29 November 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪ 👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪ 👊



ವಾಹನ ಅದ್ಯಾವುದೆ ಇರಲಿ ಅದರ ಚಾಲನೆ ಕಲಿಯುವ ಹಾಗೂ ಸ್ವಯಂ ಚಾಲಕನಾಗಿ ಅದನ್ನ ನಡೆಸುವ ಚಪಲ ಅವನಿಗೆ ವಿಪರೀತ. ನೆಲದ ಮೇಲಷ್ಟೆ ಅಲ್ಲˌ ನೀರಿನ ಮೇಲೆ ನಡೆಸುವ ವಾಹನ ಚಾಲನೆಯನ್ನೂ ಕಲಿತಿದ್ದಾನೆ. ಗಾಳಿಯಲ್ಲಿ ಹಾರುವ ವಾಹನ ಚಾಲನೆ ಕಲಿಯುವ ಆಸೆಯನ್ನ ಜೀವಂತವಾಗಿರಿಸಿಕೊಂಡಿದ್ದಾನೆ. ಈ ಮೂರು ಚಟಗಳನ್ನ ಬಿಟ್ಟರೆ ಇನ್ನುಳಿದಂತೆ ಚಟ ಮುಕ್ತ ಜೀವನ ಈತನದ್ದು. ಉತ್ಕಟವಾಗಿ ಪ್ರೀತಿಸದವರ ಹೊರತು ಮತ್ಯಾರೊಂದಿಗೂ ಲೈಂಗಿಕವಾಗಿ ಆಕರ್ಷಿತನಾಗಲಾರದ ಗುಣˌ ಹೀಗಾಗಿ ಕಚ್ಚೆಹರುಕನಲ್ಲ.


ಬೀಡಿಯ ಕಟ್ಟು ಕಟ್ಟುಗಳನ್ನೆ ಸೇದಿ ಸೇದಿ ಬೂದಿಯ ಬೆಟ್ಟ ಎಬ್ಬಿಸುತ್ತಿದ್ದ ಅಪ್ಪನ ಮಗ. ಅಂಕೆ ಮೀರಿದ ಕುಡಿತಕ್ಕೆ ದಾಸನಾಗಿ ಕುಡಿದ ಮೇಲೆ ಮೃಗದಂತೆ ವರ್ತಿಸುತ್ತಿದ್ದ ಅಪ್ಪನ ರೌದ್ರವತಾರ - ಅಮ್ಮನ ಜೊತೆ ಮತ್ತಿನಲ್ಲಿರುತ್ತಿದ್ದ ಅಪ್ಪನ ಮುಷ್ಠಿಯುದ್ಧ ನೋಡಿ ನೋಡಿ ಭಯ ಭೀತ ಬಾಲ್ಯ ಕಳೆದಿದ್ದ ಕಾರಣ ಧೂಮಪಾನ - ಮದ್ಯಪಾನ ಎರಡರ ಬಗ್ಗೆಯೂ ತೀರದ ಹೇವರಿಕೆ. ರಸಿಕಗ್ರೇಸರನಾಗಿದ್ದ ಅಪ್ಪನಿಗೆ ಗೆಳತಿಯರಿಗೂ ಬರವಿರಲಿಲ್ಲ ಅನ್ನುವ ಸತ್ಯದ ಅರಿವೂ ಅವನಿಗಿತ್ತು. ಲೈಂಗಿಕ ಲೋಲುಪತೆಯೆ ಇರಲಿˌ ಕುಡಿತˌ ಧೂಮಪಾನವೆ ಆಗಿರಲಿ ತನ್ನ ಪಾಲಿನ ಕೋಟಾವನ್ನೂ ತನ್ನಪ್ಪನೆ ಖಾಲಿ ಮಾಡಿ ತನಗೇನೂ ಹೊಸತಾಗಿ ಮಾಡಲು ಉಳಿಸಿಲ್ಲ ಅಂತ ಆಗಾಗ ಅಂತರಂಗದ ಗೆಳೆಯರ ಮುಂದೆ ಚಟಾಕಿ ಸಿಡಿಸುತ್ತಿದ್ದ.


ಇನ್ನು ಪಟ್ಟಣ ಸೇರಿ ಕೆಡಲು ಕಾರಣ ಹಲವಿದ್ದರೂ ಮಾದಕದ್ರವ್ಯಗಳ ಗೀಳಿಗೆ ಬೀಳದ ಸ್ವಯಂ ಆತ್ಮ ನಿಯಂತ್ರಣ ಯಾವುದೆ ದುಶ್ಚಟಗಳಿಂದ ಅವನನ್ನ ದೂರ ಇರಿಸಿತ್ತು. ಪಕ್ಕದ ದೇಶವೊಂದಕ್ಕೆ ಹೋಗಿದ್ದಾಗˌ ಅದೂ ಹದಿನೇಳು ವರ್ಷಗಳ ಹಿಂದೆ ಒತ್ತಾಯ ಹಾಗೂ ಕುತೂಹಲ ಎರಡಕ್ಕೂ ಬಲಿಯಾಗಿ ಅದೇನೋ ಮಜ್ಜಿಗೆಯಂತಿದ್ದ ಜಿಂಜರ್ ಬೀರನ್ನ ಹೀರಿ ಮುಖ ಹಿಂಡಿಕೊಂಡಿದ್ದ ಅನ್ನೋದನ್ನ ಹೊರತುಪಡಿಸಿ ಜೀವನದಲ್ಲವನು ಶರಾಬು ಕುಡಿದಿಲ್ಲ ಅಂದರೆ ಯಾರೂ ನಂಬೋದಿಲ್ಲ. ಬರಿ ನಾಟಕ ಅಂತ ತೀರ್ಪು ಹೇಳಿ ಷರಾ ಬರೆದು ಬಿಡುತ್ತಾರೆ. ಆದರೆ ಅದೆ ಸತ್ಯ. ಏಕೆಂದರೆ ಅವನ ಪಾಲಿಗಿದು ಕಥೆಯಲ್ಲˌ ಆತ್ಮನಿವೇದನೆ. ಮತ್ತವ ಆತ್ಮವಂಚಕನಲ್ಲ!


********

ಹಾಗೆ ನೋಡಿದರೆ ಬದುಕೇನೂ ಕ್ಲಿಷ್ಟವಲ್ಲ. ಹಾಗಂತ ಅಂದುಕೊಂಡಷ್ಟು ಸರಳವೂ ಆಗಿರಲ್ಲ. ಆಗಬೇಕಾದ ಪ್ರಾಯದಲ್ಲಿ ಆಗಬೇಕಾದದ್ದೆಲ್ಲ ಆಗುತ್ತಾ ಹೋದರೆˌ ಸಿಗಬೇಕಿದ್ದ ಸಮಯದಲ್ಲಿ ಸಿಗಲೆಬೇಕಿದ್ದವರು ಸಿಕ್ಕಿದರೆ ಏರಿಳಿತದ ತಗ್ಗು ಗುಂಡಿಗಳ ಹಾದಿಗೆ ಬಿದ್ದ ಬದುಕಿನ ಬಂಡಿ ಅದು ಹೇಗೋ ಸರಾಗವಾಗಿ ಹರಿದು ಹೋಗಿ ಪ್ರಯಾಣದ ಆಯಾಸ ಅರಿವಿಗೆ ಬರುವ ಹೊತ್ತಿಗೆ ದೇಹ ಅನ್ನೋ ಜನರೇಟರಿಗೆ ಮುಪ್ಪಡರಿ ತಮ್ಮ "ಕಾಲ" ಇನ್ನು ಮುಗಿಯಿತುˌ ಲೋಕದ ಜವಬ್ದಾರಿ ವಹಿಸಿಕೊಳ್ಳಲು ಹೊಸ ಪೀಳಿಗೆಯೊಂದು ತನ್ನಂತವರ ಏಕತಾನತೆಯ ಬಾಳ ಲಹರಿಯಲ್ಲೆ ಅರಿವಿಲ್ಲದೆ ಸೃಷ್ಟಿಯಾಗಿ ತಯಾರಾಗಿ ಬೆಳೆದು ನಿಂತಿದೆ. ತಾನು ತನ್ನಂತವರೇನಿದ್ದರೂ ನಿರ್ವಹಣೆಯ ಹೊಣೆ ದಾಟಿಸಿ ಆಗುವ ಬದಲಾವಣೆಗಳಿಗೆ ಮೂಕ ಸಾಕ್ಷಿಯಾಗಿ ಉಳಿಯಬೇಕಿದೆ. ಒಂದು ವೇಳೆ ಕೇಳಿದರೆ ಮಾತ್ರ ತನ್ನ ಅನುಭವದ ಮೂಸೆಯಲ್ಲರಳಿದ ಹಿತನುಡಿಗಳ ಸಲಹೆ ಮಾತ್ರ ಕೊಡಲಷ್ಟೆ ತಾನು ಸೀಮಿತ ಅನ್ನುವ ಅರಿವು ಮೂಡುತ್ತದೆ. ಇದರಲ್ಲಿ ಹೆಚ್ಚು ಕಿರಿಕಿರಿ ಅನ್ನುವಂತದ್ದೇನಿಲ್ಲ. ಎದುರಿಗೆ ಕಾಣುತ್ತಿರುವುದು ಹಾಗೂ ಸುತ್ತಮುತ್ತ ಆಗುತ್ತಿರುವುದು ಕಸಿವಿಸಿ ಹುಟ್ಟಿಸುತ್ತಿದ್ದರೆˌ ಕನಿಷ್ಠ ಕಣ್ಣುಮುಚ್ಚಿಕೊಂಡಾದರೂ ಸ್ವಸ್ಥ ಇದ್ದಿರಬಹುದು.


ಆದರೆ ಸಮಸ್ಯೆಯಿರುವುದು ಯಾವ ಯಾವ ಪ್ರಾಯದಲ್ಲೋ ತಿರುವು ಮುರುವಿನ ಹೊಣೆಗಾರಿಕೆ ಹೆಗಲಿಗೇರಿದವರಿಗೆ ಮಾತ್ರ. ತಮ್ಮ ಪ್ರಾಯಕ್ಕೆ ಮೀರಿದ ಜವಬ್ದಾರಿಗಳು ಸಣ್ಣ ಪ್ರಾಯದಲ್ಲೆ ಬೆನ್ನೇರಿ ಬಾಲ್ಯವನ್ನೆ ಕಳೆದುಕೊಂಡಿದ್ದರಂತೂ ಪರಿಸ್ಥಿತಿ ಮತ್ತೂ ಭೀಕರ. ಅವರ ಸಮಪ್ರಾಯದವರೆಲ್ಲ ಮದುವೆಯಾಗಿ ಮಡದಿ ಗಂಡ ಮಕ್ಕಳು ಮೊಮ್ಮಕ್ಕಳು ಅಂತ ಅವರವರದೆ ನಾಲ್ಕು ಗೋಡೆಗಳೊಳಗಿನ ಖಾಸಗಿ ಪ್ರಪಂಚದ ಉಸುಬಿನಲ್ಲಿ ಮೂಗು ಮಟ್ಟದವರೆಗೆ ಹೂತು ಹೋಗಿರುತ್ತಾರೆ. ಇಂತವರಲ್ಲಿ ಬಹುತೇಕರಿಗೆ ಸೂಕ್ತ ಪ್ರಾಯದಲ್ಲಿ ಜೀವನ ಸಂಗಾತಿ ಸಿಕ್ಕಿರುವುದಿಲ್ಲ ಅಥವಾ ಸಿಕ್ಕಂತವರು ಇನ್ಯಾವ್ಯಾವುದೋ ಆಕರ್ಷಣೆಗಳ ಬೆನ್ನು ಹತ್ತಿ ಅವರ ಪಯಣದ ದಿಕ್ಕು ದೆಸೆ ಬದಲಾಯಿಸಿಕೊಂಡಿರುತ್ತಾರೆ. ಯಥಾಪ್ರಕಾರ ಇಂತವರ ಶಾಶ್ವತ ಸಂಗಾತಿ ಒಂಟಿತನ ಮತ್ತೆ ಮತ್ತೆ ಜೊತೆಯಾಗಿ ಅವರ ಯೋಗ್ಯತೆಯನ್ನ ಅವರಿಗೇನೆ ನೆನಪಿಸುತ್ತಾ ಅವರನ್ನ ಮತ್ತಷ್ಟು ಒಳಗೊಳಗೆ ಹಂಗಿಸಿ ಮಾನಸಿಕವಾಗಿ ಕುಗ್ಗಿಸುತ್ತಿರುತ್ತದೆ. ದೈಹಿಕ ಸಾಂಗತ್ಯವೂ ಇಲ್ಲದ ಜೊತೆಗೆ ಮಾನಸಿಕ ಜೊತೆಗಾರಿಗೂ ಸಲ್ಲದಂತಹ ಸ್ಥಿತಿಯಲ್ಲಿ ನರಳುವ ಇಂತವರ ಆಂತರಿಕ ತುಮುಲಗಳಿಗೆ ಅಂತ್ಯವೆನ್ನುವುದು ಬಹುತೇಕ ಇರಲ್ಲ.


ಇವನು ಇನ್ನೂ ಹದಿನಾಲ್ಕು ವರ್ಷ ಪ್ರಾಯವಿದ್ದ ಸಮಯದಲ್ಲಿ ಇವರ ಮನೆಯಲ್ಲೂˌ ಊರಲ್ಲೂ ಎರಡು ದುರ್ಘಟನೆಗಳು ನಡೆದವು. ಮೊದಲನೆಯದಾಗಿˌ ಕ್ರಿಕೆಟ್ ಆಡುತ್ತಿದ್ದ ದೊಡ್ಡವರ ಆಟ ನೋಡುತ್ತಾ ಕುಳಿತಿದ್ದ ಅತ್ತೆಯ ಪುಟ್ಟ ಪ್ರಾಯದ ಹಿರಿಮಗ ಅದ್ಯಾರೋ ಬ್ಯಾಟು ಬೀಸಿ ವೇಗವಾಗಿ ಎಗರಿ ಬಂದ ಚೆಂಡು ಹೊಟ್ಚೆಗೆ ಅಪ್ಪಳಿಸಿ ಆಂತರಿಕ ರಕ್ತಸ್ರಾವವಾಗಿ ನರಳತ್ತಾ ತೀರಿ ಹೋದ. ಅದಾಗಿ ಎರಡು ವರ್ಷಕ್ಕೆ ಅದೆ ಮನೆಯಲ್ಲಿ ಎರಡನೆ ಮಗು ತೀರಿ ಹೋಯಿತು. ಈ ಸಲ ಅಪ್ಪನ ಕಿರಿತಮ್ಮನ ಹಿರಿಮಗಳ ಸರದಿ. ಹುಟ್ಟಿನಿಂದಲೆ ಮಂದಬುದ್ಧಿಯ ಮಗು ಅದು. ಮಗ ಸತ್ತ ದುಃಖದಲ್ಲಿದ್ದ ಅತ್ತೆಗೆ ಅಂಟಿಕೊಂಡು ಬೆಳೆಯುತ್ತಿದ್ದಳು. ಮನೆಯಲ್ಲಿದ್ದ ಎಲ್ಲರಿಗೂ ಇನ್ನೂ ಮುಗ್ಧತೆ ಸೂಸುವ ದೇಹದ ಬೆಳವಣಿಗೆಗೆ ತಕ್ಕಂತೆ ಬುದ್ಧಿ ಬಲಿತಿರದ ಆ ಮಗುವೆಂದರೆ ಮುದ್ದು ಮುಚ್ಚಟೆ. ಅದೊಂದು ದಿನ ಅವಳ ದೊಡ್ಡಪ್ಫ ಅಕ್ಕಿ ಮಾಡಿಸಲು ಊರಿನಿಂದ ಎತ್ತಿನ ಗಾಡಿಗೆ ಆ ಹಂಗಾಮಿನ ಭತ್ತ ಹೇರಿಕೊಂಡು ಅದಕ್ಕೊಂದು ಪ್ಲಾಸ್ಟಿಕ್ಕಿನ ಶೀಟು ಹೊದೆಸಿ ಗಾಡಿ ಹೊಡಕೊಂಡು ಹೊರಟಿದ್ದ. ಹಿಂದಿಂದ ತಾನೂ ಬರಲು ಹಟ ಹಿಡಿದು ಓಡಿ ಬಂದ ಮಗು ಅದರ ಧ್ವನಿ ಅವನ ಕಿವಿಗೆ ಗಾಡಿಯ ಗಲಾಟೆಯ ಮಧ್ಯೆ ಬಿದ್ದೆ ಇಲ್ಲ. ಆ ಮಗು ಪಟ್ಟು ಬಿಡದೆ ಚಲಿಸುವ ಗಾಡಿ ಏರಲು ಹೋಗಿ ಪ್ಲಾಸ್ಟಿಕ್ ಪರದೆಯ ಮೇಲಿಟ್ಟ ಅದರ ಪುಟ್ಟಕಾಲು ಜಾರಿ ನೇರ ಗಾಡಿಯಡಿಗೆ ಬಿದ್ದಿದೆ. ಅದರ ಹೊಟ್ಟೆಯ ಮೇಲೆಯೆ ತುಂಬಿದ ಗಾಡಿಯ ಭಾರ ಸಹಿತ ಚಕ್ರ ಏರಿಳಿದಿದೆ. ಆಗಿದ್ದ ಅನಾಹುತ ಗೊತ್ತಾಗುವಾಗ ಹೊತ್ತಾಗಿತ್ತು. ನೋವು ನೋವಂತ ನರಳುತ್ತಿದ್ದ ಮಗು ಕಡೆ ಕ್ಷಣದಲ್ಲೂ ಮಂಕು ನಗುವೊಂದನ್ನ ಬೀರುತ್ತಲೆ ಕಣ್ಮರೆಯಾಗಿಹೋಯಿತು. ಎರಡೆರಡು ಮಕ್ಕಳು ಹೀಗೆ ಸತ್ತ ನೋವು ಅತ್ತೆಯನ್ನ ಅರೆಹುಚ್ಚಿಯನ್ನಾಗಿಸಿತು.


ಅತ್ತ ಇವನಿದ್ದ ಊರಿಂದ ದೂರದ ಹಳ್ಳಿಯಲ್ಲಿ ಹೀಗಾಗಿದ್ದರೆ ಇವನಿದ್ದ ಪಟ್ಟಣಕ್ಕೆ ಇಂತಹದ್ದೆ ಅನ್ನುವ ಹೆಸರಿಡಲಾಗದ ವಾಂತಿ ಬೇಧಿಯ ಸಾಂಕ್ರಾಮಿಕ ರೋಗ ಹರಡಿ ಬೆರಳೆಣಿಕೆಯ ಕೆಲವೆ ಕೆಲವರನ್ನ ಹೊರತುಪಡಿಸಿ ಇನ್ನುಳಿದಂತೆ ಸಣ್ಣ ಜನಸಂಖ್ಯೆಯ ಊರಿಗೂರೆ ಸಂತ್ರಸ್ತವಾಗಿˌ ಊರಿನಲ್ಲಿದ್ದ ಒಂದು ಸರಕಾರಿ ಆಸ್ಪತ್ರೆ ಹಾಗೂ  ಎರಡು ಖಾಸಗಿ ಆಸ್ಪತ್ರೆಗಳು ತುಂಬಿ ತುಳುಕಿ ಹೋದವು. ಒಳರೋಗಿಗಳಾಗಿ ಸೇರಿದವರಿಗೆ ಮಲಗಿಸಲು ಮಂಚಗಳು ಸಾಲದೆˌ ಅವರವರೆ ಅವರವರ ಮನೆಯಿಂದಲೆ ಹೊತ್ತು ತಂದ ಹಾಸಿಗೆಯ ಮೇಲೆ ಡ್ರಿಪ್ಪೇರಿಸಿ ಆಸ್ಪತ್ರೆಯ ಹಜಾರ - ಪಡಸಾಲೆˌ ಕಡೆಗೆ ವಾಹನ ನಿಲುಗಡೆಯ ಜಾಗದಲ್ಲೂ ಅಂತಹ ಸಂಕ್ರಮಿತರನ್ನ ಅಡ್ಮಿಟ್ ಮಾಡಿಕೊಂಡು ಮಲಗಿಸಿ ಚಿಕಿತ್ಸೆ ಆರಂಭಿಸಲಾಯಿತು.

ಒಟ್ಟಿನಲ್ಲಿ ಊರ ಹಲವಾರು ನಾಗರೀಕರನ್ನು ಕಾಡಿ ಹೈರಾಣಾಗಿಸಿದ್ದ ವಾಂತಿ ಬೇಧಿಯ ಹೆಸರಿಡಲಾಗಿರದಿದ್ದ ಮಾರಿ ಊರಿನಿಂದಾಚೆ ನಿರ್ಗಮಿಸುವಾಗ ಅರಿವಿರದ ಆ ರೋಗ ಪೀಡಿತರಲ್ಲಿ ಆರು ಜನ ಬಲಿಯಾಗಿಯಾಗಿತ್ತು. ಅದೆ ಸಮಯದ ಆಜುಬಾಜುವಿನಲ್ಲೆ ಅವರ ಮನೆಯ ವಾತಾವರಣದಲ್ಲೂ ಸಹ ಬದಲಾವಣೆಯ ಗಾಳಿ ಬೀಸಿದ್ದು.

( ಇನ್ನೂ ಇದೆ.)



https://youtu.be/FpYQ0b5i9x0

No comments: