆಲವೊಮ್ಮೆ ಪ್ರಾಮಾಣಿಕವಾಗಿ ದುಡಿದ ನಮ್ಮ ಕೈ ಹತ್ತದ ಸಂಭವಗಳಿರುತ್ತವೆ. ದುಡಿದ ಶ್ರಮದ ಸಂಪಾದನೆ ಕೆಲವೊಮ್ಮೆ ಅಪಾತ್ರ ದಾನವಾಗುದೂ ಇದೆ. ಇದು ನಮ್ಮ ಆಯ್ಕೆಯಲ್ಲಾಗುವ ತಪ್ಪುಗಳಾದರೂ ನಾವು ಹೆಚ್ಚು ನೊಂದುಕೊಳ್ಳುವ ಪ್ರಮೇಯವೇನಿಲ್ಲ. ನಮ್ಮ ದುಡಿಮೆಯ ಸ್ವತ್ತು ಇನ್ಯಾವುದಾದರೊಂದು ರೂಪದಲ್ಲಿ ನಮ್ಮ ಕಷ್ಟ ಕಾಲದಲ್ಲಿ ಮತ್ತೆ ಒದಗಿ ಬಂದೆ ಬರುತ್ತದೆ. ಇದು ಪ್ರಾಮಾಣಿಕತೆಗಿರುವ ನೈತಿಕ ಶಕ್ತಿ. ಹೊಳೆಗೆ ಬಿದ್ದ ತನ್ನ ಕಬ್ಬಿಣದ ಕೈಗೊಡಲಿಗೆ ಮಾತ್ರ ವನ ದೇವತೆಯ ಎದುರು ಹಂಬಲಿಸುವ ಮರ ಕಡಿಯುವವನ ಪ್ರಾಮಾಣಿಕತೆಯ ಕಥೆಯನ್ನ ನಾವೆಲ್ಲರೂ ಬಾಲ್ಯದಲ್ಲಿ ಕೇಳಿಯೆ ಇರುತ್ತೇವೆ.

ಅದನ್ನೆ ಪುಷ್ಠೀಕರಿಸುವ ಸರಳ ಗಾದೆಯಿದು. ಯಾರೊ ಒಬ್ಬರಿಗೆ ಬೀದಿಯಲ್ಲಿ ಸಾಗುವಾಗ ಅಮೂಲ್ಯವಾದುದೇನೋ ಸಿಕ್ಕಿತಂತೆ. ಅದು ಯಾರ ಸೊತ್ತು? ಯಾರದನ್ನ ಕಳೆದುಕೊಂಡಿರಬಹುದು? ಎಂದು ತಲಾಷಿಸಿ ಸಂಬಂಧ ಪಟ್ಟವರಿಗೆ ಪ್ರಾಮಾಣಿಕವಾಗಿ ಅದನ್ನ ಮುಟ್ಟಿಸುವ ಅವಕಾಶ ಅವರಿಗಿದ್ದರೂ ಆ ವಸ್ತುವನ್ನ ತನ್ನದಾಗಿಸಿಕೊಳ್ಳುವ ದುರಾಸೆಯಿಂದ ಅದ್ಯಾವುದನ್ನೂ ಮಾಡದೆ ಆವರದನ್ನ ಮೆತ್ತಗೆ ಲಪಟಾಯಿಸಿಕೊಂಡು ಎಲ್ಲರ ಕಣ್ಣು ತಪ್ಪಿಸಿ ಮನೆಗೆ ತಂದು ಬಿಡಿಸಿ ನೋಡಿದರೆ ಅದಲ್ಲಿರಲೆ ಇಲ್ಲ! ಕದ್ದು ಬರುವ ಧಾವಂತದಲ್ಲಿ ಅದನ್ನೆಲ್ಲೋ ಬೀಳಿಸಿಕೊಂಡದ್ದನ್ನೂ ಅರಿಯದೆ ಮನೆ ಮುಟ್ಟಿಯಾಗಿತ್ತು. ಹೆಕ್ಕಲು ಸಿಕ್ಕ ಪರರ ಸೊತ್ತು ಹಾಗೆಯೆ ಪರಾಯ ಪಾಲಾಗಿ ಹೋಗಿತ್ತು!

ಮೊನ್ನೆ ವೃತ್ತ ಪತ್ರಿಕೆಯೊಂದರಲ್ಲಿ ಓದಿದ ಸುದ್ದಿ ಈ ಗಾದೆಗೊಂದು ಸ್ಪಷ್ಟ ಪುರಾವೆ ಅಮೇರಿಕಾದ ಫಿಲಿಡಲ್ಫಿಯಾದಲ್ಲಿ ನಡೆದ ಘಟನೆ ಇದು. ಅಲ್ಲಿನ "ಹೋಂ ಲೆಸ್" ಅಂದರೆ ನಮ್ಮ ದೇಶದ ಬೀದಿ ಬದಿಯ ಭಿಕ್ಷುಕರ ಸಾಲಿನವರು. ಅಂತಹವರೊಬ್ಬರಿಗೆ ಒಬ್ಬ ಉದಾರ ಮನಸಿನವಳು ಸೇತುವೆಯ ಹತ್ತಿರ ಸಾಗಿ ಹೋಗುವಾಗ ತನ್ನ ಕೈಪರ್ಸಿನಲ್ಲಿ ಇದ್ದ ಎಲ್ಲವನ್ನೂ ಸುರಿದಳಂತೆ. ಮನೆಗೆ ಹೋಗಿ ನೋಡಿದರೆ ಅದರೊಂದಿಗೆ ಇಟ್ಟಿದ್ದ ಬೆಲೆಬಾಳುವ ವಜ್ರದ ಉಂಗುರವೂ ಭಿಕ್ಷಾಪಾತ್ರೆ ಸೇರಿ ಹೋದ ಪ್ರಮಾದ ಅರಿವಿಗೆ ಬಂತು. ಸಿಗುವ ಸಾಧ್ಯತೆ ಅತ್ಯಲ್ಪವಾಗಿದ್ದರೂ ಅಳುಕುತ್ತಲೆ ಮರುದಿನ ಅಲ್ಲಿಗೆ ಹೋಗಿ ಆ ಹೋಂ ಲೆಸ್ ಬಳಿ " ಸಾರಿ, ನೆನ್ನೆ ನಾನು ನಿಮಗೆ ಸ್ವಲ್ಪ ಹಣ ದಾನ ಮಾಡಿದ್ದೆ. ಅದರೊಂದಿಗೆ ಒಂದು ಅಮೂಲ್ಯ ವಸ್ತುವೂ ಪ್ರಮಾದವಶಾತ್ ಸೇರಿ ಹೋಗಿದೆ. ನಿಮಗದೇನಾದರೂ ಸಿಕ್ಕಿದೆಯ?." ಅಂತ ಕೇಳಿದಳಂತೆ. ಆಗ ಆ ಹೋಂ ಲೆಸ್ "ಸ್ವಲ್ಪ ತಾಳಿ" ಅಂತಂದದ್ದೆ ಸೇತುವೆ ಅಡಿಗಿನ ತನ್ನ ವಾಸ ಸ್ಥಳಕ್ಕೆ ಹೋಗಿ ಆ ಉಂಗುರವನ್ನ ತಂದು. "ಇದಾ ನೋಡಿ! ಯಾರಾದರೂ ಇದನ್ನ ಹುಡುಕಿಕೊಂಡು ಬರಬಹುದು ಅಂತ ಇದನ್ನ ಭದ್ರವಾಗಿ ತೆಗೆದಿಟ್ಟಿದ್ದೆ" ಅಂದು ಪ್ರಾಮಾಣಿಕವಾಗಿ ವಜ್ರದುಂಗುರವನ್ನ ಅದರ ಮಾಲಕಳಿಗೆ ಹಿಂದಿರುಗಿಸಿದನಂತೆ! ಆಗಾಗ ರಿಕ್ಷಾದಲ್ಲಿ ಪ್ರಯಾಣಿಕರು ಮರೆತು ಹೋದ ಬೆಲೆ ಬಾಳುವ ವಸ್ತು/ ಹಣವಿರುವ ಕೈಚೀಲಗಳನ್ನ ಅದರ ಚಾಲಕರು ಆಸೆ ಪಡದೆ ಪ್ರಾಮಾಣಿಕವಾಗಿ ಪೊಲಿಸ್ ಆಯುಕ್ತರ ಮೂಲಕ ಹಿಂದಿರುಗಿಸಿದ್ದನ್ನ ಓದುತ್ತಲೆ ಇರುತ್ತೇವೆ. ಇದು ಪ್ರಾಮಾಣಿಕತೆಯ ಮೌಲ್ಯ ಸಾರುವ ಅನುಕರಣೀಯ ಆದರ್ಶ.}


( ಪೆಜ್ಯರ ತಿಕ್ಕಿನವು, ಬಿರ್ಕುದ್ ಪೋಂಡ್ = ಹೆಕ್ಕಲು ಸಿಕ್ಕಿತು, ಸೋರಿ ಹೋಯಿತು.)

No comments: