27 October 2008

ಬಲವಂತದಿಂದ ಹುಟ್ಟಲಾರದು ಪ್ರೀತಿ....

ಪ್ರೀತಿಯಲ್ಲಿ ಒತ್ತಾಯ ಸಲ್ಲ,ಒಪ್ಪಿಗೆ ಮಾತ್ರ ಚೆನ್ನ.ಕ್ರಮೇಣ ಕಳೆದೆ ಹೋಗಿರುವ ಬಾಲ್ಯವನ್ನು ನೆನಪಿಸಿಕೊಳ್ಳೋದ್ದಕ್ಕಿಂತ ಹೆಚ್ಚಿನ ಸುಖ ಬಾಳಲ್ಲಿ ಉಳಿದೆ ಇಲ್ಲ.ಊರು ಬಿಟ್ಟು ಊರು ಸೇರಿ ಮತ್ತೊಂದು ಪರಿಚಯವೇ ಇರದ ಜಗತ್ತಿನಲ್ಲಿ ಹೊಸದಾಗಿ ಬೆರೆಯುವ ಅನಿವಾರ್ಯತೆಯ ತಲ್ಲಣ.ಅಲ್ಲಿಗೂ ನನ್ನೊಂದಿಗೆ ಜೊತೆಯಾಗಿ ಬಂದದ್ದು ಮಳೆ ಮಾತ್ರ ಇನ್ನೊಂದು ಶಾಲೆ,ನಗೆಪಾಟಿಲಿಗೆ ಈಡಾಗೋ ನನ್ನ ಹಳ್ಳಿ ಕನ್ನಡ,ಗೊತ್ತಿರುವ ಭಾಷೆಯೇ ಆದರೂ ಬೇರೆಯದೇ ಅನ್ನಿಸೋ ಉಚ್ಛಾರಣೆಯ ಅನುಕರಿಸೋ ಕರ್ಮ.ನನ್ನಂತ ಇಬ್ಬರನ್ನು ತೋರಿಸ ಬಹುದಾಗಿರುತ್ತಿದ್ದ ಯಾವಾಗಲೂ ದೊಡ್ಡ ಅಳಯತೆಯದೆ ಆಗಿರುತಿದ್ದು ರೇಜಿಗೆ ಹುಟ್ಟಿಸುತ್ತಿದ್ದ ಯೂನಿಫಾರ್ಮ್.ಆಗಲೂ ಆಪ್ತವಾಗುತ್ತಿದ್ದ ಕ್ಷಣಗಳು ಯಾವುದೆಂದರೆ ಮತ್ತದೇ ಹಬೆಯಾಡುವ ಚಹಾದ ಬಿಸಿಯನ್ನು ಗುಟುಕು ಗುಟುಕಾಗಿ ಗಂಟಲಲ್ಲಿ ಇಳಿಸುವ ಸುಖದ ಮತ್ತಲಿ ಮುಳುಗಿ ಹನಿವ ಮಳೆಯನ್ನೇ ಮುಗ್ಧನಂತೆ ದಿಟ್ಟಿಸುತ್ತಿದ್ದೆನಲ್ಲ ಅದು ಮಾತ್ರ.

ಇಲ್ಲಿಯೂ ಮಳೆ ಸುರಿಯುತ್ತದೆ ಆದರೆ ಬಾಲ್ಯದ ಸ್ಮ್ರತಿಯಲ್ಲಿ ಉಳಿದಿರುವಂತೆ ಚುಚ್ಚುವುದಿಲ್ಲ. ತೇಪೆ ಹಾಕಿದ ಕೊಡೆ ನಿರ್ದಯಿಯಾಗಿ ಬೀಸೊ ಗಾಳಿಗೆ ಕೋಡಂಗಿಯಂತೆ ಮುಂಬಾಗಿದಾಗ ಕೆಕರುಮೆಕರಾಗಿ ಮೊದಲು ಜಾರೋ ಚಡ್ಡಿಯನ್ನು ಸರಿಮಾಡಿಕೊಳ್ಳಲೋ? ಮುರುಟಿದ ಛತ್ರಿಯನ್ನು ಸಂಭಾಳಿಸಲೋ? ಎಂಬ ಸಂದಿಗ್ಧ ಕಾಡುತಿತ್ತು.ನಿಷ್ಕರುಣೆಯಿಂದ ಸೂಜಿ ಚುಚ್ಚಿದಂತೆ ಒಂದೇ ಸಮ ಮುಖದ ಮೇಲೆ ರಾಚಿ ಮೈಯೆಲ್ಲಾ ತೋಯಿಸಿ ತೊಪ್ಪೆ ಮಾಡುತ್ತಿದ್ದರೂ ಅದೇಕೋ ಮಳೆಯೆಂದರೆ ಮನಸ್ಸಿಗೆ ವಿಚಿತ್ರ ಮೋಹ.

No comments: